ಸಾಮಾನ್ಯವಾಗಿ ಒಂದು ಚಿತ್ರ ಹಿಟ್ ಆದ ಕೂಡಲೇ ಕೆಲವು ತಾರೆಯರು ಹತ್ತಾರು ಚಿತ್ರಗಳನ್ನು ಒಟ್ಟಿಗೆ ಒಪ್ಪಿಕೊಂಡು ತಮ್ಮ ಜನಪ್ರಿಯತೆಯನ್ನು ಪ್ರದರ್ಶಿಸುವುದುಂಟು. ಆದರೆ ಶ್ವೇತಾ `ಸಿಂಪಲ್ಲಾಗೊಂದ್….’ ಚಿತ್ರ ಸೂಪರ್ ಹಿಟ್ ಆಗಿದ್ದರೂ ಇನ್ಯಾವ ಚಿತ್ರದಲ್ಲೂ ಕಾಣಿಸಲಿಲ್ಲ. ಏಕೆ? ಎಂಬುದಕ್ಕೆ ಈಗ ರಿಲೀಸ್ ಆಗಿರುವ `ಫೇರ್ ಅಂಡ್ ಲವ್ಲಿ’ ಚಿತ್ರ ಉತ್ತರ ಕೊಡುತ್ತಿದೆ.
`ನಾನು ಕೂಡ ಮಾಡ್ ಪ್ರೇಕ್ಷಕರನ್ನು ತಲುಪಬೇಕು. ಆದರೆ ಅದಕ್ಕೆ ನನ್ನದೇ ಆದ ದಾರಿ ಇದೆ’ ಎನ್ನುವ ಶ್ವೇತಾಳ ಮಾತುಗಳು ಇಲ್ಲಿವೆ.ಸಿಂಪಲ್ಲಾಗೊಂದು…. ಚಿತ್ರದ ನಂತರ ಇಷ್ಟು ಗ್ಯಾಪ್ ಬೇಕಿತ್ತಾ?
ನಾನು ಸಿನಿಮಾರಂಗಕ್ಕೆ ಬಂದಿದ್ದೇ ವಿಭಿನ್ನವಾದಂಥ ಪಾತ್ರಗಳನ್ನು ಮಾಡಬೇಕೆಂದು. ವಿಭಿನ್ನ ಅಂದಕೂಡಲೇ ಕಲಾತ್ಮಕ, ಪ್ರಾಯೋಗಿಕವಾಕ ಎಂದಲ್ಲ. ಒಂದು ಸಿನಿಮಾ ಎಂದ ಮೇಲೆ ಒಂದೊಳ್ಳೆ ಕಥೆ. ಆ ಕಥೆಯಲ್ಲಿ ನನ್ನ ಪಾತ್ರಕ್ಕೆ ಪ್ರಾಮುಖ್ಯತೆ ಎಷ್ಟಿದೆ ಎಂದು ನೋಡಬೇಕಲ್ವಾ? ಹಾಗೆಂದ ಮಾತ್ರಕ್ಕೆ ನಾನು ತುಂಬಾನೆ ಚ್ಯೂಸಿ ಅಂತಾನೂ ತಿಳಿದುಕೊಳ್ಳಬಾರದು. ಸಿಂಪಲ್ಲಾಗಿ…. ನಂತರ ನನಗೆ ಏನಿಲ್ಲ ಅಂದರೂ ಸುಮಾರು ಚಿತ್ರಗಳ ಆಫರ್ ಬಂದ. ಅವೆಲ್ಲ ಸಿಂಪಲ್‌ಗೆ ಹೋಲುವಂಥ ಕಥೆಯೇ ಆಗಿತ್ತು. ಮಾಡಿದ್ದನ್ನೇ ಮತ್ತೆ ಮತ್ತೆ ಮಾಡುವುದರಲ್ಲಿ ನನಗೂ ಆಸಕ್ತಿ ಇರಲಿಲ್ಲ. ಹಾಗಾಗಿ `ಫೇರ್ ಅಂಡ್ ಲವ್ಲಿ’ ಬರುವವರೆಗೂ ಕಾಯುತ್ತಿದ್ದೆ ಅಂತಾನೇ ಹೇಳಬಹುದು.
ಅಂಥಾ ಸ್ಪೆಷಾಲಿಟಿ ಏನಿದೆ?
ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ, ಮನೋರಂಜನೆ ಜೊತೆ ಮೀನಿಂಗ್ ಫುಲ್ ಆಗಿದೆ. ನಾಯಕಿ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಒಂದೊಳ್ಳೆ ಪಾತ್ರದ ಸಲುವಾಗಿ ನಾನು ಎಷ್ಟು ದಿನಗಳು ಬೇಕಾದರೂ ಕಾಯಬಲ್ಲೆ. ವಿದ್ಯಾಬಾಲನ್, ಕಂಗನಾ ಇವರ್ಯಾರು ಕೂಡಾ ಬಂದ ಆಫರ್‌ಗಳನ್ನೆಲ್ಲ ಬಾಚಿಕೊಳ್ಳದೇ ಒಳ್ಳೆ ಪಾತ್ರಗಳಿಗಾಗಿ ಕಾಯುತ್ತಿರುತ್ತಾರೆ. ನಾನೂ ಕೂಡಾ ಹಾಗೆ.
ಹಾಗಾದರೆ ಮಾಸ್ ಪ್ರೇಕ್ಷಕರನ್ನು ತಲುಪುದು ಹೇಗೆ?
ಖಂಡಿತ ಅರನ್ನು ತಲುಪುತ್ತೇನೆ. ಆದರೆ ನನ್ನದೇ ರೀತಿಯಿಂದ, ಸ್ಟೈಲ್‌ನಿಂದ. ಒಳ್ಳೆ ಪಾತ್ರಗಳ ಮುಖಾಂತರ. ನಾಯಕಿಯರೂ ಕೂಡಾ ಇಂಥದ್ದೊಂದು ಬದಲಾವಣೆ ತರಲು ಸಾಧ್ಯ ಅಂತ ತೋರಿಸುತ್ತೇನೆ. `ಸಿಂಪಲ್ಲಾಗೊಂದ್…..’ ಚಿತ್ರ ಬಂದಾಗ ಕ್ಲಾಸ್ ಮತ್ತು ಮಾಸ್ ಎರಡೂ ವರ್ಗದ ಪ್ರೇಕ್ಷಕರು ಇಷ್ಟಪಟ್ಟಿದ್ದರು. ಅಂಥವೊಂದು ಪರಿಣಾಮ ಬೀರುವಂಥ ಪಾತ್ರಗಳನ್ನು ನಾವು ಜನರಿಗೆ ಕೊಡಬೇಕು. ಇಂದಿಗೂ ಸಹ ನಾನು ಎಲ್ಲೆ ಹೋಗಲಿ ನನ್ನನ್ನು `ಸಿಂಪಲ್ಲಾಗೊಂದ್…’ ನಾಯಕಿ ಎಂದೇ ಎಲ್ಲರೂ ಇಷ್ಟಪಟ್ಟು ಮಾತನಾಡಿಸುತ್ತಾರೆ. ಎಲ್ಲ ವರ್ಗದ, ವಯಸ್ಸಿನ ಅಭಿಮಾನಿಗಳು ನನಗಿದ್ದಾರೆ. ಕಾರಿನಲ್ಲಿ ಹೋಗುವವರು ಪ್ರೀತಿಯಿಂದ ಹಾಯ್ ಅಂತ ಕೈ ಬೀಸಿದರೆ, ಆಟೋರಿಕ್ಷಾ ಡ್ರೈವರ್ ಕೂಡಾ ಅಷ್ಟೇ ಅಭಿಮಾನದಿಂದ ಕೈ ಬೀಸುತ್ತಾರೆ. ಕ್ಲಾಸು ಮಾಸು ಅಂತ ತಾರತಮ್ಯ ಮಾಡದೆ ಎಲ್ಲರೂ ಇಷ್ಟಪಡುವಂಥ ಸಿನಿಮಾದಲ್ಲಿ ನಟಿಸಬೇಕೆಂಬುದೇ ನನ್ನ ಆಸೆ.
ಫೋಟೋ ಶೂಟ್‌ಗಳಲ್ಲಿ ಬಿಝಿಯಾಗಿರುವ ನೀವು ಸದಾ ಮೇಕೋವರ್ ಬಗ್ಗೆ ಆಸಕ್ತಿ ವಹಿಸುತ್ತಿದ್ದೀರಾ ಅಂತ ಅನಿಸುತ್ತೆ?
ನನ್ನ ಇಮೇಜ್ ಸೃಷ್ಟಿಸಿಕೊಳ್ಳಲು ಖಂಡಿತ ಇದನ್ನೆಲ್ಲ ಮಾಡುತ್ತಿಲ್ಲ. ನನ್ನ ಅಭಿನಯವನ್ನು ಜನ ಮೆಚ್ಚಿಕೊಂಡಿದ್ದಾರೆ. ನಾನೊಬ್ಬ ಉತ್ತಮ ಕಲಾವಿದೆ ಅಂತ ಗುರುತಿಸುತ್ತಾರೆ. ತುಂಬಾ ಹೆಮ್ಮೆ ಉಂಟಾಗುತ್ತದೆ. ಫೋಟೋ ಶೂಟ್, ಮೇಕೋವರ್ ಇವೆಲ್ಲದಕ್ಕೂ ತುಂಬ ಸಮಯ ಹಿಡಿಯುತ್ತದೆ. ಆದರೆ ನಾನೂ ಕೂಡಾ ಎಲ್ಲ ತರಹದ ಪಾತ್ರ ಮಾಡಬಲ್ಲೇ ಎಂದು ಸ್ಪಷ್ಟಪಡಿಸಲು ಆಗಾಗ್ಗೆ ಮೇಕೋವರ್ ಮಾಡಿಕೊಳ್ಳುತ್ತೇನೆ. ನನ್ನ ಫೋಟೋಗಳನ್ನು ತುಂಬಾ ಮೆಚ್ಚಿಕೊಳ್ಳುವವರೂ ಇದ್ದಾರೆ. ಹಾಗೆಯೇ ನಾನು ನನ್ನ ಉಡುಗೆ ತೊಡುಗೆ ಬಗ್ಗೆ ತುಂಬಾನೆ ಆಸಕ್ತಿ ವಹಿಸುತ್ತೇನೆ. ದೊಡ್ಡ ದೊಡ್ಡ ಡಿಸೈನರ್‌ಗಳ ಉಡುಗೆಗಳು ಇಷ್ಟ. ಹಾಗಂತ ಅವುಗಳೇ ಬೇಕೆಂದು ಬಯಸುವುದಿಲ್ಲ. ನಾನೇ ಖುದ್ದಾಗಿ ಡಿಸೈನ್ ಮಾಡುತ್ತೇನೆ. ನನಗೆ ಇಂಥ ಕೆಲಸಗಳಲ್ಲಿ ಆಸಕ್ತಿ ಜಾಸ್ತಿ.
ಡ್ಯಾನ್ಸ್ ನನ್ನ ಅಚ್ಚುಮೆಚ್ಚಿನ ಕಲೆ. ಮಾಧುರಿ ದೀಕ್ಷಿತ್ ನನ್ನ ಮೆಚ್ಚಿನ ನಟಿ. ಆಕೆಯಷ್ಟು ಉತ್ತಮವಾಗಿ ಡ್ಯಾನ್ಸ್ ಮಾಡಲು ಬರದೇ ಇರಬಹುದು…… ಆದರೆ ಪ್ರಯತ್ನಂತೂ ಇದ್ದೇ ಇದೆ.
ರಂಗಭೂಮಿ ಹಿನ್ನೆಲೆಯಿಂದ ಬಂದಿರೊ ನೀವು ಏನನ್ನು ಕಲಿತಿದ್ದೀರಾ?
ರಂಗಭೂಮಿಯಲ್ಲಿ ಪಳಗಿರುವ ಎಲ್ಲ ಕಲಾವಿದರು ಶಿಸ್ತು ಸಂಯಮವನ್ನು ಪಾಲಿಸುತ್ತಾರೆ. ನಾನು ಕೂಡಾ ಹಾಗೆ, ನನ್ನ ವೃತ್ತಿ ಬಗ್ಗೆ ಗೌರವವಿದೆ. ಶಿಸ್ತಿನಿಂದ ನನ್ನ ಕೆಲಸ ಮಾಡುತ್ತೇನೆ. ನನ್ನ ವೃತ್ತಿಯನ್ನು ಹೇಗೆ ಚೆನ್ನಾಗಿ ರೂಪಿಸಿಕೊಳ್ಳಬೇಕೆಂಬುದನ್ನು ನಾನು ರಂಗಭೂಮಿಯಿಂದ ಕಲಿತುಕೊಂಡಿದ್ದೀನಿ. ತಾಳಿದವನು ಬಾಳಿಯಾನು ಎಂಬಂತೆ, `ಫೇರ್ ಅಂಡ್ ಲವ್ಲಿ’ ನಂತರ ನಾನು ಒಳ್ಳೆ ಆಫರ್ ಬರುವವರೆಗೂ ತಾಳ್ಮೆಯಿಂದ ನಿರೀಕ್ಷಿಸುತ್ತೇನೆ.
ಗೃಹಶೋಭಾ ಓದುಗರ ಪರವಾಗಿ ಆಲ್ ದಿ ಬೆಸ್ಟ್ ಶ್ವೇತಾ!
– ಜಾಗೀರ್‌ದಾರ್.