ಬಣ್ಣಗಳು ಜೀವನದಲ್ಲಿ ಎಲ್ಲ ರೀತಿಯಲ್ಲೂ ಪರಿಣಾಮ ಬೀರುತ್ತವೆ. ಏಕೆಂದರೆ ಬಣ್ಣಗಳೊಳಗೆ ಒಂದು ರೀತಿಯ ಶಕ್ತಿ ಭರ್ತಿಯಾಗಿರುತ್ತದೆ. ಈ ಬಣ್ಣಗಳು ನಮಗೆ ಸೃಷ್ಟಿಯಿಂದ ದೊರಕಿದ್ದಾಗಿವೆ. ಅವುಗಳ ಮೇಲಿಂದಲೇ ನಮ್ಮ ಆಸಕ್ತಿ ಅನಾಸಕ್ತಿಯ ಬಗ್ಗೆ ತಿಳಿಯುತ್ತದೆ.
ಮೊದಲು ಮನೆಗೆ ಬಣ್ಣ ಮಾಡಿಸುವುದು ಬಹಳ ಸುಲಭದ ಕೆಲಸವಾಗಿತ್ತು. ಏಕೆಂದರೆ ಆಗ ಬಣ್ಣ ಮಾಡಿಸಲು ಕೆಲವೇ ಕೆಲವು ಬಣ್ಣಗಳು ಮಾತ್ರ ಇದ್ದವು. ಈಗ ಪರಿಸ್ಥಿತಿ ಸಾಕಷ್ಟು ಬದಲಾಗಿದೆ. ಗೋಡೆಗಳಿಗೆ ಬಣ್ಣದ ಮೆರುಗು ಕೊಡುವುದು ಈಗ ಚಿತ್ರಕಲೆಗಿಂತ ಕಡಿಮೆ ಏನಿಲ್ಲ.
ಇಂಟೀರಿಯರ್ ಡಿಸೈನರ್ ಭೂಮಿಕಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಮನೆಗೆ ಬಣ್ಣ ಹೊಡೆಸುವುದನ್ನು ಈಗ `ವಾಲ್ ಫ್ಯಾಷನ್’ ಎಂದೇ ಕರೆಯಲಾಗುತ್ತದೆ. ಮೊದಲು ಮನೆಗೆಲ್ಲ ಬಣ್ಣ ಮಾಡಿಸುವುದನ್ನು ಮನೆಯ ಸ್ವಚ್ಛತೆಯ ಕೆಲಸ ಎಂದು ತಿಳಿಯಲಾಗುತ್ತಿತ್ತು. ಆದರೆ ಈಗ ವಾಲ್ ಫ್ಯಾಷನ್‌ನಿಂದ ಗೋಡೆಗಳಿಗೆ ಬೇರೆ ಬೇರೆ ಬಣ್ಣಗಳಿಂದ ಅಲಂಕರಿಸುವ ಕೆಲಸ ನಡೆಯುತ್ತದೆ.”
ಗ್ರಾಹಕರ ಆಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಪೇಂಟಿಂಗ್‌ನ ಸಲಕರಣೆಗಳನ್ನು ಉತ್ಪಾದಿಸುವ ಕಂಪನಿಗಳು ಹಲವು ಬಗೆಯ ಬಣ್ಣಗಳನ್ನು ತಯಾರಿಸುತ್ತವೆ. ಮನೆಯ ಆಂತರಿಕ ಗೋಡೆಗಳ ಮೇಲೆ ನಿಮ್ಮ ಕನಸಿನ ಬಣ್ಣಗಳನ್ನು ತುಂಬಲು ಜನ ಈಗ ವಿಭಿನ್ನ ಬಣ್ಣಗಳ ಕಲರ್ ಕಾಂಬಿನೇಶನ್ ಮತ್ತು ಡಿಸೈನಿಂಗ್ ಪೇಂಟ್ ಮಾಡಲು ಲಕ್ಷಾಂತರ ರೂ. ಖರ್ಚು ಮಾಡುತ್ತಿದ್ದಾರೆ. ಜನರ ಕನಸು ನನಸು ಮಾಡಲು ಈಗ ಮಾರುಕಟ್ಟೆಯಲ್ಲಿ ಬಗೆಬಗೆಯ ಉತ್ತಮ ಗುಣಮಟ್ಟದ ಪೇಂಟ್‌ಗಳು ಲಭಿಸುತ್ತಿವೆ.
ಪೇಂಟ್ಸ್ ಉದ್ಯಮಕ್ಕೆ ಸಂಬಂಧಪಟ್ಟ ಬೆಂಗಳೂರಿನ ಪ್ರದೀಪ್ ಅವರು ಹೀಗೆ ಹೇಳುತ್ತಾರೆ, “ಬಣ್ಣಗಳ ಕುರಿತಂತೆ ಜನರಲ್ಲಿ ಅನೇಕ ಅಪೇಕ್ಷೆಗಳಿರುತ್ತವೆ. ತಾವು ಕೊಂಡುಕೊಳ್ಳುವ ಪೇಂಟ್ ದೀರ್ಘಕಾಲ ಬಾಳಿಕೆ ಬರಬೇಕು. ಅದರ ಮೇಲೆ ಕೊಳೆಯ ಪರಿಣಾಮ ಉಂಟಾಗಬಾರದು. ಅದನ್ನು ತೊಳೆಯುವುದರ ಮೂಲಕ ಅಂದವಾಗಿ ಕಾಣುವಂತಾಗಬೇಕು. ಈಚೆಗೆ ಈಕೊ ಫ್ರೆಂಡ್ಲಿ ಮತ್ತು ಹೆಲ್ದಿ ಹೋಮ್ ಪೇಂಟ್‌ಗಳ ಬೇಡಿಕೆ ಹೆಚ್ಚುತ್ತಿದೆ. ಅದರಿಂದ ಮನೆಯ ಆರೋಗ್ಯದ ಜೊತೆಗೆ ಮನೆಯವರ ಆರೋಗ್ಯ ಕೂಡ ಚೆನ್ನಾಗಿರಬೇಕು.”
ರೆಡಿ ಟೂ ಯೂಸ್ ಮೆಟೀರಿಯಲ್
ಗೋಡೆಗಳ ಮೇಲೆ ನಮ್ಮ ಆಸಕ್ತಿಯ ಬಣ್ಣ ಮೂಡಿಸುವುದು ಸುಲಭದ ಸಂಗತಿಯಲ್ಲ. ಈ ಸಂಗತಿಯನ್ನು ಗಮನದಲ್ಲಿಟ್ಟುಕೊಂಡು ಪೇಂಟ್ ಕಂಪನಿಗಳು ಈಗ ರೆಡಿ ಟೂ ಯೂಸ್ ಮೆಟೀರಿಯಲ್ ದೊರಕಿಸಿಕೊಡಲು ಆರಂಭಿಸಿವೆ. ಇದರ ಮುಖಾಂತರ ನೀವು ಡಿಸೈನಿಂಗ್ ಮತ್ತು ವಾಲ್ ಕಾಂಬಿನೇಶನ್‌ನ ಆಯ್ಕೆಯನ್ನು ಸುಲಭವಾಗಿ ಮಾಡಬಹುದು. ಇವುಗಳಿಂದ ಸೂಕ್ತ ರೀತಿಯಲ್ಲಿ ಮಾಡಿದ ಬಣ್ಣ ಮನೆಯ ಅಂದಚೆಂದವನ್ನು ಹೆಚ್ಚಿಸುತ್ತದೆ. ಗೋಡೆಗಳ ಮೇಲೆ ಮೂಡಿದ ಬಣ್ಣದಿಂದ ಮನೆಯವರ ಸೃಜನಶೀಲತೆಯ ಬಗ್ಗೆ ಗೊತ್ತಾಗುತ್ತದೆ. ಭೂಮಿಕಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಈಗ ಪ್ರತಿಯೊಂದು ಕೋಣೆಗೂ ಬೇರೆ ಬೇರೆ ರೀತಿಯಲ್ಲಿ ಪೇಂಟ್ ಮಾಡುವ ಫ್ಯಾಷನ್ ಇದೆ. ಇದರ ಜೊತೆ ಜೊತೆಗೆ ಈಗ ಡೆಕೊರೇಟಿವ್ ವಾಲ್‌ನ್ನು ಹೆಚ್ಚೆಚ್ಚು ಇಷ್ಟಪಡಲಾರಂಭಿಸಿದ್ದಾರೆ. ಈಗ 3 ಕೋಣೆಗಳಿಗೆ ಲೈಟ್ ಶೇಡ್ ಮತ್ತು 1 ಕೋಣೆಗೆ ಡಾರ್ಕ್ ಶೇಡ್ ಮಾಡಿಸುವ ಟ್ರೆಂಡ್ ಇದೆ. ಕೆಲವರು ಡಾರ್ಕ್ ಶೇಡ್ ಬದಲು ಟೆಕ್ಸ್ ಚರ್ ಡಿಸೈನ್ ಇಷ್ಟಪಡುತ್ತಾರೆ.”
ಪ್ರದೀಪ್ ಅವರು ಹೇಳುವುದು ಹೀಗೆ, “ಮಕ್ಕಳ ಕೋಣೆ ಮತ್ತು ಬೆಡ್ ರೂಮ್ ಗಾಗಿ ಹತ್ತು ಹಲವು ಆಪ್ಶನ್‌ಗಳು ಇವೆ. ಅವರ ಕೋಣೆಗೆ ಬಗೆಬಗೆಯ ಬಣ್ಣ ಮತ್ತು ಶೇಡ್ಸ್ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಗೋಡೆಗಳ ಮೇಲೆ ಬಣ್ಣಗಳ ಮೆರುಗು ಅಂದವಾಗಿ ಕಾಣಿಸಲು 3 ರೀತಿಯಲ್ಲಿ ಪೇಂಟ್ ಮಾಡಲಾಗುತ್ತದೆ. ಮೊದಲ ಸಲ ಪೇಂಟ್ ಮಾಡುವುದನ್ನು ಫಸ್ಟ್ ಕೋಟ್ ಎಂದು ಹೇಳಲಾಗುತ್ತದೆ.
“ಆಗ ಸಾಮಾನ್ಯವಾಗಿ ಪ್ರೈಮರ್‌ನ್ನು ಬಳಸಲಾಗುತ್ತದೆ. ಆ ಬಳಿಕ 2ನೇ ಹಾಗೂ 3ನೇ ಕೋಟ್‌ನಲ್ಲಿ ಮೆಟಾಲಿಕ್ ಸಿಸ್ಟಮ್ ನ್ನು ಉಪಯೋಗಿಸಲಾಗುತ್ತದೆ. ಅದು ಎಮಲ್ಶನ್‌ನ ಕೆಲಸ ಮಾಡುತ್ತದೆ. ಇದು ಗೋಡೆಗಳಿಗೆ ಟೈಲ್ಸ್ ಫಿನಿಶಿಂಗ್ ನೀಡುತ್ತದೆ. ಇದು ವಾಷೆಬಲ್ ಆಗಿರುವುದರ ಜೊತೆಗೆ ಇದರ ಲುಕ್ಸ್ ಕೂಡ ಚೆನ್ನಾಗಿರುತ್ತದೆ. ಈ ಎಲ್ಲ ಕೆಲಸಗಳಿಗೆ ರಾಯಲ್ ಪ್ಲೇ ಪೇಂಟ್ ಡೆಕೊರೇಟಿವ್ ಸೆಂಟ್ ಹೆಸರಿನಿಂದ ಪೂರ್ತಿ ಹೋಮ್ ಕಲೆಕ್ಶನ್ ದೊರೆಯುತ್ತದೆ.”
ಗೋಡೆಗಳನ್ನು ಪೇಂಟ್‌ನಿಂದ ಅಲಂಕರಿಸಲು ಹಲವು ಬಗೆಯ ಟೂಲ್ಸ್ ಬಳಸಲಾಗುತ್ತದೆ. ಇದರಲ್ಲಿ ಬ್ರಶ್, ಕೋಂಬ್, ಬಟರ್‌ಪೇಪರ್, ಪ್ಯಾಚುಲಾ ಸಹಿತ ಅನೇಕ ಟೂಲ್ಸ್ ಇರುತ್ತವೆ. ಈಚೆಗೆ ಟೆಫ್ಲಾನ್ ಬೇಸ್ಡ್ ಕಲರ್‌ಗಳ ಬಳಕೆ ಹೆಚ್ಚುತ್ತಿದೆ. ಇದನ್ನು ಗೋಡೆಯ ಮೇಲೆ ರೋಲರ್ ಮುಖಾಂತರ ಪೇಂಟ್ ಮಾಡಲಾಗುತ್ತದೆ. ಇದು ವಾಷೆಬಲ್ ಆಗಿರುವ ಕಾರಣದಿಂದ ಇದನ್ನು ಹೆಚ್ಚು ಇಷ್ಟಪಡಲಾಗುತ್ತದೆ. ಇದರಲ್ಲಿ ಅನೇಕ ಬಗೆಯ ಶೇಡ್‌ಗಳು ಸಿಗುತ್ತವೆ.
ಈ ಕುರಿತಂತೆ ಪ್ರದೀಪ್ ಹೀಗೆ ಹೇಳುತ್ತಾರೆ, “ಗೋಡೆಗಳ ಪೇಂಟ್ ಮಾಡಿಸಲು ಬಹಳಷ್ಟು ತೊಂದರೆಪಡುವ ಅಗತ್ಯವಿಲ್ಲ. ನೀವು ಪೇಂಟ್ ಅಂಗಡಿಗೆ ಹೋಗಿ ನಿಮ್ಮ ಅಗತ್ಯಗಳ ಬಗ್ಗೆ ಹೇಳಿ. ಅಲ್ಲಿ ಎಲ್ಲ ಬಗೆಯ ಕ್ಯಾಟ್‌ಲಾಗ್‌ಗಳು ಇರುತ್ತವೆ. ಅವನ್ನು ನೋಡಿ ನೀವು ನಿರ್ಧಾರ ಕೈಗೊಳ್ಳಬಹುದು. ಇದರ ಜೊತೆ ಜೊತೆಗೆ ಪೇಂಟ್ ಕಂಪನಿಗಳು ತಮ್ಮದೇ ಆದ ವೆಬ್‌ಸೈಟ್‌ಗಳನ್ನು ಹೊಂದಿದ್ದು, ಅವನ್ನು ನೋಡಿ ನಿಮ್ಮ ಕನಸನ್ನು ಸಾಕಾರಗೊಳಿಸಬಹುದು.”
ಮೊದಲಿನಿಂದಲೇ ಸಿದ್ಧತೆ ಮಾಡಿಕೊಳ್ಳಿ. ಮೊದಲು ಪ್ರತಿವರ್ಷ ಗೋಡೆಗಳಿಗೆ ಬಣ್ಣ ಮಾಡಿಸಲಾಗುತ್ತಿತ್ತು. ಆದರೆ ಈಗ ಹೀಗೆ ಮಾಡಿಸುವುದು ಖಂಡಿತ ಸಾಧ್ಯವಿಲ್ಲ. ಈಗ ಎಂತಹ ಪೇಂಟ್‌ಗಳು ಬಂದಿವೆಯೆಂದರೆ, ಅವನ್ನು ಹೊಡೆಸಿ ಅನೇಕ ವರ್ಷ ನಿಶ್ಚಿಂತೆಯಿಂದಿರಬಹುದು. ಆದರೆ ಇದಕ್ಕಾಗಿ ಕೆಲವು ಎಚ್ಚರಿಕೆಗಳನ್ನು ವಹಿಸಬೇಕಾಗುತ್ತದೆ. ಭೂಮಿಕಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಮೊದಲು ನೀವು ಯಾವ ಯಾವ ಕೋಣೆಯ ಬಣ್ಣ ಹೇಗಿರಬೇಕು, ಅದರಲ್ಲಿ ನಿಮ್ಮ ಡಿಸೈನ್ ಮತ್ತು ಪ್ಯಾಟರ್ನ್ ನಿರ್ಧರಿಸಿಕೊಳ್ಳಿ. ಒಂದು ವೇಳೆ ಗೋಡೆಯ ಮೇಲೆ ನಿಮಗೆ ಸ್ಪೆಷಲ್ ಎಫೆಕ್ಟ್ ಬೇಕಾಗಿದ್ದರೆ ಬಣ್ಣದ ಮಾರಾಟಗಾರರ ಸಲಹೆ ಪಡೆದುಕೊಳ್ಳಿ. ಯಾವ ಕೋಣೆಯ, ಯಾವ ಗೋಡೆಯ ಮೇಲೆ ಎಂತಹ ಬಣ್ಣ ಬೇಕು ಎನ್ನುವುದನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಿ.”
ಯಾರಿಗೆ ಕೋಣೆಯಲ್ಲಿ ಹೆಚ್ಚು ಬೆಳಕು ಬೇಕೊ ಅವರು ತಿಳಿ ಮತ್ತು ಗಾಢ ವರ್ಣದ ಕಾಂಟ್ರಾಸ್ಟ್ ಮಾಡಿಸಬಹುದು. ಡ್ರಾಯಿಂಗ್ ರೂಮಿನಲ್ಲಿ ಯಾವಾಗಲೂ ಗಾಢ ವರ್ಣದ ಪೇಂಟ್ ಮಾಡಿಸಬೇಡಿ. ತಿಳಿ ವರ್ಣದ ಪೇಂಟ್ ಹೆಚ್ಚು ಸೂಕ್ತ ಎನಿಸುತ್ತದೆ. ಇದರಿಂದ ಕೋಣೆಯಲ್ಲಿ ಹೆಚ್ಚು ಬೆಳಕು ಬರುತ್ತದೆ. ಯಾವ ಕೋಣೆಯಲ್ಲಿ ಕಿಟಕಿಗಳು ಹೆಚ್ಚಿಗೆ ಇರುತ್ತವ ಅಲ್ಲಿ ಹೊರಗಿನ ಬೆಳಕು ಸಲೀಸಾಗಿ ಬರುತ್ತದೆ. ಅಂತಹ ಕೋಣೆಯಲ್ಲಿ ಗಾಢ ವರ್ಣಗಳನ್ನು ಉಪಯೋಗಿಸಬಹುದು. ಗಾಢ ವರ್ಣಗಳ ಜೊತೆ ಸ್ಪೆಷಲ್ ಎಫೆಕ್ಟ್ ಇರಬೇಕಾದುದು ಅತ್ಯವಶ್ಯ. ಅದರಿಂದಾಗಿ ಕೋಣೆಯು ವಿಶಿಷ್ಟವಾಗಿ ಕಾಣುತ್ತದೆ. ಮಕ್ಕಳ ಕೋಣೆಗಾಗಿ ಸ್ವಲ್ಪ ತಿಳಿ, ಆದರೆ ಮುಕ್ತ ಬಣ್ಣಗಳನ್ನು ಆಯ್ಕೆ ಮಾಡುವುದು ಸೂಕ್ತವಾಗಿ ಇರುತ್ತದೆ. ಮನೆಯ ಜಾಗವನ್ನು ಗಮನದಲ್ಲಿಟ್ಟು ಕೊಂಡು ಪೇಂಟ್ ಮಾಡುವ ಖರ್ಚನ್ನು ಮೊದಲೇ ನಿರ್ಧರಿಸಬಹುದು. ಬಣ್ಣ ಮಾಡಿಸಲು ಮಾರುಕಟ್ಟೆಯಲ್ಲಿ ಬಗೆಬಗೆಯ ಪೇಂಟ್‌ಗಳು ಲಭ್ಯವಿವೆ. ಹಾಗಾಗಿ ನಿಮ್ಮ ಬಜೆಟ್‌ಗನುಸಾರ ಕಾರ್ಯಪ್ರವೃತ್ತರಾಗಿ. ಒಂದು ವೇಳೆ ನೀವು ಪೇಂಟ್ ಮಾಡುವ ಮೊದಲೇ ಬಣ್ಣ, ಟೆಕ್ಸ್ ಚರ್ ಮತ್ತು ಪ್ಯಾಟರ್ನ್ಸ್ ಆಯ್ದುಕೊಂಡರೆ ಎಲ್ಲ ಸರಳವಾಗುತ್ತದೆ. ಮೊದಲೇ ನಿರ್ಧರಿಸಿಕೊಂಡರೆ ಮುಂದೆ ಪಶ್ಚಾತ್ತಾಪಪಡಬೇಕಾಗಿ ಬರುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ ಇಂತಹ ಮಾಹಿತಿ ಪಡೆದುಕೊಳ್ಳುವುದು ಸುಲಭವಾಗಿದೆ. ಪೇಂಟ್ ಕಂಪನಿಗಳು ಕೂಡ ಈಗ ಗ್ರಾಹಕರ ನೆರವಿಗೆ ಬರುತ್ತಿವೆ.
ಪ್ರತಿಯೊಂದು ಬಣ್ಣದ ವಿಶೇಷತೆ
ಬಣ್ಣಗಳ ಆಯ್ಕೆಯನ್ನು ನೀವು ನಿಮ್ಮ ಆಸಕ್ತಿಗನುಗುಣವಾಗಿಯೇ ಮಾಡಬೇಕು. ಆದರೆ ಪ್ರತಿಯೊಂದು ಬಣ್ಣಕ್ಕೂ ತನ್ನದೇ ಆದ ವೈಶಿಷ್ಟ್ಯತೆ ಇರುತ್ತದೆ. ಅದನ್ನು ಆಧರಿಸಿಯೂ ನೀವು ಬಣ್ಣಗಳ ಆಯ್ಕೆ ಮಾಡಬಹುದು. ಪ್ರತಿಯೊಂದು ಬಣ್ಣ ವಿಶಿಷ್ಟ ಶಕ್ತಿ ಸ್ಛೂರ್ತಿಯನ್ನು ತುಂಬುತ್ತದೆ.
ಕೆಂಪು ಬಣ್ಣವನ್ನು ಎಲ್ಲಕ್ಕೂ ಹೆಚ್ಚಿನ ವೈಬ್ರೆಂಟ್ ಎಂದು ಹೇಳಲಾಗುತ್ತದೆ. ಅದರ ಅತಿಯಾದ ಪ್ರಮಾಣದಿಂದ ಸಿಟ್ಟು ಹಾಗೂ ಒತ್ತಡ ಹೆಚ್ಚುತ್ತದೆ. ಹೀಗಾಗಿ ಈ ಬಣ್ಣವನ್ನು ಯೋಚಿಸಿಯೇ ಉಪಯೋಗಿಸಬೇಕು. ಹಳದಿ ಬಣ್ಣ ಖುಷಿ ಮತ್ತು ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಲೇ ಹಳದಿ ಬಣ್ಣದ ಶೇಡ್ಸ್ ಹೆಚ್ಚಿನ ಪ್ರಮಾಣದಲ್ಲಿ ಬಳಕೆಯಾಗುತ್ತದೆ. ನೀಲಿ ಬಣ್ಣ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಇದರಿಂದ ಮನಸ್ಸಿನಲ್ಲಿ ನಿರಾಳತೆಯ ಭಾವನೆ ಮೂಡುತ್ತದೆ. ಕಪ್ಪು ಬಣ್ಣ ಶಕ್ತಿಯನ್ನು ಪ್ರದರ್ಶಿಸುತ್ತದೆ. ಬಿಳಿ ಬಣ್ಣ ಮುಗ್ಧತನ ಮತ್ತು ಶುಭ್ರತೆಯ ಪ್ರತೀಕ. ಹಸಿರು ಬಣ್ಣ ನಿಸರ್ಗದ ಸಮೃದ್ಧಿಗೆ ಪ್ರತೀಕ, ಕಣ್ಣುಗಳಿಗೆ ಹಿತಕರವಾಗಿರುತ್ತದೆ.
– ಶೈಲಜಾ ರಾವ್.