ದಿವ್ಯಾಳಂಥ ಆಧುನಿಕ ಮನೋಭಾವ ಸ್ಟೈಲಿಶ್‌ ಫ್ಯಾಷನೆಬಲ್ ಹುಡುಗಿಗೆ ಆ ಸಾಧಾರಣ ರೂಪಿನ, ಆದರೆ ಅತಿ ಗಂಭೀರ ಸ್ವಭಾವದ  ಹುಡುಗ ಶಶಾಂಕ್‌ ಅಷ್ಟೇನೂ ಹೊಂದುವಂತಿರಲಿಲ್ಲ. ಆಕಸ್ಮಿಕವಾಗಿ ಆದ ಭೇಟಿ ದೊಡ್ಡ  ಪ್ರೇಮದ ಕಾರಂಜಿಯನ್ನೇನೂ ಚಿಮ್ಮಿಸಿರಲಿಲ್ಲ, ಆದರೆ ಆ ತರುಣನಲ್ಲಿ ಅರಿಯದ ಅದೇನೋ ಆಕರ್ಷಣೆ ಇದೆ ಎಂಬುದನ್ನಂತೂ ಅವಳು ಒಪ್ಪಿದ್ದಳು. ಜೀವನದಲ್ಲಿ ಇಂದು ನಾವು ಯಾವ ಯಾವುದನ್ನು ಒಲ್ಲೆ ಎನ್ನುತ್ತೇವೋ ಮುಂದೆ ಅದೇ ಮತ್ತೆ ಮತ್ತೆ ಬೇಕೆನಿಸುವಂತೆ ಆಗಲೂಬಹುದು.

ಆಗ ತಾನೇ ಎಂ.ಬಿ.ಎ ಮುಗಿಸಿ ದಿವ್ಯಾ ಕೆಲಸದ ಹುಡುಕಾಟದಲ್ಲಿದ್ದಳು. ಅವಳ ತಂದೆ ಹೋಮಿಯೋಪಥಿ ವೈದ್ಯರು. ಬೆಂಗಳೂರಿನಲ್ಲಿ ಅವರಿಗೆ ಅಪಾರವಾದ ಬೇಡಿಕೆ ಇತ್ತು. ಮೊದಲು ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದರು, ನಿವೃತ್ತರಾದ ನಂತರ ತಮ್ಮದೇ ಖಾಸಗಿ ಕ್ಲಿನಿಕ್‌ ನಡೆಸುತ್ತಿದ್ದರು. ಅವರನ್ನು ಹುಡುಕಿಕೊಂಡು ಬೆಂಗಳೂರಿನ ಅಕ್ಕಪಕ್ಕದಿಂದಲೂ ರೋಗಿಗಳು ಬರುತ್ತಲೇ ಇದ್ದರು.

ಹೀಗಿರುವಾಗ ಒಂದು ದಿನ ರೋಗಿಗಳು ತುಸು ಕಡಿಮೆ ಇದ್ದ ದಿನ, ಒಬ್ಬ ಸಾಧಾರಣ ಮೈಕಟ್ಟಿನ, ಸುಮಾರಾದ ರಂಗುರೂಪಿನ ತುಸು ಎತ್ತರದ ತರುಣನೊಬ್ಬ ಅವರನ್ನು ಹುಡುಕಿಕೊಂಡು ಅಂದಿನ ಕೊನೆಯ ರೋಗಿಯಾಗಿ ಬಂದಿದ್ದ. 26 ವರ್ಷದವನಿರಬಹುದಾದ ಆ ತರುಣ ಸಹನೆಯಿಂದ ತನ್ನ ಸರದಿಗಾಗಿ ಕಾಯುತ್ತಿದ್ದ. ಕೆಳಗೆ ಕ್ಲಿನಿಕ್‌ ಹೊಂದಿದ್ದ ರಾಯರು ಮೇಲುಗಡೆ 2 ರೂಮುಗಳ ಸುಮಾರಾದ ಮನೆಯನ್ನು ಹೊಂದಿದ್ದರು.

ಆ ದಿನ ದಿವ್ಯಾಳಿಗೆ ಯಾವುದೋ ಒಂದು ಇಂಟರ್‌ವ್ಯೂ ಅಟೆಂಡ್‌ ಮಾಡಬೇಕಿತ್ತು. ಅವಳು ಮನೆಗೆ ಬೀಗ ಹಾಕಿ ಅಪ್ಪಾಜಿಗೆ ಕೀ ಕೊಟ್ಟು ಹೊರಡೋಣ ಎಂದು ಕೆಳಗಿನ ಕ್ಲಿನಿಕ್‌ಗೆ ಬಂದಳು. ಇವನು ತನ್ನ ಸರದಿಯಲ್ಲಿ ಕುಳಿತು ಕಾಯುತ್ತಿದ್ದುದನ್ನು ಓರೆಗಣ್ಣಿನಿಂದ ಗಮನಿಸಿದಳು. ಅವಳು ತನ್ನ ಕೆಲಸ ಪೂರೈಸಲು ನೇರ ತಂದೆಯ ಮೇಜಿನ ಬಳಿ ಬಂದಳು.

ಅಂತೂ ಎಲ್ಲರ ಸರದಿ ಮುಗಿದು ಈತನ ಸರದಿ ಬಂದಿತ್ತು. ಅವಳಿನ್ನೂ ತಂದೆ ಬಳಿ ಮಾತು ಮುಗಿಸಿರಲಿಲ್ಲ, ಇವನು ಒಳಗೆ ಬಂದಿದ್ದ. ಡಾಕ್ಟರ್‌ಗೆ ಪರಿಚಿತ ಎನಿಸುತ್ತದೆ, ಅವರು ಪರಿಚಿತ ನಗೆ ಬೀರಿ, ಆದರದಿಂದ ಬರಮಾಡಿಕೊಂಡು ಕೂರಿಸಿಕೊಂಡರು. ಹೊರಡಲಿದ್ದ ಮಗಳನ್ನು ತಡೆದು ಪರಿಚಯಿಸಿದರು, “ಅಮ್ಮ ದಿವ್ಯಾ, ಇವರು ಶಶಾಂಕ್‌. ನಮ್ಮ ಬೆಂಗಳೂರಿನ ಹೊರವಲಯದ ಈ ದೂರ ಪ್ರದೇಶಕ್ಕೆ ಹೊಸದಾಗಿ ರೈಲ್ವೆ ಸ್ಟೇಷನ್‌ ಮಾಸ್ಟರ್‌ ಆಗಿ ಬಂದಿದ್ದಾರೆ. ಇದೇ ಇವರ ಮೊದಲ ಪೋಸ್ಟಿಂಗ್‌ ಅಂತೆ. ಇವರ ಮನೆ ದೂರದ ತುಮಕೂರಿನಲ್ಲಿದೆ, ಇಲ್ಲಿ ಒಬ್ಬರೇ ಬ್ಯಾಚುಲರ್‌ ಆಗಿದ್ದಾರೆ. ಇಲ್ಲಿಗೆ ಬಂದು ಹೋಗುತ್ತಿರುತ್ತಾರೆ. ಅವರಿಗೇನಾದರೂ ಅಗತ್ಯದ ಸಹಾಯ ಬೇಕಾದರೆ ನೋಡಮ್ಮ……”

“ಆಯ್ತು ಅಪ್ಪಾಜಿ.”

“ನೀನೂ ರೈಲಿನಲ್ಲಿ ಇಲ್ಲಿಂದ ಯಲಹಂಕ ಸ್ಟೇಷನ್‌ಗೆ ಹೋಗಿ, ಅಲ್ಲಿಂದ ಬದಲಾಯಿಸಿ ಕಾಲೇಜಿಗೆ ಹೊರಡುವವಳಲ್ಲವೇ? ಈಗ ಕಾಲೇಜು ಮುಗಿದರೂ ಸಿಟಿ ಓಡಾಟಕ್ಕೆ ರೈಲ್ವೆ ಪಾಸ್‌ ಬೇಕಲ್ಲವೇ? ಇವರು ಸ್ಟೇಷನ್‌ ಮಾಸ್ಟರ್‌ ಆದ್ದರಿಂದ ಬೇಗ ಫಾರ್ಮ್ ತುಂಬಿಸಿ, ಸ್ಟಾಂಪ್‌ ಸೈಜ್‌ ಫೋಟೋ, ಹಣ ನೇರ ಇವರ ಕೈಗೆ ಕೊಟ್ಟುಬಿಡು. ಮಾರನೇ ದಿನ ನಿನ್ನ ಪಾಸ್‌ ರೆಡಿ. ಏನಂತೀರಿ ಶಶಾಂಕ್‌?”

“ಧಾರಾಳ ಆಗಬಹುದು ಸಾರ್‌,” ಆತನ ಮಾತಲ್ಲಿ ಜಂಭವಿರಲಿಲ್ಲ.

“ಸರಿ ಆಗಲಿ ಅಪ್ಪಾಜಿ, ನಾನೀಗ ಹೊರಟೆ,” ಎನ್ನುತ್ತಾ ಶಶಾಂಕ್‌ ಕಡೆ ಓರೆ ಕಣ್ಣೋಟ ಬೀರುತ್ತಾ ಅವಳು ಬೇಗ ಬೇಗ ಹೊರಗೆ ಹೆಜ್ಜೆ ಹಾಕಿದಳು. ಅವನ ನೋಟದಲ್ಲಿ ಒಂದು ವಿಚಿತ್ರ ಸೆಳೆತ ಗಮನಿಸಿದಳು. ಬಣ್ಣ ತುಸು ಕಪ್ಪಾದರೂ ಕಳಕಳೆಯಾದ ಮುಖ. ಆಸಾಮಿ ಡಾಕ್ಟರ್‌ ಬಳಿ ಮಾತಾನಾಡುತ್ತಿದ್ದರೂ ಗಮನವೆಲ್ಲ ತನ್ನತ್ತಲೇ ಇತ್ತು ಎಂದೇ ದಿವ್ಯಾಳಿಗೆ ಅನ್ನಿಸಿತು. ಅವನ ತುಟಿಗಳಲ್ಲಿದ್ದ ನಿರ್ಲಕ್ಷ್ಯ ಮುಗುಳ್ನಗೆ ಅವಳಿಗೆ ಮೆಚ್ಚುಗೆಯಾಯ್ತು.

ಅವರಿಬ್ಬರ ಮಾತು ಅವಳಿಗೆ ಸ್ಪಷ್ಟ ಕೇಳಿಸುತ್ತಿತ್ತು. ಬೇಕೆಂದೇ ಅವಳು ಮೆಲ್ಲಗೆ ನಡೆಯತೊಡಗಿದಳು.

“ಸಾರ್‌, ಬಹಳ ದಿನಗಳಿಂದ ನನಗೆ ನೆಗಡಿ, ಶೀತ ಕಾಡುತ್ತಿದೆ. ರಾತ್ರಿಯಿಡೀ ಮೂಗು ಕಟ್ಟಿಕೊಂಡು ನಿದ್ದೆ ಮಾಡಲಾಗುತ್ತಿಲ್ಲ. ಗಂಟಲಲ್ಲೂ ಸಾಕಷ್ಟು ಕಫ ಇದೆ. ಇದರಿಂದಾಗಿ ಕೆಮ್ಮು ಹೆಚ್ಚಿ ಎಳೆತ ಕಾಡುತ್ತದೆ…..” ಶೀತರಕ್ತ ಪ್ರಾಣಿಯಂತೆ ತನ್ನ ಶೀತದ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಿದ್ದ.

ಇದೀಗ ತಾನೇ 23ರ ಹರೆಯದ ಸುಂದರ ತರುಣಿಯನ್ನು ಪರಿಚಯಿಸಿದರೆ, ಅವಳಿಗೆ ಕೇಳಿಸುವಂತೆಯೇ ತನ್ನ ರೋಗದ ಪಟ್ಟಿ ಹೇಳಿಕೊಳ್ಳುತ್ತಿದ್ದಾನಲ್ಲ….. ವೈದ್ಯರಿಗೆ ಎನಿಸಿತು. ಇರಲಿ, ಹುಡುಗ ಆಕರ್ಷಕನಾಗಿದ್ದಾನೆ, ತುಸು ಸಾಧು ಸೌಮ್ಯ ಸ್ವಭಾವದವನಿರಬೇಕೆಂದು ಅವರು ಅವನ ಮಾತುಗಳಿಂದಲೇ ಗ್ರಹಿಸಿದರು. ಅವನಿಗೆ ಬೇಕಾದ ಔಷಧಿ ಬರೆದುಕೊಡುತ್ತಾ ತಮ್ಮ ಬಳಿಯಿದ್ದ ಸ್ಯಾಂಪಲ್ಸ್ 2 ಕೊಟ್ಟರು.

ಅವಳು ತನ್ನ ಕೆಲಸದ ನಿಮಿತ್ತ ಸಿಟಿ ಕಡೆ ನಡೆದಿದ್ದಳು. ಆದರೆ ಅವಳ ಮನಸ್ಸೆಲ್ಲ ಅನಲ್ಲೇ ನೆಟ್ಟಿತ್ತು. ಅವನಿಗಿಂತಲೂ ಸ್ಮಾರ್ಟ್‌ ಆದ ಎಷ್ಟೋ ಜನರ ಸಂಪರ್ಕವಿದ್ದರೂ ಇಂತಹ ಪ್ರೇಮಾನುಭೂತಿ ಎಂದೂ ಉಂಟಾಗಿರಲಿಲ್ಲ.

ಅಂದು ರಾತ್ರಿ ಡೈರಿ ಬರೆಯಲು ಕುಳಿತವಳಿಗೆ ಆ ದಿನಾಂಕದ ಪುಟದಲ್ಲಿ ಏನೂ ಬರೆಯಲಾಗದೆ ಏನೋ ಒಂದಿಷ್ಟು ಹುಚ್ಚುಚ್ಚಾಗಿ  ಗೆರೆಗಳನ್ನು ಗೀಚಿ ಹಾಕಿದಳು. ಅವನು ಅವಳ ಮನಸ್ಸನ್ನು ಅಷ್ಟು ಆಕ್ರಮಿಸಿದ್ದ.

ವಸಂತ ಕಾಲದ ಕೋಗಿಲೆ ಋತು ಬದಲಾವಣೆಯ ಸಂಭ್ರಮದಿಂದ ಕೂಗಿ ಹಾಡುವಂತೆ, ಅವಳ ಹೃದಯ ಪ್ರೇಮಾಲಾಪನೆಗೆ ತೊಡಗಿತ್ತು. ಹೆಚ್ಚಿನ ಪರಿಚಯವಿಲ್ಲದ ಅವನ ಬಳಿ ತಾನು ಏನೆಂದು ಮನದಾಳದ ಮಾತುಗಳನ್ನು ತೋಡಿಕೊಳ್ಳಲಿ ಎಂದು ನಿದ್ರೆಯಿಲ್ಲದೆ ಹಾಗೇ ಇರುಳು ಕಳೆದಳು.

ಆ ಸಂದರ್ಶನವೇನೊ ಒದಗಿ ಬರಲಿಲ್ಲ. ಅವಳಿಗೆ ಬೇಗ ನೌಕರಿ ಸಿಗುವ ಯೋಗ ಕೂಡ ಬರಲಿಲ್ಲ. ಹೀಗೆ ಆಗಾಗ ಸಿಟಿ ಸುತ್ತಾಡು, ಅಲ್ಲಿ ಇಲ್ಲಿ ಓಡಾಡು, ಕೆಲಸದ ಹುಡುಕಾಟಕ್ಕೆ ಅಲೆದಾಡು ಎನ್ನುವುದರಲ್ಲಿ ಕಾಲ ಕಳೆಯಿತು. ಅವನು ಡಾಕ್ಟರ್‌ ದರ್ಶನಕ್ಕೆ ಬಂದಿರಲಿಲ್ಲ. ಆ ನೆಪದಲ್ಲಾದರೂ ಅವನನ್ನು ಕಣ್ಣು ತುಂಬಿಸಿಕೊಳ್ಳಬಹುದಿತ್ತಲ್ಲ ಎಂದೆನಿಸಿತವಳಿಗೆ. ಆದರೆ ತನ್ನದು ಒನ್‌ವೇ ಲವ್, ಅವನಿಂದ ಅಂಥ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂಬುದು ಅವಳಿಗೆ ನೆನಪಾಯ್ತು.

ರೈಲ್ವೆ ಪಾಸ್‌ ಮಾಡಿಸಲು ಹೋದಾಗಲೂ ಯಾಂತ್ರಿಕವಾಗಿ ಆ ಕೆಲಸ ಮುಗಿದಿತ್ತೇ ಹೊರತು, ತನ್ನನ್ನು ಅವನು ವಿಶೇಷವಾಗಿ ವಿಚಾರಿಸಿಕೊಳ್ಳಲಿಲ್ಲ ಎಂದು ಅರಿವಾಗಿ ದಿವ್ಯಾಳಿಗೆ ತುಸು ಬೇಸರವೆನಿಸಿತು. ಎಲ್ಲರಂತೆ ವಯೋ ಸಹಜವಾಗಿ ಶಶಾಂಕ್ ರೊಮ್ಯಾಂಟಿಕ್‌ ವ್ಯಕ್ತಿಯಲ್ಲ ಎಂದು ಗುರುತಿಸಿದಳು.

ಇತ್ತ ಮನೆಯಲ್ಲಿ ಇವಳ ಮದುವೆಯ ತಯಾರಿ ಜೋರಾಗಿ ನಡೆಯತೊಡಗಿತು. ನಾಲ್ಕಾರು ಕಡೆ ವಿಚಾರಿಸಿ, ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ಗೆ ಹೆಸರು ನೋಂದಾಯಿಸೋಣ ಎಂದು ಅಪ್ಪಾಜಿ ಹಿರೀ ಮಗಳಿಗೆ ತಿಳಿಸಿದರು.

ದಿವ್ಯಾ ಹುಟ್ಟಿದಾಗಲೇ ಅವಳ ತಾಯಿ ಹೆರಿಗೆಯಲ್ಲಿ ತೀರಿಕೊಂಡಿದ್ದರು. ಆಗ ತಾನೇ ಹೈಸ್ಕೂಸ್‌ ಮೆಟ್ಟಿಲು ಹತ್ತಿದ ಮಾಲತಿ, ಆ ಮನೆಗೆ ಹಿರೀಮಗಳು ಮಾತ್ರವಲ್ಲದೆ, ತಾಯಿಯಾಗಿ ನಿಂತಳು. ಬಿ.ಎ, ಬಿ.ಎಡ್‌ ಮುಗಿಸಿ ಖಾಸಗಿ ಹೈಸ್ಕೂಲು ಶಿಕ್ಷಕಿಯಾಗಿ ಮೂಗಿಗೆ ಕನ್ನಡಕ ಏರಿಸಿದ ಮಾಲತಿ, ಮನೆಯಲ್ಲೂ ಅಕ್ಷರಶಃ ಮೇಡಂ ಆಗಿದ್ದಳು. ಅಡುಗೆಯಿಂದ ಹಿಡಿದು ಮನೆಯ ಸಮಸ್ತ ಆಡಳಿತ ಅವಳದೇ. ರಾಯರು ಮರುಮದುವೆ ಆಗಲು ಮನಸ್ಸು ಮಾಡಲೇ ಇಲ್ಲ. ತಂದೆಯ ಒಂಟಿ ಜೀವನ ಕಂಡು ಬೆಳೆದಿದ್ದ ಮಾಲತಿ 30 ದಾಟಿದ ಮೇಲೆ ಎಂದೆಂದಿಗೂ ತನಗೆ ಮದುವೆ ಬೇಡ ಎಂದೇ ಉಳಿದುಬಿಟ್ಟಳು.

ಈಗ ಎಷ್ಟೋ ವರ್ಷಗಳಾದ ಮೇಲೆ ಆ ಮನೆಯಲ್ಲಿ ಒಬ್ಬ ಮಗಳ ಮದುವೆಯ ಮಾತುಕಥೆ ನಡೆಯುತ್ತಿತ್ತು. ವಿವೇಕ ಬೇಡ ಎನ್ನುತ್ತಿದ್ದರೂ ಮನಸ್ಸು ಕೇಳದೆ, ದಿವ್ಯಾ ತನ್ನ ಮನದಾಳದಲ್ಲಿ ಶಶಾಂಕ್‌ ಕುರಿತು ಇದ್ದ ಅಭಿಪ್ರಾಯವನ್ನು ಅಕ್ಕನಿಗೆ ಹೇಳಿಕೊಂಡಳು. ತಂಗಿಯ ಪರ ವಹಿಸಿದ ಮಾಲತಿ, ತಂದೆಗೆ ಹೇಳಿ ಶಶಾಂಕನೊಡನೆ ಮಾತನಾಡುವಂತೆ ಹೇಳಿದಳು. ವಿಷಯ ಅರಿತ ರಾಯರು ಹೀಗೆ ಭೇಟಿಯಾದ  ಶಶಾಂಕನನ್ನು ತಮ್ಮ ಮನೆಗೆ ಊಟಕ್ಕೆ ಬರುವಂತೆ ಆಹ್ವಾನಿಸಿದರು. ಹೀಗೆ ಶಶಾಂಕ್‌ ಅವರ ಡೈನಿಂಗ್‌ ಹಾಲ್‌ಗೆ ಬರುವಂತಾಯಿತು. ಇವರಿಬ್ಬರ ನಡುವೆ ಔಪಚಾರಿಕತೆಯ ಮಾತುಕತೆಯಷ್ಟೇ, ಮಾಲತಿ ಬಡಿಸುತ್ತಿದ್ದುದರಿಂದ ಗಂಭೀರವಾಗಿಯೇ ಊಟ ಸಾಗುತ್ತಿತು. ಹೀಗೆ ನಾಲ್ಕಾರು ಸಲ ಅವನು ಹಬ್ಬ ಹರಿದಿನಗಳಲ್ಲಿ ಇವರ ಮನೆಗೆ ಬಂದು ಹೋಗುವಂತಾಯಿತು.

ಆದರೆ ನೀರಸ ಸ್ವಭಾವದ ಶಶಾಂಕ್‌ ಎಂದೂ ತನ್ನ ಲಕ್ಷ್ಮಣರೇಖೆಯ ಗಡಿ ದಾಟಿ ದಿವ್ಯಾಳ ಬಳಿ ಸಲುಗೆ ಬೆಳೆಸಿಕೊಳ್ಳಲೇ ಇಲ್ಲ. ಇದನ್ನು ಗುರುತಿಸಿದ ರಾಯರು ಕೊನೆಗೆ ಅಳೆದೂಸುರಿದೂ ತಾವೇ ಅವನ ಮುಂದೆ ಮದುವೆ ಮಾತುಕಥೆ ಶುರುಮಾಡಿ, ದಿವ್ಯಾಳ ಬಗ್ಗೆ ಅಭಿಪ್ರಾಯ ಕೇಳಿದರು.

ಇಷ್ಟೆಲ್ಲ ಆತ್ಮೀಯವಾಗಿ ಕರೆದು 4-6 ಸಲ ಊಟ ಹಾಕಿಸಿದಾಗಲೇ ಇದರ ಹಿಂದೆ ಏನೋ ಉದ್ದೇಶವಿರಬಹುದು ಎಂದು ಶಶಾಂಕ್‌ತರ್ಕಿಸಲೇ ಇಲ್ಲ. ಅಂಥ ಚೆಲುವೆ, ಕಲಿತ ಹುಡುಗಿಯನ್ನು ಮದುವೆಗೆ ಕೇಳಿದಾಗ ಬೇರೆಯವರಾಗಿದ್ದರೆ ಹಿಂದೆ ಮುಂದೆ ಯೋಚಿಸದೆ ಒಪ್ಪುತ್ತಿದ್ದರೇನೋ…. ಆದರೆ ಈ ಭೂಪತಿ ಮಾತ್ರ ಹಾಗೇನೂ ಮಾಡದೆ ಆಮೇಲೆ ಹೇಳ್ತೀನಿ ಎಂದು ತಡಮಾಡಲೇ ಇಲ್ಲ. ಇವನ ಸ್ವಭಾವವೇ ಹಾಗೇ ಎಲ್ಲರಿಗಿಂತ ವಿಭಿನ್ನ.

ರಾಯರು ಕೇಳಿದ ಪ್ರಶ್ನೆಗೆ ಸ್ವಲ್ಪ ಯೋಚಿಸದೆ ಈ ಮದುವೆ ಸಾಧ್ಯವಿಲ್ಲ ಎಂದ! ಕಾರಣ ವಿಚಾರಿಸಿದಾಗ ಹೆಣ್ಣು ಕೊಡುವ ಮಾವನ ಮನೆ ತಾನಿರುವ ಮನೆಗೆ ಹತ್ತಿರವಾದರೆ ಮುಂದೆ ಖಂಡಿತಾ ಸರಿಹೋಗದು, ಅದು ಬೇರೆ ಊರಾಗಿದ್ದರೇನೇ ಸರಿ, ಎಂದು ಹೇಳಿ ಹೊರಟೇಬಿಟ್ಟ. ಮಾವನ ಮನೆಯವರು ಹತ್ತಿರದಲ್ಲಿದ್ದಷ್ಟೂ ಹೆಚ್ಚಿನ ಸಂಪರ್ಕ ಹೊಂದಿರಬೇಕಾಗುತ್ತದೆ ಎಂಬುದು ಅವನ ವಾದವಾಗಿತ್ತು.

ಈ ಮಧ್ಯೆ ಮುಂಬೈನ ಒಳ್ಳೆಯ ಕಂಪನಿಯೊಂದರಿಂದ ಅವಳಿಗೆ ಕೆಲಸಕ್ಕೆ ಆಫರ್‌ ಬಂದಿತ್ತು. ಈ ಮದುವೆ ಸಂಬಂಧ ನೋಡಿಕೊಂಡು ನಿರ್ಧರಿಸೋಣ ಎಂದುಕೊಂಡಿದ್ದವಳಿಗೆ ಅವನ ಉತ್ತರ, ತಕ್ಷಣ ಹೊರಡಲು ಪ್ರೇರೇಪಿಸಿತು. ರಾಯರು 4 ದಿನ ಕ್ಲಿನಿಕ್‌ ಬಾಗಿಲು ಹಾಕಿ, ಮಗಳನ್ನು ಮುಂಬೈಗೆ ಕರೆದೊಯ್ದು ಬಿಟ್ಟು, ಉದ್ಯೋಗಸ್ಥ ವನಿತೆಯರ ಹಾಸ್ಟೆಲ್‌ನಲ್ಲಿ ಅವಳಿಗೆ ಸವತಿ ಏರ್ಪಡಿಸಿಕೊಟ್ಟು ವಾಪಸ್ಸು ಬಂದರು. ಡೈರಿಯಲ್ಲಿ ತನ್ನ ಭಾವನೆಗಳನ್ನು ಹರಿಯಬಿಡುತ್ತಿದ್ದ ದಿವ್ಯಾ, ಆ ಡೈರಿ ತೆಗೆದು ಅಟ್ಟಕ್ಕೆಸೆದು ಹೊರಟಿದ್ದಳು. ಹೀಗೆ ಮುಂಬೈನ ಯಾಂತ್ರಿಕ ಬದುಕಿಗೆ ಸಿಲುಕಿದ ದಿವ್ಯಾ, ಅಲ್ಲಿ ತನ್ನ ಜೀವನದ ಹೊಸ ಅಧ್ಯಾಯ ಕಂಡುಕೊಂಡಳು.

ಶಶಾಂಕ್‌ ಬೆಂಗಳೂರು ಹೊರವಲಯದ ಆ ಅತಿ ಸಾಧಾರಣ ರೈಲ್ವೆ ಸ್ಟೇಷನ್ನಿನ ಮಾಸ್ಟರ್‌ ಆಗಿ ದೊಡ್ಡ ಏಳಿಗೆಯನ್ನೇನೂ ಸಾಧಿಸಿರಲಿಲ್ಲ. ಅವನ ತಾಯಿ ತಂದೆ ಭದ್ರಾವತಿಯಲ್ಲಿ ನೆಲೆಸಿದ್ದರು. ಇವನಿಗೆ ಇಬ್ಬರು ಅಕ್ಕಂದಿರು, ಅವರು ಮದುವೆಯಾಗಿ ನೆಮ್ಮದಿಯಾಗಿದ್ದರು. 26ರ ಹರೆಯದ ಈ ತರುಣ ಕುಟುಂಬದಲ್ಲಿ ಎಲ್ಲರಿಗಿಂತ ಕಿರಿಯ, ಮಹಾ ಸ್ವಾಭಿಮಾನಿ. ಮೊದಲಿನಿಂದಲೂ ತನ್ನೆಲ್ಲ ಕೆಲಸಗಳನ್ನೂ ತಾನೇ ಮಾಡಿಕೊಳ್ಳುವ ಆತ್ಮಾಭಿಮಾನಿ. ಆಫೀಸ್‌ಗೆ ತುಸು ಹತ್ತಿರ ಎನ್ನಬಹುದಾದ ಜಾಗದಲ್ಲಿ ಒಂದೇ ಕೋಣೆಯ ಮನೆ ಬಾಡಿಗೆಗೆ ಸಿಕ್ಕಿತ್ತು. ತಾನೇ ಹಸಿಬಿಸಿ ಬೇಯಿಸಿಕೊಂಡು, ವಾರಾಂತ್ಯದಲ್ಲಿ ಬಟ್ಟೆ ಒಗೆದುಕೊಂಡು, ಹೇಗೋ ಬ್ರಹ್ಮಚಾರಿಯ ಜೀವನ ನಡೆಸುತ್ತಿದ್ದ.

ಮುಂದಾದರೂ ಮದುವೆ ಆದಮೇಲೆ ತುಸು ಅನುಕೂಲಕರ ಮನೆ ಬೇಕೆಂದು ರೈಲ್ವೆ ಕ್ವಾರ್ಟರ್ಸ್‌ಗೆ ಅರ್ಜಿ ಹಾಕಿಕೊಂಡಿದ್ದ. ಅಷ್ಟು ಸುಲಭದ ಬಡಪಟ್ಟಿಗೆ ಅದು ಸ್ಯಾಂಕ್ಷನ್‌ ಆಗುವ ಹಾಗಿರಲಿಲ್ಲ. ಅವನಿಗೆ ಈ ಕೆಲಸ ಸಿಕ್ಕಿ ಬೆಂಗಳೂರಿಗೆ ಬಂದು ಸೆಟಲ್ ಆದಾಗ ಅದು 2013ನೇ ಇಸವಿ. ಆಗ ಅವನಿಗೆ 25 ಸಾವಿರ ಮಾತ್ರವೇ ಸಂಬಳ. ಸ್ಟಾಫ್‌ ಕೊರತೆ ಕಾರಣ ಎಷ್ಟೋ ಸಲ ಅವನಿಗೆ 12 ಗಂಟೆಗಳ ಸ್ಟೇಷನ್‌ ಮಾಸ್ಟರ್‌ ಡ್ಯೂಟಿ ಮಾಡಬೇಕಿತ್ತು.  ನೈಟ್‌ ಶಿಫ್ಟ್ ಕಾಟ ಇನ್ನೊಂದು ಕಷ್ಟವಾಗಿತ್ತು.

ಸಿಬ್ಬಂದಿ ಕೊರತೆಯ ನೆಪವಾಗಿ ಅವನಿಗೆ ಇಲಾಖೆ ವತಿಯಿಂದ ವಾರಾಂತ್ಯದ ಎಷ್ಟೋ ರಜೆಗಳು ರದ್ದವಾಗುತ್ತಿದ್ದವು. ಮಳೆಗಾಲದಲ್ಲಿ ಮಳೆ ಸುರಿಯಲಿ ಅಥವಾ ಚಳಿಗಾಲದಲ್ಲಿ ಥಂಡಿಯಿಂದ ನಡುಗಲಿ, ಈ ಡ್ಯೂಟಿ ಮೇಲೆ ಡ್ಯೂಟಿಯ ಕಷ್ಟ ಮಾತ್ರ ತಪ್ಪಲಿಲ್ಲ. ತೀರಾ ರೋಗ ಬಂದು 2 ದಿನ ಮೇಲೇಳಲು ಸಾಧ್ಯವೇ ಇಲ್ಲ ಎಂದಾಗ ಮಾತ್ರವೇ ರಜೆ ಸಿಗುತ್ತಿತ್ತು.

ಅವನ ಆಫೀಸಿನಿಂದ ಬಾಡಿಗೆ ಮನೆ ತುಸು ದೂರವೇ ಇದ್ದ ಕಾರಣ ಕೈನೆಟಿಕ್‌ ಹೋಂಡಾದಲ್ಲೇ ಅವನು ಡ್ಯೂಟಿಗೆ ಹಾಜರಾಗುತ್ತಿದ್ದ. ಈ ರೀತಿ ಹೋಂಡಾದ ಓಡಾಟ, ಮಳೆಯಲ್ಲಿ ನೆನೆಯುವ ಕಾರಣ ಅವನಿಗೆ ಸಣ್ಣದಾಗಿ ಶುರುವಾಗುವ ನೆಗಡಿ, ಕೆಮ್ಮು ಆಸ್ಮಾಗೆ ತಿರುಗಿ ಕಾಟ ಕೊಡುತ್ತಿತ್ತು. ಡ್ಯೂಟಿಯಿಂದ ಮನೆಗೆ ಮರಳಿ ಏನಾದರೂ ಆಹಾರ ಬೇಯಿಸು, ಆ ಪಾತ್ರೆ ಪಡಗ ತೊಳೆ, ಮನೆ ಕ್ಲೀನ್‌ ಮಾಡು ಎನ್ನುವಷ್ಟರಲ್ಲಿ ಹೈರಾಣಾಗುತ್ತಿದ್ದ. ಇವನ ತಾಯಿ ತಂದೆ ಒಂದಷ್ಟು ದಿನ ಮಗನ ಮನೆಯಲ್ಲಿರಬೇಕು ಎಂದು 2 ಬೆಡ್‌ ರೂಂ ಮನೆ ನೋಡು ಎಂದು ವರಾತ ಶುರು ಮಾಡಿದ್ದರು. ಅಷ್ಟು ಬೇಗ ನೆಮ್ಮದಿಯ ಗೂಡು ಅದೂ ಬಾಡಿಗೆ ಮನೆ ರೂಪದಲ್ಲಿ ಬೆಂಗಳೂರಿನಲ್ಲಿ ಸಿಕ್ಕಿಬಿಡುವುದೇ? ಅದೇ ಔಟ್‌ ಸ್ಕರ್ಟ್‌ ಆದರೂ ಇವನಿಗೆ ಕಾಟ ತಪ್ಪಲಿಲ್ಲ. ಹೀಗೆ ಏನಾದರೂ ಮಾಡಿ ರೈಲ್ವೆ ಕ್ವಾರ್ಟರ್ಸ್ ನಲ್ಲಿ ಮನೆ ಸಿಗಲೆಂದು ಇಲಾಖೆಯ ಕಛೇರಿಗೆ ಅಂಡಲೆದು, ಕಾಡಿಬೇಡಿ, ಏನೋ ಮಾಡಿ ಅಂತೂ ಸಾಂಕ್ಷನ್‌ಮಾಡಿಸಿಕೊಂಡ. ತನ್ನ ಪಾಲಿಗೆ ಅಲಾಟ್‌ ಆದ ಮನೆ ನೋಡಲು ಮಾರನೇ ದಿನ ಹೊರಟ.

ಇವನ ಡ್ಯೂಟಿ ಜಾಗಕ್ಕೆ 15-20 ನಿಮಿಷ ಅಂತರದಲ್ಲಿ ನಡೆದುಕೊಂಡೇ ಬರಬಹುದಾದಷ್ಟು ಸಮೀಪ ಇತ್ತು ಆ ರೈಲ್ವೆ ಕ್ವಾರ್ಟರ್ಸ್‌ಮನೆ. 2 ಬೆಡ್‌ ರೂಮಿನ ಆ ಮನೆ ಬಹಳ ವರ್ಷಗಳ ಹಿಂದೆ ಕಟ್ಟಿದ್ದೆಂದು ನೋಡಿದೊಡನೆಯೇ ತಿಳಿಯುತ್ತಿತ್ತು. ಆ ಮನೆಯ ಮುಂದೆ ಒಂದಿಷ್ಟು ಧಾರಾಳ ಹೂಗಿಡಗಳನ್ನು ಬೆಳೆಯಬಹುದಾದಷ್ಟು ಜಾಗವಿತ್ತು. ಬೇರೆ ಎಲ್ಲಾ ಕಿತ್ತು ಹೋಗಿ, ಬೋಗನ್‌ ವಿಲ್ಲಾ ಗಿಡ ಕಾಂಪೌಂಡ್‌ನಲ್ಲಿ ತರಕಾರಿ ಬೆಳೆದಿತ್ತು. ಬಹುದಿನ ಖಾಲಿ ಬಿದ್ದಿದ್ದರಿಂದ ಹೊರನೋಟಕ್ಕೆ ತುಸು ಪಾಳು ಬಿದ್ದಂತೆ ಕಾಣಿಸುತ್ತಿತ್ತು. ಇಲಿ, ಹೆಗ್ಗಣಗಳು ಧಾರಾಳವಾಗಿ ಅಲ್ಲೆಲ್ಲ ಓಡಾಡಿಕೊಂಡಿದ್ದ.

ಹಾಗೆ ಮುಂದೆ ಹಾದು ಶಶಾಂಕ್‌ ಬಾಗಿಲಿನ ಬೀಗ ತೆರೆದು ಒಳಗೆ ಬಂದಾಗ ಎಲ್ಲೆಲ್ಲೂ ಜೇಡರ ಬಲೆ, ಧೂಳು ತುಂಬಿಕೊಂಡು ಅವನು 5 ನಿಮಿಷ ಕೆಮ್ಮಿ, ಕ್ಯಾಕರಿಸಿ ಸುಧಾರಿಸಿಕೊಳ್ಳ ಬೇಕಾಯಿತು. ಹೆಚ್ಚೂ ಕಡಿಮೆ 2-3 ವರ್ಷಗಳಿಂದ ಅಲ್ಲಿ ಯಾರೂ ವಾಸವಿರಲಿಲ್ಲ ಎಂದು ಹೇಳಬಹುದಿತ್ತು. ಇವನು ಇಲ್ಲಿಗೆ ಬರುವ ಮೊದಲು ಒಬ್ಬ ವಯೋವೃದ್ಧ  ಸ್ಟೇಷನ್‌ ಮಾಸ್ಟರ್‌ ಅಲ್ಲಿ ವಾಸಾಗಿದ್ದರು. ಅವರ ನಿವೃತ್ತಿ ನಂತರವೇ ಶಶಾಂಕನಿಗೆ ಅಲ್ಲಿ ಎಂಟ್ರಿ ದೊರಕಿತ್ತು. ಇವನ ಪೋಸ್ಟಿಂಗ್‌ ಆಗಿ ಆ ಮನೆಗೆ ಬಂದು ಇವನು ಬೀಗ ತೆರೆಯುವವರೆಗೂ ಯಾರೂ ಆ ಕಡೆ ತಿರುಗಿಯೂ ನೋಡುತ್ತಿರಲಿಲ್ಲ.

ನೆಲದ ಹಲವು ಕಡೆ ಗಾರೆ ಕಿತ್ತು ಬಂದು ಕಚ್ಚುಕಚ್ಚಾಗಿತ್ತು. ಕಿಟಕಿ ಬಾಗಿಲು ಶಿಥಿಲವಾಗಿದ್ದರೆ, ನಲ್ಲಿ ಪೈಪು ಅಲ್ಲಲ್ಲಿ ಮುರಿದಿದ್ದವು. ಗೋಡೆಗಳ ಸುಣ್ಣಬಣ್ಣವಂತೂ ವಿಕಾರವಾಗಿ ಪುಡಿ ಉದುರಿಸುತ್ತಾ ಇತ್ತು. ಮೇಲಿನ ಛಾವಣಿಯಿಂದ ಪದರಗಳು ಉದುರುತ್ತಿದ್ದವು. ಭದ್ರಾವತಿಯ ಸ್ವಂತ ಮನೆಯನ್ನಂತೂ ಅತಿ ಆಸಕ್ತಿಯಿಂದ ಖುದ್ದಾಗಿ ಸಲಹೆ ಸೂಚನೆ ನೀಡುತ್ತಾ ಕಟ್ಟಿಸಿದ್ದ. ಇಂಟೀರಿಯರ್ಸ್‌ ಅವನ ಅಭಿರುಚಿಗೆ ಪೂರಕವಾಗಿತ್ತು. ತಾನಿದ್ದ ಬಾಡಿಗೆ ಮನೆಯೂ ಎಷ್ಟೋ ಅಚ್ಚುಕಟ್ಟಾಗಿದೆ ಎನಿಸದಿರಲಿಲ್ಲ.

ಬಚ್ಚಲಮನೆಗೆ ಹೋಗಿ ನೋಡಿದಾಗ ಅಲ್ಲಿ ಇನ್ನೊಂದಷ್ಟು ಆಘಾತಗಳು ಕಾದಿದ್ದವು. ಅಲ್ಲಲ್ಲಿ ಪ್ಲಾಸ್ಟರ್‌ ಕಿತ್ತ ಗೋಡೆಗಳು, ಕೊರಕಾದ ನೆಲ, ಸ್ನಾನ ಮಾಡುವ ಬಚ್ಚಲಂತೂ ಇನ್ನೂ ಘೋರವಾಗಿತ್ತು. ನೀರು ತುಂಬಿಸಲು ಇದ್ದ ಸಿಮೆಂಟ್‌ ತೊಟ್ಟಿ ಅಲ್ಲಲ್ಲಿ ಕ್ರಾಕ್‌ ಆಗಿತ್ತು. ಮನೆಯಲ್ಲಿ ಕೈ ತೊಳೆಯಲು ಒಂದು ವಾಷ್‌ ಬೇಸಿನ್‌ ಸಹ ಇರಲಿಲ್ಲ. ಭದ್ರಾವತಿಯ ಮನೆ ಇರಲಿ, ತಾನಿದ್ದ ಬಾಡಿಗೆ ಮನೆಗೆ ಹೋಲಿಸಿದರೂ ಈ ಮನೆ ಮನುಷ್ಯರು ವಾಸಿಸಲು ಯೋಗ್ಯವಲ್ಲ ಎಂದೇ ಅನಿಸುತ್ತಿತ್ತು. ತಾನು ಇಲ್ಲಿಗೆ ಶಿಫ್ಟ್ ಆಗುವ ಮೊದಲು ಈ ಮನೆಯನ್ನು ನೀಟಾಗಿ ರಿಪೇರಿ ಮಾಡಿಸಬೇಕು ಎಂದು ನಿರ್ಧರಿಸಿದ. ಇದಕ್ಕೆ ಆಧುನಿಕ ರೀತಿಯಲ್ಲಿ ಟಚ್ ಕೊಡಬೇಕೆನಿಸಿತು. ಇಷ್ಟು ದೊಡ್ಡ 2 ಬೆಡ್‌ ರೂಮ್ ಹೌಸ್‌ ಪೂರ್ತಿ ಸರಿಪಡಿಸಲು 50 ಸಾವಿರ ಇಲ್ಲದೆ ಸಾಧ್ಯವೇ ಇರಲಿಲ್ಲ. ಆದರೆ ಅಷ್ಟು ಹಣ ಎಲ್ಲಿಂದ ತರುವುದು? ಬರುವ ಸಂಬಳದಲ್ಲಿ 10 ಸಾವಿರ ತಾಯಿ ತಂದೆಯರಿಗೂ ಕಳುಹಿಸಿ ಉಳಿದ 15ರಲ್ಲಿ ಬಾಡಿಗೆ ಕಟ್ಟಿ ಜೀವನೋಪಾಯ ನಡೆಸುತ್ತಿದ್ದ. ತನ್ನ ಸರ್ಕಾರಿ ವಿಭಾಗಕ್ಕೆ ಈ ಕುರಿತು ರಿಪೇರಿಗೆ ಅರ್ಜಿ ಸಲ್ಲಿಸಿದರೆ, ಅವರು ಅದನ್ನು ಸ್ಯಾಂಕ್ಷನ್ ಮಾಡಿಸಿ, ಕೆಲಸ ಆರಂಭಿಸಲು ಕನಿಷ್ಠ 6 ತಿಂಗಳಾದರೂ ತೆಗೆದುಕೊಳ್ಳುವರು. ಅಷ್ಟಾದರೂ ಅವರು ತಮ್ಮ ಮೂಗಿನ ನೇರಕ್ಕೆ ಆ ಕೆಲಸ ಮಾಡಿಸುವುದರಿಂದ ತಾನು ಅಂದುಕೊಂಡಷ್ಟು ಮನೆ ನೀಟಾಗಲು ಸಾಧ್ಯವಿಲ್ಲ ಎಂಬುದು ಗೊತ್ತಿರುವ ವಿಚಾರ. ತಾನು ಅಂದುಕೊಳ್ಳುವಂಥ ಅಂದದ ಚಂದದ ಸಂಭ್ರಮಿಸುವ ಮನೆ ಇದಾಗಲು ಸಾಧ್ಯವೇ….?

ಅವನು ಕನಸಿನ ಲೋಕದಿಂದ ವಾಸ್ತವಕ್ಕೆ ಬಂದು, ಹೇಗಾದರೂ ಇದನ್ನು ಸರಿಪಡಿಸಿಯೇ ತೀರಬೇಕು ಎಂದು ನಿಶ್ಚಯಿಸಿದ. ತಾನು ಮುಂದೆ ಯಾವ ಕ್ರಮ ಕೈಗೊಂಡರೆ ಸರಿಹೋದೀತು? ಅವನು ತನ್ನ ತಂದೆಯ ಕಡೆಯಿಂದ ಎಂದೂ ಆರ್ಥಿಕ ಸಹಾಯ ಪಡೆಯುವನಲ್ಲ. ಅನುಕೂಲವಿದ್ದರೂ ಅವರು ಸಹಾಯ ಮಾಡುವವರಲ್ಲ. ಮಗ ಕೆಲಸಕ್ಕೆ ಸೇರಿದ್ದಾಯಿತು, ಬದುಕುವ ದಾರಿ ಅವನೇ ಕಂಡುಕೊಳ್ಳಬೇಕು ಎನ್ನುವ ವಿತಂಡ ವಾದದವರು. ತನಗೆ ಬರುತ್ತಿದ್ದ ಆದಾಯದಲ್ಲಿ ದೊಡ್ಡ ಪ್ರಮಾಣದ ಹಣವನ್ನೇನೂ ಅವನು ಉಳಿತಾಯ ಮಾಡಿರಲಿಲ್ಲ. ಹಾಗಾಗಿ ತನ್ನ ಬಳಿಯ ಅಲ್ಪ ಪ್ರಮಾಣದ ಹಣದಲ್ಲಿ ಅವನು ಎಲ್ಲವನ್ನೂ ತನ್ನ ಆಫೀಸ್ ಕ್ವಾರ್ಟರ್ಸ್‌ ಮನೆಯ ರಿಪೇರಿಗೆ ಸುರಿದರೆ ನಾಳೆ ಮದುವೆ ಖರ್ಚಿಗೆ ಹಣ ಸಾಲ ಮಾಡಬೇಕಷ್ಟೆ….. ಹಾಗೇಂತ ಈ ಹಾಳು ಕೊಂಪೆಗೆ ಹೊಸ ಹೆಂಡತಿಯನ್ನು ಕರೆತಂದು ಸಂಸಾರ ಹೂಡಲು ಸಾಧ್ಯವೇ? ಮನೆಯವರ ಮುಂದೆ ತನ್ನದು ಹೀನಾಯದ ನೌಕರಿಯಲ್ಲ, ಉಳಿಯಲು ನೆಮ್ಮದಿಯ ಮನೆ ಕೊಡುವಂಥದ್ದು ಎಂದು ಎದೆ ಸೆಟೆಸಿ ಹೇಗೆ ತಾನೇ ಹೇಳಿಕೊಳ್ಳಬಲ್ಲ?

ಎಷ್ಟೇ ಯೋಚಿಸಿದರೂ ಕೊನೆಗೆ ಅವನಿಗೆ ತಾನು ಆಫೀಸಿಗೆ ಹೋಗಿ ಮನೆಯ ರಿಪೇರಿಗೆ ಅರ್ಜಿ ಕೊಡುವುದೊಂದೇ ದಾರಿ ಎನಿಸಿತು. ಮಾರನೇ ಬೆಳಗ್ಗೆ ಅವನು 2 ಗಂಟೆಗೆ ತನ್ನ ಮೊದಲನೇ ಪಾಳಿಯ ಡ್ಯೂಟಿ ಮುಗಿಸಿ, ತನ್ನ ವಿಭಾಗದ ಆಡಳಿತ ಕಛೇರಿ ಹುಡುಕಿಕೊಂಡು ಹೋಗಿ ಅದರ ಸಲುವಾಗಿ ಅರ್ಜಿ ಸಲ್ಲಿಸಿದ.

ತನ್ನ ವಿಭಾಗ, ಹುದ್ದೆ, ಸರ್ವೀಸ್‌ ಕುರಿತು ಹೇಳಿಕೊಂಡರೆ ಅವರಿಂದ ಖಂಡಿತಾ ಸಹಾಯ ಸಿಗಬಹುದೆನ್ನುವ ಆಸೆ ಇತ್ತು. ಆದರೆ ಅವನು ಅಷ್ಟೆಲ್ಲ ವಿವರ ನೀಡಿದರೂ ಅವರಾರೂ ಆ ಬಗ್ಗೆ ನಯಾಪೈಸೆಯ ಆಸಕ್ತಿಯನ್ನೂ ತೋರಿಸಲಿಲ್ಲ. ಈ ಮಹಾಶಯರ ಗಿಂಬಳದ ಗುರುತ್ವಾಕರ್ಷಣೆಯ ಶಕ್ತಿ ಅತ್ಯಧಿಕವೇ ಇರಬೇಕೆಂದು ಅರಿತುಕೊಂಡ. ಇವರುಗಳ ಜೇಬು ತುಂಬಿಸಿ ತಾನು ಈ ಕೆಲಸ ಮಾಡಿಸಿಕೊಳ್ಳುವುದು ನಿಜಕ್ಕೂ ಸಾಧ್ಯವೇ ಎಂದು ನಿಡುಸುಯ್ದ. ಅಲ್ಲಿನ ಪ್ರತಿ ಕುರ್ಚಿ ಮೇಜಿನ ಬಳಿ ಅವನಿಗೆ ಅನೇಕ ಪ್ರವಚನಗಳು ಬೋಧಿಸಲ್ಪಟ್ಟವು. ಕಾನೂನು ಬದ್ಧವಾಗಿ ಅವನು ಅದರ ಮಂಜೂರಾತಿ ಪಡೆಯಲು ಏನೆಲ್ಲ ಸರ್ಕಸ್‌ ಮಾಡಬೇಕು, ಎಷ್ಟು ಕಾಲ ಹಿಡಿಯುತ್ತದೆ ಎಂದು ಮನವರಿಕೆಯಾಯಿತು. ಅಷ್ಟೆಲ್ಲ 2 ಗಂಟೆ ಕಾಲ ಕಂಠ ಶೋಷಣೆ ಮಾಡಿಕೊಂಡರೂ ಎಲ್ಲಿ ಬಿದ್ದಿರುವ ಕಂಬಳಿ ಅಲ್ಲಿಯೇ ಎನ್ನುವಂತಾಗಿತ್ತು ಅವನ ಅರ್ಜಿಯ ಸ್ಥಿತಿ. ಅನ ಫೈಲ್‌ಗೊಂದು ಆಡಳಿತಾತ್ಮಕ ಕಛೇರಿ ಹೆಸರು ಒದಗಿಸಲಾಯಿತು, `ಮಿಷನ್‌ : ಕ್ವಾರ್ಟರ್ಸ್ ನಂಬರ್‌ 5/2 ಬಿ.’ ತನ್ನ ಪಾಡಿಗೆ ತನ್ನ ಕೆಲಸದಲ್ಲಿ ನೆಮ್ಮದಿಯಾಗಿದ್ದ ಆ ಯುವಕನ ಸ್ಥಿತಿ ಈಗ ದಿನ ತನ್ನ ಮನೆಯ ರಿಪೇರಿ ಯಾವಾಗ ನಡೆಯಲಿದೆ ಎಂದು ವಿಚಾರಿಸುವ ಸಲುವಾಗಿ ಅಡ್ಮಿನ್‌ ಆಫೀಸ್‌ನ ಒಂದೊಂದೇ ಕೊಠಡಿಯ ಮೆಟ್ಟಿಲೇರುವುದೇ ದೊಡ್ಡ ಕೆಲಸಲಾಯಿತು. ತನ್ನ ಡ್ಯೂಟಿ ಮುಗಿದ ತಕ್ಷಣ ಅಲ್ಲಿಗೆ ಹೋಗಿ ಆ ಜನರ ಸಂಪರ್ಕ ಪಡೆದು, ಯಾವ ಸೂತ್ರದ ಸಹಾಯದಿಂದ ಕೆಲಸ ಸಾಧಿಸಬಹುದೆಂದು ಯುಕ್ತಿ ಹೂಡತೊಡಗಿದ, ಮಾಹಿತಿ ಸಂಗ್ರಹಿಸತೊಡಗಿದ, ಮತ್ತೆ ಮತ್ತೆ ಪ್ರಯತ್ನಿಸುತ್ತಾ ನಿರಾಶನಾಗತೊಡಗಿದ.

ಹಿಂದೆಲ್ಲ ನೆಗಡಿ, ಕೆಮ್ಮು, ಜ್ವರ ಎಂದು ರಾಯರ ಬಳಿ ಔಷಧಿಗೆ ಬರುತ್ತಿದ್ದನು, ಅದೆಲ್ಲ ಅತಿ ಸಾಧಾರಣ ಎಂಬಂತೆ ಈಗ ಮನೆ ರಿಪೇರಿಯ ಮಹಾಯಜ್ಞ ಕಾರ್ಯದಲ್ಲಿ ತಲ್ಲೀನನಾದ.

ಈ ಮಧ್ಯೆ ಅವನಿಗೆ ತಂದೆ ಕಡೆಯಿಂದ ಫೋನ್‌ ಬಂದಿತು. ಅವರು ಮಗನಿಗೆ ಹೊಂದುವ ವಧು ಆರಿಸಿದ್ದರು. ವಾಟ್ಸ್ಆ್ಯಪ್‌ನಲ್ಲಿ ಫೋಟೋ, ವಿವರ ಕಳಿಸಿದ್ದರು. ಹುಡುಗಿ ಕಡೆಯವರಿಗೂ ಇವನ ವಿವರ ಕಳಿಸಿ ಓಕೆ ಪಡೆದಿದ್ದರು. ಈಗ ಶಶಾಂಕ್‌ ಬೇಗ ಉತ್ತರ ನೀಡಬೇಕಿತ್ತು. ಅವನು ಹ್ಞೂಂ ಅನ್ನದೆಯೇ, ಅವನ ತಂದೆ ಮದುವೆಯ ಬೇರೆ ತಯಾರಿ ಶುರು ಮಾಡಿಯೇಬಿಟ್ಟಿದ್ದರು.

ಸರ್ಕಾರಿ ನೌಕರಿಯಲ್ಲಿರುವ ಮಗ, ಅದು ರೈಲ್ವೆ ಸ್ಟೇಷನ್‌ ಮಾಸ್ಟರ್‌ಗೆ ಹೊಂದುವ ಪದವೀಧರ ಹುಡುಗಿ ಆರಿಸಿದ್ದಾಗಿದೆ. ಇನ್ನು ಶಶಾಂಕ್‌ ತಡ ಮಾಡದೆ ಉಳಿದ ಜವಾಬ್ದಾರಿ ನಿರ್ವಹಿಸಬೇಕೆನ್ನುವುದೇ ಅವರ ಆಗ್ರಹ. ಈ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ತಾನು ಅವರೊಂದಿಗೆ ಮಾತನಾಡಲೇಬೇಕು ಎನಿಸಿತು.

“ಮದುವೆಗೆ ಹುಡುಗಿ ನೋಡಿದ್ದೀರಿ ಸರಿ. ನನಗೂ ಇಲ್ಲಿ ಪ್ರತಿದಿನ ಹಸಿಬಿಸಿ ಬೇಯಿಸಿಕೊಂಡು ಡ್ಯೂಟಿ ನಿಭಾಯಿಸುತ್ತಾ ಸಾಕಾಗಿ ಹೋಗಿದೆ. ಆದರೆ ಮದುವೆ ಆದಮೇಲೆ ಹೆಂಡತಿ ಜೊತೆಗಿರಲು ಒಂದು ಒಳ್ಳೆ ಮನೆ ಬೇಕಲ್ಲವೇ…? ಅದಕ್ಕಾಗಿ ಸರ್ಕಾರಿ ಕ್ವಾರ್ಟರ್ಸ್‌ ನೋಡುತ್ತಿದ್ದೇನೆ. ಅದು ಸದ್ಯಕ್ಕೆ ವಾಸಕ್ಕೆ ಯೋಗ್ಯವಾಗಿಲ್ಲ. ಅದೆಲ್ಲ ರಿಪೇರಿ ಮುಗಿದು ಸರಿಹೋದ ಮೇಲೆ ಹೇಳ್ತೀನಿ, ಆಮೇಲೆ ಈ ಮದುವೆ ಗಿದುವೆ…..”

“ಅದೆಲ್ಲ ನನಗೆ ಗೊತ್ತಿಲ್ಲ! ಅದೆಲ್ಲ ಸರಿಹೋಗುವ ಮೊದಲು ಬೇರೊಂದು ಒಳ್ಳೆಯ ಬಾಡಿಗೆ ಮನೆ ನೋಡು. ಈ ವರ್ಷ ನಿನ್ನ ಮದುವೆ ಕಾರ್ಯಕ್ರಮ ಮುಗಿಸಿ, ನಾವಿಬ್ಬರೂ ನಿನ್ನ ಅಕ್ಕಂದಿರ ಜೊತೆ ಸ್ವಲ್ಪ ದಿನ ಇದ್ದು ಬರುತ್ತೇವೆ. ಅಮೆರಿಕಾ, ಆಸ್ಪ್ರೇಲಿಯಾದಲ್ಲಿ 6-6 ತಿಂಗಳು ಇದ್ದು ಬರುತ್ತೇವೆ. ರಿಟೈರ್‌ ಆಗಿ ಇಷ್ಟು ವರ್ಷ ಆಯ್ತು, ಆ ಹೆಣ್ಣುಮಕ್ಕಳು ಅಲ್ಲಿಗೆ ಹೋದ ಮೇಲೆ ಅವರನ್ನು ಒಮ್ಮೆಯೂ ನೋಡೇ ಇಲ್ಲ.

“ನಮ್ಮ ಮನೆಯನ್ನು ಯಾರಿಗೋ ಬಾಡಿಗೆಗೆ ಗೊತ್ತು ಮಾಡಿದ್ದಾಯಿತು. ಆ ಬಾಡಿಗೆ ಹಣ ನೇರ ನಿನ್ನ ಅಕೌಂಟ್‌ಗೇ ಬರುವ ಹಾಗೇ ಮಾಡಿದ್ದೇನೆ. 2 ವರ್ಷ ಬಿಟ್ಟು ಇಲ್ಲಿ ಭದ್ರಾವತಿಗೆ ಹಿಂದಿರುಗಿದ ಮೇಲೆ ಅವರು ನಮಗೆ ಮನೆ ಖಾಲಿ ಮಾಡಿ ಕೊಡುತ್ತಾರೆ. ನಾನು ಇಷ್ಟೆಲ್ಲ ವ್ಯವಸ್ಥೆ ಮಾಡಿ ಕುಳಿತಿರುವಾಗ ನೀನು ಮದುವೆ ಮುಂದಕ್ಕೆ ಹಾಕುವುದು ಬೇಕಾಗಿಲ್ಲ. ಹುಡುಗಿ ಜೊತೆ ಬೇಕಾದರೆ ವಿಡಿಯೋ ಕಾಲ್ ‌ಮಾಡಿಕೊ. ಯಾವ ಡೇಟ್‌ಗೆ ಮದುವೆ ಫಿಕ್ಸ್ ಮಾಡುವುದು ಅಂತ ನಿನ್ನ ರಜೆ ನೋಡಿಕೊಂಡು ಹೇಳು ಅಷ್ಟೇ, ಇನ್ನೇನೂ ಬದಲಾಯಿಸಲು ಹೋಗಬೇಡ!” ಎಂದು ಗುಡುಗಿದರು.

“ಅದೆಲ್ಲ ಸರಿ, ನನಗೆ ಒಂದಿಷ್ಟು ಟೈಂ ಅಂತ ಕೊಡಿ. ನನ್ನ ಕಡೆಯಿಂದ ಎಲ್ಲಾ ಓಕೆ ಆದಮೇಲೆ ನಾನೇ ತಿಳಿಸುತ್ತೀನಿ. ಈಗಲೇ ನೀವೇನೂ ಫ್ಲೈಟ್‌ ಬುಕ್‌ ಮಾಡುವುದು ಬೇಡ,” ಎಂದು ತುಸು ಸಿಡುಕಿದಾಗ ಅವರು, “ಹಾಳಾಗಿ ಹೋಗಲಿ, ನೀನು ಆ ಹುಡುಗಿ ಜೊತೆ ಮಾತನಾಡಿ ಸರಿ ಅಂತ ಹೇಳಿಬಿಡು. ನಾವು ಮುಂದಿನ ಏರ್ಪಾಡು ನೋಡ್ಕೋತೀವಿ,” ಎಂದರು.

ಆ ಕಡೆ ಲೈನ್‌ ಕಟ್‌ ಆದಮೇಲೆ ಶಶಾಂಕ್‌ಗೆ ಅನಿಸಿತು, ಅವರ ಬಳಿ ವಾದ ಮಾಡುವುದರಿಂದ ಪ್ರಯೋಜನವಿಲ್ಲ. ಮೊದಲಿನಿಂದಲೂ ಹಾಗೇ, ತಾವು ಹೇಳಿದ್ದೇ ನಡೆಯಬೇಕೆಂಬ ಹಠ. ಅವರ ಸ್ವಭಾವದ ಮುಂದೆ ಅಮ್ಮ ಏನೂ ಮಾತನಾಡಲಾಗದೆ ಇಷ್ಟು ವರ್ಷಗಳ ದಾಂಪತ್ಯ ಸಾಗಿಸಿಕೊಂಡು ಬಂದಿದ್ದರು.

ಹೀಗಾಗಿ ಶಶಾಂಕ್‌ ಮತ್ತೆ ಕ್ವಾರ್ಟರ್ಸ್‌ ಮನೆಯ ಬೇಟೆಗೆ ತೊಡಗಿದ. ಈ ಸಲ ಅವನು ಮತ್ತೆ ತನ್ನ ಅರ್ಜಿ ಕಡತಗಳೊಂದಿಗೆ ಸೀನಿಯರ್‌ ಸಿವಿಲ್ ‌ಎಂಜಿನಿಯರ್‌ ಬಳಿ ಹಾಜರಾದ.

ಆ ಮನುಷ್ಯನೋ ಮಹಾ ಬಿಝಿಯಾಗಿರುವಂತೆ ತೋರಿಸಿಕೊಂಡ. ಅರ್ಧ ಭಾಗ ಸರ್ಕಾರಿ ಕೆಲಸ ಮಾಡಿದರೆ, ಉಳಿದರ್ಧ ಭಾಗ ತನ್ನ ಖಾಸಗಿ ಕೆಲಸ ಮಾಡಿಕೊಳ್ಳುತ್ತಾ, ನಗರ ಮಧ್ಯೆ 3 ಅಂತಸ್ತುಗಳ ಭವ್ಯ ಬಂಗಲೆ ಕಟ್ಟಿಸಿದ್ದ. ಅಷ್ಟು ಸಾಲದೆಂಬಂತೆ ನಗರದಲ್ಲಿ ಹತ್ತಾರು ಕಡೆ ಮನೆ ಕಟ್ಟಿಸಿ, ಬಾಡಿಗೆಗೆ ಬಿಟ್ಟು ಲಕ್ಷಾಂತರ ವಸೂಲಿ ಮಾಡುತ್ತಿದ್ದ. ಅವನ ಭವ್ಯ ಆಕಾರ, ಬೊಜ್ಜಿನ ದೇಹವೇ ಎಂಥ ಸುಖೀ ಮನುಷ್ಯ ಎಂದು ಸಾರುತ್ತಿತ್ತು.

ಸರ್ಕಾರಿ ಕೆಲಸ ಮಾಡಿಸಿಕೊಡಿ ಎಂದು ದೀನನಾಗಿ ಬೇಡುತ್ತಿರುವ ಈ ಆಸಾಮಿಯನ್ನು ಆಪಾದಮಸ್ತಕ ನೋಡಿದ ಆತ, ಇದು ನಿರುಪದ್ರವಿ ಜೀವಿ ಎಂದರಿತ. ಈ ಮಿಕವನ್ನು ಬೇರೆ ರೀತಿಯೇ ಡೀಲ್ ಮಾಡಬೇಕು ಎಂದುಕೊಂಡ ಆ ಘನಂದಾರಿ ಎಂಜಿನಿಯರ್, “ನೋಡಿ, ಇಲ್ಲಿ ಇಂಥ ಸಾವಿರಾರು ಅರ್ಜಿಗಳು ಬಿದ್ದಿವೆ. ನಿಮ್ಮದು ಪಾಸ್‌ ಆಗಬೇಕೂಂದ್ರೆ ನನ್ನನ್ನು ಮನೆಯಲ್ಲಿ ಭೇಟಿ ಮಾಡಿ. ಪರ್ಸನಲ್ ಆಗಿ ಅನಲೈಸ್‌ ಮಾಡಿ ಸರಿಪಡಿಸೋಣ. ಪಾಪ, ನೋಡಿದ್ರೆ ನೀವು ನಿಷ್ಠಾವಂತ ಅಧಿಕಾರಿ ಅನಿಸುತ್ತೆ.”

ಬೇರೆ ದಾರಿ ಇಲ್ಲದೆ ಶಶಾಂಕ್‌ ಮಾರನೇ ದಿನ ಆ ಮಹಾಶಯನ ಮನೆ ಹುಡುಕಿಕೊಂಡು ಓ ಲಕ್ಷ್ಮಣ ಎಂದು ಆಟೋದಲ್ಲಿ ಊರೆಲ್ಲ  ಸುತ್ತಾಡಿ ಆತನ ಭವ್ಯ ಬಂಗಲೆ ಎದುರು ಬಂದಿಳಿದ. ಹೊರಗಿನಿಂದ ಆ ಬಂಗಲೆಯ ಭವ್ಯತೆ ಕಂಡು  ಹಿಂಜರಿದ ಈ ಮೂಕಪ್ರಾಣಿ, ಇಲ್ಲಾದರೂ ಈ ಆಸಾಮಿ ತನ್ನ ಕೆಲಸ ಮಾಡಿಕೊಡಲಪ್ಪ, ಲಂಚ ಏನಾದರೂ ಜಾಸ್ತಿ ಕೇಳಿಬಿಟ್ಟರೆ ಏನು ಮಾಡುವುದು….? 12 ಸಾವಿರದಲ್ಲಿ ತೂಗಲಿ ಎಂದು ಮನದಲ್ಲೇ ಪ್ರಾರ್ಥಿಸುತ್ತಾ, ತನ್ನ ಕಡತ ಸರಿಪಡಿಸಿಕೊಂಡು ಹೋಗಿ ಆ ಬಂಗಲೆ ಬೆಲ್ ಬಾರಿಸಿದ.

ಒಳಗಿನಿಂದ ಬಂದ ಆವಳು ಇವನಿಗೆ ನೀರು ಕೊಟ್ಟು, ವಿಸಿಟಿಂಗ್‌ ಕಾರ್ಡ್‌ ಪಡೆದು, ಸಾಹೇಬರು ಒಳಗೆ ಮೀಟಿಂಗ್‌ನಲ್ಲಿ ಬಿಝಿ ಇದ್ದಾರೆ. ಸ್ವಲ್ಪ ಹೊತ್ತು ಕುಳಿತಿರಿ, ಕರೆಯುತ್ತಾರೆ ಎಂದು ಹೇಳಿ ಹೊರಟುಹೋದ. ಶಶಾಂಕ್‌ ಬಂದ ದಾರಿಗೆ ಸುಂಕವಿಲ್ಲ ಎಂದುಕೊಳ್ಳುತ್ತಾ, ಆ ಇಡೀ ಕೋಣೆಯ ಅಂದ ಚೆಂದ ವೀಕ್ಷಿಸುತ್ತಾ ಕುಳಿತ. 15 ನಿಮಿಷ, ಅರ್ಧ ಗಂಟೆ ಅಲ್ಲ…. ಮುಕ್ಕಾಲು ಗಂಟೆ ಕಾಲ ಕಾದರೂ ಆಸಾಮಿಯ ಪತ್ತೆಯೇ ಇಲ್ಲ. ಕಾದೂ ಕಾದೂ ಸಾಕಾದ ಶಶಾಂಕ್‌ ಅಲ್ಲಿಂದ ಎದ್ದು ಹೊರಡೋಣ ಎಂದೇ ತೀರ್ಮಾನಿಸಿದ.

‌ಆ ಸೀನಿಯರ್‌ ಎಂಜಿನಿಯರ್‌ ಮನೆಯಲ್ಲಿ ಕಾದು ಕುಳಿತ ಶಶಾಂಕನಿಗೆ ಎಷ್ಟು ಹೊತ್ತಿಗೂ ಅವರ ದರ್ಶನ ಸಿಗಲೇ ಇಲ್ಲ. ಸಾಕು ಇಷ್ಟು ಹೊತ್ತು ಕಾದದ್ದು, ಎದ್ದು ಹೊರಡೋಣ ಎಂದು ಅವನು ಏಳುವಷ್ಟರಲ್ಲಿ ಆ ಹಾಲ್‌‌ಗೆ ಹಾಕಲಾಗಿದ್ದ ಪರದೆ ಸರಿಸಿಕೊಂಡು ಒಬ್ಬ ಬೆಳ್ಳಗಿನ ತುಸು ಅಧಿಕವೇ ಮೈ ತುಂಬಿಕೊಂಡ ಪ್ರೌಢ ಕನ್ಯೆಯೊಬ್ಬಳು ಅವನ ಎದುರಿಗೆ ಕೈಯಲ್ಲಿ ಕಾಫಿ ತಿಂಡಿ ಟ್ರೇ ಹಿಡಿದು ಪ್ರತ್ಯಕ್ಷಳಾದಳು. ಅವಳ ವಯಸ್ಸು 30ರ ಹತ್ತಿರವಿರಬಹುದು. ವೈಯಾರವಾಗಿ ಬಳುಕುತ್ತಾ ಟ್ರೇ ತಂದು ಅವನ ಎದುರಿನ ಟೀಪಾಯಿ ಮೇಲಿರಿಸುತ್ತಾ, “ಅಪ್ಪಾಜಿ ಬರುವವರೆಗೂ ದಯವಿಟ್ಟು ಈ ಅಲ್ಪಾಹಾರ ಸ್ವೀಕರಿಸಿ. ಯಾರೋ ಮಿನಿಸ್ಟರ್‌ ಕಡೆಯವರು ಬಂದಿರುವುದರಿಂದ ಮೀಟಿಂಗ್‌ ತಡವಾಗುತ್ತಿದೆಯಂತೆ. ನಿಮ್ಮ ಆತಿಥ್ಯ ಗಮನಿಸಿಕೊಳ್ಳಬೇಕೆಂದು ಅವರ ಮಗಳಾದ ನನಗೆ ಇಂಟರ್‌ ಕಾಮ್ ನಲ್ಲಿ ತಿಳಿಸಿದರು,” ಎಂದಳು ಭಾನುಮತಿ.

ತಾನು ಮನೆ ರಿಪೇರಿ ಸ್ಯಾಂಕ್ಷನ್‌ ವಿಷಯ ಕೇಳಲು ಬಂದರೆ, ಆ ಸೀನಿಯರ್‌ ತಮ್ಮ ಮಗಳನ್ನೇ ತನಗೆ ಸ್ಯಾಂಕ್ಷನ್‌ ಮಾಡುವ ಹುನ್ನಾರ ನಡೆಸಿದ್ದಾರಲ್ಲ ಎನಿಸಿತು.

“ನಾನು ಭಾನುಮತಿ…. ಭಾನು ಎಂದೇ ಕರೆಯಿರಿ, ನಮ್ಮ ಮನೆಯಲ್ಲಿ ಎಲ್ಲರೂ ಹಾಗೇ ಕರೆಯುತ್ತಾರೆ. ನೀವು ಈ ಸಜ್ಜಿಗೆ ಟೇಸ್ಟ್ ಮಾಡಲೇ ಇಲ್ಲ, ಹಾಗೇ ಆಲೂ ಬಜ್ಜಿ ಸಹ ತಗೊಳ್ಳಿ. ನನ್ನ ಕೈಯಾರೆ ನಾನೇ ಮಾಡಿದ್ದು. ಹೇಗಿದೆ ಹೇಳಿ,” ಎಂದು ಉಪಚರಿಸುತ್ತಾ, ಕಾಫಿ ಜೊತೆ ತುಪ್ಪದಲ್ಲಿ ಹುರಿದ ಖಾರದ ಗೋಡಂಬಿ ಕೊಡುತ್ತಾ ಅಗತ್ಯಕ್ಕಿಂತ ಹೆಚ್ಚಾಗಿಯೇ ಉಪಚರಿಸತೊಡಗಿದಳು.

`ಅಯ್ಯೋ ಕರ್ಮವೇ…. ತಾನೆಂಥ ಖೆಡ್ಡಾದಲ್ಲಿ ಸಿಕ್ಕಿಕೊಳ್ಳಲಿದ್ದೇನೆ,’ ಎಂದು ಹಪಹಪಿಸತೊಡಗಿದ. ಅತ್ತ ಹೆತ್ತವರು ತನ್ನ ಮದುವೆಯ ತರಾತುರಿಯಲ್ಲಿದ್ದರೆ ಇತ್ತ ಈ ಎಂಜಿನಿಯರ್‌ ಮಹಾಶಯ ತನ್ನ ಮಗಳನ್ನು ಶಶಾಂಕನಿಗೆ ಕಟ್ಟಲು ಈ ಸಂಚು ನಡೆಸಿದ್ದ. ಒಟ್ಟಾರೆ ಅತ್ತ ದರಿ, ಇತ್ತ ಪುಲಿ ಎಂಬಂತಾಗಿತ್ತು ಶಶಾಂಕ್‌ನ ಸ್ಥಿತಿ.

ಈ ಮಧ್ಯೆ ಭಾನುಮತಿಗೆ ಒಳಗಿಂದ ಕಾಲ್ ‌ಬಂತು. ಅವಳು ಹ್ಞಾಂ…ಹ್ಞೂಂ…. ಎನ್ನುತ್ತಾ ಅವನು ತಿಂದು ಮುಗಿಸುವವರೆಗೂ ಅಲ್ಲಿಂದ ತಾನು ಏಳುವುದಿಲ್ಲ ಎಂಬಂತೆ ತಟ್ಟೆಯನ್ನೊಮ್ಮೆ, ಅವನನ್ನೊಮ್ಮೆ ನೋಡುತ್ತಾ ಇದ್ದುಬಿಟ್ಟಳು. ವಿಧಿಯಿಲ್ಲದೆ ಅವನು ಗಟಗಟ ಆ ಕಾಫಿ ಕುಡಿದು, ತಿಂಡಿ ತಿಂದ ಶಾಸ್ತ್ರ ಮಾಡಿ, ಕೈ ತೊಳೆಯಲು ಎದ್ದಾಗ, ಒಳಗೆ ವರಾಂಡದ ಸಿಂಕ್‌ ಬಳಿ ಕರೆದೊಯ್ದಳು. ಅಂತೂ ತಾತ್ಕಾಲಿಕ ಗಂಡಾಂತರದಿಂದ ಅವನು ಪಾರಾದ ಎಂಬ ಸೂಚನೆಯಂತೆ ಆ ಮಹಾತಾಯಿ ಉಳಿದದ್ದನ್ನು ಒಳಗೆ ಕೊಂಡೊಯ್ದಳು.

ಈಗ ಇಲ್ಲಿಂದ ಎದ್ದು ಹೋಗುವ ಹಾಗಿಲ್ಲ, ಇವರ ಅನ್ನದ ಋಣಕ್ಕೆ ಸಿಕ್ಕಿಬಿದ್ದೆ. ಆ ಮಹಾಶಯರನ್ನು ಮಾತನಾಡಿಸದೇ ಹಾಗೆ ಹೋಗಿಬಿಟ್ಟರೆ, ಈ ಜನ್ಮದಲ್ಲಿ ತನಗೆ ಸರ್ಕಾರಿ ಖರ್ಚಿನಲ್ಲಿ ಮನೆ ರಿಪೇರಿ ಆಗದು, ಅಷ್ಟು ಮಾತ್ರವಲ್ಲ, ಮುಂದೆ ಇನ್ನೂ ಹಲವಾರು ಉಪದ್ರವಗಳು ಶುರುವಾಗಬಹುದು ಎಂದು ಹಲ್ಲುಕಚ್ಚಿ ಕಾಯುತ್ತಾ ಕುಳಿತ. ಅವರು ಪರಿಶೀಲನೆಗೆ ಸಿಬ್ಬಂದಿ ಕಳಿಸದೆ, ಆಗುವ ಕೆಲಸಕ್ಕೆ ಇನ್ನಷ್ಟು ಕಲ್ಲು ಹಾಕಿದರೆ ತನ್ನ ಗತಿ ಗೋವಿಂದಾ….. ಜೊತೆಗೆ ಇದೆಲ್ಲಾದರ ಖರ್ಚು ತಾನೇ ಭರಿಸಲು ವಿದೇಶಕ್ಕೆ ಹೊರಟ ತಂದೆಯನ್ನು ಖಂಡಿತಾ ಕೇಳಲಾಗದು ಎಂದವನಿಗೆ ಗೊತ್ತಿತ್ತು.

ಅಂತೂ ಕೊನೆಗೆ ಆ ಸೀನಿಯರ್‌ ಎಂಜಿನಿಯರ್‌ ಮಹಾಶಯರು ಬಂದು ಕುಳಿತಾಯಿತು. ಅವರು ಇವನನ್ನು ನೋಡಿದ ಮೊದಲ ನೋಟದಲ್ಲೇ, `ನಿನಗೆ ಡೀಲ್ ‌ಅರ್ಥವಾಯಿತು ತಾನೇ….? ಈ ನನ್ನ ಮಗಳನ್ನು ಮದುವೆಯಾಗಿ ನೀನು ಬೇಕಾದ್ದು ವರ ಪಡೆದುಕೋ!’ ಎಂಬಂತಿತ್ತು. ಅವರ ಆಶಯವನ್ನು ಅಷ್ಟು ಮಾತ್ರ ಅರ್ಥ ಮಾಡಿಕೊಳ್ಳಲಾರದಷ್ಟು ಶಶಾಂಕ್‌ ದಡ್ಡನಾಗಿರಲಿಲ್ಲ.

“ನೋಡಿ ಶಶಾಂಕ್‌, ಇವಳು ನನ್ನ ಒಬ್ಬಳೇ ಮಗಳು ಭಾನು. ಬೇರೆ ಯಾರೂ ಗಂಡು ಮಕ್ಕಳೂ ಇಲ್ಲ. ಇವಳಿಗೆ ಓದಿನಲ್ಲಿ ಹೆಚ್ಚಿನ ಆಸಕ್ತಿ ಇರಲಿಲ್ಲ. 10ನೇ ತರಗತಿ ದಾಟಲಾರದೆ ಮನೆಯಲ್ಲೇ ಉಳಿದಳು. ಇವಳ ತಾಯಿ ಚಿಕ್ಕ ವಯಸ್ಸಿನಲ್ಲೇ ತೀರಿಕೊಂಡದ್ದರಿಂದ ಅತಿ ಮುದ್ದಿನಿಂದ ಬೆಳೆಸಿದ್ದೇನೆ. ಎರಡನೇ ಮದುವೆ ಮಾಡಿಕೊಂಡೆ, ಇವಳಿಗೆ ಮಲತಾಯಿ ಬಂದಳು, ಅವಳಿಗೂ ಮಕ್ಕಳಾಗಲಿಲ್ಲ. ಮಲತಾಯಿ ಪ್ರೀತಿ ಸಿಗದೆ ಸದಾ ಡಿಪ್ರೆಶನ್‌ಗೆ ಹೋಗಿ ಹೆಚ್ಚಿಗೆ ತಿಂದುಂಡು ಸ್ವಲ್ಪ ಗುಂಡಾಗಿಬಿಟ್ಟಳು.

“ಇಂಥ ಸುಕುಮಾರಿಯಾಗಿ ಬೆಳೆದವಳು ಗೃಹಿಣಿಗೆ ಬೇಕಾದ ಮನೆಗೆಲಸ ಕಲಿಯಲಿಲ್ಲ. ಅದರ ಅಗತ್ಯವಾದರೂ ಏನು? ಅಡುಗೆಯವರಿಂದ ಹಿಡಿದು ಮನೆ ತುಂಬಾ ಆಳುಕಾಳು ಇದ್ದಾರೆ. ನೀವು ಮದುವೆಗೆ ಹ್ಞೂಂ ಅಂದುಬಿಡಿ, ನೀವು ಇಂಥದ್ದು ಬೇಕು ಎಂದು ಕೇಳುವ ಮೊದಲೇ ನಿಮ್ಮ ಮನೆಯವರಿಗೆ ಮೆಚ್ಚುಗೆ ಆಗುವಷ್ಟು ಲಕ್ಷಾಂತರ ಖರ್ಚು ಮಾಡಿ ಬೇಕಾದ್ದು ಕೊಟ್ಟು ಗ್ರಾಂಡಾಗಿ ಮದುವೆ ಮಾಡಿಕೊಡ್ತೀನಿ. ಇನ್ನೇನು ಬೇಕು? ಈಗ ನೀವು ಹೇಳಿ…..”

ಶಶಾಂಕ್‌ಗೆ ಸಿರಿತನದ ಕೊರೆತದ ಜಡಿಮಳೆ ನಿಂತಂತಾಯಿತು. ಅಪ್ಪಿತಪ್ಪಿ ಅವನು, “ನನಗಿನ್ನೂ 26 ಅಷ್ಟೆ….. ಇಷ್ಟು ಬೇಗ ಮದುವೆ ಯೋಚನೆ ಇಲ್ಲ….” ಎಂದುಬಿಟ್ಟ.

“ಹೌದು, ಅವಳಿಗೀಗ 30. ಆದರೆ ಇಂದಿನ ಮಾಡರ್ನ್‌ ಯುವಕರು ನೀವು, ಈ ಕಂದಾಚಾರಗಳಿಗೆಲ್ಲ ತಲೆ ಕೆಡಿಸಿಕೊಳ್ಳುವವರಲ್ಲ ಎಂದು ನನಗೆ ಚೆನ್ನಾಗಿ ಗೊತ್ತು. ನಿಮಗೆ ಏನೇನು ಬೇಕು, ಅದನ್ನು ಪಟ್ಟಿ ಮಾಡಿ ಹೇಳಿಬಿಡಿ ಸಾಕು.”

“ಸಾರ್‌….. ಮತ್ತೆ ನನ್ನ ಅರ್ಜಿ…. ಆ ಕ್ವಾರ್ಟರ್ಸ್‌ ಮನೆಯ ರಿಪೇರಿ…. ಆದಷ್ಟು ಬೇಗ ಅದನ್ನು ಮಾಡಿಸಿ ಕೊಟ್ಟುಬಿಡಿ,” ಎಂದು ಕೈ ಮುಗಿದ.

“ಅಯ್ಯೋ…. ನಾನು ಇಷ್ಟು ಹೇಳಿದ ಮೇಲೂ ನಿಮಗೆ ಅರ್ಥಾಗಲಿಲ್ಲವೇ? ಸುಕುಮಾರಿಯಂಥ ನನ್ನ ಮಗಳು ಆ ನಿಮ್ಮ ದರಿದ್ರದ ಕ್ವಾರ್ಟರ್ಸ್‌ ಮನೆಯಲ್ಲಿ ಕಾಲಿಡುತ್ತಾಳೆಯೇ? ಮುಹೂರ್ತ ಒಂದು ಫಿಕ್ಸ್ ಮಾಡಿಸಿ….. ನೀವು ಹೇಳಿದ ಕಡೆ ಸದಾಶಿನಗರ, ಜಯನಗರ, ಕೋರಮಂಗಲಾ ಅಂತ ಬೇಕಾದ ಕಡೆ ಭವ್ಯ ಬಂಗಲೆ, ನೀವು ಬಯಸುವ ಭರ್ಜರಿ ಕಾರು ಇತ್ಯಾದಿ ರಿಜಿಸ್ಟರ್‌ ಮಾಡಿಸಿ ಕೊಡುತ್ತೇನೆ. ಮನೆಯ ಆಳು ಕಾಳು, ಇನ್ನಿತರ ಯಾವ ವಿಷಯಕ್ಕೂ  ನೀವು ಚಿಂತಿಸಬೇಡಿ. ನಿಮ್ಮ ಪಾಡಿಗೆ ಹಾಯಾಗಿ ಕೆಲಸಕ್ಕೆ ಹೋಗಿ ಸೈನ್‌ ಮಾಡಿ ಬನ್ನಿ. ಇನ್ನೊಂದು ಪ್ರಾಣಿಯನ್ನು ನಿಮ್ಮ ಜಾಗಕ್ಕೆ ಹಾಕಿಸಿ ಕೆಲಸ ತೆಗೆಸಿದರಾಯಿತು. ಮುಖ್ಯ ನೀವು ನನ್ನ ಅಳಿಯನಾಗಬೇಕು,” ಎಂದು ಎಲ್ಲಾ ವಿವರಗಳನ್ನೂ ಒಂದೇ ಉಸಿರಿನಲ್ಲಿ ವಿವರಿಸಿದರು.

“ಸಾರ್‌, ನಾನು ನನ್ನ ತಾಯಿ ತಂದೆಗೆ ಒಬ್ಬನೇ ಮಗ. ಈಗಾಗಲೇ ಅವರು ಬೇರೊಂದು ಕಡೆ ಹುಡುಗಿ ನೋಡ್ತಿದ್ದಾರೆ. ಆದರೂ….. ನಿಮ್ಮ ವಿಷಯ ತಿಳಿಸಿ ಅವರಿಂದ ಅನುಮತಿ ಪಡೆಯುವೆ. ಸದ್ಯಕ್ಕೆ ಈ ಫೈಲ್ ‌ನೋಡಿ ತಾವು ಪಾಸ್‌ ಮಾಡಿಸಿಕೊಡಿ,” ಎಂದು ತನ್ನ ಅರ್ಜಿ ಕಡತ ಅವರಿಗೆ ನೀಡಿದ.

ಎಡಗೈಲಿ ಅದನ್ನು ಪಡೆದು ನೋಡಿದ ಶಾಸ್ತ್ರ ಮಾಡಿ ಸೋಫಾ ಮೂಲೆಗೆ ಅದನ್ನೆಸೆದ ಅವರು ಹುಡುಗನಿಗೆ ಮೊದಲ ದಿನ ಇಷ್ಟು ಶಾಕ್‌ ಸಾಕು ಎಂಬಂತೆ, “ಹ್ಞಾಂ…. ಹ್ಞಾಂ…. ಹಿರಿಯರ ಆಶೀರ್ವಾದದಿಂದ ಈ ಮದುವೆ ಶಾಸ್ತ್ರೋಕ್ತವಾಗಿ ನಡೆಯಬೇಕು. ಬಂಧು ಬಳಗದೊಡನೆ ನಿಮ್ಮೂರಿನವರನ್ನೆಲ್ಲ ಈ ಮದುವೆಗೆ ಕರೆತರಲು ಹೇಳಿ. ಅವರದು ಬೇರೇನೇ ಡಿಮ್ಯಾಂಡ್‌ ಇದ್ದರೂ ಈ ವಾರದಲ್ಲೇ ಪೂರೈಸೋಣ. ನೀವು ಹ್ಞೂಂ ಅಂದ್ರೆ ಟ್ಯಾಕ್ಸಿ ಕಳಿಸಿ ಮುಂದಿನ ಭಾನುವಾರ ಅವರನ್ನು ಇಲ್ಲಿಗೆ ಕರೆಸಿಬಿಡೋಣ, ಹುಡುಗಿ ನೋಡಿದ ಶಾಸ್ತ್ರ ಆಗಿಹೋಗಲಿ…..”

“ಸಾರ್‌, ತಾವು ನನ್ನ ಫೈಲ್ ‌ಮರೆಯಬಾರದು.”

“ಆಯ್ತು….ಆಯ್ತು…. ಇವತ್ತೇ ನಿಮ್ಮ ತಂದೆಯವರ ಜೊತೆ ಮಾತನಾಡಿ. ಉಳಿದದ್ದು ನನಗೆ ಬಿಡಿ,” ಎಂದು ಕೈ ಮುಗಿದು ಅವರು ಒಳಗೆ ಹೊರಟರು. ಶಶಾಂಕ್‌ ಬದುಕಿದೆಯ ಬಡ ಜೀವವೇ ಎಂದು ಅಲ್ಲಿಂದ ಹೊರಟೇಬಿಟ್ಟ.

ತನಗಾಗಿ ಒಬ್ಬ ವಿದ್ಯಾವಂತ, ಸುಂದರ, ಅರ್ಥ ಮಾಡಿಕೊಳ್ಳುವ ಮನೋಭಾವದ, ಸಾದಾಸೀದಾ ಸರಳ ಹುಡುಗಿಯನ್ನಷ್ಟೇ ಅವನು ಸಂಗಾತಿಯಾಗಿ ಬಯಸಿದ್ದ. ಈ ಭಾರಿ ಪ್ಯಾಕೇಜ್‌ ಡೀಲ್ ಅವನಿಗೆ ನುಂಗಲಾರದ ಬಿಸಿ ತುಪ್ಪಾಗಿತ್ತು. ಅಮ್ಮಾವ್ರ ಗಂಡನಾಗಿ ಜೀವನ ಪರ್ಯಂತ ಮಾವನ ಮನೆಯಲ್ಲಿ ಬಾಲ ಆಡಿಸುತ್ತಾ ಬಿದ್ದಿರುವ ಗುಲಾಮ ಅಳಿಯನ ಚಿತ್ರಣ ಅವನಿಗೆ ಖಂಡಿತಾ ಸಹನೀಯವಾಗಲಿಲ್ಲ. ಅದರಲ್ಲೂ ತನಗೆ ಅಕ್ಕನಂಥ ಆ ಹೆಣ್ಣನ್ನು ಮದುವೆಯಾಗುವ ಕಲ್ಪನೆಯೇ ಅವನ ರೊಮ್ಯಾಂಟಿಕ್ ಮೂಡ್‌ನ್ನು ಮೂಲೆಗುಂಪಾಗಿಸಿತ್ತು. ಹಾಗೆಂದು ನೇರವಾಗಿ ಆ ಸಾಹೇಬನನ್ನು ಎದುರು ಹಾಕಿಕೊಳ್ಳಲಾರದೆ ಮುಂದೆ ನೋಡೋಣ ಎಂದು ಅದು ಇದು ಕೆಲಸದ ಮಧ್ಯೆ 1 ವಾರ ಕಳೆದೇಬಿಟ್ಟ. ಆ ಸಾಹೇಬರಿಗೆ ಮತ್ತೆ ಫೋನ್‌ ಮಾಡುವ ಗೊಡವೆಗೆ ಹೋಗದಿದ್ದಾಗ, ಅವರಿಗೆ ಇವನ ಮರ್ಜಿ ಅರ್ಥವಾಯಿತು.

ಅದರ ಮರು ವಾರ ನೈಟ್‌  ಡ್ಯೂಟಿ. ಆ ಕಷ್ಟ ಹೇಗೋ ಎದುರಿಸಿ, ಇನ್ನು ಸರ್ಕಾರಿ ವತಿಯಿಂದ ತನಗೆ ಅಲಾಟ್‌ ಆದ ಮನೆ ಎಂದೂ ರಿಪೇರಿ ಆಗಲಾರದು ಎನಿಸಿ, ಒಬ್ಬ ಆಳಿನ ಜೊತೆ ಮಾತನಾಡಿ, ತುಸು ಸಿಮೆಂಟ್‌, ಮರಳು ಇತ್ಯಾದಿಗಳೊಡನೆ ಹೇಗೋ ಇರುದರಲ್ಲೇ ಸಾರಿಸಿಕೊಳ್ಳೋಣ, ಅತಿ ಅಗತ್ಯದ ರಿಪೇರಿ ಟಚ್‌ ಮಾಡಿಸೋಣ ಎಂದು 10 ಸಾವಿರ ಖರ್ಚು ಮಾಡಿ ಬೇಕಾದ ಸಾಮಗ್ರಿ, ಇಬ್ಬರು ಆಳುಗಳ ಜೊತೆ ಆ ಕ್ವಾರ್ಟರ್ಸ್‌ ಮನೆಗೆ ಹೋದ.ರಾಂಡ ಬಳಿ ಬಂದು ಬಾಗಿಲು ತೆರೆಯಲು ಬೀಗದಕೈಗಾಗಿ ಜೇಬಿನಲ್ಲಿ ತಡಕಾಡುತ್ತಾನೆ, ಅಷ್ಟರಲ್ಲಿ ಒಳಗಿನಿಂದ ಕೋಾಹಲ ಕೇಳಿ ಬಂತು. ಬಾಗಿಲು ಅರೆ ತೆರೆದಿತ್ತು! ಒಳಗಿನ ಕೋಣೆಯಿಂದ ಅಟ್ಟಹಾಸದ ನಗು ಕೇಳಿ ಬರುತ್ತಿತ್ತು. ಅದರ ಜೊತೆ ಅಶ್ಲೀಲ, ಅಾಚ್ಯ ನುಡಿಗಳು ಕೇಳಿಬಂದ. ಒಳಗೆ ಹೋಗಿ ನೋಡುತ್ತಾನೆ, ಜಮಖಾನ ಹಾಕಿಕೊಂಡು ನಾಲ್ವರು ಗೂಂಡಾಗಳು ಹೆಂಡ, ಮಾಂಸ ಇರಿಸಿಕೊಂಡು ಇಸ್ಪೀಟ್‌ ಆಡುತ್ತಾ ಕೇಕೆ ಹಾಕುತ್ತಿದ್ದರು. ಸಾಲದೆಂಬಂತೆ ಇಬ್ಬರು ಬಾರ್‌ ಗರ್ಲ್ಸ್ ಅವರಿಗೆ ಬೇಕಾದ್ದು ಸಪ್ಲೈ ಮಾಡುತ್ತಾ ಕೋಣೆ ತುಂಬಾ ನಲಿದಾಡುತ್ತಿದ್ದರು.

ಶಶಾಂಕನಿಗೆ ಮೈಯೆಲ್ಲ ಉರಿದುಹೋಯಿತು, “ಏ ಏನ್ರಿ ಇದು…. ಯಾರ್ರೀ ನೀವು? ನನ್ನ ಮನೆಯಲ್ಲಿ ಇದೇನು ನಡೆಸಿದ್ದೀರಿ….?”

ಅವರಲ್ಲಿ ಒಬ್ಬಾತ ಗಹಗಹಿಸಿ ನಗುತ್ತಾ, “ಸ್ಟೇಷನ್‌ ಮಾಸ್ಟರೇ…. ಮನೆಯ ಒಂದು ಕೀ ಮಾತ್ರ ನಿಮ್ಮ ಹತ್ತಿರ…. ಬೇರೊಂದು ಡಿಪಾರ್ಟ್‌ಮೆಂಟ್‌ ಅಡ್ಮಿನ್‌ ಆಫೀಸ್‌ನಲ್ಲಿರುತ್ತೆ ಅಂತ ಮರೆತುಬಿಟ್ಟಿದ್ರಾ?”

“ಏನದು ಹಾಗಂದ್ರೆ? ಯಾರ್ರೀ ನಿಮಗೆ ಆ ಕೀ ಕೊಟ್ಟಿದ್ದು?”

“ಓ….. ನಿಮಗೆ ಅದೆಲ್ಲ ಗೊತ್ತಿಲ್ವೇ….. ಸ್ಟೇಷನ್‌ ಮಾಸ್ಟರೆ….. ಏ ಲಿಲ್ಲಿ ಡಾರ್ಲಿಂಗ್‌, ಸ್ವಲ್ಪ ಸಾರ್‌ ಹತ್ತಿರ ಹೋಗಿ ಅದರ ವಿವರ ಹೇಳು…..” ಎಂದು ಇನ್ನೊಬ್ಬ ಗೂಂಡ ಗಹಗಹಿಸಿದ.

ಆಗ ಒಬ್ಬಳು ವೈಯಾರಿ ಬಂದು ಶಶಾಂಕ್‌ನನ್ನು ಬಳಸಿ ಹಿಡಿದುಕೊಳ್ಳಲು ಯತ್ನಿಸಿದಳು. ಮೈ ಮೇಲೆ ಹಾವು ಚೇಳು ಬಿದ್ದಂತೆ ಅವಳಿಂದ ಬಿಡಿಸಿಕೊಳ್ಳುತ್ತಾ, “ಮೊದಲು ತೊಲಗಿ ಹೋಗ್ರೋ ಇಲ್ಲಿಂದ!” ಎಂದು ಕಿರುಚಿದ ಶಶಾಂಕ್‌.

ಮತ್ತೊಬ್ಬ ಹುಡುಗಿ ಬೀಳಲಿದ್ದ ಅವನನ್ನು ಹಿಡಿದುಕೊಳ್ಳಲು ತೋಳಿಂದ ಬಳಸಿದಾಗ, ಇವರಿಬ್ಬರ ಫೋಟೋ ಕ್ಲಿಕ್ಕಿಸಲು ಮತ್ತೊಬ್ಬ ಧಾಂಡಿಗ ಸಜ್ಜಾದ. ಕ್ಷಣ ಮಾತ್ರದಲ್ಲಿ ಶಶಾಂಕನಿಗೆ ತಾನೆಂಥ ಕೊಳಚೆಯಲ್ಲಿ ಸಿಕ್ಕಿಬೀಳಲಿದ್ದೇನೆ ಎಂದು ಅರ್ಥವಾಗಿ, ಶಕ್ತಿಮೀರಿ ಅವಳನ್ನು ತಳ್ಳಿ, ಅಲ್ಲಿಂದ ಹೊರಗೋಡಿದ. ಆ ದರಿದ್ರದ ಫೋಟೋ ಫೇಸ್‌ ಬುಕ್‌ಗೆ ಅಪ್‌ಲೋಡ್‌ ಮಾಡಿ ತನ್ನನ್ನು ಬ್ಲ್ಯಾಕ್‌ ಮೇಲ್ ಮಾಡುತ್ತಾರೆಂದು ಅರ್ಥವಾಯಿತು.

ಇದರಿಂದ ಸಿಟ್ಟಿಗೆದ್ದ ಆ ನಾಲ್ವರು ಧಾಂಡಿಗರೂ ಒಟ್ಟಿಗೆ ಅವನನ್ನು ಆಕ್ರಮಿಸಿ ತದುಕಿದರು. ಇದೇನೂ ಸಿನಿಮಾ ಅಲ್ಲ, ನಿಜ ಜೀವನ. ಪಾಪ, ಒಮ್ಮೆಲೇ ಅವರನ್ನು ಮಣ್ಣುಮುಕ್ಕಿಸಲು ಇವನೇನು ಹೀರೋನೇ? ತನ್ನ ಅಸಹಾಯಕತೆಗೆ ಅವನಿಗೆ ಕಣ್ಣಲ್ಲಿ ನೀರು ಬಂತು. ಈ ನಿರುಪದ್ರವಿ ಪ್ರಾಣಿ ತಮ್ಮನ್ನೇನೂ ಮಾಡದು ಎಂದು ಅವರು ಕೈ ಒದರಿಕೊಂಡು ಮನೆಯೊಳಗೆ ಸೇರಿಕೊಂಡರು.

ಅಲ್ಲಿಂದ ಮುಂದೆ ನಡೆದು ಹೋಗಿ ತಮ್ಮ ಸ್ಟೇಷನ್ನಿನ ಪ್ಲಾಟ್‌ ಫಾರ್ಮ್ ಹತ್ತಿರವಿದ್ದ ಒಂದು ಮರದ ಕೆಳಗಿನ ಬೆಂಚಿನ ಮೇಲೆ ಕುಳಿತುಬಿಟ್ಟ. ದುಃಖ ಉಮ್ಮಳಿಸಿ ಬಂತು. ಏನು ಮಾಡಿದರೆ ಇದೆಲ್ಲ ಸರಿಹೋದೀತು? ಅವನಿಗೆ ಅರ್ಥವಾಗಲಿಲ್ಲ. ಆ ಗೂಂಡಾಗಳು ಅಷ್ಟು ಕೆಟ್ಟ ರೀತಿಯಲ್ಲಿ ವರ್ತಿಸಲು ಅದರ ಹಿಂದೆ ಕಾರಣರಾರು ಎಂಬುದು ಅವನಿಗೆ ಸ್ಪಷ್ಟ ಅರ್ಥವಾಗಿತ್ತು. ಗಾಳಿಯಲ್ಲಿ ಗುದ್ದಿದಂತೆ ಆ ಪುಂಡ ಸೀನಿಯರ್‌ ವಿರುದ್ಧ ಈ ನರಪೇತಲ ಸ್ಟೇಷನ್‌ ಮಾಸ್ಟರ್‌ ಏಕಾಂಗಿಯಾಗಿ ಹೇಗೆ ಹೋರಾಡಬಲ್ಲ? ಇಲ್ಲದಿದ್ದರೆ ಅವನ ಮಗಳನ್ನು ಮದುವೆಯಾಗುವೆ ಎಂದು ಬಲಿ ಆಗಬೇಕಿತ್ತು. ಅದಂತೂ ಅವನಿಗೆ ಸಹಿಸದು. ಏನೂ ತಿಳಿಯದೆ ಅವನು ತಲೆ ಮೇಲೆ ಕೈ ಹೊತ್ತು ಕುಳಿತ. ಆ ಕ್ಷಣ ತನಗೆ ಯಾರಾದರೂ ಸಾಂತ್ವನ ಹೇಳುವವರು ಸಿಗಬಾರದೇ ಎಂದು ಮನ ಮಮ್ಮಲ ಮರುಗಿತು.

ಅದೇ ಸಮಯಕ್ಕೆ ದಿವ್ಯಾ ಮುಂಬೈನಿಂದ ಬೆಂಗಳೂರಿಗೆ ರೈಲಿನಲ್ಲಿ ಬಂದಿಳಿದಿದ್ದಳು. ಇವಳ ಮನೆಗೆ ಹತ್ತಿರವೆಂದು, ಯಶಂತಪುರ ಅಥವಾ ಮೆಜೆಸ್ಟಿಕ್‌ಗೆ ಹೋಗದೆ, ಯಲಹಂಕದ ಈ ಚಿಕ್ಕ ಸ್ಟೇಷನ್‌ನಲ್ಲೇ ಇಳಿದು ಬಂದಿದ್ದಳು. ಇನ್ನೇನು ಪ್ಲಾಟ್‌ ಫಾರ್ಮ್ ಗೇಟ್ ದಾಟಿ ಹೋಗಬೇಕಿದ್ದಳು ಆಕಸ್ಮಿಕವಾಗಿ ಶಶಾಂಕನನ್ನು ಆ ಹತಾಶ ಸ್ಥಿತಿಯಲ್ಲಿ ಕಂಡು ಮಾತನಾಡಿಸಿಕೊಂಡು ಹೋಗೋಣ ಎಂದು ಬಂದಳು.

“ಹಲೋ ಶಶಾಂಕ್‌ ಹೇಗಿದ್ದೀರಿ….?” ಆಕಸ್ಮಿಕವಾಗಿ ಅವಳನ್ನು ಅಲ್ಲಿ ಕಂಡು ಅವನಿಗೆ ತುಸು ಶಾಕ್‌ ಆಯಿತು.

“ಹ್ಞಾಂ….. ಚೆನ್ನಾಗಿದ್ದೀನಿ. ಇದೇನು ನೀವು ಇಲ್ಲಿ…..? ಮುಂಬೈನಲ್ಲಿ ಕೆಲಸ ಸಿಕ್ಕಿತು ಅಂತ ನಿಮ್ಮ ತಂದೆ ಹೇಳಿದಂತಿತ್ತು.”

“ಹೌದು, ಅದು ನಿಜ. ಅಕ್ಕನಿಗೆ ಅಟ್ಯಾಕ್‌ ಬಂದು ಸೀರಿಯಸ್‌ ಆಗಿದೆ, ಅಡ್ಮಿಟ್‌ ಮಾಡಿದ್ದಾರೆ ಅಂತ ಅಪ್ಪಾಜಿ ತಂತಿ ಕೊಟ್ಟರು. ನಿನ್ನೆ ರಾತ್ರಿ ಅಲ್ಲಿಂದ ಹೊರಟು ಸೀದಾ ಬರುತ್ತಿದ್ದೇನೆ. ನೀವು ಹೇಗಿದ್ದೀರಿ? ಇದೇಕೆ ತುಸು ಸೀರಿಯಸ್‌ ಆಗಿ ಕಾಣಿಸ್ತಿದ್ದೀರಿ? ಎನಿಥಿಂಗ್‌ ರಾಂಗ್‌?”

“ಅದೆಲ್ಲ ಏನೂ ಇಲ್ಲ. ವಾರವಿಡೀ ನೈಟ್‌ ಶಿಫ್ಟ್. ನಿನ್ನೆಯಿಂದ ಜ್ವರ. ಬಹಳ ಬೇಸರವಾಗಿ ಇಲ್ಲಿಗೆ ಬಂದಿದ್ದೆ. ನಡೆಯಿರಿ ನಿಮ್ಮನ್ನು ಡ್ರಾಪ್‌ ಮಾಡ್ತೀನಿ,” ಎಂದು ಅವಳ ಲಗೇಜ್‌ ತೆಗೆದು ತನ್ನ ಹೊಂಡಾಕ್ಕೆ ಸೇರಿಸಿದ. ಸಂಕೋಚದಿಂದ ಬೇಡ ಎನ್ನುತ್ತಿದ್ದವಳ ಮಾತು ಕೇಳದೆ ನೇರ ಅವಳನ್ನು ಆಸ್ಪತ್ರೆಗೆ ಕರೆದೊಯ್ದ.

ಅಲ್ಲಿ ನೇರ ಹೃದ್ರೋಗದ ವಿಭಾಗಕ್ಕೆ ಹೋಗಿ, ಮಾಲತಿ ಅಡ್ಮಿಟ್‌ ಆಗಿದ್ದ ವಾರ್ಡ್‌ನಲ್ಲಿ ರಾಯರನ್ನು ಭೇಟಿ ಮಾಡಿದರು. ದುರಾದೃಷ್ಟಕ್ಕೆ ಅಂದು ಬೆಳಗ್ಗೆ ಮಾಲತಿಯನ್ನು ICU ವಾರ್ಡ್‌ಗೆ ಶಿಫ್ಟ್ ಮಾಡಿದ್ದರು. ಕಾರ್ಡಿಯಾಲಜಿಸ್ಟ್ ಸಂಜೆ 5 ಗಂಟೆಗೆ ಬಂದು ಇವರಿಗೆ ವಿವರ ತಿಳಿಸಲಿದ್ದರು.

ಅವರಿಬ್ಬರೂ ಬೆಳಗ್ಗಿನಿಂದ ಹಸಿವಿನಿಂದ ಕಂಗೆಟ್ಟಿದ್ದರೂ ಆಸ್ಪತ್ರೆಯ ಗಂಭೀರ ವಾತಾವರಣಕ್ಕೆ ಸಹಿಸಿಕೊಂಡಿದ್ದರು. ಶಶಾಂಕ್ ಅವರಿಬ್ಬರನ್ನೂ ಬಹಳ ಬಲವಂತಪಡಿಸಿ, ಹತ್ತಿರದ ಹೋಟೆಲ್‌‌ಗೆ ಕರೆದೊಯ್ದು, ಎಲ್ಲರಿಗೂ ಇಡ್ಲಿ ತರಿಸಿದ. ಕಾಫಿ ಕುಡಿದು ಸುಧಾರಿಸಿಕೊಂಡು ಅವರು ಬಂದಾಗ ಕಾರ್ಡಿಯಾಲಜಿಸ್ಟ್ ತಮ್ಮ ಛೇಂಬರ್‌ಗೆ ಬಂದಿದ್ದಾರೆಂದು ತಿಳಿಯಿತು.

ತಮ್ಮ ಸರದಿಗಾಗಿ ಕಾದು ಇವರು ಅಲ್ಲಿ ಒಳಹೊಕ್ಕಾಗ, ಮಾರನೇ ಬೆಳಗ್ಗೆ 7 ಗಂಟೆಗೇ ಒಂದು ಆಪರೇಶನ್‌ ಮಾಡಲೇಬೇಕಿದೆ. 2-3 ಯೂನಿಟ್‌ ರಕ್ತ ಬೇಕಾಗುತ್ತದೆ ಎಂದರು. ಮಾಲತಿ ಗ್ರೂಪ್‌ B ನೆಗೆಟಿವ್ ಅಪರೂಪದ್ದು. ಆಸ್ಪತ್ರೆಯ ಬ್ಲಡ್‌ ಬ್ಯಾಂಕ್‌ನಲ್ಲಿ ಸ್ಟಾಕ್ ಇರಲಿಲ್ಲ. ಆಪರೇಶನ್‌ಗೆ ಎಲ್ಲಾ ಸಿದ್ಧತೆ ನಡೆಸಲಾಯಿತು. ರಾಯರನ್ನು ಹೊರ ಕರೆತಂದ ಶಶಾಂಕ್‌ ಅವರು ಚಿಂತೆ ಮಾಡುವುದು ಬೇಡ, ಗೆಳೆಯರಿಗೆ ಹೇಳಿ 3-4 ಯೂನಿಟ್‌ ರಕ್ತ ಕೊಡಿಸುವ ದಾನಿಗಳನ್ನು  ಕರೆತರುತ್ತೇನೆ ಎಂದ. ಶಶಾಂಕನ ನೆರವಿನಿಂದ ಅವರಿಗೆ ಆನೆಬಲ ಬಂತು. ಹೇಳಿದಂತೆಯೇ ತನ್ನ ಗೆಳೆಯರ ಸಹಾಯ ಪಡೆದೂ ತಾನೂ ಸೇರಿ, 4 ಜನ ಬ್ಲಡ್‌ ಬ್ಯಾಂಕ್‌ನಲ್ಲಿ ರಕ್ತ ಕೊಟ್ಟು ಮಾಲತಿಯ ಆಪರೇಶನ್‌ ಕೊಠಡಿಗೆ ಕಳುಹಿಸಿದರು. ಶಶಾಂಕ್‌ನ ಉದಾರ ಗುಣದ ಮುಂದೆ ತಂದೆ ಮಗಳು ಮೂಕರಾದರು.

ಅದಾಗಿ 1 ವಾರ ಹೋರಾಡಿದ ಮಾಲತಿ ಶಾಶ್ವತ ಕಣ್ಣು ಮುಚ್ಚಿದಳು. ಹುಟ್ಟಿನಿಂದಲೇ ಅವಳ ಹೃದಯದಲ್ಲಿದ್ದ ದೊಡ್ಡ ರಂಧ್ರ ಇಂದು ಅವಳ ಜೀವ ಸೆಳೆದಿತ್ತು. ಶಶಾಂಕ್‌ ತನಗೆ ತಿಳಿದ ಮಟ್ಟಿಗೆ ದಿವ್ಯಾ, ರಾಯರಿಗೆ ಸಮಾಧಾನ ಹೇಳಿದ.

ಹೀಗೆ ಶಶಾಂಕ್‌ ಇವರ ಮನೆಗೆ ಬಂದು ಹೋಗುವುದು ಜಾಸ್ತಿಯಾಯಿತು. ಈಗ ಇವರಿಬ್ಬರೂ ಬಹಳ ಆತ್ಮೀಯರಾಗಿದ್ದರು. ಹಿರೀಮಗಳ ಸಾವು ರಾಯರನ್ನು ಹಣ್ಣಾಗಿಸಿತ್ತು, ಅವರು ದೀರ್ಘ ಮೌನಕ್ಕೆ ಶರಣಾಗಿ ಸದಾ ಮಲಗಿಯೇ ಇರುತ್ತಿದ್ದರು. ಅವರನ್ನು ಬಿಟ್ಟು ಇನ್ನೂ ಮುಂಬೈಗೆ ಹೋಗಲಾಗದೆಂದು ದಿವ್ಯಾ ತನ್ನ ನೌಕರಿಗೆ ರಾಜೀನಾಮೆ ನೀಡಿದಳು.

ಹೀಗೆ ತಿಂಗಳು ಸರಿದು ಹೋಯಿತು. ಶಶಾಂಕ್‌ ತನ್ನ ಮನೆಯ ಕುರಿತಾಗಿ ಚಿಂತಿಸುವುದನ್ನೇ ಬಿಟ್ಟಿದ್ದ. ಹೀಗೆ ಅವರಿಬ್ಬರೂ ಭೇಟಿಯಾದಾಗ ಅವಳ ಬಳಿ ತನ್ನ ಚಿಂತೆ ಹೇಳಿಕೊಳ್ಳಬೇಕೆನಿಸಿದರೂ, ಅವಳೇನು ಮಾಡಿಯಾಳೆಂದು ಸುಮ್ಮನಾಗಿಬಿಟ್ಟ. ರಾಯರನ್ನು ನೋಡಿಕೊಂಡು ಬಂದು ಅವನು ತನ್ನ ಮನೆ ಸೇರಿದ.

ಅಂದು ಏನೋ ಯೋಚಿಸುತ್ತಾ ತಂದೆ ನೋಡಿದ್ದ ಆ ಹುಡುಗಿ ಮನೆಯವರಿಗೆ ಫೋನ್‌ ಮಾಡಿ ಮತ್ತಷ್ಟು ಕಾಲಾವಕಾಶ ಬೇಕೆಂದು ಹೇಳಬಯಸಿದ. ಆ ಕಡೆ ನಂಬರ್‌ ರಿಂಗ್‌ ಆಗುತ್ತಲೇ ಇತ್ತು. ತೆಗೆಯುವವರೇ ಇಲ್ಲ. ಮತ್ತೆರಡು ಸಲ ಪ್ರಯತ್ನಿಸಿ ಸುಮ್ಮನಾದ.

ಮಾರನೇ ದಿನ ಪಾಸ್‌ ರಿನ್ಯೂ ಮಾಡಿಸಲು ದಿವ್ಯಾ ರೈಲ್ವೆ ಸ್ಟೇಷನ್‌ ಕಡೆ ಬಂದಳು. ಅಲ್ಲಿ ಕೌಂಟರ್‌ನಲ್ಲಿ ಶಶಾಂಕ್‌ ಇದ್ದುದನ್ನು ಕಂಡು ದಿವ್ಯಾ ಪ್ರಸನ್ನಳಾದಳು. ಇಷ್ಟು ಸ್ನೇಹ ಬೆಳೆದರೂ ಅವನೇಕೆ ಪ್ರೇಮದ ಪ್ರಸ್ತಾಪ ಮಾಡಲೇ ಇಲ್ಲ ಎಂದು ಖೇದಗೊಂಡಳು.

“ಮುಂಬೈನಿಂದ ಬಂದು ಇಷ್ಟು ದಿನಗಳಾದರೂ ಮತ್ತೆ ಪಾಸ್‌ ಮಾಡಿಸಿರಲಿಲ್ಲವೇ?” ಶಶಾಂಕ್‌ ಕೇಳಿದ.

“ಎಲ್ಲಿ …… ಆಸ್ಪತ್ರೆ ಓಡಾಟವೇ ಆಗಿಹೋಯ್ತು. ಈ ಕಡೆ ಗಮನ ಬರಲೇ ಇಲ್ಲ. ಬೇಗ ಫಾರ್ಮ್ ಕೊಡಿ. ಅಯ್ಯೋ…… ಫೋಟೋ ಮರೆತು ಬಂದಿದ್ದೀನಿ. ಈಗ ಆಗೋದಿಲ್ಲ, ಕೌಂಟರ್‌ ಕ್ಲೋಸ್‌ ಆಗೋ ಟೈಂ ಆಯ್ತು,” ದಿವ್ಯಾ ನೆನಪಿಸಿದಳು.

“ಇರಲಿ, ನೀವು ಫಾರ್ಮ್ ಫಿಲ್ ‌ಮಾಡಿ. ನನ್ನ ಮನೆಗೆ ತಲುಪಿಸಿಬಿಡಿ. ನಾಳೆ ಬೆಳಗ್ಗೆ ಬಂದ ತಕ್ಷಣ ಹೆಡ್‌ಆಫೀಸಿಗೆ ಕಳುಹಿಸುವ ಏರ್ಪಾಡು ಮಾಡ್ತೀನಿ. ನಿಮ್ಮ ಮನೆಯಿಂದ 2 ಸ್ಟಾಪ್‌ ಅಷ್ಟೇ ದೂರ…..” ಎಂದು ವಿಳಾಸ, ಫೋನ್‌ ನಂಬರ್‌ನೀಡಿದ.

“ಎರಡೇನು…. ಬಲು ದೂರ ಆಗಿದ್ರೂ ಬರ್ತಿದ್ದೆ,” ಅಭಿಮಾನದಿಂದ ಹೇಳಿದಳು ದಿವ್ಯಾ. ಯಾವ ರೊಮ್ಯಾಂಟಿಕ್‌ ಮಂದಹಾಸ ಇಲ್ಲದೆ ಅವನು ತನ್ನ ಕೆಲಸದಲ್ಲಿ ತಲ್ಲೀನನಾದ. ಈ ಜಡೆ ಮುನಿ ಇನ್ನೂ ಬದಲಾಗಿಲ್ಲ ಎಂದೇ ಅವಳು ತರ್ಕಿಸಿದಳು.

ಅಂದು ಸಂಜೆ 6 ಗಂಟೆ ಹೊತ್ತಿಗೆ ದಿವ್ಯಾ ಶಶಾಂಕ್‌ನ ಮನೆ ತಲುಪಿದಳು. ಬ್ರಹ್ಮಚಾರಿಯ ಬಿಡಾರ…. ಸುಮಾರಾಗೇ ಇತ್ತು. ಶಶಾಂಕ್‌ ಆಫೀಸಿನಿಂದ ಹಿಂದಿರುಗಿ ಅರ್ಧ ಗಂಟೆ ಆಗಿತ್ತು. ಮುಖ ತೊಳೆದು ತನಗಾಗಿ ಟೀ ಮಾಡುತ್ತಿದ್ದ. ಅವಳನ್ನು ಆದರದಿಂದ ಬರಮಾಡಿ ಕುಳ್ಳಿರಿಸಿ, ಟೀ ಬಿಸ್ಕತ್ತು ತಂದುಕೊಟ್ಟ. ಬಾಡಿಗೆ ಮನೆಗಳ ರೆಂಟ್‌, ಅಡ್ವಾನ್ಸ್ ಎಷ್ಟು ತುಟ್ಟಿಯಾಗಿದೆ ಎಂದು ಲೋಕಾಭಿರಾಮವಾಗಿ ಮಾತನಾಡುತ್ತಿದ್ದರು. ಇದಕ್ಕಿಂತ ಒಳ್ಳೆಯ ಮನೆ ನೋಡಬೇಕೆಂದು ಅವನು ತಿಳಿಸುತ್ತಿದ್ದ.

ಹೊರಗೆ ಯಾರೋ ಕರೆದಂತಾಯಿತು. ಅದಾರೆಂದು ವಿಚಾರಿಸಲು ಹೋದ. ಪಕ್ಕದ ರಸ್ತೆಯ ವಿಳಾಸ ಯಾರೋ ಹುಡುಕುತ್ತಿದ್ದರು. ಶಶಾಂಕ್‌ ಅವರಿಗೆ ವಿವರಿಸುತ್ತಿದ್ದ. ಅಷ್ಟರಲ್ಲಿ ಅವನ ಫೋನ್‌ ರಿಂಗ್‌ ಆಯ್ತು. ಮುಖ್ಯ ಕಾಲ್ ಇರಬಹುದು, ಮೆಸೇಜ್‌ ಮಿಸ್ ಆಗಬಾರದೆಂದು ತಾನೇ ರಿಸೀವ್ ‌ಮಾಡಿದಳು.

ಅವಳು, “ಹಲೋ… ಯಾರು ಮಾತನಾಡುತ್ತಿದ್ದೀರಿ?” ಎಂದು ಕೇಳಿದಳು. ಆ ಕಡೆ ಕೋಪದಿಂದ ಫೋನ್‌ ಕುಕ್ಕಿದಂತಾಯ್ತು.

“ಯಾರದು? ಕಾಲ್ ‌ಬಂದ ಹಾಗಿತ್ತು….” ಒಳ ಬರುತ್ತಾ ಶಶಾಂಕ್‌ ಇವಳನ್ನು ಕೇಳಿದ.

“ಗೊತ್ತಾಗಲಿಲ್ಲ. ನಿಮಗೆ ಮೆಸೇಜ್‌ ಕೊಡೋಣ ಅಂತ ರಿಸೀವ್ ಮಾಡಿದೆ. ಆ ಕಡೆಯಿಂದ ಲೈನ್‌ ಕಟ್‌ ಮಾಡಿದರು.”

ಶಶಾಂಕ್‌ ಆ ನಂಬರ್‌ ಗಮನಿಸಿದಾಗ, ಅದು ತಂದೆ ನೋಡಿದ ಹುಡುಗಿ ರೇವತಿ ಕಡೆಯವರ ನಂಬರ್‌, ಬಹುಶಃ ಲ್ಯಾಂಡ್‌ ಲೈನ್ ನಿಂದ ಮಾಡಿದ್ದಾರೆ ಎಂದು ಅರ್ಥ ಮಾಡಿಕೊಂಡ. ತಕ್ಷಣ ಇವಳ ಮುಂದೆ ಅವರಿಗೆ ಫೋನ್‌ ಮಾಡಿ ಮಾತನಾಡಲು ಸಂಕೋಚವಾಯಿತು.

ಅವನು ಮಾತು ಬದಲಿಸುತ್ತಾ, “ನಿಮ್ಮೊಂದಿಗೆ ಆವತ್ತಿನಿಂದ ಹೇಳಬೇಕೂಂತಿದ್ದೆ. ಒಂದು ಸಮಸ್ಯೆ ಆಗಿದೆ, ನನಗೆ ರೈಲ್ವೆ ಕ್ವಾರ್ಟರ್ಸ್‌ ಮನೆ ಏನೋ ಸ್ಯಾಂಕ್ಷನ್‌ ಆಯ್ತು. ಆದರೆ ಹಾಳು ಕೊಂಪೆ ಆಗಿ ಕೂತಿದೆ ಅದು, 2-3 ರ್ಷದಿಂದ ಅಲ್ಲಿ ಯಾರೂ ವಾಸ ಇರಲಿಲ್ಲವಂತೆ. ನಾನೇ ರಿಪೇರಿ ಮಾಡಿಸೋಣ ಅಂದ್ರೆ 50 ಸಾವಿರ ಇಲ್ಲದೆ ಆಗೋಲ್ಲ…..” ಎಂದು ಪೂರ್ಣ ವಿವರ ತಿಳಿಸಿ ಈಗ ಗೂಂಡಾಗಳು ಅಲ್ಲಿ ಬಂದು ಝಾಂಡಾ ಊರಿದ್ದಾರೆ ಎಂದು ಪೇಚಾಡಿಕೊಂಡ.

“ಹೌದಾ….? ಇಷ್ಟೆಲ್ಲ ಆಗಿಹೋಯ್ತಾ? ನೀವೇನೂ ಚಿಂತೆ ಮಾಡಬೇಡಿ. ನಿಮ್ಮ ಆ ಕ್ವಾರ್ಟರ್ಸ್‌ ಮನೆ ನಂಬರ್‌, ವಿಳಾಸ ಕೊಡಿ. ನಾನೇನಾದರೂ ಮಾಡಲು ಸಾಧ್ಯವಾ ನೋಡ್ತೀನಿ.”

mission-quarter-story2

“ಹೌದೇ…. ಏನಾದರೂ ಆಗಬಹುದೇ? ಬೇರೆ ಬಾಡಿಗೆ ಮನೆ ನೋಡೋದು ಬೇಡ, ಮತ್ತೆ ಮತ್ತೆ ಬದಲಾಯಿಸಬೇಕಲ್ಲ ಅಂತ ಇದರ ರಿಪೇರಿ ಸ್ಯಾಂಕ್ಷನ್‌ಗೆ ನಮ್ಮ ಅಡ್ಮಿನ್‌ ಆಫೀಸ್‌ ಸೀನಿಯರ್‌ ಪಿವಿ ಎಂಜಿನಿಯರ್ಸ್‌ ಭೇಟಿ ಮಾಡಿದ್ರೆ, ಆ ಭೂಪತಿ ಮನೆಗೆ ಕರೆಸಿ ತನ್ನ ಡುಮ್ಮಿ ಮಗಳನ್ನು ನನ್ನ ತಲೆಗೆ ಕಟ್ಟಲು ನೋಡಿದ. ನಾನಂತೂ ಆ ಮನೆಯ ಆಸೆ ಬಿಟ್ಟುಬಿಟ್ಟಿದ್ದೇನೆ. ಇತ್ತ ಡ್ಯೂಟಿಯ ಚಿಂತೆ….. ಅತ್ತ ನೆಮ್ಮದಿಯ ಒಂದು ಮನೆ ಸಿಗುತ್ತಿಲ್ಲ……”

ಈತ ಈ ಸಮಸ್ಯೆಯಲ್ಲಿ ಎಷ್ಟು ಮುಳುಗಿದ್ದಾನೆ, ಹಾಗಾಗಿಯೇ ರೊಮ್ಯಾಂಟಿಕ್‌ ಆಗಲು ಸಾಧ್ಯವಾಗುತ್ತಿಲ್ಲ ಎಂದು ದಿವ್ಯಾ ಗ್ರಹಿಸಿದಳು. ಖಂಡಿತಾ ತನ್ನ ಪರಿಚಿತರ ನೆರವು ಪಡೆದು ಸಹಾಯ ಮಾಡುವೆ ಎಂದು ಭರವಸೆ ನೀಡಿ ಅಲ್ಲಿಂದ ಹೊರಟಳು.

“ಅಂದ್ರೆ…. ಆ ಗೂಂಡಾಗಳನ್ನು ಓಡಿಸುವುದು…… ನೀವು ನನಗೆ ಸಹಾಯ ಮಾಡಲು ಹೋಗಿ ಸಂಕಟಕ್ಕೆ ಸಿಲುಕಬೇಡಿ.”

“ಇರಲಿ, ಆ ಮನೆ ಬೀಗದ ಕೈ ಕೊಡಿ. ಉಳಿದದ್ದು ಆಮೇಲೆ…..”

“ಆದರೆ….. ಇದು ಡಿಪಾರ್ಟ್‌ಮೆಂಟ್‌ ಪ್ರಶ್ನೆ. ಮತ್ತೆ ಆ ಪಾಪಿಗಳಿಂದ ನಿಮಗೆ ತೊಂದರೆ ಆಗಬಾರದೆಂದು ನನ್ನ ಕಾಳಜಿ.”

“ನಿಮ್ಮ  ಕಡತ ಮೂಲೆ ಸೇರಿದೆ ಅಂತ ಇದರಿಂದ ಸ್ಪಷ್ಟ ಆಗುತ್ತೆ. ಹಾಗೇಂತ ನಾವು ಕೈ ಕಟ್ಟಿ ಕೂರೋದು ಬೇಡ. ಏನಾದರೂ ಪ್ರಾಕ್ಟಿಕಲ್ ಆಗಿ ಯೋಚಿಸಿ ಕ್ರಿಯೇಟಿವ್ ‌ಕೆಲಸ ಮಾಡೋಣ. ಇದಕ್ಕೆ ಒಂದು ಪರಿಹಾರ ಖಂಡಿತಾ ಸಿಗುತ್ತೆ,” ಎಂದಳು.

ತನಗಿಂತಲೂ ಈ ಹುಡುಗಿಗೆ ಮುಂದಾಲೋಚನೆ ಹೆಚ್ಚಾಗಿದೆ, ಧೈರ್ಯಸ್ಥೆ ಕೂಡ ಎಂದು ಮನದಲ್ಲೇ ಮೊದಲ ಬಾರಿಗೆ ಮೆಚ್ಚಿಕೊಂಡ ಶಶಾಂಕ್‌. ಮದುವೆಗೆ ಮುಂಚೆ ಹುಡುಗಿ ಇಷ್ಟು ಫಾಸ್ಟ್ ಆದರೆ, ಮದುವೆ ನಂತರ ತನಗೇ ಬಾಸ್‌ ಆಗಿ ತಲೆ ಮೇಲೇರುತ್ತಾಳೆ ಎಂದೇ ಸಾಮಾನ್ಯ ಭಾರತೀಯ ಗಂಡಸರು ಭಾವಿಸುತ್ತಾರೆ. ಆದರೆ ಇದಕ್ಕೆ ತದ್ವಿರುದ್ಧ ಸ್ವಭಾವದ ಶಶಾಂಕ್‌, ಹುಡುಗಿ ತಾನಾಗಿ ಜವಾಬ್ದಾರಿ ಹೊರಲು ಸಿದ್ಧಳಾಗಿದ್ದಾಳೆ, ತಾನೂ ಸಪೋರ್ಟ್‌ ಮಾಡಬೇಕು ಎಂದು ಸಕಾರಾತ್ಮಕವಾಗಿ ಚಿಂತಿಸಿದ. ಈ ಹುಡುಗಿ ಇಷ್ಟು ದೊಡ್ಡ ಜವಾಬ್ದಾರಿ ನಿಭಾಯಿಸಬಲ್ಲಳು ಎಂಬ ಭರವಸೆ ಅವನಿಗೆ ಇರಲಿಲ್ಲ. ಆದರೆ ಅವನ ಬಳಿಯೂ ಇದಕ್ಕಿಂತ ಉತ್ತಮ ಆಯ್ಕೆ ಇರದ ಕಾರಣ ಈ ಒಡಂಬಡಿಕೆಗೆ ಒಪ್ಪಿದ.

ಮನೆಗೆ ಬಂದ ಅವಳು ತನ್ನ ಕಾಲೇಜಿನ ಸಹಪಾಠಿ ನಂಬರ್‌ ಹುಡುಕಿದಳು. ಪ್ರಭಾಕರ್‌ ಇದೀಗ ರೈಲ್ವೆ ಪೊಲೀಸ್‌ ಹುದ್ದೆಯಲ್ಲಿ ಉನ್ನತ ಸ್ಥಿತಿಗೇರಿದ್ದ. ಅದೇ ಏರಿಯಾದಲ್ಲಿ ಅವನ ಪೋಸ್ಟಿಂಗ್‌ ಆಗಿ ಬಂದದ್ದು ಇವಳ ಪುಣ್ಯ. ದಿವ್ಯಾ ಅವನಿಗೆ ತನ್ನ ಕಸಿನ್‌ ಇಂಥ ಕಷ್ಟದಲ್ಲಿ ಸಿಕ್ಕಿದ್ದಾನೆಂದು ವಿವರ ತಿಳಿಸಿದಳು. ತನ್ನ ಕಸಿನ್‌ ರೈಲ್ವೆ ಸ್ಟೇಷನ್‌ ಮಾಸ್ಟರ್‌ ಎಂದೂ ತಿಳಿಸಿದಳು.

ಅಸಲಿಗೆ ಪ್ರಭಾಕರ್‌ ಸಹ ಒಂದು ಸಣ್ಣ ಸಮಸ್ಯೆ ಎದುರಿಸುತ್ತಿದ್ದ. ಅವನ ತಂಗಿ ಮದುವೆ ಫಿಕ್ಸ್ ಆಗಿತ್ತು. ಒಂದು ಇಡೀ ಕಂಪಾರ್ಟ್‌ಮೆಂಟ್‌ ಜನರನ್ನು ಮುಂಬೈಗೆ ಕರೆದೊಯ್ಯಬೇಕಿತ್ತು. ಹಾಗಾಗಿ ರಿಸರ್ವೇಶನ್‌ ಸಮಸ್ಯೆ ಎದುರಾಗಿತ್ತು. ಅದರಲ್ಲಿನ ತಾಂತ್ರಿಕ ದೋಷ ಸರಿಪಡಿಸಿಕೊಡುವುದಾಗಿ ದಿವ್ಯಾ ಅವನಿಗೆ ಭರವಸೆ ನೀಡಿದಳು. ಈ ರೀತಿ ಅವಳು ಇಬ್ಬರ ನಡುವೆ ಸೇತುವೆ ಆಗಿ, ಎರಡೂ ಕಡೆಯ ಸಮಸ್ಯೆ ಬಗೆಹರಿಸಿದಳು. ಪ್ರಭಾಕರ್‌ ತನ್ನ ಸಿಬ್ಬಂದಿ ಸಮೇತ ಹೋಗಿ ಆ ಪುಂಡರನ್ನು ತದುಕಿ, ಕೈದು ಮಾಡಿ ಒಳಗೆ ಹಾಕಿದಾಗ ಇನ್ನಾರೂ ಆ ಮನೆಯ ತಂಟೆಗೆ ಬರಲಿಲ್ಲ. ಇತ್ತ ಶಶಾಂಕ್‌ನ ನೆರವಿನಿಂದ ರಿಸರ್ವೇಶನ್‌ ಸಮಸ್ಯೆ ಪರಿಹಾರವಾಗಿ, ಪ್ರಭಾಕರ್‌ ತಂಗಿ ಮದುವೆಗೆ ಸಲೀಸಾಗಿ ಮುಂಬೈಗೆ  ಹೋಗುವಂತಾಯಿತು. ಈ ರೀತಿ ಶಶಾಂಕನ ಹೃದಯದಲ್ಲಿ ದಿವ್ಯಾಳಿಗೆ ಒಂದು ಪ್ರತ್ಯೇಕ ಸ್ಥಾನ ದೊರಕಿತು.

ಇವನ ಅದೃಷ್ಟಕ್ಕೆ ತಕ್ಕಂತೆ ಆ ಸೀನಿಯರ್‌ ಎಂಜಿನಿಯರ್‌ ಬೇರೆಡೆ ವರ್ಗವಾದ್ದರಿಂದ, ಹೊಸದಾಗಿ ಬಂದರು ಇವನ ಅಹವಾಲು ಕೇಳಿಸಿಕೊಂಡು, ಸೀನಿಯಾರಿಟಿ ಪ್ರಕಾರ ಇವನ ಕಡತ ಈಗ ವಿಲೇವಾರಿಗೆ ಬಂದಿತ್ತು. ಹಾಗಾಗಿ ಸರ್ಕಾರಿ ರಿಪೇರಿಯ ಮಂಜೂರಾತಿ ಆಗಿ ಕೆಲಸ ಶುರುವಾಯಿತು.

ಶಶಾಂಕನಿಗೆ ನೈಟ್‌ ಡ್ಯೂಟಿ ಇದ್ದಾಗೆಲ್ಲ ಖುದ್ದಾಗಿ ಮುಂದೆ ನಿಂತು ಅವರಿಗೆ ಮಾರ್ಗದರ್ಶನ ನೀಡಿ, ಕೆಲಸ ಸಲೀಸಾಗಿ ಸಾಗುವಂತೆ ಮಾಡುತ್ತಿದ್ದ. ರಾಯರ ಆರೋಗ್ಯ ಎಷ್ಟೋ ಸುಧಾರಿಸಿದ್ದರಿಂದ ಈಗ ದಿವ್ಯಾ ಬಿಡುವಾಗಿದ್ದಳು. ತಾನೂ ಮುಂದೆ ನಿಂತು ಶಶಾಂಕ್‌ನ ಅನುಪಸ್ಥಿತಿಯಲ್ಲಿ ಬೇಕಾದಂತೆ ಕಾರ್ಯ ನಿರ್ವಹಿಸಿದಳು. ತನ್ನ ಗೆಳತಿಯೊಬ್ಬಳು ಇಂಟೀರಿಯರ್‌ ಡಿಸೈನರ್ ಆದ್ದರಿಂದ ಅವಳ ಸಲಹೆಯ ಮೇರೆಗೆ ಬೇಕಾದ ಹೆಚ್ಚುವರಿ ಮೆಟೀರಿಯಲ್ಸ್ ತರಿಸಿ, ಶಶಾಂಕ್‌ನ ಅನುಪಸ್ಥಿತಿಯಲ್ಲಿ ಮನೆಗೊಂದು ಚಂದದ ರೂಪ ಬರಿಸಿದಳು.

ಪೇಂಟಿಂಗ್‌, ವುಡ್‌ ವರ್ಕ್‌ ಎಲ್ಲಾ ಮುಗಿದು, ಮನೆ ಗೃಹಪ್ರವೇಶಕ್ಕೆ ಸಿದ್ಧವಾಯಿತು. ಹೆಚ್ಚು ಕಡಿಮೆ ಪ್ರತಿದಿನ ಬಂದು ಅವಳು ಸಂಪೂರ್ಣ ಜವಾಬ್ದಾರಿ ನಿರ್ವಹಿಸಿದ್ದರಿಂದಲೇ ಇಷ್ಟೆಲ್ಲ ಪಾಳುಬಿದ್ದ ಕೊಂಪೆ ಮನೆಯಾಗಿ ಕಂಗೊಳಿಸುತ್ತಿದೆ ಎಂದು ಶಶಾಂಕ್‌ ಅವಳಲ್ಲಿ ಸಂಪೂರ್ಣ ಅನುರಕ್ತನಾದ.

ಆ ಸಂಜೆ ಅವನು ವಿಶ್ರಾಂತಿ ಪಡೆಯುತ್ತಿದ್ದಾಗ ಶಶಾಂಕನ ತಂದೆ ಫೋನ್‌ ಮಾಡಿದರು, “ಯಾರದು… ನಿನ್ನ ಮನೆಯಲ್ಲಿ ಯಾರೋ ಹುಡುಗಿ ಮದುವೆಗೆ ಮೊದಲೇ ಹೇಗೆ ಬಂದಳು? ರೇವತಿ ನಿನ್ನೊಂದಿಗೆ ಮಾತನಾಡಲೆಂದು ಆ ದಿನ ಫೋನ್‌ ಮಾಡಿದರೆ ಬೇರೆ ಹುಡುಗಿ ರಿಸೀವ್ ‌ಮಾಡಿದಾಗ ಅವಳಿಗೆಷ್ಟು ಆಘಾತ ಆಗಿರಬೇಡ…..”

“ಇದ್ಯಾವ ದೊಡ್ಡ ವಿಷಯ ಅಂತ ನೀವು ಇಷ್ಟು ಸೀರಿಯಸ್‌ ಆಗಿ ವಿಚಾರಿಸುತ್ತಿದ್ದೀರಿ?” ಶಶಾಂಕನಿಗೆ ಆಶ್ಚಯವಾಗಿತ್ತು.

“ನಿಜವಾದ ವಿಷಯ ಏನು ಅಂತ ಸ್ಪಷ್ಟಪಡಿಸಿಕೊಂಡೆ. ನಿನ್ನ ಹೆಂಡತಿ ಆಗುವವಳಿಗೆ ಮತ್ತೊಬ್ಬ ಹೆಣ್ಣು ನಿನ್ನ ಫೋನ್‌ ರಿಸೀವ್ ಮಾಡಿದರೆ ಶಾಕ್‌ ಆಗಲ್ವೆ?”

“ಓಹೋ…. ನಾನು ಆ ರೇವತಿ ಜೊತೆ ಮಾತೂ ಆಡಿಲ್ಲ… ಮದುವೆಗೆ ಒಪ್ಪಿಗೆ ನೀಡಿಲ್ಲ, ಆಗವೇ ಅವಳು ನಿಮ್ಮ ಸೊಸೆ ತರಹ ಇಷ್ಟು ದೊಡ್ಡ ಕಂಪ್ಲೇಟ್‌ ನೀಡಿದಳೇ? ಹಾಗಾದರೆ ನಾನೂ ಹೇಳ್ತೀನಿ ಕೇಳಿ, ನನಗೆ ಆ ಸಂಬಂಧ ಬೇಡವೇ ಬೇಡ! ಅವರು ಬೇರೆಲ್ಲಾದರೂ ಹುಡುಗನನ್ನು ಹುಡುಕಿಕೊಳ್ಳಲು ಹೇಳಿ.”

ಮಗ ಇಷ್ಟು ಖಂಡತುಂಡವಾಗಿ ಧೈರ್ಯ ವಹಿಸುತ್ತಾನೆಂದು ಅವರು ಅಂದುಕೊಂಡೇ ಇರಲಿಲ್ಲ. “ಏನು ಹೇಳ್ತಿದ್ದೀಯಾ ನೀನು? ನಾವು ಈಗಾಗಲೇ ಅವರಿಗೆ ಮಾತು ಕೊಟ್ಟುಬಿಟ್ಟಿದ್ದೇವೆ. ಅವರು ಮದುವೆಗೆ ತಯಾರಿ ಶುರು ಮಾಡಿಬಿಟ್ಟಿದ್ದಾರೆ, ಪತ್ರಿಕೆ ಪ್ರಿಂಟ್‌ಗೆ ಹೋಗಿದೆ….”

“ಅಪ್ಪಾಜಿ! ಸ್ವಲ್ಪ ನನ್ನ ಮಾತು ಕೇಳಿಸಿಕೊಳ್ಳುವ ಸಹನೆ ಇರಲಿ. ಇದುವರೆಗೂ ನಾನು ಹುಡುಗಿ ಒಪ್ಪಿಗೆ ಅಂತ ಹೇಳಿಯೇ ಇಲ್ಲ, ನೀವು ಏನೇನೋ ವ್ಯವಸ್ಥೆ ಮಾಡಿಕೊಂಡರೆ ಅದಕ್ಕೆ ನಾನು ಜವಾಬ್ದಾರನಲ್ಲ. ಖಂಡಿತಾ ಆ ರೇವತಿಯನ್ನು ನಾನು ಮದುವೆ ಆಗುವುದಿಲ್ಲ ಎಂದು ಅವರಿಗೆ ಹೇಳಿಬಿಡಿ.”

“ಇಷ್ಟು ಧೈರ್ಯ ಎಲ್ಲಿಂದ ಬಂತು ನಿನಗೆ? ನನ್ನ ಮಾತಿಗೆ ಏನೂ ಬೆಲೆ ಇಲ್ಲವೇ? ಅವರಿಗೆ ನಾನು ಏನೆಂದು ಉತ್ತರಿಸಲಿ?”

“ನನ್ನನ್ನು ಕೇಳದೆ ನೀವು ಅವರಿಗೆ ಪ್ರಾಮಿಸ್‌ ಮಾಡಿದ್ದು ನಿಮ್ಮ ತಪ್ಪು. ಆ ದಿನ ಫೋನ್‌ ರಿಸೀವ್ ‌ಮಾಡಿದವಳು ನನ್ನ ಮನಸ್ಸು ತುಂಬಿರುವ  ದಿವ್ಯಾ… ಅಂದು ಪರಿಸ್ಥಿತಿ ಹೀಗಿರಲಿಲ್ಲ. ಈಗ ಹೇಳುತ್ತಿದ್ದೇನೆ, ನಾನು ಮದುವೆ ಆದರೆ ದಿವ್ಯಾಳನ್ನೇ…..

“ನನ್ನ ಕಷ್ಟ ಸುಖ ಅರಿತು ನನ್ನ  ಮನೆ ಸಮಸ್ಯೆ ನಿವಾರಿಸಿ, ಪೂರ್ತಿ ಜವಾಬ್ದಾರಿ ಹೊತ್ತು ಕ್ವಾರ್ಟರ್ಸ್‌ ಮನೆ ಸೇರಲು ಸಹಕರಿಸಿ ನಿಜ ಅರ್ಥದಲ್ಲಿ ನನಗೆ ಪಾರ್ಟ್‌ನರ್‌ ಆಗಿ ನಿಂತಿದ್ದಾಳೆ…. ಅತ್ತ ರೇವತಿ ಯಾರು ಅಂತಲೂ ಗೊತ್ತಿಲ್ಲ, ನಾನವಳಿಗೆ ಹ್ಞೂಂ ಅಂದಿಲ್ಲ, ಅವಳು ನಿಮಗೆ ದೂರು ಹೇಳುತ್ತಾಳೆ. ಆ ಹುಡುಗಿ ಸಹವಾಸ ಬೇಡವೇ ಬೇಡ. ಇಲ್ಲಿ ನಾನು ಮದುವೆಗೆ ರೆಡಿ ಮಾಡಿಕೊಂಡು ನಿಮಗೆ ಲಗ್ನಪತ್ರಿಕೆ ಕಳುಹಿಸುತ್ತೇನೆ. ಸರಳವಾಗಿ ಒಂದು ದಿನ ಮದುವೆ ಆದರೆ ಸಾಕು, ಅದೂ ಈ ಕೊರೋನಾ ಮಧ್ಯೆ ಕೇಲ 10-20 ಮಂದಿ ಇದ್ದರೆ ಸಾಕು!” ಎಂದಾಗ ಅವರಿಗೆ ಮಾತೇ ಹೊರಡಲಿಲ್ಲ.

ಮಾರನೇ ದಿನ ಅವನು ರಾಯರನ್ನು ಕಂಡು ಮುಂದಿನ ವಾರವೇ ಸರಳ ಮದುವೆಗೆ ಏರ್ಪಡಿಸಿಕೊಳ್ಳಲು ಹೇಳಿದ. ದಿವ್ಯಾ ಮತ್ತು ರಾಯರು ಅಭಿಮಾನದಿಂದ ಅವನಿಗೆ ಉಪಚರಿಸಿದರು. ಲಗ್ನಪತ್ರಿಕೆಯ ಗೋಜು ಬೇಡವೆಂದು ಇಬ್ಬರ ಕಡೆಯ ಕೆಲವೇ ನೆಂಟರಿಗೆ ತಿಳಿಸಲಾಯಿತು.

ಶಶಾಂಕ್‌ ತಾಯಿ ತಂದೆಗೆ ದಿನಾಂಕ ತಿಳಿಸಿ, ರೈಲ್ವೆ ಟಿಕೆಟ್‌ ಬುಕ್‌ ಮಾಡಿಸಿದ. ಅಂತೂ ಅವರು ಬಂದಿಳಿದ ಮೇಲೆ ಸರಳವಾಗಿ 20 ಜನರ ಸಮ್ಮುಖದಲ್ಲಿ ಇವರಿಬ್ಬರ ವಿವಾಹ ನೆರವೇರಿತು. ಅದಾದ ಮೇಲೆ ಶಶಾಂಕ್‌ ಹಿರಿಯರೊಡನೆ ಪತ್ನಿ ಸಮೇತನಾಗಿ ಹೊಸ ಕ್ವಾರ್ಟರ್ಸ್‌ ಮನೆಯ ಗೃಹ ಪ್ರವೇಶ ಮಾಡಿ ಸೆಟ್‌ ಆದದ್ದಾಯಿತು.

ಇದೀಗ ಪತಿ ಪತ್ನಿಯರ ಜೀವನ ಹಾಲುಜೇನಿನಂತೆ ಬೆರೆತಿತ್ತು. ಚಿಂತೆ ಎಲ್ಲಾ ಕಳೆದು ಅವರು ಕೊನೆಗೂ ನೆಮ್ಮದಿಯ ಗೂಡು ಸೇರಿದ್ದರು. 15 ದಿನಗಳ ನಂತರ ಶಶಾಂಕನ ತಾಯಿ ತಂದೆ ಬೆಂಗಳೂರಿನಿಂದ ನೇರ ಅಮೆರಿಕಾಗೆ ಹೊರಟುಬಿಟ್ಟರು. 6 ತಿಂಗಳ  ನಂತರ ಆಸ್ಟ್ರೇಲಿಯಾಗೆ ಹೊರಡುವವರಿದ್ದರು. ಅತ್ತ ರಾಯರು ಒಬ್ಬರೇ ಆಗುವುದು ಬೇಡ ಎಂದು ಕ್ಲಿನಿಕ್‌ ಸಮೇತ ಆ ಮನೆ ಬಾಡಿಗೆಗೆ ಕೊಟ್ಟು ಇವರ ಜೊತೆಯೇ ಇಲ್ಲಿಗೆ ಬಂದಿಳಿದರು. ನಂದಗೋಕುಲದಂತೆ ಆ ನೆಮ್ಮದಿಯ ಗೂಡು ದಿವ್ಯಾ-ಶಶಾಂಕ್‌ರ ಬಾಳಿನಲ್ಲಿ ಹೊಸ ಜೀವನ ನಡೆಸಲು ಅಣಿಯಾಗಿತ್ತು.

ಇದೀಗ ಶಶಾಂಕ್‌ನ ರೊಮ್ಯಾಂಟಿಕ್‌ ಮೂಡ್‌ ಮೇರೆ ಮೀರಿದೆ ಎಂದು ದಿವ್ಯಾ ಹುಸಿಮುನಿಸು ತೋರುವಳು. ಪತ್ನಿಯ ಸಹಕಾರದಿಂದ ಜೀವನದಲ್ಲಿ ಗೆದ್ದ ಶಶಾಂಕ್‌ ನೆಮ್ಮದಿಯಾಗಿ ಡ್ಯೂಟಿಗೆ ಹೊರಟ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ