ಹಾಲಿವುಡ್‌ನ ಹೆಸರಾಂತ ನಟಿ ಏಂಜಲೀನಾ ಜಾಲಿಯ ಸ್ತನ ಕ್ಯಾನ್ಸರ್‌ ಚಿಕಿತ್ಸೆ ಮತ್ತೊಮ್ಮೆ ಜನರ ಗಮನ ಅತ್ತಕಡೆ ಹೋಗುವಂತೆ ಮಾಡಿದೆ. ಏಂಜಲಿನಾಗೆ ಸ್ತನ ಕ್ಯಾನ್ಸರ್‌ ಉಂಟಾಗುವ ಶೇ.87ರಷ್ಟು ಸಾಧ್ಯತೆಗಳಿದ್ದವು. ಹೀಗಾಗಿ ಅವರು ಬ್ರೆಸ್ಟ್ ರಿಮೂವ್ ‌ಸರ್ಜರಿಗೆ ಒಳಗಾಗಬೇಕಾಯಿತು.

ಅಂಕಿಅಂಶಗಳ ಪ್ರಕಾರ 22 ಮಹಿಳೆಯರಲ್ಲಿ ಒಬ್ಬ ಮಹಿಳೆ ಈ ತೆರನಾದ ಕ್ಯಾನ್ಸರ್‌ನಿಂದ ಪೀಡಿತರಾಗಿದ್ದಾರೆ. ಮಹಿಳೆಯರಲ್ಲಿ ಉಂಟಾಗುವ ಬ್ರೆಸ್ಟ್ ಕ್ಯಾನ್ಸರ್‌ನಿಂದ ಅವರ ಇಡೀ ಜೀವನವೇ ಬದಲಾಗಿಬಿಡುತ್ತದೆ. ಇಂತಹ ಸ್ಥಿತಿಯಲ್ಲಿ ಅವರು ಸ್ತನವನ್ನು ದೇಹದಿಂದ ಬೇರ್ಪಡೆ ಮಾಡಲೇಬೇಕಾದ ಸ್ಥಿತಿ ಉಂಟಾಗುತ್ತದೆ. ಇದು ಮಹಿಳೆಯೊಬ್ಬಳಿಗೆ ಕೇವಲ ಆರೋಗ್ಯದ ಸಮಸ್ಯೆಯಷ್ಟೇ ಅಲ್ಲ, ಆಕೆಯ ಸೌಂದರ್ಯದ ಮೇಲೂ ಪ್ರಭಾವ ಬೀರುತ್ತದೆ. ಹೀಗಾಗಿ ಆಕೆ ಭಾವನಾತ್ಮಕವಾಗಿಯೂ ಘಾಸಿಗೊಳ್ಳುತ್ತಾಳೆ.

ಬದಲಾಗುತ್ತಿರುವ ಜೀವನಶೈಲಿ ಕಾರಣ

ವೈದ್ಯ ವಿಜ್ಞಾನದ ಸಮೀಕ್ಷೆಗಳ ಪ್ರಕಾರ, ಸ್ತನ ಕ್ಯಾನ್ಸರ್‌ನ ರೋಗಿಗಳ ಅಂಕಿಅಂಶಗಳಲ್ಲಿ ನಿರಂತರ ಹೆಚ್ಚಳ ಉಂಟಾಗಿದೆ. ದೊಡ್ಡ ದೊಡ್ಡ ಮಹಾನಗರಗಳಲ್ಲಿ ಸ್ತನ ಕ್ಯಾನ್ಸರ್‌ಗ್ರಸ್ಥ ಮಹಿಳೆಯರ ಹೆಚ್ಚಳಕ್ಕೆ ಬದಲಾಗುತ್ತಿರುವ ಜೀವನಶೈಲಿಯೇ ಮುಖ್ಯ ಕಾರಣವಾಗಿದೆ.

ಬೃಹತ್‌ ಆಸ್ಪತ್ರೆ ಹಾಗೂ ರಿಸರ್ಚ್‌ ಸೆಂಟರ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಾ. ಸುವರ್ಣಾ ಅವರ ಪ್ರಕಾರ, ನಗರದ ಮಹಿಳೆಯರ ಜೀವನಶೈಲಿಯಲ್ಲಿ ಆದ ಬದಲಾವಣೆ ಮತ್ತು ದೈನಂದಿನ ಒತ್ತಡವನ್ನು ನಿಭಾಯಿಸಲು ಆಗದೆ ಹೆಚ್ಚು ಸ್ಟ್ರೆಸ್‌ ಲೆಸ್‌ನ ಕಾರಣದಿಂದಾಗಿ ಅವರಲ್ಲಿ ಸ್ತನ ಕ್ಯಾನ್ಸರಿನ ಅಪಾಯದ ಮಟ್ಟ ನಿರಂತರವಾಗಿ ಹೆಚ್ಚುತ್ತಲೇ ಇದೆ. ಕೊಬ್ಬುಯುಕ್ತ ಪದಾರ್ಥಗಳ ಅಧಿಕ ಸೇವನೆ, ಕೆರಿಯರ್‌ಗೆ ಆದ್ಯತೆ ನೀಡುವ ಕಾರಣದಿಂದ ಯುವತಿಯರ ವಿವಾಹ ಮತ್ತು ಮೊದಲ ಮಗುವಿಗೆ ಜನ್ಮ ನೀಡುವ ಸರಾಸರಿ ವಯಸ್ಸು 25 ರಿಂದ 30 ವರ್ಷಕ್ಕೆ ಏರಿರುವುದು ಹಾಗೂ ಸ್ತನ್ಯಪಾನ ಮಾಡಿಸದೆ ಇರುವ ಕಾರಣದಿಂದ ಭಾರತದಲ್ಲಿ ಪ್ರತಿವರ್ಷ ಸ್ತನ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಕಳೆದ 2 ವರ್ಷಗಳಲ್ಲಿ ಭಾರತದಲ್ಲಿ ಸ್ತನ ಕ್ಯಾನ್ಸರ್‌ ರೋಗಿಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದು ಅಂಕಿಅಂಶಗಳಿಂದ ತಿಳಿದುಬಂದಿದೆ. ಮುಂಬರುವ ವರ್ಷಗಳಲ್ಲಿ ಈ ಸಂಖ್ಯೆ ಇನ್ನಷ್ಟು ಪ್ರಮಾಣದಲ್ಲಿ ಹೆಚ್ಚಲಿದೆ. ಈ ಕಾರಣದಿಂದ ಉಂಟಾಗುವ ಸಾವಿನ ಪ್ರಮಾಣ ಕೂಡ ಹೆಚ್ಚಿದೆ. ಜೀವನಶೈಲಿಯಲ್ಲಿ ಬದಲಾವಣೆ ತಂದುಕೊಳ್ಳುವುದರ ಮೂಲಕ ಹಾಗೂ ನಿಯಮಿತ ವ್ಯಾಯಾಮ ಮಾಡುವುದರ ಮೂಲಕ ಇದರ ಅಪಾಯದ ಪ್ರಮಾಣವನ್ನು ಕಡಿಮೆಗೊಳಿಸಬಹದಾಗಿದೆ.

ಒಬ್ಬ ಮಹಿಳೆ 35ನೇ ವಯಸ್ಸಿನಲ್ಲಿ ಮಗುವಿಗೆ ಜನ್ಮ ನೀಡಿದರೆ, ಅವಳಲ್ಲಿ ಸ್ತನ ಕ್ಯಾನ್ಸರ್‌ ಉಂಟಾಗುವ ಅಪಾಯ ಹೆಚ್ಚುತ್ತದೆ. ಏಕೆಂದರೆ ಆ ವಯಸ್ಸಿನಲ್ಲಿ ಮಹಿಳೆಯ ದೇಹದಲ್ಲಿ ಕಂಡುಬರುವ ಈಸ್ಟ್ರೋಜನ್‌ ಹಾರ್ಮೋನ್‌ ದೇಹದಲ್ಲಿ ಹೆಚ್ಚಿನ ಅವಧಿಯವರೆಗೆ ಅಸ್ತಿತ್ವದಲ್ಲಿರುತ್ತದೆ. ಚಿಕ್ಕ ವಯಸ್ಸಿನಲ್ಲಿ ಋತುಚಕ್ರ ಆರಂಭವಾಗಿರುವ ಹಾಗೂ ಮುಟ್ಟಂತ್ಯ ತಡವಾಗಿ ಆಗುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್‌ನ ಸಾಧ್ಯತೆ ಹೆಚ್ಚು. ಏಕೆಂದರೆ ಈ ಕಾರಣದಿಂದಲೂ ಅವರ ದೇಹದಲ್ಲಿ ಈ ಹಾರ್ಮೋನ್‌ ಹೆಚ್ಚಿನ ಅವಧಿಯವರೆಗೆ ಇರುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಫಾಸ್ಟ್ ಫುಡ್‌ ನಮ್ಮ ಆಹಾರದಲ್ಲಿ ಸೇರ್ಪಡೆಗೊಂಡಿದೆ. ಕರಿದ ಪದಾರ್ಥಗಳು ಹಾಗೂ ಸರಿಯಾಗಿ ಅಗಿದು ತಿನ್ನದೇ ಇರುವ ಕಾರಣದಿಂದ ಫ್ಯಾಟ್‌ನ ಪ್ರಮಾಣ ದೇಹದಲ್ಲಿ ಹೆಚ್ಚುತ್ತದೆ. ಮಹಿಳೆಯರ ದೇಹದಲ್ಲಿ ಈ ಹೆಚ್ಚುವರಿ ಕೊಬ್ಬು ಸ್ತನ ಭಾಗದಲ್ಲಿ ಜಮೆಗೊಳ್ಳುತ್ತದೆ. ಇದರ ಹೊರತಾಗಿ ಅನುವಂಶಿಕ ಕಾರಣಗಳಿಂದಲೂ ಸ್ತನ ಕ್ಯಾನ್ಸರ್‌ ಉಂಟಾಗುತ್ತದೆ. ಸಾಮಾನ್ಯವಾಗಿ ಮಹಿಳೆಯರು ಮಗುವಿಗೆ ಹಾಲುಣಿಸುವುದರಿಂದಲೂ ಸ್ತನ ಕ್ಯಾನ್ಸರ್‌ ಉಂಟಾಗುತ್ತದೆ ಎಂದು ಭಾವಿಸಿರುತ್ತಾರೆ. ಅದರೆ ಅದಕ್ಕೂ ಕ್ಯಾನ್ಸರ್‌ಗೂ ಯಾವುದೇ ಸಂಬಂಧವಿಲ್ಲ.

ಸೋಂಕು ರೋಗವಲ್ಲ ಕ್ಯಾನ್ಸರ್

ಒಂದು ಸೋಂಕು ರೋಗ ಎಂದು ಅನೇಕರು ಭಾವಿಸುತ್ತಾರೆ. ವಾಸ್ತವದಲ್ಲಿ ದೇಹದ ಜೀವಕೋಶಗಳಲ್ಲಿ ಯಾವುದೊ ಕಾರಣದಿಂದ ಏರುಪೇರು ಉಂಟಾಗುತ್ತದೆ. ಆ ಕಾರಣದಿಂದ ಜೀವಕೋಶಗಳಲ್ಲಿ ವಿಭಜನೆಯ ಪ್ರಕ್ರಿಯೆ ಆರಂಭವಾಗುತ್ತದೆ. ಅಪೂರ್ಣ ಜೀವಕೋಶಗಳು ಒಂದು ಕಡೆ ಸೇರಲಾರಂಭಿಸುತ್ತವೆ. ಆಗ ಅವು ಒಂದು ಟ್ಯೂಮರ್‌ ಅಥವಾ ಗಂಟಿನ ರೂಪ ಪಡೆದುಕೊಳ್ಳಲಾರಂಭಿಸುತ್ತವೆ. ಅದನ್ನು ಸ್ಪಷ್ಟವಾಗಿ ಕಾಣಬಹುದಾಗಿದೆ. ಎಷ್ಟು ಬೇಗನೇ ಅದಕ್ಕೆ ಚಿಕಿತ್ಸೆ ಪಡೆಯುತ್ತಾರೊ ಅಷ್ಟು ಒಳ್ಳೆಯದು. ಇಲ್ಲದಿದ್ದರೆ ಅದು ಸೊನ್ನೆ ಹಂತದಿಂದ 4ನೇ ಹಂತಕ್ಕೆ ತಲುಪುತ್ತದೆ. ಆ ಕಾರಣದಿಂದ ಟ್ಯೂಮರ್‌ ಸ್ತನ ಭಾಗದಿಂದ ರಕ್ತದ ಮುಖಾಂತರ ದೇಹದ ಇತರೆಡೆ ಅಂದರೆ ಲಿವರ್‌ ಹಾಗೂ ಮೂಳೆಗಳ ತನಕ ತಲುಪುತ್ತದೆ.

ಕ್ಯಾನ್ಸರ್‌ನ ಗಂಟು ಅಥವಾ ಟ್ಯೂಮರ್‌ನ್ನು ಉಜ್ಜಿದರೆ ಅಥವಾ ಚಿವುಟಿದರೆ ಅದು ದೇಹದ ಇತರ ಭಾಗಕ್ಕೆ ಹರಡುತ್ತದೆ ಎನ್ನುವುದು ಕೂಡ ಭ್ರಮೆಯೇ ಹೌದು. ಆದರೆ ಕ್ಯಾನ್ಸರ್‌ ಗಂಟನ್ನು ಸಾಧ್ಯವಾದಷ್ಟು ಬೇಗ ದೇಹದಿಂದ ಹೊರಗಟ್ಟಿದರೆ ಒಳ್ಳೆಯದು. ಇಲ್ಲದಿದ್ದರೆ ರೋಗ ಹೆಚ್ಚುತ್ತಲೇ ಹೋಗುತ್ತದೆ. ಅದೇ ರೀತಿ ಸ್ತನ ಕ್ಯಾನ್ಸರ್‌ಗೆ ತುತ್ತಾದ ಮಹಿಳೆ ಬಳಿಕ ಮಗುವಿಗೆ ಜನ್ಮ ನೀಡಲಾರಳು ಎನ್ನುವುದು ಕೂಡ ಅಷ್ಟೇ ಸುಳ್ಳು. ಶಸ್ತ್ರಚಿಕಿತ್ಸೆ ಯಶಸ್ವಿಯಾದರೆ 5 ವರ್ಷದ ಬಳಿಕ ಆಕೆ ಮಗುವಿಗೆ ಜನ್ಮ ನೀಡಬಹುದಾಗಿದೆ.

ಹೊಸ ತಂತ್ರಜ್ಞಾನ ಕೆಲವು ವರ್ಷಗಳ ಹಿಂದಿನ ತನಕ ಸ್ತನ ಕ್ಯಾನ್ಸರ್‌ ಚಿಕಿತ್ಸೆಯೆಂದರೆ, ಶಸ್ತ್ರಚಿಕಿತ್ಸೆ ಮಾಡಿ ಸ್ತನವನ್ನು ತೆಗೆಯುವುದೊಂದೇ ಆಗಿತ್ತು. ಏಕೆಂದರೆ ಸ್ತನವನ್ನು ತೆಗೆಯದೇ ಹೋದರೆ ಆ ರೋಗ ಪುನಃ ಬರಬಹುದೆಂದು ಹೇಳಲಾಗುತ್ತಿತ್ತು.

ಆದರೆ ಪ್ರೈಮರಿ ರೀಕನ್‌ಸ್ಟ್ರಕ್ಷನ್‌ ಎಂತಹ ತಂತ್ರಜ್ಞಾನವೆಂದರೆ, ಅದರ ಮುಖಾಂತರ ಶಸ್ತ್ರಚಿಕಿತ್ಸೆಯ ಜೊತೆ ಜೊತೆಗೆ ಸೊಂಟದ ಮಾಂಸವನ್ನು ಕಸಿ ರೂಪದಲ್ಲಿ ಸ್ತನದಲ್ಲಿ ರೀಕನ್‌ಸ್ಟ್ರಕ್ಷನ್‌ ಮಾಡಲಾಗುತ್ತದೆ. ಅದೇ ರೀತಿ ವೈಡ್‌ ಆ್ಯಕ್ಸಿಜನ್‌ ಸರ್ಜರಿಯ ಬಳಕೆಯಿಂದ ಮತ್ತೊಮ್ಮೆ ಟ್ಯೂಮರ್‌ ಕಾಣಿಸಿಕೊಳ್ಳುವ ಅಪಾಯ ಇರುವುದಿಲ್ಲ.

ಅಡ್ವಾನ್ಸ್ ಚಿಕಿತ್ಸೆ

ಕಳೆದ ಅನೇಕ ವರ್ಷಗಳಿಂದ ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಕಿಮೊಥೆರಪಿ ಬಳಸಲಾಗುತ್ತಿದೆ. ಇದು ಯಶಸ್ವಿ ಕೂಡ ಆಗಿದೆ. ಕ್ಯಾನ್ಸರ್‌ಗೆ ತುತ್ತಾದ ಜೀವಕೋಶಗಳನ್ನು ನಾಶಗೊಳಿಸಲು ಕಿಮೊಥೆರಪಿ ಬಳಸಲಾಗುತ್ತದೆ. ಆದರೆ ಇದರ ಅಡ್ಡಪರಿಣಾಮಗಳು ಕೂಡ ಕಡಿಮೆ ಏನಿಲ್ಲ. ಪಚನಕ್ರಿಯೆ ಏರುಪೇರಾಗುತ್ತದೆ, ಕೂದಲು ಉದುರಲಾರಂಭಿಸುತ್ತದೆ ಮತ್ತು ಸಾಕಷ್ಟು ನಿಶ್ಶಕ್ತಿಯೂ ಉಂಟಾಗುತ್ತದೆ.

ಕಿಮೊಥೆರಪಿ ಚಿಕಿತ್ಸೆಯ ಎಲ್ಲಕ್ಕೂ ದೊಡ್ಡ ಸಮಸ್ಯೆಯೇನೆಂದರೆ, ಇದರಲ್ಲಿ ಉಪಯೋಗಿಸಲಾಗುವ 50ಕ್ಕೂ ಹೆಚ್ಚು ಬಗೆಯ ಔಷಧಿಗಳು ವಿಭಜನೆಗೊಳ್ಳುತ್ತಿರುವ ಪ್ರತಿಯೊಂದು ಜೀವಕೋಶಗಳನ್ನು ಹೊಡೆದುರುಳಿಸುವಲ್ಲಿ ನಿರತವಾಗಿರುತ್ತವೆ. ಅವು ಕ್ಯಾನ್ಸರ್‌ಗ್ರಸ್ಥ ಹಾಗೂ ಆರೋಗ್ಯವಂತ ಜೀವಕೋಶಗಳಲ್ಲಿ ವ್ಯತ್ಯಾಸ ಗುರುತಿಸುವುದಿಲ್ಲ. ಇದರಿಂದಾಗಿ ಆರೋಗ್ಯವಂತ ಜೀವಕೋಶಗಳ ಮೇಲೆ ಅದರ ಹಲವು ದುಷ್ಪರಿಣಾಮಗಳನ್ನು ಕಾಣಬಹುದು. ಅದರಲ್ಲೂ ವಿಶೇಷವಾಗಿ ದೇಹದಲ್ಲಿ ನಿಶ್ಶಕ್ತಿ ಕಂಡುಬರುತ್ತದೆ.

ಈ ಸಮಸ್ಯೆಯಿಂದ ಪಾರಾಗಲು `ಟಾರ್ಗೆಟೆಡ್‌ ಥೆರಪಿ’ಯನ್ನು ಅಭಿವೃದ್ಧಿಪಡಿಸಲಾಗಿದೆ. ಕ್ಯಾನ್ಸರ್‌ ಸೆಲ್ಸ್ (ಜೀವಕೋಶ)ನ ಒಂದು ಸಮೂಹವನ್ನು ಗಮನದಲ್ಲಿಟ್ಟುಕೊಂಡು ಅವನ್ನಷ್ಟೇ ನಾಶಗೊಳಿಸಲಾಗುತ್ತದೆ. ಇದರಲ್ಲಿ ಸಾಮಾನ್ಯ ಆರೋಗ್ಯವಂತ ಜೀವಕೋಶಗಳು ಹಾನಿಗೊಳಗಾಗುವುದಿಲ್ಲ ಮತ್ತು ಅಡ್ಡ ಪರಿಣಾಮಗಳು ಕೂಡ ಕಡಿಮೆ ಪ್ರಮಾಣದಲ್ಲಿ ಇರುತ್ತವೆ. ಅಪೊಲೋ ಆಸ್ಪತ್ರೆಯ ಮೆಡಿಕಲ್ ಆನ್‌ಕಾಲಜಿಸ್ಟ್ ಡಾ. ಪಿ.ಕೆ. ದಾಸ್‌ ಅವರ ಪ್ರಕಾರ, “ಸಾಮಾನ್ಯವಾಗಿ ಶೇ.30ರಷ್ಟು ಮಹಿಳೆಯರಲ್ಲಿ ಎಚ್‌ಇಆರ್‌-2 ಸೆಲ್ಸ್ ಇರುತ್ತವೆ. ಈ ಜೀವಕೋಶಗಳ ಪದರದ ಮೇಲೆ ಒಂದು ಬಗೆಯ ರಸಾಯನ ಲೇಪಿಸಲ್ಪಟ್ಟಿರುತ್ತದೆ.

“ಅದನ್ನು ಆ್ಯಂಟಿಜೆನ್‌ ಎಂದು ಹೇಳಲಾಗುತ್ತದೆ. ಇವು ಎಚ್‌ಇಆರ್‌-2 ಸೆಲ್ಸ್ ಆ್ಯಂಟಿಜನ್‌ ಪಾಸಿಟಿವ್ ‌ಸೆಲ್ಸ್ ಆಗಿರುತ್ತವೆ. ಅವನ್ನು ಕಿಮೊಥೆರಪಿಯಿಂದ ನಾಶಗೊಳಿಸಲಾಗುತ್ತದೆ.

“ಒಂದು ವೇಳೆ ಅವನ್ನು ಪರಿಪೂರ್ಣವಾಗಿ ನಾಶಗೊಳಿಸದೆ ಇದ್ದರೆ ಅವು ಮೇಲಿಂದ ಮೇಲೆ ಬರುತ್ತವೆ ಮತ್ತು ದೇಹದ ಬೇರೆ ಬೇರೆ ಭಾಗಗಳಲ್ಲಿ ಹರಡುವ ಅಪಾಯ ಇರುತ್ತದೆ. ಇದನ್ನೇ ಗಮನದಲ್ಲಿಟ್ಟುಕೊಂಡು ಎಚ್‌ಇಆರ್‌-2 ಟಾರ್ಗೆಟೆಡ್‌ ಚುಚ್ಚುಮದ್ದು ಮತ್ತು ಔಷಧಿಯನ್ನು ಸಿದ್ಧಪಡಿಸಲಾಗಿದೆ. ಅದರ ಹೆಸರು ಹರ್‌ಸೆಪ್ಟಿನ್‌.

“ಹರ್‌ಸೆಪ್ಟಿನ್‌ ಜೀವಕೋಶದ ಮೇಲೆ ಅಂಟಿಕೊಂಡು ಕುಳಿತುಕೊಳ್ಳುತ್ತದೆ. ಅದರಿಂದ ಜೀವಕೋಶದಲ್ಲಿ ಛಿದ್ರವುಂಟಾಗುತ್ತದೆ. ಅದರ ಜೊತೆಗೆ ನಾವು ಕಿಮೊಥೆರಪಿಯನ್ನು ಕೂಡ ಕೊಡುತ್ತೇವೆ.

“ಕಿಮೊಥೆರಪಿಯ ಔಷಧಿ ಈ ರಂಧ್ರಗಳ ಮುಖಾಂತರ ಒಳಗೆ ಹೋಗುತ್ತದೆ. ಅದರಿಂದ ಕ್ಯಾನ್ಸರ್‌ಗ್ರಸ್ಥ ಜೀವಕೋಶ ನಾಶವಾಗುತ್ತದೆ. ಇದನ್ನು `ಟಾರ್ಗೆಟೆಡ್‌ ಥೆರಪಿ’ ಎಂದು ಕರೆಯಲು ಕಾರಣವೇನೆಂದರೆ, ಈ ಎಚ್‌ಇಆರ್‌ ಪಾಸಿಟಿವ್ ‌ಸೆಲ್ಸ್ ಗಳಿಗಾಗಿಯೇ ಇದೆ.

“ಕಿಮೊಥೆರಪಿಯ ಹಾಗೆ ಇದರ ಅಡ್ಡಪರಿಣಾಮಗಳು ಕೂಡ ಇರುವುದಿಲ್ಲ. ಏಕೆಂದರೆ ಇದರಿಂದ ರೋಗಿಯ ಆರೋಗ್ಯವಂತ ಜೀವಕೋಶಗಳು ನಾಶಗೊಳ್ಳುವುದಿಲ್ಲ.

“ಹರ್‌ಸೆಪ್ಟಿನ್‌ ಒಂದು ಇಂಟ್ರಾವೀನಸ್‌ ಇಂಜೆಕ್ಷನ್‌ ಆಗಿದೆ. ಇದು ದುಬಾರಿಯಾಗಿದೆ ನಿಜ. ಆದರೆ ಇದು ಅತ್ಯಂತ ಸುರಕ್ಷಿತ ಇಂಜೆಕ್ಷನ್‌ ಆಗಿದೆ. ರೋಗದ ಆರಂಭಿಕ ಹಂತದಲ್ಲಿ 1 ವರ್ಷದ ತನಕ ಪ್ರತಿ 3 ವಾರಕ್ಕೊಮ್ಮೆ ನೀಡಲಾಗುತ್ತದೆ.

“ಒಂದು ವೇಳೆ ಹರ್‌ಸೆಪ್ಟಿನ್‌ನಿಂದ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಲಾಗದಿದ್ದರೆ ಟೈಕರ್ಬ್‌ ಎಂಬ ಮಾತ್ರೆಯನ್ನು ನೀಡಲಾಗುತ್ತದೆ. ಇದು ಕೂಡ ಟಾರ್ಗೆಡೆಡ್‌ ಥೆರಪಿಯ ಒಂದು ಭಾಗ,” ಎಂದು ದಾಸ್‌ ಹೇಳುತ್ತಾರೆ.

ಸುಮನಾ ಭಟ್

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ