ಶಾಲಿನಿ ಅಗ್ನಿಹೋತ್ರಿ ಐಪಿಎಸ್ ಅಧಿಕಾರಿ

ಮನದಲ್ಲಿ ದೃಢವಿಶ್ವಾಸ, ಜೀವನದಲ್ಲಿ ಭಾರಿ ಶಿಸ್ತು, ನಡವಳಿಕೆಯಲ್ಲಿ ಸಂಯಮ, ಸದಾ ತಮ್ಮ ಗುರಿಯ ಮೇಲೆ ಕಣ್ಣಿಟ್ಟಿರುವ, ಅಪಾರ ಪರಿಶ್ರಮದ ಫಲವಾಗಿ ಹಿಮಾಚಲ ಪ್ರದೇಶದ ಊನಾ ಜಿಲ್ಲೆಯ ಕುಗ್ರಾಮ ಟಠ್ಠ್‌ನ ಒಂದು ಸಾಧಾರಣ ಪರಿವಾರದ ಹುಡುಗಿ ಐಪಿಎಸ್ ಅಧಿಕಾರಿ ಶಾಲಿನಿ ಅಗ್ನಿಹೋತ್ರಿ, ಇಂದಿನ ಯುವತಿಯರಿಗೆ ವಿಶೇಷ ಪ್ರೇರಣಾದಾಯಕ ವ್ಯಕ್ತಿ ಆಗಿದ್ದಾರೆ.

ಮನಸ್ಸಿದ್ದರೆ ಮಾರ್ಗ

ಶಾಲಿನಿಯ ತಂದೆ ರಮೇಶ್‌ ಅಗ್ನಿಹೋತ್ರಿ ಹಿಮಾಚಲ ರಾಜ್ಯ ಸಾರಿಗೆ ಸಂಸ್ಥೆಯ ವಿಭಾಗದಲ್ಲಿ ಬಸ್‌ ಕಂಡಕ್ಟರ್‌ ಆಗಿದ್ದರು. 1989ರಲ್ಲಿ ಶುಭಲತಾ ರಮೇಶ್‌ ದಂಪತಿಗಳ ಮಗುವಾಗಿ ಜನಿಸಿದ ಶಾಲಿನಿ, ಬಾಲ್ಯದಿಂದಲೇ ವೈವಿಧ್ಯಮಯ ಪ್ರತಿಭೆಗಳನ್ನು ಬೆಳೆಸಿಕೊಂಡ ಹುಡುಗಿ. ಮೇಧಾವಿ ವಿದ್ಯಾರ್ಥಿನಿ ಆಗುವುದರ ಜೊತೆ ಆಟೋಟಗಳಲ್ಲೂ ಸದಾ ಮುಂದು. ಶಾಲಿನಿ ಪಾಲಂಪುರ್‌ವಿ.ವಿ. ಮತ್ತು ಲೂಧಿಯಾನಾ ವಿ.ವಿ.ಗಳಲ್ಲಿ, ಬ್ಯಾಡ್ಮಿಂಟನ್‌ ತಂಡಗಳ ಇಂಟರ್‌ ಯೂನಿವರ್ಸಿಟಿ ನ್ಯಾಷನಲ್ ಸ್ಪರ್ಧೆಗಳಲ್ಲಿ, ಉತ್ತಮ ಕ್ರೀಡಾಪಟುವಾಗಿ ಗುರುತಿಸಲ್ಪಟ್ಟಿದ್ದಾರೆ, ಆ ಮೂಲಕ ವಿ.ವಿ.ಗಳಿಗೆ ಉನ್ನತ ಹೆಸರು ಗಳಿಸಿಕೊಟ್ಟಿದ್ದಾರೆ.

ಶಾಲಿನಿ 2004ರಲ್ಲಿ ಧರ್ಮಶಾಲಾದಲ್ಲಿ 10ನೇ ತರಗತಿ ಪಾಸಾದರು. 2006ರಲ್ಲಿ +2 ಪಾಸಾದರು. ಇದಾದ ನಂತರ 2010ರಲ್ಲಿ ಚೌಧರಿ ಸರಣಕುಮಾರ್‌ ಕೃಷಿ ವಿ.ವಿ.ಯಲ್ಲಿ ಪಾಲಂಪುರದಲ್ಲಿ ಬಿ.ಎಸ್ಸಿ ಅಗ್ರಿಕಲ್ಚರ್‌ನ ಪದವಿ ಪಡೆದರು. ನಂತರ ಶಾಲಿನಿ ಪಂಜಾಬ್‌ಅಗ್ರಿಕಲ್ಚರ್‌ ಯೂನಿರ್ಸಿಟಿ ಲೂಧಿಯಾನಾದಲ್ಲಿ 2012ರಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದರು. 2011ರಲ್ಲಿ  ಐಎಎಸ್ ಪರೀಕ್ಷೆಯಲ್ಲಿ  ಇಡೀ ದೇಶದಲ್ಲೇ 285ನೇ ರಾಂಕ್‌ ಪಡೆದರು. ಇದಾದ ನಂತರ ಆಕೆ ಐಪಿಎಸ್ ನಲ್ಲಿ ಸೆಲೆಕ್ಟ್ ಆದರು.

ಹೈದರಾಬಾದ್‌ನ ನ್ಯಾಷನಲ್ ಪೊಲೀಸ್‌ ಅಕಾಡೆಮಿಯಲ್ಲಿ ಶಾಲಿನಿ ತಮ್ಮ ಪ್ರತಿಭೆಯ ತುಂಬು ಪ್ರದರ್ಶನ ನೀಡಿದರು. 4-6 ವಾರಗಳ ಐಪಿಎಸ್ ನ ಔಟ್‌ ಡೋರ್‌ ಇನ್‌ ಡೋರ್‌ ಟ್ರೇನಿಂಗ್‌ನಲ್ಲಿ ತಮ್ಮ ವರ್ಚಸ್ಸನ್ನು ಖಾಯಂ ಆಗಿ ಉಳಿಸಿಕೊಂಡು, ಶಾಲಿನಿ ಎಲ್ಲದರಲ್ಲೂ ಪ್ರಥಮ ದರ್ಜೆ ಬಂದು, ಬೆಸ್ಟ್ ಪ್ರೊಬೆಶನರೀಸ್‌ ಅವಾರ್ಡ್‌ ಪಡೆದುಕೊಂಡರು.

ಶಾಲಿನಿಗೆ ಐಪಿಎಸ್ ನಲ್ಲಿ ಹಿಮಾಚಲ ಕ್ಯಾಡೆರ್‌ ಲಭಿಸಿತು. ಅಲ್ಲಿ ಹಿಮಾಚಲ ಪ್ರದೇಶದ ಅಗ್ರಗಣ್ಯ ಮೀಡಿಯಾ ಗ್ರೂಪ್‌ `ದಿವ್ಯ ಹಿಮಾಚಲ’ ಶಾಲಿನಿಯ ಅಭೂತಪೂರ್ವ ಪ್ರತಿಭೆಯನ್ನು ಕಂಡು, ಆಕೆಗೆ `ಹಿಮಾಚಲಿ ಆಫ್‌ ದಿ ಇಯರ್‌’ ಅವಾರ್ಡ್‌ ನೀಡಿ ಸನ್ಮಾನಿಸಿತು. ಹಾಗೆಯೇ ಹಿಮಾಚಲದ ಅಗ್ರಗಣ್ಯ ಸಾಮಾಜಿಕ ಸಂಸ್ಥೆ ಹಿಮೋತ್ಕರ್ಷ ಪರಿಷತ್ತು ಈಕೆಗೆ `ಹಿಮಾಚಲ ಶ್ರೀ’ ಬಿರುದು ನೀಡಿ ಯುವ ಪ್ರೋತ್ಸಾಹಕರ ಪುರಸ್ಕಾರದಿಂದ ಸನ್ಮಾನಿಸಿತು.

ದೇಶದ ಎಲ್ಲಾ ಸೇವಾ ವಿಭಾಗಗಳಲ್ಲಿ ಪೊಲೀಸ್‌ ಇಲಾಖೆಯ ಸೇವೆ ಅತಿ ಮಹತ್ವಪೂರ್ಣವಾದುದು. ಇದರ ಮಾಧ್ಯಮದಿಂದ ಜನರಿಗೆ ಸಹಾಯ ಹಾಗೂ ಸೇವೆ ಒದಗಿಸುವ ವಿಪುಲ ಅವಕಾಶಗಳಿವೆ, ಇವೇ ಮುಂತಾದ ಆದರ್ಶಗಳಿಂದ ಪ್ರೇರಿತರಾಗಿ ಶಾಲಿನಿ ಐಪಿಎಸ್ ಸೇರಲು ನಿರ್ಧರಿಸಿದರು.

ಟ್ರೇನಿಂಗ್‌ ಪೀರಿಯಡ್‌ನ ಹೈದರಾಬಾದ್‌ ಹಾಫ್‌ ಮ್ಯಾರಥಾನ್‌ನಲ್ಲಿ 21 ಕಿ.ಮೀ. ಓಟ, 5 ಹಗಲು ರಾತ್ರಿಗಳನ್ನು ಕಾಡಿನಲ್ಲಿ ಕಳೆದುದು, ರೂಟ್‌ ಮಾರ್ಚ್‌, ತರಬೇತಿ ಸಲುವಾಗಿ ಹಿರಿಯ ಅಧಿಕಾರಿ ಹಾಗೂ ಸೆಲೆಬ್ರಿಟಿಗಳೊಂದಿಗೆ ಕಲೆತು ಪಡೆಯುವ ಅನುಭವ, ಅಂತಿಮವಾಗಿ ಪಿಶಿಪಿ ಸೆರಿಮನಿಯಲ್ಲಿ ರಾಷ್ಟ್ರಪತಿಯವರೊಂದಿಗೆ ಸಂಭಾಷಣೆ ಇತ್ಯಾದಿಗಳನ್ನು ಶಾಲಿನಿ ಎಂದೂ ಮರೆಯಲಾರರು.

ಸುಲಭವಲ್ಲದ ಪಯಣ

ಮನಸ್ಸಿನಲ್ಲಿ ಕನಸುಗಳನ್ನು ಕಟ್ಟಿಕೊಂಡು ಅದನ್ನು ನನಸಾಗಿಸಲು ಅಪಾರ ಶ್ರಮ ವಹಿಸಬೇಕಾಗುತ್ತದೆ. ಯುವಜನತೆ ತಮ್ಮ ಶಕ್ತಿಯನ್ನು, ತಮ್ಮಲ್ಲಿನ ಅಪೂರ್ವ ಸಾಮರ್ಥ್ಯವನ್ನು ಸಕಾರಾತ್ಮಕವಾಗಿ ಬಳಸಿಕೊಂಡು ಸಮಾಜ ದೇಶಕ್ಕಾಗಿ ನಿರ್ಭೀತಿಯಿಂದ ಮುನ್ನಡೆಯಬೇಕಾಗಿದೆ. ಹೀಗೆ ಹೇಳುವ ಈಕೆ ಅಸಲಿ ಅರ್ಥದಲ್ಲಿ  ಡವ್ ರಿಯಲ್ ವುಮನ್‌ ಎನಿಸುತ್ತಾರೆ.

ಪ್ರತಿನಿಧಿ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ