ವ್ಯಂಗ್ಯಪೂರ್ಣಿಮಾ ರಾವ್

“ಸಾಕು…. ಸಾಕು….. ಈಗ ಅನಗತ್ಯವಾಗಿ ಯಾರಾದ್ರೂ ಕ್ಲಾಪ್ಸ್ ಮಾಡ್ತಾ ಕೂತರೆ ನನಗೆ ಕೆಟ್ಟ ಕೋಪ ಬರುತ್ತೆ! ನನ್ನನ್ನು ಹೊಗಳುವ ನೆಪದಲ್ಲಿ ಚಪ್ಪಾಳೆ ತಟ್ಟುತ್ತಾ ಕೂರಬೇಡಿ….. ಅದರ ಬದಲು ಎಲ್ಲರೂ ಮನೆಗೆಲಸದಲ್ಲಿ ನನಗೊಂದಿಷ್ಟು ಸಹಾಯ ಮಾಡಿ!” ಎಂದು ಕಟಕಟ ಹಲ್ಲು ಕಡಿಯುತ್ತಾ ಗುಡುಗಿದೆ. ಚಪ್ಪಾಳೆ ತಟ್ಟುತ್ತಿದ್ದವರ ಕೈ ಹಾಗೇ ನಿಂತು ಹೋಯ್ತು. ಎಲ್ಲರ ದೃಷ್ಟಿ ಈಗ ಚುರುಕಾಗಿ ನನ್ನಲ್ಲೇ ನೆಟ್ಟಿತು.

“ಮೈಗಳ್ಳತನ ಮಾಡುವುದಕ್ಕೂ ಒಂದು ಲಿಮಿಟ್‌ ಇರಬೇಕು! ಹೆಚ್ಚಿನ ಕೆಲಸ ಮಾಡಲಾಗದಿದ್ದರೆ ಸಣ್ಣಪುಟ್ಟದ್ದಾದರೂ ಮಾಡಬಹುದು ತಾನೇ…..? ಈ ಹಾಳು ಲಾಕ್‌ ಡೌನ್‌ ಡಿಕ್ಲೇರ್‌ಆದಾಗಿನಿಂದ ನನ್ನ ಆಫೀಸಿನ ಕೆಲಸವನ್ನು ವರ್ಕ್‌ಫ್ರಂ ಹೋಮ್ ಅಂತ ಮಾಡುತ್ತಾ, ನಿಮ್ಮೆಲ್ಲರ ಸೇವೆ ಮಾಡೋದೇ ಆಗೋಯ್ತು, ಅದೂ 24/7! ಮೊದಲಾದರೂ ಆಫೀಸಿಗೆ ನೆಮ್ಮದಿಯಾಗಿ ಹೋಗುತ್ತಾ ಅಷ್ಟು ಹೊತ್ತೂ ಈ ಮನೆ ಚಾಕರಿಯಿಂದ ದೂರ ಉಳಿಯುತ್ತಿದ್ದೆ. ಈಗ…. ಅದೂ ಮಾಡೂ….. ಇದೂ ಮಾಡು….

“ಅರೆ….. 4 ಜನ ಇರೋ ಮನೆ ಅಂದ್ರೆ 101 ಕೆಲಸಗಳು ಇರುತ್ತವೆ. ಯಾರಿಗೂ ಯಾವ ಸಹಾಯ ಮಾಡೋದೂ ಬೇಡ, ಅವರವರ ಲ್ಯಾಪ್‌ ಟಾಪ್‌, ಟ್ಯಾಬ್ಲೆಟ್ಟು, ಮೊಬೈಲ್ ‌ಹಿಡಿದುಕೊಂಡು ಕುಳಿತುಬಿಟ್ಟರೆ ನಿಮ್ಮಗಳ ಜಾಗಕ್ಕೆ ತಂದೂ ತಂದೂ ಬಡಿದು ಸೇವೆ ಮಾಡೋದೇ ಆಗೋಯ್ತು! ನಾನೂ ಮನುಷ್ಯಳೇ ಅಲ್ವಾ….? ಎಲ್ಲರೂ ಕಿವಿ ತೆರೆದು ನೆಟ್ಟಗೆ ಕೇಳಿಸಿಕೊಳ್ಳಿ…… ಇವತ್ತಿನಿಂದ ಎಲ್ಲರೂ ನನಗೆ ಸಹಾಯ ಮಾಡಿದಿರೋ ಸರಿ….. ಇಲ್ಲದಿದ್ದರೆ ನಾನೂ ಅಡುಗೆಮನೆಗೆ ಬಾಗಿಲು ಜಡಿದು ಟಿವಿ ಮುಂದೆ ಕೂತುಬಿಡ್ತೀನಿ. ಯಾರಿಗೆ ಏನು ಬೇಕೋ ಬೇಯಿಸಿ ಬಡಿದುಕೊಳ್ಳಿ!”

ನನ್ನ ರೌದ್ರಾವತಾರ ಕಂಡು ತಕ್ಷಣ ಇವರು ಕೈಗೆ ಪೊರಕೆ ತೆಗೆದುಕೊಂಡು ಗುಡಿಸಲು ಆರಂಭಿಸಿಯೇಬಿಟ್ಟರು. ಮಗಳು ಸ್ಮಿತಾ ಒಂದು ಬಟ್ಟೆ ತೆಗೆದುಕೊಂಡು ಎಲ್ಲಾ ಕಡೆ ಡಸ್ಟಿಂಗ್‌ ಆರಂಭಿಸಿದಳು. ಮಗರಾಯ ಸುಮ್ಮನಿರುತ್ತಾನೆಯೇ?

“ಅಮ್ಮಾ, ಎಲ್ಲಾ ಕಡೆ ಬಿದ್ದಿರುವ ಬಟ್ಟೆ ಮಡಿಸಿ ಅವರವರ ವಾರ್ಡ್‌ ರೋಬ್‌ ನಲ್ಲಿಡುತ್ತೇನೆ,” ಎಂದು ಬಟ್ಟೆ ಮಡಿಸಲು ಆರಂಭಿಸಿದ ಕಿಟ್ಟು.

“ಅದಾದ ಮೇಲೆ ಅಂಗಡಿಯಿಂದ ಸಾಮಾನು ತರೋದಿದ್ರೆ ಹೇಳಿಬಿಡು,” ಎಂದು ಮೆಲ್ಲಗೆ ಹೇಳಿದ.

“ನೋಡ್ರಿ, ಗುಡಿಸಿ ಆದ್ಮೇಲೆ ಆ ಸಿಂಕ್‌ನಲ್ಲಿ ಬಿದ್ದಿರೋ ಒಂದು ರಾಶಿ ಪಾತ್ರೆ ತೊಳೆದಿಡಿ. ಅಷ್ಟರಲ್ಲಿ ನಾನು ಆಫೀಸಿಗೆ ಕಳಿಸಬೇಕಿರೋ ಈ ಮೇಲ್ಸ್ ಚೆಕ್‌ ಮಾಡಿ ಬರ್ತೀನಿ. ಸ್ಮಿತಾ, ನೀನು ಡಸ್ಟಿಂಗ್‌ ಆದಮೇಲೆ ವಾಶಿಂಗ್‌ ಮೆಶೀನ್‌ಗೆ ಬಟ್ಟೆಗಳನ್ನು ಹಾಕಿಬಿಡು….. ಗಮನವಿರಲಿ, ಮೊದಲು ಎಲ್ಲರ ಲೈಟ್‌ ಕಲರ್‌ ಬಟ್ಟೆ ಹಾಕು, ನಂತರ ಡಾರ್ಕ್‌ ಬಟ್ಟೆಗಳನ್ನು ಹಾಕುವೆಯಂತೆ. ಏನಾದ್ರೂ ಡೌಟ್‌ ಇದ್ದರೆ ನನಗೆ ತೋರಿಸಿ ಮಾಡು.

“ಲೋ ಕಿಟ್ಟು, ಬಟ್ಟೆ ಮಡಿಸಿ ಆದ ಮೇಲೆ ಹೊರಗಿನ ಗಾರ್ಡನ್‌ನಲ್ಲಿ ಎಲ್ಲಾ ಗಿಡಗಳಿಗೂ ನೀರು ಹಾಕು. 4 ದಿನ ಆಯ್ತು ಅವು ನೀರು ಕಂಡು, ಈ ರಾಶಿ ಕೆಲಸದ ಮಧ್ಯೆ ನನಗೆ ಆ ಕಡೆ ಬಿಡುವೇ ಸಿಗಲಿಲ್ಲ…..” ಎನ್ನುತ್ತಾ ತೀಕ್ಷ್ಣವಾಗಿ ಎಲ್ಲರ ಕಡೆ ಕಣ್ಣಿಂದ ಬಾಣ ಬಿಡುತ್ತಾ, ನನ್ನ ಲ್ಯಾಪ್‌ ಟಾಪ್‌ ಕಡೆ ನಡೆದೆ.

ಆದಷ್ಟು ಬೇಗ ಬೇಗ ಆಫೀಸಿನ ಅರ್ಜೆಂಟ್‌ ಕೆಲಸ ಮುಗಿಸುವಷ್ಟರಲ್ಲಿ 1 ಗಂಟೆ ಕಳೆಯಿತು. ನಂತರ ಮೈ ಮುರಿಯುತ್ತಾ ಹೋಗಿ ಕನ್ನಡ ಮುಂದೆ ನಿಂತು ತಲೆ ಬಾಚಿಕೊಳ್ಳತೊಡಗಿದೆ. ಎಲ್ಲರಿಗೂ ಇವತ್ತು ಕೆಲಸ ಹಂಚಿಬಿಟ್ಟೆ ಎಂದು ನನ್ನ ಬೆನ್ನು ನಾನೇ ತಟ್ಟಿಕೊಳ್ಳತೊಡಗಿದೆ. ಸೆಖೆ ಗಂಟು ಹಾಕಿಕೊಂಡು ಹೋಗಿ ಸ್ನಾನ ಮುಗಿಸಿ ಬಂದೆ. ನಂತರ ನೈಟಿ ಧರಿಸಿ, ಲೈಟ್‌ ಆಗಿ ಮೇಕಪ್ ಟಚ್‌ ಕೊಟ್ಟೆ. ಯಾಕೋ ಮನಸ್ಸಿಗೆ ಹಿತವೆನಿಸಿ 4-5 ಬಗೆಯ ಕೋನಗಳಲ್ಲಿ ಸೆಲ್ಛಿ ಕ್ಲಿಕ್ಕಿಸಿಕೊಂಡೆ. ಯಾಕೋ ಎಲ್ಲಾ ಸಾಕಾಯ್ತು ಎನಿಸಿ, ಹಾಸಿಗೆ ಮೇಲೆ ಹಾಗೆ ಒರಗಿಕೊಂಡೆ.

10 ನಿಮಿಷಗಳ ಮೇಲೆ ಎದ್ದು ಬೇಗ ಬೇಗ ಅಡುಗೆ ಸಿದ್ಧಪಡಿಸಿ, ಎಲ್ಲವನ್ನೂ ಡೈನಿಂಗ್‌ ಟೇಬಲ್ ಮೇಲೆ ಜೋಡಿಸಿದೆ. ಎಲ್ಲರಿಗೂ ಬಡಿಸಿ ಊಟ ಮುಗಿಸಿದರೆ ಆರಾಮವಾಗಿ ನನ್ನ ಉಳಿದ ಆಫೀಸ್‌ ಕೆಲಸ ಗಮನಿಸಬಹುದು. ಸಂಜೆ 5 ಗಂಟೆಗೆ ಟಿವಿಯಲ್ಲಿ ಯಾವುದೋ ಒಳ್ಳೆ ಸಿನಿಮಾ ಎಂದು ನಿನ್ನೆಯಿಂದ ತೋರಿಸುತ್ತಿದ್ದರು, ಅದನ್ನು ಮಿಸ್‌ ಮಾಡಬಾರದು ಎಂದುಕೊಂಡೆ. ಹಾಗೇ ಒಂದು ಕ್ಷಣ ಎಲ್ಲರತ್ತ ಕಣ್ಣು ಹಾಯಿಸಿದೆ. ತಂತಮ್ಮ ಕೆಲಸ ಮುಗಿಸಿ ಎಲ್ಲರೂ ಅವರವರ ಲೋಕದಲ್ಲಿ ಇದ್ದರು. ಟೀಪಾಯಿ ಮೇಲಿದ್ದ ಮಾಸಪತ್ರಿಕೆ ತೆಗೆದುಕೊಂಡು ಹಾಯಾಗಿ ತಿರುವುತ್ತಾ ಕುಳಿತೆ.

ಆಹಾ, ನನಗೆ ಅಂತ ಒಂದಿಷ್ಟು ಟೈಂ ಮಾಡಿಕೊಂಡು ಹೀಗೆ ಬಿಡುವಾಗಿ ಕುಳಿತು ಎಷ್ಟು ದಿನ ಆಗಿಹೋಯಿತು….? ಈ ಕೊರೋನಾ ಅಂತ ಬಂದದ್ದೇ ಬಂತು, ನನ್ನ ಪಾಲಿಗೆ ಸತ್ವಪರೀಕ್ಷೆಯೇ ಶುರುವಾಗಿ ಹೋಯಿತು. ಅತ್ತ ಆಫೀಸಿನ ಕೆಲಸವನ್ನು ವರ್ಕ್‌ಫ್ರಂ ಹೋಂ ನೆಪದಲ್ಲಿ ಮುಗಿಸಬೇಕು, ಇತ್ತ ಇವರುಗಳಿಗೆ ಸೇವೆ ಮಾಡುತ್ತಲೇ ಇರಬೇಕು. ಈ ಮಕ್ಕಳು ನೆಟ್ಟಗೆ ಆನ್‌ ಲೈನ್ ಕ್ಲಾಸಸ್‌ ಅಟೆಂಡ್‌ ಮಾಡುತ್ತಿದ್ದಾರಾ, ಅವರಿಗೆ ಟೆಕ್ನಿಕಲ್ ತೊಂದರೆ ಇಲ್ಲ ತಾನೇ…. ಎಲ್ಲ ಗಮನಿಸಬೇಕು. ಹೀಗಾಗಿ ವರ್ಕ್‌ ಫ್ರಂ ಹೋಂ ನನ್ನ ಕೆಲಸದ ಹೊರೆಯನ್ನು ಹೆಚ್ಚಿಸಿತು.

ಅತ್ತ ಕೆಲಸದ ನಿಂಗಿ ಸಹ ಬರುತ್ತಿರಲಿಲ್ಲ, ಇತ್ತ ನಾವು ಎಲ್ಲೂ ಹೊರಗಡೆ ಹೋಗುವ ಹಾಗೂ ಇರಲಿಲ್ಲ. ಹೀಗಾಗಿ ಎಲ್ಲರೂ ಮನೆಯಲ್ಲೇ ಕೈದಿಗಳಾಗಿ ಉಳಿಯಬೇಕಾಯಿತು. ಹೀಗಾಗಿ ಮನೆಯವರ ಬೇಡಿಕೆಗಳನ್ನು ಪೂರೈಸುತ್ತಾ ಬಗೆಬಗೆ ತಿಂಡಿ ಮಾಡುವುದೇ ನನ್ನ ಕೆಲಸವಾಯಿತು. ಇದರಿಂದಲೇ ರೋಸಿ ಹೋಗಿ ಇತ್ತು ಕೂಗಾಡಿದ್ದೆ. ಎಂದಿನ ಇಡ್ಲಿ ದೋಸೆ ಉಪ್ಪಿಟ್ಟುಗಳು ಸಾಲದೆಂಬಂತೆ ಪಿಜ್ಜಾ ಬರ್ಗರ್‌ಗಳು, ಚಕ್ಕುಲಿ ಕೋಡುಬಳೆ, ಕೇಕು, ಬಿರಿಯಾನಿ ಎಂದು ಬಯಸಿದಾಗ ಮಾಡುವುದೇ ಕೆಲಸವಾಯಿತು. ಅತ್ತ ಮಕ್ಕಳಿಗೆ ಅನ್ನ ಸಾರು, ಪಲ್ಯ ಗೊಜ್ಜು ಬೇಸರವಾದರೆ ಇವರಿಗೆ ಅದಿಲ್ಲದೆ ಊಟವೇ ಇಷ್ಟ ಆಗುತ್ತಿರಲಿಲ್ಲ.

ಬರೀ ಬಗೆಬಗೆಯ ಅಡುಗೆ ಮಾಡಿ ಮುಗಿಸಿದರೆ ಆಯಿತೇ? ಒಂದೆಡೆ ವರ್ಕ್‌ ಫ್ರಂ ಹೋಂ ನಿಭಾಯಿಸಬೇಕು, ಜೊತೆಗೆ ಹೋಂ ಕೆಲಸಗಳಾದ ಗುಡಿಸುವ, ಸಾರಿಸುವ, ಪಾತ್ರೆಪಡಗ, ಬಟ್ಟೆ ಒಗೆವ, ಒಣಗಿಸುವ, ಕ್ಲೀನಿಂಗ್‌, ಗಾರ್ಡನಿಂಗ್‌….. ಒಂದೇ ಎರಡೇ? ನಮ್ಮ ಮನೆಯಲ್ಲಿ ಎಲ್ಲರಿಗೂ ನಾನೊಂದು ದುಡಿಯುವ ಯಂತ್ರವಾಗಿ ಹೋಗಿದ್ದೆ.

ಹಿಂದೆ ಆಫೀಸ್‌ ಇದ್ದ ಕಾಲದಲ್ಲಿ, ಬೆಳಗ್ಗೆ ಬೇಗ ಎದ್ದು ತಿಂಡಿ, ಅಡುಗೆ ರೆಡಿ ಮಾಡಿ, ನಿಂಗಿ ಬರುವ ಹೊತ್ತಿಗೆ ಅವಳಿಗೆ ಉಳಿದೆಲ್ಲ ಕೆಲಸ ಒಪ್ಪಿಸಿ ನಾನು ಆಫೀಸಿಗೆ ರೆಡಿ ಆಗುತ್ತಿದ್ದೆ. ಇವರು ರೆಡಿಯಾಗಿ ನನ್ನನ್ನು ಅರ್ಧ ದಾರಿ ಡ್ರಾಪ್‌ ಮಾಡುತ್ತಿದ್ದರು. ಎಲ್ಲರ ಬಾಕ್ಸ್ ರೆಡಿ ಮಾಡಿ, ಮಕ್ಕಳನ್ನು ಶಾಲೆಯ ವ್ಯಾನ್‌ ಹತ್ತಿಸಿ ನಾವು ಹೊರಡುತ್ತಿದ್ದೆವು. ಆಫೀಸಿಗೆ ಹೋದ ಮೇಲೆ ದಿನವಿಡೀ ಅಲ್ಲಿನ ಕೆಲಸಗಳಲ್ಲಿ ಬಿಡುವಿರದೆ ಇದ್ದರೂ, ನನ್ನದೇ ಆದ ಟೈಂ ಇತ್ತು. ಲಂಚ್‌ ಟೈಂ, ಕಾಫಿ ಬ್ರೇಕ್‌, ಸಹೋದ್ಯೋಗಿಗಳೊಂದಿಗೆ ಮಾತುಕಥೆ…. ಆ ಕಾಲವೇ ಚೆನ್ನಾಗಿತ್ತು! ಆದರೆ ಈಗ ಮನೆಯಲ್ಲಿ ನನಗೆ ಪ್ರೈವೆಸಿ ಎನ್ನುವುದು ಕನಸಾಗಿ ಹೋಗಿದೆ. ಇಡೀ ದಿನ ಯಂತ್ರದಂತೆ ದುಡಿಯುತ್ತಲೇ ಇದ್ದು ಬಿಡುವುದೇ? 2 ಕ್ಷಣ ಕುಳಿತಿರಲಿಕ್ಕಿಲ್ಲ ಯಾರಾದರೂ ತಮ್ಮ ಬೇಡಿಕೆ ಮುಂದಿಡುತ್ತಿದ್ದರು. ಸ್ವಲ್ಪ ಟೀ ಕೊಡ್ತೀಯಾ…. ಅಮ್ಮ ನನ್ನ ಡ್ರೆಸ್‌ ಎಲ್ಲಿ? ಅಮ್ಮ ನನ್ನ ಚಾರ್ಜರ್‌ ಎಲ್ಲಿ…..? ಹೇಗೋ ಹಲ್ಲು ಕಚ್ಚಿಕೊಂಡು ನಾನು ದಿನ ಎಣಿಸತೊಡಗಿದೆ.

ಒಂದಲ್ಲ ಒಂದು ದಿನ ಈ ಲಾಕ್‌ ಡೌನ್‌ ಸರಿಹೋದೀತೆಂಬ ದೂರದ ಆಸೆಯಿತ್ತು. ಇದರಿಂದ ಹೊರ ಬರಲೆಂಬಂತೆ ದೇಶದಲ್ಲಿ ಎಲ್ಲೆಡೆ, ಜೋರಾಗಿ ತಟ್ಟೆ, ಲೋಹದ ತಾಟುಗಳ ಮೇಲೆ ಜಾಗಟೆ ಬಾರಿಸಿ, ಕೈಯಿಂದ ಚಪ್ಪಾಳೆ ತಟ್ಟುತ್ತಾ ಕೊರೋನಾ ಓಡಿಸುವ ಹುನ್ನಾರ ನಡೆದಾಗ ನನಗೆ ನಗುವುದೋ ಅಳುದೋ ತಿಳಿಯದಾಯಿತು.

ಬಹಳ ಹಿಂದೆ ಒಂದು ಕಾಲದಲ್ಲಿ ದೆವ್ವಕ್ಕೆ `ನಾಳೆ ಬಾ’ ಎಂದು ಮನೆ ಬಾಗಿಲ ಮೇಲೆ ಬರೆಯುವುದು (ಅದೇನೋ ಅದು ಕೇವಲ ಕನ್ನಡ ಮಾತ್ರ ಓದ ಬಲ್ಲ ದೆವ್ವ ಭೂತ ಎಂಬಂತೆ!) ಹಾಗೂ ಯಾರೋ ಅಜ್ಜಿ ಹೇಳಿ ಹೋದಳು ಎಂಬಂತೆ  `ಅಜ್ಜಿ ಹಬ್ಬ’ ಹೆಸರಿನಲ್ಲಿ ಹೋಳಿಗೆ ಮಾಡಿ ಸವಿಯುವುದು… (ಅವರವರ ಚಪಲಕ್ಕೆ ತಕ್ಕಂತೆ ಬೇಳೆ, ಕೊಬ್ಬರಿ, ಹಾಲು ಹೋಳಿಗೆ ಮಾಡಿಕೊಂಡದ್ದು ಬೇರೆ ವಿಷಯ!) ಇದೂ ಹಾಗೇ ಅಲ್ಲವೇ? ಮೂಢನಂಬಿಕೆಗೆ ಒಂದು ಮಿತಿ ಇರಬೇಕಲ್ಲವೇ? ಒಂದು ದಿನ ಬಹಳ ತಲೆನೋವು ಎಂದು ಮಲಗಿದ್ದೆ. ಯಾರಾದರೂ ನನಗೆ ಸಹಾಯ ಮಾಡಬಹುದು, ಒಂದಿಷ್ಟು ಬಿಸಿ ಕಾಫಿ, ಒಂದು ಡಾರ್ಟ್‌ ಮಾತ್ರೆ, ಒಂದಿಷ್ಟು ಅಮೃತಾಂಜನ…. ಉಹ್ಞೂಂ, ಯಾರಿಗೂ ಅದನ್ನೆಲ್ಲ ಮಾಡಬೇಕೆಂದು ಅನಿಸಲೇ ಇಲ್ಲ!

“ಅಯ್ಯೋ ಹೋಗಮ್ಮ…. ನನಗೆ ನಾಳೆ ಆನ್‌ ಲೈನ್‌ ಟೆಸ್ಟಿದೆ, ಬೇಕಾದಷ್ಟು ತಯಾರಿ ಮಾಡಿಕೊಳ್ಳಬೇಕು. ಕನ್ನಡ ಪೇಪರ್‌ಆದ್ದರಿಂದ ಆನ್‌ ಲೈನ್‌ ಟೆಸ್ಟ್ ನಲ್ಲಿ  ಇಂಗ್ಲೀಷ್‌ ಕೀ ಬೋರ್ಡ್‌ ನಲ್ಲೇ ಟೈಪ್‌ ಮಾಡಿ ಸ್ಕ್ರೀನ್‌ ಮೇಲೆ ಕನ್ನಡ ಬರಿಸಬೇಕು….. ನನಗಂತೂ ಒತ್ತು ದೀರ್ಘ ಅರ್ಕಾವತ್ತು ಸುಧಾರಿಸುವುದೇ ಆಗಿದೆ,” ಮಗಳು ಸ್ಮಿತಾ ಹೇಳಿದಳು.

“ಅಮ್ಮಾ, ನನಗೆ ಕೇರಂ ಬೋರ್ಡ್‌ ಜೊತೆಗೆ ಚೆಸ್‌ ಎರಡರ ಇನ್‌ ಡೋರ್‌ ಟೋರ್ನಮೆಂಟ್‌ ಗೇಮ್ಸ್ ಇದೆ…. ನನಗೆ ಟೈಂ ಎಲ್ಲಿದೆ?” ಕಿಟ್ಟು ಹೇಳಿ ಜಾರಿಕೊಂಡ.

“ಈಗ ತಾನೇ ಝೂಂ ಮೀಟಿಂಗ್‌ ಮುಗಿಸಿಕೊಂಡು ಆಫೀಸಿನ ರಾಮಾಯಣದಿಂದ ಸಾಕಾಗಿ ಬಂದಿದ್ದೇನೆ. 2 ನಿಮಿಷ ಕಾಲು ಚಾಚಿ ಮಲಗ್ತೀನಿ ಮಾರಾಯ್ತಿ….” ಎಂದು ಇವರು ಕೋಣೆ ಸೇರಿದರು.

ಎಲ್ಲರ ಮಾತು ಕೇಳಿ ನನ್ನ ತಲೆ ಕೆಟ್ಟು ಗೊಬ್ಬರವಾಯಿತು. ಇನ್ನಷ್ಟು ಸಂಕಟ ಹೆಚ್ಚಿತು. ಏನೂ ಮಾತನಾಡದೆ ತಲೆಗೆ ಬಿಗಿಯಾಗಿ ಬಟ್ಟೆ ಕಟ್ಟಿ, ಹೇಗೋ ಉಳಿದ ಅಡುಗೆ ಕೆಲಸ ಪೂರೈಸಿದೆ. ಒಂದು ಗಳಿಗೆ ಮಲಗೋಣ ಎಂದು ನಮ್ಮ ಕೋಣೆಗೆ ಬಂದು ನೋಡುತ್ತೇನೆ…. ಎಲ್ಲಾ ಕೋಣೆಗಳ ಲೈಟ್‌ ಆಫ್‌ ಆಗಿದೆ, ಬೆಡ್‌ರೂಂ ಬಡಿದು ಬಾಲ್ಕನಿಯಲ್ಲಿ ಕ್ಯಾಂಡಲ್ಸ್ ಉರಿಯುತ್ತಿತ್ತು. ಅಷ್ಟರಲ್ಲಿ ಮಗಳ ದನಿ ಕೇಳಿಸಿತು.

“ಅಮ್ಮಾ, ನಮಗಾಗಿ ನೀನು ಎಷ್ಟು ಒದ್ದಾಡ್ತೀಯಮ್ಮ, ನಿಜಕ್ಕೂ ಕೊರೋನಾ ವಾರಿಯರ್ಸ್‌ಗಿಂತ ಏನೇನೂ ಕಡಿಮೆ ಇಲ್ಲ! ಹೀಗಾಗಿಯೇ ನಿನಗೆ ಗೌರವಾದರ ಸಲ್ಲಿಸಲೆಂದೇ ನಾವು ಈ ಕ್ಯಾಂಡಲ್ಸ್ ಹಚ್ಚಿಟ್ಟಿದ್ದೇವೆ!” ಎಂದಳು. ಅವಳು ಮಾತು ಮುಗಿಸುತ್ತಿದ್ದಂತೆ ಕಿಟ್ಟು ಸಹ ಅದನ್ನೇ ರಿಪೀಟ್‌ ಮಾಡಿದ. ಇಬ್ಬರೂ ಓಡಿಬಂದು ನನ್ನನ್ನು ಅಪ್ಪಿಕೊಂಡರು. ಇವರೂ ನನ್ನತ್ತ ನೋಡಿ ಬಲು ಹೆಮ್ಮೆಯಿಂದ ನಗುತ್ತಿದ್ದರು, `ನೋಡಿದ್ಯಾ….ನೀನು ಎಂಥ ಅದೃಷ್ಟಶಾಲಿ! ನಿನಗಾಗಿ ನಾವೆಲ್ಲ ಸೇರಿ ಇದನ್ನು ಮಾಡಿದ್ದೇವೆ. ಈಗಲಾದರೂ ನಿನಗೆ ಖುಷಿ ಆಯ್ತು ತಾನೇ?’ ಆದರೆ ನನ್ನ ಮನಸ್ಸು ವೇದನೆಯಿಂದ ಚೀರುತ್ತಿತ್ತು. `ಮಧ್ಯಾಹ್ನದಿಂದ ತಲೆನೋವು ಎಂದು ಸಾಯುತ್ತಿದ್ದೆ…. ಒಬ್ಬರಾದರೂ ಒಂದಿಷ್ಟು ಮಾನವೀಯತೆ ತೋರಲಿಲ್ಲ. ಇದೀಗ ಈ ನಾಟಕ ಆಡುತ್ತಿದ್ದೀರಾ…. ನನಗೆ ಈಗ ಬೇಕಿರುವುದು ಒಂದಿಷ್ಟು ವಿಶ್ರಾಂತಿ…. ನಿಮ್ಮೆಲ್ಲರ ಈ ಕಪಟ ಸಹಾನುಭೂತಿಯಲ್ಲ….!’ ಆದರೆ ಬಾಯಿಬಿಟ್ಟು ಏನೂ ಹೇಳದೆ ಅವರತ್ತ ಮುಗುಳ್ನಗು ಬೀರಿ ನಾನು ಸೀದಾ ಹೋಗಿ ಮಲಗಿಬಿಟ್ಟೆ. ಬಹಳ ಹೊತ್ತು ನಿಂತುಕೊಂಡೇ ಕೆಲಸ ಮಾಡಿದ್ದರಿಂದ ಕಾಲು ಬಹಳ ನೋಯುತ್ತಿತ್ತು.

ಆ ದಿನ ಕಳೆದ ಮೇಲೆ ಪ್ರತಿ ದಿನ ಇವರದ್ದೆಲ್ಲ ಅದೇ ರಾಗ ಅದೇ ಹಾಡು ಎಂಬಂತಾಯಿತು. “ಅಮ್ಮ…. ನಿಜಕ್ಕೂ ನೀನು ನಮಗಾಗಿ ಎಷ್ಟೊಂದು ಪಾಡುಪಡ್ತೀಯಮ್ಮ, ನಾವೆಲ್ಲ ಇವತ್ತು ಏನು ನಿರ್ಧರಿಸಿದ್ದೀವಿ ಗೊತ್ತಾ? ಸಂಜೆ 6 ಗಂಟೆ ಮೇಲೆ ಅರ್ಧ ಗಂಟೆ ಮೊಬೈಲ್‌ನ್ನು ಸೈಲೆನ್ಸ್ ಮೋಡ್‌ಗೆ ಹಾಕುತ್ತೇವೆ. ನೋ ನಾಯ್ಸ್….. ನೋ ಡಿಸ್ಟರ್ಬೆನ್ಸ್!” ಆ ಸಂಜೆ ಸ್ಮಿತಾ ನನ್ನ ಕುತ್ತಿಗೆಗೆ ಜೋತುಬಿದ್ದು ಹೇಳಿದಳು. ನಾನೇನಾದರೂ ಹೇಳುವ ಮೊದಲೇ ಅವಳು ಚಿಗರೆಯಂತೆ ಜಿಗಿಯುತ್ತಾ ಅಲ್ಲಿಂದ ಹಾಲ್‌ಗೆ ಹೋದಳು. ಅಲ್ಲಿ ಟಿವಿ ಹಾಕಿಟ್ಟುಕೊಂಡು ವೆಬ್‌ ಸೀರೀಸ್‌ ಚಿತ್ರ ನೋಡುವ ಪ್ಲಾನಿಂಗ್‌ ಭರದಿಂದ ನಡೆದಿತ್ತು. ಬೇಕಾದ ಕೂಲ್ ‌ಡ್ರಿಂಕ್ಸ್, ಚಿಪ್ಸ್, ಸ್ನ್ಯಾಕ್ಸ್ ಪ್ಯಾಕೆಟ್ಸ್, ಪಾಪ್‌ ಕಾರ್ನ್‌ ಎಲ್ಲಾ ಬಂದಿತ್ತು.

ಅದಾದ ಮುಂದಿನ 3 ಗಂಟೆಗಳ ಕಾಲ ಮಜವಾಗಿ ಅವರು ಸಿನಿಮಾ ನೋಡುತ್ತಾ ಎಂಜಾಯ್‌ ಮಾಡಿದರು. ಹೋದರೆ ಹೋಗಲಿ ಅಂತ ಮಧ್ಯೆ ಮಧ್ಯೆ ನನ್ನನ್ನೂ ನೆನಿಸಿಕೊಂಡು ಸಿನಿಮಾ ನೋಡಲು ಕರೆಯುತ್ತಿದ್ದರು. ಈಗಂತೂ ನನ್ನ ಸಿಟ್ಟು ತಾರಕಕ್ಕೇರಿ ಜ್ವಾಲಾಮುಖಿ ಸಿಡಿಯುವುದರಲ್ಲಿತ್ತು.

ಅಷ್ಟರಲ್ಲಿ ಮಗನ ಸ್ವರ, “ಇರಿ…. ಅಮ್ಮನ್ನ ಕರೆದು ಎಲ್ಲರೂ ಅವಳ ಜೊತೆ ಸೆಲ್ಛಿ ಫೋಟೋ ಕ್ಲಿಕ್ಕಿಸೋಣ. ಅದನ್ನು FB‌ಗೆ ಅಪ್ ಲೋಡ್‌ ಮಾಡಿ ನಮ್ಮ ಫ್ರೆಂಡ್ಸ್ ಗೆ ನಮ್ಮಮ್ಮ ಎಷ್ಟು ಗ್ರೇಟ್‌ಅಂತ ತೋರಿಸೋಣ…. ನಮ್ಮಮ್ಮ ಸೂಪರ್‌ ಮಾಮ್ ಆಗಿ ಎಷ್ಟೆಲ್ಲ ಕಾರ್ಯ ನಿರ್ವಹಿಸುತ್ತಾಳೆ ಅಂತ ಅವರೆಲ್ಲರಿಗೂ ಗೊತ್ತಾಗಲಿ!” ಎಂದು ಕಿಟ್ಟು ನನ್ನ ಬಳಿ ಬಂದು ಕುತ್ತಿಗೆ ಅಪ್ಪಿ ಮುತ್ತಿಡುತ್ತಾ ತಕ್ಷಣ 2-3 ಸೆಲ್ಛಿ ಫೋಟೋ ಕ್ಲಿಕ್ಕಿಸಿಕೊಂಡ. ತಕ್ಷಣವೇ `ವಿತ್‌ ಮೈ ಸೂಪರ್‌ ಮಾಮ್’ ಎಂದು ಕ್ಯಾಪ್ಶನ್‌ ಹಾಕಿ ಬೇಕಾದ ಸೋಶಿಯಲ್ ಮೀಡಿಯಾಗಳಿಗೆ ಹಾಕಿಕೊಂಡ.

ಇದೇ ತರಹ ತಾನೇಕೆ ಹಿಂದುಳಿಯಬೇಕು ಎಂದು ಮಗಳು ಸ್ಮಿತಾ ಸಹ ನಾನು ಅಡುಗೆ ಮಾಡುವಾಗ ಜೊತೆಗೆ ಒಂದು ಸೆಲ್ಛಿ ಕ್ಲಿಕ್ಕಿಸಿಕೊಂಡು ಸೋಶಿಯಲ್ ಮೀಡಿಯಾಗೆ ಹಾಕಿಕೊಳ್ಳುತ್ತಾ `ಮೈ ಸೂಪರ್‌ ಶೆಫ್‌ ಮಾವ್‌!’ ಎಂದು ಬರೆದುಕೊಂಡಿದ್ದಳು.

“ಇರೇ ಹಾಳಾದವಳೆ….. ಸರಿಯಾಗಿ ತಲೆ ಬಾಚಿಕೊಂಡಿಲ್ಲ….. ಸುಕ್ಕಾದ ಸೀರೆ ಬದಲಿಸಿಲ್ಲ….” ಎಂದು ನಾನು ಗೊಣಗುತ್ತಲೇ ಇದ್ದರೆ,

“ಅದೇ ರಿಯಲಿಸ್ಟಿಕ್‌ ಮದರ್‌ ಇಂಡಿಯಾ ಕಣಮ್ಮ…. ಇಲ್ಲಾಂದ್ರೆ ಇದಕ್ಕಾಗಿ ಪೋಸ್‌ ಕೊಡೋಕೆ ಮೇಕಪ್‌ ಮಾಡಿಕೊಂಡಿದ್ದಾರೆ ಅಂತ ಆಡಿಕೊಳ್ತಾರೆ…. ದಿಸ್‌ಈಸ್‌ ರಿಯಲಿ ಕ್ಲಾಸಿಕ್‌!” ಎಂದು ಮಕ್ಕಳಿಬ್ಬರೂ ಹೊಗಳಿದ್ದೇ ಹೊಗಳಿದ್ದು.

ಅಷ್ಟರಲ್ಲಿ ಇವರು ಬಂದು ಅಣಿಮುತ್ತು ಉದುರಿಸಿದರು, “ಹೊಸದಾಗಿ ನೀನು ರೆಡಿ ಆಗಿ ಏನಾಗಬೇಕೇ? ಹೈಸ್ಕೂಲು ಕಲಿಯುತ್ತಿರುವ ಬೆಳೆದ ಮಕ್ಕಳ ತಾಯಿ ಅಂತ ಸಹಜವಾಗಿ ಅನ್ನಿಸಬೇಕು ಬಿಡು. ಅಷ್ಟರಲ್ಲಿ ನೀನು ಚೆನ್ನಾಗಿ ಡ್ರೆಸ್‌ ಮಾಡಿಕೊಂಡು ಆಫೀಸಿಗೆ ಹೊರಡುವ ಹಾಗೆ ಸಿದ್ಧಳಾದರೆ, ನಮ್ಮ ಸ್ಮಿತೂ ಜೊತೆ ನಿನ್ನ ನೋಡಿದವರು ಅವಳ ಅಕ್ಕಾನೇ ಅಂತ ಹೇಳ್ತಾರೆ ಬಿಡು…. ಅದಕ್ಕೆ ನ್ಯಾಚುರಲ್ ಆಗಿ ಮನೆಯಲ್ಲಿರುವ ಹಾಗೆ ಫೋಟೋ ಬರಬೇಕು ಬಿಡು.”

ಇವರುಗಳ ಮಾತಿನಿಂದ ನನ್ನ ಮೈಯೆಲ್ಲ ಉರಿದು ಹೋಯಿತು. ಫೋಟೋ ಸೆಷನ್‌ ಮುಗಿದ ಮೇಲೆ ಕನ್ನಡಿ ಮುಂದೆ ನಿಂತು ನೋಡ್ತೀನಿ…. ಕೆದರಿಹೋದ ತಲೆ, ಅಲ್ಲಲ್ಲಿ ಸುಕ್ಕಾಗಿ ಮಸಾಲೆಗಳ ದುರ್ವಾಸನೆ ಬೀರುತ್ತಿರುವ ಕಾಟನ್‌ ಸೀರೆ, ಈ ಲಾಕ್‌ ಡೌನ್‌ನಿಂದ ಹೇಗಿದ್ದಳು ಹೇಗಾಗಿ ಹೋಗಿದ್ದೀನಿ…. ಮುಖದಲ್ಲಿನ ಕಾಂತಿಯೆಲ್ಲ ಬತ್ತಿ ಹೋಗಿ ಕಂಗಳ ಕೆಳಗೆ ರಿಂಕಲ್ಸ್ ಬೇರೆ ಬಂದಿವೆ. ಈ ಮಕ್ಕಳ ಆದರ್ಶ ಮಾತೆ ಎನಿಸಲು ಜೀವನವೆಲ್ಲ ಹೀಗೆ ನಾನು ಇವರುಗಳ ಆಯಾ ತರಹ ಇರಬೇಕೇ…. ನೋ ನೋ! ಎಂದು ಚೀರಾಡಿಕೊಂಡೆ. ಅದೇ ಕ್ಷಣದಲ್ಲಿ ನಾನು ಮನದಲ್ಲೇ ಒಂದು ಗಟ್ಟಿ ನಿರ್ಧಾರಕ್ಕೆ  ಬಂದೆ. ಮೊದಲು ತಲೆಗೂದಲಿನ ಸಿಕ್ಕು ಬಿಡಿಸಿ, ಆಯಿಲ್ ‌ಮಸಾಜ್‌ಗೆ ತೊಡಗಿದೆ. ಕೈಗಳ ಉಗುರನ್ನು ಟ್ರಿಂ ಮಾಡಿ, ನೀಟಾಗಿ ನೇಲ್ ‌ಪಾಲಿಶ್‌ ಹಚ್ಚಿಕೊಂಡೆ. ಬಹಳ ದಿನಗಳಿಂದ ಬಳಸದೆ ವಾರ್ಡ್‌ ರೋಬ್‌ನಲ್ಲಿ ಇರಿಸಿದ್ದ ಹಲವು ಸ್ಟೈಲಿಶ್‌ ಉಡುಗೆಗಳನ್ನು ಧರಿಸಲು ನಿರ್ಧರಿಸಿ, ಒಂದಷ್ಟನ್ನು ತಕ್ಷಣ ಟ್ರೈ ಮಾಡತೊಡಗಿದೆ. ಅವು ಅಷ್ಟು ಹಳೆಯವಾದರೂ ಇನ್ನೂ ನನಗೆ ಪರ್ಫೆಕ್ಟ್ ಫಿಟ್‌ ಆಗಿವೆಯಲ್ವಾ ಅಂತ ಬಹಳ ಖುಷಿಯಾಯಿತು.

ಹೀಗೆ ಒಳ್ಳೆ ಲಹರಿಯಲ್ಲಿ ಹಾಡು ಗುನುಗುತ್ತಾ, ಬೇಗ ಬೇಗ ಅಡುಗೆ ಕೆಲಸ ಮುಗಿಸಿ, ಸ್ವಲ್ಪ ಹೊತ್ತು ಟಿವಿ ನೋಡೋಣ ಎಂದು ಹಾಲ್‌ಗೆ ಬಂದೆ. ಎಲ್ಲರೂ ಅಲ್ಲಿ ನನ್ನನ್ನು ಮುತ್ತಿಕೊಂಡು ಜೋರಾಗಿ ಚಪ್ಪಾಳೆ ತಟ್ಟತೊಡಗಿದರು.

ಎಲ್ಲರೂ ಬೇಕೇಂದೇ ನನ್ನನ್ನು ಸುಮ್ಮಸುಮ್ಮನೆ ಹೊಗಳತೊಡಗಿದರು. ನನಗಂತೂ ಕೆಂಡಾಮಂಡಲ ಸಿಟ್ಟು ಬಂದು ಎಲ್ಲರನ್ನೂ ಒದರಿಕೊಂಡು ಹೋಗಿ ಮೂಲೆ ಸಿಂಗಲ್ ಸೋಫಾದಲ್ಲಿ ಮುಖ ಊದಿಸಿಕೊಂಡು ಕುಕ್ಕರಿಸಿದೆ.

ನನ್ನ ರೌದ್ರಾವತಾರ ಕಂಡು ಸಂತಸದಿಂದ ಅರಳಿದ್ದ ಎಲ್ಲರ ಮುಖ ಕಳೆಗುಂದಿತು. ಜೊತೆಗೆ ಹೀಗೆ ಅನಗತ್ಯವಾಗಿ ಹೊಗಳುವುದರಿಂದ ಅವರ ಬೇಳೆಕಾಳು ಬೇಯುವುದಿಲ್ಲ ಎಂಬುದೂ ಅರ್ಥವಾಯಿತು. ಏನಾದರೂ ತಮ್ಮ ಸ್ವಾರ್ಥ ಸಾಧಿಸಿಕೊಳ್ಳಬೇಕಿದ್ದರೆ ಮಾತ್ರ ಇವರುಗಳು ಹೀಗೆ ಹೊಗಳಿಕೆಯ ನಾಟಕವಾಡುತ್ತಾರೆ ಎಂಬುದು ನನಗೆ ಚೆನ್ನಾಗಿ ತಿಳಿದಿತ್ತು, ಅದನ್ನು ಗುರುತಿಸಿ ತೆಪ್ಪಗಾದರು.

ಆಗಲೇ ಈ ರೀತಿ ನಾನು ಬಾಂಬ್‌ ಸಿಡಿಸಿದ್ದು. ಎಲ್ಲರೂ ತಂತಮ್ಮ ಕೆಲಸಗಳಲ್ಲಿ ಬಿಝಿ ಎಂಬುದನ್ನು ಖಚಿತಪಡಿಸಿಕೊಂಡು ಇನ್ನಷ್ಟು ವಿಶ್ರಾಂತಿ ಪಡೆದು ಮುಂದಿನ ಕೆಲಸ ಗಮನಿಸಲು ಎದ್ದೆ. ಇವರು ಪಾತ್ರೆ ತೊಳೆದು ಮುಗಿಸಿ ಸಿಂಕ್‌ ಕ್ಲೀನ್‌ ಮಾಡುತ್ತಿದ್ದರು. ಸ್ಮಿತಾ ಬಟ್ಟೆ ಒಗೆದು ಮುಗಿಸಿ ಅವನ್ನು ಒಣಗಿಸುತ್ತಿದ್ದಳು. ಕಿಟ್ಟು ಗಿಡಗಳಿಗೆ ನೀರು ಹನಿಸಿ, ಪೈಪ್‌ ಸುತ್ತಿಡುತ್ತಿದ್ದ.

ತನ್ಮಯರಾಗಿ ತಮ್ಮ ಕೆಲಸ ಮಾಡುತ್ತಿದ್ದ ಅವರನ್ನೆಲ್ಲ ನೋಡಿ ನನಗೆ ಪ್ರೀತಿ ವಾತ್ಸಲ್ಯ ಉಕ್ಕಿ ಬಂದಿತು. ಹಾಗೇ ತುಟಿಗಳ ಮೇಲೆ ಮಂದಹಾಸ ಮೂಡಿತು. ಆದರೆ ಅತಿಯಾದ ಭಾವಾವೇಶಕ್ಕೆ ಒಳಗಾಗಿ ಈಗ ತಾನೇ ಕಂಟ್ರೋಲ್‌ಗೆ ಬಂದವರ ಬಳಿ ಸಲುಗೆ ತೋರಿಸಬಾರದೆಂದು ಮನಸ್ಸನ್ನು ನಿಯಂತ್ರಿಸಿಕೊಂಡೆ. ಡೈನಿಂಗ್‌ ಟೇಬಲ್ ಬಳಿ ಹೋಗಿ ತಟ್ಟೆ ಜೋಡಿಸಿ, ಊಟಕ್ಕೆ ಬೇಕಾದರೆ ಅವರವರೇ ಬಡಿಸಿಕೊಳ್ಳಲಿ ಎಂದು ನನ್ನ ತಟ್ಟೆಗೆ ಮಾತ್ರ ಬಡಿಸಿಕೊಂಡು ಕುಳಿತೆ. ಆಗ, “ಸಾರಿ ಅಮ್ಮ, ನಮಗಾಗಿ ನೀನು ಎಷ್ಟು ಕಷ್ಟಪಡ್ತೀಯಾ ಎಂದು ಇವತ್ತು ನಮಗೆಲ್ಲ ಅರ್ಥವಾಯ್ತು. ನಾವು ಮೂವರು ಸೇರಿ ಮಾಡಿದ ಕೆಲಸಗಳನ್ನು ನೀನೊಬ್ಬಳೇ ಮಾಡುತ್ತಿದ್ದುದಲ್ಲದೆ, ಆಫೀಸಿನ ವರ್ಕ್‌ಫ್ರಂ ಹೋಂ ಸಹ ನಿಭಾಯಿಸುತ್ತಿದ್ದೆ! ಅದಕ್ಕೆ ದಿನವಿಡೀ ದುಡಿದರೂ ನಿನ್ನ ಕೆಲಸವೇ ಮುಗಿಯುತ್ತಿರಲಿಲ್ಲ,” ಸ್ಮಿತಾ ನನ್ನ ಬಳಿ ಬಂದು ಹೇಳಿಕೊಂಡಳು.

“ಹೌದಮ್ಮ…. ಇನ್ನು ಮುಂದೆ ನಾವೆಲ್ಲ ದಿನ ನಿನಗೆ ಸಹಾಯ ಮಾಡ್ತೀವಿ, ಪ್ರಾಮಿಸ್‌!” ಎಂದ ಮಗರಾಯ.

“ಹೌದು ಡಿಯರ್‌, ಇನ್ನು ಮುಂದೆ ನನ್ನ ಪಾಲಿನ ಕೆಲಸವೇನು ಎಂದು ಮೊದಲೇ ಹೇಳಿಬಿಡು. ಎಲ್ಲಿಯವರೆಗೂ ಈ ಹಾಳು ಲಾಕ್ ಡೌನ್‌ ಮುಗಿಯದೆ, ನಿಂಗಿ ನಿನ್ನ ಸಹಾಯಕ್ಕೆ ಬರುವುದಿಲ್ಲವೇ, ನಾನೂ ನಿನಗೆ ಖಂಡಿತಾ ಸಹಾಯ ಮಾಡ್ತೀನಿ. ನಾನು ಮಾತ್ರವಲ್ಲ ಮಕ್ಕಳೂ ಮಾಡ್ತಾರೆ. ಇದು ನಿನಗೆ ನಾವು ಮಾಡುತ್ತಿರುವ ದೊಡ್ಡ ಉಪಕಾರ ಎಂಬ ಅಹಂಕಾರವಿಲ್ಲ.

“ಏಕೆಂದರೆ ಮನೆ ನಮ್ಮೆಲ್ಲರಿಗೂ ಸೇರಿದ್ದು ಎಂದ ಮೇಲೆ ನಾವೆಲ್ಲ ನಮ್ಮ ಕೈಲಾದ ಸಹಾಯ ಮಾಡಿದರೆ ಏನೂ ಸವೆದು ಹೋಗುವುದಿಲ್ಲ. ಈ ವಿಷಯ ಇದೀಗ ನಮಗೆ ಚೆನ್ನಾಗಿ ಗೊತ್ತಾಗಿದೆ!” ಎಂದು ಇವರು ಮುಗ್ಧವಾಗಿ ಹೇಳಿದಾಗ ನಮ್ಮೆಲ್ಲರ ಮುಖದಲ್ಲಿ ನಗು ಹರಡಿತು.

“ಅಮ್ಮ ಇವತ್ತು ನೀನು ಹೊಸ ಸ್ಟೈಲಿಶ್‌ ಡ್ರೆಸ್‌ ಧರಿಸಿ, ತುಸು ಮೇಕಪ್‌ ಮಾಡಿಕೊಂಡು ಮಿಂಚುತ್ತಿರುವುದನ್ನು ನೋಡಿದರೆ, ಅಮ್ಮ ಅನ್ನುವ ಬದಲು ನಿನ್ನನ್ನು ಅಕ್ಕಾ ಅನ್ನಲೇ?” ಸ್ಮಿತಾ ಕೇಳಿದಳು.

“ಹೌದಮ್ಮ, ಇನ್ನು ಮುಂದೆ ದಿನಾ ಹೀಗೆ ನೀನು ನೀಟಾಗಿ ಡ್ರೆಸ್‌ ಮಾಡಿಕೊಂಡಿರಬೇಕು,” ಎಂದು ಕಿಟ್ಟು ಸಹ ಹೇಳಿದ. ಅವರಿಬ್ಬರ ಮೇಲೆ ಹುಸಿಮುನಿಸು ತೋರುತ್ತ ಬೆನ್ನು ತಟ್ಟಿದೆ.

“ನನ್ನ ಕಷ್ಟ ಅರ್ಥ ಮಾಡಿಕೊಂಡು ಇಷ್ಟೆಲ್ಲ ಹೆಲ್ಪ್ ಮಾಡಿದ ನಿಮ್ಮೆಲ್ಲರಿಗೂ ನನ್ನ ಅನಂತ ವಂದನೆಗಳು! ಇವತ್ತು ನಿಮಗೆ ಇಷ್ಟ ಅಂತ ವೆಜ್‌ ಪಲಾವ್‌, ಹಾಲು ಖೀರು ಮಾಡಿದ್ದೀನಿ, ಬನ್ನಿ…. ಎಲ್ಲರೂ ಹಾಯಾಗಿ ಊಟ ಮಾಡೋಣ,” ಎಂದು ಎಂದಿನಂತೆ ನೀಟಾಗಿ ಅವರ ತಟ್ಟೆಗಳಿಗೂ ಬಡಿಸಿದೆ. ಕೊರೋನಾ ನಮ್ಮನ್ನು ಸೋಲಿಸುವ ಮೊದಲು ಮನೆ ಮಂದಿ ಎಲ್ಲಾ ಹೀಗೆ ಒಗ್ಗಟ್ಟಾಗಿ ಅದನ್ನು ಸೋಲಿಸಲು ನಿರ್ಧರಿಸಿದೆ.

 

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ