ಮದುವೆಯಾದ ಅನೇಕ ವರ್ಷಗಳ ಬಳಿಕ ಹನಿಮೂನ್‌ ನೆನಪುಗಳು ಮಾಸದೇ ಉಳಿದಿರುತ್ತವೆ. ಈ ಮಧ್ಯೆ ಕೆಲವು ಸಮಸ್ಯೆಗಳು ಕೂಡ ಏಳುತ್ತವೆ. ಇಂತಹ ಸ್ಥಿತಿಯಲ್ಲಿ ವೈವಾಹಿಕ ಸಂಬಂಧದ ಅನುಬಂಧವನ್ನು ಸಕಾಲಕ್ಕೆ ಕಾಯ್ದುಕೊಂಡು ಹೋಗುವುದು ಅತ್ಯವಶ್ಯಕ.

ಪಾರ್ಟ್ನರ್ಅಲ್ಲ ರೂಮ್ ಮೇಟ್ಎಂದೆನಿಸುತ್ತಿದ್ದರೆ : ಮದುವೆಯಾದ ಬಹಳ ವರ್ಷಗಳ ಬಳಿಕ ನೀವು ಪಾರ್ಟ್‌ನರ್‌ ಅಲ್ಲ, ರೂಮ್ ಮೇಟ್‌ ಎಂದೆನಿಸತೊಡಗಿದರೆ ಆಗಿನ ವರ್ತನೆಯೇ ಬಹಳ ವಿಚಿತ್ರವಾಗಿರುತ್ತದೆ. ನೀವು ಬಹಳ ವರ್ಷಗಳ ತನಕ ಸಂಬಂಧದ ಮಾಧುರ್ಯದಲ್ಲಿ ಉಳಿದುಕೊಳ್ಳಬೇಕೆಂದರೆ, ನಿಮ್ಮಲ್ಲಿನ ಪರಸ್ಪರ ಆಕರ್ಷಣೆಯನ್ನು ಕಾಯ್ದುಕೊಂಡು ಹೋಗಿ.

ಅದಕ್ಕಾಗಿ ಸಾಕಷ್ಟು ಪ್ರಯತ್ನ ಪಡುತ್ತಿರಬೇಕಾಗುತ್ತದೆ. ಅದಕ್ಕಾಗಿ ಯಾವಾಗಲಾದರೊಮ್ಮೆ ರೊಮ್ಯಾಂಟಿಕ್‌ ಡ್ರೈವಿಂಗ್‌ಗೆ ಹೋಗಿ. ಪರಸ್ಪರರಿಗೆ ಸರ್‌ಪ್ರೈಸ್‌ ಕೊಡಿ. ದೈಹಿಕ ಹಾವಭಾವಗಳ ಮೂಲಕ ಕಾಲಕಾಲಕ್ಕೆ ಪರಸ್ಪರರ ಬಗ್ಗೆ ಪ್ರೀತಿ ವ್ಯಕ್ತಪಡಿಸಿ. ಅಗತ್ಯಬಿದ್ದಾಗ ಕೌನ್ಸೆಲಿಂಗ್‌ಗೂ ಹೋಗಿ ಬನ್ನಿ. ಇಂತಹ ಪ್ರಯತ್ನಗಳು ಪರಸ್ಪರರನ್ನು ನಿಕಟವಾಗಿಸಲು ಸಹಾಯ ಮಾಡುತ್ತವೆ.

ಇದಕ್ಕೆ ತದ್ವಿರುದ್ಧ ಎಂಬಂತೆ, ನೀವು ಪರಸ್ಪರರ ಬಗ್ಗೆ ಕೊಡುವುದರ ಬದಲು, ಬೇರೆ ವಿಷಯಗಳ ಬಗ್ಗೆ ಫೋಕಸ್‌ ಶುರು ಮಾಡುವಿರಿ. ಅಂತಹ ಸ್ಥಿತಿಯಲ್ಲಿ ನೀವು ಪಾರ್ಟ್‌ನರ್‌ ಅಲ್ಲ, ರೂಮ್ ಮೇಟ್‌ ಎನ್ನುವುದನ್ನು ಪ್ರೂವ್ ‌ಮಾಡಲು ಹೊರಟಿದ್ದೀರಿ ಎನ್ನುವುದು ಸ್ಪಷ್ಟವಾಗುತ್ತದೆ.

ಪರಸ್ಪರರಿಂದ ಬೇಸರ : ಮದುವೆಯಾದ ಅನೇಕ ವರ್ಷಗಳ ಬಳಿಕ ನೀವು ಪ್ರತಿದಿನ ರಾಜಕುಮಾರಿಯ ಕಥೆಯಲ್ಲಿನ ಹಾಗೆ ಜೀವನ ಸಾಗಿಸುತ್ತೇನೆಂದು ಯೋಚಿಸುವುದು ಖಂಡಿತವಾಗಿಯೂ ತಪ್ಪು. ನೀವು ನಿಮ್ಮ ವೈವಾಹಿಕ ಜೀವನದಿಂದ ಬೇಸರ ಪಟ್ಟುಕೊಂಡಿದ್ದೀರೆಂದರೆ, ನೀವು ಪರಸ್ಪರರಿಗೆ ಫಾರ್‌ ಗ್ರಾಂಟೆಡ್‌ ಆಗಿದ್ದೀರೆಂದರ್ಥ. ನೀವು ರೊಟೀನ್‌ ಲೈಫ್‌ ನಡೆಸುತ್ತಿದ್ದೀರಿ ಹಾಗೂ ಯಾವುದೇ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಿಲ್ಲ. ಸೆಕ್ಸ್, ಏಜಿಂಗ್‌, ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸುವುದು ಅಥವಾ ನಿಮ್ಮ ದಿನಚರಿಯಲ್ಲಿ ಪರಿವರ್ತನೆ ತಂದುಕೊಳ್ಳಲು ಹಿಂದೇಟು ಹಾಕುತ್ತಿದ್ದೀರಿ ಎಂದರೆ ನಿಮ್ಮನ್ನು ನೀವು ಬದಲಿಸಿಕೊಳ್ಳಬೇಕಾದ ಅಗತ್ಯವಿದೆ. ಸಂಗಾತಿಯ ಜೊತೆಗೆ ಪ್ರತಿಯೊಂದು ವಿಷಯದ ಬಗೆಗೂ ಮಾತನಾಡಿ ಹಾಗೂ ಜೀವನದಲ್ಲಿ ವೈವಿಧ್ಯತೆ ಪಡೆದುಕೊಳ್ಳಿ.

ರೊಮಾನ್ಸ್ ಹಾಗೂ ಫಿಝಿಕಲ್ ಕ್ಲೋಸ್ನೆಸ್ನಲ್ಲಿ ಕೊರತೆ : ಸಾಮಾನ್ಯವಾಗಿ ಕೆಲವು ವರ್ಷಗಳ ಬಳಿಕ ಜೋಡಿಗಳ ಜೀವನದಲ್ಲಿ ಲೈಂಗಿಕತೆ ಕಡಿಮೆಯಾಗುತ್ತದೆ. ಅದಕ್ಕೆ ಹಲವು ಕಾರಣಗಳಿರಬಹುದು. ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳು, ನಿದ್ರೆಯ ಸಮಸ್ಯೆಗಳು, ಮಗುವಿನ ಜನ್ಮ, ಔಷಧೀಯ ಪರಿಣಾಮ, ಸಮಾಗಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಇತ್ಯಾದಿ.

IB140946-140946151640540-SM360549

ಮದುವೆಯಾದ ಕೆಲವು ವರ್ಷಗಳ ಬಳಿಕ ಹೀಗಾಗುವುದನ್ನು ಸಾಮಾನ್ಯ ಎಂದು ಭಾವಿಸಲಾಗುತ್ತದೆ. ಆದರೆ ಇದೇ ಸ್ಥಿತಿ ಬಹಳ ದಿನಗಳ ಕಾಲ ಹಾಗೆಯೇ ಮುಂದುವರಿದರೆ ಸಂಬಂಧದ ಅಡಿಪಾಯಕ್ಕೆ ಅಪಾಯ ಬರುತ್ತದೆ. ಹೀಗಾಗಿ ಎಂದಾದರೊಮ್ಮೆ ಸಂಗಾತಿಗೆ ಚುಂಬನ ಹಾಗೂ ಅಪ್ಪುಗೆಯ ಮೂಲಕ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಿ ಹಾಗೂ ಅವರನ್ನು ದೈಹಿಕವಾಗಿ ದೂರ ಹೋಗದಂತೆ ನೋಡಿಕೊಳ್ಳಿ.

ಉದ್ದೇಶದಿಂದ ದೂರ : ಮದುವೆಯಾದ 10-15 ವರ್ಷಗಳ ಬಳಿಕ, ನನ್ನ ಜೀವನದಲ್ಲಿ ಯಾವುದೇ ಉದ್ದೇಶ ಈಡೇರಲಿಲ್ಲ ಎಂದು ಯೋಚಿಸಿ ನೀವು ಅತೃಪ್ತ ಭಾವನೆ ಹೊಂದಬಹುದು. ನಿಮ್ಮ ಮದುವೆಯಾದಾಗ ಜೀವನದ ಆದ್ಯತೆಗಳು ಬದಲಾಗುತ್ತವೆ. ನಿಮ್ಮ ಸಂಗಾತಿ ಹಾಗೂ ಮಕ್ಕಳೇ ನಿಮಗೆ ಮಹತ್ವದ್ದಾಗಿ ಕಂಡುಬರುತ್ತಾರೆ. ಮದುವೆಯ ಬಳಿಕ ಪ್ರತಿಯೊಬ್ಬರಿಗೂ ಸಣ್ಣ ಪುಟ್ಟ ತ್ಯಾಗ ಹಾಗೂ ಹಲವು ಬಗೆಯ ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಕಾರಣಗಳಿಂದಾಗಿ ಮಹಿಳೆಯರಿಗೆ ತಮ್ಮ ಕೆರಿಯರ್‌ ಮತ್ತು ಜೀವನಕ್ಕೆ ಸಂಬಂಧಪಟ್ಟ ಹಲವು ಉದ್ದೇಶಗಳು ಅದರಲ್ಲೂ ವಿಶೇಷವಾಗಿ ಬಿಸ್‌ನೆಸ್‌ ಶುರು ಮಾಡುವುದು, ಟ್ರಾವೆಲಿಂಗ್‌, ಮಾಡೆಲಿಂಗ್‌ ಹಾಗೂ ಇತರೆ ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದರಿಂದ ವಂಚಿತರಾಗಬೇಕಾಗುತ್ತದೆ.

ಸಾಮಾನ್ಯವಾಗಿ ದಂಪತಿಗಳು ಮದುವೆಯ ಆರಂಭಿಕ ದಿನಗಳಲ್ಲಿ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸಲು ಹಾಗೂ ಕುಟುಂಬವನ್ನು ಮುಂದುವರಿಸುವ ಸನ್ನಾಹದಲ್ಲಿ ತಮ್ಮ ಕನಸುಗಳ ಹಾರಾಟದ ಮೇಲೆ ನಿರ್ಬಂಧ ಹಾಕಿಕೊಳ್ಳುತ್ತಾರೆ. ಏಕೆಂದರೆ ವೈವಾಹಿಕ ಜೀವನದಲ್ಲಿ ಸ್ಥಿರತೆ ಕಾಯ್ದುಕೊಂಡು ಹೋಗಬೇಕಿರುತ್ತದೆ. ಆದರೆ ಮದುವೆಯಾದ 10-15 ವರ್ಷಗಳು ಕಳೆಯುತ್ತಿದ್ದಂತೆ ಅವರಿಗೆ ಒಂದು ಸಂಗತಿಯ ಬಗ್ಗೆ ವಿಷಾದ ಉಂಟಾಗತೊಡಗುತ್ತದೆ. ತಮ್ಮ ಕನಸು ತಮ್ಮಿಂದ ಏಕೆ ದೂರವಾಗುತ್ತಿದೆ ಎಂದು ಅನಿಸುತ್ತದೆ.

ವಾಸ್ತವ ಸಂಗತಿಯೇನೆಂದರೆ, ನಿಜವಾದ ಅರ್ಥದಲ್ಲಿ ದಂಪತಿಗಳೇ ಈ ಬಗ್ಗೆ ಕೂಡಿ ಹೆಜ್ಜೆ ಹಾಕಬೇಕು, ಪರಸ್ಪರರಿಗೆ ಬೆಂಬಲ ಕೊಡಬೇಕು.

ಸಹನಶಕ್ತಿ ಕುಗ್ಗುವುದು : ಮದುವೆಯ ಆರಂಭಿಕ ವರ್ಷಗಳಲ್ಲಿ ನಿಮ್ಮ ಸಂಗಾತಿ ರೇಜಿಗೆ ಹುಟ್ಟಿಸುವಂತೆ ಅಥವಾ ತೊಂದರೆ ಕೊಡುವಂತೆ ಮಾತನಾಡುತ್ತಿದ್ದರೆ, ನೀವು ಅದನ್ನು ನಿರ್ಲಕ್ಷಿಸಿಬಿಡುತ್ತಿದ್ದಿರಿ. ಆದರೆ ಕಾಲ ಕಳೆದಂತೆ ಪರಸ್ಪರರಿಂದ ಆದ ತಪ್ಪುಗಳ ಬಗ್ಗೆ ತಾಳ್ಮೆಯಿಂದಿರುವಿಕೆ ಅಥವಾ ಕ್ಷಮಿಸುವ ಪ್ರವೃತ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಆರಂಭಿಕ ದಿನಗಳಲ್ಲಿ ಅವರು ಯಾವ ಸಂಗತಿಗಳನ್ನು ನಕ್ಕು ನಿರ್ಲಕ್ಷಿಸುತ್ತಿದ್ದರೊ, ಅವೇ ಸಂಗತಿಗಳ ಬಗ್ಗೆ ಈಗ ಆತೃಪ್ತರಾಗುತ್ತಾರೆ.

ನೀವು ಮದುವೆಯ ಆರಂಭದ ದಿನಗಳಲ್ಲಿ ಪರಸ್ಪರರ ಬಗ್ಗೆ ಪ್ರೀತಿ ಹಾಗೂ ಕಾಳಜಿಯ ಭಾವನೆ ತೋರಿಸುತ್ತಿದ್ದಿರೊ, ತಪ್ಪುಗಳನ್ನು ಹೇಗೆ ನಿರ್ಲಕ್ಷಿಸುತ್ತಿದ್ದಿರೊ, ಅದನ್ನೇ ಮುಂದುವರಿಸಿಕೊಂಡು ಹೋಗಬೇಕು.

ಚಿಕ್ಕಪುಟ್ಟ ಸೆಲೆಬ್ರೇಶನ್‌ : ಮದುವೆಯ ಆರಂಭಿಕ ದಿನಗಳಲ್ಲಿ ನೀವು ಚಿಕ್ಕಪುಟ್ಟ ಸಂದರ್ಭಗಳನ್ನು ಸೆಲೆಬ್ರೇಟ್‌ ಮಾಡಿಕೊಳ್ಳುತ್ತಿದ್ದಿರಿ. ಮದುವೆಯಾಗಿ 6 ತಿಂಗಳ ಸಂಭ್ರಮವನ್ನು ಇಲ್ಲಿ ಪ್ರಥಮ ವಾರ್ಷಿಕೋತ್ಸವವನ್ನು, ವ್ಯಾಲೆಂಟೈನ್‌ ಡೇ ಅಥವಾ ಜನ್ಮದಿನ ಹೀಗೆ ಯಾವುದನ್ನಾದರೂ ವಿಶೇಷಗೊಳಿಸುವ ಪ್ರಯತ್ನ ನಿಮ್ಮದಾಗಿರುತ್ತದೆ. ಆದರೆ ಮದುವೆಯಾದ 10-12 ವರ್ಷಗಳ ಬಳಿಕ ಸೆಲೆಬ್ರೇಶನ್‌ಗಳು ಕಡಿಮೆಯಾಗುತ್ತ ಹೋಗುತ್ತವೆ.

ಚಿಕ್ಕಪುಟ್ಟ ಖುಷಿಯ ಆನಂದವನ್ನು ಅನುಭವಿಸುವ ಅಗತ್ಯವಿರುತ್ತದೆ. ಸೆಲೆಬ್ರೇಶನ್‌ನ ಕಾರಣ ಬದಲಾಗಿರಬಹುದು. ಆದರೆ ವರ್ತನೆಯದ್ದಲ್ಲ. ಉದಾಹರಣೆಗೆ ನಿಮಗೆ ಪ್ರಮೋಶನ್‌ ಸಿಕ್ಕಿದ್ದು, ಮಕ್ಕಳ ಬರ್ತ್‌ಡೇ, ಗ್ರ್ಯಾಜ್ಯುಯೇಶನ್‌, ಮದುವೆಯ ವಾರ್ಷಿಕೋತ್ಸವ ಹೀಗೆ ಸೆಲೆಬ್ರೇಶನ್‌ಗಳು ಸಾಗುತ್ತಿರಬೇಕು. ಇಂತಹ ಸಂದರ್ಭಗಳಿಂದಲೇ ನೀವು ನಿಕಟವಾಗಿರಲು ಸಾಧ್ಯ.

ನೀವು ನಿಮ್ಮ ಸ್ನೇಹಿತರು, ಸಂಬಂಧಿಕರ ಜೊತೆಗೂ ಗೆಟ್‌ ಟು ಗೆದರ್‌ ಮಾಡಬಹುದು. ಇಲ್ಲದಿದ್ದರೆ ನೀವು ಕುಟುಂಬದಲ್ಲಷ್ಟೇ ಆಚರಿಸಬಹುದು. ಆದರೆ ಸಂದರ್ಭ ಸ್ಮರಣಾರ್ಹ ಆಗಬೇಕು. ಸೆಲೆಬ್ರೇಶನ್‌ ದುಬಾರಿಯಾಗಬಾರದು. ಆದರೆ ಇಬ್ಬರಿಗೂ ಅದರ ಆನಂದ ಸಿಗುವಂತಿರಬೇಕು ಎನ್ನುವುದೇ ಮುಖ್ಯ ಉದ್ದೇಶ ಆಗಬೇಕು.

ನಿಮ್ಮ ಪ್ರೀತಿಯನ್ನು ಸೆಲೆಬ್ರೇಟ್‌ ಮಾಡಲು ನೀವು ಯಾವಾಗಲಾದರೊಮ್ಮೆ ಲಾಂಗ್‌ ಡ್ರೈವ್‌ಗೂ ಹೋಗಬಹುದು. ಯಾವುದಾದರೂ ಸಿನಿಮಾ ನೋಡಿ ಇಲ್ಲಿ ಸ್ಪಾ ನೈಟ್‌ನ ಆನಂದ ಪಡೆಯಬಹುದು.

ದೊಡ್ಡ ಗುರಿ ಈಡೇರಿಸುವ ಒತ್ತಡ : ಮದುವೆಯಾದ 10-15 ವರ್ಷಗಳಾಗುವಷ್ಟರಲ್ಲಿ ದಂಪತಿಗಳು ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ಹೊರಬೇಕಾಗಿ ಬರುತ್ತದೆ. ಬಹು ದೊಡ್ಡ ಗುರಿಗಳು ಕಣ್ಮುಂದೆ ಇರುತ್ತವೆ. ಉದಾಹರಣೆಗೆ ಸ್ವಂತ ಮನೆಯ ಕನಸು, ಮಕ್ಕಳ ಉನ್ನತ ಶಿಕ್ಷಣದಂತಹ ಯೋಜನೆಗಳು ಅವರ ತಲೆಯಲ್ಲಿ ಗಿರಕಿ ಹೊಡೆಯುತ್ತಿರುತ್ತವೆ. ಅವನ್ನು ಈಡೇರಿಸುವ ಹೋರಾಟದಲ್ಲಿ ತಮ್ಮ ಸಂಬಂಧಗಳ ಬಗ್ಗೆ ಕಡಿಮೆ ಗಮನ ಕೊಡುತ್ತಾರೆ. ಆದರೆ ಇಂತಹ ಸ್ಥಿತಿಯಲ್ಲಿ ಸಮತೋಲನ ಸಾಧಿಸಿ ಸಾಗುವುದು ಅತ್ಯವಶ್ಯ. ನೀವು ಪರಸ್ಪರ ಸೇರಿಕೊಂಡು ನಿಮ್ಮ ಯೋಜನೆಗಳ ಬಗ್ಗೆ ಕಾರ್ಯಪ್ರವೃತ್ತರಾದರೆ, ನಿಮ್ಮ ಸಂಬಂಧ ಬಲವಾಗಿರುತ್ತದೆ ಹಾಗೂ ಗುರಿಯನ್ನು ಸುಲಭವಾಗಿ ತಲುಪಬಹುದು.

ಸುಚಿತ್ರಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ