ಈ ನಟಿಯಲ್ಲಿ ಇಂಥ ಪ್ರತಿಭೆ ಅಡಗಿದೆಯೇ ಎಂದು ಗಾಂಧಿನಗರದ ಜನ ಹುಬ್ಬೇರಿಸಿದ್ದಾರೆ. ಇದೇ ಪಾತ್ರ ಪರಭಾಷೆಯ ನಟಿ ಯಾರಾದರೂ ಮಾಡಿದ್ದರೆ ಇಷ್ಟರಲ್ಲಿ ಗಾಂಧಿನಗರಕ್ಕೆ ಗಾಂಧಿನಗರವೇ ಬೊಬ್ಬೆಹಾಕಿ ದೊಡ್ಡ ಪ್ರಚಾರ ಕೊಟ್ಟುಬಿಡುತ್ತಿತ್ತು. ಆದರೆ ನಿವೇದಿತಾ ನಮ್ಮ ಮನೆಯ ಹುಡುಗಿ, ಅಚ್ಚ ಕನ್ನಡತಿ ಎಂಬ ಹಿನ್ನೆಲೆ ಆಕೆಗಿದೆ.
“ನಾನು ಉತ್ತಮ ಪಾತ್ರವೊಂದಕ್ಕೆ ಜೀವ ತುಂಬಿದ್ದೇನೆ ಎಂದು ನಾನೇ ಹೇಳಿಕೊಳ್ಳುವುದಕ್ಕಿಂತ ಚಿತ್ರ ನೋಡಿದ ಪ್ರೇಕ್ಷಕರು ಈ ಮಾತು ಹೇಳಿದಾಗ ನನಗೆ ಬಹಳ ಸಂತೋಷವಾಗುತ್ತದೆ. ನಾನು ಯಾವುದೇ ಸಿನಿಮಾದಲ್ಲಿ ನಟಿಸಿದ್ದರೂ ಆ ಪಾತ್ರದಲ್ಲಿ ನನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಂಡೇ ನಾನು ನಟಿಸುವುದು,” ಎನ್ನುವ ಈಕೆ ಶಾಲೆ ಹಾಗೂ ದ್ವಿತೀಯ ಪಿಯುಸಿ ಶಿಕ್ಷಣ ಪಡೆದದ್ದು ಮೈಸೂರಿನ ಮರಿಮಲ್ಲಪ್ಪ ಕಾಲೇಜಿನಲ್ಲಿ.
ಬೆಂಗಳೂರಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಎಂಜಿನಿಯರಿಂಗ್ ಪದವಿ ಪಡೆದ ನಂತರ ಮುಂಬೈನಲ್ಲಿ ಖ್ಯಾತ ರಂಗಕರ್ಮಿ ಹಾಗೂ ಬಾಲಿವುಡ್ ನಟ ಅನುಪಮ್ ಖೇರ್ ಅವರ ಅಭಿನಯ ತರಬೇತಿ ಸಂಸ್ಥೆಯಲ್ಲಿ ಅಭಿನಯದ ತರಬೇತಿ ಪಡೆದಿದ್ದಾರೆ. ಶಿಕ್ಷಣ ಮುಗಿಯುವ ಹೊತ್ತಿಗೆ ಸರಿಯಾಗಿ ದಿನೇಶ್ ಬಾಬು `ಆಕಾಶಗಂಗೆ’ ಚಿತ್ರದ ಒಂದು ಪಾತ್ರಕ್ಕೆ ಅವಕಾಶ ನೀಡಿದರು.
“ದಿನೇಶ್ ಬಾಬು ಉತ್ತಮ ನಿರ್ದೇಶಕರು, ಅವರು ನೀಡಿದ ಅವಕಾಶವನ್ನು ನಿರಾಕರಿಸಲು ನನಗೆ ಇಷ್ಟ ಆಗಲಿಲ್ಲ, ಹಾಗಾಗಿ ಒಪ್ಪಿಕೊಂಡೆ. ಅದಕ್ಕಾಗಿ ಬೆಂಗಳೂರಿಗೆ ಬಂದು ನೆಲೆಸಿದೆ.
“ಈ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಪ್ರಜ್ವಲ್ ದೇವರಾಜ್ ನಾಯಕರಾಗಿರುವ `ಸಿಕ್ಸರ್’ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಅವಕಾಶ ಸಿಕ್ಕಿತು. ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ `ಮಾತಾಡ್ ಮಾತಾಡ್ ಮಲ್ಲಿಗೆ’ ಚಿತ್ರದಲ್ಲಿ ವಿಷ್ಣುವರ್ಧನ್‌ರ ಮಗಳಾಗಿ ಅಭಿನಯಿಸಿದ್ದು ನನಗೆ ತುಂಬಾ ಇಷ್ಟ ಆಯಿತು. ಈಗಲೂ ಅನೇಕರು ನನ್ನನ್ನು ಕಂಡಾಗ `ಮಾತಾಡ್ ಮಾತಾಡ್ ಮಲ್ಲಿಗೆ’ ಪಾತ್ರದ ಬಗ್ಗೆ ಮಾತಾಡುತ್ತಾರೆ,” ಎಂದರು.
ಇತ್ತೀಚೆಗೆ ಬಿಡುಗಡೆಯಾದ `ನಿಂಬೆಹುಳಿ’ ಚಿತ್ರದ ಮೂವರು ನಾಯಕಿಯರಲ್ಲಿ ಒಬ್ಬರಾಗಿ ಅಭಿನಯಿಸಿದ ನಿವೇದಿತಾ, “ಆ ಬಗ್ಗೆ ನನಗೆ ತುಂಬಾ ಕೆಟ್ಟ ಅನುಭವ ಆಗಿದೆ. ಇದಕ್ಕಿಂತ ಹೆಚ್ಚಾಗಿ ಆ ಚಿತ್ರದ ಬಗ್ಗೆ ನಾನೇನು ಹೇಳಲು ಇಷ್ಟಪಡುವುದಿಲ್ಲ,” ಎಂದು ಹೇಳಿದರು.
“ನಿರ್ದೇಶಕ ಶೇಷಾದ್ರಿ ಅವರು ರೊಟ್ಟಿ ದೇವಕ್ಕಳ ಪಾತ್ರಕ್ಕೆ ನಾನು ಸೂಟ್ ಆಗ್ತೀನಿ ಎನ್ನುವುದಕ್ಕೆ ಮಾತ್ರವಲ್ಲ, ನನ್ನಲ್ಲಿರುವ ಪ್ರತಿಭೆಯನ್ನೂ ಅವರು ಗಮನಿಸಿದ್ದರು. ಅವರ ನಿರೀಕ್ಷೆಗೆ ನಾನು ಮೋಸ ಮಾಡಿಲ್ಲ ಎಂದು ನಾನು ಮಾತ್ರ ಅಂದುಕೊಂಡಿದ್ದಲ್ಲ. ಅವರೇ ಖುದ್ದಾಗಿ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರ ನಿರ್ದೇಶನದ `ಬೇರು, ಮುನ್ನುಡಿ, ಭಾರತ್ ಸ್ಟೋರ್ಸ್’ ನನಗೆ ತುಂಬಾ ಇಷ್ಟ ಆಗಿದ್ದ ಸಿನಿಮಾಗಳು. ರೊಟ್ಟಿ ದೇವಕ್ಕ ಎನ್ನುವ ಪಾತ್ರ ನಿಜಕ್ಕೂ ಇಂದಿನ ವಾಸ್ತವವನ್ನು ಕಣ್ಣ ಮುಂದೆ ತರುತ್ತದೆ. ಆ ಪಾತ್ರದ ಒಳಹೊಕ್ಕು ಸಾಧ್ಯವಾದಷ್ಟೂ ಉತ್ತಮವಾಗಿ ಅಭಿನಯಿಸಲು ಪ್ರಯತ್ನಿಸಿದ್ದೇನೆ,” ಎಂದರು.
ಗ್ಲಾಮರಸ್ ಪಾತ್ರಗಳ ಬಗ್ಗೆ ನಿಮ್ಮ ಅನಿಸಿಕೆ ಏನು…..?
“ನನಗೆ ಆ ಗ್ಲಾಮರ್ ಎನ್ನುವ ಪದ ಬಳಸುವುದಕ್ಕೇ ಇಷ್ಟ ಆಗುವುದಿಲ್ಲ. ಅದು ಈಗ ತನ್ನ ನಿಜವಾದ ಅರ್ಥ ಕಳೆದುಕೊಂಡಿದೆ. ಆದ್ದರಿಂದ ಒಬ್ಬ ಸಿನಿಮಾ ನಟಿಗೆ ಇರಬೇಕಾದ `ಸ್ಟೈಲಿಶ್ ಹಾಗೂ ಕ್ಲಾಸಿ’ ಇಮೇಜ್‌ನಲ್ಲಿ ಕಾಣಿಸಿಕೊಳ್ಳುವುದಕ್ಕೆ ನಾನು ರೆಡಿ. ಚಿತ್ರಗಳಲ್ಲಿ ತುಂಬಾ ಸ್ಟೈಲಿಶ್ ಆಗಿರುವ ಬಟ್ಟೆಗಳನ್ನು ಹಾಕುವುದು ದೊಡ್ಡದೇನಲ್ಲ. ಪಾತ್ರಕ್ಕೆ ಅಗತ್ಯವಿದ್ದರೆ ಅದಕ್ಕೆ ತಕ್ಕಂತೆ ಬಟ್ಟೆ ಹಾಕುವುದಕ್ಕೆ ನನಗೇನೂ ಅಭ್ಯಂತರವಿಲ್ಲ.
“ಎಕ್ಸ್ ಪೋಸಿಂಗ್ ಅನಗತ್ಯವಾಗಿದ್ದರೆ ಅದು ತೆರೆಯ ಮೇಲೆ ನೋಡುವುದಕ್ಕೂ ಕೆಟ್ಟದಾಗಿ ಕಾಣುತ್ತದೆ. ಆದರೆ ತುಂಡು ಬಟ್ಟೆ ಹಾಕುವುದೇ ಗ್ಲಾಮರ್ ಎನ್ನುವುದನ್ನು ನಾನು ಒಪ್ಪುದಿಲ್ಲ,” ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ತೂಕ ಇರುವ ಪಾತ್ರದಲ್ಲಿ ಅಭಿನಯಿಸಲು ನಾನು ಇಷ್ಟಪಡುತ್ತೇನೆ ಎನ್ನುವ ನಿವೇದಿತಾ ನಾಲ್ಕು ತಮಿಳು ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಕಥೈ, ಪೋರ್ಕಾಲಂ, ಮಾರ್ಕಾಂಡೇಯನ್ ಹಾಗೂ ಇನ್ನೂ ಬಿಡುಗಡೆಯಾಗದ ಊ…ಲಾ…ಲಾ… ಎಂಬ ಚಿತ್ರಗಳು ಆಕೆಗೆ ಹೆಸರು ತಂದುಕೊಟ್ಟಿವೆ.
ಈವರೆಗೂ ಸುಮಾರು ಹದಿನಾರು ಚಿತ್ರಗಳಲ್ಲಿ ಅಭಿನಯಿಸಿರುವ ನಿವೇದಿತಾ, “ಕನ್ನಡದಲ್ಲಿ ಪ್ರತಿಭಾವಂತ ನಿರ್ದೇಶಕರು ಇದ್ದು, ಕನ್ನಡ ಸಿನಿಮಾಗಳು ವಿಭಿನ್ನತೆಯನ್ನು ಪಡೆದುಕೊಂಡಿವೆ. 90ರ ದಶಕದಲ್ಲಿ ಇಳಿಮುಖ ಕಂಡಿದ್ದ ಕನ್ನಡದ ಚಿತ್ರರಂಗ ಈಗ ಉತ್ತುಂಗದ ಕಡೆಗೆ ಏರುತ್ತಿದೆ,” ಎನ್ನುವ ನಿವೇದಿತಾರಿಗೆ `ಡಿಸೆಂಬರ್ 1′ ಚಿತ್ರದ ಬಿಡುಗಡೆಯ ನಂತರ ಬೇಡಿಕೆ ಇದ್ದರೂ ಉತ್ತಮ ಪಾತ್ರಗಳಿಗಾಗಿ ಅವರು ಕಾದಿದ್ದಾರಂತೆ.
ತಂದೆ ಜಗದೀಶ್ ನಿವೃತ್ತ ವಾಣಿಜ್ಯ ತೆರಿಗೆ ಅಧಿಕಾರಿ, ತಾಯಿ ಲಕ್ಷ್ಮಿಯರ ಮುದ್ದಿನ ಮಗಳು. ನಿವೇದಿತಾರಲ್ಲಿರುವ ಪ್ರತಿಭೆಯನ್ನು ಕನ್ನಡ ಚಿತ್ರರಂಗ ಬಳಸಿಕೊಳ್ಳುವ ಮೂಲಕ ಉತ್ತಮ ಅವಕಾಶಗಳನ್ನು ನೀಡಲಿ ಎಂದು ಹಾರೈಸೋಣ.
– ಸಾಲೋಮನ್