ನೀನು ನನ್ನ ಹೆಂಡತಿ, ಆದ್ದರಿಂದ ನನ್ನ ಸೇವೆ ಮಾಡಲೇಬೇಕು. ನನ್ನ ಮಕ್ಕಳಿಗೆ ತಾಯಿ ನೀನು, ಹೀಗಾಗಿ ಅವರನ್ನು ಸಾಕಿ ಸಲಹಬೇಕು. ಅತ್ತೆ, ಮಾವಂದಿರಿಗೆ ಸೊಸೆಯಾಗಿರುವೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ನಾನು ನಿನ್ನ ಗಂಡನಾಗಿದ್ದರಿಂದ ನೀನು ನಮ್ಮೆಲ್ಲರನ್ನೂ ಸಾಕಷ್ಟು ಕಾಳಜಿಯಿಂದ ನೋಡಿಕೊಳ್ಳುತ್ತಿರುವೆಯೋ ಇಲ್ಲವೋ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಗಮನಿಸುವುದು ನನ್ನ ಕರ್ತವ್ಯ, ಎನ್ನುವ ಗಂಡಂದಿರೇ ಹೆಚ್ಚು.

ಇದರ ಜೊತೆಗೆ ಹೆಂಡತಿಯರ ಜೀವನದ ಹಾಡು ಪಾಡುಗಳಿಗೇನೂ ಕೊರತೆಯಿಲ್ಲ. `ಏತಿ ಅಂದ್ರೆ ಪ್ರೇತಿ’ ಎನ್ನುವ ಮೂದೇವಿ ಪಂಗಡದವರಂತೂ ಇದ್ದೇ ಇದ್ದಾರೆ. ಅವರು ಬಾಯಿ ತೆರೆದರೆ ಸಾಕು, ನಾಲಿಗೆಯ ತುದಿ ಮೇಲೆ ಒಂದೇ ವೇದವಾಕ್ಯ, “ಅರೆ ವಾಹ್, ಮದುವೆ ಮಾಡಿಕೊಂಡಿದ್ದೇನಯ್ಯ…. ನಾನೇನೂ ನಿನ್ನ ಜೊತೆ ಕಳ್ಳತನದಿಂದ ಓಡಿಬಂದಿಲ್ಲ. ಸಪ್ತಪದಿ ತುಳಿದಿದ್ದೇನೆ. ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿಸಿಕೊಂಡಿದ್ದೇನೆ. ಹೀಗಾಗಿ ನನ್ನ ಎಲ್ಲಾ ಬೇಕು ಬೇಡಗಳನ್ನು ಗಮನಿಸಬೇಕಾದದ್ದು ನಿನ್ನ ಕರ್ತವ್ಯ. ಸಾಲ ಸೋಲಾನಾದ್ರೂ ಮಾಡು, ದರೋಡೆಯನ್ನಾದ್ರೂ ಮಾಡು, ಒಟ್ಟಾರೆ ನನಗೆ ಬೇಕಾದ್ದನ್ನು ತಂದು ಹಾಕು ಅಷ್ಟೇ,” ಎನ್ನುವ ಹೆಂಡಂದಿರಿಗೂ ಕೊರತೆ ಇಲ್ಲ.

ನಮ್ಮ ತೀವ್ರ ಅಧ್ಯಯನ, ಸಂಶೋಧನೆ ಹಾಗೂ ಗಂಡ ಹೆಂಡತಿಯರೊಂದಿಗೆ ಚರ್ಚೆ ನಡೆಸಿದ ಆಧಾರದ ಮೇರೆಗೆ ಕೆಲವು ವಿಶಿಷ್ಟಾತಿ ವಿಶಿಷ್ಟ ಗಂಡ ಹೆಂಡತಿಯರನ್ನು ಬೇರೆ ಬೇರೆ ಮಾಡಿದ್ದೇವೆ. ಅಂದ್ರೆ… ವರ್ಗೀಕರಿಸಿದ್ದೇವೆ. ಈ ವಿಶೇಷ ವರ್ಗೀಕರಣ ಕೇವಲ ಗಂಡಹೆಂಡತಿಯರಿಗೆ ಮಾತ್ರ. ಈಗ ಈ ವರ್ಗಗಳನ್ನು ಆಧರಿಸಿ ನಿಮ್ಮನ್ನು ನೀವೇ ಪ್ರಮಾಣೀಕರಿಸಿಕೊಂಡು, ನೀವು ಯಾವ ವರ್ಗಕ್ಕೆ ಸೇರುತ್ತೀರಿ ಎಂಬುದನ್ನು ನೀವೇ ಪರೀಕ್ಷಿಸಿಕೊಳ್ಳಿ. ಇಲ್ಲಿ ಉದ್ದೇಶಪೂರ್ವಕವಾಗಿಯೇ ನಾವು ಎರಡು ಪಕ್ಷಗಳನ್ನು ಹುಟ್ಟುಹಾಕಿದ್ದೇವೆ. ಏಕೆಂದರೆ, ಯಾವುದಾದರೊಂದೇ ಪಕ್ಷವನ್ನು ಅಟ್ಟಕ್ಕೇರಿಸಿ ಇನ್ನೊಂದು ಪಕ್ಷದವರ ಕೆಂಗಣ್ಣಿಗೆ ಗುರಿಯಾಗುವ ಸಾಹಸ, ಧೈರ್ಯ ನಮ್ಮಲ್ಲಿಲ್ಲ. ಅದೂ ಅಲ್ಲದೆ ನಮಗೂ ಒಂದು ಸಂಸಾರ ಅಂತಾ ಇದ್ದೇ ಇದೆಯಲ್ಲ…. ಅದಕ್ಕೇ ಭಯ.

ಕಂಗೆಟ್ಟ ಗಂಡ ಹೆಂಡತಿ : ಕಂಗೆಟ್ಟ ಗಂಡಂದಿರ ವಿಶೇಷತೆ ಏನೆಂದರೆ, ಹೆಂಡತಿ ಏನಕ್ಕಾದ್ರೂ `ರೀ….’ ಅಂತಾ ಕೂಗಿದರೆ ಸಾಕು, ಅವಳ ಧ್ವನಿ ಅಡಗುವ ಮುನ್ನವೇ `ಜೀ ಹುಜೂರ್‌’ ಎನ್ನುವ ಟೋನ್‌ನಲ್ಲಿ ತಕ್ಷಣ ಪ್ರತ್ಯಕ್ಷರಾಗಿಬಿಡುತ್ತಾರೆ. ಆದರೆ ಯಾವೊಂದು ಬೇಡಿಕೆಯನ್ನೂ ಪೂರೈಸುವುದಿಲ್ಲ. ಸದಾಕಾಲ ದಿಕ್ಕು ತಪ್ಪಿದವರಂತೆಯೇ ಇರುತ್ತ ಇನ್ನುಳಿದವರನ್ನೂ ಕಂಗೆಡಿಸುತ್ತಿರುತ್ತಾರೆ. ಕುಡಿದ ಕಾಫಿ ಕಪ್‌ನ್ನು ಸೋಫಾದ ಅಡಿಗೆ ತಳ್ಳಿಬಿಡುತ್ತಾರೆ.

ಇನ್ನು ಹೆಂಡತಿಯರ ವಿಷಯಕ್ಕೆ ಬರೋದಾದ್ರೆ, ಅವರಿಗೆ ವರ್ಷದ ಮೂನ್ನೂರ ಅರವತ್ತೈದು ದಿನ ತಲೆನೋವು, ಸೊಂಟನೋವು ಇದ್ದೇ ಇರುತ್ತದೆ. ಏನೇ ಕೆಲಸ ಮಾಡಲು ಹೇಳಿದರೂ ಹೂಂಗುಟ್ಟುತ್ತಾರೆ. ಆದರೆ ಯಾವೊಂದು ಕೆಲಸವನ್ನೂ ಮಾಡಿರುವುದಿಲ್ಲ. ಏನಪ್ಪಾ ಮಾಡೋದು….? ಬೆಳಗ್ಗೆಯಿಂದ ಸಂಜೆವರೆಗೂ ಎಷ್ಟು ಏಗಿದರೂ ಈ ಮನೆ ಕೆಲಸಗಳು ಮುಗಿಯೋದೇ ಇಲ್ಲ ಎಂದು ಇಡೀ ದಿನ ಗೊಣಗುತ್ತಲೇ ಕಾಲ ಕಳೆಯುತ್ತಾರೆ. ಯಾರಿಗೂ ನನ್ನ ಬಗ್ಗೆ ಕಾಳಜಿಯಿಲ್ಲ, ಚಿಂತೆಯಿಲ್ಲ ಎಂದು ಹಿಡಿಶಾಪ ಹಾಕುತ್ತ ಒಂದು ಗಂಟೆಯಲ್ಲಿ ಮಾಡಿ ಮುಗಿಸುವ ಕೆಲಸಕ್ಕೆ ಅರ್ಧ ದಿನ ತಗೋತಾರೆ.

ಬಾಯ್ಬಡುಕ ಗಂಡ ಹೆಂಡತಿ : ಇಂತಹ ಗಂಡಂದಿರ ಹೊಟ್ಟೆಯಲ್ಲಿ ಮಾತುಗಳು ಕರಗುವುದೇ ಇಲ್ಲ. ಮಿತ್ರ ಮಂಡಳಿ ಅಧಿವೇಶನದ ವೃತ್ತಾಂತವನ್ನು ಚೆನ್ನಾಗಿ ಅನುಭವಿಸಿ, ಅದನ್ನೆಲ್ಲ ಇನ್ನೊಬ್ಬರ ಎದುರು ಕಕ್ಕುವವರೆಗೂ ಇವರ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಇಂಥವರನ್ನು ಗುರುತಿಸುವುದು ತುಂಬಾ ಸುಲಭ. ಇವರು ಮನೆಯಿಂದ ಹೊರಟರೆ ಸಾಕು, ದಾರಿಯಲ್ಲಿ ಸಿಗುವ ಅಪರಿಚಿತರೊಂದಿಗಾದ್ರೂ ತಮ್ಮ ಬುತ್ತಿ ಗಂಟು ಬಿಚ್ಚಿಕೊಂಡು ಕುಳಿತುಬಿಡುತ್ತಾರೆ. ಬೀಡಾ ಅಂಗಡಿ ಮತ್ತು ಚಹಾದಂಗಡಿಗಳೇ ಇವರ ಅಡ್ಡಾಗಳು.

ಈ ವರ್ಗದ ಹೆಂಡತಿಯರೂ ಅಷ್ಟೇ, ಬೇರೆ ಯಾರನ್ನಾದ್ರೂ ಆಡಿಕೊಳ್ಳದೇ ಇದ್ದರೆ ಅವರಿಗೆ ಉಂಡದ್ದು ಅರಗುವುದೇ ಇಲ್ಲ.

ವಿಕ್ಷಿಪ್ತ ಗಂಡ ಹೆಂಡತಿ : ಇಂತಹ ಗಂಡಂದಿರು ಯಾವಾಗಲೂ ತಪ್ಪುಗಳನ್ನು ಹುಡುಕುವುದರಲ್ಲೇ ಮಗ್ನರಾಗಿರುತ್ತಾರೆ. ಹೆಂಡತಿ ಮಾಡಿದ ಯಾವ ಕೆಲಸ ಇವರಿಗೆ ಇಷ್ಟವಾಗೋಲ್ಲ. ಅವಳ ಕೆಲಸ ಕಾರ್ಯಗಳಲ್ಲಿ ತಪ್ಪು ಕಂಡುಹಿಡಿಯುವುದೇ ಇವರ ಕಾಯಕ. ಪಲ್ಯಕ್ಕೆ ಒಗ್ಗರಣೆ ಚೆನ್ನಾಗಿಲ್ಲ, ಚಪಾತಿ ಮೃದುವಾಗಿಲ್ಲ, ಸಾಂಬಾರಿನಲ್ಲಿ ತರಕಾರಿಯೇ ಇಲ್ಲ ಇತ್ಯಾದಿ. ಒಂದು ಸಲ ವಟಗುಟ್ಟಲು ಶುರುವಿಟ್ಟುಕೊಂಡರೆ ಅದು ಸುಲಭದಲ್ಲಿ ಮುಗಿಯೋದಿಲ್ಲ.

ಈ ವರ್ಗದ ಹೆಂಡತಿಯರನ್ನು ಸುಲಭವಾಗಿ, ಗುರುತಿಸಬಹುದು. ಇಂತಹ ಹೆಂಡತಿಯರು ಸದಾಕಾಲ ವಟಗುಟ್ಟುತ್ತಲೇ ಇರುತ್ತಾರೆ. ಒಂದೇ ರಾಗದ ಆಲಾಪನೆ, ನನ್ನನ್ನು ಯಾರೂ ಗಮನಿಸೋರೆ ಇಲ್ಲ, ವರ್ಷಕ್ಕೊಂದು ಹೊಸ ಸೀರೆ ಉಡುವ ಸೌಭಾಗ್ಯ ಇಲ್ಲ ಅಂತಾ ಮೂರು ಹೊತ್ತೂ ಟೇಪ್‌ ರೆಕಾರ್ಡರ್‌ ತರಹ ಒದರುತ್ತಲೇ ಇರುತ್ತಾರೆ. ಅಂಗಡಿಗಳಿಗೆ ಹೋದಾಗ ಪರಿಚಯದವರು ಸಿಕ್ಕರೆ ಸಾಕು ಅದು ಹಂಗಾಯ್ತು, ಇದು ಹಿಂಗಾಯ್ತು ಅಂತ ತಮ್ಮ ಸಿಲೋನ್‌ ಸ್ಟೇಷನ್‌ ಶುರು ಮಾಡಿಬಿಟ್ಟರೆ ಆ ಅಂಗಡಿ ಮಾಲೀಕನ ಕಿವಿಯಲ್ಲಿ ರಕ್ತ ಸೋರತೊಡಗಿರುತ್ತೆ.

ಚಾಲಾಕಿ ಗಂಡ ಹೆಂಡತಿ : ಸಾಮಾನ್ಯವಾಗಿ ಇಂತಹ ಗಂಡಂದಿರು ಸುಖಾ ಸುಮ್ಮನೆ ಹೊಗಳಿ ಹೊನ್ನ ಶೂಲಕ್ಕೇರಿಸುವಲ್ಲಿ ಮಹಾಚಾಣಾಕ್ಷರು. ಮನೆಯಿರಲಿ, ಆಫೀಸಾಗಿರಲಿ ಎಲ್ಲೆಂದರಲ್ಲಿ ಮಹಿಳೆಯರನ್ನು ಮರ ಹತ್ತಿಸುವಲ್ಲಿ ನಿಸ್ಸೀಮರು. ಇವರ ನಡೆ ನುಡಿ ಹೇಗಿರುತ್ತವೆ ಎಂದರೆ, `ಏನ್‌ ಮೇಡಂ ಸಮಾಚಾರ? ಫುಲ್ ಮಿಂಚ್ತಾ ಇದೀರಾ!’ `ಅರೇ, ನಿಮಗೆ 14 ವರ್ಷದ ಮಗಳಿದ್ದಾಳೆ ಅಂತಾ ಅನ್ಸೋದೇ ಇಲ್ಲ…..’ ಹೆಂಡತಿಯ ಗೆಳತಿಯೇ ಆಗಿರಲಿ, ಪಕ್ಕದ್ಮನೆ ಆಂಟಿಯೇ ಇರಲಿ, ಯಾರೇ ಇದ್ರೂ ಅವರೆಲ್ಲ ಇವರಿಗೆ ಕತ್ರಿನಾ, ಪ್ರಿಯಾಂಕಾ ತರಹಾನೇ ಕಾಣಿಸೋದು. ಈ ಹೆಂಗಸ್ರೂ ಅವರು ಹೇಳಿದ್ದೇ ನಿಜ ಅಂದ್ಕೊಂಡು ಊರಗಲ ಮುಖ ಅರಳಿಸಿಕೊಂಡು ನುಲಿಯತೊಡಗುತ್ತಾರೆ.

ಚಟಾಧೀಶ ಗಂಡಹೆಂಡತಿ : ಈ ವರ್ಗದಲ್ಲಿ ಕುಡಿತದ ಚಟವಿರುವ ಗಂಡಂದಿರೂ ಬರುತ್ತಾರೆ ಹಾಗೂ ಇನ್ನಿತರ ಚಟಾಧೀಶರು ಬರುತ್ತಾರೆ. ಇಂತಹವರಿಗೆ ಮದುವೆಯಲ್ಲೂ ನೈಂಟಿ ಬೇಕು, ಆ್ಯನಿವರ್ಸರಿಯಲ್ಲೂ ನೈಂಟಿ ಬೇಕು, ಹುಟ್ಟಿದ ಹಬ್ಬ ಅಂದ್ರೂ ನೈಂಟಿ ಬೇಕು, ಡೆತ್‌ ಡೇ ಇದ್ರೂ ನೈಂಟಿ ಬೇಕೇಬೇಕು ಎನ್ನುವಂತಹವರು. ಸಾಮಾನ್ಯವಾಗಿ ಇವರನ್ನು ಪದೇ ಪದೇ ಪಾರ್ಟಿ ಮಾಡುವುದು ಮತ್ತು ಕುಡಿದು ಅಮಲೇರಿಸಿಕೊಳ್ಳುವುದರಿಂದ ಗುರುತಿಸಬಹುದು. ಈ ಘನಕಾರ್ಯದಿಂದ ತಮ್ಮ ಪುರುಷತ್ವವನ್ನೇ ಮೆರೆದಂತೆ ಭ್ರಮೆಪಡುತ್ತಾರೆ. ಮತ್ತೇರಿಸಿಕೊಂಡು ಮದಗಜದಂತೆ ದಿಢೀರನೆ ಮನೆಗೆ ಬಂದಾಗ, ಹೆಂಡತಿ ಏನಾದ್ರೂ ಪ್ರಶ್ನಿಸಿದರೆ ರೆಡಿಮೇಡ್‌ ಉತ್ತರ ಸಿದ್ಧವಿರುತ್ತದೆ. ಏನಿಲ್ಲಾ ಕಣೆ, ಅದೇ ನನ್ನ ಫ್ರೆಂಡ್‌ ರಘು ಸಿಕ್ಕಿದ್ದ, ಅವನೇ ಒಂಚೂರು ಸ್ಪಾನ್ಸರ್‌ ಮಾಡಿದ. ಪ್ರೀತಿಯಿಂದ ಕರೆದಾಗ ಇಲ್ಲಾ ಅನ್ನೋಕಾಗುತ್ಯೆ? ಎನ್ನುತ್ತಾ ಸ್ನೇಹಿತರು ಕುಡಿಸು ಶಂಖ ಪಾಷಾಣವನ್ನು ಅಮೃತವೆಂದು ಕುಡಿಯುತ್ತಲೇ ಇರುತ್ತಾರೆ.

chaploos-copy

ಇನ್ನು ಈ ವರ್ಗದ ಹೆಂಡತಿಯರು ಶಾಪಿಂಗ್‌ ಕಾರ್ಟ್‌ನ್ನು ತಳ್ಳಿಕೊಂಡು ಮಾಲ್ ಗಳಲ್ಲಿ ಸಂಚರಿಸುವಾಗ ಪರಸ್ಪರ ಭೇಟಿಯಾಗುತ್ತಾರೆ. ಇವರಿಗೆ ಶಾಪಿಂಗ್‌ ಮಾಡುವುದೇ ಒಂದು ದೊಡ್ಡ ಖಯಾಲಿ. ಪಾರ್ಟಿ ಸೀರೆಗಳು, ಫ್ಯಾಷನ್‌ ಸೀರೆಗಳು, ಒಡವೆ ವಸ್ತ್ರ, ಉದ್ದರಿ ತಗೊಂಡ್ರೂ ಸರಿ. ಇನ್‌ಸ್ಟಾಲ್ ಮೆಂಟ್‌ನಲ್ಲಿ ತಗೊಂಡ್ರೂ ಸರಿ. ಒಟ್ಟಾರೆ ತಮಗೆ ಬೇಕೆನಿಸಿದ್ದನ್ನು ಕೊಳ್ಳಲೇಬೇಕು. ಅದು ಬಿಟ್ಟರೆ, ಸದಾಕಾಲ ಏನಾದ್ರೂ ಮೆಲ್ಲುತ್ತ ಬಾಯಿ ಚಪ್ಪರಿಸುವುದೇ ಇರ ಚಟ.

ಆಫೀಸಿನಲ್ಲಿ ಆಗಿಂದಾಗ್ಗೆ ಚಿಪ್ಸು, ಚೇಪೆಕಾಯಿ, ಕೋಡುಬಳೆ, ಚಕ್ಕುಲಿಗಳನ್ನು ಮೇಯುತ್ತಲೇ ಇರುತ್ತಾರೆ. ಆಮೇಲೆ ಅಯ್ಯೋ ನಾನು ಊಟದಲ್ಲಿ ಎರಡೇ ಎರಡು ಚಪಾತಿ ತಿಂದೆ ಎನ್ನುತ್ತಾರೆ. ಹಾಗಾದ್ರೆ ಚಿಪ್ಸು, ಕೋಡುಬಳೆ, ಚೇಪೆಕಾಯಿ, ಚಕ್ಕುಲಿ ಎಲ್ಲಾ ಎಲ್ಲಿ ಹೋದವು?

ರೊಮ್ಯಾಂಟಿಕ್‌ ಗಂಡ ಹೆಂಡತಿ : ಇಂತಹ ಗಂಡಂದಿರು ತಮ್ಮ ಹೆಂಡತಿಯನ್ನಷ್ಟೇ ಅಲ್ಲದೆ, ಇತರರ ಹೆಂಡತಿಯರನ್ನೂ ಇಷ್ಟಪಡುತ್ತಾರೆ. ಅತ್ತಿಗೆ, ನಾದಿನಿ, ಪಕ್ಕದ ಮನೆಯವರಿಗೆ ಕೂಡ ಇವರ ಹೃದಯದ ಬಾಗಿಲು ಸದಾ ತೆರೆದಿರುತ್ತದೆ. ಒಂಚೂರು ಚಾನ್ಸ್ ಸಿಕ್ಕರೆ ಸಾಕು ರೊಮ್ಯಾನ್ಸ್ ಗೆ ರೆಡಿ. ಆಫೀಸ್‌ನಲ್ಲಿ ಯಾರಾದ್ರೂ ಕೊಲೀಗ್‌ ಇಷ್ಟವಾಗಿಬಿಟ್ಟರೆ ಅವರ ಮಾತಿನ ಧಾಟಿಯೇ ಬದಲಾಗಿ ಬಿಡುತ್ತದೆ. ಏನ್‌ ಮೇಡಂ, ನಿನ್ನೆ ನೀವು ರಜೆ ಹಾಕಿಬಿಟ್ಟಿದ್ರಿ. ನಾನಂತೂ ನಿಮ್ಮನ್ನು ತುಂಬಾ ಮಿಸ್‌ ಮಾಡ್ಕೊಂಡೆ. ನಿಜ ಹೇಳಬೇಕು ಅಂದ್ರೆ, ಇವತ್ತು ನೀವು ತುಂಬಾ ಗಾರ್ಜಿಯಸ್‌ ಆಗಿ ಕಾಣುತ್ತಿರುವಿರಿ. ಇವರ ಈ ಮಾತಿನ ಧಾಟಿ ಬರೀ ಆಫೀಸ್‌ನಲ್ಲಿ ಮಾತ್ರವಲ್ಲ, ನೆರೆಹೊರೆಯವರ ಮೇಲೂ ಪ್ರಯೋಗವಾಗುತ್ತಿರುತ್ತದೆ. ಇಂತಹವರ ಹಾಳು ಮನಸ್ಸಿನಿಂದಾಗಿ ಆಫೀಸಿನ ವಾತಾವರಣವೇ ಕುಲಗೆಟ್ಟು ಹೋಗುತ್ತದೆ. ತುಂಬಾ ಆತ್ಮೀಯವಾಗಿ ವರ್ತಿಸುವುದೇ ಇವರ ಮೂಲ ಬಂಡವಾಳ.

ಈ ವರ್ಗದ ಹೆಂಡತಿಯರ ಬಗ್ಗೆ ಹೇಳುವುದೆಂದರೆ, ಎದುರಿಗಿರುವ ಗಂಡಸಿನ ನೋಟ ಎತ್ತ ಕಡೆ ಇದೆ ಎಂಬುದನ್ನು ಗುರುತಿಸಲು ಆತುರರಾಗಿರುತ್ತಾರೆ. ತಂತಮ್ಮ ಸಾಂಸಾರಿಕ ಸಮಸ್ಯೆಗಳನ್ನು ಹೇಳಿಕೊಂಡು ಎದುರಿನವರ ಅನುಕಂಪ ಉಡಾಯಿಸುವುದರಲ್ಲಿ ಇವರು ಮಹಾಜಾಣೆಯರು. ಆಫೀಸಿಗೆ ಬರುವುದೇ ಧಾವಂತದಲ್ಲಿ. ಇದ್ದಕ್ಕಿದ್ದಂತೆ ತಟಕ್ಕಂತ ಕಣ್ಣೀರ ಧಾರೆ ಸುರಿಸುವುದು ಇವರ ಎಕ್ಸ್ ಟ್ರೀಮ್ ಟ್ಯಾಲೆಂಟ್‌. ಸಣ್ಣ ಸಣ್ಣ ವಿಚಾರಗಳಿಗೂ ಗಂಗಾ, ಯಮುನಾ, ಕಾವೇರಿಯರನ್ನು ಹರಿಸುತ್ತಾರೆ. ಮನೆಯಲ್ಲೇ ಇರುವರಾದ್ರೆ, ಮೈದುನ, ಭಾವ ಹಾಗೂ ಪಕ್ಕದ ಮನೆ ಅಂಕಲ್ ಗಳೊಂದಿಗೆ ಹ….ಹ್ಹ…ಹ್ಹಾ…. ಹಿ…..ಹ್ಹಿ…..ಹ್ಹಿ….. ಅಂತಾನೇ ಇರ್ತಾರೆ.

ಪ್ರತಿಷ್ಠೆಯ ಗಂಡ ಹೆಂಡತಿ : ನಾನು ಅದನ್ನು ಮಾಡಿದೆ, ಇದನ್ನು ಮಾಡಿದೆ, ನಾನಿಲ್ಲದೇ ಇದ್ದಿದ್ರೆ ಆ ಕೆಲಸ ಆಗ್ತಾನೇ ಇರ್ಲಿಲ್ಲ. ನಾನು ತುಂಬಾ ಸಂಪನ್ನ, ಸುಶೀಲ, ನನಗ್ಯಾವ ಕಳಂಕ ಇಲ್ಲ. ನಾನು ತುಂಬಾ ಒಳ್ಳೆಯವನು. ನನ್ನ ಮನೆಯವರಿಗಾಗಿ ಏನೆಲ್ಲ ಮಾಡಿದೆ. ಆದ್ರೂ ಅವರಿಗೆ ನನ್ನ ಬಗ್ಗೆ ಭಯಭಕ್ತಿ ಇಲ್ಲ. ನನ್ನ ಜಾಬ್‌ನಲ್ಲೂ ನಾನು ಕೆಟ್ಟ ಹೆಸರು ತಂದ್ಕೊಂಡಿಲ್ಲ.

ಈ ವರ್ಗದ ಹೆಂಡತಿಯರೂ ಅಷ್ಟೇ. ತಮ್ಮ ಗಂಡನೇ ಶ್ರೇಷ್ಠ, ತಮ್ಮ ಮಕ್ಕಳೇ ಬೆಸ್ಟು. ಎಲ್ಲಾ ಕೆಲಸಗಳನ್ನು ತಾನೇ ಮಾಡುವುದು, ಬೇರೆಯವರೆಲ್ಲಾ ಓತ್ಲಾ ಹೊಡೆಯುವವರೆ, (ಇವರ ಮದುವೆಗೆ ಮುಂಚಿನಿಂದಲೂ ಕೆಲಸದವಳನ್ನು ಮನೆಗೆಲಸಕ್ಕೆ ನೇಮಿಸಿದ್ದರೂ ಸಹಿತ) ಇನ್ನು ಆಫೀಸುಗಳಲ್ಲಿ ಕೆಲಸ ಮಾಡುವವರಾದ್ರೆ, ಎಲ್ಲಾ ಕೆಲಸಗಳನ್ನೂ ಅವರೇ ಮಾಡಿಬರುತ್ತಾರೆ. ಮಾಡಬೇಕಾದ್ದನ್ನು ಬಿಟ್ಟು, ಮಾಡಬಾರದ್ದನ್ನೆಲ್ಲ ಮಾಡಿ ಬಂದಿರುತ್ತಾರೆ. ಅವರ ಒಣ ಪ್ರತಿಷ್ಠೆಯ ಮಾತುಗಳಿಂದ ಅವರನ್ನು ಸುಲಭವಾಗಿ ಗುರುತಿಸಬಹುದು. ತಮಗೆ ತಾವೇ ಶ್ರೇಷ್ಠರು ಎಂದುಕೊಂಡಿರುತ್ತಾರೆ. ನಮ್ಮ ಮಕ್ಕಳನ್ನು ಆ ಸ್ಕೂಲ್‌ಗೆ ಸೇರಿಸಿದ್ವಿ, ಈ ಸ್ಕೂಲ್‌‌ಗೆ ಸೇರಿಸಿದ್ವಿ ನಮ್ಮ ಮಕ್ಕಳೇ ಜೀನಿಯಸ್ಸು. ಇನ್ನುಳಿದವು ಚಪರಾಸಿಗಳು.

ಡೌಟ್‌ ಫುಲ್ ಗಂಡಹೆಂಡತಿ : ಸಂಶಯ ಪಿಶಾಚಿ ಹೊಕ್ಕಿರುವ ಈ ಗಂಡಂದಿರ ವಿಶೇಷತೆಯೇ ಬೇರೆ. ಪ್ರತಿಯೊಂದನ್ನೂ ಸಂದೇಹದಿಂದ ನೋಡುವುದು, ಮನೆಯಲ್ಲಾಗಲಿ, ಹೊರಗಾಗಲಿ, ಸಂಶಯ ದೃಷ್ಟಿಯಿಂದ ನೋಡುವುದೇ ಇವರ ಕಾಯಕ. ಹೆಂಡತಿಯ ಮೇಲೆ ಅನುಮಾನ, ಮಕ್ಕಳ ಮೇಲೆ ಸಂದೇಹ, ನೆರೆಹೊರೆಯವರ ಬಗ್ಗೆ ಸಂಶಯ, ಕೊನೆಗೆ ಭಿಕ್ಷುಕನನ್ನೂ ಬಿಡಲಾರದು ಇವರ ಡೌಟ್‌ ಫುಲ್ ಬ್ರಹ್ಮಾಸ್ತ್ರ. ಅಷ್ಟೇ ಅಲ್ಲದೆ, ತಮ್ಮ ಮೇಲೆ ತಮಗೇ ನಂಬಿಕೆ ಇರುವುದಿಲ್ಲ. ಹೆಂಡತಿ ಅಲಂಕಾರ ಮಾಡಿಕೊಳ್ಳುವುದು, ಕಿಲಕಿಲನೆ ನಗುತ್ತ ಮಾತನಾಡುವುದು ಅವರಿಗೆ ಅಸಹನೀಯ. ಕೆಲವೊಮ್ಮೆ ಕೋಪದ ಭರಾಟೆಯಲ್ಲಿ, `ನಿಜ ಹೇಳು ಈ ಮಗು ಯಾರಿಗೆ ಹುಟ್ಟಿದ್ದು?’ ಎನ್ನಲೂ  ಕೂಡ ಹಿಂಜರಿಯಲಾರರು.

ಇನ್ನು ಅನುಮಾನದ ಹುತ್ತದಲ್ಲಿ ಹುದುಗಿರುವ ಹೆಂಡತಿಯರೂ ಅಷ್ಟೇ, ಸದಾ ಸಂಶಯದ ಕಣ್ಣಲ್ಲೇ ನೋಡುತ್ತಿರುತ್ತಾರೆ. ಗಂಡ ಮನೆಗೆ ತಡವಾಗಿ ಬಂದರೆ ಸಾಕು ಶುರುವಾಯ್ತು. ಎಲ್ಲಿಗೆ ಹೋಗಿದ್ದೆ? ಯಾರ ಜೊತೆ ಹೋಗಿದ್ದೆ? ಯಾವಾಗ ಹೋಗಿದ್ದೆ? ಎಂದೆಲ್ಲ ಪ್ರಶ್ನೆ ಹಾಕುವ ಇವರಿಗೆ ಹಗ್ಗ ಕೂಡ ಹಾವಿನಂತೆ ಗೋಚರಿಸುತ್ತದೆ. ಕಲ್ಪನೆಗಳೆಲ್ಲ ವಾಸ್ತವ ಎನಿಸುತ್ತವೆ. ಆಗಾಗ್ಗೆ ನಿರ್ಬಂಧಗಳನ್ನು ಹೇರುತ್ತಾರೆ. ಅವರ ಮನೆಗೆಲ್ಲ ಹೋಗಬೇಡ. ಅವಳು ಹಾಗೆ, ಇವಳು ಹೀಗೆ. ಇಂಥರೊಂದಿಗಿರಬೇಕಾದರೆ ಹುಷಾರಾಗಿರು. ಆಫೀಸ್‌ನಲ್ಲಿ ದುಡಿಯುವ ಹೆಂಡತಿಯಾದರೆ, ಏನಿವತ್ತು ಅವಳನ್ನು ಗಾಡಿ ಮೇಲೆ ಕೂರಿಸಿಕೊಂಡು ಹೋಗಿದ್ದು? ಇನ್ಮುಂದೆ ಆ ಕಡೆಗೆ ಹೋಗಲೇಬೇಡ. ಅವರೊಂದಿಗೆ ಬೆರೆಯಲೇ ಬೇಡ ಇತ್ಯಾದಿ ಇತ್ಯಾದಿ.

ಸುಳ್‌ ಸುಳ್ಳೇ ಗಂಡ ಹೆಂಡತಿ : ಇಂತಹ ಗಂಡಂದಿರನ್ನು ಅವರ ವಿಶೇಷತೆಯಿಂದಲೇ ಗುರುತಿಸಬಹುದು. ನೌಕರಿಯ ನೆಪದಲ್ಲಿ ತಡರಾತ್ರಿಯವರೆಗೂ ಮನೆಯಿಂದ ಹೊರಗೆ ಉಳಿಯುವುದು. ಮಿತ್ರ ಮಂಡಳಿಯಲ್ಲೇ ಬಹುತೇಕ ಸಮಯ ಕಳೆಯುವುದು. ಮನೆಗೆ ಬಂದ ನಂತರ ಆಫೀಸ್‌ನಲ್ಲಿ ಕೆಲಸ ಜಾಸ್ತಿ ಇತ್ತು ಅಂತ ಹೇಳುವುದು. ಆಗಾಗ್ಗೆ ಹಗಲಿನಲ್ಲೇ ನಕ್ಷತ್ರಗಳು ಗೋಚರಿಸುವಂತಹ ನೆಪಗಳನ್ನೊಡ್ಡಿ ಮನೆಯಿಂದ ದೂರ ಉಳಿಯುವುದು ಇವರಿಗೆ ನೀರು ಕುಡಿದಷ್ಟೇ ಸುಲಭ. ಇಷ್ಟು ಸಾಲದೆಂಬಂತೆ ಮಾತು ಮಾತಿಗೂ ಸುಳ್ಳು ಹೇಳುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತು ಮಾತಿಗೆ ಆಣೆ ಪ್ರಮಾಣ ಮಾಡುವುದೇ ಇವರ ವೈಶಿಷ್ಟ್ಯತೆ.

batuni-copy

ಈ ರ್ಗದ ಹೆಂಡತಿಯರ ಕುರುಹುಗಳೇ ಬೇರೆ. ಇವರು ಏನೇ ಮಾತನಾಡಲಿ, ಆ ಮಾತುಗಳಿಗೆ ಸುಣ್ಣಬಣ್ಣ ಬಳಿದು ಮಸಾಲೆ ಹಾಕಿಯೇ ಮಾತನಾಡುತ್ತಾರೆ. ಸಾಲದ್ದಕ್ಕೆ ಕಡ್ಡಿ ಮುರಿದಂತೆ ಮಾತಾಡುವುದರಲ್ಲಿ ಇವರು ನಿಸ್ಸೀಮರು. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಎಂಬಂತೆ, ಮನೆಯಲ್ಲಿ ನಾಲ್ಕೇ ಜನ ಇರೋದಾದ್ರೂ 25 ಜನರಿಗಾಗುವಷ್ಟು ಅಡುಗೆಯನ್ನು 2 ಗಂಟೆಯಲ್ಲಿ ಮಾಡಿ ಬಿಸಾಕ್ತೀನಿ ಅನ್ನೋದು. ಸಂದಿಗ್ಧ ಪರಿಸ್ಥಿತಿಗಳಲ್ಲಿ ಆಣೆ ಪ್ರಮಾಣ ಮಾಡಲು ಇವರು ಹಿಂಜರಿಯುವುದಿಲ್ಲ.

ಢೋಂಗಿ ಗಂಡ ಹೆಂಡತಿ : ಈ ವರ್ಗದ ಗಂಡಂದಿರು ಪೂಜೆ ಪುನಸ್ಕಾರಗಳಲ್ಲಿ ಎತ್ತಿದ ಕೈ. ಇಡೀ ದಿನ ಪುರಾಣ ಪ್ರವಚನಗಳ ಕುರಿತೇ ಮಾತನಾಡುವುದು. ತಮ್ಮನ್ನು ತಾವೇ ತತ್ವಜ್ಞಾನಿ ಎಂಬಂತೆ ಎಕ್ಸ್ ಪೋಷರ್‌ ನೀಡುತ್ತಿರುತ್ತಾರೆ. ಹಣೆಗೆ ಢಾಳಾಗಿ ಕುಂಕುಮ, ವಿಭೂತಿ ಬಳಿದುಕೊಳ್ಳುವುದು, ಸದಾಕಾಲ ಸ್ತೋತ್ರ ಮಂತ್ರಗಳನ್ನು ಪಠಿಸುವುದು ಇವರಿಗೆ ಗೀಳು ಇದ್ದಂತೆ. ತತ್ವ, ಧರ್ಮ, ದಾರ್ಶನಿಕತೆಯ ನೆರಳಲ್ಲಿ ತಮ್ಮ ನೈಜತೆ ಮರೆಮಾಚಲು ಯತ್ನಿಸುವ ಇವರು ಎಂದಿಗೂ ಉದ್ಧಾರವಾಗಿಲ್ಲ. ಆಫೀಸ್‌ನಲ್ಲಿ ತಮ್ಮ ಟೇಬಲ್ ಮೇಲೆ ದೇವರ ಚಿತ್ರಗಳನ್ನು ಇಡುವುದೆಂದರೆ ಇವರಿಗೆ ಬಲು ಪ್ರೀತಿ. ಕರ್ಮಕ್ಕಿಂತಲೂ ಧರ್ಮದ ಮೇಲೆ ಇವರಿಗೆ ವಿಪರೀತ ನಂಬಿಕೆ. ಪರಸ್ತ್ರೀಯರೆಂದರೆ ಇವರಿಗೆ ಎಲ್ಲಿಲ್ಲದ ವಾತ್ಸಲ್ಯ. ಜಗತ್ತಿನ ಎಲ್ಲಾ ಉಪವಾಸ ವ್ರತಾಚರಣೆಗಳ ಉಪದೇಶ ನೀಡುವುದು, ಒಪ್ಪತ್ತಿರುವ ದಿನ ಕಂಠಮಟ್ಟ ತಿಂಡಿ ಫಲಾಹಾರ ಸೇವಿಸುವುದು, ರಾತ್ರಿಯ ಊಟಕ್ಕೆ ಎರಡು ಹೊತ್ತಿನದನ್ನೂ ತಿಂದುಬಿಡುವುದು, ಭಜನಾ ಮಂಡಲಿಯ ಜೊತೆ ಜಾಗರಣೆಗೆಂದು ತೆರಳಿ ಆಕಾಶವಾಣಿ ಆಲಾಪ ನಡೆಸುವುದೇ ಈ ವರ್ಗದ ಹೆಂಡತಿಯರ ಗುಣಲಕ್ಷಣಗಳು. ಮಾಡಬೇಕಾದ್ದನ್ನು ಬಿಟ್ಟು ಪೂಜೆ ಪುನಸ್ಕಾರಗಳಲ್ಲಿ ತೊಡಗಲು ಇವರಿಗೆ ಇನ್ನಿಲ್ಲದ ಉತ್ಸಾಹ. ಆಡಂಬರದ ಧಾರ್ಮಿಕತೆ ಪ್ರದರ್ಶಿಸುವುದು ಇರ ಫ್ಯಾಷನ್‌. ಭವತಿ ಭಿಕ್ಷಾಂದೇಹಿ ಎಂದು ಹಸಿದು ಬಂದ ಭಿಕ್ಷುಕರಿಗೆ ತುತ್ತು ಅನ್ನ ಹಾಕದಿದ್ದರೂ, ಕಣ್ಣಿಗೆ ಕಾಣದ ಭಗವಂತನಿಗೆ ಪಂಚ ಪಕ್ವಾನ್ನಗಳ ನೈವೇದ್ಯ ಹಿಡಿಯುವುದು ಗ್ಯಾರಂಟಿ.

ಹಾಗಾದ್ರೆ ಈಗ ಹೇಳಿ, ಈ ಮೇಲಿನ ಯಾವ ವರ್ಗಕ್ಕೆ ನೀವು ಸೇರುವಂಥವರು? ನಿಮ್ಮ ಅಂತರಾತ್ಮವನ್ನು ವಂಚಿಸದೆ, ನಿಶ್ಕಲ್ಮಶತೆಯಿಂದ ನಾವು ಎಂಥವರು? ಎಂಬುದನ್ನು ನೀವೇ ನಿರ್ಧರಿಸಿಕೊಳ್ಳಿ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ