“ಅಬ್ಬಾ, ಕೊಂಚ ಟೈಮ್ ಸಿಕ್ತು ಸುತ್ತಾಡೋಕೆ. ಹೆವಿ ವರ್ಕ್‌ನಿಂದ ಬೋರ್‌ ಆಗಿಬಿಟ್ಟಿದೆ,” ಎನ್ನುತ್ತಾ ಸುಧಾಕರ್‌ ಕೆರೆಯ ಬಳಿ ಕಾರನ್ನು ತಿರುಗಿಸಿದ. ರಮಾ ಅತ್ತ ಗಮನಿಸಲಿಲ್ಲ.

“ಹವಾಮಾನ ಸುಂದರವಾಗಿದೆ. ಬಾ, ಸ್ವಲ್ಪ ಹೊತ್ತು ಸುತ್ತಾಡಿ ಬರೋಣ.”

“ಆದರೆ ಸರ್‌……” ರಮಾ ತಡವರಿಸಿದಳು. ಒಬ್ಬ ಗಂಡಸಿನೊಂದಿಗೆ ಏಕಾಂತದಲ್ಲಿ ಸುತ್ತಾಡುವ ಅವಕಾಶ ಅವಳಿಗೆ ಈಗಲೇ ಸಿಕ್ಕಿದ್ದು. ಅವಳಿಗೆ ಆಗತಾನೇ ಮದುವೆಯಾಗಿತ್ತು. ಅವಳು ಗಂಡ ನಾಗೇಶನೊಂದಿಗೆ ಎಲ್ಲೂ ಹೋಗಿರಲಿಲ್ಲ.

“ಏನು ಯೋಚಿಸ್ತಿದ್ದೀಯ? ಹಿಂದೆಂದೂ ಕೆರೆ ನೋಡಿರಲಿಲ್ವಾ? ನೋಡು ಎಷ್ಟು ಚೆನ್ನಾಗಿ ಪಿಕ್ನಿಕ್‌ ಸ್ಪಾಟ್‌ ಮಾಡಿದ್ದಾರೆ,” ಸುಧಾಕರ್‌ ಖುಷಿಯಿಂದ ಹೇಳಿದ.

“ಮದುವೆಯಾದ ತಕ್ಷಣವೇ ನನಗೆ ಕೆಲಸ ಸಿಗ್ತು. ನಾನು ಮತ್ತು ನನ್ನ ಗಂಡ ನಾಗೇಶ್‌ ಎಲ್ಲಿಯೂ ಸುತ್ತಾಡಲು ಹೋಗಲಾಗಲಿಲ್ಲ. ನಾವಿಬ್ಬರೂ ಈಗಲೂ ಅಪರಿಚಿತರಂತಿದ್ದೀವಿ,” ರಮಾ ಹೇಳಿದಳು.

ಸುಧಾಕರ್‌ ರಮಾಳ ಕೈಯನ್ನು ತನ್ನ ಕೈಗೆ ತೆಗೆದುಕೊಂಡು, “ಧೈರ್ಯವಾಗಿರುವ. ಎಲ್ಲ ಸರಿಹೋಗುತ್ತೆ ರಮಾ,” ಎಂದ.

ರಮಾಳ ಕೈಗಳಲ್ಲಿನ ಮೆಹೆಂದಿ ಇನ್ನೂ ತಾಜಾ ಆಗಿರುವುದನ್ನು ಸುಧಾಕರ್‌ ನೋಡಿದ. ಅವನು ನಗುತ್ತಾ, “ಮೆಹೆಂದಿ ಡಾರ್ಕ್‌ಆಗಿದ್ದರೆ ಅದರರ್ಥ ಏನೂಂತ ಗೊತ್ತಾ?” ಎಂದ.

“ಏನು?” ರಮಾ ಮುಗ್ಧತೆಯಿಂದ ಕಣ್ಣರಳಿಸಿದಳು.

“ಅವಳಿಗೆ ಬಹಳ ಪ್ರೀತಿಸುವ ಗಂಡ ಸಿಗುತ್ತಾನೆ.”

“ಇಲ್ಲ. ಅವನು ಬಹಳ ಸೋಮಾರಿ ಹಾಗೂ ಹಟಮಾರಿ ಆಗಿರುತ್ತಾನೆ,” ಎಂದು ಅವಳು ನಗತೊಡಗಿದಳು. ಸುಧಾಕರ್‌ ಕಾರು ನಿಲ್ಲಿಸಿದ. ಇಬ್ಬರೂ ಕೆರೆಯ ತೀರದಲ್ಲಿ ಇಳಿದರು. ರಮಾ ಬಗ್ಗಿ ನೀರು ಎರಚಿದಾಗ ಸುಧಾಕರ್‌ ಹಿಂದಕ್ಕೆ ಸರಿದ. ಆದರೆ ತನ್ನನ್ನು ಸಂಭಾಳಿಸಿಕೊಳ್ಳಲಾಗದೆ ನೀರಲ್ಲಿ ಬಿದ್ದ. ರಮಾ ಅವನನ್ನು ಕಂಡು ನಗತೊಡಗಿದಳು. ಸುಧಾಕರ್‌ ನೀರಲ್ಲಿ ನಿಂತು ಅವಳ ನಗು ಹಾಗೂ ಅಪ್ರತಿಮ ಸೌಂದರ್ಯ ಕಂಡು ಮುಗ್ಧನಾಗಿ ನೋಡುತ್ತಲೇ ಇದ್ದ. ರಮಾ ಕೈ ಚಾಚಿದಾಗ ಅವನು ನಿದ್ದೆಯಿಂದೆಂಬಂತೆ ಎಚ್ಚರಗೊಂಡ.

ಅವನು ಅವಳ ಕೈ ಹಿಡಿದುಕೊಂಡು ತುಂಟತನದಿಂದ ಹೇಳಿದ, “ನಿನ್ನನ್ನೂ ಕೆರೇಲಿ ಬೀಳಿಸ್ಲಾ?”

“ಬೇಡ ಬೇಡ. ನನ್ನಾಣೆ…..”

ಸುಧಾಕರ್‌ ನಗುತ್ತಾ ಹೊರಬಂದ, “ನೀನು ಆಣೆ ಇಟ್ಟಿದ್ದಕ್ಕೆ ಬಿಟ್ಟೆ. ಇಲ್ಲಾಂದ್ರೆ…..”

“ಹೌದಾ…. ಅದು ಸರಿ ಈಗ ಆಫೀಸಿಗೆ ಹೇಗೆ ಬರ್ತೀರಿ?”

“ನಡಿ, ಮಾಲ್ ಗೆ ಹೋಗಿ ಬಟ್ಟೆ ಖರೀದಿಸ್ತೀನಿ. ಅಲ್ಲೇ ಡ್ರೆಸ್ಸಿಂಗ್‌ ರೂಮಿನಲ್ಲಿ ಬದಲಿಸ್ತೀನಿ.”

“ಸರಿ.”

ಸುಧಾಕರ್‌ ಬಟ್ಟೆ ಖರೀದಿಸಿ ಬದಲಾಯಿಸಲು ಡ್ರೆಸ್ಸಿಂಗ್‌ ರೂಮಿಗೆ ಹೋದ. ರಮಾ ಅತ್ತಿತ್ತ ಸುತ್ತಾಡುತ್ತಾ ಇತರ ವಸ್ತುಗಳನ್ನು ನೋಡತೊಡಗಿದಳು. ಪಕ್ಕದಲ್ಲೇ ಜ್ಯೂವೆಲರಿ ಶಾಪ್‌ ಇತ್ತು.`ವಾವ್‌, ಬಳೆಗಳ ಸೆಟ್‌ ಎಷ್ಟು ಸುಂದರವಾಗಿದೆ. ಈ ಫೀರೋಜಿ ಸೆಟ್ ಅಂತೂ ಬಹಳ ಸುಂದರವಾಗಿದೆ’, ಎಂದುಕೊಂಡು, “ಎಕ್ಸ್ ಕ್ಯೂಸ್‌ ಮಿ, ಈ ಫೀರೋಜಿ ಸೆಟ್‌ ಎಷ್ಟಾಗುತ್ತೆ?” ಎಂದು ಕೇಳಿದಳು.

“9,900 ರೂ. ಮೇಡಂ.”

“ಅಬ್ಬಾ, ಬೆಲೆ ಹೆಚ್ಚಾಯ್ತು. ಆದರೆ ಬಹಳ ಚೆನ್ನಾಗಿದೆ. ಥ್ಯಾಂಕ್ಯು. ಇನ್ನೊಂದು ಸಾರಿ ತಗೋತೀನಿ,” ಎಂದು ನಗುತ್ತಾ ಹೊರಟಳು.

“ಯಾಕೆ ರಮಾ ಹೀಗೆ ಹೇಳ್ತೀಯ. ನಿನ್ನ ಮುಂದೆ ಇದೇನೂ ಅಲ್ಲ,” ಹಿಂದಿನಿಂದ ಬಂದ ಸುಧಾಕರ್‌ ಅವಳ ಹೆಗಲ ಮೇಲೆ ಕೈ ಇಡುತ್ತಾ ಹೇಳಿದ.

“ಇದನ್ನು ಪ್ಯಾಕ್‌ ಮಾಡಿ,” ಅಂಗಡಿಯವನಿಗೆ ಸುಧಾಕರ್‌ ಹೇಳಿದ.

“ಸಾರ್‌, ನೀವು…..” ರಮಾ ಅವನತ್ತ ಆಶ್ಚರ್ಯದಿಂದ ನೋಡಿದಳು. ಅವನು ಮುಗುಳ್ನಗುತ್ತಿದ್ದ.

“ನಿನ್ನ ಮದುವೆಗೆ ನನ್ನದೊಂದು ಸಣ್ಣ ಗಿಫ್ಟ್ ಇದು. ನೀನು ನನ್ನನ್ನು ಮದುವೆಗಂತೂ ಕರೀಲಿಲ್ಲ. ಪಾರ್ಟಿ ಅಂತೂ ಕೊಡಲೇಬೇಕು,” ಅವಳು ಗೊಂದಲಗೊಂಡು ನಿಂತಿದ್ದಳು.

“ಸರ್‌, ಇದು ಚೆನ್ನಾಗಿರಲ್ಲ……”

“ಹೆದರಬೇಡ. ಸಂಬಳದಲ್ಲೇನೂ ಹಿಡಿಯೋಲ್ಲ,” ಅವನು ಗಂಭೀರವಾಗಿ ಹೇಳಿ ಅಲ್ಲಿಂದ ಹೊರಟುಬಿಟ್ಟ.

“ನೋಡಿ. ಇದನ್ನು ವಾಪಸ್‌ ತಗೊಳ್ಳಿ. ಇದು ನನಗೆ ಬೇಡ. ನಾಳೆ ಅವರಿಗೆ ದುಡ್ಡು ತಲುಪಿಸ್ತೀನಿ.”

“ಮೇಡಂ, ರಸೀತಿ ಬರೆದಿದ್ದಾಯ್ತು. ನಾವು ವಾಪಸ್‌ ತಗೊಳ್ಳೋಕಾಗಲ್ಲ. ಇಟ್ಕೊಳ್ಳಿ ಪರವಾಗಿಲ್ಲ. ಅವರು ಅಷ್ಟು ಪ್ರೀತಿಯಿಂದ ಕೊಡಿಸಿದ್ದಾರೆ….” ಎಂದ ಅಂಗಡಿಯಾತ.

ಅವನ ವ್ಯಂಗ್ಯ ನಗುವಿನ ಅರ್ಥ ರಮಾಗೆ ತಿಳಿದಿತ್ತು. ಅವಳು ಏನೂ ಮಾತಾಡದೆ ಸುಧಾಕರ್‌ ಹಿಂದೆ ಹೊರಟಳು.

“ಇನ್ನೂ ನಾನು ಹೊಸದಾಗಿ ಆ ಕಂಪನಿಗೆ ಸೇರಿಕೊಂಡಿರೋದು. ಅವರು ನನ್ನ ಬಾಸ್‌. ಬೇಡ ಅಂತ ಸಾರಾಸಗಟಾಗಿ ಹೇಳಿ ಅವರಿಗೆ ಅವಮಾನ ಮಾಡೋಕೆ ಇಷ್ಟ ಆಗ್ಲಿಲ್ಲಾರಿ,” ಮನೆಗೆ ಬಂದ ರಮಾ ಗಂಡ ನಾಗೇಶನಿಗೆ ಹೇಳಿದಳು.

“ಆಯ್ತು ರಮಾ. ನಾವು ಏನಾದರೂ ನೆಪ ಹೇಳಿ ಅವರ ಹಣಾನ ವಾಪಸ್‌ ಮಾಡೋಣ. ನನಗೆ ನಿನ್ನ ಮೇಲೆ ಸಂಪೂರ್ಣ ನಂಬಿಕೆ ಇದೆ.”

ದಿನಗಳು ಕಳೆಯತೊಡಗಿದವು. ನಾಗೇಶನಿಗೆ ಒಂದು ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಸಿಕ್ಕಿತು. ಅವನು ತನ್ನ ಕೆಲಸದಲ್ಲಿ ವ್ಯಸ್ತನಾಗಿಬಿಟ್ಟ. ಗಂಡ ಹೆಂಡತಿಯರಿಗೆ ಪರಸ್ಪರ ಭೇಟಿಯಾಗಲೂ ಸಮಯ ಸಿಗುತ್ತಿರಲಿಲ್ಲ. ಬರುವಾಗಲೇ ಸುಸ್ತಾಗಿರುತ್ತಿದ್ದರು. ಊಟ, ತಿಂಡಿ ತಿಂದು ಮಲಗಿಬಿಡುತ್ತಿದ್ದರು.

ಇಬ್ಬರೂ ಹಗಲೂ ರಾತ್ರಿ ದುಡಿಯುತ್ತಿದ್ದರಿಂದ ಅವರ ಪರಿಶ್ರಮಕ್ಕೆ ಫಲ ಸಿಕ್ಕಿತು. ಪ್ರಮೋಶನ್‌ ಸಿಕ್ಕಿತು. ಇಬ್ಬರ ಬಳಿಯೂ ಓಡಾಡಲು ಗಾಡಿಗಳಿದ್ದವು.

ಮ್ಯಾನೇಜರ್‌ ಸುಧಾಕರ್‌ಗೆ ಮದುವೆಯಾಗಿದ್ದರೂ ಏನಾದರೊಂದು ನೆಪ ಹೇಳಿ ರಮಾಳ ಹಿಂದೆ ಮುಂದೆ ಸುತ್ತಾಡುತ್ತಿದ್ದ. ತನ್ನ ಪರ್ಸನಲ್ ಶಾಪಿಂಗ್‌ಗೆ ಕೂಡ ರಮಾಳನ್ನು ಒತ್ತಾಯಿಸಿ ಕರೆದೊಯ್ಯುತ್ತಿದ್ದ. ನಂತರ ಹೋಟೆಲ್‌ನಲ್ಲಿ ಊಟ, ಅದು ಇದೂಂತ ನೂರೆಂಟು ಮಾತು. ರಮಾ ಉದ್ಯೋಗದಲ್ಲಿ ಮೇಲೆ ಬರಲು ಬಹಳ ಇಚ್ಛಿಸುತ್ತಿದ್ದರಿಂದ ಸುಧಾಕರ್‌ಗೆ ಬೇಡವೆಂದು ಹೇಳಲಾಗುತ್ತಿರಲಿಲ್ಲ. ಪ್ರಮೋಶನ್‌ಗಾಗಿ ಬಾಸ್‌ನ್ನು ಖುಷಿಯಾಗಿಡಬೇಕಿತ್ತು. ಗಿಫ್ಟ್ ಸೆಟ್‌ನ ಹಣ ತೆಗೆದುಕೊಳ್ಳಲೂ ಅವನು ಸ್ಪಷ್ಟವಾಗಿ ನಿರಾಕರಿಸಿದ್ದ.

`ಅವರು ಎಷ್ಟೊಂದು ಕೇರಿಂಗ್‌….. ಸದಾ ನನ್ನ ಬಗ್ಗೆ ಕಾಳಜಿ. ನನ್ನ ಬಗ್ಗೆ ಅವರ ಕಣ್ಣುಗಳಲ್ಲಿ ಎಷ್ಟು ಪ್ರೀತಿ ತುಂಬಿರುತ್ತದೆ. ಅದೇ ನಾಗೇಶ್‌, ನಾನು ಏನು ಧರಿಸಿದ್ದೀನಿ, ನನಗೇನು ತೊಂದರೆ ಇದೆ, ನನಗೇನು ಅವಶ್ಯಕತೆ ಇದೇಂತ ಏನೂ ಕೇಳಲ್ಲ. ಅವರಿಗೇನು ಬೇಕೂಂತ ಹೇಳ್ತಿರ್ತಾರೆ ಅಷ್ಟೆ,’ ಎಂದು ರಮಾ ಯೋಚಿಸುತ್ತಿದ್ದಳು.

“ರಮಾ, ನಾಳೆ ಬೆಳಗ್ಗೆ ಬ್ಲೂ ಶರ್ಟ್‌, ವೈಟ್‌ ಪ್ಯಾಂಟ್‌ ಧರಿಸಿ ಹೋಗಬೇಕು. ಬೆಳಗ್ಗೆ ಬೇಗ ಮನೆ ಬಿಡಬೇಕು. ಟಿಫಿನ್‌ ಬಾಕ್ಸ್ ಕೊಟ್ಟುಬಿಡು.”

“ನನಗೂ ಆಯಾಸ ಆಗಿದೆ. ಇವತ್ತು ಆಫೀಸಿನಲ್ಲಿ ವಿಪರೀತ ಕೆಲಸ. ಕೆಲವು ಇಂಪಾರ್ಟೆಂಟ್‌ ಫೈಲ್‌ಗಳನ್ನು ಮುಗಿಸಬೇಕು. ಕಂಪ್ಯೂಟರ್‌ನಲ್ಲಿ 2 ಗಂಟೆ ಕೆಲಸ ಇದೆ. ಕಾಫಿ, ತಿಂಡೀನೂ ಮಾಡ್ಬೇಕು,” ಅವಳು ಬ್ಯಾಗನ್ನು ಟೇಬಲ್ ಮೇಲೆ ಎಸೆಯುತ್ತಾ ಹೇಳಿದಳು, “ನಾಳೆ ನೀವು ಕ್ಯಾಂಟೀನ್‌ನಲ್ಲೇ ಊಟ ಮಾಡಿ. ಹೋಗುವಾಗ ಧೋಬಿಗೆ ಬಟ್ಟೆ ಕೊಟ್ಟು ಹೋಗಿ. ಬರುವಾಗ ಟೇಲರ್‌ನಿಂದ ನನ್ನ ಬ್ಲೌಸ್‌ ತೆಗೆದುಕೊಂಡು ಬನ್ನಿ. ನಾನು ಬಟ್ಟೆ ಚೇಂಜ್‌ ಮಾಡಿ ಅಡುಗೆಮನೆಗೆ ಹೋಗ್ತೀನಿ.”

“ನಿನಗೆ ಮಾತ್ರ ಅಲ್ಲ, ನನಗೂ ಆಯಾಸ ಆಗಿದೆ. ನಾನೇನು ಆಫೀಸಿನಲ್ಲಿ ರೆಸ್ಟ್ ತಗೊಂಡು ಬರಲಿಲ್ಲ. ನಿನ್ನ ಕೆಲಸ ನೀನೇ ಮಾಡ್ಕೊ,” ನಾಗೇಶ್‌ ರೇಗಿದ.

“ನಾನು ಅದನ್ನೇ ಹೇಳ್ತಿರೋದು. ಇಬ್ಬರೂ ವರ್ಕ್‌ ಮಾಡ್ತಿದ್ದೀವಿ. ಒಬ್ಬರು ಇನ್ನೊಬ್ಬರ ಮೇಲೆ ಯಾಕೆ ಡಿಪೆಂಡ್‌ ಆಗ್ಬೇಕು?”

“ಆಯ್ತು. ನಾನು ಮಾಡ್ಕೋತೀನಿ. ನಿನ್ನ ಅವಶ್ಯಕತೆಯೇ ನನಗಿಲ್ಲ. ಊಟಾನೂ ಹೊರಗಡೇನೇ ಮಾಡ್ತೀನಿ.”

ಅವರಿಬ್ಬರ ಮಧ್ಯೆ ಪ್ರೀತಿ ಕಣ್ಮರೆಯಾಗುತ್ತಾ ಹೋಗುತ್ತಿತ್ತು. ಅದರ ಜಾಗದಲ್ಲಿ ದ್ವೇಷ ಮನೆ ಮಾಡುತ್ತಿತ್ತು.

“ನೀನ್ಯಾಕೆ ಕೆಲಸ ಬಿಡಲ್ಲ? ಈಗ ನನಗೆ ಒಳ್ಳೆ ಕೆಲಸ ಸಿಕ್ಕಿದೆ. ಸಂಬಳ ಕೂಡ ಚೆನ್ನಾಗಿದೆ.”

“ಆದರೆ ಇಬ್ಬರ ಸಂಬಳ ಸೇರೀನೇ ಮನೆ ನಡೀತಿರೋದು. ಇಲ್ಲದಿದ್ರೆ ವೈಭವದ ಸೋಫಾ, ಕಲರ್‌ ಟಿವಿ, ಹೊಸ ಗಾಡಿಗಳನ್ನು ಇಷ್ಟು ಬೇಗ ತಗೊಳ್ಳೋಕೆ ಆಗ್ತಿರಲಿಲ್ಲ.”

“ಏನೇ ಹೇಳು. ನಮ್ಮದೂ ಒಂದು ಬದುಕಾ? ನಮಗೆ ಪರಸ್ಪರ ಮಾತಾಡೋಕೂ ಪುರಸತ್ತು ಸಿಗಲ್ಲ. ಮನೆಯಲ್ಲಿ ಇದ್ರೂ ನಮ್ಮಿಬ್ಬರ ಮನಸ್ಸು ಇನ್ನೆಲ್ಲೋ ಇರುತ್ತೆ. ನಾಳೆ ಮಕ್ಕಳು ಏನಾದರೂ ಆದ್ರೆ….”

“ಮಕ್ಕಳು…. ನೀವು ಈಗಲೇ ಅದರ ಬಗ್ಗೆ ಯಾಕೆ ಯೋಚಿಸ್ತೀರಿ? ಈಗ್ತಾನೇ ನನ್ನ ಕೆರಿಯರ್‌ಗೆ ಒಳ್ಳೆಯ ಅವಕಾಶಗಳು ಸಿಗ್ತಿವೆ.”

“ಮನೆ ನೋಡಿಕೊಳ್ಳೋದು…..?”

“ಮನೆ ನೋಡಿಕೊಳ್ಳೋಕೆ ನನ್ನ ಕೆರಿಯರ್‌ ಹಾಳು ಮಾಡಿಕೊಳ್ಲಾ? ಆ ಕೆಲಸನ್ನು ಯಾವ ಕೆಲಸದವಳಾದ್ರೂ ಮಾಡ್ತಾಳೆ.”

“ಅವಳು ಬಂದಾಗ ತಾನೇ? ಮನೇಲಿ ಎಲ್ಲ ಪದಾರ್ಥಗಳೂ ಎಲ್ಲೆಂದರಲ್ಲಿ ಬಿದ್ದಿರುತ್ತವೆ. ಬೇಕಾದ ಸಾಮಾನು ಕೈಗೆ ಸಿಗಲ್ಲ.”

“ನೀವು ನನಗೆ ಹೆಲ್ಪ್ ಮಾಡಬೇಕು. ನೀವಂತೂ ಮನೆಗೆ ಬಂದು ಆರಾಮಾಗಿ ಮಲಗಿಬಿಡ್ತೀರಿ. ನನಗೆ ರಾಶಿ ಕೆಲಸ ಬಿದ್ದಿರುತ್ತೆ. ಹೇಗೋ ಒಬ್ಬಳೇ ನಿಭಾಯಿಸ್ತಿದ್ದೀನಿ.”

“ಹಾಗೆ ಮಾಡೋ ಅಗತ್ಯ ಏನು? ಅದನ್ನೇ ನಾನು ಹೇಳ್ತಿರೋದು.”

“ಅಂದ್ರೆ, ನಾನು ಕೆಲಸ ಬಿಟ್ಟು ಬಿಡ್ಲಾ?” ರಮಾ ಚೀರಿದಳು.

ಆಮೇಲೆ ಅಲ್ಲಿ ಮೌನ ಆವರಿಸಿಬಿಟ್ಟಿತು, ನಾಗೇಶ್‌ ಮತ್ತೆ ಮಾತಾಡಲಿಲ್ಲ.

“ನಿಮ್ಮ ಜೊತೆ ಕೂತು ಮಾತಾಡ್ತಾ ಇದ್ದರೆ ಎಷ್ಟು ನೆಮ್ಮದಿ ಸಿಗುತ್ತೆ. ಮತ್ತೆ ನಾಗೇಶ್‌ ಇದ್ದಾರೆ. ನಾನು ಹೇಳೋದೆಲ್ಲಾ ಅವರಿಗೆ ಕೆಟ್ಟದಾಗಿ ಕಾಣಿಸುತ್ತೆ,” ರಮಾ ಬಾಸ್‌ಗೆ ಹೇಳಿದಳು. ಅವನ ಆತ್ಮೀಯತೆ ಕಂಡು ಅವಳು ಅವನೊಂದಿಗೆ ತನ್ನತನವನ್ನು ಕಂಡುಕೊಂಡಳು.

“ಇಷ್ಟು ಸುಂದರಿಯಾಗಿ, ಸುಶೀಲಳಾಗಿರುವ ಇಂಟಲಿಜೆಂಟ್‌ ಲೈಫ್‌ ನನಗೆ ಸಿಕ್ಕಿದ್ರೆ ಧನ್ಯನಾಗುತ್ತಿದ್ದೆ,” ಅವನು ದುಃಖದಿಂದ ಹೇಳಿದ.

“ಆದರೆ ಒಂದು, ನಿನ್ನ ಜೊತೆ ಕೆಲವು ಕ್ಷಣಗಳನ್ನಾದರೂ ಕಳೆಯೋದೂಂದ್ರೆ ನನ್ನ ಬದುಕಿಗೆ ಪ್ರಾಣ ಸಿಕ್ಕ ಹಾಗೆ,” ಅವನು ಭಾವಾವೇಶದಿಂದ ರಮಾಳ ಕೈಯನ್ನು ಹಿಡಿದುಕೊಂಡ. ರಮಾಳಿಗೆ ಇದೇ ಸರಿ ಅನ್ನಿಸಿತು.

ಅತ್ತ ನಾಗೇಶ್‌ ತನ್ನ ಕಂಪನಿಯ ಸಹೋದ್ಯೋಗಿ ಮೀರಾ ಮಾಡಿಕೊಟ್ಟ ಆಲೂ ಪರೋಟ ತಿಂದು ಧನ್ಯನಾದ.

“ನನ್ನ ಹೆಂಡ್ತಿ ಅಂತೂ ಅವಳ ಬಾಸ್‌ನ ಅಸಿಸ್ಟೆಂಟ್‌ ಆಗಿಬಿಟ್ಟಿದ್ದಾಳೆ. ಅವಳಿಂದ ಮನೆ ಕೆಲಸ ಮಾಡೋಕಾಗಲ್ಲ. ಪರೋಟ ಮಾಡೋದಿರಲಿ, ಟಿಫಿನ್‌ ಕೂಡ ಆಫೀಸ್‌ನಲ್ಲಿ ಮಾಡಿ. ಬಾಸ್‌ ತುಂಬಾ ಕೆಲಸ ಕೊಟ್ಟಿದ್ದಾರೆ ಅಂತಾಳೆ.”

“ಅದಕ್ಯಾಕೆ ಬೇಜಾರು ಮಾಡ್ಕೋತೀರಿ? ನಾನಿಲ್ವಾ? ಇನ್ನೂ 2 ಪರೋಟಾ ತಗೊಂಡು ಬರ್ತೀನಿ ನಿಮಗೆ. ನನ್ನ ಗಂಡ ಅಂತೂ ನಾನು ಮಾಡಿದ ಪರೋಟಾ ಇಷ್ಟಪಡಲ್ಲ. ಅವರಿಗೆ ಹೋಟೆಲ್ ‌ತಿಂಡೀನೇ ಇಷ್ಟ.”

ಮೀರಾ ಹೇಳಿದ್ದನ್ನು ಕೇಳಿ ನಾಗೇಶ್‌ ನಗುತ್ತಾ,“ಒಂದುವೇಳೆ ನೀನು ನನ್ನ ಹೆಂಡತಿ ಆಗಿದ್ದಿದ್ರೆ ಎಷ್ಟು ಚೆನ್ನಾಗಿತ್ತು! ನಾನು ಹಾಗೂ ನೀನು ಯೋಚಿಸುವ ರೀತಿ ಒಂದೇ ತರಹ ಇದೆ,” ಎಂದ.

ನಾಗೇಶ್‌ ಹಾಗೂ ರಮಾ ಪರಸ್ಪರ ದೂರವಾಗುತ್ತಿದ್ದರು. ನಾಗೇಶ್‌ ಮತ್ತು ಮೀರಾ ಹತ್ತಿರವಾಗುತ್ತಿದ್ದರು. ಅತ್ತ ರಮಾ ಹಾಗೂ ಸುಧಾಕರ್‌ರ ಪ್ರೀತಿಯ ಬಳ್ಳಿ ಹರಡತೊಡಗಿತ್ತು. ಹೊಸ ಜೋಡಿಗಳು ನಿಧಾನವಾಗಿ ಎಷ್ಟು ಹತ್ತಿರವಾದರೆಂದರೆ ಒಂದು ದಿನವಾದರೂ ಜೊತೆಗೆ ಕಳೆಯದಿದ್ದರೆ ಏನಾಗುತ್ತದೋ ಅನ್ನಿಸಿತ್ತು. ಅವರು ತಮ್ಮ ಮರ್ಯಾದೆಯ ಹದ್ದನ್ನು ಮೀರುವಷ್ಟರಲ್ಲಿ ಒಂದು ಆಕಸ್ಮಿಕ ಉಂಟಾಯಿತು.

kaflink-story-2

ಕಂಪನಿಯ ಕ್ಯಾಂಟೀನ್‌ನಲ್ಲಿ ಕುಳಿತಿದ್ದ ನಾಗೇಶ್‌ ಇದ್ದಕ್ಕಿದ್ದಂತೆ ಕೆಳಗುರುಳಿ ಬಿದ್ದ. ಅವನು ಒಂದೇ ಸಮನೆ ಕೆಮ್ಮುತ್ತಿದ್ದ. ಬಹಳ ಕಷ್ಟದಿಂದ ಉಸಿರಾಡುತ್ತಿದ್ದ. ಮೀರಾಗೆ ಗಾಬರಿಯಾಯಿತು. ನಾಗೇಶನ ಬಾಯಿಂದ ನೊರೆ ಹಾಗೂ ಕೊಂಚ ರಕ್ತ ಹೊರಬಂತು.

ಜೊತೆಗಾರರ ಸಹಾಯದಿಂದ ಅವನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತು. ಡಾಕ್ಟರ್‌ ಸಂಪೂರ್ಣವಾಗಿ ಚೆಕಪ್‌ ಮಾಡಿದರು. ರಿಪೋರ್ಟ್‌ನಲ್ಲಿ ಟಿ.ಬಿ. ಎಂದು ಸಾಬೀತಾಯಿತು. ಮೀರಾ ಸ್ತಬ್ಧಳಾಗಿದ್ದಳು. ಟಿ.ಬಿ. ಸಾಕಷ್ಟು ಅಡ್ವಾನ್ಸ್ಡ್ ಸ್ಟೇಜ್‌ನಲ್ಲಿತ್ತು. ಆದರೂ ಟ್ರೀಟ್‌ಮೆಂಟ್‌ನಿಂದ ಸರಿಹೋಗುವ ಸಂಭವವಿತ್ತು. ಆದರೆ ಅವನನ್ನು ಚೆನ್ನಾಗಿ ಗಮನಿಸಿಕೊಳ್ಳಬೇಕಿತ್ತು. ನಿಯಮಿತವಾಗಿ ಪೌಷ್ಟಿಕ ಆಹಾರ, ಔಷಧಿ ಒದಗಿಸಬೇಕಿತ್ತು. ಡಾಕ್ಟರ್‌ ಅವನನ್ನು 15 ದಿನಗಳ ಕಾಲ ಆಸ್ಪತ್ರೆಯಲ್ಲೇ ಇರಬೇಕೆಂದರು.

ಮೀರಾ 1-2 ದಿನಗಳು ಮಾತ್ರ ಯೋಗಕ್ಷೇಮ ವಿಚಾರಿಸಲು ಬಂದಳು. ಮುಖಕ್ಕೆ ಸೆರಗು ಅಡ್ಡ ಹಿಡಿದು ದೂರದಿಂದಲೇ ಅವನನ್ನು ವಿಚಾರಿಸಿ ಹೊರಟುಹೋಗುತ್ತಿದ್ದಳು. ಅವಳು ಸ್ವಲ್ಪ ಹೊತ್ತು ತನ್ನ ಬಳಿಯೇ ಕುಳಿತಿರಲಿ, ಮೊದಲು ತಿನ್ನಿಸುತ್ತಿದ್ದಂತೆ ಪ್ರೀತಿಯಿಂದ ತಿನ್ನಿಸಲಿ ಎಂದು ಬಯಸುತ್ತಿದ್ದ. ಆದರೆ ಮೀರಾ 1-2 ದಿನಗಳು ಮಾತ್ರ ಟಿಫಿನ್‌ ಪಾರ್ಸಲ್ ತಂದುಕೊಟ್ಟಳು. ನಂತರ,  “ಇಷ್ಟು ಕೊಳೆ, ಕಸದಲ್ಲಿ ಬರೋಕೆ ನನಗೆ ಆಗಲ್ಲ,” ಎಂದು ಹುಬ್ಬುಗಂಟಿಕ್ಕಿ ಹೊರಟುಬಿಟ್ಟಳು.

ಇತ್ತ ರಮಾ ತನ್ನ ಬಾಸ್‌ ಸುಧಾಕರ್‌ನನ್ನು ಉಬ್ಬಿಸುತ್ತಿದ್ದಳು, “ಸರ್‌, ನೋಡಿ ನನ್ನ ಹುಟ್ಟಿದ ಹಬ್ಬಕ್ಕೆ ನೀವು ಕೊಟ್ಟಿರೋ ಸೀರೆಯನ್ನೇ ಉಟ್ಟಿದ್ದೀನಿ. ಚೆನ್ನಾಗಿ ಕಾಣ್ತಿದ್ದೀನಾ?” ಎಂದು ಕೇಳಿದಳು.

“ನಿಜ ಹೇಳಬೇಕೂಂದ್ರೆ ಸೀರೆಯಲ್ಲಿ ನೀನು ಇನ್ನೂ ಚೆನ್ನಾಗಿ ಕಾಣಿಸ್ತೀಯ,” ಸುಧಾಕರ್‌ ಅವಳ ಸೆರಗು ಹಿಡಿದು ಹಿಂದೆ ಬಂದು ಸುತ್ತುತ್ತಾ ಅವಳ ತಲೆಯ ಮೇಲೆ ಹೊದಿಸುತ್ತಿದ್ದ, “ಅರೆ, ಇದೇನಿದು? ನಿನ್ನ ಬೆನ್ನಿನ ಮೇಲೆ ಬಿಳಿ ಮಚ್ಚೆ ಇದೆ….” ಎನ್ನುತ್ತಾ ಕಣ್ಣುಗಳನ್ನು ಮುಚ್ಚಿಕೊಂಡ.

“ಹೌದಾ, ನನಗೆ ಗೊತ್ತಿಲ್ಲ,” ರಮಾ ಹೇಳಿದಳು.

“ನೀನು ಇಷ್ಟು ಡೀಪ್‌ ನೆಕ್‌ ಬ್ಲೌಸ್‌ ಧರಿಸದಿದ್ದರೆ ನನಗೂ ಗೊತ್ತಾಗುತ್ತಿರಲಿಲ್ಲ,” ಸುಧಾಕರ್‌ ಮುಖ ಸಿಂಡರಿಸಿದ.

`ಆದ್ರೆ ನಾಗೇಶ್‌ ಎಂದೂ ಏನೂ ಹೇಳಿರಲಿಲ್ಲ,’ ಅವಳು ಯೋಚಿಸುತ್ತಿದ್ದಳು.

“ಈ ವೈಟ್‌ ಸ್ಪಾಟ್‌ ಚೆನ್ನಾಗಿರಲ್ಲ. ಇದನ್ನು ಡಾಕ್ಟರ್‌ಗೆ ತೋರಿಸಿ ಟ್ರೀಟ್‌ಮೆಂಟ್‌ ತಗೋ. ಇಲ್ಲಾಂದರೆ ಇದು ಇಡೀ ದೇಹದಲ್ಲಿ ಹರಡಿಬಿಡುತ್ತೆ,” ಸುಧಾಕರ್‌ ಅನ್ಯಮನಸ್ಕನಾಗಿ ಹೇಳಿದ, “ಸರಿ ನಾನು ಹೊರಡ್ತೀನಿ. ನನಗೆ ಅರ್ಜೆಂಟ್‌ ಕೆಲಸ ನೆನಪಿಗೆ ಬಂತು. ನಿನಗೆ ಎಲ್ಲಿ ಡ್ರಾಪ್‌ ಮಾಡಬೇಕು ಹೇಳು. ಅಲ್ಲಿ ಬಿಟ್ಟು ಹೋಗ್ತೀನಿ,” ಎಂದ.

“ನೋ ಸರ್‌ ಥ್ಯಾಂಕ್ಸ್. ಪಕ್ಕದ ಶಾಪಿಂಗ್‌ ಮಾಲ್‌ನಿಂದ ನಾನು ಸ್ವಲ್ಪ ಸಾಮಾನು ತಗೋಬೇಕು. ನಾನು ಅಲ್ಲಿಗೆ ಹೋಗ್ತೀನಿ. ನೀವು ಹೊರಡಿ ಪರವಾಗಿಲ್ಲ. ನಂದು ಲೇಟಾಗುತ್ತೆ,” ಸುಧಾಕರನ ಬದಲಾದ ವರ್ತನೆಯನ್ನು ಅವಳು ಚೆನ್ನಾಗಿ ಗುರುತಿಸಿದ್ದಳು.

ರಮಾ ಓಡುತ್ತಾ ಮನೆಗೆ ಬಂದಳು. ಅವಳು ಸೀರೆ ಬಿಚ್ಚಿ ಕನ್ನಡಿಯಲ್ಲಿ ತನ್ನ ಬೆನ್ನು ನೋಡಿಕೊಳ್ಳಲು ಪ್ರಯತ್ನಿಸಿದಳು. ದಿನನಿತ್ಯದ ಜಂಜಾಟದಲ್ಲಿ ಅವಳೆಂದೂ ತನ್ನ ಬೆನ್ನು ನೋಡಿಕೊಂಡಿರಲಿಲ್ಲ. ಬೆನ್ನಿನ ಮಧ್ಯದಲ್ಲಿ ಬಿಳಿಯ ಮಚ್ಚೆ ಇತ್ತು. ನಾಗೇಶ್‌ ಅವಳಿಗೆ ಅದರ ಬಗ್ಗೆ ಎಂದೂ ಹೇಳಿರಲಿಲ್ಲ. ಎಂದೂ ದೂರಿರಲಿಲ್ಲ.

ಇಂದೇಕೋ ಅವಳಿಗೆ ನಾಗೇಶನ ಬಗ್ಗೆ ಬಹಳ ನೆನಪಾಯಿತು. ನಾಗೇಶ್‌ ಹೇಗಿದ್ದಾನೆ? ಅವನು ಊಟ ಮಾಡಿದನೋ ಇಲ್ಲವೋ? ದಿನ ಅವನಿಗೆ ಹೋಟೆಲ್‌ನಿಂದ ಊಟ ತಂದುಕೊಡುತ್ತಿದ್ದಳು. ಆದರೆ ಅದನ್ನು ತಿಂದನೋ ಇಲ್ವೋ ಎಂದು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಇಷ್ಟವಿದ್ರೆ ತಿನ್ನಲಿ, ಇಲ್ಲದಿದ್ರೆ ಬಿಸಾಡಲಿ ಎಂದುಕೊಳ್ಳುತ್ತಿದ್ದಳು.

`ಅವನೇನಾದರೂ ಯಾರದಾದರೂ ಪ್ರೀತೀಲಿ ಬಿದ್ದಿದ್ದರೆ ಅವನಿಗೆ ಸರಿಯಾಗಿ ಪಾಠ ಕಲಿಸ್ತೀನಿ,’ ಎಂದುಕೊಳ್ಳುತ್ತಾ ಅಡುಗೆಮನೆಗೆ ಹೋದಳು.

ಒಂದೂವರೆ ಗಂಟೆಯ ನಂತರ ಅವಳು ಆಸ್ಪತ್ರೆಯಲ್ಲಿದ್ದಳು.

“ನೀವು ಹೋಟೆಲ್‌ನಿಂದ ಊಟ ತರಬೇಡಿ. ಹಿಂದೆಯೂ ಎಷ್ಟೋ ಬಾರಿ ನಿಮಗೆ ಹೇಳಿದ್ದೀನಿ,” ಎಂದರು ಡಾಕ್ಟರ್‌.

“ಇಲ್ಲ ಡಾಕ್ಟರ್‌. ಇದು ಹೋಟೆಲ್‌ದ್ದಲ್ಲ. ಮನೆಯಲ್ಲಿ ಮಾಡಿದ್ದು. ಹೆಸರುಕಾಳು ಉಸಲಿ, ಕುಂಬಳಕಾಯಿ ಪಲ್ಯ, ಮಸಾಲೆ ಹಾಕಿಲ್ಲ. ಕೊಂಚ ದಾಳಿಂಬೆ ಜೂಸ್‌ ತಂದಿದ್ದೀನಿ.”

ಅಷ್ಟರಲ್ಲಿ ನಾಗೇಶ್‌ ಕಣ್ಣು ತೆರೆದಿದ್ದ. ಅವನು ಆಶ್ಚರ್ಯದಿಂದ ರಮಾಳನ್ನೇ ನೋಡುತ್ತಿದ್ದ. ನರ್ಸ್‌ ಚೆಕ್‌ ಮಾಡಿದಾಗ ಜ್ವರ ಇನ್ನೂ 104 ಡಿಗ್ರಿ ಇತ್ತು. ಅವನಿಗೆ ಕೆಮ್ಮು ಬಿಟ್ಟೂ ಬಿಟ್ಟೂ ಬರುತ್ತಿತ್ತು. ಕೆಮ್ಮಿ ಕೆಮ್ಮಿ ಮುಖ ಕೆಂಪಗಾಗಿತ್ತು.

“ನೀವು ಸರಿಯಾಗಿ ನೋಡಿಕೊಳ್ಳಲಿಲ್ಲ. ಇವರನ್ನು ಇನ್ನೂ ಮೊದಲೇ ಇಲ್ಲಿಗೆ ಕರೆದುಕೊಂಡು ಬರಬೇಕಿತ್ತು,” ಡಾಕ್ಟರ್‌ಹೇಳಿದರು.

ರಮಾಗೆ ನೆನಪಾಯಿತು. ಅವಳು ನಾಗೇಶ್‌ನ ಬಳಿ ಎಷ್ಟೊಂದು ಸಿಡುಕುತ್ತಿದ್ದಳು, “ಯಾವಾಗಲೂ ಕೆಮ್ತಿರ್ತೀರಿ. ಇಷ್ಟು ಕೆಲಸ ಮಾಡಿದ ನಂತರ ಮಲಗೋದೇ ಕಷ್ಟ…..”

ತಾನು ಮಾತಾಡಿದ್ದನ್ನು ನೆನೆಸಿಕೊಂಡು ಅವಳ ಮನಸ್ಸಿಗೆ ಒಂದು ರೀತಿ ಚುಚ್ಚತೊಡಗಿತ್ತು. ಅವಳು ನಾಗೇಶನ ಬೆನ್ನು ಸವರತೊಡಗಿದಳು. ಕೆಮ್ಮು ನಿಂತಿತು. ಇದ್ದಕ್ಕಿದ್ದಂತೆ ರಮಾಳ ಸ್ನೇಹಭರಿತ ಸ್ಪರ್ಶದಿಂದ ನಾಗೇಶನ ಕಣ್ಣುಗಳು ತುಂಬಿಬಂದವು. ಕೊನೆಗೂ ನಮ್ಮವರೇ ನಮಗೆ ಆಗೋದು. ನಾನು ಮೀರಾಳ ಹಿಂದೆ ಬಿದ್ದಿದ್ದೆ. ಅವಳಂತೂ ಮಾರನೇ ದಿನದಿಂದಲೇ ಮುಖ ತೋರಿಸಲಿಲ್ಲ ಎಂದು ಅವನು ಯೋಚಿಸುತ್ತಿದ್ದ.

ಅತ್ತ ರಮಾ ಕೂಡ ಯೋಚಿಸುತ್ತಿದ್ದಳು. ನಾಗೇಶ್‌ ಎಂದೂ ಆ ಬಿಳಿ ಮಚ್ಚೆಯ ಬಗ್ಗೆ ಕೇಳಿರಲಿಲ್ಲ. ಆದರೆ ಆ ಬಡ್ಡಿಮಗ ಮ್ಯಾನೇಜರ್‌ಸೋಪಿನಿಂದ ಕೈಗಳನ್ನು ತೊಳೆದುಕೊಂಡ. ಅವನು ಹೋಗಿದ್ದು ಒಳ್ಳೆಯದಾಯಿತು. ಇಲ್ಲದಿದ್ದರೆ ಅವನಿಗಾಗಿ ತನ್ನ ಗಂಡ ನಾಗೇಶನನ್ನು ಬಿಡಬೇಕಾಗುತ್ತಿತ್ತು.

ರಮಾ ತನ್ನ ಸೆರಗಿನಿಂದ ನಾಗೇಶನ ಕಣ್ಣೀರನ್ನು ಒರೆಸಿ, “ನಿಮ್ಮ ಕಣ್ಣುಗಳಲ್ಲಿ ನೀರು ಬಂದರೆ ಚೆನ್ನಾಗಿರಲ್ಲ,” ಎಂದಳು.

ನಂತರ ಅವಳು ತನ್ನ ಕಣ್ಣೀರನ್ನು ಅಡಗಿಸಲು ನಾಗೇಶನ ಹೆಗಲ ಮೇಲೆ ತಲೆ ಇಟ್ಟಳು.

“ನಿನ್ನ ಸುಂದರ ಕಣ್ಣುಗಳಿಂದಲೂ ನೀರು ಸುರೀತಿದ್ರೆ ನೋಡೋಕೆ ಚೆನ್ನಾಗಿರಲ್ಲ. ಅದನ್ನು ಒರೆಸಿಕೋ,” ಎಂದ ನಾಗೇಶ್‌ ಅವಳ ತಲೆಗೂದಲನ್ನು ನೇವರಿಸತೊಡಗಿದ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ