ಬಹಳ ವರ್ಷಗಳಿಂದ ಭೇಟಿಯಾಗದ ನಿಮ್ಮ ಹಳೆಯ ಕಾಲೇಜು ಸಹಪಾಠಿ ಅಥವಾ ಗೆಳೆಯರನ್ನು ಅವರು ಅದೇ ಊರು ಅಥವಾ ಸುತ್ತಮುತ್ತಲಲ್ಲಿ ವಾಸವಾಗಿದ್ದರೆ, ಖಂಡಿತ ನಿಮ್ಮ ಸ್ನೇಹಿತರ ಮದುವೆ ಅಥವಾ ಇನ್ನಾವುದೇ ಸಮಾರಂಭದಲ್ಲಿ ಭೇಟಿಯಾಗುವ ಸಾಧ್ಯತೆ ಇದ್ದೇ ಇರುತ್ತದೆ. ಬಹಳ ವರ್ಷಗಳಿಂದ ಅಗಲಿರುವವರು, ನೂರಾರು ಮೈಲಿಗಳ ಅಂತರದಲ್ಲಿ ವಾಸವಾಗಿರುವವರು, ಮದುವೆ ಚಪ್ಪರದಲ್ಲಿ ಭೇಟಿಯಾಗುವುದು ಆಕಸ್ಮಿಕವಾದರೂ, ಅನಿರೀಕ್ಷಿತವೇನಲ್ಲ. ಅಂಥ ಅಪರೂಪದ ಸಂದರ್ಭಗಳು ಕೇವಲ ರೋಮಾಂಚನವನ್ನು ಮಾತ್ರ ಉಂಟು ಮಾಡದೆ, ಹೃದಯದ ಬೆಸುಗೆಗೂ ಕಾರಣವಾಗಬಹುದು.
ಇಂಥದೇ ಒಂದು ಸನ್ನಿವೇಶವನ್ನು ಶ್ರೀವತ್ಸ ಹಾಗೂ ಪಂಕಜಾ ಎದುರಿಸಬೇಕಾಯಿತು. ಅದು ಮನಸ್ಸಿಗೆ ಮುದ ಕೊಡುವ ಸನ್ನಿವೇಶ ಮಾತ್ರವಲ್ಲದೆ, ಮನಸ್ಸಿಗೆ ವೇದನೆಯನ್ನೂ ತಂದೊಡ್ಡುವ ಸಂದರ್ಭವಾಗಿತ್ತು. ಆ ಜನಭರಿತ ಗುಂಪಿನಲ್ಲಿ ಹಲವಾರು ತಿಂಗಳ ಮಧ್ಯೆ, ಪರಸ್ಪರ ಗುರುತಿಸಿದೊಡನೆ ಓಡಿಹೋಗಿ ಕೈ ಚಾಚಿ ಅಪ್ಪಿಕೊಳ್ಳುವುದಕ್ಕೆ ಅವರು ಎಳೆ ಪ್ರಾಯದವರಾಗಿ ಇರಲಿಲ್ಲ. ಜನಭರಿತ ಆರತಕ್ಷತೆಯ ಸಮಾರಂಭದ ಮಧ್ಯೆ ಪ್ರೌಢವಯಸ್ಕನಾದ ಒಬ್ಬ ವ್ಯಕ್ತಿ, ಒಬ್ಬ ಹೆಂಗಸನ್ನು ಕಂಡೊಡನೆ ಬಡಬಡನೆ ಮಾತನಾಡಿಬಿಡು ಹಾಗಿಲ್ಲವಲ್ಲ? ಎಳೆ ಪ್ರಾಯದ ತರುಣ ತರುಣಿಯರು ಸದ್ದು ಗದ್ದಲಗಳೊಡನೆ ಹಾಗೆ ಮಾಡಬಹುದೇನೋ? ಆದರೆ ಶ್ರೀವತ್ಸ ಹಾಗೂ ಪಂಕಜಾ ಆ ವಯಸ್ಸನ್ನು ಎಂದೋ ದಾಟಿ ಬಂದಿದ್ದರು. ಒಂದೇ ಸಾಲಿನ ಕುರ್ಚಿಗಳಲ್ಲಿ ಕುಳಿತಿದ್ದರೂ ಅವರ ನಡುವೆ ಅಪಾರ ಅಂತರವಿದ್ದಂತಿತ್ತು. ತಮ್ಮ ಪಾಡಿಗೆ ಈ ಜನಜಂಗುಳಿಯ ಗೊಡವೆಯೇ ಬೇಡ ಎಂದು ನಿರ್ಲಿಪ್ತ ಮನೋಭಾವದಲ್ಲಿ ತಟಸ್ಥರಾಗಿ ಕುಳಿತಿದ್ದರು. ಹೀಗೇ… ಆಕಸ್ಮಿಕವಾಗಿ… ಕತ್ತು ತಿರುಗಿಸಿ ನೋಡಿದಾಗ ಪರಸ್ಪರ ಗುರುತಿಸಿದರು. ತನಗೇ ಅರಿವಿಲ್ಲದಂತೆ ಪಂಕಜಾ ಕೂಗಿದಳು. “ಅರೆ, ಶ್ರೀವತ್ಸ….” ಇದ್ದಕ್ಕಿದ್ದಂತೆ ಅವಳ ಧ್ವನಿ ನಿಂತು ಹೋಯಿತು. ಒಂದು ಘಳಿಗೆಯಲ್ಲಿ ಅವಳ ಮುಖದ ಮೇಲೆ ನೂರಾರು ಭಾವನೆಗಳು ನಲಿದಾಡಿ ಹೋದವು.
“ಓಹ್….! ನೀವಿಲ್ಲಿ…. ಅದು ಹೀಗೆ?” ಒಡನೆಯೇ ಅವಳು ತನ್ನ ಕುರ್ಚಿಯಿಂದ ಎದ್ದು ಸ್ವಲ್ಪ ಶ್ರೀವತ್ಸವನ ಪಕ್ಕಕ್ಕೆ ಬಂದಳು. ಶ್ರೀವತ್ಸ ತಪ್ಪು ಒಪ್ಪಿಕೊಳ್ಳುವವನಂತೆ, `ಇಲ್ಲಿ ಕುಳಿತಿದ್ದವಳು ನೀನೇ ಎಂದು ತಿಳಿಯಲೇ ಇಲ್ಲ. ಸುಮಾರು ಹೊತ್ತಿನಿಂದ ಇಷ್ಟು ಹತ್ತಿರ ಕುಳಿತಿದ್ದರೂ ನಮಗೆ ಗೊತ್ತಾಗಲೇ ಇಲ್ಲವಲ್ಲ?’ ಎಂದು ಹೇಳಬೇಕೆಂದುಕೊಂಡ.
ಅವಳು ಬಳಿ ಬಂದ ಕಾರಣಕ್ಕಾಗಿ ತಾನು ಪಕ್ಕಕ್ಕೆ ಸರಿದು ತಮ್ಮಿಬ್ಬರ ನಡುವೆ ಮತ್ತಷ್ಟು ಅಂತರವನ್ನು ಹೆಚ್ಚಿಸಲು ಅವನು ಬಯಸಲಿಲ್ಲ. ಅವರು ಹಾಗೆ ಬಹಳ ಹೊತ್ತು ಮುಖ ಮುಖ ನೋಡಿಕೊಳ್ಳುತ್ತ, ಯಾವ ಮಾತುಗಳನ್ನಾಡಬೇಕು ಎಂದು ತಡಬಡಾಯಿಸುತ್ತ ಸುಮ್ಮನೆ ಕುಳಿತಿದ್ದರು. ಆ ನಿಶ್ಶಬ್ದ, ಆ ಗಾಢ ಮೌನ ಇಬ್ಬರಿಗೂ ಅಸಹನೀಯವೆನಿಸುತ್ತಿತ್ತು. ಕೊನೆಗೆ ಶ್ರೀವತ್ಸ ಆ ಮೌನವನ್ನು ಮುರಿಯಬೇಕೆಂದುಕೊಂಡ. ಹೀಗೆ ಇನ್ನೂ ಸ್ವಲ್ಪ ಹೊತ್ತು ಮಾತನಾಡದೆ ಕುಳಿತರೆ, ಪಂಕಜಾ ತನ್ನನ್ನು ನಿರ್ಲಕ್ಷಿಸಿ ಆ ಜನಜಂಗುಳಿಯಲ್ಲಿ ಕರಗಿ ಹೋಗಬಹುದೆಂದುಕೊಂಡ.
“ನಿನಗೆ….ನಿನಗೆ… ಮಂಜುಳಾ ಹೇಗೆ ಗೊತ್ತು?” ಎಂದು ತಡವರಿಸುತ್ತ ಕೇಳಿದ.
ಆ ದಿನ ಅವರು ಮಂಜುಳಾಳ ಮದುವೆಯ ಆರತಕ್ಷತೆಗೆ ಬಂದಿದ್ದರು.
“ಹ್ಞೂಂ… ಗೊತ್ತು…. ಅವಳು…. ನನ್ನ ಜೊತೆ ಶಾರದಾ ವಿದ್ಯಾನಿಕೇತನದ ಶಾಲೆಯಲ್ಲಿ ಕೆಲಸ ಮಾಡುತ್ತಾಳೆ. ಮತ್ತೆ ನೀವಿಲ್ಲಿ…..?”
ಶ್ರೀವತ್ಸ ಅವಳು ಹೇಳಿದ್ದು ಕೇಳಿ ವಿಚಲಿತನಾದಂತೆ, “ನೀನು…. ನೀನು…. ಕೆಲಸದಲ್ಲಿದ್ದೀಯ?”
ಪಂಕಜಾ ಸಂಭಾಷಣೆಗೆ ತಡೆಯೊಡ್ಡದೆ ಮಾತನ್ನು ಮುಂದುವರಿಸುತ್ತಿದ್ದಾಳೆಂದು ತಿಳಿದು ಅವನಿಗೆ ಸಂತೋಷವಾಯಿತು. ಇಲ್ಲದಿದ್ದರೆ ಈ ಆರತಕ್ಷತೆಗೆ ಬಂದ ತನ್ನನ್ನು ವಿಚಾರಿಸಿಕೊಳ್ಳುವ ಅಗತ್ಯವೇನಿತ್ತು? ಅವಳು ತನ್ನಲ್ಲೇ ತಾನು ಸಿಡಿದುಬಿದ್ದಳು, `ನಾನು ಇನ್ನೇನು ಮಾಡಬೇಕಿತ್ತು ಅಂದುಕೊಂಡಿರಿ? ನನ್ನ ಹಾಗೂ ನನ್ನ ಮಗಳ ಹೊಟ್ಟೆಪಾಡು ನಡೆಯುವುದಾದರೂ ಹೇಗೆ?’ ಆದರೆ ಮುಖದಲ್ಲಿ ಮಾತ್ರ ಅಂಥ ಭಾವನೆ ವ್ಯಕ್ತಪಡಿಸದೆ ಚುಟುಕಾಗಿ, “ಹೌದು,” ಎಂದಳು.
ಒಂದು ಕ್ಷಣ ಕಳೆದ ನಂತರ ಅವನು ತನ್ನ ಪ್ರಶ್ನೆಗೆ ಉತ್ತರಿಸಲಿಲ್ಲ ಎಂದು ಅವಳು ನೆನಪಿಸಿದಳು.
“ಆಂ…. ಹ್ಞೂಂ… ಹೌದು. ಈ ಮದುಮಗ ನಮ್ಮ ಕಂಪನಿಯಲ್ಲಿ ಆಫೀಸರಾಗಿದ್ದಾನೆ.”
“ಅಂದರೆ…. ಎಲ್ಲಿ? ಕ್ವಾಲಿಟಿ ಬಿಸ್ಕೇಟ್ ಕಂಪನಿಯಾ? ನೀವಿನ್ನೂ ಅಲ್ಲೇ ಇದ್ದೀರಾ?” ಪಂಕಜಾ ಕ್ವಾಲಿಟಿಯ ನೆನಪು ಮಾಡಿಕೊಂಡು ನಿಟ್ಟುಸಿರಿಟ್ಟಳು. ಅವಳಿಗೇ ತಿಳಿಯದಂತೆ ಹಲ್ಲು ಕಡಿದಳು. ಅವಳು ತನ್ನ ಸಂಯಮವನ್ನು ನಿಯಂತ್ರಿಸದೆ ಹೋಗಿದ್ದರೆ, ಅವಳ ಬಾಯಿ ಜೋರಾಗಿ `ಆ ನಾಯಿ ಹೇಗಿದ್ದಾಳೆ?’ ಎಂದು ಕೂಗಿಬಿಡುತ್ತಿತ್ತು.
“ಹೌದು, ಇನ್ನೂ ಕ್ವಾಲಿಟಿಯಲ್ಲೇ ಇದ್ದೇನೆ,” ಶ್ರೀವತ್ಸ ಶಾಂತವಾಗಿ ಹೇಳಿದ. ಪಂಕಜಾಳ ಮನದಲ್ಲಿ ಯಾವ ಸುಳಿ ಸುತ್ತುತ್ತಿದೆ ಎಂದು ಅವನಿಗೆ ಅರಿವಾಯಿತು.
ತನ್ನ ಕಂಪನಿಯಿಂದ ಶೀಲಾ ಕೆಲಸ ಬಿಟ್ಟು ಆಗಲೇ ಎರಡು ವರ್ಷಗಳಾಯಿತು ಎಂದು ಹೇಳಲೋ ಬೇಡವೋ ಎಂದು ತರ್ಕಿಸತೊಡಗಿದ. ಆಗಿನ ಸಂದರ್ಭದಲ್ಲಿ ಅವರಿಬ್ಬರಲ್ಲಿ ಯಾರಾದರೂ ಒಬ್ಬರು ರಾಜೀನಾಮೆ ಕೊಡಲೇಬೇಕಾಗಿತ್ತು. ಶೀಲಾ ಮೊದಲೇ ಕೆಲಸ ಬಿಟ್ಟಿದ್ದರಿಂದ ಶ್ರೀವತ್ಸ ಅದೇ ಕಂಪನಿಯಲ್ಲಿ ಉಳಿದುಕೊಂಡ. ಪಂಕಜಾ ಮತ್ತೆ ಮಾತನ್ನು ಮುಂದುವರಿಸುವ ಮನಸ್ಥಿತಿಯಲ್ಲಿರಲಿಲ್ಲ. ಯಾವುದೋ ಬಲವಾದ ಶಕ್ತಿ ಅವಳನ್ನು ಅಲ್ಲಿ ಕೂರಲೂ ಆಗದೆ, ಏಳಲೂ ಆಗದಂತೆ ಆಡಿಸುತ್ತಿತ್ತು. ಕ್ವಾಲಿಟಿ ಎಂಬ ಪದ ಅವಳ ಕಿವಿಯಲ್ಲಿ ಗುಂಯಿಗುಡುತ್ತಿತ್ತು. ಅದರ ಪರಿಣಾಮವಾಗಿ, ಅವಳಿಗೆ ಅರಿಯದೆ ಏನೇನೋ ಮಾತುಗಳು ಅವಳ ತುಟಿಯ ಮೇಲೆ ಬರತೊಡಗಿದವು.
ಬಹಳ ಕಷ್ಟಪಟ್ಟು ಅವಳು ತನ್ನನ್ನು ತಾನೇ ನಿಯಂತ್ರಿಸಿಕೊಂಡಳು. ಶೀಲಾಳ ವಿರುದ್ಧವಾಗಿ ಮಾತನಾಡಲು ತನಗೇನೂ ಹಕ್ಕಿಲ್ಲ ಎಂದು ತನಗೆ ತಾನೇ ಸಮಾಧಾನ ತಂದುಕೊಂಡಳು.
“ನಿಮ್ಮ ಹೆಂಡತಿ ಹೇಗಿದ್ದಾರೆ?” ತಟಕ್ಕನೆ ಈ ಪ್ರಶ್ನೆಯನ್ನು ಕೇಳಿದಳು. `ಹೆಂಡತಿ’ ಎಂಬ ಪದ ಅವನಿಗೆ ಬಹಳ ಕಠೋರವಾಗಿ ಕೇಳಿಸಿತು.
“ನೀನು ಹೇಳೋದು…. ಶೀಲಾನಾ?” ಸ್ಪಷ್ಟೀಕರಣಕ್ಕಾಗಿ ಕೇಳಿದ.
“ಹ್ಞೂ….ಹ್ಞೂಂ…. ಶೀಲಾನೇ” ಒತ್ತಿ ಹೇಳಿದಳು ಪಂಕಜಾ. ಬೇಡ ಬೇಡವೆಂದರೂ ಅವಳ ಮಾತಿನಲ್ಲಿ ಮೊನಚು ಹರಿತವಾಗುತ್ತಿತ್ತು.
`ದರಿದ್ರ ನಾಯಿ,’ ಎಂದು ತನ್ನ ಮನಸ್ಸಿಲ್ಲೇ ಶಾಪ ಹಾಕಿಕೊಂಡಳು.
“ಅವಳೆಲ್ಲಿದ್ದಾಳೆ ಅಂತಾನೇ ನನಗೆ ತಿಳಿಯದು,” ನಿಜವನ್ನು ಮುಚ್ಚಿಡದೆ ಹೇಳಿದ.
ಅವನ ಮಾತಿಗೆ ಪಂಕಜಾ ಕಿಲಕಿಲನೆ ನಕ್ಕಳು, “ಇದೊಳ್ಳೇ ಚೆನ್ನಾಗಿದೆ ನಿಮ್ಮ ಮಾತು. ನಿಮ್ಮ ಹೆಂಡತಿ ಎಲ್ಲಿದ್ದಾಳೆಂದು ನಿಮಗೇ ಗೊತ್ತಿಲ್ಲವೇ?” ಈ ಬಾರಿ ಅವಳು ಎಣಿಸಿದ್ದಕ್ಕಿಂತ ಅವಳ ಮಾತು ಸಂಗೀತದಂತೆ ಮೃದುವಾಗಿತ್ತು.
ಹತಾಶ ಸ್ವರದಲ್ಲಿ ಶ್ರೀವತ್ಸ ಉತ್ತರಿಸಿದ, “ಅವಳು ನನ್ನ ಹೆಂಡತಿಯೂ ಅಲ್ಲ….. ನಾನು ಅವಳನ್ನು ಮದುವೆಯಾಗಲೂ ಇಲ್ಲ.”
ಪಂಕಜಾಳ ಹೃದಯ ಆನಂದದಿಂದ ಹಾಡತೊಡಗಿತು. ಶ್ರೀವತ್ಸನನ್ನು ಕಂಡು ಮರುಕ ತೋರೋಣವೆನ್ನಿಸಿತು. ಅವಳ ಕಟು ಮಾತುಗಳು ತಿಳಿಯಾಗತೊಡಗಿದವು.
“ಅಂದರೆ…. ನೀವು….. ನೀವು….. ಅವಳನ್ನು ಮದುವೆಯಾಗಲಿಲ್ಲವೇ?” ಎಂದು ಅವಳು ಮತ್ತೆ ಮತ್ತೆ ಅವನ ಹಾಲಿ ವೈವಾಹಿಕ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಯತ್ನಿಸಿದಳು. ಅವಳು ತನ್ನ ಕಿವಿಗಳನ್ನು ಶ್ರೀವತ್ಸನ ಮಾತುಗಳಿಗಾಗಿಯೇ ಎಂಬಂತೆ ತೆರೆದಿಟ್ಟುಕೊಂಡು ಕಾಯತೊಡಗಿದಳು. ಇದೆಲ್ಲ ಹೇಗಾಯಿತು ಎಂದು ತಿಳಿದುಕೊಳ್ಳುವ ಉತ್ಸಾಹ ಅವಳಲ್ಲಿ ನೂರ್ಮಡಿಯಾಗಿತ್ತು.
ಬೇರೆ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರಿಸುತ್ತಿದ್ದ ಶ್ರೀವತ್ಸ ಅವಳ ಈ ಪ್ರಶ್ನೆಗೆ ತಟ್ಟನೆ ಉತ್ತರಿಸಿದಾದ. ಅಷ್ಟರಲ್ಲಿ ಪಂಕಜಾ ತನ್ನ ಸಹನೆಯನ್ನು ಕಳೆದುಕೊಂಡವಳಂತೆ ತಟಕ್ಕನೆ ಕೇಳಿದಳು, “ಅವಳನ್ನು ಮದುವೆಯಾಗಲಿಲ್ಲವಾದರೆ ನನ್ನನ್ನು ಡೈವೋರ್ಸ್‌ಮಾಡಿದ್ದೇಕೆ?”
“ಆ ಹೆಣ್ಣು ನನ್ನನ್ನು ಪೂರ್ತಿ ಏಮಾರಿಸಿಬಿಟ್ಟಳು. ಆದ್ದರಿಂದಲೇ….”
“ಏನ್ಹೇ…ಳಿದ್ರಿ….?” ಪಂಕಜಾ ಅಪಾರ ಅಚ್ಚರಿಯಲ್ಲಿ ಮುಳುಗಿಹೋದಳು. ಆದರೆ ಇನ್ನೊಂದು ಘಳಿಗೆಯಲ್ಲಿ ಸಿಹಿಯಾದ ಸೇಡು ತೀರಿಸಿಕೊಂಡಳಂತೆ, `ನಿಮ್ಮಂಥವರಿಗೆ ಸರಿಯಾಗಿ ಬುದ್ಧಿ ಕಲಿಸಿದ್ದಾಳೆ ಅಲ್ಲವೇ?’ ಎಂದುಕೊಂಡಳಾದರೂ ಅವನ ಮೇಲಿನ ಕರುಣೆಯಿಂದಾಗಿ ಈ ನುಡಿಗಳನ್ನು ಅವಳು ಪ್ರಕಾಶಪಡಿಸಲಿಲ್ಲ. ಆದರೂ ಸ್ತ್ರೀ ಸಹಜ ಮಾತ್ಸರ್ಯದಿಂದ ಅವನ ಮೇಲೆ ಕಟಕಿಯಾಡುತ್ತಾ, “ಓ…! ಮತ್ತೆ ಮದುವೆಯಾಗಲು ಬೇರೆ ಯಾವ ಹೆಣ್ಣೂ ಸಿಗಲೇ ಇಲ್ಲವೇ?” ಆದರೆ ಗಾಯಕ್ಕೆ ತಾನು ಉಪ್ಪೆರಚುತ್ತಿದ್ದೇನೆ ಎಂಬುದು ಅವಳಿಗೆ ತಿಳಿದಿತ್ತು.
“ಇಲ್ಲ…..” ಆಳವಾದ ದನಿಯಲ್ಲಿ ಅವನು ಹೇಳಿದ. ತಾನು ಇನ್ನು ಮುಂದೆ ಯಾವ ಹೆಣ್ಣನ್ನೂ ನಂಬುವುದಿಲ್ಲ ಎಂದು ಅವನ ಬಾಯಿ ಹೇಳದಾಯಿತು.
ಅದೂ ಆ ಶೀಲಾಳ ಪ್ರಕರಣ ಮುಗಿದ ಮೇಲೆ? ಕೆಲವು ದಿನಗಳು ಕಳೆದ ನಂತರ, ಶೀಲಾ ಕೇವಲ ದುಡ್ಡಿನಾಸೆಗೆ ಹಾರಾಡುವ ಬಣ್ಣದ ಚಿಟ್ಟೆ ಎಂಬುದನ್ನು ಅವನು ತಿಳಿದುಕೊಂಡಿದ್ದ. ಅವಳ ಜೀವನದ ಏಕೈಕ ಉದ್ದೇಶವೆಂದರೆ ಸುಂದರವಾದ ಸಂಸಾರಗಳನ್ನು ಹಾಳು ಮಾಡುವುದೇ ಆಗಿತ್ತು. ಅವಳ ಜೀವನದಲ್ಲಿ ಯಾರೋ ಮೋಸ ಮಾಡಿದ್ದರು ಎನ್ನುವ ಕಾರಣಕ್ಕಾಗಿ ಸಮಾಜದಲ್ಲಿನ ಸುಖೀ ದಾಂಪತ್ಯಗಳನ್ನು ಮುರಿಯುವ ಪಣತೊಟ್ಟಳು.
ಅವನ ಮನಶ್ಶಾಂತಿಯನ್ನು ಹಾಳು ಮಾಡಿದ ಮೇಲೆ, ಅವಳು ಕ್ವಾಲಿಟಿ ಕಂಪನಿಯನ್ನು ಬಿಟ್ಟು, ಉಳಿದವರನ್ನೂ ಹಾಳು ಮಾಡಲೋ ಎಂಬಂತೆ ಮತ್ತೊಂದು ಕಂಪನಿ ಸೇರಿದಳು.
ಮದುವೆಯಾದ ಮೂರು ವರ್ಷಗಳ ಸುಖೀ ದಾಂಪತ್ಯವನ್ನು ನಡೆಸಿ, ನಿಷ್ಠಾವಂತಳಾಗಿದ್ದ ಮಡದಿ ಪಂಕಜಾಳನ್ನು ವಿಟ್ಠೇದನಗೊಳಿಸಿದ್ದಕ್ಕಾಗಿ ಶ್ರೀವತ್ಸ ತನ್ನನ್ನು ತಾನೇ ನಿಂದಿಸಿಕೊಂಡ. ಶೀಲಾಳಂತೆ ಪಂಕಜಾ ಸೌಂದರ್ಯ ರಾಣಿಯಲ್ಲ ಎಂಬುದು ನಿಜವಾದರೂ, ಇವರಿಬ್ಬರನ್ನೂ ತುಲನೆ ಮಾಡುವುದು ಸಾಧ್ಯವೇ? ಎಂದುಕೊಂಡ. ವಿಲಾಸತೆಯ ಮಾದಕತೆಯಲ್ಲಿ ಮುಳುಗಿದ್ದ ಶ್ರೀವತ್ಸ, ಶೀಲಾಳ ಗೋಮುಖ ವ್ಯಾಘ್ರತನವನ್ನು ತಡವಾಗಿ ಅರಿತುಕೊಂಡಿದ್ದ. ಆದರೆ ಅಷ್ಟರಲ್ಲಿ ಬಹಳ ತಡವಾದುದರಿಂದ ಅವನು ದೊಡ್ಡ ಬೆಲೆಯನ್ನೇ ತೆರಬೇಕಾಯ್ತು. ಸಂಭಾಷಣೆಯ ವೈಖರಿಯಿಂದ ಪಂಕಜಾ ತನ್ನ ಮನಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದಾಳೆ ಎಂದು ಶ್ರೀವತ್ಸನಿಗೆ ಅರಿವಾಯಿತು. ಅವಳ ಮಾತುಗಳು ಅವನು ಮಾಡಿದ ತಪ್ಪನ್ನು ನೆನಪಿಸಿ ಶೂಲದಂತೆ ಇರಿಯುತ್ತಿದ್ದವು. ತನ್ನನ್ನು ನೋಯಿಸಲೆಂದೇ ಅವಳು ಹಾಗೆ ಮಾತಾಡುತ್ತಿದ್ದಾಳೆ ಎಂಬುದನ್ನು ಗ್ರಹಿಸಿದ. ಎರಡು ವರ್ಷದ ಎಳೆ ಕಂದನೊಡನೆ, ಇಪ್ಪತ್ತೈದನ್ನೂ ದಾಟದ ಹೆಣ್ಣುನ್ನು ತಾನು ನಿರ್ದಾಕ್ಷಿಣ್ಯವಾಗಿ ಮನೆಯಿಂದ ಹೊರ ಹಾಕಿದೆನಲ್ಲಾ ಎಂದು ಅವನು ಚಡಪಡಿಸತೊಡಗಿದ.
ವಿಚ್ಛೇದನ ಪಡೆಯಲೇಬೇಕೆಂದು ನಿರ್ಧರಿಸಿದಾಗ, ತನ್ನ ಮಗಳು ಮೀನಾ ತನ್ನ ಬಳಿ ಇದ್ದರೆ ಮಾತ್ರವೇ ಅದಕ್ಕೆ ಒಪ್ಪುವುದಾಗಿ ಪರಸ್ಪರ ಚರ್ಚಿಸಿ ಅನಂತರ ವಿವಾಹ ವಿಚ್ಛೇದನ ಪಡೆದಿದ್ದರು.
“ಇಲ್ಲ, ನಾನು ಮತ್ತೆ ಮದುವೆಯಾಗಬಾರದು ಎಂದು ನಿರ್ಧರಿಸಿದೆ,” ಎಂದು ಅವನು ತನ್ನ ಮಾಜಿ ಪತ್ನಿಯ ಪ್ರಶ್ನೆಗೆ ಉತ್ತರಿಸಿದ. ಅದನ್ನು ಕೇಳಿ ಪಂಕಜಾಳ ಮುಖದಲ್ಲಿ ಏನೋ ಒಂದು ಆತ್ಮತೃಪ್ತಿಯ ಭಾವನೆ ತೇಲಿಹೋಯಿತು. ಆದರೆ ಮತ್ತೊಂದು ಕ್ಷಣದಲ್ಲಿ ಅವಳಿಗೆ ತನ್ನ ಮಾಜಿ ಪತಿಯತ್ತ ಮರುಕದ ಭಾವನೆ ಮೊಳೆಯಿತು.
ಅಷ್ಟರಲ್ಲಿ ಅವಳ ಮನದಾಳದ ಒಳದನಿಯೊಂದು, `ಅವನು ನಿನ್ನೊಂದಿಗೆ ಎಷ್ಟು ಕ್ರೂರವಾಗಿ ನಡೆದುಕೊಂಡು, ನಿನ್ನ ಪಾಲಿಗೆ ತನ್ನ ಮನೆಯ ಕದವನ್ನು ಮುಚ್ಚಿದ್ದಾನೆಂಬುದನ್ನು ಮರೆಯಬೇಡ. ಬಿ.ಎಡ್ ಮುಗಿಸಿ ಟೀಚರ್ ಆದ ನೀನು ಮಗುವನ್ನು ಸಾಕಿಕೊಳ್ಳುತ್ತೀಯಾ ಎಂಬ ಒಂದೇ ಕಾರಣಕ್ಕೆ ಒಂದು ನಯಾ ಪೈಸೆ ಜೀವನಾಂಶವನ್ನೂ ಕೊಡದೆ ಹೋದನಲ್ಲಾ? ಅಂಥ ಒಬ್ಬ ವ್ಯಕ್ತಿಗೆ ನೀನು ಕರುಣೆ ತೋರಿಸುವುದು ಉಚಿತವೇ?’ ಎಂದು ಕೇಳಿದಂತಾಯಿತು. ಹಾಗೆಯೇ ಅವಳ ಆಲೋಚನೆಗಳು ತಾನೊಬ್ಬಳೇ ಒಂಟಿಯಾಗಿ ಮಗುವನ್ನು ಸಾಕುವಾಗ ಪಟ್ಟ ಬವಣೆಗಳತ್ತ ಹರಿಯಿತು. ಪಂಕಜಾ ವಿಚ್ಛೇದನ ಪಡೆದ ಮೇಲೆ ಜೀವನ ಸಾಗಿಸಲು ಆರ್ಥಿಕವಾಗಿ ಕಷ್ಟಪಡದಿದ್ದರೂ ಮಾನಸಿಕವಾಗಿ ಬೇಯುತ್ತಿದ್ದಳು. ಅವಳಿಗೆ ಟೀಚರ್ ಕೆಲಸ ದೊರೆತ ಕಾರಣ, ಹೊಟ್ಟೆಪಾಡಿಗಾಗಿ ಚಿಂತಿಸುವ ಅಗತ್ಯವಿರಲಿಲ್ಲ. ಒಳ್ಳೆಯ ಮನೆಯೊಂದನ್ನು ಬಾಡಿಗೆಗೆ ಪಡೆದು ಮಗಳು ಮೀನಾಳಿಗೆ ಎಕಡರೂವರೆ ವರ್ಷ ತುಂಬುತ್ತಲೇ ಸಮೀಪದಲ್ಲಿದ್ದ ಶಿಶುವಿಹಾರಕ್ಕೆ ಸೇರಿಸಿದಳು.
ಆದರೆ ಅವಳ ಮಗಳು ಬೆಳೆದು, ಹಿರಿಯ ತರಗತಿಗಳಿಗೆ ಸೇರಿದಂತೆ, ಮುದ್ದು ಮುದ್ದಾಗಿ ಮಾತನಾಡುತ್ತ ಪ್ರಶ್ನೆಗಳನ್ನು ಕೇಳಲಾರಂಭಿಸಿದಾಗ, ಅವಳ ಸಮಸ್ಯೆಗಳು ಆರಂಭಗೊಂಡವು. ಒಂದು ದಿನ ಶಾಲೆಯಿಂದ ಮರಳಿ ಬಂದವಳೇ ತಾಯಿಗೆ ತೆಕ್ಕೆಬಿದ್ದು ಒಂದೇ ಸಮನೆ ಕೇಳಲಾರಂಭಿಸಿದಳು.
“ಅಮ್ಮಾ, ನಮ್ಮ ಕ್ಲಾಸಿನಲ್ಲಿ ಪ್ರತಿಯೊಬ್ಬರಿಗೂ ಅಮ್ಮ ಅಪ್ಪ ಇದ್ದಾರೆ. ಹಾಗಾದರೆ ನನ್ನ ಅಪ್ಪಾ ಎಲ್ಲಿ?”
ಇದನ್ನು ನಿರೀಕ್ಷಿಸದ ಪಂಕಜಾ ಸ್ತಂಭೀಭೂತಳಾದಳು. ತನ್ನ ಕೆಲಸದ ಒತ್ತಡದಿಂದ ಅವಳು ಸಾಕಷ್ಟು ದಣಿದು ಸುಸ್ತಾಗಿ ಬಂದಿದ್ದಳು. ಮಗುವಿಗೆ ಸಮಾಧಾನವಾಗುವಂತೆ ಯಾವ ಉತ್ತರ ಕೊಡಬೇಕೋ ಅವಳಿಗೆ ತೋಚದಾಯಿತು. ಇದೇ ರೀತಿ ಮಗಳು ಮುಂದಕ್ಕೂ ಪ್ರಶ್ನೆಗಳನ್ನು ಕೆದಕುತ್ತ ಇರಬಾರದು ಎಂದು ಒಂದು ನಿರ್ಧಾರಕ್ಕೆ ಬಂದಳು.
“ಅಪ್ಪ ಕೆಲಸಕ್ಕೆಂದು ದೂರದ ಊರಿಗೆ ಹೋಗಿದ್ದಾರಮ್ಮ. ಆಮೇಲೆ ಬರುತ್ತಾರೆ…. ಆಂ” ಎಂದು ಸಣ್ಣ ಮಗುವನ್ನು ಸಂತೈಸಿ ತಾನು ಗೆದ್ದೆ ಎಂದು ಭಾವಿಸಿದಳು.
“ಆದರೆ ಯಾವಾಗ?” ಮೀನಾ ಪಟ್ಟುಬಿಡಲಿಲ್ಲ.
“ಇನ್ನೇನು, ಕೆಲವೇ ದಿನಗಳಲ್ಲಿ ಬಂದುಬಿಡುತ್ತಾರೆ,” ಒಂದು ಸಣ್ಣ ಸುಳ್ಳನ್ನು ಹೇಳಿದ ಪಂಕಜಾ ಮುಂದೆ ಅದನ್ನೇ ಬೆಳೆಸಬೇಕಾಯಿತು.
“ಮೀನಾ… ಮರಿ… ನಿನಗೆ ಗೊತ್ತಿಲ್ಲ… ನೀನು ಚಿಕ್ಕವಳಾಗಿದ್ದಾಗಲೇ ನಿಮ್ಮ ತಂದೆ ಸತ್ತುಹೋದರು….”
ಶಿಶುವಿಹಾರದಲ್ಲಿ ಕಲಿಯುತ್ತಿದ್ದ ಮಗು `ಸತ್ತು ಹೋದರು’ ಶಬ್ದವನ್ನು ಅರ್ಥ ಮಾಡಿಕೊಂಡಿತ್ತು. ಅವಳಿಗೆ ತಮ್ಮ ಟೀಚರ್ ಒಂದು ಕಥೆ ಹೇಳುವಾಗ ಇದರ ಬಗ್ಗೆ ತಿಳಿಸಿದ್ದರು. ಈ ಸುದ್ದಿ ಕೇಳಿ ಅವಳ ತುಟಿಗಳು ಅದುರಿದವು. ಈ ಉತ್ತರವನ್ನು ಕೇಳಿ ತಟಸ್ಥಳಾದ ಮಗಳನ್ನು ಕಂಡು ಪಂಕಜಾಳಿಗೆ ಅಯ್ಯೋ ಪಾಪ! ಅನ್ನಿಸಿತು. ಅವಳನ್ನು ಸಮಾಧಾನಿಸುತ್ತ, “ಮೀನಾ ಮರಿ, ನೀನೇನೂ ಯೋಚನೆ ಮಾಡಬೇಡಮ್ಮ. ನಿಮ್ಮ ತಂದೆಯನ್ನು ಅಲ್ಲಿ ದೇವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ,” ಎಂದು ಆಕಾಶದತ್ತ ಬೊಟ್ಟು ಮಾಡಿ ತೋರಿಸಿದಳು.
ಆ ಪುಟ್ಟ ಹುಡುಗಿ ಅಳುವನ್ನು ನಿಯಂತ್ರಿಸಿಕೊಂಡಳು. ಒಂದು ಮಧುರ ಮಂದಹಾಸ ಅವಳ ತುಟಿಗಳ ಮೇಲೆ ತೇಲಿತು. “ಅಂದರೆ ಅಪ್ಪ ಅಲ್ಲಿ ಸುಖಾಗಿದ್ದಾರೇನಮ್ಮಾ? ದೇವರು ಅವರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರಲ್ಲವೇ?”
“ಹೌದಮ್ಮಾ…. ಹೌದು.”
“ಯಾವಾಗಲಾದರೂ ನನ್ನನ್ನು ನೋಡಲು, ದೇವರು ಅಲ್ಲಿಂದ ಅಪ್ಪನನ್ನು ಕಳುಹಿಸುತ್ತಾರೇನಮ್ಮ?” ಪಂಕಜಾ ಈ ಮಾತಿಗೆ ಉಗುಳು ನುಂಗುತ್ತ, ತುಟಿ ಅಲುಗಿಸಿದಳಷ್ಟೆ. ಅವಳ ಮಟ್ಟಿಗೆ ಶ್ರೀವತ್ಸ ಎಂದೋ ಸತ್ತಿದ್ದ. ಆದರೆ ಮೀನಾಳನ್ನು ಸಂತೈಸುತ್ತ, “ಹೌದಮ್ಮಾ. ಆದರೆ ನೀನು ಶಾಲೆಯಲ್ಲಿ ಚೆನ್ನಾಗಿ ಓದಿ ಬರೆದು, ಮನೆಯಲ್ಲೂ ಅಮ್ಮನ ಬಳಿ ಗಲಾಟೆ ಮಾಡದಿದ್ದರೆ ಮಾತ್ರ,” ಎಂದಳು.
ಪಂಕಜಾಳ ಈ ಮಾತುಗಳು ಆ ಎಳೆಯ ಹೃದಯದ ಮೇಲೆ ಅಪಾರ ಪರಿಣಾಮವನ್ನು ಬೀರಿತು. ಅಂದಿನಿಂದ ಮೀನಾ ಮನೆಯಲ್ಲಿ ತಂಟೆ ತಕರಾರಿಲ್ಲದ ಮಗಳು ಮಾತ್ರವಲ್ಲದೆ, ಶಾಲೆಯಲ್ಲೂ ಆದರ್ಶ ವಿದ್ಯಾರ್ಥಿನಿಯಾದಳು… ಆದರೆ ಪಂಕಜಾಳ ಹೆಂಗರುಳು ಶ್ರೀವತ್ಸನನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿರಲಿಲ್ಲ. ಶ್ರೀವತ್ಸನಿಗೆ ತನ್ನ ಕೈ ಅಡುಗೆ ಎಂದರೆ ವಿಶೇಷ ಪ್ರೀತಿ ಎಂದವಳಿಗೆ ಗೊತ್ತಿತ್ತು. ಅವಳು ತಯಾರಿಸುತ್ತಿದ್ದ ಪ್ರತಿಯೊಂದು ಹೊಸ ಖಾದ್ಯವನ್ನೂ ಚಪ್ಪರಿಸಿಕೊಂಡು ತಿನ್ನುತ್ತಿದ್ದ. ಇತ್ತೀಚೆಗೆ ಅವನು ಎಲ್ಲಿ ಊಟ ಮಾಡತ್ತಿದ್ದಾನೋ? ಯಾವ ಹೋಟೆಲೋ ಏನೋ? ಅಥವಾ ಯಾರಾದರೂ ಅಡುಗೆಯವರನ್ನು ಇಟ್ಟುಕೊಂಡು ಮನೆಯಲ್ಲೇ ಉಣ್ಣುತ್ತಿದ್ದಾನೋ….?
ತನ್ನನ್ನು ಯಾರೋ ಕೂಗಿ ಕರೆದಂತಾಗಲು ಪಂಕಜಾ ಎಚ್ಚೆತ್ತೆಳು. “ಅಮ್ಮಾ…..ಅಮ್ಮಾ…..”
ತಾಯಿಯನ್ನು ಹುಡುಕುತ್ತ ಅವಳ ಬಳಿ ಬಂದ ಮೀನಾ, ಕುರ್ಚಿಯ ಸಮೀಪ ಬಂದು ನೋಡಿದಾಗ, ತಾಯಿ ಯಾರೋ ಗಂಡಸಿನೊಂದಿಗೆ ಕುಳಿತು ಮಾತನಾಡುತ್ತಿರುವುದನ್ನು ಕಂಡಳು. ಪ್ರಥಮ ಬಾರಿಗೆ ಮೀನಾ ತಾಯಿ ಬೇರೊಬ್ಬ ಗಂಡಸಿನೊಡನೆ ಮಾತನಾಡುತ್ತಿರುವುದನ್ನು ಕಂಡಳು. ಇದು ಅವಳ ಪುಟ್ಟ ತಲೆಗೆ ಅರ್ಥವಾಗದ ವಿಚಿತ್ರ ಪ್ರಸಂಗವಾಗಿತ್ತು.
“ಓ! ಇಲ್ಲಿದ್ದೀಯೇನಮ್ಮ!” ಎಂದು ಓಡಿ ಬಂದವಳೇ ಮೀನಾ ತಾಯಿಯ ತೋಳ್ತೆಕ್ಕೆಗೆ ಬಿದ್ದಳು. ಅದನ್ನು ಕೇಳಿ ಪಂಕಜಾ ಹೆಮ್ಮೆಯಿಂದ, “ನನ್ನ ಮಗಳು,” ಎಂದು ಉತ್ತರಿಸಿದಳು. ಅವಳು ಬೇಕೆಂದೇ `ನನ್ನ’ ಪದಕ್ಕೆ ಹೆಚ್ಚು ಒತ್ತು ಕೊಟ್ಟಳು.
ಅದನ್ನು ಕೇಳಿ ಶ್ರೀವತ್ಸನಿಗೆ ಎಲ್ಲಿಲ್ಲದ ಖುಷಿಯಾಯಿತು. ಅರೇ, ಇವಳು ಇಷ್ಟು ದೊಡ್ಡವಳಾದಳೇ? ಇಷ್ಟು ಎತ್ತರಕ್ಕೆ? ಮೀನಾ ಅವನ ಕಣ್ಣಿಗೆ ಬಲು ಮುದ್ದಾಗಿ ಕಂಡಳು. ಅವಳನ್ನು ಬಾಚಿ ತನ್ನ ತೋಳುಗಳಲ್ಲಿ ಹುದುಗಿಸಿಕೊಳ್ಳಬೇಕೆನ್ನುವ ತನ್ನ ಅಭಿಲಾಷೆಯನ್ನು ಅವನು ಕಷ್ಟಪಟ್ಟು ನಿಯಂತ್ರಿಸಿಕೊಂಡ.
“ಓ, ಇವಳು ಮೀನಾ ಮರೀನಾ?” ಎಂದು ಹಾರ್ದಿಕವಾಗಿ ಅವಳತ್ತ ನಸುನಗುತ್ತ, “ನಿನಗೀಗ ವಯಸ್ಸು ನಾಲ್ಕು ವರ್ಷ ಕಳೆದು ಒಂದು ತಿಂಗಳು ಅಲ್ಲವೇ?” ಎಂದ.
ಮೀನಾ ಅವನತ್ತ ಸ್ವಲ್ಪ ಸರಿದು ಮುದ್ದು ಮುದ್ದಾಗಿ, “ಅಂಕಲ್, ನನ್ನ ಹೆಸರು ನಿಮಗೆ ಹೇಗೆ ಗೊತ್ತು? ನನ್ನ ಕಳೆದ ವರ್ಷದ ಹುಟ್ಟುಹಬ್ಬಕ್ಕೆ ನೀವು ಬಂದ ಹಾಗೆ ನೆನಪೇ ಇಲ್ವಲ್ಲ!” ಎಂದಳು.
ಶ್ರೀವತ್ಸನಿಗೆ ಅವಳ ಮಾತುಗಳಿಂದ ಬಹಳ ಕಸಿವಿಸಿಯಾಯಿತು. ಹೆತ್ತ ಮಗಳು ತನ್ನನ್ನು ಯಾರೋ ಬೇರೆಯವರೆಂಬಂತೆ `ಅಂಕಲ್’ ಎಂದಾಗ ದಟ್ಟವಾಗಿ ಅಪರಾಧಿ ಭಾವನೆ ಮೂಡಿತು.
ಅವಳು ಪಂಕಜಾಳತ್ತ ತಿರುಗಿ, “ಅಮ್ಮಾ, ಯಾರಮ್ಮಾ ಈ ಹೊಸ ಅಂಕಲ್?” ಎಂದಾಗ ಮಗಳ ಪ್ರಶ್ನೆಗೆ ಏನೆಂದು ಉತ್ತರಿಸುವುದೆಂದು ತಿಳಿಯದೆ ಪಂಕಜಾ ಗೊಂದಲಕ್ಕೊಳಗಾದಳು.
ಮೀನಾಳಿಗೆ ತಾಯಿಯೊಂದಿಗೆ ಚೆನ್ನಾಗಿ ಜಗಳ ಕಾಯಬೇಕೆನ್ನಿಸಿತು. ಯಾರೋ ಒಬ್ಬ ಹೊಸ ಅಂಕಲ್ ಬಂದರೆಂದು ಅಮ್ಮ ತನ್ನನ್ನು ಮರೆತು, ಅವರೊಡನೆ ಇಷ್ಟು ಹೊತ್ತು ಮಾತನಾಡುವಂಥದ್ದೇನಿದೆ? ಅವಳು ಇದೇ ಮಾತನ್ನು ಇನ್ನೇನು ಕೇಳಿ ಬಿಡಬೇಕೆಂದಿದ್ದಳು, ಅಷ್ಟರಲ್ಲಿ ಆ ಹೊಸ ಅಂಕಲ್ ಅವಳನ್ನು ಮಾತನಾಡಿಸಿಬಿಟ್ಟರು.
ಮುದ್ದು ಮುದ್ದಾಗಿ ಮಾತನಾಡುತ್ತಿದ್ದ ಮೀನಾಳ ಮಾತುಗಳನ್ನು ಮತ್ತಷ್ಟು ಕೇಳಬೇಕೆಂಬ ಆಸೆ ಶ್ರೀವತ್ಸನಿಗೆ ಹೆಚ್ಚಾಗುತ್ತಿತ್ತು. ಆದರೆ ಮುಗ್ಧ ಮನದ ಮಗು `ಅಂಕಲ್’ ಎಂದು ಕರೆದಾಗ ಎದೆಯಲ್ಲಿ ಅವ್ಯಕ್ತ ನೋವು ಹೆಪ್ಪುಗಟ್ಟುತ್ತಿತ್ತು.
ವಿವಾಹ ವಿಚ್ಛೇದನ ದಾಂಪತ್ಯ ಸಂಬಂಧವನ್ನು ಸಂಪೂರ್ಣವಾಗಿ ಕಡಿದು ಹಾಕುತ್ತದೆ. ಪತಿ ಪತ್ನಿ ಎನಿಸಿಕೊಂಡಿದ್ದವರು ಅನಂತರ ಮಾಜಿ ಪತಿ ಮಾಜಿ ಪತ್ನಿಯರಾಗುತ್ತಾರೆ. ಆದರೆ ವಿವಾಹ ವಿಚ್ಛೇದನ ತಂದೆ ಮಕ್ಕಳ ಅನುಬಂಧವನ್ನು ಕಡಿದುಹಾಕಲು ಸಾಧ್ಯವೇ? ಮಗಳೆಂದೂ ಮಾಜಿ ಮಗಳಾಗಲಾರಳು ಅಥವಾ ಹೆತ್ತ ತಂದೆ ಅಂಕಲ್ ಆಗಲಾರ. ತನ್ನ ಕಿವಿಯಲ್ಲಿ ಯಾರೋ ಈ ಮಾತುಗಳನ್ನು ಕೂಗಿ ಎಚ್ಚರಿಸಿದಂತಾಗಲು, ಶ್ರೀವತ್ಸನ ಹೃದಯ ತುಂಬಿಬಂತು. ಶ್ರೀವತ್ಸನ ಮೈಯಲ್ಲಿದ್ದ ರಕ್ತವೆಲ್ಲ ಮುಖದಲ್ಲಿ ತುಂಬಿ ಕೆಂಪು ಕೆಂಪಾದವು. ಅವನು ಮನಸ್ಸಿನ ಭಾವನೆಗಳನ್ನು ನಿಯಂತ್ರಿಸಲಾಗದೆ, “ಮೀನಾ, ನಾನು ನಿನ್ನ ಅಂಕಲ್ ಅಲ್ಲಮ್ಮ… ನಾನು… ನಾನು… ನಿನ್ನ…”
ಪಂಕಜಾ ಅವನ ನೆರವಿಗೆ ಬಂದಳು. ತಾನಾಡಿದ ಎರಡು ದೊಡ್ಡ ಸುಳ್ಳುಗಳನ್ನು ಸರಿಪಡಿಸುವ ಅವಕಾಶನ್ನು ಅವಳು ಬಿಟ್ಟುಕೊಡಲಿಲ್ಲ, “ಮೀನಾ ಪುಟ್ಟೀ.. ಇವರೇ ಕಣಮ್ಮ ನಿನ್ನ ಅಪ್ಪ. ಹೌದಮ್ಮ. ಸತ್ಯವಾಗಿ.. ಮೀನಾ…”
ಇದನ್ನು ಕೇಳುತ್ತಿದ್ದಂತೆ ಪುಟ್ಟ ಮೀನಾಳಿಗೆ ಆಕಾಶದಲ್ಲಿ ತೇಲಿಹೋದ ಅನುಭವವಾಯಿತು. ಅವಳು ಈ ಸುದ್ದಿಯನ್ನು ನಂಬಬೇಕೋ ಬೇಡವೋ ಎಂದು ತಡಬಡಿಸಿದಳು. ಅವಳ ಉಸಿರಾಟ ಏರಿಳಿಯುತ್ತಿತ್ತು….
“ನಾನು ನಿನಗೆ ಹೇಳಿದ್ದು ನೆನಪಿದೆಯಾ….?”
ತಾಯಿ ಮಾತುಗಳನ್ನು ಪೂರ್ತಿ ಮಾಡುವ ಮೊದಲೇ, ಅವಳು ತನ್ನ ಸಂತೋಷವನ್ನು ತಾಳಲಾರದೇ, “ಅ…..ಪ್ಪಾ…..!” ಎನ್ನುತ್ತಾ ಓಡಿ ಬಂದು ಅವನ ತೋಳುಗಳೊಳಗೆ ಮುಖ ಮರೆಸಿ ಶ್ರೀವತ್ಸನನ್ನು ಬಿಗಿಯಾಗಿ ತಬ್ಬಿ ಹಿಡಿದಳು. ಅವಳ ತಂದೆ ಸಹ ಆನಂದಾತಿರೇಕದಿಂದ ತನ್ನ ವಿಶಾಲ ತೋಳುಗಳನ್ನು ಚಾಚಿ, ಅವಳನ್ನು ಬಾಚಿ ತಬ್ಬಿಕೊಂಡು ಮುದ್ದಾಡಿದ. ಸ್ವಲ್ಪ ಹೊತ್ತು ಹಾಗೇ ತಂದೆಯ ಅಪ್ಪುಗೆಯಲ್ಲಿದ್ದ ಮೀನಾ, ಅನಂತರ ಸ್ವಲ್ಪ ಮಾತ್ರ ಬಿಡಿಸಿಕೊಂಡು, “ಅಪ್ಪಾ, ನಿನ್ನನ್ನು ದೇವರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನಾ?”
ಮಗಳ ಈ ಪ್ರಶ್ನೆಯನ್ನು ಕೇಳಿ ತಬ್ಬಿಬ್ಬಾದ ತಂದೆ ಒಂದು ಕ್ಷಣ ತಡೆದು ಪಂಕಜಾಳತ್ತ ತಿರುಗಿದ. ಅವಳ ಕಣ್ಣುಗಳಲ್ಲಿದ್ದ ಪ್ರಾರ್ಥನಾ ಭಾವವನ್ನು ಅವನು ಗಮನಿಸಿದ. ಮದುವೆಯ ಮೊದಲಿನ ದಿನಗಳಲ್ಲಿ, ಅವರು ಹೊರಗೆ ಸುತ್ತಾಡುವಾಗ, ಕಣ್ಣುಗಳಲ್ಲೇ ಸೂಚನೆ ನೀಡುತ್ತಿದ್ದಂತೆ, ಈ ಬಾರಿಯೂ ಮಗಳ ನಂಬಿಕೆಯನ್ನು ಅಳಿಸಬೇಡ ಎನ್ನುವಂತೆ, `ಶ್ರೀವತ್ಸ, ದಯವಿಟ್ಟು ರಹಸ್ಯವನ್ನು ಕಾಪಾಡಿ,’ ಎಂದು ಸೂಚಿಸಿದಳು.
`ಓಹ್! ಅಷ್ಟೇ ತಾನೇ…. ಆಗಲಿ, ಆಗಲಿ,’ ಎಂಬಂತೆ ಮುಖಭಾವ ಮಾಡಿಕೊಂಡು, ಮಗಳಿಗೆ, “ಹೌದಮ್ಮ, ದೇವರು ನನ್ನನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ,” ಎಂದ.
“ರಾತ್ರಿ ನೀನು ಮಲಗುದಕ್ಕೆ ಮುಂಚೆ ದೇವರು ನಿನಗಾಗಿ ಲಾಲಿ ಹಾಡು ಹಾಡುತ್ತಾನಾ?”
ಅವನು ಪಂಕಜಾಳತ್ತ ತಿರುಗಿದಾಗ, `ಹೌದೂಂತ…. ಹೇಳಿ,’ ಎಂದು ಸೂಚಿಸಿದಳು.
“ಹೌದಮ್ಮ, ದಿನಾಲೂ ಲಾಲಿ ಹಾಡುತ್ತಾನೆ.”
“ಅಪ್ಪಾ, ದೇವರು ನಿಮ್ಮನ್ನು ಇಲ್ಲಿ ಎಷ್ಟು ದಿನಗಳ ಮಟ್ಟಿಗೆ ಕಳುಹಿಸಿದ್ದಾನೆ?”
ಪಂಕಜಾ ತನ್ನ ಬಗ್ಗೆ ಯಾವ ಕಥೆ ಕಟ್ಟಿ ಹೇಳಿದ್ದಾಳೆ ಎಂದು ಶ್ರೀವತ್ಸನಿಗೀಗ ಅರ್ಥವಾಯಿತು. ಮುಂದೆ ಅವನು ಪಂಕಜಾಳ ಕಡೆ ತಿರುಗಿ ಕೇಳುವ ಅವಶ್ಯಕತೆ ಬರಲಿಲ್ಲ.
“ನಿನಗೆಷ್ಟು ದಿನ ನಿನ್ನ ತಂದೆಯ ಜೊತೆಯಲ್ಲಿರಬೇಕೆಂದು ಇಷ್ಟನಮ್ಮ?”
ಮೀನಾ ತಂದೆಯಿಂದ ತನ್ನ ಕೈಗಳನ್ನು ಬಿಡಿಸಿಕೊಂಡು ಎಣಿಸಲಾರಂಭಿಸಿದಳು. “1 2 3 4 5 6 7 8 9 10…..50….60…90… 100 ದಿನಗಳು…”
ಅವಳಿಗೆ 100 ಎಂದರೆ ಅನಂತ ದಿನಗಳಿದ್ದಂತೆ. ಅವಳ ಕ್ಲಾಸಿನಲ್ಲಿ 100ಕ್ಕಿಂತ ಹೆಚ್ಚಾಗಿ ಅವಳಿಗಿನ್ನೂ ಕಲಿಸಿರಲಿಲ್ಲ, “ಅಪ್ಪಾ, ದೇವರು ನಿನ್ನನ್ನು ನನ್ನ ಜೊತೆ 100 ದಿನಗಳವರೆಗೂ ಇರಲು ಒಪ್ಪಿಕೊಳ್ಳುತ್ತಾನಾ?”
“ಹ್ಞೂಂ….. ನೀನು ದೇವರನ್ನು ಚೆನ್ನಾಗಿ ಪ್ರಾರ್ಥಿಸಿಕೊಂಡರೆ ಒಪ್ಪಿಕೊಳ್ಳಬಹುದು….” ಅವಳ ಮುಖ ಮೊರದಗಲವಾಯಿತು,
“ಹಾಗಾದರೆ ಈಗಲೇ ಮನೆಗೆ ನಡಿ. ನಾನು ಈ ದಿನವೇ ದೇವರಲ್ಲಿ ಬೇಡಿಕೊಳ್ಳುತ್ತೇನೆ. ಬೇಗ ನಡಿಯಪ್ಪಾ….” ಎಂದು ತಂದೆಯ ತುದಿಬೆರಳನ್ನು ಹಿಡಿದು ಹೋಗಲನುವಾದಳು. ಶ್ರೀವತ್ಸ ಈಗ ಇಬ್ಬಂದಿಯಲ್ಲಿ ಸಿಕ್ಕಿಬಿದ್ದಿದ್ದ. ಆ ರಾತ್ರಿಯಲ್ಲಿ ಹೋಗಿ ಮಾಜಿ ಪತ್ನಿಯ ಮನೆಯಲ್ಲಿ ಉಳಿದುಕೊಳ್ಳುವುದೇ?
ಅವನು ಪಂಕಜಾಳ ಕಡೆ ನೋಟವನ್ನು ಹಾಯಿಸಿದಾಗ, ಅವಳು ಈಗಾಗಲೇ ಎದ್ದು ಅವನಿಗೆ ಬೆನ್ನು ಮಾಡಿ ನಿಂತಿದ್ದಳು. ಅವಳು `ಹ್ಞೂಂ’ ಅಥವಾ `ಉಹ್ಞೂಂ ಎನ್ನುವ ಸ್ಥಿತಿಯಲ್ಲಿರಲಿಲ್ಲ. ಬಂದ ಪರಿಸ್ಥಿತಿಯನ್ನು ಎದುರಿಸೋಣ ಎಂದು ಮಾತ್ರ ಸಿದ್ಧಳಾಗಿದ್ದಳು. ತಮ್ಮ ಸಂಭಾಷಣೆಯ ನಡುವೆ ದೇವರ ಹೆಸರು ಬಂದಿದ್ದರಿಂದ, ಆ ಪರಮಾತ್ಮನೇ ನಿರ್ಧರಿಸಲಿ ಎಂಬಂತೆ ಇದ್ದಳು.
ಶ್ರೀವತ್ಸನ ಕಾರಿನಲ್ಲಿ ಮೂವರೂ ಕುಳಿತ ಮೇಲೆ ಕಾರು ಮಾತಿಲ್ಲದೆ ಸಾಗಿತು. ಮಧ್ಯದಲ್ಲಿ ಯಾರೂ ಮಾತನಾಡಲಿಲ್ಲ. ಪಂಕಜಾ ಮತ್ತು ಶ್ರೀವತ್ಸರಿಬ್ಬರೂ ವಿಧಿಯ ವೈಚಿತ್ರ್ಯಕ್ಕೆ ಬೆರಗಾಗಿ ಮುಂದೇನಾಗುತ್ತದೋ ಎಂದು ತವಕದಿಂದ ಕಾಯುತ್ತಿದ್ದರು. ಮೀನಾಳ ಆಲೋಚನೆಯೇ ಬೇರೆಯಾಗಿತ್ತು. ದೇವರು ತಂದೆಯನ್ನು ಕಾರಿನ ಸಹಿತ ತನ್ನ ಬಳಿಗೆ ಹೇಗೂ ಕಳುಹಿಸಿದ್ದಾನೆ. ತಾನೇಕೆ ಮರುದಿನ ತಂದೆಯೊಂದಿಗೆ ಕಾರಿನಲ್ಲಿ ಹೋಗಿ ಸ್ಕೂಲಿನ ಮುಂದಿಳಿಯಬಾರದು? ಇಂಥ ಒಳ್ಳೆ ತಂದೆಯನ್ನು ಅವರಿಗೆಲ್ಲ ಖಂಡಿತ ತೋರಿಸಬೇಕು.
“ಹ್ಞಾಂ… ಅದೇ ನಮ್ಮ ಮನೆ,” ಪಂಕಜಾ ರಸ್ತೆಯ ಬಲಗಡೆಗಿದ್ದ ಒಂದು ಮನೆಯತ್ತ ಬೊಟ್ಟು ಮಾಡಿದಳು. ಹಾಗೆ ತೋರಿಸುವಾಗ ಆಕಸ್ಮಿಕವಾಗಿ ಅವಳ ಕೈ ಶ್ರೀವತ್ಸನ ಗಲ್ಲಕ್ಕೆ ತಾಗಿತು. ಅವಳ ಮೈಯಲ್ಲಿ ಮಿಂಚೊಂದು ಸುಳಿದಂತಾಗಿ ಅವಳು ರೋಮಾಂಚನಗೊಂಡಳು. ಮೀನಾ ತಮ್ಮ ಮನೆಯ ದೇವರ ಕೋಣೆಗೆ ಹೋಗಿ ಪ್ರಾರ್ಥನೆ ಸಲ್ಲಿಸುತ್ತಿದ್ದಂತೆ ಶ್ರೀವತ್ಸ ಪಂಕಜಾಳತ್ತ ತಿರುಗಿ, `ನನ್ನ ಬಗ್ಗೆ ಅವಳಿಗೇನು ತಿಳಿಸಿರುವೆ? ನಾನು ಬದುಕಿದ್ದೀನಾ…. ಸತ್ತಿದ್ದೀನಾ….?’ ಎಂಬಂತೆ ಕಣ್ಣಲ್ಲಿಯೇ ಅಳನ್ನು ಪ್ರಶ್ನಿಸಿದ. ಅದಕ್ಕೆ ಪಂಕಜಾ ಉತ್ತರವಾಗಿ ಸನ್ನೆ ಮಾಡಿದಳು.
`ನಾನೇನು ಮಾಡಲಾಗಲಿಲ್ಲ. ಒಂದೇ ರಾತ್ರಿಯಲ್ಲಿ ಅಪ್ಪನನ್ನು ತಂದು ತನ್ನ ಮುಂದೆ ನಿಲ್ಲಿಸಬೇಕೆಂದಳು…… ನನ್ನನ್ನು ಕ್ಷಮಿಸಿ….’
ಅಷ್ಟರಲ್ಲಿ ಮೀನಾ ದೇವರ ಕೋಣೆಯಿಂದ ಇವರ ಬಳಿಗೆ ಬಂದಿದ್ದಳು.
“ಅಪ್ಪಾ, ಅಪ್ಪಾ, ನೋಡಿದಿರಾ…?. ದೇವರು ನನ್ನ ಮಾತಿಗೆ ಒಪ್ಪಿಕೊಂಡಿದ್ದಾನೆ. ನಾನು ಒಳ್ಳೆಯವಳಾಗಿ ಇದ್ದು, ಚೆನ್ನಾಗಿ ಓದಿದ್ದರಿಂದಲೇ ಅಲ್ಲವೇ, ನೀವು ಇಲ್ಲಿಗೆ ಬಂದದ್ದು? ನಾಳೆ ನನ್ನೊಂದಿಗೆ ಸ್ಕೂಲಿಗೆ ಬರುತ್ತೀರ ಅಪ್ಪ?”
ಅಯ್ಯೋ ರಾಮ! ಈಗೇನಪ್ಪಾ ಮಾಡಲಿ? ಮೀನಾಳ ಈ ಬೇಡಿಕೆಗೆ ಏನು ಹೇಳುವುದೆಂದು ಶ್ರೀವತ್ಸನಿಗೆ ತಿಳಿಯಲಿಲ್ಲ. ಆದರೆ ಪಂಕಜಾ ಅವನ ಪರವಾಗಿ ನಿರ್ಧಾರ ತಿಳಿಸಿದಳು, “ಹಾಗೇ ಆಗಲಮ್ಮ. ನಾಳೆ ಅಪ್ಪ ನಿನ್ನೊಂದಿಗೆ ಬರಬೇಕು…. ಅಷ್ಟೆ ತಾನೇ? ಬರುತ್ತಾರೆ. ಈ ದಿನ ಅವರು ನಿನ್ನೊಂದಿಗೆ ಮಲಗುತ್ತಾರೆ. ಸರಿ ತಾನೇ?”
ತಣ್ಣನೆಯ ಮಂದಾನಿಲವೊಂದು ಅವನನ್ನು ಸವರಿಕೊಂಡು ಹೋದಂತಾಯಿತು. ಒಂದು ಕ್ಷಣ ಅವನ ತಲೆಯಲ್ಲಿ ವಿಚಾರಗಳ ಅಲ್ಲೋಲಕಲ್ಲೋಲವಾಗಿ ಅಲ್ಲಿಂದ ಹೊರಟು ಹೋಗಲೇ ಎಂದುಕೊಂಡ. ಶ್ರೀವತ್ಸ ಅಷ್ಟರಲ್ಲಿ ತನ್ನ ಎಂದಿನ ಸಂಯಮವನ್ನು ಉಳಿಸಿಕೊಂಡ. ಆಗ ರಾತ್ರಿ 9.30ರ ಸಮಯವಾಗಿತ್ತು. ಯಾರಿಗೂ ಹಸಿವು ಎನಿಸಲಿಲ್ಲ. ಆರತಕ್ಷತೆಯಲ್ಲಿ ಭಾರಿ ಔತಣದ ಊಟ ಮುಗಿದಿದ್ದರಿಂದ ಮನೆಯಲ್ಲಿ ಮತ್ತೆ ತಿನ್ನಬೇಕೆನಿಸಲಿಲ್ಲ. ಮೀನಾ ತನ್ನ ತಂದೆಯ ಕೈ ಹಿಡಿದೆಳೆಯುತ್ತ, “ಅಪ್ಪಾ…. ಬಾಪ್ಪಾ…. ನಾನು ನಿದ್ದೆ ಮಾಡಬೇಕು,” ಎಂದಳು.
ಶ್ರೀವತ್ಸನ ಮನಸ್ಸಿನಲ್ಲಿ ಹೃದಯ ಹಾಗೂ ಬುದ್ಧಿಗಳ ತಿಕ್ಕಾಟ ನಡೆದಿತ್ತು. ಅವನಿಗೇನೂ ತೋಚಲಿಲ್ಲ. “ಮೀನು…. ಮೀನೂ ಮರಿ…. ನೀನು ಮಲಗಮ್ಮ. ಇದೋ ನಾನೀಗಲೇ ಬಂದೆ ಸರೀನಾ?” ಅವನಿಗೆ ಇದರ ಬಗ್ಗೆ ತೀರ್ಮಾನಿಸಲು ಕೆಲವು ಕ್ಷಣಗಳ ಕಾವಾವಕಾಶವಾದರೂ ಬೇಕಿತ್ತು. ಆದರೆ ಮೀನಾ ತನ್ನ ಕೈಗಳನ್ನು ಚಾಚುತ್ತ, “ಪ್ರಾಮಿಸ್!” ಎಂದಳು.
ಅವನ ಪಿತೃ ಹೃದಯ ಚಡಪಡಿಸಿತು. ಆದರೂ ಸಾವರಿಸಿಕೊಂಡು, “ಆಲ್ ರೈಟ್, ಪ್ರಾಮಿಸ್,” ಎನ್ನುತ್ತ ಅನಳ ಕೋಮಲ ಹಸ್ತನನ್ನು ಸನರಿದ. ಮುಂದೆರಡು ಕ್ಷಣಗಳಲ್ಲಿ ಮಗು ಮಲಗಿ ನಿದ್ರಿಸಿತು. ಆ ದಿನ ತನಗೆ ಕಥೆ ಹೇಳು ಎಂದು ಸಹ ತಾಯಿಯನ್ನು ಪೀಡಿಸಲಿಲ್ಲ.
“ಇದೇನು ಮಾಡಿಬಿಟ್ಟೆ?” ಕೋಣೆಯಲ್ಲಿ ಅವರಿಬ್ಬರೇ ಉಳಿದಾಗ ಶ್ರೀವತ್ಸ ಪಂಕಜಾಳತ್ತ ತಿರುಗಿ ಹೇಳಿದ. ಅವನು ಅಸಹಾಯಕತೆಯಲ್ಲಿ ಮುಳುಗಿದ್ದ. ನಡೆಯುತ್ತಿದ್ದ ಘಟನೆಗಳನ್ನು ಅವನು ಸ್ವಲ್ಪ ನಿಯಂತ್ರಿಸುವ ಹಾಗಿರಲಿಲ್ಲ.
ಒಂದರ ನಂತರ ಒಂದು ಘಟನೆಗಳು! ಕನಸಿನಲ್ಲೆಂಬಂತೆ ಎಲ್ಲವೂ ನಡೆದವು, ಈಗ ಅವನು ತನ್ನ ಮಾಜಿ ಪತ್ನಿಯ ಮನೆಯಲ್ಲಿ, ಅವಳಿಂದ ಎರಡಡಿ ಸಮೀಪದಲ್ಲಿ ನಿಂತಿದ್ದ. ಕ್ವಾಲಿಟಿಯವರಿಗೆ ಈ ವಿಷಯ ತಿಳಿದರೆ ಇದು ಮತ್ತೊಂದು ಹಗರಣವಾದೀತು ಎಂದುಕೊಂಡ. ಇದು ದೇವರ ಚಿತ್ತಕ್ಕೆ ಬಿಟ್ಟ ತೀರ್ಪು ಎಂದು ಸುಮ್ಮನಾದ. ಪಂಕಜಾ ಈಗ ಪೂರ್ತಿ ಜವಾಬ್ದಾರಿಯನ್ನು ಅವನ ಹೆಗಲಿಗೇ ಕಟ್ಟಿದಳು. ಜೀವನದ ಜಂಜಾಟಗಳಿಂದ ಬೇಸತ್ತ ಅವಳು ಕುಟುಂಬದ ಹೊಣೆಗಾರಿಕೆ ಹೊತ್ತು ಬೇಸರಗೊಂಡಿದ್ದಳು.
“ಈ ರಾತ್ರಿ ನೀವು ಇಲ್ಲೇ ಮಲಗುತ್ತೀರೇನು?” ವ್ಯಾವಹಾರಿಕವಾಗಿ ಅವಳು ಪ್ರಶ್ನಿಸಿದಳು. ಅವಳ ಮುಖದಲ್ಲಿ ಕಂಡೂ ಕಾಣದಂತೆ ಒಂದು ತುಂಟ ನಗು ತೇಲಿ ಮರೆಯಾಯಿತು. ಅವಳ ಪ್ರಶ್ನೆ ಅವನನ್ನು ಹಿಡಿದಲುಗಿಸಿತು. ಅವನ ಮಗಳು ಪ್ರಮಾಣ ಮಾಡುವಂತೆ ಕೇಳಿದಾಗ ಅವನ ಬಳಿ ತನ್ನದಾದ ಆಯ್ಕೆ ಉಳಿದಿತ್ತೆ? ಮತ್ತೆ ಅವನು ವಿಧಿಗೆ ಮೊರೆ ಹೋದ. ತನ್ನ ಕಛೇರಿಯಲ್ಲಿ ಶೀಘ್ರ ನಿರ್ಣಾಯಕನೆಂದು ಖ್ಯಾತಿಗಳಿಸಿದ್ದನು ಇಲ್ಲಿ ಬಾಯಿಬಿಡಲೇ ಆಗಲಿಲ್ಲ.
“ಆದರೆ ಒಂದನ್ನು ಮಾತ್ರ ನೆನಪಿಡಿ….” ಪಂಕಜಾ ತನ್ನ ಅಭಿಪ್ರಾಯವನ್ನು ಹೊರಗೆಡವಿದಳು, “ನಾವು ಈಗಾಗಲೇ ವಿಚ್ಛೇದನ ಪಡೆದು ಅಗಲಿದವರು ಎಂಬುದನ್ನು ಮರೆಯಬೇಡಿ…..”
ಶ್ರೀವತ್ಸ ಆಗುಹೋಗುಗಳನ್ನು ಗಮನಿಸಿಕೊಂಡು ನಿರ್ಣಯ ತೆಗೆದುಕೊಳ್ಳುವುದರಲ್ಲಿ ಚಾಣಾಕ್ಷನಾಗಿದ್ದ. ಕೆಲಸಕ್ಕೆ ಸೇರಿದ ಏಳೇ ವರ್ಷಗಳ ಅನುಭವದಲ್ಲಿ ಅವನು ಜನರಲ್ ಮ್ಯಾನೇಜರ್ ಆಗಿದ್ದನೆಂದರೆ ಅದು ಅವನ ವಿವೇಕದ ಪ್ರತೀಕವಲ್ಲವೇ? ಇದುವರೆಗಿನ ಈ ದಿನದ ಘಟನೆಗಳಿಂದ ಪಂಕಜಾ ಮನಸ್ಸಿನಲ್ಲಿ ನಡೆಯುತ್ತಿರುವ ಹೋರಾಟವೇನೆಂದು ಅರಿಯದಂಥ ಮೂರ್ಖ ಅವನಲ್ಲ. ಪ್ರತಿ ಬಾರಿಯೂ ತೀರ್ಮಾನವನ್ನು ಅವನ ವಶಕ್ಕೇ ಬಿಡುತ್ತಿದ್ದಳು. ಇಂಥ ಸಂದರ್ಭದಲ್ಲಿ ಅವನೊಂದು ಪ್ರಮುಖ ನಿರ್ಣಯಕ್ಕೆ ಬದ್ಧನಾಗದಿದ್ದಲ್ಲಿ ಜೀವನದ ಅಮೂಲ್ಯ ನಿಧಿಯನ್ನು ಅವನು ಕಳೆದುಕೊಳ್ಳಬೇಕಾಗಿತ್ತು.
“ನಾವಿಬ್ಬರೂ ವಿಚ್ಛೇದನ ಪಡೆದು ಅಗಲಿದವರು ಎಂದೆಯಲ್ಲವೇ?” ಅವನು ಒಂದು ದೃಢ ನಿರ್ಧಾರಕ್ಕೆ ಬಂದು ಎರಡರಲ್ಲೊಂದು ಎಂದು ನಿಶ್ಚಯಿಸಿಯೇ ಕೇಳಿದ.
“ಹೌದು.”
“ವಿಚ್ಛೇದನಕ್ಕೆ ಸಂಬಂಧಿಸಿದ ನಿನ್ನ ಕಾಗದ ಪತ್ರಗಳೆಲ್ಲಿವೆ? ಅದನ್ನು ತರುತ್ತೀಯಾ?”
“ಸರಿ,” ಎಂದ ಪಂಕಜಾ ಬೀರುವಿನಲ್ಲಿದ್ದ ಉದ್ದನೆಯ ಲಕೋಟೆಯನ್ನು ತಂದು ಅವನ ಕೈಗಿತ್ತಳು. ಅದನ್ನು ಅವಳು ಅವನ ಮುಂದಿಡುತ್ತಿದ್ದಂತೆ ಶ್ರೀವತ್ಸ ಉದ್ಗರಿಸಿದ, “ಈ ಪ್ರಪಂಚದಲ್ಲಿ ನಮ್ಮಿಬ್ಬರಿಗೆ ಬಿಟ್ಟು ಇನ್ಯಾರಿಗೂ ಈ ಕಾಗದ ಪತ್ರಗಳ ಬೆಲೆ ತಿಳಿಯದು. ನನಗಂತೂ ಇದರ ಅವಶ್ಯಕತೆ ಕಾಣಿಸುತ್ತಿಲ್ಲ. ನೀನೇಕೆ ಇದನ್ನು ಹರಿದು ಬಿಸಾಡಬಾರದು?”
ಅವಳ ಕಿವಿಯಲ್ಲಿ ಮಂಗಳ ಧ್ವನಿ ಮೊಳಗುತ್ತಿರುವ ಅನಿಸಿಕೆಯೊಡನೆ, ಅವಳು ಸರಸರನೆ ಆ ನೀರಸ ಕಾಗದಗಳನ್ನು ಹರಿದು ಚಿಂದಿ ಮಾಡಿದಳು.
“ಇಷ್ಟು ಮಾತ್ರಕ್ಕೆ ನಮ್ಮ ನಿಲುವಿನಲ್ಲಿ ದೊಡ್ಡ ಬದಲಾವಣೆ ಆಗಿದೆ ಎಂದು ನನಗನ್ನಿಸುತ್ತಿಲ್ಲ,” ಎಂದಳು ಪಂಕಜಾ.
ಕ್ವಾಲಿಟಿಯ ಮ್ಯಾನೇಜರ್ ಅವಳತ್ತ ಒಮ್ಮೆ ದೃಷ್ಟಿ ಹಾಯಿಸಿ ತನ್ನ ಕಣ್ಣಿನ ಹುಬ್ಬುಗಳನ್ನು ಹಿಗ್ಗಿಸುತ್ತಾ, `ಈ ಹೆಂಗಸರು ತಮ್ಮ ಮನಸ್ಸಿನ ಭಾವನೆಗಳನ್ನೇಕೆ ಒಗಟಿನಲ್ಲಿ ವ್ಯಕ್ತಪಡಿಸುತ್ತಾರೆ?’ ಎಂದು ತನ್ನಲ್ಲೇ ಗೊಣಗುತ್ತ ತಲೆಯಲುಗಿಸಿದ.
“ಸರಿ…. ಆದರೆ ಇಷ್ಟು ಹೊತ್ತಿನಲ್ಲಿ ಮನೆಯಲ್ಲಿ ಹೂವಿನ ಹಾರಗಳು ಇವರು ಸಾಧ್ಯತೆ ಇಲ್ಲ ಅಲ್ಲವೇ?” ಆ ಮ್ಯಾನೇಜರ್‌ಸೀತಾರಾಮರ ಪಟಕ್ಕೆ ತಗಲಿ ಹಾಕಿದ್ದ ಶ್ರೀಗಂಧದ ಹಾರಗಳು ಕೆಳಗೆ ಬೀಳುತ್ತದೇನೋ ಎಂದು ನಿರೀಕ್ಷಿಸಿದ.
“ಅದನ್ನು ನಾನು ತರುತ್ತೇನೆ,” ಅವಳ ಸ್ವರದದಲ್ಲಿ ಜೇನು ಒಸರುತ್ತಿದ್ದರೆ, ನಡಿಗೆಯಲ್ಲಿ ಕುಣಿತದ ಸಂಭ್ರಮವಿತ್ತು. ಈ ಸಂದರ್ಭಕ್ಕಾಗಿ ಅವಳ ಹೃದಯ ಅದೆಷ್ಟು ಕನಸುಗಳನ್ನು ಕಂಡಿತ್ತೊ!
ಪಂಕಜಾ ಹಾರಗಳಿಗಾಗಿ ಹುಡುಕುತ್ತಲಿದ್ದಾಗ, ಶ್ರೀವತ್ಸ ತುಂಬಿ ಬಂದ ಮನಸ್ಸಿನಿಂದ ಗದ್ಗದಿತನಾಗಿ ಹೇಳಿದ, “ಪಂಕಜಾ, ನಿನಗೆ ಗೊತ್ತಾ? ನಮ್ಮ ಭಾರತದ ಸಮಾಜದಲ್ಲಿ ವಿಚ್ಛೇದನ ಪಡೆಯುವುದು ಎಷ್ಟು ಸುಲಭವೋ, ಮರುಮದುವೆಗೆ ಸಿದ್ಧತೆ ಮಾಡಿಕೊಳ್ಳುವುದು ಅದರ ಸಾವಿರ ಪಟ್ಟು ಕಷ್ಟಕರ.”
“ಹೌದೂಂದ್ರೆ…… ನಿಮ್ಮ ಮಾತು ನಿಜ,” ಎಂದು ನುಡಿದ ಎರಡು ನಿಮಿಷದಲ್ಲಿ ಅವಳು ಬಂದಳು.
“ಹಾರದ ಬದಲಿಗೆ ಇದಾಗಬಹದೇ?” ಅವಳು ತನ್ನ ಬಳಿಯಿದ್ದ ಉಲ್ಲನ್ ಬಂಡಲ್‌ನಿಂದ ಎರಡು ದಾರಗಳನ್ನು ಬೆಸೆದು, ಅದಕ್ಕೆ ಅರಿಶಿನ ಹಚ್ಚಿ ದೇವರ ಮುಂದಿಟ್ಟು, ನಮಸ್ಕರಿಸಿ ತಂದಿದ್ದಳು.
ಮನಮಿಡಿಯುವ ಆ ದೃಶ್ಯವನ್ನು ಕಂಡು ಶ್ರೀವತ್ಸ ಸಂತಸವನ್ನು ವ್ಯಕ್ತಪಡಿಸುತ್ತ, “ಇದು ನಮ್ಮ ಬಿಡಿಸಲಾಗದ ಬಂಧನಕ್ಕೆ ಭದ್ರ ಬುನಾದಿಯಾಗಿರುತ್ತದೆ,” ಎಂದು ತನ್ನ ಅಭಿಪ್ರಾಯ ತಿಳಿಸಿದ. ಪೂಜಾ ಕೊಠಡಿಯಲ್ಲಿ ಪಂಕಜಾ ಹಲವಾರು ದೇವರ ಪಟಗಳನ್ನು ಸಾಲಾಗಿ ಜೋಡಿಸಿದ್ದಳು. ನಡುವಿನಲ್ಲಿದ್ದ ಸೀತಾರಾಮರ ವಿಗ್ರಹದ ಬಳಿ ಬಂದು, ಅವರು ಒಟ್ಟಾಗಿ ನಮಸ್ಕರಿಸಿದರು. ದೇವರ ಎದುರಿನಲ್ಲಿ ನಿಂತು ಶ್ರೀವತ್ಸ-ಪಂಕಜಾ ಉಲ್ಲನ್ ಹಾರಗಳನ್ನು ಬದಲಾಯಿಸಿಕೊಂಡರು. ಶ್ರೀವತ್ಸ ಕರಡಿಗೆಯಲ್ಲಿದ್ದ ಕುಂಕುಮವನ್ನು ತೆಗೆದು ಪಂಕಜಾಳ ಬೈತಲೆಗೆ ಸಿಂಧೂರ ಹಚ್ಚಿದ. ತುಂಬಿ ಬಂದ ಹೃದಯದ ಬಡಿತವೇ ವೇದಮಂತ್ರಗಳ ಘೋಷಣೆಯಾಗಿರಲು, ಧರ್ಮ ಸಮ್ಮುಖವಾಗಿ ಅವರು ಮತ್ತೊಮ್ಮೆ ಪತಿಪತ್ನಿಯಾದರು. ಸಂತೋಷ ಉದ್ವೇಗಗಳಿಂದ ಪಂಕಜಾಳ ಕಣ್ಣಲ್ಲಿ ಆನಂದಭಾಷ್ಪ ಉಕ್ಕಿ ಬರಲು, ಪಂಕಜಾ ಬಾಗಿ ಪತಿಯ ಪಾದಗಳನ್ನು ಕಣ್ಣಿಗೊತ್ತಿಕೊಳ್ಳುತ್ತ, “ಏಳೇಳು ಜನ್ಮಕ್ಕೂ ಕಾಯವಾಚಮನಸಾ ನಿಮ್ಮ ಧರ್ಮಪತ್ನಿಯಾಗಿಯೇ ಉಳಿಯಲು ಬಯಸುತ್ತೇನೆ, ಶ್ರೀವತ್ಸ…..” ಎಂದಳು.
ತುಂಬಿಬಂದ ಪ್ರೀತಿಯಿಂದ ಅವಳನ್ನು ತನ್ನ ಎದೆಗೊರಗಿಸಿಕೊಂಡು, “ಇಲ್ಲ, ಇಲ್ಲ ಪಂಕಜಾ…. ನನ್ನ ಪಾದಕ್ಕೆ ನೀನು ನಮಸ್ಕರಿಸಬೇಕಿಲ್ಲ. ಪಾಪ ಮಾಡಿದವನು ನಾನು… ನೀನು ಕ್ಷಮಿಸಬೇಕಷ್ಟೆ..” ಎಂದು ತಾನು ಬಗ್ಗಿ ಅವಳ ಪಾದ ಮುಟ್ಟಲು ಬಂದ. ಸರ್ರನೆ ತನ್ನ ಕಾಲುಗಳನ್ನು ಹಿಂದಕ್ಕೆಳೆದು ಕೊಂಡ ಪಂಕಜಾ, “ಇದೇನು ಮಾಡಿದಿರಿ ಶ್ರೀವತ್ಸಾ… ನಮ್ಮ ಹಿಂದೂ ಸಂಪ್ರದಾಯದಲ್ಲಿ ಗಂಡ ಎಂದಾದರೂ ಹೆಂಡತಿಯ ಕಾಲು ಮುಟ್ಟುವುದೇ? ಅದು ಅವಳ ಸೌಭಾಗ್ಯಕ್ಕೆ ಕುಂದು ತರುತ್ತದೆ…..” ಕಂಬನಿದುಂಬಿ ನುಡಿದ ಅವಳ ಮಾತುಗಳಿಗೆ ಉತ್ತರಿಸಲಾರದೆ ಶ್ರೀವತ್ಸ ಅವಳನ್ನು ತನ್ನ ಬಾಹುಗಳಲ್ಲಿ ಅಡಗಿಸಿಕೊಂಡ.
ಸಂತೋಷದಿಂದ ಪಂಕಜಾಳ ಮನಸ್ಸು ಸಂಗೀತ ಹಾಡುತ್ತಿತ್ತು. ಪತಿಯಿಂದ ದೂರವಿದ್ದಳೇ ಹೊರತು ಪಂಕಜಾ ಗಂಡನ ಇಷ್ಟಾನಿಷ್ಟಗಳನ್ನು ಮರೆತಿರಲಿಲ್ಲ. ಮಲಗುವುದಕ್ಕೆ ಮೊದಲು ಅವನು ಇಷ್ಟಪಡುತ್ತಿದ್ದ ಬಿಸಿಬಿಸಿ ಹಾರ್ಲಿಕ್ಸ್ ನ್ನು ಬೆರೆಸಿ ತಂದಳು. ಅವಳು ತನ್ನದೇ ಲಹರಿಯಲ್ಲಿ ಅಡುಗೆಮನೆಯಲ್ಲಿ ದೇವರ ಕೃಪೆಯಿಂದ ಘಟಿಸಿದ ಘಟನೆಗಳನ್ನು ನೆನೆಯುತ್ತಿದ್ದರೆ, ತಡವಾದ ಕಾರಣ ಅಪೂರ್ವ ಮನಶ್ಶಾಂತಿಯಿಂದ ಮಗಳು ಮೀನಾಳನ್ನು ತನ್ನ ಎದೆಗವುಚಿಕೊಂಡು ಹಾಯಾಗಿ ನಿದ್ರಿಸಿದ್ದ ಶ್ರೀವತ್ಸ.
ಆನಂದವಾಗಿ ನಿದ್ರಿಸುತ್ತಿದ್ದ ತಂದೆಮಗಳನ್ನು ಎಬ್ಬಿಸುವ ಗೊಡವೆಗೆ ಅವಳು ಹೋಗಲಿಲ್ಲ. ಅಂತೆಯೇ ಅವಳು ಪಕ್ಕದ ಹಜಾರದಲ್ಲಿದ್ದ ಸೋಫಾದ ಮೇಲೆ ಹೋಗಿ ಮಲಗಿದಳು. ನಿದ್ರೆ ಅವಳಿಂದ ದೂರ ಉಳಿಯಿತು.
ಮತ್ತೊಮ್ಮೆ ತಾನು ವಿವಾಹಿತ ಸ್ತ್ರೀಯಾಗಿದ್ದೇನೆ. ಅದಕ್ಕಿಂತ ಮುಖ್ಯವಾಗಿ ಪುಟ್ಟ ಮೀನಾಳಿಗೆ ತಂದೆ ದೊರಕಿದ್ದಾರೆ ಎಂಬ ಭಾವನೆ ಅವಳನ್ನು ಗಗನದಲ್ಲಿ ತೇಲಿಸುತ್ತಿತ್ತು. ಶ್ರೀವತ್ಸನನ್ನು ಅಗಲಿ ತಾನು ಎರಡು ವರ್ಷಗಳ ಕಾಲ ಹೇಗಿದ್ದೆನೋ ಎಂದು ನಂಬಲೇ ಆಗುತ್ತಿಲ್ಲ. ಮತ್ತೆ ಹೊಸದಾಗಿ ದಾಂಪತ್ಯ ಜೀವನಕ್ಕೆ ಹೊಂದಿಕೊಳ್ಳಲು ಅವಳಿಗೆ ಸ್ವಲ್ಪ ಕಾಲಾವಕಾಶ ಬೇಕಾಗಿತ್ತು. ತನ್ನ ಜೀವನದಲ್ಲಿ ಮತ್ತೆ ಶ್ರೀವತ್ಸನ ಪ್ರವೇಶವಾಗಿದೆ ಎಂಬುದೇ ಅವಳಿಗೆ ಅತಿ ಮಧುರವಾದ ಭಾವನೆಯಾಗಿತ್ತು.
ಮೊದಮೊದಲು ಮಂಜುಳಾಳ ಮದುವೆಗೆ ಹೋಗುವುದೋ ಬೇಡವೋ ಎಂಬ ಜಿಜ್ಞಾಸೆಯಲ್ಲಿ ಅವಳು ಇದ್ದಳು. ಅನಂತರ ಅಳೆದೂಸುರಿದು ಆರಕ್ಷತೆಗೆ ಮಗಳ ಸಹಿತ ಬಂದಿದ್ದಳು. ಆ ಘಳಿಗೆ ಅವಳ ಜೀವನದ ಅಮೃತ ಘಳಿಗೆಯಾಗಿ ಮಾರ್ಪಟ್ಟಿತ್ತು. ಆ ದಿನ ನಡೆದದ್ದೆಲ್ಲ ಕನಸೋ ನನಸೋ ಎಂದು ತನ್ನನ್ನು ತಾನೇ ಚಿವುಟಿಕೊಂಡು, ತೃಪ್ತಿಪಟ್ಟು ಆನಂದದಿಂದ ನಿದ್ರಿಸಿದಳು.