ಕಥೆ –  ರೇಖಾ ಶ್ರೀವತ್ಸ

“ಮುಂದೆ ಅಲ್ಲಿ ಬಿದ್ಹೋಗಿರೊ ಮನೆ ಇದ್ಯಲ್ಲ…. ಅದೇ ಕಮಲಾ ಮೇಡಂ ಮನೆ,” ಹುಡುಗ ಮುರಿದ ಮನೆಯ ಕಡೆ ಗಲ್ಲಿಯ ತಿರುವಿನಿಂದಲೇ ಬೆರಳು ಮಾಡಿ ತೋರಿಸಿ, ತನ್ನ ಸ್ನೇಹಿತರ ಬಳಿಗೆ ಓಡಿಹೋದ.

ಆಟವನ್ನು ಅರ್ಧಕ್ಕೆ ಬಿಟ್ಟು ನನಗೆ ಮನೆ ತೋರಿಸಲು ಬಂದಿದ್ದನೇನೋ, ಮನೆಯ ಮುಚ್ಚಿದ ಬಾಗಿಲನ್ನು ತಟ್ಟಲು ಎತ್ತಿದ ಕೈ ಅಲ್ಲಿಯೇ ನಿಂತುಬಿಟ್ಟಿತು. ಇದ್ದಕ್ಕಿದ್ದಂತೆ ನನ್ನ ಕಣ್ಣುಗಳ ಎದುರು ಎರಡು ವಿಶಾಲ ಕಣ್ಣುಗಳು ತೇಲಿ ಬಂದವು. ಅವುಗಳಲ್ಲಿ ಕಳೆದ ಮೂರು ವರ್ಷಗಳಿಂದಲೂ ಹಗಲಿರುಳು ಚಿಂತಿಸುವಂತೆ ಮಾಡುತ್ತಿದ್ದ ಅದೇ ಭಾವವಿತ್ತು. ಜೀವನದ ಒಂದೇ ಒಂದು ಸುಂದರ ಕ್ಷಣವನ್ನು ಸ್ಪರ್ಶಿಸುವ ಆಸೆಯಿಂದ ಚಾಚಿದ ನನ್ನ ಕೈಗಳನ್ನು ಆ ಕಣ್ಣುಗಳು ಅಲ್ಲಿಯೇ ತಡೆಯುತ್ತಿದ್ದವು. ಆ ಕ್ಷಣದಲ್ಲಿ ಅಲ್ಲಿ ಕಾಣಿಸುತ್ತಿದ್ದ ನಿಷೇಧ, ತಿರಸ್ಕಾರ, ದಮನಗೊಳಿಸಿದ ಆಕ್ರೋಶ ಆಶ್ಚರ್ಯಮಿಶ್ರಿತ ಭಾವಗಳು ನನ್ನನ್ನು ಸ್ತಬ್ಧಗೊಳಿಸುತ್ತಿದ್ದವು. ನಾನು ಹೆಳವನಂತಾಗುತ್ತಿದ್ದೆ. ಆಂತರ್ಯದಲ್ಲಿ ಬೆಂಕಿಯ ಜ್ವಾಲೆ ಭುಗಿಲೆದ್ದು, ಅದರ ಬೇಗೆಯಲ್ಲಿ ಸುಟ್ಟು ಕರಕಲಾಗುವುದೇ ನನ್ನ ವಿವಶತೆಯಾಗಿತ್ತು.

ಆದರೆ ಕಳೆದ ಮೂರು ವರ್ಷಗಳಿಂದ ನಡೆದ ಘಟನೆಗಳಿಗೆ ನಾನೇ ಹೊಣೆಯಾಗಿದ್ದೆ. ನನ್ನ ದುಃಖವನ್ನು, ನೋವನ್ನು ನಾನೇ ಅನುಭವಿಸಿ, ಪ್ರಾಯಶ್ಚಿತ್ತ ಮಾಡಿಕೊಳ್ಳಲು ಸಿದ್ಧನಾಗಿದ್ದೆ. ಪೂರ್ತಿ ನಿರ್ದೋಷಿಯಾಗಿದ್ದರೂ, ಶಿಕ್ಷೆಗೊಳಗಾದ ಕಮಲಾಳ ಬಗ್ಗೆ ನಾನು ದುಃಖಗೊಂಡಿದ್ದೆ. ಶೋಭಾಯಮಾನವಾದ ಅವಳ ಸೌಂದರ್ಯ, ನಿಷ್ಕಲ್ಮಷ ಹಾಗೂ ನಿಶ್ಚಲ ಹೃದಯ ಇವೇ ಅವಳ ದೋಷಗಳಾಗಿದ್ದವು. ಈ ಪುರುಷ ಪ್ರಧಾನ ಸಮಾಜದಲ್ಲಿ ತನ್ನ ಆತ್ಮಗೌರವವನ್ನು ಕಾಪಾಡಿಕೊಂಡು ಬರಲು ಹೆಣಗಾಡುತ್ತಿದ್ದವು.

ಇದನ್ನು ನಾನೂ ಸಹಿಸಲಿಲ್ಲ ಹಾಗೂ ಪರಮೇಶನೂ ಸಹಿಸಲಿಲ್ಲ. ಸಮಾಜದ ಎದುರಿನಲ್ಲಿ ಪರಮೇಶ ಅವಳನ್ನು ಅಗ್ನಿಸಾಕ್ಷಿಯಾಗಿ ತನ್ನ ಜೀವನದ ಜೊತೆಗಾತಿಯನ್ನಾಗಿ ಮಾಡಿಕೊಂಡಿದ್ದ. ಆದರೆ ಈ ಬಂಧನ ಬಹಳ ಹಸಿಯಾಗಿದ್ದು, ಏಳು ತಿಂಗಳುಗಳವರೆಗೂ ತಡೆಯಲಿಲ್ಲ. ಹಗುರವಾದೊಂದು ಗಾಳಿಯ ಅಲೆ ಬೀಸಿ ಎಲ್ಲ ಸಂಬಂಧವನ್ನೂ ಮುರಿದುಹಾಕಿತ್ತು. ಸಂಶಯದ ಮಾಲಿನ್ಯ ತುಂಬಿದ ಗಾಳಿಯಲ್ಲಿ ಜ್ಯೋತಿಯೊಂದು ದಿಢೀರನೆ ಆರಿಹೋಯಿತು.

ಇಲ್ಲ, ಆ ಜ್ಯೋತಿ ನಂದಿಹೋಗಲಿಲ್ಲ. ಅದು ಬೆಂಕಿಯಾಗಿ ಕಮಲಾಳ ಕಣ್ಣುಗಳಲ್ಲಿ ಹಾಗೂ ಅವಳ ಹೃದಯದಲ್ಲಿ ಇಂದಿಗೂ ಪ್ರಜ್ವಲಿಸುತ್ತಿದೆ. ನಂಬಿ ತನ್ನವರನ್ನಾಗಿ ಮಾಡಿಕೊಂಡ ಆ ಪುರುಷನಿಂದ ಬೇರೆಯವರಿಗಷ್ಟೇ ಅಲ್ಲ, ಸ್ವಯಂ ತನಗೂ ಪರಕೀಯಳಾಗಿಬಿಟ್ಟಿದ್ದಾಳೆ. ತಿರಸ್ಕಾರದ ತೀಕ್ಷ್ಣ ಜ್ವಾಲೆಗಳು ಅವಳ ರೋಮ ರೋಮದಲ್ಲೂ ಭುಗಿಲೆದ್ದಿವೆ. ಇದರೊಂದಿಗೆ ಮತ್ತೊಬ್ಬ, ಧೂಮಕೇತುವಿನಂತೆ ಅವಳ ಸುಖಮಯ ಜೀವನವನ್ನು ಪ್ರವೇಶಿಸಿ, ಅವಳ ಪ್ರೀತಿಯ ಗೂಡಿನ ಒಂದೊಂದು ಹುಲ್ಲುಕಡ್ಡಿಯನ್ನೂ ಕಿತ್ತು ಚೆಲ್ಲಾಡಿ ಹೊರಟುಹೋಗಿದ್ದ.

ಆ ಧೂಮಕೇತು ಮತ್ಯಾರು ಅಲ್ಲ, ನಾನೇ! ಆದರೆ ಇಂದು ನಾನು ಎಸೆಗಿದ ಅಪರಾಧಕ್ಕೆ ಪಶ್ಚಾತ್ತಾಪ ಪಡುತ್ತಿದ್ದೇನೆ. ನನ್ನ ಆ ತಪ್ಪನ್ನು ಸರಿಪಡಿಸಿಕೊಳ್ಳುವುದಕ್ಕಾಗಿಯೇ ಬಂದಿದ್ದೇನೆ. ಆ ಅಪರಾಧದ ಜ್ವಾಲೆಯಲ್ಲಿ ಸ್ವತಃ ನಾನೇ ಉರಿದು ಹೋಗುತ್ತಿದ್ದೇನೆ. ಉಸಿರು ಬಿಗಿಹಿಡಿದಂತಾಗುತ್ತಿದೆ. ಕಮಲಾಳ ಆಂತರ್ಯದಲ್ಲಿನ ಆ ಬೆಂಕಿ ಅವಳನ್ನು ಹಾಗೂ ನನ್ನನ್ನು ಯಾವ ರೀತಿ ಉರಿಸತೊಡಗಿದೆ ಅನ್ನುವುದನ್ನು ಈಗ ಮನಗಾಣುತ್ತಿದ್ದೇನೆ.

ಇಲ್ಲ, ಕಮಲಾಳ ಕಣ್ಣುಗಳಲ್ಲಿ ಮೊದಲೆಂದೂ ಇಂತಹ ಭಾವನೆ ಇರಲಿಲ್ಲ. ಕಮಲಾಳೊಂದಿಗೆ ನನ್ನ ಪ್ರಥಮ ಭೇಟಿ ನನಗಿನ್ನೂ ನೆನಪಿದೆ. ಅವಳ ಆ ಮಾದಕ ಕಣ್ಣುಗಳು ಅವಳಿಗರಿಯದಂತೆ ಪ್ರೀತಿ ಭಾವವನ್ನು ಹೊರಸೂಸುತ್ತಿದ್ದವು. ಮತ್ತೇರಿಸುವ ರಸವನ್ನು ಪಾನ ಮಾಡಲು ಆತುರಗೊಂಡ ನನ್ನ ಅತೃಪ್ತ ಆಕಾಂಕ್ಷೆ ನನ್ನನ್ನು ಪ್ರತಿ ನಿಮಿಷ ಚುಚ್ಚಿ ಚುಚ್ಚಿ  ದಹಿಸತೊಡಗಿತು. ಮನಸ್ಸಿನಲ್ಲಿ ಉದ್ರೇಕಗೊಂಡ ಈ ಕಾಮನೆಯ ತಾಪವನ್ನು ನಾನು ಸಹಿಸಲಾರದಾದೆ. ಇದರ ಕಿಡಿಯೊಂದು ಅವಳ ಸುಖೀ ಜೀವನವನ್ನು ಭಸ್ಮ ಮಾಡಿತು. ಅವಳ ಜೀವನಕ್ಕೆ ಹತ್ತಿಕೊಂಡ ಆ ಜ್ವಾಲೆ ನನ್ನನ್ನೂ ಸುಟ್ಟು ಹಾಕುತ್ತದೆಂದು ನಾನು ಊಹಿಸಿರಲಿಲ್ಲ.

ಓಹ್‌, ನಾನು ಅವಳಿಗೆ ಎಷ್ಟೊಂದು ಅನ್ಯಾಯ ಮಾಡಿದ್ದೆ! ನೆನಪಿನ ಹಾಳೆಗಳು ಪಟಪಟನೆ ತೆರೆದುಕೊಂಡವು. ಪರಮೇಶನು ತನ್ನ ಮದುವೆಯ ಆಹ್ವಾನ ಪತ್ರವನ್ನು ಕೈಲ್ಲಿಡುತ್ತಾ, “ನೋಡೋ ಶ್ರೀಕಾಂತ, ನನ್ನ ಮದುವೆಗೆ ನೀನು ಖಂಡಿತ ಬರಲೇಬೇಕು. ನಾನು ಯಾವ ನೆಪವನ್ನೂ ಕೇಳಲು ಸಿದ್ಧನಿಲ್ಲ,” ಎಂದವನೇ ವೇಗವಾಗಿ ಹೊರಟುಹೋದವು.

pyar-ke-3-pahiy-01

ಆದರೆ ದೂರದ ಹಳ್ಳಿಯಲ್ಲಿ ನಡೆದ ಅವನ ಮದುವೆಗೆ ಹೋಗಬೇಕೆಂದುಕೊಂಡರೂ ನಾನು ಹೋಗಿರಲಿಲ್ಲ. ಅವನು ಹಿಂತಿರುಗಿ ಬಂದ ಮೇಲೆ ಯಾವ ನೆಪ ಹೇಳಿ ಅವನನ್ನು ಸಮಾಧಾನಪಡಿಸುವುದು ಎಂಬ ಯೋಚನೆಯಲ್ಲೇ ಮುಳುಗಿದ್ದೆ. ಆದರೆ ಪರಮೇಶ ಪ್ರಸನ್ನತೆಯಿಂದ ಆಫೀಸಿನ ಸಹೋದ್ಯೋಗಿಗಳಿಗೆಲ್ಲಾ ಸಿಹಿ ಹಂಚತೊಡಗಿದ್ದ. ಒಂದು ಸಲ ನಾನೇಕೆ ಬರಲಿಲ್ಲವೆಂದು ಕೇಳಲಿಲ್ಲ. ಇದು ನನಗೆ ಆಶ್ಚರ್ಯ ಉಂಟು ಮಾಡಿತು. ಅವನು ತನ್ನ ಕೋಪವನ್ನು ಈ ರೀತಿ ತೋರ್ಪಡಿಸುತ್ತಿದ್ದಾನೆಂದು ನಾನು ಊಹಿಸಿದ್ದೆ. ಆದ್ದರಿಂದ ಮಾರನೇ ದಿನವೇ ಅವನ ಹೆಂಡತಿಗಾಗಿ ಒಂದು ಉಡುಗೊರೆ ತೆಗೆದುಕೊಂಡು, ಸಾಯಂಕಾಲ ಪರಮೇಶನ ಮನೆಗೆ ಹೋಗಲು ಸಿದ್ಧನಾದೆ. ಆದರೆ ಅವನು ನನ್ನನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು ಹಿಂದೆಮುಂದೆ ನೋಡಿದಾಗ, ನಾನು ಸಂದಿಗ್ಧದಲ್ಲಿ ಮುಳುಗಿದೆ.

ಅನೇಕ ದಿನಗಳು ಉರುಳಿದವು. ಅವನು ನನ್ನನ್ನು ಮನೆಗೆ ಒಮ್ಮೆಯೂ ಆಹ್ವಾನಿಸಲಿಲ್ಲ. ಖಂಡಿತ ಪರಮೇಶನ ಹೆಂಡತಿ ಹಳ್ಳಿ ಗುಗ್ಗು, ಕುರೂಪಿ ಆಗಿರಬೇಕು, ಆದ್ದರಿಂದಲೇ ಅವಳನ್ನು ನಮಗೆ ಭೇಟಿ ಮಾಡಿಸುತ್ತಿಲ್ಲ, ಮಾಡಿದರೆ ಅವನನ್ನೇ ನಾವು ಹಾಸ್ಯ ಮಾಡಬಹುದೆಂದು ಅವನಿಗೆ ಭಯವಿರಬೇಕು ಎಂದುಕೊಂಡೆ. ಆದರೆ ಅವನ ಕಣ್ಣುಗಳಲ್ಲಿನ ಹೊಳಪು ಹಾಗೂ ಮುಖದಲ್ಲಿ ಕಂಡುಬರುವ ಪ್ರಸನ್ನತೆ ನನ್ನ ಈ ಊಹೆಯನ್ನು ದೂರ ಮಾಡಿತು. ಕೊನೆಗೊಮ್ಮೆ ಕುತೂಹಲವನ್ನು ತಡೆಯಲಾಗಲಿಲ್ಲ. ಪರಮೇಶ ನನ್ನನ್ನು ಕರೆದುಕೊಂಡು ಹೋಗಲು ಮುಂದಾಗದಿದ್ದರೂ, ನಾನೇ ಅವನ ಬೆನ್ನ ಹಿಂದೆ ಬಿದ್ದೆ, “ನಾನೀವತ್ತು ಅತ್ತಿಗೆ ಕೈಯಿಂದ ಕಾಫಿ ಕುಡಿಯಲೇಬೇಕು ಕಣಯ್ಯ.”

ಪರಮೇಶನ ಮುಖ ಸ್ವಲ್ಪ ಕಪ್ಪಿಟ್ಟಿತು. ನಂತರ ಭುಜಗಳನ್ನು ಕುಣಿಸುತ್ತಾ ನಿರ್ಲಕ್ಷ್ಯದಿಂದ ಹೇಳಿದ, “ಸರಿ ಹಾಗಿದ್ರೆ, ಹೋಗೋಣ ನಡಿ, ಆದರೆ ಅವಳನ್ನು ನೋಡಿ ನಿನಗೆ ನಿರಾಶೆಯಾಗಬಹುದು.”

ನಾನು ಏನೂ ಉತ್ತರ ನೀಡದೆ ಅವನೊಡನೆ ಹೊರಟೆ. ಪರಮೇಶ ಬಾಗಿಲ ಹೊರಗಿನಿಂದಲೇ ಎತ್ತರದ ಧ್ವನಿಯಲ್ಲಿ ಕೂಗು ಹಾಕಿದ, “ನೋಡು ಕಮಲಾ, ನಿನ್ನ ಭೇಟಿ ಮಾಡಿಸೋಕ್ಕೆ ಯಾರನ್ನೋ ಕರ್ಕೊಂಡ್‌ ಬಂದಿದ್ದೀನಿ,” ಹೆಸರೇನೋ ಸುಂದರವಾಗಿದೆ. ನೋಡೋಣ, ಮುಖ ಹೇಗಿದೆಯೋ ನಾನು ಮನಸ್ಸಿನಲ್ಲೇ ಹೇಳಿಕೊಂಡೆ. ಮನೆ ಒಳಗೆ ಪ್ರವೇಶಿಸಿದ ಕೂಡಲೇ ನಾನು ದಂಗು ಬಡಿದವನಂತಾಗಿ ಅಲ್ಲಿಯೇ ನಿಂತುಬಿಟ್ಟೆ! ಕೊಠಡಿಯ ಮಧ್ಯದಲ್ಲಿ ಗುಲಾಬಿ ಸೀರೆಯುಟ್ಟು ಕಮಲಾ ನಿಂತಿದ್ದಳು. ಹೌದು, ಅವಳನ್ನು ಸಂಧಿಸಿದ ನಂತರ ಅವಳನ್ನು ಅತ್ತಿಗೆ ಎಂದು ಸಂಬೋಧಿಸಲು ನನ್ನ ಮನಸ್ಸು ಒಪ್ಪಲಿಲ್ಲ. ಅವಳು ಆಗಷ್ಟೇ ಸ್ನಾನ ಮಾಡಿ ಬಂದಿದ್ದಳೆಂದು ಕಾಣುತ್ತದೆ. ನೀರಿನ ಹನಿಗಳು ಮುತ್ತುಗಳಂತೆ ಜಾರಿ ಅವಳ ಸೆರಗನ್ನು ನೆನೆಸುತ್ತಿದ್ದವು. ಭುಜವನ್ನು ಹಾಯ್ದು ಬಂದ ಕೇಶರಾಶಿ ಮುಂದೆಯೂ ಹಾರಾಡುತ್ತಿತ್ತು. ಬಿಳಿ ಅಮೃತಶಿಲೆಯಂತಹ ಅವಳ ವಿಶಾಲ ಹಣೆಯ ಮೇಲೆ ಹೊಳೆಯುವ ಸೂರ್ಯನಂತಿದ್ದ ಕುಂಕುಮದ ಬೊಟ್ಟು, ಬೈತಲೆಯಲ್ಲಿನ ಕುಂಕುಮ ರೇಖೆ, ವಿಶಾಲ ಕಪ್ಪು ಕಣ್ಣುಗಳ ಮೇಲೆ ಬಾಗಿರುವ ರೆಪ್ಪೆಗಳು, ಉದ್ದವಾಗಿ ಮಾಟವಾಗಿದ್ದ ಮೂಗು, ಅರೆತೆರದ ಅಧರಗಳ ನಡುವೆ ಬಾಗಿ ನೋಡುವಂತಿರುವ ಹೊಳೆಯುವ ದಂತಪಂಕ್ತಿ, ಅವಳ ಪ್ರತಿಯೊಂದು ಅಂಗ ಎರಕ ಹೊಯ್ದಂತಿತ್ತು.

ಅವಳು ಚೆಲುವಿನ ಹೊನ್ನಿನ ಪುತ್ಥಳಿಯಂತೆ ಕಂಡುಬಂದಳು. ನಾನು ಅವಾಕ್ಕಾಗಿ ಅವಳನ್ನು ಒಂದೇ ಸಮನೆ ನೋಡುತ್ತಾ ನಿಂತೆ. ನನ್ನ ಮೈಮರೆವಿನಲ್ಲಿ ಪರಮೇಶನ ಇರುವಿಕೆಯನ್ನೂ ಮರೆತುಬಿಟ್ಟಿದ್ದೆ. ಆದರೆ ಅವಳ ಕೈಬಳೆಗಳ ಸದ್ದು ನನ್ನನ್ನು ಎಚ್ಚರಿಸಿತು.

ಲಜ್ಜೆಯ ಮುಗುಳ್ನಗೆ ಬೀರಿ, ಕೆಂಪು ಬಳೆಗಳಿಂದ ತುಂಬಿದ್ದ ತನ್ನ ಬಿಳಿಯ ಮಣಿಕಟ್ಟನ್ನು ಜೋಡಿಸಿ, ಅವಳು `ನಮಸ್ಕಾರ’ ಎಂದಾಗ ಆ ಸುಮಧುರ ಸಂಗೀತ ಬಳೆಗಳ ಸದ್ದಿನೊಂದಿಗೆ ಒಂದಾಗಿ ಹೋಯಿತು. ಪರಮೇಶನಿಗೆ ಬಹುಶಃ ನಾನು ಈ ರೀತಿ ಅವಳನ್ನು ನೋಡುವುದು ಇಷ್ಟವಾಗಲಿಲ್ಲವೆಂದು ಕಾಣುತ್ತದೆ. ಆದ್ದರಿಂದ ಅವಳಿಗೆ ಕಣ್ಸನ್ನೆ ಮಾಡಿದ. ಕೂಡಲೇ ಕಾಲ್ಗೆಜ್ಜೆಗಳ ಝಣ್‌ ಝಣ್‌ ಶಬ್ದ ಮಾಡುತ್ತಾ, ಹೃದಯದಲ್ಲಿ ಕಲರವವನ್ನೆಬ್ಬಿಸಿ, ಪುಟ್ಟ ಕೋಮಲ ಪಾದಗಳನ್ನು ನನ್ನ ಹೃದಯದ ಮೇಲೆ ಅಚ್ಚೊತ್ತುತ್ತಾ ಅಲ್ಲಿಂದ ಹೊರಟುಹೋದಳು ಕಮಲಾ.

ಅಲ್ಲಿಂದ ಮೇಲೇಳಲು ನನ್ನಿಂದಾಗಲಿಲ್ಲ. ಅಲ್ಲಿಯೇ ಕುಳಿತು, ಅವಳನ್ನು ಒಂದೇ ಸಮನೇ ನೋಡುತ್ತಿರಬೇಕೆನಿಸಿತು. ಆದರೆ ಪರಮೇಶ ಬೇಗ ಬೇಗ ಉಪಾಹಾರ ಕೊಡಿಸಿ, ಕಾಫಿ ಕುಡಿಸಿ, ಕಳುಹಿಸುವ ಆತುರ ತೋರಿದ. ಒಲ್ಲದ ಮನಸ್ಸಿನಿಂದ ಕಾಲುಗಳನ್ನು ಎಳೆಯುತ್ತಾ ಎದ್ದು ನಡೆದೆ. ರಾತ್ರಿಯೆಲ್ಲಾ ಹೊರಳಾಡುತ್ತಿದ್ದೆ. ಸ್ತ್ರೀ ಶರೀರ ಇಷ್ಟೊಂದು ಮಧುರ ಅನುಭೂತಿ ಉಂಟು ಮಾಡಬಹುದೆಂದು, ಅದರಲ್ಲಿ ಇಷ್ಟೊಂದು ಸುಗಂಧವಿರುವುದೆಂದು ನಾನು ನಂಬಿರಲಿಲ್ಲ. ಮಾನವ ಶರೀರದಲ್ಲಿ ನಿಜವಾಗಿಯೂ ಇಂತಹದೊಂದು ಸೌಂದರ್ಯ ಇರುವುದು ಸಾಧ್ಯವೇ? ಅಂದು ರಾತ್ರಿ ನನ್ನಿಂದ ಮಲಗಲಾಗಲೇ ಇಲ್ಲ.

ಕಮಲಾಳನ್ನು ಸಂಧಿಸಿ ಬಂದಾಗೆಲ್ಲ ಹೀಗೆ ಆಗುತ್ತಿತ್ತು. ಅವಳನ್ನು ಸಂಧಿಸದೆ ಇರಲು ನನ್ನಿಂದ ಸಾಧ್ಯವಾಗುತ್ತಿರಲಿಲ್ಲ. ಪರಮೇಶ ಕರೆಯಲಿ, ಕರೆಯದೆ ಇರಲಿ, ನಾನಾಗಿ ಅವನ ಮನೆಗೆ ಹೋಗುತ್ತಿದ್ದೆ. ಕಾಫಿ ಕುಡಿಯುವ ನೆಪದಿಂದಲೋ, ತಿಂಡಿ ತಿನ್ನುವ ನೆಪ ಮಾಡಿಯೋ ಅಲ್ಲಿಗೆ ಹೋಗಿ ಬರತೊಡಗಿದೆ. ಕಮಲಾ ಮಾದಕ ಸ್ವರದಲ್ಲಿ, ಸಿಹಿ ನಗುವಿನೊಡನೆ, “ಇನ್ನೊಂದೆರಡು ಇಡ್ಲಿ ಬಡಿಸ್ತೀನಿ, ಇನ್ನು ಸ್ವಲ್ಪ ಅರೇಕಾಳಿನ ಉಪ್ಪಿಟ್ಟು ಬಡಿಸ್ಕೊಳ್ಳಿ,” ಎಂದವಳೇ ಪ್ಲೇಟ್‌ನಲ್ಲಿ ಬಡಿಸಿಯೇ ಬಿಡುತ್ತಿದ್ದಳು. ಹಸಿವಿಲ್ಲದಿದ್ದರೂ ಅವಳು ನೀಡಿದುದನ್ನು ತಿನ್ನುತ್ತಿದ್ದೆ. ತಿಂಡಿ, ಕಾಫಿ ಸಮಾರಾಧನೆಯ ನಂತರ ಕಮಲಾಳನ್ನು ನೋಡುವ ಆಸೆಯಿಂದ ಬಹಳ ಸಮಯದವರೆಗೆ ನಾನಲ್ಲಿ ಕುಳಿತಿರುತ್ತಿದ್ದೆ.

ಪರಮೇಶ ಆಕಳಿಸುತ್ತ ಮೈಮುರಿದಾಗ, ಕಮಲಾ ನಿದ್ರೆಯಿಂದ ಭಾರವಾದ ಕಣ್ಣುಗಳನ್ನು ಬಲವಂತಾಗಿ ತೆರೆದು ಕುಳಿತಾಗ ಅಥವಾ ಅಡುಗೆಮನೆಯಲ್ಲಿ ಅನಾವಶ್ಯಕವಾಗಿ ಪಾತ್ರೆಗಳು ಸದ್ದು ಮಾಡತೊಡಗಿದಾಗ ನಾನು ಅಲ್ಲಿಂದ ಎದ್ದು ಹೊರಡುತ್ತಿದ್ದೆ. ಬರಬರುತ್ತಾ ನನ್ನ ಬಗ್ಗೆ ಪರಮೇಶ ಅನಾದರ ತೋರತೊಡಗಿದಾಗ, ಅವರಿಬ್ಬರಿಗೂ ನಾನು ಬೇಡವಾದ ಅತಿಥಿ ಎಂದುಕೊಂಡೆ. ಆದರೆ ಮನಸ್ಸಿನ ಆಳದಲ್ಲಿ ಕಮಲಾಳ ಕಣ್ಣುಗಳು ಹೊರಸೂಸುತ್ತಿದ್ದ ಪ್ರೀತಿಯ ರಸಗಂಗೆ, ತುಟಿಗಳು ಹೊರಹೊಮ್ಮಿಸುವ, ಮಧುವಿನಂಥ ಮುಗುಳ್ನಗೆಯನ್ನು ನೋಡಿ ಮಿಂಚು ಸೋಂಕಿದಂತಾಗಿ, ಅಮಲೇರಿದಂತಾಗುತ್ತಿದ್ದೆ.

ಈ ನಂಬಿಕೆಗೆ ಕಾರಣ ಇತ್ತು. ನಸುಗಪ್ಪು ಬಣ್ಣದ ಪರಮೇಶನ ಶುಷ್ಕ ವ್ಯಕ್ತಿತ್ವವನ್ನು ನನ್ನದರೊಂದಿಗೆ ಹೋಲಿಸಿದರೆ ಅವನು ತುಂಬಾ ಕುಬ್ಜನಾಗಿ ಕಾಣಿಸುತ್ತಿದ್ದ. ಕಮಲಾ ಒಂದು ವಜ್ರದಂತೆ ಇದ್ದಳು. ಸುಯೋಗದಿಂದ ಅವನಿಗೆ ದೊರಕಿದ್ದಳು. ಆದರೆ ಅಂತಹ ವಜ್ರವನ್ನು ಪಡೆಯುವ ಯೋಗ್ಯತೆ ಅವನಲ್ಲಿ ಏನೇನೂ ಇರಲಿಲ್ಲ. ಈ ನಂಬಿಕೆಗೆ ಪರಮೇಶನ ಶಂಕಿತ ದೃಷ್ಟಿಯೂ ಕೂಡ ಬಲ ನೀಡುತ್ತಿತ್ತು. ಕಮಲಾ ಅವನನ್ನು ಬಿಟ್ಟು ನನಗೆ ಮನಸೋಲಬಹುದೆಂಬ ಅನುಮಾನ ಅವನಿಗಿತ್ತು.

ಪರಮೇಶ ಸಂಶಯ ಪಡುತ್ತಿದ್ದರೆ ನನಗೆ ವಿಚಿತ್ರವಾದ ಆನಂದವಾಗುತ್ತಿತ್ತು. ಅವನ ಸುಖೀ ಜೀವನ ಕಂಡು ನನ್ನಲ್ಲಿ ಹೊರಹೊಮ್ಮುತ್ತಿದ್ದ ಈರ್ಷ್ಯೆಯ ಜ್ವಾಲೆಗಳು ಆಗ ಸ್ವಲ್ಪ ತಂಪಾಗುತ್ತಿದ್ದವು. ಅವನು ಇನ್ನಷ್ಟು ಸಿಡಿಮಿಡಿಗೊಳ್ಳುವಂತೆ ಮಾಡಲು ನಾನು ಕಮಲಾಳೊಂದಿಗೆ ಇನ್ನೂ ಹೆಚ್ಚಾಗಿ ನಗುನಗುತ್ತಾ ಮಾತನಾಡತೊಡಗುತ್ತಿದ್ದೆ. ಆದರೆ ಅವಳು ಮಾತ್ರ ನನ್ನನ್ನು ಮೊದಲಿನಂತೆಯೇ ನಿಷ್ಕಪಟ, ಸರಳ ಹಾಗೂ ಬಿಚ್ಚು ಹೃದಯದಿಂದಲೇ ಮಾತನಾಡಿಸುತ್ತಿದ್ದಳು.

ಆದರೆ ಮನಸ್ಸಿನ ಮೂಲೆಯಲ್ಲಿ ಎಷ್ಟೇ ಹುಡುಕಾಡಿದರೂ, ಯಾವುದೇ ಸಂಕೇತವನ್ನೂ ನಾನು ಅವಳಿಂದ ಪಡೆದಿರಲಿಲ್ಲ. ಅವಳ ಯಾವುದೇ ವರ್ತನೆ ಅಥವಾ ಮಾತಿನಿಂದ ಅಂತಹ ಯಾವುದೇ ಸಂಕೇತ ನನಗೆ ದೊರೆತಿರಲಿಲ್ಲ. ಆದರೆ ನಾನು ಮಾತ್ರ ನನ್ನ ಮನಸ್ಸಿನಲ್ಲಿ ಕನಸಿನ ಗೋಪುರ ಕಟ್ಟುತ್ತಾ ಅದೇ ರೀತಿಯಲ್ಲಿ ವರ್ತಿಸುತ್ತಿದ್ದೆ. ನನ್ನ ಬಗೆಗೆ ಪರಮೇಶ ತೋರುತ್ತಿದ್ದ ಅನಾದರ ಹಾಗೂ ಕಮಲಾ ನನ್ನನ್ನು ಅವಹೇಳನದಿಂದ ನೋಡುತ್ತಿದ್ದಾಳೆಂಬ ನನ್ನ ನಂಬಿಕೆ ನಾನು ಆ ರೀತಿ ವರ್ತಿಸುವಂತೆ ಪ್ರೇರೇಪಿಸುತ್ತಿತ್ತು ಎಂದು ಈಗ ನನಗೆ ಅರಿವಾಗುತ್ತಿದೆ.

ಮಾನವ ದೇಹದಲ್ಲಿ ಯಾವುದೋ ಒಂದು ಶಕ್ತಿ ಅವನನ್ನು ತನ್ನ ಅಂಕುಶದಲ್ಲಿಟ್ಟುಕೊಂಡು ಒಳ್ಳೆಯ ವ್ಯಕ್ತಿಯನ್ನು ಪಾಶವೀ ಕೆಲಸ ಮಾಡಲು ವಿವಶಗೊಳಿಸುತ್ತಿರುತ್ತದೆ ಎಂಬುದನ್ನು ನಾನಿಂದು ತಿಳಿದುಕೊಂಡಿದ್ದೇನೆ. ನಾನು ನನ್ನ ಮನಸ್ಸಿನ ಮೇಲೆ ಹತೋಟಿ ಇಟ್ಟುಕೊಳ್ಳಲಾರದವನಾದೆ. ಕಮಲಾ ನನಗೆ ದೊರೆಯಲಾರಳು, ಅವಳನ್ನು ಬಯಸುವುದೂ ತಪ್ಪು ಎಂಬುದು ನನಗೆ ಗೊತ್ತಿತ್ತು. ಆದರೂ ಅವಳನ್ನು ಪಡೆಯಲು, ಏನೇನು ಸಾಧ್ಯವೋ ಅವೆಲ್ಲವನ್ನೂ ಮಾಡುತ್ತಿದ್ದೆ.

ಪರಮೇಶ ಅವಳೊಂದಿಗೆ ಕುಳಿತು ನಗುವುದು ಅವಳಿಗೆ ಒರಗಿದಂತೆ ಕುಳಿತುಕೊಳ್ಳುವುದನ್ನು ನಾನು ಸಹಿಸಲಾರದಾದೆ. ಪರಮೇಶ ಅವಳೊಡನೆ ರಾತ್ರಿಯ ಏಕಾಂತದಲ್ಲಿ ಸುಖಿಸುವ ದೃಶ್ಯ ಬೇರೆ ಬೇರೆ ಬಣ್ಣಗಳನ್ನು ಧರಿಸಿ, ನನ್ನ ಮನಸ್ಸನ್ನು ಬಹಳ ಪೀಡಿಸುತ್ತಿತ್ತು. ಅಧಿಕಾರಯುತ ಸ್ವರದಲ್ಲಿ ಪರಮೇಶ ಅವಳನ್ನು ಬಯ್ಯುವುದು, ಗದರಿಸುವುದು ನನಗೆ ಆಳವಾದ ನೋವನ್ನು ಉಂಟು ಮಾಡಿದವು.

ಪರಮೇಶ ಅವಳನ್ನು  ಬೈದಾಗ, ಪ್ರತಿಸಲ ನನ್ನ ಕಡೆಗೆ ಹೆಮ್ಮೆಯ ದೃಷ್ಟಿಯನ್ನು ಬೀರುತ್ತಿದ್ದ. ಆಗೆಲ್ಲ, `ನೋಡಿದೆಯಾ? ಯಾರ ನೋಟವೊಂದನ್ನು ಪಡೆಯಲೆಂದು ಒದ್ದಾಡುತ್ತಾ ಇಲ್ಲಿಗೆ ಬರುವೆಯೋ, ಅವಳು ನನ್ನ ಕೈಗೆ ಎಷ್ಟೊಂದು ಸುಲಭವಾಗಿ ಸಹಜವಾಗಿ ಸಿಕ್ಕಿದ್ದಾಳೆ?’ ಎಂದು ನನಗೆ ಹೇಳುವಂತೆ ತೋರುತ್ತಿತ್ತು.

ನಾನು ಅಪಮಾನಗೊಂಡವನಂತೆ ಕಪ್ಪಿಡುತ್ತಿದ್ದೆ. ಆಗೆಲ್ಲ ಪರಮೇಶ ನನ್ನ `ಊರ್ವಶಿ’ಯನ್ನು ಹೊಡೆದು ಹಿಂಸಿಸು `ರಾಕ್ಷಸ’ನಂತೆ ನನಗೆ ಕಂಡುಬರುತ್ತಿದ್ದ. ನನ್ನ ಮನಸ್ಸಿನಲ್ಲಿ ನನ್ನ ಊರ್ವಶಿಯಾದ ಕಮಲಾಳ ಪುರೂರನಾಗುವ ಆಸೆ ಬಹಳ ಪ್ರಬಲವಾಯಿತು. ಆದ್ದರಿಂದಲೇ `ಅಂದು’ ಆ ದುಸ್ಸಾಹಸಕ್ಕೆ ನಾನು ಇಳಿದೆ.

ಅಯ್ಯೋ! ಅಂದು ನಾನು ಅದೆಲ್ಲನ್ನೂ ಹೇಳದೆ ಇದ್ದಿದ್ದರೆ ಆ ತಳಮಳ ಕೇವಲ ನನ್ನ ಮನಸ್ಸಿನಲ್ಲಿಯೇ ಉಳಿದುಬಿಡುತ್ತಿತ್ತು. ಒಂದಲ್ಲ ಒಂದು ದಿನ ನನ್ನಲ್ಲಿ ಉರಿಯುತ್ತಿರುವ ಬೆಂಕಿ ಕಾಲಕ್ರಮೇಣ ಆರಿಹೋಗುತ್ತಿತ್ತು. ಆದರೆ ಕಮಲಾ ಅಹಂಕಾರದಿಂದ ಹೇಳಿದ ಮಾತುಗಳಲ್ಲಿನ ಆ ತಿರಸ್ಕಾರ ನನ್ನ ಬೆಂಕಿಗೆ ತುಪ್ಪ ಸುರಿದಿತ್ತು. ನಾಲ್ಕು ಕಡೆಗೂ ಹರಡಿದ ಬೆಂಕಿಯ ತೀವ್ರತೆಯಲ್ಲಿ ನಿರ್ದೋಷಿ ಕಮಲಾ ಸುಟ್ಟು ಭಸ್ಮವಾದಳು ಪಾಪ! ಹೌದು, ಅಂದು ಮನಸ್ಸಿನಲ್ಲಿ ವಿಚಿತ್ರ ರೀತಿಯ ಅಸ್ವಸ್ಥತೆ ಇತ್ತು. ಕಣ್ತೆರೆಯ ಮೇಲೆ ಕಮಲಾಳ ಮುಖ ತೇಲಿ ಬರುತ್ತಿತ್ತು. ಕಳೆದ ಸಾಯಂಕಾಲ ಪರಮೇಶ ಅವಳ ಮೇಲೆ ಸಿಕ್ಕಾಪಟ್ಟೆ ರೇಗಾಡಿದ್ದ. ನನಗೆ ಅವಳನ್ನು ಬಾಹುಗಳಲ್ಲಿ ಎತ್ತಿಕೊಂಡು, ಹೃದಯದಲ್ಲಿ ಬಚ್ಚಿಟ್ಟುಕೊಳ್ಳು ಆಸೆಯಾಗಿತ್ತು. ಅವಮಾನದಿಂದ ಅವಳ ಕಣ್ಣುಗಳಲ್ಲಿ ಚಿಮ್ಮಿದ ಕಣ್ಣೀರನ್ನು ನೋಡಿ, ನನ್ನ ಹೃದಯ ಚಡಪಡಿಸಿತು. ಅವಳು ನನ್ನನ್ನು ತನ್ನ ಓರೆನೋಟದಿಂದ ನೋಡಿದಳು. ಆದರೆ ನಾನು ವಿವಶನಾಗಿದ್ದೆ, ಅವಳ ಕಣ್ಣೀರನ್ನು ತೊಡೆಯಲಾರದವನಾಗಿದ್ದೆ.

ರಾತ್ರಿಯೆಲ್ಲ ನನ್ನಿಂದ ನಿದ್ದೆ ಮಾಡಲಾಗಲಿಲ್ಲ. ಕಣ್ಮುಚ್ಚಿದ ಕೂಡಲೇ ನೋವಿನಿಂದ ಕೂಡಿದ ಕಮಲಾಳ ಮುಖ ಹಾಗೂ ತಿಳಿಗೊಳಗಳಂತಿದ್ದ ಕಣ್ಣುಗಳು ನನ್ನೆದುರು ಬಂದು ನಿಂತಂತಾಯಿತು. ಆಫೀಸ್‌ ಕೆಲಸದಲ್ಲಿಯೂ ಮನಸ್ಸಿರಲಿಲ್ಲ. ಪರಮೇಶ ತಲೆ ತಗ್ಗಿಸಿ ತನ್ನ ಕೆಲಸದಲ್ಲಿ ಮಗ್ನನಾಗಿರುವುದನ್ನು ನಾನು ನೋಡಿದೆ. ಮನಸ್ಸಿನಲ್ಲಿ ಅವನ ಬಗ್ಗೆ ತಿರಸ್ಕಾರ ಮೂಡಿತು. ಮೈ ಚೆನ್ನಾಗಿಲ್ಲವೆಂಬ ನೆಪ ಮಾಡಿಕೊಂಡು ಆಫೀಸಿನಿಂದ ಹೊರಬಂದೆ. ಬಹಳ ಸಮಯದವರೆಗೆ ಅಲ್ಲಿ ಇಲ್ಲಿ ಸುತ್ತಾಡಿದೆ. ಗೊಂದಲಗೊಂಡ ಮನಸ್ಥಿತಿಯಲ್ಲಿ ನನಗೆ ಗೊತ್ತಿಲ್ಲದೆಯೇ ಪರಮೇಶನ ಮನೆಯನ್ನು ತಲುಪಿದ್ದೆ. ಕಮಲಾ ನನ್ನನ್ನು ನೋಡಿದ ಕೂಡಲೇ ಚಕಿತಳಾದಳು.

“ಏನು ವಿಶೇಷ ಶ್ರೀಕಾಂತ್‌? ನೀವು ಈ ಸಮಯದಲ್ಲಿ? ಅವರು ಚೆನ್ನಾಗಿದ್ದಾರೆ ತಾನೇ?” ಪರಮೇಶನ ಬಗ್ಗೆ ಅವಳಿಗಿರುವ ಕಳಕಳಿ ನನ್ನನ್ನು ಇನ್ನೂ ಕೋಪಗೊಳಿಸಿತು. ವ್ಯಂಗ್ಯವಾಗಿ ನಾನು ಹೇಳಿದೆ, “ಅವನಿಗೇನಾಗುತ್ತೆ? ಅವನಿಗೆ ಸದಾ ಒಳ್ಳೆಯದಾಗುತ್ತಿರಲೆಂದು ನಿನ್ನಂತಹ `ಸತಿ ಸಾಧ್ವಿ’ ಇದ್ದೀಯಲ್ಲ. ಇದನ್ನೆಲ್ಲ ನೀನೇಕೆ ಸಹಿಸ್ತಿದ್ದೀಯ ಕಮಲಾ? ನಿನ್ನನ್ನು ನೀನು ಯಾವತ್ತೂ ನೋಡ್ಕೊಂಡಿಲ್ಲ. ನಿನ್ನ ಈ ರೂಪ, ಯೌವನದಲ್ಲಿ ಎಷ್ಟೊಂದು ಶಕ್ತಿ ಇದೆ ಗೊತ್ತಾ? ನೀನೇಕೆ ಈ ಬೇಕೂಫನ ಜೊತೇಲಿ ಒದ್ದಾಡ್ತಿದ್ದೀಯ? ಸಾಕು, ಒಂದೇ ಒಂದು ಬಾರಿ ನೀನು ಸೂಚನೆ ನೀಡಿದರೂ, ನಾನು ನಿನ್ನನ್ನು ಈ ನರಕದಿಂದ ಹೊರತೆಗೆದು…..”

“ಶ್ರೀಕಾಂತ್‌!” ಕಮಲಾ ಬೆಂಕಿಯಂತಾದಳು. ಕೋಪದಿಂದ ಅವಳ ಮುಖ ಕೆಂಪಗಾಯಿತು. ಅವಳು ಕಠೋರ ಸ್ವರದಲ್ಲಿ, “ಬಹುಶಃ ನಿಮಗೆಲ್ಲಿಯೊ ತಪ್ಪು ಭಾವನೆ ಉಂಟಾಗಿದೆ. ಶ್ರೀಕಾಂತ್‌! ನನ್ನ ಗಂಡ ಏನಾಗಿದ್ದಾನೆ, ಹೇಗಿದ್ದಾನೆ, ನಮ್ಮ ಸಂಬಂಧ ಹೇಗಿದೆ? ಇದರ ಬಗ್ಗೆ ಯಾರೂ ಏನನ್ನೂ ಹೇಳಬೇಕಾದ ಅಗತ್ಯವಿಲ್ಲ. ಅದನ್ನು ನಾನೂ ಇಷ್ಟಪಡುವುದಿಲ್ಲ, ನನ್ನ ಗಂಡನೂ ಇಷ್ಟಪಡುವುದಿಲ್ಲ.

“ನಾನು ಮದುವೆಯಾದ ಹೆಣ್ಣು, ಬೇರೊಬ್ಬ ಗಂಡಸಿನ ಇಷ್ಟಕ್ಕೆ ತಕ್ಕಂತೆ ಕುಣಿಯುವ ವೇಶ್ಯೆಯಲ್ಲ. ಈ ಕ್ಷಣ ಇಲ್ಲಿಂದ ನೀವು ಹೊರಟುಬಿಡುವುದೇ ಒಳ್ಳೆಯದು. ನನ್ನ ಗಂಡ ಮನೆಯಲ್ಲಿ ಇಲ್ಲದಿದ್ದಾಗ ಮತ್ತೆಂದೂ ಇಲ್ಲಿಗೆ ಬರಲೇಬೇಡಿ. ಹೋಗುವುದಕ್ಕೆ ಮುಂಚೆ ಮತ್ತೊಂದು ಮಾತು, ನನ್ನ ಕುಟುಂಬ ವ್ಯವಹಾರಗಳಲ್ಲಿ ಇನ್ನು ಮುಂದೆ  ನೀವು  ಹಸ್ತಕ್ಷೇಪ ಮಾಡುವುದನ್ನು ನಾನೆಂದೂ ಸಹಿಸುವುದಿಲ್ಲ,” ಎಂದು ಹೇಳಿದಳು.

ತಿರಸ್ಕೃತನಾದ ನಾನು ಅಪಮಾನಗೊಂಡು ಸ್ತಬ್ಧನಾಗಿ ನಿಂತುಬಿಟ್ಟೆ. ಅವಳ ಈ ಅಗ್ನಿ ಬಾಣಗಳು ಅವಳ ಮಾಧುರ್ಯವನ್ನೆಲ್ಲ ಹೀರಿಬಿಟ್ಟಿದ್ದವು. ಕಮಲಾಳ ಈ ಅಹಂಭಾವ ನನ್ನ ರೋಮ ರೋಮದಲ್ಲೂ ದಹಿಸುವ ವಿಷಾನಿಲದಂತೆ ಹರಡಿತು. ಪರಮೇಶ ಪಕ್ಕದಲ್ಲೇ ಅಟ್ಟಹಾಸದಿಂದ ಗಹಗಹಿಸಿ ನಕ್ಕಂತಾಯಿತು. ಅವನ ವ್ಯಂಗ್ಯದ ಈ ನಗೆ ಕೇಳಿ ನನ್ನ ಕಿವಿಗಳಲ್ಲಿ ಕಾದ ಸೀಸ ಹೊಯ್ದಂತಾಯಿತು. ಛಿದ್ರವಾದ ತನುಮನದೊಂದಿಗೆ ತೂರಾಡುತ್ತ ಅಲ್ಲಿಂದ ಹಿಂತಿರುಗಿದೆ. ಈ ಅಪಮಾನಕ್ಕೆ ಪ್ರತಿಯಾಗಿ ಸೇಡು ತೀರಿಸಿಕೊಳ್ಳಲು ಪಣತೊಟ್ಟೆ, ಕಮಲಾಳ ಈ ದರ್ಪ, ಈ ಅಹಂಕಾರಗಳನ್ನು ಮಣ್ಣುಪಾಲು ಮಾಡಲು ಹಠತೊಟ್ಟೆ.

ನನ್ನ ಈ ಪಣವನ್ನು ಪೂರೈಸಿಕೊಳ್ಳಲು ಪರಮೇಶನ ಮನಸ್ಸಿನಲ್ಲಿ ಅವಳ ಬಗ್ಗೆ ಹುಟ್ಟಿದ ಅನುಮಾನವೇ ಸಹಕಾರಿಯಾಯಿತು. ಈ ಘಟನೆಯ ನಂತರವಂತೂ ಪರಮೇಶನ ಮನೆಗೆ ಹೋಗುವಂತೆಯೇ ಇಲ್ಲ. ಅಂತೆಯೇ ಹೋಗಲೂ ಇಲ್ಲ. ಸ್ವತಃ ಪರಮೇಶನೇ ತನ್ನ ಮನೆಗೆ ಬಾ ಎಂದು ಅನೇಕ ಸಲ ಕರೆದ. ಆದರೆ ನಾನು ಏನೋ ನೆಪ ಹೇಳಿಬಿಡುತ್ತಿದ್ದೆ.

ಈಗೀಗ ನಾನು ಕಛೇರಿಯಿಂದ ಸ್ವಲ್ಪ ಬೇಗನೇ ಹೊರಟುಬಿಡುತ್ತಿದ್ದೆ. ಪರಮೇಶನ ಮನೆಯ ಹತ್ತಿರದ ಬಸ್‌ ಸ್ಟಾಪ್‌ ಬಳಿ ಬರುತ್ತಿದ್ದೆ. ಪರಮೇಶ ಬಸ್ಸಿನಿಂದ ಇಳಿಯುತ್ತಿದ್ದಂತೆ, ನಾನು ಅವನಿಗೆ ಡಿಕ್ಕಿ ಹೊಡೆಯುತ್ತಿದ್ದೆ. ಅವನು ನನ್ನನ್ನು ನೋಡಿ ಚಕಿತನಾಗುತ್ತಿದ್ದ. ಒಂದರೆಡು ಸಲ, ತನ್ನ ಮನೆಗೆ ಬಂದು ಕಾಫಿ ಕುಡಿದು ಹೋಗುವಂತೆ ಒತ್ತಾಯಿಸುತ್ತಿದ್ದ. ಆದರೆ ನಾನು ಯಾವುದೋ ನೆಪ ಹೇಳುತ್ತಿದ್ದೆ ಅಥವಾ ಈಗ ತಾನೇ ಅತ್ತಿಗೆ ಕೈಯಿಂದ ಕಾಫಿ ಕುಡಿದು ಬರ್ತಿದ್ದೀನಿ. ಇದುವರೆಗೂ ಅಲ್ಲೆ ಇದ್ದೆ. ಲೇಟಾಗುತ್ತೆ, ಬರ್ತೀನಿ, ಹೀಗೆಲ್ಲ ಹೇಳುತ್ತಿದ್ದೆ.

ಅನುಮಾನ ಪಿಶಾಚಿಯಾಗಿದ್ದ ಪರಮೇಶ್‌ ಕಮಲಾಳನ್ನು ಇದರ ಬಗ್ಗೆ ಕೇಳಿಯೇ ಕೇಳುತ್ತಾನೆಂದು ನನಗೆ ಖಚಿತವಾಗಿ ತಿಳಿದಿತ್ತು. ಆದರೆ ಅದರ ಬಗ್ಗೆ ಅವನಿಗೆ ನನ್ನ ಆಟ ಗೊತ್ತಿದ್ದರೆ ತಾನೇ? ಕಮಲಾ ನಿರಾಕರಿಸಿದಷ್ಟೂ ಪರಮೇಶನ ಮನಸ್ಸಿನ ಸಂಶಯದ ಸಸಿ ಹೆಮ್ಮರಾಗಿ ಬೆಳೆಯತೊಡಗಿತು.

ಅದೊಂದು ದಿನ ಮಧ್ಯಾಹ್ನ ಯಾವುದೊ ಕೆಲಸದ ಮೇಲೆ ರಜಾ ತೆಗೆದುಕೊಂಡು ಹೊರಟುಹೋಗಿದ್ದೆ. ಮಾರುಕಟ್ಟೆಯಲ್ಲಿ ಸುತ್ತಾಡುತ್ತಿದ್ದಾಗ ಆಕಸ್ಮಿಕವಾಗಿ ನನಗೆ ಕಮಲಾ ಕಾಣಿಸಿದಳು. ಅವಳೀಗ ಸ್ವಲ್ಪ ಬಿಳಿಚಿಕೊಂಡು, ತೆಳುವಾಗಿದ್ದಳು. ನಾನು ಮೆಲ್ಲ ಮೆಲ್ಲನೆ ಅವಳ ಮನೆಯ ತನಕ ಹೋದೆ. ಅವಳು ನನ್ನನ್ನು ಗಮನಿಸಿರಲಿಲ್ಲ. ಮನೆಯ ಬಾಗಿಲನ್ನು ತೆರೆದು ಅವಳು ಒಳಗೆ ಪ್ರವೇಶಿಸಿದಳು. ಆ ಮುಚ್ಚಿದ ಬಾಗಿಲನ್ನು ಸ್ವಲ್ಪ ಸಮಯ ಹಾಗೆಯೇ ನೋಡುತ್ತಾ ನಿಂತುಬಿಟ್ಟೆ. ಅಲ್ಲಿಂದ ಹೊರಡಲು ಹಿಂದಕ್ಕೆ ತಿರುಗಿದರೆ

ಎದುರುಗಡೆ ಪರಮೇಶ ನಿಂತಿದ್ದ. ಅವನ ಕಣ್ಣುಗಳಲ್ಲಿ ಸಂಶಯದ ಕಪ್ಪು ನೆರಳು ಹರಡಿತ್ತು. ಅವನು ಚಕಿತಗೊಂಡು ಕೇಳಿದ, “ನೀನು ಈ ಸಮಯದಲ್ಲಿ ಇಲ್ಲಿ?” ನಾನೂ ಚಕಿತನಾಗಿದ್ದೆ. ನಗಲು ಪ್ರಯತ್ನಿಸಿದಂತೆ ಮಾಡಿ ಹೇಳಿದೆ, “ಹೌದು ಅತ್ತಿಗೆ ಒಂದಷ್ಟು ಪರ್ಚೇಸ್‌ ಮಾಡಬೇಕಾಗಿತ್ತಂತೆ, ಆದ್ದರಿಂದ ಬಂದೆ,” ಪರಮೇಶನ ಮುಖದ ಭಾವನೆಗಳು ಆ ಕೂಡಲೇ ಬದಲಾದವು.

“ಆದರೆ ಅವಳು ನನ್ನೊಂದಿಗೆ ಏನೂ ಹೇಳಲೇ ಇಲ್ಲ,” ಎಂದ ಪರಮೇಶ್‌. ನಾನು ಅದಕ್ಕೆ ಪ್ರತಿಯಾಗಿ ನಿರ್ಲಕ್ಷ್ಯದಿಂದ, “ಇರಬಹುದು. ಅವಳು ನಿನಗೆ ತಿಳಿಸಲು ಇಷ್ಟಪಡದೆ ಇರಬಹುದು,” ಎಂದೆ. ಕಾದ ಸೀಸ ಅವನ ಕಿವಿಯಲ್ಲಿ ಇಳಿದಂತಾಯಿತು. ಅವಮಾನದಿಂದ ಅವನ ಮುಖ ಕಪ್ಪಿಟ್ಟಿತು. ಕಷ್ಟದಿಂದ ಮುಖದಲ್ಲಿ ನಗೆ ಬರಿಸಿಕೊಂಡು, “ಬಾ, ನಾವಿಬ್ರೂ ಸೇರಿ ಕಾಫಿನಾದ್ರೂ ಕುಡಿಯೋಣ,” ಎಂದ ಅವನ ಮನಸ್ಸಿನ ಒಳತೋಟಿಯಿಂದ ಸಂತೋಷಗೊಳ್ಳುತ್ತಾ, ಸಹಜ ಸ್ವರದಲ್ಲಿ, “ಬೇಡ ಪರಮೇಶ್‌, ಕಮಲಾ ತುಂಬಾ ಹಸಿದಿದ್ದಳೂಂತ ಕಾಣುತ್ತೆ. ಹೋಟೆ‌ಲ್‌ನಲ್ಲಿ ದೋಸೆ ತಿಂದ್ವಿ, ಮನೇಲಿ ಫಸ್ಟ್ ಕ್ಲಾಸ್‌ ಕಾಫಿ ಬೇರೆ ಕೊಟ್ಳು. ಜಾಸ್ತಿಯಾಗುತ್ತೆ ಬೇಡ,” ಎಂದೆ.

ಈಗಾಗೀ ಪರಮೇಶ್‌ ಮನೆಯ ಬಾಗಿಲು ತಟ್ಟಿದ್ದ. ಅಲ್ಲಿಂದ ಆದಷ್ಟು ಬೇಗ ಓಡಿಹೋಗಲು ನಿರ್ಧರಿಸಿ ಹೇಳಿದೆ, “ನೋಡು ಪರಮೇಶ್‌, ಬಹಳ ಹೊತ್ತು ಇಲ್ಲಿ ಕುಳಿತುಬಿಟ್ಟೆ. ಇದರಿಂದ ನನ್ನ ಬೇರೆ ಕೆಲಸಾನೂ ಹಾಳಾಯ್ತು. ಮತ್ತೆ ಯಾವಾಗಲಾದರೂ ಬರ್ತೀನಿ. ಹಾಗೇ ಕಮಲಾ….! ಓಹ್‌….! ಕಮಲಾ ಆಗ್ರಹಪಡಿಸಿದರೂ ನಾನು ನಿಲ್ಲಲಿಲ್ಲ. ಈಗ ಮತ್ತೆ ಬಂದ್ರೆ ತನ್ನ ಮಾತನ್ನು ಕೇಳಲಿಲ್ಲಾಂತ ಅವಳು ತಪ್ಪು ತಿಳ್ಕೋತಾಳೆ. ಮತ್ತೆ….” ನನ್ನ ಮಾತು ಅರ್ಧದಲ್ಲೇ ನಿಂತಿತು. ಬಾಗಿಲು ಒಂದೇ ಏಟಿಗೆ ತೆರೆದುಕೊಂಡಿತು. ಬಾಗಿಲ ಬಳಿ ನಿಂತಿದ್ದ ಕಮಲಾಳನ್ನು ಹೆಚ್ಚು ಕಡಿಮೆ ತಳ್ಳುತ್ತಾ ಪರಮೇಶ ವೇಗಾಗಿ ಒಳಹೊಕ್ಕ. ಕಮಲಾಳ ಹೆದರಿದ ಕಣ್ಣುಗಳಲ್ಲಿ ಮೂರು ವರ್ಷಗಳ ಹಿಂದೆ ನನ್ನ ಹೃದಯನ್ನು ಅಪಹರಿಸಿದ್ದ ಭಾವನೇ ಇನ್ನೂ ಹೆಪ್ಪುಗಟ್ಟಿತ್ತು. ಭಯಗೊಂಡ ನಾನು ಅಲ್ಲಿಂದ ಓಡಿ ಹೋಗಬೇಕೆಂದುಕೊಂಡೆ. ಮತ್ತೆಂದೂ ಪರಮೇಶನನ್ನಾಗಲೀ ಕಮಲಾಳನ್ನಾಗಲೀ ಭೇಟಿ ಮಾಡುವ ಧೈರ್ಯ ನನ್ನಲ್ಲಿರಲಿಲ್ಲ.

ತಿಂಗಳ ರಜಾ ಪಡೆದು ಸುತ್ತಾಡಲು ಹೊರಟಿದ್ದೆ. ಅಲ್ಲಿಂದ ವರ್ಗ ಮಾಡಿಸಿಕೊಳ್ಳಲು ಅರ್ಜಿ ನೀಡಿದೆ. ಮೈಸೂರಿನಿಂದ ನನಗೆ ಬೆಂಗಳೂರಿಗೇ ವರ್ಗವಾಗಿತ್ತು. ನಿಧಾನವಾಗಿ ಮೂರು ವರ್ಷಗಳು ಉರುಳಿ ಹೋದವು. ಈ ನಡುವೆ ಪರಮೇಶ ಕಮಲಾಳಿಂದ ವಿಚ್ಛೇದನ ಪಡೆದು ಎರಡನೇ ಮದುವೆಯನ್ನು ಮಾಡಿಕೊಂಡಿದ್ದ ಎಂಬ ವಿಚಾರ ನನ್ನೊಬ್ಬ ಮಿತ್ರನಿಂದ ತಿಳಿದು ಬಂದಿತ್ತು. ಸುಮಾರು ಮೂರು ವರ್ಷಗಳ ನಂತರ ಇಂದು ಅದೇ ಕಮಲಾಳನ್ನು ಕಂಡೆ. ಗುರುತು ಸಿಗದಷ್ಟು ಅವಳು ಬದಲಾಗಿದ್ದಳು. ಅವೇ ಜ್ವಲಿಸುವ ಕಣ್ಣುಗಳಿಂದ ನನ್ನನ್ನು ತಿರಸ್ಕಾರದಿಂದ ನೋಡಿ, ಹೊರಟುಹೋಗಿದ್ದಳು. ಇಂದೂ, ಹಿಂದಿನಂತೆ ಅವಳನ್ನು ಹಿಂಬಾಲಿಸಿ, ಮನೆಯವರೆಗೆ ಬಂದುಬಿಟ್ಟಿದ್ದೆ.

ಆದರೆ ಕಳೆದ ಬಾರಿ ಮಾಡಿದ ಅಪರಾಧಕ್ಕೆ ಪ್ರಾಯಶ್ಚಿತ್ತ ಮಾಡಿಕೊಳ್ಳಲು ಈಗ ಮತ್ತೆ ಮೈಸೂರಿಗೆ ಬಂದಿದ್ದೆ. ಆ ದಿನ ನನ್ನಿಂದಾಗಿ ಅವಳ ಜೀವನ ಸರ್ವನಾಶವಾಗಿತ್ತು. ಆದರೆ ಇಂದು ಅವಳಿಗೆ ನಾನು ಹೊಸ ಜೀವನ ನೀಡಲು ಬಂದಿದ್ದೇನೆ. ಇದೇ ನನ್ನ ಅಪರಾಧಕ್ಕೆ ಪಡೆಯುವ ತಕ್ಕ ಶಿಕ್ಷೆ.

ಸಾಹಸ ಮಾಡಿ, ನಾನು ಕಾಲಿಂಗ್‌ ಬೆಲ್‌‌ನ ಗುಂಡಿಯನ್ನು ಒತ್ತಿದೆ. ಕೂಡಲೇ ಬಾಗಿಲು ತೆರೆದುಕೊಂಡಿತು. ನನ್ನನ್ನು ನೋಡುತ್ತಲೇ ಅವಳು ನಾಗಿಣಿಯಂತೆ ಪೂತ್ಕಾರ ಮಾಡಿದಳು, “ಇನ್ನೂ ಏನಾದರೂ ಬಾಕಿ ಉಳಿಸಿದ್ದೀರಾ ಶ್ರೀಕಾಂತ್‌? ನಿಮ್ಮ ಕೃಪಾ ದೃಷ್ಟಿಯಿಂದ ನನ್ನ ಬದುಕನ್ನೇ ಸುಟ್ಟು ಭಸ್ಮ ಮಾಡಿದ್ದೀರಿ. ಈಗೇನು ಮಾಡಲು ಬಂದಿದ್ದೀರಿ?” ಕೇಳಿ ಕಕ್ಕಾಬಿಕ್ಕಿಯಾದೆ. ತಡರಿಸುತ್ತಾ, “ಕಮಲಾ…. ನಾನು ನಾನು…. ನಿನ್ನ…. ನಿನ್ನ ಕ್ಷಮೆ ಕೇಳೋಣಾಂತ ಬಂದಿದ್ದೀನಿ. ಕಮಲಾ, ನನಗೆ ನಿಜವಾಗಲೂ ತುಂಬಾ ನಾಚಿಕೆ ಆಗ್ತಿದೆ…..”

“ಇಲ್ಲ ಶ್ರೀಕಾಂತ್‌, ನೀವು ಈಗ ನಾಚಿಕೊಂಡ ಮಾತ್ರಕ್ಕೆ, ನನಗೆ ನನ್ನ ಕಳೆದುಹೋದ ಗೌರವ ಕಳೆದುಹೋದ ಕಾಲ, ನಾಶವಾದ ಸುಖ ಸಂಸಾರ, ಇವು ಯಾವುದೂ ಹಿಂತಿರುಗಿ ಬರಲಾರವು,” ಅವಳು ಹಾಸಿಗೆಯ ಮೇಲೆ ಮಲಗಿಸಿರುವ ಮಗುವಿನ ಕಡೆ ಬೆರಳು ಮಾಡಿ ತೋರುತ್ತಾ, “ಆ ಸಂಶಯ ಪಿಶಾಚಿಗೆ ಅವರ ಅಂಶದ ಒಂದು ಮೊಳಕೆ ನನ್ನ ಗರ್ಭದಲ್ಲಿ ಮೊಳೆಯುತ್ತಿದೆ ಎಂದು ಹೇಳಲೂ ಸಾಧ್ಯವಾಗಲಿಲ್ಲ. ನಾನು ಆತನಿಗೆ ಹೇಗೆ ಹೇಳಲಿ, ಏನೆಂದು ಹೇಳಲಿ? ತನ್ನ ಮೇಲೆಯೇ ನಂಬಿಕೆ ಇಲ್ಲದ ಆ ವ್ಯಕ್ತಿ ನನ್ನ ಮೇಲೆ ಕಳಂಕದ ಆರೋಪ ಹೊರಿಸಿದ. ತನ್ನ ಮಗುವನ್ನೇ `ಹಾದರದ ಮಗು’ ಎಂದು  ಕರೆದ.

“ನನ್ನ ಗರ್ಭದ ಬಗ್ಗೆ ಈ ಅಪವಾದನ್ನು ನಾನು ಸಹಿಸಲಾರದಾದೆ. ನನ್ನ ಮಗುವಿನೊಂದಿಗೆ ನಿನ್ನಂತಹ ನೀಚ ವ್ಯಕ್ತಿಯ ಹೆಸರನ್ನು ಹೊಂದಿಸುವುದನ್ನು ನಾನು ಸಹಿಸಲಾರದಾದೆ. ನಿನ್ನ ಕಾಮಭಾವನೆಯನ್ನು ತೃಪ್ತಿಪಡಿಸಿಕೊಳ್ಳಲು ವಿವಾಹಿತ ಮಹಿಳೆಯ ಹಣೆಯಲ್ಲಿನ ಕುಂಕಮ ಎನ್ನುವ ಲಕ್ಷ್ಮಣರೇಖೆಗೂ ಅಪಮಾನ ಮಾಡಿದಂತಹ ನೀಚ ನೀನು…..” ಅಸಹ್ಯದಿಂದ ಕಮಲಾ ಕಂಪಿಸಿದಳು.

ಲಜ್ಜಾಪಮಾನಗಳಿಂದ ನಾನು ತುಟಿ ತೆರೆಯಲಿಲ್ಲ. ಹೇಗೋ ಧೈರ್ಯ ತಂದುಕೊಂಡು, “ಕಮಲಾ, ನಾನು ಬಹಳ ದೊಡ್ಡ ಅಪರಾಧ ಮಾಡಿದ್ದೀನಿಂತ ನನಗೆ ಗೊತ್ತು. ಅದಕ್ಕೆ ತಕ್ಕ ಪ್ರಾಯಶ್ಚಿತ್ತ ಮಾಡಿಕೊಳ್ಳಲೆಂದೇ ಇಲ್ಲಿಗೆ ಬಂದಿದ್ದೀನಿ. ನನ್ನನ್ನು ಕ್ಷಮಿಸು ಕಮಲಾ.

“ನಿನ್ನ ಕಣ್ಣುಗಳಲ್ಲಿನ ತಿರಸ್ಕಾರ ನನ್ನನ್ನು ಕೊಲ್ಲುತ್ತಿದೆ. ನಾನು ಬದುಕಿರಲೂ ಸಾಧ್ಯವಾಗದೆ, ಸಾಯಲೂ ಆಗದೆ, ತ್ರಿಶಂಕುವಿನಂತೆ ತೂಗಾಡುತ್ತಿದ್ದೇನೆ,” ಹೆಚ್ಚು ಕಡಿಮೆ ನಾನು ಗೋಗರೆಯುತ್ತಿದ್ದೆ, “ಕಮಲಾ, ನಾನು ನಿನಗೆ ಹೊಸ ಜೀವನ ಕೊಡಬೇಕೂಂತ ಇದ್ದೇನೆ. ನಿನ್ನ ಮಗುವಿಗೆ ತಂದೆಯಾಗುತ್ತೇನೆ.”

“ಬೇಡ… ಶ್ರೀಕಾಂತ್‌ ಬೇಡ!” ಕಮಲಾ ಚೀರಿದಳು. ಜೀವನದಲ್ಲೊಮ್ಮೆ ಒಬ್ಬ ಪುರುಷನ ಬಂಧನಕ್ಕೆ ಕಟ್ಟುಬಿದ್ದು. ಅವನನ್ನು ಪಡೆಯುವ ಆಸೆಯಿಂದ ಸ್ವಲ್ಪಸ್ವಲ್ಪವಾಗಿ ನನ್ನನ್ನು ನಾನು ಕಳೆದುಕೊಳ್ಳತೊಡಗಿದೆ. ಬದಲಾಗಿ ಅವನು ನನಗೇನು ಕೊಟ್ಟ? ನನ್ನ ನಿಷ್ಠೆ ಹಾಗೂ ಪ್ರೇಮಗಳಿಗೆ ನನ್ನನ್ನೇ ಗಡೀಪಾರು ಮಾಡಿದ. ಅವನ ನೆನಪಿನ ಈ ಗುರುತನ್ನು ತನ್ನ ಹೃದಯದಲ್ಲಿರಿಸಿಕೊಂಡು ಬದುಕಿದ್ದೇನೆ. ನನ್ನದೇ ರಕ್ತವನ್ನು ಹಂಚಿ ಸಾಕುತ್ತಿದ್ದೇನೆ. ಈ ಗುರುತು ನಾಳೆ ಇನ್ನೊಬ್ಬ ಪರಮೇಶನೋ ಅಥವಾ ಶ್ರೀಕಾಂತನೋ ಆಗಿ ಬದಲಾಗುತ್ತದೆ.

“ಮತ್ತೆ ಇನ್ನೊಬ್ಬ ಕಮಲಾ ತನ್ನ ನಿಷ್ಠೆ ಹಾಗೂ ಪ್ರೇಮಕ್ಕಾಗಿ ಖಂಡಿತಾ ದಂಡನೆ ಅನುಭವಿಸುತ್ತಾಳೆ. ಹಾಗೆಂದು ಈ ಮಗುವನ್ನು  ನಾನು ಬಿಟ್ಟುಬಿಡಲು ಸಾಧ್ಯವಿಲ್ಲ. ನಾನೊಬ್ಬ ತಾಯಿ, ನಾನೊಬ್ಬ ಹೆಣ್ಣು…. ಯಾರಿಗಾಗಿ ಅವಳು ಇಡೀ ಜೀವನದ ಆದರ್ಶವನ್ನು ಹೋಮ ಮಾಡುತ್ತಾಳೋ, ಅವರೇ ಮತ್ತೆ ಅವಳತ್ತ ಮೊದಲು ಬೆರಳು ಮಾಡಿ ತೋರಿಸುತ್ತಾರೆ,” ಕಮಲಾ ಆ ಮಗುವನ್ನು ಹೃದಯಕ್ಕೆ ಒತ್ತಿಕೊಂಡು ಬಿಕ್ಕಿಬಿಕ್ಕಿ ಅಳತೊಡಗಿದಳು.

ನಾನು ನನ್ನ ಕೈಗಳೆರಡನ್ನೂ ತಲೆಯ ಮೇಲೆ ಹೊತ್ತು ಅಲ್ಲಿಯೇ ಕುಳಿತುಬಿಟ್ಟೆ. ಕಮಲಾ ದಹಿಸಿಹೋಗುತ್ತಿದ್ದ ಬೆಂಕಿಯ ಉರಿಯನ್ನು ನಾನೇ ಸ್ವಯಂ ಅನುಭವಿಸತೊಡಗಿದೆ. ನಾನು ಬಿಕ್ಕಿ ಬಿಕ್ಕಿ ಅಳುತ್ತಾ, “ನನಗೆ ಶಿಕ್ಷೆ ನೀಡು ಕಮವಾ, ನನ್ನನ್ನು ಕೊಂದುಬಿಡು. ಆದರೆ ಈ ರೀತಿ ಒದ್ದಾಡುವಂತೆ ಮಾಡಬೇಡ. ನನಗೆ ಬದುಕಲೂ ಆಗುತ್ತಿಲ್ಲ. ಸಾಯಲೂ ಆಗುತ್ತಿಲ್ಲ,” ಎಂದು ಗೋಗರದೆ.

ಅವಳ ಮುಖ ಇದ್ದಕ್ಕಿದ್ದಂತೆ ಕಠೋರವಾಯಿತು ಕಣ್ಣೀರನ್ನು ಒರೆಸಿಕೊಳ್ಳುತ್ತಾ, ಅವಳು ತೀಕ್ಷ್ಣವಾಗಿ ಹೇಳಿದಳು, “ನಾನು ಬದುಕಿಲ್ಲ ಶ್ರೀಕಾಂತ್‌,  ಸತ್ತೂ ಇಲ್ಲ. ನನ್ನ ಜೀವನಕ್ಕೆ ನೀನು ಸೋಕಿಸಿದ ಬೆಂಕಿ ನಿನ್ನನ್ನು ಖಂಡಿತಾ ಸುಡುತ್ತದೆ. ಹೀಗೆಯೇ ಸುಟ್ಟು ಉರಿದು ಹೋಗುತ್ತಿರು, ಒದ್ದಾಡುತ್ತಿರು, ಅಳುತ್ತಿರು.

“ಒಂದು ಕ್ಷಣದ ನೆಮ್ಮದಿಯೂ ನಿನಗೆ ಸಿಗದಿರಲಿ. ನನ್ನಿಂದ ಕ್ಷಮೆ ಯಾಚಿಸುವೆಯಾ? ಒಮ್ಮೆ ನಿನ್ನ ಹೃದಯವನ್ನೇ ತಡಕಾಡಿ ನೋಡು, ಅಲ್ಲಿಯಾದರೂ ನಿನಗೆ ಕ್ಷಮೆ ಸಿಗುವುದೇನೋ ನೋಡು. ಇಲ್ಲ, ಇದು ನಿನಗೆಂದಿಗೂ ದೊರೆಯುವುದಿಲ್ಲ.

“ಹೋಗು ಶ್ರೀಕಾಂತ್‌, ಪರಮೇಶನ ತರಹ ನೀನೂ ನಿನ್ನದೇ ಆದ ಮನೆ, ಸಂಸಾರ ಮಾಡಿಕೋ, ಭೋಗವಿಲಾಸಗಳಲ್ಲಿ ಮುಳುಗು. ಆದರೆ ನೀನು ಹೋಗುವ ಮೊದಲು ನಾನು `ಏನು ತಪ್ಪು ಮಾಡಿದೆ?’ ಅನ್ನೋದನ್ನು ನನಗೆ ತಿಳಿಸಿಹೋಗು,” ಎಂದಳು.

ಅವಳಿಗೆ ನಾನೇನು ಹೇಳಲಿ? ನನ್ನ ಹಾಗೂ ಪರಮೇಶನ ಅಹಂಗಳ ತಿಕ್ಕಾಟದ ನಡುವೆ ಅವಳು ಹಿಟ್ಟಾಗಿ ಬೀಸಲ್ಪಟ್ಟಳು. ಮನಸ್ಸು ಮೊದಲಿಗಿಂತ ಹೆಚ್ಚು ಭಾರವಾಯಿತು. ಅವಳ ಕಣ್ಣುಗಳಲ್ಲಿನ `ಮೌನ ವಿದ್ರೋಹ’ಕ್ಕೆ ಇದೀಗ ಬಾಯಿ ಬಂದಿದೆ. ಎತ್ತರದ ದನಿಯಲ್ಲಿ ಚೀರುತ್ತಾ, `ನನ್ನ ತಪ್ಪೇನು?’ ಎಂದು ಪ್ರಶ್ನೆ ಕೇಳುತ್ತಿದೆ.

ಹಿಂತಿರುಗುವಾಗ, ಆಡುತ್ತಿದ್ದ ಮಕ್ಕಳು ತಮ್ಮ ಆಟವನ್ನು ಮುಗಿಸಿಕೊಂಡು ಹಿಂತಿರುಗುವುದನ್ನು ನೋಡಿದೆ. ಅಯ್ಯೋ! ಜೀವನದಾಟ ಕೂಡ ಇಷ್ಟೇ ಸರಳವಾಗಿ ಹಾಗೂ ಸಹಜವಾಗಿ ಪೂರ್ತಿಯಾಗಬಾರದೇ? ಎಂದೆನಿಸದಿರಲಿಲ್ಲ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ