ಕಥೆ - ಪವಿತ್ರಾ ಪ್ರಮೋದ್
60-70ರ ದಶಕದಲ್ಲಿ ವರದಕ್ಷಿಣೆ ಕೊಡಲಿಲ್ಲವೆಂದು ಸೊಸೆಯಂದಿರನ್ನು ಸುಡಲಾಗುತ್ತಿತ್ತು. ಪ್ರತಿಯೊಂದು ಪೇಪರ್, ರೇಡಿಯೋದಲ್ಲೂ ಇದೇ ಸುದ್ದಿ. ಇತ್ತ ಮದುವೆ ಆಯ್ತು. ಅತ್ತ ಸೊಸೆಯನ್ನು ಸುಡಲಾಯಿತು. ಅದು ಯುವಕನಾದ ಮಗ ಅಪ್ಪ ಅಮ್ಮನಿಗಾಗಿ ತಿಜೋರಿ ತುಂಬಿಸುವ ಕೆಲಸ ಮಾಡುತ್ತಿದ್ದ ಕಾಲ. ಅತ್ತೆ ಮಾವ ಒಂದು ಲಕ್ಷ, 2 ಲಕ್ಷ ರೂ. ವರದಕ್ಷಿಣೆ ತರಲಿಲ್ಲವೆಂದು ಸೊಸೆಯಂದಿರನ್ನು ಸುಡಲು ಬೆಂಕಿಪೊಟ್ಟಣ ಹಿಡಿದು ನಿಂತಿರುತ್ತಿದ್ದರು. ತಾವು ಬಚಾವಾಗಲು ಮನೆಯ ಸ್ಟವ್ ನ್ನು ಪ್ರಮುಖ ಅಸ್ತ್ರವಾಗಿ ಮಾಡಿಕೊಂಡಿದ್ದರು. ಪ್ರತಿ ಏರಿಯಾಗಳಿಂದ 3-4 ಚೀತ್ಕಾರಗಳು ಹೊರಬರುತ್ತಿದ್ದವು ಹಾಗೂ ಸೊಸೆ ಉರಿದು ಸಾಯುತ್ತಿದ್ದಾಗ ಸೊಸೆಗೆ ಸ್ಟವ್ ನೊಂದಿಗೆ ವಿಶೇಷ ಶತ್ರುತ್ವ ಇದೆ ಅನಿಸುತ್ತಿತ್ತು. ಪೊಲೀಸ್ ಠಾಣೆಯಲ್ಲಿ ಸ್ಟವ್ ಬರ್ಸ್ಟ್ ಆಯ್ತು. ಅದಕ್ಕೆ ಸೊಸೆ ಸತ್ತಳು ಎಂದು ರಿಪೋರ್ಟ್ ಬರೆಸಲಾಗುತ್ತಿತ್ತು. ನಂತರ ಇನ್ನೊಂದು ಮದುವೆ, ಮತ್ತೆ ವರದಕ್ಷಿಣೆ.
ಆಗ ದೇಶದ ಪರಿಸ್ಥಿತಿ ಬದಲಾಗುತ್ತಿತ್ತು. ಬೆಲೆ ಏರಿಕೆಯಾಗುತ್ತಿತ್ತು. ಜನ ಹಣದ ಮಹತ್ವ ಅರಿಯುತ್ತಿದ್ದರು. ಹಳ್ಳಿಗಳಿಂದ ಜನ ನಗರಕ್ಕೆ ವಲಸೆ ಬರುತ್ತಿದ್ದರು. ನಗರಗಳಿಂದ ಮಹಾನಗರಗಳಿಗೆ ಹೋಗುತ್ತಿದ್ದರು. ಕೆಲವರು ವರದಕ್ಷಿಣೆಯನ್ನು ಸಂಪಾದನೆಯ ಸಾಧನವಾಗಿ ಮಾಡಿಕೊಂಡಿದ್ದರು. ಆ ಕಾಲದಲ್ಲಿ ಹುಡುಗಿಯ ವಿವಾಹ ಮುರಿದುಬೀಳುವುದು, ಮದುವೆಯಾದ ಹುಡುಗಿ ತವರುಮನೆಯಲ್ಲಿ ಉಳಿಯುವುದು ತಪ್ಪೆಂದು ತಿಳಿಯಲಾಗುತ್ತಿತ್ತು. ಮದುವೆ ಮುರಿದುಬೀಳುವುದೆಂದರೆ ಜೀವನವೇ ಮುರಿದುಹೋದಂತೆ ಎನ್ನಲಾಗುತ್ತಿತ್ತು.
ವರನ ಕಡೆಯವರು ವರದಕ್ಷಿಣೆ ಎಂದು ಉದ್ದದ ಲಿಸ್ಟ್ ಕೊಡುವುದು ತಮ್ಮ ಅಧಿಕಾರವೆಂದು ತಿಳಿಯುತ್ತಿದ್ದರು. ನೀನು ಹೆಣ್ಣು ಮಗುವಿಗೆ ಜನ್ಮಕೊಟ್ಟು ಪಾಪ ಮಾಡಿದೆ, ಈಗ ಪ್ರಾಯಶ್ಚಿತ್ತ ಮಾಡ್ಕೋ. ಹೆಚ್ಚು ವರದಕ್ಷಿಣೆ ಕೊಡು. ಹುಡುಗಿಯ ತಂದೆ ಸಾಲ ಮಾಡಿ ವರದಕ್ಷಿಣೆಯ ವಸ್ತುಗಳನ್ನು ಹೊಂದಿಸುತ್ತಿದ್ದರು. ಮಗಳನ್ನು ಬೀಳ್ಕೊಡುವವರೆಗೆ ಮದುವೆ ಕಾರ್ಯಕ್ರಮಗಳು ಚೆನ್ನಾಗಿ ನಡೆದರೆ ಸಾಕು ಅನ್ನಿಸುತ್ತಿತ್ತು. ಗಂಡಿನವರ ಮೆರವಣಿಗೆ ಕಂಡಾಗ ಕಳ್ಳರ ಗುಂಪು ಬಂದಂತಾಗುತ್ತಿತ್ತು.
`ಗಂಡಿನವರು ಬಂದರು, ಗಂಡಿನವರು ಬಂದರು,' ಎಂಬ ಕೂಗು ಕೇಳಿದ ಕೂಡಲೇ ಹುಡುಗಿಯ ತಂದೆ ತಾಯಿ, ಅಣ್ಣ ಕೈ ಮುಗಿದು, ಭಯದಿಂದ ಜೀ ಹುಜೂರ್ ಭಂಗಿಯಲ್ಲಿ ನಿಂತಿರುತ್ತಿದ್ದರು. ನಿರ್ಧರಿಸಿದ ವರದಕ್ಷಿಣೆ ಕೊಟ್ಟ ನಂತರ ಹುಡುಗನ ಕಡೆಯ ಯಾರಾದರೂ ಬಂಧುಗಳು ಹಟ ಮಾಡಿ ಮದುವೆ ನಿಲ್ಲಿಸುವಲ್ಲಿ ಸಮರ್ಥರಾಗಿರುತ್ತಿದ್ದರು. ಉದಾಹರಣೆಗೆ ಊಟ ಚೆನ್ನಾಗಿಲ್ಲ, ಅರೇಂಜ್‌ಮೆಂಟ್ ಸರಿಯಿಲ್ಲ, ನಮಗೆ ಅವಮಾನ ಆಗ್ತಿದೆ ಇತ್ಯಾದಿ. ಹುಡುಗಿಯ ಕಡೆಯವರು ಕೈ ಜೋಡಿಸಿ ಅವರನ್ನು ಸಂತೈಸುತ್ತಿರುತ್ತಿದ್ದರು.
ಸಮಯ ನೋಡಿಕೊಂಡು ಹುಡುಗನ ಕಡೆಯವರು ಯಾವುದಾದರೂ ವಿಶೇಷ ವರದಕ್ಷಿಣೆ ಕೇಳಿ ಹುಡುಗಿಯ ತಂದೆಗೆ ಈ ಮದುವೆ ನಡೆಯುವುದಿಲ್ಲ ಎನ್ನುತ್ತಿದ್ದರು. ಉದಾ : ಮೋಟರ್ ಬೈಕ್ ಕೊಡಿಸಿ ಇಲ್ಲಾಂದ್ರೆ ನಾವು ವಾಪಸ್ ಹೋಗುತ್ತೇವೆ ಎನ್ನುತ್ತಿದ್ದರು. ಆಗ ಹುಡುಗಿಯ ತಾಯಿಗೆ ಲಕ್ವಾ ಹೊಡೆದಂತಾಗುತ್ತಿತ್ತು. ಹುಡುಗಿಯ ಅಣ್ಣ ಮೂಗನಂತಾಗುತ್ತಿದ್ದ. ಹುಡುಗಿಯ ತಂದೆ ತನ್ನ ಪೇಟವನ್ನು ಹುಡುಗನ ತಂದೆಯ ಕಾಲುಗಳಡಿ ಇಟ್ಟು, ತಮ್ಮ ಗೌರವದ ಭಿಕ್ಷೆ ಬೇಡುತ್ತಿದ್ದರು. ಎಲ್ಲಿಂದಲೋ ಹಣ, ಚಿನ್ನದ ವ್ಯವಸ್ಥೆ ಮಾಡಿದ ಬಳಿಕ ಎಲ್ಲ ಶಾಂತವಾಗಿ ಮದುವೆ ನಡೆಯುತ್ತಿತ್ತು.