ಮಹಿಳೆಯರು ಮೊದಲಿನಿಂದಲೂ ಸಹಿಸಿಕೊಳ್ಳುತ್ತ ಬಂದಿದ್ದಾರೆ. ಅದು ಮನೆಯ ವಿಷಯವೇ ಆಗಿರಬಹುದು ಅಥವಾ ಹೊರಗಿನ ವಿಷಯವೇ ಇರಬಹುದು. ಎಲ್ಲದರಲ್ಲೂ ಬಲಿಪಶು ಅವರೇ ಆಗುತ್ತಿದ್ದಾರೆ. ಕೊರೋನಾ ಹೆಮ್ಮಾರಿ ದಾಳಿ ಇಟ್ಟಾಗಿನಿಂದಲೂ ಅವರು ಇನ್ನಷ್ಟು ಕಷ್ಟ ಅನುಭವಿಸಬೇಕಾಗಿ ಬಂದಿದೆ. ಈಗ ಅವರ ಮೇಲೆ ಮೊದಲಿಗಿಂತ ಹೆಚ್ಚು ಜವಾಬ್ದಾರಿ ಬಿದ್ದಿದೆ. ಯಾವ ಕೆಲಸಗಳನ್ನು ಮೊದಲು ಕೆಲಸಗಾರರು ಮಾಡುತ್ತಿದ್ದರೊ, ಅವೆಲ್ಲ ಕೆಲಸಗಳನ್ನು ಈಗ ಅವರೇ ಮಾಡಬೇಕಾಗಿ ಬಂದಿದೆ.

ಮಹಿಳೆಯೊಬ್ಬಳು ಉದ್ಯೋಗಿಯಾಗಿದ್ದು, ಮನೆಯಿಂದಲೇ ಕೆಲಸ ಮಾಡುತ್ತಿದ್ದರೆ ಮನೆಯನ್ನೇ ಆಫೀಸ್‌ ಮಾಡಿಕೊಂಡು ಬಿಟ್ಟಿದ್ದಾರೆ. ಮನೆಯ ಪ್ರತಿಯೊಬ್ಬ ಸದಸ್ಯರನ್ನು ಖುಷಿಯಿಂದಿಡಬೇಕು, ಮನೆಯ ಕೆಲಸ ಕಾರ್ಯಗಳನ್ನು ನಿರ್ವಹಿಸಬೇಕು. ಜೊತೆಗೆ ಆಫೀಸಿನ ಡ್ಯೂಟಿ ಕೂಡ ಮುಗಿಸಬೇಕು. ಅದರಲ್ಲೂ ವಿಶೇಷವಾಗಿ ಗಂಡನ ಬೇಕು ಬೇಡಗಳನ್ನು ಗಮನಿಸಬೇಕಾದದ್ದು ಅವಳ ಪ್ರಮುಖ ಕರ್ತವ್ಯವಾಗಿದೆ. ಕೆಲವು ಮನೆಗಳಲ್ಲಿ ಮಹಿಳೆಯರ ಮೇಲೆ ಪುರುಷರ ದೌರ್ಜನ್ಯಗಳು ಕೂಡ ಹೆಚ್ಚಾಗಿವೆ. ಅದರಲ್ಲಿ ಸೆಕ್ಸ್ ಗೆ ಸಂಬಂಧಿಸಿದಂತೆ ಮಹಿಳೆಯರು ತಮ್ಮನ್ನು ತಾವು ದುರ್ಬಲರು, ನಿಸ್ಸಹಾಯಕರು ಎಂದು ಭಾವಿಸುತ್ತಾರೆ.

IB139696_139696114753240_SM161234

ಅಂತಹದ್ದೇ ಒಂದು ಪ್ರಕರಣ ಗಾಜಿಯಾಬಾದ್‌ ಜಿಲ್ಲೆಯಲ್ಲಿ ನಡೆದಿತ್ತು. ಗಂಡನ ಸೆಕ್ಸ್ ನ ವಿಲಕ್ಷಣ ಬೇಡಿಕೆಯಿಂದ ಹೆಂಡತಿ ಪೊಲೀಸ್‌ ಠಾಣೆಗೆ ಹೋಗಿ ಮೊರೆ ಇಡುವಂತಹ ಸ್ಥಿತಿ ಉಂಟಾಯಿತು. ಗಂಡ ಇಡೀ ದಿನ ಸೆಕ್ಸ್ ಬಗ್ಗೆ ಬೇಡಿಕೆ ಇಡುತ್ತಲೇ ಇದ್ದ. ಅದರಲ್ಲೂ ಅನೈಸರ್ಗಿಕ ಸೆಕ್ಸ್ ಗೆ ಒತ್ತಡ ಹಾಕುತ್ತಲೇ ಇರುತ್ತಿದ್ದ. ಹಾಗೇನಾದರೂ ಒಪ್ಪದಿದ್ದಾಗ ಆಕೆಯ ಮೇಲೆ ದೈಹಿಕ ಹಿಂಸೆ ಮಾಡುತ್ತಿದ್ದ. ವಾಸ್ತವದಲ್ಲಿ ಆತ ಬೇರೊಂದು ಊರಿನಲ್ಲಿ ಇರುತ್ತಿದ್ದ. ಮಾರ್ಚ್‌ನಲ್ಲಿ ಊರಿಗೆ ಬಂದಿದ್ದ. ಲಾಕ್‌ ಡೌನ್‌ ಕಾರಣದಿಂದ ಮನೆಯಲ್ಲಿ ಸಿಲುಕಿದ್ದ. ಸತತ ಮನೆಯಲ್ಲಿ ಇದ್ದೂ ಇದ್ದೂ ಅವನು ಈ ರೀತಿಯ ವಿಲಕ್ಷಣ ಬೇಡಿಕೆ ಇಡುತ್ತಿದ್ದ. ಇದೊಂದು ಉದಾಹರಣೆ ಅಷ್ಟೇ. ಇಂತಹ ಅನೇಕ ಘಟನೆಗಳು ನಡೆದಿದ್ದು, ಅದರಲ್ಲಿ ಮಹಿಳೆಯರು ದೈಹಿಕವಾಗಿ, ಮಾನಸಿಕವಾಗಿ ಶೋಷಣೆಗೆ ಒಳಗಾಗುತ್ತಿದ್ದಾರೆ.

ನ್ಯಾಷನಲ್ ಲೀಗ್‌ ಸರ್ವೀಸಸ್‌ ಅಥಾರಿಟಿಯ ಅಂಕಿಅಂಶಗಳ ಪ್ರಕಾರ, ಕಳೆದ ಕೆಲವು ತಿಂಗಳುಗಳಲ್ಲಿ ಕೌಟುಂಬಿಕ ದೌರ್ಜನ್ಯದ ಪ್ರಕರಣಗಳು ಹೆಚ್ಚಿವೆ. ಉತ್ತರಾಖಂಡದಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದವು. ಅದರ ನಂತರದ ಸ್ಥಾನದಲ್ಲಿ ಹರಿಯಾಣ, ದೆಹಲಿ ಇದ್ದವು. ಕೇವಲ ಭಾರತದಲ್ಲಷ್ಟೇ ಅಲ್ಲ, ವಿಶ್ವದಾದ್ಯಂತ ಅಂತಹ ಪ್ರಕರಣಗಳು ಹೆಚ್ಚಿಗೆ ಇದ್ದವು. ಇಂಗ್ಲೆಂಡ್‌ನಲ್ಲಿ ಮಾರ್ಚ್ 23 ರಿಂದ ಏಪ್ರಿಲ್ ‌ರ ಅವಧಿಯಲ್ಲಿ ಕೌಟುಂಬಿಕ ದೌರ್ಜನ್ಯದಿಂದ 16 ಸಾವುಗಳು ದಾಖಲಾದವು. ಇದು ಕಳೆದ 11 ವರ್ಷಗಳಲ್ಲಿಯೇ ಗರಿಷ್ಠ ಸಂಖ್ಯೆಯಾಗಿದೆ. ಮುಂಬರುವ ದಿನಗಳಲ್ಲಿ ಅದು ಬಹುದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಬಹುದು.

ಮಹಿಳೆಯ ಕಷ್ಟಗಳು ಏಕೆ ಹೆಚ್ಚಿದವು?

ಹೆಚ್ಚಿದ ಕೆಲಸದ ಒತ್ತಡ : ಮನೆಯಲ್ಲಿ ಬಟ್ಟೆ ಒಗೆಯುವುದು, ಅಡುಗೆ ಮಾಡುವುದು, ನಡುನಡುವೆ ಸ್ನ್ಯಾಕ್ಸ್ ಗೆ ಬೇಡಿಕೆ, ಸ್ವಚ್ಛತೆ ಹೀಗೆ ಬಹಳಷ್ಟು ಕೆಲಸಗಳು ಅದರಲ್ಲಿ ಸೇರ್ಪಡೆ ಆಗಿಬಿಟ್ಟವು. ಮಕ್ಕಳು ಆನ್‌ ಲೈನ್‌ ಕ್ಲಾಸಸ್‌, ಹೋಮ್ ವರ್ಕ್‌, ಟಿವಿ ನೋಡುವುದರಲ್ಲಿ ಕಳೆದರೆ, ಪತಿ ಪೂರ್ತಿ ನಿದ್ರೆ ಮಾಡಿ ಬಳಿಕ ಆಫೀಸ್‌ ಕೆಲಸಗಳಲ್ಲಿ ಮಗ್ನರಾಗುತ್ತಾರೆ. ಹೆಂಡತಿ ಉದ್ಯೋಗಿಯಾಗಿರಬಹುದು. ಆದರೆ ಆಕೆಯ ನೋವನ್ನು ಕೇಳುವವರು ಯಾರೊಬ್ಬರೂ ಇರುವುದಿಲ್ಲ.?

ಆಕೆ ದಣಿವು ಆಗಿದೆಯೆಂದು ಹೇಳಿದರೆ, ನೀನು ಮನೆಗೆಲಸ ಮಾಡುವುದನ್ನು ಬಿಟ್ಟು ಮಾಡುತ್ತಿರುವುದಾರರೂ ಏನನ್ನು ಎಂದು ಅವಳನ್ನೇ ಪ್ರಶ್ನಿಸುತ್ತಾರೆ. ಈ ಎಲ್ಲ ಕಾರಣಗಳಿಂದ ಆಕೆ ನೋವನ್ನು ನುಂಗಿಕೊಂಡು ತನ್ನನ್ನು ತಾನು ದುರ್ಬಲಳು ಎಂದು ಭಾವಿಸುತ್ತಾಳೆ.

IB134558-134558120638440-EA429109

ಮನೆಯಲ್ಲೇ ಬಂಧಿ : ಮೊದಲು ಅವಳಿಗೆ ತನ್ನದೇ ಆದ ಸ್ವಾತಂತ್ರ್ಯವಿರುತ್ತಿತ್ತು. ಈಗ ಮನೆಯ ಪ್ರತಿಯೊಬ್ಬ ಸದಸ್ಯರು ಅವಳ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಉದ್ಯೋಗಿಯಾಗಿದ್ದರೆ ತನ್ನ ಸ್ನೇಹ ಬಳಗದ ಜೊತೆ ಟೀ ಬ್ರೇಕ್‌, ಶಾಪಿಂಗ್‌, ಸಣ್ಣಪುಟ್ಟ ಪಾರ್ಟಿಗಳಿಗೆ ಹಾಜರಾಗುತ್ತಿದ್ದಳು. ಆದರೆ ಈಗ ಅವೆಲ್ಲವುಗಳಿಗೆ ಅವಕಾಶವೇ ಇಲ್ಲ. ಮನೆಯಲ್ಲಿಯೇ ಬಂಧಿ ಆಗಿಬಿಟ್ಟಿದ್ದಾಳೆ. ಮೋಜುಮಜಾದ ಆ ಕ್ಷಣಗಳೇ ಕೊನೆಗೊಂಡುಬಿಟ್ಟಿವೆ. ಯಾವಾಗ ನೋಡಿದರೂ ಏನಾದರೊಂದು ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ.

42-21175226

ಪ್ರತಿದಿನದ ಸೆಕ್ಸ್ ಬೇಡಿಕೆ : ಗಂಡ ಮನೆಯಿಂದ ಹೊರಗೆ ಹೋಗದಿದ್ದರೆ ಅವನಿಗೆ ಮನರಂಜನೆ ಎಂಬುದೇ ಇಲ್ಲದಂತಾಗಿಬಿಟ್ಟಿದೆ. ಹೆಂಡತಿಯೇ ತನಗೆ ಮನರಂಜನೆಯ ಸಾಧನ ಎಂದು ಅವನು ಭಾವಿಸಿಬಿಟ್ಟಿದ್ದಾನೆ. ತನಗೆ ಯಾವಾಗ ಮನಸ್ಸಾಗುತ್ತೋ, ಆಗ ಅವನು ಹೆಂಡತಿಗೆ ಸೆಕ್ಸ್ ಬೇಡಿಕೆ ಇಡುತ್ತಾನೆ. ಒಂದು ವೇಳೆ ಅವಳು ನಿರಾಕರಿಸಿದರೆ ಮತ್ತೆ ಜಗಳ  ಶುರು, ಇಂತಹ ಸ್ಥಿತಿಯಲ್ಲಿ ಅವಳು ಮನಸ್ಸಿಲ್ಲದ ಮನಸ್ಸಿನಿಂದ ಒಪ್ಪಬೇಕಾಗುತ್ತದೆ.

IB168713_168713130939167_SM252960

ಹೆಚ್ಚಿದ ಒತ್ತಡ : ಕೊರೋನಾ ಸೋಂಕಿನ ಪಸರಿಸುವ ಹೆಚ್ಚಳದ ನಡುವೆಯೂ ಗಂಡ ಆಫೀಸಿಗೆ ಹೋಗುತ್ತಿದ್ದರೆ, ಅಂತಹ ಮನೆಗಳಲ್ಲಿ ಸ್ವಚ್ಛತೆಯ ಬಗ್ಗೆ ಹೆಚ್ಚು ಗಮನ ಕೊಡಲಾಗುತ್ತಿದೆ. ಗಂಡ ಸಂಜೆ/ರಾತ್ರಿ ದಣಿದು ಮನೆಗೆ ಬಂದರೆ, ಅವನ ದಣಿವನ್ನು ನೀಗಿಸಲು ಹೆಂಡತಿ ಅವನ ಬೇಡಿಕೆಗಳಿಗೆಲ್ಲ ಸ್ಪಂದಿಸಬೇಕಾಗುತ್ತದೆ. ಕೊರೋನಾ ಸೋಂಕಿನ ದಿನಗಳಲ್ಲಿ ಅತಿ ನಿಕಟರಾಗುವುದು ಬೇಡ ಎಂದು ಹೆಂಡತಿ ತಿಳಿವಳಿಕೆ ಹೇಳಿದರೂ ಕೂಡ ಗಂಡ ತನ್ನ ಸೆಕ್ಸ್ ಬೇಡಿಕೆ ನಿರಾಕರಿಸುತ್ತಿದ್ದಾಳೆ ಎಂದು ಅವಳ ಮೇಲೆ ಸಿಡಿದೇಳುತ್ತಾನೆ. ಈ ರೀತಿ ಮನೆಯಲ್ಲಿ ಒಂದಷ್ಟು ದಿನಗಳ ಕಾಲ ಒತ್ತಡದ ವಾತಾವರಣ ಮುಂದುವರಿಯುತ್ತದೆ.

ನಿರಂತರ ಕಿರಿಕಿರಿ : ಕೊರೋನಾದ ಕಾರಣದಿಂದ ಪ್ರತಿಯೊಬ್ಬ ಸದಸ್ಯರು ಯಾವಾಗಲೂ ಮನೆಯಲ್ಲಿರುವುದು ಅನಿವಾರ್ಯವಾಗಿದೆ. ಉದ್ಯೋಗದ ಕಾರಣದಿಂದ ಕುಟುಂಬದ ಸದಸ್ಯರು ಬೇರೆ ಬೇರೆ ಕಡೆ ವಾಸಿಸುತ್ತಿದ್ದರು. ಆದರೆ ಈಗ ಎಲ್ಲರೂ ಒಂದೇ ಮನೆಯಲ್ಲಿ ಇದ್ದಾರೆ. ನಾದಿನಿ, ಮೈದುನ ಹೀಗೆ ಅವರು ತಮ್ಮ ಕುಟುಂಬದೊಂದಿಗೆ ಬಂದು ಸೇರಿಕೊಂಡಿದ್ದಾರೆ. ಈ ಕಾರಣದಿಂದ ಅಡುಗೆ ಮನೆ ಕೆಲಸ, ಸ್ವಚ್ಛತೆ ಹೀಗೆ ಇಡೀ ದಿನ ಏನಾದರೊಂದು ಚಟುವಟಿಕೆಯಲ್ಲಿ ಇರಲೇಬೇಕಾಗುತ್ತದೆ. ಅಷ್ಟಿಷ್ಟು ತೊಂದರೆ, ಸಮಸ್ಯೆಗಳಿಂದ ಒಂದಿಷ್ಟು ಜಗಳ, ಮನಸ್ತಾಪಗಳು ಕೂಡ ಆಗುತ್ತಿರುತ್ತವೆ.

ಕೆಲಸ ಹೋಗುವ ಭೀತಿ : ಬಹಳಷ್ಟು ಮನೆಗಳಲ್ಲಿ ಕೈಯಲ್ಲಿದ್ದ ಉದ್ಯೋಗ ಹೋಗಿಬಿಟ್ಟರೆ ಏನು ಮಾಡುವುದು ಎಂಬ ಚಿಂತೆ ಆವರಿಸಿಕೊಂಡುಬಿಟ್ಟಿದೆ, ಇಂತಹ ಸ್ಥಿತಿಯಲ್ಲಿ ಯಾವುದೇ ನೌಕರಿ ಕೂಡ ಸಿಗುವುದಿಲ್ಲ ಅಥವಾ ಸಂಬಳ ಕಡಿತದ ಸಮಸ್ಯೆ ಎದುರಿಸಬೇಕಾಗಿ ಬರುತ್ತದೆ. ಗಂಡ ಸದಾ ಇದರ ಬಗ್ಗೆಯೇ ಹೇಳುತ್ತಿರುತ್ತಾನೆ. ಇಂತಹ ಸ್ಥಿತಿಯಲ್ಲಿ ಹೆಂಡತಿ ಇದರಲ್ಲಿ ನನ್ನದೇನು ತಪ್ಪು, ಮನೆಯ ಶಾಂತಿ ಭಂಗವಾಗುತ್ತಿರುವುದು ಹಾಗೂ ಗಂಡನ ಬದಲಾಗುತ್ತಿರುವ ವರ್ತನೆಯ ಬಗ್ಗೆ ಅವಳು ಒಳಗೊಳಗೆ ಕುಸಿದು ಹೋಗುತ್ತಿರುತ್ತಾಳೆ. ತನ್ನ ನೋವನ್ನು ಯಾರಿಗೆ ಹೇಳಬೇಕೆಂದು ಅವಳಿಗೆ ಗೊತ್ತಾಗುವುದಿಲ್ಲ.

ಬೇಡಿಕೆಗಳ ಹೊರೆ : ಮನೆಯಲ್ಲಿ ಇಡೀ ದಿನ ಬೇಡಿಕೆಗಳ ಸರಮಾಲೆಯೇ ಅವಳ ಮುಂದಿರುತ್ತದೆ. ಅದನ್ನು ಮಾಡು, ಇದನ್ನು ಮಾಡು ಎಂದು ಎಲ್ಲರೂ ಹೇಳುತ್ತಿರುತ್ತಾರೆ. ತಿಂಡಿ ಮುಗಿಸಿರುವುದಿಲ್ಲ. ಅಷ್ಟರಲ್ಲಿ ಚಹಾ/ಕಾಫಿಗೆ ಬೇಡಿಕೆ ಬರುತ್ತದೆ. ಹೀಗಾಗಿ ಇಡೀ ದಿನ ಅಡುಗೆಮನೆಯಲ್ಲಿಯೇ ಕಳೆದು ಹೋಗುತ್ತದೆ. ಇಂತಹ ಸ್ಥಿತಿಯಲ್ಲಿ ವಿಶ್ರಾಂತಿ ಎನ್ನುವುದು ಕನಸಿನ ಮಾತಾಗಿಬಿಡುತ್ತದೆ. ಆ ಕಾರಣದಿಂದ ಒತ್ತಡ ಉಂಟಾಗುತ್ತದೆ. ಅದು ಯಾರ ಮುಂದೆಯೂ ಹೇಳಿಕೊಳ್ಳಲಾಗದ ಸಂಕಟವಾಗಿ ಕಾಡುತ್ತದೆ.

– ಸಂಧ್ಯಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ