ಅಲಂಕರಿಸಿಕೊಳ್ಳುವ ಗತ್ತು ಗೈರತ್ತು ಚಳಿಗಾಲದಲ್ಲೇ ಹೆಚ್ಚು, ಅದರ ಮಜವೇ ಬೇರೆ. ಆದರೆ ಇಂದಿನ ಬ್ಯೂಟಿ ಎಕ್ಸ್ ಪರ್ಟ್ಸ್ ಹೇಳುವುದೆಂದರೆ, ಶೇ.80 ಕ್ಕಿಂತಲೂ ಹೆಚ್ಚಿನ ಮಹಿಳೆಯರು ಈ ಶೀತಲ ಕಾಲದಲ್ಲಿ ಚರ್ಮದ ಶುಷ್ಕತೆಯ ಕಾರಣ ಸಮಸ್ಯೆಗಳನ್ನು ಎದುರಿಸುತ್ತಾರೆ. ಏಕೆಂದರೆ ಪ್ರಕೃತಿಯಲ್ಲಿ ಉಷ್ಣತೆ ಕಡಿಮೆ ಆದಹಾಗೆ, ಚರ್ಮದಲ್ಲಿ ಮಾಯಿಶ್ಚರೈಸರ್‌ನ ಮಟ್ಟ ಕಡಿಮೆಯಾಗುತ್ತದೆ. ಚಳಿಗಾಲದಲ್ಲಿ ರಕ್ತ ಸಂಚಲನೆಯ ವೇಗ ಕಡಿಮೆ ಆಗುತ್ತದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇದರ ನೇರ ಪರಿಣಾಮ ಮುಖದ ಮೇಲಾಗುತ್ತದೆ, ಮುಖ ಬಾಡಿದಂತಾಗಿ ನಿಸ್ತೇಜವಾಗುತ್ತದೆ. ಬನ್ನಿ, ಈ ತರಹದ ಸಮಸ್ಯೆಗಳಿಂದ ಪಾರಾಗಿ ಈ ಚಳಿಗಾಲದಲ್ಲೂ ನಿಮ್ಮ ಮುಖಾರವಿಂದ ಕೋಮಲವಾಗಿ ನಳನಳಿಸುತ್ತಿರಲು ಏನು ಮಾಡಬೇಕೆಂದು ಸೌಂದರ್ಯ ತಜ್ಞೆಯರ ಸಲಹೆಗಳಿಂದ ತಿಳಿದುಕೊಳ್ಳೋಣ :
ಪ್ರತಿದಿನ ಮುಖವನ್ನು ಬಾದಾಮಿ ಎಣ್ಣೆಯಿಂದ ಲಘುವಾಗಿ ಮಸಾಜ್ ಮಾಡಿಕೊಳ್ಳಿ. ಇದನ್ನು ಹಗಲಲ್ಲಿ ಮಾಡಬಾರದು, ರಾತ್ರಿ ಮಲಗುವ ಮುನ್ನ ಮಾಡಿಕೊಳ್ಳಬೇಕು.
ಉದ್ಯೋಗಸ್ಥ ವನಿತೆಯರಿಗೆ ಮನೆ ಮತ್ತು ಹೊರಗಿನ ತಾಪಮಾನದಲ್ಲಿನ ವ್ಯತ್ಯಾಸದಿಂದಾಗಿ ಚಳಿಗಾಲದಲ್ಲಿ ಸಾಮಾನ್ಯವಾಗಿ ಚರ್ಮದ ಸಮಸ್ಯೆಗಳು ಹೆಚ್ಚು ಕಾಡುತ್ತವೆ. ಇದನ್ನು ನಿವಾರಿಸಲು ವಾರದಲ್ಲಿ ಕನಿಷ್ಠ 2 ಸಲ ಕ್ಲೆನ್ಸಿಂಗ್ ಹಾಗೂ ಮಸಾಜ್ ಮಾಡಿಕೊಳ್ಳಲೇಬೇಕು. ಚಳಿ ಚಳಿ ಎನ್ನುತ್ತಾ ಬಹಳ ಬಿಸಿನೀರಿನಿಂದ ಮುಖ ತೊಳೆಯ ಬೇಡಿ. ಇದರಿಂದಲೂ ನ್ಯಾಚುರಲ್ ಆಯಿಲ್ ಕಡಿಮೆಯಾಗುವ ಸಂಭವವಿದೆ.
ಚಳಿಗಾಲದಲ್ಲಿ ಸ್ಕಿನ್ ಕ್ರ್ಯಾಕ್ಸ್ ನ ಸಮಸ್ಯೆಯೂ ಹೆಚ್ಚು. ಇದರಿಂದ ತಪ್ಪಿಸಿಕೊಳ್ಳಲು ಗ್ಲಿಸರಿನ್‌ಗೆ ಗುಲಾಬಿ ಜಲ ಹಾಗೂ ನಿಂಬೆರಸ ಬೆರೆಸಿ ಮುಖಕ್ಕೆ ಸವರಿಕೊಳ್ಳಿ.
ಚಳಿಗಾಲದಲ್ಲಿ ಚರ್ಮದ ಶುಭ್ರತೆಗಾಗಿ ಮಡ್ ಪ್ಯಾಕ್ಸ್ ಬಳಸಿದರೆ ಅದು ಇನ್ನಷ್ಟು ಡ್ರೈ ಆಗುತ್ತದೆ. ಹೀಗಾಗಿ ಜೆಲ್ ಪ್ಯಾಕನ್ನೇ ಬಳಸಿರಿ.
ತುಟಿ ಒಡೆತದ ಸಮಸ್ಯೆಗಾಗಿ ಹಾಲಿನ ಕೆನೆ, ಗ್ಲಿಸರಿನ್, ಜೇನುತುಪ್ಪ ಬೆರೆಸಿ ಹಚ್ಚಿಕೊಳ್ಳಬೇಕು. ಚಳಿಗಾಲದಲ್ಲಿ ಮೇಕಪ್ ಸ್ಟಿಕ್ಸ್ ಎಂದೂ ಬಳಸಬೇಡಿ. ಅದರ ಬದಲಿಗೆ ಗ್ಲಾಸ್ ಬೇಸ್‌ನ್ನೇ ಬಳಸಬೇಕು. ಇದಾದ ನಂತರ ನೇರವಾಗಿ ಫೌಂಡೇಶನ್ ಸಹ ಬಳಸಬಾರದು. ಫೌಂಡೇಶನ್‌ಗೆ ತುಸು ಕ್ರೀಂ ಹಾಗೂ 2 ಹನಿ ನೀರು ಬೆರೆಸಿ ಬಳಸಬೇಕು.
ಕೈಗಳು ಒರಟೊರಟಾಗಿ ಹಿಂಸೆ ಎನಿಸಿದರೆ, ಕೈಗಳಿಗೆ ಅರ್ಧ ಚಮಚ ಪುಡಿ ಸಕ್ಕರೆ ಹಾಕಿಕೊಂಡು, ಅದರ ಮೇಲೆ ನಿಂಬೆರಸ ಹರಡಿ, ಒಂದು ಕಾಳು ಸಕ್ಕರೆಯೂ ಉಳಿಯದಂತೆ ಎರಡೂ ಕೈಗಳನ್ನು ಚೆನ್ನಾಗಿ ಉಜ್ಜಬೇಕು.
ತುಟಿಗಳ ಮೇಕಪ್
ವಿಟಮಿನ್ `ಈ' ಬೆರೆತ ಲಿಪ್‌ಸ್ಟಿಕ್ ತುಟಿಗಳನ್ನು ಮೃದುಗೊಳಿಸುವುದರ ಜೊತೆ ಜೊತೆಗೆ ಹೆಚ್ಚಿನ ಹೊಳಪನ್ನು ನೀಡುತ್ತದೆ.
ನೀವು ತುಟಿಗಳನ್ನು ಹೈಲೈಟ್‌ಗೊಳಿಸ ಬಯಸಿದರೆ, ಲಿಪ್ ಕಲರ್ ಡಾರ್ಕ್ ಆಗಿರಲಿ.
ಸತತ 8-9 ಗಂಟೆಗಳ ಕಾಲ ಲಿಪ್‌ಸ್ಟಿಕ್ ಹಚ್ಚಿರುವುದರಿಂದಲೂ ತುಟಿಗಳು ಡ್ರೈ ಆಗುತ್ತವೆ. ಹೀಗಾಗಿ ನಿಯಮಿತವಾಗಿ ಲಿಪ್ ಗಾರ್ಡ್ ಅಥವಾ ವ್ಯಾಸಲಿನ್ ಹಚ್ಚಬೇಕು.
ಚಳಿಗಾಲದಲ್ಲಿ ತುಟಿಗಳು ಹೆಚ್ಚು ಒಡೆಯುತ್ತಿದ್ದರೆ, ರಾತ್ರಿ ಮಲಗುವ ಮುನ್ನ, ಹೊಕ್ಕಳಿಗೆ ಕೊಬ್ಬರಿ ಎಣ್ಣೆ ಅಥವಾ ತುಪ್ಪ ಸವರಬೇಕು.
ತೆಂಗಿನ ತುರಿಯನ್ನು ಮಿಕ್ಸಿಗೆ ಹಾಕಿ ಗಟ್ಟಿ ಹಾಲು ತಯಾರಿಸಿ. ಅದನ್ನು ತುಟಿಗಳಿಗೆ ಹಚ್ಚಿದರೆ, ಒಡೆಯುವಿಕೆ ತಪ್ಪಿ ಕೋಮಲತೆ ಹೆಚ್ಚುತ್ತದೆ, ಗುಲಾಬಿ ಬಣ್ಣ ಕೂಡುತ್ತದೆ.