“ವಿನುತಾ, ಇವತ್ತಿನಿಂದ ನೀನೇ ಈ ಮನೆ, ನನ್ನ ಈ ಮುಗ್ಧ ತಮ್ಮನನ್ನು ಸಂಭಾಳಿಸಬೇಕು. ಫ್ಲೈಟ್ಸ್ ತೊಂದರೆ ಇಲ್ಲದಿದ್ದರೆ ನಾನು ಇನ್ನಷ್ಟು ದಿನ ಇಲ್ಲೇ ಉಳಿಯುತ್ತಿದ್ದೆ. ಆದರೆ ಹೊಸದಾಗಿ ಮದುವೆಯಾದ ನಿಮ್ಮಿಬ್ಬರ ಮಧ್ಯೆ ಎಷ್ಟು ದಿನ ಶಿವಪೂಜೆ ನಡುವಿನ ಕರಡಿ ಆಗಿರಲಿ? ಒಳ್ಳೆಯದೇ ಆಯ್ತು, ನಾನೀಗ ಮುಂಬೈಗೆ ಹೊರಟೆ. ಅಲ್ಲಿ ನನ್ನ ಮಕ್ಕಳು ಅವರ ಅಜ್ಜಿ ತಾತಂದಿರನ್ನು ಬಹಳ ಗೋಳುಗುಟ್ಟಿಸಿ ಬಿಟ್ಟಿರುತ್ತಾರೆ. ಅವರಿಗೆ ತಮ್ಮ ಈ ಹೊಸ ಮಾಮಿಯನ್ನು ಭೇಟಿ ಆಗಬೇಕು, ದೆಹಲಿ ಪೂರ್ತಿ ಸುತ್ತಾಡಬೇಕೆಂದು 10 ಸಲ ಹೇಳಿದರು. ಏನು ಮಾಡುವುದು? ಎಲ್ಲಾ ಅರ್ಜೆಂಟ್‌ನಲ್ಲಿ ನಡೆದು ಹೋಯಿತು. ಮಕ್ಕಳನ್ನು ಮತ್ತೆ ಕರೆತಂದರಾಯಿತು,” ಬಾಯಿ ತುಂಬಾ ಬಡಬಡ ಮಾತನಾಡು ಸುರಭಿ ತನ್ನ ಹೊಸ ಮದುವಣಗಿತ್ತಿ ತಮ್ಮನ ಹೆಂಡತಿಗೆ ಒಂದೇ ಉಸಿರಿನಲ್ಲಿ ವಿಷಯ ಹೇಳಿ ಮುಗಿಸಿ, ದೆಹಲಿ ಏರ್‌ಪೋರ್ಟ್‌ಗೆ ಹೊರಡಲು, ಟ್ಯಾಕ್ಸಿ ಏರಿ ಹಿಂದೆ ಕುಳಿತು ಕೈ ಬೀಸುತ್ತಾ ಹೇಳಿದಳು.

ವಿನುತಾ ನಸುನಗುತ್ತಾ ತಲೆ ಆಡಿಸಿ ಕೈ ಬೀಸಿದಳು. ಒಮ್ಮೆ ಹಿರಿಯ ನಾದಿನಿ ಸುರಭಿ ಕಡೆ ನೋಡುತ್ತಾ ಮತ್ತೊಮ್ಮೆ ಪತಿ ನವೀನ್ ಕಡೆ ನೋಡುತ್ತಾ ಮಂದಹಾಸ ಬೀರುತ್ತಿದ್ದಳು.

ಸುರಭಿ ಮಾತು ಮುಂದುವರಿದಿತ್ತು, “ಮದುವೆ ಏನೋ ಅವಸರದಲ್ಲಿ ಮುಗಿಯಿತು. ಆದರೆ ನಿಮ್ಮಿಬ್ಬರ ಈ ನಿರ್ಧಾರ ಮೆಚ್ಚತಕ್ಕದ್ದು. ಇನ್ನು ನನಗೆ ಈ ಪೆದ್ದು ತಮ್ಮನ ಕುರಿತು ಚಿಂತಿಸುವ ಅಗತ್ಯವಿಲ್ಲ. ಈ ಹಾಳು ಕೊರೋನಾ ಮಹಾಮಾರಿಯ ಕಾಟದಿಂದಾಗಿ ಎಲ್ಲ ಬಹಳ ಸರಳವಾಗಿಯೇ ಮುಗಿಸಬೇಕಾಯ್ತು. ನೀವಿಬ್ಬರೂ ಅಷ್ಟೆ…. ಬಹಳ ಹುಷಾರಾಗಿರಿ! ಸದ್ಯಕ್ಕಂತೂ ಮನೆಯಲ್ಲೇ ಮಧುಚಂದ್ರ ಮುಗಿಸಿ….. ಆಮೇಲೆ ಇಡೀ ಜೀವನ ಇದ್ದೇ ಇದೆ, ಹೊರಗಿನ ಓಡಾಟಕ್ಕೆ…..” ಎಂದು ಕಣ್ಣು ಮಿಟುಕಿಸಿದಳು.

“ಸಾಕು ಸಾಕೇ ನಿನ್ನ ಭಾಷಣ…. ಹೊಸದಾಗಿ ಮದುವೆ ಆದ ಜೋಡಿ ಅವರಿಗೆ ಗೊತ್ತಾಗೋಲ್ವೇ? ಟೀಚರ್‌ ಅಂತ ನೀನು ಇಲ್ಲೇ ಪಾಠ ಶುರು ಮಾಡಬೇಡ. ಅಮೆರಿಕಾ ಕಂಡು ಬಂದ ನವೀನನಿಗೆ ನಮ್ಮ ಭಾರತದ ಕೊರೋನಾ ಬಗ್ಗೆ ಹೊಸದಾಗಿ ಹೇಳಬೇಕೇ? ಏನಂತಿ ನವೀನ್‌….?” ಸುರಭಿಯ ಪತಿ ವಿಶಾಲ್ ‌ಅವನೆಡೆ ಕಣ್ಣು ಮಿಟುಕಿಸುತ್ತಾ ಹೇಳಿದ. ಇವರಿಬ್ಬರೂ ಅವರಿಗೆ ಕೈ ಬೀಸಿ ವಿದಾಯ ಕೋರಿದರು. ಅವರು ಅಲ್ಲಿಂದ ಮುಂಬೈನ ತಮ್ಮ ಮನೆಗೆ ಹೊರಟರು.

ನವೀನ್‌ ವಿನುತಾರ ಮದುವೆ 2 ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ನಡೆದಿತ್ತು. ಅಮೆರಿಕಾದ ವರ ನವೀನ್‌ ಅಲ್ಲಿ ಹಲವು ವರ್ಷಗಳ ಅನುಭವದ ನಂತರ, ನದೆಹಲಿಯ ಬ್ರಾಂಚ್‌ಗೆ ಹೆಡ್‌ ಆಗಿ ಕಂಪನಿಯಿಂದ ನಿಯಮಿಸಲ್ಪಟ್ಟಿದ್ದ. ಹೀಗೆ ಬೇರೆಯವರ ಮುಖಾಂತರ ವರನ ಬಗ್ಗೆ ವಿವರ ಪಡೆದು, ವಿನುತಾರ ತಾಯಿ ತಂದೆ ಬೇಗ ಬೇಗ ಮದುವೆ ನಿಶ್ಚಯಿಸಿದ್ದರು. ಕೊರೋನಾ ಕಾಟದಿಂದಾಗಿ ಮಂಗಳ ಮುಹೂರ್ತಕ್ಕೆ ಕಾಯದೆ, ಇಬ್ಬರು ಮನೆಯವರಿಗೂ ಅನುಕೂಲವಾಗುವಂತೆ ಆಷಾಢ ಕಳೆದ ತಕ್ಷಣ ಕೇವಲ ವಧೂವರರ ಕಡೆ 15-20 ಜನರ ಸಮ್ಮುಖದಲ್ಲಿ ಒಂದು ದೇವಾಲಯದಲ್ಲಿ ಬಲು ಸರಳವಾಗಿ ಮದುವೆ ನೆರವೇರಿತು.

ವಿನುತಾಳ ತವರು ಬೆಂಗಳೂರಾದ್ದರಿಂದ, ಅಮೆರಿಕಾದಿಂದ ನೇರ ಅಕ್ಕನ ಮನೆಗೆ ಬಂದು ಇಳಿದಿದ್ದ ನವೀನ್‌, ಅಕ್ಕ ಸುರಭಿ ಭಾವ ವಿಶಾಲ್‌, ತನ್ನ ಕೆಲವು ಆಪ್ತ ಗೆಳೆಯರ ಜೊತೆ ಮದುವೆಗೆ ಬಂದಿದ್ದ.

ಆಫೀಸ್‌ ಕೆಲಸವಾಗಿ ಬೆಂಗಳೂರಿಗೆ ಬಂದು ಇಳಿದುಕೊಂಡಿದ್ದ ನವೀನ್‌, ವಧು ಪರೀಕ್ಷೆ ಮುಗಿಸಿ, ವಿನುತಾರ ಮನೆಯವರ ಮೆಚ್ಚುಗೆ ಗಳಿಸಿದ್ದ. ಮುಂಬೈಗೆ ಹೋಗಿ ಅಕ್ಕನ ಕೈಲಿ ಮಾತನಾಡಿಸುವುದಾಗಿ ತಿಳಿಸಿದ. ಅವನ ಹಿರಿಯರು ತೀರಿಕೊಂಡಿದ್ದರು. ಆನ್‌ ಲೈನ್‌ನಲ್ಲೇ ವರ ಮುಂಬೈನಲ್ಲಿ, ವಧು ಬೆಂಗಳೂರಲ್ಲಿ ಇರುವಂತೆ ಲಗ್ನಪತ್ರಿಕೆ ನಡೆಯಿತು. ಅವನಿಗೆ ದೆಹಲಿಯಲ್ಲಿ ಬ್ರಾಂಚ್‌ ಆಫೀಸ್‌ ಸೆಟ್‌ ಮಾಡಬೇಕಿತ್ತು. ಜೊತೆಗೆ ಆಫೀಸ್‌ ವತಿಯಿಂದ ನಗರ ಮಧ್ಯೆ ಉನ್ನತ ಅಪಾರ್ಟ್‌ಮೆಂಟ್‌ ಒಂದರಲ್ಲಿ ಅವನಿಗೆ 2 ಬೆಡ್‌ ರೂಮ್ ಮನೆ ಅಲಾಟ್‌ ಆಗಿತ್ತು.

ಅಂತೂ ತಮ್ಮನ ಮದುವೆ ಸೆಟಲ್ ಆದ ಖುಷಿಯಲ್ಲಿ ಸುರಭಿ ಗಂಡನ ಜೊತೆ ವರನನ್ನು ಮುಂದಿಟ್ಟುಕೊಂಡು ಬೆಂಗಳೂರು ತಲುಪಿದಳು. ಅಚ್ಚುಕಟ್ಟಾಗಿ ಮದುವೆ ಮುಗಿಸಿಕೊಂಡು ವಿನುತಾಳ ಮನೆಯಲ್ಲೇ ಪ್ರಸ್ಥದ ಶಾಸ್ತ್ರ ಮುಗಿಸಿ, ಮಾರನೇ ಬೆಳಗ್ಗೆ ಸೀದಾ ದೆಹಲಿ ತಲುಪಿದರು. ಸುರಭಿ ಮನೆ ಸೊಸೆಯನ್ನು ಸ್ವಾಗತಿಸಿ, ನೆರೆಹೊರೆಯವರನ್ನು ಕರೆಸಿ ಸಣ್ಣ ಔತಣ ಏರ್ಪಡಿಸಿದಳು. ಮಾರನೇ ದಿನ ಅವಸರದಲ್ಲಿ ಅವರು ಮುಂಬೈಗೆ ಹೊರಡಬೇಕಾಯಿತು. ಅಂತೂ ಈ ನೂತನ ದಂಪತಿಗಳು ಅವರನ್ನು ಏರ್ಪೋರ್ಟ್‌ ತಲುಪಿಸಿ, ಮುಂಬೈ ಫ್ಲೈಟ್‌ ಏರಿಸಿ, ತಮ್ಮ ಮನೆಯ ದಾರಿ ಹಿಡಿದರು. ಈಗ ಅವರು ಸ್ವತಂತ್ರ ಹಕ್ಕಿಗಳಾಗಿ ದೆಹಲಿಯೆಲ್ಲಾ ಸುತ್ತಾಡಿದರು.

ಆಗಸ್ಟ್ ತಿಂಗಳ ತುಂತುರು ಮಳೆ ದೆಹಲಿಯ ವಾತಾವರಣ ಬಲು ಕೂಲ್ ‌ಆಗಿಸಿತ್ತು. ಬೆಂಗಳೂರಿಗೆ ಹೋಲಿಸಿದಾಗ ಇಲ್ಲಿ ಚಳಿ ಜಾಸ್ತಿ ಎಂದೇ ವಿನುತಾಳಿಗೆ ಅನಿಸಿತು. 1 ವಾರ ಮಾತ್ರ ನವೀನ್‌ ರಜೆ ಹಾಕಿದ್ದ. ಆ ವಾರ ದೆಹಲಿ ಸುತ್ತಾಟದಲ್ಲಿ ಅದೆಷ್ಟು ಬೇಗ ಮಧುರವಾಗಿ ಕಳೆದುಹೋಯಿತೋ ತಿಳಿಯಲೇ ಇಲ್ಲ. ಒಂದು ವಿಧದಲ್ಲಿ ಇಬ್ಬರಿಗೂ ದೆಹಲಿ ಸುತ್ತಾಟ ಮಧುಚಂದ್ರವೇ ಆಗಿತ್ತು. ಹೋಟೆಲ್‌ನಲ್ಲಿ ತಂಗುವ ಬದಲು ಮಜವಾಗಿ ರಾತ್ರಿ ಹೊತ್ತಿಗೆ ಮನೆ ಸೇರುತ್ತಿದ್ದರಷ್ಟೆ.

ತನ್ನ ಹೊಸ ಬ್ರಾಂಚ್‌ ಸೆಟ್‌ ಮಾಡಬೇಕೆನ್ನುವ ಹುರುಪಿನಲ್ಲಿ ನವೀನ್‌ ಸೋಮವಾರ ಬೆಳಗ್ಗೆ ಬೇಗ ಹೊರಡಬೇಕಾಯಿತು. ಮೊದಲ ಸಲ ಪತಿಗೆ ಸಜ್ಜಿಗೆ, ಉಪ್ಪಿಟ್ಟು ಮಾಡಿಕೊಟ್ಟಳು ವಿನುತಾ. ಆಫೀಸ್‌ ನೆಲೆ ಕಂಡ ಮೇಲೆ ಊಟ ತೆಗೆದುಕೊಂಡು ಹೋಗುವೆ ಎಂದು ನವೀನ್‌ ಹೇಳಿದ್ದರಿಂದ ಅವನು ಹೊರಡುವವರೆಗೂ ಬಾಲ್ಕನಿಯಲ್ಲಿ ನಿಂತು ಕೈ ಬೀಸುವುದೇ ಅವಳ ಕೆಲಸವಾಯಿತು.

ಕಂಪನಿಯವರು ಅಚ್ಚುಕಟ್ಟಾಗಿ ಫುಲ್ ಫರ್ನಿಶ್ಡ್ 2 ಬೆಡ್‌ ರೂಂ ಮನೆ ಒದಗಿಸಿದ್ದರು. ನೆರೆಯವರ ಸಹಾಯದಿಂದ ಒಬ್ಬಳು ಕೆಲಸದ ಹುಡುಗಿ ಗೌರಿ ಸಿಕ್ಕಿದಳು. ಹೈಸ್ಕೂಲ್‌ವ‌ರೆಗೂ 3ನೇ ಭಾಷೆಯಾಗಿ ಹಿಂದಿ ಕಲಿತಿದ್ದ ವಿನುತಾಳಿಗೆ ಅದರಲ್ಲೇನೂ ಅಂಥ ಆಸಕ್ತಿ ಇರಲಿಲ್ಲ. ಪರೀಕ್ಷೆಗಾಗಿ ಪಾಸ್‌ ಮಾಡಿದ್ದಳಷ್ಟೆ. ಹಿಂದಿ ಸಿನಿಮಾಗಳಲ್ಲೂ ಅವಳಿಗೆ ಅಭಿರುಚಿ ಇರದ ಕಾರಣ ಹಿಂದಿ ಸಾಹಿತ್ಯದ ಗಂಧಗಾಳಿಯೂ ಅವಳಿಗೆ ಸೋಂಕಿರಲಿಲ್ಲ. ಹೀಗಾಗಿ ಹರಕಲು ಹಿಂದಿ ಭಾಷೆಯಷ್ಟೇ ಬರುತ್ತಿತ್ತು. ಅಕ್ಕಪಕ್ಕದವರೆಲ್ಲ ಉನ್ನತ ಶಿಕ್ಷಣ ಪಡೆದರು. ಹೀಗಾಗಿ ಆಂಗ್ಲದಲ್ಲೇ ಮಾತನಾಡುತ್ತಾ ನಿಭಾಯಿಸಿದಳು. ತನಗೆ ಗೊತ್ತಿದ್ದಷ್ಟು ಭಾಷೆಯಲ್ಲೇ ಅವಳು ಗೌರಿ ಜೊತೆ ಸಂಭಾಷಿಸಿ, ಸನ್ನೆ ಮೂಲಕ ವಸ್ತು ತೋರಿಸುತ್ತಾ ಕೆಲಸ ಮಾಡಿಸಿದಳು.

ಗೌರಿ ಹೊರಟ ನಂತರ ಇಡೀ ಮನೆಗೆ ಅವಳು ಏಕಾಂಗಿ ಆಗಿದ್ದಳು. ಸುರಭಿ ಒಂದು ಸಂಸಾರಕ್ಕೆ ಬೇಕಾದ ಎಲ್ಲಾ ಸಾಮಗ್ರಿ ಮೊದಲೇ ಸಿದ್ಧಪಡಿಸಿದ್ದಳು. ವಿನುತಾಳ ತವರಿನಲ್ಲಿ ಕೊಟ್ಟಿದ್ದ ಪಾತ್ರೆ ಪಡಗ ಸೇರಿ ಎಲ್ಲಾ ಧಾರಾಳ ಆಗಿತ್ತು. ಇದ್ದ 2 ದಿನದಲ್ಲೇ ಸುರಭಿ ಅರ್ಧ ಭಾಗ ಜೋಡಿಸಿ, ಔತಣ ಮುಗಿಸಿಕೊಟ್ಟು ಹೊರಟುಬಿಟ್ಟಿದ್ದಳು. ಈಗ ತನ್ನ ಆಸೆಗೆ ತಕ್ಕಂತೆ ನಿಧಾನವಾಗಿ ಮನೆಯನ್ನು ಅಲಂಕರಿಸಿ, ನೀಟಾಗಿ ಇಟ್ಟುಕೊಳ್ಳುವುದು ವಿನುತಾಳ ಕೆಲಸವಾಗಿತ್ತು.

ಹೀಗಾಗಿ ಗೌರಿಯ ನೆರವಿನಿಂದ ಮೊದಲೆರಡು ದಿನ ಪರದೆ ಸರಿಪಡಿಸಿ, ಕರ್ಟನ್‌ ಹಾಕಿ, ಕಾರ್ಪೆಟ್‌ ಹೊಂದಿಸಿಕೊಳ್ಳುವುದರಲ್ಲೇ ಕಳೆದುಹೋಯಿತು. ನಂತರ ಮನೆ ಮುಂದೆ ಒಂದಿಷ್ಟು ಹೂಕುಂಡ, ಬಾಲ್ಕನಿಗಳಲ್ಲಿ ಶೋ ಗಿಡ ಇತ್ಯಾದಿ ಅಣಿ ಮಾಡಿಕೊಂಡಳು. ಅಂತೂ ಅವಳ ಅಪೇಕ್ಷೆಗೆ ತಕ್ಕಂತೆ ಗೃಹಾಲಂಕಾರ ಮಾಡಿಕೊಳ್ಳುದರಲ್ಲಿ ಒಂದು ವಾರ ಕಳೆಯಿತು.

ಅಷ್ಟರಲ್ಲಿ ಅತ್ತ ನವೀನ್‌ ಸಹ ತನ್ನ ದೆಹಲಿಯ ಹೊಸ ಬ್ರಾಂಚ್‌ ಆಫೀಸ್‌ ಸೆಟ್‌ ಮಾಡಿಕೊಂಡು, ಸಿಬ್ಬಂದಿ ನೇಮಿಸಿಕೊಂಡು ಕೆಲಸ ಶುರು ಮಾಡಿದ್ದಾಗಿತ್ತು. ಮನೆವಾರ್ತೆಯಲ್ಲಿ ಹೆಂಡತಿಗಿದ್ದ ಅಭಿರುಚಿ ಕಂಡು ನವೀನ್‌ ಪ್ರಶಂಸಿಸಿದ. ಅದಕ್ಕೆ ಇಂಬು ಕೊಡುವಂತೆ ತಕ್ಷಣವೇ ಹೊಸ ಸೋಫಾ ಸೆಟ್‌ಗೆ ಆರ್ಡರ್‌ ನೀಡಿದ. ಅದರ ಜೊತೆ ಮನೆಯ ಹಾಲ್ ‌ಗೋಡೆ ಬಣ್ಣಕ್ಕೆ ಹೊಂದುವಂಥ ರತ್ನಗಂಬಳಿ, ಉಳಿದ ಅನುಕೂಲಕರ ಗೃಹಾಲಂಕರಣದ ಪೀಠೋಪಕರಣಗಳೂ ಬಂದವು.

ವಿನಿತಾಳ ಅಡುಗೆ ಕೆಲಸಕ್ಕೆ ನೆರವಾಗಲೆಂದು ಆಧುನಿಕ ಅಪ್‌ ಟು ಡೇಟ್‌ ಮೈಕ್ರೋವೇವ್ ‌ಮತ್ತಿತರ ಕಿಚನ್‌ ಸಾಮಗ್ರಿಗಳೂ ಸೇರಿದವು. ಲೇಟೆಸ್ಟ್ ಫ್ರಂಟ್‌ ಓಪನ್‌ ವಾಶಿಂಗ್‌ ಮೆಶೀನ್‌, ವ್ಯಾಕ್ಯೂಮ್ ಕ್ಲೀನರ್‌, ದೆಹಲಿ ಚಳಿ ತಡೆಯಲಾರಳೆಂದು ರೂಮ್ ಹೀಟರ್‌….. ಎಲ್ಲವೂ ಬಂದಾಗ ಗಂಡನಿಗೆ ತನ್ನಲ್ಲಿದ್ದ ಪ್ರೀತಿ ಗಮನಿಸಿ, ತಾನೆಂಥ ಉತ್ತಮ ಸಂಗಾತಿಯನ್ನು ಪಡೆದಿದ್ದೇನೆ ಎಂದು ಹಿರಿಹಿರಿ ಹಿಗ್ಗಿದಳು.

ತನ್ನ ಖುಷಿಯನ್ನು ತಾಯಿ ತಂದೆಯರೊಂದಿಗೆ ಫೋನಿನಲ್ಲಿ ಹೇಳಿಕೊಂಡದ್ದಲ್ಲದೆ ನಾದಿನಿಗೂ ವಿಷಯ ತಿಳಿಸಿ, ಅವಳ ಅನುಭವೀ ಸಲಹೆಗಳನ್ನು ಪಡೆದಳು. 2 ತಿಂಗಳು ಕಳೆಯುವಷ್ಟರಲ್ಲಿ ಅವರು ಅತ್ತಿಗೆ ನಾದಿನಿ ಆಗಿರದೆ ಆಪ್ತ ಗೆಳತಿಯರೇ ಆಗಿಬಿಟ್ಟರು, ಫೋನಿನಲ್ಲಿ ಅಷ್ಟು ಮಾತುಕಥೆ ಮುಂದುವರಿದಿತ್ತು.

ಸುರಭಿ ವಿನುತಾಳಿಗೆ ಕುಟುಂಬ ಯೋಜನೆಯ ನವೀನ ತಂತ್ರಗಳ ಬಗ್ಗೆಯೂ ತಿಳಿಸಿ, ಇನ್ನೊಂದು 2 ವರ್ಷ ಮಗು ಕಾಟವಿಲ್ಲದೆ ನೆಮ್ಮದಿಯಾಗಿರಿ ಎಂದು ಉಪದೇಶಿಸಿದಾಗ, ವಿನುತಾ ಕಿಲಕಿಲನೆ ನಗುತ್ತಾ, “ಅಕ್ಕಾ…. ನಿಮ್ಮ ಅನುಭವ ಚೆನ್ನಾಗೇ ಮಾತನಾಡುತ್ತಿದೆ,” ಎಂದಾಗ ಸ್ತ್ರೀ ಸ್ವಾಸ್ಥ್ಯದ ಹಲವು ಹನ್ನೊಂದು ವಿಷಯಗಳನ್ನು ಇಬ್ಬರೂ ಹಂಚಿಕೊಂಡರು. ತಾಯಿ ಬಳಿ ಸಂಕೋಚದ ಕಾರಣ ಚರ್ಚಿಸಲಾಗದ ವಿಷಯಗಳನ್ನು ವಿನುತಾ ಸುರಭಿ ಬಳಿ ಚರ್ಚಿಸಿ ತಿಳಿಯುತ್ತಿದ್ದಳು.

ಕ್ರಮೇಣ ವಿನುತಾಳಿಗೆ ಒಬ್ಬಳೇ ಮನೆಯಲ್ಲಿದ್ದು ಬೇಸರ ಎನಿಸಿತು. ಹೀಗಾಗಿ ಒಂದು ಆ್ಯಡ್‌ ಏಜೆನ್ಸಿಯಲ್ಲಿ ಜಾಹೀರಾತು ರಚಿಸುವ ಆ್ಯಡ್‌ ರೈಟರ್‌ ಆಗಿ ಕೆಲಸಕ್ಕೆ ಸೇರಿದಳು. ದೆಹಲಿಯ ಆ ವಾತಾವರಣದಲ್ಲಿ ದ. ಭಾರತದ ಭಾಷೆಗಳ ಅನುವಾದಕರಿಗೆ ಹೆಚ್ಚಿನ ಬೇಡಿಕೆ ಇತ್ತು. ಹೀಗಾಗಿ ಕನ್ನಡದಿಂದ ಆಂಗ್ಲ, ಹಿಂದಿಗೆ ಅನುವಾದ ಉಳಿದಂತೆ ಕ್ರಿಯೇಟಿವ್ ಆ್ಯಡ್‌ ರೈಟಿಂಗ್‌ ಕೆಲಸ ಅವಳಿಗೆ ಬಹಳ ಒಗ್ಗಿಹೋಯಿತು.

ಹೆಂಡತಿ ಮನೆ ಸಂಭಾಳಿಸುತ್ತಾ, ಕೆಲಸದಲ್ಲೂ ತಲ್ಲೀನಳಾಗಿರುವುದು ನವೀನನಿಗೆ ಹೆಮ್ಮೆ ಎನಿಸಿತು. ದೆಹಲಿಯಲ್ಲಿ ಹೊಸದಾಗಿ ಮೆಟ್ರೋ ಆರಂಭವಾದ್ದರಿಂದ ಮುಕ್ಕಾಲು ಗಂಟೆಯಲ್ಲಿ ಆಫೀಸ್‌ ತಲುಪುವುದು, ಸಂಜೆ 8 ಗಂಟೆಗೆ ಮುಂಚೆ ಮನೆ ತಲುಪುವುದು ಅವಳಿಗೆ ಕಷ್ಟವಾಗಲಿಲ್ಲ. ನವೀನ್‌ ಬರುವ ಹೊತ್ತಿಗೆ 9 ಗಂಟೆ ಆಗಿಹೋಗುತ್ತಿತ್ತು. ಅಷ್ಟು ಹೊತ್ತಿಗೆ ರಾತ್ರಿ ಬಿಸಿ ಅಡುಗೆ ಮುಗಿಸಿರುತ್ತಿದ್ದ ವಿನುತಾ, ಅವನು ಬಂದ ಮೇಲೆ ಫ್ರೆಶ್‌ ಕಾಫಿ ತಯಾರಿಸಿ ಬಾಲ್ಕನಿಯಲ್ಲಿ ಗಂಡನೊಂದಿಗೆ ಹಾಯಾಗಿ ಎಂಜಾಯ್ ಮಾಡುತ್ತಿದ್ದಳು. ಟಿವಿ ನೋಡುತ್ತಾ ಊಟ ಮುಗಿಸುವಷ್ಟರಲ್ಲಿ ರಾತ್ರಿ 11 ಆಗಿಹೋಗುತ್ತಿತ್ತು.

ಮದುವೆಯಾಗಿ ಆಗಲೇ 2 ತಿಂಗಳು ಕಳೆಯಿತೇ ಎಂದು ವಿನುತಾಳಿಗೆ ಆಶ್ಚರ್ಯವಾಯಿತು. ಮತ್ತೆ ಆಫೀಸ್‌, ವೀಕೆಂಡ್‌ ಪ್ರವಾಸ, ಪಾರ್ಟಿಗಳ ಮಧ್ಯೆ ಸಮಯ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಆಗಾಗ ತಾಯಿ ತಂದೆಗೆ ವಿಡಿಯೋ ಕಾಲ್ ಮಾಡಿ ತನ್ನ ಮನೆಯ ವೈಭವ ತೋರಿಸಿ ಹೆಮ್ಮೆಪಡುವಳು. ವರನನ್ನು ಹುಡುಕುವುದರಲ್ಲಿ ತಮ್ಮದು ಅವಸರದ ಆಯ್ಕೆಯಾಗಿತ್ತೇನೋ ಎಂದು ಮೊದ ಮೊದಲು ಭಾವಿಸಿದ್ದ ಅವರಿಗೆ, ಮಗಳು ಅಳಿಯನ ಸುಖೀ ಜೀವನ ಕಂಡು ನೆಮ್ಮದಿ ಎನಿಸಿ, ಹಾಯಾಗಿ 15 ದಿನಗಳ ದಕ್ಷಿಣ ಭಾರತದ ಪ್ರವಾಸಕ್ಕೆ ಹೊರಟರು.

ಅದೇ ರೀತಿ ವಿನುತಾ ಸುರಭಿ ಜೊತೆ ಮಾತನಾಡುತ್ತಾ ಇನ್ನಷ್ಟು ಆತ್ಮೀಯತೆ ಬೆಳೆಸಿಕೊಂಡಳು. ಸುರಭಿಯ ಮಕ್ಕಳಾದ ಅಮರ್‌, ಅನಿತಾ ಇವಳ ಬಳಿ ತಮ್ಮ ಶೈಕ್ಷಣಿಕ ವಿಷಯ ಚರ್ಚಿಸುತ್ತಿದ್ದರು. 10, 12ರಲ್ಲಿ ಕಲಿಯುತ್ತಿದ್ದ ಅವರ ಗಣಿತ, ವಿಜ್ಞಾನದ ಎಲ್ಲಾ ಸಂದೇಹಗಳನ್ನೂ ವಿನುತಾ ಸುಲಭವಾಗಿ ಪರಿಹರಿಸುವಳು. ಇತ್ತೀಚೆಗೆ ಮಾಮನಿಗಿಂತ ಹೆಚ್ಚಾಗಿ ಅವರು ಮಾಮಿಗೇ ಫೋನ್‌ಮಾಡುತ್ತಾರೆಂದು ನವೀನ್‌ ಹುಸಿ ಮುನಿಸು ತೋರಿದರೆ, ಸುರಭಿ ನೀನು ಅಂಥ ಜಾಣನಲ್ಲ ಅಂತ ಅವರಿಗೂ ಗೊತ್ತು ಬಿಡು ಎಂದು ರೇಗಿಸುವಳು.

ಹೀಗೆ ಒಮ್ಮೆ ನವೀನ್‌ ಸ್ನಾನಕ್ಕೆ ಹೋಗಿದ್ದಾಗ, ಅವನ ಫೋನ್‌ಗೆ `ರಶ್ಮಿ’ ಕಾಲಿಂಗ್‌ ಎಂದು ಸೂಚನೆ ಬಂತು. ಬಹುಶಃ ಅದು ಸುರಭಿಯ ಕಿರಿ ಮಗಳಿರಬಹುದು ಎನಿಸಿತು. ಈ ಮಗು ಜೊತೆ ಅವಳು ಮಾತನಾಡಿರಲಿಲ್ಲ. ಅವಳು ಫೋನ್‌ ರಿಸೀವ್ ‌ಮಾಡಿದ ತಕ್ಷಣ, “ಪಪ್ಪಾ ಎಲ್ಲಿದ್ದಾರೆ….?” ಎಂದು ಆ ಮಗು ಕೇಳಿತು, ಧ್ವನಿಯಿಂದ 5-6 ವರ್ಷ ಇರಬಹುದೆಂದು ಅವಳು ಅಂದಾಜಿಸಿದಳು. ಅಮರ್‌, ಅನಿತಾರ ಧ್ವನಿ ಖಂಡಿತಾ ಅದಲ್ಲ ಎಂದು ತಿಳಿಯಿತು. ಮಾಮನನ್ನು ಅವರೇಕೆ ಅಪ್ಪನೆಂದಾರು…..? ಬಹುಶಃ ರಾಂಗ್‌ನಂಬರ್‌ ಇರಬಹುದೇ…..? ಎನಿಸಿತು. ಆದರೆ `ರಶ್ಮಿ’ ಎಂದು ಸೇವ್ ‌ಆಗಿದೆಯಲ್ಲ ಎಂದು ಕ್ಷಣಾರ್ಧದಲ್ಲಿ ತರ್ಕಿಸಿದಳು.

“ಯಾರ ಜೊತೆ ಮಾತನಾಡಬೇಕಿತ್ತು ಮಗು ನೀನು? ಇದು ನಿಮ್ಮ ಪಪ್ಪನ ಮನೆಯಲ್ಲ…. ಇನ್ನೊಂದು ಸಲ ಅದೇ ನಂಬರ್‌ ಟ್ರೈ ಮಾಡಿ ನೋಡಮ್ಮ,” ಎಂದಳು ವಿನುತಾ.

“ನವೀನ್‌ ಪಪ್ಪ ಹೆಸರು ನೋಡಿಯೇ ನಾನು ಕಾಲ್ ‌ಮಾಡಿದ್ದು ಆಂಟಿ…. ನೀವು ಯಾರು ಆಂಟಿ….?” ತಡವರಿಸುತ್ತಾ ಬಿಕ್ಕಳಿಕೆಯ ದನಿಯಲ್ಲಿ ಮಗು ಕೇಳಿತು. ಇದನ್ನು ಕೇಳಿ ವಿನುತಾಳಿಗೆ ಭಾರಿ ಶಾಕ್‌ ತಗುಲಿತು. ಮಗು ಸ್ವಲ್ಪ ತೊದಲದೆ ನವೀನನ ಹೆಸರನ್ನು ಹೇಳುತ್ತಿರುವುದು, ಅದೂ ಬಹಳ ದಿನಗಳ ಪರಿಚಯವಿರುವಂತೆ… ಏಕೋ ಏನೋ…. ಎಲ್ಲ ಅಯೋಮಯ ಎನಿಸಿತು.

ಅವಳು ಮಗುವಿನ ಸಮಾಧಾನಕ್ಕೆ ಏನು ಹೇಳಲಿ ಎಂದು ಯೋಚಿಸುತ್ತಿರುವಷ್ಟರಲ್ಲಿಯೇ, ಬಾತ್‌ರೂಮಿನಿಂದ ತಲೆ ಒರೆಸಿಕೊಳ್ಳುತ್ತಾ ಬಂದ ನವೀನ್‌ ಮಡದಿಯ ಕೈಯಲ್ಲಿ ತನ್ನ ಫೋನ್‌ ಕಂಡು, “ಯಾರದು ಕಾಲ್…..?” ಎನ್ನುತ್ತಾ ಅವಳ ಕೈಯಿಂದ ಫೋನ್‌ ಪಡೆದು ಮಗುವಿನ ಜೊತೆ ಮುದ್ದು ಮುದ್ದಾಗಿ ಬಾಲಭಾಷೆಯಲ್ಲಿ ಮಾತನಾಡತೊಡಗಿದ.

ಏನೂ ಅರ್ಥವಾಗದೆ ಕಸಿವಿಸಿಗೊಂಡ ವಿನುತಾ ಇನ್ನೂ ಶಾಕ್‌ನಿಂದ ಹೊರ ಬಂದಿರಲಿಲ್ಲ. ಗಂಡನನ್ನು ನೇರ ಏನೆಂದು ಕೇಳಲಿ ಎಂದುಕೊಳ್ಳುತ್ತಾ ಅನ್ಯಮನಸ್ಕಳಾಗಿ ಸ್ನಾನಕ್ಕೆ ಹೊರಟಳು. `ಆ ಮಗು ಯಾರಿರಬಹುದು? ನವೀನ್‌ ನೋಡಿದರೆ ಅದರೊಂದಿಗೆ ಮುದ್ದುಮುದ್ದಾಗಿ ಮಾತನಾಡುತ್ತಿದ್ದಾನೆ….. ಹಾಗಾದರೆ ಮಗುವಿನ ಮಾತು ತಪ್ಪಲ್ಲ…. ಮಕ್ಕಳು ಎಂದೂ ಸುಳ್ಳಾಡುವುದಿಲ್ಲ! ಹಾಗಾದರೆ…. ನವೀನನಿಗೆ ಈಗಾಗಲೇ ಮದುವೆ ಆಗಿಹೋಗಿತ್ತೇ?`ಅವನ ಪತ್ನಿ ತೀರಿಕೊಂಡು ತನ್ನ ಮಗುವನ್ನು ಅಕ್ಕನ ಬಳಿ ಬಿಟ್ಟಿದ್ದಾನಾ? ತಾನು ಅವನ ಬದುಕಿನಲ್ಲಿ ಎರಡನೆಯವಳೇ? ಅಕ್ಕಾತಮ್ಮ ಈ ಕುರಿತಾಗಿ ಬಾಯೇ ಬಿಟ್ಟಿಲ್ಲವಲ್ಲ…… ಅಥವಾ ಡೈವೋರ್ಸಿ ಇರಬಹುದು. ಒಟ್ಟಿನಲ್ಲಿ ಅವನು ತನಗೆ ತೋರುತ್ತಿರುವ ಪ್ರೇಮವೆಲ್ಲ ಸೆಕೆಂಡ್‌ ಹ್ಯಾಂಡ್‌…. ಅವಸರದ ಮದುವೆ ತನ್ನನ್ನು ಈ ಪ್ರಪಾತಕ್ಕೆ ದೂಡಿತೇ? ಇದೆಂಥ ಮೋಸ!’ ತಲೆ ಮೇಲಿಂದ ತೊಟ್ಟಿಕ್ಕಿದ ಶವರ್‌ ನೀರಲ್ಲಿ ಅವಳ ಬಿಸಿ ಕಣ್ಣೀರೂ ಬೆರೆತಿತ್ತು.

ಅತ್ಯಾಧುನಿಕ ಬಾತ್‌ ಟಬ್‌ನ ಹಿತಕರ ವಾತಾವರಣ ಅವಳ ಮೂಡ್‌ ಬದಲಾಯಿಸಲು ಸಾಧ್ಯವಿರಲಿಲ್ಲ. ನವೀನ್‌ ತನ್ನ ಬಳಿಗೆ ಬಂದು, `ಆ ಫೋನ್‌ ನಮಗಾಗಿ ಬಂದದ್ದಲ್ಲ….. ಯಾರೋ ಬೇರೆ ನವೀನ್‌ ಹೆಸರಿನಲ್ಲಿ…. ಆ ಮಗು ಮಾತನಾಡಿತಲ್ಲ ಎಂದು ಅದಕ್ಕೆ ಬೇಸರವಾಗದಂತೆ ಉತ್ತರಿಸಿದೆ ಅಷ್ಟೆ. ನಾನು ಯಾವಾಗ ಪಪ್ಪ ಆಗಬೇಕು ಅಂತ ನೀನು ತಾನೇ ಹೇಳ್ಬೇಕು…..’ ಎಂದು ತನ್ನನ್ನು ರಮಿಸಬಾರದೇ ಎಂದು ಬಯಸಿದಳು.

ಅವಳು ಬೇಗ ಡ್ರೆಸ್‌ ಮಾಡಿಕೊಂಡು ಬರುವಷ್ಟರಲ್ಲಿ ನವೀನ್‌ ಡೈನಿಂಗ್‌ ಟೇಬಲ್ ಬಳಿ ತಿಂಡಿಗಾಗಿ ಕಾಯುತ್ತಿದ್ದ. ಒಳಗೆ ಗೌರಿ ಇವರಿಗಾಗಿ ದೋಸೆ ತಯಾರಿಸುತ್ತಿದ್ದಳು. ಪತ್ನಿ ಬಂದು ಪಕ್ಕದಲ್ಲಿ ಕೂರುತ್ತಿದ್ದಂತೆ ನವೀನ್‌ ಅವಳ ತಲೆಗೂದಲಿನ ಸುಗಂಧ ಹೀರಿಕೊಳ್ಳುತ್ತಾ, “ಆಹಾ….ಎಂಥ ಸೊಗಸಾದ ಸುವಾಸನೆ! ನೀನು ಯಾವ ಶ್ಯಾಂಪೂ ಬಳಸುತ್ತೀಯಾ?” ಅವಳನ್ನು ಹತ್ತಿರಕ್ಕೆ ಒತ್ತರಿಸಿಕೊಳ್ಳುತ್ತಾ ಕಣ್ಣು ಮಿಟುಕಿಸಿದ.

ಗೌರಿ ಇರುವಳೆಂಬಂತೆ ಹುಸಿ ಮುನಿಸು ತೋರುತ್ತಾ ವಿನುತಾ ಗಂಡನ ತುಂಟಾಟ ಆನಂದಿಸಿದಳು. “ಈ ಗೌರಿ ತಿಂಡಿ ಕೊಟ್ಟ ಮೇಲೆ ಇವತ್ತು ಕೆಲಸ ಸಾಕು ಅಂತ ನೆಪ ಹೇಳಿ ಕಳುಹಿಸುಬಿಡು. ಇವತ್ತು ಆಫೀಸ್‌ಗೆ ಹೋಗುವ ಮೂಡಿಲ್ಲ. ಹಾಯಾಗಿ ನಾವಿಬ್ಬರೂ ಮನೆಯಲ್ಲೇ ಹನಿಮೂನ್‌ ಎಂಜಾಯ್‌ ಮಾಡೋಣ….. ನೀನೂ ಇವತ್ತು ರಜಾ ಹಾಕಿಬಿಡು,” ಗಂಡನ ಪ್ರೇಮಾಲಾಪನೆಗೆ ಕರಗಿಹೋದ ವಿನುತಾ ಬೆಳಗಿನ ಫೋನ್‌ ಪ್ರಕರಣ ಮರೆತೇಬಿಟ್ಟಳು.

ಬಾಗಿ ಗಂಡನ ಹಣೆ ಚುಂಬಿಸಿದ ಅವಳು, “ಇದೆಲ್ಲ ಒಂದೇ ದಿನ ಮುಗಿಸುವುದು ಬೇಡ. ಜಾಣಮರಿ ಹಾಗೆ ಆಫೀಸ್‌ಗೆ ಹೊರಡಿ, ನಾನೂ ಹೋಗಬೇಕು. ಸಂಜೆ ಬೇಗ ಬನ್ನಿ, ಉಳಿದ ರೊಮಾನ್ಸ್ ಆಮೇಲೆ….” ಎಂದು ತಾನೂ ಕಣ್ಣು ಮಿಟುಕಿಸಿದಾಗ ಅವನು ಅವಳನ್ನು ಬಾಹುಗಳಲ್ಲಿ ಬಂಧಿಸಿದ.

ಅಡುಗೆಮನೆಯಿಂದ ಹೊರಬರುತ್ತಾ ಗೌರಿ ಹುಸಿಯಾಗಿ ಕೆಮ್ಮಿದಾಗ ಇಬ್ಬರೂ ಸೀರಿಯಸ್‌ ಆಗಿ ಸರಿಯಾಗಿ ಕುಳಿತು ನಗತೊಡಗಿದರು. ಅದಾಗಿ ಗೌರಿ ಉಳಿದ ಕೆಲಸ ಮುಗಿಸಿ ಸಂಜೆ ಬರುತ್ತೇನೆಂದು ಹೊರಟಳು. ಇಬ್ಬರೂ ತಂತಮ್ಮ ಆಫೀಸ್‌ಕೆಲಸಕ್ಕೆ ಹೊರಟರು.

ಹೀಗೆ ದಿನಗಳು ಕಳೆದವು. ರಸಮಯ ಪ್ರೇಮ ಸನ್ನಿವೇಶದಲ್ಲಿ ಒಮ್ಮೊಮ್ಮೆ ಮತ್ತೆ ಅದೇ ಮಗುವಿನ ಕರೆ ಬರುತ್ತಿದ್ದುದುಂಟು. ನವೀನ್‌ ಅವಳೊಂದಿಗಿನ ಪ್ರೇಮಾಲಾಪನೆ ಬಿಟ್ಟು ತಕ್ಷಣ ಪಕ್ಕದ ರೂಮಿಗೆ ಹೊರಟುಬಿಡುತ್ತಿದ್ದ. ಅಪ್ಪಿತಪ್ಪಿಯೂ ಅವನು ಆ ಫೋನ್‌ಕರೆಯ ಬಗ್ಗೆ ಅವಳೊಂದಿಗೆ ಚರ್ಚಿಸುತ್ತಿರಲಿಲ್ಲ.

ಮತ್ತೆ ಮತ್ತೆ ಅವಳ ಕಿವಿಗಳಿಗೆ ಮಗು `ನವೀನ್‌ ಪಪ್ಪನ ಜೊತೆ ಮಾತನಾಡಬೇಕು….’ ಎಂದು ಹೇಳಿದ ಅದೇ ಮಾತುಗಳೇ ಗಂಯಿಗುಡುತ್ತಿದ್ದವು. ಹೊಸದಾಗಿ ಮದುವೆಯಾದ ರಸಮಯ ಮಧುರ ದಿನಗಳ ಮಧ್ಯೆ, ಇದೇನಿದು ಅಪಸ್ವರ….. ಪಾಯಸದಲ್ಲಿ ನೊಣ ಬಿದ್ದಿರುವ ಹಾಗೆ ಅವಳು ಚಡಪಡಿಸಿದಳು. ಇದನ್ನು ನವೀನ್‌ ಬಾಯಿಯಿಂದ ಕೇಳಿ ತಿಳಿಯುವುದಾದರೂ ಹೇಗೆ? ಏನೆಂದು ಒತ್ತಾಯಿಸಿ ಕೇಳುವುದು? ಇಂಥ ಭವ್ಯ ಶ್ರೀಮಂತಿಕೆಯ ಜೀವನ, ಕಂಡೂ ಕೇಳರಿಯದ ದೆಹಲಿಯಂಥ ಪ್ರದೇಶದಲ್ಲಿ ರಾಣಿ ವಾಸದ ಮನೆ, ಎಲ್ಲಾ ಕೆಲಸಗಳಿಗೂ ಆಳುಕಾಳು, ಇಷ್ಟೆಲ್ಲ ವೈಭವದಲ್ಲಿ ಮೆರೆಯುತ್ತಿರುವಾಗ ತಾನಾಗಿ ಅವನೊಂದಿಗೆ ಜಗಳ ತೆಗೆಯುವುದು ಸಾಧ್ಯವೇ? ಮನಸ್ಸು ಮಾಡಿದ್ದರೆ ಅವನಿಗೆ ತನಗಿಂತ ಇನ್ನೂ ಶ್ರೀಮಂತ, ಅನುಕೂಲಸ್ಥರ ಮನೆ ಹುಡುಗಿ ಸಿಗುತ್ತಿರಲಿಲ್ಲವೇ? ತನ್ನಂಥ ಸರ್ವೇ ಸಾಧಾರಣ ಮಧ್ಯಮ ವರ್ಗದ ಹುಡುಗಿಯನ್ನು ಅವನು ಮೆಚ್ಚಿದ್ದೇಕೆ? ತನಗೆ ಈಗಾಗಲೇ ಮದುವೆ ಆಗಿ ಮಗು ಇರುವ ವಿಷಯ ಮುಚ್ಚಿಡಲೆಂದೇ, ತನಗಿಂತ ಬಡಮನೆಯ ಹುಡುಗಿಯನ್ನು ಸಂಗಾತಿಯಾಗಿ ಆರಿಸಿಕೊಂಡನೇ? ಅದೇ ನೆಪದಿಂದಲೇ ಹುಡುಗಿ ಮನೆಯವರು ಹೆಚ್ಚು ಕೆದಕಿ ವಿಚಾರಿಸಲು ಹೋಗಬಾರದೆಂದು ಲಾಕ್‌ ಡೌನ್‌ಎಂದು ಗೊತ್ತಿದ್ದರೂ ಲಗ್ನಪತ್ರಿಕೆ, ಮುಹೂರ್ತ ಎರಡಕ್ಕೂ ಅಷ್ಟು ಅವಸರಪಡಿಸಿ ಮದುವೆ ಆಯ್ತು ಎಂದೆನಿಸಿ ತನ್ನನ್ನು ದೆಹಲಿಗೆ ಕರೆದುಕೊಂಡು ಬಂದನೆ? ಅವಳ ತಲೆ ಕೆಟ್ಟು, ಹೊಸದಾಗಿ ಸೇರಿದ ಆಫೀಸಿಗೆ ಫೋನ್‌ ಮಾಡಿ 4 ದಿನ ತಾನು ಬರಲಾಗುದಿಲ್ಲ ಎಂದು ರಜೆ ಪಡೆದಳು. ಎಲ್ಲಾ ಜಾಣ, ತುಸು ಕೋಣ ಎಂದು ತನ್ನ ರಸಿಕ ಮಹಾಶಯ ಪತಿ ದಾಂಪತ್ಯ ಸುಖದಲ್ಲಿ ತನ್ನನ್ನು ತೇಲಾಡಿಸಿ, ಸುಖ ಸೌಲಭ್ಯಗಳಿಂದ ತುಂಬಿದ ಮನೆ ಒದಗಿಸಿ, ಶ್ರೀಮಂತಿಕೆಯ ಸುಖ ಜೀವನ ಕಲ್ಪಿಸಿದ್ದೇನೋ ಸರಿ….. ಆದರೆ ಆ ಮಗುವಿನ ವಿಷಯ…. ಅದನ್ನೇಕೆ ಅವನು ಬಾಯಿಬಿಟ್ಟು ಹೇಳಬಾರದು? ಅವಳ ಮನಶ್ಶಾಂತಿ ಕದಡಿಹೋಗಿತ್ತು.

“ಅಕ್ಕಾ ಯಾಕೋ ಮದುವೆಗೆ ಮಕ್ಕಳನ್ನೇ ಕರೆ ತರಲಿಲ್ಲ….?” ಹೀಗೇ ಬಿಡುವಾಗಿ ಇಬ್ಬರೂ ಬಾಲ್ಕನಿಯಲ್ಲಿ ಕುಳಿತಿದ್ದಾಗ ಒಮ್ಮೆ ವಿನುತಾ ಕೇಳಿದಳು, “ಅವರಿಬ್ಬರೂ ಬಹಳ ಬೇಗ ನನಗೆ ಕ್ಲೋಸ್‌ ಆಗಿಬಿಟ್ಟರು…… ಅಮರ್‌, ಅನಿತಾ ಬಂದಿದ್ದರೆ ಬಹಳ ಚೆನ್ನಾಗಿರುತ್ತಿತ್ತು. ಅದು ಸರಿ, ಸುರಭಿ ಅಕ್ಕನ ಮಗಳು ಅನಿತಾ ಅಲ್ವಾ, ಮತ್ತೆ ಕಾಲ್ ಬಂದಾಗ ರಶ್ಮಿ ಅಂತಿತಲ್ಲಾ…. ಇದು ಯಾರು?  5-6 ವರ್ಷದ ಚಿಕ್ಕ ಮಗುವಿರಬೇಕು…. ನೀವು ಏನೂ ಹೇಳಲಿಲ್ಲ….”

“ವೈವಾಹಿಕ ಕೇಂದ್ರದ ಮೂಲಕ ನಿಮ್ಮ ತಂದೆಯ ಮೊಬೈಲ್ ‌ನಂಬರ್‌ ಹಾಗೂ ನಿನ್ನ ಪ್ರೊಫೈಲ್ ‌ಸಿಕ್ಕಿತು. ನಿನ್ನ ಫೋಟೋ ನೋಡಿ ನಾನು ಸೋತಿದ್ದೆ. ಹೀಗಾಗಿ ನಿಮ್ಮ ತಂದೆಗೆ ಫೋನ್‌ ಮಾಡಿ, ನನ್ನ ವಿಷಯ ಹೀಗೆ ಹೀಗೆ ಅಂತ ಹೇಳಿದೆ. ಆಮೇಲೆ ನಿನ್ನ ನೋಡಲು ಬಂದೆ…. ಆವತ್ತೇ ನನಗೆ ಆಫೀಸ್‌ನಲ್ಲಿ ಡೆಲ್ಲಿ ಬ್ರ್ಯಾಂಚ್‌ ಓಪನ್‌ ಮಾಡಲು ಆರ್ಡರ್‌, ಇನ್‌ಚಾರ್ಜ್‌ ಆಗಿ ಪ್ರಮೋಶನ್‌ಸಿಕ್ಕಿತ್ತು. ಹೀಗಾಗಿ ದೆಹಲಿಗೆ ಆದಷ್ಟು ಬೇಗ ಶಿಫ್ಟ್ ಆಗುವುದು ಅನಿವಾರ್ಯವಾಗಿತ್ತು. ಹಾಗಾಗಿ ಮದುವೆ ದಿನಾಂಕ ಅರ್ಜೆಂಟ್‌ನಲ್ಲಿ ಫಿಕ್ಸ್ ಮಾಡಬೇಕಾಯ್ತು.

“ಅಕ್ಕನ ಮಕ್ಕಳ ಪರೀಕ್ಷೆ ದಿನಗಳು. ಹೀಗಾಗಿ ಅವರನ್ನು ಕರೆತರಲು ಆಗಲಿಲ್ಲ. ಅಷ್ಟರಲ್ಲಿ ಕರೋನಾದಿಂದಾಗಿ ಲಾಕ್‌ ಡೌನ್‌ಘೋಷಣೆ….  ದೆಹಲಿಗೆ ಫ್ಲೈಟ್‌ ಲಭ್ಯ ಅಂತಾದಾಗ ಮದುವೆ ಮುಹೂರ್ತ ಫಿಕ್ಸ್ ಮಾಡಿದ್ದಾಯಿತು…. ಎಲ್ಲ ಗಡಿಬಿಡಿಯಲ್ಲಿ ಆಗಿಹೋಯಿತು….” ಅಷ್ಟರಲ್ಲಿ ಅವನ ಮೇಲಧಿಕಾರಿ ಕರೆ ಮಾಡಿದ್ದರಿಂದ ಅದನ್ನು ಅಟೆಂಡ್‌ ಮಾಡಲು ಅವನು ತನ್ನ ಕೋಣೆಗೆ ಹೋಗಬೇಕಾಯಿತು. ಒಟ್ಟಾರೆ ಅವಳ ಪ್ರಶ್ನೆಗೆ ಉತ್ತರ ಅಪೂರ್ಣವಾಗಿತ್ತು.

ಹೀಗೆ 2 ವಾರ ಕಳೆಯಿತು. ಅದರಲ್ಲಿ 2 ಸಲ ಅದೇ ಮಗು ಕರೆ ಮಾಡಿದಾಗ ಇವಳ ಚಡಪಡಿಕೆ ಹೆಚ್ಚಾಯಿತು. ತನ್ನ ವೈವಾಹಿಕ ಜೀವನ ಸುರಕ್ಷಿತ ಎಂದು ಅವಳೆಷ್ಟೇ ಸಮಾಧಾನಗೊಂಡರೂ ಅವಳ ಅಂತರಾತ್ಮ ಕೊರಗುತ್ತಲಿತ್ತು. ಅವನಿಂದ ನೇರ ಜವಾಬೇಕೆ ಬರುತ್ತಿಲ್ಲ ಎಂಬುದೇ ದೊಡ್ಡ ಸಮಸ್ಯೆಯಾಗಿತ್ತು. ನಾನು ಅತ್ತೂ ಕರೆದು ರಂಪ ಮಾಡಿ, ನೀನು ನನಗೆ ಮೋಸ ಮಾಡಿದ್ದೀಯಾ. ಈಗಾಗಲೇ ವಿವಾಹಿತನಾದ ನೀನು ವಿಧುರನೋ ವಿಚ್ಛೇದಿತನೋ ತಿಳಿಯದು, ಮಗುವಿನ ತಂದೆಯಾಗಿ ಸದಾ ಅದರೊಂದಿಗೆ ಸಂಪರ್ಕ ಹೊಂದಿದ್ದು, ಅದನ್ನು ಎಲ್ಲೋ ಅಕ್ಕನ ಮನೆಯಲ್ಲಿ ದೂರ ಬಿಟ್ಟು ಇಲ್ಲಿಂದ ಆರ್ಥಿಕ ನೆರವು ನೀಡತ್ತಾ, ತೆರೆಮರೆಯಲ್ಲಿ ತಂದೆ ಪ್ರೀತಿ ತೋರುತ್ತಿದ್ದರೆ, ನವವಿವಾಹಿತೆಯಾದ ತಾನು, ಕಾನೂನುಬದ್ಧಾಗಿ ಕೈ ಹಿಡಿದ ಅವನ ಹೆಂಡತಿ ಇದನ್ನೆಲ್ಲ ಸಹಿಸುತ್ತಾ ಸುಮ್ಮನಿರಬೇಕೇ? ಈ ಅಸಹಾಯಕ ಸ್ಥಿತಿಯಲ್ಲಿ ತನ್ನನ್ನು ತಂದು ನಿಲ್ಲಿಸಿದ್ದೇಕೆ? ಅವನ ಜೀವನದ ತೇಪೆ ಮುಚ್ಚಿಹಾಕಲು ಬಡ ಮಧ್ಯಮ ವರ್ಗದ ತನ್ನನ್ನು ಏಮಾರಿಸಿ ಬೇಗ ಮದುವೆಯಾಗಿ ಕಂಡುಕಾಣದ ಈ ದೆಹಲಿಯ ಕಾಡಿಗೆ ಕರೆತರುವುದೇ? ಹೀಗೆ ಓತಪ್ರೋತವಾಗಿ ಜಗಳವಾಡಲು ಅವಳ ಮನ ತುಡಿಯಿತು. ತಾನು ಹೇಳಿದ್ದನ್ನೆಲ್ಲ ಕೇಳಿಸಿಕೊಂಡು ಅವನು ಹೌದು, ನಾನು ಡೈವೋರ್ಸಿ. ನನ್ನ ಕೈ ಹಿಡಿದವಳು ಬಿಟ್ಟು ಹೋದಳು. ಆದರೆ ನನ್ನ ಮಗುವಿನ ಮೇಲಿನ ಪ್ರೀತಿಗಾಗಿ ಅದನ್ನು ಅಕ್ಕನ ಬಳಿ ಬಿಟ್ಟಿದ್ದೇನೆ. ಅದಕ್ಕೆ ಅಪ್ಪನಾಗಿ ಇರುತ್ತೇನೆ, ನಿನಗೆ ಯಾವುದೇ ಕಷ್ಟಕೊಡದೆ ಇಷ್ಟೊಂದು ಸುಖ ಸೌಲಭ್ಯ ಶ್ರೀಮಂತಿಕೆಯ ಜೀವನ ಕಲ್ಪಿಸಿಕೊಟ್ಟಿದ್ದೇನೆ… ಬೇಕಾದರೆ ಇವರು, ಇಲ್ಲ ನಿನ್ನ ಮನೆಗೆ ಹೊರಟು ಹೋಗು.  ತಿಂಗಳಿಗೆ ಒಂದಿಷ್ಟು ಜೀವನಾಂಶ ಬಿಸಾಡುತ್ತೇನೆ….. ಎಂದರೆ ಅಸಹಾಯಕಳಾದ ತಾನು ಮಾಡಬೇಕೇನು? ಅವಳ ತಾಯಿ ತಂದೆ ಆರ್ಥಿಕವಾಗಿ ಶಕ್ತಿ ಇಲ್ಲದವರು. ಇದೊಂದು ಫ್ರಾಡ್‌ ಕೇಸ್‌ ಎಂದು ಪೊಲೀಸ್‌ ಠಾಣೆ, ಕೋರ್ಟು ಕಛೇರಿ ಅಲೆಯಲು ಅವರ ಬಳಿ ಹಣಕಾಸು, ಆರೋಗ್ಯ ಯಾವುದೂ ಇರಲಿಲ್ಲ. ಇವಳೊಬ್ಬಳು ಏಕಾಂಗಿಯಾಗಿ ಹೇಗೆ ತಾನೇ ಹೋರಾಡುವುದು? ಈ ಸಮಸ್ಯೆಯ ಸುಳಿಯಿಂದ ತಾನು ಹೊರಬರುವುದಾದರೂ ಹೇಗೆ? ಅದಕ್ಕೆ ಅಂತ ತನ್ನ ಸ್ವಾಭಿಮಾನ ಒತ್ತೆಯಿಟ್ಟು ಏನೂ ಆಗಲೇ ಇಲ್ಲ ಎಂಬಂತೆ ಸಹಜ ಜೀವನ ನಡೆಸಲು ಸಾಧ್ಯವೇ? ಆದರಲ್ಲಿ ಸುಮ್ಮನೆ ಹೇಗಿರುವುದು? ಮುಂದಿನ ತನ್ನ ವೈವಾಹಿಕ ಜೀವನ ನೆಮ್ಮದಿಯಾಗಿರಲು ಸಾಧ್ಯವೇ? ಅವಳು ಇಷ್ಟು ರಾಶಿ ಯೋಚನೆಗಳ ಮಧ್ಯೆ ಅದು ಹೇಗೆ ಕೆಲಸ ಮಾಡಿ ಮನೆಗೆ ಬರುತ್ತಿದ್ದಳೋ ಏನೋ…. ಮನೆಯಲ್ಲಿ ಸಹಾಯಕಿಯಾಗಿ ಗೌರಿ ಇದ್ದುದರಿಂದ ಅವಳು ಹೇಗೋ ಮನೆಗೆಲಸ ನಿಭಾಯಿಸುವಳು. ಇಲ್ಲದಿದ್ದರೆ ಅವಳೇನು ಕೆಲಸ ಮಾಡುತ್ತಿದ್ದಳೋ ಅವಳಿಗೇ ತಿಳಿಯುತ್ತಿರಲಿಲ್ಲ.

ಆ ದಿನ ಬಹಳ ತಲೆ ನೋವ ಎಂದು ಸಿಡಿಯುವ ತಲೆ ಒತ್ತಿಕೊಳ್ಳುತ್ತಾ ಒಂದು ಮಾತ್ರೆ ನುಂಗಿದವಳೇ ಮನೆಗೆ ಮಧ್ಯಾಹ್ನ 3 ಗಂಟೆಗೆ ಬಂದು ಮಲಗಿಬಿಟ್ಟಳು. ಮಾತ್ರೆ ಪ್ರಭಾವ ತಲೆ ನೋವು ಬಿಟ್ಟು ಅವಳು ಎದ್ದಾಗ 5 ಗಂಟೆ. ಗಂಡ ಬರುವುದು ಇನ್ನೂ ನಿಧಾನ ಎಂದು ಗೊತ್ತಾಯಿತು. ಅವಳಿಗೆ ಏನೋ ಹೊಳೆದಂತಾಗಿ ನವೀನನ ವಾರ್ಡ್‌ರೋಬ್‌ ತೆರೆದು ನೋಡಿದಳು. ಪುಣ್ಯಕ್ಕೆ ಅವನು ಲಾಕ್‌ ಮಾಡಿ ಹೋಗಿರಲಿಲ್ಲ.

ಅಲ್ಲಿ ಮೇಲಿನ ಅರೆಗಳಲ್ಲಿ ಅವಳಿಗೆ ಬೇಕಾದುದೇನೂ ಸಿಗಲಿಲ್ಲ. ಗಂಡನೂ ಆ ಮಗು ಒಟ್ಟಿಗೆ ಇರಬಹುದಾದ ಫೋಟೋ ದೊರೆತರೆ ಏನಾದರೂ ನ್ಯಾಯ ಕೇಳಬಹುದಲ್ಲ ಎನಿಸಿತು. ಅವಳು ಹಾಗೇ ಹುಡುಕುತ್ತಿದ್ದಾಗ, ಒಂದು ಅರೆಯಲ್ಲಿ ಫೋಟೋ ಆಲ್ಬಂ ಸಿಕ್ಕಿತು. ಅದರಲ್ಲಿ ಸುರಭಿ ಅಕ್ಕನ ಮದುವೆ ಫೋಟೋ…. ನವೀನನ ಕಾಲೇಜು ಪ್ರವಾಸದ ಫೋಟೋ ಅರೆರೇ! ಇದೇನು? ಒಂದು ಫೋಟೋದಲ್ಲಿ ಮಗುವಿನ ಜೊತೆ ನವೀನ್‌ ನಗುತ್ತಾ ನಿಂತಿದ್ದಾನೆ. 2 ವರ್ಷದ ಮಗು ಓಡುತ್ತಾ ಬಂದರೆ ಆಡಿಸುತ್ತಿದ್ದಾನೆ….. 3 ವರ್ಷದ ಅದೇ ಮಗು ಬರ್ತ್‌ಡೇ ಕೇಕ್‌ ಕಟ್‌ ಮಾಡುತ್ತಿದ್ದರೆ ಹೆಮ್ಮೆಯಿಂದ ಮಗುವನ್ನು ಎತ್ತಿಕೊಂಡಿದ್ದಾನೆ…… ಅವಳಿಗೆ ಮತ್ತೆ ಮತ್ತೆ ತಲೆ ಸುತ್ತಿದಂತಾಗಿ ಮಂಚದ ಮೇಲೆ ಹೋಗಿ ಒರಗಿದಳು.

ಅವಳು ಎದ್ದು ಕಣ್ಣು ಬಿಟ್ಟಾಗ 7 ಗಂಟೆ. ಎಲ್ಲೆಡೆ ಕತ್ತಿ ಹರಡಿತ್ತು. ಎದ್ದು ದೀಪ ಹಚ್ಚಿ, ಮೌನವಾಗಿ ಆ ಫೋಟೋ ನೋಡುತ್ತಾ ಸೋಫಾದಲ್ಲಿ ಕುಳಿತುಬಿಟ್ಟಳು. ಸ್ವಲ್ಪ ಹೊತ್ತಿಗೆ ನವೀನನ ಫೋನ್‌ ಬಂತು. ತಾನು ಅರ್ಜೆಂಟ್‌ ಆಫೀಸ್‌ ಮೀಟಿಂಗ್‌ ಸಲುವಾಗಿ ಮದರಾಸಿಗೆ ಹೋಗಬೇಕಿದೆ, ರಾತ್ರಿ 11.30ರ ಫ್ಲೈಟ್‌. 2 ದಿನ ಆಗುತ್ತದೆ, ತನ್ನ ಸೂಟ್‌ಕೇಸಿಗೆ 2 ದಿನಗಳ ಮಟ್ಟಿಗೆ ಬಟ್ಟೆಬರೆ ಪ್ಯಾಕ್‌ಮಾಡಿ ಇಡಬೇಕೆಂದು ತಿಳಿಸಿದ. ಯಾಂತ್ರಿಕವಾಗಿ ಅವಳು ಅದನ್ನೆಲ್ಲ ಸಿದ್ಧಪಡಿಸಿ, ರಾತ್ರಿ ಊಟಕ್ಕೆ ಏನೋ ಒಂದು ಮಾಡಿಟ್ಟಳು.

ಅವನು ಮನೆಗೆ ಬಂದಾಗ 8.30. ಬೇಗ ಬೇಗ ಊಟ ಮುಗಿಸಿ, ಉಳಿದ ಆಫೀಸ್‌ ಡಾಕ್ಯುಮೆಂಟ್ಸ್ ಗೆ ಬೇಕಾದ ಪ್ರಿಂಟ್‌ ಔಟ್ಸ್ ಸಿದ್ಧಪಡಿಸಿಕೊಂಡು, ಹೊರಡಲು ಅಣಿಯಾದ. ಅವಳನ್ನು ಒಬ್ಬಳನ್ನೇ ಬಿಟ್ಟು ಹೋಗಬೇಕಲ್ಲ ಎಂದು ತಳಮಳ. ಅವಳೇ ಅವನಿಗೆ ಸಮಾಧಾನ ಹೇಳಬೇಕಾಯಿತು.

ye-ghar-bahut-haseent-hai-story2

ಆಗ ಅವನಿಗೊಂದು ಉಪಾಯ ಹೊಳೆಯಿತು. ತಾನು ಬರಲು ಹೇಗೂ 3 ದಿನ ಆಗುತ್ತೆ, ಅವಳೇಕೆ ಮಾರನೇ ಬೆಳಗ್ಗೆ ಬೆಂಗಳೂರು ಫ್ಲೈಟ್‌ಗೆ ಬುಕ್‌ ಮಾಡಿ ತವರಿಗೆ ಹೋಗಿ ಆರಾಮವಾಗಿ ಇರಬಾರದು? 6 ತಿಂಗಳ ನಂತರ ತವರಿಗೆ ಹೋಗಲು ಒಳ್ಳೆ ನೆಪ ಸಿಕ್ಕಂತಾಯಿತು ಎಂದು ಟ್ರಾವೆಲ್ ‌ಏಜೆನ್ಸಿ ಕಾರ್ಡ್‌ ನೀಡಿ, ನೀನೇ ಬುಕ್‌ ಮಾಡಿಸು ಎಂದು ತನ್ನ ಒಂದು ಕ್ರೆಡಿಟ್‌ ಕಾರ್ಡ್‌ ನೀಡಿದ. ತಾನು ನೇರ ಬೆಂಗಳೂರಿಗೆ ಬರುವುದಾಗಿ, ಅಲ್ಲಿಂದ ಇಬ್ಬರೂ ಒಟ್ಟಿಗೆ ದೆಹಲಿಗೆ ಬರೋಣ ಎಂದು ಖಾತ್ರಿಪಡಿಸಿದ. ಅಯೋಮಯವಾಗಿ ಅವಳು ಗೇಟ್‌ವರೆಗೂ ಬಂದು ಅವನನ್ನು ಬೀಳ್ಕೊಂಡಳು.

ಮಾರನೇ ಬೆಳಗ್ಗೆ 6 ಗಂಟೆಗೇ ಅವಳಿಗೆ ಎಚ್ಚರವಾಯಿತು. ಬೆಳಗಿನ ಕಾಫಿ ಮುಗಿಸಿ, ಹಿಂದಿನ ದಿನ ನಡೆದದ್ದನ್ನು ಮೆಲುಕು ಹಾಕಿದಳು. 7 ಗಂಟೆ ಹೊತ್ತಿಗೆ ಒಂದು ದೃಢ ನಿರ್ಧಾರಕ್ಕೆ ಬಂದವಳೇ, ಟ್ರಾವೆಲ್ ‌ಏಜೆನ್ಸಿಗೆ ಫೋನ್‌ ಮಾಡಿ, ತನಗೆ ಬೆಂಗಳೂರು ಬದಲು ಮುಂಬೈಗೆ ಫ್ಲೈಟ್‌ ಟಿಕೆಟ್‌ ಬೇಕೆಂದು ಬುಕ್‌ ಮಾಡಿಸಿದಳು. 10 ಗಂಟೆಗೆ ಪ್ರಯಾಣ ಎಂದು ಟಿಕೆಟ್‌ ಕನ್‌ಫರ್ಮ್ ಆಯಿತು. ಗಂಡನಿಗೆ ಮಾರ್ನಿಂಗ್‌ ವಿಷ್‌ ಮಾಡಿ, ತಾನು ಬೆಂಗಳೂರಿಗೆ ಹೊರಡುತ್ತಿದ್ದೇನೆ, 3 ದಿನಗಳ ನಂತರ ಒಟ್ಟಿಗೆ ದೆಹಲಿಗೆ ಹಿಂದಿರುಗೋಣ ಎಂದಳು. ಅವಳು ಸಮಾಧಾನವಾಗಿ ಮಾತನಾಡಿದ್ದು ಅವನಿಗೆ ನೆಮ್ಮದಿ ತಂದು ತನ್ನ ಕೆಲಸದಲ್ಲಿ ತಲ್ಲೀನನಾದ.

2 ದಿನಗಳಿಗೆ ಬಟ್ಟೆ ಜೋಡಿಸಿಕೊಂಡು ತಕ್ಷಣವೇ ಟ್ಯಾಕ್ಸಿ ಮೂಲಕ ಏರೋಡ್ರಂ ತಲುಪಿದಳು. ದಾರಿ ಮಧ್ಯೆ ಏಜೆನ್ಸಿಯಿಂದ ಫ್ಲೈಟ್ ಟಿಕೆಟ್‌ ಪಡೆದಳು. ಸುರಭಿ ನೀಡಿದ್ದ ವಿಳಾಸವನ್ನು ಮೊಬೈಲ್ ‌ಮೂಲಕ ಊಬರ್‌ ಟ್ಯಾಕ್ಸಿ ಬುಕ್‌ ಮಾಡಿ 4 ಗಂಟೆ ಹೊತ್ತಿಗೆ ಅವರ ಫ್ಲಾಟ್‌ ಮುಂದೆ ಬಂದಿಳಿದಳು.

ಬೆಲ್ ‌ಮಾಡಿದಾಗ ಅನಿತಾ ಬಂದು ಬಾಗಿಲು ತೆರೆದಳು. ಯಾರಿದು ಹೊಸ ಆಂಟಿ ಎಂದು ಅವಳು ನೋಡುತ್ತಿರುವಂತೆಯೇ ತಾನೇ ಅನಿತಾ, ಅಮರ್‌ ಎಂದು ಮಾತನಾಡಿಸುತ್ತಾ ವಿನುತಾ ಒಳಬಂದಳು. ಆಗ ತಾನೇ ಮಲಗಿದ್ದ ಸುರಭಿ, ಹೊಸ ದನಿ ಆಲಿಸಿ ಹಾಲ್  ಬಂದು ನೋಡಿದರೆ ವಿನುತಾ! ಸಂತಸ, ಆಶ್ಚರ್ಯ ಬೆರೆತಂತೆ ಬಂದು ಇವಳನ್ನು ಆಲಂಗಿಸಿಕೊಂಡು ಮಕ್ಕಳಿಗೆ ಪರಿಚಯಿಸಿದಳು. ಆಗ ಅವರಿಗೂ ಬಹಳ ಖುಷಿಯಾಯಿತು.

ಸುರಭಿ ಅಸರದಲ್ಲಿ ಉಪ್ಪಿಟ್ಟು ಮಾಡುವಷ್ಟರಲ್ಲಿ ವಿನುತಾ ಸ್ನಾನ ಮಾಡಿ ಬಂದಿದ್ದಳು. ಫ್ರೆಂಡ್ಸ್ ಬಂದಿದ್ದಾರೆಂದು ಅಮರ್‌ ಹೊರಗೆ ಹೊರಟ. ಅನಿತಾ ತನ್ನ ಲ್ಯಾಪ್‌ಟಾಪ್‌ನಲ್ಲಿ ಬಿಝಿ ಆಗಿದ್ದಳು.

“ಇದೇನು ನಾನು ಇದ್ದಕ್ಕಿದ್ದಂತೆ ಬಂದುಬಿಟ್ಟಿದ್ದೇನೆ ಅಂದುಕೊಂಡ್ರಾ ಅಕ್ಕಾ?” ಸುರಭಿ ಕೈಯಿಂದ ಉಪ್ಪಿಟ್ಟಿನ ತಟ್ಟೆ ಪಡೆಯುತ್ತಾ ನಗುತ್ತಾ ಕೇಳಿದಳು ವಿನುತಾ.

“ಛೇ…. ಛೇ…. ಇದೇನು ಮಾತು ವಿನುತಾ? ನೀನೇನು ಪರಕೀಯಳೇ? ಇಷ್ಟು ದಿನಗಳ ಆತ್ಮೀಯತೆ ನೆನಪಿಸಿಕೊಂಡು ಬಂದಿರುವೆ ನೀನು,” ಎಂದು ಅಕ್ಕರೆ ತೋರಿಸುತ್ತಾ ಬಿಸಿ ಬಿಸಿ ಕಾಫಿ ತಂದಿತ್ತಳು. ಹೀಗೆ ಇವರಿಬ್ಬರೂ ಮಾತನಾಡುತ್ತಿದ್ದ ಅರ್ಧ ಗಂಟೆಯಲ್ಲಿ 5 ವರ್ಷದ ಹೆಣ್ಣು ಮಗು “ಅತ್ತೆ…..” ಎನ್ನುತ್ತಾ ಕಣ್ಣುಜ್ಜಿಕೊಳ್ಳುತ್ತಾ ಸುರಭಿ ಬಳಿ ಬಂದಿತು.

ತಾನು ಏನು ಕೇಳಲು ಬಂದಿದ್ದಳೋ ಅದು ಪ್ರತ್ಯಕ್ಷವಾಗಿ ಕಣ್ಣೆದುರು ಧುತ್ತೆಂದು ಬಂದು ನಿಂತಾಗ, ಮುಂದಿನ ಮಾತು ಹೇಗೆ ಹೇಳುವುದೋ ಅರಿಯದೆ ಅವಳು ಕಕ್ಕಾಬಿಕ್ಕಿಯಾದಳು.

ಸುರಭಿ ಶಾಕ್‌ ಆದವಳಂತೆ ಮಗುವನ್ನು ಹೇಗೆ ಪರಿಚಯಿಸುವುದೋ ಎಂದುಕೊಳ್ಳುತ್ತಾ, “ವಿನು, ಇವಳು ರಶ್ಮಿ. ನನ್ನ ನಾದಿನಿಯ ಮಗಳು. ನನಗೆ ಮೊದಲಿನಿಂದ ಬಹಳ ಅಂಟಿಕೊಂಡುಬಿಟ್ಟಿದ್ದಾಳೆ. ಇವರಮ್ಮನಿಗೆ ಇವಳಾದ ಮೇಲೆ ವರ್ಷದಲ್ಲೇ ಮತ್ತೆ ಅವಳಿ ಮಕ್ಕಳಾದವು. ಅವರನ್ನು ಸುಧಾರಿಸುವ ನೆಪದಲ್ಲಿ ಆಗಾಗ ಇದನ್ನು ಇಲ್ಲೇ ಬಿಟ್ಟಿರುತ್ತಾಳೆ. ಇದಕ್ಕೂ ಒಗ್ಗಿಹೋಗಿದೆ. ರಶ್ಮಿ ಆಂಟಿಗೆ ನಮಸ್ತೆ ಹೇಳಮ್ಮ, ಹಾಲು ತಂದುಕೊಂಡ್ತೀನಿ…..” ಎಂದಾಗ ಮಗು ಮುದ್ದಾಗಿ, “ನಮಸ್ತೆ ಆಂಟಿ,” ಎಂದಿತು.

ಹೇಗೆ ಪ್ರತಿಕ್ರಿಯಿಸುವುದೋ ತಿಳಿಯದೆ ವಿನುತಾ ತನ್ನ ಮನದ ಭಾವನೆ ಅಡಗಿಸಿಕೊಳ್ಳುತ್ತಾ, ತಾನು ಫೋಟೋದಲ್ಲಿ ನೋಡಿದ ಅದೇ ಮಗು ಅಲ್ಲವೇ ಇದು ಎಂದು ಖಾತ್ರಿಪಡಿಸಿಕೊಳ್ಳುತ್ತಾ, “ನಮಸ್ತೆ ರಶ್ಮಿ……” ಎಂದಳು.

ಹಾಲು ಕುಡಿದ ರಶ್ಮಿ ಅನಿತಾಳನ್ನು ಹುಡುಕಿಕೊಂಡು ಹೋದಾಗ ವಿನುತಾ ಸುರಭಿ ಜೊತೆ ಹಾರ್ದಿಕವಾಗಿ ಮಾತನಾಡುತ್ತಾ, ದಿಢೀರ್‌ ಎಂದು ನವೀನ್‌ ಮದರಾಸಿಗೆ ಹೋಗಬೇಕಾದ ಪ್ರಮೇಯ ತಿಳಿಸಿ, ತಾನು ಬೆಂಗಳೂರಿಗೆ ತವರಿಗೆ ಹೋಗುವ ಬದಲು ಇಲ್ಲಿಗೆ ಬಂದೆ ಎಂದಳು. ಒಳ್ಳೆಯದೇ ಆಯಿತು, ನೀನೂ ನನ್ನ ತಂಗಿಯಂತೆಯೇ ಎಂದು ಸುರಭಿ, ಇವರಿಬ್ಬರ ನೂತನ ವೈವಾಹಿಕ ಜೀವನದ ಬಗ್ಗೆ ವಿಚಾರಿಸಿದಳು.

ರಾತ್ರಿ 10 ಗಂಟೆ ಹೊತ್ತಿಗೆ ಸುರಭಿ ಪತಿ ಬಂದ ನಂತರ, ಹಾರ್ದಿಕವಾಗಿ ಮಾತನಾಡುತ್ತಾ, ಎಲ್ಲರೊಂದಿಗೆ ನಕ್ಕು ನಲಿದು ಅವಳು ಊಟ ಮುಗಿಸಿ ಮಲಗಿದಳು. ಈ ಮಗು ಕುರಿತಾಗಿ ಮಾರನೇ ದಿನ ಸುರಭಿ ಬಳಿ ಮಾತನಾಡಲೇಬೇಕು ಎಂದು ನಿರ್ಧರಿಸಿದಳು.

ಅಂದು ಶನಿವಾರ. ಹೀಗಾಗಿ ಸುರಭಿಗೂ ವಾರಾಂತ್ಯದ ಬಿಡುವಿತ್ತು. ಅಮರ್‌ ಕ್ರಿಕೆಟ್‌ ಪ್ರಾಕ್ಟೀಸ್‌ಗೆಂದು ಗೆಳೆಯರ ಜೊತೆ ಹೊರಟಾಗ, ಹೆಣ್ಣು ಮಕ್ಕಳಿಬ್ಬರನ್ನೂ ಕರೆದುಕೊಂಡು ತಂಗಿ ಮನೆಗೆ ಹೋಗಿಬರುವುದಾಗಿ ಸುರಭಿಯ ಪತಿ ವಿಶಾಲ್ ‌ಹೊರಟರು.

ಇದೇ ಬಿಡುವಾದ ಸಮಯ ಎಂದು ವಿನುತಾ, ರಶ್ಮಿ ಕಾಲ್ ‌ಬಂದಾಗಿನಿಂದ ತಾನು ಮುಂಬೈಗೆ ಬಂದಿಳಿದ ಅಸಲಿ ಕಾರಣವನ್ನು ನೇರವಾಗಿ ಸುರಭಿ ಬಳಿ ಹೇಳಿಕೊಂಡಳು. ಅವಳು ಅಂಥ ಪ್ರಶ್ನೆ ಕೇಳಬಹುದೆಂದು ಸುರಭಿ ವಿನುತಾಳನ್ನು ಅಚಾನಕ್ಕಾಗಿ ನೋಡಿದಾಗಿನಿಂದಲೇ ಊಹಿಸಿದ್ದಳು. ತನ್ನ ಮನದ ತಳಮಳ ಪೂರ್ತಿ ಹೇಳಿಕೊಂಡ ವಿನುತಾ ಸುರಭಿ ಮಡಿಲಲ್ಲಿ ತಲೆ ಇರಿಸಿ ಬಿಕ್ಕಿ ಬಿಕ್ಕಿ ಅತ್ತಳು.

“ನಿನಗೊಂದು ವಿಷಯ ವಿಸ್ತಾರವಾಗಿ ಹೇಳಬೇಕು ವಿನುತಾ. ನೀನು ಅಂದುಕೊಂಡಂತೆ ಭಯಪಡುವ ಯಾವ ಕಾರಣ ಇಲ್ಲ.”

“ಆದರೆ ಈ ಫೋಟೋ ನೋಡಿ…..” ಎಂದು ತೋರಿಸಿದಳು ವಿನುತಾ. ಅದರಲ್ಲಿ ನವೀನ್‌ ಮಗುವಿನೊಂದಿಗಿದ್ದ ಬೇರೆ ಬೇರೆ ಫೋಟೋ ಇತ್ತು.

“ಅದು ನಿಜ, ಆದರೆ ನವೀನ್‌ ರಶ್ಮಿಯ ತಂದೆ ಅಲ್ಲ! ಕಿರಣ್‌ ರಶ್ಮಿಯ ತಂದೆ, ಅವನೂ ನನ್ನ ತಮ್ಮನೇ!” ಎಂದು ಸುರಭಿ ಹೇಳಿದಾಗ ವಿನುತಾ ಶಾಕ್‌ಆದಳು.

“ನನಗಿಂತ ನವೀನ್‌ ಕಿರಣ್‌ 6 ವರ್ಷ ಚಿಕ್ಕವರು. ಅವರಿಬ್ಬರೂ ಅವಳಿಗಳು….” ಈಗ ಅವಳಿಗೆ ಏನೋ ಅರ್ಥವಾದಂತಾಗಿ ವಿನುತಾ ಅವಾಕ್ಕಾದಳು.

“ನವೀನ್‌ ಕಿರಣ್‌ ತದ್ರೂಪಿ ಅವಳಿಗಳು (ಐಡೆಂಟಿಕ್‌ ಟ್ವಿನ್ಸ್). ಎಲ್ಲಾ ವಿಧದಲ್ಲೂ ಹೋಲುತ್ತಿದ್ದರು. ಅಮ್ಮ ಅಂತೂ ಅವರಿಬ್ಬರಿಗೂ ಸದಾ ಒಂದೇ ತರಹ ಡ್ರೆಸ್‌ ಮಾಡುತ್ತಿದ್ದಳು. ಶಾಲೆಯಲ್ಲಂತೂ ಅವರನ್ನು ಪ್ರತ್ಯೇಕಿಸಲಾರದೆ ಎಲ್ಲರೂ ಬೇಸ್ತು ಬೀಳುತ್ತಿದ್ದರು. ಇಬ್ಬರೂ ಎಂ.ಬಿ.ಎ ಮುಗಿಸಿ ಒಳ್ಳೆಯ ಕೆಲಸದಲ್ಲಿ ಸೆಟಲ್ ಆದರು. ಕಿರಣ್‌ ನವೀನನಿಗಿಂತ 10 ನಿಮಿಷಗಳಷ್ಟೆ ದೊಡ್ಡವನು. ಅವನು ಪ್ರಾಜೆಕ್ಟ್ ಗೆಂದು ಅಮೆರಿಕಾಗೆ ಹೋಗಿ 3 ವರ್ಷ ಅಲ್ಲೇ ಇರಬೇಕಾಯಿತು.

“ಈ ಮಧ್ಯೆ ಅವನು ಅಲ್ಲಿ ಸಹೋದ್ಯೋಗಿ ನ್ಯಾನ್ಸಿಯನ್ನು ಪ್ರೇಮಿಸಿದ. ಅವಳು ಭಾರತಕ್ಕೆ ಬರಲು ಬಯಸಲಿಲ್ಲ. ಹೀಗಾಗಿ ಮದುವೆಯಾಗಿ ಅಲ್ಲೇ ಉಳಿದರು. 2 ವರ್ಷದಲ್ಲಿ ಈ ಮಗು ರಶ್ಮಿ ಹುಟ್ಟಿತ್ತು. ದುರಾದೃಷ್ಟ ನ್ಯಾನ್ಸಿ ಹೆರಿಗೆಯಲ್ಲೇ ಕಾಂಪ್ಲಿಕೇಶನ್ಸ್ ಆಗಿ ತೀರಿಕೊಂಡಳು. ಅಪಾರ ದುಃಖದಲ್ಲಿ ಮುಳುಗಿದ ಕಿರಣ್‌ ಕೈಗೂಸನ್ನೆತ್ತಿಕೊಂಡು ನೇರ ನಮ್ಮ ಮನೆಗೆ ಬಂದ.

“ನಾವೆಲ್ಲ ಆಗ ಇನ್ನೂ ಬೆಂಗಳೂರಲ್ಲೇ ಇದ್ದೆವು. ನಮ್ಮ ತಾಯಿ, ತಂದೆ ನನ್ನ ಮದುವೆಯಾದ 2-3 ವರ್ಷ ಅಂತರದಲ್ಲಿ ತೀರಿಕೊಂಡರು. ಹೀಗಾಗಿ ತಮ್ಮಂದಿರಿಬ್ಬರೂ ನಮ್ಮ ಮನೆಯಲ್ಲೇ ಉಳಿದುಬಿಟ್ಟರು. ಅಷ್ಟರಲ್ಲಿ ಕಿರಣ್‌ ಅಮೆರಿಕಾಗೆ ಹೋಗಿ ಇದೆಲ್ಲ ಆಕಸ್ಮಿಕ ನಡೆದುಹೋಯಿತು.

“ನಂತರ ಇವರಿಗೆ ವರ್ಗವಾಗಿ ನಾವು ಶಾಶ್ವತ ಮುಂಬೈಗೆ ಬಂದುಬಿಟ್ಟೆವು. ಅಂದಿನಿಂದ ಮಗು ರಶ್ಮಿ ನನ್ನ ಹತ್ತಿರ ಬೆಳೆಯುತ್ತಿದೆ. ಅದಕ್ಕಿಂತಲೂ ಘೋರ ನಡೆಯಿತು. ಅದಾದ 6 ತಿಂಗಳಲ್ಲೇ ಕಿರಣ್‌ ರಸ್ತೆ ಅಪಘಾತದಲ್ಲಿ ತೀರಿಕೊಂಡ. ಮಗು ಮಾತ್ರ ತೊದಲು ನುಡಿಯಲ್ಲಿ ಅವನನ್ನು ಅಪ್ಪ ಎನ್ನುತ್ತಿತ್ತು. ತನ್ನ ಕನ್‌ಫ್ಯೂಷನ್‌ನಿಂದಾಗಿ ಆಗಾಗ ನವೀನನ್ನೂ ಪಪ್ಪಾ ಎಂದುಬಿಡುತ್ತಿತ್ತು. ಕಿರಣ್ ತೀರಿಕೊಂಡ ವಿಚಾರ ಅದಕ್ಕೆ ಹೇಗೆ ತಿಳಿಯಬೇಕು? ನಾವು ತಾನೇ ಹೇಗೆ ಮುಂದೆ ತಿಳಿಸುವುದು?

“ಅಂದಿನಿಂದ ನವೀನನನ್ನೇ ಪಪ್ಪಾ ಅಂತ ಶಾಶ್ವತವಾಗಿ ಅಂದುಕೊಂಡಿದೆ. ಮೊದಲ ದಿನದಿಂದಲೇ ಅತ್ತೆ ಅತ್ತೆ ಅಂತ ತೊದಲು ಮಾತಿನಲ್ಲಿ ನನ್ನನ್ನೂ ಅಂಟಿಕೊಂಡಿತು. ಈ ರೀತಿ ಅದು ನವೀನನ್ನು ಈಗಲೂ ಪಪ್ಪಾ ಅಂತಲೇ  ಕರೆಯುತ್ತೆ. ನಿನ್ನನ್ನು ನೋಡಿದ ಮೊದಲ ದಿನದಿಂದಲೇ ನಿನ್ನ ಪ್ರೇಮಪಾಶದಲ್ಲಿ ಮುಳುಗಿದ ನವೀನ್‌, ಬೇರಾವ ಹೆಣ್ಣನ್ನು ಆ ದೃಷ್ಟಿಯಲ್ಲಿ ನೋಡಿದವನಲ್ಲ, ನೋಡುವವನೂ ಅಲ್ಲ!

“ಈಗ ನಿನ್ನ ಆತಂಕ ಪೂರ್ತಿ ನಿವಾರಣೆ ಆಗಿರಬೇಕಲ್ಲವೇ ವಿನು….?” ಸುರಭಿ ಸುದೀರ್ಘ ವಿವರಣೆ ಮುಗಿಸಿದಾಗ ವಿನುತಾ ಅವಳನ್ನು ಅಪ್ಪಿ ಕಣ್ಣೀರು ಮಿಡಿದಳು.

“ಇವರನ್ನು ಸಂದೇಹಿಸಿದ ನಾನೇ ಮೂರ್ಖಳು! ಇವರ ನಿರ್ಮಲ ಪ್ರೇಮ ಗುರುತಿಸಲಾರದೆ ಅನಗತ್ಯ ಸಂದೇಹದ ಸುಳಿಗೆ ಸಿಲುಕಿ ಮನಶ್ಶಾಂತಿ ಕಳೆದುಕೊಂಡೆ. ನನ್ನನ್ನು ಕ್ಷಮಿಸಿ ಅಕ್ಕಾ…..” ಎಂದಳು.

“ಏನೂ ತೊಂದರೆ ಇಲ್ಲಮ್ಮ. ನೀನು ಇನ್ನಷ್ಟು ಧೈರ್ಯವಹಿಸಿ ನವೀನ್‌ ಬಳಿ ಇದನ್ನೇ ನಿಧಾನ ಚರ್ಚಿಸಿದ್ದರೆ ಸರಿಹೋಗುತ್ತಿತ್ತು. ಇರಲಿ ಬಿಡು, ಕಾಲವೇ ಎಲ್ಲಕ್ಕೂ ಮದ್ದು. ಅದು ನಿನ್ನನ್ನು ಇಲ್ಲಿಗೆ ಕರೆಸಿತು,” ಎಂದಾಗ ಇದೀಗ ವಿನುತಾಳ ಮನದಲ್ಲಿ ನೆಮ್ಮದಿ ಮೂಡಿತು.

ವಿಶಾಲ್ ಮಗುವನ್ನು ಕರೆತರುವುದನ್ನೇ ಕಾದಿದ್ದ ವಿನುತಾ ಅವರು ಬಂದೊಡನೆ ಓಡಿಬಂದು ರಶ್ಮಿಯನ್ನು ಅಪ್ಪಿ ಆನಂದಬಾಷ್ಪ ಸುರಿಸಿದಳು. ಮಗು ಮುದ್ದಾಗಿ ಆಂಟಿ ಆಂಟಿ ಅಂದಾಗ, ಆಂಟಿ ಅಲ್ಲ `ಅಮ್ಮ’  ಎಂದು ಅದನ್ನು ತಿದ್ದಿ ಎದೆಗೊತ್ತಿಕೊಂಡಳು. ಸುರಭಿ ವಿಶಾಲ್ ‌ಹೃದಯ ತುಂಬಿ ಬಂದು ಅವಳನ್ನು ಹರಸಿದರು.

ತಕ್ಷಣ ಆ ಸಂಜೆಯೇ ವಿನುತಾ ಗಂಡನಿಗೆ ಫೋನ್‌ ಮಾಡಿ, ಮಾರನೇ ದಿನ ನವೀನ್‌ ಬೆಂಗಳೂರಿಗೆ ಹೋಗುವುದು ಬೇಡ, ಮುಂಬೈಗೆ ಬರಬೇಕೆಂದು ತಿಳಿಸಿದಳು. ಅವಳ ಮಾತನ್ನು ಕೂಡಲೇ ಗ್ರಹಿಸಿದ ನವೀನ್‌, “ಓ…. ನೀನು ರಶ್ಮಿ ವಿಷಯ ತಿಳಿಯಲು ಅಕ್ಕನ ಬಳಿ ಹೋದೆಯಾ?” ಎಂದಾಗ ಪಶ್ಚಾತ್ತಾಪ ಭಾವದಲ್ಲಿ ಅವಳು ತನ್ನ ಮನದ ಆತಂಕವನ್ನೆಲ್ಲ ಹೇಳಿಕೊಂಡಳು. ಈಗ ನಿರಾಳಳಾದ ಹೆಂಡತಿಯ ಮನಸ್ಸು ತಿಳಿದು ನವೀನ್‌ ಸಂಭ್ರಮಿಸಿದ.

“ನಾವು ಇಲ್ಲಿಂದ ನಮ್ಮ ಮಗು ರಶ್ಮಿಯನ್ನು ಕರೆದುಕೊಂಡೇ ದೆಹಲಿಗೆ ಹೋಗೋಣ. ಇನ್ನು ಮುಂದೆ ಪಪ್ಪನಿಗಾಗಿ ಅವಳು ಫೋನ್‌ ಹುಡುಕುವುದು ಬೇಡ,” ಎಂದು ಬಿಕ್ಕಳಿಸಿದ ವಿನುತಾಳನ್ನು ನವೀನ್‌ ಸಮಾಧಾನಪಡಿಸಿದ. ಅವಳ ಮನದ ಬೇಗುದಿ ಕರಗಿ ಹೊಂಗಿರಣ ಹರಡಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ