ಎಚ್ಚರಿಕೆ! ಇಲ್ಲಿ ಒಬ್ಬರಿಗಿಂತ ಒಬ್ಬರು ಧೂರ್ತರಿದ್ದಾರೆ
ನಮ್ಮದೇ ಆದ ಸ್ವಂತ ಮನೆ ಹೊಂದಬೇಕೆನ್ನುವ ಕನಸು ಎಷ್ಟೇ ಸುಂದರವಾಗಿದ್ದರೂ ಆ ಕನಸನ್ನು ನುಚ್ಚುನೂರು ಮಾಡಲು ಒಬ್ಬರಿಗಿಂತ ಒಬ್ಬರು ಧೂರ್ತರು ಕಾದು ಕುಳಿತಿದ್ದಾರೆ. ಅವರ ಅಪ್ರಾಮಾಣಿಕತೆ ಸ್ವಂತ ಮನೆಯ ಕನಸು ಕಾಣುವವರ ಮೇಲೆ ಬೀರುವ ಪರಿಣಾಮದ ಬಗ್ಗೆ ಯಾರೂ ಯೋಚಿಸುವುದಿಲ್ಲ.
ಇಂತಹ ಕಟ್ಟಡಗಳ ನಿರ್ಮಾತೃಗಳ ಕಾರ್ಯವಿಧಾನಗಳ ಬಗ್ಗೆ ಪತ್ರಿಕೆಗಳಲ್ಲಿ ಆಗಾಗ ಲೇಖನಗಳು ಬರುತ್ತಿರುತ್ತವೆ. ಅವು ಭೂಮಿಯ ಮೇಲೆ ಸ್ವರ್ಗವನ್ನು ಇಳಿಸುವ ಭರವಸೆ ನೀಡಿರುತ್ತವೆ ಮತ್ತು ಮನೆಗಳ ಬುಕ್ಕಿಂಗ್ ಮಾಡಿರುತ್ತವೆ. ಆದರೆ ಮನೆ ನಿರ್ಮಿಸಿ ಕೊಟ್ಟಾಗ ಭರವಸೆ ಪೂರ್ಣ ಈಡೇರಿರುವುದಿಲ್ಲ ಹಾಗೂ ಮನೆ ಬಹಳ ತಡವಾಗಿ ಸಿಕ್ಕಿರುತ್ತದೆ.
ದೆಹಲಿ ಸಮೀಪದ ನೋಯ್ಡಾದಲ್ಲಿ ಸೂಪರ್ ಟೆಕ್ ಗ್ರೂಪ್, 825 ಜನರಿಗೆ 40 ಅಂತಸ್ತಿನ 2 ಟವರ್‌ಗಳಲ್ಲಿ ಮನೆ ನಿರ್ಮಿಸಿ ಕೊಡುವುದಾಗಿ ವಾಗ್ದಾನ ಮಾಡಿ ನಿರ್ಮಾಣ ಶುರು ಮಾಡಿತು. ಈಗ ಸುಮಾರು 30 ಅಂತಸ್ತುಗಳು ನಿರ್ಮಾಣವಾದ ನಂತರ ಕೆಲವು ನಿಯಮಗಳನ್ನು ಪಾಲಿಸಲಿಲ್ಲವೆಂಬ ಕಾರಣದಿಂದ ಅಲಹಾಬಾದ್ ಹೈಕೋರ್ಟ್ ಈ ಟವರ್‌ಗಳನ್ನು ಉರುಳಿಸಲು ಆದೇಶಿಸಿದೆ.
ಒಂದು ವೇಳೆ ಟವರ್ ನಿರ್ಮಾಣ ಅಕ್ರಮವಾಗಿದ್ದರೆ, ಪ್ರತಿಯೊಂದು ವಿಷಯದಲ್ಲೂ ಮೀನಾಮೇಷ ಎಣಿಸುವುದರಲ್ಲಿ ಕುಖ್ಯಾತವಾಗಿರುವ ನೋಯ್ಡಾ ಅಭಿವೃದ್ಧಿ ಪ್ರಾಧಿಕಾರ ಇದುವರೆಗೆ ಏನು ಮಾಡುತ್ತಿತ್ತು? ಅಲಹಾಬಾದ್ ಹೈಕೋರ್ಟ್ ಒಂದು ಕಡೆ ಸೂಪರ್ ಟೆಕ್ ಕಂಪನಿ ಮತ್ತು ಅದರ ಟವರ್‌ನ ಖರೀದಿದಾರರಿಗೆ ಅಧಿಕ ಶಿಕ್ಷೆ ವಿಧಿಸಿತು. ಆದರೆ ಕಾನೂನು ವಿರುದ್ಧವಾಗಿ (ಒಂದುವೇಳೆ ಇದು ಕಾನೂನು ವಿರುದ್ಧವಾಗಿದ್ದರೆ) ನಿರ್ಮಾಣಕ್ಕೆ ಅನುಮತಿ ಕೊಟ್ಟ ಅಥವಾ ನಿರ್ಮಾಣವಾಗಲು ಬಿಟ್ಟ ನೋಯ್ಡಾ ಅಭಿವೃದ್ಧಿ ಪ್ರಾಧಿಕಾರದ ನೂರಾರು ಅಧಿಕಾರಿಗಳನ್ನು ಬಿಟ್ಟುಬಿಟ್ಟಿತು.
ಗ್ರೇಟರ್ ನೋಯ್ಡಾ ಮಾರ್ಗದಲ್ಲಿ ನಿರ್ಮಾಣಗೊಳ್ಳುತ್ತಿದ್ದ ಈ ಟವರ್‌ಗಳು ಸದ್ದಿಲ್ಲದೆ ನಿರ್ಮಾಣವಾಗುತ್ತಿದ್ದವು ಎಂದು ಹೇಳಲಾಗುವುದಿಲ್ಲ. ಸರ್ಕಾರಿ ಅಧಿಕಾರಿಗಳು ಈ ಟವರ್‌ಗಳನ್ನು ಹಗಲು ರಾತ್ರಿ ನೋಡಬಹುದಿತ್ತು. ಅವರು ಜನಹಿತಕ್ಕಾಗಿ ಇವುಗಳ ನಿರ್ಮಾಣವನ್ನು ಸಕಾಲದಲ್ಲಿ ತಡೆಯದೆ ಇದ್ದುದರಿಂದ ಸೂಪರ್ ಟೆಕ್ ಬಿಲ್ಡರ್ ಮಾಡಿದ ಅಪರಾಧದಲ್ಲಿ ಸಮಪ್ರಮಾಣದ ಜವಾಬ್ದಾರರಾಗಿದ್ದಾರೆ.
ನಮ್ಮ ದೇಶದ ಗೃಹ ನಿರ್ಮಾಣ ಕ್ಷೇತ್ರದಲ್ಲಿ ಅತ್ಯಂತ ರೋಚಕ ವಿಷಯವೇನೆಂದರೆ ಕೋರ್ಟುಗಳು, ಕಟ್ಟಡಗಳು ಸಂಪೂರ್ಣವಾಗಿ ನಿರ್ಮಾಣವಾದ ನಂತರ ಮತ್ತು ಕೆಲವು ಸಂದರ್ಭಗಳಲ್ಲಿ ಜನ ಅನೇಕ ವರ್ಷಗಳು ಅಲ್ಲಿ ವಾಸಿಸಿದ ನಂತರ ಅವನ್ನು ಅಕ್ರಮವೆಂದು ಘೋಷಿಸುತ್ತವೆ ಹಾಗೂ ಆರ್ಥಿಕ ಜವಾಬ್ದಾರಿಯನ್ನು ಕಟ್ಟಡ ನಿರ್ಮಾತೃಗಳು ಹಾಗೂ ಅವುಗಳ ಮೇಲೆ ಹಣ ಹೂಡಿ ಅವನ್ನು ಖರೀದಿಸುವವರ ಮೇಲೆ ಮಾತ್ರ ಹೊರಿಸುತ್ತವೆ.
ಗೃಹ ನಿರ್ಮಾಣ ಕ್ಷೇತ್ರದಲ್ಲಿ ಇಷ್ಟೊಂದು ಸರ್ಕಾರಿ ಹಸ್ತಕ್ಷೇಪ ನಡೆದಿರದಿದ್ದರೆ ಸರ್ಕಾರಿ ಅಧಿಕಾರಿಗಳನ್ನು ಕ್ಷಮಿಸಬಹುದಾಗಿತ್ತು. ಆದರೆ ಜಮೀನಿನ ಒಂದು ಭಾಗದ ಖರೀದಿ, ರಸ್ತೆಗಳ ಯೋಜನೆ, ಸ್ಯೂಯೇಜ್, ಟ್ರ್ಯಾಫಿಕ್, ಬಹುಮಹಡಿ ಕಟ್ಟಡಗಳ ನಿರ್ಮಾಣದಲ್ಲಿ ಸುರಕ್ಷತೆ ಹಾಗೂ ಅವುಗಳಲ್ಲಿನ ಸೌಲಭ್ಯಗಳಲ್ಲಿ ಸರ್ಕಾರಿ ಹಸ್ತಕ್ಷೇಪ ಎಷ್ಟು ಹೆಚ್ಚಾಗಿದೆಯೆಂದರೆ, ಶೇ.40-45ರಷ್ಟು ಅವುಗಳ ನಿಯಮಗಳನ್ನು ಪೂರೈಸಲು ಅಥವಾ ಹತ್ತಾರು ಅಧಿಕಾರಿಗಳನ್ನು ಸಂತೋಷವಾಗಿಡುವಲ್ಲಿ ಖರ್ಚಾದರೆ ಆ ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ.