ಅಲಂಕರಿಸಿಕೊಳ್ಳುವ ಗತ್ತು ಗೈರತ್ತು ಚಳಿಗಾಲದಲ್ಲೇ ಹೆಚ್ಚು, ಅದರ ಮಜವೇ ಬೇರೆ. ಆದರೆ ಇಂದಿನ ಬ್ಯೂಟಿ ಎಕ್ಸ್ ಪರ್ಟ್ಸ್ ಹೇಳುವುದೆಂದರೆ, ಶೇ.80 ಕ್ಕಿಂತಲೂ ಹೆಚ್ಚಿನ ಮಹಿಳೆಯರು ಈ ಶೀತಲ ಕಾಲದಲ್ಲಿ ಚರ್ಮದ ಶುಷ್ಕತೆಯ ಕಾರಣ ಸಮಸ್ಯೆಗಳನ್ನು ಎದುರಿಸುತ್ತಾರೆ. ಏಕೆಂದರೆ ಪ್ರಕೃತಿಯಲ್ಲಿ ಉಷ್ಣತೆ ಕಡಿಮೆ ಆದಹಾಗೆ, ಚರ್ಮದಲ್ಲಿ ಮಾಯಿಶ್ಚರೈಸರ್‌ನ ಮಟ್ಟ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ರಕ್ತ ಸಂಚಲನೆಯ ವೇಗ ಕಡಿಮೆ ಆಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದರ ನೇರ ಪರಿಣಾಮ ಮುಖದ ಮೇಲಾಗುತ್ತದೆ, ಮುಖ ಬಾಡಿದಂತಾಗಿ ನಿಸ್ತೇಜವಾಗುತ್ತದೆ. ಬನ್ನಿ, ಈ ತರಹದ ಸಮಸ್ಯೆಗಳಿಂದ ಪಾರಾಗಿ ಈ ಚಳಿಗಾಲದಲ್ಲೂ ನಿಮ್ಮ  ಮುಖಾರವಿಂದ ಕೋಮಲವಾಗಿ ನಳನಳಿಸುತ್ತಿರಲು ಏನು ಮಾಡಬೇಕೆಂದು ಸೌಂದರ್ಯ ತಜ್ಞೆಯರ ಸಲಹೆಗಳಿಂದ ತಿಳಿದುಕೊಳ್ಳೋಣ :

ಪ್ರತಿದಿನ ಮುಖವನ್ನು ಬಾದಾಮಿ ಎಣ್ಣೆಯಿಂದ ಲಘುವಾಗಿ ಮಸಾಜ್‌ ಮಾಡಿಕೊಳ್ಳಿ. ಇದನ್ನು ಹಗಲಲ್ಲಿ ಮಾಡಬಾರದು, ರಾತ್ರಿ ಮಲಗುವ ಮುನ್ನ ಮಾಡಿಕೊಳ್ಳಬೇಕು.

ಉದ್ಯೋಗಸ್ಥ ವನಿತೆಯರಿಗೆ ಮನೆ ಮತ್ತು ಹೊರಗಿನ ತಾಪಮಾನದಲ್ಲಿನ ವ್ಯತ್ಯಾಸದಿಂದಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮದ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಇದನ್ನು ನಿವಾರಿಸಲು ವಾರದಲ್ಲಿ ಕನಿಷ್ಠ 2 ಸಲ ಕ್ಲೆನ್ಸಿಂಗ್‌ ಹಾಗೂ ಮಸಾಜ್ ಮಾಡಿಕೊಳ್ಳಲೇಬೇಕು. ಚಳಿ ಚಳಿ ಎನ್ನುತ್ತಾ ಬಹಳ ಬಿಸಿನೀರಿನಿಂದ ಮುಖ ತೊಳೆಯ ಬೇಡಿ. ಇದರಿಂದಲೂ ನ್ಯಾಚುರಲ್ ಆಯಿಲ್ ‌ಕಡಿಮೆಯಾಗುವ ಸಂಭವವಿದೆ.

Untitled-4 (1)

ಚಳಿಗಾಲದಲ್ಲಿ ಸ್ಕಿನ್‌ ಕ್ರ್ಯಾಕ್ಸ್ ನ ಸಮಸ್ಯೆಯೂ ಹೆಚ್ಚು. ಇದರಿಂದ ತಪ್ಪಿಸಿಕೊಳ್ಳಲು ಗ್ಲಿಸರಿನ್‌ಗೆ ಗುಲಾಬಿ ಜಲ ಹಾಗೂ ನಿಂಬೆರಸ ಬೆರೆಸಿ ಮುಖಕ್ಕೆ ಸವರಿಕೊಳ್ಳಿ.

ಚಳಿಗಾಲದಲ್ಲಿ ಚರ್ಮದ ಶುಭ್ರತೆಗಾಗಿ ಮಡ್‌ ಪ್ಯಾಕ್ಸ್ ಬಳಸಿದರೆ ಅದು ಇನ್ನಷ್ಟು ಡ್ರೈ ಆಗುತ್ತದೆ. ಹೀಗಾಗಿ ಜೆಲ್ ‌ಪ್ಯಾಕನ್ನೇ ಬಳಸಿರಿ.

ತುಟಿ ಒಡೆತದ ಸಮಸ್ಯೆಗಾಗಿ ಹಾಲಿನ ಕೆನೆ, ಗ್ಲಿಸರಿನ್‌, ಜೇನುತುಪ್ಪ ಬೆರೆಸಿ ಹಚ್ಚಿಕೊಳ್ಳಬೇಕು. ಚಳಿಗಾಲದಲ್ಲಿ ಮೇಕಪ್‌ ಸ್ಟಿಕ್ಸ್ ಎಂದೂ ಬಳಸಬೇಡಿ. ಅದರ ಬದಲಿಗೆ ಗ್ಲಾಸ್‌ ಬೇಸ್‌ನ್ನೇ ಬಳಸಬೇಕು. ಇದಾದ ನಂತರ ನೇರವಾಗಿ ಫೌಂಡೇಶನ್‌ ಸಹ ಬಳಸಬಾರದು. ಫೌಂಡೇಶನ್‌ಗೆ ತುಸು ಕ್ರೀಂ ಹಾಗೂ 2 ಹನಿ ನೀರು ಬೆರೆಸಿ ಬಳಸಬೇಕು.

Untitled-3 (1)

ಕೈಗಳು ಒರಟೊರಟಾಗಿ ಹಿಂಸೆ ಎನಿಸಿದರೆ, ಕೈಗಳಿಗೆ ಅರ್ಧ ಚಮಚ ಪುಡಿ ಸಕ್ಕರೆ ಹಾಕಿಕೊಂಡು, ಅದರ ಮೇಲೆ ನಿಂಬೆರಸ ಹರಡಿ, ಒಂದು ಕಾಳು ಸಕ್ಕರೆಯೂ ಉಳಿಯದಂತೆ ಎರಡೂ ಕೈಗಳನ್ನು ಚೆನ್ನಾಗಿ ಉಜ್ಜಬೇಕು.

ತುಟಿಗಳ ಮೇಕಪ್

ವಿಟಮಿನ್‌ `ಈ’ ಬೆರೆತ ಲಿಪ್‌ಸ್ಟಿಕ್‌ ತುಟಿಗಳನ್ನು ಮೃದುಗೊಳಿಸುವುದರ ಜೊತೆ ಜೊತೆಗೆ ಹೆಚ್ಚಿನ ಹೊಳಪನ್ನು ನೀಡುತ್ತದೆ.

ನೀವು ತುಟಿಗಳನ್ನು ಹೈಲೈಟ್‌ಗೊಳಿಸ ಬಯಸಿದರೆ, ಲಿಪ್‌ ಕಲರ್‌ ಡಾರ್ಕ್‌ ಆಗಿರಲಿ.

ಸತತ 8-9 ಗಂಟೆಗಳ ಕಾಲ ಲಿಪ್‌ಸ್ಟಿಕ್‌ ಹಚ್ಚಿರುವುದರಿಂದಲೂ ತುಟಿಗಳು ಡ್ರೈ ಆಗುತ್ತವೆ. ಹೀಗಾಗಿ ನಿಯಮಿತವಾಗಿ ಲಿಪ್‌ ಗಾರ್ಡ್ ಅಥವಾ ವ್ಯಾಸಲಿನ್‌ ಹಚ್ಚಬೇಕು.

ಚಳಿಗಾಲದಲ್ಲಿ ತುಟಿಗಳು ಹೆಚ್ಚು ಒಡೆಯುತ್ತಿದ್ದರೆ, ರಾತ್ರಿ ಮಲಗುವ ಮುನ್ನ, ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಸವರಬೇಕು.

ತೆಂಗಿನ ತುರಿಯನ್ನು ಮಿಕ್ಸಿಗೆ ಹಾಕಿ ಗಟ್ಟಿ ಹಾಲು ತಯಾರಿಸಿ. ಅದನ್ನು ತುಟಿಗಳಿಗೆ ಹಚ್ಚಿದರೆ, ಒಡೆಯುವಿಕೆ ತಪ್ಪಿ ಕೋಮಲತೆ ಹೆಚ್ಚುತ್ತದೆ, ಗುಲಾಬಿ ಬಣ್ಣ ಕೂಡುತ್ತದೆ.

ತಲೆಗೂದಲಿನ ರಕ್ಷಣೆ

ಥಂಡಿಯ ವಾತಾವರಣ ಕೂದಲನ್ನು ಶುಷ್ಕ ಹಾಗೂ ನಿರ್ಜೀವಗೊಳಿಸುತ್ತದೆ. ಹೀಗಾಗಿ ಚಳಿಗಾಲದಲ್ಲಿ ಅಗತ್ಯವಾಗಿ ಕೂದಲಿನ ಕಂಡೀಶನಿಂಗ್‌ ಮಾಡಿಸುತ್ತಿರಿ.

ಚಳಿಗಾಲದಲ್ಲಿ ಆದಷ್ಟೂ ಹರ್ಬಲ್ ತೈಲಗಳ ಉಪಯೋಗ ಕಡಿಮೆ ಮಾಡಿ. ಏಕೆಂದರೆ ಅವುಗಳಲ್ಲಿರುವ ಮೂಲಘಟಕಗಳ ಗುಣ ಶೀತಪ್ರಧಾನವಾದುದು.

ಚಳಿಗಾಲದಲ್ಲಿ ಆದಷ್ಟೂ ತಲೆಗೂದಲಿಗೆ ಶೀತಲ ಗಾಳಿ ತಗುಲದಂತೆ ಎಚ್ಚರಿಕೆ ವಹಿಸಿ, ಮತ್ತೆ ಮತ್ತೆ ತಲೆಗೂದಲು ತೊಳೆಯುವುದನ್ನು ತಪ್ಪಿಸಿ. ವಾರದಲ್ಲಿ 1-2 ಸಲ ಬೆಚ್ಚಗಿನ ಆಲಿವ್ ‌ಆಯಿಲ್‌ನಿಂದ ತಲೆಗೆ ಮಸಾಜ್‌ ಮಾಡಿ. ಇದರಿಂದ ಕೇಶಕ್ಕೆ ಪೋಷಣೆ ದೊರೆತು, ಚೆನ್ನಾಗಿ ಹೊಳೆಯುತ್ತದೆ.

ಚಳಿಗಾಲದಲ್ಲಿ ತಲೆಗೂದಲನ್ನು ಸದಾ ಹರಡಿಕೊಂಡಿರಬೇಡಿ. ಏಕೆಂದರೆ ಶುಷ್ಕ ಹವೆಯಿಂದಾಗಿ ಅದು ಹೆಚ್ಚು ಡ್ರೈ ಮತ್ತು ನಿರ್ಜೀವ ಆಗಬಹುದು.

ಮನೆ ಮದ್ದಿಗೆ ಹೀಗೆ ಮಾಡಿ. ಮಿಕ್ಸಿಗೆ ಒಂದಿಷ್ಟು ಗೋದಿಹಿಟ್ಟಿನ ತೌಡು, ಹಾಲು, ಗುಲಾಬಿ ಜಲ ಬೆರೆಸಿ ನುಣ್ಣಗೆ ತಿರುವಿಕೊಂಡು ತಲೆಗೆ ಹಚ್ಚಿ ಮಸಾಜ್‌ ಮಾಡಿ.

ಬೆಚ್ಚಗಿನ ನೀರಿಗೆ ತುಸು ಓಟ್‌ ಮೀಲ್‌, ಬೇಕಿಂಗ್‌ ಸೋಡ ಬೆರೆಸಿ ಸ್ನಾನ ಮಾಡುವುದರಿಂದ, ಚರ್ಮ ಬಹಳ ಮೃದುವಾಗುತ್ತದೆ. ನಿಮ್ಮ ಚರ್ಮದ ಶುಷ್ಕತೆ ಸತತ ಹೆಚ್ಚುತ್ತಿದ್ದರೆ, ಯಾವುದೇ ಬಗೆಯ ಪೀಲಿಂಗ್‌, ಮಾಸ್ಕ್, ಆಲ್ಕೋಹಾಲ್ ಬೇಸ್ಡ್ ಟೋನರ್ ಬಳಸಲೇಬೇಡಿ.

ಚಳಿಗಾಲದಲ್ಲಿ ಇವನ್ನು ಮರೆಯದಿರಿ

ಚಳಿಗಾಲದಲ್ಲಿ ಮುಂಜಾನೆ ಎದ್ದ ನಂತರ, ಕಂಗಳಿಗೆ ಹೆಚ್ಚಿನ ತಣ್ಣೀರು ಹಾಕಿ ತೊಳೆಯಬೇಡಿ. ಇಲ್ಲದಿದ್ದರೆ ಕಂಗಳು ಹಾಗೂ ಸುತ್ತಮುತ್ತಲೂ ಊದಿಕೊಳ್ಳಬಹುದು.

ಮುಖ ತೊಳೆಯಲು ಬಿಸಿ ನೀರು ಹಾಗೂ ಸಾಬೂನನ್ನು ಮತ್ತೆ ಮತ್ತೆ ಬಳಸಬೇಡಿ. ಇದರಿಂದ ಚರ್ಮದಲ್ಲಿನ ನೈಸರ್ಗಿಕ ತೈಲೀಯ ಅಂಶ ನಷ್ಟವಾಗುತ್ತದೆ. ತಲೆಗೆ ಸ್ನಾನ ಮಾಡಿದ ತಕ್ಷಣ ಬ್ಲೋಯರ್‌ ಮುಂದೆ ನಿಲ್ಲಬೇಡಿ.

ವಾಟರ್‌ ಬೇಸ್ಡ್ ಮಾಯಿಶ್ಚರೈಸರ್‌ ಅಥವಾ ಸನ್‌ಸ್ಕ್ರೀನ್‌ ಬಳಸಬೇಡಿ. ಈ ತರಹದ ಪ್ರಾಡಕ್ಟ್ ಗಳಲ್ಲಿನ ನೀರಿನಂಶ, ನಿಮ್ಮ ಮುಖವನ್ನು ಫ್ರೀಝ್ ಗೊಳಿಸಬಹುದು. ತುಂಬಾ ಚಳಿಯಲ್ಲಿ ಹೊರಗೆ ಹೋಗಲೇಬೇಕಾದಾಗ ನಿಮಗೆ ಯಾವುದೇ ಬಗೆಯ ಉರಿ ಅಥವಾ ರಾಶೆಸ್‌ನ ಅನುಭವವಾದರೆ, ಮಾಯಿಶ್ಚರೈಸರ್‌ ಹಚ್ಚಿದ್ದರಿಂದಲೇ ಹೀಗಾಯಿತೆಂದು ತಿಳಿಯಬಹುದು. ಆದ್ದರಿಂದ ಅದನ್ನು ತಕ್ಷಣ ಬದಲಾಯಿಸಿ.

ಚಳಿಗಾಲದ ಆಹಾರ

ಲೋಫ್ಯಾಟ್ಯೋಗರ್ಟ್‌ : ತ್ವಚೆಯ ಸಂರಕ್ಷಣೆಗಾಗಿ ವಿಟಮಿನ್‌ `ಎ’ ಅತ್ಯಗತ್ಯ. ಇದು ಮೊಸರಲ್ಲಿ ಧಾರಾಳವಾಗಿದೆ. ಆದಷ್ಟೂ   ಕೊಬ್ಬುರಹಿತ ಮೊಸರನ್ನೇ ಸೇವಿಸಬೇಕು.

ಮಾವು : ಮಾವಿನಲ್ಲಿ ವಿಟಮಿನ್‌ `ಎ’ ತುಂಬಿದೆ. ಇದು ಚರ್ಮ ಮತ್ತು ಕೂದಲಿನ ರಿಪೇರಿಗೆ ಪೂರಕ. ಇದರಿಂದ ಚರ್ಮ ಜೋತುಬೀಳದು ಅಥವಾ ನಿಸ್ತೇಜವಾಗದು.

ಡಾರ್ಕ್ಚಾಕಲೇಟ್‌: ಚಳಿಗಾಲದಲ್ಲಿ ಸಿಹಿ ತಿನ್ನಬೇಕೆನಿಸಿದರೆ, ಅದರಲ್ಲೂ ಚಾಕಲೇಟ್‌ ಬಯಸಿದರೆ, ಉತ್ತಮ ಗುಣಮಟ್ಟದ ಡಾರ್ಕ್‌ ಚಾಕಲೇಟ್‌ನ್ನೇ ಖರೀದಿಸಿ. ಇದರ ಸೇವನೆಯಿಂದ ಅಧಿಕ ಪ್ರಮಾಣದ ಕೋಕೋದಿಂದಾಗಿ ಅದರ ಆ್ಯಂಟಿ ಆಕ್ಸಿಡೆಂಟ್ಸ್ ನ ಲಾಭ ಪಡೆಯಬಹುದು.

ಚೀಸ್‌ : ಚೀಸ್‌ನಲ್ಲಿ ಹೆಚ್ಚಿನ ಕ್ಯಾಲ್ಶಿಯಂ ಇದ್ದು, ತ್ವಚೆಗೆ ಹೊಳಪು ಹಾಗೂ ಬಿಗುವು ತಂದು ಕೊಡಬಲ್ಲ ಅತ್ಯಗತ್ಯ ಮಿನರಲ್ಸ್ ಹೊಂದಿದೆ.

Untitled-2 (1)

ಗ್ರೀನ್ಟೀ : ಇದರಲ್ಲಿ ಪಾಲಿಫಿನೈಲ್ಸ್ ತುಂಬಿದ್ದು, ಅದು ಆ್ಯಂಟಿ ಇನ್‌ಫ್ಲಮೇಟರಿ ಅಂಶಗಳನ್ನೊಳಗೊಂಡಿದೆ, ಇದು ಅಕಾಲದಲ್ಲಿ ಮುಖದಲ್ಲಿ ಸುಕ್ಕುಗಳನ್ನು ಉಂಟುಮಾಡಬಲ್ಲವು ಫ್ರೀ ರಾಡಿಕಲ್ಸ್ ವಿರುದ್ಧ ಹೋರಾಡುತ್ತವೆ.

Untitled-5

ಕ್ಯಾರೆಟ್ಬೀಟ್ರೂಟ್‌ : ಇವುಗಳಲ್ಲಿ ವಿಟಮಿನ್‌ `ಎ’ ಹೇರಳವಾಗಿದ್ದು, ಇದರ ಸೇವನೆಯಿಂದ ಮುಖದಲ್ಲಿ ಹೆಚ್ಚಿನ ಕಾಂತಿ ಚಿಮ್ಮುತ್ತದೆ.

ಹಸಿರು ತರಕಾರಿ : ಇದರ ಸೇವನೆಯಿಂದ ಮುಖದಲ್ಲಿ ನಿಸ್ತೇಜ ಕಳೆ ಹೋಗಿ, ಕಾಂತಿ ತಾನಾಗಿ ಚಿಮ್ಮುತ್ತದೆ.

ದವಸಧಾನ್ಯ : ಇದರಲ್ಲಿ ಮುಖ್ಯವಾಗಿ ಗೋದಿ, ಓಟ್ಸ್, ಜೋಳ, ಸಜ್ಜೆ, ನವಣೆ, ಬ್ರೌನ್‌ ರೈಸ್‌, ಕಾಳುಗಳ ತರಿ ಇತ್ಯಾದಿಗಳು ಚಳಿಗಾಲದಲ್ಲಿ ಸುಲಭವಾಗಿ ಜೀರ್ಣವಾಗುತ್ತವೆ. ಜೊತೆಗೆ ತ್ವಚೆಗೂ ಲಾಭಕಾರಿ. ಹೀಗಾಗಿ ಚಳಿಗಾಲದಲ್ಲಿ ಇವನ್ನು ಧಾರಾಳವಾಗಿ ಸೇವಿಸಿ.

ಶ್ರೀಲತಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ