“ಈ ಸಲದ ಬರ್ಥ್‌ ಡೇ ಕಾರ್ಯಕ್ರಮಕ್ಕೆ ನಾನು ಇಂತಿಂಥ ಗಿಫ್ಟ್ ತೆಗೆದುಕೊಂಡು ಬರ್ತೀನಿ ಎಂದು ಪತಿ ನನಗೆ ಹೇಳುತ್ತಾರೆ, ಇಲ್ಲವೇ ಈ ಸಲ ನಾನು ನಿನಗೆ ಏನು ಗಿಫ್ಟ್ ತರಲಿ ಎಂದು ಅವರು ನನ್ನನ್ನೇ ಕೇಳುತ್ತಾರೆ,” ಹೀಗೆ ಹೇಳಿದ್ದು ಅರ್ಚನಾ. ಪತಿಯ ಈ ಸ್ವಭಾವ ಆಕೆಗೆ ಖಂಡಿತ ಇಷ್ಟವಾಗುವುದಿಲ್ಲ. ಏನೇ ಕೊಟ್ಟರೂ ಅದು ಸರ್‌ಪ್ರೈಸ್‌ ಆಗಿ ಇರಬೇಕು ಎನ್ನುವುದು ಅವಳ ಅಪೇಕ್ಷೆ. ಆಕೆ ತನ್ನ ಪತಿಗೆ ನೀವು ಹೀಗೆಲ್ಲ ಮೊದಲೇ ಹೇಳಿ ಅಥವಾ ಕೇಳಿಕೊಂಡು ಗಿಫ್ಟ್ ಕೊಡಬಾರದು ಎಂದು ಹೇಳಿದ್ದಳು. ಕಳೆದ ವರ್ಷ ಮದುವೆಯ ವಾರ್ಷಿಕೋತ್ಸವಕ್ಕೆ ಇನ್ನೂ 4-5 ದಿನಗಳು ಉಳಿದಿದ್ದವು. ಆದರೆ ಪತಿ ಈ ಬಗ್ಗೆ ಆಕೆಗೆ ಏನೇನೂ ಕೇಳಿರಲಿಲ್ಲ….

ಅರ್ಚನಾಳ ಮನಸ್ಸಿನಲ್ಲಿ ಒಂದು ರೀತಿಯಲ್ಲಿ ಅಲ್ಲೋಲ ಕಲ್ಲೋಲವೇ ನಡೆದುಹೋಗಿತ್ತು. ಅವರು ಈಗ ಕೇಳಬಹುದು, ನಾಳೆ ಕೇಳಬಹುದು ಎಂದು ಯೋಚಿಸುತ್ತಲೇ ಇದ್ದಳು. ಕೊನೆಗೆ ಅವಳು ಮದುವೆ ವಾರ್ಷಿಕೋತ್ಸವದ ನೆನಪಾದರೂ ಇವರಿಗೆ ಇದೆಯೋ ಇಲ್ಲವೋ ಎಂದು ಯೋಚಿಸತೊಡಗಿದಳು.

gift-7

ಮುಂಜಾನೆ ಪತಿ ಮುಗುಳ್ನಕ್ಕು `ಹ್ಯಾಪಿ ಆ್ಯನಿರ್ಸರಿ ಡೇ’ ಹೇಳಿ, ಸಂಜೆಯ ಪಾರ್ಟಿಯ ಬಗ್ಗೆ ನೆನಪು ಮಾಡಿ ಆಫೀಸಿಗೆ ಹೊರಟು ಹೋದರು. ಸಂಜೆ ಬರಬೇಕಾದ ಅತಿಥಿಗಳೆಲ್ಲ ಆಗಮಿಸಿದರು. ಪತಿ ಕೂಡ ಬಂದರು. ಗಿಫ್ಟ್ ಬಗ್ಗೆ ಏನೂ ಕೇಳದೇ ಇರುವುದರಿಂದ ಆಕೆಯ ಮನಸ್ಸು ಉದಾಸತನಕ್ಕೆ ಸಿಲುಕುತ್ತ ಹೊರಟಿತ್ತು. ಆದರೆ ಕೇಕ್‌ ಕತ್ತರಿಸಲು ಟೇಬಲ್ ಬಳಿ ಹೋದಾಗ ಅಲ್ಲಿ ಒಂದು ಪುಟ್ಟ ಗಿಫ್ಟ್ ಪ್ಯಾಕ್‌ ಇಡಲಾಗಿತ್ತು.

“ಪ್ಯಾಕ್‌ ತೆರೆದು ನೋಡು, ಅದರಲ್ಲಿ ಏನಿದೆ ಎಂಬುದು ಗೊತ್ತಾಗುತ್ತೆ,” ಎಂದು ಪತಿ ಆಕೆಯತ್ತ ದೃಷ್ಟಿಹರಿಸಿ ಹೇಳಿದರು. ಆ ಪ್ಯಾಕೆಟ್‌ನಲ್ಲಿ ಒಂದು ಡೈಮಂಡ್‌ ರಿಂಗ್‌ ಇತ್ತು. ಆಕೆಯ ಖುಷಿಗೆ ಪಾರವೇ ಇರಲಿಲ್ಲ. ಪತಿ ಡೈಮಂಡ್‌ ರಿಂಗ್‌ ಕೊಟ್ಟಿದ್ದಾನೆಂದು ಅಕೆಗೆ ಖುಷಿಯಾಗಿರಲಿಲ್ಲ, 12 ವರ್ಷದಲ್ಲಿ ಮೊದಲ ಬಾರಿ ಸರ್‌ಪ್ರೈಸ್‌ ಗಿಫ್ಟ್ ಕೊಟ್ಟಿದ್ದಾನೆಂದು ಆಕೆಗೆ ಪರಮ ಖುಷಿಯಾಗಿತ್ತು.

ಎಲ್ಲಕ್ಕೂ ವಿಭಿನ್ನ

gift-2

ಸಾಮಾನ್ಯವಾಗಿ ಜನರು ಗಿಫ್ಟ್ ತೆಗೆದುಕೊಳ್ಳುವ ಬಗ್ಗೆ ಹಾಗೂ ಗಿಫ್ಟ್ ಕೊಡುವ ಕುರಿತಂತೆ ಸಾಕಷ್ಟು ಗೊಂದಲದಲ್ಲಿರುತ್ತಾರೆ. ಯಾರಿಗಾದರೂ ಮದುವೆ ಸಮಾರಂಭಕ್ಕೆ ಹೋಗಬೇಕಾದಾಗ ಗಿಫ್ಟ್ ಏನು ಕೊಡುವುದು ಎಂದು ಯೋಚನೆ ಶುರುವಾಗುತ್ತದೆ. ನೀವು ಕೊಡುವ ಗಿಫ್ಟ್ ಹೇಗಿರಬೇಕೆಂದರೆ,  ಅದು ಎಲ್ಲಕ್ಕಿಂತಲೂ ವಿಶಿಷ್ಟವಾಗಿರಬೇಕು. ಹಾಗೆಂದು ಅದು ದುಬಾರಿ ಆಗಿರಬೇಕೆಂದೇನೂ ಅಲ್ಲ. ಎಷ್ಟೋ ಪತಿಯಂದಿರು ತಮ್ಮ ಪತ್ನಿಯ ಹುಟ್ಟುಹಬ್ಬ ಅಥವಾ ಮದುವೆ ವಾರ್ಷಿಕೋತ್ಸವಕ್ಕೆ ಏನು ಗಿಫ್ಟ್ ಕೊಡಬೇಕೆಂದು ತಲೆ ಕೆಡಿಸಿಕೊಂಡಿರುತ್ತಾರೆ. ಅಷ್ಟೇ ಅಲ್ಲ, ಸಂಬಂಧಿಕರ ಅಥವಾ ಸ್ನೇಹಿತರ ಮದುವೆ ವಾರ್ಷಿಕೋತ್ಸವ, ಹುಟ್ಟುಹಬ್ಬ, ಗೃಹಪ್ರವೇಶ, ಹೊಸ ಉದ್ಯೋಗ ದೊರೆತಾಗ, ಪ್ರಮೋಶನ್‌ ಸಿಕ್ಕಾಗ ಹೀಗೆ ಅನೇಕ ಸಲ ಯೋಚನೆ ಕಾಡುತ್ತಿರುತ್ತದೆ. ಪ್ರತಿಯೊಬ್ಬರು ಕಡಿಮೆ ಮೊತ್ತದಲ್ಲಿ ಒಳ್ಳೆಯ ಗಿಫ್ಟ್ ಕೊಡಲು ಯೋಚಿಸುತ್ತಿರುತ್ತಾರೆ.

ಈ ಕುರಿತಂತೆ ಪ್ರೊ. ರಾಜಲಕ್ಷ್ಮಿ ಹೀಗೆ ಹೇಳುತ್ತಾರೆ, “ನೀವು ಕೊಡುವ ಗಿಫ್ಟ್ ಹೇಗಿರಬೇಕೆಂದರೆ, ಅದು ತೆಗೆದುಕೊಳ್ಳುವವರಿಗೆ ಸ್ಮರಣಾರ್ಹ ಎನಿಸಿಕೊಳ್ಳಬೇಕು. ಗಿಫ್ಟ್ ಗೆ ಯಾವುದೇ ಬೆಲೆ ಕಟ್ಟಲಾಗದು. ಆದರೆ ಕೆಲವರು ಹೇಗಿರುತ್ತಾರೆಂದರೆ, ಗಿಫ್ಟ್ ಕೈಗೆ ಬಂದಾಗ ಅದರ ಮೇಲೆ ಬರೆದಿರುವ ಬೆಲೆ ಹುಡಕುತ್ತಿರುತ್ತಾರೆ. ಕಡಿಮೆ ಬೆಲೆಯ ಗಿಫ್ಟ್ ಆಗಿದ್ದರೆ ಮುಖ ಸಿಂಡರಿಸುತ್ತಾರೆ. ಆಗ ಅವರ ಪ್ರತಿಕ್ರಿಯೆ ಹೇಗಿರುತ್ತದೆಂದರೆ, `ನಮ್ಮ ಮನೆಯ ಕೆಲಸದವನಿಗೆ ನಾವು ಇದಕ್ಕಿಂತಲೂ ಒಳ್ಳೆಯ ಗಿಫ್ಟ್ ಕೊಡುತ್ತೇವೆ,’ ಎಂಬಂತೆ.”

ಮೆಚ್ಚಿನ ಉಡುಗೊರೆ

gift-3

ಸುಲೋಚನಾ ಈ ಕುರಿತಂತೆ  ಹೀಗೆ ಹೇಳುತ್ತಾರೆ, “ಮದುವೆ ಬಳಿಕ ಹನಿಮೂನ್‌ಗೆ ಹೋಗುವ ಸಿದ್ಧತೆ ನಡೆದಿತ್ತು. ಮದುವೆಯ 3-4 ದಿನಗಳ ಬಳಿಕ ಪತಿ ನನ್ನ ಬಳಿ ಬಂದು ನನ್ನ ಕೈಗೆ ರೈಲಿನ ರಿಸರ್ವೇಶನ್‌ ಟಿಕೆಟ್‌ ಇಟ್ಟು ನಾವು ಹನಿಮೂನ್‌ಗೆ ಮೈಸೂರಿಗೆ ಹೋಗುತ್ತಿದ್ದೇವೆಂದು ಹೇಳಿದರು. ನಾನು ಮೈಸೂರನ್ನು ಅದೆಷ್ಟೋ ಸಲ ನೋಡಿದ್ದೆ, ಊಟಿಗೆ ಹೋಗಬೇಕೆನ್ನುವುದು ನನ್ನ ಕನಸಾಗಿತ್ತು.  “ಎಲ್ಲ ಸಿದ್ಧತೆ ಮಾಡಿಕೊ ಎಂದು ಹೇಳಿ ಹೊರಟುಹೋದರು. ನಾನು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡೆ.  ರಾತ್ರಿ ಅವರು ವಾಪಸ್‌ ಬಂದಾಗ ನಾನು ಉದಾಸಳಾಗಿರುವುದನ್ನು  ಕಂಡು ಏನ್‌ ವಿಷ್ಯ? ಎಂದು ಕೇಳಿದರು. ಆ ಮಾತಿಗೆ ನಾನು ಊಟಿಗೆ ಹೋಗುವ ಬಗ್ಗೆ ನನ್ನ ಇಚ್ಛೆ ವ್ಯಕ್ತಪಡಿಸಿದೆ. ಆಗ ಅವರು ಊಟಿಗೆ ಟಿಕೆಟ್‌ ಸಿಗೋದು ಕಷ್ಟ. ಮತ್ತೆ ಯಾವಾಗಲಾದರೂ ಹೋಗೋಣ ಬಿಡು ಎಂದು ಹೇಳಿದರು. ನಾನು ಮೌನವಾಗಿಯೇ ಸಾಮಾನುಗಳನ್ನು ಪ್ಯಾಕ್‌ ಮಾಡತೊಡಗಿದೆ.

“ನಿಗದಿ ಪಡಿಸಿದ ದಿನದಂದು ನಾವು ಧಾರವಾಡದಿಂದ ಹೊರಡುವ ಮೈಸೂರು ಟ್ರೇನ್‌ಗೆ ಹತ್ತಿದೆವು. ನಾನು ಪತಿಯ ಜೊತೆ ಟ್ರೇನ್‌ನಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಊಟ ಮಾಡಿ ನಂತರ ಹೆಚ್ಚು ಮಾತನಾಡದೆ ಮಲಗಿಬಿಟ್ಟೆ.

“ಮುಂಜಾನೆ ಮೈಸೂರು ತಲುಪಿದೆವು. ಅಲ್ಲಿ ಹೋಟೆಲ್‌ನಲ್ಲಿ ಸ್ನಾನ ತಿಂಡಿ ಮುಗಿಸಿದೆ. ಬಳಿಕ ಪತಿ, “ಲಗೇಜ್‌ ಎತ್ತಿಕೊ, ನಾವು ಬೇರೆ ಕಡೆ ಹೋಗ್ತಿದ್ದೀವಿ,” ಎಂದರು. ನನಗೋ ಆಶ್ಚರ್ಯ! ನನ್ನನ್ನು ಇವರು ಎಲ್ಲಿಗೆ ಕರೆದುಕೊಂಡು ಹೊರಟಿದ್ದಾರೆ ಎಂದು ಯೋಚನೆ ಮಾಡಿದೆ. ಹೋಟೆಲ್ ಎದುರುಗಡೆಯೇ ನಿಂತಿದ್ದ ಒಂದು ಲಗ್ಶುರಿ ಬಸ್‌ನಲ್ಲಿ ಹತ್ತು ಎಂದು ನನಗೆ ಹೇಳಿದರು.

gift-6

“ಬಸ್ಸು ಹೊರಟ ಸುಮಾರು ಹೊತ್ತಿನವರೆಗೂ ನನಗೆ ಆ ಬಸ್‌ ಎಲ್ಲಿಗೆ ಹೋಗುತ್ತಿದೆ ಎಂಬ ಅರಿವಿರಲಿಲ್ಲ. ರಸ್ತೆಯ ಎರಡೂ ಬದಿಗೂ ಇದ್ದ ಹಸಿರು ದೃಶ್ಯವನ್ನು ಕಣ್ತುಂಬಿಸಿ ಕೊಳ್ಳುತ್ತ ನನಗೆ ಯಾವಾಗ ನಿದ್ರೆ ಬಂತೊ ಗೊತ್ತೇ ಆಗಲಿಲ್ಲ. ಎರಡುಮೂರು ಗಂಟೆಯ ಪ್ರಯಾಣದ ಬಳಿಕ ಪತಿ ನನ್ನ ಕೈ ತಟ್ಟಿ ಎಬ್ಬಿಸುತ್ತ ನಾವು ಇಳಿಯಬೇಕಾದ ಜಾಗ ಬಂತು ಇಳಿ ಎಂದರು. ಆ ಜಾಗ ಯಾವುದಪ್ಪ ಎಂದು ಕಣ್ಬಿಟ್ಟು ನೋಡಿದ್ರೆ ಅದು ನನ್ನ ಕನಸಿನ ಊಟಿಯೇ ಆಗಿತ್ತು! ನನ್ನ ಮನಸ್ಸಿನ ಇಂಗಿತ ಅರಿತ ಪತಿ ನನಗೆ ಜೀವನದ ಅತ್ಯಮೂಲ್ಯ ಉಡುಗೊರೆ ಕೊಟ್ಟಿದ್ದರು.”

ಫ್ಯಾಷನ್‌ ಡಿಸೈನರ್‌ ಅನುಪಮಾ ಹೀಗೆ ಹೇಳುತ್ತಾರೆ, “ಯಾರಿಗೆ ಆಗಲಿ ನಾವು ಎಂತಹ ಗಿಫ್ಟ್ ಕೊಡಬೇಕೆಂದರೆ, ಅವರಿಗೆ ಅದು ಜೀವನದಲ್ಲಿ ಉಪಯುಕ್ತ ಎನಿಸಬೇಕು. ಯಾರಿಗೊ ಒಬ್ಬರಿಗೆ ಗಿಫ್ಟ್ ಕೊಡಬೇಕಾಗಿದ್ದರೆ, ಅವರಿಗೆ ಯಾವ ವಸ್ತುವಿನ ಉಪಯೋಗ ಇರಬಹುದು ಎಂಬುದನ್ನು ಕಂಡುಕೊಳ್ಳಲು ಪ್ರಯತ್ನಿಸಿ. ಒಂದು ಮಗುವಿಗೆ ಗಿಫ್ಟ್ ಕೊಡಬೇಕಿದ್ದರೆ, ಅದಕ್ಕೆ ಏನು ಅವಶ್ಯಕತೆ ಇರಬಹುದೆಂದು ಅರಿತು ಟೇಬಲ್, ಟೇಬಲ್ ಲ್ಯಾಂಪ್‌, ಯಾವುದಾದರೂ ವಿಡಿಯೋ ಗೇಮ್, ಟ್ಯಾಬ್ಲೆಟ್ ಕೊಡಬಹುದು. ಅವರಿಗೆ ಅವಶ್ಯವಿರುವ ವಸ್ತು ಕೊಟ್ಟಾಗ ಅವರ ಖುಷಿಗೆ ಮೇರೆಯೇ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ಗಿಫ್ಟ್ ಕೊಟ್ಟವರಿಗೂ ಕೂಡ ಖುಷಿಯಾಗುತ್ತದೆ.”

ಸ್ಮರಣಾರ್ಹ ಉಡುಗೊರೆ

gift-4

ರಶ್ಮಿ ತಮ್ಮ ಪತಿ ಕೊಟ್ಟ ಉಡುಗೊರೆಯನ್ನು ಈವರೆಗೂ ಮರೆತಿಲ್ಲ. ಅವರು ಅದನ್ನು ತಮ್ಮ ಜೀವನಪರ್ಯಂತ ನೆನಪಿನಲ್ಲಿಟ್ಟು ಕೊಂಡಿರುತ್ತಾರೆ. ತಮಗೆ ಸಿಕ್ಕ ಉಡುಗೊರೆಯ ಕುರಿತಂತೆ ಅವರು ಹೀಗೆ ಹೇಳುತ್ತಾರೆ, “ಮದುವೆ ವಾರ್ಷಿಕೋತ್ಸವಕ್ಕಿಂತ ಮುಂಚೆ ಪತಿ ನನಗೆ ಈ ಸಲ ಒಳ್ಳೆಯ ಗಿಫ್ಟ್ ಕೊಡುವುದಾಗಿ ಭರವಸೆ ಕೊಟ್ಟಿದ್ದರು.

“ಮದುವೆ ವಾರ್ಷಿಕೋತ್ಸವದ ದಿನ ಅವರು, ನಾನು ನಿನಗಾಗಿ ಎಂತಹ ಒಳ್ಳೆಯ ಗಿಫ್ಟ್ ತಂದಿದ್ದೆ. ಆದರೆ ಎಲ್ಲಿ ಹೋಯ್ತೋ ಗೊತ್ತಾಗಲಿಲ್ಲ,” ಎಂದು ಹೇಳಿದರು. ಅವರು ಸುಳ್ಳು ಹೇಳುತ್ತಿದ್ದಾರೆಂದು ನನಗೆ ಖಚಿತವಾಯಿತು. ಅವರಿಗೆ ಕುಡಿಯುವ ಚಟ ಇದ್ದುದರಿಂದ ಹೀಗೆ ಹೇಳುವುದು ನನಗೆ ಆಶ್ಚರ್ಯವನ್ನೇನೂ ಮಾಡಲಿಲ್ಲ. ಅವರು ನನ್ನ ಬಳಿ ಬಂದು, “ಸಾರಿ, ಮುಂದಿನ ಸಲ ಒಂದು ಒಳ್ಳೆಯ ಗಿಫ್ಟ್ ನ್ನು ಖಂಡಿತ ಕೊಡ್ತೀನಿ,” ಎಂದರು.

“ನಾನು ಅವರ ಮಾತಿಗೆ ನನಗೆ ಚಿನ್ನ, ವಜ್ರ ಏನೇನೂ ಬೇಕಾಗಿಲ್ಲ. ನೀವು ಇಷ್ಟಪಟ್ಟರೆ ಒಂದು ಅಮೂಲ್ಯವಾದ ಉಡುಗೊರೆಯನ್ನು ಕೊಡಬಹುದು ಎಂದು ಹೇಳಿದೆ, “ಅದೇನು ಉಡುಗೊರೆ ಬೇಕು ನಿನಗೆ? ನನಗೆ ಸಾಧ್ಯವಾದರೆ ಖಂಡಿತ ಕೊಡ್ತೀನಿ,” ಎಂದು ಹೇಳಿದರು.

“ನೀವು ನನಗೆ ಮದ್ಯ ಸೇವನೆ ಮಾಡುವುದಿಲ್ಲ ಎಂದು ಮಾತು ಕೊಡ್ಬೇಕು,” ಎಂದು ಹೇಳಿದೆ. ಆ ಮಾತಿಗೆ ಅವರು ತಕ್ಷಣ ಏನೂ ಉತ್ತರ ಕೊಡಲಿಲ್ಲ. ಆದರೆ ಅವರು ಆ ದಿನದಿಂದಲೇ ಕುಡಿಯುವುದನ್ನು ಬಿಟ್ಟುಬಿಟ್ಟರು. 13 ವರ್ಷಗಳಾಯ್ತು. ಅವರು ಪುನಃ ಮದ್ಯಕ್ಕೆ ಕೈ ಹಚ್ಚಿಲ್ಲ. ನನಗೆ ಇದಕ್ಕಿಂತ ದೊಡ್ಡ ಉಡುಗೊರೆ ಮತ್ತಾವುದು ಇರಲು ಸಾಧ್ಯ?”

– ಜ್ಯೋತಿ ರಾವ್‌

ಎಂತೆಂಥ ಗಿಫ್ಟ್

gift-5

ಸಂಚಾರಿ ಗಿಫ್ಟ್ : ಈ ತೆರನಾದ ಗಿಫ್ಟ್ ಗಳನ್ನು ಯಾರೂ ಬಳಸಲು ಹೋಗುವುದಿಲ್ಲ. ಈ ರೀತಿಯ ಗಿಫ್ಟ್ ಸದಾ ಗಿಫ್ಟ್ ಆಗಿ ಒಬ್ಬರ ಕೈಯಿಂದ ಮತ್ತೊಬ್ಬರ ಕೈಗೆ ಬದಲಾಗುತ್ತಲೇ ಇರುತ್ತದೆ. ಅದು ಯಾರಿಗೂ ಉಪಯೋಗಕ್ಕೆ ಬಾರದಂಥದ್ದು.

ಅಮೂಲ್ಯ ಉಡುಗೊರೆ : ಫ್ಲ್ಯಾಟ್‌, ಜಮೀನು, ಕಾರು, ಫಿಕ್ಟ್ಡ್ ಡೆಪಾಸಿಟ್‌ ಮುಂತಾದವು ಅಮೂಲ್ಯ ಉಡುಗೊರೆಯಾಗಿರುತ್ತವೆ.

ಭರವಸೆಯ ಉಡುಗೊರೆ : ಮಾತಿನ ಮೂಲಕ ಕೊಟ್ಟ ಭರವಸೆಯನ್ನು ಈಡೇರಿಸುವುದಾಗಿರುತ್ತದೆ. ಮಾತು ಕೊಟ್ಟ ಪ್ರಕಾರ ಮದ್ಯ, ಗುಟ್ಕಾ, ಸಿಗರೇಟು ಸೇದುವುದನ್ನು ಬಿಟ್ಟುಬಿಡುವುದಾಗಿರುತ್ತದೆ.

ಫ್ಯಾನ್ಸಿ ಗಿಫ್ಟ್ : ಝೂಮರ್‌, ಬಣ್ಣಬಣ್ಣದ ಬೆಳಕಿನ ರಾಂಪ್‌ಗಳು, ಅಕ್ವೇರಿಯಂ, ಕಲಾತ್ಮಕ ಮೂರ್ತಿಗಳು ಅಥವಾ ಪೇಂಟಿಂಗ್‌ ಫ್ಯಾನ್ಸಿ ಗಿಫ್ಟ್ ಗಳಾಗಿವೆ.

ಅಗತ್ಯ ಉಡುಗೊರೆಗಳು : ಒಬ್ಬ ಗೃಹಿಣಿಗೆ ಲ್ಯಾಪ್‌ಟಾಪ್‌, ಕಂಪ್ಯೂಟರ್‌, ಮೊಬೈಲ್ ಫೋನ್‌, ಗಡಿಯಾರ, ಟ್ಯಾಬ್ಲೆಟ್‌, ಸ್ಕೂಟಿ,  ಫ್ರಿಜ್‌, ಸೋಫಾ, ಡಿನ್ನರ್‌ ಸೆಟ್‌, ಎಲ್.ಸಿ.ಡಿ., ಆಭರಣಗಳು ಅಗತ್ಯದ ಉಡುಗೊರೆ ಎನಿಸಿಕೊಳ್ಳುತ್ತವೆ.

ನಗದು ಉಡುಗೊರೆ : ವಿಶೇಷ ಸಂದರ್ಭದಲ್ಲಿ ಲಕೋಟೆಯಲ್ಲಿ ಹಣ ಹಾಕಿ ಕೊಡಲಾಗುತ್ತದೆ. ಗಿಫ್ಟ್ ಚೆಕ್‌ ಕೊಡುವ ಪದ್ಧತಿ ಕೂಡ ಇದೆ. ಈ ರೀತಿಯ ಗಿಫ್ಟ್ ಎಲ್ಲಕ್ಕೂ ಉತ್ತಮವಾದುದಾಗಿರುತ್ತದೆ.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ