ಕಥೆ – ಸುನೀತಾ ಶೆಟ್ಟಿ
ಸರಿಯಾದ ಸಮಯಕ್ಕೆ ಅಂದರೆ ಬೆಳಗ್ಗೆ 6 ಗಂಟೆಗೆ ಅಲಾರಂ ಹೊಡೆಯಿತು. ನಾನು ಎಂದಿನಂತೆ ಸೋಮಾರಿತನದಿಂದ ಹಾಸಿಗೆ ಬಿಟ್ಟು ಏಳಲಿಲ್ಲ. 6 ವರ್ಷಗಳ ಬಳಿಕ ಹಳೆಯ ಗೆಳತಿ ಪೂರ್ಣಿಮಾಳೊಂದಿಗೆ ನಿನ್ನೆ ಭೇಟಿಯಾದದ್ದು ನನ್ನಲ್ಲಿ ಹೀಗೆ ಬದಲಾಗುವ ಉತ್ಸಾಹ ಹಾಗೂ ಸಾಮರ್ಥ್ಯ ತುಂಬಿತ್ತು.
ಮಗ ರಜತ್‌ನ ನಿದ್ದೆಗೆ ಭಂಗ ತರದೆ ನಾನು ಪಕ್ಕಕ್ಕೆ ಹೊರಳಿ ಕಿರಣ್ ಕಿವಿಯಲ್ಲಿ ರೊಮ್ಯಾಂಟಿಕ್ ಧ್ವನಿಯಲ್ಲಿ ಹೇಳಿದೆ, “ಗುಡ್‌ಮಾರ್ನಿಂಗ್ ಮೈ ಲವ್. ರಾತ್ರಿ ನನಗೆ ವಿಚಿತ್ರ ಕನಸು ಬಿತ್ತು. ಹೇಳ್ಲಾ?”
“ಮೊದಲು ಕಾಫಿ ಕೊಡು,” ಅವರು ನನ್ನತ್ತ ತಿರುಗುತ್ತಾ ಹೇಳಿದರು.
“ಕಾಫಿ ಬದಲು ಇದರ ರುಚಿ ನೋಡಿ,” ನಾನು ಅವರ ತುಟಿಗಳ ಮೇಲೆ ಚುಂಬಿಸಿದಾಗ, ಅವರು ಕೂಡಲೇ ಕಣ್ಣುಬಿಟ್ಟರು.
ಅವರು ನನ್ನನ್ನು ತೋಳುಗಳಿಂದ ಬಂಧಿಸಿ ಆಶ್ಚರ್ಯದಿಂದ ಹೇಳಿದರು, “ಇವತ್ತೇನು ಒಳ್ಳೆ ಮೂಡ್‌ನಲ್ಲಿದ್ದೀಯ. ಇವತ್ತು ನೀರು ತುಂಬಿಸೋ ಕೆಲಸ ಇಲ್ವಾ?”
“ಸರಿ, ನನ್ನ ಜೊತೆ ಇರೋದು ನಿಮಗಿಷ್ಟವಿಲ್ಲ ಅನ್ನಿಸುತ್ತೆ. ನಾನು ಹೋಗ್ತೀನಿ,” ನನ್ನನ್ನು ಬಿಡಿಸಿಕೊಳ್ಳುವ ಪ್ರಯತ್ನ ಮಾಡದೆ ನಾನು ಹುಸಿ ಕೋಪ ತೋರಿದೆ.
“ನಿನಗಿರೋ ಒಳ್ಳೆ ಮೂಡ್‌ನ ಲಾಭ ಪಡೆಯೋದೇ ಇರೋಕಾಗುತ್ತಾ? ಅದ್ಹೇಗೆ ಸಾಧ್ಯ?” ಅವರು ನನ್ನನ್ನು ಜೋರಾಗಿ ತಮ್ಮತ್ತ ಎಳೆದುಕೊಂಡಾಗ ನಾನು ಮನದಲ್ಲೇ ನನ್ನ ಬೆನ್ನು ತಟ್ಟಿಕೊಂಡೆ.
“ಸ್ವಲ್ಪ ಹೊತ್ತು ನಿಮ್ಮ ಕೈಗಳನ್ನು ನಿಯಂತ್ರದಲ್ಲಿಟ್ಟುಕೊಳ್ಳಿ. ಮೊದಲು ನನ್ನ ಕನಸಿನ ಬಗ್ಗೆ ಕೇಳಿ.”
“ಹೇಳು,” ಅವರು ತುಂಟತನದಿಂದ ನಗುತ್ತಿರುವುದನ್ನು ಬಹಳ ದಿನಗಳ ಬಳಿಕ ನೋಡಿದ್ದೆ.
“ಕನಸಿನಲ್ಲಿ ನಾನು ಸತ್ತುಹೋಗಿದ್ದೆ.”
“ಛೇ, ಯಾವುದಾದರೂ ಮನಸ್ಸಿಗೆ ಸಂತೋಷ ಕೊಡುವ ಕನಸಿನ ಬಗ್ಗೆ ಹೇಳು.”
“ಇಲ್ಲಿ ಕೇಳಿ. ಸತ್ತಿದ್ದ ನಾನು ಮತ್ತೆ ಬದುಕಿದೆ. ಏಕೆಂದರೆ ನನ್ನೊಳಗೆ ಒಂದು ಆತ್ಮ ಪ್ರವೇಶಿಸಿತ್ತು. ಅದು ಯಾರದೂಂತ ಗೊತ್ತಾ?”
“ಯಾರದು?”
“ಮಧು ಬಾಲಾದ್ದು.”
“ಮೊಗಲ್ ಎ ಆಜಂ ಚಿತ್ರದ ಮಧುಬಾಲಾದಾ?”
“ಹೌದು. `ಮೊಗಲ್ ಎ ಆಜಂ’ನ ಮಧುಬಾಲಾ ನನ್ನಲ್ಲಿ ಬಂದು, ನಳಿನಿ, ನಿನ್ನ ಜೀವನ ಬಹಳ ಶುಷ್ಕವಾಗಿದೆ. ಇನ್ನು ಮೇಲೆ ನಾನು ನಿನ್ನ ಜೀವನದ ಗಾಡಿ ಸಂಭಾಳಿಸುತ್ತೇನೆ. ಆಮೇಲೆ ನೋಡು ನಿನ್ನ ಜೀವನ ಎಷ್ಟು ಮೋಜಿನಿಂದ ಕೂಡಿರುತ್ತದೇಂತ,” ಎಂದಳು.
“ಆಗಲೇ ನನಗೆ ಎಚ್ಚರಾಯಿತು. ಗಡಿಯಾರದಲ್ಲಿ 4 ಗಂಟೆ ತೋರಿಸುತ್ತಿತ್ತು. ಆ ಕನಸು ನಿಜವೆಂದು ನನಗೆ ಅನ್ನಿಸುತ್ತದೆ. ಏಕೆಂದರೆ ನಾನು ನಿಜವಾಗಿಯೂ ಅಂತರಂಗದಲ್ಲಿ ಬದಲಾದಂತೆ ಅನುಭವವಾಗುತ್ತಿದೆ,” ನಾನು ಮಾದಕ ದೃಷ್ಟಿಯಿಂದ ಅವರನ್ನು ನೋಡಿದಾಗ ಅವರ ತುಟಿಗಳಲ್ಲಿ ಮುಗುಳ್ನಗೆ ಮೂಡಿತ್ತು.
“ನಾನು ಮಧುಬಾಲಾಳ ದೊಡ್ಡ ಫ್ಯಾನ್ ಕಣೇ. ಇನ್ನು ಮುಂದೆ ನೀನು ಆತ್ಮವನ್ನು ಅತ್ತಿತ್ತ ಹೋಗಲು ಬಿಡಬೇಡ,” ಅವರ ಉಸಿರಾಟ ವೇಗವಾದಾಗ ನಾನು ಥಟ್ಟನೆ ಅವರ ಹಿಡಿತದಿಂದ ನನ್ನನ್ನು ಬಿಡಿಸಿಕೊಂಡು ಮಂಚದಿಂದ ಕೆಳಗೆ ದುಮುಕಿದೆ.
“ನನ್ನನ್ನು ಹೀಗೆ ಗೋಳಾಡಿಸಬೇಡ ಮದುಭಾಲಾ,” ಅವರು ತಮ್ಮ ಕೈಗಳನ್ನು ಅಗಲಿಸಿ ನನ್ನನ್ನು ಆಹ್ವಾನಿಸಿದರು.
“ಮೊದಲು ಕೆಲಸ. ಆಮೇಲೆ ಮೋಜು,” ನಾನು ಒಯ್ಯಾರದಿಂದ ಅವರತ್ತ ಒಂದು ಫ್ಲೈಯಿಂಗ್ ಕಿಸ್ ತೂರಿ ಅಡುಗೆಮನೆಗೆ ಓಡಿದೆ.
ಪೂರ್ಣಿಮಾ ಹೇಳಿದ ಒಂದು ಮಾತು ನನ್ನ ಮನಸ್ಸಿನಲ್ಲಿ ಈಗಲೂ ಗುಂಯ್‌ಗುಟ್ಟುತ್ತಿತ್ತು. ಪುರುಷ ತನ್ನ ಹೆಂಡತಿಯ ಮೇಲೆ ಸಾಧಿಸುವ ಹಕ್ಕನ್ನು ಪ್ರೇಯಸಿಯ ಮೇಲೆ ತೋರಿಸಲಾಗುವುದಿಲ್ಲ. ಹೀಗಾಗಿ ಅವನು ಪ್ರೇಯಸಿಯನ್ನು ಖುಷಿಯಾಗಿಡಲು, ಅವಳ ಮೂಡ್‌ನ್ನು ಸರಿಯಾಗಿಡಲು ಬಹಳಷ್ಟು ಪ್ರಯತ್ನಿಸುತ್ತಾನೆ. ಆದರೆ ಇನ್ನೊಂದು ಕಡೆ ಅಸಹಾಯಕ ಪತ್ನಿಯನ್ನು ಗಂಡ ಇಷ್ಟ ಬಂದಾಗೆಲ್ಲಾ ತನ್ನ ಇಚ್ಛಾಪೂರ್ತಿಗೆ ಬಳಸಿಕೊಳ್ಳುತ್ತಾನೆ. ಆಗಲೇ ಅವರ ಮಧ್ಯೆ ನಿಧಾನವಾಗಿ ರೊಮ್ಯಾನ್ಸ್ ಮಾಯವಾಗುತ್ತದೆ. ಸೆಕ್ಸ್ ಯಾಂತ್ರಿಕವಾಗುತ್ತದೆ.
ಕಿರಣ್‌ರ ಉತ್ತೇಜನ ನನ್ನ ಮನಸ್ಸಿಗೂ ಕಚಗುಳಿ ಇಟ್ಟಂತಾಗಿತ್ತು. ಆದರೆ ನಾನಂತೂ ಬದಲಾಗಲು ದೃಢವಾಗಿ ನಿರ್ಧರಿಸಿದ್ದೆ. ನನ್ನ ವೈವಾಹಿಕ ಜೀವನದಲ್ಲಿ ರೊಮ್ಯಾನ್ಸ್ ಮತ್ತೆ ಪಡೆಯಲೇಬೇಕಿತ್ತು. ಆದ್ದರಿಂದ ನನ್ನ ಭಾವನೆಗಳನ್ನು ನಿಯಂತ್ರಿಸಿಕೊಂಡು ಅವರನ್ನು ಕಾಡಿಸುವುದು ಬಿಟ್ಟು ಅಡುಗೆಮನೆಗೆ ಓಡಿಬಂದಿದ್ದೆ.
“ಕಾಫಿ ರೆಡಿ,” ನಾನು 15 ನಿಮಿಷಗಳ ನಂತರ ಅವರನ್ನು ಕರೆದೆ.
“ಇಲ್ಲೇ ತಂದು ಕೊಡು,” ಅವರು ಹೇಳಿದರು.
“ಸಾರಿ. ಇವತ್ತು ಬಾಲ್ಕನಿಯಲ್ಲಿ ಕೂತು ಕಾಫಿ ಕುಡಿಯೋಣ. ಹೊರಗಿನ ವಾತಾವರಣ ಕೂಡ ಚೆನ್ನಾಗಿದೆ.”
“ಪ್ಲೀಸ್, ಭಾನುವಾರ ಹಾಸಿಗೆ ಬಿಟ್ಟು ಏಳೀಂತ ಹೇಳಬೇಡ. ನಾಳೆ ಬಾಲ್ಕನೀಲಿ ಕೂತು ಕಾಫಿ ಕುಡಿಯೋಣ.”
“ನನ್ನ ಖುಷಿಗೋಸ್ಕರ ಅಷ್ಟೂ ಮಾಡಕ್ಕಾಗಲ್ವಾ ನಿಮಗೆ?”
ನಾನು ಕೋಣೆಯಲ್ಲಿ ಬಗ್ಗಿ ನೋಡಿ ಮಾದಕತೆಯಿಂದ ನಕ್ಕಾಗ ನನ್ನವರು ನನ್ನ ಹಿಂದೆ ಹಿಂದೆಯೇ ಬಾಲ್ಕನಿಗೆ ಓಡಿಬಂದರು.
ಸ್ವಲ್ಪ ಹೊತ್ತಿನ ನಂತರ ನಾನು ಟಿಫಿನ್ ಏನು ಮಾಡಲಿ ಎಂದು ಕೇಳಿದಾಗ ದೋಸೆ, ಚಟ್ನಿ ಮಾಡು ಎಂದರು.
ನಾನು ನಗುತ್ತಾ, “ಆಯ್ತು. ನಿಮಗೆ ಇಷ್ಟವಾದ ದೋಸೆ, ಚಟ್ನೀನೇ ಮಾಡಿಕೊಡ್ತೀನಿ. ಆದರೆ ಒಂದು ಷರತ್ತು,” ಎಂದೆ.
ಅವರು ಕೂಡ ಪ್ರೀತಿಯಿಂದ, “ಏನದು?” ಎಂದರು.
“ತಿಂಡಿ ಮಾಡುವಾಗ ನೀವು ನನಗೆ ಸಹಾಯ ಮಾಡಬೇಕು.”
“ಓ.ಕೆ.”
“ಆದರೆ….”
“ಏನು ಆದರೆ?”
“ಅಡುಗೆ ಮನೇಲಿ ಬರೀ ಪಪ್ಪಿ ಕೊಡೋಕೆ ಮಾತ್ರ ಪರ್ಮೀಶನ್ ಇದೆ. ಅದಕ್ಕಿಂತ ಹೆಚ್ಚಾಗಿ ಬೇರೇನೂ ಅವಾಂತರ ಮಾಡಬಾರದು ಗೊತ್ತಾ?”
“ಈ ತರಹ ಪಪ್ಪಿ ತಾನೇ….” ಎನ್ನುತ್ತಾ ಅವರು ನನಗೆ ಬಿಡಿಸಿಕೊಳ್ಳಲು ಅವಕಾಶ ಕೊಡದೆ ನನ್ನ ಅಧರಾಮೃತನ್ನು ಮನಸಾರೆ ಹೀರಿದರು.
“ನಿಮ್ಮ ತುಂಟಾಟಗಳನ್ನು ಕಂಟ್ರೋಲ್ ಮಾಡೋಕೆ ನನಗೊಂದು ಐಡಿಯಾ ಬಂದಿದೆ,” ಅವರನ್ನು ಅಪ್ಪಿಕೊಂಡು ಹೇಳಿದೆ,
“ಇವತ್ತು ನಿಮಗೆ ದೋಸೆ, ಚಟ್ನಿ ಮಾಡೋದು ಹೇಳಿಕೊಡ್ತೀನಿ ಸರೀನಾ?”
“ಹೇಳಿಕೊಡುವಾಗ ಬೈಯಲ್ಲ ತಾನೇ?”
“ಇಲ್ಲ. ಆದ್ರೆ ನೀವು ಸರಿಯಾಗಿ ಕಲಿತ್ಕೋಬೇಕು. ಅಷ್ಟೆ”
“ನನ್ನಂಥ ಶಿಷ್ಯ ನಿನಗೆ ಹುಡುಕಿದ್ರೂ ಸಿಗಲ್ಲ. ನನ್ನ ಮಧುಬಾಲಾ,” ಅವರು ಮತ್ತೆ ಬಾಯಿ ಸಿಹಿ ಮಾಡಿಕೊಳ್ಳಲು ಇಚ್ಛಿಸಿದರು. ಆದರೆ ನಾನು ಓಡಿ ಬಾಲ್ಕನಿಗೆ ಬಂದೆ.
ದೋಸೆ ಚಟ್ನಿ ಮಾಡುವ ಕೆಲಸ ನನ್ನ ಮೇಲೇ ಹೆಚ್ಚಾಗಿ ಬಿತ್ತು. ಕಿರಣ್ ನನ್ನ ಪಕ್ಕದಲ್ಲೇ ಇದ್ದರು. ಅಂದು ಅವರು ನನ್ನ ಬಳಿ ಇದ್ದಷ್ಟು ಹೊತ್ತು ಇಡೀ ವಾರದಲ್ಲಿ ಮಾತಾಡಲಾಗದಷ್ಟು ಮಾತಾಡಿದರು.
“ಪ್ರೇಯಸಿ ಬಳಿ ಇದ್ದಾಗ ಪುರುಷನ ಹೃದಯ ಮಿಡಿಯುತ್ತದೆ. ಏಕೆಂದರೆ ಅವನಿಗೆ ಆಲಿಸುವ ಕಲೆ ಬಂದಿರುತ್ತದೆ. ಆದರೆ ಪತಿ ಪತ್ನಿ ಪರಸ್ಪರರ ಮಾತುಗಳನ್ನು ಗಮನವಿಟ್ಟು ಎಲ್ಲಿ ಕೇಳುತ್ತಾರೆ? ನನ್ನ ಮಾತನ್ನು ಅವರು/ಅವಳು ಕೇಳೋದಿಲ್ಲ ಅಂತ ಇಬ್ಬರೂ ದೂರುತ್ತಿರುತ್ತಾರೆ.”
ಪೂರ್ಣಿಮಾಳ ಈ ಮಾತನ್ನು ಗಮನದಲ್ಲಿಟ್ಟುಕೊಂಡು ನಾನು ಕಿರಣ್‌ರ ಪ್ರತಿ ಮಾತನ್ನೂ ಗಮನವಿಟ್ಟು ಕೇಳುತ್ತಿದ್ದೆ, ನಾನು ಕಡಿಮೆ ಮಾತಾಡಿ ಅವರಿಗೆ ಹೆಚ್ಚು ಮಾತಾಡುವ ಅವಕಾಶ ಕೊಡುತ್ತಿದ್ದೆ.
ಎಲ್ಲಕ್ಕಿಂತ ಹೆಚ್ಚಿನ ಮೋಜಿನ ಸಂಗತಿ ಎಂದರೆ ಅವರು ನನ್ನ ಪಕ್ಕದಲ್ಲೇ ನಿಂತು ಬಿಸಿಬಿಸಿ ದೋಸೆ ತಿಂದರು. ಅವರ ಹೊಗಳಿಕೆಯ ನುಡಿಗಳನ್ನು ಕೇಳಿ ಸಂತಸದಿಂದ ನನ್ನ ಮೈ ಉಬ್ಬಿತು. ಅವರು ಪ್ರೀತಿಯಿಂದ ತಮ್ಮ ಕೈಯಿಂದ ನನಗೆ ದೋಸೆ ತಿನ್ನಿಸಿದಾಗ ನಾನು ವಿಜಯೀಭಾವದಿಂದ ಮುಗುಳ್ನಕ್ಕೆ.
ನನ್ನ ಬದಲಾದ ರೂಪ ಅವರನ್ನು ಸಂಪೂರ್ಣವಾಗಿ ನನ್ನ ಸೆರೆಯಾಳಾಗಿ ಮಾಡಿಬಿಟ್ಟಿತು. ಅವರು ನನ್ನನ್ನು ಎತ್ತಿಕೊಂಡು ಬೆಡ್ ರೂಮಿಗೆ ನುಗ್ಗುತ್ತಿದ್ದರೇನೋ. ಆದರೆ ನಾನು ಬಹಳ ಚಾಲಾಕಿತನದಿಂದ, ತಿಳಿವಳಿಕೆಯಿಂದ ಅವರನ್ನು ಯಾವುದಾದರೂ ಕೆಲಸದಲ್ಲಿ ಸಿಲುಕಿಸುತ್ತಿದ್ದೆ.
ಅವರ ಕಣ್ಣುಗಳಲ್ಲಿ ನನ್ನ ಬಗೆಗಿನ ಗಾಢ ಬಯಕೆಗಳನ್ನು ಕಂಡು ನಾನು ಮನದಲ್ಲೇ ಪೂರ್ಣಿಮಾಗೆ ಅನೇಕ ಬಾರಿ ಧನ್ಯವಾದ ಅರ್ಪಿಸಿದೆ.
ಕಾಲೇಜು ದಿನಗಳಲ್ಲಿ ಪೂರ್ಣಿಮಾ ನನ್ನ ನೆಚ್ಚಿನ ಗೆಳತಿಯಾಗಿದ್ದಳು. ಅವಳು ಇದ್ದಕ್ಕಿದ್ದಂತೆ ನನ್ನನ್ನು ನೋಡಲು ಮನೆಗೆ ಬಂದಳು. ಸುಮಾರು 6 ವರ್ಷಗಳ ಬಳಿಕ ನಮ್ಮ ಭೇಟಿ ಆಗುತ್ತಲಿತ್ತು.
ಈ 6 ವರ್ಷಗಳಲ್ಲಿ ನನ್ನ ಬದುಕಿನಲ್ಲಿ ಬಹಳಷ್ಟು ಬದಲಾವಣೆಗಳಾದ. ಕಿರಣ್‌ರೊಂದಿಗೆ 4 ವರ್ಷಗಳ ಹಿಂದೆ ನನ್ನ ಮದುವೆಯಾಗಿತ್ತು. ಮಗ ರಜತ್‌ಗೆ 2 ವರ್ಷ. ನನ್ನ ಮನೆಯ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಸಾಕಷ್ಟು ಕುಶಲಳೆಂದು ನಾನು ಭಾವಿಸಿದ್ದೇನೆ.
ಆದರೆ ಪೂರ್ಣಿಮಾಳಂತೂ ಇದುವರೆಗೂ ಮದುವೆಯೇ ಆಗಿರಲಿಲ್ಲ.
“ಪೂರ್ಣಿಮಾ, ನಿನಗೆ 30 ತುಂಬಿತು. ಈಗಲಾದರೂ ನೀನು ಸಂಸಾರಸ್ಥಳಾಗಿ….”
“ಏಯ್, ನಾನು 30 ವರ್ಷದವಳಂತೆ ಕಾಣ್ತೀನೇನೇ?” ಅವಳು ಮಾಡೆಲ್ ನಂತೆ ಆಕರ್ಷಕ ಪೋಸ್ ಕೊಟ್ಟು ಕಿಲಕಿಲನೆ ನಕ್ಕಳು.
“ಖಂಡಿತಾ ಕಾಣಲ್ಲ. ನಿಜ ಹೇಳಬೇಕೂಂದ್ರೆ ನೀನು ಕಾಲೇಜಿನಲ್ಲಿದ್ದಾಗಿಂತ ಈಗ ಹೆಚ್ಚು ಸುಂದರವಾಗಿ ಕಾಣ್ತಿದ್ದೀಯ. ಆದರೆ ಮದುವೆ….”
“ನಾನು ಮದುವೆ ಆಗಿಲ್ಲ. ಅದಕ್ಕೇ ನನ್ನ ಬಣ್ಣ, ರೂಪ ಮತ್ತು ಸೆಕ್ಸ್ ಆಪೀಲ್ ಇಂದಿಗೂ ಹಾಗೇ ಇದೆ ನಳಿನಿ. ನಾನು ಮದುವೆ ಬಗ್ಗೆ ಯಾವಾಗಲೂ ಏನು ಹೇಳ್ತಿದ್ದೆ?”
“ಅದೇ, ಯಾರಿಗಾದರೂ ಹೆಂಡತಿಯಾಗಿರೋದಕ್ಕಿಂತ ಪ್ರೇಯಸಿಯಾಗಿರೋದು ಒಳ್ಳೇದು ಅಂತ ಹೇಳ್ತಿದ್ದೆ.”
“ಹೌದು. ನಾನು ಅದೇ ದಾರೀಲಿ ಸಂತೋಷವಾಗಿ ಹೋಗ್ತಿದ್ದೀನಿ. ನಾನು ಇಲ್ಲಿಗೆ ಬಂದ ನಂತರ ನನ್ನ ಹಳೆಯ ಗೆಳತಿಯರನ್ನು ಭೇಟಿ ಮಾಡಿದ್ದೆ. ಅವರೆಲ್ಲಾ ಸಂಸಾರದ ಜಂಜಾಟಗಳಲ್ಲಿ ಮುಳುಗಿ ತತ್ತರಿಸಿದ್ದಾರೆ. ಅವರ ಬಣ್ಣ, ರೂಪಗಳೂ ಮೊದಲಿನಂತಿಲ್ಲ. ಯಾವುದಾದರೂ ಕಾಯಿಲೆಯಿಂದ ನರಳದೆ ಇರೋರು ಒಬ್ಬರಾದರೂ ಸಿಗಲಿಲ್ಲ.”
“ನೀನು ಹೇಳೋದೆಲ್ಲಾ ಸರಿ. ಆದರೆ ಮದುವೆ ಸುರಕ್ಷತೆಯ ಅನುಭವ ಕೊಡುತ್ತೆ. ಸಂಗಾತಿಯೊಂದಿಗೆ ಸುಖ ದುಃಖ ಹಂಚಿಕೊಂಡು ಬದುಕಿನ ಸವಾಲುಗಳನ್ನು ಎದುರಿಸುತ್ತಾ ಹೋಗುವುದು ಸುಖತ್ತಾಗಿರುತ್ತದೆ ಪೂರ್ಣಿಮಾ. ನನ್ನ ಮಗನನ್ನು ನೋಡಿದಾಗ ನನ್ನ ಹೃದಯ ಹೂವಿನಂತೆ ಅರಳುತ್ತದೆ. ನಾನು ಮದುವೇನೇ ಮಾಡಿಕೊಳ್ಳದೇ ಇದ್ದಿದ್ದರೆ ಅವನು ನನ್ನ ಬದುಕಿನಲ್ಲಿ ಹೇಗೆ ಬರುತ್ತಿದ್ದ?”
“ವಿವಾಹಿತ ಮಹಿಳೆಯ ಬದುಕಿನ ಸವಾಲುಗಳ ಬಗ್ಗೆ ಬೇಡ. ಅವಳ ಚಿಂತೆಗಳು, ಜಂಜಾಟಗಳು ಮತ್ತು ಕಷ್ಟಗಳ ಬಗ್ಗೆ ಮಾತಾಡು. ನಾನು ಮದುವೆ ಮಾಡಿಕೊಳ್ಳಬಾರದು ಎಂದು ಡಿಸೈಡ್ ಮಾಡಿ ಇವೆಲ್ಲವುಗಳ ಬೇರನ್ನೇ ಕತ್ತರಿಸಿ ಹಾಕಿದ್ದೇನೆ. ಇನ್ನು ಮಗುವಿಗೆ ತಾಯಾಗುವ ಬಗ್ಗೆ ಕೊಂಚ ಕಣ್ಣು ಬಿಟ್ಟು ನಾಲ್ಕೂ ಕಡೆ ನೋಡು. ಇಂದಿನ ಮಕ್ಕಳು ಅಪ್ಪ ಅಮ್ಮನ ಬಗ್ಗೆ ಒಂದು ಗುಲಗಂಜಿಯಷ್ಟಾದ್ರೂ ಯೋಚನೆ ಮಾಡೋದನ್ನು ನಾನೆಲ್ಲೂ ಕಂಡಿಲ್ಲ.”
“ನಿನಗೆ ಇಡೀ ಜೀವನ ಏಕಾಂಗಿಯಾಗಿ ಕಳೆಯೋದು ಕಷ್ಟ ಆಗಲ್ವಾ ಪೂರ್ಣಿಮಾ?”
“ನಾನು ಬಹಳ ದೂರ ಯೋಚಿಸಲ್ಲ ನಳಿನಿ. ಅಂದಹಾಗೆ ನನ್ನ ಲವರ್ ನಾನು ಹೆಜ್ಜೆ ಊರುವ ಜಾಗವನ್ನೆಲ್ಲಾ ಮುತ್ತಿಕ್ಕಿ ನಡೆಯುತ್ತಾನೆ. ನಾನಂತೂ ಬದುಕಿನ ಪೂರ್ಣ ಮೋಜು ಪಡೆಯುತ್ತಿದ್ದೇನೆ. ನಿನ್ನದು ಹೇಗೆ ನಡೀತಿದೆ ಹೇಳು. ಮದುವೆಗೆ ಮೊದಲು ಕಂಡಿದ್ದ ಕನಸುಗಳು ನನಸಾಗುತ್ತಿದೆಯೋ ಇಲ್ವೋ?”
ಪೂರ್ಣಿಮಾ ಸುಮಾರು 3 ಗಂಟೆ ನನ್ನ ಜೊತೆಯಲ್ಲೇ ಇದ್ದಳು. ಅವಳು ನನ್ನ ವಿಷಯ ಕೇಳಿದ್ದು ಕಡಿಮೆ. ತನ್ನ ವಿಷಯವನ್ನು ಹೇಳಿದ್ದೇ ಜಾಸ್ತಿ. ಇದುವರೆಗೆ ಅವಳು 4 ಸೀರಿಯಸ್ ಅಫೇರ್‌ಗಳನ್ನು ಇಟ್ಟುಕೊಂಡಿದ್ದಳು. ಆದರೆ ಹಳೆಯ ಪ್ರೇಮದ ನೆನಪುಗಳು ಅವಳ ಮನಸ್ಸಿನಲ್ಲಿ ಒಂದು ಚೂರಾದರೂ ಚುಚ್ಚುತ್ತಿರಲಿಲ್ಲ. ತನ್ನ ಫಿಗರ್ ಹಾಗೂ ಸೌಂದರ್ಯವನ್ನು ಖಾಯಮ್ಮಾಗಿ ಇಟ್ಟುಕೊಂಡಿದ್ದಳು. ಅವಳ ಬಳಿ ಫ್ಲ್ಯಾಟ್, ಒಡವೆ, ಕಾರು ಇತ್ಯಾದಿ ವೈಭವಗಳನ್ನು ತೋರಿಸುವ ವಸ್ತುಗಳೂ ಇದ್ದವು.
ಅವಳನ್ನು ಕಳಿಸಿದ ನಂತರ ನನ್ನ ಮನಸ್ಸು ಭಾರವಾಗಿತ್ತು. ಅವಳ ಬದುಕನ್ನೂ ನನ್ನ ಬದುಕನ್ನೂ ಹೋಲಿಕೆ ಮಾಡಿಕೊಂಡೆ.
ನನಗೆ ಬಹಳಷ್ಟು ಆಯಾಸವಾಗಿದ್ದರೂ ಅಂದು ರಾತ್ರಿ ನಿದ್ದೆ ಬೇಗ ಬರಲಿಲ್ಲ. ಪೂರ್ಣಿಮಾಳ ಅತ್ಯಂತ ಸುಂದರ ಶರೀರ ಹಾಗೂ ಹೊಳೆಯುವ ಮುಖ ಕಣ್ಮುಂದೆ ಬರುತ್ತಿತ್ತು. ತನ್ನ ಹಳೆಯ ಹಾಗೂ ಹೊಸ ಪ್ರೇಮಿಗಳ ಬಗ್ಗೆ ಅವಳು ನನಗೆ ಅನೇಕ ವಿಷಯಗಳನ್ನು ಹೇಳಿದ್ದಳು. ಪೂರ್ಣಿಮಾಳ ಬದುಕಿನಲ್ಲಿ ಮೋಜು, ಸಂತೋಷಕ್ಕೇನೂ ಕೊರತೆ ಇರಲಿಲ್ಲ.
ಅವಳನ್ನು ಭೇಟಿಯಾಗುವ ಮೊದಲು ನನಗೆ ನನ್ನ ವೈವಾಹಿಕ ಜೀವನದಲ್ಲಿ ನಿಜವಾಗಿಯೂ ಯಾವುದೇ ದೂರುಗಳಿರಲಿಲ್ಲ. ಆದರೆ ಈಗ ಅವಳ ಚಿನಕುರಳಿಯಂತಹ ಮಾತುಗಳನ್ನು ಕೇಳಿ ನನ್ನ ಜೀವನದಲ್ಲಿ ಬಹಳಷ್ಟು ವಸ್ತುಗಳನ್ನು ಕಳೆದುಕೊಂಡೆ ಅನ್ನಿಸುತ್ತಿತ್ತು.
ಅಂದು ರಾತ್ರಿ ಆ ಕೊರತೆಗಳನ್ನೆಲ್ಲಾ ದೂರ ಮಾಡಿಕೊಳ್ಳಲು ಮನಸಾರೆ ಪ್ರಯತ್ನಿಸುವ ನಿರ್ಧಾರ ಕೈಗೊಳ್ಳುವವರೆಗೆ ನನಗೆ ನಿದ್ದೆ ಬರಲಿಲ್ಲ. ಬೆಳಗ್ಗೆ ಅಲಾರಂ ಹೊಡೆದಾಗ ನಾನು ಕಣ್ಣುಬಿಟ್ಟೆ. ಆಗಲೇ ಹೊಸ ರೀತಿಯಲ್ಲಿ ಬದುಕು ಉತ್ಸಾಹ ಹಾಗೂ ಹುಮ್ಮಸ್ಸು ತುಂಬಿ ತುಳುಕಾಡುತ್ತಿತ್ತು. ಟಿಫಿನ್ ತಿನ್ನುವ ಸಮಯ ಬಹಳ ಸೊಗಸಾಗಿ ಕಳೆದಿತ್ತು. ಸಂತಸದಿಂದ ತುಂಬಿದ್ದ ನಾನು ಕಿರಣ್‌ಗೆ ಅಂಟಿಕೊಂಡಿದ್ದೆ.
“ಈಗ ಸ್ವಲ್ಪ ಹೊತ್ತು ಮಲಗೋಣ,” ಎಂದರು. ತಿಂಡಿ ತಿಂದ ನಂತರ ನನ್ನನ್ನು ಬೆಡ್ ರೂಮಿಗೆ ಕರೆದೊಯ್ಯುವುದು ಬಿಟ್ಟು ಇವರಿಗೆ ಬೇರೇನೂ ತೋಚುತ್ತಿರಲಿಲ್ಲ.
“ಈಗ ಆಗಲ್ಲ. ಸ್ವಲ್ಪ ಹೊತ್ತು ಪೇಪರ್ ಓದಿ. ಆಮೇಲೆ ಸ್ನಾನ ಮಾಡಿ ರೆಡಿಯಾಗಿ,” ನಾನು ಗಟ್ಟಿಯಾಗಿ ಸೋಫಾದಲ್ಲಿ ಕೂಡದೇ ಇದ್ದಿದ್ದರೆ ಇವರು ಖಂಡಿತ ತಮ್ಮ ಪ್ರಯತ್ನದಲ್ಲಿ ಸಫಲರಾಗಿರುತ್ತಿದ್ದರು.
“ಸ್ನಾನವೆಲ್ಲಾ ಸಾಯಂಕಾಲಕ್ಕೆ,” ಅವರು ಹುಸಿಕೋಪದಿಂದ ಹೇಳಿದರು.
“ಸ್ನಾನ ಮಾಡಲಿಲ್ಲಾಂದ್ರೆ ಟ್ರೀಟ್ ಸಿಗಲ್ಲ.”
“ಯಾರು ಟ್ರೀಟ್ ಕೊಡಿಸ್ತಿರೋದು?”
“ನಾನು.”
“ಕಾರಣ?”
“ಟ್ರೀಟ್ ಕೊಡಿಸೋಕೆ ಕಾರಣ ಬೇರೆ ಬೇಕಾ?”
“ಕಾರಣ ಬೇಡ. ಆದರೆ….”
“ಆದರೆ ಗೀದರೆ ಬೇಡ. ಈಗ ಸ್ನಾನಕ್ಕೆ ಹೋಗಿ. ಜೊತೆಗೆ ರಜತ್‌ನನ್ನೂ ಕರ್ಕೊಂಡು ಹೋಗಿ,” ನಾನು ಅವರನ್ನು ಬಚ್ಚಲು ಮನೆಯವರೆಗೂ ತಳ್ಳಿಕೊಂಡು ಹೋದೆ.
“ನೀನೂ ಬಾ ಜೊತೆಗೆ.”
“ರಾತ್ರಿಗೆ,” ನಾನು ಒಯ್ಯಾರದಿಂದ ಹೇಳಿ ಅಡುಗೆಮನೆಗೆ ಹೋದೆ.
ಪೂರ್ಣಿಮಾಳ ಈ ಮಾತುಗಳು ಕೂಡ ನನಗೆ ನೆನಪಾಗುತ್ತಿದ್ದವು, “ಬಣ್ಣ ಬಣ್ಣದ, ಮನಮೋಹಕ ಕನಸುಗಳನ್ನು ಕಾಣುವ ಹಾಗೂ ತೋರಿಸುವ ಗುಣಗಳು ಪ್ರೇಯಸಿಯಿಂದ ಸಿಗುತ್ತವೆ. ನಳಿನಿ, ಪತ್ನಿಯಾದವಳಿಗೆ ವೈವಾಹಿಕ ಬದುಕಿನಲ್ಲಿ ಎಂದೂ ಮುಗಿಯದ ಜಂಜಾಟಗಳಿಂದಾಗಿ ಕನಸು ಕಾಣುವ ಅವಕಾಶವೇ ಸಿಗುವುದಿಲ್ಲ. ಅವರಲ್ಲಿ ಮನೆಯವರ ಸಂತೋಷ ಕಾಣುವ ಇಚ್ಛೆ ಬರುತ್ತದೆ. ಕನಸು ಕಾಣುವುದಿಲ್ಲ. ಯಾರ ಬಳಿ ಕನಸುಗಳೇ ಇಲ್ಲವೋ ಅವರು ಅದನ್ನು ನನಸಾಗಿಸಿಕೊಳ್ಳುವಲ್ಲಿ ಸಿಗುವ ಆನಂದ ಹೇಗೆ ಪಡೆಯುತ್ತಾರೆ?”
ಅವಳ ಮಾತಿನ ಮಹತ್ವ ಅದೇ ಕ್ಷಣದಲ್ಲಿ ನನಗೆ ಅರ್ಥವಾಗಿತ್ತು. ಆದ್ದರಿಂದಲೇ ಇಂದು ಬೆಳಗ್ಗೆಯಿಂದ ನಾನು ಹೆಂಡತಿಯಾಗಿದ್ದೂ ಪ್ರೇಯಸಿಯ ಪಾತ್ರ ನಿರ್ವಹಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೆ.
ಅಂದು ನಾನು ಜೀನ್ಸ್ ಮತ್ತು ಟಾಪ್ ಧರಿಸಿ ಕಿರಣ್‌ರೊಂದಿಗೆ ಸುತ್ತಾಡಲು ಹೊರಟೆ. ನಾವು ಒಳ್ಳೆಯ ಹೋಟೆಲ್‌ನಲ್ಲಿ ಊಟ ಮಾಡಿದೆ, ನಂತರ ನಾನು ಅವರಿಗೆ ಇಷ್ಟವಾದ ಸ್ವೆಟರ್ ಕೊಡಿಸಿದೆ. ಸ್ವಲ್ಪ ಚಳಿ ಅನ್ನಿಸಿದರೂ ಐಸ್ ಕ್ರೀಂ ತಿಂದೆ.
ನಂತರ ನಾವು ಪಾರ್ಕ್‌ನಲ್ಲಿ ಸುತ್ತಾಡಿದೆ. ರಜತ್‌ನೊಂದಿಗೆ ಮಕ್ಕಳಾಗಿ ಆಟವಾಡಿದೆ. ಸಂಸಾರದ ಯಾವುದೇ ತಾಪತ್ರಯಗಳನ್ನು ನಾನಾಗಲೀ ಕಿರಣ್ ಆಗಲೀ ಚರ್ಚಿಸಲಿಲ್ಲ.
“ನಮಗೆ ರೆಕ್ಕೆಗಳು ಇದ್ದಿದ್ದರೆ ಆಕಾಶದಲ್ಲಿ ಹಕ್ಕಿಗಳಂತೆ ಹಾರಾಡುತ್ತಿರಬಹುದಾಗಿತ್ತು. ಫಾರಿನ್‌ಗೆ ಹೋಗಿದ್ದರೆ ಯಾವುದಾದರೂ ಬೀಚ್‌ನಲ್ಲಿ ಬೆತ್ತಲೆಯಾಗಿ ಮಲಗಿ ಬಿಸಿಲಿನ ಆನಂದ ಪಡೆಯಬಹುದಿತ್ತು. ರಸ್ತೆಗಳಲ್ಲಿ ಮೋಟರ್ ಬೈಕ್ ಬದಲು ಅರಬ್ಬಿ ಕುದುರೆಗಳ ಮೇಲೆ ಕೂತು ಸವಾರಿ ಮಾಡ್ತಿದ್ರೆ ಎಷ್ಟು ಮಜಾ ಇರ್ತಿತ್ತು,” ನನ್ನ ಕಲ್ಪನಾಶಕ್ತಿಗೆ ನಿಯಂತ್ರಣ ಹಾಕದೆ ಹೇಳುತ್ತಿದ್ದೆ.
ನನ್ನ ಬದುಕಿನ ಅತ್ಯಂತ ಅಮೂಲ್ಯವಾದ ಹಾಗೂ ಸುಂದರವಾದ ದಿನ ಅತ್ಯಂತ ವೈಭಪೂರ್ಣವಾಗಿ ಮುಗಿಯಿತು. ರಾತ್ರಿ ಸುಮಾರು 9 ಗಂಟೆಗೆ ನಾವು ಮನೆ ತಲುಪಿದೆವು. ಸುಸ್ತಾಗಿದ್ದರಿಂದ ರಜತ್ ಬೇಗ ಮಲಗಿಬಿಟ್ಟ.
ನನ್ನನ್ನು ನೋಡುತ್ತಿದ್ದ ಕಿರಣ್‌ರ ಕಣ್ಣುಗಳಲ್ಲಿ ಉತ್ತೇಜನದ ಭಾವನೆ ಹೆಚ್ಚಾಗುತ್ತಿತ್ತು.
“ನಿನ್ನ ಪ್ರಾಮಿಸ್ ಜ್ಞಾಪಕ ಇದೆ ತಾನೇ?” ಅವರು ನನ್ನನ್ನು ತೋಳುಗಳಲ್ಲಿ ಬಂಧಿಸುತ್ತಾ ಕೇಳಿದರು.
“ಒಟ್ಟಿಗೆ ಸ್ನಾನ ಮಾಡೋದಾ?” ನಾನು ಒಯ್ಯಾರದಿಂದ ಮುಗುಳ್ನಕ್ಕೆ.
“ಹೌದು.”
“ನಾನು ಮಾತು ಕೊಟ್ಟು ಮರೆಯೋದಾಗಲೀ, ಮುರಿಯೋದಾಗಲೀ ಮಾಡಲ್ಲ.”
“ಈ ಬದಲಾವಣೆಯೆಲ್ಲಾ ಮಧುಬಾಲಾಳಿಂದಾಗಿ ಆಗಿರೋದು,” ಅವರು ಜೋರಾಗಿ ನಗತೊಡಗಿದರು.
“ಹೌದು ನನ್ನ ರಾಜ.”
“ಹಾಗಾದರೆ ಸ್ನಾನಕ್ಕೆ ಹೋಗೋಣ್ವಾ?”
“ನಿಮ್ಮ ಅಪ್ಪಣೆಯಂತೆ ಆಗಲಿ ಪ್ರಭು,” ಎಂದು ನಾನು ನನ್ನ ತೋಳುಗಳನ್ನು ಅಗಲಿಸಿದೆ. ನನ್ನ ಇಚ್ಛೆಯನ್ನು ಅರಿತು ಕಿರಣ್‌ನನ್ನನ್ನು ಎತ್ತಿಕೊಂಡು ಬಚ್ಚಲು ಮನೆಯತ್ತ ಹೆಜ್ಜೆ ಹಾಕಿದರು.
ಮುಂದೆ ಏನು ನಡೆಯಿತೆಂದು ಶಬ್ದಗಳಲ್ಲಿ ವರ್ಣಿಸುವುದು ಅಸಾಧ್ಯ. ಅಮಲೇರಿಸಿದ ಆ ರಾತ್ರಿ ನಮ್ಮಿಬ್ಬರಿಗೂ ಒಂದು ಸ್ಮರಣೀಯ ರಾತ್ರಿಯಾಯಿತು.
ಆ ರಾತ್ರಿಯ ಸಫಲತೆ ನನ್ನೊಳಗೆ ಆಗುತ್ತಿರುವ ಬದಲಾವಣೆಯ ಬೇರುಗಳನ್ನು ಸಾಕಷ್ಟು ದೃಢಗೊಳಿಸಿತು. ನಾನು ಹೆಂಡತಿ ಹಾಗೂ ಪ್ರೇಯಸಿಯಾಗಿ ನನ್ನ ಮನದಲ್ಲಿ ನೆಲೆಸಿರುವ ಎಲ್ಲ ವರ್ಣರಂಜಿತ ಕನಸುಗಳನ್ನು ಸಾಕಾರಗೊಳಿಸುತ್ತೇನೆ. ನನ್ನ ಈ ಸಂಕಲ್ಪವನ್ನು ಜೀವನವಿಡೀ ಮುರಿಯುವುದಿಲ್ಲ.