ಈಚೆಗೆ ಫ್ಯಾಷನ್‌ ಹಾಗೂ ಸ್ಟೈಲ್‌ನ ಜೊತೆಗೆ ಅಸ್ಟ್ರಾಲಜಿ ಕಾಂಬಿನೇಷನ್‌ ಸಾಕಷ್ಟು ಮಟ್ಟಿಗೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಫ್ಯಾಷನ್‌ ಡಿಸೈನರ್‌ಗಳು ಫಾರ್ಚೂನ್‌ ಫ್ಯಾಷನ್‌ ಅಂದರೆ ಅಸ್ಟ್ರಾಲಾಜಿಕ್‌ ಡ್ರೆಸ್‌ನ ಟ್ರೆಂಡ್‌ ಶುರು ಮಾಡಿದ್ದಾರೆ. ಡಿಸೈನರ್‌ಗಳು ಈಗ ರಾಶಿಗನುಗುಣವಾಗಿ ಬಣ್ಣ, ಡಿಸೈನ್‌, ಫ್ಯಾಬ್ರಿಕ್‌ ಹಾಗೂ ಸ್ಟೈಲ್‌ನ್ನು ಸೃಷ್ಟಿಸುತ್ತಿದ್ದಾರೆ.

ಯಾವ ಸೀಸನ್‌ನಲ್ಲಿ ಯಾವ ಡ್ರೆಸ್‌ ಹೆಚ್ಚು ಕ್ರಾಂತಿಯನ್ನುಂಟು ಮಾಡುತ್ತದೆ ಎಂಬುದರ ಬದಲಿಗೆ ಯಾವ ರಾಶಿಯವರು ಯಾವ ಡ್ರೆಸ್‌ ಧರಿಸಬೇಕು ಎಂಬುದರ ಬಗ್ಗೆ ಹೆಚ್ಚು ಗಮನ ಕೊಡುತ್ತಿದ್ದಾರೆ. ಈ ಕಾರಣದಿಂದಾಗಿ ಫ್ಯಾಷನ್‌ ಡಿಸೈನರ್‌ಗಳು ಈಗ ಜ್ಯೋತಿಷಿಗಳ ಸಹಕಾರ ಪಡೆದುಕೊಳ್ಳುತ್ತಿದ್ದಾರೆ.

ಜ್ಯೋತಿಷಿಗಳ ಪ್ರಕಾರ ಗ್ರಹ, ದಿನ ಮತ್ತು ರಾಶಿಯ ಪ್ರಕೃತಿಗನುಗುಣವಾಗಿ ಪ್ರತಿದಿನ ಒಂದೊಂದು ಬಣ್ಣ ವಿಶೇಷ ಪ್ರಭಾವ ಹೊಂದಿರುತ್ತದೆ. ಬಟ್ಟೆಗಳ ಬಣ್ಣ, ಡಿಸೈನ್‌, ಬಟ್ಟೆ ಹಾಗೂ ಸ್ಟೈಲ್‌‌ನ ಆಯ್ಕೆಯಲ್ಲಿ ತಪ್ಪಾಗಿಬಿಟ್ಟರೆ ಜನರ ಜೀವನ ಪ್ರಭಾವಿತಗೊಳ್ಳುತ್ತದೆ. ಅವರ ಜೀವನದಲ್ಲಿ ಆಗಾಗ ಏರುಪೇರುಗಳಾಗುತ್ತಿರುತ್ತವೆ. ಗ್ರಹದ ಗುಣದೆಸೆಗಳನ್ನು ಅರಿತು ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡರೆ ಅವರ ತೊಂದರೆ ತಾಪತ್ರಯಗಳು ಬಗೆಹರಿಯುತ್ತವೆ ಎಂದು ಜ್ಯೋತಿಷಿಗಳು ಹೇಳುತ್ತಾರೆ.

ಅಸಂಬದ್ಧ ಮಾತುಗಳು

ಜ್ಯೋತಿಷ್ಯ ತಜ್ಞರು ಹೇಳುವುದೇನೆಂದರೆ, ಬಟ್ಟೆ ನೈಸರ್ಗಿಕ ಹತ್ತಿಯದಾಗಿರಬಹುದು, ಸಿಂಥೆಟಿಕ್‌ ಇರಬಹುದು. ಅವು ಬೇರೆ ಬೇರೆ ರಾಶಿಗಳವರ ಮೇಲೆ ಬೇರೆ ಬೇರೆ ರೀತಿಯ ಪ್ರಭಾವ ಬೀರುತ್ತವೆ. ಒಂದು ರಾಶಿಯರಿಗೆ ಫೆದರ್‌ ಅಥವಾ ಲೆದರ್‌ ಶುಭವಾಗಿದ್ದರೆ, ಮತ್ತೆ ಕೆಲವು ರಾಶಿಯವರಿಗೆ ಅಶುಭವಾಗಿರುತ್ತದೆ.

ಒಂದು ವೇಳೆ ವ್ಯಕ್ತಿ ದಿನಗಳನ್ನು ಗಮನದಲ್ಲಿಟ್ಟುಕೊಂಡು ಧರಿಸಬಹುದಾದ ಬಟ್ಟೆ ಹಾಗೂ ಬಣ್ಣವನ್ನು ನಿರ್ಧರಿಸಿದಲ್ಲಿ ಜೀವನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಬಹುದಾಗಿದೆ. ಏಕೆಂದರೆ ಹೀಗೆ ಮಾಡುವುದರಿಂದ ಅವರು ಯಾವುದೇ ಸಮಸ್ಯೆಯನ್ನು ಎದುರಿಸಬೇಕಾಗಿ ಬರುವುದಿಲ್ಲ.

ಈಗಂತೂ ಮದುವೆಯನ್ನು ಯಶಸ್ವಿಗೊಳಿಸಲು ವಧೂವರರಿಗೂ ಕೂಡ ಅಸ್ಟ್ರಾಲಾಜಿಕ್‌ ಡ್ರೆಸ್‌ನ್ನು ಸಿದ್ಧಗೊಳಿಸಲಾಗುತ್ತಿದೆ. ಮದುವೆಯ ವಿಶೇಷ ಸಂದರ್ಭದಲ್ಲಿ ಧರಿಸುವ ಸೀರೆ, ಲೆಹಂಗಾ, ಶೇರ್ವಾನಿ ಅಥವಾ ಸೂಟ್‌ಗಳನ್ನು ಇಬ್ಬರ ಜಾತಕ ನೋಡಿ ಜ್ಯೋತಿಷಿಗಳ ಸಲಹೆಯ ಮೇರೆಗೆ ಸಿದ್ಧಪಡಿಸಲಾಗುತ್ತಿದೆ. ಇಷ್ಟೇ ಅಲ್ಲ, ಅವರ ಡ್ರೆಸ್ಸಿನ ಕಲರ್‌, ಡಿಸೈನ್‌, ಫ್ಯಾಬ್ರಿಕ್‌ನ ಜೊತೆಗೆ ಅವುಗಳಲ್ಲಿ ಅಳವಡಿಸುವ ಮುತ್ತು, ಬೀಡ್ಸ್, ಮೆಟಲ್ಸ್, ಎಂಬ್ರಾಯಿಡರಿ ಮುಂತಾದವು ಕೂಡ ಅವರ ರಾಶಿಗೆ ಮ್ಯಾಚ್ ಆಗುವಂತಿರಬೇಕು.

ಅಂಗಡಿಯವರು ಕೂಡ ತಮಗಾಗಿ ಅಸ್ಟ್ರಾಲಾಜಿಕ್‌ ಡ್ರೆಸ್‌ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಏಕೆಂದರೆ ಗ್ರಾಹಕರು ಹಾಗೂ ತಮ್ಮ ನಡುವೆ ಒಳ್ಳೆಯ ಸಂಬಂಧ ಏರ್ಪಡಬೇಕು ಎನ್ನುವುದು ಅವರ ಯೋಚನೆಯಾಗಿರುತ್ತದೆ.

ಜ್ಯೋತಿಷಿಗಳ ಹಸ್ತಕ್ಷೇಪ

ಮಹಿಳೆಯರಲ್ಲಿ ಅಸ್ಟ್ರಾಲಾಜಿಕ್‌ ಡ್ರೆಸ್‌ನ ಫ್ಲ್ಯೂ ತೀವ್ರವಾಗಿ ಹೆಚ್ಚುತ್ತಿದೆ. ಹೈ ಸೊಸೈಟಿಯಲ್ಲಿ ಪರ್ಸನಲ್ ಫ್ಯಾಷನ್‌ ಡಿಸೈನರ್‌ಗಳನ್ನು ಹೊಂದುವ ಟ್ರೆಂಡ್‌ ಇದೆ. ಅದರ ಬದಲು ಈಗ ಫ್ಯಾಷನ್‌ ಅಸ್ಟ್ರಾಲಜರ್‌ ಇಟ್ಟುಕೊಳ್ಳುವ ಟ್ರೆಂಡ್‌ ಶುರುವಾಗಿದೆ.

ಈ ಫ್ಯಾಷನ್‌ ಅಸ್ಟ್ರಾಲಜರ್‌ಗಳು ತಮ್ಮ ಗ್ರಾಹಕರ ಜಾತಕ ನೋಡಿ ಡ್ರೆಸ್‌, ಕಲರ್‌, ಡಿಸೈನ್‌ ಫ್ಯಾಬ್ರಿಕ್‌, ಸ್ಟೈಲ್, ಶೂಸ್‌ ಮತ್ತು ಆ್ಯಕ್ಸೆಸರೀಸ್‌ಗಳ ಬಗ್ಗೆ ಸಲಹೆ ನೀಡುತ್ತಾರೆ. ಅದರಿಂದ ಗ್ರಾಹಕರಿಗೆ ಯಾವುದೇ ತೊಂದರೆಯಾಗುವುದಿಲ್ಲ ಎನ್ನುವುದು ಜ್ಯೋತಿಷಿಗಳ ಹೇಳಿಕೆ.

ಈಚೆಗೆ ಮಾರುಕಟ್ಟೆಯಲ್ಲಿ ಅನೇಕ ಬಗೆಯ ಗುಡ್‌ ಲುಕ್‌ ಆ್ಯಕ್ಸೆಸರೀಸ್‌ಗಳು ದೊರೆಯುತ್ತಿವೆ. ಅದರಲ್ಲಿ ಫೆಂಗ್‌ಶುಯಿ ಬ್ರೇಸ್‌ಲೆಟ್‌, ಬ್ಲೂ ಲಕ್ಕಿ ಐ ಬ್ರೇಸ್‌ಲೆಟ್‌, ಟರ್ಟ್‌, ಫ್ರಾಗ್‌, ಪೆಂಡೆಂಟ್‌ನಂತಹ ಆ್ಯಕ್ಸೆಸರೀಸ್‌ಗಳಿಗೆ ಸಾಕಷ್ಟು ಬೇಡಿಕೆ ಇದೆ.

ಫ್ಯಾಷನ್‌ ಜಗತ್ತಿನಲ್ಲಿ ಜ್ಯೋತಿಷಿಗಳ ಹಸ್ತಕ್ಷೇಪ ಎಷ್ಟರಮಟ್ಟಿಗೆ ಹೆಚ್ಚುತ್ತಿದೆ ಎಂದರೆ, ಬರಲಿರುವ ದಿನಗಳಲ್ಲಿ ನೀವು ಮಾರುಕಟ್ಟೆಗೆ ಬಟ್ಟೆ ಖರೀದಿಸಲು ಅಂಗಡಿಗೆ ಹೋದರೆ, ನಿಮ್ಮ  ಡ್ರೆಸ್‌ನ ಸೈಜ್‌ ಕೇಳುವ ಬದಲು ನಿಮ್ಮದು ಯಾವ ರಾಶಿ ಎಂದು ಕೇಳಬಹುದು. ಆ ರಾಶಿಗನುಗುಣವಾಗಿಯೇ ನಿಮಗೆ ಬಟ್ಟೆಗಳನ್ನು ತೋರಿಸಬಹುದು.

ಸಾಮರ್ಥ್ಯದಿಂದ ಯಶಸ್ಸು

astro-fashion-2

ಮನೋಚಿಕಿತ್ಸಕ ಡಾ. ಗೌರವ್, ಈ ಕುರಿತಂತೆ ಹೀಗೆ ಹೇಳುತ್ತಾರೆ, “ಬಟ್ಟೆಗಳ ಬಣ್ಣ ಹಾಗೂ ವಿನ್ಯಾಸ ಒಬ್ಬ ವ್ಯಕ್ತಿಯ ಅದೃಷ್ಟವನ್ನೇ ಬದಲಿಸುತ್ತದೆ ಎನ್ನುವುದು ನಿರರ್ಥಕ ಮತ್ತು ಆಧಾರರಹಿತ ಸಂಗತಿ. ಯಾವುದೇ ವ್ಯಕ್ತಿ ಯಾವುದೇ ಬಣ್ಣದ ಡ್ರೆಸ್ ಧರಿಸಬಹುದು. ಅದರಿಂದ ಯಾವುದೇ ತೊಂದರೆಯಾಗದು.

“ಒಂದು ವೇಳೆ ಬಟ್ಟೆಗಳ ಬಣ್ಣ ಅಥವಾ ಡಿಸೈನುಗಳಿಂದ ಜೀವನದ ದಿಕ್ಕುದೆಸೆಯೇ ಬದಲಾಗುತ್ತದೆ ಎಂದಾದರೆ ಎಲ್ಲರೂ ಜ್ಯೋತಿಷಿಗಳ ಬಳಿ ಹೋಗಿ ಅವರು ಹೇಳಿದ ಬಣ್ಣದ, ವಿನ್ಯಾಸದ ಬಟ್ಟೆ ತೊಟ್ಟು ಯಾವುದೇ ದೊಡ್ಡ ಹುದ್ದೆ ಪಡೆಯಬಹುದಿತ್ತು. ಯಶಸ್ಸು ಎನ್ನುವುದು ಸಾಮರ್ಥ್ಯದಿಂದ ಬರುತ್ತದೆಯೇ ಹೊರತು ಬಟ್ಟೆಗಳ ಬಣ್ಣ ಹಾಗೂ ವಿನ್ಯಾಸದಿಂದಲ್ಲ.”

ಮೂಢನಂಬಿಕೆ ನಿರ್ಮೂಲನಾ ಸಮಿತಿಯೊಂದಿಗೆ ನಿಕಟ ಸಂಪರ್ಕ ಹೊಂದಿರುವ ಡಾ. ವಿಶ್ವಾಸ್‌ ಹೀಗೆ ಹೇಳುತ್ತಾರೆ, “ಫ್ಯಾಷನ್‌ನ್ನು ಅಸ್ಟ್ರಾಲಜಿಯೊಂದಿಗೆ ಥಳಕು ಹಾಕಿ ರಾಶಿಗನುಗುಣವಾಗಿ ಬಟ್ಟೆ ಧರಿಸುವುದು ಕೆಲವು ಶ್ರೀಮಂತರ ಖಯಾಲಿ. ಯಾವುದೇ ಕಾರಣಕ್ಕೂ ಈ ಸುಳಿಯಲ್ಲಿ ಬಡವರು, ಮಧ್ಯಮ ವರ್ಗದವರು ಸಿಲುಕಬಾರದು. ಯಾವುದೇ ದಿನ ಯಾವುದೇ ಬಟ್ಟೆ ತೊಟ್ಟರೂ ಏನೂ ತೊಂದರೆಯಾಗುವುದಿಲ್ಲ!”

ಮಾರ್ಕೆಟಿಂಗ್‌ ತಜ್ಞ ರಮಣ್‌ ಹೀಗೆ ಹೇಳುತ್ತಾರೆ, “ಕಳೆದ ಕೆಲವು ವರ್ಷಗಳಿಂದ ಉನ್ನತ ವರ್ಗದ ಕುಟುಂಬದಲ್ಲಿ ಜ್ಯೋತಿಷ್ಯ, ಫೆಂಗ್‌ಶುಯಿ, ಟೆರೊ ಕಾರ್ಡ್‌ಗಳ ಬಗ್ಗೆ ಒಲವು ಹೆಚ್ಚಾಗಿದೆ. ಅದಕ್ಕನುಗುಣವಾಗಿ ಫ್ಯಾಷನ್‌ ಡಿಸೈನರ್‌ಗಳು ತಮ್ಮ ಅಂಗಡಿಯ ವಹಿವಾಟು ಹೆಚ್ಚಿಸಿಕೊಳ್ಳಲು ಫ್ಯಾಷನ್‌ನ್ನು ಅಸ್ಟ್ರಾಲಜಿಯೊಂದಿಗೆ ಜೋಡಿಸಿಕೊಳ್ಳುತ್ತಿದ್ದಾರೆ. ಗ್ರಾಹಕರನ್ನು ಸೆಳೆಯುವಲ್ಲಿ ಅವರು ಸಾಕಷ್ಟು ಮಟ್ಟಿಗೆ ಯಶಸ್ವಿ ಕೂಡ ಆಗಿದ್ದಾರೆ.”

ಸಾಮಾನ್ಯವಾಗಿ ಇದರ ಪರಿಣಾಮ ಜನಸಾಮಾನ್ಯರ ಮೇಲೂ ಉಂಟಾಗುತ್ತದೆ. ಆದರೆ ಇದು ಹೆಚ್ಚು ದಿನಗಳ ಕಾಲ ಇರದು. ಇದಕ್ಕೆ ಕಾರಣವೇನೆಂದರೆ ಯಾವುದೇ ಒಂದು ಫ್ಯಾಷನ್‌ ದೀರ್ಘಾವಧಿಯತನಕ ಇರದು. ಕೆಲವು ವರ್ಷಗಳ ಹಿಂದೆ ಮಂತ್ರಗಳು, ಶ್ಲೋಕಗಳು ದೇವಿದೇವತೆಯರ ಚಿತ್ರಗಳುಳ್ಳ ಡಿಸೈನರ್‌ ಡ್ರೆಸ್‌ಗಳು ಮಾರುಕಟ್ಟೆಯಲ್ಲಿ ವ್ಯಾಪಿಸಿದ್ದ. ಆದರೆ ಇಂದು ಅವು ಔಟ್‌ ಆಫ್‌ ಫ್ಯಾಷನ್‌ ಆಗಿಬಿಟ್ಟಿವೆ.

ಹಣ ಗಳಿಸುವ ಅಸ್ತ್ರ

ಈ ಮೂಢನಂಬಿಕೆಗೆ ಮುಖ್ಯ ಕಾರಣವೇನೆಂದರೆ ಧರ್ಮ ಪ್ರಚಾರಕರು ಮಾರ್ಕೆಟಿಂಗ್‌ ತಂತ್ರವನ್ನು ಚೆನ್ನಾಗಿ ಅರಿತುಕೊಂಡಿದ್ದಾರೆ ಹಾಗೂ ಜೀವನದ ಪ್ರತಿಯೊಂದು ಬಣ್ಣಗಳ ಬಗ್ಗೆ ಮುಕ್ತವಾಗಿ ಪ್ರಚಾರ ಮಾಡುತ್ತಿದ್ದಾರೆ. ಕೇವಲ ಒಂದೇ ಮಠ, ಮಸೀದಿ ಅಥವಾ ಚರ್ಚ್‌ ಈ ಮಾರ್ಕೆಟಿಂಗ್‌ನಲ್ಲಿ ನಿರತರಾಗಿಲ್ಲ. ಸಾವಿರಾರು ಪೂಜಾರಿಗಳು, ಪಾದ್ರಿಗಳು, ಮೌಲ್ವಿಗಳು, ಧರ್ಮ ಪ್ರಚಾರದಲ್ಲಿ ಮಗ್ನರಾಗಿದ್ದಾರೆ. ಮಹಿಳೆಯರು ಇಂತಹ ತಂತ್ರಕ್ಕೆ ಸುಲಭವಾಗಿ ಬಲಿ ಬೀಳುತ್ತಾರೆ. ಹೀಗಾಗಿ ಬಟ್ಟೆಗಳನ್ನು ಮೂಢನಂಬಿಕೊಂದಿಗೆ ಥಳಕು ಹಾಕಲಾಗಿದೆ.

ವಾಸ್ತವದಲ್ಲಿ ಇದು ಹಣ ಗಳಿಸುವ ಸುಲಭ ಅಸ್ತ್ರವಾಗಿದೆ. ಅವರು ಇದರಲ್ಲಿ ಅತ್ಯಂತ ಯಶಸ್ವಿಯೂ ಆಗಿದ್ದಾರೆ. ಪ್ರತಿಯೊಂದು ಧರ್ಮದ ಪ್ರತಿ ಅಂಗಡಿಗೂ ಹಣದ ಮಳೆ ಯಥೇಚ್ಛವಾಗಿ ಸುರಿಯುತ್ತಿದೆ. ಡಿಸೈನರ್‌ಗಳು ಕೂಡ ಹರಿಯುತ್ತಿರುವ ಈ ಕೊಳಕು ನೀರಿನಲ್ಲಿ ಜನರನ್ನು ಮುಳುಗೇಳಿಸುತ್ತಿದ್ದಾರೆ.

ಯಾವುದೇ ಹೊಂದಾಣಿಕೆ ಇಲ್ಲ

ಸ್ಟೈಲ್ ‌ಗುರು ಉಮೇರ್‌ ಜಫರ್‌ ಹೇಳುವುದೇನೆಂದರೆ, ಫ್ಯಾಷನ್‌ ಹಾಗೂ ಅಸ್ಟ್ರಾಲಜಿ ಈ ಎರಡರ ನಡುವೆ ಯಾವುದೇ ಹೊಂದಾಣಿಕೆ ಇಲ್ಲ. ಅಸ್ಟ್ರಾಲಜಿಕ್‌ ಡ್ರೆಸ್‌ ಎಂಬುದು ಕೂಡ ಇಲ್ಲ. ಬಿಳಿ ಬಣ್ಣದ ಬಟ್ಟೆಗಳು ಕ್ರೈಸ್ತ ಧರ್ಮೀಯರ ಮದುವೆಗಳಲ್ಲಿ ಶುಭ ಎಂದು ಹೇಳಲಾಗುತ್ತದೆ. ಆದರೆ ಹಿಂದೂಗಳಲ್ಲಿ ಅವನ್ನು ವಿಧವೆಯರಿಗೆ ಧರಿಸಲು ಹೇಳಲಾಗುತ್ತದೆ. ಅಂದರೆ ಇವು ಹಿಂದೂಗಳಿಗೆ ಅಶುಭದ ಸಂಕೇತ.

ಡ್ರೆಸ್‌ ಬಗೆಗೆ ಯಾವುದೇ ಭ್ರಮೆ ಇಟ್ಟುಕೊಳ್ಳಬಾರದು. ಫ್ಯಾಬ್ರಿಕ್‌ ಮತ್ತು ಡಿಸೈನ್‌ಗಳಲ್ಲಿ ನಿಮಗೆ ಇಷ್ಟವಾದುದನ್ನೇ ಖರೀದಿಸಬೇಕು.

– ಅಪರ್ಣಾ ಕುಲಕರ್ಣಿ  

ಇಂಥದೂ ಒಂದು ದಂಧೆ!

ಲಂಡನ್‌ನ ಜ್ಯೋತಿಷಿಗಳದು ವಿಚಿತ್ರ ತರ್ಕ. ಅವರು ಪುರುಷನ ರಾಶಿ ಗಮನಿಸಿ ಯಾವ ಬಣ್ಣದ ಒಳ ಉಡುಪು ಧರಿಸಿದರೆ ಸ್ತ್ರೀಯನ್ನು ಖುಷಿ ಪಡಿಸಬಹುದು ಎಂಬುದನ್ನು ಹೇಳುತ್ತಾರೆ. ಅದೇ ರೀತಿ ಮಹಿಳೆ ಎಂತಹ ಬ್ರಾ ಮತ್ತು ಪ್ಯಾಂಟಿ ಧರಿಸಿದರೆ ಗಂಡನನ್ನು ತೃಪ್ತಿಪಡಿಸಬಹುದು ಎಂಬುದರ ಬಗ್ಗೆ ಹೇಳುತ್ತಾರೆ. ಒಳ ಉಡುಪುಗಳ ಬಣ್ಣ ಮತ್ತು ವಿನ್ಯಾಸ ಕೂಡ ಸ್ತ್ರೀ-ಪುರುಷರ ಅಂತರಂಗದ ಸಂಬಂಧದಲ್ಲಿ ಸಾಕಷ್ಟು ಎನರ್ಜಿ ತುಂಬುತ್ತದೆ ಎನ್ನುವುದು ಜ್ಯೋತಿಷಿಗಳ ಹೇಳಿಕೆ. ಇವೆಲ್ಲ ಅಪ್ಪಟ ಮೂಢನಂಬಿಕೆ ಎನ್ನುವುದು ನಿರ್ವಿವಾದದ ಸಂಗತಿ. ಇಂತಹುದನ್ನೆಲ್ಲ ನಂಬದೇ ಇದ್ದರೆ ನಿಮ್ಮ ಜೀವನ ಚೆನ್ನಾಗಿರುತ್ತೆ ಮತ್ತು ಅದು ಯಾವಾಗಲೂ ಸರಿಯಾದ ದಿಸೆಯಲ್ಲಿ ಸಾಗುತ್ತಿರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ