ಎಚ್ಚರಿಕೆ! ಇಲ್ಲಿ ಒಬ್ಬರಿಗಿಂತ ಒಬ್ಬರು ಧೂರ್ತರಿದ್ದಾರೆ

ನಮ್ಮದೇ ಆದ ಸ್ವಂತ ಮನೆ ಹೊಂದಬೇಕೆನ್ನುವ ಕನಸು ಎಷ್ಟೇ ಸುಂದರವಾಗಿದ್ದರೂ ಆ ಕನಸನ್ನು ನುಚ್ಚುನೂರು ಮಾಡಲು ಒಬ್ಬರಿಗಿಂತ ಒಬ್ಬರು ಧೂರ್ತರು ಕಾದು ಕುಳಿತಿದ್ದಾರೆ. ಅವರ ಅಪ್ರಾಮಾಣಿಕತೆ ಸ್ವಂತ ಮನೆಯ ಕನಸು ಕಾಣುವವರ ಮೇಲೆ ಬೀರುವ ಪರಿಣಾಮದ ಬಗ್ಗೆ ಯಾರೂ ಯೋಚಿಸುವುದಿಲ್ಲ.

ಇಂತಹ ಕಟ್ಟಡಗಳ ನಿರ್ಮಾತೃಗಳ ಕಾರ್ಯವಿಧಾನಗಳ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ ಲೇಖನಗಳು ಬರುತ್ತಿರುತ್ತವೆ. ಅವು ಭೂಮಿಯ ಮೇಲೆ ಸ್ವರ್ಗವನ್ನು ಇಳಿಸುವ ಭರವಸೆ ನೀಡಿರುತ್ತವೆ ಮತ್ತು ಮನೆಗಳ ಬುಕ್ಕಿಂಗ್‌ ಮಾಡಿರುತ್ತವೆ. ಆದರೆ ಮನೆ ನಿರ್ಮಿಸಿ ಕೊಟ್ಟಾಗ ಭರವಸೆ ಪೂರ್ಣ ಈಡೇರಿರುವುದಿಲ್ಲ ಹಾಗೂ ಮನೆ ಬಹಳ ತಡವಾಗಿ ಸಿಕ್ಕಿರುತ್ತದೆ.

ದೆಹಲಿ ಸಮೀಪದ ನೋಯ್ಡಾದಲ್ಲಿ ಸೂಪರ್‌ ಟೆಕ್‌ ಗ್ರೂಪ್‌, 825 ಜನರಿಗೆ 40 ಅಂತಸ್ತಿನ 2 ಟವರ್‌ಗಳಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ವಾಗ್ದಾನ ಮಾಡಿ ನಿರ್ಮಾಣ ಶುರು ಮಾಡಿತು. ಈಗ ಸುಮಾರು 30 ಅಂತಸ್ತುಗಳು ನಿರ್ಮಾಣವಾದ ನಂತರ ಕೆಲವು ನಿಯಮಗಳನ್ನು ಪಾಲಿಸಲಿಲ್ಲವೆಂಬ ಕಾರಣದಿಂದ ಅಲಹಾಬಾದ್‌ ಹೈಕೋರ್ಟ್‌ ಈ ಟವರ್‌ಗಳನ್ನು ಉರುಳಿಸಲು ಆದೇಶಿಸಿದೆ.

ಒಂದು ವೇಳೆ ಟವರ್‌ ನಿರ್ಮಾಣ ಅಕ್ರಮವಾಗಿದ್ದರೆ, ಪ್ರತಿಯೊಂದು ವಿಷಯದಲ್ಲೂ ಮೀನಾಮೇಷ ಎಣಿಸುವುದರಲ್ಲಿ ಕುಖ್ಯಾತವಾಗಿರುವ ನೋಯ್ಡಾ ಅಭಿವೃದ್ಧಿ ಪ್ರಾಧಿಕಾರ ಇದುವರೆಗೆ ಏನು ಮಾಡುತ್ತಿತ್ತು? ಅಲಹಾಬಾದ್‌ ಹೈಕೋರ್ಟ್‌ ಒಂದು ಕಡೆ ಸೂಪರ್‌ ಟೆಕ್‌ ಕಂಪನಿ ಮತ್ತು ಅದರ ಟವರ್‌ನ ಖರೀದಿದಾರರಿಗೆ ಅಧಿಕ ಶಿಕ್ಷೆ ವಿಧಿಸಿತು. ಆದರೆ ಕಾನೂನು ವಿರುದ್ಧವಾಗಿ (ಒಂದುವೇಳೆ ಇದು ಕಾನೂನು ವಿರುದ್ಧವಾಗಿದ್ದರೆ) ನಿರ್ಮಾಣಕ್ಕೆ ಅನುಮತಿ ಕೊಟ್ಟ ಅಥವಾ ನಿರ್ಮಾಣವಾಗಲು ಬಿಟ್ಟ ನೋಯ್ಡಾ ಅಭಿವೃದ್ಧಿ ಪ್ರಾಧಿಕಾರದ ನೂರಾರು ಅಧಿಕಾರಿಗಳನ್ನು ಬಿಟ್ಟುಬಿಟ್ಟಿತು.

ಗ್ರೇಟರ್‌ ನೋಯ್ಡಾ ಮಾರ್ಗದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಈ ಟವರ್‌ಗಳು ಸದ್ದಿಲ್ಲದೆ ನಿರ್ಮಾಣವಾಗುತ್ತಿದ್ದವು ಎಂದು ಹೇಳಲಾಗುವುದಿಲ್ಲ. ಸರ್ಕಾರಿ ಅಧಿಕಾರಿಗಳು ಈ ಟವರ್‌ಗಳನ್ನು ಹಗಲು ರಾತ್ರಿ ನೋಡಬಹುದಿತ್ತು. ಅವರು ಜನಹಿತಕ್ಕಾಗಿ ಇವುಗಳ ನಿರ್ಮಾಣವನ್ನು ಸಕಾಲದಲ್ಲಿ ತಡೆಯದೆ ಇದ್ದುದರಿಂದ ಸೂಪರ್‌ ಟೆಕ್‌ ಬಿಲ್ಡರ್‌ ಮಾಡಿದ ಅಪರಾಧದಲ್ಲಿ ಸಮಪ್ರಮಾಣದ ಜವಾಬ್ದಾರರಾಗಿದ್ದಾರೆ.

ನಮ್ಮ ದೇಶದ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಅತ್ಯಂತ ರೋಚಕ ವಿಷಯವೇನೆಂದರೆ ಕೋರ್ಟುಗಳು, ಕಟ್ಟಡಗಳು ಸಂಪೂರ್ಣವಾಗಿ ನಿರ್ಮಾಣವಾದ ನಂತರ ಮತ್ತು ಕೆಲವು ಸಂದರ್ಭಗಳಲ್ಲಿ ಜನ ಅನೇಕ ವರ್ಷಗಳು ಅಲ್ಲಿ ವಾಸಿಸಿದ ನಂತರ ಅವನ್ನು ಅಕ್ರಮವೆಂದು ಘೋಷಿಸುತ್ತವೆ ಹಾಗೂ ಆರ್ಥಿಕ ಜವಾಬ್ದಾರಿಯನ್ನು ಕಟ್ಟಡ ನಿರ್ಮಾತೃಗಳು ಹಾಗೂ ಅವುಗಳ ಮೇಲೆ ಹಣ ಹೂಡಿ ಅವನ್ನು ಖರೀದಿಸುವವರ ಮೇಲೆ ಮಾತ್ರ ಹೊರಿಸುತ್ತವೆ.

ಗೃಹ ನಿರ್ಮಾಣ ಕ್ಷೇತ್ರದಲ್ಲಿ ಇಷ್ಟೊಂದು ಸರ್ಕಾರಿ ಹಸ್ತಕ್ಷೇಪ ನಡೆದಿರದಿದ್ದರೆ ಸರ್ಕಾರಿ ಅಧಿಕಾರಿಗಳನ್ನು ಕ್ಷಮಿಸಬಹುದಾಗಿತ್ತು. ಆದರೆ ಜಮೀನಿನ ಒಂದು ಭಾಗದ ಖರೀದಿ, ರಸ್ತೆಗಳ ಯೋಜನೆ, ಸ್ಯೂಯೇಜ್‌, ಟ್ರ್ಯಾಫಿಕ್‌, ಬಹುಮಹಡಿ ಕಟ್ಟಡಗಳ ನಿರ್ಮಾಣದಲ್ಲಿ ಸುರಕ್ಷತೆ ಹಾಗೂ ಅವುಗಳಲ್ಲಿನ ಸೌಲಭ್ಯಗಳಲ್ಲಿ ಸರ್ಕಾರಿ ಹಸ್ತಕ್ಷೇಪ ಎಷ್ಟು ಹೆಚ್ಚಾಗಿದೆಯೆಂದರೆ, ಶೇ.40-45ರಷ್ಟು ಅವುಗಳ ನಿಯಮಗಳನ್ನು ಪೂರೈಸಲು ಅಥವಾ ಹತ್ತಾರು ಅಧಿಕಾರಿಗಳನ್ನು ಸಂತೋಷವಾಗಿಡುವಲ್ಲಿ ಖರ್ಚಾದರೆ ಆ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.

ಮಾಫಿಯಾಗೆ ಸಮನಾದ ಸರ್ಕಾರಿ ಅಧಿಕಾರಿಗಳು ಕಟ್ಟಡ ನಿರ್ಮಾಣದ ಸಮಯದಲ್ಲಿ ಹಣ ವಸೂಲಿ ಮಾಡಲು ಬರುವ ಮಾತಿರಲಿ, ಅವರು ರೆಗ್ಯೂಲೇಟರ್‌ನಂತೆ ಜನರ ಹಿತರಕ್ಷಣೆಗಾಗಿ ಇರುವವರು, ಬೇಲಿಯೇ ಎದ್ದು ಹೊಲ ಮೇಯ್ದರೆ, ಅವರಿಗೆ ಸಮಪ್ರಮಾಣದ ಶಿಕ್ಷೆ ಅಂದರೆ ಜೈಲು, ಆರ್ಥಿಕ ದಂಡ ಅಥವಾ ನೌಕರಿಯಿಂದ ವಜಾ ಇತ್ಯಾದಿ ಘೋರ ಶಿಕ್ಷೆ ವಿಧಿಸತಕ್ಕದ್ದು.

ಸೂಪರ್‌ ಟೆಕ್‌ ವಿಷಯದಲ್ಲಿ ಬಿಲ್ಡರ್‌ ದೋಷಿಯಾಗಿದ್ದರೆ, ಅವರು ಹಾಗೂ ಸರ್ಕಾರಿ ಅಧಿಕಾರಿ ಇಬ್ಬರಿಗೂ ಸಮಪ್ರಮಾಣದ ಶಿಕ್ಷೆ ವಿಧಿಸಬೇಕು. ಕೊಳ್ಳುವವರು ತಪ್ಪು ಸ್ಥಳದಲ್ಲಿ ಹಣ ಹೂಡಿ ಆರ್ಥಿಕ ಶಿಕ್ಷೆ ಅನುಭವಿಸಬೇಕಾಗುತ್ತದೆ.

ಗಂಡಂದಿರ ಸಂರಕ್ಷಕ ಹೆಂಡತಿಯರು!

ಸಾಮಾನ್ಯವಾಗಿ ಗಂಡಂದಿರು ತಮ್ಮ ಹೆಂಡತಿಯರ ತಪ್ಪುಗಳು ಹಾಗೂ ಮೂರ್ಖತನದಿಂದಾಗಿ ಮುಖ ಮುಚ್ಚಿಕೊಂಡು ಇರಬೇಕಾಗುತ್ತದೆ. ಆದರೆ ಪ್ರಿಯಾಂಕಾ ಗಾಂಧಿ ವಾದ್ರಾಗೆ ತನ್ನ ಪತಿಯ ವಿರುದ್ಧ ಮಾಡಿದ ಆರೋಪಗಳ ವಿರುದ್ಧ ತಲೆಯೆತ್ತಿ ಹೋರಾಡಬೇಕಾಗಿ ಬಂತು. ಗಂಡನೊಬ್ಬನಿಗೆ ಹೆಂಡತಿಯು ಈ ರೀತಿಯಲ್ಲಿ ಸಂರಕ್ಷಕಳಾಗಿ ನಿಲ್ಲುವುದು ಸುಖಕರ ಎನಿಸುತ್ತದೆ. ಗಂಡ ಸಂಕಟದಿಂದ ಹೊರಬರಬೇಕೆನ್ನುವುದು ಹೆಂಡತಿಯರ ಹೊಸ ಟ್ರೆಂಡ್‌ ಆಗುತ್ತಿದೆ.

ನರೇಂದ್ರ ಮೋದಿಯವರ ಹೆಂಡತಿ ಜಶೋದ ಬೇನ್‌ರ ವಿಷಯ ಕೂಡ ಅಂಥದೇ ಆಗಿದೆ. ಅರವಿಂದ್‌ ಕೇಜ್ರಿವಾಲ್‌ರಂತೂ ಭಾಜಪಾ ಭಾಷೆಯಲ್ಲಿ ಕುರ್ಚಿ ಬಿಟ್ಟು ಓಡಿಹೋದರು. ಆದರೆ ಜಶೋದಾಬೇನ್‌ ಮಾತ್ರ ತನ್ನ ಗಂಡನ ಜವಾಬ್ದಾರಿಯಿಂದ ಪಲಾಯನ ಮಾಡಲಿಲ್ಲ. ಅವರು ತಮ್ಮ ಗಂಡ ಪ್ರಧಾನಮಂತ್ರಿಯಾಗಬೇಕೆಂದು ತಮಗೆ ತಾವೇ ಕಷ್ಟ ಕೊಟ್ಟುಕೊಳ್ಳುತ್ತ ಒಂದು ಪುಟ್ಟ ಮನೆಯಲ್ಲಿ ಅಜ್ಞಾತಾಸದಲ್ಲಿದ್ದಾರೆ.

ಗಂಡನಿಗೆ ರಕ್ಷಣೆ ಕೊಡುವ ದಿನಗಳಿವು. ಬಿಲ್ ‌ಕ್ಲಿಂಟನ್‌ ಅಮೆರಿಕದ ಅಧ್ಯಕ್ಷರಾಗಿದ್ದಾಗ ಮೋನಿಕಾ ಲೆವೆನ್‌ಸ್ಕಿಯಿಂದ ಲೈಂಗಿಕ ಕಿರುಕುಳದ ಆರೋಪಕ್ಕೊಳಗಾದಾಗ ಹೆಂಡತಿ ಹಿಲರಿ ಅವರ ಸಂರಕ್ಷಕರಾಗಿ ನಿಂತರು. ಲಾಲೂಪ್ರಸಾದ್‌ ಯಾದವ್ ಜೈಲಿನಲ್ಲಿದ್ದಾಗ ಹೆಂಡತಿ ರಾಬ್ಡಿದೇವಿ ಕೇವಲ ಮುಖ್ಯಮಂತ್ರಿ ಹುದ್ದೆಯನ್ನಷ್ಟೇ ಸಂಭಾಳಿಸಲಿಲ್ಲ, ಗಂಡನಿಗೆ ಧೈರ್ಯ ಕೊಟ್ಟು ಅವರು ಈಗಲೂ ಸಕ್ರಿಯ ರಾಜಕಾರಣದಲ್ಲಿ ಇರುವಂತೆ ನೋಡಿಕೊಂಡಿದ್ದಾರೆ.

vihangam-may2

ಪ್ರಿಯಾಂಕಾ ವಾದ್ರಾ ತನ್ನ ಪತಿಯ ವಿರುದ್ಧದ ಆರೋಪಗಳ ಬಗ್ಗೆ ಉತ್ತರವನ್ನಂತೂ ಕೊಟ್ಟಿಲ್ಲ. ಆದರೆ ನರೇಂದ್ರ ಮೋದಿ ತಾವು ಪ್ರಧಾನಿಯಾದರೆ ವಾದ್ರಾ ವಿರುದ್ಧ ಸೇಡಿನ ಕ್ರಮ ಕೈಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ವಾದ್ರಾ ವಿರುದ್ಧದ ಆರೋಪಗಳು ಹೇಗಿವೆಯೆಂದರೆ, ಬಿಜೆಪಿಯ ಹಿಂದಿನ ಅಧ್ಯಕ್ಷ ನಿತಿನ್‌ ಗಡ್ಕರಿಯ ವಿರುದ್ಧ ಇರುವಂತೆ ಅಥವಾ ಗುಜರಾತ್‌ ಸರ್ಕಾರ ತನ್ನ ಅಭಿಮಾನಿಗಳಿಗೆ ನೀಡಿರುವ ನೂರಾರು ಎಕರೆ ಜಮೀನಿನಂತೆಯೇ ಇದೆ.

ಜಮೀನು ವಿವಾದ ಹೊರಬೀಳುವುದು ಬಹುಶಃ ನರೇಂದ್ರ ಮೋದಿಯವರಿಗೆ ಇಷ್ಟವಿಲ್ಲ. ಅದು ಅದಾನಿ, ರಾಬರ್ಟ್‌ ವಾದ್ರಾ ಅಥವಾ ನಿತಿನ್‌ ಗಡ್ಕರಿ ಅವರದ್ದಾಗಿರಬಹುದು.

ಚುನಾವಣೆಯ ಬಳಿಕ ರಾಬರ್ಟ್‌ ವಾದ್ರಾ ಪ್ರಕರಣವನ್ನು ಫೈಲುಗಳ ಮಧ್ಯೆ ಹೂತು ಹಾಕುತ್ತಾರೆ ಎಂದು ಸ್ವತಃ ಪ್ರಿಯಾಂಕಾ ಅವರಿಗೆ ನಂಬಿಕೆಯಿದೆ. ಏಕೆಂದರೆ ರಾಬರ್ಟ್‌ ವಾದ್ರಾ ಅವರಿಗೆ ಅನಧಿಕೃತ ಜಮೀನು ಕೊಟ್ಟಿದ್ದಲ್ಲಿ ಹತ್ತು ಹಲವು ಅಧಿಕಾರಿಗಳಿಗೆ ಕುತ್ತು ತರಬಹುದು. ಆಮೇಲೆ ಅದೇ ಅಧಿಕಾರಿಗಳು ಅದನ್ನು ಮಾಡಲು ನರೇಂದ್ರ ಮೋದಿಗೆ ಅವಕಾಶ ಕೊಡುವುದಿಲ್ಲ.

ಯಾವ ಗಂಡ ತನ್ನ ಹೆಂಡತಿಯನ್ನು ಎರಡನೇ ದರ್ಜೆಯವಳಂತೆ ಕಾಣುತ್ತಾನೊ, ಅವನು ತಿಳಿದಿರಬೇಕಾದ ಒಂದು ವಿಚಾರವೆಂದರೆ, ಪ್ರತಿಯೊಂದು ಸುಖದುಃಖದಲ್ಲೂ ತನ್ನ ಜೊತೆಗೆ ಯಾರಾದರೂ ಇರುತ್ತಾರೆಂದರೆ, ಆ ವ್ಯಕ್ತಿ ಹೆಂಡತಿ ಮಾತ್ರ. ಹೆಂಡತಿಯರು ಹೊಸ ಚಿತ್ರ `2 ಸ್ಟೇಟ್ಸ್’ನ ಅಮೃತಾ ಸಿಂಗ್‌ಳ ಹಾಗಿರುತ್ತಾರೆ. ಆಕೆ ಕುಡುಕ ಗಂಡನನ್ನು ಸಹಿಸಿಕೊಳ್ಳುತ್ತಾಳೆ ಹಾಗೂ ಹಠಮಾರಿ ಮಗನನ್ನೂ ಕೂಡ.

ಸೂಚನೆ : ಈ ಲೇಖನ ಅಚ್ಚಿಗೆ ಹೋಗುವ ಹೊತ್ತಿಗೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿರಲಿಲ್ಲ.

ವ್ಯಾವಹಾರಿಕ ನಿಯಮಗಳ ಪಾಲನೆ

ಲಿಯಾಂಡರ್‌ ಪೇಸ್‌ ಭಾರತದ ಹೆಸರಾಂತ ಟೆನಿಸ್‌ ಆಟಗಾರ. ಅವರಿಗೆ ಈ ಸಲ ಪದ್ಮಭೂಷಣ ಪುರಸ್ಕಾರ ಸಹ ಬಂದಿತು. ಟೆನಿಸ್‌ ಮೈದಾನದಲ್ಲಿ ಚೆಂಡನ್ನು ಎರ್ರಾಬಿರ್ರಿಯಾಗಿ ತಿರುಗಿಸುವ ಈ ಆಟಗಾರ ಪ್ರೇಯಸಿಯಿಂದ ಹೇಗೆ ಪೆಟ್ಟು ತಿನ್ನುತ್ತಿದ್ದಾರೆನ್ನುವುದು ಬಾಂದ್ರಾ ನ್ಯಾಯಾಲಯದಲ್ಲಿ ಅವರು ಹಾಕಿರುವ ಅರ್ಜಿಯಿಂದಲೇ ಸ್ಪಷ್ಟವಾಗುತ್ತದ. ಅವರ ಪ್ರೇಯಸಿಯ ಹೆಸರು ರಿಯಾ ಪಿಳ್ಳೈ. ಒಂದು ಕಾಲಕ್ಕೆ ಈಕೆ ಸಂಜಯದತ್ತನ ಪ್ರೇಯಸಿಯಾಗಿದ್ದಳು. ಪೇಸ್‌ ಮತ್ತು ಪಿಳ್ಳೈಗೆ ಒಂದು ಹೆಣ್ಣು ಮಗು ಕೂಡ ಇದೆ.

ತನ್ನ ಪ್ರೇಯಸಿ ರಿಯಾ ಪಿಳ್ಳೈ ಬಗ್ಗೆ ಲಿಯಾಂಡರ್‌ ಹೀಗೆ ಹೇಳುತ್ತಾರೆ, “ರಿಯಾ ಅತ್ಯಂತ ಬೇಜವಾಬ್ದಾರಿ ತಾಯಿ. ನಾನು ಮಾತ್ರ ಜವಾಬ್ದಾರಿಯುತ ತಂದೆಯ ಸ್ಥಾನ ನಿಭಾಯಿಸಿರುವೆ. ರಾತ್ರಿಯಿಡೀ ಮಗುವಿನ ಜೊತೆ ಎಚ್ಚರವಾಗಿದ್ದು, ಅದರ ಡೈಪರ್‌ಬದಲಿಸಿದೆ.” ಲಿಯಾಂಡರ್‌ ಹಾಗೂ ರಿಯಾ ಕಾನೂನುರೀತ್ಯಾ ವಿವಾಹವಾಗಿಲ್ಲ. ಆದರೆ ತಂದೆಯ ಕರ್ತವ್ಯ ನಿಭಾಯಿಸುವಲ್ಲಿ ತಾನು ಯಾವುದೇ ತಪ್ಪೆಸಗಲಿಲ್ಲ, ಪದ್ಮಭೂಷಣ ಪದಕ ಸ್ವೀಕರಿಸಲು ರಾಷ್ಟ್ರಪತಿ ಭವನಕ್ಕೆ ರಿಯಾಳನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದೆ. ಆದರೆ ರಿಯಾ ಅದಕ್ಕೂ ಒಪ್ಪಲಿಲ್ಲ ಎಂದು ಪೇಸ್‌ ಹೇಳುತ್ತಾರೆ.

ಇಬ್ಬರಿಗೂ ಮದುವೆಯಾಗಿಲ್ಲ. ನ್ಯಾಯಾಲಯದಲ್ಲಿ ಈ ತೆರನಾದ ಪ್ರಕರಣಗಳಲ್ಲಿ ಮಕ್ಕಳ ಸಂರಕ್ಷಣೆಯ ಜವಾಬ್ದಾರಿ ತಾಯಿಯದೇ ಎಂದು ಹೇಳಲಾಗುತ್ತದೆ. ಪೇಸ್‌ ಅವರ 50 ಪುಟದ ಮನವಿಯನ್ನು ಬಹುಶಃ ನ್ಯಾಯಾಲಯ ಒಪ್ಪಲಿಕ್ಕಿಲ್ಲ. ಹೀಗಾಗಿ ಆಕೆ ಬೇಜವಾಬ್ದಾರಿಯ, ಆಲಸಿ ಮಹಿಳೆ ಎಂದು ಸಾಬೀತುಪಡಿಸುವುದು ಕಷ್ಟವೇ ಆಗಬಹುದು. ಅವಿವಾಹಿತ ಜೋಡಿಯಾಗಿರುವುದರಿಂದ ಮಗು ಆಯನಾಳ ಸಂಪೂರ್ಣ ಜವಾಬ್ದಾರಿ ತಾಯಿಯದೇ ಆಗಿರುತ್ತದೆ.

ಟೆನಿಸ್‌ನಲ್ಲಿ ಖ್ಯಾತಿ ಪಡೆದ ಬಳಿಕ ಒಂದು ಮನೆ, ಒಬ್ಬ ಹೆಂಡತಿ ಹಾಗೂ ಮಗುವಿಗಾಗಿ ಪುರುಷ ಚಡಪಡಿಸುತ್ತಾನೆ. ಇದು ಸ್ಪಷ್ಟ ಹಾಗೂ ಸರಳ. ಭಾರತದಲ್ಲಷ್ಟೇ ಅಲ್ಲ, ಜಗತ್ತಿನ ಬಹಳಷ್ಟು ನ್ಯಾಯಾಲಯಗಳಲ್ಲಿ ಈ ತೆರನಾದ ಅನೇಕ ಪ್ರಕರಣಗಳು ತುಂಬಿ ತುಳುಕುತ್ತಿವೆ. ತಂದೆ ತನ್ನ ಮಗುವಿಗಾಗಿ ಪರಿತಪಿಸುತ್ತಿದ್ದಾನೆ ಹಾಗೂ ಎಷ್ಟೋ ಲಕ್ಷ ಲಕ್ಷ ಹಣ ಖರ್ಚು ಮಾಡಿಯೂ ಮಗುವಿನ ಕಲರವ ಕೇಳುವಲ್ಲಿ ವಿಫಲನಾಗಿದ್ದಾನೆ.

ನ್ಯಾಯಾಲಯಗಳು ಇಂತಹ ಪ್ರಕರಣಗಳನ್ನು ಬಗೆಹರಿಸಲು ಭಾರಿ ಖಟಿಪಿಟಿ ಮಾಡಬೇಕಾಗಿ ಬರುತ್ತಿದೆ. ಮಗುವನ್ನು ಯಾರು ಚೆನ್ನಾಗಿ ನಿಭಾಯಿಸುತ್ತಾರೆ ತಂದೆಯೊ, ತಾಯಿಯೊ ಎಂಬುದನ್ನು ಕಂಡುಕೊಳ್ಳುವಲ್ಲಿ ನ್ಯಾಯಾಲಯಗಳು ಪರದಾಡುತ್ತವೆ. ಮದುವೆಯಾಗದೆಯೇ ಪುರುಷ ಮಹಿಳೆ ಜೊತೆಗಿದ್ದರೆ ಆಗ ಪರಿಸ್ಥಿತಿ ಇನ್ನೂ ಕ್ಲಿಷ್ಟಕರವಾಗುತ್ತದೆ. ಪೇಸ್‌ ರಿಯಾ ನಡುವೆ ಇಂತಹ ಸ್ಥಿತಿಯೇ ಇದೆ.

ಮಗುವಿಗೆ ಜನ್ಮ ನೀಡಿದ ಬಳಿಕ ತಂದೆ ತಾಯಿ ಇಬ್ಬರಲ್ಲೂ ಹೊಸದೊಂದು ಜವಾಬ್ದಾರಿಯ ಅನುಭೂತಿ ಬರಬೇಕು. ತಾವು ಜಗಳ ಆಡಲೂಬಾರದು, ಬೇರೆ ಬೇರೆ ಆಗಲೂಬಾರದು ಎಂಬಂತಹ ಸ್ಥಿತಿ ನಿರ್ಮಾಣವಾಗಬೇಕು.

ಈ ತೆರನಾದ ಸಮಸ್ಯೆಗಳಿಗೆ ನ್ಯಾಯಾಲಯದಲ್ಲಿ ಪರಿಹಾರವಿಲ್ಲ. ಸಮಾಜ, ಸ್ನೇಹಿತರು, ಸಂಬಂಧಿಕರು ಸೂಕ್ತ ಪರಿಹಾರ ಕೊಡಬೇಕು. ನಮ್ಮ ಮೇಲೆ ಧರ್ಮ ಹೆಚ್ಚು ಪ್ರಭಾವ ಬೀರುತ್ತದೆ. ಅದೇ ಹೆಚ್ಚು ವಿದ್ವಂಸಕ. ಏಕೆಂದರೆ ಅದು ಪತಿಯನ್ನು ಶ್ರೇಷ್ಠ ಹಾಗೂ ಪತ್ನಿಯನ್ನು ಎರಡನೇ ದರ್ಜೆಯವಳು ಎಂಬ ತಪ್ಪು ಕಲ್ಪನೆಯನ್ನು ಮನಸ್ಸಿನಲ್ಲಿ ಬಿತ್ತುತ್ತದೆ.

ಲಿಯಾಂಡರ್‌ ಹಾಗೂ ರಿಯಾ ಇಬ್ಬರೂ ಸಮಾನ ದರ್ಜೆಯ ವ್ಯಕ್ತಿಗಳಾಗಿದ್ದು, ಇಬ್ಬರೂ ಧರ್ಮ ಹಾಗೂ ಸಮಾಜದ ನಿಯಮಗಳನ್ನಲ್ಲ, ತಮ್ಮದೇ ಆದ ವ್ಯಾವಹಾರಿಕ ನಿಯಮಗಳನ್ನು ಪಾಲಿಸಬೇಕು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ