“ಪ್ರೀತಿಗೆ ಮಾತೇ ಇಲ್ಲ, ಅದಕ್ಕೂ ಮಿಗಿಲಾಗಿ ಅದಕ್ಕೆ ಮಾತೇ ಬೇಕಿಲ್ಲ,” ಎಂದು ಅನೇಕರು ಹೇಳುತ್ತಾರೆ. ಪ್ರೀತಿಯ ತರಂಗಗಳು ಮೌನವಾಗಿಯೇ ಗಾಳಿಯಲ್ಲಿ ತೇಲುತ್ತಿರುತ್ತವೆ. ಕೆಲವೊಮ್ಮೆ ದೃಷ್ಟಿ, ಮತ್ತೊಮ್ಮೆ ಹೃದಯ ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ನೈಜ ಪ್ರೀತಿ ಸಿಗುವುದು ಅಪರೂಪ. ಹಾಗೊಮ್ಮೆ ಸಿಕ್ಕ ಬಳಿಕ ಮನುಷ್ಯನಿಗೆ ಅದಕ್ಕಿಂತ ಹಿರಿದಾದುದು ಮತ್ತೊಂದಿಲ್ಲ ಎನಿಸುತ್ತದೆ. ಯಾವ ಯಾವ ವೈಶಿಷ್ಟ್ಯಗಳು ಈ ಪ್ರೀತಿಯನ್ನು ಇಷ್ಟು ಸುಂದರಗೊಳಿಸಿವೆ ಎಂಬುದನ್ನು ತಿಳಿದುಕೊಳ್ಳುವುದು ಅತ್ಯವಶ್ಯ.
ಬಂಧನಗಳಿಂದ ಮುಕ್ತ ಪ್ರೀತಿ : ಪ್ರೀತಿಯೆನ್ನುವುದು ಜಾತಿ, ಧರ್ಮ ಮತ್ತು ಗಡಿಯ ಗೋಡೆಯನ್ನು ದಾಟಿಯೂ ಚಿಗುರುತ್ತದೆ. 18 ವರ್ಷದವನಿದ್ದಾಗ ಶಾರೂಖ್ 14 ವರ್ಷದ ಗೌರಿಯನ್ನು ನೋಡಿದ್ದ. ಆತ ಆಗಲೇ ಮದುವೆಯಾದರೆ ಇವಳನ್ನೇ ಎಂದು ನಿರ್ಧರಿಸಿಬಿಟ್ಟಿದ್ದ. ಧರ್ಮದ ಗೋಡೆಗಳು ಅವರ ಮಧ್ಯೆ ಬರಲಿಲ್ಲ. ಅವರು ಪರಸ್ಪರ ಒಂದಾದರು.
ಅದೇ ರೀತಿ ನರ್ಗೀಸ್ ಸುನೀಲ್ ದತ್, ರಾಜೀವ್ ಸೋನಿಯಾ, ಶರ್ಮಿಳಾ ಪಟೌಡಿ, ಸೈಫ್ ಕರೀನಾ, ಇಮ್ ರೋಜ್ ಅಮೃತಾ ಹೀಗೆ ಅನೇಕ ಜೋಡಿಗಳು ಬೇರೆ ಬೇರೆ ಧರ್ಮದವರಾಗಿಯೂ ಕೂಡ ತಮ್ಮ ಸಂಗಾತಿಯ ಸಂಗ ತೊರೆಯಲಿಲ್ಲ. ಸಮಾಜವನ್ನು ಎದುರಿಸಿಯೂ ಪ್ರೀತಿಯಲ್ಲಿ ಗೆಲವು ಸಾಧಿಸಿದರು.
ಹೆಸರಾಂತ ಲೇಖಕ ಚೇತನ್ ಭಗತ್ ಅವರ ಕಥೆ ಕೂಡ ಕಡಿಮೆ ಸ್ವಾರಸ್ಯದ್ದೇನಲ್ಲ. ಬೇರೆ ರಾಜ್ಯದ ಹುಡುಗಿ ಅವರನ್ನು ಪ್ರೀತಿಸಿದಳು. ಹಲವು ಅಡ್ಡಿ ಆತಂಕಗಳ ನಡುವೆಯೂ ಅವರು ಆಕೆಯನ್ನು ವರಿಸಿದರು.
ಸೌರವ್ ಗಂಗೂಲಿ ಡೋನಾ ಉದಾಹರಣೆ ನೋಡಿ. ಇಬ್ಬರೂ ನೆರೆಮನೆಯವರು. ಬಾಲ್ಯದಿಂದಲೇ ಇಬ್ಬರೂ ಪರಸ್ಪರರನ್ನು ಇಷ್ಟಪಡುತ್ತಿದ್ದರು. ಆದರೆ ಇಬ್ಬರ ಜಾತಿ ಬೇರೆ ಬೇರೆಯಾಗಿತ್ತು. ಗಂಗೂಲಿ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದರೆ, ಡೋನಾ ಬ್ರಾಹ್ಮಣೇತರ ವರ್ಗಕ್ಕೆ ಸೇರಿದ್ದಳು. ಸೌರವ್ ಮನೆಯವರು ಬೇರೆ ಜಾತಿಯ ಡೋನಾಳನ್ನು ಸೊಸೆಯಾಗಿ ಸ್ವೀಕರಿಸಲು ಸ್ಪಷ್ಟವಾಗಿ ನಿರಾಕರಿಸಿದ್ದರು. ಇಂತಹ ಸಂದರ್ಭದಲ್ಲಿ ಸೌರವ್ ಧೈರ್ಯದಿಂದ ಕಾರ್ಯಪ್ರವೃತ್ತರಾದರು. ಮೊದಲು ಕೆರಿಯರ್ ಬಗ್ಗೆ ಹೆಚ್ಚು ಗಮನಕೊಟ್ಟರು. ಒಂದು ಹಂತಕ್ಕೆ ತಲುಪಿದ ಬಳಿಕ ಅಂದರೆ 23ನೇ ವಯಸ್ಸಿನಲ್ಲಿ 20 ವರ್ಷದ ಡೋನಾಳೊಂದಿಗೆ ಮನೆಯವರಿಗೆ ಗೊತ್ತಿಲ್ಲದಂತೆಯೇ ರಿಜಿಸ್ಟರ್ಡ್ ಮದುವೆಯಾದರು. ಬಳಿಕ ಎರಡೂ ಕುಟುಂಬದವರು ಅವರ ಮದುವೆಗೆ ಹಸಿರು ನಿಶಾನೆ ತೋರಿಸಿದರು.
ಧರ್ಮ, ಜಾತಿಯ ಹೊರತಾಗಿ ಪ್ರೀತಿಯಲ್ಲಿ ವಯಸ್ಸಿನ ಅಂತರ ಗೌಣ ಎಂಬಂತೆ ಕಂಡು ಬರುತ್ತದೆ. ಸೈಫ್ ಕರೀನಾರ ಜೋಡಿಯನ್ನೇ ನೋಡಿ. ಅವರಿಬ್ಬರಲ್ಲಿ 10 ವರ್ಷ ಅಂತರ ಇದ್ದರೂ ಅದು ಅವರ ಪ್ರೀತಿಯಲ್ಲಿ ಅಡ್ಡ ಬರಲಿಲ್ಲ. ಸಾಮಾನ್ಯವಾಗಿ ಪ್ರೀತಿ ಮಾಡಿ ಮದುವೆ ಮಾಡಿಕೊಳ್ಳುವವರಲ್ಲಿ ಹುಡುಗಿಗಿಂತ ಹುಡುಗನ ವಯಸ್ಸೇ ಹೆಚ್ಚಿರುತ್ತದೆ. ಕೆಲವರು ಸಮವಯಸ್ಕರೂ ಇರುತ್ತಾರೆ. ಕೆಲವು ಅಪರೂಪದ ಉದಾಹರಣೆಗಳೂ ಇವೆ. ಯುವಕನಿಗಿಂತ ಯುವತಿಯ ವಯಸ್ಸು ಹೆಚ್ಚಾಗಿರುತ್ತದೆ. ಸಚಿನ್‌ಗಿಂತ ಅಂಜಲಿ 4 ವರ್ಷ ದೊಡ್ಡವಳು. ಆದರೂ ಅವರ ಜೋಡಿ ಸೂಪರ್ ಹಿಟ್ ಆಗಿದೆ. ಸುನಿಲ್ ದತ್ ಕೂಡ ನರ್ಗೀಸ್‌ಗಿಂತ ಎಷ್ಟೋ ವರ್ಷ ಚಿಕ್ಕವರಾಗಿದ್ದರು.
ಪ್ರೀತಿಯ ಆಸರೆ : ಪ್ರೀತಿ ಮನುಷ್ಯನ ಅತಿ ದೊಡ್ಡ ಆಸರೆ. ಇದು ವ್ಯಕ್ತಿಯೊಬ್ಬನಿಗೆ ಜೀವಿಸುವ ಧೈರ್ಯ ಹಾಗೂ ಗುರಿಯನ್ನು ನೀಡುತ್ತದೆ.
ಡಾರ್ಲಿಂಗ್ ಜೀದಿ ಟ್ರೂ ಲವ್ ಸ್ಟೋರಿ ಆಫ್ ನರ್ಗೀಸ್ ಅಂಡ್ ಸುನಿಲ್ ದತ್’ ಪುಸ್ತಕದ ಲೇಖಕಿ ಕಿಶ್ವರ್ ದೇಸಾಯಿ ನರ್ಗೀಸ್‌ರ ಡೈರಿಯಿಂದ ಆಯ್ದ ಕೆಲವು ಸವಾಲುಗಳನ್ನು ತಮ್ಮ ಪುಸ್ತಕದಲ್ಲೂ ಸೇರಿಸಿದ್ದಾರೆ. ತಮ್ಮ ಮೊದಲ ಸಂಬಂಧ ವಿಫಲವಾದುದು ಹಾಗೂ ಕುಟುಂಬದವರು ತನ್ನನ್ನು ಮನಿ ಮೇಕಿಂಗ್ ಮೆಷಿನ್’ ಎಂದು ಭಾವಿಸಿರುವುದಕ್ಕೆ ಬೇಸರಗೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದರು ಎಂಬುದನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದರು. ಆ ಸಂದರ್ಭದಲ್ಲಿಯೇ ಸುನಿಲ್ ದತ್ ಅವರ ಜೀವನದಲ್ಲಿ ಪ್ರವೇಶಿಸಿ, “ನೀವು ಖುಷಿಯಿಂದ ಜೀವಿಸುವುದನ್ನು ನಾನು ನೋಡಲು ಇಚ್ಛಿಸುತ್ತೇನೆ,” ಎಂದು ಹೇಳಿದಾಗ ನರ್ಗೀಸ್‌ರಿಗೆ ಜೀವನೋತ್ಸಾಹ ಬಂತು. ಬಳಿಕ ಅವರೊಂದಿಗೆ ಮದುವೆಯಾದರು.
ದಕ್ಷಿಣದ ಹೆಸರಾಂತ ಗಾಯಕಿ ಎಂ.ಎಸ್. ಸುಬ್ಬುಲಕ್ಷ್ಮಿ ತಮ್ಮ 24ನೇ ವಯಸ್ಸಿನಲ್ಲಿ ಚಲನಚಿತ್ರ ನಿರ್ದೇಶಕ ಟಿ.ಟಿ. ಸದಾಶಿವಂರನ್ನು ವಿವಾಹವಾದರು. ಸದಾಶಿವಂ ಅವರ ಸಹಾಯ ಸಹಕಾರದಿಂದ ಕರ್ನಾಟಕ ಸಂಗೀತ ಕ್ಷೇತ್ರದಲ್ಲಿ ಸುಬ್ಬುಲಕ್ಷ್ಮಿಯವರು ಇನ್ನಷ್ಟು ಎತ್ತರಕ್ಕೇರಲು ಸಾಧ್ಯವಾಯಿತು.
ಪ್ರೀತಿ ಸುಂದರ ಎನಿಸುತ್ತದೆ : ಪ್ರೀತಿಯ ಒಂದು ವಿಶೇಷತೆಯೇನೆಂದರೆ, ನಮಗೆ ಯಾರು ಇಷ್ಟವಾಗುತ್ತಾರೊ, ಅವರು ಬಹಳ ಸುಂದರ ಎನಿಸುತ್ತಾರೆ. ಜಯಾ ಅವರು ಅಮಿತಾಬ್ ಬಚ್ಚನ್ ಜೊತೆಗಿನ ತಮ್ಮ ಪ್ರಥಮ ಭೇಟಿಯ ಬಗ್ಗೆ ಹೀಗೆ ಹೇಳಿದ್ದರು, “ನಾನು ಅವರನ್ನು ಐಐಎಫ್‌ಟಿ ಇನ್‌ಸ್ಟಿಟ್ಯೂಟ್‌ನಲ್ಲಿ ಪ್ರಥಮ ಬಾರಿಗೆ ಭೇಟಿ ಆದಾಗ ಅವರು ನನಗೆ ಬಹಳ ಇಷ್ಟವಾದರು. ಈ ಕುರಿತಂತೆ ನಾನು ಸ್ನೇಹಿತೆಯರ ಮುಂದೆ ಹೇಳಿದಾಗ `ಅವರು ಕೋಲಿನ ಹಾಗೆ ಉದ್ದವಾಗಿದ್ದಾರೆ. ನಿನಗೆ ಹೊಂದುವುದಿಲ್ಲ,’ ಎಂದಿದ್ದರು. ನಾನು ಅವರಿಗೆ ಸ್ವಲ್ಪ ಖಾರದ ಧ್ವನಿಯಲ್ಲಿಯೇ, “ಅವರು ಇತರರಿಗಿಂತ ಭಿನ್ನವಾಗಿದ್ದಾರೆ. ಅದೇನೊ ವಿಶೇಷತೆ ಅವರಲ್ಲಿದೆ,” ಎಂದು ಹೇಳಿದ್ದೆ.
`ಜಂಜೀರ್’ ಚಿತ್ರ ಹಿಟ್ ಆದ ಬಳಿಕ ಇಬ್ಬರೂ ಮದುವೆ ಮಾಡಿಕೊಂಡರು. ಈಗಲೂ ಅವರ ಪ್ರೀತಿಯ ಬಂಧನ ಅದೆಷ್ಟು ಗಟ್ಟಿಯಾಗಿದೆಯೆಂದರೆ, ಎಲ್ಲರೂ ಆ ಜೋಡಿಯ ಉದಾಹರಣೆ ಕೊಡುತ್ತಾರೆ. ಇದೇ ಪ್ರೀತಿಯ ಕಾರಣದಿಂದಾಗಿ ನಮ್ಮನ್ನು ಪ್ರೀತಿಸುವವರು ನಮಗೆ ಸುಂದರವಾಗಿಯೇ ಕಾಣುತ್ತಾರೆ.
ತೋರಿಕೆ ಒಳ್ಳೆಯದಲ್ಲ : ಶೇಕ್ಸ್ ಪಿಯರ್‌ನ ಶಬ್ದಗಳಲ್ಲಿ ಹೇಳಬೇಕೆಂದರೆ ಯಾರು ಕಡಿಮೆ ಪ್ರೀತಿ ಮಾಡುತ್ತಾರೊ, ಅವರೇ ತಮ್ಮ ಪ್ರೀತಿಯ ಬಗ್ಗೆ ಇತರರ ಮುಂದೆ ಹೆಚ್ಚು ಚರ್ಚೆ ಮಾಡುತ್ತಾರೆ.
ಅಂದಹಾಗೆ, ಪ್ರೀತಿಯ ಅನುಭೂತಿ ತಂತಾನೇ ಆಗುತ್ತದೆ. ಅದನ್ನು ಶಬ್ದಗಳಲ್ಲಿ ಉಲ್ಲೇಖಿಸುವುದು ಅಥವಾ ತೋರಿಸಿಕೊಳ್ಳುವುದು ಅಗತ್ಯವಾಗಿರುವುದಿಲ್ಲ.
ಮಹಾತ್ಮ ಗಾಂಧಿಯವರು ಕಸ್ತೂರಬಾ ಹೆಸರಿನಲ್ಲಿ ಒಂದು ಪತ್ರ ಬರೆದಿದ್ದರು, `ನಿನಗೆ ಪ್ರೀತಿಯ ಬಾಹ್ಯ ಸಂಕೇತಗಳ ಅಗತ್ಯ ಇದೆಯಾ? ನಾನು ಪ್ರೀತಿಯ ಬಗ್ಗೆ ನಿನ್ಮುಂದೆ ತೋರಿಸಿಕೊಳ್ಳದೇ ಇದ್ದರೆ ಪ್ರೀತಿ ಮುಗಿದೇ ಹೋಯಿತು ಎಂದು ನಿನಗೇಕೆ ಅನಿಸುತ್ತೆ? ನನ್ನನ್ನು ನಂಬು, ನನ್ನ ಪ್ರೀತಿ ದಿನೇ ದಿನೇ ಹೆಚ್ಚುತ್ತ ಹೊರಟಿದೆ.”
ಸುಮಾರು 50 ವರ್ಷಗಳ ಕಾಲ ಅಮೃತಾಳೊಂದಿಗೆ ಜೀವನ ನಡೆಸುತ್ತಿರುವ ಇಮರೋಜ್ ಹೀಗೆ ಹೇಳುತ್ತಾರೆ, “ನಾವು ಪರಸ್ಪರ ಐ ಲವ್ ಯೂ ಎಂದು ಹೇಳಲಿಲ್ಲ. ಬಹುಶಃ ನಮಗೆ ಅದರ ಅಗತ್ಯವೇ ಬೀಳಲಿಲ್ಲ.”
ಪ್ರೀತಿಯೆಂದರೇನು? ಪರಸ್ಪರರ ಚಿಕ್ಕಪುಟ್ಟ ಅಗತ್ಯಗಳ ಬಗ್ಗೆ ಗಮನಹರಿಸುವುದೇ ಪ್ರೀತಿಯೆನಿಸಿಕೊಳ್ಳುತ್ತದೆ. ಹೀಗಾಗಿ ಪ್ರೀತಿಯ ಮೊದಲ ಮಾಹಿತಿ ಹೃದಯಕ್ಕೆ ದೊರೆಯುತ್ತದೆ. ಅದಕ್ಕೆ ತುಟಿ ಏನು ಪ್ರತಿಕ್ರಿಯೆ ಕೊಡದಿದ್ದರೂ ಏನೂ ವ್ಯತ್ಯಾಸವಾಗುವುದಿಲ್ಲ.
ಪ್ರೀತಿ ಯಾವಾಗ ಬೇಕಾದಾಗ ಉಂಟಾಗಬಹುದು : ವಯಸ್ಸಿನ ಯಾವುದೇ ಹಂತದಲ್ಲಾದರೂ ಪ್ರೀತಿ ಉಂಟಾಗಬಹುದು. ಪ್ರಿಯಕರ ಅಥವಾ ಪ್ರಿಯತಮೆ ಎಲ್ಲಿ ಬೇಕಾದರೂ ಭೇಟಿಯಾಗಬಹುದು.
ಭಾರತೀಯ ಕ್ರಿಕೆಟ್ ತಂಡದ ನಾಯಕ ಎಂ.ಎಸ್. ಧೋನಿಗೆ ಶಾಲಾ ದಿನಗಳಲ್ಲಿ ಜೊತೆಗೆ ಓದುತ್ತಿದ್ದ ಸಾಕ್ಷಿ ರಾವತ್‌ಳೊಂದಿಗೆ ಪ್ರೀತಿಯುಂಟಾಗಿತ್ತು. ಕೆಲವರು ಜೊತೆಗೆ ಓದು ಹುಡುಗ ಹುಡುಗಿಯರಲ್ಲಿ ಪ್ರೀತಿಯುಂಟಾದರೆ ಅದನ್ನು ಸರಿಯಾದುದಲ್ಲ ಎಂದು ಹೇಳುತ್ತಾರೆ. ಓದುವಾಗಲೇ ಪ್ರೀತಿಯಲ್ಲಿ ಬಿದ್ದರೆ ಕೆರಿಯರ್ ಮುಳುಗಿಯೇ ಹೋಗುತ್ತದೆ ಎಂದು ತಿಳಿಯುತ್ತಾರೆ.
ಧೋನಿ ಸಾಕ್ಷಿಯೊಂದಿಗೆ ಮದುವೆಯಾಗುವುದರ ಮೂಲಕ ತನ್ನ ಶಾಲಾ ಜೀವನದ ಪ್ರೀತಿಯನ್ನಷ್ಟೇ ಗೌರವಿಸಲಿಲ್ಲ. ಅದು ಕೆರಿಯರ್‌ಗೆ ಮಾರಕವಲ್ಲ ಎಂಬುದನ್ನು ಕೂಡ ಸಾಬೀತು ಮಾಡಿ ತೋರಿಸಿದ. ಇಂದು ಧೋನಿ ಕೆರಿಯರ್‌ನ ಉತ್ತುಂಗದಲ್ಲಿರುವುದು ಎಲ್ಲರಿಗೂ ಗೊತ್ತೇ ಇದೆ.
ಅದೇ ರೀತಿ ಸೈಫ್ ಹಾಗೂ ಆಮೀರ್ ಖಾನ್‌ರಂತಹ ನಟರಿಗೆ ಮೊದಲ ಸಲಕ್ಕಲ್ಲ, ಎರಡು ಮೂರನೇ ಸಲಕ್ಕೆ ಪ್ರೀತಿ ದೊರಕಿತು. ಸೈಫ್ ಮೊದಲು ಅಮೃತಾಳನ್ನು ಮದುವೆಯಾಗಿದ್ದು, ಅವಳಿಗೆ ವಿಚ್ಛೇದನ ನೀಡಿ ಕರೀನಾಳನ್ನು ಮದುವೆ ಮಾಡಿಕೊಂಡ.
`ಲಗಾನ್’ ಸಿನಿಮಾ ಚಿತ್ರೀಕರಣದ ಸಮಯದಲ್ಲಿ ಆಮಿರ್ ಖಾನ್‌ಗೆ ಆ ಚಿತ್ರದ ಅಸಿಸ್ಟೆಂಟ್ ಡೈರೆಕ್ಟರ್ ಕಿರಣ್ ರಾವ್ ಳೊಂದಿಗೆ ಪ್ರೀತಿಯುಂಟಾಯಿತು. ಇದಕ್ಕೂ ಮುಂಚೆ ಆಮೀರ್ ತನ್ನ 15 ವರ್ಷದ ವೈವಾಹಿಕ ಜೀವನದ ಸಂಗಾತಿ ರೀನಾ ದತ್ ಜೊತೆಗಿನ ಸಂಬಂಧವನ್ನು 2002ರಲ್ಲಿಯೇ ಕಡಿದುಕೊಂಡಿದ್ದ. ಕಿರಣ್ ಹಾಗೂ ಆಮೀರ್ 2005ರಲ್ಲಿ ಮದುವೆಯಾದರು.
ಹೇಮಾಮಾಲಿನಿ ಧರ್ಮೇಂದ್ರ, ಹೆಲನ್ ಸಲೀಮ್ ಖಾನ್, ಶಬಾನಾ ಆಜ್ಮಿ ಜಾವೇದ್ ಅಖ್ತರ್, ಶ್ರೀದೇವಿ ಬೋನಿ ಕಪೂರ್ ತಮ್ಮ ಮೊದಲ ಸಂಗಾತಿಯನ್ನು ತೊರೆದು ಪ್ರೀತಿಗಾಗಿ ಎರಡನೇ ಮದುವೆಯಾದರು.
ಸಮರ್ಪಣೆ ಅತ್ಯಗತ್ಯ : ಪ್ರೀತಿ ಸಮರ್ಪಣೆಯ ಮತ್ತೊಂದು ಹೆಸರು. ಸಂಬಂಧವನ್ನು ಮತ್ತಷ್ಟು ಸುಂದರಗೊಳಿಸಿಕೊಳ್ಳಲು ಒಂದು ವೇಳೆ ಏನನ್ನಾದರೂ ಕಳೆದುಕೊಳ್ಳಬೇಕಾಗಿ ಬಂದರೂ ಪ್ರೇಮಿಗಳು ಅದರ ಬಗ್ಗೆ ತಲೆ ಕೆಡಿಸಿಕೊಳ್ಳಲು ಹೋಗುವುದಿಲ್ಲ. ಅಂತಹ ಉದಾಹರಣೆಗಳಿಗೇನೂ ಬರವಿಲ್ಲ. ಜಯಾ ಬಚ್ಚನ್ ಅಮಿತಾಬ್ ಜೊತೆಗೆ ವಿವಾಹವಾದಾಗ ಅವರ ಕೆರಿಯರ್ ಸಾಕಷ್ಟು ಚೆನ್ನಾಗಿತ್ತು. ಆದರೆ ಮದುವೆಯ ಬಳಿಕ ಅವರು ಮನೆ ಹಾಗೂ ಪ್ರೀತಿಗಾಗಿ ತಮ್ಮ ಕೆರಿಯರ್‌ಗೆ ತಿಲಾಂಜಲಿ ನೀಡಿದರು.
ಅಂಜಲಿ ಕೂಡ ಸಚಿನ್ ತೆಂಡೂಲ್ಕರ್ ಜೊತೆ ವಿವಾಹವಾದ ಬಳಿಕ ತಮ್ಮ ಮೆಡಿಕಲ್ ಕೆರಿಯರ್‌ನ್ನು ತೊರೆದರು. ಆದರೆ ಅವರು ಎಂದೂ ಈ ಬಗ್ಗೆ ಖೇದ ವ್ಯಕ್ತಪಡಿಸಲಿಲ್ಲ.
– ಗಿರಿಜಾ ರಾವ್.
ಪ್ರೀತಿಗೆ ಸಂಬಂಧಪಟ್ಟ 14 ಮೋಜಿನ ಸಂಗತಿಗಳು
ನಿಶ್ಚಿತಾರ್ಥಕ್ಕಾಗಿ ವಜ್ರದ ರಿಂಗ್ ತೊಡಿಸುವ ಪದ್ಧತಿ ಆರಂಭವಾದದ್ದು ಆಸ್ಟ್ರೇಲಿಯಾದಲ್ಲಿ. ಅಲ್ಲಿನ ಆರ್ಕ್‌ಡ್ಯೂಕ್ ಮ್ಯಾಕ್ಸ್ ಮಿಲಿಯನ್‌ನೇ ಶತಮಾನದಲ್ಲಿ ಇದನ್ನು ಆರಂಭಿಸಿದ್ದ. ಅವನು ತನ್ನ ಗರ್ಲ್ ಫ್ರೆಂಡ್ ಮೇರಿಗೆ ಪ್ರಪೋಸ್ ಮಾಡಲು ರಿಂಗ್‌ನ್ನು ಕೊಟ್ಟಿದ್ದ.
ಒಬ್ಬ ಮನುಷ್ಯ ತನ್ನ ಜೀವನದಲ್ಲಿ ಸರಾಸರಿ 7 ಸಲ ಪ್ರೀತಿಯಲ್ಲಿ ಬೀಳುತ್ತಾನೆ. ಅಂದಹಾಗೆ ಇಡೀ ಜೀವನ ಒಬ್ಬರ ಜೊತೆಗೇ ಕಳೆಯುವವರ ಸಂಖ್ಯೆ ಕೂಡ ಕಡಿಮೆ ಏನಿಲ್ಲ.
ತೈವಾನಿ ಜೋಡಿಯೊಂದರ 85 ವರ್ಷಗಳ ವೈವಾಹಿಕ ಜೀವನ ಈವರೆಗಿನ `ಅತಿ ದೀರ್ಘ ದಾಂಪತ್ಯ’ ಎಂದು ಹೆಸರುವಾಸಿಯಾಗಿದೆ.
ದೀರ್ಘಾವಧಿಯ ಚುಂಬನದ ದಾಖಲೆ ಜೇಮ್ಸ್ ಬ್ಲೆಶ್ ಹಾಗೂ ಸೋಫಿಯಾ ಸೆವೆರಿನ್ ಹೆಸರಿನಲ್ಲಿದೆ. ಅವರು 31 ಗಂಟೆ 30 ನಿಮಿಷ ಹಾಗೂ 30 ಸೆಕೆಂಡುಗಳ ಕಾಲ ಚುಂಬಿಸುವುದರ ಮೂಲಕ ವಿಶ್ವ ದಾಖಲೆ ನಿರ್ಮಾಣ ಮಾಡಿದರು.
ಅಮೆರಿಕದ ಲಿಟಲ್ ರಾಕ್‌ನಲ್ಲಿ ಫ್ಲರ್ಟಿಂಗ್‌ನ್ನು ಕಾನೂನು ಬಾಹಿರ ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿ ಶಿಕ್ಷೆ ಕೂಡ ವಿಧಿಸುವ ವ್ಯವಸ್ಥೆ ಇದೆ.
ರೊಮ್ಯಾಂಟಿಕ್ ಲವ್ ಕೇಲ 1 ವರ್ಷದ ತನಕ ಮಾತ್ರ ಇದ್ದರೆ, ಅಟ್ಯಾಚ್‌ಮೆಂಟ್ ಲವ್ ಗೆ ಕೊನೆಯೇ ಇಲ್ಲ.
ಐಫೆಲ್ ಟವರ್ ಪ್ರೀತಿ ವ್ಯಕ್ತಪಡಿಸುವ ಹಾಗೂ ಪ್ರೀತಿಯ ಕ್ಷಣಗಳನ್ನು ಕಳೆಯುವ ಅತ್ಯಂತ ಪ್ರಶಸ್ತ ಹಾಗೂ ಜನಪ್ರಿಯ ತಾಣ ಎನಿಸಿಕೊಂಡಿದೆ.
ಜರ್ಮನ್ ಸಂಶೋಧನೆಯೊಂದರ ಪ್ರಕಾರ, ಶೇ.65ರಷ್ಟು ಜನರು ಚುಂಬಿಸುವಾಗ ಬಲಭಾಗದತ್ತ ವಾಲುತ್ತಾರಂತೆ.
`ಲೆಸ್ಬಿಯನ್’ ಶಬ್ದ ಗ್ರೀಕ್ ದ್ವೀಪ ಲೆಸ್ ಬೋಸ್‌ನಿಂದ ಬಂದಿದೆ. ಅಲ್ಲಿ ಸೆಪ್ಛೊ ಎಂಬ ಕವಯತ್ರಿ ತನ್ನ ಪ್ರಸಿದ್ಧ ಫೀಮೇಲ್ ಲವರ್ ಗಾಗಿ ಕವಿತೆಗಳನ್ನು ಬರೆಯುತ್ತಿದ್ದಳು.
ಒಂದು ಸಮೀಕ್ಷೆಯ ಪ್ರಕಾರ, ಫಿಲೆಡೆಲ್ಛಿಯಾ ಏರ್‌ಪೋರ್ಟ್ ಅತಿ ಹೆಚ್ಚು ಪ್ರೇಮಿಗಳನ್ನು ಕಂಡಿದೆ.
ಇಟಲಿಯ ವೆರೊನಾ ಎಂಬ ನಗರದಲ್ಲಿ ಪ್ರತಿ ವರ್ಷ ಫೆಬ್ರವರಿ 14ರಂದು ರೋಮಿಯೋ ಜೂಲಿಯೆಟ್ ಗಾಳಿ ಸಂಚಲನವಾಗುತ್ತಿರುತ್ತದೆ. ಅಂದು ಸಾವಿರಾರು ಪ್ರೇಮಿಗಳು ಉದ್ದುದ್ದನೆಯ ಪತ್ರಗಳನ್ನು ಬರೆಯುವುದರ ಮೂಲಕ ತಮ್ಮ ಪ್ರೀತಿಯನ್ನು ತೋರ್ಪಡಿಸಿಕೊಳ್ಳುತ್ತಿರುತ್ತಾರೆ.
ಕೆಲವು ವ್ಯಕ್ತಿಗಳು ತಮಗೆ ಜೀವನದಲ್ಲಿ ಎಂದೂ ಪ್ರೀತಿಯ ಅನುಭೂತಿ ಉಂಟಾಗಲಿಲ್ಲ ಎಂದು ಹೇಳುತ್ತಾರೆ. ಅಂದಹಾಗೆ ಇಂತಹ ಜನರು ಹೈಪೋಪಿಟ್ಯೂಟರಿಸಂ ಎಂಬ ಕಾಯಿಲೆಗೆ ತುತ್ತಾಗಿರುತ್ತಾರೆ. ಇವರಲ್ಲಿ ಪ್ರೀತಿಯ ಉತ್ಸಾಹದ ಕೊರತೆಯಿರುತ್ತದೆ.
ನಿಶ್ಚಿತಾರ್ಥದ ಉಂಗುರವನ್ನು ಎಡಗೈನ ನಾಲ್ಕನೇ ಬೆರಳಿಗೆ ತೊಡಿಸಲಾಗುತ್ತದೆ. ಪ್ರಾಚೀನ ಗ್ರೀಕ್ ಜನರ ವಿಶ್ವಾಸವೇನೆಂದರೆ, ಅದು ನೇರವಾಗಿ ಹೃದಯದ ತನಕ ತಲುಪುತ್ತದೆ. ಜಗತ್ತಿನಲ್ಲಿ ಐವರಲ್ಲಿ ಇಬ್ಬರು ತಾವು ಪ್ರೀತಿಸಿದವರನ್ನೇ ಮದುವೆಯಾಗುತ್ತಾರೆ.