ಪ್ರಕಾಶನನ್ನು ಆಸ್ಪತ್ರೆಯಲ್ಲಿ ಹೀಗೆ ಭೇಟಿಯಾಗುತ್ತೇನೆಂದು ಶುಭಾ ಕನಸು ಮನಸ್ಸಿನಲ್ಲೂ ಯೋಚಿಸಿರಲಿಲ್ಲ. ಆಕೆ ಅಮ್ಮನ ಕಾಲಿಗೆ ಪ್ಲ್ಯಾಸ್ಟರ್ ಹಾಕಿಸಿಕೊಂಡು, ವೀಲ್ ಚೇರ್ ಮೇಲೆ ಕೂರಿಸಿಕೊಂಡು ಆಸ್ಪತ್ರೆಯಿಂದ ಹೊರಗೆ ಬರುತ್ತಿದ್ದಳು. ಎದುರಿನಿಂದ ಪ್ರಕಾಶ್‌ಬರುತ್ತಿರುವುದು ಆಕೆಯ ಕಣ್ಣಿಗೆ ಬಿತ್ತು.
“ಶುಭಾ ನೀನಿಲ್ಲಿ? ಅಮ್ಮ ಆಸ್ಪತ್ರೆಯಲ್ಲಿ ಏನಾಗಿದೆ ಇವರಿಗೆ?”
ಪ್ರಕಾಶನ ಈ ಮಾತುಗಳಿಂದ ಹಲವು ವರ್ಷಗಳ ಬಳಿಕ ಅವನು ಭೇಟಿಯಾಗಿದ್ದಾನೆಂದು ಗೊತ್ತಾಗುತ್ತಲಿತ್ತು.
“ಅಂದಹಾಗೆ ಶುಭಾ, ಹೇಗಿದ್ದಿಯಾ?”
ಅವನು ಅದೆಷ್ಟು ಆತ್ಮೀಯತೆಯಿಂದ ಪ್ರಶ್ನಿಸಿದ್ದನೆಂದರೆ, ಅವನ ಮಾತಿನ ಶೈಲಿಗೆ ದಂಗಾಗಿ ಹೋದ ಆಕೆ, “ಚೆನ್ನಾಗೇ ಇದ್ದೀನಿ. ಅಮ್ಮ ಬೆಳಗ್ಗೆ ಬಾಥ್‌ರೂಮಿನಲ್ಲಿ ಕಾಲುಜಾರಿ ಬಿದ್ದರು. ಅವರನ್ನು ತೋರಿಸಲೆಂದು ಆಸ್ಪತ್ರೆಗೆ ಬಂದಿದ್ದೆ. ಡಾಕ್ಟರ್ ತಪಾಸಣೆ ಮಾಡಿ ಕಾಲಿಗೆ ಫ್ರ್ಯಾಕ್ಚರ್ ಆಗಿದ್ದು ಪ್ಲ್ಯಾಸ್ಟರ್ ಹಾಕಬೇಕೆಂದು ಹೇಳಿದರು. ಈಗ ಪ್ಲ್ಯಾಸ್ಟರ್ ಹಾಕಿಸಿಕೊಂಡು ಹೊರಟಿರುವೆ.”
ಆಕೆ ತನ್ನ ಮಾತು ಮುಗಿಸಿದಳು. ಅಷ್ಟರಲ್ಲಿ ಅಮ್ಮ ಕೇಳಿದರು, “ಪ್ರಕಾಶ್, ನೀನು ಇಲ್ಲಿಗೆ ಹೇಗೆ ಬಂದೆ?”
“ನಾನು ಸ್ನೇಹಿತನನ್ನು ನೋಡಲು ಇಲ್ಲಿಗೆ ಬಂದಿದ್ದೆ. ಅಂದಹಾಗೆ ನನಗೆ ಇದೇ ಸಿಟಿಗೆ ವರ್ಗಾವಣೆಯಾಗಿದೆ,” ಎಂದು ಹೇಳುತ್ತಾ ಅವನು ಶುಭಾಳತ್ತ ನೋಡಿದ.
“ಬಹಳ ಖುಷಿಯಾಯ್ತಪ್ಪ. ಎಲ್ಲಿ ಉಳ್ಕೊಂಡಿದೀಯಾ ಪ್ರಕಾಶ?”
ಅಮ್ಮನಿಗೆ ಏನಾಗಿದೆ, ಅವರೇಕೆ ಹೀಗೆ ಮಾತಾಡ್ತಿದಾರೆ? ಅವರಿಗೆ ಇಷ್ಟೊಂದು ಉತ್ಸುಕತೆ ಏಕೆ? ಅವರು ಎಲ್ಲವನ್ನೂ ಮರೆತುಬಿಟ್ಟರೆ? ಮುಂಚೆಯೂ ಅವರು ಪ್ರಕಾಶ್ ಜೊತೆ ಕದ್ದುಮುಚ್ಚಿ ಫೋನ್‌ನಲ್ಲಿ ಮಾತಾಡ್ತಿದ್ದರು.
“ಅಮ್ಮಾ, ಇಂತಹ ಮಾತು ಆಡುವುದನ್ನು ನಿಲ್ಲಿಸಿ. ಈಗ ಪ್ರಕಾಶ್ ಜೊತೆ ನನಗೆ ಎಂಥ ಸಂಬಂಧ ಇದೆ. ಅವರಿಂದ ವಿಚ್ಛೇದನ ಸಿಕ್ಕಿಬಿಟ್ಟಿದೆ. ಅವರು ಬೇರೆ ಮದುವೆ ಕೂಡ ಮಾಡಿಕೊಂಡುಬಿಟ್ಟಿದ್ದಾರೆ. ನಿಮಗಿದನ್ನು ಪುನಃ ನೆನಪು ಮಾಡಿಕೊಡಬೇಕಾ?”
ಅಮ್ಮ ಪುನಃ ಮೌನವಾಗಿದ್ದರು. ಅವರು ಮತ್ತೆ ಫೋನ್ ಮಾಡಿದರೊ ಇಲ್ಲವೋ ಗೊತ್ತಿಲ್ಲ. ಆಕೆ ಅಮ್ಮನಿಗೆ ಈ ಬಗ್ಗೆ ಕೇಳಿರಲೇ ಇಲ್ಲ. `ಆದರೆ ಪ್ರಕಾಶ್….. ಇಷ್ಟೊಂದು ಆತ್ಮೀಯತೆ ತೋರಿಸುತ್ತಿರುವುದಾದರೂ ಏಕೆ?’ ಆಕೆ ಯೋಚನೆಯಲ್ಲಿ ಮುಳುಗಿದಳು.
“ಅಮ್ಮಾ, ನನ್ನ ಕಾರಿನಲ್ಲೇ ನಿಮ್ಮೆಲ್ಲರನ್ನು ಮನೆತನಕ ಬಿಡ್ತೀನಿ,” ಎಂದು ಪ್ರಕಾಶನ ಆಗ್ರಹದ ಮಾತುಗಳು ಆಕೆ ಪುನಃ ಚಕಿತಳಾಗುವಂತೆ ಮಾಡಿದ್ದ.
“ಇಲ್ಲ, ಇಲ್ಲ, ನೀವೇಕೆ ತೊಂದರೆಪಡಬೇಕು. ನಾನು ಅಲ್ಲಿ ಗೇಟಲ್ಲಿ ಒಬ್ಬ ಆಟೋದವನಿಗೆ ನಿಲ್ಲಲು ಹೇಳಿದ್ದೇನೆ. ಅವನು ಅಲ್ಲಿ ನಮಗಾಗಿ ಕಾಯುತ್ತಿರಬಹುದು,” ಶುಭಾ ತಕ್ಷಣವೇ ಹೇಳಿದಳು.
“ಅರೆ, ಇದರಲ್ಲಿ ತೊಂದರೆಯ ಮಾತೇನಿದೆ? ಇದೇ ನೆಪದಲ್ಲಿ ಮನೆಯನ್ನು ನೋಡಿದ ಹಾಗೆಯೂ ಆಗುತ್ತದೆ. 1 ಕಪ್ ಟೀನಾದ್ರೂ ಸಿಗುತ್ತೆ,” ಎಂದು ಹೇಳುತ್ತ ಅಮ್ಮನ ವೀಲ್ ಚೇರ್‌ನ್ನು ಸಂಭಾಳಿಸಿದ. ಅಮ್ಮ ಹೇಳುತ್ತಲೇ ಹೊರಟಿದ್ದರು.
“ಟೀ ಅಷ್ಟೆ ಏಕೆ, ಊಟವನ್ನೇ ಮಾಡಿಕೊಂಡು ಹೋಗುವಿಯಂತೆ. ಅಡುಗೆಯವಳು ಈಗಾಗಲೇ ಅಡುಗೆ ಮಾಡಿ ಮುಗಿಸಿರಬಹುದು.”
“ಅಮ್ಮ ಸುಮ್ಮನಿರಿ….” ಎಂದು ಹೇಳುತ್ತಾ ಶುಭಾಗೆ ಹಿಂದೆ ಹಿಂದೆಯೇ ಹೆಜ್ಜೆ ಹಾಕಬೇಕಾಯಿತು. ಕಾರಿನ ಸಮೀಪ ವೀಲ್ ಚೇರ್ ನಿಲ್ಲಿಸಿ ಪ್ರಕಾಶ್ ಅಮ್ಮನನ್ನು ಕಾರಿನ ಹಿಂದಿನ ಸೀಟಿನ ಮೇಲೆ ಆರಾಮವಾಗಿ ಕೂರಿಸಿದ. ಅನಿವಾರ್ಯವಾಗಿ ಶುಭಾ ಪ್ರಕಾಶನ ಪಕ್ಕದಲ್ಲಿಯೇ ಕುಳಿತುಕೊಳ್ಳಬೇಕಾಯಿತು.
“ದಾರಿಯನ್ನು ನೀನೇ ತೋರಿಸಬೇಕಾಗುತ್ತದೆ.”
“ಹೌದು, ನೇರವಾಗಿ ನಡೆಯಿರಿ,” ಆಕೆ ತನ್ನ ಮಾತುಕತೆಯನ್ನು ಮುಂದುರಿಸುವ ಮೂಡ್‌ನಲ್ಲಿ ಇರಲಿಲ್ಲ.
ಪ್ರಕಾಶ್ ಮೌನವಾಗಿಯೇ ಗಾಡಿ ನಡೆಸುತ್ತಲಿದ್ದ. ಅಮ್ಮ ಸೀಟಿನಲ್ಲಿ ಕುಳಿತು ನಿದ್ರೆಗೆ ಜಾರಿ ಬಿಟ್ಟಿದ್ದರು.
ಶುಭಾಳಿಗೆ ಆಕಸ್ಮಿಕವಾಗಿ ಯಾರೋ ಗಾಢ ಮೌನದಲ್ಲಿ ಸರೋವರದ ತಟದಲ್ಲಿ ಏಕಾಂಗಿಯಾಗಿ ನಿಂತ ಮರಕ್ಕೆ ಕಲ್ಲು ಹೊಡೆದಂತೆ. ಪಕ್ಷಿಗಳೆಲ್ಲ ಪಟಪಟನೆ ಹಾರಿಹೋದಂತೆ ಭಾಸವಾಯಿತು.
ಮನೆ ಬರುತ್ತಿದ್ದಂತೆಯೇ ಶುಭಾ ಗಡಿಬಿಡಿಯಿಂದಲೇ ಇಳಿದು ಬೀಗ ತೆಗೆದಳು. ಅಲ್ಲಿಂದಲೇ ಪ್ರಕಾಶ್‌ಗೆ ಧನ್ಯವಾದ ಹೇಳಿ ವಿದಾಯ ಮಾಡಬೇಕೆಂದು ಆಕೆ ಯೋಚಿಸಿದ್ದಳು. ಆದರೆ ಅವನು ಅಮ್ಮನನ್ನು ತನ್ನ ಕೈಗಳಲ್ಲಿ ಎತ್ತಿಕೊಂಡು ಹಿಂದೆಯೇ ನಿಂತಿರುವುದನ್ನು ಆಕೆ ಗಮನಿಸಿದಳು. ಅಮ್ಮ ಅವನಿಗೆ ಒಳಗೆ ಬೆಡ್ ರೂಮಿನಲ್ಲಿ ಕರೆದುಕೊಂಡು ಹೋಗಿ ಮಲಗಿಸು ಎಂದು ಹೇಳುತ್ತಿದ್ದರು. ಬಹುಶಃ ಅಮ್ಮನಿಗೆ ಡಾಕ್ಟರ್ ಕೊಟ್ಟ ಔಷಧಿ ನಿದ್ರೆ ತರಿಸುತಿತ್ತೊ ಏನೋ? ಶುಭಾಳಿಗೆ ಏನು ಮಾಡಬೇಕೊ ಗೊತ್ತಾಗುತ್ತಿರಲಿಲ್ಲ.
“ಚಹಾ ಕುಡಿತೀರಾ?” ಎಂದು ಆಕೆ ಅವನಿಗೆ ಕೇಳಲೇಬೇಕಾಯಿತು.
“ನೀನು ಇಷ್ಟಪಟ್ಟರೆ…..” ಎಂದು ಪ್ರಕಾಶ್ ನಗುತ್ತಲೇ ಹೇಳಿದ.
ಪ್ರಕಾಶನ ಮುಗುಳ್ನಗೆ ಬೆರೆತ ಮಾತು ಆಕೆಗೆ ಸಿಡಿಮಿಡಿಗೊಳ್ಳುವಂತೆ ಮಾಡಿತು. ಅವಳು ಸುಮ್ಮನೆ ಒಳಗೇ ಹೋಗಿ ಒಂದೆರಡು ನಿಮಿಷದಲ್ಲಿಯೇ ಟ್ರೇನಲ್ಲಿ ಟೀ ಕಪ್ ಹಾಗೂ ಬಿಸ್ಕತ್ತು ಇಟ್ಟುಕೊಂಡು ಬಂದಳು.
ಅಮ್ಮ ಕೂಡ ತಮ್ಮ ನೋವನ್ನು ಮರೆತು ಮಾತುಕತೆಯಲ್ಲಿ ಮಗ್ನರಾಗಿದ್ದರು.
ಪ್ರಕಾಶ್ ಸಾಕಷ್ಟು ಹೊತ್ತು ಅಮ್ಮನ ಬಳಿಯೇ ಕೂತಿದ್ದ. ಬಳಿಕ ಅಮ್ಮ ಹೇಳಿದರು, “ಪ್ರಕಾಶ್, ಊಟ ಮಾಡಿಕೊಂಡೇ ಹೋಗಪ್ಪ.”
ಶುಭಾ ಏನೋ ಯೋಚಿಸುವ ಮುಂಚೆಯೇ ಪ್ರಕಾಶ್ ಎದ್ದು ನಿಂತು ಹೇಳಿದ, “ಬೇಡ ಅಮ್ಮ, ಇಂದು ಬೇಡ. ನಾನು ನಿಮ್ಮನ್ನು ಆಗಾಗ ಭೇಟಿಯಾಗಲು ಬರ್ತಿರ್ತೀನಿ. ನೀವು ಯಾವಾಗ ಗುಣವಾಗ್ತಿರೊ ಆಗಲೇ ನಾನು ನಿಮ್ಮ ಕೈಯಾರೆ ತಯಾರಿಸಿದ ಊಟ ಮಾಡ್ತೀನಿ. ಏಕೆಂದರೆ….” ಎಂದು ಹೇಳುತ್ತಾ ಅವನು ನಿಂತುಬಿಟ್ಟ. ಆದರೆ ಯಾವ ದೃಷ್ಟಿಯಿಂದ ಅವನು ಶುಭಾಳತ್ತ ನೋಡಿದನೊ, ಅದರಿಂದ ಅವಳು ನೇಪಥ್ಯಕ್ಕೆ ಜಾರಿದಳು.
ಯಾರಿಗೆ ತಿನ್ನಿಸುವ ಇಚ್ಛೆ ಇದೆಯೋ, ಅವರೇ ತಿನ್ನಿಸಲಿ ಎಂದು ಹೇಳಲಿಲ್ಲ ಒಳ್ಳೆಯದಾಯ್ತು. ತಾನು ಮನೆಗೆ ಬಂದಾಗ ಶುಭಾ ತನ್ನ ಬಳಿಯೇ ಇರಬೇಕೆಂದು ಅವನು ಬಯಸುತ್ತಿದ್ದ. ಅವನಿಗೆ ಬಾಲ್ಯದಿಂದಲೇ ಒಳ್ಳೆಯ ತಿಂಡಿತಿನಿಸು ತಿನ್ನಬೇಕೆಂಬ ಅಪೇಕ್ಷೆ ಇತ್ತು. ಆದರೆ ಶುಭಾಳಿಗೆ ಮಾತ್ರ ಅಡುಗೆಮನೆಗೆ ಇಣುಕುವುದೆಂದರೆ ಕಷ್ಟದ ಕೆಲವೇ ಆಗಿತ್ತು. ಹೀಗಾಗಿ ಅವನು ಯಾವಾಗಲೂ ಅಡುಗೆಯ ಶೋಧದಲ್ಲಿರುತ್ತಿದ್ದ.
ಅಮ್ಮ ಕೂಡ ಹೇಳುತ್ತಿದ್ದರು, “ಶುಭಾ, ಅಡುಗೆಯವಳ ಕೈಅಡುಗೆ ಗಂಡನನ್ನು ಪರಕೀಯನಾಗಿಸುತ್ತದೆ.”
“ಏನಮ್ಮಾ, ನೀವು ಕೂಡ ಹಳೆಯ ಕಾಲದವರ ಹಾಗೆ ಮಾತಾಡ್ತೀರಲ್ಲ. ನನಗೆ ಉದ್ಯೋಗ ಮಾಡಬೇಕೆಂಬ ಆಸೆ. ಅಡುಗೆಯವಳಿಗೆ ಎಷ್ಟು ತಾನೆ ಖರ್ಚಾಗುತ್ತದೆ? 2-3 ಸಾವಿರ ಅಷ್ಟೆ ಅಲ್ವಾ? ನನಗೆ ದೊರಕುವ ಸಂಬಳದಲ್ಲಿ ಅದು ಕಡಿಮೆಯೇ.”
ಅಮ್ಮ ಆ ಮಾತಿಗೆ ಸುಮ್ಮನಾಗುತ್ತಿದ್ದರು. ಕೆಲವು ದಿನಗಳ ಬಳಿಕ ಅವರು ತಮ್ಮ ಮನೆಗೆ ವಾಪಸ್ಸಾಗುತ್ತಿದ್ದರು. ಇಬ್ಬರ ಜಗಳಕ್ಕೂ ಒಮ್ಮೊಮ್ಮೆ ಇದೇ ಕಾರಣವಾಗುತ್ತಿತ್ತು. ಆ ದಿನಗಳ ನೆನಪು ಅವಳ ಮನಸ್ಸಿನಲ್ಲಿ ಕಹಿ ಬೆರೆಸಿಬಿಟ್ಟಿತ್ತು. ಪ್ರಕಾಶ್ ಹೋದ ಬಳಿಕ ಆಕೆಯ ಮನಸ್ಸಿನಲ್ಲಿ ಅದೇ ವಿಷಯ ಸುತ್ತುತಿತ್ತು.
ಅವಳು ಅಸಮಾಧಾನಗೊಂಡಾಗೆಲ್ಲ ತನ್ನೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ಅವಳನ್ನು ಸಮಾಧಾನಪಡಿಸಲು ನಿಂತುಬಿಡುತ್ತಿದ್ದ. ಹೀಗಾಗಿ ಎಷ್ಟೋ ಸಲ ಅವನು ಕೆಲಸಕ್ಕೂ ಹೋಗಲಾಗುತ್ತಿರಲಿಲ್ಲ. ಅವಳೊಂದಿಗೆ ಜಗಳವಾಡಿದ ಬಳಿಕ ಅವನು ಅವಳನ್ನು ಹೊರಗೆ ಊಟಕ್ಕೆ ಕರೆದುಕೊಂಡು ಹೋಗುತ್ತಿದ್ದ. ಶಾಪಿಂಗ್ ಮಾಡಿಸುತ್ತಿದ್ದ. ಅಲ್ಲಿಂದ ಬಂದ ಬಳಿಕ ಅವಳನ್ನು ತನ್ನ ಬಾಹುಗಳಲ್ಲಿ ಬಂಧಿಸಿಕೊಂಡು ಬೆಡ್ ರೂಮ್ ಗೆ ಕರೆದೊಯ್ಯುತ್ತಿದ್ದ.
ಅಮ್ಮ ಮಾತ್ರೆ ತೆಗೆದುಕೊಂಡು ಮಲಗಿಬಿಟ್ಟರು. ಮಲಗುವ ಮುಂಚೆ ಹೇಳಿದರು, “ಇಂದು ಪ್ರಕಾಶನ ಭೇಟಿ ಆದದ್ದು ಒಳ್ಳೆಯದಾಯ್ತು. ಅವನು ಮುಂಚೆ ಹೇಗಿದ್ದನೊ, ಈಗಲೂ ಹಾಗೆಯೇ ಇದ್ದಾನೆ. ಅದೇ ನಗುಮುಖ, ತುಂಟಾಟದ ಸ್ವಭಾವ….”
ಅಮ್ಮನನ್ನು ಈಗಲೇ ತರಾಟೆಗೆ ತೆಗೆದುಕೊಳ್ಳಬೇಕು, ಈ ಮನುಷ್ಯ ನಿನ್ನ ಮಗಳಿಗೆ ವಿಚ್ಛೇದನ ಕೊಟ್ಟಿದ್ದಾನೆ. ನಾವು ಇಷ್ಟೊಂದು ಕಷ್ಟ ಅನುಭವಿಸಿದ್ದೇವೆ. ಆದರೆ ಆ ವ್ಯಕ್ತಿ ನೋಡಿದರೆ ಮತ್ತೊಂದು ಮದುವೆಯಾಗಿ ನೆಮ್ಮದಿಯಲ್ಲಿದ್ದಾನೆ. ನೀವು ಯಾವ ಲೋಕದಲ್ಲಿ ವಿಹರಿಸುತ್ತಿದ್ದೀರಿ ಎಂದು ಕೇಳಬೇಕು ಎನ್ನಿಸಿತು.
ಆಕೆ ಅಮ್ಮನ ಕಡೆ ನೋಡುತ್ತ ಈವರೆಗೆ ಆಗಿರುವುದನ್ನೆಲ್ಲ ಮರೆಯಲು ನಿರ್ಧರಿಸಿದಳು. ಆದರೆ ಇಂದು ಮನಸ್ಸು ಎಷ್ಟೊಂದು ಕೆಟ್ಟು ಹೋಗಿತ್ತೆಂದರೆ ಏನೂ ಮಾತನಾಡಲು ಮನಸ್ಸಾಗಲಿಲ್ಲ. ತಲೆ ಬೇರೆ ಜೋರಾಗಿ ನೋಯುತ್ತಲಿತ್ತು. ಮತ್ತೊಂದು ಸಲ ಚಹಾ ಮಾಡಿಕೊಂಡು ಬಾಲ್ಕನಿಗೆ ಬಂದಳು. ಆದರೆ ಚಹಾ ಕೂಡ ತಣ್ಣಗಾಗಿತ್ತು. ಮನಸ್ಸು ನೆನಪುಗಳ ಜಾಲದಲ್ಲಿ ಸಿಲುಕುತ್ತ ಹೊರಟಿತ್ತು.
ಪ್ರಕಾಶನೊಂದಿಗೆ ಮದುವೆಯಾದ 2 ವರ್ಷಗಳ ಬಳಿಕವೇ ಆಕೆಗೆ ವಿಚ್ಛೇದನ ಪಡೆಯಬೇಕಾದ ಪರಿಸ್ಥಿತಿ ಬಂದಿತ್ತು. ಹಾಗೆ ನೋಡಿದರೆ ಅವರ ಜಗಳಕ್ಕೆ ಯಾವುದೇ ವಿಶೇಷ ಕಾರಣಗಳಿರುತ್ತಿರಲಿಲ್ಲ. ಆದರೆ ಯಾವುದೇ ವಿಷಯಕ್ಕೆ ಸಂಬಂಧಪಟ್ಟಂತೆ ಒಂದಿಷ್ಟು ಚರ್ಚೆಯಾದರೂ ಇಬ್ಬರೂ ಜಗಳಕ್ಕಿಳಿದುಬಿಡುತ್ತಿದ್ದರು. ಅದಕ್ಕೆ ಮತ್ತೊಂದು ಕಾರಣವೆಂದರೆ, ಆಕೆ ಆಗ ಅಡುಗೆ ಮಾಡುವುದರಲ್ಲಿ, ಮನೆ ಸಂಭಾಳಿಸುವುದರಲ್ಲಿ ಸ್ವಲ್ಪ ಅಪರಿಪಕ್ವವೇ ಆಗಿದ್ದಳು. ಆರಂಭದ ಹನಿಮೂನ್‌ನ ಒಂದೆರಡು ತಿಂಗಳುಗಳು ಅವಳಿಗೆ ಬಹಳೇ ಖುಷಿಕೊಟ್ಟಿದ್ದ. ಏಕೆಂದರೆ ಆಗ ಹೊರಗೆ ಸುತ್ತಾಡಲು ಹೋದಾಗೆಲ್ಲ ಹೊಟೆಲ್‌ನಲ್ಲೇ ಊಟ ಮಾಡಿಕೊಂಡು ಬರುತ್ತಿದ್ದರು. ಆದರೆ ಪ್ರಕಾಶ್ ಜೊತೆಗೆ ಅವನ ಪ್ಲ್ಯಾಟ್‌ಗೆ ಬಂದ ಬಳಿಕವೇ ಅವಳಿಗೆ ಕಷ್ಟಗಳೆಲ್ಲ ಒಮ್ಮೆಲೇ ಮುತ್ತಿಕೊಂಡಂತೆ ಅನಿಸಿದ್ದವು.
ಮನೆಯ ಎಷ್ಟೊಂದು ಕೆಲಸಗಳು. ಮನೆಗೆಲಸದವಳು ಬರುತ್ತಾಳೆ. ಆದರೆ ಆಕೆ ಬೇರೆ ಮನೆಯಲ್ಲೂ ಕೆಲಸ ಮಾಡಿಬರುತ್ತಿದ್ದುದರಿಂದ ಪಾತ್ರೆ ಹಾಗೂ ಮನೆಯ ಸ್ವಚ್ಛೆತೆಯನ್ನು ಮಾತ್ರ ಮಾಡಿ ಹೋಗುತ್ತಿದ್ದಳು. ಎಂದಾದರೊಮ್ಮೆ ಮಾತ್ರ ಅಡುಗೆ ಕೆಲಸವನ್ನು ಮಾಡುತ್ತಿದ್ದಳು. ಮುಂಜಾನೆ ಚಹಾ ತಿಂಡಿ, ನಂತರ ಮಧ್ಯಾಹ್ನದ ಊಟ ಹೀಗೆ ಎಲ್ಲವನ್ನೂ ಮಾಡಿ ಮುಗಿಸುವ ಹೊತ್ತಿಗೆ ಆಕೆಗೆ ಅಳು ಬಂದುಬಿಡುತ್ತಿತ್ತು.
ಅಂದಹಾಗೆ ಪ್ರಕಾಶ್‌ಗೆ ಪ್ರತಿಯೊಂದೂ ಕೆಲಸದಲ್ಲಿ ಪರಿಪಕ್ವತೆ ಬೇಕಿತ್ತು. ಅಡುಗೆ ಸರಿಯಾಗಿಲ್ಲ, ಚಪಾತಿ ರೊಟ್ಟಿ ಸರಿಯಾಗಿ ಬೆಂದಿಲ್ಲ. ಪಲ್ಯಕ್ಕೆ ಉಪ್ಪು ಜಾಸ್ತಿಯಾಯಿತು, ಮನೆಯನ್ನು ಸರಿಯಾಗಿ ಗುಡಿಸಿಲ್ಲ ಎಂಬೆಲ್ಲ ಮಾತುಗಳು ಕೇಳಿಬರುತ್ತಿದ್ದವು. ಮನೆಯ ಅಷ್ಟೊಂದು ಕೆಲಸಕಾರ್ಯ ಮಾಡಿದ ಮೇಲೆ ಆಕೆಗೆ ಇಂತಹ ಮಾತುಗಳನ್ನು ಕೇಳಬೇಕಾಗಿ ಬರುತ್ತಿತ್ತು. ಹಾಸಿಗೆಗೆ ಹೋಗುತ್ತಿದ್ದಂತೆಯೇ ಆಕೆಗೆ ನಿದ್ರೆ ಒತ್ತರಿಸಿ ಬರುತಿತ್ತು. ಅವರ ಲೈಂಗಿಕ ಜೀವನ ಹೆಚ್ಚು ಕಡಿಮೆ ಮುಗಿಯುತ್ತ ಹೊರಟಿತ್ತು. ಅವರಿಬ್ಬರ ಮನಸ್ತಾಪಕ್ಕೆ ಇದೇ ಮುಖ್ಯ ಕಾರಣವಾಗುತ್ತಿತ್ತು. ಪ್ರಕಾಶನ ಕೋಪ ಬುಗಿಲೇಳುತಿತ್ತು. ಅವಳು ಬಹಳ ಹಠ ಮಾಡಿ ಒಂದು ಆಫೀಸಿನಲ್ಲಿ ಕೆಲಸಕ್ಕೆ ಸೇರಿದ್ದಳು. ಈ ಕಾರಣದಿಂದಾಗಿ ಜಗಳ ಮತ್ತಷ್ಟು ಹೆಚ್ಚಾಯಿತು.
ಕ್ರಮೇಣ ಅವರಿಬ್ಬರ ನಡುವೆ ಅಂತರ ಹೆಚ್ಚುತ್ತ ಹೋಯಿತು. ಪ್ರಕಾಶ್ ಹೋಟೆಲ್ ನಲ್ಲಿ ತನ್ನ ಆಫೀಸಿನ ಸ್ಟೆನೊ ಜೊತೆಗೆ ಕಾಲ ಕಳೆಯುತ್ತಿರುತ್ತಾನೆ ಎಂಬ ಗಾಳಿ ಸುದ್ದಿಯೂ ಬರುತ್ತಿದ್ದವು. ಅವವಳನ್ನು ತನ್ನೊಂದಿಗೆ ಟೂರ್‌ಗೆ ಕರೆದುಕೊಂಡು ಹೋಗಿದ್ದ ಎಂಬ ಗಾಳಿ ಸುದ್ದಿಯೂ ಬರುತ್ತಿದ್ದವು. ತಮ್ಮಿಬ್ಬರ ಜೋಡಿ ಹೇಳಿ ಮಾಡಿಸಿದಂಥ ಜೋಡಿಯಲ್ಲ, ತಮ್ಮ ಮದುವೆ ಒಂದು ಮೋಸ ಎಂಬುದು ಅವಳಿಗೆ ಅನಿಸುತ್ತಲಿತ್ತು.
ಬಳಿಕ ಆಕೆ ಉದ್ದೇಶಪೂರ್ವಕವಾಗಿ ತನ್ನನ್ನೇ ಅಮ್ಮನಿದ್ದ ಊರಿಗೆ ವರ್ಗಾಯಿಸಿಕೊಂಡಳು.
`ಏಕೆ?’ ಅಮ್ಮ ಆಶ್ಚರ್ಯದಿಂದ ಕೇಳಿದ್ದರು.
“ಇನ್ಮುಂದೆ ನನಗೆ ಪ್ರಕಾಶ್ ಜೊತೆಗೆ ಇರಲು ಆಗುವುದಿಲ್ಲ,” ಎಂದು ಹೇಳಿದಾಗ ಅಮ್ಮನಿಗೆ ಆಕಾಶದಿಂದ ಕೆಳಗೆ ಬಿದ್ದ ಅನುಭವವಾಗಿತ್ತು.
“ನಿಂಗೇನು ಹುಚ್ಚುಗಿಚ್ಚು ಹಿಡಿದಿದೆಯಾ? ಮದುವೆ ಎಂದರೆ ಅದೇನು ಗೊಂಬೆ ಆಟವೋ, ಹೀಗೆ ಒಮ್ಮಿಂದೊಮ್ಮೆ ಬಿಟ್ಟುಬಿಡೋಕೆ.”
“ಅದು ಗೊಂಬೆ ಆಟವೋ, ಅಲ್ಲವೋ ನನಗೆ ಗೊತ್ತಿಲ್ಲ. ಆದರೆ ಇಂತಹ ಉಸಿರುಗಟ್ಟಿಸುವ ವಾತಾವರಣದಲ್ಲಿ ಇರಲು ನನಗೆ ಖಂಡಿತ ಆಗುವುದಿಲ್ಲ. ನನಗೂ ಖುಷಿಯ ವಾತಾವರಣ ಬೇಕು.”
ಅಮ್ಮ ಬಹಳ ಕೆದಕಿ ಕೇಳಿದಾಗ ಅವಳು ಎಲ್ಲವನ್ನು ಬಿಡಿಸಿ ಹೇಳಿದ್ದಳು. ಅಮ್ಮ ಆಕೆಗೆ ಸಾಕಷ್ಟು ತಿಳಿಸಿ ಹೇಳಿದರು, “ಮಗಳೇ, ಇವೆಲ್ಲ ಸಾಮಾನ್ಯ ಸಂಗತಿಗಳು. ನೀವಿಬ್ಬರೂ ಜೊತೆ ಜೊತೆಗೆ ಇದ್ದರೆ ಕ್ರಮೇಣ ಪರಸ್ಪರರನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಒಂದು ಮಗುವಾಗಲಿ ಎಂದು ನಾನು ಬಯಸುತ್ತೇನೆ.”
ಆಗ ಅವಳು ಸ್ವಲ್ಪ ಸಿಡುಕಿನಿಂದಲೇ ಹೇಳಿದ್ದಳು, “ಅಮ್ಮಾ, ನಾನು ಹೇಳುವುದು ನಿಮಗೇಕೆ ಅರ್ಥ ಆಗ್ತಿಲ್ಲ. ಇವೆಲ್ಲ ವಿಶೇಷ ವಿಷಯಗಳೇ. ನಾನು ಮಗುವಿಗೆ ಜನ್ಮ ನೀಡಬೇಕು, ಅದನ್ನು ಪಾಲಿಸಬೇಕು ಎಂದು ನೀವು ಹೇಳ್ತಿರಿ. ನನಗೆ ಈಗಿರುವ ಕಷ್ಟಗಳೇನು ಕಡಿಮೆಯೇ?”
“ನೋಡು ಶುಭಾ, ಆತುರದಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹೋಗಬೇಡ.”
ಬಹುಶಃ ಅವರು ಪ್ರಕಾಶ್‌ಗೆ ಹಲವು ಸಲ ಫೋನ್ ಮಾಡಿದ್ದರು. ಹಾಗೆಂದೇ ಅವರು ಬಂದು ದಿನ ಹೇಳಿದ್ದರು, `ಶುಭಾ ಒಂದೇ ಒಂದು ಸಲ ಫೋನ್ ಮಾಡಿದ್ರೆ ನಾನು ಅವಳನ್ನು ಕರೆದುಕೊಂಡು ಹೋಗಲು ಬರ್ತೀನಿ,’ ಎಂದು ಪ್ರಕಾಶ್ ಹೇಳ್ತಿದ್ದ.
“ಏಕೆ?” ಆಕೆ ಮತ್ತೆ ಸಿಡುಕಿದಳು, “ಇಲ್ಲೂ ಅದೇ ಹಠ. ನಾನೇಕೆ ಫೋನ್ ಮಾಡಬೇಕು. ಅವನು ಒಂದ ಕ್ಷಮೆ ಕೇಳಿದರೆ ಮಾತ್ರ ನಾನು ಹೋಗಲು ಸಿದ್ಧ.”
“ಮಗಳೆ, ಇಷ್ಟೊಂದು ಹಠ ಒಳ್ಳೆಯದಲ್ಲ.”
ಈ ಮಧ್ಯೆ ಪ್ರಕಾಶ್ ತನ್ನ ಹಳೆಯ ಸಹಪಾಠಿಯ ಜೊತೆ ಎರಡನೇ ಮದುವೆ ಮಾಡಿಕೊಳ್ಳುತ್ತಿದ್ದಾನೆ ಎಂದು ಗಾಳಿ ಸುದ್ದಿ ಬೇರೆ ಬಂದಿತು. ಈಗ ಉಳಿದಿರುವುದು ವಿಚ್ಛೇದನದ ಕಾಗದ ಪತ್ರಗಳ ನಿರೀಕ್ಷೆ ಮಾಡುವುದು ಮಾತ್ರ.
“ಅಮ್ಮ, ಈಗ ನೋಡು ಪ್ರಕಾಶ್ ಎರಡನೇ ಮದುವೆಗೆ ತಯಾರಾಗಿದ್ದಾನೆ. ಅಂತದ್ದರಲ್ಲಿ ನೀವು ನನ್ನನ್ನು ಅಲ್ಲಿಗೆ ಕಳಿಸೋಕೆ ಹೊರಟಿದ್ದೀರಿ,” ಎಂದು ಹೇಳಿ ಸಾಕಷ್ಟು ಜಗಳವಾಡಿದ್ದಳು.
ಶುಭಾ ಬೆಂಗಳೂರಿನಲ್ಲಿ ಹೊಸ ಆಫೀಸಿಗೆ ಸೇರ್ಪಡೆಗೊಂಡ ನಂತರ ಅಮ್ಮನನ್ನು ತನ್ನ ಜೊತೆಗೆ ಕರೆದುಕೊಂಡು ಬಂದಿದ್ದಳು. ಒಳ್ಳೆಯದ್ದೊ ಕೆಟ್ಟದ್ದೊ ಅವಳು ಎಲ್ಲವನ್ನು ಸಹಿಸಿಕೊಂಡಿದ್ದಾಳೆ. ಆದರೆ ಪ್ರಕಾಶ್ ಇಲ್ಲಿ ಏಕೆ ಬಂದಿದ್ದಾನೆ? ಅವನಿಗೆ ಇಲ್ಲಿಗೆ ಬರಬೇಡ ಎಂದು ಅಮ್ಮನಿಗೆ ಸ್ಪಷ್ಟವಾಗಿ ಹೇಳಿಬಿಡಬೇಕು ಎಂದುಕೊಂಡಳು. ಆದರೆ ಈಗ ಅಮ್ಮನ ಆರೋಗ್ಯ ಹದಗೆಡುತ್ತ ಹೊರಟಿತ್ತು. ಅವರ ಹೃದಯ ಕೂಡ ಸಾಕಷ್ಟು ದುರ್ಬಲವಾಗಿದೆಯೆಂದು ವೈದ್ಯರು ಹೇಳಿದ್ದರು. ಅದೊಂದು ದಿನ ಆಕೆ ಆಫೀಸಿನಿಂದ ಮನೆಗೆ ಬಂದಾಗ ಮಧ್ಯಾಹ್ನ ಪ್ರಕಾಶ್ ಬಂದುಹೋದ ಬಗ್ಗೆ ಅಮ್ಮ ತಿಳಿಸಿದರು. ಅವನ ಆಫೀಸು ಇಲ್ಲಿಯೇ ಸಮೀಪದಲ್ಲಿದೆಯಂತೆ.
ಡಾಕ್ಟರ್ ಜೊತೆಗೆ ಮಾತನಾಡಿ ನನ್ನ ಸಂಪೂರ್ಣ ಚೆಕ್ ಅಪ್ ಮಾಡಿಸ್ತೀನಿ ಎಂದು ಅವನು ಹೇಳ್ತಾ ಇದ್ದ. ಆಸ್ಪತ್ರೆಯಲ್ಲಿ ಅವನಿಗೆ ಸಾಕಷ್ಟು ಪರಿಚಯ ಇದೆಯಂತೆ. ಎರಡನೇ ಮದುವೆ ಮಾಡಿಕೊಂಡ್ರೂ ಕಷ್ಟ ತಪ್ಪಿಲ್ಲ. ಅವನೀಗ ಬೇರೆಯೇ ವಾಸಿಸುತ್ತಿದ್ದಾನೆ…..’
“ಅಮ್ಮಾ,” ಅವಳು ಮಧ್ಯದಲ್ಲಿಯೇ ತಡೆದು, ನಿಮ್ಮ ಸಂಪೂರ್ಣ ಜವಾಬ್ದಾರಿ ನನ್ನದು. ಪ್ರಕಾಶ್‌ದ್ದಲ್ಲ. ನಾನು ನಿಮ್ಮ ಬಗ್ಗೆ ವೈದ್ಯರ ಬಳಿ ಮಾತನಾಡಿದ್ದೇನೆ. ಮುಂದಿನ ವಾರ ಎಲ್ಲ ಟೆಸ್ಟ್ ಗಳನ್ನು ಮಾಡಿಸಲಿದ್ದೇನೆ. ಅದಕ್ಕಾಗಿ ನಾನು ರಜೆಗೆ ವ್ಯವಸ್ಥೆ ಕೂಡ ಮಾಡಿಕೊಂಡಿದ್ದೇನೆ.”
ಅಮ್ಮ ಆ ಮಾತಿಗೆ ಏನೂ ಮಾತನಾಡಲಿಲ್ಲ. ಈಚೆಗೆ ಅವರು ಹೆಚ್ಚಾಗಿ ಮೌನವಾಗಿಯೇ ಇರುತ್ತಿದ್ದರು. ಬಳಿಕ ಅವರನ್ನು ವೈದ್ಯರ ಬಳಿ ತೋರಿಸುವ ಪ್ರಸಂಗ ಬರಲಿಲ್ಲ. ಮೂರನೇ ದಿನದ ರಾತ್ರಿ ಮಲಗಿದರು ಮತ್ತೆ ಮೇಲೇಳಲೇ ಇಲ್ಲ. ಬಹುಶಃ ಅವರಿಗೆ ನಿದ್ರೆಯಲ್ಲಿಯೇ ಹೃದಯಾಘಾತವಾಗಿತ್ತೊ ಏನೊ.
ಶುಭಾಗೆ ಆಘಾತವಾಗಿತ್ತು. ಅಮ್ಮ ಇಷ್ಟು ಬೇಗ ತನ್ನನ್ನು ಬಿಟ್ಟು ಹೊರಟುಹೋಗುತ್ತಾರೆಂದು ಆಕೆ ಕನಸು ಮನಸ್ಸಿನಲ್ಲೂ ಎಣಿಸಿರಲಿಲ್ಲ. ಪ್ರಕಾಶ್‌ಗೂ ಇದರ ಸುದ್ದಿ ದೊರಕಿತ್ತು.
ಅದೊಂದು ದಿನ ಪ್ರಕಾಶ್ ಧೈರ್ಯ ಮಾಡಿ ಹೇಳಿಯೇ ಬಿಟ್ಟ, “ಶುಭಾ, ಆಗಿದ್ದು ಆಗಿಹೋಯಿತು. ನಾವು ಅದನ್ನು ಬದಲಿಸಲಂತೂ ಸಾಧ್ಯವಿಲ್ಲ. ನಿನ್ನಿಂದ ವಿಚ್ಛೇದನ ಪಡೆದದ್ದು ನನ್ನ ಜೀವನದ ಮಹಾ ಮೂರ್ಖತನದ ಕೆಲಸ ಎಂದು ನನಗೆ ಗೊತ್ತಾಗಿದೆ. ಸ್ನೇಹಾಳೊಂದಿಗೆ ಆತುರಾತುರದಲ್ಲಿ ಮದುವೆ ಮಾಡಿಕೊಂಡಿದ್ದು ಕೂಡ ನನ್ನ ತಪ್ಪು ಎನ್ನುವುದು ನನ್ನ ಅರಿವಿಗೆ ಬಂದಿದೆ. ಅದರ ಪರಿಣಾಮವನ್ನು ನಾನೀಗ ಅನುಭವಿಸುತ್ತಿದ್ದೇನೆ. ಈಗ ನಾವಿಬ್ಬರೂ ಬೇರೆ ಬೇರೆಯೇ ಇದ್ದೇವೆ. ಆಕೆಗೆ ಹಲವರೊಂದಿಗೆ ಸಂಬಂಧ ಇದೆ. ಆದರೆ ಆಕೆ ನನ್ನೊಂದಿಗೆ ಮದುವೆ ಮಾಡಿಕೊಳ್ಳಲು ಏಕೆ ಒಪ್ಪಿದ್ದಳೊ ಏನೊ. ಕೆಲವು ದಿನಗಳ ಹಿಂದಷ್ಟೇ ಆಕೆ ಮಹಿಳಾ ವಕೀಲರ ಜೊತೆಗೆ ಬಂದು ಕನ್ಸೆಂಟ್ ಡಿಕ್ರಿ ಬಗ್ಗೆ ಒಪ್ಪಿಗೆ ಕೇಳಿದ್ದಳು ಹಾಗೂ ಅದರ ಜೊತೆಗೆ 2 ಲಕ್ಷ ರೂ. ಕೂಡ. ವಾಸ್ತವ ಸಂಗತಿಯನ್ನು ನಾನು ಯಾರಿಗೂ ತಿಳಿಸಿರಲಿಲ್ಲ,” ಪ್ರಕಾಶ್ ಅವಳ ಕೈಯನ್ನು ತನ್ನ ಕೈಯಲ್ಲಿಟ್ಟುಕೊಂಡು ಹೇಳಿದ.
ಶುಭಾಳ ಮುಖ ಈಗಲೂ ಭಾವರಹಿತವಾಗಿಯೇ ಇತ್ತು.“ನಾವಿಬ್ಬರೂ ಪುನಃ ಹೊಸಜೀವನ ಆರಂಭಿಸಬೇಕೆಂಬುದೇ ನನ್ನ ಯೋಚನೆ. ಏನೇನು ನಡೆಯಿತೊ ಅದನ್ನೆಲ್ಲ ಮರೆತು ನಾನು ನಿನ್ನನ್ನು ನನ್ನ ಹೃದಯದಲ್ಲಿ ಸ್ಥಾಪಿಸಿಕೊಳ್ಳಲು ಸಿದ್ಧನಿದ್ದೇನೆ.”
“ಪ್ರಕಾಶ್,” ಎಂದಷ್ಟೇ ಉಚ್ಚರಿಸಿ ಅವಳ ಧ್ವನಿ ನಿಂತಂತೆ ಆಯಿತು. ಅವಳು ಮುಂದೆ ಸಾಗಿ ಪ್ರಕಾಶನ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡಳು.