ಎಲ್ಲ ಗಂಡಂದಿರಿಗೂ ತಮ್ಮ ದಾಂಪತ್ಯ ಜೀವನದಲ್ಲಿ ಒಂದಲ್ಲ ಒಂದು ಬಾರಿ `ನೀವು ಮಾತಾಡ್ಲೇ ಬೇಡಿ’ ಎನ್ನುವ ಆದೇಶ, ಬೆದರಿಕೆ ಖಂಡಿತ ಕೇಳಬೇಕಾಗುತ್ತದೆ. ಸರಳ ಶಬ್ದಗಳಲ್ಲಿ ಹೇಳುವುದಾದರೆ ನನ್ನ ಮಾತು ನಿಂತುಹೋಗುತ್ತದೆ. ಈ ಬೆದರಿಕೆಗೆ ನನಗೆ ಮಕ್ಕಳ ಜನಪ್ರಿಯ ಟಿವಿ ಸೀರಿಯಲ್`ಟಾಮ್ ಅಂಡ್‌  ಜೆರ್ರಿ’ ನೆನಪಾಗುತ್ತದೆ. ಚಾಲಾಕಿ, ತುಂಟ ಜೆರ್ರಿ ಕ್ರೂರ ಬೆಕ್ಕನ್ನು ಬಹಳಷ್ಟು ಕಾಡಿಸಿ ಗೋಳಾಡಿಸುತ್ತದೆ. ಆದರೆ ನನ್ನ ಹೆಂಡತಿಯ ಗದರಿಕೆಗೆ ಎದುರಾಗಿ ನಾನು ಮಂಡಿಯೂರಬೇಕಾಗಿರುವುದು ನನ್ನ ಹಣೆಯಲ್ಲಿ ಬರೆದಿದೆ. `ನೀವು ಮಾತಾಡ್ಲೇ ಬೇಡಿ’ ಎಂಬ ಲಟ್ಟಣಿಗೆಯನ್ನು ನನ್ನ ಹೆಂಡತಿ ಆರತಿ ನನ್ನತ್ತ ಎಸೆಯುತ್ತಲೇ ಇರುತ್ತಾಳೆ. ಜೆರ್ರಿ ಟಾಮ್ ಗೆ ಮಾಡುವಂತೆ ನಾನು ಆರತಿಗೆ ಗೋಳಾಡಿಸಲು ನನಗೆ ಧೈರ್ಯವೇ ಇಲ್ಲ. ಒಂದು ಪುಟ್ಟ ಇಲಿ ಭಯಂಕರ ಬೆಕ್ಕಿನ ತಲೆಯ ಮೇಲೆ ಹತ್ತಿ ಥೈ ಥೈ ಎಂದು ಕುಣಿಯುತ್ತದೆ. ಆದರೆ ನಾನು ನನ್ನ ಹೆಂಡತಿಯ ಎದುರು ಆಯುಧ ಎಸೆಯಲಿಕ್ಕೂ ಭಯಭೀತನಾಗುತ್ತೇನೆ.

ಅಂದೂ ಹಾಗೇ ಆಯಿತು. ಕೌಟುಂಬಿಕ ಚರ್ಚೆ ನಡೆಯುತ್ತಿತ್ತು. ನಾನೂ ಪೊಲಿಟಿಕ್‌ ಸೈನ್ಸ್ ಓದಿದ್ದೇನೆ. ಅದರಲ್ಲಿ ಎಲ್ಲ ನಾಗರಿಕರಿಗೂ ತಮ್ಮ ವಿಚಾರಗಳನ್ನು ವ್ಯಕ್ತಪಡಿಸಲು ಸಂಪೂರ್ಣ ಹಕ್ಕು, ಅಧಿಕಾರವಿದೆ ಎಂದು ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ನಾನು ಧೈರ್ಯವಹಿಸಿ ಬಾಯಿ ತೆರೆದೆ. ಆರತಿ ಕೋಪೋದ್ರಿಕ್ತಳಾಗಿ ರೌದ್ರರೂಪ ಧರಿಸಿ ಗರ್ಜಿಸಿದಳು, “ನೀವು ಮಾತಾಡ್ಲೇ ಬೇಡಿ!”

ನಾನೇನು ಮಾಡಲಿ? ಮನಸ್ಸಿಗೆ ಬಹಳ ಬೇಜಾರಾಗಿತ್ತು. `ನೀವು ಮಾತಾಡ್ಲೇ ಬೇಡಿ’ ಎಂಬುದಂತೂ ಹೆಂಡತಿಯ ಆಜ್ಞೆಯಾಗಿತ್ತು. ಅದನ್ನು ವಿಧೇಯ ಸೈನಿಕನಂತೆ ಪಾಲಿಸಲೇ ಬೇಕಾಗಿತ್ತು. ಅಲ್ಲಿ ಯಾವುದೇ ವಿಧವಾದ ತರ್ಕಕ್ಕೂ ಅವಕಾಶವೇ ಇರಲಿಲ್ಲ.`ಮೊದಲು ವಿಧೇಯನಾಗಿರು, ನಂತರ ವಾದ ಮಾಡು,’ ಎನ್ನುವ ಸಿದ್ಧಾಂತ ಮಾತ್ರ ನಡೆಯುತ್ತದೆ. ಎಲ್ಲ ಸಿದ್ಧಾಂತಗಳು, ಕಾನೂನುಗಳು, ನಿಯಮಗಳೂ ನ್ಯಾಯವನ್ನು ನಿರೀಕ್ಷಿಸುವ ಕಡೆಯೇ ಇರುತ್ತವೆ. ಆದರೆ ನನ್ನ ಮನೆಯಂತೂ ಕೋರ್ಟ್‌ ಅಲ್ಲ. ನಿರಂಕುಶಾಡಳಿತವೆಂಬ ತಿಗಣೆಗಳಿಂದ ತುಂಬಿರುವ ಮಂಚವಾಗಿದೆ. ನಾನು ಮಂಜು ತುಂಬಿದ ಸಿಯಾಚಿನ್‌, ಲೇಹ್‌ನ ಶತ್ರುಗಳೊಂದಿಗೆ ಹೋರಾಡಬಲ್ಲೆ. ಆದರೆ ಹೆಂಡತಿಯ ಆಜ್ಞೆಯೆಂಬ ತಿಗಣೆಗಳನ್ನು ಎದುರಿಸಲಾಗುತ್ತಿರಲಿಲ್ಲ. ನಾನು ತಲೆ ತಗ್ಗಿಸಿ, “ನೀನು ಹೇಳೋದು ಸರಿ ಆರತಿ, ಸಂಸಾರದ ವಿಷಯಗಳಲ್ಲಿ ನಾನು ತಲೆ ಹಾಕಬಾರದು,” ಎಂದೆ. ಆರತಿಗೆ ಖುಷಿಯಾಯಿತು,

“ನೀವು ಬಹಳ ಬುದ್ಧಿಂತರು. ಒಮ್ಮೊಮ್ಮೆ ದೇಶದ ಹಿತಕ್ಕಾಗಿ ಮಂತ್ರಿಗಳಿಂದಲೂ ಮಾತಾಡುವ ಅಧಿಕಾರ ಕಿತ್ತುಕೊಳ್ಳಲಾಗುತ್ತದೆ. ಪ್ರೆಸ್‌ ಕಾನ್ಛೆರೆನ್ಸ್ ಗಳಲ್ಲಿ, `ನೀವು ಮಾತಾಡ್ಲೇ ಬೇಡಿ,’ ಎನ್ನುವ ತೂಗುಗತ್ತಿ ಅವರ ತಲೆಯ ಮೇಲೆ ಸುತ್ತುತ್ತಿರುತ್ತದೆ. ಅವರು ಪಕ್ಷದ ಹಿತದೃಷ್ಟಿಯಿಂದ ತಮ್ಮ ತುಟಿಗಳನ್ನು ಹೊಲಿದುಕೊಳ್ಳುತ್ತಾರೆ,” ಎಂದಳು. ಆರತಿಯ ಮಾತಿನ ಅರ್ಥ ನನಗೆ ತಿಳಿಯಿತು. ನಮ್ಮ ನಾಯಕರೇ ಜನರ ಹಿತಕ್ಕಾಗಿ, `ನೀವು ಮಾತಾಡ್ಲೇ ಬೇಡಿ’ ಎಂಬುದರ ರಹಸ್ಯ ತಿಳಿದುಕೊಂಡಾಗ ನನ್ನಂತಹ ಕ್ಷುದ್ರನಾದ ಪತಿ ಪತ್ನಿಯ ಭಾವನೆಗಳನ್ನು ಹೇಗೆ ಉಪೇಕ್ಷಿಸಲಾದೀತು?

ನನಗೆ ಆರತಿಯ ಕೈಯನ್ನು ಚುಂಬಿಸಿ ಹೀಗೆ ಹೇಳಬೇಕೆನ್ನಿಸಿತು, “ಪ್ರಿಯೆ, ನಿನಗೆ ನಮ್ಮ  ಸಂಸಾರದ ಬಗ್ಗೆ ಬಹಳ ಕಾಳಜಿ ಇದೆ. ನಾನು ಯಾವಾಗ ಏನು ಮಾತಾಡಬೇಕು, ಯಾವಾಗ ಬಾಯಿ ತೆರೆಯಬೇಕು, ಯಾವಾಗ ಬಾಯಿ ಮುಚ್ಚಬೇಕು ಎಂದೆಲ್ಲಾ ನೀನು ಆಗಿಂದಾಗ್ಗೆ ಸೂಚಿಸುತ್ತಿರುತ್ತೀಯ. ಪ್ರಿಯೆ, ನಿನಗೆ ಗೊತ್ತು. ಸಂವೇದನಾಶೀಲ ವಿಷಯಗಳ ಬಗ್ಗೆ ಮಾತಾಡುವ ಮುಂಚೆಯೇ ನನಗೆ ಆವೇಶವುಂಟಾಗುತ್ತದೆ. ನನ್ನ ಬಿ.ಪಿ. ಹೆಚ್ಚುತ್ತದೆ. ಆಗೋ ಕೆಲಸ ಹಾಳಾಗುತ್ತದೆ. ನಿನ್ನ ಈ ವಿಘ್ನ ವಿನಾಶಕ ವಾಕ್ಯ `ನೀವು ಮಾತಾಡ್ಲೇ ಬೇಡಿ’ ಪರಿಸ್ಥಿತಿಯನ್ನು ಸಂಭಾಳಿಸುತ್ತದೆ ಮತ್ತು ಗೃಹಕಲಹಗಳಿಂದ ಪಾರು ಮಾಡುತ್ತದೆ.”

ಇಂತಹ ಊಹಾಪೋಹದ ಸ್ಥಿತಿಯಲ್ಲಿ ನನ್ನಂತಹ ಬುದ್ಧಿವಂತ ಪತಿ ಶಾಂತವಾಗಿರಬೇಕು. ನನ್ನ ಚಂಚಲ ಗುಣ ಯಾವಾಗಲೂ ನನ್ನನ್ನು ಒಂದಲ್ಲಾ ಒಂದು ಇಕ್ಕಟ್ಟಿನಲ್ಲಿ ಸಿಕ್ಕಿಸುತ್ತದೆ. ಆಗ `ನೀವು ಮಾತಾಡ್ಲೇ ಬೇಡಿ’ ಎಂಬ ವಶೀಕರಣ ಮಂತ್ರ ನನ್ನನ್ನು ಸಂಸಾರದ ಜಂಜಾಟದಿಂದ ಪಾರು ಮಾಡುತ್ತದೆ.

ನನ್ನ ಮಗಳ ಮದುವೆಯಲ್ಲಿ ನಡೆದ ಘಟನೆ. ಆಗ ನಾನು ತುಂಬಾ ಭಾಕವುನಾಗಿದ್ದೆ. ಭಾವುಕತೆಯಲ್ಲಿ ತೆಗೆದುಕೊಂಡ ನಿರ್ಧಾರಗಳು ಯಾವಾಗಲೂ ತೊಂದರೆ ಕೊಡುತ್ತವೆ. ನಾನು ಬೀಗರಿಗೆ ಭಾವುಕತೆಯಿಂದ, “ನೀವು ಯೋಚಿಸಬೇಡಿ. ಮದುವೆಯಲ್ಲಿ ನೀವು ಎಷ್ಟು ನೆಂಟರನ್ನಾದ್ರೂ ಕರೆದುಕೊಂಡು ಬನ್ನಿ. ನಾವು ಸಂಭಾಳಿಸುತ್ತೇವೆ,” ಎಂದೆ.

ಆರತಿ ಅವಕಾಶ ನೋಡಿ ಏಕಾಂತದಲ್ಲಿ, “ನೀವು ಮಾತಾಡ್ಲೇ ಬೇಡಿ. ಈಗ ಬೇಸಿಗೆ ಕಾಲ. ನೆಂಟರಿಗೆ ನೀರೆಲ್ಲಿಂದ ತರೋಣ? ಬೋರ್‌ವೆಲ್ ಒಣಗಿಹೋಗಿದೆ. ಸಿಟಿಯಲ್ಲಿ ಎಲ್ಲೆಲ್ಲೂ ನೀರಿನ ಸಮಸ್ಯೆ. ಇಂಥ ದುಬಾರಿ ದಿನಗಳಲ್ಲಿ ಅವಮಾನ ಆಗ್ಬೇಕಾ?” ಎಂದು ಕೇಳಿದಳು.

ಆಗ ನನಗೆ ನನ್ನ ತಪ್ಪಿನ ಅರಿವಾಯಿತು. ನಿಜ, ಆರತಿ ಹೇಳುವ `ನೀವು ಮಾತಾಡ್ಲೇ ಬೇಡಿ’ ಮಂತ್ರ ಸಮಸ್ಯೆಗೆ ಪರಿಹಾರ ಹುಡುಕಿಯೇ ತೀರುತ್ತದೆ.

ಒಂದು ವೇಳೆ ಆರತಿ ನನ್ನ ಜೀವನದಲ್ಲಿ ಬಾರದೇ ಇದ್ದಿದ್ದರೆ ಮತ್ತು ಅವಳು ನನಗೆ `ನೀವು ಮಾತಾಡ್ಲೇ ಬೇಡಿ’ ಎಂಬ ಪ್ರೇರಣಾತ್ಮಕ ಗುರುಮಂತ್ರ ಕೊಡದೇ ಇದ್ದಿದ್ದಲ್ಲಿ ನಾನೆಷ್ಟೋ ಮಾನಸಿಕ ಒತ್ತಡವನ್ನು ಅನುಭವಿಸುತ್ತಾ ಹೈ ಬ್ಲಡ್‌ ಪ್ರೆಶರ್‌, ಸಕ್ಕರೆ ಕಾಯಿಲೆ, ಹೃದಯ ರೋಗಳಂತಹ ಅನೇಕ ಕಾಯಿಲೆಗಳಿಗೆ ಬಲಿಯಾಗಿ ಸಂತೋಷದಿಂದ ನಕ್ಕುನಲಿಯುವ ಬದುಕಿಗೆ ಮಂಗಳ ಹಾಡುತ್ತಿದ್ದೆ.

ಈಗೀಗ ನಾನು ಬೆಳಗ್ಗೆ ಹಾಜ್‌ಮೋಲಾ ಚೂರ್ಣ ತೆಗೆದುಕೊಳ್ಳುವುದನ್ನು ಬಿಟ್ಟು `ನೀವು ಮಾತಾಡ್ಲೇ ಬೇಡಿ’ ಎನ್ನುವ ಮಾತ್ರೆ ಸೇವಿಸುತ್ತಿದ್ದೇನೆ. ಕೆಲವು ತಿಂಗಳುಗಳಿಂದ ನಾನು ನನ್ನ ನಾಲಿಗೆಗೆ ಮೂಗುದಾರ ಹಾಕಿಕೊಂಡಿದ್ದರೂ ತುಂಟ ಕುದುರೆಯಂತೆ ಓಡುವ ನಾಲಿಗೆಗೆ ಹೆಚ್ಚು ಹೊತ್ತು ನಿಯಂತ್ರಣ ಹಾಕಲಾಗುವುದಿಲ್ಲ.

ಅವಿಭಕ್ತ ಕುಟುಂಬದ ಪಿತ್ರಾರ್ಜಿತ ಆಸ್ತಿ ಹಂಚುವ ಸಂದರ್ಭದಲ್ಲಿ ನಡೆದ ಘಟನೆ. ದರ್ಪಿಷ್ಟನಾದ ನನ್ನ ಅಣ್ಣನ ಜೋರು ದನಿಯ ಮುಂದೆ ನನ್ನ ದನಿ ಅಡಗಿಹೋಗಿತ್ತು. ನಾನು ಇಲಿಯಂತೆ ಕುಗ್ಗಿ ನಿಂತಿದ್ದೆ. ದೊಡ್ಡ ಅತ್ತಿಗೆ ಹೇಳಿದರು, “ನೋಡು ರಘು, ಮಾವ ಸಾಯುವಾಗ ನೀನು ಬಹಳ ಚಿಕ್ಕವನಾಗಿದ್ದೆ. ಆಗ ನಾವೇ ನಿನ್ನನ್ನು ಬೆಳೆಸಿದ್ದು, ಓದಿಸಿದ್ದು…. ನಂತರ ಮದುವೆ ಮಾಡಿದ್ದು. ಈಗ ನೀನೇ ಹೇಳು, ಈ ಪಿತ್ರಾರ್ಜಿತ ಮನೆ ನಮಗೆ ತಾನೇ ಸೇರಬೇಕಾದ್ದು?”

ನಾನು ನನ್ನ ಸ್ವಭಾವದಂತೆ ಅತ್ತಿಗೆಯ ಪ್ರಭಾವಕ್ಕೊಳಗಾದೆ. ಸ್ಪ್ರಿಂಗ್‌ ಗೊಂಬೆಯಂತೆ ನನ್ನ ತಲೆಯನ್ನು ಹೌದೆನ್ನುವಂತೆ ಆಡಿಸಿ, “ಅತ್ತಿಗೆ, ನೀವು ಹೇಳೋದು ನಿಜ. ನಿಮಗೆ ಹಕ್ಕಿದೆ. ಆಗ ನೀವು ನನ್ನನ್ನು ಪೋಷಿಸದೇ ಇದ್ದಿದ್ದರೆ, ಇಂದು ನಾನು ಎಲ್ಲಿರುತ್ತಿದ್ದೆನೋ? ಪಿತ್ರಾರ್ಜಿತ ಮನೆ ನಿಮ್ಮದೇ…..” ಎಂದೆ. ನಾನು ಮುಂದೇನಾದರೂ ಹೇಳುವ ಮೊದಲು ಕುದಿಯುವ ಎಣ್ಣೆಯಂತೆ ಆವೇಶಗೊಂಡ ಆರತಿ ನನ್ನ ತೋಳು ಹಿಡಿದು ಕಿರುಚಿದಳು, “ನೀವು ಮಾತಾಡ್ಲೇ ಬೇಡಿ, ನಾನು ಮಾತಾಡ್ತೀನಿ,” ಎನ್ನುತ್ತಾ ಸೆರಗನ್ನು ಸೊಂಟಕ್ಕೆ ಸಿಕ್ಕಿಸಿ ಗೃಹ ಯುದ್ಧದಲ್ಲಿ ದುಮುಕಿ, “ಅತ್ತಿಗೆ, ನಿಮ್ಮ ಮೈದುನ ನಿಮ್ಮ ಉಪಕಾರದಲ್ಲೇ ಬೆಳೆದಿದ್ದಾರೆ. ಅವರಿಗೆ ವ್ಯವಹಾರ ಗೊತ್ತಿಲ್ಲ. ನಿಜ ಹೇಳ್ಲಾ, ನಿಮ್ಮ ಮೈದುನ ಕೂಡ ಈ ಕುಟುಂಬಕ್ಕೆ ಬಹಳ ವರ್ಷಗಳು ಬಿಟ್ಟಿಯಾಗಿ ದುಡಿದಿದ್ದಾರೆ. ಇಡೀ ಮನೆ ಬೇಡ, 2 ರೂಮುಗಳ ಮೇಲೆ ನಮಗೆ ಹಕ್ಕಿದೆ. ನಮ್ಮ ಮಕ್ಕಳೂ ದೊಡ್ಡವರಾಗುತ್ತಿದ್ದಾರೆ,” ಎಂದಳು.

ಆರತಿಯ `ನೀವು ಮಾತಾಡ್ಲೇ ಬೇಡಿ’ ಟ್ರಂಪ್‌ ಕಾರ್ಡ್‌ ಕೆಲಸಕ್ಕೆ ಬಂತು. ಅತ್ತಿಗೆಯ ಗೆಲುವು ಸೋಲಿನಲ್ಲಿ ಬದಲಾಗಲು ತಡವಾಗಲಿಲ್ಲ. ಕುಟುಂಬದ ಇತರ ಸದಸ್ಯರು ಆರತಿಯ ತರ್ಕಕ್ಕೆ ತಮ್ಮ ಸಹಮತ ವ್ಯಕ್ತಪಡಿಸಿದರು.

“ಹೌದು ಆರತಿ ಹೇಳೋದು ಸರಿ,” ಅಣ್ಣ ಹೇಳಿದ.

ಆಗ ಅತ್ತಿಗೆ ವಿಪರೀತ ಸಿಟ್ಟಿನಿಂದ, “ನೀವು ಮಾತಾಡ್ಲೇ ಬೇಡಿ,” ಎಂದು ಕೂಗಿದಾಗ ಅಣ್ಣ ತೆಪ್ಪಗಾದ.

ಅಣ್ಣನ ಮೌನ ಕಂಡು ಪತ್ನಿಯ `ನೀವು ಮಾತಾಡ್ಲೇ ಬೇಡಿ’ ಎಂಬ ಹಿಟ್ಲರ್‌ ವಾಕ್ಯದ ಮೂಲಕ ಸಂಸಾರದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆಂದು ನನಗೆ ತಿಳಿಯಿತು. ಇಂತಹ ಪವಿತ್ರ ಕಾರ್ಯಕ್ಕಾಗಿ ಅವಳನ್ನು ಅಗತ್ಯವಾಗಿ ಶಾಂತಿ ಪುರಸ್ಕಾರದಿಂದ ಸನ್ಮಾನಿಸಬೇಕು. ನಾನು ಗಂಭೀರನಾಗಿ ಮನೆಯ ಶಾಂತಿಗೆ ಭಂಗ ತರುವ ವಿಷಯಗಳ ಬಗ್ಗೆ ಆಲೋಚಿಸತೊಡಗಿದೆ. ಹಳೆಯ ಪಾತ್ರೆ, ಹಳೆಯ ಪೇಪರ್‌ ಮಾರುವಾಗ ತೂಕ ಮತ್ತು ಬೆಲೆಯ ಬಗ್ಗೆ ಗಂಡ ಹೆಂಡತಿಯರಲ್ಲಿ ತಕರಾರು ಉಂಟಾಗುತ್ತದೆ. ಅಂಗಡಿಯಲ್ಲಿ ಸೀರೆ ಖರೀದಿಸುವಾಗಲೂ ಪತ್ನಿ ಪತಿಯನ್ನು `ನೀವು ಮಾತಾಡ್ಲೇ ಬೇಡಿ’ ಎಂದು ಫ್ಯಾಷನ್‌ ಸೀರೆಗಳಲ್ಲಿ ಯಾವ ಟ್ರೆಂಡ್‌ ನಡೆಯುತ್ತಿದೆ ಎಂದೇ ನಿಮಗೆ ಗೊತ್ತಿಲ್ಲ, ಎಂದು ತಡೆಯುತ್ತಾಳೆ.

`ನೀವು ಮಾತಾಡ್ಲೇ ಬೇಡಿ’ ಎನ್ನುವಾಗ ಪತ್ನಿಯ ಮುದ್ರೆ ಆಕ್ರಮಣಕಾರಿಯಾಗಿದ್ದು, ಮುಖದ ಭಾವಭಂಗಿಯಲ್ಲಿ ಚಾತುರ್ಯ ಕಾಣಿಸುತ್ತದೆ. ಕಾಯಿಲೆ ಬಂದಾಗ ಔಷಧಿ ಸೇವಿಸದಿರುವುದು ಪತ್ನಿಯ ವೈಯಕ್ತಿಕ ವಿಷಯ. ಒತ್ತಾಯಿಸಿದಾಗ ಅವಳು `ನೀವು ಮಾತಾಡ್ಲೇ ಬೇಡಿ,’ ಎಂದು ಪ್ರಾರ್ಥಿಸುತ್ತಾಳೆ. ಯಾವ ಮನೆಯಲ್ಲಿ ದಿನ `ನೀವು ಮಾತಾಡ್ಲೇ ಬೇಡಿ’ ಮಂತ್ರದ ಉಚ್ಚಾರಣೆ ನಡೆಯುವುದಿಲ್ಲವೋ ಅದನ್ನು ದಾಂಪತ್ಯ ಜೀವನಕ್ಕೆ ಶುಭವೆಂದು ತಿಳಿಯಲಾಗುವುದಿಲ್ಲ.

`ನೀವು ಮಾತಾಡ್ಲೇ ಬೇಡಿ’ ಎಂದು ಹೇಳುವುದು ಎಂದಿನಿಂದ ಆರಂಭಾಯಿತೆನ್ನುವುದು ನಿಜಕ್ಕೂ ಸಂಶೋಧಿಸಬೇಕಾದ ವಿಚಾರ. ಆದರೆ ಇಂದಿನ ನವ ಪೀಳಿಗೆ ಈ ಪರಂಪರೆಯನ್ನು ಸಾಕಷ್ಟು ಮುಂದೆ ತೆಗೆದುಕೊಂಡು ಹೋಗುತ್ತಾರೆಂಬ ಭರವಸೆ ಇದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ