ಚಳಿಗಾಲ ಶುರುವಾಗುತ್ತಿದ್ದಂತೆ, ಉಣ್ಣೆಯ ಉಡುಗೆಗಳಿಗೆ ಕಬೋರ್ಡ್‌ನಿಂದ ಸ್ವಾತಂತ್ರ್ಯ ಸಿಕ್ಕಿ ಎಲ್ಲರ ಮೈ ಮೇಲೆ ನಲಿಯಲಾರಂಭಿಸುತ್ತವೆ. ಇವನ್ನು ಧರಿಸಿದ ನಂತರ ಒಗೆದು ನೀಟಾಗಿಸಿ ಎತ್ತಿಟ್ಟು ಬಳಸಬೇಕಷ್ಟೆ, ಆದರೆ ಇವುಗಳ ಸ್ವಚ್ಛತೆ ಶುಭ್ರತೆಯತ್ತ ಗಮನಕೊಡುವುದೇ ದೊಡ್ಡ ಕಷ್ಟದ ಕೆಲಸ. ದುಬಾರಿ ಬೆಲೆಯ ಶಾಲು ಹಾಗೂ ಭಾರಿ ಸ್ಟೆಟರ್ಸ್‌ನ್ನು ಯಾವ ರೀತಿ ಜೋಪಾನವಾಗಿ ಒಗೆದರೆ ಅದರ ಹೊಳಪು ಮಾಸದೆ ಉಳಿಯಬಲ್ಲದು ಎಂಬುದೊಂದು ದೊಡ್ಡ ಸವಾಲಾಗಿ ಕಾಡುತ್ತದೆ.
ಆದರೆ ಎಕ್ಸ್ ಪರ್ಟ್ಸ್ ಹೇಳುವುದೆಂದರೆ, ಉಣ್ಣೆಯ ಉಡುಗೆಗಳನ್ನು ಸರಿಯಾಗಿ ಶುಚಿಗೊಳಿಸದಿದ್ದರೆ, ಅವು ಹಾಳಾಗುವ ಸಂಭವ ಹೆಚ್ಚು. ಮುಖ್ಯವಾಗಿ ಅವು ತಮ್ಮ ಕಾಂತಿ ಕಳೆದುಕೊಂಡು ಕಳಾಹೀನವಾಗುತ್ತವೆ. ಆದ್ದರಿಂದ ಅವುಗಳ ವಾಷಿಂಗ್ ಕುರಿತು ಹೆಚ್ಚು ಎಚ್ಚರ ವಹಿಸಬೇಕು. ಅದನ್ನು ಮನೆಯಲ್ಲಿ ಮಾಡುವುದು ಹೇಗೆ? ಬನ್ನಿ, ಅದಕ್ಕಾಗಿ ಅನುಸರಿಸಬೇಕಾದ 4 ಹಂತಗಳನ್ನು ವಿವರವಾಗಿ ಗಮನಿಸೋಣ :
ಮೊದಲ ಹಂತ
ಎಷ್ಟೋ ಸಲ ಮಹಿಳೆಯರು ಕಾಟನ್ ಬಟ್ಟೆಗಳಂತೆಯೇ ಉಣ್ಣೆಯ ಉಡುಗೆಗಳನ್ನೂ, ಧರಿಸಿದ ಪ್ರತಿ ಸಲ ಒಗೆಯಲು ಯತ್ನಿಸುತ್ತಾರೆ. ಆದರೆ ಖಂಡಿತಾ ಹಾಗೆ ಮಾಡಬಾರದು. ಸಾಧ್ಯವಾದಷ್ಟೂ ಉಲ್ಲನ್ ಡ್ರೆಸೆಸ್‌ನ್ನು ಕನಿಷ್ಠ ಬಾರಿ ಒಗೆಯಬೇಕು, ಅಂದರೆ ಆದಷ್ಟೂ ಉಣ್ಣೆಯ ಉಡುಗೆಗಳು ಕೊಳೆಯಾಗದಂತೆ ನೋಡಿಕೊಳ್ಳಬೇಕು ಎಂದರ್ಥ. ಅಸಲಿಗೆ ದ.ಭಾರತದಲ್ಲಿ ನಾವು ಉಣ್ಣೆಯ ಉಡುಗೆ ಬಳಸುವುದು ತುಸು ಕಡಿಮೆ ಆದ್ದರಿಂದ, ಧರಿಸಿದ 5-6 ಸಲದ ನಂತರವೇ ಒಗೆಯಬೇಕು. ಅವನ್ನು ಒಗೆಯಲೇಬೇಕಾದಾಗ, ಪಿಎಚ್ ಬ್ಯಾಲೆನ್ಸ್ಡ್ ಲಿಕ್ವಿಡ್ ಡಿಟರ್ಜೆಂಟ್‌ನ್ನೇ ಬಳಸಬೇಕು. ಇನ್ನೊಂದು ಗಮನಿಸಿಕೊಳ್ಳಬೇಕಾದ ಅಂಶವೆಂದರೆ, ಇದಕ್ಕಾಗಿ ನೀವು ಬಳಸುವ ಡಿಟರ್ಜೆಂಟ್‌ನಲ್ಲಿ ಸೋಡ ಅಂಶ ಇರಬಾರದು.
ಈ ಕುರಿತಾಗಿ ಬೆಂಗಳೂರಿನ ಗೃಹಿಣಿ ಮಾಧುರಿ ಹೇಳುತ್ತಾರೆ, ಚಳಿಗಾಲ ಶುರುವಾದಾಗ ಒಮ್ಮೆ ನಾನು ಎಲ್ಲ ಉಣ್ಣೆಯ ಉಡುಗೆಗಳನ್ನೂ ಬಿಸಿಲಿನಲ್ಲಿ ಹರಡಿ, ನಂತರ ಬಳಸಲು ಶುರು ಮಾಡುತ್ತೇನೆ. ಇಷ್ಟು ದಿನ ಅದು ಮಡಿಚಿ ಒಂದು ಕಡೆ ಇಟ್ಟಿದ್ದರಿಂದ ಬಂದಿರಬಹುದಾದ ವಾಸನೆ ಹೋಗಿ ಫ್ರೆಶ್‌ನೆಸ್ ಬರುತ್ತದೆ, ಜೊತೆಗೆ ಹೆಚ್ಚು ಬೆಚ್ಚಗಿರುತ್ತದೆ. ಆಕೆ ಹೇಳುವುದೆಂದರೆ, ನೇರವಾಗಿ ಬಿಸಿಲಿಗೆ ಒಡ್ಡುವ ಬದಲು, ಇವನ್ನು ಗಾಳಿಯಾಡುವ ಕಡೆ ನೆರಳಿನಲ್ಲಿ ಒಣಗಿಸುವುದು ಉತ್ತಮ.
ಎರಡನೇ ಹಂತ
ಉಣ್ಣೆಯ ಉಡುಗೆಗಳನ್ನು ಒಗೆಯುವ ಮೊದಲು ಅವನ್ನು 1 ಗಂಟೆ ಕಾಲ ತಣ್ಣೀರಿನಲ್ಲಿ ನೆನೆಸುವುದು ಲೇಸು. ಇದರಿಂದಾಗಿ ಅವುಗಳಲ್ಲಿ ಅಡಗಿದ ಧೂಳು, ಕೊಳೆ ಇತ್ಯಾದಿ ಬಿಟ್ಟುಕೊಳ್ಳುತ್ತದೆ. ಅವನ್ನು ಹೆಚ್ಚು ಹೊತ್ತು ತಿಕ್ಕಿ ಒಗೆಯಬೇಕಾದ ಪ್ರಮೇಯ ಇರುವುದಿಲ್ಲ. ತಣ್ಣೀರಿನಲ್ಲಿ ನೆನೆಸುವ ಮತ್ತೊಂದು ಲಾಭವೆಂದರೆ, ಅವು ಶ್ರಿಂಕ್ ಆಗುವ ಗೋಜಿಲ್ಲ.
ಈ ಕುರಿತಾಗಿ ಮೈಸೂರಿನ ಮೇಘನಾ ಹೇಳುತ್ತಾರೆ, ಉಣ್ಣೆಯ ಉಡುಗೆಗಳನ್ನು ಯಾವಾಗಲೂ ತಣ್ಣೀರಿನಲ್ಲೇ ಒಗೆಯಬೇಕು, ಬಿಸಿ ನೀರು ಖಂಡಿತಾ ಕೂಡದು. ಎಕ್ಸ್ಪರ್ಟ್ಸ್ ಪ್ರಕಾರ, ನೀರು ಅತ್ತ ಬಿಸಿಯೂ ಇರಬಾರದು, ಇತ್ತ ಕೊರೆಯುವ ತಂಪೂ ಇರಬಾರದು, ನಾರ್ಮಲ್ ಆಗಿದ್ದರೆ ಸರಿ. ಬಿಸಿ ನೀರಿನಿಂದ ಸ್ವೆಟರ್ ಇತ್ಯಾದಿ ಶ್ರಿಂಕ್ ಆದರೆ, ನೀರು ಹೆಚ್ಚು ತಂಪಾಗಿದ್ದಷ್ಟೂ ಅದರ ಮೃದುತ್ವ ಹಾಳಾಗುವ ಸಂಭವವಿದೆ.