ಇತ್ತೀಚೆಗೆ ತಮ್ಮ ವಠಾರಕ್ಕೆ ಹೊಸದಾಗಿ ಒಬ್ಬ ವಯೋವೃದ್ಧ ವ್ಯಕ್ತಿ ಮೂಲೆ ಮನೆಗೆ ಬಂದುದನ್ನು ರವಿ ಗಮನಿಸಿದ. ಅವರು ಬಹಳ ಹಸನ್ಮುಖಿ, ಲವಲವಿಕೆಯ ಹಾಗೂ ಈಸಿ ಗೋಯಿಂಗ್ ನೇಚರ್ ಸ್ವಭಾವದರಾಗಿದ್ದರು. ಒಮ್ಮೆ ಅವರನ್ನು ಭೇಟಿಯಾಗಿ ರವಿ ಉತ್ಸಾಹದಿಂದ ಅವರ ಬಗ್ಗೆ ವಿವರಗಳನ್ನು ಕಲೆಹಾಕಿದ.
ರವಿ : ನಿಮ್ಮ ಹಿರಿಯ ವಯಸ್ಸನ್ನು ಗಮನಿಸಿದರೆ ನಿಮ್ಮ ಬಾಡಿ ಅದಕ್ಕಿಂತ ಎಷ್ಟೋ ಭಿನ್ನವಾಗಿದೆ. ನಿಮ್ಮ ಸುಖೀ ಹಾಗೂ ಸ್ವಸ್ಥ ಜೀವನದ ರಹಸ್ಯವೇನು? ಬಹುಶಃ ತುಂಬಾ ವ್ಯಾಯಾಮ ಮಾಡ್ತೀರಿ ಅನ್ಸುತ್ತೆ. ಸಿಗರೇಟ್, ಹೆಂಡ ಮುಟ್ಟುವುದೇ ಇಲ್ಲ ಅನ್ಸುತ್ತೆ.
ವೃದ್ಧ : ಹಾಗೇನಿಲ್ಲ ಬಿಡಿ, ನಾನು ಪ್ರತಿದಿನ 3 ಪ್ಯಾಕೆಟ್ ಸಿಗರೇಟ್ ಸೇದ್ತೀನಿ, ಪ್ರತಿ ರಾತ್ರಿ ತಪ್ಪದೆ ಒಂದೊಂದು ಬಾಟಲ್ ಸ್ಕಾಚ್ ಕುಡಿಯುತ್ತೀನಿ. ಮಸಾಲೆಭರಿತ ನಾನ್‌ವೆಜ್ ಇಲ್ಲದಿದ್ದರೆ ನನಗೆ ಆಗುವುದೇ ಇಲ್ಲ. ಮತ್ತೆ…. ವ್ಯಾಯಾಮ, ಜಾಗಿಂಗ್, ವಾಕಿಂಗ್‌ಇದಕ್ಕೆಲ್ಲ ನನಗೆ ಪುರಸತ್ತೇ ಇಲ್ಲ.
ರವಿ : ನಿಜಕ್ಕೂ ಆಶ್ಚರ್ಯ, ಅದಿರಲಿ… ನಿಮ್ಮ ವಯಸ್ಸೆಷ್ಟು?
ವೃದ್ಧ : 38 ವರ್ಷ!
18ರ ಹರೆಯದ ಹಲವು ಹುಡುಗರು ಸಾಯಂಕಾಲ ಒಂದೆಡೆ ಕುಳಿತು ಹರಟುತ್ತಿದ್ದರು. ಅಲ್ಲಿಗೆ ತೂರಾಡುತ್ತಾ ಒಬ್ಬ ಕುಡುಕ ಬಂದ. ಆ ಮಬ್ಬುಗತ್ತಲಿನಲ್ಲಿಯೂ ಅವನು ಆ ಹುಡುಗರ ಮಧ್ಯೆ ಕುಳಿತಿದ್ದ ರಾಜುವನ್ನೇ ದಿಟ್ಟಿಸಿ, “ಏ… ಕೇಳಿಲ್ಲಿ, ನಿಮ್ಮಮ್ಮ ಈ ನಗರದ ಅತಿ ಸುಂದರ ಹೆಂಗಸು!” ಎಂದು ಹಲ್ಲುಕಿರಿದ. ಅಲ್ಲಿದ್ದ ಬೇರೆ ಹುಡುಗರು ಈಗ ದೊಡ್ಡ ಜಗಳ ನಡೆಯಲಿದೆ ಎಂದು ಕಾದರು. ಹಾಗೇನೂ ಆಗಲಿಲ್ಲ, ರಾಜು ಸುಮ್ಮನಿರುವುದನ್ನು ನೋಡಿ ಆ ಕುಡುಕ ಅಲ್ಲಿಂದ ತೂರಾಡುತ್ತಾ ಹೋಗಿ ಮತ್ತೆ 2 ಬಾಟಲು ಕುಡಿದು ಬಂದಿದ್ದ.
ಈ ಸಲ ಮತ್ತೆ ರಾಜುವನ್ನೇ ದಿಟ್ಟಿಸುತ್ತಾ, “ಏ ಹುಡುಗ, ನಾನು ನಿಮ್ಮಮ್ಮನನ್ನು ಬಹಳ ಪ್ರೀತಿಸುತ್ತೇನೆ. ನಿಂಗೆ ಗೊತ್ತಾ?” ಎಂದ. ರಾಜು ಏನೂ ಉತ್ತರಿಸದೆ ಸುಮ್ಮನೆ ಕುಳಿತಾಗ ಆ ಕುಡುಕ ಅಲ್ಲಿಂದ ಹೊರಟುಹೋದ. ರಾಜು ಏಕೆ ಸುಮ್ಮನಿದ್ದಾನೋ ತಿಳಿಯದೆ ಹುಡುಗರು ಬೇಸತ್ತರು.
ಸ್ವಲ್ಪ ಹೊತ್ತಿನ ನಂತರ ಬಂದ ಅದೇ ಕುಡುಕ ಈ ಸಲ ರಾಜುವಿಗೆ, “ಏ ಹುಡುಗ, ನಿಮ್ಮಮ್ಮ ಸಹ ನನ್ನನ್ನು ಅಷ್ಟೇ ಪ್ರೀತಿಸುತ್ತಾಳೆ. ನಿನಗದು ಗೊತ್ತಾ…?” ಎಂದು ತೂರಾಡುತ್ತಾ ಅಲ್ಲೇ ನಿಲ್ಲಲು ಯತ್ನಿಸಿದ.
ರಾಜು ತನ್ನ ಜಾಗದಿಂದ ಎದ್ದು ಬಂದ. ಆ ಕುಡುಕನಿಗೆ ಏನು ಗತಿ ಕಾದಿದೆಯೋ ಎಂದು ಎಲ್ಲರೂ ಕುತೂಹಲದಿಂದ ನೋಡುತ್ತಿದ್ದರೆ ರಾಜು, “ಅಪ್ಪ…. ಪ್ಲೀಸ್ ಈಗ ಮನೆಗೆ ನಡಿ. ನೀನು ಕುಡಿದದ್ದು ಜಾಸ್ತಿ ಆಯ್ತು,” ಎಂದು ಹೆಗಲ ಮೇಲೆ ಕೈ ಹಾಕಿಕೊಂಡು ಕರೆದೊಯ್ದ.
ಮಗರಾಯ ಕಾಲೇಜಿನ ವಿದ್ಯಾಭ್ಯಾಸ ಮುಗಿಸಿ ರಜೆಯಲ್ಲಿ ಹಳ್ಳಿಗೆ ಹಿಂದಿರುಗಿದ್ದ.
ತಂದೆ : ಮಗ, ಹಿಂದೆ ನಿನಗೆ ಗೊತ್ತಿರದಿದ್ದ ಯಾವ 2 ಕಷ್ಟದ ಕೆಲಸಗಳನ್ನು ಈಗ ಕಾಲೇಜಿನಲ್ಲಿ ಕಲಿತು ಬಂದಿರುವೆ?
ಮಗ : ಹೌದಪ್ಪ, ಉಳಿದದ್ದು ಹೇಗೋ ಏನೋ… ಅದರೆ 2 ಕಷ್ಟದ ಕೆಲಸಗಳನ್ನು ಕಲಿತು ಬಂದಿರುವುದಂತೂ ನಿಜ. ಇದು ನನಗೆ ಮೊದಲು ಬರುತ್ತಿರಲಿಲ್ಲ.
ತಂದೆ : ಶಭಾಷ್! ಯಾವುದಪ್ಪ ಆ 2 ಕೆಲಸಗಳು?
ಮಗ : ಹಲ್ಲಿನಿಂದಲೇ ಕಚ್ಚಿ ಬಿಯರ್ ಬಾಟಲ್ ಓಪನ್ ಮಾಡುವುದು ಹಾಗೂ ಬಿರುಗಾಳಿ ಬೀಸುತ್ತಿದ್ದರೂ ಒಂದೇ ಕಡ್ಡಿ ಬಳಸಿ ಸಿಗರೇಟ್ ಹಚ್ಚುವುದು….
ಸೋಮಣ್ಣ ಆಫೀಸ್‌ಗೆ ಹೊರಡುವ ಆತುರದಲ್ಲಿದ್ದರು. 3ನೇ ಮಹಡಿಯ ತಮ್ಮ ಮನೆಯಿಂದ ಇಳಿದು ಸರಸರನೆ ಕೆಳಗೆ ಬಂದರು, ಲಿಫ್ಟ್ ಬೇರೆ ಪೂರ್ತಿ ಕೆಟ್ಟಿತ್ತು. ಆಮೇಲೆ ನೋಡುತ್ತಾರೆ… ಮೊಬೈಲ್, ಕರ್ಚೀಫ್ ತೆಗೆದುಕೊಂಡಿಲ್ಲ ಅಂತ ಗೊತ್ತಾಯಿತು. ಆಗ ಅವರು ಕೆಳಗಿನಿಂದಲೇ ಹೆಂಡತಿಗೆ, “ರತ್ನಾ… ಸ್ವಲ್ಪ ಆ ಮೊಬೈಲ್, ಕರ್ಚೀಫ್ ಎರಡನ್ನೂ ಕೆಳಗೆ ಎಸಿ. ಮತ್ತೆ ಮಹಡಿ ಹತ್ತಿ 3ನೇ ಮಹಡಿಗೆ ಬರಲಾರೆ,” ಎಂದು ಕೂಗಿ ಹೇಳಿದರು.
ಆಕೆ ಬಾಲ್ಕನಿಗೆ ಬಂದು ಅಲ್ಲಿಂದ ಇಣುಕಿ ನೋಡುತ್ತಾ, “ಮೊದಲು ಯಾವುದನ್ನು ಎಸೆಯಲಿ?” ಎಂದರು.
“ಬಹುಶಃ ಬಾಸ್ ಕಾಲ್ ಮಾಡಬಹುದು, ಮೊದಲು ನನ್ನ ಮೊಬೈಲ್‌ನ್ನು ಇತ್ತ ಎಸಿ,” ಎಂದರು.
ರತ್ನಮ್ಮ ಗುರಿಯಿಟ್ಟು ಇವರತ್ತ ಎಸೆದ ಮೊಬೈಲ್‌ನ್ನು ಸೋಮಣ್ಣ ಹಿಡಿಯದೆ ಹೋದ್ದರಿಂದ, ಅದು ಕೆಳಗೆ ಬಿದ್ದು ಚೂರು ಚೂರಾಯಿತು. ನಂತರ ರತ್ನಮ್ಮ ಕರ್ಚೀಫ್ ಎಸೆಯಲು ಸಿದ್ಧರಾದಾಗ ಸೋಮಣ್ಣ ಕೆಳಗಿನಿಂದ ಕಿರುಚಿದರು, “ಇರು ಮಾರಾಯ್ತಿ, ಅದನ್ನು ಎಸೆಯಬೇಡ. ಅದೂ ಬಿದ್ದು ಹಾಳಾದ್ರೆ ಕಷ್ಟ. ನಾನು ಅಲ್ಲಿಗೇ ಬಂದು ತೆಗೆದುಕೊಳ್ತೀನಿ,” ಎಂದು ಸಾವಕಾಶವಾಗಿ ಮೆಟ್ಟಿಲನ್ನು ಹತ್ತತೊಡಗಿದರು.
ಒಬ್ಬ ವಯೋವೃದ್ಧರ 101ನೇ ಹುಟ್ಟುಹಬ್ಬದ ಪಾರ್ಟಿ ನಡೆಯುತ್ತಿತ್ತು. ಒಬ್ಬ ಎಲ್ ಬೋರ್ಡ್ ವರದಿಗಾರ ಅವರ ಮುಂದೆ ಉತ್ಸಾಹದಿಂದ ನುಗ್ಗಿ ಪ್ರಶ್ನೆ ಕೇಳತೊಡಗಿದ, “ಸ್ವಾಮಿ, ಮುಂದಿನ ವರ್ಷ ಇದೇ ತರಹ ನಿಮಗ ಶುಭಾಶಯ ಕೋರಲು ಬರುವೆನೆಂಬ ಆಶಾಭಾವನೆ ಹೊಂದಿದ್ದೇನೆ.”
“ಯಾಕಿಲ್ಲ ಮಗು, ಖಂಡಿತಾ ಬರ್ತೀಯ. ನಿನಗೇನು ಈಗ ಅಂಥ ಮಹಾ ವಯಸ್ಸಾಗಿರೋದು?” ಎನ್ನುವುದೇ ಅವರು!
ಒಂದು ಪಬ್ಲಿಕ್ ಫೋನ್ ಬೂತ್ ಒಳಗೆ ಹೋದ ಒಬ್ಬ ವ್ಯಕ್ತಿ 15 ನಿಮಿಷವಾದರೂ ರಿಸೀವರ್ ಹಿಡಿದು ಹಾಗೇ ನಿಂತಿರುವುದನ್ನು ಗಮನಿಸಿ ಹೊರಗಿದ್ದ ಪ್ರಕಾಶನಿಗೆ ರೇಗಿತು.
ಅವನು ಒಳಗೆ ನುಗ್ಗಿ ರೇಗಿಕೊಂಡ, “ರೀ ಸ್ವಾಮಿ, ಹೊರಗೆ ನಾವೆಲ್ಲ ಕ್ಯೂನಲ್ಲಿ ನಮ್ಮ ಸರದಿಗಾಗಿ ಕಾಯುತ್ತಿದ್ದೇವೆ. ನೀವಿಲ್ಲಿ ಸುಮ್ಮನೆ ಫೋನಿನ ರಿಸೀವರ್ ಹಿಡಿದುಕೊಂಡು ನಿಂತಿದ್ದೀರಲ್ಲ…. ನಿಮಗೆ ಬೇಡ ಅನ್ಸಿದ್ರೆ ಬೇರೆಯವರಿಗೆ ಸರದಿ ಬಿಟ್ಟುಕೊಡ್ರಿ!”
“ಅದು ಹಾಗಲ್ಲಪ್ಪ…. ಆ ಕಡೆಯಿಂದ ನನ್ನ ಹೆಂಡತಿ ಮಾತನಾಡುತ್ತಿದ್ದಾಳೆ. ಮಧ್ಯದಲ್ಲಿ ಮಾತನಾಡಲು ನನಗೆ ಅವಕಾಶ ಸಿಗುತ್ತಾ ಅಂತ ಕಾಯ್ತಿದ್ದೀನಿ. ಪಾಪ, ನಿನ್ನನ್ನು ನೋಡಿದರೆ, ನಿನಗಿನ್ನೂ ಮದುವೆ ಆಗಿಲ್ಲ ಅನ್ಸುತ್ತೆ…” ಎನ್ನುವುದೇ ಆ ವ್ಯಕ್ತಿ!
ಗುಂಡನ ಮನೆಯ ಕಾಲಿಂಗ್ ಬೆಲ್ ಕೆಳಗೆ ಹೀಗೆ ನೋಟಿಸ್ ಅಂಟಿಸಲಾಗಿತ್ತು : “ದಯವಿಟ್ಟು ಬೆಲ್ ಮಾಡಿದ ಮೇಲೆ ಸ್ವಲ್ಪ ಹೊತ್ತು ಕಾಯುವ ಸಹನೆ ಬೆಳೆಸಿಕೊಳ್ಳಿ. ಸತತ ಬೆಲ್ ಒತ್ತುತ್ತಾ ಇರಬೇಡಿ, ಏಕೆಂದರೆ, ಬಾಗಿಲು ತೆರೆಯಲು ಬರುವವರು ನಡೆದುಕೊಂಡು ಬರುತ್ತಾರೆಯೇ ಹೊರತು ಹಾರಿಕೊಂಡಲ್ಲ!”
ಅರವಿಂದ್ : ಈ ಹುಡುಗಿಯರಿಗೆ ಕನಿಷ್ಠ ಒಂದು ಪಾಲ್ ಆದರೂ ಮಾಡಲು ಬರಲೇಬೇಕು ಅಂತೀನಿ.
ಅಭಿಷೇಕ್ : ಅದು ಯಾಕೆ ಅಂತೀನಿ?
ಅರವಿಂದ್ : ಏ…. ನಮ್ಮಂಥ ಹುಡುಗರಿಗೇ ಮ್ಯಾಗಿ ಮಾಡಲು ಬರೋವಾಗ ಮತ್ತೆ…..
ಗಂಡನ ಮಾತು ಕೇಳಿಸಿಕೊಂಡ ಹೆಂಡತಿ, ಕೋಪದಿಂದ “ಏನಂದ್ರಿ ನೀವು?” ಎಂದು ಕಿರುಚಾಡಿದರೆ, ಅವನಾಡಿದ ಮಾತು ಅವಳಿಗೆ ಅರ್ಥವಾಗಲಿಲ್ಲಾ. ಮತ್ತೊಮ್ಮೆ ಅದನ್ನು 2ನೇ ಸಲ ಬಿಡಿಸಿ ಹೇಳಲಿ ಎಂದರ್ಥವಲ್ಲ. ಬದಲಿಗೆ ಅದರರ್ಥ ಅವನು ತನ್ನ ಅಭಿಪ್ರಾಯ ಬದಲಿಸಿಕೊಂಡು ತಾನು ಹೇಳಿದ್ದಕ್ಕೆ ಒಪ್ಪಿಕೊಳ್ಳಲಿ ಎಂದರ್ಥ!
ಪತಿ : ಕೋಪಿಸಿಕೊಳ್ಳುವುದು ಪ್ರತಿ ಗಂಡಸಿನ ಹಕ್ಕು… ಗೊತ್ತಾ?
ಪತ್ನಿ : ಅದನ್ನು ನುಂಗಿಕೊಂಡು ಸಹನೆ ತೋರಿಸಿಕೊಳ್ಳಬೇಕಾದುದು ಗಂಡನಾದವನ ಜವಾಬ್ದಾರಿ…. ಗೊತ್ತಾ?
ಸುಶೀಲಮ್ಮ : ಅಲ್ರೀ, ನಿಮ್ಮ ಮಗಳಿಗೆ ಎಂಗೇಜ್‌ಮೆಂಟ್ ಆಗಿ 2 ವರ್ಷದ ಮೇಲಾಯ್ತು. ಇನ್ನೂ ಯಾಕೆ ಮದುವೆಗೆ ಇಷ್ಟು ತಡ ಮಾಡ್ತಿದ್ದೀರಿ?
ಕಮಲಮ್ಮ : ಏನ್ರಿ ಮಾಡುವುದು? ಅಳೀಮಯ್ಯ ವಕೀಲಿ ವೃತ್ತಿಯಲ್ಲಿ ಪಳಗಿಬಿಟ್ಟಿದ್ದಾನೆ. ಮದುವೆ ತಾರೀಕು ಹತ್ತಿರ ಬಂದಾಗೆಲ್ಲ ಏನೋ ಕಾರಣ ಹೂಡಿ ಅದನ್ನು 1 ವರ್ಷ ಮುಂದಕ್ಕೆ ಹಾಕಿಸಿಬಿಡ್ತಾನೆ!