ಭೂಮಿ ಪೆಡ್ನೇಕರ್ ತನ್ನ ಚಿನಕುರುಳಿ ಮಾತುಗಳಿಂದ ಸದಾ ಎಲ್ಲರ ಗಮನ ಸೆಳೆಯುತ್ತಾಳೆ. ಇತ್ತೀಚೆಗೆ ಇವಳು ತನ್ನ ಮುಂದಿನ `ದುರ್ಗಾವತಿ’ ಚಿತ್ರಕ್ಕಾಗಿ ಶೂಟಿಂಗ್‌ನಲ್ಲಿದ್ದಾಗ ಅವಳನ್ನು ರಣವೀರ್ ಸಿಂಗ್ ನಟಿಸಿದ್ದ `ರಾಮಲೀಲಾ, ಬ್ಯಾಂಡ್ ಬಾಜಾ ಬಾರಾತ್’ ಚಿತ್ರಗಳಿಗೆ ಸಂಬಂಧಿಸಿದಂತೆ ಒಂದು ಪ್ರಶ್ನೆ ಕೇಳಿದಾಗ, ಅವಳು ಸಲೀಸಾಗಿ ಚಿಟಿಕೆ ಹಾರಿಸುತ್ತಾ ರಣವೀರ್ ಬಗ್ಗೆ ಹೇಳಿದಳು, ಆತ ಒಬ್ಬ ಉತ್ತಮ ಸೆಕ್ಸ್ ಡಾಕ್ಟರ್ ಆಗಬಲ್ಲ ಎಂದಳು! ಭೂಮಿ ಪ್ರಕಾರ ಆತ ನಟನೆ ಬಿಟ್ಟು ಬೇರೆ ಪ್ರೊಫೆಶನಲ್‌ನಲ್ಲಿ ತೊಡಗಿದ್ದರೆ, ಅದು ಇಂಥ ಉದ್ಯೋಗವೇ ಆಗಿರಬೇಕೆಂದಳು. ಇತ್ತೀಚೆಗೆ ರಣವೀರ್ ದೀಪಿಕಾರ ಮಧ್ಯೆ ಟೆನ್ಶನ್ ಹೆಚ್ಚುತ್ತಿರುವಾಗ ಈ ಮಹಾತಾಯಿ ಹೀಗಾ ಹೇಳುವುದು….? ಟೆನ್ಶನ್ ಏಕೆಂಬುದು ಓದುಗರ ಊಹೆಗೆ ಬಿಟ್ಟದ್ದು.
ಹಾಲಿಡೇ ಮೂಡ್‌ನಲ್ಲಿ ಇದ್ದದ್ದೂ ಹಾಳಾಗಿ ಬಿಡಬಾರದು!
ಕೃತಿ ಖರ್ಬಂದಾ ಹಾಗೂ ಪುಲಕಿತ್ ಸಾಮ್ರಾಟ್ ಇತ್ತೀಚೆಗೆ ವೇಕೇಶನ್ನಿನ ಮಜಾ ಉಡಾಯಿಸುತ್ತಿದ್ದಾರೆ. ಪರಸ್ಪರರ ಜೊತೆ ಟೈಂಪಾಸ್ ಇಬ್ಬರಿಗೂ ಪ್ರಿಯವೇ! ಇಬ್ಬರಿಗೂ ತಾವು ಪರಸ್ಪರ ಪರ್ಫೆಕ್ಟ್ ಜೋಡಿ ಎಂದೇ ಅನಿಸುತ್ತಿದೆ. ಆಹಾ, ಇಬ್ಬರ ಕೆಮಿಸ್ಟ್ರಿ ಅದೆಷ್ಟು ಚೆನ್ನಾಗಿ ಹೊಂದಿಕೊಂಡಿದೆ ಎಂದರೆ…. ಅತ್ತ ಪುಲಕಿತ್ ಬಳಿ ಚಿತ್ರಗಳಿಲ್ಲ, ಇತ್ತ ಕೃತಿ ಬಳಿ ಕೆಲಸವಿಲ್ಲ. ಇಬ್ಬರೂ ಸೇರಿ ನೆನಪಿಸಿಕೊಳ್ಳುವಂಥ ಭಾರಿ ಹಿಟ್‌ನ ಬ್ಲಾಕ್ ಬಸ್ಟರ್ ಚಿತ್ರ ನೀಡಿದ್ದಾರಾ ಎಂದರೆ ಅದೂ ಇಲ್ಲ. ಇವರಿಗೆ ಹಿತೈಷಿಗಳ ಸಲಹೆ ಎಂದರೆ, ಮೋಜು ಮಜಾ ಉಡಾಯಿಸಿದ್ದು ಸಾಕು, ಮೊದಲು ಬಾಲಿವುಡ್‌ಗೆ ಮರಳಿ ಯಾವುದಾದರೂ ಕೆಲಸ ಹುಡುಕಿಕೊಳ್ಳಿ, ಇಲ್ಲದಿದ್ದರೆ ಪ್ರೇಕ್ಷಕರು ಇವರಾರು ಎಂದು ಕೇಳಿಯಾರು….. ಎಂಬುದು. ಹಾಲಿಡೇ ಮೂಡ್‌ನಲ್ಲಿ ಇದ್ದದ್ದೂ ಹಾಳಾಗಿ ಬಿಡಬಾರದು ಎಂಬುದೇ ಹಿತೈಷಿಗಳ ಕಾಳಜಿ.
ಮತ್ತೆ ಒಂದಾದ ದಿಶಾ ಆದಿತ್ಯ ಜೋಡಿ
`ಮಲಂಗ್’ ಚಿತ್ರದಿಂದ ದಿಶಾ ಆದಿತ್ಯರ ಜೋಡಿ ಅದ್ಭುತ ಕೆಮಿಸ್ಟ್ರಿ ಪ್ರದರ್ಶಿಸಿತು. ಚಿತ್ರ ಗಲ್ಲಾಪೆಟ್ಟಿಗೆಯಲ್ಲೂ ಯಶಸ್ವಿ ಎನಿಸಿತು. ಸುದ್ದಿಗಾರರ ಪ್ರಕಾರ, ಈ ಜೋಡಿ ಮತ್ತೆ ಬೆಳ್ಳಿ ತೆರೆಯಲ್ಲಿ ಗ್ಲಾಮರಸ್ ಆಗಿ ರಾರಾಜಿಸಲಿದೆ. ಇದುವರೆಗೂ ಚಿತ್ರದ ಶೀರ್ಷಿಕೆ ಫಿಕ್ಸ್ ಆಗಿಲ್ಲ. ಆದರೆ ಇವರಿಬ್ಬರೂ ಅಹ್ಮದ್ ಖಾನ್‌ರ ಹೊಸ ಚಿತ್ರದಲ್ಲಿ ಒಂದಾಗಿ ನಟಿಸಲಿದ್ದಾರೆ ಎಂಬುದಂತೂ ಖಚಿತ. ಆದಿತ್ಯ ಮೊದಲೇ ಈ ಚಿತ್ರಕ್ಕಾಗಿ ಸಹಿ ಹಾಕಿದ್ದ. ಈಗ ದಿಶಾಳ ಸಹಿ ಒಂದೇ ಬಾಕಿ ಇತ್ತು. ಹಿತೈಷಿಗಳ ಸಲಹೆ ಎಂದರೆ, ಆದಿತ್ಯ ಹುಷಾರು ಕಣಪ್ಪ….. ನಿನ್ನ ನಾಯಕಿ ಬೇರೆ ಆನ್ ಲೈನ್ ಹೀರೋ ಜೊತೆ ಆಫ್ ಲೈನ್‌ನಲ್ಲೂ ಅವನಿಗೇ ಸಂಗಾತಿ ಆದಾಳು!
ನಾನು ಚಟಕ್ಕೆ ಬಿದ್ದವನಲ್ಲ!
ಸ್ಯಾಂಡಲ್ ವುಡ್, ಬಾಲಿವುಡ್‌ನಲ್ಲಿ ಎಲ್ಲೆಲ್ಲೂ ಡ್ರಗ್ಸ್ ನದೇ ಮಾತು…. ಇದರಡಿ ಕಾನೂನಿನ ಕಪಿಮುಷ್ಟಿಗೆ ಸಿಲುಕಿದ ಹಲವು ಸ್ಟಾರ್‌ಗಳಲ್ಲಿ ಇದೀಗ ಹೊಸದಾಗಿ ಸಿಲುಕಿದವನು ಅಂದ್ರೆ ಕರಣ್ ಜೋಹರ್. ಅಗ್ನಿಪರೀಕ್ಷೆ ಇವನನ್ನೂ ಬಿಡಲಿಲ್ಲ. ಸಂಬಂಧಿಗಳಿಗೆ ಮಾತ್ರ ಮಣೆ ಹಾಕುವ ನಿರ್ದೇಶಕ ಎಂಬ ಕೆಟ್ಟ ಹೆಸರು ಮೊದಲೇ ಇತ್ತು, ಇದೀಗ ಈ ಹಣೆಪಟ್ಟಿಯೂ ಸೇರಿತು. ಸೋತು ಸೊಪ್ಪಾದ ಕರಣ್ ಸ್ಪಷ್ಟೀಕರಣ ನೀಡಲೇ ಬೇಕಾಯ್ತು. ತಾನೆಂದೂ ಅಂಥ ಡ್ರಗ್ಸ್ ಸೇವಿಸಿದವನಲ್ಲ ಅಥವಾ ಡ್ರಗ್ಸ್ ಸಪ್ಲೈಗೆ ಸಹಕರಿಸಿದವನೂ ಅಲ್ಲ ಎಂದಿದ್ದಾನೆ. ಮೀಡಿಯಾ ಕೆಣಕುತ್ತಿರುವುದೆಂದರೆ, ಅಲ್ಲಯ್ಯ ಕರಣ್…. ನಿನ್ನ ಮಾತನ್ನು ನಿನ್ನ ಫ್ಯಾನ್ಸ್ ಒಪ್ಪಬಹುದೇ ಹೊರತು, ಕಾನೂನಲ್ಲ…. ಅದಕ್ಕೆ ಸಾಕ್ಷಿ ಬೇಕು. ಈ ಪ್ರಕರಣ ಎಷ್ಟು ಗೋಜಲಾಗಿದೆ ಎಂದರೆ ಇದೀಗ ಈತ ಏರ್ಪಡಿಸಿದ್ದ ಒಂದು ಪಾರ್ಟಿಯ ವೈರಲ್ ವಿಡಿಯೋವನ್ನು ಪರೀಕ್ಷೆಗಾಗಿ ಕಳುಹಿಸಿದೆ. ಈತ ಸತ್ಯಪ್ಪನೋ ಸುಳ್ಳಪ್ಪನೋ ಆ ಕಾನೂನಿನ ತೀರ್ಪಿನ ಮೇಲೆ ನಿಂತಿದೆ.
ಇಷ್ಟೆಲ್ಲ ಬೋಲ್ಡ್ ಆದರೂ ದಮ್ಮಿಲ್ಲ
ಇತ್ತೀಚೆಗೆ ಈಶಾನ್ ಹಾಗೂ ಅನನ್ಯಾರ ಬರಲಿರುವ `ಖಾಲಿಪೀಲಿ’ ಚಿತ್ರಕ್ಕಾಗಿ ಹೊಸ ಹಾಡನ್ನು ರಿಲೀಸ್ ಮಾಡಲಾಯಿತು. ಈ ಹಾಡು ವೈರಲ್ ಆದದ್ದೇ, ಪಡ್ಡೆಗಳೆಲ್ಲ ಅನನ್ಯಾಳ ಬೋಲ್ಡ್ ಅವತಾರ ಕಂಡು ಶಿಳ್ಳೆ ಹೊಡೆದಿದ್ದೂ ಹೊಡೆದಿದ್ದೇ! ಆದರೆ ಸಾಮಾನ್ಯ ಜನ ಇವಳ ಈ ಬೋಲ್ಡ್ ನೆಸ್ ಇಷ್ಟಪಡಲಿಲ್ಲ. ಈ ಹಾಡಿನ ವಿರುದ್ಧ ಟ್ರೋಲಿಗರು ಅನನ್ಯಾಳನ್ನು ಕಿಚಾಯಿಸುತ್ತಿದ್ದಾರೆ. ಸಾಕಮ್ಮ ನಿನ್ನ ಅವತಾರ, ನಮಗೆ ನಾಚಿಕೆ ಆಗುತ್ತಿದೆ, ಎಂದೆಲ್ಲ ಕೆಂಡ ಕಾರುತ್ತಿದ್ದಾರೆ. ಬಾಲಿವುಡ್‌ನ ದೊಡ್ಡ ದೋಷ ಎಂದರೆ, ಅಂತಾರಾಷ್ಟ್ರೀಯ ಸ್ಟಾರ್ಸ್‌ನ್ನು, ಚಿತ್ರಗಳನ್ನೂ ನಕೀನೋ ಮಾಡುತ್ತಾರೆ, ಆದರೆ ಅದರಲ್ಲಿ ಕೀಳುತನವನ್ನು ತಮ್ಮ ಕೈಲಾದ ಮಟ್ಟಿಗೆ ಬೆರೆಸಿಬಿಡುತ್ತಾರೆ. ಈ ಹಾಡನ್ನು ಇನ್ನಷ್ಟು ಮತ್ತಷ್ಟು ಬೋಲ್ಡ್ ಮಾಡಬೇಕೆಂಬ ಹುನ್ನಾರದಲ್ಲಿ ನಿರ್ದೇಶಕ ವೀಕ್ಷಕರ ದೃಷ್ಟಿಯಲ್ಲಿ ಕ್ಲೀನ್ ಬೋಲ್ಡ್ ಆಗಿದ್ದಾನೆ. ಇಡೀ ಚಿತ್ರಕ್ಕೂ ಇದೇ ಗತಿ ಬಂದರೆ ನಿರ್ಮಾಪಕ ಗೋವಿಂದ!
ಸುಹಾನಾ ಯಾರತ್ತ ಬೊಟ್ಟು ಮಾಡುತ್ತಿದ್ದಾಳೆ?
ಸುಹಾನಾ ಖಾನ್ ಸೋಶಿಯಲ್ ಮೀಡಿಯಾದಲ್ಲಿ ಏನಾದರೂ ಹಗರಣ ಮಾಡಿಕೊಳ್ಳುತ್ತಿರುತ್ತಾಳೆ. ಇತ್ತೀಚೆಗೆ ಅವಳು ಮಹಿಳೆಯರ ಅನಾದರಣೆ ಕುರಿತು ಒಂದು ಪೋಸ್ಟ್ ಹಾಕಿದ್ದಳು. ಬಾಲಿವುಡ್‌ನ ಘಟಾನುಘಟಿಗಳೇ ಡ್ರಗ್ಸ್ ಪ್ರಕರಣದಲ್ಲಿ ಕಾನೂನಿನ ಕಪಿಮುಷ್ಟಿಗೆ ಸಿಲುಕುತ್ತಿರುವ ಈ ಸಂದರ್ಭದಲ್ಲಿ, ಬಾಲಿವುಡ್‌ನ್ನು ಇನ್ನಷ್ಟು ಕೀಳಾಗಿ ಬಿಂಬಿಸುವ ಈ ಪೋಸ್ಚ್ ಬೇಕಿತ್ತೇ? ಇವಳ ಈ ಪೋಸ್ಟ್ ಕುರಿತಾಗಿ ಹಲವಾರು ಬಗೆಯ ಊಹಾಪೋಹಗಳು ಹರಡುತ್ತಿವೆ. ಅಲ್ಲಮ್ಮ ಸುಹಾನಾ, ನಿನ್ನ ಕೆರಿಯರ್ರೇ ಇನ್ನೂ ನೆಟ್ಟಗಾಗಿಲ್ಲ, ಹಾಗಿರುವಾಗ ಇದೆಲ್ಲ ನಿನಗೆ ಬೇಕಿತ್ತೇ? ನಿಮ್ಮಪ್ಪ ಶಾರೂಖ್‌ನನ್ನು ನೋಡಿ ಒಂದಿಷ್ಟಾದರೂ ಕಲಿ, ಅನಂತೂ ಆದಷ್ಟೂ ವಿವಾದಗಳಿಂದ ದೂರ ಇರಬಯಸುವ ವ್ಯಕ್ತಿ, ಆದರೆ ಆತ ಸಿನಿಮಾಗಳಿಂದಲೇ ದೂರವಾಗಿದ್ದಾನೆ ಎಂಬುದು ಬೇರೆ ಮಾತು, ಎಂದು ಇಬ್ಬರನ್ನು ಸೇರಿಸಿ ವ್ಯಂಗ್ಯವಾಡಿದ್ದಾರೆ ಹಿತೈಷಿಗಳು.
ಆದಿತ್ಯನಿಗೆ ಕೆಲಸ ಕೊಡುವವರೇ ಇಲ್ಲ
ಎಲ್ಲೆಲ್ಲೂ ಸಂಬಂಧಿಗಳಿಗೆ ಮಣೆ ಹಾಕಬಾರದು ಎಂದು ಬಾಲಿವುಡ್‌ನಲ್ಲಿ ದಟ್ಟ ಅಲೆ ಹಬ್ಬುತ್ತಿರುವ ಈ ಸಂದರ್ಭದಲ್ಲಿ ಪ್ರಸಿದ್ಧ ಗಾಯಕರಾದ ಉದಿತ್ ನಾರಾಯಣ್‌ರ ಮಗ ಆದಿತ್ಯನಿಗೆ ಕೆಲಸ ಕೊಡುವವರೇ ಇಲ್ಲವಾದಾಗ, ಆತ ಜನರೆದುರು ತನ್ನ ಸಂಕಟ ತೋಡಿಕೊಂಡ. ಸ್ಟಾರ್ ಪುತ್ರನಿಗೆ ಬಾಲಿವುಡ್‌ನಲ್ಲಿ ಸುಲಭವಾಗಿ ಅವಕಾಶ ಸಿಗುವುದಾಗಿದ್ದರೆ, ಇಂದು ಇವನ ಬಳಿ ಹಾಡುಗಾರಿಕೆಯ ರಾಶಿ ಕೆಲಸ ಇರಬೇಕಿತ್ತು. ಅಂದಹಾಗೆ ಆದಿತ್ಯ ಹಿನ್ನೆಲೆ ಗಾಯನ ಮಾತ್ರವಲ್ಲದೆ, ಹಿರಿ/ಕಿರಿ ತೆರೆಗಳಲ್ಲಿ ನಟನೆಗೂ ಸೈ ಎನಿಸಿದ್ದಾನೆ. ಆದರೆ ವೀಕ್ಷಕರಿಗೆ ಅವನ ನಟನೆ ಅಂಥ ಇಷ್ಟವೇನೂ ಆದಂತಿಲ್ಲ. ನಂತರ ಆತ ಟಿವಿಯ ಖ್ಯಾತ ಆ್ಯಂಕರ್ ಎನಿಸಿದಾಗ ಒಂದಿಷ್ಟು ಅವಕಾಶಗಳು ಸಿಗತೊಡಗಿದವು. ಟಿವಿ ವೀಕ್ಷಕರಿಗೂ ಇದು ಇಷ್ಟವಾಗತೊಡಗಿತು. ತನಗೆ ಬೆಳ್ಳಿ ತೆರೆಯಲ್ಲಿ ಮಿಂಚಲು ಅವಕಾಶ ಇಲ್ಲವಲ್ಲ ಎಂಬುದೇ ಇವನ ಅಳಲು. ಸಂಪಾದನೆಗೆ ಟಿವಿ ಆ್ಯಂಕರ್ ಗಿರಿಯಾದರೂ ಇದೆಯಲ್ಲ ಸುಮ್ಮನಿರು ಎಂದು ಗದರುತ್ತಿದ್ದಾರೆ ಹಿತೈಷಿಗಳು.
ಗ್ರೇ ಶೇಡ್ಸ್ ನಲ್ಲಿ ಕಾಣಲಿರುವ ಅಜಯ್
ಬಾಲಿವುಡ್‌ನ ಸಿಂಘಂ ಯಶ್‌ರಾಜ್ ಬ್ಯಾನರ್‌ನೊಂದಿಗೂ ಕೆಲಸ ಮಾಡಲು ಪೂರ್ತಿ ತಯಾರಿ ನಡೆಸಿದ್ದಾನೆ. ಸುದ್ದಿಗಾರರ ಪ್ರಕಾರ, ಈ ಬ್ಯಾನರ್‌ನ ಮುಂದಿನ ಚಿತ್ರದಲ್ಲಿ ಅಜಯ್ ದೇವಗನ್ ಗ್ರೇ ಶೇಡ್ಸ್ ನಲ್ಲಿ ಕಾಣಿಸಲಿದ್ದಾನೆ. `ಧೂಂ, ವಾರ್’ ಚಿತ್ರಗಳ ಯಶಸ್ಸು ಗಮನಿಸಿ ಅಜಯ್ ಈ ನಿರ್ಧಾರಕ್ಕೆ ಬಂದಿರಬಹುದು. ಮತ್ತೊಂದು ಸುದ್ದಿ ಎಂದರೆ, ಇದೇ ಚಿತ್ರದಲ್ಲಿ ಅನನ್ಯಾ ಪಾಂಡೆಯ ಕಸಿನ್ ಅಹಾನ್ ಸಹ ಎಂಟ್ರಿ ಪಡೆಯಲಿದ್ದಾನಂತೆ. ಹಾಗಾದರೆ ಮತ್ತೊಬ್ಬ ಸ್ಟಾರ್ ಪುತ್ರನ ಪ್ರತಿಭೆ ಗಮನಿಸಲು ಸಿದ್ಧರಾಗಿ. ಸಿಂಘಂನ ಸ್ಟಾರ್ ಗಿರಿ ಮುಂದೆ ಅಹಾನ್ ಮಿಂಚಬಲ್ಲನೇ? ಚಿತ್ರದ ಯಶಸ್ಸೇ ಹೇಳಬೇಕು.
ಕಿಯಾರಾಳ ಪ್ರಿಯತಮ ಯಾರು?
`ಕಬೀರ್ ಸಿಂಗ್’ ಚಿತ್ರದಲ್ಲಿ ತನ್ನ ರೊಮಾನ್ಸ್, ಚುಂಬನಗಳಿಂದ ವೀಕ್ಷಕರ ಮನ ಗೆದ್ದಿದ್ದ ಕಿಯಾರಾಳ ಮೋಡಿ ಸುಮಾರು ದಿನ ನಡೆಯಿತು. ಆದರೆ ಇವಳ ಫ್ಯಾನ್ ಫಾಲೋಯಿಂಗ್ ಕೇವಲ ವೀಕ್ಷಕರವರೆಗೂ ನಿಲ್ಲದೆ, ದೊಡ್ಡ ಸ್ಟಾರ್ಸ್ ಸಹ ಇವಳನ್ನು ಹೊಗಳುತ್ತಿದ್ದಾರೆ. ಅವರಲ್ಲಿ ಒಬ್ಬ ಸಿದ್ದಾರ್ಥ್ ಮಲ್ಹೋತ್ರಾ. ಇತ್ತೀಚೆಗೆ ಸಿದ್ದಾರ್ಥ್ ಕಿಯಾರಾ ಎಲ್ಲೆಲ್ಲೂ ಊರು ಸುತ್ತುತ್ತಿದ್ದಾರಂತೆ. ಇತ್ತೀಚೆಗೆ ಸುದ್ದಿಗಾರರು ಈ ಯುವ ಜೋಡಿ ಡಿನ್ನರ್ ಒಂದರಲ್ಲಿ ಮೈ ಮರೆತಿದ್ದಾಗ, ಕ್ಯಾಮೆರಾದಲ್ಲಿ ಕೈದು ಮಾಡಿಕೊಂಡಿದ್ದಾರೆ. ಇದರ ಬಗ್ಗೆ ಕೇಳಿದಾಗ ಇಬ್ಬರು ಗಿಣಿ ಪಾಠ ಒಪ್ಪಿಸುವವರಂತೆ ನಾವು ಬರೀ ಫ್ರೆಂಡ್ಸ್ ಮಾತ್ರ ಎಂದರು. ಪಬ್ಲಿಕ್ ಕಿವಿಗೆ ಹೂ ಇಡುವ ಕಾಲ ಹೋಯಿತು, ಇಂಥವರ ಸುತ್ತಾಟದ ಅರ್ಥ ಹೈಸ್ಕೂಲ್ ಹುಡುಗರಿಗೂ ಗೊತ್ತಾಗುತ್ತೆ. ಅಂತೂ ಕಿಯಾರಾಳಿಗೆ ಪ್ರಿಯತಮ ಸಿಕ್ಕದನೆಂಬುದೇ ಅಭಿಮಾನಿಗಳ ಕೊರಗು!
ಊರ್ವಶಿಗೆ ರೆಮೋ ಸಹಕಾರ
ಸೋಶಿಯಲ್ ಮೀಡಿಯಾದಲ್ಲಿ ತನ್ನ ಬೋಲ್ಡ್ ಫೋಟೋಗಳ ಪೋಸ್ಟಿಂಗ್ ಅಥವಾ ಕಂಡವರು ಕರೆದಾಗೆಲ್ಲ ಉದ್ಘಾಟನೆಯ ಟೇಪ್ ಕಟಿಂಗ್ಸ್ ಮಾಡಿದ ಮಾತ್ರಕ್ಕೆ ಊರ್ವಶಿಯ ಕೆರಿಯರ್ ಮುನ್ನೇರಲಿಲ್ಲ. ತನ್ನನ್ನು ತಾನು ಪ್ರೂವ್ ಮಾಡಿಕೊಳ್ಳಲು ಅವಳಿಗೆ ಈಗೀಗ ಅವಕಾಶಗಳೂ ಸಿಗುತ್ತಿಲ್ಲ. ಈಗ ಇವಳಿಗೆ ಪ್ರಸಿದ್ಧ ಕೊರಿಯೋಗ್ರಾಫರ್‌ನಿರ್ದೇಶಕರಾದ ರೆಮೋ ಡಿಸೋಜಾರ ಸಹಕಾರ ಸಿಕ್ಕಿದೆ. ತಮ್ಮ ಮುಂದಿನ ಪ್ರಾಜೆಕ್ಟ್ ಗೆ ರೆಮೋ ಊವರ್ಶಿಯನ್ನು ಬುಕ್ ಮಾಡಿದ್ದಾರೆ. ಅದು ವಿಡಿಯೋ ಸಾಂಗ್ ಅಥವಾ ಚಿತ್ರ ಏನಾದರೂ ಆಗಿರಬಹುದು, ಗ್ಯಾರಂಟಿ ಇಲ್ಲ. ಏನೇ ಇರಲಿ, ಊರ್ವಶಿಗಂತೂ ಕೈ ತುಂಬಾ ಕೆಲಸ ಗ್ಯಾರಂಟಿ!
ನಾನು ಮುಳುಗಿದ ಮೇಲೆ ನಿನ್ನನ್ನು ಬಿಡ್ತೀನಾ?
ಇತ್ತೀಚೆಗೆ ಬಾಲಿವುಡ್‌ನಲ್ಲಿ ಸೇಡಿನ ದಳ್ಳುರಿ ಹಾಗಾಡಿಸುತ್ತಿದೆ. ಸುಶಾಂತ್‌ನ ಆತ್ಮಹತ್ಯೆಯ ಪ್ರಕರಣದ ನಂತರ, ಅನೇಕ ಘಟಾನುಘಟಿಗಳು ಇಂಥ ಚಕ್ರವ್ಯೂಹಕ್ಕೆ ಸಿಲುಕತೊಡಗಿದ್ದಾರೆ. ಯಾರು ನೆಮ್ಮದಿಯಾಗಿ ಓಡಾಡುತ್ತಿದ್ದರೋ ಅವರಿಂದು ಆಫೀಸಿಗೆ ಅಟೆಂಡೆನ್ಸ್ ಹಾಕುತ್ತಿದ್ದಾರೆ. ಅಲ್ಲಿಗೆ ಯಾರೇ ಹೊಸಬರು ಬಂದರೂ, ಮತ್ತೊಬ್ಬರ ಬಗ್ಗೆ ಕ್ಲೂ ಕೊಡುತ್ತಿದ್ದಾರೆ. ಹಾಗಾಗಿ ಮುಗ್ಧತೆಯ ಮುಖವಾಡ ತೊಟ್ಟವರೆಲ್ಲ FBಗೆ ಎಡತಾಕುವಂತಾಗಿದೆ. ಡ್ರಗ್ಸ್ ಪ್ರಕರಣದಲ್ಲಿ ಸೂಕ್ಷ್ಮವಾಗಿ ಸಿಲುಕಿದರು, ತಮ್ಮನ್ನು ಅದರಲ್ಲಿ ಸಿಲುಕಿಸಿದವರನ್ನು ಬಿಟ್ಟಾರೆಯೇ? ಮೊದಲು ರಿಯಾ, ನಂತರ ಸುಶಾಂತ್‌ನ ಫ್ರೆಂಡ್ಸ್, ಮ್ಯಾನೇಜರ್….. ಇದೀಗ ಈ ಸರಪಣಿ ದೊಡ್ಡದಾಗುತ್ತಾ ಘಟಾನುಘಟಿಗಳ ದಂಡೇ ಇದಕ್ಕೆ ಕೈ ಮುಗಿಯುವಂತಾಗಿದೆ. ದೀಪಿಕಾ, ಸಾರಾ, ಶ್ರದ್ಧಾ ದಾಟಿ ಪಟ್ಟಿ ಮುಂದುವರಿದಿದೆ. ಇತ್ತೀಚೆಗೆ ಸ್ಟಾರ್ಸ್ ತಮ್ಮ ಸ್ಕ್ರಿಪ್ಟ್ ನೋಡುವ ಬದಲು ಟಿವಿಯಲ್ಲಿ ಎಲ್ಲಿ ತಮ್ಮ ಹೆಸರು ಬಂದು ಬಿಟ್ಟಿದೋ ಎಂದು ನೋಡಿ ಸಾಯುತ್ತಿದ್ದಾರೆ. ಗ್ಲಾಮರ್ ಪ್ರಪಂಚದ ತೆರೆಮರೆಯ ಕಥೆ ಒಂದೊಂದಾಗಿ ಕಳಚಿಕೊಳ್ಳುತ್ತಿದೆ.