ಗ್ರೀನ್‌ ಸ್ಪೆಗೆಟಿ

 

ಸಾಮಗ್ರಿ : 1 ಕಪ್‌ ಬೆಂದ ಸ್ಪೆಗೆಟಿ, ಒಂದಿಷ್ಟು ಹೆಚ್ಚಿದ ಹಸಿಮೆಣಸು, ಕೊ.ಸೊಪ್ಪು, ಬೆಳ್ಳುಳ್ಳಿ, ಅರ್ಧ ಕಪ್‌ ಹುರಿದ ಕಡಲೆಬೀಜ, ತುಸು ಆಲಿವ್ ಆಯಿಲ್, ರುಚಿಗೆ ಉಪ್ಪು ಮೆಣಸು.

ವಿಧಾನ :  ಮಿಕ್ಸಿಗೆ ಕೊ.ಸೊಪ್ಪು, ಬೆಳ್ಳುಳ್ಳಿ, ಹಸಿಮೆಣಸು, ಕಡಲೆಬೀಜ ಹಾಕಿ ತರಿತರಿಯಾಗಿ ರುಬ್ಬಿಡಿ. ಬಾಣಲೆಯಲ್ಲಿ ತುಸು ಆಲಿವ್ ಆಯಿಲ್ ‌ಬಿಸಿ ಮಾಡಿ ರುಬ್ಬಿದ ಮಿಶ್ರಣ, ಉಪ್ಪು, ಮೆಣಸು ಹಾಕಿ ಕೆದಕಿ, ಬೆಂದ ಸ್ಪೆಗೆಟಿ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಬಾಡಿಸಿ. ಇದೀಗ ಬಿಸಿಯಾದ ಗ್ರೀನ್‌ ಸ್ಪೆಗೆಟಿಯನ್ನು ಟೊಮೇಟೊ ಸಾಸ್‌ ಜೊತೆ ಸವಿಯಲು ಕೊಡಿ.

ಪನೀರ್‌ ನೂಡಲ್ಸ್ ಸೂಪ್‌

pasta-and-nudels-2 - Copy

ಸಾಮಗ್ರಿ :  ಅರ್ಧ ಕಪ್‌ ಬೆಂದ ಆಟಾ ನೂಡಲ್ಸ್, ಹೆಚ್ಚಿದ ಹಳದಿ, ಕೆಂಪು, ಹಸಿರು ಕ್ಯಾಪ್ಸಿಕಂ, ತುರಿದ ಕ್ಯಾರೆಟ್‌, ಟೊಮೇಟೊ, ಪನೀರ್‌ (ತವಾ ಅರ್ಧ ಕಪ್‌), 2 ಈರುಳ್ಳಿ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ನೂಡಲ್ಸ್ ಮಸಾಲ, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಅರ್ಧ ಸೌಟು ಬೆಣ್ಣೆ, ತುಸು ಹಸಿರು ಬಟಾಣಿ, ಕೊ.ಸೊಪ್ಪು.

ವಿಧಾನ :  ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ ಕೆದಕಬೇಕು. ನಂತರ ಒಂದೊಂದಾಗಿ ತರಕಾರಿ ಹಾಕಿ ಬಾಡಿಸಿ. ಕೊನೆಯಲ್ಲಿ ಟೊಮೇಟೊ ಸೇರಿಸಿ. ನಂತರ ಉಪ್ಪು, ಮೆಣಸು, ನೂಡಲ್ಸ್ ಮಸಾಲ ಹಾಕಿ ಕೆದಕಿ 2 ಕಪ್‌ ನೀರು ಬೆರೆಸಿ ಕುದಿಸಿರಿ. ನಂತರ ಪನೀರ್‌, ಬೆಂದ ನೂಡಲ್ಸ್ ಹಾಕಿ ಮತ್ತಷ್ಟು ಕುದಿಸಿ ಸವಿಯಲು ಕೊಡಿ.

ಪಾಸ್ತಾ ವಿತ್‌ ವೈಟ್‌ ಸಾಸ್‌ ವೆಜಿಟೆಬೆಲ್ಸ್

pasta-and-nudels-3 - Copy

ಸಾಮಗ್ರಿ :  1 ಕಪ್‌ ಪಾಸ್ತಾ, 3 ಈರುಳ್ಳಿ, ಹೆಚ್ಚಿದ ಹಸಿರು, ಕೆಂಪು, ಹಳದಿ ಕ್ಯಾಪ್ಸಿಕಂ, ಬೀನ್ಸ್, ಆಲೂ, ಹೂಕೋಸು, ಎಲೆಕೋಸು (ತಲಾ ಅರ್ಧ ಕಪ್‌), ಹಸಿ ಬಟಾಣಿ, 8-10 ಎಸಳು ಬೆಳ್ಳುಳ್ಳಿ, 2 ಕಪ್‌ ಹಾಲು, ತುಸು ಬೆಣ್ಣೆ, ತುಪ್ಪ, ಓಟ್ಸ್ ಪುಡಿ, ತುರಿದ ಚೀಸ್‌, ಉಪ್ಪು, ಮೆಣಸು.

ವಿಧಾನ :  ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿ ಹೆಚ್ಚಿದ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಬಾಡಿಸಿ. ನಂತರ ಒಂದೊಂದಾಗಿ ತರಕಾರಿ ಸೇರಿಸುತ್ತಾ ಮಧ್ಯೆ ಮಧ್ಯೆ ತುಸು ಬೆಣ್ಣೆ ಬೆರೆಸುತ್ತಾ ಕೈಯಾಡಿಸಿ. ಕ್ರಂಚಿಯಾಗಿ ಉಳಿಯುವಂತೆ ಬೇಯಿಸಿ. ಓಟ್ಸ್ ಪುಡಿಯನ್ನು ಹಾಲಲ್ಲಿ ಕದಡಿಕೊಂಡು ಇದಕ್ಕೆ ಸೇರಿಸಿ. ನಂತರ ಹಾಲು ಬೆರೆಸಿ ಗ್ರೇವಿ ಗಟ್ಟಿಯಾಗುವಂತೆ ಮಂದ ಉರಿಯಲ್ಲಿ ಕುದಿಸಿರಿ. ನಡುವೆ ಬೆಣ್ಣೆ ಬೆರೆಸುತ್ತಿರಿ. ನಂತರ ಬೆಂದ ಪಾಸ್ತಾ, ತುರಿದ ಚೀಸ್‌, ಉಪ್ಪು, ಮೆಣಸು ಎಲ್ಲಾ ಸೇರಿಸಿ ಕೆದಕಿ ಕೆಳಗಿಳಿಸಿ. ಬಿಸಿ ಬಿಸಿ ಹಬೆ ಆಡುವಂತೆ ಸವಿಯಲು ಕೊಡಿ.

ರೈಸ್‌ ನೂಡಲ್ಸ್ ವಿತ್‌ ಕೋಕೋನಟ್‌ ಮಿಲ್ಕ್

pasta-and-nudels-4

ಸಾಮಗ್ರಿ :  1 ಕಪ್‌ ತೆಂಗಿನ ಹಾಲು, 2 ಕಪ್‌ ಬೆಂದ ರೈಸ್‌ ನೂಡಲ್ಸ್, ಹೆಚ್ಚಿದ ಬೀನ್ಸ್, ಕ್ಯಾರೆಟ್‌, ಆಲೂ, ಕ್ಯಾಪ್ಸಿಕಂ, ಹೂಕೋಸು, ಹಸಿ ಬಟಾಣಿ (ತಲಾ ಅರ್ಧ ಕಪ್‌), 4 ಈರುಳ್ಳಿ, 3 ಹುಳಿ ಟೊಮೇಟೊ, ಒಂದಿಷ್ಟು ಹೆಚ್ಚಿದ ಹಸಿ ಮೆಣಸು, ಕೊ.ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಪಾಸ್ತಾ ಮಸಾಲ, ತುಸು ಬೆಣ್ಣೆ.

ವಿಧಾನ : ಬಾಣಲೆಯಲ್ಲಿ ಬೆಣ್ಣೆ ಬಿಸಿ ಮಾಡಿ ಒಂದೊಂದಾಗಿ ತರಕಾರಿ ಹಾಕಿ ಕ್ರಂಚಿಯಾಗಿ ಉಳಿಯುವಂತೆ ಬಾಡಿಸುತ್ತಾ ಬೇಯಿಸಿ. ನಂತರ ಉಪ್ಪು, ಖಾರ, ಮಸಾಲ, ಹಸಿಮೆಣಸು ಹಾಕಿ ಕೆದಕಿ, ಟೊಮೇಟೊ ಸೇರಿಸಿ ಬಾಡಿಸಿ. ನಂತರ ಬೆಂದ ನೂಡಲ್ಸ್, ತೆಂಗಿನಹಾಲು ಬೆರೆಸಿ ಮಂದ ಉರಿಯಲ್ಲಿ ಕೆದಕುತ್ತಾ ಕುದಿಸಿರಿ. 2 ನಿಮಿಷ ಬಿಟ್ಟು ಕೆಳಗಿಳಿಸಿ ಬಿಸಿಯಾಗಿ ಸವಿಯಲು ಕೊಡಿ.

ಕ್ರೀಮೀ ರೋಸ್ಟೆಡ್‌ ಕ್ಯಾಪ್ಸಿಕಂ ಪಾಸ್ತಾ

pasta-and-nudels-5

ಸಾಮಗ್ರಿ :  1-2 ಕ್ಯಾಪ್ಸಿಕಂ, 2 ಕಪ್‌ ಬೆಂದ ಪಾಸ್ತಾ, 2 ಈರುಳ್ಳಿ, 1-2 ಹಸಿಮೆಣಸು, 1 ಕಪ್‌ ತುಂಡರಿಸಿದ ಪನೀರ್‌, ತುಸು ಬೆಣ್ಣೆ, ಕ್ರೀಂ, ಉಪ್ಪು, ಮೆಣಸು.

ವಿಧಾನ : ಕ್ಯಾಪ್ಸಿಕಂ ಶುಚಿಗೊಳಿಸಿ ಒಲೆಯಲ್ಲಿ ನೇರ ರೋಸ್ಟ್ ಮಾಡಿ. ನಂತರ ಇದರ ಸಿಪ್ಪೆ, ಬೀಜ ಬೇರ್ಪಡಿಸಿ (ಬೇರೆ ಪಲ್ಯಕ್ಕೆ ಬಳಸಿರಿ). ಇದೇ ತರಹ ಇಡಿಯಾದ ಈರುಳ್ಳಿಯನ್ನೂ ರೋಸಟ್ ಮಾಡಿ. ಮಿಕ್ಸಿಗೆ ಲಘು ಬಾಡಿಸಿದ ಹಸಿ ಮೆಣಸು, ರೋಸ್ಟೆಡ್ ಈರುಳ್ಳಿ, ಕ್ಯಾಪ್ಸಿಕಂ ಹಾಕಿ ಪೇಸ್ಟ್ ಮಾಡಿ. ಬಾಣಲೆಯಲ್ಲಿ ತುಸು ಬೆಣ್ಣೆ ಬಿಸಿ ಮಾಡಿ ಅದರಲ್ಲಿ ಈ ಪೇಸ್ಟ್ ಬಾಡಿಸಿ. ಇದಕ್ಕೆ ಉಪ್ಪು, ಮೆಣಸು, ಪನೀರ್‌, ಬೆಂದ ಪಾಸ್ತಾ, ಕ್ರೀಂ ಸೇರಿಸಿ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ ಸವಿಯಿರಿ.

ಗ್ರಿಲ್ಡ್ ‌ಕಾಲಿಫ್ಲವರ್‌

pasta-and-nudels-6

ಸಾಮಗ್ರಿ :  1-1 ಕಪ್‌ ಹೂಕೋಸಿನ ತುಂಡು, ಬೆಂದ ಪಾಸ್ತಾ, ಹಸಿರು/ ಕೆಂಪು/ ಹಳದಿ ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಮೆಣಸು, ಮಿಕ್ಸ್ಡ್ ಹರ್ಬ್ಸ್, ತುಸು ಆಲಿವ್ ‌ಎಣ್ಣೆ ಎಕ್ಸ್ ಟ್ರಾ ವರ್ಜಿನ್‌ ಆಲಿವ್ ‌ಆಯಿಲ್‌.

ವಿಧಾನ :  ಗ್ರಿಲ್ಲರ್‌ನಲ್ಲಿ ಹೂಕೋಸಿನ ತುಂಡು, 3 ಬಗೆಯ ಕ್ಯಾಪ್ಸಿಕಂಗಳನ್ನು ಆಲಿವ್ ‌ಎಣ್ಣೆ ಬಳಸುತ್ತಾ ಗ್ರಿಲ್ ಮಾಡಿ. ನಂತರ ಬೆಂದ ಪಾಸ್ತಾಗೆ ಉಪ್ಪು, ಮೆಣಸು, ಮಿಕ್ಸ್ಡ್ ಹರ್ಬ್ಸ್, ಗ್ರಿಲ್ಡ್ ‌ತರಕಾರಿ ಹಾಕಿ ಬೆರೆಸಿರಿ. ಇದರ ಮೇಲೆ ತುಸು ನಿಂಬೆಹಣ್ಣು ಹಿಂಡಿಕೊಳ್ಳುತ್ತಾ, ಎಕ್ಸ್ ಟ್ರಾ ವರ್ಜಿನ್‌ ಆಲಿವ್ ‌ಆಯಿಲ್ ‌ಸಿಂಪಡಿಸುತ್ತಾ ಕೆದಕಿ ಸವಿಯಲು ಕೊಡಿ.

ಸಿಂಪಲ್ ಸ್ಪ್ಯಾನಿಶ್‌ ರೈಸ್‌

Simple-with-lal-kila - Copy

ಸಾಮಗ್ರಿ :  ತುಸು ಕೇಸರಿ ಬೆರೆಸಿ ತಯಾರಿಸಿದ 2-3 ಕಪ್‌ ಉದುರುದುರಾದ ಬಿಸಿ ಅನ್ನ, 4 ಚಮಚ ಆಲಿವ್ ‌ಎಣ್ಣೆ, ನೀಟಾಗಿ ಹೆಚ್ಚಿದ 1 ದೊಡ್ಡ ಈರುಳ್ಳಿ, ಅರ್ಧ ಕಪ್‌ ಸೆಲೆರಿ, ತುಳಸಿ ಎಲೆಗಳು, 1-1 ಹಸಿರು, ಹಳದಿ, ಕೆಂಪು ಕ್ಯಾಪ್ಸಿಕಂ, ರುಚಿಗೆ ತಕ್ಕಷ್ಟು ಉಪ್ಪು, ಪುಡಿಮೆಣಸು, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಟೊಮೇಟೊ ಸಾಸ್‌, ಸಕ್ಕರೆ, ನಿಂಬೆರಸ, ಹೆಚ್ಚಿದ ಕೊ.ಸೊಪ್ಪು.

ವಿಧಾನ : ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಈರುಳ್ಳಿ, ಸೆಲೆರಿ, ಕ್ಯಾಪ್ಸಿಕಂ ಸೇರಿಸಿ ಚೆನ್ನಾಗಿ ಬಾಡಿಸಿ. ನಂತರ ಉಪ್ಪು, ಖಾರ, ಮಸಾಲೆಗಳನ್ನು ಒಂದೊಂದಾಗಿ ಸೇರಿಸಿ. ಕೊನೆಯಲ್ಲಿ ಅನ್ನ ಸೇರಿಸಿ ಎಲ್ಲ ಚೆನ್ನಾಗಿ ಬೆರೆತುಕೊಳ್ಳುವಂತೆ ಮಾಡಿ. ಇದನ್ನು ಬಿಸಿ ಬಿಸಿಯಾಗಿ ಸವಿಯಲು ಕೊಡಿ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ