ವಿದೇಶದಲ್ಲಿನ ವಿದ್ಯಾಬ್ಯಾಸ ಅಂದರೆ ಎಲ್ಲರಿಗೂ ಬಹಳ ಆಸಕ್ತಿ. ಅಲ್ಲಿನ ಎಲ್ಲ ವಿಷಯಗಳೂ ಅಷ್ಟೇ ತಾನೇ, ಆಕರ್ಷಣೀಯವೇ. ಅದರಲ್ಲೂ ಅಮೆರಿಕಾ ದೇಶವೆಂದಾಗ ಅಲ್ಲಿ ಏನೋ ವಿಶೇಷತೆ ಇರಬೇಕೆಂಬ ಭಾವನೆ. ಅಲ್ಲಿ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಲಾಗುತ್ತದೆ. ಅಲ್ಲಿನ ಸರ್ಕಾರಿ ಶಾಲೆಗಳು ಬಹಳ ಚೆನ್ನಾಗಿರುತ್ತವೆ, ವಿಶಾಲವಾದ ಆಟದ ಮೈದಾನ, ಆಡಲು ವಿವಿಧ ಪರಿಕರಗಳು, ಸುತ್ತಲೂ ಹಸಿರು…. ಅಂತಹ ವಾತಾವರಣವನ್ನು ನೋಡಲೇ ಚಂದ!

IMG_0808

ನಮ್ಮ ಮಗನಿದ್ದ ಬರ್ಲಿಂಗ್‌ ಟನ್‌ನಲ್ಲಿ ಅವನ ಮನೆಗೆ ಹತ್ತಿರದಲ್ಲೇ ಒಂದು ಸರ್ಕಾರಿ ಶಾಲೆ ಇತ್ತು. ಬಹಳ ಸುಂದರ ತಾಣವದು, ಆ ಶಾಲೆ ನೋಡಿದಾಗೆಲ್ಲಾ ನನಗೆ ನಮ್ಮ ಬೆಂಗಳೂರಿನ ಗುಬ್ಬಚ್ಚಿ ಗೂಡಿನಂತಹ ಶಾಲೆಗಳು. ಒಂದು ಚಿಕ್ಕ ಮನೆಯನ್ನೇ ಶಾಲೆಯನ್ನಾಗಿ ಪರಿವರ್ತಿಸಿದ ಸ್ಥಳಗಳು ನೆನಪಾಗುತ್ತಿದ್ದವು. ಅಲ್ಲೂ ಜನರ ಮನಸ್ಸು ನೋಡಿ, ಅಷ್ಟು ಚಂದದ ಉಚಿತ ಸರ್ಕಾರಿ ಶಾಲೆಗಳನ್ನು ಬಿಟ್ಟು ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುತ್ತಾರೆ.

ಅಲ್ಲಿಯ ಶುಲ್ಕ ಬಹಳ ದುಬಾರಿ! ಹೇಳಬೇಕೆಂದರೆ ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳಷ್ಟು ವಿಶಾಲವಾದ ಸ್ಥಳವನ್ನು ಹೊಂದಿರುವುದಿಲ್ಲ, ಸ್ಯಾನ್‌ಫ್ರಾನ್ಸಿಸ್ಕೋನಲ್ಲಿ ನಮ್ಮ ಮೈದುನನ ಮಗಳು ಖಾಸಗಿ ಶಾಲೆಗೇ ಹೋಗುತ್ತಿದ್ದಳು, ಅದೂ ಸಹ ಚೆನ್ನಾಗಿಯೇ ಇತ್ತು. ಒಂದು ತರಗತಿಯಲ್ಲಿ ಹೆಚ್ಚು ಮಕ್ಕಳಿರುವುದಿಲ್ಲ, ಬಹುಶಃ ಹತ್ತಕ್ಕಿಂತ ಹೆಚ್ಚು ಮಕ್ಕಳು ಕಾಣೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಕಂಪ್ಯೂಟರ್‌, ಶಾಲೆಯ ಮುಂದೆ ಮಕ್ಕಳಿಗೆ ಆಟವಾಡಲು ಮೈದಾನ ಎಲ್ಲವೂ ಇತ್ತು. ಆದರೂ ಬಾಸ್ಟನ್ನಿನ ಸರ್ಕಾರೀ ಶಾಲೆಯಷ್ಟು ವಿಶಾಲವಾದ ಮೈದಾನ ಮತ್ತು ಶಾಲೆಯ ಕಟ್ಟಡ ಸಹ ಅದರಷ್ಟು ದೊಡ್ಡದಾಗಿರಲಿಲ್ಲ.

ಅಲ್ಲಿ ಮಕ್ಕಳನ್ನು ಬೈಯುವಂತಿಲ್ಲ. ಮಕ್ಕಳಿಗೆ ಆಟದ ಜೊತೆಯಲ್ಲೇ ಪಾಠ, ಅವರನ್ನು ಹೊಡೆದರೆ ಶಿಕ್ಷಕರ ಮೇಲೆ ಮೊಕದ್ದಮೆಯನ್ನೇ ಹೂಡಿಬಿಡುತ್ತಾರೆ ಪೋಷಕರು. ಇಷ್ಟೆಲ್ಲಾ ಅನುಕೂಲಕರವಾಗಿ ವಿದ್ಯಾಭ್ಯಾಸ ನೀಡಿದರೂ ನಮ್ಮ ಭಾರತೀಯ ಮಕ್ಕಳೇ ಚುರುಕೆನ್ನುತ್ತಾರೆ ಬುದ್ಧಿವಂತರು. ಮಕ್ಕಳಿಗೆ ಸಮರ್ಥ ಶಿಕ್ಷಣ ನೀಡುವಲ್ಲಿ ಭಾರತ ಮತ್ತು ಚೈನಾ ದೇಶ ಅಮೆರಿಕಾ ದೇಶಕ್ಕಿಂತಲೂ ಒಂದು ಹೆಜ್ಜೆ ಮುಂದೆಯೇ ಇದೆ. ತಾತ್ವಿಕ, ಸೈದ್ಧಾಂತಿಕ ಶಿಕ್ಷಣಕ್ಕೆ ಒತ್ತು ಹೆಚ್ಚಾಗಿರುವುದರಿಂದ ಆ ನಿಟ್ಟಿನಲ್ಲಿ ಅವರು ಯಶಸ್ಸು ಸಾಧಿಸಿದ್ದಾರೆ ಎನ್ನುತ್ತಾರೆ ಖ್ಯಾತ ಉದ್ಯಮಿ ರಾಬರ್ಟ್‌ ಎ ಕಾಮ್ಟನ್‌ರವರು.

IMG_1882

ನಮ್ಮ ದೇಶದ ಯುವ ಜನಾಂಗ ಅಮೆರಿಕಾ ದೇಶಕ್ಕೆ ಎಂ.ಎಸ್‌. ಮಾಡಲು ಹೋದರು ಬಹಳ ಸುಲಭವಾಗಿ ಈ ಕೋರ್ಸನ್ನು ಮುಗಿಸಿಬಿಡುತ್ತಾರೆ. ಎರಡು ವರ್ಷದ್ದನ್ನು ಒಂದೂವರೆ ವರ್ಷದಲ್ಲೇ ಮುಗಿಸುತ್ತಾರೆ. ನಾವು ಚಿಕ್ಕಂದಿನಲ್ಲಿ ಕಲಿತ ವಿದ್ಯೆಯೇ ಕಾರಣವೆನ್ನುವುದು ಕೆಲವರ ಅಭಿಪ್ರಾಯ. ಆದರೆ ಇಲ್ಲಿ ನೋಡಿದಾಗ ನಮ್ಮ ಮಕ್ಕಳಿಗೆ ಚಿಕ್ಕಂದಿನಲ್ಲೇ ಬಹಳ ಹೊರೆ ಎನಿಸುವ ವಿದ್ಯಾಭ್ಯಾಸದ ರೀತಿಯನ್ನು ಅವಳಡಿಸಿಕೊಂಡಿದ್ದೇವೇನೋ ಎನ್ನುವ ಭಾವನೆ. ಆದರೆ ಈಗ ನಮ್ಮಲ್ಲೂ ಬಹಳಷ್ಟು ಬದಲಾಗುತ್ತಿದೆ, ಕಲಿನಲಿ ತತ್ವದ ಅಳವಡಿಕೆಯಾಗುತ್ತಿದೆ ಮತ್ತು ಮಕ್ಕಳಲ್ಲಿ ಮೇಲು ಕೀಳು ಮನೋಭಾವವನ್ನು ತೊಡೆದುಹಾಕುವ ನಿಟ್ಟಿನಲ್ಲಿ ರಾಂಕ್‌ ತೆಗೆದು ಗ್ರೇಡ್‌ ಸಿಸ್ಟಮ್ನ್ನು ಅಳವಡಿಸಿದ್ದಾರೆ.

ನಮ್ಮಲ್ಲೂ ವಿದ್ಯಾಭ್ಯಾಸ ಮಕ್ಕಳಿಗೆ ಹೆಚ್ಚಿನ ಒತ್ತಡ ಆಗಬಾರೆದೆನ್ನುವ ದೃಷ್ಟಿಯಿಂದ ಬಹಳಷ್ಟು ತತ್ವಗಳನ್ನು ಅನುಸರಿಸಲಾಗುತ್ತಿದೆ. ನಮ್ಮ ಶಿಕ್ಷಣ ವ್ಯವಸ್ಥೆಗಿಂತ, ಪೋಷಕರು ಮಕ್ಕಳ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತಾರೆ. ಮಕ್ಕಳು ಹೆಚ್ಚು ಹೆಚ್ಚು ಕಲಿತಷ್ಟು ಪೋಷಕರಿಗೆ ಖುಷಿ, ಹೆಚ್ಚು ಪುಟಗಳನ್ನು ಬರೆದಷ್ಟು ಅವರು ಬುದ್ಧಿವಂತರಾಗುತ್ತಾರೆನ್ನುವ ಭಾವನೆ. ಶಾಲೆಯ ನಂತರ ಒಂದಲ್ಲ ಮತ್ತೊಂದು ಕೋರ್ಸ್‌ಗಳಿಗೆ ಹಾಕುತ್ತಾರೆ. ಮಕ್ಕಳಿಗಾಗುವ ಶ್ರಮದ ಲೆಕ್ಕನ್ನೇ ಮರೆತುಬಿಡುತ್ತಾರೆ. ವಿದೇಶಕ್ಕೆ ಹೋದರೆ ಮಾತ್ರ ನಮ್ಮವರ ಬುದ್ಧಿ ಬದಲಾಗುತ್ತದೆಯೇ? ಅಲ್ಲೂ ಸಹ ಆಂಗ್ಲ ಭಾಷೆ ಮತ್ತು ಲೆಕ್ಕದಲ್ಲಿ ಪರಿಣತಿ ನೀಡುವ ಕುಮೊನ್‌ ಬಹಳ ಜನಪ್ರಿಯ.

ಕುಮೊನ್

ಜಪಾನಿನ ಕುಮೊನ್‌, ಮಕ್ಕಳಿಗೆ ಗಣಿತ ಮತ್ತು ಆಂಗ್ಲ ಭಾಷೆಯನ್ನು ಕಲಿಸುವ ಸಂಸ್ಥೆ, ಅಮೆರಿಕಾದ ಎಲ್ಲೆಡೆ ಇದರ ವಿಭಾಗಗಳಿವೆ. ಮೆಸಚ್ಯುಸೆಟ್ಸ್ ನಲ್ಲಿಯೇ ಇದರ 40 ವಿಭಾಗಗಳಿವೆ. ಚೈನಾದ ಅಬ್ಯಾಕಸ್‌ನಂತೆ ಜಪಾನಿನ ಕುಮೊನ್‌ ಎನ್ನುವವನೊಬ್ಬ ಪ್ರಾರಂಭಿಸಿರುವ ಶಾಲೆಯ ನಂತರದ ಪರ್ಯಾಯ ಶಾಲೆ ಅಥವಾ ಕೋಚಿಂಗ್‌ ಕ್ಲಾಸ್‌ ಎನ್ನಬಹುದು. ಇಲ್ಲಿ ಇಂಗ್ಲಿಷ್‌ ಮತ್ತು ಗಣಿತವನ್ನು ಕಲಿಸಲಾಗುತ್ತದೆ. ಮತ್ತೆ ಮತ್ತೆ ಒಂದೇ ಕೆಲಸವನ್ನು ಮಾಡಿದಾಗ ಅದು ಮನನವಾಗುವಂತೆ, ನಮ್ಮ ಮಗ್ಗಿಯ ರೀತಿಯೆನ್ನಬಹುದು, ಮಕ್ಕಳಿಗೆ ಕಷ್ಟವೆನಿಸುವ ಅಥವಾ ಅರ್ಥವಾಗದ ಗಣಿತವನ್ನು ಮತ್ತೆ ಮತ್ತೆ ಮಾಡಿಸುವ ಪರಿಯದು. ಅವರಿಗಾಗಿ ವರ್ಕ್‌ ಶೀಟ್‌ಗಳನ್ನು ತಯಾರು ಮಾಡಿರುತ್ತಾರೆ. ಅದನ್ನು ಅವರಿಗೆ ಮನನವಾಗುವ ತನಕ ಮಾಡಿಸುತ್ತಾರೆ.

IMG_0486

ಮಗ ಇನ್ನೂ ಗ್ರೀನ್‌ ಕಾರ್ಡ್‌ ಪಡೆಯುವ ಹಂತದಲ್ಲಿರುವುದರಿಂದ ಸೊಸೆ ಕೆಲಸ ಮಾಡುವಂತಿಲ್ಲ. ಆದರೆ ಸಂಬಳವಿಲ್ಲದೆ ವಾಲೆಂಟರಿಯಾಗಿ ಮಾಡಬಹುದು. ಹಾಗಾಗಿ ವಾರದಲ್ಲಿ ಎರಡು ದಿನ ಕುಮೊನ್‌ನಲ್ಲಿ ಕೆಲಸ ಮಾಡುತ್ತಾಳೆ, ಸಾಕಷ್ಟು ಮಕ್ಕಳು ಬರುತ್ತಾರೆ. ಅದರಲ್ಲಿ ಭಾರತೀಯರೇ ಹೆಚ್ಚು. ಒಟ್ಟಿನಲ್ಲಿ ಮಕ್ಕಳು ಬುದ್ಧಿವಂತರಾಗಲೆನ್ನುವ ಆಸೆ ಎಲ್ಲ ತಂದೆ ತಾಯಿಯರದು.

ಮಂಜುಳಾ ರಾಜ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ