ಬಹಳ ವರ್ಷಗಳಿಂದ ಮನದಲ್ಲಿರುವ ಆಸೆ ಹಿಮಾಲಯನ್‌ ಟ್ರೆಕ್ಕಿಂಗ್‌! ಯಾರ ಮೂಲಕ ಹೋಗಬೇಕೆಂದು ವಿಚಾರಿಸಿದಾಗ ಯೂತ್ ಹಾಸ್ಟೆಲ್ ಅಸೋಸಿಯೇಶನ್‌ ಅವರು ಪ್ರತಿ ವರ್ಷ ಹಿಮಾಲಯದಲ್ಲಿ ಎರಡು ಬಾರಿ ಟ್ರೆಕ್ಕಿಂಗ್‌ ಪ್ರೋಗ್ರಾಂ ನಿರ್ವಹಿಸುತ್ತಾರೆಂದು, ಅದರಲ್ಲಿ ನಮಗೆ ಇಷ್ಟಬಂದ ಪ್ರೋಗ್ರಾಂ ನಾವು ಆಯ್ಕೆ ಮಾಡಿಕೊಂಡು ಭಾಗಹಿಸಬಹುದೆಂದು ತಿಳಿಯಿತು. ಮಕ್ಕಳಿಗೆ ಹದಿನೈದು ವರ್ಷ ತುಂಬಿರಬೇಕೆನ್ನುವುದು ಅವರ ಕಂಡೀಷನ್‌. ಇದಕ್ಕೆ ಮುಂಚಿತವಾಗಿ ಟ್ರೆಕ್ಕಿಂಗ್‌ ಅನುಭವ ಬೇಕಾಗಿಲ್ಲ, ಟ್ರೆಕ್ಕಿಂಗ್‌ಮಾಡಬೇಕೆಂಬ ದೃಢ ಸಂಕಲ್ಪ ಸಾಕಷ್ಟೆ. ಮತ್ತೆ ತಡ ಏಕೆ? ಆನ್‌ ಲೈನ್‌ ಮೆಂಬರ್‌ಶಿಪ್‌ ತಗೊಂಡು, ಅವರ ಸರ್ಪಾಸ್‌ ಟ್ರೆಕ್ಕಿಂಗ್‌ನಲ್ಲಿ ನಾನು, ಹದಿನೈದು ವರ್ಷ ತುಂಬಿದ ನನ್ನ ಮಗಳೂ ಸೇರಿ ಬಿಟ್ವಿ.

Himalaya-1

ಸರ್ಪಾಸ್‌ ಟ್ರೆಕ್ಕಿಂಗ್‌ ಹನ್ನೊಂದು ದಿನಗಳ ಪ್ರೋಗ್ರಾಂ. ಹಿಮಾಚಲ ಪ್ರದೇಶದ ಮನಾಲಿಗೆ 40 ಕಿ.ಮೀ. ದೂರದಲ್ಲಿರುವ ಕಸೋಲ್ ಗ್ರಾಮದಲ್ಲಿ ಅವರ ಬೇಸ್‌ ಕ್ಯಾಂಪ್‌. ಅಂದರೆ ಅವರ ಟ್ರೆಕ್ಕಿಂಗ್‌ ಪ್ರೋಗ್ರಾಂ ಅಲ್ಲಿಂದ ಆರಂಭ ಆಗುತ್ತೆ. ಬೆಂಗಳೂರಿನಿಂದ ದೆಹಲಿಗೆ ತಲುಪಿ ಅಲ್ಲಿಂದ ಮನಾಲಿಗೆ ಬಸ್‌ನಲ್ಲಿ ಹೋಗಿ, ಕೊನೆಯ 40 ಕಿ.ಮೀ. ಜೀಪ್‌ನಲ್ಲಿ ಪ್ರಯಾಣ ಮಾಡಿ ಕಸೋಲ್ ಸೇರಿದೆವು. 6500 ಅಡಿ ಎತ್ತರದಲ್ಲಿನ ಕಸೋಲ್‌, ಪಾರ್ವತಿ ನದಿ ತೀರದಲ್ಲಿರುವ ಒಂದು ಸುಂದರ ಊರು. ಹಸಿರಾಗಿ, ತಂಪಾಗಿ, ಬಹಳ ಪ್ರಶಾಂತವಾಗಿ ಇರುವ ತಾಣ ಅದು. ಯೂತ್‌ ಹಾಸ್ಟಲ್ ಅವರ ವೆಲ್‌ಕಮ್ ಬ್ಯಾನರ್‌ ನೋಡಿ, ಘಾಟ್‌ ರಸ್ತೆಯ ದಣಿವು ಮರೆತು ಎಲ್ಲರೂ ಕೇಕೆ ಹಾಕಿದರು. ಅಲ್ಲೇ ನದಿ ತೀರದಲ್ಲಿ ಹಾಕಿಟ್ಟ ಟೆಂಟ್ಸ್ ನಲ್ಲಿ ನಮ್ಮ ನಿವಾಸ.

Himalaya-4

ಮೊದಲ ಮೂರು ದಿನ ಬೇಸ್‌ ಕ್ಯಾಂಪ್‌ನಲ್ಲಿ ಓರಿಯಂಟೇಷನ್‌. ಅಂದರೆ ಟ್ರೆಕ್ಕಿಂಗ್‌ಗೆ ಬೇಕಾದ ರೀತಿಯಲ್ಲಿ ನಮ್ಮನ್ನು ಅವರು ಶಾರೀರಿಕವಾಗಿ ಮತ್ತು ಮಾನಸಿಕವಾಗಿ ತಯಾರು ಮಾಡುತ್ತಾರೆ. ದಿನಾಲು ವ್ಯಾಯಾಮ, ಮಿನಿ ಟ್ರೆಕ್ಕಿಂಗ್‌, ಓರಿಯೆಂಟೇಶನ್‌ಟಾಕ್‌ ಹೀಗೆ ಬಗೆಬಗೆಯ ಚಟುವಟಿಕೆಗಳು. ಒಂದೊಂದು ಟೆಂಟ್‌ನ್ನು 12-16 ಜನರಿಗೆ ಕೊಡುತ್ತಾರೆ. ಗಂಡಸರಿಗೆ, ಹೆಂಗಸರಿಗೆ ಬೇರೆ ಬೇರೆ ಟೆಂಟ್ಸ್. ಹನಿಮೂನ್‌ ಕಪ್ಸ್‌ಗೆ ಬಹುಶಃ ಇದು ಸೂಟ್‌ ಆಗೋಲ್ಲ ಅನ್ಸುತ್ತೆ. ವೈಎಚ್‌ಎಐ ತಂಡ ಟೈಮಿಂಗ್ಸ್ ಮತ್ತು ಶಿಸ್ತಿಗೆ ತುಂಬ ಪ್ರಾಮುಖ್ಯತೆ ಕೊಡುತ್ತದೆ. ಶುರುವಿನಲ್ಲಿ ಅದು ನಮಗೆ ಸ್ವಲ್ಪ ಕಿರಿಕಿರಿ ಅನಿಸಿದರೂ, ದಿನದಲ್ಲಿ 7-8 ಗಂಟೆಗಳು ನಡೆಯುವಾಗ, ಗುಂಪಿನಲ್ಲಿ ಸೇರಿ ಕೆಲಸ ಮಾಡುವಾಗ, ಟ್ರೆಕ್ಕಿಂಗ್‌ ಮಾಡುವಾಗ ಇದು ನಮಗೆ ಅತ್ಯಂತ ಅವಶ್ಯಕ ಎಂದು ಗೊತ್ತಾಗುತ್ತೆ. ಬೆಳಗಿನ ಜಾವ ಎದ್ದು ಐಸ್‌ನಂತೆ ತಣ್ಣಗಿರುವ ನೀರಿನಲ್ಲಿ ಮುಖ ತೊಳೆದು, ಸ್ನಾನ ಮಾಡಿ, ಬಿಸಿಬಿಸಿ ಟೀ ಕುಡಿಯುವ ಹೊತ್ತಿಗೆ ಬರ್‌ರ್‌ರ್‌ರ್‌….. ಎನ್ನುವ ಚಳಿ! ಅವರು ಕೊಡುವ ಊಟ, ತಿಂಡಿ ಬಹಳ ಸಿಂಪಲ್ ಆಗಿದ್ದರೂ, ಹೊಟ್ಟೆ ತುಂಬಾ ತಿನ್ನಲು ಹೇಳ್ತಾರೆ. ಟ್ರೆಕ್ಕಿಂಗ್‌ನಲ್ಲಿ ಎತ್ತರ (ಆಲ್ಟಿಟ್ಯೂಡ್‌) ಹೆಚ್ಚಾದಷ್ಟು ಚಳಿ ವಿಪರೀತ ಜಾಸ್ತಿ ಆಗುತ್ತೆ. ಆದಕಾರಣ ಕಸೋಲ್ ‌ಬಿಡುವ ಮುನ್ನ ಚಳಿ ಅನ್ನಿಸಿದರೂ ಚೆನ್ನಾಗಿ ಸ್ನಾನ ಮಾಡೋದು ಒಳ್ಳೆಯದು. ಮತ್ತೆ ಸ್ನಾನ ವಾಪಸ್‌ ಬಂದ ಮೇಲೇನೆ.

ಮೂರು ದಿನ ಕಣ್ಮುಚ್ಚಿ ತೆಗೆಯುವಷ್ಟರಲ್ಲಿ ಮುಗಿದವು. ಹೊರಡುವ ದಿನ ಬಂದೇಬಿಡ್ತು. ಅವತ್ತು ಸಣ್ಣಗೆ ಮಳೆ ಹನಿಯುತ್ತಿತ್ತು. ಆಕಾಶದಲ್ಲಿ ದಟ್ಟವಾದ ಮೋಡ. ನಮ್ಮ ಉತ್ಸಾಹಕ್ಕೆ ನೀರೆರಚಿದ ಹಾಗಾಯಿತು. ಟ್ರೆಕ್ಕಿಂಗ್‌ ಮಾಡುವಾಗ ಮಳೆ ಪ್ರಮಾದಕರ. ಪರ್ವತ ಹತ್ತುವಾಗ ಒದ್ದೆಯಾದ ಮಣ್ಣಿನಲ್ಲಿ ಹತ್ತುವುದು ದುಸ್ಸಾಧ್ಯ! ನಮಗೆ ಬೇಕಾದ ವಸ್ತುಗಳನ್ನೆಲ್ಲಾ ನಾವೇ ಹೊತ್ತುಕೊಂಡು ಹೋಗಬೇಕಾದ ಕಾರಣ, ಸಾಧ್ಯವಾದಷ್ಟು ನಮಗೆ ಅತಿ ಅವಶ್ಯಕ ಅನ್ನಿಸುವ ಕಡಿಮೆ ವಸ್ತುಗಳನ್ನು ಮಾತ್ರ ತಗೊಂಡು ಹೋಗಬೇಕು. ಆದಕಾರಣ ಬಟ್ಟೆಗಳು ಕೂಡ ಬಹಳ ಕಡಿಮೆ. ಮಳೆಯಲ್ಲಿ ಒದ್ದೆಯಾದರೆ ಬದಲಾಯಿಸಲು ಹೆಚ್ಚು ಬಟ್ಟೆ ಇರೋದಿಲ್ಲ. ಒದ್ದೆಯಾದ ಬಟ್ಟೆ ಒಣಗೋದಿಲ್ಲ. ಅವುಗಳನ್ನು ಹೊರೋದು ಬೇರೆ ಕಷ್ಟ. ಹೀಗೆ…. ಮಳೆಯ ಜೊತೆ ಬರುವ ಕಷ್ಟಗಳು ಹಲವಾರು.  ಮಳೆ ಹುಟ್ಟಿಸಿದ ಭಯ ಟ್ರೆಕ್ಕಿಂಗ್‌ಗೆ ಹೊರಡುತ್ತಿರುವ ಉತ್ಸಾಹದಲ್ಲಿ ಮುಳುಗಿಹೋಯಿತು. ಬ್ರೇಕ್‌ ಫಾಸ್ಟ್ ಮುಗಿಸಿ, ಲಂಚ್‌ ಡಬ್ಬಿ ಪ್ಯಾಕ್‌ ಮಾಡಿಕೊಂಡು, ಮೂರು ದಿನದಲ್ಲಿ ಸ್ನೇಹಿತರಾದ ಇತರ ಟ್ರೆಕರ್ಸ್‌ ಜೊತೆ ಜೋಕ್‌ ಮಾಡುತ್ತಾ ಹೊರಟೆವು.

Himalaya-3

ನನ್ನ ಮಗಳಿಗೋಸ್ಕರ ಎಂಬಂತೆ ಗುಜರಾತ್‌ನಿಂದ ಅವಳ ಪ್ರಾಯದ ಮಕ್ಕಳ ತಂಡವೊಂದು ಬಂದಿತ್ತು. ನಮ್ಮ ಬ್ಯಾಚ್‌ನಲ್ಲಿ ಐವತ್ತು ಜನ. ಟ್ರೆಕ್ಕಿಂಗ್‌ ಸ್ಟಾರ್ಟಿಂಗ್‌ ಪಾಯಿಂಟ್‌ ಆದ ಊಂಚ್‌ ಧಾರ್‌ ತನಕ ಬಸ್ಸಿನಲ್ಲಿ ಪ್ರಯಾಣ. ಅಲ್ಲಿಂದ ಸಂಜೆಯೊಳಗೆ ನಮ್ಮ ಮೊದಲನೇ ಕ್ಯಾಂಪಾದ ಗುನಾಪಾನಿ (8000 ಅಡಿ)ಗೆ ತಲುಪಬೇಕು. ವರುಣ ದೇವರ ದಯೆಯಿಂದ ಮಳೆ ಹೆಚ್ಚಾಗಲಿಲ್ಲ. ರೈನ್‌ ಕೋಟ್ಸ್ ಹಾಕಿಕೊಂಡು, ಬ್ಯಾಕ್‌ ಪ್ಯಾಕ್‌ ಒದ್ದೆ ಆಗದಂತೆ ಜಾಗ್ರತೆಯಿಂದ ಆ ತುಂತುರು ಮಳೆಯಲ್ಲಿ ನಮ್ಮ ಮೊದಲನೇ ದಿನದ ಟ್ರೆಕ್ಕಿಂಗ್‌ ಮುಗಿಸಿದೆವು. ಇದು ನಮ್ಮಿಂದ ಸಾಧ್ಯವೋ ಎಂದು ಅಂದುಕೊಂಡ ನಮ್ಮ ಅನುಮಾನವೆಲ್ಲ ಕರಗಿಹೋಯಿತು. ಜೀವನದ ಒಂದು ಅದ್ಭುತವಾದ ಘಟ್ಟದಲ್ಲಿ ನಾವಿದ್ದೀವಿ ಅನ್ನುವ ಫೀಲಿಂಗ್‌.

ಹಿಮ ಪರ್ವತಗಳ ಮಧ್ಯೆ ನಮ್ಮ ಮೊದಲನೇ ದಿನ ಕ್ಯಾಂಪ್‌. ಸುಸ್ತಾಗಿ ಬಂದ ನಮಗೆ ಬಿಸಿಬಿಸಿಯಾದ ಸೂಪ್‌ ಕೊಟ್ಟರು. ಯಾವ ಟೆಂಟ್‌ ಯಾರಿಗೆ ಅಂತ ಕ್ಯಾಂಪ್‌ ಲೀಡರ್‌ ಹೇಳಿದ ಮೇಲೆ, ಅವರು ನಮ್ಮನ್ನು ಸಾಲಾಗಿ ನಿಲ್ಲಿಸಿ ಸ್ಟೋರ್ಸ್‌ ಟೆಂಟ್‌ನಿಂದ ನಮ್ಮೆಲ್ಲರಿಗೂ ಸ್ಲೀಪಿಂಗ್‌ ಬ್ಯಾಗ್ಸ್ ಮತ್ತು ಕಂಬಳಿಗಳನ್ನು ನಮ್ಮ ನಮ್ಮ ಟೆಂಟ್ಸ್ ಗೆ ಸಾಗಿಸಲು ಹೇಳಿದರು. ಪ್ರತಿ ಕ್ಯಾಂಪ್‌ನಲ್ಲಿ ಇದು ನಮ್ಮ ನಿತ್ಯದ ಕೆಲಸ. ಬೆಳಗ್ಗೆ ಟ್ರೆಕ್ಕಿಂಗ್‌ಗೆ ಹೊರಡುವ ಮುನ್ನ ಇದೇ ರೀತಿ ನಿಂತು ಅವುಗಳನ್ನು ವಾಪಸ್‌ ಇಡಬೇಕಾಗುತ್ತದೆ.

Himalaya-5

ಎರಡನೇ ದಿನ ನಾವು ತಲುಪಬೇಕಾದ ಕ್ಯಾಪ್‌ ಪೇಲ್‌ಪಾನಿ 9500 ಅಡಿ ಎತ್ತರದಲ್ಲಿದೆ. ದಿನದಿಂದ ದಿನಕ್ಕೆ ಎಲ್ಲರ ಜೊತೆ ಸ್ನೇಹ ಹೆಚ್ಚತೊಡಗಿತು. ಹೆಸರು ನೆನಪಿಲ್ಲದೇ ಇದ್ದರೂ, ಹತ್ತುವಾಗ ಕಷ್ಟ ಆದರೆ ಒಬ್ಬರಿಗೊಬ್ಬರು ಸಹಾಯ ಮಾಡೋದು ಸಾಮಾನ್ಯ. ಧೈರ್ಯ ಮಾಡಿ ಕರೆದುಕೊಂಡು ಬಂದರೂ ಸಿಟಿಯಲ್ಲಿ ಹುಟ್ಟಿ ಬೆಳೆದ ನಮ್ಮ ಮಗಳು ಹೇಗೆ ನಡೀತಾಳೋ, ಹೇಗೆ ಸುಧಾರಿಸ್ತಾಳೋ ಅಂದುಕೊಂಡಿದ್ದು ಸುಮ್ಮನೆ ಎಂದು ಅವಳು ತೋರಿಸಿಯೇಬಿಟ್ಟಳು. ತುಂಬು ಉತ್ಸಾಹದಿಂದ ಟ್ರೆಕ್‌ ಮಾಡ್ತಿದ್ದ ನಾಲ್ವರ ಜೊತೆಗೆ ಸ್ನೇಹ ಮಾಡ್ಕೊಂಡು, ಎರಡನೇ ದಿನದಿಂದ ಟೀಮ್ ಲೀಡರ್‌ ಜೊತೆ ಎಲ್ಲರನ್ನೂ ಲೀಡ್‌ ಮಾಡಲು ಶುರು.

ಬೆಳಗ್ಗೆ ಕ್ಯಾಂಪ್‌ನಿಂದ ಹೊರಟ ಮೇಲೆ ನನ್ನ ಮಗಳು ನನಗೆ ಸಿಕ್ತಿದ್ದಿದ್ದು ಮತ್ತೇ ಬ್ರೇಕ್‌ ಟೈಮ್ ನಲ್ಲೇ. ಅವರ ಉತ್ಸಾಹ, ಜೋಶ್ ಎಲ್ಲರಿಗೂ ಖುಷಿ ಕೊಡುತ್ತಿತ್ತು.

ಕ್ಯಾಂಪ್‌ ತಲುಪಿ ಸ್ವಲ್ಪ ಸುಧಾರಿಸಿಕೊಂಡ ಮೇಲೆ, ಆ ಸುಂದರವಾದ ಜಾಗದ ಫೋಟೋ ತೆಗೆದುಕೊಳ್ಳೋದು, ಜೊತೆಯವರೊಂದಿಗೆ ಮಾತು ಬೆಳೆಸೋದು, ಐದು ಕಲ್ಲುಗಳ ಗಿಚ್ಚಿ ಆಟ, ಕಾರ್ಡ್ಸ್ ಆಡೋದು ಬಿಟ್ಟರೆ ಬೇರೆ ಟೈಮ್ ಪಾಸ್‌ ಇಲ್ಲ. ಸೆಲ್ ಫೋನ್‌ಗೆ ಸಿಗ್ನಲ್ ಸಿಗೋದು ಬಹಳ ಅಪರೂಪ. ಯಾವತ್ತೂ ಆಡದ ನನ್ನ ಮಗಳು ತಾನೂ ಕಲಿತು, ಕ್ಯಾಂಪಿನಲ್ಲಿ ಮಿಕ್ಕ ಜನರಿಗೂ ಕೂಡ ಕಲಿಸಿ ಅವರು ತನ್ನ ಜೊತೆ ಆಡುವ ಹಾಗೆ ಮಾಡಿದಳು. ಕ್ಯಾಂಪ್‌ಗಳಲ್ಲಿ ಕರೆಂಟ್‌ ಇರುವುದಿಲ್ಲ. ಆ ಪರ್ವತಗಳಲ್ಲಿ ಸುತ್ತಮುತ್ತಲಿನ ಪರಿಸರ ಸಂರಕ್ಷಣೆಗೆ ವಿರುದ್ಧವಾಗಿ ಮತ್ತು ಕಾಡು ಬೆಂಕಿ ಹತ್ತಿಕೊಳ್ಳದೆ ಇರುವುದಕ್ಕಾಗಿ, ಚಳಿಗೆ ಬೆಂಕಿ ಹಚ್ಚಲು ಪರ್ಮೀಷನ್‌ ಇಲ್ಲ. ಅದು ಅಡುಗೆಗೆ ಮಾತ್ರ ಪರಿಮಿತಿ. ಅದರ ಪರಿಣಾಮ ರಾತ್ರಿ ಆದಮೇಲೆ ನೋ ಲೈಟ್ಸ್.

ನಾವು ತೊಗೊಂಡು ಹೋದ ಟಾರ್ಚ್‌ ಲೈಟ್ಸ್ ಎಮರ್ಜೆನ್ಸಿಗೆ ಮಾತ್ರ. ಅದೊಂದು ಥರದ ಅನುಭವ. ಕಡು ಕತ್ತಲಿನಲ್ಲಿ ನಿದ್ದೆ ಮಾಡುವವರಿಗೆ ಸುಖ, ನಿದ್ದೆ ಬರದವರಿಗೆ ಶಾಯರೀ, ಅಂತ್ಯಾಕ್ಷರಿ ಹಾಡು…. ಬಹುಶಃ ಕರೆಂಟ್‌ ಇಲ್ಲದಿರುವ ದಿನಗಳಲ್ಲಿ ಜನ ಹೀಗೆ ಕಾಲ ಕಳೀತಿದ್ರೋ ಏನೋ?

ಮೂರನೇ ದಿನ ನಾವು ತಲುಪಿದ ಕ್ಯಾಂಪ್‌ ಹೆಸರು ಜಿರ್ಮೀ. ಅದು 11,000 ಅಡಿ ಎತ್ತರದಲ್ಲಿದೆ. ಚಳಿ ಬಲು ಜೋರಾಗಿದೆ. ನಮಗೆ ಕುಡಿಯಲು, ಬಾಟಲ್ಸ್ ನಲ್ಲಿ ತುಂಬಿಸಿ ರಾತ್ರಿ ಸ್ಲೀಪಿಂಗ್‌ ಬ್ಯಾಗ್ಸ್ ನಲ್ಲಿಟ್ಟು ಕೊಂಡು ಮಲಗಲು ಬಿಸಿ ನೀರು ರೆಡಿ ಮಾಡಿಸಿದ ನಮ್ಮ ಅಲ್ಲಿಯ ಕ್ಯಾಂಪ್‌ ಲೀಡರ್‌. ಚಳಿಗೆ ತಿಂದ ಪ್ಲೇಟ್‌ ತೊಳೆಯುವುದು ಕೂಡಾ ಕಷ್ಟ. ನಾನು, ನನ್ನ ಮಗಳು ಒಂದೇ ಪ್ಲೇಟ್‌ನಲ್ಲಿ ತಿನ್ನೋದಕ್ಕೆ ಶುರು ಮಾಡಿದ್ವಿ. ಕೆಳಗೆ ನಮ್ಮ ನಿತ್ಯ ಜೀವನದಲ್ಲಿ ನಾವು ಆಚರಿಸುವ ಎಷ್ಟೋ ವಿಷಯ ಇಲ್ಲಿಯ ಪರಿಸ್ಥಿತಿಯಲ್ಲಿ ಅಸಂಬದ್ಧ ಅನ್ನಿಸುವುದಿದೆ. ಮೊದಲೇ ಸ್ನಾನವಿಲ್ಲ, ಆದರೆ ಬೆವರು ಇಲ್ಲದ ಕಾರಣ ಬಚಾವು.

ನಮ್ಮ ಗ್ರೂಪ್‌ನಲ್ಲಿ ಒಬ್ಬ ಹುಡುಗನಿಗೆ ಈ ಟ್ರೆಕ್‌ನಲ್ಲಿ ತನ್ನ ಬಗ್ಗೆ ತನಗೆ ಗೊತ್ತಾದ ಹೊಸ ವಿಷಯ ಅವನಿಗೆ ವರ್ಟಿಗೋ ಇದೆ ಅಂತ. ಅಂದರೆ ತುಂಬ ಎತ್ತರದಲ್ಲಿ ಇವರಿಗೆ ತಲೆಸುತ್ತೋದು, ಕಣ್ಣುಕತ್ತಲು ಬಂದು ನಡೆಯಲು ಆಗಲ್ಲ. ಇಷ್ಟು ಹತ್ತಿ ಆದಮೇಲೆ ಹಿಂತಿರುಗಲು ಆ ಹುಡುಗನಿಗೆ ಮನಸ್ಸಾಗಲಿಲ್ಲ. ಹಾಗೆ ಮನಸ್ಸು ಗಟ್ಟಿ ಮಾಡಿಕೊಂಡು ಹತ್ತಲು ನಿರ್ಧಾರ ಮಾಡಿದ. ಅವನ ಜೊತೆ ಬಂದ ಅವನ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸಹಾಯದಿಂದ ಪ್ರಪಾತದ ಕಡೆಗೆ ನೋಡದೇ ಹಾಗೆ ಟ್ರೆಕ್ಕಿಂಗ್‌ ಮುಂದುವರಿಸಿದ. ಆತನ ಧೈರ್ಯಕ್ಕೆ ಮತ್ತು ಆತ್ಮಸ್ಥೈರ್ಯಕ್ಕೆ ಹ್ಯಾಟ್ಸ್ ಆಫ್‌!

ಜಿರ್ಮಿಯಿಂದ ತಿಲಾ ಲೋತ್ನಿ ಎನ್ನುವ ನಮ್ಮ ಮುಂದಿನ ಕ್ಯಾಂಪ್‌ಗೆ ಹೋಗುವ ದಾರಿ ಅತಿ ಸುಂದರವಾದದ್ದು. ಆ ದಾರಿ ಪೂರ್ತಿ ರೋಡೋಡೆಂಡ್ರಾನ್‌ ಹೂಗಳು ಆ ಬೆಟ್ಟಗಳ ಮೇಲೆ ಕಾರ್ಪೆಟ್‌ ಹಾಸಿದಂತಿದ್ದವು. ಎಲ್ಲೋ ದೂರದಲ್ಲಿ ಕೆಳಗೆ ಕಾಣುವ ತಿರುವುಗಳಿರುವ ರೋಡ್‌…. ನೀಲಿ ಆಕಾಶ…. ಸುಯ್ಯೆಂದು ಬೀಸುಲ ಚಳಿ ಗಾಳಿ. ನಮಗೆ ಗೊತ್ತಿರುಲ ಪ್ರಪಂಚ ಬಿಟ್ಟು ಎಸಿಸೇ ಅತಿ ಪ್ರಶಾಂತವಾಗಿರುವ ಪ್ರದೇಶಕ್ಕೆ ಬಂದು ತಲುಪಿದ ಹಾಗೆ. ಈ ಟ್ರೆಕ್ಕಿಂಗ್‌ ಬಗ್ಗೆ ಗೊತ್ತಿರುವ ಅಲ್ಲಿಯ ಹಳ್ಳಿಜನ ನಮ್ಮ ಅಪ್ಪಟ ಭಾರತೀಯ ತಲೆ ಓಡಿಸಿ, ದಾರಿಯಲ್ಲಿ ನಾವು ಬ್ರೇಕ್‌ ತೆಗೆದುಕೊಳ್ಳುವ ಜಾಗಗಳಲ್ಲಿ ಚಿಕ್ಕ ಚಿಕ್ಕ ಟೆಂಟ್ಸ್ ಹಾಕಿ, ಅಲ್ಲಿ ಬಿಸಿಬಿಸಿಯಾದ ಮ್ಯಾಗಿ, ಆಮ್ಲೆಟ್‌, ಟೀ, ಬಿಸ್ಕತ್ತುಗಳನ್ನು ಮಾರಾಟ ಮಾಡುತ್ತಾರೆ. ಎತ್ತರ ಜಾಸ್ತಿಯಾದ ಹಾಗೆ ರೇಟು ಕೂಡಾ ಜಾಸ್ತಿ. 12,500 ಅಡಿ ಎತ್ತರದಲ್ಲಿರುವ ತಿಲೋಲಾತ್ನಿ ನಮ್ಮ ಎಲ್ಲಾ ಕ್ಯಾಂಪ್ಸ್ ಗಿಂತಲೂ ಎತ್ತರದಲ್ಲಿತ್ತು. ಪ್ರತಿ ಚಾರಣಿಗರು (ಟ್ರೆಕ್ಕರ್) ಬಯಸುವ ಹಾಗೆ, ನಮಗೆ ಕಷ್ಟ ಆಗದಂತೆ, ನಾವು ತಿಲೋಲಾತ್ನಿ ತಲುಪಿ, ಬಿಸಿಬಿಸಿ ಟೀ ಕುಡಿದ ಮೇಲೆ ಹಿಮ ಬೀಳಲು ಶುರುವಾಯಿತು. ನಮ್ಮ ಟೀಮಿನ ಆನಂದಕ್ಕೆ ಲೆಕ್ಕವೇ ಇಲ್ಲ. ಸುಮಾರು ಜನರು ಹಿಮ ಬೀಳೋದನ್ನು ನೋಡುವುದು ಅದು ಮೊದಲ ಸಲ! ಎಲ್ಲ ಚಾರಣಿಗರಿಗೂ ಈ ಅದೃಷ್ಟ ಕೂಡಿ ಬರುವುದಿಲ್ಲ. ಸ್ವಲ್ಪ ಹೊತ್ತಿನಲ್ಲೇ ಹಸಿರಾಗಿ ಕಾಣುತ್ತಿರುವ ಸ್ಥಳವೆಲ್ಲ ಬೆಳ್ಳಗಿನ ಹಿಮದಿಂದ ಮುಚ್ಚಿಹೋಯಿತು. ರಾತ್ರಿ ಆಯಿತು. ಸಣ್ಣಗೆ ಹಿಮ ಬೀಳ್ತಾನೇ ಇತ್ತು. ನಾವು ಹಾಕಿಕೊಂಡಿದ್ದ ಬಟ್ಟೆಗಳು, ಸ್ಲೀಪಿಂಗ್‌ ಬ್ಯಾಗ್‌, ಅದರ ಮೇಲಿರುವ ಕಂಬಳಿ…. ಇವೆಲ್ಲ ಕೂಡ ಆ ಚಳಿಯನ್ನು ತಡೆಯಲಾರವು. ಚಳಿಗೆ ಮಧ್ಯೆ ಬರೀ ಟೆಂಟ್ ಮಾತ್ರ. ಅವತ್ತಿನ ರಾತ್ರಿ ಟೆಂಪರೇಚರ್‌ 4 ಡಿಗ್ರಿ ಸೆಂಟಿಗ್ರೇಡ್‌. ಚಳಿಗೆ ನಿದ್ದೆ ಬರಲಿಲ್ಲ. ಮಧ್ಯರಾತ್ರಿ ಟೆಂಟ್‌ನಿಂದ ಹೊರಗೆ ಬಂದು ನೋಡಿದರೆ ಮೋಡಗಳೆಲ್ಲ ಚದುರಿ ಆಕಾಶದಲ್ಲಿ ರತ್ನಗಳು ಹಾಸಿದ ಹಾಗೆ ನಕ್ಷತ್ರಗಳು.

ಬೆಳಗಾದ ಮೇಲೆ ಟೆಂಟ್‌ನಿಂದ ಹೊರಗೆ ಬಂದಾಗ ಎಲ್ಲಿ ನೋಡಿದರೂ ಫಳಫಳಿಸುತ್ತಿರುವ ಬೆಳ್ಳಿಯಂಥ ಹಿಮ. ಅವತ್ತು ಎಲ್ಲರಲ್ಲೂ ದುಪ್ಪಟ್ಟು ಉತ್ಸಾಹ. ಈ ಟ್ರೆಕ್‌ನಲ್ಲಿ ನಾವೆಲ್ಲರೂ ಕಾಯುತ್ತಿರುವ ದಿನ. ಸರ್ಪಾಸ್‌ ಹತ್ತುವ ದಿನ! ಆ ದಿನ ಪೂರ್ತಿ, ಸುಮಾರು ಆರೇಳು ಗಂಟೆಗಳ ಕಾಲ ದಟ್ಟವಾದ ಹಿಮದ ಮೇಲೆ ನಮ್ಮ ಟ್ರೆಕ್‌. ಪ್ರತಿದಿನ ಒಬ್ಬ ಗೈಡ್‌ ಇದ್ದರೆ, ಅಂದು ನಮ್ಮನ್ನು ಸೇಫಾಗಿ ಕರೆದುಕೊಂಡು ಹೋಗಲು ನಮಗೆ ಸಹಾಯ ಮಾಡಲು ನಾಲ್ಕು ಜನ ಗೈಡ್ಸ್. ಅದೊಂದು ಹಿಮಪ್ರಪಂಚ. ಅಲ್ಲಿ ನೀಲಿ ಆಕಾಶ, ಬೆಳ್ಳಗಿನ ನೆಲ, ಚಳಿ, ಹೆಜ್ಜೆಯ ಮೇಲೆ ಹೆಜ್ಜೆ ಅದು ಬಿಟ್ಟು ಬೇರೆ ಪ್ರಪಂಚ ಇಲ್ಲ. ಗೈಡ್‌ ನಡೆದ ದಾರಿಯಲ್ಲೇ ನಡೆಯಬೇಕು.

ಇಲ್ಲದಿದ್ದರೆ ಹಿಮ ಕುಸಿದು ಅದರಲ್ಲಿ ಸಿಕ್ಕಿಹಾಕಿಕೊಳ್ಳುವ ಅಥವಾ ಜಾರಿಬೀಳುವ ಭಯ. ಬೆಟ್ಟ ತುಂಬ ಕಡಿದಾಗಿರುವ ದಾರಿಯಲ್ಲಿ ಅರ್ಧರ್ಧ ಗಂಟೆ ನಡೆದೆವು. ಹೆಜ್ಜೆ ಸ್ವಲ್ಪ ತಪ್ಪಿದರೂ ಪ್ರಪಾತಕ್ಕೆ ಬೀಳುವುದು ಗ್ಯಾರಂಟಿ! ಅಲ್ಲಿ ಸ್ವಲ್ಪ ಭಯವಾಯಿತು. ಯಾವಾಗ ಸಮತಲವಾಗಿರುವ ಜಾಗ ತಲುಪುತ್ತೇವೋ ಭಗವಂತಾ ಅಂತನ್ನಿಸಿತು. ನನ್ನ ಮಗಳು ಎಲ್ಲಿದ್ದಾಳೋ, ಹೇಗೆ ಮ್ಯಾನೇಜ್‌ ಮಾಡ್ತಾ ಇದ್ದಾಳೋ ಗೊತ್ತಿರಲಿಲ್ಲ. ಆಮೇಲೆ ಗೊತ್ತಾಯ್ತು ಅವಳು ಯಾವ ಭಯ, ಅಂಜಿಕೆ ಇಲ್ಲದೆ, ತನ್ನದೇ ಆದ ಸ್ಟೈಲ್‌ನಲ್ಲಿ ಅತಿ ಶೀಘ್ರವಾಗಿ ಹತ್ತಿಬಿಟ್ಟಳು ಅಂತ. ಅವಳ ಮನಸ್ಥೈರ್ಯ ನನ್ನ ಮನದಲ್ಲಿ ಅಚ್ಚರಿ ಮೂಡಿಸಿತು. ಆ ಅರ್ಧಗಂಟೆ ಕಾಲ ನಮಗೆ ಕೆಲವು ಗಂಟೆಗಳಾಗಿ ಅನ್ನಿಸಿತಂದ್ರೆ ಅದರಲ್ಲಿ ಅತಿಶಯೋಕ್ತಿ ಇಲ್ಲ. ಪ್ರಕೃತಿ ನಮ್ಮ ಮೇಲೆ ಕರುಣೆ ತೋರಿ ಮಳೆ ಬರಲಿಲ್ಲ. ಆದರೆ ಗೈಡ್‌ಹೇಳಿದ ಪ್ರಕಾರ ತುಂಬಾ ಬಿಸಿಲೇರಿದರೂ ನಮಗೆ ಕಷ್ಟಾನೇ. ಬಿಸಿಲಿಗೆ ಹಿಮ ಕರಗಿದ್ರೆ ಅದು ಕೆಸರಾಗಿ ಜಾರುತ್ತೆ.ಇದೇ ಸರ್ಪಾಸ್. ಈಗ ನೀವು 13,800 ಅಡಿ ಎತ್ತರದಲ್ಲಿದ್ದೀರಿ ಅಂತ ಗೈಡ್‌ ಹೇಳಿದಾಗ ನಾವು ಪಟ್ಟ ಆನಂದ ಮಾತಿನಲ್ಲಿ ಹೇಳಲು ಸಾಧ್ಯವಿಲ್ಲ! ಏನೋ… ಅದೇನೋ ಸಾಧನೆ ಮಾಡಿಬಿಟ್ಟಿದ್ದೇವೆ ಅನ್ನುವ ಭಾವ. ಸಂಭ್ರಮದಲ್ಲಿ ಮೈ ಝುಮ್ಮಂತು. ನಮಗೆ ಹೀಗೆ ಅನ್ನಿಸಿದ್ರೆ, ಇನ್ನು ಎರೆಸ್ಟ್ ಹತ್ತಿದವರಿಗೆ ಹೇಗೆ ಅನ್ನಿಸಿರಬೇಕು?!

ಇಳಿಯಲು ಜಾಸ್ತಿ ಟೈಮ್ ಹಿಡಿಯಲಿಲ್ಲ. ಅದರಲ್ಲಿ ಸುಮಾರು ಸಾವಿರ ಅಡಿ ಒಂದು ಬೆಟ್ಟದ ಇಳಿಜಾರಿನಲ್ಲಿದ್ದ ಮಂಜಿನ ಮೇಲೆ ಕೂಡಿಸಿ ಜಾರುಬಂಡೆ ಮೇಲೆ ಜಾರಿದ ಹಾಗೆ ಇಳಿಸಿಬಿಟ್ರು. ಒಂದು ಥೀಮ್ ಪಾರ್ಕಿನಲ್ಲಿ ಯಾವುದೋ ಒಂದು ದೊಡ್ಡ ರೈಡ್‌ನಲ್ಲಿ ಹೋದ ಅನುಭವ. ಅದೊಂದು ಥ್ರಿಲ್‌! ಅಲ್ಲಿಂದ ನಮ್ಮ ಕ್ಯಾಂಪ್‌ ಬಿಸ್ಕೆರಿಗೆ ನಡೆಯುವಾಗ ಹಿಮ ಕಡಿಮೆಯಾಗಿ, ಹಸಿರು ಬಯಲು, ಬಣ್ಣಬಣ್ಣದ ಹೂಗಳು, ಬದಿಯಲ್ಲೇ ಹರಿಯುತ್ತಿರುವ ಸೆಲೆ, ತಂಪಾದ ವಾತಾವರಣ…. ಭೂಮಿ ಮೇಲಿರುವ ಸ್ವರ್ಗ ಇದೇ ಅನ್ನಿಸಿತು.

ಮಾರನೇ ದಿನ ಕೂಡ ಕೆಳಗೆ ಇಳಿಯುವುದೇ ನಮ್ಮ ಪ್ರಯಾಣ. ಜಲಪಾತಗಳು, ತೊರೆಗಳು ಹೆಜ್ಜೆ ಹೆಜ್ಜೆಗೂ ಸಿಗುತ್ತಲೇ ಇದ್ದವು. ಒಂದು ಕಡೆ ನಮ್ಮನ್ನು ಹಗ್ಗದ ಮೂಲಕ ಇಳಿಸಿದರು. ಟ್ರೈನಿಂಗ್‌ ಸಮಯದಲ್ಲಿ ಪ್ರಾಕ್ಟೀಸ್‌ ಮಾಡೋವಾಗ ಸೇಫ್ಟಿ ಹಾರ್ನೆಸ್‌ ಇತ್ತು. ಆದರೆ ಈಗ ಕೇವಲ ಒಂದು ಹಗ್ಗದಿಂದ ನಮ್ಮನ್ನು ಇಳಿಸಿಬಿಟ್ಟರು. ಒಬ್ಬರು ಇಳಿಯುವಾಗ ಮತ್ತೊಬ್ಬರು ಮುಂದಿನ ದಿನಗಳಿಗೆ ನೆನಪಿಗಾಗಿ ವೀಡಿಯೋ ತೆಗೀತಿದ್ದರು. ಆವತ್ತಿನ ನಮ್ಮ ಕ್ಯಾಂಪ್‌ ಹೆಸರು ಬಂದಕ್‌ ತಾಜ್‌. ಬೇಸ್‌ ಕ್ಯಾಂಪಿನಲ್ಲಿ ಎಲ್ಲರೂ ಸ್ವಿಟ್ಜರ್‌ಲ್ಯಾಂಡ್‌ನ್ನು ಹೋಲುತ್ತೆ ಅಂತ ಹೇಳಿದ ಜಾಗ. ನಿಜವಾಗಲೂ ಹಾಗೇ ಇದೆ. ಸುತ್ತಲೂ ಹಿಮ ತುಂಬಿದ ಪರ್ವತಗಳು. ಹಸಿರಾಗಿರುವ ಬಯಲುಗಳು, ಪೈನ್‌ ಮರಗಳು. ಆ ಪೈನ್‌ ಸುವಾಸನೆ ನಮ್ಮ ಟ್ರೆಕ್ಕಿಂಗ್‌ ಇಡೀ ನಮ್ಮನ್ನು ಕರುಣಿಸಿದ ಹಾಗೆ.

ನಾವು ಕ್ಯಾಂಪ್‌ ತಲುಪಿ, ಟೀ ಕುಡಿದು ಎಲ್ಲರೂ ಆಕಡೆ ಈಕಡೆ ಓಡಾಡಿ, ಪ್ರಕೃತಿ ಸೌಂದರ್ಯವನ್ನು ನೋಡುತ್ತಾ, ಆ ಸಂಜೆಯ ಸೊಗಸನ್ನು ಆಸ್ವಾದಿಸಿದ ಮೇಲೆ, ಸಣ್ಣಗೆ ಮಳೆ ಶುರು. ಅಂದು ಕೊನೆಯ ದಿನ ಆದಕಾರಣ ಕ್ಯಾಂಪ್‌ ಲೀಡರ್‌ ಸೂರ್ಯ ‌ಸ್ವಲ್ಪ ತಪ್ಪಿಸಿ, ಗಂಡಸರು ಹೆಂಗಸರು ಒಂದೇ ಟೆಂಟ್‌ನಲ್ಲಿ ಮಧ್ಯರಾತ್ರಿವರೆಗೆ ಇರೋದಕ್ಕೆ ಪರ್ಮೀಷನ್‌ ಕೊಟ್ಟರು. ಎಲ್ಲರೂ ಸೇರಿ ಬಗೆಬಗೆಯ ಆಟ ಆಡಿದ್ವಿ. ಟ್ರೆಕ್ಕಿಂಗ್‌ ಯಶಸ್ವಿಯಾಗಿ ಮುಗಿಸಿದ್ದಕ್ಕೆ ಒಬ್ಬರನ್ನೊಬ್ಬರು ಅಭಿನಂದಿಸಿಕೊಂಡ್ವಿ. ನಮ್ಮ ಮುಂಚಿನ ಎರಡು ತಂಡಗಳು ಕೂಡಾ ಮಳೆಯಿಂದ ಎದುರಾದ ಸಮಸ್ಯೆಗಳಿಂದಾಗಿ ಟ್ರೆಕ್‌ ಮಧ್ಯದಲ್ಲೇ ಹಿಂತಿರುಗಿದವರಂತೆ. ನಾವು ನಿಜವಾಗಲೂ ಲಕ್ಕಿ ಅನ್ನಿಸಿತು.

ಮಧುರ ನೆನಪುಗಳ ಜೊತೆ, ಮಾರನೇ ದಿನ ಕೊನೆಯ ದಿನ ಬಂದಕ್‌ ತಾಜ್‌ನಿಂದ ಬರ್ಸಾನಿ ತಲುಪಿದ್ವಿ. ಇನ್ನು ಎಲ್ಲರದೂ ಒಂದೇ ಯೋಚನೆ. ಆದಷ್ಟು ಬೇಗ ಬೇಸ್‌ ಕ್ಯಾಂಪ್‌ ತಲುಪಬೇಕು. ಆ ಮೇಲೆ ಯಾವುದಾದರೂ ಹೋಟೆಲ್ ನಲ್ಲಿ ರೂಮ್ ಮಾಡಿ ಬಿಸಿಬಿಸಿ ಸ್ನಾನ, ವೆರೈಟಿ ಊಟ, ಮೆತ್ತಗಿನ ಹಾಸಿಗೆಯಲ್ಲಿ ಬೆಚ್ಚಗಿನ ನಿದ್ದೆ.

ಈ ಅನುಭವ ನಿಮಗಾಗಿ ಕಾಯುತ್ತಿದೆ…… ನೀವು ಹೊರಡಿ ಹಿಮಾಲಯ ಟ್ರೆಕ್ಕಿಂಗ್‌ಗೆ!

ಕೆ. ಮಲ್ಲಿಕಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ