ಧರ್ಮದ ಕಪಿಮುಷ್ಟಿಯಲ್ಲಿ ಕಾಶಿಯ ವಿಧವೆಯರು
ನರೇಂದ್ರ ಮೋದಿ ಸರ್ಕಾರವಂತೂ ಗಂಗಾ ನದಿಯ ಶುದ್ಧೀಕರಣದ ಯೋಜನೆ ಕುರಿತು ಜೋರು ಜೋರಾಗಿ ಭಾಷಣ ಬಿಗಿಯುತ್ತಿದೆ. ಆದರೆ ಕಾಶಿಗೆ ಅಂಟಿರುವ ಕಲೆಯಾದ, ಕಾಶಿ ವಿಧವೆಯರ ದೈನೇಸಿ ಸ್ಥಿತಿ ಕುರಿತು ಏನೂ ಹೇಳುತ್ತಿಲ್ಲ. ಈ ಬಾರಿಯ ಲೋಕಸಭಾ ಚುನಾವಣೆಯ ಅಂಗವಾಗಿ ಕಾಶಿ ಹಲವಾರು ತಿಂಗಳುಗಳ ಕಾಲ ಚರ್ಚೆಯಲ್ಲಿತ್ತು. ಇಲ್ಲಿನ ಮಿಠಾಯಿ, ಗೂಳಿ, ಗಲ್ಲಿಗಳ ಕುರಿತಾಗಿ ಚರ್ಚೆಗಳು ನಡೆದದ್ದೇ ಬಂತು. ಆದರೆ ಹಿಂದೂ ಸಮಾಜದ ಶಾಪಗ್ರಸ್ತ ವಿಧವೆಯರಾಗಿ ಗೋಳಾಡುತ್ತಿರುವ ಅಸಹಾಯಕ ಹೆಂಗಸರ ಕುರಿತಾಗಿ ಯಾರೂ ಚಕಾರವೆತ್ತಲಿಲ್ಲ.
ಈಗ ಕಾಶಿಯ ಬೃಂದಾವನಕ್ಕೆ, ಬಹುಶಃ ಸಣ್ಣ ಪ್ರಾಯದ ಅಥವಾ ಅತಿ ಮೃದ್ಧ ವಿಧವೆಯರು ಹೆಚ್ಚಾಗಿ ಬಂದು ಸೇರುತ್ತಿಲ್ಲ ಎಂಬುದು ನಿಜವಿರಬಹುದು. ಆದರೆ ಕಾಶಿಯಲ್ಲಿ ಇಂದೂ ಸಹ ಕೆಲಸ ಕಾರ್ಯಗಳಿಲ್ಲದೆ ಮನೆಯಲ್ಲೇ ಅಸಹಾಯಕರಾಗಿ ಉಳಿಯುವ ವಿಧವೆಯರನ್ನು ದೊಡ್ಡ ಹೊರೆ ಎಂದೇ ಭಾವಿಸಲಾಗುತ್ತದೆ, ಅಲ್ಲಿ ಈ ವಿಧವೆಯರು ಕ್ಷಣಕ್ಷಣ ನರಳುತ್ತಾ ಬದುಕುತ್ತಿದ್ದಾರೆ.
ಮಹಾನ್ ಹಿಂದೂ ಸಂಸ್ಕೃತಿಯ ಡೋಲು ಬಾರಿಸುತ್ತಾ ನಮ್ಮನ್ನು ನಾವು ಎಷ್ಟೇ ಶ್ರೇಷ್ಠರೆಂದು ಹೇಳಿಕೊಳ್ಳಲಿ, ಈ ವಿಧವೆಯರ ಅಸಹಾಯಕ ಬದುಕು ನಮ್ಮ ಕಂದಾಚಾರ ಹಾಗೂ ಮೂಢನಂಬಿಕೆಯ ಕೊಡುಗೆಯೇ ಆಗಿದೆ. ಈಗ ನಮ್ಮ ದೇಶದಲ್ಲಿ ಸತಿಸಹಗಮನದ ಹೆಸರಿನಲ್ಲಿ ವಿಧವೆಯರನ್ನು ಸುಡುತ್ತಿಲ್ಲ ಎಂಬುದು ನಿಜ, ಅವರ ಮೇಲಾಗುತ್ತಿರುವ ದುರ್ವ್ಯವಯಹಾರಗಳಂತೂ ಬಾಣಲೆಯಿಂದ ಬೆಂಕಿಗೆ ಎಂಬಂತೆಯೇ ನಡೆಯುತ್ತಿದೆ. ಸಾಮಾನ್ಯ ಮನೆಗಳಲ್ಲೂ ಸಹ ವರ್ಷದಲ್ಲಿ ಹಲವಾರು ಸಲ ಧಾರ್ಮಿಕ ಸಮಾರಂಭ ನಡೆಸಲು ಪುರೋಹಿತರು ಬಂದು ತಮ್ಮ ಥೈಲಿ ತುಂಬಿಸಿಕೊಳ್ಳುತ್ತಾರೆ, ಅದೇ ಮನೆಗಳಲ್ಲಿ ವಿಧವೆಯರು ಇಂಥ ಸಮಾರಂಭದಲ್ಲಿ ಮುಂದೆ ಬಂದರೆ ಅವರನ್ನು ಮಟ್ಟಹಾಕಿ ಹಿಂದೋಡಿಸಲಾಗುತ್ತದೆ.
ಇಲ್ಲಿನ ವಿಡಂಬನೆ ಎಂದರೆ, ಯಾವ ಪುರೋಹಿತರು ಜಾತಕ ಹೊಂದಿಸಿ ಪ್ರಶಸ್ತ ಎಂದು ಇಂಥ ಮದುವೆ ಮಾಡಿಸಿದರೋ ಅವರನ್ನು ಯಾರೂ ದೂಷಿಸುವುದಿಲ್ಲ. ಅಂಥ ಮದುವೆಯಿಂದ ತಾನೇ ಹುಡುಗಿ ಹೀಗೆ ವಿಧವೆಯಾದದ್ದು? ಯಾವ ದೇವತೆಗಳ ಸಾಕ್ಷಿಯಾಗಿ ಧಾರ್ಮಿಕ ವಿವಾಹ ನಡೆಯಿತೋ ಹುಡುಗಿಯರ ಈ ಕಷ್ಟಕ್ಕೆ ಆ ದೇವರನ್ನು ಬಯ್ಯುವಂತಿಲ್ಲ. ಇಂಥ ಮದುವೆಗಳಿಂದ ಪುರೋಹಿತರು ಬೇಕಾದಷ್ಟು ದಕ್ಷಿಣೆ ಗಿಟ್ಟಿಸುತ್ತಾರೆ.
ಹಿಂದೂ ಸಮಾಜ ಕೊಳಕು ಗಂಗಾ ನದಿಯನ್ನು ಹೇಗೋ ಸಹಿಸಿಕೊಂಡು ಬದುಕೀತು, ಏಕೆಂದರೆ ಶುದ್ಧೀಕರಣದಿಂದಾಗಿ ಈಗ ಅದೇ ಗಂಗಾ ನೀರು ಮನೆಗೆ ಕ್ಲೀನಾಗಿ ಬರಬಹುದು. ಆದರೆ ಅದೇ ಸಮಾಜ ಕಾಶಿ, ಬೃಂದಾವನ, ಸಾಮಾನ್ಯ ಮನೆಗಳಲ್ಲಿ ತಿರಸ್ಕೃತ ಜೀವನ ನಡೆಸುತ್ತಿರುವ ಲಕ್ಷಾಂತರ ವಿಧವೆಯರನ್ನು ಹೇಗೆ ಸಹಿಸೀತು? ಗಂಡಸು ವಿಧುರನಾದ ತಕ್ಷಣ ಮತ್ತೆ ಮದುಮಗನಾಗಿ ಸುಖವಾಗಿರಬಹುದಾದರೆ, ವಿಧವೆಗೇಕೆ ಬಿಳಿ ಸೀರೆಯ ಅಮಂಗಲೆ ಪಟ್ಟ? ಅವಳ ಜೀವನದಲ್ಲಿ ನಗು ಶಾಶ್ವತವಾಗಿ ಅಳಿಸಿ ಹೋಗಬೇಕೇಕೆ? ಈ ಜಾಬ್ದಾರಿ ಸರ್ಕಾರದ್ದಲ್ಲದಿರಬಹುದು, ಆದರೆ ಸರ್ಕಾರ ಸಾಮಾಜಿಕ ಧಾರ್ಮಿಕ ವಿಷಯಗಳ ಆಧಾರದಿಂದ ರೂಪುಗೊಂಡಿದ್ದರೆ, ಅದು ಈ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗದು.
ಕೇವಲ ನದಿ ನೀರಿನ ಶುದ್ಧೀಕರಣ ಮಾತ್ರ ಮುಖ್ಯವಾಗದೆ, ನದಿಯ ದಡದಲ್ಲಿ ಹೆಚ್ಚುತ್ತಿರುವ ಕಲುಷಿತ ಸಂಸ್ಕೃತಿಯನ್ನೂ ಕಡೆಗಾಣಿಸಬೇಕಿದೆ. ಆದರೆ ವಿಡಂಬನೆ ಎಂದರೆ, ನಮ್ಮ ಸಮಾಜದ ರಕ್ಷಕರೆನಿಸಿಕೊಂಡವರು ಇಲ್ಲಿಯವರೆಗೂ ಈ ವಿಧವೆಯರ ಸ್ಥಿತಿ ಸುಧಾರಿಸುವ ಬದಲು, ಅದನ್ನು ಅಡಗಿಸಿಡಲು ನೋಡುತ್ತಾರೆ. ಈ ವಿಧವೆಯರ ಕುರಿತಾದ ದೀಪಾ ಮೆಹ್ತಾರ `ವಾಟರ್’ ಚಿತ್ರದ ಶೂಟಿಂಗ್ ಇಲ್ಲಿ ನಡೆಯದಂತೆ ಬೇಕೆಂದೇ ತಡೆಯೊಡ್ಡುತ್ತಾರೆ.
`ಗಂಗಾ ನದಿಯ ನೀರು ಅಮೃತ ಸಮಾನ’ ಎನ್ನುತ್ತಾ ಅದರ ಪ್ರೋಕ್ಷಣೆಯಿಂದ ಎಷ್ಟೋ ಅಶುದ್ಧ ವಸ್ತುಗಳನ್ನು ಶುದ್ಧ ಮಾಡಿಬಿಡುವಂತೆ, ಕಾಶಿಗೆ ತಗುಲಿರುವ ಈ ಕಳಂಕವನ್ನು ಖಂಡಿತಾ ಸುಲಭವಾಗಿ ಅಳಿಸಲಾಗದು. ಇದೀಗ ಕಾಶಿ ವಿದೇಶೀಯರ ದೃಷ್ಟಿಯಲ್ಲೂ ಹೆಚ್ಚು ಗಮನ ಸೆಳೆಯಲಿದೆ, ಏಕೆಂದರೆ ನರೇಂದ್ರ ಮೋದಿ ಇಲ್ಲಿಂದ ಸಂಸದರಾಗಿ ಆರಿಸಿ ಬಂದರು. ವಿದೇಶಿ ಪತ್ರಿಕೋದ್ಯಮದವರಂತೂ ಹಿಂದೂಗಳಂತೆ ವಿಲಕ್ಷಣ ಕನ್ನಡಕ ಧರಿಸಿ ಕೇವಲ ಒಳ್ಳೊಳ್ಳೆಯದು ಮಾತ್ರ ಕಾಣಿಸುತ್ತಿದೆ ಎಂದು ಹೇಳುವರಲ್ಲ, ಅವರು ಖಂಡಿತಾದಿಗಳಾಗಿಯೇ ಇರುತ್ತಾರೆ.
ಹೀಗಾಗಿ ಅವರು ಕೊಳಕನ್ನು ಖಂಡಿಸಿ, ಅದರ ಕುರಿತು ವಿಚಾರಣೆಯನ್ನೂ ನಡೆಸುತ್ತಾರೆ, ಅದನ್ನು ಮತ್ತೆ ಮತ್ತೆ ನಮ್ಮ ರಾಷ್ಟ್ರದ ರಾಜಕೀಯ ಹಾಗೂ ಅದರ ರಾಜಧಾನಿಗೆ ಥಳುಕು ಹಾಕಿ ನೋಡುತ್ತಾರೆ. ಹಾಗಿರುವಾಗ ಕಾಶಿ ವಿಧವೆಯರು ತೆರೆಮರೆಯಲ್ಲಿರಲು ಸಾಧ್ಯವೇ? ಭಾರತವೇನಾದರೂ ಸರ್ವಾಧಿಕಾರಿ ರಾಷ್ಟ್ರವಾಗಿದ್ದಿದ್ದರೆ, ಈ ವಿಧವೆಯರನ್ನು ಎಂದೋ ಗಡೀಪಾರು ಮಾಡಿಬಿಡುತ್ತಿತ್ತು, ಆದರೆ ಈಗಂತೂ ನರೇಂದ್ರ ಮೋದಿ ಪಾರ್ಟಿಯವರಿಗೆ ಇವರ ಶೂಲದ ಮೊನಚು ಚುಚ್ಚುತ್ತಿರುತ್ತದೆ.
ಸ್ತ್ರೀ ಶಕ್ತಿಯ ಬಗ್ಗೆ ನಂಬಿಕೆ
ನರೇಂದ್ರ ಮೋದಿಯವರು ಸುಷ್ಮಾ ಸ್ವರಾಜ್‌ಗೆ ವಿದೇಶಾಂಗ ಸಚಿವಾಲಯ ನೀಡಿ ಮಂತ್ರಿಮಂಡಲದಲ್ಲಿ ಮಹಿಳೆಯರು ಕೇವಲ ತೋರಿಕೆಗಲ್ಲ, ಅವರು ಗಂಭೀರ ಕೆಲಸವನ್ನು ಕೂಡ ಮಾಡಬಲ್ಲರು ಎಂಬುದನ್ನು ಸಾಬೀತು ಮಾಡಿ ತೋರಿಸಿದ್ದಾರೆ.
ವಿದೇಶಾಂಗ ಸಚಿವಾಲಯ ಇತ್ತೀಚಿನ ವರ್ಷಗಳಲ್ಲಿ ಗೃಹ ಸಚಿವಾಲಯ ಮತ್ತು ವಿತ್ತ ಸಚಿವಾಲಯಗಳಿಗಿಂತ ಮಹತ್ವದ ಖಾತೆಯಾಗಿದೆ. ಏಕೆಂದರೆ ಎಲ್ಲ ದೇಶಗಳ ಆರ್ಥಿಕ ವ್ಯವಸ್ಥೆಗಳು ಈಗ ರೈಲು ಬೋಗಿಗಳ ರೀತಿಯಲ್ಲಿ ಒಂದಕ್ಕೊಂದು ತಗುಲಿಕೊಂಡಿವೆ. ಅದರಲ್ಲಿನ ಒಂದೇ ಒಂದು ಬೋಗಿಗೆ ಬೆಂಕಿ ತಗುಲಿದರೂ ಅದು ಪಕ್ಕದ ಬೋಗಿಗೆ ಹಾನಿ ತಲುಪಿಸದೇ ಇರಲಾರದು. ಎಲ್ಲ ದೇಶಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ಹೋಗುವುದು ಈಗ ಕಠಿಣ ಎಂಬಂತಾಗಿದೆ.
ಸುಷ್ಮಾ ಸ್ವರಾಜ್ ಮೊದಲು ಸ್ಥಳೀಯ ರಾಜಕಾರಣದ ಬಗ್ಗೆಯೇ ಹೆಚ್ಚು ಮಾತನಾಡುತ್ತಿದ್ದರು. ಈಗ ಅವರು ಹಿಲರಿ ಕ್ಲಿಂಟನ್ ರೀತಿಯಲ್ಲಿ ವಿದೇಶ ಸಚಿವಾಲಯವನ್ನು ಮತ್ತಷ್ಟು ಪ್ರಭಾವಶಾಲಿಗೊಳಿಸಬಹುದೆಂಬ ಆಶಾ ಭಾವನೆ ಇದೆ.
ಭಾರತ ಪ್ರಸ್ತುತ ಜ್ವಾಲಾಮುಖಿಗಳ ನಡುವೆ ಇದ್ದಂತೆ ಇದೆ. ಪಾಕಿಸ್ತಾನ, ನೇಪಾಳ, ಮ್ಯಾನ್ಮಾರ್, ಶ್ರೀಲಂಕಾ, ಚೀನಾ ಈ ಎಲ್ಲ ವಿದೇಶೀ ಸಮಸ್ಯೆಗಳೊಂದಿಗೆ ಸೆಣಸುತ್ತಿವೆ. ಏಕೆಂದರೆ ಅವರ ಸ್ಥಿತಿಯ ನಿರ್ಣಯ ಹೊರಗೆಲ್ಲಿಯೋ ಆಗುತ್ತಿದೆ.
ಪಾಕಿಸ್ತಾನ ಅಮೆರಿಕವನ್ನು ಅವಲಂಬಿಸಿದೆ. ಚೀನಾ ದೇಶಕ್ಕೆ ಟಿಬೆಟ್ ಹಾಗೂ ತನ್ನ ಮುಸ್ಲಿಂ ಪ್ರದೇಶಗಳ ಕಾರಣದಿಂದ ಅದಕ್ಕೆ ವಿದೇಶೀ ಬೆಂಬಲ ಬೇಕು. ಶ್ರೀಲಂಕಾದಲ್ಲಿ ತಮಿಳರ ಮೇಲಿನ ದೌರ್ಜನ್ಯದ ಕರುಣಾಜನಕ ಕಥೆ ಇನ್ನೂ ನೆನಪಿನಿಂದ ಅಳಿಸಿಲ್ಲ. ಮ್ಯಾನ್ಮಾರ್ ಮತ್ತೆ ಯಾವಾಗ ಸೈನ್ಯದ ಕಪಿಮುಷ್ಟಿಗೆ ಸಿಲುಕುತ್ತೊ ಹೇಳಲಾಗದು. ಏಕೆಂದರೆ ನೆರೆಯ ಥಾಯ್ಲೆಂಡ್ ಪ್ರಜಾಪ್ರಭುತ್ವದಿಂದ ಈಚೆಗಷ್ಟೇ ಸೈನ್ಯಾಡಳಿತಕ್ಕೊಳಗಾಗಿದೆ.
ವಿದೇಶಾಂಗ ಸಚಿವರು ಆಫ್ಘಾನಿಸ್ತಾನ ಸಮಸ್ಯೆಯನ್ನು ದೆಹಲಿ, ಕಾಬೂಲ್, ಇಸ್ಲಾಮಾಬಾದ್‌ನಲ್ಲವಲ್ಲ ಬ್ರಸೆಲ್ಸ, ಲಂಡನ್, ನ್ಯೂಯಾರ್ಕ್ ಮತ್ತು ವಾಷಿಂಗ್ಟನ್‌ನಲ್ಲಿ ಬಗೆಹರಿಸಬೇಕಾಗುತ್ತದೆ. ಭಾರತದ ಹಿತ ಆಫ್ಘಾನಿಸ್ತಾನದೊಂದಿಗೆ ಥಳುಕು ಹಾಕಿಕೊಂಡಿದೆ. ಯಾವುದೇ ಒಂದು ಸಣ್ಣ ತಪ್ಪು ದುಬಾರಿಯಾಗಿ ಪರಿಣಮಿಸಬಹುದು.
ಇಂದಿರಾಗಾಂಧಿ ಹಾಗೂ ಸೋನಿಯಾ ಗಾಂಧಿ ಸರ್ಕಾರ ನಡೆಸಿದರು. ಆದರೆ ವಿದೇಶಾಂಗ ಸಚಿವಾಲಯದಲ್ಲಿ ಇರುವ ಔಪಚಾರಿಕತೆ ವಿಲಕ್ಷಣವಾಗಿರುತ್ತದೆ. ಅಲ್ಲಿ ಒಂದು ಸಣ್ಣ ಮಾತೂ ಕೂಡ ಗಂಭೀರ ರೂಪ ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸೌಮ್ಯ ವ್ಯಕ್ತಿತ್ವದಿಂದಲೇ ಸಾಕಷ್ಟು ದೇಶಗಳ ವಿದೇಶ ಮಂತ್ರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸುಷ್ಮಾ ಸ್ವರಾಜ್ ಕೂಡ ತಮ್ಮ ಹೊಸ ಕೆಲಸದಲ್ಲಿ ಯಶಸ್ಸನ್ನು ಸಾಬೀತುಪಡಿಸಬಹುದು ಎಂಬ ಆಶಾಭಾವನೆ ಇಟ್ಟುಕೊಳ್ಳೋಣ.
ಸುಗಂಧರಹಿತ ಕಾಗದದ ಹೂಗಳು
ಲೈಂಗಿಕ ಸಂಬಂಧಗಳ ಸ್ವಾತಂತ್ರ್ಯದ ಬಗ್ಗೆ ವಕಾಲತ್ತು ವಹಿಸುವುದು ಸುಲಭವೆನಿಸುತ್ತದೆ. ಆದರೆ ಅದು ದುಬಾರಿಯಾಗಿಯೂ ಪರಿಣಮಿಸಬಹುದು. ಇದಕ್ಕೆ ಸೂಕ್ತ ಉದಾಹರಣೆ ನಾರಾಯಣ್ ದತ್ತ ತಿವಾರಿ. ಅವರು ಇಳಿ ವಯಸ್ಸಿನಲ್ಲಿ ತಮ್ಮ ಜೈವಿಕ ಪ್ರಾಪ್ತ ವಯಸ್ಸಿನ ಮಗನನ್ನು ಸ್ವೀಕರಿಸಬೇಕಾಗಿ ಬಂದಾಗ, ಅವನ ತಾಯಿಗೆ ತನ್ನ ಇಚ್ಛೆಗೆ ವಿರುದ್ಧವಾಗಿ ಅನುಮತಿ ಕೊಡಬೇಕಾಗಿ ಬಂತು.
ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್‌ರಂತೂ ಇಂತಹದೇ ಪ್ರಕರಣದಲ್ಲಿ ಭಾರಿ ಫಜೀತಿ ಅನುಭವಿಸಬೇಕಾಗಿ ಬಂತು. ಪತ್ರಕರ್ತೆ ಜೊತೆಗಿನ ಸಂಬಂಧದ ಬಗೆಗಷ್ಟೇ ಅಲ್ಲ, ಅವರ ಅಂತರಂಗದ ಕ್ಷಣಗಳ ಚಿತ್ರಗಳು ಕೂಡ ಜಗಜ್ಜಾಹೀರಾದ.ದೆಹಲಿಯಲ್ಲಿ ಒಬ್ಬ ಪುತ್ರ 18 ವರ್ಷಗಳ ಹಿಂದಿನ ತನ್ನ ತಂದೆಯ ಸಾವಿಗೆ, ಒಬ್ಬ ಪೊಲೀಸ್ ಪೇದೆ ಮತ್ತು ಸ್ವತಃ ತನ್ನ ತಾಯಿಯ ವಿರುದ್ಧ ನ್ಯಾಯಾಲಯದ ಬಾಗಿಲು ತಟ್ಟಿದ್ದಾನೆ.
ಈ ಕುರಿತಂತೆ 18 ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಅವನ ತಂದೆಯ ಸಾವು ಸಂಭವಿಸಿತೆಂದು ಹೇಳಲಾಗಿದೆ. ಆ ಬಳಿಕ ಒಬ್ಬ ಪೊಲೀಸ್ ಅವರ ಮನೆಗೆ ಹೋಗುವುದು ಬರುವುದು ನಡೆದೇ ಇತ್ತು. ಈಗ ಆ ಪುತ್ರನಿಗೆ 25 ಆಗಿದ್ದರೂ ಪೊಲೀಸ್ ವ್ಯಕ್ತಿ ಮನೆಗೆ ಬರುವುದನ್ನು ಮಾತ್ರ ನಿಲ್ಲಿಸಿರಲಿಲ್ಲ. ಆ ಪುತ್ರ, ಸಾಮಾಜಿಕ ಕಾರಣಗಳನ್ನು ನೀಡಿ ಪೊಲೀಸ್ ವ್ಯಕ್ತಿ ಮನೆಗೆ ಬರದಂತೆ ತಡೆಯಲು ಯತ್ನಿಸಿದ. ಆಗ ಆ ಪೊಲೀಸ್ ವ್ಯಕ್ತಿ ನಿನ್ನ ತಂದೆಯನ್ನು ಹೇಗೆ ನಮ್ಮ ದಾರಿಯಿಂದ ನಿವಾರಿಸಲಾಗಿತ್ತೊ, ಅದೇ ರೀತಿ ನಿನ್ನನ್ನು ಕೂಡ ನಿವಾರಿಸಲಾಗುತ್ತದೆ ಎಂದು ಅವನಿಗೆ ಬೆದರಿಕೆ ಹಾಕಿದ. ಪುತ್ರ ಈಗ ತನ್ನ ತಾಯಿ ಸೇರಿದಂತೆ ಆಕೆಯ ಗೆಳೆಯನ ವಿರುದ್ಧ ತಂದೆಯ ಸಾವಿನ ಕುರಿತಂತೆ ತನಿಖೆ ನಡೆಸಬೇಕೆಂದು ನ್ಯಾಯಾಲಯದ ಕಟಕಟೆ ಏರಿದ್ದಾನೆ.
ಮದುವೆ ಅಥವಾ ಮಕ್ಕಳು ಹೃದಯದ ಮೇಲೆ ಬೀಗ ಜಡಿಯಲು ಸಾಧ್ಯವಿಲ್ಲ. ಒಂದು ವೇಳೆ ಗಂಡುಹೆಣ್ಣಿನ ನಡುವೆ ನಿಕಟತೆ ಹೆಚ್ಚಾಗಿಬಿಟ್ಟರೆ ಜನ ತಮ್ಮ ಕೆರಿಯರ್, ವ್ಯಾಪಾರ, ವಹಿವಾಟು, ಪ್ರತಿಷ್ಠೆ ಎಲ್ಲವನ್ನೂ ಪಣಕ್ಕೊಡ್ಡುತ್ತಾರೆ. ಪ್ರಾಪ್ತ ವಯಸ್ಸಿನವರ ನಡುವೆ ಉಂಟಾಗುವ ಸಂಬಂಧಗಳ ಮೇಲೆ ಸುಲಭವಾಗಿ ಕಡಿವಾಣ ಹಾಕಲು ಸಾಧ್ಯವಿಲ್ಲ.
ವಿವಾಹಿತ ಸಂಗಾತಿಯಿಂದ ವಿಚ್ಛೇದನ ಕೇಳಿದರೂ ಅದರಿಂದ ಏನೂ ಪ್ರಯೋಜನವಿಲ್ಲ. ಏಕೆಂದರೆ ಆ ಬಳಿಕ ವಿವಾಹಿತ ಸಂಗಾತಿಗೆ ಕೇವಲ ಆರ್ಥಿಕ ಕಷ್ಟವನ್ನಷ್ಟೇ ಅಲ್ಲ, ಏಕಾಂಗಿತನ ಹಾಗೂ ಸಾಮಾಜಿಕ ಅವಹೇಳನವನ್ನೂ ಸಹಿಸಿಕೊಳ್ಳಬೇಕಾಗುತ್ತದೆ.
ಮಕ್ಕಳು ಪ್ರತ್ಯೇಕವಾಗಿ ವಾಸಿಸಲಾರಂಭಿಸುತ್ತಾರೆ. ಅವರ ಗಮನ ಕೂಡ ಕೆರಿಯರ್ ಬಿಟ್ಟು ಬೇರೆ ಕಡೆ ತಿರುಗತೊಡಗುತ್ತದೆ. ಅದರಲ್ಲೂ ದೀರ್ಘಾವಧಿ ವಿಚ್ಛೇದನದ ಪ್ರಕ್ರಿಯೆಯಿಂದ ಬೇಸತ್ತುಹೋಗಿದ್ದರೆ, ಮಕ್ಕಳ ಪಾಲನೆ ಪೋಷಣೆಯ ಹಕ್ಕಿನ ಕುರಿತಂತೆ ಅವರು ಅಡಕತ್ತರಿಯಲ್ಲಿ ಸಿಕ್ಕಂತೆ ಭಾಸವಾಗುತ್ತದೆ.
ಮದುವೆಯ ಬಳಿಕದ ಸಂಬಂಧಗಳನ್ನು ಕಾನೂನು ರೀತ್ಯ ತಡೆಯುವುದು ಅಸಾಧ್ಯ. ಏಕೆಂದರೆ ಅದನ್ನು ಅಪರಾಧ ಎಂದು ಬಿಂಬಿಸುವುದು ಹೊಸದೊಂದು ತೊಂದರೆಗೆ ದಾರಿ ಮಾಡಿಕೊಟ್ಟಂತೆ. ನಮ್ಮ ಕಾನೂನಿನಲ್ಲಿ ಗಂಡನಾದವನು ತನ್ನ ಹೆಂಡತಿಯ ಎರಡನೇ ಸಂಬಂಧದ ಬಗ್ಗೆ ಕಾನೂನು ರೀತ್ಯ ಕ್ರಮ ಕೈಗೊಳ್ಳಬಹುದು. ಆದರೆ ಅದನ್ನು ಸಾಬೀತುಪಡಿಸಲು ಇಬ್ಬರ ನಡುವೆ ಲೈಂಗಿಕ ಸಂಬಂಧ ಇದೆ ಎನ್ನುವುದನ್ನು ಸಾಬೀತುಪಡಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಅವನಿಗೆ ಆಗುವ ಫಜೀತಿಗಳು ಒಂದಲ್ಲ ಎರಡಲ್ಲ. ಹೀಗಾಗಿ ಆ ಹಕ್ಕು ಕಡಿಮೆ ಬಳಕೆಯಾಗುತ್ತದೆ.
ವಿವಾಹ ಒಂದು ಸಾಮಾಜಿಕ ಹೊಂದಾಣಿಕೆ. ಎರಡೂ ಪಕ್ಷಗಳು ಇದನ್ನು ಖುಷಿ ಖುಷಿಯಿಂದಲೇ ಒಪ್ಪಬೇಕು. ಇದೇ ಸುಖದ ಆಧಾರ. ಹೊರಗಡೆ ಸುಖ ಅರಸುತ್ತ ಹೋದರೆ ಕೊಳಕು ಮತ್ತು ಮುಳ್ಳಿನ ಹೊರತಾಗಿ ಬೇರೇನೂ ಸಿಗದು.
ಇದು ಎಲ್ಲಿ ಘಟಿಸುತ್ತೊ ಅಲ್ಲಿ ಗಂಡ ಹೆಂಡತಿ ಅದರ ಮೇಲೆ ಪರದೆ ಹಾಕಬೇಕು. ಮಾತಿನ ದಾಳಿ ಪ್ರತಿದಾಳಿಯನ್ನು ನಿಲ್ಲಿಸಬೇಕು. ಹಾಗೆ ಮಾಡುವುದರಿಂದ ಸಂಗಾತಿಯನ್ನು ಸೋಲಿಸಬಹುದು ಎನ್ನುವುದು ತಪ್ಪು. ಇದರಿಂದ ಸಂಗಾತಿ ಹೊರಗಡೆಯೇ ಶಾಂತಿ ಮತ್ತು ಸುಖ ಅರಸುತ್ತ ಹೋಗಬಹುದು.