ಮ್ಯಾಂಗೋ ಬರ್ಗರ್
ಸಾಮಗ್ರಿ : 2 ಮಾಗಿದ ಮಾವು, 1 ಕರ್ಬೂಜಾ, 1 ಪರಂಗಿ ಹಣ್ಣು, 1 ಕಪ್ ಮಸೆದ ಪನೀರ್, 1 ದೊಡ್ಡ ಚಮಚ ಹಾಲಿನಪುಡಿ, ಅಗತ್ಯವಿದ್ದಷ್ಟು ಕ್ರೀಂ ಚೆರ್ರಿ ಪುಡಿ ಸಕ್ಕರೆ ಡ್ರೈಫ್ರೂಟ್ಸ್.
ವಿಧಾನ : ಎಲ್ಲಾ ಹಣ್ಣುಗಳ ಸಿಪ್ಪೆ ಹೆರೆದಿಡಿ. ಮಾವನ್ನು 2 ಪದರಗಳಾಗಿ ಕತ್ತರಿಸಿ. 2 ಪದರಗಳೂ ಟೊಳ್ಳಾಗುವಂತೆ ಅದರ ತಿರುಳನ್ನು ತೆಗೆದುಬಿಡಿ. ಕರ್ಬೂಜಾ, ಪರಂಗಿ ಹಣ್ಣುಗಳನ್ನು ಚೆನ್ನಾಗಿ ಮಸೆದಿಡಿ. ಇದಕ್ಕೆ ಪನೀರ್, ಹಾಲಿನಪುಡಿ, ಪುಡಿಸಕ್ಕರೆ ಸೇರಿಸಿ. ಮಾವಿನ 2 ಪದರಗಳ ಒಳಭಾಗಕ್ಕೆ ಕ್ರೀಂ ಸವರಿ, ಈ ಮಿಶ್ರಣವನ್ನು ತುಂಬಿಸಿ. ಆಮೇಲೆ ಇನ್ನೊಂದು ಭಾಗವನ್ನು ಬರ್ಗರ್‌ನಂತೆ ಮುಚ್ಚಿ, ಟೂತ್ ಪಿಕ್ ಸಿಗಿಸಿಡಿ. ಚಿತ್ರದಲ್ಲಿರುವಂತೆ ಡ್ರೈಫ್ರೂಟ್ಸ್, ಚೆರ್ರಿಯಿಂದ ಅಲಂಕರಿಸಿ, 1 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.
ಜೆಲ್ಲಿ ಫ್ರೂಟ್ ಸಲಾಡ್
ಸಾಮಗ್ರಿ : 1 ಪ್ಯಾಕೆಟ್ ರೆಡಿಮೇಡ್ ಜೆಲ್ಲಿ, 1 ಸಣ್ಣ ಸ್ಪಾಂಜ್ ಕೇಕ್, 1 ಕಪ್ ವೆನಿಲಾ ಐಸ್‌ಕ್ರೀಂ, 1 ಕಪ್ ಕ್ರೀಂ, 1 ನಿಂಬೆಹಣ್ಣು, 4-5 ಲೀಚೀ ಹಣ್ಣು, 7-8 ಸೀಡ್‌ಲೆಸ್ ದ್ರಾಕ್ಷಿ, ಅರ್ಧರ್ಧ ಕಪ್ ಅನಾನಸ್ ಮಾವಿನ ಹೋಳು, ಒಂದಿಷ್ಟು ಹೆಚ್ಚಿದ ಕಿವೀ ಪ್ರಟ್, ಊಟಿ ಆ್ಯಪಲ್, ಚೆರ್ರೀ ಹಣ್ಣು, ಮಿಕ್ಸ್ಡ್ ಫ್ರೂಟ್ ಜ್ಯಾಂ.
ವಿಧಾನ : ಸ್ಪಾಂಜ್ ಕೇಕಿಗೆ ಜ್ಯಾಂ ಕ್ರೀಂ ಬೆರೆಸಿ ಕೂಲ್ ಮಾಡಿ. ಇದಕ್ಕೆ ನಿಂಬೆಹಣ್ಣು ಹಿಂಡಿಕೊಳ್ಳಿ. ಸರ್ವಿಂಗ್ ಡಿಶ್‌ನಲ್ಲಿ ಕೇಕ್ ಲೇಯರ್ ಹರಡಿರಿ. ಇದರ ಮೇಲೆ ತುಸು ಹೆಚ್ಚಿದ ಹಣ್ಣು ಬರಲಿ. ನಂತರ ಜೆಲ್ಲಿ ಹರಡಿರಿ. ಆಮೇಲೆ ಉಳಿದ ಹಣ್ಣಿನ ಪದರ ಬರಲಿ. ಇದರ ಮೇಲೆ ಐಸ್‌ಕ್ರೀಂ ಹರಡಿ, ಚಿತ್ರದಲ್ಲಿರುವಂತೆ ಚೆರ್ರಿ, ಕಿವೀ ಫ್ರೂಟ್‌ನಿಂದ ಅಲಂಕರಿಸಿ ಸವಿಯಲು ಕೊಡಿ.
ಫ್ರೂಟ್ ಲೇಯರ್ಡ್ ಪುಡಿಂಗ್
ಸಾಮಗ್ರಿ : 1 ಕಪ್ ಕ್ರೀಂ, 5-6 ಅನಾನಸ್ ಬಿಲ್ಲೆಗಳು, 5-6 ಅಗಲದ ಮಾವಿನ ಸ್ಲೈಸ್, 2 ಚಮಚ ಪುಡಿಸಕ್ಕರೆ, 1 ನಿಂಬೆಹಣ್ಣು, 1 ಕ್ಯಾಪ್ಸಿಕಂ, ಒಂದಿಷ್ಟು ಗೋಡಂಬಿ ದ್ರಾಕ್ಷಿ ಬಾದಾಮಿ ಪಿಸ್ತಾ ಚೂರು ಪುದೀನಾ.
ವಿಧಾನ : ಬೇಕಿಂಗ್ ಡಿಶ್‌ಗೆ ಜಿಡ್ಡು ಸವರಿ, ಮಾವಿನ ಸ್ಲೈಸ್ ಹರಡಿರಿ. ಕ್ರೀಮಿಗೆ ನಿಂಬೆರಸ, ಪುಡಿಸಕ್ಕರೆ ಬೆರೆಸಿಕೊಂಡು ಅದನ್ನು ಮಾವಿನ ಮೇಲೆ ಹರಡಬೇಕು. ಇದರ ಮೇಲೆ ಒಂದು ಪದರ ಹೆಚ್ಚಿದ ಕ್ಯಾಪ್ಸಿಕಂ ಬರಲಿ. ಅದರ ಮೇಲೆ ಅನಾನಸ್ ಬಿಲ್ಲೆಗಳು ಬರಲಿ. ಇದರ ಮೇಲೆ ಮತ್ತೊಂದು ಪದರ ಕ್ರೀಂ ಬರಲಿ. ಇದರ ಮೇಲೆ ಪುಡಿಸಕ್ಕರೆ ಉದುರಿಸಿ. ಇದನ್ನು ಮೊದಲೇ ಬಿಸಿ ಮಾಡಿದ ಓವನ್ನಿನಲ್ಲಿರಿಸಿ ಬೇಕ್ ಮಾಡಿ. ಹೊರತೆಗೆದು ಆರಿದ ನಂತರ ಗೋಡಂಬಿ ದ್ರಾಕ್ಷಿ ಉದುರಿಸಿ ಸವಿಯಲು ಕೊಡಿ.
ಕ್ರೀಮೀ ಸ್ಟ್ಯೂಡ್ ಸ್ಪೆಷಲ್
ಸಾಮಗ್ರಿ : 4-5 ಪೀಚ್ ಹಣ್ಣು, 2-3 ಲವಂಗ, 2 ಚಮಚ ಸಕ್ಕರೆ, 1 ನಿಂಬೆಹಣ್ಣು, 7-8 ಬಾದಾಮಿ ಗೋಡಂಬಿ (ಹಾಲಲ್ಲಿ ನೆನೆದದ್ದು), ಒಂದಿಷ್ಟು ಕೋಲ್ಡ್ ಕ್ರೀಂ, ಚೆರ್ರಿ ಹಣ್ಣು, ದ್ರಾಕ್ಷಿ.
ವಿಧಾನ : ಪೀಚ್ ಹಣ್ಣುಗಳನ್ನು ಚೆನ್ನಾಗಿ ತೊಳೆದು, ನಡು ನಡುವೆ ಪೋರ್ಕ್‌ನಿಂದ ಚುಚ್ಚಿ ರಂಧ್ರ ಮಾಡಿ. ಇದನ್ನು ಮುಳುಗುವಷ್ಟು ನೀರು ಹಾಕಿ ಸುಮಾರಾಗಿ ಬೇಯಿಸಿ. ಸಕ್ಕರೆ, ಲವಂಗ ಹಾಕಿ 5 ನಿಮಿಷ ಮತ್ತೆ ಬೇಯಿಸಿ. ಆಮೇಲೆ ನಿಂಬೆಹಣ್ಣು ಹಿಂಡಿಕೊಳ್ಳಿ. ಇನ್ನೊಂದು 5-6 ನಿಮಿಷ ಹೀಗೆ ಬೇಯಿಸಿ ಹೊರತೆಗೆಯಿರಿ. ಆಮೇಲೆ ಪೀಚ್ ಸೀಳಿಕೊಂಡು, ಅದರ ಬೀಜ ತೆಗೆದುಬಿಡಿ. ಆಮೇಲೆ ಅದಕ್ಕೆ ಗೋಡಂಬಿ ಬಾದಾಮಿ ಹಾಕಿಡಿ. ಆಮೇಲೆ ಕೋಲ್ಡ್ ಕ್ರೀಮಿಗೆ ಪೀಚ್ ಬೇಯಿಸಿದ ನೀರು ಬೆರೆಸಿ, ಇದಕ್ಕೆ ತುಂಬಿಸಿ. ಇದರ ಮೇಲೆ ದ್ರಾಕ್ಷಿ ಉದುರಿಸಿ, ಚಿತ್ರದಲ್ಲಿರುವಂತೆ ಚೆರ್ರಿಯಿಂದ ಅಲಂಕರಿಸಿ ಸವಿಯಲು ಕೊಡಿ.
ಚೆರ್ರಿ ಸರ್‌ಪ್ರೈಸ್
ಸಾಮಗ್ರಿ : 4-5 ಬ್ರೌನ್ ಬ್ರೆಡ್ ಸ್ಲೈಸ್, ಅರ್ಧ ಕಪ್ ಕಾದಾರಿದ ಗಟ್ಟಿ ಹಾಲು, 2 ಮೊಟ್ಟೆ, 2 ಹನಿ ವೆನಿಲಾ ಎಸೆನ್ಸ್, ಅರ್ಧ ದೊಡ್ಡ ಚಮಚ ಪುಡಿಸಕ್ಕರೆ, ಅಗತ್ಯವಿದ್ದಷ್ಟು ಕ್ರೀಂ, 15-20 ಚೆರ್ರಿ ಹಣ್ಣು, 10-12 ನೆನೆದ ಬಾದಾಮಿ, ಕರಿಯಲು ರೀಫೈಂಡ್ ಎಣ್ಣೆ, 1 ಚಮಚ ನಿಂಬೆರಸ.
ವಿಧಾನ : ಚೆರ್ರಿ ಹಣ್ಣಿನ ಬೀಜ ಬೇರ್ಪಡಿಸಿ. 1 ಕಪ್ ನೀರಿಗೆ ನಿಂಬೆಹಣ್ಣು ಹಿಂಡಿಕೊಂಡು ಅದಕ್ಕೆ 1 ದೊಡ್ಡ ಚಮಚ ಸಕ್ಕರೆ ಹಾಕಿ ಕದಡಿಕೊಳ್ಳಿ. ಇದನ್ನು ಬಿಸಿ ಮಾಡಿ. ಚೆರ್ರಿ ಹಾಕಿ 2-3 ನಿಮಿಷ ಕುದಿಸಿ, ಮುಚ್ಚಳ ಮುಚ್ಚಿರಿಸಿ. 10 ನಿಮಿಷಗಳ ನಂತರ ಅದನ್ನು ಸೋಸಿಕೊಂಡು ಬೇರ್ಪಡಿಸಿ. ಮೊಟ್ಟೆ ಒಡೆದು ಬೀಟ್ ಮಾಡಿಕೊಳ್ಳಿ. ಅದಕ್ಕೆ ಚೆರ್ರಿ ಬೇಯಿಸಿದ ಕಾದಾರಿದ ನೀರು, ಹಾಲು, ವೆನಿಲಾ ಎಸೆನ್ಸ್ ಬೆರೆಸಿಕೊಳ್ಳಿ. ಬ್ರೆಡ್ ಸ್ಲೈಸ್‌ನ್ನು ಸಲಾಡ್ ಟ್ರೇನಲ್ಲಿ ಹರಡಿ ಅದರ ಮೇಲೆ ಈ ಮಿಶ್ರಣ ಹರಡಿರಿ. ಇದನ್ನು ಅರ್ಧ ಗಂಟೆ ಹಾಗೇ ಬಿಡಿ. ಅದರ ತೇವಾಂಶ ಹಿಂಗಿ ಒಣಗಿದಂತಾಗಲು, ಫ್ರೈಯಿಂಗ್ ಪ್ಯಾನಿನಲ್ಲಿ ಎಣ್ಣೆ ಬಿಸಿ ಮಾಡಿಕೊಂಡು, ಅದರಲ್ಲಿ ಕರಿಯಿರಿ. ಆಮೇಲೆ ಸರ್ವಿಂಗ್ ಡಿಶ್‌ನಲ್ಲಿ ಕರಿದ ಬ್ರೆಡ್ ಸ್ಲೈಸ್ ಹರಡಿ, ಚೆನ್ನಾಗಿ ಆರಲು ಬಿಡಿ. ಕ್ರೀಮಿಗೆ ಸಕ್ಕರೆ ಬೆರೆಸಿ ಗೊಟಾಯಿಸಿ, ಇದರ ಮೇಲೆ ಹರಡಬೇಕು. ಚಿತ್ರದಲ್ಲಿರುವಂತೆ ಚೆರ್ರಿ ಹಣ್ಣು, ಬಾದಾಮಿಯಿಂದ ಅಲಂಕರಿಸಿ, 1 ತಾಸು ಫ್ರಿಜ್‌ನಲ್ಲಿರಿಸಿ ಸವಿಯಲು ಕೊಡಿ.
ಕಸ್ಟರ್ಡ್ ಕರ್ಬೂಜಾ
ಸಾಮಗ್ರಿ : 1 ಮಧ್ಯಮ ಗಾತ್ರದ ಕರ್ಬೂಜಾ, ಅರ್ಧರ್ಧ ಕಪ್ ಕ್ರೀಂ ಕಂಡೆನ್ಸ್ಡ್ ಮಿಲ್ಕ್, 5-6 ಚೆರ್ರಿ, 7-8 ದ್ರಾಕ್ಷಿ, 2 ಚಮಚ ನಿಂಬೆರಸ.
ವಿಧಾನ : ಕರ್ಬೂಜಾ ಚೆನ್ನಾಗಿ ತೊಳೆದು, ಚಿತ್ರದಲ್ಲಿರುವಂತೆ ಸಿಪ್ಪೆ ಹೆರೆದಿಡಿ. ಮೇಲ್ಭಾಗವನ್ನು ತುಸು ಕತ್ತರಿಸಿ ಮಡಕೆ ಆಕಾರ ಕೊಡಿ, ಬೀಜ ಬೇರ್ಪಡಿಸಿ. ಅದರ ದಪ್ಪ ಪದರನ್ನು ಬಿಟ್ಟು ಕರ್ಬೂಜಾದ ತಿರುಳು ತೆಗೆದುಬಿಡಿ. ಇದಕ್ಕೆ ಕ್ರೀಂ, ಕಂಡೆನ್ಸ್ಡ್ ಮಿಲ್ಕ್ ಮತ್ತು ನಿಂಬೆರಸ ಬೆರೆಸಿಕೊಳ್ಳಿ. ಆಮೇಲೆ ಇದಕ್ಕೆ ಹೆಚ್ಚಿದ ಚೆರ್ರಿ ದ್ರಾಕ್ಷಿ ಬೆರಿಸಿರಿ. ಎಲ್ಲವನ್ನೂ ಕರ್ಬೂಜಾಗೆ ತುಂಬಿಸಿ, 1 ತಾಸು ಫ್ರಿಜ್‌ನಲ್ಲಿರಿಸಿ ಸೆಟ್ ಮಾಡಿ. ಹೊರತೆಗೆದ ನಂತರ ದೊಡ್ಡ ಹೋಳುಗಳಾಗಿ ಹೆಚ್ಚಿ ಸವಿಯಲು ಕೊಡಿ.
ಗ್ಲೇಸ್ಡ್ ಅನಾನಸ್
ಸಾಮಗ್ರಿ : 5-6 ಅನಾನಸ್ ಬಿಲ್ಲೆಗಳು, 8-10 ಚೆರ್ರಿ, 2 ಚಮಚ ಬೆಣ್ಣೆ, ಅಗತ್ಯವಿದ್ದಷ್ಟು ಜೇನುತುಪ್ಪ, ಚೀಸ್, ಕ್ರೀಂ, ಪುದೀನಾ, ಚಾಟ್ ಮಸಾಲ ಇತ್ಯಾದಿ.
ವಿಧಾನ : ಪ್ಯಾನ್‌ಗೆ ಬೆಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಅನಾನಸ್ ಬಿಲ್ಲೆಗಳನ್ನು ಒಂದೊಂದಾಗಿ ಹಾಕಿ, ಎರಡೂ ಬದಿ ಫ್ರೈ ಆಗುವಂತೆ ಮಾಡಿ ಗ್ಲೇಸ್ ಮಾಡಬೇಕು. ನಂತರ ಸರ್ವಿಂಗ್ ಪ್ಲೇಟ್‌ಗೆ ಹಾಕಿಡಿ. ಇದರ ಮೇಲೆ ಕ್ರಮವಾಗಿ ಜೇನುತುಪ್ಪ, ಕ್ರೀಂ, ಚೀಸ್ ಹರಡಿ, ಚಾಟ್ ಮಸಾಲ ಉದುರಿಸಿ. ಚಿತ್ರದಲ್ಲಿರುವಂತೆ ಚೆರ್ರಿ ಹಣ್ಣುಗಳಿಂದ ಅಲಂಕರಿಸಿ ಸವಿಯಲು ಕೊಡಿ.
ಕಸ್ಟರ್ಡ್ ಬೋಟ್
ಸಾಮಗ್ರಿ : 1 ಸಣ್ಣ ಸೀಡ್‌ಲೆಸ್ ಪರಂಗಿ ಹಣ್ಣು, ಅರ್ಧ ಲೀ. ಗಟ್ಟಿ ಹಾಲು, 2 ಚಮಚ ಕಸ್ಟರ್ಡ್ ಪೌಡರ್, 4 ಚಮಚ ಸಕ್ಕರೆ, 2 ಮಾಗಿದ ಬಾಳೆಹಣ್ಣು, 2 ಚಮಚ ಬಾದಾಮಿ ಚೂರು, ಅರ್ಧ ಕಪ್ ಕ್ರೀಂ, ಒಂದಿಷ್ಟು ಚೆರ್ರಿ ದ್ರಾಕ್ಷಿ, ಗೋಡಂಬಿ ಪಿಸ್ತಾ ಇತ್ಯಾದಿ.
ವಿಧಾನ : ಪರಂಗಿ ಹಣ್ಣಿನ ಸಿಪ್ಪೆ ಹೆರೆದು, ಉದ್ದಕ್ಕೆ 2 ಭಾಗವಾಗಿ ಕತ್ತರಿಸಿ. ಅರ್ಧ ಭಾಗವನ್ನು ಹೋಳಾಗಿಸಿ, ಕಿಚಿಡಿ. ಆಮೇಲೆ ಹಾಲು ಕಾಯಿಸಿ. ಇದು ಕುದ್ದು ಅರ್ಧದಷ್ಟಾದಾಗ, ಸ್ವಲ್ಪ ಭಾಗ ಹೊರತೆಗೆದು ಕಸ್ಟರ್ಡ್ ಪೌಡರ್ ಹಾಕಿ ಕದಡಿಕೊಂಡು ಹಾಲಿಗೆ ಬೆರೆಸಿ ಮತ್ತಷ್ಟು ಕುದಿಸಿರಿ. ಕೆಳಗಿಳಿಸಿ ಚೆನ್ನಾಗಿ ಆರಲು ಬಿಡಿ. ನಂತರ ಇದಕ್ಕೆ ಕಿವುಚಿದ ಹಣ್ಣು ಹಾಕಿ ಕದಡಿಕೊಂಡು, ದೋಣಿಯಾಕಾರದ ಪರಂಗಿಹಣ್ಣಿಗೆ ತುಂಬಿಸಿ. ಇದಕ್ಕೆ ಕ್ರೀಂ, ಬಾದಾಮಿ ಚೂರು ಸೇರಿಸಿ. ಚಿತ್ರದಲ್ಲಿರುವಂತೆ ಇತರ ಹಣ್ಣುಗಳಿಂದ ಅಲಂಕರಿಸಿ, 1 ತಾಸು ಫ್ರಿಜ್‌ನಲ್ಲಿರಿಸಿ ನಂತರ ಸವಿಯಲು ಕೊಡಿ.
ವಾಟರ್ ಮೆಲನ್ ಸಲಾಡ್
ಸಾಮಗ್ರಿ : 1 ಸಣ್ಣ ಕಲ್ಲಂಗಡಿ ಹಣ್ಣು (ಅರ್ಧ ಭಾಗ ಮಾಡಿ, ಬೀಜ ತೆಗೆದು, ಸಿಪ್ಪೆ ಹೆರೆದಿಡಿ. ಹೋಳು ಮಾಡದೆ ಬಟ್ಟಲಿನಂತೆ ಉಳಿಸಿಕೊಳ್ಳಿ), ಒಂದಿಷ್ಟು ತುಂಡರಿಸಿದ ಚೆರ್ರಿ, ಬೀಜ ತೆಗೆದ 5-6 ಪೀಚ್ ಲೀಚಿ ಹಣ್ಣು, ಕರ್ಬೂಜದ 5-6 ತುಂಡು, 1-2 ಮಾಗಿದ ಬಾಳೆಹಣ್ಣು, 2 ನಿಂಬೆಹಣ್ಣು, 2 ಚಮಚ ಜೇನುತುಪ್ಪ, ರುಚಿಗೆ ತಕ್ಕಷ್ಟು ಬ್ಲ್ಯಾಕ್ ಸಾಲ್ಟ್ ಚಾಟ್ ಮಸಾಲ, 5-6 ತುಂಡು ಪನೀರ್ ಕ್ಯಾಪ್ಸಿಕಂ ಅನಾನಸ್.
ವಿಧಾನ : ನಿಂಬೆರಸಕ್ಕೆ ಜೇನುತುಪ್ಪ, ಬ್ಲ್ಯಾಕ್ ಸಾಲ್ಟ್, ಚಾಟ್ ಮಸಾಲ, ಬೆರೆಸಿ ಡ್ರೆಸ್ಸಿಂಗ್ ರೆಡಿ ಮಾಡಿ. ಕಲ್ಲಂಗಡಿ ಹಣ್ಣಿನ ಬಟ್ಟಲನ್ನು ಸರ್ವಿಂಗ್ ಟ್ರೇನಲ್ಲಿಟ್ಟು, ಡ್ರೆಸ್ಸಿಂಗ್‌ನಲ್ಲಿ ಅದ್ದಿಕೊಂಡ ಒಂದೊಂದೇ ಹಣ್ಣಿನ ತುಂಡನ್ನು ಟೂತ್ ಪಿಕ್ ನೆರವಿನಿಂದ ಇದಕ್ಕೆ ಸಿಗಿಸಿಡಿ. ಉಳಿದ ಡ್ರೆಸ್ಸಿಂಗ್‌ನ್ನು ಇದರ ಮೇಲೆ ಹರಡಿ, 1 ತಾಸು ಫ್ರಿಜ್‌ನಲ್ಲಿರಿಸಿ. ನಂತರ ಕಲ್ಲಂಗಡಿ ಬಟ್ಟಲನ್ನು ಹೋಳು ಮಾಡಿ, ಸಿಗಿಸಿದ ಹೋಳುಗಳ ಸಮೇತ ಸವಿಯಲು ಕೊಡಿ
ಸಮ್ಮರ್ ಸಲಾಡ್
ಸಾಮಗ್ರಿ : 2-3 ಬೆಂದ ಮೊಟ್ಟೆ, ಅರ್ಧರ್ಧ ಕಪ್ ಕ್ರೀಂ ಚೀಸ್, 4-5 ಲೀಚಿ, 5-6 ಒಣದ್ರಾಕ್ಷಿ, 4-5 ಕಿವೀ ಫ್ರೂಟ್ ಬಿಲ್ಲೆ, 2 ಅನಾನಸ್ ಬಿಲ್ಲೆ, 4-5 ಸೌತೆ ಬಿಲ್ಲೆ, 4-5 ಪನೀರ್ ತುಂಡು, 3-4 ತುಂಡು ಹಾಲಲ್ಲಿ ನೆನೆದ ಅಖರೋಟ್, ರುಚಿಗೆ ತಕ್ಕಷ್ಟು ಉಪ್ಪು ಮೆಣಸು ನಿಂಬೆರಸ ಚಾಟ್ ಮಸಾಲ, ಒಂದಿಷ್ಟು ಪುದೀನಾ ಎಲೆ, ಕಲ್ಲಂಗಡಿ ಹಣ್ಣಿನ ಹೋಳು, ಸಲಾಡ್ ಎಲೆಗಳು.
ವಿಧಾನ : ಎಲ್ಲಾ ಹಣ್ಣುಗಳನ್ನೂ ಹೆಚ್ಚಿ ಫ್ರಿಜ್‌ನಲ್ಲಿರಿಸಿ ಕೂಲ್ ಮಾಡಿ. ಮೊಟ್ಟೆ ಸಹ ಬಿಲ್ಲೆ ಮಾಡಿ. ಕ್ರೀಂ ಚೀಸ್ ಬೆರೆಸಿ ಬೀಟ್ ಮಾಡಿ. ನಿಂಬೆರಸಕ್ಕೆ ಉಪ್ಪು, ಖಾರ, ಮಸಾಲ ಹಾಕಿ ಡ್ರೆಸ್ಸಿಂಗ್ ರೆಡಿ ಮಾಡಿ. ಒಂದು ಟ್ರೇನಲ್ಲಿ ಸಲಾಡ್ ಎಲೆ ಹರಡಿಕೊಂಡು ಅದರ ಮೇಲೆ ಪದರ ಪದರವಾಗಿ ಎಲ್ಲಾ ಹಣ್ಣುಗಳನ್ನೂ ಹರಡಬೇಕು. ಇದರ ಮೇಲೆ ಡ್ರೆಸ್ಸಿಂಗ್ ಹರಡಿ, ಪುದೀನಾ ಉದುರಿಸಿ ಸವಿಯಲು ಕೊಡಿ.