ಕಥೆ – ಪವಿತ್ರಾ ಪ್ರಮೋದ್
60-70ರ ದಶಕದಲ್ಲಿ ವರದಕ್ಷಿಣೆ ಕೊಡಲಿಲ್ಲವೆಂದು ಸೊಸೆಯಂದಿರನ್ನು ಸುಡಲಾಗುತ್ತಿತ್ತು. ಪ್ರತಿಯೊಂದು ಪೇಪರ್, ರೇಡಿಯೋದಲ್ಲೂ ಇದೇ ಸುದ್ದಿ. ಇತ್ತ ಮದುವೆ ಆಯ್ತು. ಅತ್ತ ಸೊಸೆಯನ್ನು ಸುಡಲಾಯಿತು. ಅದು ಯುವಕನಾದ ಮಗ ಅಪ್ಪ ಅಮ್ಮನಿಗಾಗಿ ತಿಜೋರಿ ತುಂಬಿಸುವ ಕೆಲಸ ಮಾಡುತ್ತಿದ್ದ ಕಾಲ. ಅತ್ತೆ ಮಾವ ಒಂದು ಲಕ್ಷ, 2 ಲಕ್ಷ ರೂ. ವರದಕ್ಷಿಣೆ ತರಲಿಲ್ಲವೆಂದು ಸೊಸೆಯಂದಿರನ್ನು ಸುಡಲು ಬೆಂಕಿಪೊಟ್ಟಣ ಹಿಡಿದು ನಿಂತಿರುತ್ತಿದ್ದರು. ತಾವು ಬಚಾವಾಗಲು ಮನೆಯ ಸ್ಟವ್ ನ್ನು ಪ್ರಮುಖ ಅಸ್ತ್ರವಾಗಿ ಮಾಡಿಕೊಂಡಿದ್ದರು. ಪ್ರತಿ ಏರಿಯಾಗಳಿಂದ 3-4 ಚೀತ್ಕಾರಗಳು ಹೊರಬರುತ್ತಿದ್ದವು ಹಾಗೂ ಸೊಸೆ ಉರಿದು ಸಾಯುತ್ತಿದ್ದಾಗ ಸೊಸೆಗೆ ಸ್ಟವ್ ನೊಂದಿಗೆ ವಿಶೇಷ ಶತ್ರುತ್ವ ಇದೆ ಅನಿಸುತ್ತಿತ್ತು. ಪೊಲೀಸ್ ಠಾಣೆಯಲ್ಲಿ ಸ್ಟವ್ ಬರ್ಸ್ಟ್ ಆಯ್ತು. ಅದಕ್ಕೆ ಸೊಸೆ ಸತ್ತಳು ಎಂದು ರಿಪೋರ್ಟ್ ಬರೆಸಲಾಗುತ್ತಿತ್ತು. ನಂತರ ಇನ್ನೊಂದು ಮದುವೆ, ಮತ್ತೆ ವರದಕ್ಷಿಣೆ.
ಆಗ ದೇಶದ ಪರಿಸ್ಥಿತಿ ಬದಲಾಗುತ್ತಿತ್ತು. ಬೆಲೆ ಏರಿಕೆಯಾಗುತ್ತಿತ್ತು. ಜನ ಹಣದ ಮಹತ್ವ ಅರಿಯುತ್ತಿದ್ದರು. ಹಳ್ಳಿಗಳಿಂದ ಜನ ನಗರಕ್ಕೆ ವಲಸೆ ಬರುತ್ತಿದ್ದರು. ನಗರಗಳಿಂದ ಮಹಾನಗರಗಳಿಗೆ ಹೋಗುತ್ತಿದ್ದರು. ಕೆಲವರು ವರದಕ್ಷಿಣೆಯನ್ನು ಸಂಪಾದನೆಯ ಸಾಧನವಾಗಿ ಮಾಡಿಕೊಂಡಿದ್ದರು. ಆ ಕಾಲದಲ್ಲಿ ಹುಡುಗಿಯ ವಿವಾಹ ಮುರಿದುಬೀಳುವುದು, ಮದುವೆಯಾದ ಹುಡುಗಿ ತವರುಮನೆಯಲ್ಲಿ ಉಳಿಯುವುದು ತಪ್ಪೆಂದು ತಿಳಿಯಲಾಗುತ್ತಿತ್ತು. ಮದುವೆ ಮುರಿದುಬೀಳುವುದೆಂದರೆ ಜೀವನವೇ ಮುರಿದುಹೋದಂತೆ ಎನ್ನಲಾಗುತ್ತಿತ್ತು.
ವರನ ಕಡೆಯವರು ವರದಕ್ಷಿಣೆ ಎಂದು ಉದ್ದದ ಲಿಸ್ಟ್ ಕೊಡುವುದು ತಮ್ಮ ಅಧಿಕಾರವೆಂದು ತಿಳಿಯುತ್ತಿದ್ದರು. ನೀನು ಹೆಣ್ಣು ಮಗುವಿಗೆ ಜನ್ಮಕೊಟ್ಟು ಪಾಪ ಮಾಡಿದೆ, ಈಗ ಪ್ರಾಯಶ್ಚಿತ್ತ ಮಾಡ್ಕೋ. ಹೆಚ್ಚು ವರದಕ್ಷಿಣೆ ಕೊಡು. ಹುಡುಗಿಯ ತಂದೆ ಸಾಲ ಮಾಡಿ ವರದಕ್ಷಿಣೆಯ ವಸ್ತುಗಳನ್ನು ಹೊಂದಿಸುತ್ತಿದ್ದರು. ಮಗಳನ್ನು ಬೀಳ್ಕೊಡುವವರೆಗೆ ಮದುವೆ ಕಾರ್ಯಕ್ರಮಗಳು ಚೆನ್ನಾಗಿ ನಡೆದರೆ ಸಾಕು ಅನ್ನಿಸುತ್ತಿತ್ತು. ಗಂಡಿನವರ ಮೆರವಣಿಗೆ ಕಂಡಾಗ ಕಳ್ಳರ ಗುಂಪು ಬಂದಂತಾಗುತ್ತಿತ್ತು.
`ಗಂಡಿನವರು ಬಂದರು, ಗಂಡಿನವರು ಬಂದರು,’ ಎಂಬ ಕೂಗು ಕೇಳಿದ ಕೂಡಲೇ ಹುಡುಗಿಯ ತಂದೆ ತಾಯಿ, ಅಣ್ಣ ಕೈ ಮುಗಿದು, ಭಯದಿಂದ ಜೀ ಹುಜೂರ್ ಭಂಗಿಯಲ್ಲಿ ನಿಂತಿರುತ್ತಿದ್ದರು. ನಿರ್ಧರಿಸಿದ ವರದಕ್ಷಿಣೆ ಕೊಟ್ಟ ನಂತರ ಹುಡುಗನ ಕಡೆಯ ಯಾರಾದರೂ ಬಂಧುಗಳು ಹಟ ಮಾಡಿ ಮದುವೆ ನಿಲ್ಲಿಸುವಲ್ಲಿ ಸಮರ್ಥರಾಗಿರುತ್ತಿದ್ದರು. ಉದಾಹರಣೆಗೆ ಊಟ ಚೆನ್ನಾಗಿಲ್ಲ, ಅರೇಂಜ್‌ಮೆಂಟ್ ಸರಿಯಿಲ್ಲ, ನಮಗೆ ಅವಮಾನ ಆಗ್ತಿದೆ ಇತ್ಯಾದಿ. ಹುಡುಗಿಯ ಕಡೆಯವರು ಕೈ ಜೋಡಿಸಿ ಅವರನ್ನು ಸಂತೈಸುತ್ತಿರುತ್ತಿದ್ದರು.
ಸಮಯ ನೋಡಿಕೊಂಡು ಹುಡುಗನ ಕಡೆಯವರು ಯಾವುದಾದರೂ ವಿಶೇಷ ವರದಕ್ಷಿಣೆ ಕೇಳಿ ಹುಡುಗಿಯ ತಂದೆಗೆ ಈ ಮದುವೆ ನಡೆಯುವುದಿಲ್ಲ ಎನ್ನುತ್ತಿದ್ದರು. ಉದಾ : ಮೋಟರ್ ಬೈಕ್ ಕೊಡಿಸಿ ಇಲ್ಲಾಂದ್ರೆ ನಾವು ವಾಪಸ್ ಹೋಗುತ್ತೇವೆ ಎನ್ನುತ್ತಿದ್ದರು. ಆಗ ಹುಡುಗಿಯ ತಾಯಿಗೆ ಲಕ್ವಾ ಹೊಡೆದಂತಾಗುತ್ತಿತ್ತು. ಹುಡುಗಿಯ ಅಣ್ಣ ಮೂಗನಂತಾಗುತ್ತಿದ್ದ. ಹುಡುಗಿಯ ತಂದೆ ತನ್ನ ಪೇಟವನ್ನು ಹುಡುಗನ ತಂದೆಯ ಕಾಲುಗಳಡಿ ಇಟ್ಟು, ತಮ್ಮ ಗೌರವದ ಭಿಕ್ಷೆ ಬೇಡುತ್ತಿದ್ದರು. ಎಲ್ಲಿಂದಲೋ ಹಣ, ಚಿನ್ನದ ವ್ಯವಸ್ಥೆ ಮಾಡಿದ ಬಳಿಕ ಎಲ್ಲ ಶಾಂತವಾಗಿ ಮದುವೆ ನಡೆಯುತ್ತಿತ್ತು.
ಕಾಲ ಬದಲಾದಂತೆ ಹುಡುಗಿಯರು ಓದತೊಡಗಿದರು. ಹೆಣ್ಣು ಭ್ರೂಣ ಹತ್ಯೆಯಿಂದಾಗಿ ಹುಡುಗಿಯರ ಸಂಖ್ಯೆ ಕಡಿಮೆ ಆಯಿತು. ಸ್ಟವ್ ನ ಜಾಗವನ್ನು ಗ್ಯಾಸ್ ತೆಗೆದುಕೊಂಡಿತು. ವರದಕ್ಷಿಣೆ ವಿರೋಧಿ ಕಾನೂನುಗಳು ಕಠಿಣವಾದವು. ಮಹಿಳೆಯರು ಇದರ ಬಗ್ಗೆ ಧ್ವನಿ ಎತ್ತಿದರು. ಈಗ ತಂದೆತಾಯಿಯರು ಮಗಳಿಗೆ ಇಲ್ಲಿ ನಿನ್ನದು ಅಂತ ಏನೂ ಇಲ್ಲ. ಎಲ್ಲ ಗಂಡನ ಮನೆಯಲ್ಲೇ ಎಂದು ಬೀಳ್ಕೊಡುವ ಸಮಯದಲ್ಲಿ ಹೇಳುತ್ತಾರೆ.
ಜೊತೆಗೆ ತಂದೆತಾಯಿ ಮಗಳಿಗೆ ಮೊಬೈಲ್ ಕೊಡಿಸಿ, “ದಿನ ಫೋನ್ ಮಾಡುತ್ತಿರು. ಏನಾದರೂ ತೊಂದರೆಯಾದರೆ ತಿಳಿಸು. ನಾವು ಬರುತ್ತೇವೆ,” ಎಂದು ಹೇಳುತ್ತಾರೆ.
ಹಿಂದೆಯೂ ಒಳ್ಳೆಯ ಜನರಿದ್ದರು. ಈಗಲೂ ಒಳ್ಳೆಯವರಿದ್ದಾರೆ. ಹಿಂದೆಯೂ ಕೆಟ್ಟ ಜನರಿದ್ದರು. ಈಗಲೂ ಕೆಟ್ಟ ಜನರಿದ್ದಾರೆ. ಹಿಂದೆಯೂ ಸೊಸೆಯನ್ನು ಮಗಳೆಂದು ತಿಳಿಯುವವರು ಇದ್ದರು. ವರದಕ್ಷಿಣೆಗಾಗಿ ಅವರನ್ನು ಸುಡುವವರೂ ಇದ್ದರು. ಆದರೆ ಈಗ ಸೊಸೆಯಂದಿರ ಕಾಲ. ಸೊಸೆಯಂದಿರಲ್ಲಿ ಒಳ್ಳೆಯರು ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ಚೆನ್ನಾಗಿ ಓದಿದ, ಬುದ್ಧಿವಂತಳಾದ, ಸೊಸೆಯಂದಿರು, ಕಾನೂನು ತಿಳಿದ ಸೊಸೆಯಂದಿರೂ ಇದ್ದಾರೆ. ಈಗ ಅತ್ತೆಯರು ಒಳ್ಳೆಯ ಸೊಸೆ ಸಿಗಲಿ, ಮನೆ ಚೆನ್ನಾಗಿ ನೋಡಿಕೊಳ್ಳಲಿ, ನಮ್ಮ ಸೇವೆ ಮಾಡಲಿ, ನಮಗೂ ತನ್ನ ತಾಯಿ ತಂದೆಗೆ ಕೊಟ್ಟಂತೆ ಗೌರವ ಕೊಡಲಿ ಎಂದು ಪ್ರಾರ್ಥಿಸುತ್ತಾರೆ.
ಸೊಸೆ ಬರುತ್ತಿದ್ದಂತೆ ಈಗ ಅತ್ತೆಗೆ ನಡುಕ ಶುರುವಾಗುತ್ತದೆ. ಸೊಸೆ ಕೈಯಲ್ಲಿ ಡ್ಯೂಯಲ್ ಸಿಮ್, ಇಂಟರ್‌ನೆಟ್ ಕನೆಕ್ಷನ್ ಇರುವ ಮೊಬೈಲ್ ಹಿಡಿದು ಖುಶಿಖುಶಿಯಾಗಿ ಅತ್ತೆಯ ಮನೆಗೆ ಪ್ರವೇಶಿಸುತ್ತಾಳೆ. ತನ್ನ ತವರುಮನೆಯವರೊಂದಿಗೆ ಮಾತಾಡತೊಡಗುತ್ತಾಳೆ. ಯಾರಾದರೂ ಕೊಂಕು ಮಾತಾಡಿದರೆ 100ನೇ ನಂಬರ್‌ಗೆ ಫೋನ್ ಮಾಡುತ್ತೇನೆಂದು ಬೆದರಿಕೆ ಹಾಕುತ್ತಾಳೆ. ಅತ್ತೆಯನ್ನು ಹೇಗೆ ನೋಡುತ್ತಾಳೆಂದರೆ, ನನ್ನ ಜೊತೆ ಏನೂ ಇಟ್ಕೋಬೇಡಿ, ಇಲ್ಲದಿದ್ದರೆ ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ, ಜೇಲ್‌ನಲ್ಲಿ ಹಿಟ್ಟು ರುಬ್ಬಬೇಕಾಗುತ್ತೆ ಎನ್ನುವಂತೆ.
ಶಕ್ತಿ ದೊರೆತಾಗ ಯಾರು ತಾನೆ ಮದೋನ್ಮತ್ತರಾಗುವುದಿಲ್ಲ. ಆದರೆ ಶಕ್ತಿಯ ದುರುಪಯೋಗಾದರೆ ಶಿಕ್ಷೆಯನ್ನೂ ಕೊಡುತ್ತದೆ. ಒಂದು ಕಡೆ ಹೀಗೇ ಆಯಿತು.
ವಿಕ್ರಮ್, ಅವನ ತಂದೆ ಕೃಷ್ಣಪ್ರಸಾದ್, ತಾಯಿ ಸರಸ್ವತಿ, ತಂಗಿ ಶ್ರೀದೇವಿ ಮತ್ತು ತಮ್ಮ ರಾಜೇಶ್ ಎಲ್ಲರೂ ಈಗ ವರದಕ್ಷಿಣೆ ಆ್ಯಕ್ಟ್ ಅಡಿಯಲ್ಲಿ ಜೈಲಿನಲ್ಲಿದ್ದಾರೆ. ಕೆಲವು ತಿಂಗಳ ಹಿಂದೆ ವಿಕ್ರಮ್ ನ ಮದುವೆ ಕವಿತಾಳೊಂದಿಗೆ ನಡೆದಿತ್ತು. ಕವಿತಾ ಪದವಿ ಪಡೆದಿದ್ದು ಸುಂದರವಾಗಿದ್ದಳು. ಎಲ್ಲರೂ ಎದ್ದ ನಂತರ ಅವಳು ಏಳುತ್ತಿದ್ದಳು ಹಾಗೂ ಅಡುಗೆಮನೆಯಿಂದ ಹಿಡಿದು ಮನೆಯ ಇತರ ಕೆಲಸಗಳನ್ನು ತನಗೆ ಇಷ್ಟಬಂದಂತೆ ಮಾಡುತ್ತಿದ್ದಳು. ಅವಳು ಲೇಟ್ ಲತೀಫ್ ಆಗಿದ್ದು ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ.
ಅತ್ತೆ ಇದಕ್ಕೆ ಆಕ್ಷೇಪಿಸಿದಾಗ ಕವಿತಾ ಮೊದಲು ಅತ್ತಳು. ನಂತರ ಕೋಪಿಸಿಕೊಂಡು ಗಂಡನಿಗೆ ದೂರುಕೊಟ್ಟಳು. ಅಮ್ಮ ಮಗನ ಬಳಿ ನೂರೆಂಟು ದೂರಿದರು. ತನ್ನ ದೂರಿಗೆ ಬೆಲೆಯಿಲ್ಲವೆಂದು ಕವಿತಾಗೆ ತಿಳಿದಾಗ ಅಮ್ಮನಿಗೆ ಫೋನ್ ಮಾಡಿ ಅಮ್ಮಾ…. ಅಮ್ಮಾ… ಎಂದು ಗೋಳಾಡತೊಡಗಿದಳು.
ಸೊಸೆಯ ತಂದೆತಾಯಿ ಬಂದರು. ಕೊಂಚ ತಕರಾರು, ವಾದ ವಿವಾದ, ಸ್ವಲ್ಪ ಜಗಳ ಇತ್ಯಾದಿ ನಡೆದು ಸೊಸೆ ತವರುಮನೆಗೆ ಹಿಂತಿರುಗಿದಳು. ಕೊನೆಗೆ ಗಂಡನೇ ಅವಳನ್ನು ಕರೆತರಲು ಹೊರಟ.
ಅವನು ಅತ್ತೆಯ ಮನೆಗೆ ಹೋದ ಕೂಡಲೇ ಕವಿತಾಳ ಅಮ್ಮ ಅಳಿಯನೊಡನೆ ಬಿರುಸಾಗಿ ಮಾತಾಡತೊಡಗಿದಳು.
“ನಮ್ಮ ಮಗಳನ್ನು ಮುದ್ದಾಗಿ ಮಹಾರಾಣಿ ತರಹ ಬೆಳೆಸಿದ್ದೀವಿ. ಅವಳಿಗೆ ಓದೋದು, ಸುತ್ತಾಡೋದು ಬಿಟ್ಟರೆ ಮನೆಯಲ್ಲಿ ಯಾವ ಕೆಲಸಾನೂ ಮಾಡಿಸೋದಿಲ್ಲ. ಇನ್ನೂ ಹೊಸದಾಗಿ ಮದುವೆ ಆಗಿದ್ದಾಳೆ.
“ನಿಧಾನವಾಗಿ ಕಲಿತ್ಕೋತಾಳೆ. ನಿಮ್ಮಮ್ಮ ತನ್ನನ್ನು ಏನೂಂತ ತಿಳಿದುಕೊಂಡಿದ್ದಾರೆ? ಹೋಗು ಕಳಿಸಲ್ಲ. ನನ್ನ ಮಗಳನ್ನು ಬೈಯೋಕೆ ನಿಮಗೆಷ್ಟು ಧೈರ್ಯ? ಮನೆ ಕೆಲಸಕ್ಕೆ ಒಬ್ಬ ನೌಕರನನ್ನ ಇಟ್ಕೋಳೋಕಾಗಲ್ವಾ? ನಿನಗೆ ಕವಿತಾ ಬೇಕೂಂದ್ರೆ ಬೇರೆ ಮನೆ ಮಾಡು. ನನ್ನ ಮಗಳಿಗೆ ಅಷ್ಟೊಂದು ಜನರ ಮಧ್ಯೆ ಇರೋಕೆ ಅಭ್ಯಾಸ ಇಲ್ಲ.”
ಪಾಪ ಅಳಿಯ ತೆಪ್ಪಗೆ ಕೇಳಿಸ್ಕೋತಾ ಇದ್ದ. ಅವನಿಂದ ಬೇರೇನು ಮಾಡಲು ಸಾಧ್ಯವಿತ್ತು? ಈಗಲೇ ಹೆಂಡ್ತೀನ ಕರ್ಕೊಂಡು ಬೇರೆ ಮನೆ ಮಾಡುವಷ್ಟು ಸಾಮರ್ಥ್ಯ ಇರಲಿಲ್ಲ. ಅವನು ಏನೂ ಮಾತಾಡದಿದ್ದಾಗ ಸ್ವಲ್ಪ ಬೈದು ತಿಳಿವಳಿಕೆ ಹೇಳಿ, ನನ್ನ ಮಗಳಿಗೆ ಏನಾದರೂ ತೊಂದರೆ ಆದರೆ ನಾವು ಸುಮ್ಮನಿರಲ್ಲ ಎಂದು ಎಚ್ಚರಿಕೆ ಕೊಟ್ಟು ಮಗಳನ್ನು ಕಳಿಸಿದಳು.
5-6 ದಿನ ಚೆನ್ನಾಗಿ ಕಳೆದವು. ಆದರೆ ಸೊಸೆಗೆ ವ್ಯಂಗ್ಯವಾಡದಿದ್ದರೆ ಅವಳು ಅತ್ತೆಯೇ ಅಲ್ಲ. ಅವಿವಾಹಿತೆ ನಾದಿನಿ ಅಂದರೆ ಎರಡನೇ ಅತ್ತೆ. ಅವಳು ತಾಯಿಯ ಜೊತೆ ಹೌದು ಹೌದು ಎನ್ನುತ್ತಿರಲೇಬೇಕು. ಇನ್ನು ಅತ್ತೆಯ ಮಾತುಗಳಿಗೆ ಉಪ್ಪು ಖಾರ ಹಚ್ಚಿ ಗಂಡನಿಗೆ ದೂರದಿದ್ದರೆ, ಬೇರೆ ಮನೆ ಮಾಡಬೇಕೆಂದು ಒತ್ತಾಯಿಸದಿದ್ದರೆ ಅವಳು ಸೊಸೆ ಯಾಕಾದಾಳು? ಅವಳೇನೂ ಹಳೆಯ ಕಾಲದ ಸೊಸೆಯಲ್ಲ. ಬಾಯಿ ಮುಚ್ಚಿಕೊಂಡು ಅತ್ತೆಯನ್ನು ತಾಯಿಯೆಂದು ತಿಳಿದು ಹೇಳಿದ್ದನ್ನೆಲ್ಲಾ ಕೇಳಲು. ಅತ್ತೆ ಒಂದು ಮಾತಾಡಿದರೆ ತಿರುಗಿಸಿ ನಾಲ್ಕು ಮಾತಾಡುವವಳೇ ಸೊಸೆ.
ಒಂದು ದಿನ ಅತ್ತೆ ಹೇಳಿದಳು, “ಯಾವ ಕೆಲಸವನ್ನೂ ನೆಟ್ಟಗೆ ಮಾಡೋದಿಲ್ಲ. ಅಪ್ಪ ಅಮ್ಮ ಏನೂ ಹೇಳಿ ಕೊಡಲಿಲ್ವಾ?”
“ನನ್ನ ಅಪ್ಪ ಅಮ್ಮನ ಹೆಸರೆತ್ತಿದ್ರೆ ಹುಷಾರ್! ಏನು ಹೇಳೋದಿದ್ರೂ ನನಗೆ ಹೇಳಿ.”
“ನನಗೇ ಹುಷಾರ್ ಅಂತಿಯೇನೇ ನಿನಗೆಷ್ಟು ಧೈರ್ಯ? ನನ್ನ ಮಗ ಬರಲಿ ತಾಳು.”
“ಏನು ಮಾಡ್ತಾನೆ ನಿಮ್ಮ ಮಗ?”
“ನಿನ್ನ ಗಂಡನಿಗೇ ಹೀಗಂತೀಯ. ನಾನೂ ಸೊಸೆಯಾಗಿ ಈ ಮನೆಗೆ ಬಂದಿದ್ದೆ. ಎಂದೂ ನಮ್ಮತ್ತೆಗೆ ಎದುರು ವಾದಿಸಲಿಲ್ಲ. ಜೀವನವೆಲ್ಲಾ ಅವರು ಹೇಳಿದಂತೆ ಕೇಳುತ್ತಿದ್ದೆ, ಸಹಿಸಿಕೊಳ್ಳುತ್ತಿದ್ದೆ. ಒಂದು ದಿನವಾದರೂ ಉಫ್ ಎಂದು ನಿಟ್ಟುಸಿರುಬಿಡಲಿಲ್ಲ. ನೀನು ಬಂದು ಇನ್ನೂ 2 ತಿಂಗಳೂ ಆಗಿಲ್ಲ, ನನಗೇ ರೋಫ್ ಹಾಕ್ತಿದ್ದೀಯ. ಮುಂದೆ ಏನ್ಮಾಡ್ತಿಯೋ?”
“ನೋಡಿ, ನೀವು ನಿಮ್ಮತ್ತೆ ಕಾಟ ಸಹಿಸಿಕೊಂಡ್ರೀಂತ ನಾನು ಸಹಿಸಿಕೊಳ್ಳೋಕಾಗಲ್ಲ. ನಾನು ಓದಿದೋಳು. ಹಳ್ಳಿ ಗಮಾರಳಲ್ಲ.”
“ನನ್ನನ್ಯಾಕೇ ಹಳ್ಳಿ ಗಮಾರಳು ಅಂತೀಯಾ?”
“ಹೀಗೆ ಎಲ್ಲಾದಕ್ಕೂ ಟೀಕೆ ಮಾಡ್ತೀರಿ. ಏನಾದರೊಂದು ತಪ್ಪು ಕಂಡುಹಿಡೀತಿರ್ತೀರಿ.”
ಹೀಗೆ ಎಂದೂ ಮುಗಿಯದ ಅತ್ತೆ ಸೊಸೆ ಜಗಳದಲ್ಲಿ ಮಾವ ಹಾಗೂ ಗಂಡ ನರಳತೊಡಗಿದರು. ಮಾವ ಅತ್ತೆ ಹೇಳಿದ್ದಕ್ಕೆಲ್ಲ ತಲೆಯಾಡಿಸುತ್ತ ಮಗನನ್ನು ಬೈಯುತ್ತಿದ್ದರು.
“ಈಗಿನಿಂದಲೇ ತಲೆ ಮೇಲೆ ಕೂಡಿಸಿಕೊಂಡಿದ್ದೀಯ. ಆಮೇಲೆ ನಿನ್ನನ್ನು ಚೆನ್ನಾಗಿ ಕುಣಿಸ್ತಾಳೆ. ನಿನ್ನ ಅಮ್ಮನಿಗೆ ಅವಮಾನ ಆಗ್ತಿದೆ. ನೀನು ಹೆಂಡ್ತಿ ಗುಲಾಮನಾಗಿದ್ದೀಯ. ಹೋಗಿ ನಾಲ್ಕು ಬಿಗಿ. ಸರಿ ಹೋಗ್ತಾಳೆ.”
ಮಗನಿಗೂ ಅಪ್ಪನ ಮಾತು ಕೇಳಿ ಸಿಟ್ಟು ಬಂತು. ಅವನು ಹೆಂಡತಿಗೆ ನಾಲ್ಕು ಬಿಗಿದ. ಇನ್ನೇನು? ಅವಳು ಕೂಡಲೇ ಅಮ್ಮನಿಗೆ ಫೋನ್ ಮಾಡಿದಳು, “ಅಮ್ಮಾ, ಅಪ್ಪಾ ಬೇಗ ಬನ್ನಿ. ಇಲ್ದಿದ್ರೆ ನಿಮ್ಮ ಮಗಳನ್ನು ಜೀವಸಹಿತ ನೋಡಕ್ಕಾಗಲ್ಲ.”
ಅವಳು ಅಷ್ಟು ಹೇಳಿದ್ದೇ ಸಾಕು. ಅವಳ ಅಪ್ಪ ಅಮ್ಮ ರಾತ್ರೋರಾತ್ರಿ ಟ್ಯಾಕ್ಸಿ ಮಾಡಿಕೊಂಡು ಬಂದಿಳಿದರು. ಅವರು ದಾರಿಯುದ್ದಕ್ಕೂ ಫೋನ್‌ನಲ್ಲಿ ಸಮಾಧಾನಿಸುತ್ತಿದ್ದರು, `ಗಾಬರಿಯಾಗಬೇಡ, ನಾವು ಬೇಗ ಬಂದುಬಿಡ್ತೀವಿ. ಹೆದರಬೇಡ ಸೀಮೆಎಣ್ಣೆ, ಗ್ಯಾಸ್ ಸ್ಟವ್ ನಿಂದ ದೂರ ಇರು. ನಾವು ಹೊರಟಾಯ್ತು, ಬರ್ತಿದ್ದೀವಿ ಆಯ್ತಾ ಎಂದೆಲ್ಲಾ.
ಇತ್ತ ಗಂಡ ಹೆಂಡತಿಯ ಮೇಲೆ ಕೈ ಎತ್ತಿದ್ದಕ್ಕೆ ಪಶ್ಚಾತ್ತಾಪ ಪಡುತ್ತಿದ್ದ. ಅತ್ತ ಹೆಂಡತಿ ಪ್ಯಾಕಿಂಗ್ ಮಾಡಿಕೊಳ್ಳುತ್ತಾ ಜೋರಾಗಿ ಅಳುತ್ತಿದ್ದಳು. ಮಾವ ತನ್ನ ಹೆಂಡತಿಗೆ ಬೈದರು, “ಯಾಕೇ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡ್ತೀಯ. ನಾಳೆ ಸೊಸೆ ಏನಾದರೂ ಹೆಚ್ಚು ಕಡಿಮೆ ಮಾಡಿಕೊಂಡರೆ ಮಗನ ಸಂಸಾರ ಹಾಳಾಗುತ್ತೆ. ಅವಳಿಗೆ ಆಗುವಷ್ಟು ಕೆಲಸ ಮಾಡಲಿ.
“ಆಗದಿದ್ರೆ ಮಾಡೋದು ಬೇಡ. ನಿಧಾನವಾಗಿ ಎಲ್ಲ ಕಲಿತ್ಕೋತಾಳೆ ಬಿಡು. ಮನೆಯ ಶಾಂತಿಗೆ ಭಂಗ ತಂದು ಏರಿಯಾದಲ್ಲಿ ಎಲ್ಲರೂ ಆಡಿಕೊಳ್ಳೋ ಹಾಗೆ ಮಾಡ್ತಿದ್ದೀಯ.”
ಇತ್ತ ಅತ್ತೆ ಗಂಡ ಬೈದಿದ್ದಕ್ಕೆ ಅಳುತ್ತಿದ್ದರೆ, ಅತ್ತ ಸೊಸೆ ಅಳುತ್ತಾ ಗಂಡನಿಗೆ ಹೇಳುತ್ತಿದ್ದಳು, “ನಾನಿನ್ನು ಈ ಮನೇಲಿ ಇರಲ್ಲ. ಇವತ್ತು ನನ್ನ ಮೇಲೆ ಕೈಮಾಡಿದ್ದೀರಿ. ನಾಳೆ ನನ್ನ ಮೇಲೆ ಆಯುಧ ಎತ್ತಬಹುದು. ನಾನು ಅಪ್ಪ ಅಮ್ಮನಿಗೆ ಪೋನ್ ಮಾಡಿದ್ದೀನಿ. ಅವರು ಬರುತ್ತಿದ್ದಾರೆ,” ಎಂದಳು.
“ಏನೂ! ಫೋನ್ ಯಾಕೆ ಮಾಡ್ದೆ! ಇದು ನಮ್ಮ ಮನೆ ವಿಷಯ.”
“ಹೀಗೆ ಹೊಡೋದು ಮನೆ ವಿಷಯಾನಾ? ಇಂಥಾ ಮನೇಲಿರೋಕೆ ನನಗೆ ಇಷ್ಟವಿಲ್ಲ.”
ಸೊಸೆಯ ಅಪ್ಪ ಅಮ್ಮ ಬಂದ ಮೇಲೆ ಬಹಳಷ್ಟು ವಾದ ವಿವಾದ, ಮಾತುಕಥೆಗಳು ನಡೆದವು. ಯಾರೂ ಇನ್ನೊಬ್ಬರ ಮಾತನ್ನು ಕೇಳಿಸಿಕೊಳ್ಳಲು ಸಿದ್ಧರಿರಲಿಲ್ಲ.
ಗಂಡಿನ ಕಡೆಯವರು, “ನಾವ್ ಯಾಕೆ ಬಗ್ಗಬೇಕು. ನಮ್ಮದೇನು ತಪ್ಪಿದೆ? ಇದು ನಮ್ಮ ಮನೆ ವಿಷಯ. ನೀವ್ ಯಾಕೆ ಹಸ್ತಕ್ಷೇಪ ಮಾಡ್ತೀರಿ?” ಎಂದರು.
ಸೊಸೆಯ ಕಡೆಯವರು, “ನೀವು ನಮ್ಮ ಹುಡುಗೀನ ಹೊಡೀತಿದ್ರೆ ನಾವು ನೋಡಿಕೊಂಡು ಸುಮ್ಮನೆ ಇರಬೇಕಾ? ನಮ್ಮ ಮಗಳು ಇನ್ನು ಮೇಲೆ ಈ ಮನೇಲಿರಲ್ಲ. ನಡಿ ಕವಿತಾ,” ಎಂದರು.
ಕವಿತಾ ಅಮ್ಮನಿಗೆ ತೆಕ್ಕೆ ಬಿದ್ದು ಅಳತೊಡಗಿದಳು. ನಂತರ ಅಪ್ಪನನ್ನು ತಬ್ಬಿಕೊಂಡು ಅತ್ತಳು. ನಂತರ ಅಮ್ಮನೊಂದಿಗೆ ಟ್ಯಾಕ್ಸಿಯಲ್ಲಿ ಕೂತು ತವರಿಗೆ ಹೊರಟುಹೋದಳು.
ಗಂಡಿನವರು ಸೊಸೆಯ ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದರೆ ಹೆಣ್ಣಿನವರು ಅಳಿಯನ ತಪ್ಪುಗಳನ್ನು ಎತ್ತಿ ತೋರಿಸುತ್ತಿದ್ದರು.
ಆರೋಪ ಪ್ರತ್ಯಾರೋಪಗಳು ಜಾರಿಯಲ್ಲಿದ್ದವು. ಎರಡೂ ಕಡೆಯವರ ನೆರೆಹೊರೆಯವರು ಬೆಂಕಿಗೆ ತುಪ್ಪ ಹಾಕುವ ಕೆಲಸ ಮಾಡುತ್ತಿದ್ದರು.
ಒಂದು ದಿನ ಕವಿತಾ ಅಮ್ಮನ ಮಡಿಲಲ್ಲಿ ತಲೆಯಿಟ್ಟು ಮಲಗಿದ್ದಳು. ಆಗ ಅವರ ರಸ್ತೆಯಲ್ಲೇ ಇದ್ದ ಒಬ್ಬ ಮಹಿಳೆ ಬಂದರು, “ಏನು ಶಾಂತಮ್ಮನೋರೆ ಇದೆಲ್ಲಾ, ಹೂವಿನಂತಹ ಹುಡುಗೀಗೆ ಹೊಡೆದು ಮನೆಬಿಟ್ಟು ಓಡಿಸೋದು ಅಂದ್ರೇನು? ಬಹಳ ಕೆಟ್ಟ ಜನ ಅವರು. ಹೊಸ ಸೊಸೆ ಅಂದ್ರೆ ಮನೆಗೆ ಲಕ್ಷ್ಮಿ ಬಂದ ಹಾಗೆ. ಲಕ್ಷ್ಮಿಗೆ ಈ ರೀತಿ ಅವಮಾನ ಮಾಡೋದಾ…..”
“ಇಲ್ಲ ರಾಧಮ್ಮನೋರೆ, ಅವರೇನೂ ಮನೆಬಿಟ್ಟು ಓಡಿಸ್ಲಿಲ್ಲ. ನಾವೇ ಇವಳನ್ನು ಕರೆದುಕೊಂಡು ಬಂದಿದ್ದು. ನಮ್ಮ ಮಗಳ ಮೇಲೆ ಯಾರಾದ್ರೂ ಕೈ ಎತ್ತಿದ್ರೆ ನಾವು ಸಹಿಸಿಕೊಳ್ಳಲ್ಲ.”
ರಾಧಮ್ಮ ಕವಿತಾಳ ತಲೆ ಸವರಿ, “ನೀವು ಕರೆದುಕೊಂಡು ಬಂದಿದ್ದು ಒಳ್ಳೇದಾಯ್ತು. ಇವತ್ತು ಕೈ ಎತ್ತಿದ್ರು, ನಾಳೆ ಸೀಮೆಎಣ್ಣೆ ಸುರಿದು ಸುಟ್ಟುಬಿಡ್ತಾರೆ. ಹೇಗೆ ನಂಬೋದು? ನಮ್ಮ ದೂರದ ಚಿಕ್ಕಮ್ಮನ ಮಗಳಿಗೂ ಹೀಗೇ ಆಯ್ತು. ಪಾಪ, ಅಂದಿದ್ದನ್ನೆಲ್ಲಾ ಅನ್ನಿಸ್ಕೊಂಡು ಇದ್ದಳು. ಏಟುಗಳನ್ನೂ ಸಹಿಸಿಕೊಂಡಳು. ಒಂದು ದಿನ ಎಲ್ಲರೂ ಸೇರಿ ಅವಳನ್ನು ಸುಟ್ಟುಬಿಟ್ಟರು,” ಎಂದರು.
ಸುಟ್ಟುಬಿಟ್ಟ ವಿಷಯ ಕೇಳಿ ಕವಿತಾಗೆ ಎಚ್ಚರವಾಯಿತು. ತನಗೂ ಹಾಗೇ ಆಗುತ್ತಿತ್ತೇನೋ ಎಂದು ಅವಳಿಗೆ ಅನ್ನಿಸಿತು. ಅಮ್ಮನ ಜೊತೆ ಬಂದಿದ್ದು ಒಳ್ಳೆಯದಾಯಿತು. ಫೋನ್ ಮಾಡಿ ತಪ್ಪು ಮಾಡಿದೆನೇನೋ ಎಂದು ಮೊದಲು ಅನ್ನಿಸಿತ್ತು. ಆದರೆ ರಾಧಾ ಆಂಟಿಯ ಮಾತನ್ನು ಕೇಳಿ ಅವಳಿಗೆ ಭಯ ಉಂಟಾಯಿತು.
ರಾಧಮ್ಮ ಆಗತಾನೆ ತಮ್ಮ ಸೊಸೆಯನ್ನು ಒಂದಷ್ಟು ಬೈದು ಬಂದಿದ್ದರು. ಅವರ ಮಗ ನಿರುದ್ಯೋಗಿಯಾಗಿದ್ದ. ಕವಿತಾಳಂತಹ ಸುಂದರ ಶ್ರೀಮಂತ ಹುಡುಗಿ ತಮಗೆ ಸೊಸೆಯಾಗಿ ಬಂದರೆ ವರದಕ್ಷಿಣೆ ಎಂದು ಒಳ್ಳೆಯ ಮೊತ್ತದ ಹಣ ಸಿಗುತ್ತದೆ. ಆಗ ಮಗನನ್ನು ಯಾವುದಾದರೂ ಕೆಲಸಕ್ಕೆ ಸೇರಿಸಬಹುದು ಅಥವಾ ಅವನಿಗೊಂದು ಅಂಗಡಿ ಹಾಕಿಕೊಡಬಹುದು. ಅವರು ಅಪ್ರತ್ಯಕ್ಷವಾಗಿ ತಮ್ಮ ಮಗನ ಮದುವೆ ಬಗ್ಗೆ ಪ್ರಸ್ತಾಪಿಸಿದ್ದರು. ಆದರೆ ಕವಿತಾ ಮನೆಯವರಿಗೆ ಉದ್ಯೋಗ ಮಾಡುವ ಹುಡುಗ ಬೇಕಾಗಿತ್ತು. ಹೀಗಾಗಿ ಅವರು ಆ ಪ್ರತ್ಯಕ್ಷ ಪ್ರಸ್ತಾಪವನ್ನು ಅಪ್ರತ್ಯಕ್ಷವಾಗಿಯೇ ನಿರಾಕರಿಸಿದರು. ಅದರಿಂದ ರಾಧಮ್ಮನಿಗೆ ಸಿಟ್ಟು ಇನ್ನೂ ಇತ್ತು.
ರಾಧಮ್ಮ ಮತ್ತೆ ಹೇಳಿದರು, “ಹುಂ, ಹೂವಿನಂತಹ ಹುಡುಗಿಗೆ ದುಷ್ಟರು ಎಂತಹ ಗತಿ ತಂದೊಡ್ಡಿದರು? ನಿಮ್ಮ ಮಗಳನ್ನು ಅಲ್ಲಿಗೆ ಮತ್ತೆ ಕಳಿಸ್ಬೇಡಿ. ಆ ನಿರ್ದಯಿಗಳು ಏನು ಮಾಡ್ತಾರೋ ಯಾರಿಗ್ಗೊತ್ತು?”
“ಈಗೇನ್ಮಾಡೋದಮ್ಮಾ?” ಕವಿತಾ ತಾಯಿಯನ್ನು ಕೇಳಿದಳು.
“ಏನ್ಮಾಡೋದು, ಪಾಠ ಕಲಿಸೋದು?”
“ಏನು ಪಾಠ?” ಕವಿತಾ ಕೇಳಿದಳು.
“ವರದಕ್ಷಿಣೆ ಕೇಳಿದ್ರೂಂತ ಕಂಪ್ಲೇಂಟ್ ಕೋಡೋಣ. ಆಗ ಬುದ್ಧಿ ಬರುತ್ತೆ. ಅವರು ಬಂದು ನಿನ್ನನ್ನು ಕ್ಷಮೆ ಕೇಳದಿದ್ರೆ ನನ್ನನ್ನು ಅಮ್ಮಾಂತ ಕರೀಬೇಡ.”
“ಯೋಚಿಸಬೇಡ ಕವಿತಾ. ಅಂಕಲ್ ಲಾಯರ್. ಅವರು ಹೇಳಿಕೊಟ್ಟ ಹಾಗೆ ಹೇಳು ಅಷ್ಟೆ. ವರದಕ್ಷಿಣೆ ಕೇಳ್ತಿದ್ರು, ಹೊಡೀತಿದ್ರು, ಸುಟ್ಟು ಸಾಯಿಸೋಕೆ ಪ್ಲ್ಯಾನ್ ಮಾಡ್ತಿದ್ರೂಂತ ಹೇಳು,” ರಾಧಮ್ಮ ಹೇಳಿದರು.
“ಆದ್ರೆ ಆಂಟಿ, ಅವರು ವರದಕ್ಷಿಣೆ ಕೇಳಿರಲಿಲ್ಲ.”
“ಏ, ನೀನಂತೂ ಬಹಳ ಮುಗ್ಧಳು. ಈಗ ಕೇಳ್ಲಿಲ್ಲಾಂದ್ರೆ ಮುಂದೆ ಕೇಳ್ತಾರೆ. ಹೊಡೆಯೋದಂತೂ ಶುರುವಾಗಿದ್ಯಲ್ಲಾ.”
ಹೀಗೆ ಆ ರಸ್ತೆಯ ಇತರ ಮಹಿಳೆಯರು ಕವಿತಾ ಮತ್ತು ಅವಳ ತಾಯಿಗೆ ಸಹಾನುಭೂತಿ ತೋರಿಸಿದಾಗ ಕವಿತಾಗೂ ತಾನು ಪೆಟ್ಟು ತಿಂದಿದ್ದೇನೆ ಅನ್ನಿಸಿತ್ತು. ಹೀಗೆಯೇ ಹೆಣ್ಣು ಹೆತ್ತ ಕೆಲವರು ನಿಮ್ಮ ಮಗಳನ್ನು ಕರೆತಂದು ಒಳ್ಳೆಯ ಕೆಲಸ ಮಾಡಿದ್ರಿ. ಕನ್ಯಾಪಿತೃಗಳ ಸಾಮರ್ಥ್ಯ ಹೆಚ್ಚಿಸಿದ್ರಿ ಎನ್ನುತ್ತಿದ್ದರು.
ಆದರೆ ರಾಧಮ್ಮನ ಗಂಡ, “ಕವಿತಾಗೆ ತಿಳಿವಳಿಕೆ ಹೇಳಿ ಅತ್ತೆ ಮನೆಗೆ ಕಳಿಸು. ಯಾಕೆ ಅವಳ ಮನೆ ಹಾಳು ಮಾಡ್ತಿದ್ದೀಯ,” ಎಂದು ಹೆಂಡತಿಗೆ ಹೇಳಿದರು.
ಆಗ ರಾಧಮ್ಮ ನಾಗಿಣಿಯಂತೆ ಪೂತ್ಕರಿಸಿದರು, “ನಿಮಗಂತೂ ಒಂದೂ ಕೇಸಿಲ್ಲ. ಹೊಸ ಕೇಸ್ ಕೊಡಿಸ್ತಿದ್ದೀನಿ. ಈ ತರಹ ಮಾತಾಡೋ ಬದಲು ತಾಕತ್ತಿದ್ರೆ ಅವಳಿಗೆ ಡೈವೋರ್ಸ್ ಕೊಡಿಸಿ ನೋಡೋಣ.”
ಲಾಯರ್ ಕರಿ ಕೋಟ್ ಧರಿಸಿ ಕವಿತಾಳ ಮನೆಗೆ ಹೋದರು. ಕವಿತಾಳ ತಂದೆ ಹೆಂಡತಿಗೆ ಹೇಳಿದರು, “ನೋಡು, ಚೆನ್ನಾಗಿ ಯೋಚಿಸು. ಮಗಳ ಬದುಕಿನ ಪ್ರಶ್ನೆ ಇದು. ಒಂದು ಸಾರಿ ಪೊಲೀಸ್, ಕೋರ್ಟ್ ಅಂತ ಹೋದರೆ ಮಗಳು ಜೀವನವಿಡೀ ಮನೇಲೇ ಕೂತಿರಬೇಕಾಗುತ್ತೆ.”
ಅವರ ಹೆಂಡತಿ ಕೋಪದಿಂದ ಹೇಳಿದರು, “ಅಲ್ರೀ, ನಮ್ಮ ಮಗಳಿಗೆ 2 ಹೊತ್ತು ಊಟ ಹಾಕೋಕಾಗ್ವಾ? ಅವಳನ್ನು ಸಾಕೋಕೆ ಆಗಲ್ವಾ? ಅವಳನ್ನು ಸುಟ್ಟುಬಿಟ್ಟು ಸಾಯಿಸ್ಲಿ ಅಂತ ಅಲ್ಲೇ ಬಿಡೋದಾ?” ಅದನ್ನು ಕೇಳಿ ಅವರು ಸುಮ್ಮನಾದರು.
“ನಾಳೆ ಏನಾದರೂ ಹೆಚ್ಚು ಕಡಿಮೆ ಆದರೆ ಯಾರು ಜವಾಬ್ದಾರಿ?” ರಾಧಮ್ಮ ಹೇಳಿದರು.
“ನಡೀರಿ, ಲೇಟ್ ಮಾಡಬೇಡಿ. ರಿಪೋರ್ಟ್ ಸಿದ್ಧವಾಗಿದೆ. ಸ್ಟೇಷನ್‌ಗೆ ಹೋಗೋಣ,” ಲಾಯರ್ ಹೇಳಿದರು.
ಲಾಯರ್ ಕವಿತಾಗೆ ಕೆಲವು ಪಾಯಿಂಟ್ಸ್ ಹೇಳಿಕೊಟ್ಟು ವರದಕ್ಷಿಣೆ ಆ್ಯಕ್ಟ್ ನಲ್ಲಿ ಪರಿಣಿತಳನ್ನಾಗಿ ಮಾಡಿದರು. ಕವಿತಾ ಸಂಕೋಚ ವ್ಯಕ್ತಪಡಿಸಿದಾಗ ಅವಳಮ್ಮ ಹೇಳಿದರು, “ಕವಿತಾ, ಅವರಿಗೆ ಸರಿಯಾಗಿ ಪಾಠ ಕಲಿಸ್ಬೇಕು. ಒಂದು ವೇಳೆ ನಿನ್ನ ಗಂಡ ಬೇರೆ ಮನೆ ಮಾಡಿದ್ರೆ ಕೇಸ್ ವಾಪಸ್ ತಗೋಳ್ಳೋಣ. ನಾನು ಹೇಳೋದು ನಿನ್ನ ಒಳ್ಳೇದಕ್ಕೆ. ಹೆದರಬೇಡ. ವರದಕ್ಷಿಣೆ ಆ್ಯಕ್ಟ್ ನಿನ್ನೊಂದಿಗಿದೆ.”
ಕವಿತಾ ಮನೆಯವರು ಹಾಗೂ ಲಾಯರ್‌ನೊಂದಿಗೆ ಪೊಲೀಸ್ ಸ್ಟೇಷನ್‌ಗೆ ಹೋದಳು. ಅತ್ತ ವಿಕ್ರಮ್ ನ ಮನೆಯವರಲ್ಲಿ ಕೋಪ ಇತ್ತು, ದುಃಖ ಇತ್ತು. ಕೋಪ ಏಕೆಂದರೆ ವಿಷಯ ಈ ಹಂತಕ್ಕೆ ಹೋಗಿದ್ದು. ಆ ಏರಿಯಾದಲ್ಲಿ ಅವರ ಕುಟುಂಬದ ಮರ್ಯಾದೆಗೆ ಧಕ್ಕೆ ಬಂದಿತ್ತು. ದುಃಖ ಏಕೆಂದರೆ ಸುಶಿಕ್ಷಿತ ಸೊಸೆ ಒಂದು ಸಣ್ಣ ವಿಷಯಕ್ಕೆ ತವರುಮನೆಗೆ ಹೊರಟುಹೋಗಿದ್ದು.
“ಅಲ್ವೋ, ಸಣ್ಣ ವಿಷಯಕ್ಕೆ ಯಾಕೋ ಹೊಡೆದೆ? ಬುದ್ಧಿ ಹೇಳಬಹುದಾಗಿತ್ತು,” ಅಪ್ಪ ಮಗನನ್ನು ಬೈದರು.
“ನೀವೇ ಅಲ್ವಾ ಹೇಳಿದ್ದು 4 ಬಿಗಿ ಅಂತ.”
“ದೊಡ್ಡ ವಿಧೇಯ ಪುತ್ರ! ಬೇರೆ ಯಾವ ಮಾತೂ ಕೇಳೋದಿಲ್ಲ. ಕಾಲ ಬದಲಾಗಿದೆ ವಿಕ್ರಮ್. ಅವಳಿಗೆ ಬುದ್ಧಿ ಹೇಳಿ ಕರ್ಕೊಂಡು ಬಾ. ಬೇಕಾದ್ರೆ ಬೇರೆ ಇರಿ. ನಮಗೇನೂ ತೊಂದರೆ ಇಲ್ಲ. ಆದರೆ ಸುಖವಾಗಿ, ಶಾಂತಿಯಿಂದ ಇರಿ.”
ಅಷ್ಟರಲ್ಲಿ ಪೊಲೀಸ್ ಸ್ಟೇಷನ್‌ನಲ್ಲಿ ದೂರು ಸಲ್ಲಿಸಿದ್ದಾಯ್ತು. ನಂತರ ವರದಕ್ಷಿಣೆ ಆ್ಯಕ್ಟ್ ನಂತೆಯೇ ಆಯ್ತು. ಗಂಡಿನ ಕಡೆಯವರೆಲ್ಲರೂ ಜೈಲಿಗೆ ಹೋದರು. ದೂರು ತೆಗೆದುಕೊಳ್ಳುವಾಗ ಇನ್‌ಸ್ಪೆಕ್ಟರ್ ಸಾಕಷ್ಟು ತಿಳಿಸಿ ಹೇಳಿದ. ಆದರೆ ಲಾಯರ್ ಮತ್ತು ಕವಿತಾಳ ಅಮ್ಮ ಏನೂ ಕೇಳಿಸಿಕೊಳ್ಳಲಿಲ್ಲ. ಒಬ್ಬೊಬ್ಬರಾಗಿ ಎಲ್ಲರಿಗೂ ಜಾಮೀನು ಸಿಕ್ಕಿತು. ಆದರೆ ಎಷ್ಟೊಂದು ಛೀ, ಥೂಗಳನ್ನು ಕೇಳಬೇಕಾಯಿತು. ಮೀಡಿಯಾದವರು ಇದಕ್ಕೆ ಉಪ್ಪು ಖಾರ ಹಚ್ಚಿ ಮುದ್ರಿಸಿದರು. ಮನೆಯಿಂದ ಜೈಲು, ಜೈಲಿನಿಂದ ಕೋರ್ಟ್‌ವರೆಗೆ ಇಡೀ ಕುಟುಂಬದವರು ವಿಷವನ್ನು ಗುಟುಕು ಗುಟುಕಾಗಿ ಕುಡಿಯುವಂತಾಯಿತು.
ಅತ್ತೆ ಮಗನಿಗೆ, “ನಿನ್ನ ಹೆಂಡತಿಯಿಂದಾಗಿ ನಾವು ಯಾರಿಗೂ ಮುಖ ತೋರಿಸದಂತಾಯಿತು. ಈಗ ನಿನ್ನ ತಂಗಿಯ ಮದುವೆ ಹೇಗಾಗುತ್ತೆ, ಯಾರು ಮಾಡ್ಕೋತಾರೆ? ಇದನ್ನು ನೋಡೋಕೆ ಬದಲು ನಾವು ಸತ್ತುಹೋಗಿದ್ರೆ ಚೆನ್ನಾಗಿರೋದು,” ಎಂದರು.
ವಿಕ್ರಮ್ ಕೆಲಸದಿಂದ ಸಸ್ಪೆಂಡ್ ಆಗಿದ್ದ. ಮನೆಯಲ್ಲಿ ದುಃಖ ಹರಡಿತ್ತು. ಮನೆಗೆ ಬಂದವರು ಸಹಾನುಭೂತಿ ತೋರಿಸಿ ಬಿಟ್ಟಿ ಸಲಹೆ ಕೊಡುತ್ತಿದ್ದರು. ಕೆಲವರು ವ್ಯಂಗ್ಯವಾಗಿ ಮಾತಾಡುತ್ತಿದ್ದರು. ವರದಕ್ಷಿಣೆ ವಿರೋಧಿ ಮತ್ತು ಮಹಿಳಾ ವಿಮೋಚನಾ ಸಂಸ್ಥೆಯವರು ಅವರ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದರು. ಮನೆಯ ಖರ್ಚು, ಲಾಯರ್ ಫೀಸ್, ಶಿಕ್ಷೆಯ ಭಯ ಎಲ್ಲರನ್ನೂ ಭಯಭೀತರನ್ನಾಗಿಸಿತ್ತು. ಕೇಸ್ ನಡೆಯುತ್ತಿತ್ತು. ಈಗಂತೂ ವಿಕ್ರಮ್ ಹಾಗೂ ಅವನ ತಂದೆ ಕೂಡ ಏನೇ ಆಗಲಿ ಎದುರಿಸೋಣ. ಆದರೆ ಯಾವ ಕಾರಣಕ್ಕೂ ಕವಿತಾಳನ್ನು ಸೊಸೆಯಾಗಿ ಸ್ವೀಕರಿಸಬಾರದು ಎಂದು ಸಂಕಲ್ಪಿಸಿದ್ದರು. ಅವಳಿಂದ ನಮಗೆಲ್ಲಾ ಇಷ್ಟು ಅವಮಾನ ಆಗಿದೆ. ಅವಳಿಂದ ದೂರ ಇರೋದೇ ಸರಿ. ಇವತ್ತು ವರದಕ್ಷಿಣೆ ಆ್ಯಕ್ಟ್ ನಲ್ಲಿ ಸಿಲುಕಿಸಿದ್ದಾಳೆ. ಎಲ್ಲಾ ಸರಿಹೋದ ಮೇಲೆ ಎಲ್ಲಿ, ಯಾವಾಗ, ಯಾವ ಅಪರಾಧದಲ್ಲಿ ಸಿಲುಕಿಸ್ತಾಳೋ ಗೊತ್ತಿಲ್ಲ. ಜೊತೆಗೆ ಮಗಳು ಶ್ರೀದೇವಿಯ ಮದುವೆ ಮೇಲೆ ಇದು ಪರಿಣಾಮ ಬೀರುತ್ತೆ. ಅವಳ ಮದುವೆ ಹೇಗಾಗುತ್ತೆ ಅಂತ ಚಿಂತೇನೂ ಆಗಿತ್ತು.
ವಿಕ್ರಮ್ ತಂದೆಗೆ ಧೈರ್ಯ ಹೇಳಿದ, “ಅಪ್ಪಾ, ನೀವು ಚಿಂತಿಸಬೇಡಿ. ಕೇಸ್‌ನಿಂದ ಬಿಡುಗಡೆ ಸಿಕ್ಕ ನಂತರ ಬೇರೆ ಕೆಲಸಕ್ಕೆ ಸೇರಿಕೊಳ್ತೀನಿ. ಬೇರೆ ಊರಿಗೆ ಟ್ರ್ಯಾನ್ಸ್ ಫರ್ ಮಾಡಿಸಿಕೊಳ್ತೀನಿ. ರಾಜೇಶನ ಜವಾಬ್ದಾರಿ ನನ್ನದು.
“ಲಾಯರ್‌ಗೆ ಹೇಗಾದರೂ ಕೇಸ್ ನಮ್ಮ ಕಡೆ ಆಗುವ ಹಾಗೆ ಮಾಡಲು ಹೇಳಿ. ದುಡ್ಡು ಕೊಟ್ಟರೆ ಏನಾದರೂ ಮಾಡಬಹುದು. ನಾವಂತೂ ವರದಕ್ಷಿಣೆ ಕೇಳೇ ಇಲ್ಲ. ನಮ್ಮ ಕಡೆ ನಾವು ಸರಿಯಾಗಿದ್ದೀವಿ. ಅದನ್ನು ಸರಿ ಅಂತ ಸಾಬೀತುಪಡಿಸ್ಬೇಕು, ಅಷ್ಟೆ.”
“ಸರಿಯಾಗಿರೋದನ್ನು ಸರಿ ಅಂತ ಸಾಬೀತು ಪಡಿಸೋದು ಎಲ್ಲಕ್ಕಿಂತ ಕಷ್ಟ,” ಲಾಯರ್ ಹೇಳಿದರು.
“ಏನೇ ಇರಲಿ. ನೀವು ನಮ್ಮನ್ನು ಈ ತೊಂದರೆಯಿಂದ ಪಾರು ಮಾಡಿ,” ತಂದೆ ಹೇಳಿದರು.
“ಅರೆ, ದೇವರೂ ಕೂಡ ನೈವೇದ್ಯ ತಗೋತಾನೆ. ಇನ್ನು ತೀರ್ಮಾನ ಕೊಡೋರು ಸಾಧಾರಣದನರಲ್ಲ. ಬಹಳ ಖರ್ಚಾಗುತ್ತೆ.”
“ನಾನು ಕೊಡ್ತೀನಿ. ಬೇಕಾದ್ರೆ ಫ್ಲ್ಯಾಟು, ಅಂಗಡಿ, ಹೆಂಡತಿ ಒಡವೆಗಳನ್ನು ಮಾರಿದ್ರೂ ಪರವಾಗಿಲ್ಲ,” ತಂದೆ ಹೇಳಿದರು.
“ಇದನ್ನೇ ಕೇಸ್ ಅನ್ನೋದು. ಜನರು ಮನೆಗಳನ್ನು ಮಾರಿಬಿಡ್ತಾರೆ. ನಾನು ನಿಮ್ಮನ್ನು, ನಿಮ್ಮ ಮಾನವನ್ನು ಉಳಿಸ್ತೀನಿ. ಈಗ ನೀವು ನಿಮ್ಮ ಮನೆ ಫ್ಲ್ಯಾಟ್‌ನ್ನು ಕೇಸ್ ಹೋರಾಡಲು ಮಾರುತ್ತೀರೋ ಅಥವಾ ನಿಮಗೆ ನ್ಯಾಯ ಸಿಗಲಿ ಅಂತಾನೋ?” ಲಾಯರ್ ಕುಟಿಲತೆಯಿಂದ ಹೇಳಿದ.
ಇತ್ತ ಹೆಣ್ಣಿನವರು ಲಾಯರ್ ಹೀಗೆ ಹೇಳಿದ, “ಒಂದು ವೇಳೆ ಕವಿತಾ ಕೋರ್ಟ್‌ನಲ್ಲಿ ವರದಕ್ಷಿಣೆಗಾಗಿ ನನಗೆ ಹೊಡೆದು ಹಿಂಸೆ ಕೊಟ್ರೂಂತ ಹೇಳಿದರೆ ಎಲ್ಲರಿಗೂ ಶಿಕ್ಷೆಯಾಗುತ್ತೆ. ಒಂದು ವೇಳೆ ಹೊಡೆಯಲಿಲ್ಲ ಅಂದರೆ ನಮಗೆ ತೊಂದರೆ ಆಗಬಹುದು.”
“ಅಮ್ಮಾ, ಅವರು ತಲೆ ತಗ್ಗಿಸಿ ಕ್ಷಮೆ ಕೇಳಿ ನನ್ನನ್ನು ಕರೆದುಕೊಂಡು ಹೋಗ್ತಾರೇಂತ ನೀವು ಹೇಳಿದ್ರಿ. ಒಂದು ವೇಳೆ ಅವರಿಗೆ ಶಿಕ್ಷೆಯಾದರೆ ನನ್ನ ಸಂಸಾರ, ನನ್ನ ಬದುಕು ಏನಾಗುತ್ತೆ?” ಕವಿತಾ ತಾಯಿಗೆ ಕೇಳಿದಳು.
ಕವಿತಾಳ ತಾಯಿ ಲಾಯರ್‌ಗೆ ಹೇಳಿದರು, “ಏನಾದ್ರೂ ಮಾಡಿ. ಕವಿತಾ ಮತ್ತು ಅವಳ ಗಂಡ ಬೇರೆಯಾಗಿ ಇರಬೇಕು. ಗಂಡನಿಗೆ ಶಿಕ್ಷೆ ಆದರೆ ಅವಳ ಮನೆ ಹಾಳಾಗುತ್ತೆ.”
ಆಗ ಲಾಯರ್ ಕೋಪದಿಂದ ಹೇಳಿದರು, “ಇವೆಲ್ಲಾ ಪೊಲೀಸ್ ಸ್ಟೇಷನ್, ಕೋರ್ಟ್‌ಗೆ ಹೋಗುವ ಮೊದಲು ಯೋಚಿಸ್ಬೇಕಾಗಿತ್ತು. ಬರೀ ಅವರನ್ನು ಬಗ್ಗಿಸೋದು ಸಾಕು ಅಂದಿದ್ರೆ ಪೊಲೀಸ್ ಠಾಣೇಲಿ ಬುದ್ಧಿ ಹೇಳಿ ಕೇಸ್ ವಾಪಸ್‌ತಗೋಬಹುದಿತ್ತು.
“ಒಂದು ವೇಳೆ ಕವಿತಾ ಅವರಿಗೇ ಸಪೋರ್ಟ್ ಮಾಡಿ ಅವರಿಗೆ ಬಿಡುಗಡೆಯಾಗಿದ್ದಿದ್ರೆ ಆಗ ಅವರು ಕವಿತಾನ ಇಟ್ಕೋತಿದ್ರಾ? ಅವರು ಸ್ಟೇಷನ್ನು, ಜೈಲಿಗೆಲ್ಲಾ ಹೋಗಿ ಬಂದಿದ್ದಾರೆ. ಈಗೇನು ಹೆದರ್ಕೋತಾರೆ? ಒಂದು ವೇಳೆ ನಿಜವಾಗಿಯೂ ಹುಡುಗಿಗೆ ವರದಕ್ಷಿಣೆಗಾಗಿ ಪೀಡಿಸಿ ಹೊಡೆದಿದ್ರೆ ವರದಕ್ಷಿಣೆ ಆ್ಯಕ್ಟ್ ಓ.ಕೆ. ಬರೀ ಹೆದರಿಸಬೇಕೆಂದಿದ್ರೆ ಪೊಲೀಸ್ ಸ್ಟೇಷನ್‌ಗೆ ಹೋದರೆ ಸಾಕು.
“ಅದಕ್ಕಿಂತ ಮುಂದೆ ಹೋದ್ರೆ ಅದರ ಅರ್ಥ ನಮ್ಮ ಕೈಯಾರೆ ಹುಡುಗಿಯ ಸಂಸಾರ ಹಾಳು ಮಾಡಿದಂತೆ. ಈಗ ಇರೋದು ಒಂದೇ ಉಪಾಯ. ಕವಿತಾ ಗಂಡ ವಿಕ್ರಮ್ ನೊಂದಿಗೆ ಮಾತಾಡಿ, ನಾನು ನಿಮ್ಮ ಕಡೆ ಸಪೋರ್ಟ್ ಮಾಡ್ತೀನಿ. ಆದರೆ ನೀನು ನನ್ನ ಜೊತೆ ಪ್ರತ್ಯೇಕವಾಗಿರಬೇಕು, ಎಂದು ಹೇಳಬೇಕು.”
ಇದಲ್ಲದೆ ಬೇರಾವುದೇ ಉಪಾಯವಿರಲಿಲ್ಲ. ಆದ್ದರಿಂದ ಕವಿತಾ ಲಾಯರ್ ಹೇಳಿಕೊಟ್ಟಂತೆ ಮೊಬೈಲ್‌ನಲ್ಲಿ ವಿಕ್ರಮ್ ನೊಂದಿಗೆ ಮಾತಾಡಿದಳು. ಆದರೆ ವಿಕ್ರಮ್ ಕೋಪದಿಂದ ನಿನ್ನ ಮೂರ್ಖತನದಿಂದಾಗಿ ನಾವು ಹಾಳಾಗಿದ್ದೇವೆ. ಈಗ ನಿನ್ನ ಜೊತೆ ಇರೋದಂತೂ ಮುಗಿದೇಹೋಯ್ತು. ನಿನ್ನ ಮುಖ ನೋಡೋಕೂ ಇಷ್ಟ ಇಲ್ಲ. ಏನಾಗುತ್ತೋ ಫೇಸ್ ಮಾಡ್ತೀವಿ ಎಂದು ಹೇಳಿ ಫೋನ್ ಇಟ್ಟುಬಿಟ್ಟ.
“ಈಗ ಕವಿತಾ ಇಷ್ಟು ಮಾಡಲಿ. ಆ ಲಾಯರ್ ಪ್ರಶ್ನಿಸಿದಾಗ ಮನಸ್ಸಿಗೆ ತೋಚಿದಂತೆ ಉತ್ತರಿಸಲಿ. ಒಂದು ಪ್ರಶ್ನೆಗೆ ಒಮ್ಮೆ `ಹೌದು’ ಎಂದು ಉತ್ತರಿಸಿದರೆ ಇನ್ನೊಮ್ಮೆ `ಇಲ್ಲ’ ಅನ್ನಲಿ. ಅದರಿಂದ ತಾನೂ ಉಳಿದುಕೊಳ್ಳಬಹುದು. ತಮ್ಮನ್ನು ಉಳಿಸಲು ಕವಿತಾ ಹೀಗೆ ಮಾಡುತ್ತಿದ್ದಾಳೆಂದು ಅವರಿಗೂ ಅನಿಸುತ್ತದೆ,” ಲಾಯರ್ ಹೇಳಿದರು.
ಒಂದು ಕಡೆ ಕೃಷ್ಣ ಪ್ರಸಾದ್ ಪಿತ್ರಾರ್ಜಿತವಾಗಿ ಬಂದಿದ್ದ ಮನೆಯನ್ನು ಬಂದಷ್ಟು ಬೆಲೆಗೆ ಮಾರಿ ಲಾಯರ್‌ಗೆ ಫೀಸ್ ಕೊಟ್ಟರು. ಹೀಗೆ ಘೋರ ಅವಮಾನ, ಕಳಂಕದೊಂದಿಗೆ ಇದ್ದ ಮನೆಯನ್ನೂ ಮಾರಿಕೊಂಡು ಯಾರಿಗೂ ಮುಖ ತೋರಿಸದೆ ರಾತ್ರೋರಾತ್ರಿ ಮನೆ ಖಾಲಿ ಮಾಡಿ ತಮಗೆ ಯಾರೂ ಗುರುತು ಪರಿಚಯವಿಲ್ಲದ ಊರಿಗೆ ಹೊರಟುಹೋದರು.
ಅವರು ಹೀಗೆ ಮಾಡಿದ್ದು ತಮ್ಮ ಮಗಳು ಶ್ರೀದೇವಿಯ ಮದುವೆಯಲ್ಲಿ ವರದಕ್ಷಿಣೆ ಆ್ಯಕ್ಟ್ ನ ಯಾವುದೇ ಕರಿನೆರಳು ಬೀಳಬಾರದೆಂದು. ಇದಲ್ಲದೆ ವಿಕ್ರಮ್ ಡೈವೋರ್ಸ್ ನೋಟೀಸ್ ಕಳಿಸಿದ. ಅವನು ಅವಳಿಗೆ ಫೋನ್ ಮಾಡಿ ಒಂದು ವೇಳೆ ನನ್ನ ಜೊತೆ ಇದ್ದರೆ ಖಂಡಿತವಾಗಿಯೂ ನಿನ್ನನ್ನು ಸುಟ್ಟು ಸಾಯಿಸಿಬಿಡ್ತೀನಿ. ಸೆಕ್ಷನ್ 302ರ ಪ್ರಕಾರ ಗಲ್ಲಿಗೇರಿಸಿದರೂ ಪರವಾಗಿಲ್ಲ. ಕನಿಷ್ಠ ಪಕ್ಷ ನಾನ್ಬೊನೇ ಜೈಲಿಗೆ ಹೋಗ್ತೀನಿ. ಸತ್ತರೆ ನಾನೊಬ್ಬನೇ ಸಾಯ್ತೀನಿ. ನಿನ್ನಂಥವಳಿಂದಾಗಿ ವರದಕ್ಷಿಣೆ ಕಾನೂನಿನಲ್ಲಿ ಮುಗ್ಧಳಾದ ನನ್ನ ತಂಗಿಯ ಜೀವನ ಹಾಳಾಗಲ್ಲ. ನಿರಪರಾಧಿಯಾದ ನನ್ನ ತಮ್ಮ ನನ್ನಿಂದಾಗಿ ಜೈಲಿಗೆ ಹೋಗಬೇಕಾಗಿಲ್ಲ. ವಯಸ್ಸಾದ ನನ್ನ ತಂದೆ ತಾಯಿ ಈ ವಯಸ್ಸಿನಲ್ಲಿ ತಮ್ಮ ಪಿತ್ರಾರ್ಜಿತ ಮನೇನ ಮಾರಿ ಯಾರಿಗೂ ಮುಖ ತೋರಿಸದೆ ಊರು ಬಿಟ್ಟು ಹೋಗಬೇಕಾಗಿಲ್ಲ ಎಂದು ಹೇಳಿದ.
ಇತ್ತ ಕವಿತಾಳೂ ತನ್ನ ಕೈಯಾರೆ ತನ್ನ ಕಾಲ ಮೇಲೆ ಕೊಡಲಿ ಹಾಕಿಕೊಂಡೆನೆಂದು ಯೋಚಿಸುತ್ತಿದ್ದಳು. ಗಂಡ ಹಾಗೂ ಅತ್ತೆಯ ಮನೆಯವರನ್ನು ಜೈಲಿಗೆ ಕಳಿಸಿದಂಥವಳನ್ನು ಯಾರು ತಾನೆ ಸ್ವೀಕರಿಸುತ್ತಾರೆ? ಈಗಂತೂ ಅವಳ ವಿಚ್ಛೇದನವಾಗಿದೆ. ಈಗ ಅವಳೊಂದಿಗೆ ಯಾರು ಮದುವೆಯಾಗುತ್ತಾರೆ, ಏಕೆ ಮದುವೆಯಾಗುತ್ತಾರೆ? ಅವಳಿಗೆ ಏನಾಗಬಹುದು? ಸುಶಿಕ್ಷಿತಳಾಗಿದ್ದೂ ಸಹ ಅಶಿಕ್ಷಿತರಿಗಿಂತ ಕಡೆಯಾದಳು. ಸಂಬಂಧಂತೂ ಪ್ರೀತಿ, ವಿಶ್ವಾಸ, ತ್ಯಾಗ, ಸಹನಶೀಲತೆಯಿಂದ ಹುಟ್ಟುತ್ತದೆ. ಅವಳಂತೂ ಬೆದರಿಕೆ ಹಾಗೂ ಒತ್ತಡ ಹಾಕುವುದರಲ್ಲಿ ಮುಳುಗಿ ಎಲ್ಲವನ್ನೂ ಕೊನೆಗಾಣಿಸಿಬಿಟ್ಟಳು.
ಕವಿತಾ ಹಲವಾರು ಬಾರಿ ತಾಯಿಯೊಂದಿಗೆ, “ಅಮ್ಮಾ, ನೀನು ಹಾಗಾಗುತ್ತೆ, ಹೀಗಾಗುತ್ತೆ ಅಂತ ಹೇಳ್ತಿದ್ದೆ. ಈಗ ನಿನ್ನ ಮಾತು ಕೇಳಿ ಹೀಗಾಯ್ತು,” ಎಂದಾಗ ಅಮ್ಮ ಅವಳನ್ನೇ ಬೈಯುತ್ತಾ, “ಕವಿತಾ, ನೀನೇನೂ ಹಾಲು ಕುಡಿಯೋ ಮಗು ಅಲ್ಲ. ಓದಿದೋಳು. ನಾವಂತೂ ನಿನ್ನ ಮದುವೆ ಮಾಡಿ ನಮ್ಮ ಜವಾಬ್ದಾರಿ ಮುಗಿಸಿದ್ವಿ. ನೀನು ಆಗಾಗ ಫೋನ್ ಮಾಡಿ ಅತ್ಕೊಂಡು ನಿನ್ನ ಕಷ್ಟ ಹೇಳಿಕೊಂಡರೆ ನಾವೇನು ಮಾಡೋದು? ತಪ್ಪು ನಿನ್ನದೇ.
“ನಿನ್ನ ಮನೆಯ ಸಣ್ಣಪುಟ್ಟ ವಿಚಾರಗಳನ್ನು ನಮಗೆ ಹೇಳಬಾರದಿತ್ತು. ಅಡ್ಜ,ಟ್ ಮಾಡ್ಕೊಂಡು ಹೋಗಬೇಕಿತ್ತು. ನೀನು ಗೋಳಾಡಿದಾಗ ವರದಕ್ಷಿಣೆ ಹಿಂಸೆ ಕೊಟ್ಟು ನಿನ್ನನ್ನು ಸಾಯಿಸಿ ಬಿಡ್ತಾರೇನೋ ಅನ್ನಿಸ್ತು. ನಾವು ಬದುಕಿರೋವರ್ಗೂ ನಿನ್ನನ್ನು ಸಾಕ್ತೀವಿ. ನೀನು ಓದಿದ್ದೀಯಾ ಹೊತ್ತು ಹೋಗೋಕೆ ಯಾವುದಾದ್ರೂ ಪ್ರೈವೇಟ್ ಸ್ಕೂಲಿಗೆ ಸೇರ್ಕೊ. ನಮಗೂ ವಯಸ್ಸಾಯ್ತು. ಇನ್ನೆಷ್ಟು ದಿನ ಬದುಕಿರ್ತೀವಿ?” ಎಂದರು.
ಅಮ್ಮ ಹೇಳಿದ್ದು ಕೇಳಿ ಕವಿತಾಳ ಮಾತು ನಿಂತುಹೋಯ್ತು. ವರದಕ್ಷಿಣೆ ಆ್ಯಕ್ಟ್ ನಲ್ಲಿ ತಪ್ಪಾಗಿ ಸಿಲುಕಿಸಿದ್ದಕ್ಕೆ ವಿಕ್ರಮ್ ಗೆ ವಿಚ್ಛೇದನ ಸಿಕ್ಕಿತು. ಕವಿತಾ ಯಾವ ಬಾಯಲ್ಲಿ ತಾನೆ ಜೀವನಾಂಶ ಕೇಳುತ್ತಾಳೆ? ಗಂಡ ಮತ್ತು ಅತ್ತೆಯ ಮನೆಯವರನ್ನು ಎದುರಿಸುವ ಧೈರ್ಯ ಅವಳಿಗಿರಲಿಲ್ಲ.
ಹಲವು ವರ್ಷಗಳು ಕಳೆದವು. ಕವಿತಾಳ ಅಣ್ಣನ ಮದುವೆಯಾಯಿತು. ಅಣ್ಣ ಅತ್ತಿಗೆಗೆ ಅವಳನ್ನು ಕಂಡರೆ ಬೇಸರ ಉಂಟಾಗುತ್ತಿತ್ತು. ಅವಳ ತಂದೆ ತಾಯಿ ವೃದ್ಧರಾಗಿ ಅಸಹಾಯಕರಾಗಿದ್ದರು.
ಮನೆಯಲ್ಲಿ ಅತ್ತಿಗೆಯದೇ ರಾಜ್ಯಭಾರ. ಕವಿತಾ ಒಂದು ಖಾಸಗಿ ಶಾಲೆಯಲ್ಲಿ ಟೀಚರ್ ಆಗಿದ್ದಳು. ಸ್ಕೂಲ್ ನಿಂದ ಮನೆಗೆ ಬಂದ ನಂತರ ಅತ್ತಿಗೆ ಮನೆಯ ಹತ್ತು ಹಲವು ಕೆಲಸಗಳನ್ನು ಮಾಡಲು ಹೇಳುತ್ತಿದ್ದಳು. ಒಂದು ದಿನ ಕವಿತಾ ಅತ್ತಿಗೆಯ ರೂಮಿಗೆ ಕಾಫಿ ತೆಗೆದುಕೊಂಡು ಹೋದಳು. ಬಾಗಿಲನ್ನು ತಟ್ಟುವಷ್ಟರಲ್ಲಿ ಅಣ್ಣನ ಧ್ವನಿ ಕೇಳಿತು, “ಕವಿತಾದೊಂದು ಮದುವೆ ಆಗಿಬಿಟ್ರೆ ಒಂದು ಭಾರ ತಪ್ಪಿದಂಗೆ.”
ಅತ್ತಿಗೆ ಹೇಳಿದಳು, “ಬಿದ್ದಿರಲಿ ಬಿಡಿ. ಬಿಟ್ಟಿಯಾಗಿ ಕೆಲಸದವಳು ಎಲ್ಲಿ ಸಿಗ್ತಾಳೆ. ತನ್ನ ಖರ್ಚಿಗೆ ಸಂಪಾದಿಸಿಕೊಳ್ತಾಳೆ. ಮನೆಕೆಲಸಾನೂ ಮಾಡ್ತಾಳೆ.”
ಕವಿತಾ ಕಣ್ಣೀರು ಸುರಿಸುತ್ತಾ ಹಿಂತಿರುಗಿದಳು. ಹೂ ಅರಳುವ ಮೊದಲೇ ಒಣಗಿದಂತಾಯಿತು. ಅಪ್ಪ ಅಮ್ಮನಿಗೆ ತಮ್ಮ ತಪ್ಪು ಅರಿವಾಗಿತ್ತು. ಆದರೆ ಈಗ ಏನು ಮಾಡಬಹುದು? ಒಂದು ದಿನ ರಾಧಮ್ಮನನ್ನು ಮನೆಗೆ ಕರೆದು ಕವಿತಾಳ ಅಪ್ಪ ಅಮ್ಮ ಕೇಳಿದರು, “ಕವಿತಾಗೆ ಹೊಂದುವಂಥ ಯಾರಾದರೂ ಹುಡುಗರು ನಿಮಗೆ ಗೊತ್ತಿದೆಯೇ?”
“ನೋಡಿ, ನಾನು ನೇರವಾಗಿ ಹೇಳಿಬಿಡ್ತೀನಿ. ಈಗ ಅವಳಿಗೆ ಒಳ್ಳೆ ಕೆಲಸದಲ್ಲಿರೋನು, ತರುಣ ಗಂಡ ಸಿಗೋದಿಲ್ಲ. ಹಾಂ. ಒಬ್ಬ ಇದ್ದಾನೆ. ಅವನ ಹೆಂಡತಿ ಕಾಯಿಲೆ ಬಂದು ಸತ್ತುಹೋಗಿದ್ದಾಳೆ. ಅವನಿಗೆ ಒಂದು ಮಗು ಇದೆ. ಯಾವುದೋ ಅಂಗಡೀಲಿ ಕೆಲಸ ಮಾಡ್ತಿದ್ದಾನೆ. ನಿಮಗೆ ಸರಿ ಅನ್ನಿಸಿದ್ರೆ ಮಾತಾಡ್ತೀನಿ. ಸ್ವಲ್ಪ ವರದಕ್ಷಿಣೆ ಕೊಟ್ಟರೆ ಕೆಲಸ ಆಗಬಹುದು,” ರಾಧಮ್ಮ ಹೇಳಿದರು.
“ಮಾತಾಡಿ ನೋಡಿ. ನಮ್ಮ ಕೈಯಲ್ಲಿ ಆಗಿದ್ದು ಕೊಡ್ತೀವಿ,” ವೃದ್ಧ ತಂದೆ ಹೇಳಿದರು.
ಇದೆಲ್ಲವನ್ನೂ ಕೇಳಿದಾಗ ಕವಿತಾಳ ಕಣ್ಣಿನಿಂದ ನೀರು ಸುರಿಯತೊಡಗಿತು.