ಮನೆ ಪ್ರವೇಶಿಸಿದೊಡನೆ ವಸಂತಾಗಮನದಂತಾಯಿತು. ಅಮ್ಮ, ಅಪ್ಪ, ಗೀತಾ, ರಾಹುಲ್ ‌ಎಲ್ಲರೂ ಸಂತೋಷದಿಂದ ಕುಣಿದಾಡಿಬಿಟ್ಟರು. ರವಿಗಂತೂ ಅವರೆಲ್ಲರ ಆನಂದ ಕಂಡು ಹೃದಯ ತುಂಬಿ ಬಂದಂತಾಯಿತು.

ಆದರೆ ಸಮಯ ಸಾಧಿಸಿ ಗೀತಾ ನನ್ನ ಕಿವಿಯಲ್ಲಿ ಏನೋ ಪಿಸುಗುಟ್ಟಿದಳು. ಅದನ್ನು ಕೇಳಿ ನನ್ನ ಹೃದಯದ ಬಡಿತವೇ ನಿಂತಂತಾಯಿತು. ಮನಸ್ಸಿನ ಆನಂದ ಎಲ್ಲೋ ಮಾಯವಾಗಿಬಿಟ್ಟಿತು. ಹಣೆಯ ಮೇಲೆ ಬೆವರಿನ ಸಾಲು ಮೂಡಿತು. ನನ್ನ ಮುಖ ಬಿಳಿಚಿಕೊಂಡಿತು.

“ಏನಾಯ್ತು ರಶ್ಮಿ?” ನನ್ನ ಮುಖ ಬಣ್ಣಗೆಡುವುದನ್ನು ನೋಡಿದ ರವಿ ಕೂಡಲೇ ಪ್ರಶ್ನಿಸಿದರು.

“ಏನಿಲ್ಲಾ ರೀ.” ನಾನು ಸಂಭಾಳಿಸಿಕೊಳ್ಳುತ್ತ ಹೇಳಿದೆ. ಒಳಗೊಳಗೇ ನಾನು ಅತ್ಯಂತ ಅಧೀರಳಾಗಿದ್ದೆ. ಒಂದೇ ತಿಂಗಳ ಅವಧಿಯಲ್ಲಿ ನನ್ನ ಜೀವನ ಪ್ರವಾಹ ದಿಕ್ಕು ಬದಲಿಸಿ ಹರಿದಿತ್ತು. ಪಾತ್ರಗಳು ತಮ್ಮ ವೇಷ ಕಳಚಿ, ವಾಸ್ತವಿಕ ರೂಪು ಧರಿಸಿ ಎದುರು ನಿಂತಿದ್ದವು. ನಾನು ಖಳನಾಯಕ ಎಂದು ನಿರ್ಧರಿಸಿದ್ದ ರಾಜೇಶ್‌ ನಿಜವಾದ ಖಳನಾಯಕನಾಗಿರಲಿಲ್ಲ. ನಾಯಕನೇ ಆಗಿದ್ದ….

“ಗೀತಾ, ನಿಮ್ಮಕ್ಕನ ಕಿವಿಯಲ್ಲಿ ಅದೇನು ಹೇಳಿದೆ? ನಗುನಗುತ್ತಾ ಅರಳಿದ ಗುಲಾಬಿಯಂತಿದ್ದ ಅವಳ ಮುಖ ಬಾಡಿ ಬತ್ತಿಹೋಯಿತು,” ರವಿ ಸ್ನೇಹದಿಂದ ಗೀತಾಳ ಜಡೆ ಹಿಡಿದೆಳೆದು ಕೇಳಿದರು.

“ಅಮ್ಮಾ…. ನೋವಾಗುತ್ತೆ ಭಾವ…,” ಗೀತಾ ಜೋರಾಗಿ ಕಿರುಚುತ್ತಾ, ನನ್ನ ಕಡೆ ಕಾತುರದಿಂದ ನೋಡಿದಳು.

ರವಿಯ ಪ್ರಶ್ನೆಗೆ ಉತ್ತರಿಸಬಾರದೆಂದು ನಾನು ಅವಳಿಗೆ ಕಣ್ಸನ್ನೆ ಮಾಡಿದೆ.

`ಗೀತಾ ಹೇಳಿದ ವಿಷಯ ನನ್ನ ಪಾಲಿಗೆ ಸಮಸ್ಯೆ ಆಗಬಹುದೇ?’ ಎಂದು ನಾನು ಗಲಿಬಿಲಿಗೊಂಡೆ. ಅಷ್ಟರಲ್ಲಿ ಅಮ್ಮ ನನ್ನನ್ನು ಒಳಗೆ ಕರೆದು ಆ ಸಂಕಟದಿಂದ ಪಾರು ಮಾಡಿದರು.

“ರಶ್ಮಿ, ಸಂತೋಷವಾಗಿ ಇದ್ದೀಯಾಮ್ಮಾ?” ಅಮ್ಮ ಆತಂಕದಿಂದ ಪ್ರಶ್ನಿಸಿದರು. ಅವರು ಹಾಗೆ ಕೇಳುವುದು ಸ್ವಾಭಾವಿಕವೇ ಆಗಿತ್ತು. ನನ್ನ ಮದುವೆ ಆಗಿ ಒಂದು ವಾರದ ನಂತರ ನಾನು ಮೊದಲ ಬಾರಿಗೆ ತವರಿಗೆ ಬಂದಿದ್ದೆ. ನನ್ನ ಸುಖ ದುಃಖದ ಬಗ್ಗೆ ಅಮ್ಮ ಕಾತರಗೊಂಡಿದ್ದರೆ, ಅದರಲ್ಲೇನು ತಪ್ಪು?

“ರಶ್ಮಿ, ಯಾಕೆ ಮಾತಾಡ್ತಾ ಇಲ್ಲ?” ಅಮ್ಮ ನನ್ನ ಮೌನದಿಂದ ಗಾಬರಿಗೊಂಡಿದ್ದರು.

“ಸಂತೋಷಾಗಿದ್ದೀನಮ್ಮಾ.”

“ಅತ್ತೆ ಮನೆಯವರು ಹೇಗೆ ನೋಡ್ಕೋತಾರೆ?” ಅವರೆಲ್ಲ ನಮಗೆ ಗೊತ್ತಿದ್ದವರೇ, ಆದರೂ ಅಮ್ಮ ಮತ್ತೆ ಕೇಳಿದರು.

“ಚೆನ್ನಾಗಿ ನೋಡ್ಕೋತಾರಮ್ಮ.”

“ಅತ್ತೆ ಎಂಥವರು?”

“ಇದುವರೆಗೂ ಒಳ್ಳೆಯವರಂತೆಯೇ ನಡೆದುಕೊಂಡಿದ್ದಾರೆ. ಮುಂದೆ ನೋಡ್ಬೇಕು.”

“ನಿನ್ನ ಯಜಮಾನರು?”

ನಾನು ಲಜ್ಜೆಯಿಂದ ತಲೆ ತಗ್ಗಿಸಿದೆ. ನನ್ನ ಕೆನ್ನೆಗಳು ಕೆಂಪಾದವು.

“ಅಳಿಯಂದ್ರು ಎಂಥವರಮ್ಮ?” ಅಮ್ಮ ಮತ್ತೆ ಕೇಳಿದರು.

“ನನ್ನ ಮೇಲೆ ಪ್ರಾಣಾನೇ ಇಟ್ಟಿದ್ದಾರಮ್ಮ.”

ಅಮ್ಮ ಮತ್ತೆ ಏನನ್ನೂ ಕೇಳಲಿಲ್ಲ. ಅವರ ಮುಖದ ಮೇಲೆ ಸಂತೃಪ್ತಿಯ ಭಾವ ಮೂಡಿಬಂದಿತು. ನನ್ನನ್ನು ತಬ್ಬಿ, ಪ್ರೀತಿಯಿಂದ ನನ್ನ ಮುಂದಲೆ ಸವರಿ, “ಹೋಗಿ ಕೂತ್ಕೋ, ನಾನು ಕಾಫಿ ಮಾಡಿ ತರ್ತೀನಿ,” ಎಂದರು.

“ಅಮ್ಮಾ, ನೀನು ಹೋಗಿ ಅವರನ್ನು ಮಾತಾಡಿಸು. ನಾನು ಕಾಫಿ ಮಾಡಿಕೊಂಡು ಬರ್ತೀನಿ.”

“ಇಲ್ಲ ರಶ್ಮಿ. ನೀನು ಏನಿದ್ರೂ ಈಗ ಈ ಮನೆಯ ಅತಿಥಿ. ನಿನ್ನ ಗಂಡನ ಮನೇನೇ ನಿನ್ನ ಮನೆ. ಇಲ್ಲಿ ನಾನು ನಿನ್ನನ್ನು ಅಡುಗೆಮನೆಗೆ ಬಿಡೋದಿಲ್ಲ,” ಎಂದು ಹೇಳುತ್ತಾ ಅಮ್ಮ ಹೊರಟುಹೋದರು. ನಾನು ಹೊರಗೆ ಬಂದೆ. ಅಪ್ಪ ರವಿಯ ಜೊತೆ ಮಾತಿನಲ್ಲಿ ತೊಡಗಿದ್ದರು. ಗೀತಾ, ರಾಹುಲ್ ಇಬ್ಬರೂ ತಮ್ಮ ರೂಮಿನಲ್ಲಿ ಪರೀಕ್ಷೆಗೆ ಓದುತ್ತಿದ್ದರು. ನಾನು ತಿರುಗಿ ನನ್ನ ರೂಮಿಗೆ ಬಂದೆ. ಒಂದೇ ವಾರದಲ್ಲಿ ನನ್ನ ಚಿರಪರಿಚಿತ ಕೋಣೆಯ ಸ್ಥಿತಿ ನೋಡಿ ನನಗೆ ಆಶ್ಚರ್ಯವಾಯಿತು. ರಾಹುಲ್ ತನ್ನ ಕ್ರಿಕೆಟ್‌ ಬ್ಯಾಟು, ವಿಕೆಟ್‌, ಪ್ಯಾಡ್‌ಗಳನ್ನು ನನ್ನ ಮಂಚದಡಿ ಬಿಸಾಡಿದ್ದ. ಮಂಚದ ಪಕ್ಕದಲ್ಲಿದ್ದ ಟೇಬಲ್ಲಿನ ಮೇಲೆ ಗೀತಾಳ ಪುಸ್ತಕಗಳು ಹರಡಿದ್ದವು. ಆದರೆ ನನ್ನ ಸಾಮಾನುಗಳು ತುಂಬಿದ್ದ ಅಲಮಾರಿ ಮಾತ್ರ ಹಾಗೇ ಇತ್ತು. ಅಮ್ಮ ಅದಕ್ಕೆ ಬೀಗ ಹಾಕಿಬಿಟ್ಟಿದ್ದರು.

ನಾನು ಮಂಚದ ಮೇಲೆ ಉರುಳಿದೆ. ಗೀತಾ ಹೇಳಿದ ಮಾತುಗಳು ನನ್ನ ಕಿವಿಯಲ್ಲಿ ಇನ್ನೂ ಮೊಳಗುತ್ತಿದ್ದವು. ನನ್ನ ಆತಂಕವನ್ನು ಯಾರ ಬಳಿ ಹೇಳಿಕೊಳ್ಳಲಿ? ನನ್ನ ಬದುಕಿನ ಒಂದು ತಿಂಗಳಲ್ಲಿ ಎಷ್ಟೆಲ್ಲಾ ಭಾರೀ ಬದಲಾವಣೆಗಳಾಗಿದ್ದವು! ಈ ಒಂದು ತಿಂಗಳಲ್ಲಿ ನಾನು ಗಗನಚುಂಬಿ ಸ್ವಪ್ನ ಮಹಲನ್ನೇ ನಿರ್ಮಿಸಿದ್ದೆ. ಆದರೆ ಅದರ ಅಡಿಪಾಯ ಭದ್ರವಾಗಿತ್ತೇ? ರಾಕ್ಷಸನೊಬ್ಬ ಬಿರುಗಾಳಿ ಎಬ್ಬಿಸಿ ಅದನ್ನು ಬುಡಸಮೇತ ಉರುಳಿಸಿದನೇ? ನನ್ನ ಬದುಕನ್ನು ವಿಷಮಯಗೊಳಿಸಿ ಅಟ್ಟಹಾಸ ಮಾಡಿದನೇ? ನಾನು ಎರಡೂ ಕೈಗಳಿಂದ ನನ್ನ ತಲೆಯನ್ನು ಬಲವಾಗಿ ಅದುಮಿಕೊಂಡು ಮಲಗಿದ್ದೆ. ಕಳೆದುಹೋದ ದಿನಗಳ ನೆನಪು ಗಾಳಿಯಲ್ಲಿ ಹಾರಾಡುಲ ತರಗೆಲೆಗಳಂತೆ ಮೇಲೆದ್ದು ಬಂದವು.

ನಾನು ರಾಜೇಶ್‌ ಒಂದೇ ಕಾಲೇಜಿನಲ್ಲಿ ಓದುತ್ತಿದ್ದೆ. ನಮ್ಮ್ಮಿಬ್ಬರ ನಡುವಿನ ಗೆಳೆತನ ಯಾವಾಗ ಪ್ರೀತಿಗೆ ತಿರುಗಿತೆಂದು ಹೇಳಲಾರೆ. ಅವನನ್ನು ನನ್ನ ಹೃದಯದಲ್ಲಿ ಪ್ರತಿಷ್ಠಾಪಿಸಿಕೊಂಡಿದ್ದೆ. ಎಂ.ಎಸ್ಸಿ ಮುಗಿಸುತ್ತಲೇ ಅವನಿಗೆ ಮುಂಬೈನಲ್ಲಿ ಒಂದು ಕೆಲಸ ಸಿಕ್ಕಿತ್ತು. ಬೇಗ ಹಿಂದಿರುಗುವುದಾಗಿ ಹೇಳಿ ಅವನು ಹೊರಟುಹೋಗಿದ್ದ.

ನಾವಿಬ್ಬರೂ ಮದುವೆ ಆಗುವುದೆಂದು ತೀರ್ಮಾನಿಸಿದ್ದೆ. ನಮ್ಮ ಸಂಬಂಧ ಆಳವಾದುದಾಗಿತ್ತು. ನಮ್ಮ ಸಂಬಂಧಕ್ಕೆ ಸಾಮಾಜಿಕ ಮಾನ್ಯತೆ ದೊರೆಯಲು ಸಪ್ತಪದಿ ಮಾತ್ರ ಬೇಕಿತ್ತು.

ತನಗೆ ಒಂದು ಒಳ್ಳೆಯ ಕೆಲಸ ಸಿಕ್ಕಿದ ಮೇಲೆ, ಕೈ ತುಂಬ ಹಣ ಮಾಡಿಕೊಂಡ ನಂತರವೇ ತಾನು ನನ್ನನ್ನು ಮದುವೆ ಆಗುವುದಾಗಿ ರಾಜೇಶ್‌ ಮೊದಲೇ ಹೇಳಿದ್ದ. ಅದರಲ್ಲಿ ನನಗೆ ಅನುಚಿತವಾದುದೇನೂ ಕಾಣಿಸಿರಲಿಲ್ಲ. ಎಲ್ಲಾ ಸಾಮಾನ್ಯ ಯುವಕರಂತೆ ನನ್ನ ರಾಜೇಶ್‌ ಭಾವುಕತೆಯ ಪ್ರವಾಹಕ್ಕೆ ಸಿಲುಕಿ, ಭವಿಷ್ಯದಲ್ಲಿ ಪರಿತಪಿಸುವಂತೆ ಮಾಡುವನಲ್ಲ ಎಂದು ನಾನು ಅವನ ಬಗ್ಗೆ ಅಭಿಮಾನ ಪಟ್ಟುಕೊಂಡೆ.

ರಾಜೇಶ್‌ ಮುಂಬೈಗೆ ಹೊರಟುಹೋದ. ಆಗ ನಾನೆಷ್ಟು ಅತ್ತೆ. ಪ್ರಪಂಚದಲ್ಲಿ ನನ್ನವರೆನ್ನುವವರು ಯಾರೂ ಇಲ್ಲ ಎಂಬ ಏಕಾಂಗಿತನ ನನ್ನನ್ನು ಕಾಡಿಸಿತ್ತು. ಅದೆಷ್ಟೋ ವಾರಗಳ ಕಾಲ ನಾನು ಸರಿಯಾಗಿ ನಿದ್ರೆಯನ್ನೇ ಮಾಡಿರಲಿಲ್ಲ. ನಿದ್ರಿಸಿದರೂ ರಾಜೇಶನ ಕನಸು ಕಂಡು ರೋಮಾಂಚಿತಳಾಗುತ್ತಿದ್ದೆ. ಆಗ ನನಗೆ ಹಸಿವೆಯೂ ಆಗುತ್ತಿರಲಿಲ್ಲ, ನೀರಡಿಕೆಯೂ ಇರುತ್ತಿರಲಿಲ್ಲ.

ಇದನ್ನೆಲ್ಲ ಕಂಡು ಅಪ್ಪ ಅಮ್ಮ, ಹುಡುಗಿ ಮದುವೆಗೆ ಬಂದಿದ್ದಾಳೆ. ತಕ್ಷಣ ಅವಳ ಮದುವೆ ಮಾಡಿ ಮುಗಿಸಬೇಕು ಎಂದು, ತಾವಾಗಿಯೇ ನಿರ್ಧರಿಸಿಬಿಟ್ಟರು.

ಗಂಡಿಗಾಗಿ ಹುಡುಕಾಟ ಮೊದಲಾಯಿತು. ಇದೆಲ್ಲ ನನಗೆ ಗೊತ್ತಾಗಲೇ ಇಲ್ಲ. ನಾನಂತೂ ದಿನವಿಡೀ ರಾಜೇಶನ ನೆನಪಿನಲ್ಲೇ ಮೈಮರೆತಿದ್ದೆ ಎಂದ ಮೇಲೆ ಗೊತ್ತಾಗುವುದಾದರೂ ಹೇಗೆ?

ಮುಂಬೈಗೆ ಹೋಗಿ ಅವನು ಒಂದು ಕಾಗದ ಬರೆದಿದ್ದ. ನಾನಂತೂ ಅವನಿಗೆ ಪ್ರತಿದಿನ ಒಂದೊಂದು ಕಾಗದ ಬರೆಯುತ್ತಿದ್ದೆ. ಅವನ ಪತ್ರಗಳ ದಾರಿ ಕಾಯುವುದೇ ನನ್ನ ಕೆಲಸವಾಯಿತು. ನಾನು 4 ಕಾಗದ ಬರೆದರೆ, ಅವನಿಂದ ಒಂದು ಕಾಗದ ಬರುತ್ತಿತ್ತು. ಅದರಲ್ಲೂ ಮುಂಬೈಯ ಬದುಕಿನ ಕಷ್ಟಕೋಟಲೇಗಳೇ ತುಂಬಿರುತ್ತಿದ್ದವು.

ಅವನು ತನ್ನ ಪತ್ರಗಳಲ್ಲಿ ನನ್ನ ಮೇಲಿನ ಪ್ರೇಮವನ್ನು ಹೊಳೆಯಾಗಿ ಹರಿಸುವುದಕ್ಕಿಂತ ಹೆಚ್ಚಾಗಿ, ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆಯೇ ಬರೆಯುತ್ತಿದ್ದ. `ಇಲ್ಲಿ ಬಾಡಿಗೆ ಮನೆ ಇನ್ನೂ ಸಿಕ್ಕಿಲ್ಲ. ಎಲ್ಲ ಮನೆಗಳೂ ಗುಬ್ಬಚ್ಚಿ ಗೂಡುಗಳಂತಿವೆ. ಪಗಡಿ ಎಂದು ನನ್ನ ಹತ್ತು ವರ್ಷಗಳ ಸಂಪಾದನೆಯ ಮೊತ್ತ ಕೇಳುತ್ತಾರೆ. ಬಸ್ಸುಗಳಲ್ಲಿ, ರೈಲುಗಳಲ್ಲಿ ಜನಜಾತ್ರೆ ಮಾಮೂಲಿಯ ಸಂಗತಿ. ನೆಪೆಹೊರೆಯವರ ಬಗ್ಗೆ ಯಾರೂ ಕೆಡಿಸಿಕೊಳ್ಳುವುದಿಲ್ಲ….’ ಇತ್ಯಾದಿ.

ಈ ಎಲ್ಲ ಪಂಚಾಯಿತಿಯಿಂದ ನನಗೆ ಏನಾಗಬೇಕಾಗಿದೆ? ನನ್ನ ಪತ್ರಗಳಂತೂ ಪ್ರಣಯ ನಿವೇದನೆಯ ಮಂತ್ರ ಪುಷ್ಪಗಳಾಗಿದ್ದವು. ಪ್ರತಿಯೊಂದು ಪತ್ರದಲ್ಲೂ, `ರಾಜೇಶ್‌, ಯಾವಾಗ ಬರುವಿರಿ? ನಿಮ್ಮ ಮಗಳನ್ನು ನನಗೆ ಮದುವೆ ಮಾಡಿಕೊಡಿ ಎಂದು ನಮ್ಮ ತಂದೆ ತಾಯಿಯರನ್ನು ಯಾವಾಗ ಕೇಳುವಿರಿ?’ ಎಂಬ ಪಲ್ಲವಿ ಇದ್ದೇ ಇರುತ್ತಿತ್ತು. ಪ್ರತಿಯೊಂದು ಬಾರಿಯೂ ರಾಜೇಶ್‌ ಈ ಪ್ರಶ್ನೆಗೆ ಉತ್ತರಿಸುವುದನ್ನು ಮರೆಯುತ್ತಿದ್ದ.

ಇದರ ನಂತರ ರಾಜೇಶ್‌ ಪತ್ರ ಬರೆಯುವುದನ್ನು ಸಂಪೂರ್ಣವಾಗಿ ನಿಲ್ಲಿಸಿಬಿಟ್ಟ. ನಾನು ಹತಾಶಳಾದೆ. ಕೊನೆಗೆ ಅಪ್ಪ ಅಮ್ಮ ಹುಡುಕಿದ ಹುಡುಗನನ್ನು ತೆಪ್ಪಗೆ ಮದುವೆಯಾಗಿ ಅತ್ತೆಮನೆಗೆ ಹೋದೆ. ಎಲ್ಲ ಅನಿರೀಕ್ಷಿತವಾಗಿ ಸಂಭವಿಸಿ, ನಾನು ಸ್ತಂಭಿತಳಾಗಿಬಿಟ್ಟೆ.

ಆ ರಾತ್ರಿ ನಾನು ನನ್ನ ಮಲಗುವ ಕೋಣೆ ಪ್ರವೇಶಿಸಿ ಬೆರಗಾದೆ. ವಿಶಾಲವಾದ ಏರ್‌ ಕಂಡೀಶನ್‌ ಮಾಡಲಾದ ಕೊಠಡಿ. ಕಾಲಿರಿಸಿದರೆ ಕೊಳೆಯಾಗುವುದೇನೋ ಎನಿಸುವ ಮೃದುವಾದ ಕಾಶ್ಮೀರಿ ರತ್ನಗಂಬಳಿಯನ್ನು ನೆಲಕ್ಕೆ ಹಾಕಲಾಗಿತ್ತು. ಕಿಟಕಿ ಬಾಗಿಲುಗಳಿಗೆ ಗುಲಾಬಿ ಬಣ್ಣದ ದಪ್ಪ ಪರದೆಗಳು, ಕೋಣೆಯ ನಡುವೆ ನಾಲ್ಕು ಜನ ಹಾಯಾಗಿ ಮಲಗುವಷ್ಟು ದೊಡ್ಡದಾದ ಮಂಚದ ಮೇಲೆ ಹೂವಿನಂಥ ಮೆತ್ತೆ, ಅದರ ಮೇಲೆ ಮಲ್ಲಿಗೆ ಕನಕಾಂಬರ ಹೂಗಳ ಅಲಂಕಾರ.ಕೋಣೆಯ ಎರಡೂ ಬದಿ ಗೋಡೆಗಳ ಮೇಲೆ ಆರಡಿ ಎಂಟಡಿಯಷ್ಟು ದೊಡ್ಡದಾದ ಸುಂದರ ಪೆಂಟಿಂಗ್‌ಗಳಿಗೆ ನಾಲ್ಕು ಅಂಗುಲ ಅಗಲದ ರೋಸ್‌ ವುಡ್ಡಿನ ಚೌಕಟ್ಟು ಹಾಕಲಾಗಿತ್ತು. ತೆರೆದ ಬಾಯಿ ತೆರೆದಂತೆ ನೋಡುತ್ತಾ ನಿಂತಿದ್ದ ನನಗೆ ಆ ಪೇಟಿಂಗ್‌ಗಳನ್ನು ತನ್ನ ಅಣ್ಣನೇ ಮಾಡಿದ್ದು ಎಂದು ನನ್ನ ನಾದಿನಿ ತಿಳಿಸಿದಳು. ಅವಳು ಅಲ್ಲಿಂದ ಹೊರಟುಹೋದ ಮೇಲೆ ಆ ಕೋಣೆಯನ್ನು ಮತ್ತೊಮ್ಮೆ ಸುತ್ತಿ ಬಂದಾಗ ನನಗೆ ರಾಜೇಶನ ಪತ್ರ ನೆನಪಾಯಿತು. `ಎಲ್ಲ ಮನೆಗಳೂ ಗುಬ್ಬಚ್ಚಿ ಗೂಡುಗಳಂತಿವೆ…. ಭಾರೀ ಮೊತ್ತದ ಪಗಡಿ ಅಲ್ಲದೆ, ತಿಂಗಳ ಸಂಪಾದನೆಯನ್ನು ಬಾಡಿಗೆಗೇ ಕೊಡಬೇಕಾಗುತ್ತದೆ…’  ಅಷ್ಟರಲ್ಲಿ ರವಿ ಬಂದರು. ಪ್ರಶಂಸೆ ಅವರ ಕಣ್ಣುಗಳಲ್ಲಿ ತುಂಬಿತ್ತು. ತುಟಿಗಳ ಮೇಲೆ ಮೃದುವಾದ ಮಂದಹಾಸ. ಸಭ್ಯತೆಯ ಸಾಕಾರಮೂರ್ತಿ. ನನ್ನ ಗಲ್ಲ ಹಿಡಿದೆತ್ತಿ, “ಬಹಳ ಆಯಾಸ ಆಗ್ತಿದೆಯಾ?” ಎಂದು ಕೇಳಿದರು.

ಹೌದೆನ್ನುವಂತೆ ನಾನು ತಲೆ ತಗ್ಗಿಸಿದೆ.

“ಸರಿ ಮಲಗೋಣ,” ಎನ್ನುತ್ತ ರವಿ ನನ್ನ ಪಕ್ಕ ಬಂದು ಕುಳಿತು. “ನಮ್ಮಿಬ್ಬರ ಮಧುರ ಮಿಲನದ ನೆನಪಿಗಾಗಿ ಇದು ನನ್ನ ಉಡುಗೊರೆ,” ರವಿ ನನ್ನ ಜಡೆಯನ್ನು ಕೈಗೆತ್ತಿಕೊಂಡು, ಆಡಿಸುತ್ತಾ ಹೇಳಿದರು. ಉಡುಗೊರೆಯ ಪ್ಯಾಕೆಟ್‌ ನನ್ನ ಮಡಿಲಿನಲ್ಲಿತ್ತು. ನಾನು ವಿಸ್ಮಯದಿಂದ ಕೈಗೆತ್ತಿಕೊಂಡು ನೋಡಿದೆ. ವಸ್ತ್ರಾಭರಣ ಅಲ್ಲ, ಹಣ ಅಲ್ಲ. ಅದು ಎರಡು ಏರ್‌ ಟಿಕೆಟ್‌ಗಳ ಪ್ಯಾಕೆಟ್‌.

ಭಾರತದಿಂದ ಕೆನಡಾಕ್ಕೆ ಹೋಗಿ, ಹಿಂತಿರುಗಿ ಬರುಬಹುದಾಗಿತ್ತು. “ಇದೇನು?” ನಾನು ಸಣ್ಣ ಸ್ವರದಲ್ಲಿ ಪ್ರಶ್ನಿಸಿದೆ.

“ನಮ್ಮ ಮಧುಚಂದ್ರ ಪ್ರವಾಸದ ಸಿದ್ಧತೆ. ಅಕ್ಕ ಅಲ್ಲಿದ್ದಾಳೆ. ಅಲ್ಲಿಂದ ಬರುವಾಗ ಅಮೆರಿಕಾ, ಸ್ವಿಟ್ಜರ್‌ಲ್ಯಾಂಡ್‌, ಪ್ಯಾರಿಸ್‌ ಮತ್ತು ಲಂಡನ್ನಿಗೆ ಹೋಗಿ ಬರೋಣ.”

ಇದೇನು? ಕಿನ್ನರ ಕಥೆಯೇ ಅಲ್ಲ, ವಾಸ್ತವಿಕವಾಗಿ ಅದೃಷ್ಟ ನನ್ನ ಮಡಿಲಿಗೇ ಬಂದುಬಿದ್ದಿತ್ತು. ನನ್ನ ನಿದ್ರೆ, ಆಯಾಸ ಮಾಯವಾಗಿತ್ತು. ನಾವಿಬ್ಬರೂ ಮಲಗಿಕೊಂಡೆವು. ರವಿಯ ಆಲಿಂಗನ ನನಗೆ ಸ್ವರ್ಗಸಮಾನವಾಗಿತ್ತು. ನಾವಿಬ್ಬರೂ ಗಂಟೆಗಟ್ಟಲೆ ಹರಟಿದೆವು. ರವಿ ತಮ್ಮ ಜೀವನದ ಎಲ್ಲ ಮಹತ್ವದ ಸಂಗತಿಗಳನ್ನೂ ನನಗೆ ತಿಳಿಸಿದರು. ರವಿ ಸ್ಪಷ್ಟವಾದಿ, ಪ್ರಾಮಾಣಿಕ ಹಾಗೂ ಮೃದುಭಾಷಿಯಾಗಿದ್ದರು. ಅವರು ತಮ್ಮನ್ನು ಒಬ್ಬ ಹುಡುಗಿ ಪ್ರೀತಿಸಿದ್ದಳೆಂಬುದನ್ನೂ ನನ್ನಿಂದ ಮರೆಮಾಡಲಿಲ್ಲ. ಆದರೆ ತಮ್ಮ ತಾಯ್ತಂದೆಯರು ತಮಗಿಂತ ಹೆಚ್ಚು ವಿವೇಕಿಗಳು. ಮಗನ ಶ್ರೇಯಸ್ಸನ್ನೇ ಬಯಸುವ ಅವರು ಏನನ್ನೇ ಮಾಡಿದರೂ ತಮ್ಮ ಒಳಿತಿಗಾಗಿಯೇ ಮಾಡುತ್ತಾರೆ ಎಂದು ಮನಸಾರೆ ನಂಬಿದ್ದ ರವಿ ದುಡುಕಿರಲಿಲ್ಲ. ಅವರ ನಂಬಿಕೆಯೂ ಹುಸಿಯಾಗಿರಲಿಲ್ಲ.

ರವಿ ನನ್ನನ್ನು ಗಾಢವಾಗಿ ಚುಂಬಿಸಿ, “ನಿಜವಾಗ್ಲೂ ನನ್ನ ಅಮ್ಮ ಅಪ್ಪ ನನಗಾಗಿ ಕೊಹಿನೂರು ವಜ್ರವನ್ನೇ ಹುಡುಕಿದ್ದಾರೆ,” ಎಂದರು. ಅನುರಾಗ ಅವರ ಸ್ವರದಲ್ಲಿ ತುಂಬಿ ತುಳುಕುತ್ತಿತ್ತು.

ashanka-story-2

ನನ್ನ ಮನ ತುಂಬಿ ಬಂದಿತು. ಇದ್ದಕ್ಕಿದ್ದಂತೆ ನನ್ನಲ್ಲಿ ಭಾರೀ ಪರಿವರ್ತನೆ ಉಂಟಾಯಿತು. ರವಿಗೆ ನನ್ನ ಪ್ರಥಮ ಪ್ರಣಯದ ಬಗ್ಗೆ, ರಾಜೇಶನ ಬಗ್ಗೆ ಎಲ್ಲವನ್ನೂ ತಿಳಿಸಬೇಕೆಂದು ನನ್ನ ಮನಸ್ಸು ಹಂಬಲಿಸಿತು. ಆದರೆ ನನಗೆ ಹಾಗೆ ಮಾಡುವ ಧೈರ್ಯ ಬರಲಿಲ್ಲ.  ರವಿಯ ಪ್ರೇಮದ ಆವೇಗದೆದುರು ರಾಜೇಶ್‌ ವಿಶ್ವಾಸಘಾತುಕ, ನಂಬಿಕೆದ್ರೋಹಿಯಂತೆ ಕಂಡು ಬಂದ. ರವಿಯ ಔನ್ನತ್ಯದೆದುರು ರಾಜೇಶ್‌ ಬಹಳ ಕ್ಷುದ್ರನೆನಿಸಿದ.

ನನ್ನ ಆಂತರ್ಯದ ದನಿ ಕೂಗಿ ಹೇಳುತ್ತಿತ್ತು, `ರಶ್ಮಿ, ರವಿಗೆ ರಾಜೇಶನ ಬಗ್ಗೆ ಎಲ್ಲವನ್ನೂ ತಿಳಿಸಿಬಿಡು.’ ಆದರೆ ತುಟಿಗಳನ್ನು ಸೇರಿಸಿ ಹೊಲಿದಂತೆ ಭಾಸವಾಗಿ, ನನ್ನ ಗಂಟಲಿನಿಂದ ಮಾತುಗಳು ಹೊರ ಬರಲಿಲ್ಲ.

ಆ ರಾತ್ರಿಯೇ ನಾನು ಸಂಪೂರ್ಣ ಬದಲಾಗಿಬಿಟ್ಟೆ. ಮರುದಿನ ಸುಪ್ರಭಾತದ ಸಮಯದಲ್ಲಿ ಎಚ್ಚರಗೊಂಡಾಗ, ನನ್ನ ಹಾಗೂ ರವಿಯ ನಡುವೆ ಬಿಡಿಸದ ಬಂಧನ ಆಗಲೇ ಸ್ಥಾಪಿತಗೊಂಡಿತ್ತು. ರಾಜೇಶನ ಬಗ್ಗೆ ನನ್ನ ಪ್ರೇಮ ಒಂದೇ ಕ್ಷಣದಲ್ಲಿ ಮಾಯವಾಗಿತ್ತು. ನನ್ನ ಹೃದಯ ವಲ್ಲಭ ನನಗೆ ದೊರೆತಿದ್ದ.

ಕೇವಲ ಮೂರ್ನಾಲ್ಕು ದಿನಗಳಲ್ಲಿ ನಾನು ಕೇವಲ ರವಿಯ ಮಾತ್ರವಲ್ಲ, ಮನೆಯ ಎಲ್ಲ ಸದಸ್ಯರ ಮನವನ್ನೂ ಗೆದ್ದುಕೊಂಡೆ. ರವಿಯ ಹೆಂಡತಿ ಎನಿಸುವುದರಲ್ಲಿ ಅದೆಷ್ಟು ಹೆಮ್ಮೆ! ಎಲ್ಲರೂ ನನ್ನ ಮೇಲೆ ವಾತ್ಸಲ್ಯದ ಮಹಾಪೂರವನ್ನೇ ಹರಿಸುತ್ತಾರೆ. ರವಿಯಂತೂ ನನ್ನನ್ನು ತಮ್ಮ ಪ್ರೇಮಸಾಗರದಲ್ಲೇ ಈಜಾಡಿಸುತ್ತಾರೆ.

“ರಶ್ಮಿ, ಏನಾಯಿತು?” ರವಿಯ ಕಳಕಳಿ ತುಂಬಿದ ಮಧುರ ಸ್ವರ ಕೇಳಿ ನಾನು ನೆನಪುಗಳ ಸರಮಾಲೆಯಿಂದ ಹೊರಬಂದೆ. ರವಿ ನನ್ನ ತಲೆಯ ಬಳಿ ಕುಳಿತಿದ್ದರು. ದಿಂಬಿನಿಂದ ನನ್ನ ತಲೆಯನ್ನು ಎತ್ತಿ ತಮ್ಮ ಮಡಿಲಿನಲ್ಲಿ ಇರಿಸಿಕೊಂಡರು. ಮೃದುವಾಗಿ ನನ್ನ ತಲೆಯನ್ನು ಅದುಮತೊಡಗಿದರು.

“ಅಯ್ಯೋ! ಇದೇನು? ಬೇಡ…. ಬಿಡೀಪ್ಪಾ.”

“ತಲೆ ನೋಯ್ತಿದೆಯಾ ಇಲ್ವಾ?”

“ಪರವಾಗಿಲ್ಲ ಬಿಡಿ.”

“ಸರಿ ಹಾಗಾದ್ರೆ, ನಡಿ ಒಂದು ರೌಂಡ್‌ ಹೋಗಿ ಬರೋಣ. ಸಿನಿಮಾ ನೋಡೋಣಾ?”

“ಬೇಡಾ ರೀ, ಯಾಕೋ ಇಷ್ಟವಾಗ್ತಿಲ್ಲ.”

“ರಾಹುಲ್‌, ಗೀತಾ ಸಿನಿಮಾಗೆ ಹೋಗೋಣಾಂತ ಒತ್ತಾಯಿಸ್ತಿದ್ದಾರೆ.”

“ಅವರ ಜೊತೆ ಹೋಗಿ ಬನ್ನಿ”

“ರಾಣಿ ಸಾಹೇಬರ ಜೊತೆ ಇಲ್ಲದಿದ್ದರೆ ಏನು ನೋಡಿದೇಂತ ಗೊತ್ತೇ ಆಗೋಲ್ವಲ್ಲಾ?” ರವಿ ಬಾಗಿ ನನ್ನ ಹಣೆಗೆ ಮುದ್ದಿಟ್ಟರು. ರೋಮಾಂಚನಗೊಂಡ ನಾನು, “ಹಾಗಿದ್ರೆ ಹೋಗಬೇಡಿ,” ಎಂದೆ.

“ಅವರಿಗೆ ಬೇಜಾರಾದೀತು. ಈಗ ಅವರನ್ನು ಕರ್ಕೊಂಡು ಹೋಗ್ತೀನಿ. ನಾಳೆ ನಾವಿಬ್ರೂ ಹೋಗೋಣ.”

“ರಾಯರ ಅಪ್ಪಣೆ ಇದ್ದಂತೆ ಆಗಲಿ.”

ರವಿ ಅವರಿಬ್ಬರೊಡನೆ ಹೊರಟುಹೋದರು. ಅಮ್ಮ ಅಪ್ಪ ದೇವಸ್ಥಾನಕ್ಕೆ ಹೋದರು. ನಾನು ಕ್ರೋಶಾ ಹೆಣೆಯುತ್ತ ಕುಳಿತಿದ್ದೆ. ಸುಮಾರು ಅರ್ಧ ಗಂಟೆಯಲ್ಲಿ ಕರೆಗಂಟೆ ಸದ್ದಾಯಿತು. ನಾನು ಮೇಲೆದ್ದು ಬಾಗಿಲು ತೆರೆದೆ. ಹೊಸ್ತಿಲ ಹೊರಗೆ ನಿಂತಿದ್ದ ವ್ಯಕ್ತಿಯನ್ನು ನೋಡಿ ನನಗೆ ಕಾಲ ಕೆಳಗಿನ ಭೂಮಿಯೇ ಕುಸಿದಂತಾಯಿತು.

“ರಶ್ಮಿ, ಎಷ್ಟು ಚೆನ್ನಾಗಿ ಕಾಣಿಸ್ತಿದ್ದೀಯ! ಒಂದೇ ತಿಂಗಳಲ್ಲಿ ಮಿಸ್‌ ರಶ್ಮಿಯಿಂದ ಮಿಸೆಸ್‌ ರವಿ ಆಗಿದ್ದೀಯ…. ಅಭಿನಂದನೆಗಳು.”

ಅವನು ರಾಜೇಶ್‌! ನನ್ನನ್ನು ಬಿಟ್ಟ ಕಣ್ಣುಗಳಿಂದ ನೋಡುತ್ತಿದ್ದ. ಅದರಲ್ಲಿ ಮೆಚ್ಚುಗೆ ತುಂಬಿತ್ತು. ನನ್ನನ್ನು ಹೀಗೆ ಪ್ರಶಂಸಿಸಲು ಅವನಿಗೆ ಬಾಯಿ ಬಂದದ್ದಾದರೂ ಹೇಗೆ?

ನನ್ನ ಎದೆ ಡವಡವಿಸುತ್ತಿತ್ತು. ಭಯದಿಂದ ತತ್ತರಿಸುವಂತಾಗುತ್ತಿತ್ತು. ನನ್ನಲ್ಲಿ ಪ್ರಥಮ ಪ್ರಣಯದ ಬೀಜಾಂಕುರ ಮಾಡಿದ ವ್ಯಕ್ತಿ ಈಗ ನನ್ನ ಪಾಲಿಗೆ ಅಪರಿಚಿತನಾಗಿಬಿಟ್ಟಿದ್ದ. ಅವನಿಗಾಗಿ ನನ್ನ ಮನದಲ್ಲಿ ಒಸರುತ್ತಿದ್ದ ಸ್ನೇಹದ ಚಿಲುಮೆ ಬತ್ತಿಹೋಗಿತ್ತು.

“ಈಗ ಯಾಕೆ ಬಂದೆ?” ನಾನು ಕಟುವಾಗಿ ಕೇಳಿದೆ.

“ನಿನ್ನನ್ನು ಅಭಿನಂದಿಸಲು.“

“ಧನ್ಯವಾದ. ನೀನೀಗ ಹೋಗಬಹುದು.”

“ಒಳಗೆ ಬಾ ಅಂತಲೂ ಕರೆಯೋಲ್ಲವೇನು?”

“ಈಗ ಬಹಳ ತಡವಾಗಿದೆ ರಾಜೇಶ್‌. ನೀನು ಹೀಗೆ…..”

“ಬಹಳ ತಡವಾಗಿದೆ ಎಂದು ನನಗೆ ಗೊತ್ತು ರಶ್ಮಿ. ಇದು ತಾನಾಗಿಯೇ ಉಂಟಾಗಿಲ್ಲ….. ನಾನಾಗಿಯೇ ಉಂಟು ಮಾಡಿದ್ದು. ಕೊನೆಯ ಬಾರಿಗೆ ಇದರ ಸ್ಪಷ್ಟೀಕರಣ ನೀಡಬೇಕೆಂದೇ ಬಂದೆ.”

ನಾನು ಸುಮ್ಮನೆ ಪಕ್ಕಕ್ಕೆ ಸರಿದು ನಿಂತೆ. ರಾಜೇಶ್‌ ಒಳಗೆ ಬಂದು ಸೋಫಾ ಮೇಲೆ ಕುಳಿತ. ನಾನು ಅವನ ಎದುರಿನ ಕುರ್ಚಿಯಲ್ಲಿ ಕುಳಿತೆ. ಗೋಡೆಯ ಮೇಲಿದ್ದ ದೊಡ್ಡ ಕನ್ನಡಿಯಲ್ಲಿ ನನ್ನ ಪ್ರತಿಬಿಂಬ ಕಾಣಿಸುತ್ತಿತ್ತು. ಬೈತಲೆಗೆ ಹಚ್ಚಿದ್ದ ಸಿಂಧೂರ, ಕೊರಳಿನಲ್ಲಿದ್ದ ಮಾಂಗಲ್ಯ ಢಾಳಾಗಿ ಎದ್ದು ಕಾಣುತ್ತಿತ್ತು.

“ನೀನು ಸಂತೋಷವಾಗಿದ್ದೀಯಲ್ಲ ರಶ್ಮಿ?” ರಾಜೇಶನ ದನಿಯಲ್ಲಿ ಸ್ನೇಹ ಒಸರುತ್ತಿತ್ತು.

ನಾನೇನೂ ಉತ್ತರಿಸಲಿಲ್ಲ.“ನಿನ್ನ ಮದುವೆಗೆ ಬರಲಾಗಲಿಲ್ಲವಲ್ಲ…. ಅದಕ್ಕೆ ಈಗ ನಿನಗಾಗಿ ಒಂದು ಉಡುಗೊರೆ ತಂದಿದ್ದೀನಿ. ಬೇಡವೆಂದು ನಿರಾಕರಿಸಬೇಡ,” ಆದೇಶಿಸುವಂತೆ ಹೇಳಿ ರಾಜೇಶ್‌ ಸಾಕಷ್ಟು ದೊಡ್ಡದಾಗಿದ್ದ ಲಕೋಟೆಯನ್ನು ನನ್ನ ಮುಂದೆ ನೀಡಿದ.

“ಇದರಲ್ಲಿ ಏನಿದೆ?” ನಾನು ಕೈ ನೀಡದೆ ಪ್ರಶ್ನಿಸಿದೆ.

“ನೀನು ನನಗೆ ಬರೆದ ಎಲ್ಲ ಪ್ರೇಮಪತ್ರಗಳೂ ಇದರಲ್ಲಿವೆ,” ರಾಜೇಶ್‌ ನಗುನಗುತ್ತಾ ಹೇಳಿದ. ಆದರೆ ಆ ನಗುವಿನಲ್ಲಿ ನೋವು ತುಂಬಿತ್ತು.

“ಥ್ಯಾಂಕ್ಸ್ ರಾಜೇಶ್‌! ನೀನು ನನಗೆ ಅಮೂಲ್ಯ ಉಡುಗೊರೆಯನ್ನೇ ಕೊಟ್ಟೆ,” ನಾನು ಬಹಳ ಸಂತೋಷದಿಂದ ನೆಗೆದು ಆ ಲಕೋಟೆಯನ್ನು ಎತ್ತಿಕೊಂಡು ಒಳಗೆ ಹೋದೆ. ಮನಸ್ಸಿನ ಭಾರ ಇಳಿದುಹೋಗಿತ್ತು.

“ರಶ್ಮಿ, ಇದಕ್ಕಿಂತ ಹೆಚ್ಚಿನದೇನನ್ನೂ ಕೊಡಲು ನಾನು ಶಕ್ತನಲ್ಲ. ನಿನ್ನ ಬಡ ಸಹಪಾಠಿ. ಜೀವನದ ಸಂಘರ್ಷಗಳೊಡನೆ ಸೆಣೆಸಾಡುತ್ತಿರುವ ಈ ನಿನ್ನ ಗೆಳೆಯ, ಹಾರ್ದಿಕ ಶುಭಾಶಯಗಳ ಹೊರತಾಗಿ ನಿನಗೆ ಬೇರೇನನ್ನೂ ಕೊಡಲಾರ.”

“ರಾಜೇಶ್‌!” ನನ್ನ ಕಂಠ ಬಿಗಿದುಬಂದಿತು.

“ಬಹು ದೊಡ್ಡ ಕುಟುಂಬದ ಹೊಣೆ ನನ್ನ ಮೇಲಿದೆ ರಶ್ಮಿ. ತಮ್ಮನನ್ನು ಓದಿಸಬೇಕು. ನನ್ನ ಮೂರು ತಂಗಿಯರ ಮದುವೆ ಆಗುವವರೆಗೆ ನಾನು ಮದುವೆ ಆಗಲಾರೆ ರಶ್ಮಿ. ಇದು ಇನ್ನೂ ಆರೇಳು ವರ್ಷಗಳ ಮಾತು. ನೀನು ಇಷ್ಟು ದೀರ್ಘ ಕಾಲ ಪ್ರತೀಕ್ಷೆ ಮಾಡು ಎಂದು ನಾನು ಯಾವ ಬಾಯಿಯಿಂದ ಹೇಳಲಿ? ಇದು ಸಾಧ್ಯವಾಗದ ಮಾತು… ಆದ್ದರಿಂದಲೇ……”

ರಾಜೇಶ್‌ ನನ್ನ ಕಣ್ಣೆದುರು ಹಿಮಾಲಯದೆತ್ತರಕ್ಕೆ ಏರಿ ನಿಂತ. ನಾನು ಖಳನಾಯಕನೆಂದು ಶಪಿಸಿದ್ದ ಅವನು ಈಗ ನನ್ನ ಪಾಲಿಗೆ ಆದರ್ಶನಾಯಕನಂತೆ ಕಾಣಿಸಿದ. ಮನುಕುಲದ ಶ್ರೇಷ್ಠರಲ್ಲಿ ಒಬ್ಬನನ್ನು ನಾನು ಕಣ್ಣಾರೆ ನೋಡುತ್ತಿದ್ದೆ.

ಅಷ್ಟರಲ್ಲಿ ಮತ್ತೆ ಕರೆಗಂಟೆ ಬಾರಿಸಿತು. ಸಿನಿಮಾ ಟಿಕೆಟ್‌ ಸಿಗಲಿಲ್ಲವೆಂದು ರವಿ, ಗೀತಾ, ರಾಹುಲ್ ವಾಪಸ್ಸು ಬಂದಿದ್ದರು. ನಾನು ರಾಜೇಶನಿಗೆ ರವಿಯ ಪರಿಚಯ ಮಾಡಿಕೊಟ್ಟೆ. ಬಹು ಹೊತ್ತಿನವರೆಗೂ ಅವರಿಬ್ಬರೂ ಹರಟೆ ಹೊಡೆಯುತ್ತಿದ್ದರು. ನಾನು ಎಲ್ಲರಿಗೂ ತಿಂಡಿ, ಕಾಫಿ ಸರಬರಾಜು ಮಾಡಿದೆ.

ಸುಮಾರು ಒಂದು ಗಂಟೆಯ ನಂತರ ರಾಜೇಶ್‌ ನಮ್ಮಿಬ್ಬರನ್ನೂ ಮತ್ತೊಮ್ಮೆ ಅಭಿನಂದಿಸಿ, ಹೊರಟುಹೋದ. ನನ್ನ ಹೃದಯದಲ್ಲಿ ಸುಖೀ ವೈವಾಹಿಕ ಜೀವನದ ಅಡಿಪಾಯದ ಮೇಲೆ ನಿಂತ ಸಂಸಾರದ ಮಹಲು ಹುಟ್ಟಿಕೊಂಡಿತು. ಈಗ ಯಾವ ಭಯ ಇರಲಿಲ್ಲ, ಸಂಶಯ ಇರಲಿಲ್ಲ. ಮನಸ್ಸಿನಲ್ಲಿ ಶಾಂತಿ ತುಂಬಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ