ಭಾರತೀಯ ಸಮಾಜದಲ್ಲಿ ಮದುವೆಯಾದ ಸ್ವಲ್ಪ ಕಾಲದಲ್ಲೇ ಮನೆಯವರು ಮತ್ತು ಅಕ್ಕಪಕ್ಕದವರು ಒಂದೇ ಪ್ರಶ್ನೆಯನ್ನು ಪದೇ ಪದೇ ಕೇಳುತ್ತಾರೆ, “ಗುಡ್‌ ನ್ಯೂಸ್‌ ಯಾವಾಗ ಹೇಳ್ತೀರಿ? ಇಬ್ಬರಿಂದ ಮೂವರು ಆಗೋದು ಯಾವಾಗ?”

ಮದುವೆಯ ನಂತರ ಜೀವನದ ಏಕಮಾತ್ರ ಉದ್ದೇಶ ಮಕ್ಕಳಿಗೆ ಜನ್ಮ ಕೊಡೋದು ಅಷ್ಟೇನಾ ಎಂದು ಯಾರಾದರೂ ಅವರನ್ನು ಕೇಳಬೇಕು. ಮಕ್ಕಳಿಗೆ ಜನ್ಮ ಕೊಡುವ ನಿರ್ಧಾರ ತಂದೆ ತಾಯಿಗಳಿಗೆ ಮಾತ್ರ ಇರಬೇಕೋ ಅಥವಾ ಅದರಲ್ಲಿ ಸಮಾಜ ಅಥವಾ ಕುಟುಂಬದ ಪಾತ್ರ ಮುಖ್ಯವಾಗಿರಬೇಕೋ? ವೈವಾಹಿಕ ಜೀವನದಲ್ಲಿ ಮಗುವಾದರೆ ಮಾತ್ರ ಸಂತಸಗಳು ಬಂದಂತೆಯೇ? ಅದರ ಜೊತೆ ಅನೇಕ ಜವಾಬ್ದಾರಿಗಳು ಸೇರಿಕೊಂಡಿಲ್ಲವೇ? ಭೂಮಿಗೆ ಬಂದ ಪ್ರತಿ ಮಗು ಈ ದೇಶದ ಪರಿಸರ, ಅರ್ಥ ವ್ಯವಸ್ಥೆಯ ಮೇಲೆ ಹೊರೆ ಹೆಚ್ಚಿಸುವುದಿಲ್ಲವೇ?

ಅಂದಹಾಗೆ ಮಗುವಿಗೆ ಜನ್ಮ ಕೊಡುವ ನಿರ್ಧಾರ ಒಂದು ಕಠಿಣವಾದ ನಿರ್ಧಾರ. ಮಕ್ಕಳನ್ನು ಪಡೆಯುವ ನಿರ್ಧಾರ ಬರೀ ಸಾಮಾನ್ಯರಿಗಷ್ಟೇ ಅಲ್ಲ, ದೊಡ್ಡ ದೊಡ್ಡ ಶ್ರೀಮಂತರಿಗೂ ಕಷ್ಟಕರವಾಗಿರುತ್ತದೆ. ಅನೇಕ ಬಾರಿ ಜನ ತಮಗೆ ಮಗು ಬೇಕೆಂಬ ನಿರ್ಣಯ ತೆಗೆದುಕೊಳ್ಳುತ್ತಾರೆ.  ಆದರೆ ಮಗು ಯಾವಾಗ ಬೇಕೆಂದು ನಿರ್ಧರಿಸುವುದು ಅವರಿಗೆ ಬಹಳಷ್ಟು ಕಷ್ಟವಾಗುತ್ತದೆ.

ವೃದ್ಧರು ಮತ್ತು ಸಮಾಜದ ಒತ್ತಡ

“ನೋಡಪ್ಪಾ, ನಾನು ಬದುಕಿರುವಾಗಲೇ ಮಗುವಿನ ಮುಖ ತೋರಿಸಿದ್ರೆ ನೆಮ್ಮದಿಯಾಗಿ ಪ್ರಾಣ ಬಿಡ್ತೀನಿ,”

“ಸಿಹಿ ಸುದ್ದಿ ಯಾವಾಗ ತಿಳಿಸ್ತೀಯಾ?” ಇಂತಹ ಪ್ರಶ್ನೆಗಳನ್ನು ಕೇಳೀ ಕೇಳೀ ಬೇಸತ್ತು ಕಡೆಗೂ ದಂಪತಿಗಳು ಮಗುವನ್ನು ಪಡೆಯಲು ನಿರ್ಧರಿಸಲೇಬೇಕಾಗುತ್ತದೆ.

ವೃದ್ಧರ ತಾತ ಅಜ್ಜಿ ಆಗುವ ಕನಸು ನವದಂಪತಿಗಳಿಗೆ ಮಾನಸಿಕವಾಗಿ ಒತ್ತಡ ಉಂಟು ಮಾಡುತ್ತದೆ. ವೃದ್ಧರ ಕನಸು ದಂಪತಿಗಳಿಗೆ ಸ್ವತಂತ್ರ ನಿರ್ಣಯವನ್ನು ತೆಗೆದುಕೊಳ್ಳುವುದಕ್ಕೆ ತೊಂದರೆ ಮಾಡುತ್ತದೆ.

ಇಂತಹ ಆಲೋಚನೆಯುಳ್ಳವರು ಮಗುವಿಗೆ ಅನ್ಯಾಯ ಮಾಡುವುದಲ್ಲದೆ, ತಮ್ಮ ಸಂತಸಗಳು ಹಾಗೂ ಸ್ವಾತಂತ್ರ್ಯಕ್ಕೂ ಗ್ರಹಣ ತಂದುಕೊಳ್ಳುತ್ತಾರೆ. ಇಂದಿನ ಆಧುನಿಕ ಯುಗದಲ್ಲಿ ಗರ್ಭನಿರೋಧಕದ ಅನೇಕ ಸಲಕರಣೆಗಳಿದ್ದು ಇಂತಹ ಆಲೋಚನೆ ಹೊಂದಿರುವುದು ಹಿಂದುಳಿಯುವುದರ ಗುರುತಾಗಿದೆ. ಮಗುವಿಗೆ ಜನ್ಮ ಕೊಟ್ಟ ಕೂಡಲೇ ಅದರ ಶಿಕ್ಷಣ, ಪಾಲನೆ ಪೋಷಣೆ, ಭಾವನಾತ್ಮಕ ಅಗತ್ಯಗಳು ಇತ್ಯಾದಿ ಬಹಳಷ್ಟು ಜವಾಬ್ದಾರಿಗಳು ಹೊರಬರುತ್ತವೆ. ಒಂದುವೇಳೆ ಈ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ನೀವು ಸಮರ್ಥರಾಗಿಲ್ಲದಿದ್ದಾಗ ಮಕ್ಕಳನ್ನು ಪಡೆಯುವುದು ಅವರಿಗೆ ಅನ್ಯಾಯ ಮಾಡಿದಂತೆ.

“ನಿಮಗೆ ಮಕ್ಕಳನ್ನು ಸಾಕಲಾಗದಿದ್ದರೆ ಅವರಿಗೆ ಜನ್ಮ ಕೊಡಬೇಡಿ,” ಎಂದು ಮದರ್‌ ತೆರೇಸಾ ಸಹ ಹೇಳಿದ್ದರು.

ಈ ನಿರ್ಧಾರ ಕೆರಿಯರ್‌ಗೆ ಬ್ಯಾರಿಯರ್‌ ಆಸ್ಟ್ರೇಲಿಯಾದ ಲೀಡಿಂಗ್‌ ವುಮನ್‌ ಶೆಫ್‌ ರೀಬಾಕ್ಸ್ ತಮ್ಮ ನೌಕರಿ, ಪ್ರೊಫೆಶನಲ್ ಬಗ್ಗೆ ಪ್ರೀತಿ ಇರುವುದರಿಂದ ಮಕ್ಕಳನ್ನು ಪಡೆಯುವ ಬಗ್ಗೆ ಇಷ್ಟಪಡಲಿಲ್ಲ.

“ಈ ದಾರಿಯಲ್ಲಿ ಬಹಳ ಕಷ್ಟಗಳಿವೆ. ಆದ್ದರಿಂದ ನಾನು ಅಮ್ಮನಾಗದಿರಲು ನಿರ್ಧರಿಸಿದೆ,” ಎಂದು ಅವರು ಹೇಳುತ್ತಾರೆ.

ಅನೇಕ ಬಾರಿ ನಿಮ್ಮ ವೃತ್ತಿಯ ಪರಿಸ್ಥಿತಿಗಳು ಹೇಗಿರುತ್ತಿವೆಯೆಂದರೆ ಮಕ್ಕಳ ಪಾಲನೆಗಾಗಿ ನೀವು ನೌಕರಿ ಬಿಡಬೇಕಾಗಬಹುದು. ಉದ್ಯೋಗಸ್ಥ ತಾಯಂದಿರು ಕೆರಿಯರ್‌ ಮತ್ತು ಮಕ್ಕಳ ನಡುವೆ ಹೊಂದಾಣಿಕೆ ಮೂಡಿಸುವಲ್ಲಿ ಬಹಳಷ್ಟು ತೊಂದರೆ ಎದುರಿಸುತ್ತಾರೆ.

ಮೀಡಿಯಾದಲ್ಲಿ ಕೆಲಸ ಮಾಡುವ 32 ವರ್ಷದ ಸುಪ್ರಿಯಾ ಹೀಗೆ ಹೇಳುತ್ತಾರೆ, “ಉದ್ಯೋಗಸ್ಥ ತಾಯಂದಿರು ತಮ್ಮ ಮಕ್ಕಳಿಗೆ ಸರಿಯಾಗಿ ಪಾಲನೆ ಪೋಷಣೆ ಮಾಡಲು ತಮ್ಮ ಕೆಲಸದ ನಡುವೆ ಬಿಡುವು ಮಾಡಿಕೊಳ್ಳಬೇಕಾಗುತ್ತದೆ.

“ಅವರಿಗೆ ತಾಯ್ತನ ಮತ್ತು ಕೆರಿಯರ್‌ ನಡುವೆ ಬ್ಯಾಲೆನ್ಸ್ ಮಾಡುವುದು ಬಹಳ ಒತ್ತಡ ತರುತ್ತದೆ. ಒಂದು ವೇಳೆ ಜಾಬ್‌ ಕಡೆ ಗಮನ ಕೊಟ್ಟರೆ ಮಕ್ಕಳನ್ನು ಇಗ್ನೋರ್‌ ಮಾಡಿದಂತಾಗುತ್ತದೆ. ಮಕ್ಕಳ ಕಡೆ ಗಮನ ಕೊಟ್ಟರೆ ಕೆರಿಯರ್‌ ಇಗ್ನೋರ್ ಮಾಡಿದಂತಾಗುತ್ತದೆ.”

ಮದುವೆಯ ನಂತರ ಕೆಲವು ಮಹಿಳೆಯರು ತಮ್ಮ ಶಿಕ್ಷಣ ಮುಂದುವರಿಸುತ್ತಾರೆ. ಒಳ್ಳೆಯ ಕೆರಿಯರ್‌ಗಾಗಿ ಉನ್ನತ ಶಿಕ್ಷಣ ಪಡೆಯಲು ಬಯಸುತ್ತಾರೆ. ಅಂತಹವರಿಗೆ ತಾಯ್ತನದ ನಿರ್ಧಾರ ಬಹಳ ದುಸ್ತರವಾಗುತ್ತದೆ. ತಾಯ್ತನದ ಜವಾಬ್ದಾರಿಗಳನ್ನು ನಿರ್ವಹಿಸುವಾಗ ನೌಕರಿ ಬಿಡಬೇಕಾಗುತ್ತದೆ. ಪ್ರಮೋಶನ್‌ ತ್ಯಾಗ ಮಾಡಬೇಕಾಗುತ್ತದೆ. ಲೀವ್ ‌ಗಳನ್ನು ಹಾಕಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಉದ್ಯೋಗಸ್ಥೆಯರಿಗೆ ಮಗುವಿಗೆ ಜನ್ಮ ನೀಡುವ ನಿರ್ಧಾರ ವಾಸ್ತವದಲ್ಲಿ ಕಠಿಣವಾಗಿರುತ್ತದೆ.

ಮಗುವಿಗೆ ಜನ್ಮ ನೀಡುವುದರ ಬೆಲೆ

ಮಕ್ಕಳಿಗೆ ಜನ್ಮ ನೀಡುವ ನಿರ್ಧಾರದಿಂದ ಹಿಡಿದು ಅವರನ್ನು ಐನ್‌ಸ್ಟೀನ್‌ ಮಾಡುವಲ್ಲಿ, ಅವರ ಮದುವೆ, ಅವರ ಅಗತ್ಯಗಳನ್ನು ಪೂರೈಸಲು ತಂದೆ ತಾಯಿ ಬಹಳ ಖರ್ಚು ಮಾಡಬೇಕಾಗತ್ತದೆ. ಮಕ್ಕಳಿಗೆ ಮಾಡಿದ ಖರ್ಚು ಎಂತಹ ಹೂಡಿಕೆಯೆಂದರೆ ಅದಕ್ಕೆ ಯಾವುದೇ ಬಡ್ಡಿ ಅಥವಾ ಲಾಭ ಸಿಗುವುದಿಲ್ಲ ಎಂದೂ ಕೆಲವರು ಹೇಳುತ್ತಾರೆ. ಜನ ಮನೆ ಅಥವಾ ಕಾರನ್ನು ಕೊಳ್ಳುವಾಗ ಅನೇಕ ಬಾರಿ ಯೋಚಿಸುತ್ತಾರೆ. ಫೈನಾನ್ಶಿಯಲ್ ಪ್ಲ್ಯಾನಿಂಗ್‌ ಮಾಡುತ್ತಾರೆ. ಆದರೆ ಮಗುವಿಗೆ ಜನ್ಮ ನೀಡುವಂತಹ ಮಹತ್ವಪೂರ್ಣ ನಿರ್ಧಾರವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಹೀಗೇಕೆ?

ಮಗುವಿಗೆ ಜನ್ಮ ನೀಡು ಮೊದಲು ನೀವು ಡಾಕ್ಟರ್‌ಗಳು, ಔಷಧಗಳು ಇತ್ಯಾದಿಗಳಿಗೆ ಖರ್ಚು ಮಾಡಬೇಕಾಗುತ್ತದೆ. ಮಗುವಿನ ಡೆಲಿವರಿಯ ಸಮಯದಲ್ಲಿ ಸಾಕಷ್ಟು ಹಣ ಖರ್ಚಾಗುತ್ತದೆ. ಮಗು ಹುಟ್ಟಿದ ಕೂಡಲೇ ಅದರ ಅಗತ್ಯಗಳು ಮತ್ತು ಜವಾಬ್ದಾರಿಗಳ ಹೊರೆಯಿಂದಾಗಿ ನೀವು ನಿಮ್ಮ ಆಸೆಗಳು, ಅಗತ್ಯಗಳು ಹಾಗೂ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೀರಿ. ಹಾಲಿನ ಬಾಟಲ್, ಡೈಪರ್‌, ಕ್ರೀಂ, ಪೌಡರ್‌, ಸೋಪು, ಎಣ್ಣೆ, ಹೆಲ್ತ್ ಡ್ರಿಂಕ್‌, ಬಟ್ಟೆಗಳು, ಗೊಂಬೆಗಳಿಂದ ಶುರುವಾದ ಅಗತ್ಯಗಳು, ಪ್ಲೇಹೋಮ್ ನ ವರ್ಣರಂಜಿತ ಪುಸ್ತಕಗಳು, ಸ್ಕೂಲ್ ‌ಬ್ಯಾಗ್‌, ನೀರಿನ ಬಾಟಲ್, ಲಂಚ್‌ ಬಾಕ್ಸ್, ಚಾಕಲೇಟ್‌, ಸ್ಕೂಲ್ ಫಂಕ್ಷನ್‌, ಟ್ಯೂಶನ್‌, ಕೋಚಿಂಗ್‌, ಫಾಸ್ಟ್ ಫುಡ್‌, ಬ್ರ್ಯಾಂಡೆಡ್‌ ಬಟ್ಟೆಗಳು, ಫುಟ್‌ವೇರ್‌, ಎಲೆಕ್ಟ್ರಾನಿಕ್‌ ಗ್ಯಾಜೆಟ್ಸ್, ಮೊಬೈಲ್ ‌ಮತ್ತು ಲ್ಯಾಪ್‌ಟಾಪ್‌, ಮೆಡಿಕಲ್ ವೆಚ್ಚಗಳು, ಒಳ್ಳೆಯ ಕಾಲೇಜಿನಲ್ಲಿ ಸೇರಿಸುವಿಕೆ, ಪಾರ್ಟಿಗಳು, ಮದುವೆಗಳಲ್ಲಿ ಉಂಟಾಗುವ ಖರ್ಚುಗಳು…. ಅಂದರೆ ಎಂದೂ ಮುಗಿಯದ ಖರ್ಚುಗಳು, ಆದರೆ ಸೀಮಿತ ಆದಾಯ.

ಅಧ್ಯಾಪಕಿಯಾಗಿರುವ ಗಾಯತ್ರಿ ಹೀಗೆ ಹೇಳುತ್ತಾರೆ, “ಇಂದು ಒಂದು ಮಗುವಿನ ಪಾಲನೆ ಪೋಷಣೆ, ಅದಕ್ಕೆ ಫೈನಾನ್ಶಿಯಲ್ ಪ್ಲ್ಯಾನಿಂಗ್‌ ಎಂಬುದು ಭಯಂಕರ ದುಃಸ್ವಪ್ನದಂತಿದೆ. ಮಗುವಿಗೆ ಜನ್ಮ ನೀಡುವ ನಿರ್ಧಾರದ ಜೊತೆ ಆರ್ಥಿಕ ಜವಾಬ್ದಾರಿ ಮತ್ತು ಭಾವನಾತ್ಮಕ ಅಗತ್ಯಗಳೂ ಸೇರಿಕೊಂಡಿರುತ್ತವೆ.

“ಅದಕ್ಕೆ ಪ್ರೀತಿ ಹಾಗೂ ಸಮಯ ಕೊಡುವ ಅಗತ್ಯವಿದೆ. ಏಕೆಂದರೆ, ಅನೇಕ ಬಾರಿ ತನ್ನ ಭಾವನಾತ್ಮಕ ಅಗತ್ಯಗಳು ಪೂರೈಕೆಯಾಗದಿದ್ದಾಗ ಮಗು ತಪ್ಪು ದಾರಿಯಲ್ಲಿ ಅಲೆದಾಡುತ್ತದೆ.”

ಇತ್ತೀಚೆಗೆ ತಾಯಿಯಾದ 25 ವರ್ಷದ ನಯನಾ ಹೀಗೆ ಹೇಳುತ್ತಾರೆ, “ನಾನು ಹೌಸ್‌ ವೈಫ್‌. ಆದರೂ ನನ್ನ 2 ತಿಂಗಳ ಮಗುವಿಗೆ ನನ್ನ ಸಮಯ ಹಾಗೂ ಎನರ್ಜಿ ಎರಡನ್ನೂ ಕೊಡಬೇಕಾಗುತ್ತದೆ. 24 ಗಂಟೆಗಳಲ್ಲಿ 18-20 ಗಂಟೆಗಳನ್ನು ಮಗುವನ್ನು ನೋಡಿಕೊಳ್ಳಲೇ ಕಳೆಯಬೇಕಾಗುತ್ತದೆ.

“ನನಗೆ ಬಹಳ ಸುಸ್ತಾಗುತ್ತದೆ. ಈ ಕೆಲಸದಲ್ಲಿ ಸಹಾಯ ಮಾಡಲು ಮನೆಯಲ್ಲಿ ಯಾರೂ ಹಿರಿಯರು ಇಲ್ಲ. ನಾನು ಮಲಗಲು ಪ್ರಯತ್ನಿಸಿದಾಗ ಅವನು ಎದ್ದುಬಿಡುತ್ತಾನೆ. ನಾನು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸಗೊಂಡಿದ್ದೇನೆ. ಒಮ್ಮೊಮ್ಮೆ ನನಗೆ ಬಹಳ ಸಿಟ್ಟು ಬರುತ್ತದೆ.”

ಆಲೋಚನೆ ಹಾಗೂ ರೀತಿನೀತಿಯಲ್ಲಿ ಬದಲಾವಣೆ

ಸಮಾಜದಲ್ಲಿ ಇಂದು ಡಿಂಕ್‌ನಂತಹ (ಡಬಲ್ ಇನ್‌ಕಮ್ ನೋ ಕಿಡ್ಸ್) ವಿಧಾನ ಅನುಸರಿಸುವ ಜನರ ಸಂಖ್ಯೆ ದಿನದಿನಕ್ಕೂ ಹೆಚ್ಚುತ್ತಿದೆ. ಹಿಂದೆ ಯಾರಿಗಾದರೂ ಮಕ್ಕಳಾಗದಿದ್ದರೆ ಅವರಿಗೆ ಏನೋ ಸಮಸ್ಯೆ ಇದೆ ಎಂದು ಜನ ತಿಳಿಯುತ್ತಿದ್ದರು. ಆದರೆ ಈಗ ಆ ಆಲೋಚನೆ ಬದಲಾಗುತ್ತಿದೆ. ಈಗ ಜನ ತಮ್ಮ ಇಚ್ಛೆಯಂತೆ ಮಗುವನ್ನು ಪಡೆಯಲು ಅಥವಾ ಪಡೆಯದಿರಲು ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಒಬ್ಬ ದಂಪತಿ ಹೀಗೆ ಹೇಳುತ್ತಾರೆ, “ಮಗುವನ್ನು ಪಡೆಯುವುದು ಅಷ್ಟೊಂದು ಅಗತ್ಯವೇ? ಮಗು ಈ ಜಗಕ್ಕೆ ಬಂದು ಕಷ್ಟಗಳನ್ನು ಎದುರಿಸುವುದು ನಮಗೆ ಇಷ್ಟವಿಲ್ಲ. ಮಕ್ಕಳನ್ನು ಪಡೆಯುವ ನಿರ್ಧಾರ ಬಹಳ ಕಠಿಣ ನಿರ್ಧಾರವಾಗಿದೆ. ಇಡೀ ಬದುಕಿನ ಜವಾಬ್ದಾರಿಯಾಗಿದೆ.”

ಮೀಡಿಯಾದಲ್ಲಿ ಕೆಲಸ ಮಾಡುವ 30 ವರ್ಷದ ಸವಿತಾ ಹೀಗೆ ಹೇಳುತ್ತಾರೆ, “ನನಗೆ ತಾಯಿಯಾಗುವುದು ಇಷ್ಟವಿಲ್ಲ. ಈ ನಿರ್ಧಾರವನ್ನು ನಾನು ಹಾಗೂ ನನ್ನ ಗಂಡ ಒಟ್ಟಿಗೆ ತೆಗೆದುಕೊಂಡಿದ್ದೇವೆ.

“ಮಗುವಿಗೆ ಜನ್ಮ ನೀಡಿದ ನಂತರ ನಿಮ್ಮ ಬದುಕಿನಿಂದ ಪ್ರೀತಿ, ರೊಮ್ಯಾನ್ಸ್ ಎಲ್ಲ ಮಾಯವಾಗುತ್ತವೆ. ನಮ್ಮ ಅಗತ್ಯಗಳನ್ನು ದೂರ ಮಾಡಿ ಎಲ್ಲಕ್ಕೂ ಮೊದಲು ಮಕ್ಕಳ ಅಗತ್ಯಗಳನ್ನು ಪೂರೈಸಬೇಕಾಗುತ್ತದೆ. ಇಂತಹ ಸ್ಥಿತಿಯಲ್ಲಿ ಒಮ್ಮೊಮ್ಮೆ ನಾವು ಡಿಪ್ರೆಶನ್‌ ಹಂತಕ್ಕೆ ಹೋಗಿಬಿಡುತ್ತೇವೆ.”  ಡಾ. ಸರಸ್ವತಿ ಹೀಗೆ ಹೇಳುತ್ತಾರೆ, “ಈಗ ಮಕ್ಕಳಿಗೆ ಜನ್ಮ ಕೊಡದಿರುವ ನಿರ್ಧಾರವನ್ನು `ಸ್ವಾರ್ಥ’ ಎಂದು ತಿಳಿಯುವುದಿಲ್ಲ. ಈಗ ಗಂಡ ಹೆಂಡತಿ ಇಬ್ಬರೂ ವರ್ಕಿಂಗ್‌. ಹೀಗಿರುವಾಗ ಮಗುವಿನ ಅಗತ್ಯಗಳನ್ನು ನಿರ್ಲಕ್ಷಿಸುವುದಕ್ಕಿಂತಲೂ ಅದಕ್ಕೆ ಜನ್ಮ ಕೊಡದಿರುವುದು ಒಳ್ಳೆಯದು. ಒಬ್ಬರು ಲೇಬರ್‌ ಪೇನ್‌ಗೆ ಹೆದರುತ್ತಾರೆ. “ಒಬ್ಬರು ಡೈಪರ್‌ ಬಲಿಸಲು ಗಾಬರಿಗೊಳ್ಳುತ್ತಾರೆ. ಕೆಲವರು ಶಾಲೆಗೆ ಅಡ್ಮಿಟ್‌ ಮಾಡುವಾಗ ಉದ್ದನೆಯ ಕ್ಯೂನಲ್ಲಿ ನಿಲ್ಲಲು ಹೆದರುತ್ತಾರೆ, ಕೆಲವರು ಮಕ್ಕಳ ಮದುವೆ ಬಗ್ಗೆ ಹೆದರುತ್ತಾರೆ. ಕೆಲವರು ಈ ಪ್ರಪಂಚವನ್ನು ಮುಂಬರುವ ಮಕ್ಕಳಿಗೆ ಉತ್ತಮವಾಗಿದೆಯೆಂದು ಹೇಳುವುದಿಲ್ಲ.

“ನಮ್ಮ ಬಾಲ್ಯವೇನೂ ಅಪ್ಸರೆಯರ ಕಥೆಯಂತಿರಲಿಲ್ಲ. ಇನ್ನು ನಮ್ಮ ಮಕ್ಕಳದೇನು ಗ್ಯಾರಂಟಿ? ಬದುಕಿನ 20-22 ವರ್ಷಗಳ ದೀರ್ಘ ಅವಧಿಯನ್ನು ಮಕ್ಕಳ ಮೇಲೆ ಹೂಡುವ ವಿಚಾರ ನಮ್ಮನ್ನು ಹೆದರಿಸುತ್ತದೆ.”

ನ್ಯೂಯಾರ್ಕ್‌ನಲ್ಲಂತೂ `ಮಕ್ಕಳು ಏಕೆ ಬೇಕು?’ ಎಂಬ ವಿಷಯದ ಬಗ್ಗೆ ಚರ್ಚೆಯಾಗುತ್ತಿರುತ್ತದೆ. ಮುಂಬೈ ಒಂದರಲ್ಲೇ ಇಂತಹ ದಂಪತಿಗಳಲ್ಲಿ ಶೇ.50ರಷ್ಟು ಹೆಚ್ಚಳವಾಗಿದೆ. ಅವರು ಮಗುವಿಗೆ ಜನ್ಮ ಕೊಡದಿರಲು ನಿರ್ಧರಿಸಿದ್ದಾರೆ. ಹುಟ್ಟುವ ಮಗು ನಮ್ಮ ವಂಶೋದ್ಧಾರಕನಾಗುತ್ತಾನೆಂದು ತಿಳಿದು ಜನ್ಮ ಕೊಡುವುದು ಸ್ವಾರ್ಥವಾಗುತ್ತದೆ.

ಸುಶ್ಮಿತಾಸೇನ್‌ರ ಆದರ್ಶ

ಮಾಜಿ ಭುವನ ಸುಂದರಿ ಸುಶ್ಮಿತಾ ಸೇನ್‌ ಇದಕ್ಕೆ ಒಳ್ಳೆಯ ಉದಾಹರಣೆಯಾಗಿದ್ದಾರೆ. ಅವರು ಸುಖ ಸೌಲಭ್ಯಗಳಿಂದ ವಂಚಿತರಾಗಿದ್ದ ಇಬ್ಬರು ಹೆಣ್ಣುಮಕ್ಕಳನ್ನು ದತ್ತು ಸ್ವೀಕಾರ ಮಾಡಿದರು. ಅವರೊಬ್ಬ ಯಶಸ್ವಿ ಸಿಂಗಲ್ ಮದರ್‌ ಆಗಿದ್ದು, ಆ ಮಕ್ಕಳಿಗೆ ಎಲ್ಲ ಸುಖ ಸೌಲಭ್ಯಗಳನ್ನೂ ಕೊಟ್ಟರು. ಒಂದು ವೇಳೆ ನೀವು ನಿಜವಾಗಿಯೂ ಮಕ್ಕಳನ್ನು ಪ್ರೀತಿಸುವಿರಾದರೆ ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳಿ ಮತ್ತು ಅವರಿಗೆ ಉತ್ತಮ ಬದುಕನ್ನು ಕೊಡಿ.

– ಎಂ. ಲಲಿತಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ