ಕಳೆದ ಆಗಸ್ಟ್ 8 ರಂದು ಕ್ವಿಟ್ ಇಂಡಿಯಾ ಚಳುವಳಿ ದಿನಾಚರಣೆಯನ್ನು ನಗರದ ಹೃದಯ ಭಾಗದಲ್ಲಿರುವ ಸುಬ್ಬರಾಯನ ಕೆರೆಯಲ್ಲಿ ಆಚರಿಸಿದ ಸಂದರ್ಭದಲ್ಲಿ ಅಂದು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಅನೇಕ ಹಿರಿಯರು ಈ ಸ್ಥಳದ ಮಹಿಮೆಯನ್ನು ವರ್ಣಿಸಿದರು. ನಿಜಕ್ಕೂ ಇದೊಂದು ಐತಿಹಾಸಿಕ ಥ್ರಿಲ್ ನೀಡುವ ಸ್ಥಳ ಎನ್ನುವುದರಲ್ಲಿ ಖಂಡಿತಾ ಉತ್ಪ್ರೇಕ್ಷೆ ಇಲ್ಲ.
ದಕ್ಷಿಣ ಕರ್ನಾಟಕದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಇದೇ ಪ್ರಮುಖ ಸ್ಥಳವಾಗಿದ್ದ ಅಂದಿನ ಕಾಲದಲ್ಲಿ ಬ್ರಿಟಿಷರ ವಿರುದ್ಧ ನಡೆದ ಅನೇಕ ಚಳುವಳಿಗಳು, ಪ್ರತಿಭಟನೆಗಳು, ಮೆರವಣಿಗೆಗಳು ಹಾಗೂ ಹೋರಾಟಗಳು ಇಲ್ಲಿಂದಲೇ ಆರಂಭವಾಗುತ್ತಿತ್ತು. ಅಂದಿನ ಹಿರಿಯ ನಾಯಕರ ಭಾಷಣ ಕೇಳಲು ನೂರಾರು ಸಂಖ್ಯೆಯಲ್ಲಿ ದೇಶಪ್ರೇಮಿಗಳು ಇಲ್ಲಿಗೆ ಬಂದು ಸೇರುತ್ತಿದ್ದರು. ಅನೇಕ ಚಳುವಳಿಯ ರೂಪುರೇಷೆ ಇಲ್ಲಿಯೇ ಸಿದ್ಧಗೊಂಡು ಅವುಗಳ ಅನುಷ್ಠಾನಕ್ಕೂ ಇದೇ ಕೆರೆ ವೇದಿಕೆಯಾಗಿತ್ತು.
ದೇಶದ ಸ್ವಾತಂತ್ರ್ಯಕ್ಕೆ ಜೀವವನ್ನೇ ತೇದ ಅನೇಕ ದೇಶಭಕ್ತರ ಪಾದ ಸ್ಪರ್ಶ ಈ ಸ್ಥಳಕ್ಕೆ ಆಗಿರುವುದನ್ನು ಮೈಸೂರಿನ ಸ್ವಾತಂತ್ರ್ಯ ಹೋರಾಟಗಾರರು ಈಗಲೂ ನೆನೆಯುತ್ತಾರೆ.

ನಗರದ ದಾಸಪ್ಪ, ತಾತಯ್ಯ, ತಗಡೂರು ರಾಮಚಂದ್ರ ರಾಯರು, ಅಗರಂ ರಂಗಯ್ಯ, ಎಂ.ಎನ್. ಜೋಯಿಸ್, ಎ. ರಾಮಣ್ಣ, ಟಿ. ಮರಿಯಪ್ಪ, ಎನ್. ಚೆನ್ನಯ್ಯ ಇಲ್ಲಿ ಭಾಷಣ ಮಾಡಿದ್ದಾರೆ. ಎಚ್.ವೈ. ಶಾರದಾ ಪ್ರಸಾದ್, ಟಿ.ಎನ್. ಸುಬ್ಬಣ್ಣ ಅವರಲ್ಲದೆ, ರಾಜ್ಯದ ಮುಖ್ಯಮಂತ್ರಿಯಾಗಿದ್ದ ಕೆಂಗಲ್ ಹನುಮಂತಯ್ಯನವರು ಮೊಟ್ಟ ಮೊದಲು ಐತಿಹಾಸಿಕ ಭಾಷಣ ಮಾಡಿದ್ದೂ ಇದೇ ಸುಬ್ಬರಾಯನ ಕೆರೆಯಲ್ಲಿ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರು ಹೇಳುತ್ತಾರೆ.
1939-40ರಲ್ಲಿ ನಗರದ ಅಶೋಕ ರಸ್ತೆಯಲ್ಲಿರುವ ಲಷ್ಕರ್ ಪೊಲೀಸ್ ಠಾಣೆಯ ಕಟ್ಟಡಕ್ಕೆ ಆಗ ಹ್ಯಾಮಿಲ್ಟನ್ ಎಂದು ಕ್ರೂರ ಬ್ರಿಟಿಷ್ ಅಧಿಕಾರಿಯ ಹೆಸರು ಇಡಲಾಗಿದ್ದು, ಅದನ್ನು ವಿರೋಧಿಸಿದ ಮೈಸೂರಿನ ಮಹಿಳೆಯರು ಹೋರಾಟ ಮಾಡಿದ್ದರು. ಭಾರತೀಯ ಮೂಲದವರ ಹೆಸರು ಇಡಬೇಕೆಂದು ಆಗ್ರಹಿಸಿ ಹೋರಾಡಿದ ಮಹಿಳೆಯರ ನೇತೃತ್ವ ವಹಿಸಿದ್ದ ವಿಶಾಲಾಕ್ಷಮ್ಮ ಮತ್ತು ಪಾರ್ವತಮ್ಮ ಎಂಬ ವೀರ ವನಿತೆಯರು ಈ ಕಟ್ಟಡಕ್ಕೆ ಸುಣ್ಣ ಬಳಿಯುವ ಮೂಲಕ ನಡೆಸಿದ ಪ್ರತಿಭಟನಾ ಮೆರವಣಿಗೆ ಇದೇ ಸುಬ್ಬರಾಯನ ಕೆರೆಯಿಂದಲೇ ಹೊರಟಿತ್ತು. ಪೊಲೀಸರ ತೀವ್ರ ವಿರೋಧದ ನಡುವೆಯೂ ಅವರು ಕಟ್ಟಡಕ್ಕೆ ಸುಣ್ಣ ಬಳಿಯುವುದರಲ್ಲಿ ಯಶಸ್ವಿಯಾದರು.
ಇಂಥ ಅನೇಕ ಸ್ವಾತಂತ್ರ್ಯ ಪೂರ್ವ ಹೋರಾಟಗಳಿಗೆ ಸಾಕ್ಷಿಯಾಗಿರುವ ಈ ಸುಬ್ಬರಾಯನ ಕೆರೆ ಇಂದು ಸ್ವಾತಂತ್ರ್ಯ ಹೋರಾಟಗಾರರ ಉದ್ಯಾನವನ ಎಂದೇ ಕರೆಯಲ್ಪಟ್ಟು ಅನೇಕ ಐತಿಹಾಸಿಕ, ರೋಮಾಂಚಕಾರಿ ಕಥೆಗಳನ್ನು ಹೇಳುತ್ತದೆ.
ಇಂದಿನ ಸ್ಥಿತಿ ಶೋಚನೀಯ

ಇಂದು ನಗರದ ಈ ಉದ್ಯಾನನ ರೋಗಗ್ರಸ್ತವಾಗಿದೆ. ಖೋ ಖೋ ಹಾಗೂ ಬ್ಯಾಸ್ಕೆಟ್ ಬಾಲ್ ಕ್ರೀಡೆ ಬಿಟ್ಟರೆ ಇಲ್ಲಿ ಅಕ್ರಮ ಚಟುವಟಿಕೆಗಳೇ ಹೆಚ್ಚು. ಇದರ ಸಮೀಪ ಹೋದರೆ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ಸ್ವಚ್ಛತೆ ಕಾಪಾಡುವಲ್ಲಿ ನಗರಪಾಲಿಕೆ ನಿರ್ಲಕ್ಷ್ಯ ತೋರುತ್ತಿದೆ. ಪಾಲಿಕೆಯ ಮೇಯರ್ ಅವರಿಂದ ಹಿಡಿದು ಪ್ರತಿಯೊಬ್ಬರೂ ಈ ಸ್ಥಳದ ಇತಿಹಾಸ ತಿಳಿಯದೆ ಅದನ್ನು ತಿರಸ್ಕಾರ ಮಾಡಿದ್ದಾರೆ.
ಸಂಜೆ ಆದರೆ ಸಾಕು ಪೋಲಿ ಪುಂಡರದೇ ಕಾಟ, ಕುಡುಕರಿಗೆ ಇದೊಂದು ಓಪನ್ ಏರ್ ಬಾರ್, ಸಿಗರೇಟು ಗಾಂಜಾ, ವೇಶ್ಯಾವಾಟಿಕೆ ಮುಂತಾದ ಅನೇಕ ಕೃತ್ಯಗಳಿಗೆ ಇದು ಪ್ರಮುಖ ತಾಣವಾಗಿ ಮಾರ್ಪಟ್ಟಿದ್ದರೂ ಅಧಿಕಾರಿಗಳು ಯಾರೂ ಇತ್ತ ಗಮನಹರಿಸದೆ ಇರುವುದು ನಗರದ ದೇಶಭಕ್ತಿಗೆ ಮಸಿ ಬಳಿದಂತಾಗಿದೆ.
ಇಲ್ಲಿದ್ದ ಜನಪ್ರಿಯ ಬಾಹುಸಾರ್ ಈಜುಕೊಳ ಹಾಳುಬಿದ್ದಿದೆ. ಇದರ ಅಭಿವೃದ್ಧಿಯ ಬಗ್ಗೆಯೂ ಪಾಲಿಕೆ ಗಮನಹರಿಸದೆ ಇರುವುದು ನಾಗರಿಕರಿಗೂ ಬಹಳ ಬೇಸರ ತಂದಿದೆ. ಇಂದಿನ ಉದ್ಯಾನವನದ ಶೋಚನೀಯ ಸ್ಥಿತಿಯನ್ನು ಕಂಡು ಅನೇಕ ಹಿರಿಯರು ಬೇಸರಗೊಂಡಿದ್ದಾರೆ.
ಇನ್ನಾದರೂ ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಈ ಐತಿಹಾಸಿಕ ಸ್ಥಳಕ್ಕೆ ಮೈಸೂರು ಜಿಲ್ಲೆಯವರೇ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜನಪ್ರತಿನಿಧಿಗಳು ಹಾಗೂ ಸಂಬಂಧಿಸಿದ ಅಧಿಕಾರಿಗಳು ಗಮನಹರಿಸಲಿ.
– ಸಾಲೋಮನ್




 
  
         
    




 
                
                
                
                
                
                
               