“ಹಲೋ ಆಂಟಿ…. ಹೊಸ ವರ್ಷದ ಶುಭಾಶಯಗಳು! ಹೇಗಿದ್ದೀರಿ… ಚೆನ್ನಾಗಿದ್ದೀರಾ?” ರೇವತಿ ಫೋನ್‌ ರಿಸೀವ್ ‌ಮಾಡಿದ ತಕ್ಷಣ ಆ ಬದಿಯಿಂದ ಮಧುರವಾದ ಹೆಣ್ಣು ಧ್ವನಿಯೊಂದು ಅಲೆಅಲೆಯಾಗಿ ತೇಲಿ ಬಂದಿತು.

“ಓ ಶೃತಿ… ನೀನಾ? ನಾನು ಚೆನ್ನಾಗಿದ್ದೀನಿ…. ನೀನು ಚೆನ್ನಾಗಿದ್ದೀಯಾ? ನಿನಗೂ ಹೊಸ ವರ್ಷದ ಶುಭಾಶಯಗಳು,” ರೇವತಿ ಆದಷ್ಟೂ ತಮ್ಮ ದನಿಯಲ್ಲಿ ಉತ್ಸಾಹ ತುಂಬಲು ಯತ್ನಿಸುತ್ತಾ ನುಡಿದರು.

“ನಾನು ಚೆನ್ನಾಗಿದ್ದೀನಿ ಆಂಟಿ…. ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ ತಾನೇ? ನಿಮ್ಮನ್ನು ಬಂದು ಭೇಟಿಯಾಗಬೇಕು ಅಂತ ಬಹಳ ದಿನಗಳಿಂದ ಅಂದುಕೊಳ್ಳುತ್ತಿದ್ದೆ…..” ಬಹುಶಃ ಅವಳು ಇವರ ಮನೆಗೆ ಬರಲು ಅನುಮತಿ ಕೇಳುತ್ತಿದ್ದಿರಬೇಕು, ಆದರೆ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ರೇವತಿ ಅದಕ್ಕೆ ತೇಲಿಸಿ ಉತ್ತರಿಸುತ್ತಾ, “ಆಗಲಮ್ಮ ಶೃತಿ…. ಇಷ್ಟರಲ್ಲಿ ಭೇಟಿ ಆಗೋಣ…. ನಾನು ಸ್ವಲ್ಪ ದಿನಗಳ ಮಟ್ಟಿಗೆ ಬೆಂಗಳೂರಿನ ತಂಗಿಯ ಮನೆಗೆ ಹೋಗೋಣ ಅಂತಿದ್ದೀನಿ…. ಆಗಲಿ, ಇನ್ನೊಂದು ಸಲ ನಾನೇ ಮಾಡ್ತೀನಿ. ಯಾರೋ ಕಾಲಿಂಗ್‌ ಬೆಲ್ ‌ಒತ್ತಿದಂತಾಯ್ತು…. ಬೈ!” ಎಂದು ಫೋನ್‌ ಇರಿಸಿದರು.

ಮುಗ್ಧ ಶೃತಿಗೆ ಇವರ ಮನೆಯಲ್ಲಿ ನಡೆಯುತ್ತಿದ್ದ ರಾಮಾಯಣ ಹೇಗೆ ಅರ್ಥವಾಗಬೇಕು? ರೇವತಿಯ ಮನೆಯ ನಾಲ್ವರು ಸದಸ್ಯರೂ ಸದಾ ಪರಸ್ಪರರ ಮೇಲೆ ಸಿಡುಕುತ್ತಾ ಕೋಪ ತೋರಿಸುತ್ತಿದ್ದರು. ಅಣ್ಣತಂಗಿಯರಾದ ಶಶಾಂಕ್‌ ಸುಧಾ ಒಂದು ಪಕ್ಷವಾದರೆ, ರೇವತಿಯ ಪತಿ ಕೃಷ್ಣಮೂರ್ತಿ ಮತ್ತೊಂದು ಪಕ್ಷ. ಇವರಿಬ್ಬರ ಮಧ್ಯೆ ರೇವತಿ ಯಾರನ್ನೂ ಬಿಟ್ಟುಕೊಡಲಾಗದೆ, ವೇದನೆ ಪಡುತ್ತಿದ್ದರು. ಮಕ್ಕಳ ಪರ ವಹಿಸಿದರೆ ಗಂಡನಿಗೆ ಸಿಟ್ಟು, ಪತಿಯನ್ನು ವಹಿಸಿಕೊಂಡರೆ ಮಕ್ಕಳಿಗೆ ಅಧಿಕ ಕೋಪ. ಮಾಡುವುದಾದರೂ ಏನು?

ಹೀಗೆ ಒಮ್ಮೆ ಮಗನ ಲಹರಿ ನೋಡಿಕೊಂಡು ರೇವತಿ ಹೇಳಿದರು, “ನೋಡಪ್ಪ ಶಶಾಂಕ್‌, ನಿನಗಾಗಿ ಹಲಲಾರು ಕಡೆಯಿಂದ ಹುಡುಗಿಯರ ಪ್ರಸ್ತಾವನೆ ಬರುತ್ತಿದೆ. ನಿನಗೀಗ ಮದುವೆಗೆ ಸರಿಯಾದ ವಯಸ್ಸು. ನೀನು ಹ್ಞೂಂ ಅಂದ್ರೆ, ಹುಡುಗಿ ನೋಡಲು ಹೋಗೋಣ. ಬೇಕಾದರೆ ಮೊದಲು ಫೋಟೋ, ಬಯೋಡೇಟಾ ತರಿಸಿದರಾಯಿತು….” ಮಗ ಏನೂ ಆಕ್ಷೇಪಣೆ ಹೇಳದಿದ್ದಾಗ ಮಾತು ಮುಂದುವರಿಸಿದರು, “ಮದುವೆ ಅನ್ನೋದು ವಯಸ್ಸಿಗೆ ತಕ್ಕಂತೆ ಯಾವಾಗ ಆಗಬೇಕೋ ಆಗ ಆದರೇನೇ ಚಂದ, ನೀನೂ ಕೆಲಸಕ್ಕೆ ಸೇರಿ 4 ವರ್ಷ ಆಯ್ತಲ್ಲಪ್ಪ…..”

“ಅಯ್ಯೋ ಇವರಮ್ಮ…. ಈಗಲೇ ಏನು ಅವಸರ? ಮತ್ತೆ ನಮ್ಮ ಮನೆಗೆ ಹೊಂದುವಂಥ ಒಳ್ಳೆಯ ಹುಡುಗಿ ಸಿಗಬೇಕಲ್ಲ?” ಮಗರಾಯ ಗೊಣಗಿದ.

“ನೋಡೋ ಶಶಾಂಕೂ….ನೀನು ಮೊದಲು ಹೂಂ ಅವನ್ನು….. ಹುಡುಗಿ ನೋಡಲು ಶುರು ಮಾಡೋಣ. ನೋಡಿದ ಮಾತ್ರಕ್ಕೆ ಎಲ್ಲಾ ಫೈನಲ್ ಆಗಿಬಿಡುತ್ತದೆಯೇ? ನೀನು ಎಲ್ಲಾ ವಿಧದಲ್ಲೂ ಓ.ಕೆ. ಅನ್ನುವವರೆಗೂ ನಾವು ಹೆಣ್ಣಿನ ಕಡೆಯವರಿಗೆ ಗ್ರೀನ್‌ ಸಿಗ್ನಲ್ ಕೊಡಲ್ಲ.”

“ಅಂದ್ರೆ…. ನಾನು ಮೆಚ್ಚಿದ ಹುಡುಗಿಯನ್ನೇ ಸೊಸೆಯಾಗಿ ಆರಿಸುತ್ತೀರಿ ಅಂತಾಯ್ತು.”

“ಹೂಂ ಕಣಪ್ಪ…. ಎಲ್ಲಿಯವರೆಗೂ ನೀನು ಮೆಚ್ಚುವುದಿಲ್ಲವೋ ಮಾತು ಮುಂದುರಿಸೋ ಪ್ರಶ್ನೆಯೇ ಇಲ್ಲ.”

“ಹಾಗಿದ್ದರೆ…. ನಾನು ಹೇಳುವ ಹುಡುಗಿಯನ್ನೇ ಸೊಸೆಯಾಗಿ ಆರಿಸಮ್ಮ.”

“ನಿನ್ನ ಮೆಚ್ಚುಗೆಯ ಹುಡುಗಿ…. ಓ, ಆಗ್ಲೆ ನೀನೇ ಹುಡುಗಿ ನೋಡ್ಕೊಂಡು ಆಯ್ತೇನಪ್ಪ?”

“ಅಂದ್ರೆ….. ಒಬ್ಳಳು ಹುಡುಗಿ ಇದ್ದಾಳೆ. ನೀನು ಒಮ್ಮೆ ಅವಳನ್ನು ಮೀಟ್‌ ಮಾಡು. ಖಂಡಿತಾ ಬೇಡ ಅನ್ನೋಲ್ಲ.”

“ಯಾವಾಗ ಕರೆದುಕೊಂಡು ಬರ್ತೀಯಾ?” ರೇವತಿ ಬೇಕೆಂದೇ ಹುಸಿ ಮುನಿಸಿಕೊಂಡ ಹಾಗೆ ಮುಖ ಮಾಡುತ್ತಾ ಹೇಳಿದರು. ಹಿರಿಯರ ಅನುಮತಿಗೆ ಕಾಯದೆ ಮಗ ಆಗಲೇ ಯಾರನ್ನೋ ಆರಿಸಿಕೊಂಡಿರುವುದು ಅವರಿಗೆ ತುಸು ಕಸಿವಿಸಿ ಎನಿಸಿತು.

“ನೀನು ಯಾವಾಗ ಹೇಳಿದರೆ ಆಗ ಕರೆದುಕೊಂಡು ಬರ್ತೀನಿ…. ಶೃತಿ ಅಂತೂ ನಮ್ಮ ಮನೆಗೆ ಬರಬೇಕು ಅಂತ ತುದಿಗಾಲ ಮೇಲೆ ನಿಂತಿರ್ತಾಳೆ. ಆದರೆ…..”

“ಆದರೇನಪ್ಪ?”

“ಈ ವಿಷಯ ಮನೆಯಲ್ಲಿ ನಿನಗೆ, ಅಪ್ಪಾಜಿಗೆ ಹೇಗೆ ಹೇಳೋದು ಅಂತ ಗೊತ್ತಾಗದೆ ಕಾಯುತ್ತಿದ್ದೆ.”

ಸಧ್ಯ, ಮಗ ಮದುವೆಗಾದರೂ ಹಿರಿಯರ ಅನುಮತಿಗಾಗಿ ಕಾಯುತ್ತಿದ್ದಾನಲ್ಲ ಎಂದು ಆಕೆಗೆ ಸಮಾಧಾನವಾಯಿತು. ನಂತರ ಹೇಳಿದರು, “ಇರಲಿ, ತಮಾಷೆ ಸಾಕು. ಈಗ ಹೇಳಪ್ಪ, ನೀನು ಮದುವೆ ಆಗೋ ಹುಡುಗಿ ಹೇಗಿರಬೇಕು?”

“ನಾನೇನೂ ತಮಾಷೆ ಮಾಡುತ್ತಿಲ್ಲ ಅಮ್ಮ,” ತುಸು ಗಂಭೀರವಾಗಿ ಶಶಾಂಕ್‌ ಹೇಳಿದ.

“ಅಂದ್ರೆ ನೀನು ಆ ಹುಡುಗಿಯನ್ನೇ ಮದುವೆ ಆಗೋದು ಅಂತ ತೀರ್ಮಾನಿಸಿಬಿಟ್ಟಿದ್ದೀಯಾ?” ರೇವತಿಯ ಮಾತಲ್ಲಿ ತಮಗೆ ಆಯ್ಕೆ ಅವಕಾಶ ಇಲ್ಲವಲ್ಲ ಎಂಬ ನಿರಾಶಾಭಾವವಿತ್ತು. ಬಲು ಮುಗ್ಧನಾಗಿದ್ದ ಮಗ, ಎಲ್ಲ ಕೆಲಸಕ್ಕೂ ಕಾಲೇಜ್‌, ಕೋರ್ಸ್‌, ಗಾಡಿ ಇತ್ಯಾದಿಗಳಿಗೆ ಅಮ್ಮನ ಸಲಹೆ ಕೇಳುತ್ತಿದ್ದವನಿಗೆ ಈ ವಿಷಯದಲ್ಲಿ ಹಿರಿಯರ ನೆರವು ಬೇಡವಾಯಿತೇ? ಒಬ್ಬನೇ ನಿರ್ಧಾರ ಕೈಗೊಂಡನೇ?

“ಆದರೆ ಅಪ್ಪಾಜಿ ವಿಷಯ…..” ರೇವತಿ ತುಸು ಸೋತ ದನಿಯಲ್ಲಿ ನುಡಿದರು, “ಅವರು ಅಷ್ಟು ಸುಲಭವಾಗಿ ಒಪ್ಪುವುದಿಲ್ಲಪ್ಪ… ನಿನಗೆ ಅವರ ಸ್ವಭಾವ ಗೊತ್ತಿದೆ ತಾನೇ? ಮನೆತನ, ಕುಲ, ಗೋತ್ರ, ಜಾತಕ ಎಲ್ಲ ಹೊಂದಬೇಕು ಅಂತ ನೋಡುತ್ತಾರೆ.”

“ಅದೆಲ್ಲ ನಂಗೆ ಗೊತ್ತಿಲ್ಲಮ್ಮ….. ಅಪ್ಪಾಜೀನಾ ನೀನೇ ಒಪ್ಪಿಸಬೇಕಷ್ಟೆ.”

“ಅದು ಸರಿ…. ಅವರು ಯಾವ ಜನ?” ತುಸು ಸಂಧಾನ ಮಾಡಿಕೊಳ್ಳುವರಂತೆ ಹೇಳಿದರು.

“ನಮ್ಮವರು ಅಲ್ಲ ಅನ್ಸುತ್ತೆ…. ಆದರೆ ವೆಜಿಟೇರಿಯನ್ಸ್ ಅಂತೂ ಗ್ಯಾರಂಟಿ! ಅವಳ ಅಣ್ಣ, ತಂದೆ ಎಲ್ಲರೂ ಡಾಕ್ಟರ್ಸ್‌…… ನೀನು ಒಂದ್ಸಲ ಅವಳನ್ನು ಮೀಟ್‌ ಮಾಡಮ್ಮ…. ಖಂಡಿತಾ ಆ ಹುಡುಗಿ ಬೇಡ ಅಂತ ಹೇಳೋಲ್ಲ…. ನಾನು ಅವಳನ್ನು 3 ವರ್ಷದಿಂದ ಬಲ್ಲೆ…. ಆಳವಾದ ಪ್ರೀತಿ ನಮ್ಮದು…”

“ನಿನ್ನ ಅಪ್ಪಾಜಿ ಬಳಿ ವಿಷಯ ಚರ್ಚಿಸದೆ ನಾನು ನೇರವಾಗಿ ಆ ಹುಡುಗಿಯನ್ನು ಮೀಟ್‌ ಮಾಡೋದಿಲ್ಲ ಶಶಾಂಕ್‌….. ಬರೀ ನಾನು ಮಾತ್ರ ನೋಡಿಬಿಟ್ಟರೆ ಆಯ್ತೆ….? ಅಪ್ಪಾಜಿ ಬಡಪಟ್ಟಿಗೆ ಒಪ್ಪೋದಿಲ್ಲ ಅನ್ನುವುದು ನಿನಗೆ ಗೊತ್ತೇ ಇದೆ.”

“ಅವರನ್ನು ಒಪ್ಪಿಸುವುದು ನಿನ್ನ ಕೆಲಸ ಕಣಮ್ಮ…. ಪ್ಲೀಸ್‌, ನನಗಾಗಿ ಅಷ್ಟು ಹೆಲ್ಪ್ ಮಾಡೋಲ್ವಾ? ಎಷ್ಟಾದರೂ ನೀನು ನಮ್ಮ ಮುದ್ದಿನ ಅಮ್ಮ,” ಎನ್ನುತ್ತಾ ಬಂದು ಅವರ ಮಡಿಲಲ್ಲಿ ತಲೆ ಇರಿಸಿದ. ರೇವತಿ ಹೆಮ್ಮೆಯಿಂದ ಅವನ ತಲೆ ನೇರವೇರಿಸುತ್ತಿದ್ದರೆ ಮಗರಾಯ ಮೆಲ್ಲನೆ ಮತ್ತೊಂದು ಬಾಂಬ್‌ ಸಿಡಿಸಿದ, “ಅಮ್ಮಾ…. ಒಂದಂತೂ ನಿಜ, ನಾನು ಮದುವೆ ಅಂತ ಆದ್ರೆ…. ಅದು ಅವಳನ್ನು ಮಾತ್ರ!”

ಅವನ ಮಾತಿನಲ್ಲಿದ್ದ ದೃಢತೆ ಗಮನಿಸಿ ರೇವತಿಗೆ ಕಂಗಾಲಾಯಿತು. ಈ ವಿಷಯವಾಗಿ ತಂದೆ ಮಗ ಪರಸ್ಪರ ತಿರುಗಿಬಿದ್ದರೆ ಮಧ್ಯದಲ್ಲಿ ತಾವು ಯಾರನ್ನು ತಾನೇ ಬಿಟ್ಟುಕೊಡಲಾದೀತು?

`ಅಯ್ಯೋ ದೇವರೆ….. ಎಂಥ ಬಿರುಗಾಳಿ ಬೀಸಲಿದೆಯೋ?’ ಎಂದು ನಿಡುಸುಯ್ದರು.

ಅದಾಗಿ 2 ವಾರಗಳಲ್ಲಿ ಸಂಜೆ 4 ಗಂಟೆ ಹೊತ್ತಿಗೆ ರೇವತಿ ಮನೆಗೆಲಸ ಪೂರೈಸಿ, ಕಾಫಿ ಡಿಕಾಕ್ಷನ್‌ ಹಾಕಿಟ್ಟು, ಟಿ.ವಿ. ನೋಡುತ್ತಿದ್ದರು. ಆ ಸಮಯದಲ್ಲಿ ತಂದೆ ಮಗ ಇನ್ನೂ ಆಫೀಸ್‌ ಬಿಟ್ಟು ಹೊರಟಿರುವುದಿಲ್ಲ, ಮಗಳು ಕಾಲೇಜಿನಿಂದ ಬರಲು ಇನ್ನೂ ತಡವಾಗುತ್ತದೆ. ಎಂದು ಅವರ ದಾರಿ ಕಾಯುತ್ತಿದ್ದರು. ಅಷ್ಟರಲ್ಲಿ ಕಾಲಿಂಗ್‌ ಬೆಲ್ ‌ಸದ್ದಾಯಿತು. ರೇವತಿ ಹೋಗಿ ಬಾಗಿಲು ತೆರೆದರೆ ಎದುರಿಗೆ ಶಶಾಂಕ್‌ ನಿಂತಿದ್ದ.

“ಇದೇನೋ ಶಶಾಂಕೂ…. ಇಷ್ಟು ಬೇಗ ಬಂದುಬಿಟ್ಟೆ. ಹುಷಾರಾಗಿದ್ದಿ ತಾನೇ? ತಲೆನೋವಾ…..?” ಕಕ್ಕುಲತೆಯಿಂದ ವಿಚಾರಿಸುತ್ತಾ ಅವನು ಒಳಗೆ ಬರಲು ದಾರಿ ಬಿಟ್ಟರು.

“ಹೂಂನಮ್ಮ…… ಆಡಿಟಿಂಗ್‌ಗಾಗಿ ನಾನು ಇದೇ ಕಡೆ ಬೇರೆ ಆಫೀಸ್‌ಗೆ ಬಂದಿದ್ದೆ. ಬೇಗ ಕೆಲಸ ಮುಗೀತು ಅಂತ ಹೊರಟುಬಂದೆ. ಆ ಆಫೀಸ್‌ ಬಳಿಯೇ ಶೃತಿಯೂ ಕೆಲಸ ಮಾಡೋದು. ಅವಳನ್ನು ಮಾತನಾಡಿಸಿಕೊಂಡು ಹಾಗೇ ನಿನಗೆ ಪರಿಚಯ ಮಾಡಿಸೋಣಾಂತ ಕರೆದುಕೊಂಡು ಬಂದೆ,” ಎನ್ನುತ್ತಾ ತನ್ನ ಹಿಂದಿದ್ದ ಹುಡುಗಿಯನ್ನು ಮುಂದೆ ಕರೆದ.

ಶೃತಿಯನ್ನು ಕಂಡದ್ದೇ ರೇವತಿಯ ನೋಟ ಅವಳಲ್ಲೇ ನೆಟ್ಟಿತು. ಒಂದು ಸಲ ಅವಳನ್ನು ನೋಡಿದರೆ ಬೇಡ ಎಂದು ತಿರಸ್ಕರಿಸಲು ಮನಸ್ಸಾಗದು ಎಂದು ಶಶಾಂಕ್‌ ಹೇಳಿದ್ದು ಅಕ್ಷರಶಃ ನಿಜ ಎನಿಸಿತು. ತೆಳ್ಳಗಿನ ನಿಂಬೆ ಬಣ್ಣದ ಆಕರ್ಷಕ ವ್ಯಕ್ತಿತ್ವ, ತೀಕ್ಷ್ಣ ಹೊಳೆಯುವ ಕಂಗಳು, ರೇಷ್ಮೆಯಂಥ ನುಣುಪಾದ ಉದ್ದನೆಯ ತಲೆಗೂದಲು, ಮುಖದಲ್ಲಿ ಮಾಸದ ಮಂದಹಾಸ…. ಯಾವುದೋ ಕವಿಯ ಕಲ್ಪನೆ ಅಥವಾ ಶಿಲ್ಪಿಯ ಕಡೆದಿಟ್ಟ ಶಿಲ್ಪದಂತೆ ಅವಳ ಸೌಂದರ್ಯ ಕಣ್ಣು ಕೋರೈಸಿತು. ಇಂಥ ಸುಂದರ ಹುಡುಗಿಗೆ ಪ್ರಾಯದ ಮಗ ಮನಸೋತಿದ್ದರಲ್ಲಿ ಆಶ್ಚರ್ಯವಿಲ್ಲ ಅನಿಸಿತು.

`ಶೃತಿ ನಿಜಕ್ಕೂ ಸುಂದರ ಹುಡುಗಿ, ಇವರಿಬ್ಬರಲ್ಲಿ ಸ್ನೇಹ ಸಹಜವಾಗಿ ಬೆಳೆದಿದ್ದರಲ್ಲಿ ಆಶ್ಚರ್ಯವಿಲ್ಲ…. ಇವಳು ನಮ್ಮ ಪಂಗಡದ ಹುಡುಗಿ ಆಗಿದ್ದಿದ್ದರೆ…. ಹ್ಞೂಂ, ಚೆನ್ನಾಗಿರುತ್ತಿತ್ತು. ಆದರೆ ಏನು ಮಾಡುವುದು? ಮಗನ ಆಯ್ಕೆಯನ್ನು ಒಮ್ಮೆಲೇ ತಿರಸ್ಕರಿಸುವ ಹಾಗಿಲ್ಲ. ಇಷ್ಟು ವರ್ಷಗಳ ಒಡನಾಟದಲ್ಲಿ ಅವಳನ್ನೇ ಸಂಗಾತಿಯನ್ನಾಗಿ ಆರಿಸಿದ್ದಾನೆಂದರೆ ಖಂಡಿತಾ ಅವಳಲ್ಲಿ ಏನೋ ವೈಶಿಷ್ಟ್ಯಗಳು ಇರಲೇಬೇಕು…..’ ಎಂದುಕೊಳ್ಳುತ್ತಾ ರೇವತಿ ತಕ್ಷಣ ಯಜಮಾನರನ್ನು ನೆನೆದು, ಅವರನ್ನು ಒಪ್ಪಿಸುವುದು ಹೇಗೆ ಎಂದು ಕಸಿವಿಸಿಗೊಳಗಾದರು.

ಆದರೆ ಈಗ ಯೋಚಿಸುತ್ತಾ ಕೂರಲು ಸಮಯ ಇರಲಿಲ್ಲ. ಎದುರಿಗೆ ನಿಂತ ಬಂಗಾರದ ಪುತ್ಥಳಿಯಂಥ ಈ ಹುಡುಗಿ ಮುಂದೆ ಈ ಮನೆಯ ಸೊಸೆ ಆಗುಳಿದ್ದಳು. ತಮ್ಮ ಕುಟುಂಬದ ಒಬ್ಬ ಸದಸ್ಯಳಾಗಲಿರುವ ಈ ಹುಡುಗಿಯನ್ನು ಆದರದಿಂದ ಬರಮಾಡಿಕೊಳ್ಳಬೇಕು ಎನಿಸಿತು. ಅವಳೀಗ ಸದ್ಯಕ್ಕಂತೂ ಆ ಮನೆಗೆ ಅತಿಥಿಯಾಗಿ ಬಂದಿದ್ದಳು, ಅದೂ ಮಗ ಮೆಚ್ಚಿದ ಹುಡುಗಿ!

“ಬಾಮ್ಮ ಶೃತಿ…. ಒಳಗೆ ಬಾ…” ರೇವತಿ ಅವಳನ್ನು ಕೈ ಹಿಡಿದು ಕರೆದುಕೊಂಡು ಹೋಗಿ ಸೋಫಾದಲ್ಲಿ ಕೂರಿಸಿದರು.

ಅವಳಲ್ಲಿ ಅರ್ಧ ಗಂಟೆ ಕುಳಿತಿದ್ದಳು. ರೇವತಿ ಜೂಸ್‌ ತಂದುಕೊಟ್ಟು, ಕುರುಕಲು ಖಾರದ ಅವಲಕ್ಕಿ ನೀಡಿದರು. ಔಪಚಾರಿಕ ಮಾತುಕಥೆ ನಡೆಯಿತು. ಬಲು ನಯ, ನಾಜೂಕಿನಿಂದ, ಸುಸಂಸ್ಕೃತವಾಗಿ ನಡೆದುಕೊಂಡ ಶೃತಿ ರೇವತಿಯರ ಮನ ಗೆದ್ದಿದ್ದಳು.

ಮಗನ ಆಯ್ಕೆ ಬೇಡವೆನ್ನಲು ಅವರ ಬಳಿ ಕಾರಣವೇ ಇರಲಿಲ್ಲ. “ಬರ್ತೀನಿ ಆಂಟಿ, ನಾನಿನ್ನು ಹೊರಟೆ….. ನಿಮ್ಮನ್ನು ಭೇಟಿಯಾಗಿದ್ದು ಬಹಳ ಸಂತೋಷವಾಯಿತು. ಇನ್ನೊಮ್ಮೆ, ಯಾವಾಗಲಾದರೂ ಬರ್ತೀನಿ. ನೀವು ಸಹ ಸುಧಾ ಜೊತೆ ನಮ್ಮ ಮನೆಗೆ ಖಂಡಿತಾ ಬನ್ನಿ, ನಮಸ್ತೆ….” ಎನ್ನುತ್ತಾ ಅವರ ಕಾಲಿಗೆರಗಿ ಆಶೀರ್ವಾದ ಪಡೆದು ಹೊರಟುಬಿಟ್ಟಳು.

ರೇವತಿ ಈ ವಿಷಯವನ್ನು ಯಾವ ರೀತಿ ಕೃಷ್ಣಮೂರ್ತಿಗಳ ಬಳಿ ಹೇಳಿ ಅವರನ್ನು ಒಪ್ಪಿಸುವುದು ಎಂದು ಬಹಳ ಹೊತ್ತಿನಿಂದ ಆಲೋಚಿಸುತ್ತಿದ್ದರು. ಅಂತೂ ಒಂದು ಅವಕಾಶ ಸಿಕ್ಕಿತು. ಆಫೀಸ್‌ ಕೆಲಸವಾಗಿ ಶಶಾಂಕ್‌ 1 ವಾರದ ಮಟ್ಟಿಗೆ ಮುಂಬೈಗೆ ಹೊರಟಿದ್ದ. ಅದೇ ಸರಿಯಾದ ಸಮಯ ಎಂದು ಮಗನಿಲ್ಲದ ಹೊತ್ತಿನಲ್ಲಿ, ಪತಿಯ ಬಳಿ ಅವನ ಪ್ರೇಮ ಪ್ರಕರಣ, ಮದುವೆಯ ವಿಷಯ ತಿಳಿಸಿದರು. ಎದುರಿಗೆ ಮಗ ಇದ್ದಿದ್ದರೆ ಅವರ ಕೋಪ ಹೇಗೆ ತಿರುಗುತ್ತಿತ್ತೋ ಏನೋ…..

ಕೆಲವು ದಿನಗಳಾದ ಮೇಲೆ ಅವನು ಎದುರಿಗೆ ಬಂದರೆ ಕೋಪದ ತೀಕ್ಷ್ಣತೆ ಕಡಿಮೆ ಆಗಿರಬಹುದು ಎನಿಸಿತು. ಇದ್ದಬದ್ದ ಧೈರ್ಯ ಒಗ್ಗೂಡಿಸಿಕೊಂಡು ಎಲ್ಲವನ್ನೂ ವಿವರಿಸಿದರು. ಎಲ್ಲವನ್ನೂ ಕೇಳಿದ ನಂತರ ನಿರೀಕ್ಷಿಸಿದಂತೆ ಕೃಷ್ಣಮೂರ್ತಿಗಳ ಕೋಪ ಕೆರಳಿತು, “ಯಾರು ಶೃತಿ….? ಯಾವ ಶೃತಿ….? ನಿನ್ನ ಮಗ ಕುಣಿಯುತ್ತಿದ್ದಾನೆ ಅಂತ ನೀನೂ ಅವನ ಪರವಾಗಿ ಶಿಫಾರಸ್ಸು ಮಾಡುವುದೇ? ಅವನೇನೋ ಇನ್ನೂ ಮುಗ್ಧ ಅಂದ್ರೆ ತಾಯಿಯಾದ ನಿನಗೆ ಜವಾಬ್ದರಿ ಬೇಡವೇ? ಅವನ ಒಳ್ಳೆಯದ್ದು ಕೆಟ್ಟದ್ದು ಯೋಚಿಸುವುದು ಬೇಡವೇ?” ಅವರು ಕೇಳಿದರು.

“ಅದೆಲ್ಲ ಸರಿ, ಆದರೆ ವಯಸ್ಸಿಗೆ ಬಂದ ಮಗನನ್ನು ಎದುರುಹಾಕಿಕೊಳ್ಳಬಾರದು ಅನ್ನೋದು ಎಲ್ಲಕ್ಕಿಂತ ಹೆಚ್ಚಿನ ವಿವೇಕ ಅಲ್ಲವೇ? ಶೃತಿ ಅವನು ಮೆಚ್ಚಿಕೊಂಡಿರುವ ಹುಡುಗಿ…. ಆದರೆ ಅವಳನ್ನೇ ಮದುವೆ ಆಗ್ತೀನಿ ಅಂತಿದ್ದಾನೆ,” ಎಂದು ಅನುನಯವಾಗಿ ಹೇಳಿದರು.

“ಅವನೊಬ್ಬ ದೊಡ್ಡ ಮನುಷ್ಯ ಹೇಳಿಬಿಟ್ಟ…. ನೀನು ಒಪ್ಪಿಕೊಂಡುಬಿಟ್ಟೆಯಾ? ಅವಳು ಯಾರ ಪೈಕಿ? ಯಾವ ಕುಲ….. ಗೋತ್ರ…. ಜಾತಕ ತರಿಸಿ ನೋಡುವುದು ಏನೂ ಬೇಡವೇ? ಜಾತಕ ಹೊಂದಾಣಿಕೆ ಆಗದೆ ನಾನು ಈ ಮದುವೆಗೆ ಖಂಡಿತಾ ಒಪ್ಪುವುದಿಲ್ಲ,” ಮೂರ್ತಿಗಳು ಮುಖ್ಯವಾದ ವಿಷಯಕ್ಕೆ ಒತ್ತುಕೊಡುತ್ತಾ ಹೇಳಿದರು. ಈ ಒಂದು ಘಟ್ಟ ತಪ್ಪಿಹೋಗಲಿ ಎಂದು ರೇವತಿ ಬಹಳ ಬಯಸಿದ್ದರು. ಮೂರ್ತಿಗಳನ್ನು ಬಿಟ್ಟರೆ ಆ ಮನೆಯಲ್ಲಿ ಬೇರಾರಿಗೂ ಜಾತಕ, ವಾಸ್ತುಗಳ ವಿಷಯದಲ್ಲಿ ಅಂಥ ನಂಬಿಕೆ ಇರಲಿಲ್ಲ. ಆದರೆ ಮೂರ್ತಿಗಳ ತೃಪ್ತಿಗಾಗಿ ಜಾತಕ ತೋರಿಸೋಣ ಅಂದುಕೊಂಡರೆ, ಅಕಸ್ಮಾತ್‌ ಜೋಯಿಸರು ಜಾತಕ ಹೊಂದಾಣಿಕೆ ಆಗಲಿಲ್ಲ ಎಂದು ಹೇಳಿಬಿಟ್ಟರೆ ಇನ್ನು ಈ ಮದುವೆ ಆದಂತೆಯೇ!

ಹುಡುಗಿಯ ಮನೆತನ ಎಂಥದು, ಆರ್ಥಿಕ ಸ್ಥಿತಿ ಹೇಗಿದೆ, ಕುಲಗೌರವ, ವಿದ್ಯೆ, ಉದ್ಯೋಗ, ಆರೋಗ್ಯ, ನಡವಳಿಕೆ ಎಲ್ಲವೂ ಸರಿ ಎನಿಸಿದರೂ ಜಾತಕಾನುಕೂಲದ ಬಗ್ಗೆ ಅವರು ಬಿಟ್ಟುಕೊಡಲು ಖಂಡಿತಾ ಸಿದ್ಧರಿರಲಿಲ್ಲ. ಅದರಲ್ಲಿ ಅವರಿಗೆ ಅಷ್ಟು ವಿಶ್ವಾಸವಿತ್ತು. “ನಾವು ಆ ಹುಡುಗಿಯ ಮನೆಯವರನ್ನು ಇದುವರೆಗೂ ನೋಡಿಲ್ಲ, ಹಾಗಿರುವಾಗ ಅವರು ಎಂತಹವರೆಂದು ಈಗಲೇ ಹೇಗೆ ಹೇಳುವುದು? ನಮ್ಮ ಶಶಾಂಕ್‌ ಈ ಹುಡುಗಿಯನ್ನು 4 ವರ್ಷದಿಂದ ಚೆನ್ನಾಗಿ ಬಲ್ಲ. ಹಾಗಿರುವಾಗ ಆ ಹುಡುಗಿಯಲ್ಲಿ ಅಂಥ ಏನೋ ಒಂದು ವಿಶೇಷ ಗುಣ ಇರಲೇಬೇಕಲ್ಲವೇ? ಒಂದು ಸಲ ಈ ಹುಡುಗಿಯ ಮನೆಗೆ ಹೋಗಿ ನೋಡಿಕೊಂಡು ಬರೋಣ…”

“ನನಗೆ ಯಾರನ್ನು ನೋಡಿ ಏನೂ ಆಗಬೇಕಿಲ್ಲ…. ನಮ್ಮ ಜನ ಅಲ್ಲ, ನಮ್ಮವರಲ್ಲ ಅಂದ ಮೇಲೆ ಇದೆಲ್ಲ ಏಕೆ ಬೇಕು? ನಮ್ಮ ಪಂಗಡದಲ್ಲಿ ಹುಡುಗಿಯರೇ ಇಲ್ಲ ಅಂತ ಆಗಿಹೋಯಿತೇ?” ಅವರು ಸಿಟ್ಟಾಗಿ ಹೇಳಿದರು, “ಈಗ ಹುಡುಗುತನದ ಬಿಸಿ ರಕ್ತ….. ಕೆಲವು ವರ್ಷಗಳ ನಂತರ ತಾನು ಮಾಡಿದ್ದು ತಪ್ಪು ಅಂತ ಅವನು ಪಶ್ಚಾತ್ತಾಪ ಪಡುವಂತಾದರೆ ಕಾಲ ಮಿಂಚಿಹೋಗಿರುತ್ತದೆ.”

“ಆದರೆ ನಾವು ಹುಡುಗಿ ಹಾಗೂ ಅವಳ ಮನೆಯರನ್ನು ಹೋಗಿ ನೋಡದೆ, ಅವರು ಸರಿ ಇಲ್ಲ ಅಂತ ಹೇಳುವುದಾದರೂ ಹೇಗೆ? ಇಂದಿನ ಮಕ್ಕಳು ಇಂಥ ಉಪದೇಶದ ಮಾತು ಕೇಳುವವರಲ್ಲ….. ತಮ್ಮ ಮಾತು ಸರಿ ಅನ್ನಲು ಅವರ ಬಳಿ 100 ಕಾರಣವಿದೆ, ಆದರೆ ಈ ಮದುವೆ ಬೇಡ ಅನ್ನಲು ಜಾತಕ ಬಿಟ್ಟರೆ ನಮ್ಮ ಬಳಿ ಏನೂ ಇಲ್ಲ. ಆದ್ದರಿಂದ ಮೊದಲು ನಾವು ಒಮ್ಮೆ ಅವರ ಮನೆಗೆ ಹೋಗಿಬಂದ ಶಾಸ್ತ್ರ ಮಾಡಿಬಿಡೋಣ,” ಮೂರ್ತಿಗಳು ಒಮ್ಮೆ ಶೃತಿಯನ್ನು ಭೇಟಿಯಾದರೆ ಅವರ ಅಭಿಪ್ರಾಯ ಬದಲಾಗಬಹುದು ಎಂದು ರೇವತಿ ತರ್ಕಿಸಿದರು.

“ನಾನು ಯಾರನ್ನೂ ಭೇಟಿಯಾಗಿ ಏನೂ ಆಗಬೇಕಿಲ್ಲ!” ಅವರಿಗೆ ಸಿಟ್ಟು ಹೆಚ್ಚಾಗಿತ್ತು.

“ಏನೂಂದ್ರೆ…. ಯಾಕಿಷ್ಟು ಹಠ ಮಾಡ್ತಿದ್ದೀರಿ? ಕೈಗೆ ಬಂದ ಮಗ, ಒಳ್ಳೆಯ ಹುದ್ದೆಯಲ್ಲಿ ಚೆನ್ನಾಗಿ ಸಂಪಾದಿಸುತ್ತಿದ್ದಾನೆ. ನಾವು ಬೇಡ ಎಂದ ಮಾತ್ರಕ್ಕೆ ಈ ಮದುವೆ ಬೇಡ ಎಂದು ಅವನು ಸುಮ್ಮನಿದ್ದು ಬಿಡುತ್ತಾನೆಯೇ? ಅವನು ತಾನಾಗಿಯೇ ಮುಂದೆ ಹೋಗಿ ರೆಜಿಸ್ಟರ್ಡ್‌ ಮದುವೆ ಆದರೆ ಆಗ ಏನು ಮಾಡ್ತೀರಿ? ಈಗ ಹಿರಿಯರು ಅವನ್ನು ಮರ್ಯಾದೆಗಾಗಿ ನಮ್ಮ ಒಪ್ಪಿಗೆ ಕೇಳ್ತಿದ್ದಾನೆ, ನೀವು ನಿಮ್ಮ ದೊಡ್ಡಸ್ತಿಕೆ ಉಳಿಸಿಕೊಳ್ಳಲು ಒಪ್ಪಿಗೆ ಕೊಟ್ಟುಬಿಡಿ…..”

ರೇವತಿ ತಮ್ಮ ಕೊನೆಯ ಅಸ್ತ್ರ ಬಳಸಿದರು, “ಇಬ್ಬರೂ ವಯಸ್ಸಿಗೆ ಬಂದಿದ್ದಾರೆ…. ಜೊತೆಗೆ ಹುಡುಗಿ ಮನೆಯವರು ಮದುವೆಗೆ ರಾಜಿಯಾಗಿದ್ದಾರೆ. ಹೀಗಾಗಿ ನಾವು ಒಪ್ಪಲಿಬಿಡಲಿ, ಅವರು ಅದ್ಧೂರಿಯಾಗಿ ಮದುವೆ ಆಗಿಯೇ ಆಗುತ್ತಾರೆ. ಆಗ ನಾವು ಎಲ್ಲರ ದೃಷ್ಟಿಯಲ್ಲಿ ಅಗ್ಗವಾಗುತ್ತೇವೆ.”

ರೇವತಿಯರ ಮಾತುಗಳನ್ನು ಸುಲಭವಾಗಿ ತಳ್ಳಿಹಾಕುವಂತಿರಲಿಲ್ಲ. ಮೂರ್ತಿಗಳು ಸ್ವಲ್ಪ ಮೆತ್ತಗಾಗುತ್ತಾ, “ಸರಿ ಸರಿ…. ಬೇರೆ ವಿಷಯಗಳನ್ನು ನಾವು ಬಿಟ್ಟುಕೊಟ್ಟರೂ ಜಾತಕನ್ನವಂತೂ ಖಂಡಿತಾ ಬಿಡಲಾಗದು. ಇದನ್ನು ನಿನ್ನ ಮಗನಿಗೆ ಸರಿಯಾಗಿ ಮನದಟ್ಟು ಮಾಡಿಸುವ, ಜಾತಕ ಹೊಂದಿದರೆ ಮದುವೆ….. ಇಲ್ಲದಿದ್ದರೆ ಖಂಡಿತಾ ಇಲ್ಲ!”

“ಸರಿ, ಅವನಿಗೂ ಹೇಳ್ತೀನಿ….. ಈ ಕಾಲದ ಹುಡುಗರು ಇಂಥ ಮಾತುಗಳನ್ನು ಕಿವಿಗೆ ಹಾಕಿಕೊಳ್ಳುವುದಿಲ್ಲ …. ಒಟ್ಟಿನಲ್ಲಿ  ಇಬ್ಬರೂ ಹಠ ಬಿಡಬೇಡಿ, ಮಧ್ಯೆ ನಾನು ಹಣ್ಣಾಗಿ ಹೋಗ್ತೀನಿ”

“ಅದೆಲ್ಲ ನನಗೆ ಗೊತ್ತಿಲ್ಲ ರೇವತಿ, ಅವನು ಈ ಮಾತನ್ನು ಒಪ್ಪಲೇಬೇಕು. ಜಾತಕ ಹೊಂದದೆ ಅದೆಂಥ ಮದುವೆ? ಇದರಲ್ಲಿ ಹಲವು ವಿಷಯಗಳು ಅಡಗಿವೆ. ಅಕಸ್ಮಾತ್‌ ಹುಡುಗಿಗೆ ಅಂಗಾರಕ ದೋಷ ಇದ್ದರೆ? ಅಥವಾ…. ಅತ್ತೆಮನೆಗೆ ಆಗಿಬರದಂಥ ಆಶ್ಲೇಷ ನಕ್ಷತ್ರವಾದರೆ? ಹಿಂದೆ ಮುಂದೆ ನೋಡದೆ ಇಂಥದನ್ನೆಲ್ಲ ನಿರ್ಧರಿಸಲು ಹೋಗಬಾರದು,” ಮೂರ್ತಿಗಳ ಮನದಲ್ಲಿ ಜಾತಕದ ಕುರಿತು ವಿಶ್ವಾಸ ಅಚಲವಾಗಿತ್ತು. ಅಂತೂ ಶಶಾಂಕ್‌ ಮುಂಬೈ ಪ್ರವಾಸ ಮುಗಿಸಿ ಮೈಸೂರಿನ ಮನೆಗೆ ಮರಳಿದ. ಅವನನ್ನು ಕೂರಿಸಿಕೊಂಡು ರೇವತಿ ಪತಿ ಹೇಳಿದ ಮಾತುಗಳನ್ನು ತಿಳಿಸಿದರು. ತಂದೆಯ ತರಹವೇ ಅವನಿಗೂ ತಕ್ಷಣವೇ ಕೋಪ ನೆತ್ತಿಗೇರಿತು. ಎಷ್ಟೇ ಆಗಲಿ, ತಂದೆಗೆ ತಕ್ಕ ಮಗನಲ್ಲವೇ?

“ಜಾತಕಗೀತಕ ಇದೆಲ್ಲ ನಂಗೆ ಗೊತ್ತಿಲ್ಲಮ್ಮ…. ನನಗೆ ಅದರ ಗೊಡವೆ ಬೇಕಾಗಿಯೂ ಇಲ್ಲ. ಅಂದ್ರೆ ಇವರು ಹೇಳೋದು…. ಹುಡುಗಿಯ ಇತರ ಒಳ್ಳೆಯ ಗುಣಗಳಿಗೆ ಕಡೆ ಕಿಮ್ಮತ್ತೂ ಇಲ್ಲವೇ? ಯಾರೋ ಜೋಯಿಸರ ಬಳಿ ಹೋಗಿ ಯಾವುದೋ 2 ಕಾಗದಪತ್ರ ತೋರಿಸಿ, ಅದು ಹೊಂದುವುದಿಲ್ಲ ಅಂತ ಅವರು ಹೇಳಿದ ತಕ್ಷಣ, ಅದಕ್ಕೆ ಸಂಬಂಧಿಸಿದ ಜೀವಂತ ವ್ಯಕ್ತಿಗಳ ಯಾವ ಭಾವನೆಗಳಿಗೂ ಬೆಲೆ ಕೊಡದೆ ಅವರನ್ನು ಶಾಶ್ವತ ಅಗಲಿಸಿಬಿಡುವುದೇ?”

“ಅದು ಅಷ್ಟೇ ವಿಷಯ ಅಲ್ಲಪ್ಪ…. ಕೇವಲ ಜಾತಕ ಹೊಂದಾಣಿಕೆ ಆದಮಾತ್ರಕ್ಕೆ ಮದುವೆ ಆಗಿಹೋಯಿತು ಅಂತಲ್ಲ…. ಬೇರೆ ಇತರ ವಿಷಯಗಳ ಜೊತೆ ಜಾತಕವನ್ನೂ ಹೊಂದಿಸಿ ನೋಡಬೇಕಾಗುತ್ತದೆ,” ರೇವತಿ ಪತಿಯನ್ನು ಬಿಟ್ಟುಕೊಡಲಾಗದೆ ಹೇಳಿದರು.

“ನನಗೆ ಅದೆಲ್ಲ ಗೊತ್ತಿಲ್ಲ, ಬೇಕಾಗಿಯೂ ಇಲ್ಲಮ್ಮ! ಒಂದಂತೂ ಚೆನ್ನಾಗಿ ನೆನಪಿಟ್ಟುಕೊ, ನಾನು ಮದುವೆ ಅಂತ ಆಗುವುದಾದರೆ ಅದು ಶೃತಿ ಜೊತೆ ಮಾತ್ರ….. ಬೇರೆ ಇನ್ನಾರ ಜೊತೆಯೂ ಅಲ್ಲ.”

“ನೋಡಪ್ಪ, ಮಾತಿಗೆ ಮಾತು ಜೋಡಿಸಿ ಖಂಡಿಸುತ್ತಾ ಮುಖ ತಿರುಗಿಸಿಕೊಳ್ಳುವುದು ಯಾವುದೇ ಸಮಸ್ಯೆಗೆ ಉತ್ತರವಲ್ಲ. ನೀನು ಈ ರೀತಿ ನನ್ನ ಎಲ್ಲಾ ಮಾತುಗಳನ್ನೂ ತೆಗೆದುಹಾಕಿದರೆ ಹೇಗೆ? ಇದಕ್ಕೊಂದು ಪರಿಹಾರವಂತೂ ಬೇಕೇಬೇಕಲ್ಲ…. ನೀನು ಉತ್ತರ ಧ್ರುವ ಅವರು ದಕ್ಷಿಣ ಧ್ರುವ ಅಂತ ಕುಳಿತರೆ ಇದಕ್ಕೆ ಸುಖಾಂತ್ಯ ಹೇಗೆ ಸಾಧ್ಯ? ಬೇಕೋ ಬೇಡವೋ ನಾನು ಅವರ ಪಕ್ಷ ಬಿಟ್ಟುಕೊಟ್ಟು ನಿನಗೆ ಸಪೋರ್ಟ್‌ ಮಾಡಲಾರೆ.

“ತಾಯಿ ತಂದೆಯರ ಆಶೀರ್ವಾದ ಇಲ್ಲದೆ ನೀನು ಮದುವೆ ಆಗಿಯೇ ಆಗುತ್ತೀನಿ ಅಂತ ಹಠ ಹಿಡಿದರೆ ಏನೂ ಮಾಡಲಾಗದು. ಆದರೆ ಮನೆಯವರೆಲ್ಲರ ಸಂತಸದ ಭಾಗವಹಿಸುವಿಕೆ ಇಲ್ಲದಿದ್ದಾಗ ನಿನ್ನ ಮನಸ್ಸಿಗೆ ಮಾತ್ರ ನೆಮ್ಮದಿ ಎನಿಸುತ್ತದಾ? ಹುಡುಗಿ ಮನೆಯವರು ಮಾತ್ರ ಮದುವೆ ಛತ್ರದಲ್ಲಿದ್ದು, ಹುಡುಗನ ಮನೆಯವರು ಒಬ್ಬರೂ ಇಲ್ಲದಿದ್ದರೆ ಆಗ ಅದು ನಿಂಗೆ ಇಷ್ಟವಾಗುತ್ತಾ….?” ಮಾತು ಮುಗಿಸುವ ಹೊತ್ತಿಗೆ ಆಕೆಯ ಕಣ್ಣಂಚಿನಲ್ಲಿ ನೀರು ತುಂಬಿತ್ತು. ತಂದೆ ಮಗ ಇಬ್ಬರೂ ನೇರಕ್ಕೆ ನೇರ ಮಾತನಾಡುವುದಿಲ್ಲ, ಇವನ ಮಾತು ಅವರಿಗೆ ಬೇಡ, ಅವರ ಮಾತು ಇವನಿಗೆ ಬೇಡ. ಇಬ್ಬರೂ ಆಕೆಯ ಮೇಲೆ ರೇಗುವುದನ್ನು ಮಾತ್ರ ಬಿಡುತ್ತಿರಲಿಲ್ಲ. ಆದರ್ಶ ಪತ್ನಿ, ಆದರ್ಶ ತಾಯಿಯ ಎರಡೆರಡು ಪಾತ್ರ ನಿಭಾಯಿಸುವಷ್ಟರಲ್ಲಿ ಆಕೆಯ ಹೃದಯ ನೊಂದುಹೋಗುತ್ತಿತ್ತು. ಇಂಥ ಸಂದಿಗ್ಧ ಪರಿಸ್ಥಿತಿ ಎದುರಾದರೆ ಕಣ್ಣೀರು ಚೆಲ್ಲದಿರುತ್ತದೆಯೇ?

ಈ ಸಮಸ್ಯೆ ಎಲ್ಲಿ ತಮ್ಮ ಸುಖೀ ಸಂಸಾರವನ್ನು ಎರಡು ಭಾಗ ಮಾಡಿಬಿಡುತ್ತದೋ ಎಂದು ಅವರ ಜೀವ ಹೊಡೆದುಕೊಳ್ಳುತ್ತಿತ್ತು. ಹಲವು ವರ್ಷಗಳಿಂದ ಅವರ ಆದರ್ಶದ ಕೂಸಾಗಿದ್ದ ಈ ತುಂಬು ಕುಟುಂಬದಲ್ಲಿ ಇಂಥ ಬಿರುಕು ಬೇಕಿತ್ತೇ? ತನ್ನ ಕುಟುಂಬ ಸದಾ ಸುಖಮಯವಾಗಿರಲಿ, ಐಕ್ಯತೆಯಿಂದ ಕೂಡಿರಲಿ ಎಂದು ಬಯಸುವುದಕ್ಕಿಂತ ಒಬ್ಬ ಆದರ್ಶ ಗೃಹಿಣಿಗೆ ಬೇರೆ ಹೆಚ್ಚಿನದೇನಿದೆ?  ತಾಯಿಯ ಕಣ್ಣೀರು ಕಂಡು ಶಶಾಂಕ್‌ ಕರಗಿಹೋದ.

“ಅಮ್ಮಾ, ಇಷ್ಟಕ್ಕೆಲ್ಲ ನೀನು ಕಣ್ಣಲ್ಲಿ ನೀರು ಹಾಕಿಕೊಳ್ಳುವುದೇ? ನಾನು ತಾನೇ ಏನು ಮಾಡಲಿ? 28 ವರ್ಷ ತುಂಬಿದ್ದರೂ ನನ್ನ ಜೀವನದ ಇಷ್ಟು ದೊಡ್ಡ ವೈಯಕ್ತಿಕ ನಿರ್ಧಾರವನ್ನು ನಾನು ತೆಗೆದುಕೊಳ್ಳಬಾರದೇ? ಅಮ್ಮಾ, 4 ದಿನ ಫ್ಲರ್ಟ್‌ ಮಾಡಿ ಮರೆತುಬಿಡುವಂತಹ ನೀಚಬುದ್ಧಿ ನಮ್ಮಿಬ್ಬರದಲ್ಲ. ಶೃತಿ ಹಾಗೂ ನಾನು ಖಂಡಿತಾ ಒಬ್ಬರನ್ನು ಬಿಟ್ಟು ಒಬ್ಬರು ಇರಲಾಗದು. ಅವಳ ಜಾತಕ ಹೊಂದಿಕೊಳ್ಳುತ್ತಿಲ್ಲ ಎಂಬ ಒಂದೇ ಕ್ಷುಲ್ಲಕ ಕಾರಣ ತೋರಿಸಿ, ಆಗಲಿರುವ ಈ ಮದುವೆಗೆ ಕಲ್ಲು ಹಾಕಬೇಕೇ?” ಶಶಾಂಕ್‌ ತಾಯಿಯ ಬೆನ್ನು ಸವರುತ್ತಾ ಅವರಿಗೆ ಸಮಾಧಾನ ಹೇಳಿದ.

“ವಿಷಯ ಬರಿ ಅಷ್ಟೆ ಅಲ್ಲಪ್ಪ,” ತಮ್ಮನ್ನು ತಾವು ಸಂಭಾಳಿಸಿಕೊಳ್ಳುತ್ತಾ ರೇವತಿ ಹೇಳಿದರು, “ನೀನು ಸಹನೆಯಿಂದ ಇನ್ನಷ್ಟು ದಿನ ಕಾಯಬೇಕಿದೆ. ಅಪ್ಪಾಜಿಯನ್ನು ಆದಷ್ಟೂ ಒಪ್ಪಿಸುವ ಕೆಲಸ ಮಾಡೋಣ. ಏನಾದರೂ ದಾರಿ ಸಿಕ್ಕೇ ಸಿಗುತ್ತದೆ. ಆದರೆ ನೀನು ರೆಜಿಸ್ಟರ್ಡ್ ಮದುವೆ, ನಮ್ಮ ಮನೆಯವರಿಲ್ಲದೆ ಇದ್ದರೂ ಆ ಮದುವೆ ನಡೆಯುತ್ತದೆ ಎಂದು ಹೆದರಿಸಿದರೆ, ನಾನು ನಿಮ್ಮಿಬ್ಬರಿಗೂ ನೀಡಿದ ಸಂಸ್ಕಾರದ ಬಗ್ಗೆಯೇ ನನಗೆ ನಂಬಿಕೆ ಹೋಗಿಬಿಡುತ್ತದೆ. ತಾಯಿತಂದೆ ನಿನ್ನ ಮದುವೆಗೆ ಒಪ್ಪಿದರೆ ಸರಿ, ಇಲ್ಲದಿದ್ದರೆ ಅವರು ನಿನ್ನ ಪರಮ ಶತ್ರುಗಳು ಎಂದು ವಾದಿಸಿದರೆ ಹೇಗಪ್ಪ? ಹೆತ್ತ ಕರುಳಿನ ಸಂಕಟ ಅನುಭವಿಸಿದವರಿಗೇ ಗೊತ್ತು.”

“ಅಯ್ಯೋ…. ಅಮ್ಮ…. ನನ್ನ ಅರ್ಥ ಅದಲ್ಲಮ್ಮ. ಖಂಡಿತಾ ನನ್ನ ಕ್ಷಮಿಸಮ್ಮ, ಸಾರಿ,” ಎಂದು ತನ್ನ ಕಿವಿ ಹಿಡಿದುಕೊಂಡು ತಾಯಿಯ ಮನವೊಲಿಸಲು ಯತ್ನಿಸಿದ. ರೇವತಿ, ಶಶಾಂಕ್‌, ಸುಧಾ ಕುಳಿತು ಈ ಸಮಸ್ಯೆಗೆ ಬೇರೆ ಇನ್ನಾವ ರೀತಿಯಲ್ಲಿ ಪರಿಹಾರ ಹುಡುಕಬಹುದು ಎಂದು ಮತ್ತೆ ಮತ್ತೆ ಚರ್ಚಿಸಿದರು. ಮನೆಯ ಶೀತಲ ಸಮರ ಪರಾಕಾಷ್ಠೆ ತಲುಪಿತ್ತು. ತಂದೆ ಮಗ ಎದುರಿಗೆ ನೋಡಿದರೂ ಏನೂ ಮಾತನಾಡದ ಸ್ಥಿತಿ ತಲುಪಿದರು. ಇಬ್ಬರೂ ತಮ್ಮ ಪಟ್ಟನ್ನು ಬಿಟ್ಟುಕೊಡಲು ಖಂಡಿತಾ ತಯಾರಿರಲಿಲ್ಲ. ತಂದೆ ಮಗ ಇಬ್ಬರೂ ಮನೆಯಲ್ಲಿ ಇರುವ ಸಮಯದಲ್ಲಿ, ಮನೆ ಮಸಣ ಮೌನದ ನೆಲೆಯಾಗತೊಡಗಿತು.

ಹೀಗೆ ಯೋಚಿಸಿ ಯೋಚಿಸಿ ರೇವತಿ ಕೊನೆಗೊಂದು ನಿರ್ಧಾರಕ್ಕೆ ಬಂದರು. ಏನಾದರೂ ಮಾಡಿ ಮೂರ್ತಿಗಳ ಮುಂದೆ ಶೃತಿಯನ್ನು ತಂದು ನಿಲ್ಲಿಸಿದರೆ, ಈ ಸಮಸ್ಯೆಗೊಂದು ಪರಿಹಾರ ದೊರಕಬಹುದು ಎನಿಸಿತು. ಶೃತಿಯ ವ್ಯಕ್ತಿತ್ವವೇ ಹಾಗಿತ್ತು, ಅವಳ ಹೊರರೂಪ ಹಾಗೂ ಅಂತರಂಗದ ಸ್ವಭಾವ ಎದುರಿಗಿರುವವರನ್ನು ಖಂಡಿತಾ ಪ್ರಭಾವಿತಗೊಳಿಸದೆ ಇರುತ್ತಿರಲಿಲ್ಲ, ಆ ನಂಬಿಕೆ ರೇವತಿಯರಿಗಿತ್ತು. ಮೂರ್ತಿಗಳು ಸಹ ಇದರಿಂದ ಮನಸ್ಸು ಬದಲಿಸಬಹುದು ಎನಿಸಿತು. ಅದಾದ ನಂತರದ ವಿಚಾರಗಳನ್ನು ಆಮೇಲೆ ಯೋಚಿಸಿದರಾಯಿತು ಎಂದುಕೊಂಡರು.

ಆದರೆ ಶೃತಿಯನ್ನು ಈ ಮನೆಗೆ ಕರೆಸುವುದು ಹೇಗೆ? ಅದೇ ಹುಡುಗಿ ಎಂದು ಹೇಳಿದ ತಕ್ಷಣ ಮೂರ್ತಿಗಳು ಥಟ್ಟನೆ ಮುಖ ತಿರುಗಿಸಿಕೊಂಡರೆ ಕೆಲಸ ಕೆಡುತ್ತದೆ. ಈ ವಿಷಯವಾಗಿ ಬೇರೇನಾದರೂ ಉಪಾಯ ಮಾಡುವುದೇ ಸರಿ ಎನಿಸಿತು. ಆ ವಿಷಯವಾಗಿ ಮಗನ ಜೊತೆ ಚರ್ಚಿಸಿದ ರೇವತಿ, “ಶಶಾಂಕ್‌…. ಏನಾದರೂ ಮಾಡಿ ಶೃತಿಯನ್ನು 1 ವಾರದ ಮಟ್ಟಿಗೆ ನಮ್ಮ ಮನೆಯಲ್ಲಿರುವಂತೆ ಮಾಡಲು ಸಾಧ್ಯವೇ?” ಎಂದು ಕೇಳಿದರು.

“ಅದು ಹೇಗಾಗುತ್ತದಮ್ಮ…. ಮದುವೆಯಾಗದ ಹುಡುಗಿಯನ್ನು ಅಪರಿಚಿತರ ಮನೆಗೆ ಕಳುಹಿಸಲು ಅವಳ ತಾಯಿ ತಂದೆ ಹೇಗೆ ಒಪ್ಪುತ್ತಾರೆ? ಯಾವ ಕಾರಣ ಕೊಟ್ಟು ಅವಳನ್ನು ಇಲ್ಲಿ ಇರಿಸಿಕೊಳ್ಳೋಣ?”

“ನಿನ್ನ ಬಗ್ಗೆ ಅವಳ ತಾಯಿ ತಂದೆಗೆ ಎಲ್ಲಾ ಗೊತ್ತಿದೆ ತಾನೇ….? ಹಾಗಿರುವಾಗ ಶೃತಿ ಮತ್ತು ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಇಲ್ಲಿನ ವಾಸ್ತವ ಸಂಗತಿ ತಿಳಿಸು. ಶೃತಿ ನಿನ್ನನ್ನು ತುಂಬಾ ಪ್ರೀತಿಸುವುದರಿಂದ ಖಂಡಿತಾ ನಿನ್ನ ಮಾತನ್ನು ತಳ್ಳಿಹಾಕುವುದಿಲ್ಲ. ಅಪ್ಪಾಜಿಯ ಅನುಮತಿ ಪಡೆದೇ ಈ ಮದುವೆಗೆ ಸಿದ್ಧನಾಗುತ್ತೇನೆ ಎಂದು ಅವಳನ್ನು ಒಪ್ಪಿಸು.

ಅಪ್ಪಾಜಿಯವರನ್ನು ಒಪ್ಪಿಸುವುದೇ ಈಗ ನಮ್ಮ ಗುರಿ ಎಂದು ಹೇಳು. ಇದರಿಂದ ಈ ಸಂಬಂಧಕ್ಕೆ ಅವಳು ಎಷ್ಟು ಮಹತ್ವ ಕೊಡುತ್ತಾಳೆ ಎಂಬುದೂ ತಿಳಿಯುತ್ತದೆ,” ಎಂದರು.

“ಆಗಲಮ್ಮ, ನಾನು ಅವಳನ್ನು ಒಪ್ಪಿಸುತ್ತೇನೆ. ಈ ವಿಷಯವಾಗಿ ಅವಳು ಒಪ್ಪಿದಳು ಅಂತ್ಲೇ ಇಟ್ಕೋ, ಅಪ್ಪಾಜಿ ಮುಂದೆ ಅವಳನ್ನು ಹೇಗೆ ಪರಿಚಯಿಸ್ತೀಯಾ?”

“ಅದನ್ನೆಲ್ಲ ನೀನು ನನ್ನ ಮೇಲೆ ಬಿಟ್ಟುಬಿಡು. ಹಾಂ, ಇದರಲ್ಲಿ ಇನ್ನೂ ಒಂದು ಮುಖ್ಯ ವಿಷಯ ಅಂದ್ರೆ ಶೃತಿ ಇಲ್ಲಿ ಇರುವಾಗ ನೀನು ಆಫೀಸ್‌ ಕೆಲಸವಾಗಿ ಮುಂಬೈ, ದೆಹಲಿ ಅಂತ ಹೊರಟುಬಿಡು. ಆ ಸಂದರ್ಭ ನೋಡಿಕೊಂಡು ಅವಳನ್ನು ಇಲ್ಲಿಗೆ ಕರೆಸು. ಆಗ ವಯಸ್ಸಿಗೆ ಬಂದ ಹುಡುಗನ ಎದುರಿಗೆ ಮಗಳು ಓಡಾಡುತ್ತಿದ್ದಾಳೆ ಎನ್ನುವ ಕೊರಗು ಅವಳ ಮನೆಯವರಿಗೂ ಇರುವುದಿಲ್ಲ. ನಿಮ್ಮಿಬ್ಬರ ಮಾತನ್ನು ಅಕಸ್ಮಾತ್‌ಅಪ್ಪಾಜಿ ಕೇಳಿಸಿಕೊಂಡುಬಿಟ್ಟರೆ ನಮ್ಮ ಉಪಾಯ ಹಾಳಾದಂತೆಯೇ!”

ಸರಿ ಎಂದು ಒಪ್ಪಿದ ಶಶಾಂಕ್‌, ಶೃತಿ ಹಾಗೂ ಅವರ ಮನೆಯವರಿಗೆ ವಿಷಯ ತಿಳಿಸಿ ಅವರನ್ನು ಒಪ್ಪಿಸಿದ. ಅಯ್ಯೋ ಮಗಳು ಬೇರೆಯವರ ಮನೆಯಲ್ಲಿ ಇರಬೇಕಾಗುತ್ತದಲ್ಲ ಎಂದು ಶೃತಿಯ ತಾಯಿ ಶಾರದಾ ಹಿಂಜರಿದರು. ಆಗ ಶಶಾಂಕ್‌ ತಾನು ದೆಹಲಿಗೆ ಹೊರಟಿರುವ ವಿಚಾರ ತಿಳಿಸಿದ. ಜೊತೆಗೆ ಶೃತಿ, ರೇವತಿಯವರು ಇರುವಾಗ ಏನೂ ಯೋಚಿಸಬೇಕಿಲ್ಲ ಎಂದು ಆಶ್ವಾಸನೆ ನೀಡಿದಾಗ ಅವಳ ತಾಯಿ ತಂದೆ ಅಂತೂ ಒಪ್ಪಿದರು.

ಅಂದುಕೊಂಡಂತೆಯೇ ಶಶಾಂಕ್‌ ಹೊರಟ ಮೇಲೆ ಶೃತಿ ಇಲ್ಲಿಗೆ ಬರುವುದು ಎಂದು ಅದಕ್ಕೆ ಬೇಕಾದ ಸಿದ್ಧತೆ ನಡೆಸಿದಳು. ಅದೇ ಸಮಯದಲ್ಲಿ ರೇವತಿ ಮೂರ್ತಿಗಳಿಗೆ ಈ ವಿಚಾರವಾಗಿ ಪೀಠಿಕೆ ಹಾಕುತ್ತಿದ್ದರು.

“ಏನೂಂದ್ರೆ, ಸಾಗರದ ನನ್ನ ಕ್ಲಾಸ್‌ಮೇಟ್‌ ಮಂಗಳಾ ಗೊತ್ತಲ್ಲ ನಿಮಗೆ…..”

“ಹ್ಞೂಂ….ಹ್ಞೂಂ…. ನಮ್ಮ ಮದುವೆಯಲ್ಲಿ ಅವರದೇ ಭಾರೀ ಓಡಾಟ….. ಏನಾಯ್ತು ಅವರಿಗೆ?”

“ಅಯ್ಯೋ ರಾಮ, ಅವಳಿಗೇನೂ ಆಗಲಿಲ್ಲ ಸಧ್ಯ! ಮೊನ್ನೆ ಅವಳು ಫೋನ್‌ ಮಾಡಿದ್ದಳು. ನಿಮ್ಮನ್ನು ಕೇಳದೆ. ಅವಳಿಗೊಂದು ಮಾತು ಕೊಟ್ಟುಬಿಟ್ಟಿದ್ದೀನಿ. ಮತ್ತೆ ಕೋಪ ಮಾಡಿಕೋಬಾರದು ನೀವು…..”

“ವಿಷಯ ಹೇಳು ಮಾರಾಯ್ತಿ….”

“ಅವಳ ಮಗಳು ಸ್ಮಿತಾ ಬ್ಯಾಂಕಿಂಗ್‌ ಪರೀಕ್ಷೆ ಪಾಸ್‌ ಮಾಡಿ, ಬೆಂಗಳೂರಿನಲ್ಲಿ ಸೀನಿಯರ್‌ ಆಫೀಸರ್‌ ಟ್ರೇನಿಂಗ್‌ ಮುಗಿಸಿ, ಪೋಸ್ಟಿಂಗ್‌ಗಾಗಿ ಮೈಸೂರಿಗೆ ಬರ್ತಿದ್ದಾಳಂತೆ. ಅವಳಿಗಿಲ್ಲಿ ಹಾಸ್ಟೆಲ್‌ನಲ್ಲಿ ಜಾಗ ಸಿಗುವವರೆಗೂ 1 ವಾರದ ಮಟ್ಟಿಗೆ ನಮ್ಮ ಮನೆಯಲ್ಲಿ  ಉಳಿದುಕೊಳ್ತಾಳಂತೆ. ನಾನು ಸರಿ ಅಂದುಬಿಟ್ಟೆ. ಪರವಾಗಿಲ್ಲ ತಾನೇ? ಅದೂ ಅಲ್ಲದೆ ಶಶಾಂಕ್‌ ದೆಹಲಿಗೆ ಹೊರಡುತ್ತಾನೆ ಅಂತಾನೂ ಗೊತ್ತಿತ್ತಲ್ಲ, ವಯಸ್ಸಿಗೆ ಬಂದ ಹುಡುಗನ ಮುಂದೆ ಓಡಾಡುವ ಪ್ರಮೇಯ ತಪ್ಪಿತು ಅಂತ ಒಪ್ಪಿಕೊಂಡೆ. ಓ.ಕೆ.ನಾ…..?”

“ಸರಿ ಸರಿ…. ಯಾವಾಗ ಬರ್ತಾಳಂತೆ?”

“ಬಹುಶಃ ನಾಳೆ ಬರಬಹುದು ಅನ್ಸುತ್ತೆ,” ಅವರು ತಕರಾರಿಲ್ಲದೆ ಒಪ್ಪಿದಾಗ ತಮ್ಮ ಯೋಜನೆ ಅರ್ಧ ಭಾಗ ಯಶಸ್ವಿಯಾದಂತೆ ಎಂದುಕೊಂಡರು ರೇವತಿ. ಶಶಾಂಕ್‌ಗೆ ವಿಷಯ ತಿಳಿದಾಗ ಅವನಿಗೂ ಖುಷಿಯಾಯಿತು.

ಮಾರನೇ ದಿನ ಶೃತಿ ಯಾವಾಗ ಬಂದಿಳಿಯುವಳೋ ಎಂದು ಉತ್ಸಾಹದಿಂದ ಕಾಯತೊಡಗಿದರು. ಅವಳು ಆಫೀಸಿನಿಂದ ನೇರವಾಗಿ ಇವರ ಮನೆಗೆ  ಬಂದಿಳಿದಳು. ಕಾಲಿಂಗ್‌ ಬೆಲ್ ‌ಅದುಮಿದಾಗ ಬೇಕೆಂದೇ ರೇವತಿ ಬಂದು ಬಾಗಿಲು ತೆರೆಯಲು ತಡ ಮಾಡಿದರು. ಆಗ ಕೃಷ್ಣಮೂರ್ತಿ ತಾವೇ ಬಂದು ಬಾಗಿಲು ತೆರೆದರು.

ಎದುರಿಗೆ ಸೂಟ್‌ಕೇಸ್‌ ಹಿಡಿದು ನಿಂತಿದ್ದ ಮೋಹಕ ಸೌಂದರ್ಯದ ಯುವತಿಯನ್ನು ನೋಡಿ ಬೆರಗಾದರು. 2 ನಿಮಿಷ ಕಣ್ಣು ಮಿಟುಕಿಸದೆ ಅವಳನ್ನೇ ನೋಡುವಂತಾಯ್ತು. ಅವರ ಮುಖದಲ್ಲಿ ಆ ಮನೆಗೆ ಅಂಥ ಸುಂದರ ಹುಡುಗಿಯೇ ಸೊಸೆಯಾಗಿ ಬರಲಿ ಎಂಬ ಭಾವವಿತ್ತು.

“ಯಾರಮ್ಮ…. ಯಾರು ಬೇಕಿತ್ತು?”

“ಅಂಕಲ್…. ನಾನು ಸ್ಮಿತಾ,” ಎನ್ನುತ್ತಾ ಬಾಗಿ ಅವರ ಕಾಲಿಗೆರಗಿದಳು.

“ಬಾಮ್ಮ ಒಳಗೆ ಬಾ,” ಎನ್ನುತ್ತಾ ಅವಳು ಒಳಗೆ ಬರಲು ದಾರಿ ಮಾಡಿಕೊಟ್ಟರು.

ಒಳಗೆ ಬಂದ ಶೃತಿ ರೇವತಿಯರನ್ನು ಕಂಡು ಹಾರ್ದಿಕವಾಗಿ ಅವರನ್ನು ಅಪ್ಪಿಕೊಂಡಳು. ಆಕೆ ತುಂಬು ಪ್ರೀತಿಯಿಂದ ಅವಳನ್ನು ಸಂತೈಸಿದರು. ಓ, ಇವರ ಸ್ನೇಹದ ಸಲುಗೆ ಬಲು ಹಳೆಯದಿರಬೇಕು ಎಂದು ಮೂರ್ತಿ ತಮ್ಮ ಪೇಪರ್‌ ಹುಡುಕಿಕೊಂಡು ಹೊರಟರು.

ರೇವತಿ ಶೃತಿಯನ್ನು ಕರೆದೊಯ್ದು ಮಗಳು ಸುಧಾಳಿಗೆ ಪರಿಚಯಿಸಿದರು. ಶೃತಿಯೇ ಸ್ಮಿತಾ ಆಗಿ ಬಂದಿರುವ ವಿಚಾರ ಸುಧಾಳಿಗೂ ತಿಳಿದಿರಲಿಲ್ಲ. ಹೀಗಾಗಿ ಸಹಜವಾಗಿ ಹೊಸ ಗೆಳತಿ ದೊರಕಿದಳೆಂಬ ಖುಷಿಯಲ್ಲಿ ಅವಳು ತಲ್ಲೀನಳಾಗಿದ್ದಳು. ಅವಳ ಕೋಣೆಯಲ್ಲಿಯೇ ಅತಿಥಿಗಳಿಗಾಗಿ ಇರಿಸಿದ್ದ ಇನ್ನೊಂದು ಸಿಂಗಲ್ ಕಾಟ್‌ನ್ನು ಶೃತಿಗಾಗಿ ಹಾಕಿಕೊಡಲಾಯಿತು.

ಶೃತಿ ವಸುಧಾರಲ್ಲಿ ಸಹಜವಾಗಿ ಗೆಳೆತನ ಕುದುರಿತು. ವಸುಧಾಳ ಕೋಣೆಯಲ್ಲಿ ತನ್ನ ಸೂಟ್‌ಕೇಸ್‌ ಮತ್ತಿತರ ವಸ್ತುಗಳನ್ನು ಇರಿಸಿಕೊಂಡ ಶೃತಿ, ಮುಖ ತೊಳೆಯಲು ಅಟ್ಯಾಚ್ಡ್ ಬಾತ್‌ರೂಮಿಗೆ ಹೋದಳು. ರಾಯರಿಗೆ ಹಾಲ್‌‌ನಲ್ಲಿ ಕಾಫಿ ಕೊಟ್ಟ ರೇವತಿ ಹುಡುಗಿಯರಿಬ್ಬರಿಗೂ ಕೋಡುಬಳೆ, ಕಾಫಿ ಕೊಟ್ಟು ತಾವು ಅಲ್ಲೇ ಸವಿಯ ತೊಡಗಿದರು.

ನಂತರ ಎಲ್ಲರೂ ಸ್ವಲ್ಪ ಹೊತ್ತು ಟಿ.ವಿ. ನೋಡಿದ ಮೇಲೆ ರಾತ್ರಿ ಅಡುಗೆಗಾಗಿ ರೇವತಿ ಚಪಾತಿಗೆ ಹಿಟ್ಟು ಕಲಸಿಟ್ಟು, ಬೀಟ್‌ ರೂಟ್ ಪಲ್ಯಕ್ಕೆ ಸಿದ್ಧಪಡಿಸತೊಡಗಿದರು. ಶೃತಿ ತಾನಾಗಿ ಅವರನ್ನು ಮಾತನಾಡಿಸಿಕೊಂಡು ಬಂದು, ಬಲವಂತವಾಗಿ ಅವರ ಕೈಯಿಂದ ಬೀಟ್‌ ರೂಟ್‌ ಪಡೆದು, ಸಿಪ್ಪೆ ಹೆರೆದು, ತುರಿಯತೊಡಗಿದಳು. ಇವರು ಪಲ್ಯ ಮುಗಿಸಿದ ನಂತರ ಚಪಾತಿಗೆ ಹಿಟ್ಟು ಲಟ್ಟಿಸತೊಡಗಿದಳು. ಮಾತಿನ ಮಧ್ಯೆ ಅಡುಗೆ ಕೆಲಸ ಮುಗಿದಿದ್ದೇ ತಿಳಿಯಲಿಲ್ಲ. ಅವಳ ಸ್ನೇಹಪರ, ಸಹಕಾರ ಮನೋಭಾವ ರೇವತಿಗೆ ಬಹಳ ಇಷ್ಟವಾಯಿತು.

ರಾತ್ರಿ ಎಲ್ಲರೂ ಊಟಕ್ಕೆ ಕುಳಿತಾಗ, ರೇವತಿ ಅವಳೇ ತಯಾರಿಸಿದ ಸಲಾಡ್‌ ನೀಡಿ, ಚಪಾತಿ ಪಲ್ಯ ಬಡಿಸಿ, ಅವಳ ಸಹಾಯವನ್ನು ಬಾಯಿ ತುಂಬಾ ಹೊಗಳಿದರು.“ಆಂಟಿ, ನೀವು ಫ್ರೆಂಡ್‌ ಮಗಳು ಅಂತ ಅಭಿಮಾನದಿಂದ ಹೊಗಳುತ್ತಿದ್ದೀರಿ. ನಾನೇನೂ ಅಂಥ ದೊಡ್ಡ ಸಹಾಯ ಮಾಡಿಲ್ಲ,” ಎಂದು ವಿನಯವಾಗಿ ನುಡಿದಳು. ಶೃತಿಯ ಪ್ರತಿಯೊಂದು ಚಟುವಟಿಕೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಮೂರ್ತಿಯವರಿಗೂ ಹೆಮ್ಮೆ ಎನಿಸಿತು.

ರಾತ್ರಿ ಮಲಗುವಾಗ ಸಹ ದಂಪತಿಗಳು ಮನೆಗೆ ಬಂದಿದ್ದ ಅತಿಥಿಯ ಕುರಿತಾಗಿಯೇ ಮಾತನಾಡುತ್ತಿದ್ದರು.“ಈ ಹುಡುಗಿ ಸ್ಮಿತಾ ಬಹಳ ಒಳ್ಳೆಯವಳು ಅನ್ಸುತ್ತೆ. ನಿನ್ನ ಫ್ರೆಂಡ್‌ ಅವಳಿಗೆ ಉತ್ತಮ ಸುಸಂಸ್ಕಾರ ನೀಡಿದ್ದಾರೆ. ಒಳ್ಳೆ ತಿಳಿವಳಿಕೆ, ನಯ ನಾಜೂಕು, ವಿದ್ಯಾವಂತೆ, ಸೌಂದರ್ಯ ಕೇಳುವುದೇ ಬೇಡ…..” ಮೂರ್ತಿಗಳ ಹೊಗಳಿಕೆ ನಿಲ್ಲುವಂತೆಯೇ ಇರಲಿಲ್ಲ. ರೇವತಿಗೆ ತಾವು ಗೆದ್ದೆ ಎನಿಸಿತು.

ಬೆಳಗ್ಗೆ ಬೇಗ ಏಳುವ ಅಭ್ಯಾಸವಿದ್ದ ಶೃತಿ, ಅಂಗಳದಿಂದ ಹೂ ಬಿಡಿಸಿ ತಂದು, ನೀಟಾಗಿ ಮಾಲೆ ಕಟ್ಟಿ ರಾಯರ ಪೂಜೆಗೆ ಅಣಿ ಮಾಡಿದಳು. ಸುಧಾ ಮನೆ ಮುಂದೆ ನೀರು ಹಾಕುತ್ತಿದ್ದಾಗ, ತಾನೇ ಧಾವಿಸಿ ಲಕ್ಷಣವಾಗಿ ರಂಗೋಲಿ ಬಿಡಿಸಿದಳು. ರೇವತಿಯವರಿಗೆ ಬೆಳಗಿನ ತಿಂಡಿ ಅಡುಗೆಗೆ ಸಹಕರಿಸಿ, ಸ್ನಾನಕ್ಕೆ ಹೊರಟಳು. ಹುಡುಗಿಯರಿಬ್ಬರೂ ಟಿಫನ್‌ ಮುಗಿಸಿ, ಲಂಚ್ ಬಾಕ್ಸ್ ಹಿಡಿದು ಹೊರಟಾಗ, ಶೃತಿ ಆ ಮನೆಯ ಹಳೆಯ ಸದಸ್ಯೆ ಎನಿಸಿ ಈ ಹಿರಿಯ ದಂಪತಿಗಳು ಅವರಿಬ್ಬರಿಗೂ ಕೈ ಬೀಸಿದರು.

ಸಂಜೆ ಮನೆಗೆ ಬಂದ ಮೇಲೆ ಮೂರ್ತಿಗಳ ಜೊತೆ ಪ್ರಸಕ್ತ ರಾಜಕೀಯ, ಕ್ರೀಡೆ, ಪ್ರಚಲಿತ ವಿದ್ಯಮಾನಗಳ ಬಗ್ಗೆ  ಚರ್ಚಿಸುವಳು. ಸುಧಾ ಜೊತೆ ಕೇರಂ ಚೆಸ್‌ ಆಡಿದ್ದಲ್ಲದೆ, ಅವಳಿಗೆ ಕಾಲೇಜಿನ ಪ್ರಾಜೆಕ್ಟ್ ರಿಪೋರ್ಟ್‌ಗೂ ತುಂಬಾ ಸಹಕರಿಸಿದಳು.

ರೇವತಿಯರಿಗಂತೂ ಅಡುಗೆಮನೆಯಲ್ಲಿ ಬಲಗೈ ಬಂಟಳಾಗಿದ್ದಳು. ಮೂರ್ತಿಗಳು ತಾವೇ ಮಗಳಿಗೆ ಆ ಹುಡುಗಿಯಿಂದ ತುಂಬಾ ಕಲಿಯುವುದಿದೆ ಎನ್ನುತ್ತಿದ್ದರು. ಒಟ್ಟಾರೆ ಒಬ್ಬ ಆದರ್ಶ ಸೊಸೆಗಿರಬೇಕಾದ ಎಲ್ಲಾ ಗುಣಗಳೂ ಅವಳಲ್ಲಿ ಅಡಗಿದ್ದರಿಂದ, ರೇವತಿ ಅವಳೇ ಸೊಸೆಯಾಗಬೇಕು, ಬೇರೆ ಯಾರೂ ಬೇಡ ಎಂದು ನಿರ್ಧರಿಸಿದರು.

ಶಶಾಂಕ್‌ ಶೃತಿ ಅಥವಾ ರೇವತಿಯವರಿಗೆ ಫೋನ್‌ ಮಾಡಿ ಮನೆಯಲ್ಲಿ ನಡೆಯುತ್ತಿದ್ದ ದೈನಂದಿನ ಸಮಾಚಾರದ ಬಗ್ಗೆ ಕೇಳಿ ತಿಳಿಯುತ್ತಿದ್ದ. ಅಪ್ಪಾಜಿ ಅವಳ ವಿಚಾರವಾಗಿ ಹೆಚ್ಚು ಪ್ರಭಾವಿತರಾಗಿದ್ದಾರೆ ಎಂದು ತಿಳಿದು ಎಷ್ಟೋ ಸಂತೃಪ್ತಿಗೊಂಡ.

ಶೃತಿ ಬಂದು ವಾರ ಕಳೆದದ್ದು ಯಾರ ಗಮನಕ್ಕೂ ಬರಲಿಲ್ಲ. ಅವಳು ಹಾಸ್ಟೆಲ್‌ನಲ್ಲಿ ಪ್ರವೇಶ ದೊರಕಿತೆಂದು ಹೊರಡುತ್ತೇನೆಂದಾಗ ನಿಜಕ್ಕೂ ಇವರಿಗೆಲ್ಲ ನಿರಾಸೆಯಾಯಿತು. ಆಗಾಗ ಬರುತ್ತಿರಮ್ಮ ಎಂದು ಹಿರಿಯರಿಬ್ಬರೂ ಹೃದಯತುಂಬಿ ಹಾರೈಸಿದರು. ಸುಧಾಳಿಗಂತೂ ಅವಳನ್ನು ಬೀಳ್ಕೊಡುವಾಗ ಸ್ವಂತ ಅಕ್ಕನನ್ನು ಅಗಲುತ್ತಿರುವಂತೆ ಬಿಕ್ಕಳಿಸಿದಳು.

“ಹೆಣ್ಣುಮಕ್ಕಳೆಂದರೆ ಹೀಗಿರಬೇಕಪ್ಪ…..” ಶೃತಿ ಹೊರಟ ನಂತರ ಮೂರ್ತಿ ಹೇಳಿದರು, “ಸುಸಂಸ್ಕೃತ ಮನೆತನದ ಹೆಣ್ಣುಮಕ್ಕಳೆಂದರೆ ಹೀಗಿರುತ್ತಾರೆ. ನೋಡು…. ನಮ್ಮ ಶಶಾಂಕನಿಗಾಗಿ ಇಂಥ ಹುಡುಗಿಯೇ ಬೇಕು ನೋಡು….” ಶೃತಿಯನ್ನು ನೆನೆಯುತ್ತಾ ಸಂಭ್ರಮದಿಂದ ಮೂರ್ತಿ ಹೇಳಿದರು.

“ಇಂಥ ಹುಡುಗಿಯೇ ಏಕೆ…. ಇವಳೇ ಏಕೆ ಆಗಬಾರದು?” ರೇವತಿ ಮೆಲ್ಲನೆ ಕೇಳಿದರು.

“ಅಂದ್ರೆ….. ಈ ಮದುವೆ ಆಗಬಹುದು ಅಂತೀಯಾ? ಸ್ಮಿತಾಳ ಸಂಬಂಧವನ್ನು ನಮ್ಮ ಶಶಾಂಕ್‌ ಒಪ್ರುತ್ತಾನೆ ಅಂತೀಯಾ?”

“ಯಾಕೆ ಬೇಡ ಅಂತಾನೆ? ಹೇಗಾದರೂ ಮಾಡಿ ನಮ್ಮ ಶಶಾಂಕ್‌ ಸ್ಮಿತಾಳನ್ನು ಭೇಟಿಯಾಗುವ ಹಾಗೆ ಮಾಡಿಸಬೇಕು. ಸ್ಮಿತಾ ಎಂಥ ಒಳ್ಳೆಯ ಹುಡುಗಿ ಅನ್ನುವುದು ನಿಮಗೇ ಗೊತ್ತು….. ಹೀಗಿರುವಾಗ ಶಶಾಂಕ್‌ ಇವಳನ್ನು ನೋಡಿ ತನ್ನ ಹಠ ಮರೆತರೂ ಮರೆತಾನು….”

“ನಮ್ಮ ಪಂಗಡದ ಹುಡುಗಿ ಅಲ್ಲದೆ ಇರಬಹುದು, ಆದರೆ ಅದಕ್ಕಾಗಿ….” ಮೂರ್ತಿ ನಿಧಾನವಾಗಿ ಮುಂದುವರಿಸಿದರು, “ಬೇಡ ಅನ್ನಲಿಕ್ಕಾಗದು. ನೀನು ಒಂದು ಕೆಲಸ ಮಾಡು, ನಿನ್ನ ಗೆಳತಿಗೆ ಹೇಳಿ ತಕ್ಷಣ ಅವರ ಮಗಳ ಜಾತಕ ಕಳುಹಿಸುವುದಕ್ಕೆ ಹೇಳು. ಅದು ಹೊಂದಿಕೊಂಡರೆ ಆಮೇಲೆ ಸ್ಮಿತಾ ಶಶಾಂಕರ ಭೇಟಿಗೆ ಏರ್ಪಡಿಸೋಣ.”

“ಮತ್ತೆ….. ಅಕಸ್ಮಾತ್‌ ಜಾತಕ ಹೊಂದದಿದ್ದರೆ? ಇಷ್ಟು ಒಳ್ಳೆಯ ಹುಡುಗಿಯನ್ನು ಈ ಒಂದು ಸಣ್ಣ ಕಾರಣಕ್ಕಾಗಿ ಬಿಟ್ಟುಬಿಡುವುದೇ?” ರೇವತಿ ಮೂರ್ತಿಯವರನ್ನೇ ದಿಟ್ಟಿಸುತ್ತಾ ಹೇಳಿದರು, “ನಮ್ಮ ಸಂಬಂಧದಲ್ಲೇ ಇತ್ತೀಚೆಗೆ ಮದುವೆಯಾದ ಹೆಣ್ಣುಮಕ್ಕಳ ಕಥೆ ಕೇಳಿ, ಎಲ್ಲಾ ಕಡೆಯೂ ಇಂಥದ್ದನ್ನೇ ನೋಡುತ್ತಿದ್ದೇವೆ. ಯಾವ ಸೊಸೆಯೂ ನಮ್ಮ ಸ್ಮಿತಾಳಷ್ಟು ಒಳ್ಳೆಯ ಹುಡುಗಿ ಅಲ್ಲ ಬಿಡಿ.

“ಸ್ಮಿತಾಳಿಗಿರುವ ಸೌಂದರ್ಯ, ಬುದ್ಧಿವಂತಿಕೆ, ಒಳ್ಳೆಯ ಕೆಲಸ, ಹೊಂದಿಕೊಳ್ಳುವ ಸ್ವಭಾವ, ಮುಖ್ಯ ಸಂಸ್ಕಾರ…. ಇದೆಲ್ಲ ಅವರುಗಳಿಗೆ ಎಲ್ಲಿಂದ ಬರಬೇಕು? ಇನ್ನೊಂದು ಮುಖ್ಯ ವಿಷಯ ಅಂದ್ರೆ ಇವರೆಲ್ಲರ ಮದುವೆಗಳು ಜಾತಕಾನುಕೂಲದ ನಂತರವೇ ನಡೆದದ್ದು. ಇವರಲ್ಲಿ ಎಷ್ಟೋ ಹುಡುಗಿಯರು ಗಂಡನನ್ನು ಕಿರುಬೆರಳಲ್ಲಿ ಕುಣಿಸಿ ಅತ್ತೆಮನೆಯಲ್ಲಿ 3 ತಿಂಗಳೂ ಸಂಸಾರ ಮಾಡದೆ, ಬೇರೆ ಮನೆ ಹೂಡಿಸಿದ್ದಾರೆ. ಕೆಲಸಕ್ಕೆ ಹೋಗುವ ಕೆಲವು ಹುಡುಗಿಯರಂತೂ ಅಹಂಕಾರದಿಂದ ಅತ್ತೆಮಾವಂದಿರನ್ನು ಕಾಲ ಕಸಕ್ಕಿಂತ ಕಡಿಮೆ ಮಾಡಿದ್ದಾರೆ.

“ಸ್ಮಿತಾ ಅಂಥ ದೊಡ್ಡ ಹುದ್ದೆಯ ಕೆಲಸದಲ್ಲಿದ್ದರೂ ಎಷ್ಟು ಸರಳತೆಯಿಂದ ಎಲ್ಲರೊಂದಿಗೆ ಹೊಂದಿಕೊಂಡು ಮನೆಮಗಳೇ ಆಗಿಹೋಗಿದ್ದಳು, ನಾಳೆ ನಮ್ಮ ಸುಧಾ ಇದೇ ತರಹ ಒಳ್ಳೆಯ ಹೆಸರು ತೆಗೆದುಕೊಳ್ಳುತ್ತಾಳೋ ಇಲ್ಲವೋ ಅನಿಸಿದೆ. ಈಗ ನೀವೇ ಹೇಳಿ, ತಿಳಿದೂ ತಿಳಿದೂ ಇಂಥ ಒಳ್ಳೆ ಹುಡುಗೀನಾ ಬಿಟ್ಟೋರುಂಟೆ? ಮನೆಯಲ್ಲಿ ಇಂಥ ಚಿನ್ನದಂಥ ಬೆಣ್ಣೆ ಇರುವಾಗ ತುಪ್ಪಕ್ಕಾಗಿ ಊರೆಲ್ಲ ಅಲೆಯಬೇಕೇ?”

“ನೀನು ಹೇಳುತ್ತಿರುವುದು ಸರಿಯಾಗಿಯೇ ಇದೆ,” ಮೂರ್ತಿ ನಸುನಗುತ್ತಾ ಹೇಳಿದರು, “ಸ್ಮಿತಾ ನಿಜಕ್ಕೂ ಅಪರಂಜಿಯಂಥ ಅಪರೂಪದ ಹುಡುಗಿ… ಕಂಡೂ ಕಂಡೂ ಇಂಥ ಒಳ್ಳೆಯ ಹುಡುಗಿಯನ್ನು ಕಳೆದುಕೊಳ್ಳುವುದೇ…. ಆದರೆ ಏನು ಮಾಡುವುದು? ಜಾತಕ ನೋಡಬೇಡವೋ?”

“ಅದನ್ನೇ ನಾನೂ ಹೇಳುತ್ತಿರುವುದು. ನೀವು ಇನ್ನೂ ಒಂದು ವಿಚಾರ ಗಮನಿಸಬೇಕು. ಎಲ್ಲ ಕೇಸುಗಳ ತರಹ ಇಲ್ಲಿ ಹೊಸದಾಗಿ ನಾವು ಹುಡುಗಿ ನೋಡುತ್ತಿಲ್ಲ. ನಮ್ಮ ಮಗರಾಯ ಬೇರೆ ಕಂಡುಕಾಣದ ಅದೇ ಹುಡುಗಿಯನ್ನೇ ಮದುವೆ ಆಗ್ತೀನಿ ಅಂತ ಒಂದೇ ಕಾಲಲ್ಲಿ ನಿಂತುಬಿಟ್ಟಿದ್ದಾನೆ….. ಹುಡುಕುತ್ತಿರುವ ಬಳ್ಳಿ ಕಾಲಿಗೆ ತೊಡರಿದಂತೆ ನಮಗೆ ಈ ಸ್ಮಿತಾ ಸಿಕ್ಕಿರುವಾಗ ಮಗನ ಆಯ್ಕೆಯಾದ ಆ ಶೃತಿಗೆ ಯಾಕೆ ಅವಕಾಶ ಬಿಟ್ಟುಕೊಡಬೇಕು? ಆ ಹುಡುಗಿಯನ್ನಂತೂ ನಾವು ಇದುವರೆಗೂ ನೋಡಿಲ್ಲ, ಅವಳು ನಮ್ಮ ಸ್ಮಿತಾ ಸಮಾನ ಬರಬಹುದು ಎನ್ನುವ ಯಾವ ಗ್ಯಾರಂಟಿಯೂ ಇಲ್ಲ,” ರೇವತಿ ತಮ್ಮ ಕೊನೆಯ ಬಾಣ ಬಿಟ್ಟರು.

ಈ ಮಾತಿಗೆ ಮೂರ್ತಿ ದೀರ್ಘಾಲೋಚನೆಗೆ ಬಿದ್ದರು. ಪತಿ ಈ ವಿಚಾರವಾಗಿ ತಮ್ಮ ಪರವಾಗಿಯೇ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ದೃಢ ಆತ್ಮವಿಶ್ವಾಸದಿಂದ ರೇವತಿ ನೆಮ್ಮದಿಯಾಗಿ ನಿದ್ದೆಹೋದರು.

ಅಂದುಕೊಂಡಂತೆಯೇ ಅದರ ಮಾರನೇ ದಿನ ಶಶಾಂಕ್‌ ದೆಹಲಿಯಿಂದ ಬಂದಿಳಿದ. ಸಂಜೆ ಕಾಫಿ ತಿಂಡಿ ಆದ ನಂತರ ರೇವತಿ ಮಾತು ತೆಗೆದರು, “ನೋಡಪ್ಪ ಶಶಾಂಕೂ…. ನಾವು ನಿನಗೊಂದು ಹುಡುಗಿ ಆರಿಸಿದ್ದೇವೆ. ನೀನು ಅವಳನ್ನೇ ಮದುವೆ ಆಗಬೇಕು.”

“ಅಮ್ಮಾ…. ನಾನು ಅವತ್ತೇ ಹೇಳಿದೆನಲ್ಲ ಶೃತಿ ಅಂತ….” ಮಗರಾಯ ಒಳಗೊಳಗೆ ನಗುತ್ತಾ ರಾಗ ಎಳೆದ.

“ನೋಡಯ್ಯ, ಅದೆಲ್ಲ ಬಿಟ್ಟುಬಿಡು. ನಿಮ್ಮಮ್ಮ ನಿನಗಾಗಿ ಬಂಗಾರದಂಥ ಹುಡುಗಿಯೊಬ್ಬಳನ್ನು ನೋಡಿದ್ದಾಳೆ. ಸುಮ್ಮನೆ ಆ ಹುಡುಗಿಯನ್ನು ಮದುವೆಯಾಗು,” ಎಂದರು ಮೂರ್ತಿ.

“ಆದರೆ….. ಎಲ್ಲಕ್ಕೂ ಮೊದಲು ಜಾತಕ ಹೊಂದಾಣಿಕೆ ಆಗಬೇಕು. ಆಮೇಲೆ ಮಿಕ್ಕಿದ್ದು ಅಂತಿದ್ರಿ,” ಎಂದ ಶಶಾಂಕ್.

“ನೋಡಪ್ಪ, ಆ ಹುಡುಗಿ ನಿಮ್ಮಮ್ಮನ ಫ್ರೆಂಡ್‌ ಮಗಳಂತೆ. ನಾವೆಲ್ಲ ಆ ಹುಡುಗಿಯನ್ನು ನೋಡಿದ್ದಾಯ್ತು, ನೀನೂ ಒಮ್ಮೆ ಆ ಹುಡುಗೀನಾ ನೋಡಿಬಿಡು. ನಂತರ ಉಳಿದ ವಿಚಾರ. ಇನ್ನೊಂದು ಮುಖ್ಯ ವಿಷಯ ಅಂದ್ರೆ, ಹುಡುಗಿ ಬಹಳ ಲಕ್ಷಣವಾಗಿದ್ದಾಳೆ. ಮತ್ತೆ ಮತ್ತೆ ಇಂಥ ಹುಡುಗಿ ಸಿಗಲ್ಲ. ಬೇಡ ಅನ್ನದೆ ಮದುವೆಗೆ ಒಪ್ಪಿಕೋ, ಜಾತಕದ ಗೊಡವೆ ಈಗ ಬೇಡ!” ಎಂದು ನಗುತ್ತಾ ಹೇಳಿದರು.

“ಆದರೆ ಅಪ್ಪಾಜಿ, ನಾನು ನನ್ನ ಇಷ್ಟದ ಹುಡುಗಿಯನ್ನೇ ಮದುವೆ ಆಗ್ತೀನಿ! ಜಾತಕದ ಗೊಡವೆಯೇ ಇಲ್ಲ ಅಂದ ಮೇಲೆ ಯಾವುದೋ ಹುಡುಗಿಯನ್ನು ಮದುವೆ ಆಗುವುದೇಕೆ….. ನನ್ನಿಷ್ಟದ ಹುಡುಗಿಯನ್ನೇ ಆಗಬಹುದಲ್ಲ?” ಶಶಾಂಕ್‌ ಬೇಕೆಂದೇ ಹಠ ಹೂಡಿದ್ದ.

“ಸ್ಮಿತಾನಾ ಒಂದು ಸಲ ಭೇಟಿಯಾಗು….. ಆಮೇಲೆ ಉಳಿದೆಲ್ಲ ವಿಚಾರ ಮಾತಾಡುವೆಯಂತೆ,” ಮೂರ್ತಿ ಹೇಳಿದರು.

“ಸರಿ….ಸರಿ,” ಎನ್ನುತ್ತಾ ಅಸಮಾಧಾನದಿಂದ ಒಪ್ಪಿದವನಂತೆ ಅವನು ಅಲ್ಲಿಂದ ಎದ್ದು ಒಳಹೋದ. ಹೋಗುವಾಗ ಅಕಸ್ಮಾತ್ ಅವನ ಜೇಬಿನಿಂದ ಪರ್ಸ್‌ ಕೆಳಗೆ ಉರುಳಿತು. ದುರಾದೃಷ್ಟಕ್ಕೆ ಅದೇ ಸಮಯ ಅದರಲ್ಲಿ ಇರಿಸಿದ್ದ ಶೃತಿಯ ಫೋಟೋ ಮೂರ್ತಿಗಳಿಗೆ ಸ್ಪಷ್ಟವಾಗಿ ಕಾಣುವಂತೆ ನೆಲದ ಮೇಲೆ ಬೀಳಬೇಕೇ? ಈ ವಿಷಯ ತಿಳಿಯುತ್ತಲೇ ತಾಯಿ ಮಗ ಮುಖ ಮುಖ ನೋಡಿಕೊಂಡು ಕಕ್ಕಾಬಿಕ್ಕಿಯಾದರು. ಅವರು ತೀವ್ರ ಆಸಕ್ತಿಯಿಂದ ಆ ಫೋಟೋವನ್ನೇ ತಿರುಗಿಸಿ ನೋಡಿದರು. ಮುಖದ ಗುರುತು ಸರಿಯಾಗಿ ಸಿಕ್ಕ ಕೂಡಲೇ ಅವರು ಬೇಸ್ತುಬಿದ್ದರು.

“ಇದೇನಪ್ಪ ಇದು….. ಇದಂತೂ ಸ್ಮಿತಾ ಫೋಟೋ ಅಲ್ಲವೇ….. ಈ ಫೋಟೋ ನಿನ್ನ ಬಳಿ ಹೇಗೆ ಬರಲು ಸಾಧ್ಯ?” ತಾಯಿ ಮಗ ಏನೂ ಮಾತನಾಡಲಾಗದೆ ಸುಮ್ಮನೆ ನಿಂತಿದ್ದರು. ಈ ಪರಿಸ್ಥಿತಿ ಎದುರಾದರೆ ಮಾಡುವುದೇನೆಂದು ಅವರು ಊಹಿಸಿರಲೂ ಇಲ್ಲ. ಏನು ಹೇಳಿ ಅವರನ್ನು ಸಮಾಧಾನಿಸುವುದು?

“ಮತ್ತೆ ಹೇಳು ಶಶಾಂಕ್‌…. ಈ ಫೋಟೋ ನಿನ್ನ ಬಳಿ ಹೇಗೆ ಬರಲು ಸಾಧ್ಯ?”

“ಅಪ್ಪಾಜಿ…. ಇವಳೇ ಶೃತಿ!” ಶಶಾಂಕ್‌ ಇನ್ನು ಸುಳ್ಳು ಮುಂದುರಿಸಲಾಗದೆ ಸತ್ಯ ಹೇಳಿದ. ರೇವತಿ ನಿಧಾನವಾಗಿ ನಡೆದು ಬಂದು ಮಗನ ಹತ್ತಿರ ನಿಂತರು.

“ಅಂದ್ರೆ…. ಶೃತಿ ಸ್ಮಿತಾ ಇಬ್ಬರೂ ಒಂದೇ!” ರೇವತಿ ಮೆಲ್ಲಗೆ ದನಿಗೂಡಿಸಿದರು.

“ಅಂ….ದ….ರೆ…. ನೀವಿಬ್ಬರೂ…. ಅಲ್ಲಲ್ಲ…. ನೀವು ಮೂವರೂ ಸೇರಿ ನನ್ನನ್ನು ಏಮಾರಿಸಿದ್ದೀರಿ….. ಮುಠ್ಠಾಳನನ್ನಾಗಿ ಮಾಡಿದ್ದೀರಿ…..”

“ಅದು….. ಹಾಗಲ್ಲ ಅಪ್ಪಾಜಿ…. ನಿಮ್ಮನ್ನು ಮದುವೆಗೆ ಒಪ್ಪಿಸಲು ಇದೊಂದೇ ದಾರಿ ಉಳಿದಿತ್ತು….”

ಈ ಬಾರಿ ಸುಧಾ ಸಹ ರೂಮಿನಿಂದ ಆಚೆ ಬಂದು ಇಲ್ಲೇನು ನಡೆಯುತ್ತಿದೆಯೋ ತಿಳಿಯದೆ ಕಸಿವಿಸಿಗೊಂಡಳು.

ಇದ್ದಕ್ಕಿದ್ದಂತೆ ಕೃಷ್ಣಮೂರ್ತಿ ಜೋರಾಗಿ ನಗತೊಡಗಿದರು. ಈಗ ಬೇಸ್ತು ಬೀಳುವ ಸರದಿ ಇವರದಾಗಿತ್ತು.

“ನೀವು ಮೂರೂ ಸೇರಿ ನನ್ನನ್ನಲ್ಲ…. ನಾನು ನಿಮ್ಮ ಮೂವರನ್ನೂ ಏಮಾರಿಸಿದ್ದೇನೆ….”

“ಅದು…. ಹೇಗೆ?”

ರೇವತಿ ಮಗನ ಕಡೆ ನೋಡಿದರು. ಸುಧಾ ತಲೆ ಚಚ್ಚಿಕೊಳ್ಳುವುದೊಂದು ಬಾಕಿ ಅಷ್ಟೆ.

“ಅಂದ್ರೆ ಶಶಾಂಕ್‌ ಶೃತಿಗೆ ಫೋನ್‌ ಮಾಡಿದಾಗ 2 3 ಸಲ ನಾನು ಸ್ಪಷ್ಟವಾಗಿ ಕೇಳಿಸಿಕೊಂಡೆ. ಅವಳು ಬಲು ಸಡಗರದಿಂದ ಇಲ್ಲಿನ ವರದಿ ಒಪ್ಪಿಸಬೇಕು ಎನ್ನುವ ಧಾವಂತದಲ್ಲಿ ನೆಟ್‌ ವರ್ಕ್‌ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ರೂಮಿನಿಂದ ಸರಸರ ಮಾತನಾಡುತ್ತಲೇ ಹೊರಬಂದಾಗ, ಮೊದಲ ದಿನ ಏನೂ ಅರ್ಥವಾಗದೆ ನನಗೂ ಕಸಿವಿಸಿ ಆಯಿತು. ಎರಡನೇ, ಮೂರನೇ ದಿನ ಇದು ರಿಪೀಟ್‌ ಆದಾಗ ನಿಮ್ಮಗಳ ನಾಟಕ ಗೊತ್ತಾಯಿತು. ನೋಡೋಣ ಈ ನಾಟಕ ಹೇಗೆ ಮುಂದುವರಿಯುತ್ತೋ ಅಂತ ನಾನೂ ಸುಮ್ಮನಿದ್ದೆ…. ಸ್ಮಿತಾನೇ ಶೃತಿ ಅನ್ನೋದು ನನಗೆ ಮೊದಲೇ ಗೊತ್ತಿತ್ತು ಬಿಡಿ.”

“ಓ…. ಮತ್ತೇಕೆ ನೀವು ನಮ್ಮನ್ನು ಕನ್‌ಫ್ಯೂಸ್‌ ಮಾಡಿದ್ದು?” ಶಶಾಂಕ್‌ ಅವರನ್ನು ಕೇಳಿದ.

“ಹ್ಞೂಂ ಕಣಪ್ಪ. ನೀನು ಮಗನಾದರೆ ನಾನು ನಿನಗೆ ಅಪ್ಪ. ಸ್ಮಿತಾಳ ವರ್ತನೆ ಮೊದಲ ದಿನವೇ ನನಗೆ ಬಹಳ ಹಿಡಿಸಿತು. ಯಾವಾಗ ಅವಳೇ ಶೃತಿ ಅಂತ ಗೊತ್ತಯ್ತೋ ಆಗ ಡಬಲ್ ಕೇರ್‌ ಫುಲ್ ಆಗಿ ನಡೆದುಕೊಳ್ಳತೊಡಗಿದೆ. ನನಗೆ ಸಂಪೂರ್ಣ ಒಪ್ಪಿಗೆ ಅನ್ನಿಸಿದ ಮೇಲೆ ಈ ಮದುವೆಯಲ್ಲಿ ಏನೂ ತಕರಾರಿಲ್ಲ ಅನ್ನಿಸಿತು.

“ಒಂದು ವಿಷಯ ಚೆನ್ನಾಗಿ ತಿಳಿದುಕೊಳ್ಳಿ. ಯಾವುದೇ ವಿಚಾರದಲ್ಲಿ ನಂಬಿಕೆ ಅನ್ನೊಂದು ಒಂದೇ ದಿನಕ್ಕೆ ಹುಟ್ಟಲ್ಲ….. ಅಥವಾ ಒಂದೇ ದಿನಕ್ಕೆ ಬಿಟ್ಟು ಹೋಗೋಲ್ಲ. ನಾನು ಜಾತಕಗಳ ಕುರಿತು ಹೆಚ್ಚಿನ ನಂಬಿಕೆ ಬೆಳೆಸಿಕೊಂಡಿದ್ದೂ ಇಂದು ನಿನ್ನೆಯ ವಿಚಾರವಲ್ಲ. ಬಾಲ್ಯದಿಂದ ನಾನು ಬೆಳೆದು ಬಂದ ಸಾಂಪ್ರದಾಯಿಕ ವಾತಾವರಣ ಹಾಗಿತ್ತು, ಹೀಗಾಗಿ ಜಾತಕ ನೋಡದೆ ಮದುವೆ ಅನ್ನೋದು ನಮಗೆ ಮೀರಿದ ಮಾತಾಗಿತ್ತು…..

“ಕಾಲ ಬದಲಾದಂತೆ ಈ ನಂಬಿಕೆ ತುಸು ಕಡಿಮೆ ಆಯಿತಾದರೂ ಅದನ್ನು 100% ಬಿಡಲಾಗಲಿಲ್ಲ. ಅಕಸ್ಮಾತ್‌ ಜಾತಕ ಕೂಡದಿದ್ದರೆ ಇಬ್ಬರಿಗೂ ಏನೂ ಕೇಡಾಗಬಾರದು ಎನ್ನುವ ಭಯ. ಆದರೆ ಶೃತಿಯನ್ನು ನೋಡಿ, ನಿಮ್ಮಿಬ್ಬರ ಪ್ರೀತಿ ವಿಷಯ ತಿಳಿದು, ಹಿರಿಯರ ಅನುಮತಿ ಇಲ್ಲದೆ ಮದುವೆ ಆಗಬಾರದೆನ್ನುವ ನಿಮ್ಮ ಆದರ್ಶ ನಡವಳಿಕೆ ಕಂಡು ನನ್ನ ಮನಸ್ಸು ತುಂಬಿಬಂದಿತು.

“ಹೆತ್ತವರು ಒಪ್ಪದಿದ್ದರೆ ಕತ್ತೆ ಬಾಲ ಎನ್ನುವ ಈಗಿನ ಕಾಲದ ಆಧುನಿಕ ಯುವಜನತೆ, ಹಿರಿಯರ ಭಾವನೆಗಳನ್ನು ತುಳಿದುಕೊಂಡೇ ಹೋಗಿಬಿಡುತ್ತಾರೆ. ಆದರೆ ನೀವು ಹಾಗೆ ಮಾಡದೆ, ಹಿರಿಯರನ್ನು ಒಪ್ಪಿಸಲೇಬೇಕು ಎಂದು, ಈ ರೀತಿ ಮಾಡಿ, ಅದರಲ್ಲೂ ಆ ಹೆಣ್ಣುಮಗು ಅದಕ್ಕಾಗಿ ಬೇರೆಯವರ ಮನೆಯಲ್ಲಿ ಬಂದು ತಂಗಿದ್ದು, ಇಲ್ಲಿ ಎಲ್ಲರ ಮನಸ್ಸು ಗೆದ್ದಿದ್ದಾಳೆ.

“ಶೃತಿಗೆ ನಿನ್ನ ಮೇಲೆ ನಿಜವಾದ ಪ್ರೀತಿ ಪ್ರೇಮವಿದ್ದರೆ ಮಾತ್ರ ಇದೆಲ್ಲ ಸಾಧ್ಯ. ಹೀಗಿರುವಾಗ ನಿಮ್ಮಿಬ್ಬರ ಮದುವೆ ವಿಫಲ ಆಗಲು ಹೇಗೆ ಸಾಧ್ಯ? ಜಾತಕ ಹೊಂದಲಿ ಬಿಡಲಿ, ನಿಮ್ಮಿಬ್ಬರ ಮನಸ್ಸು ಬೆರೆತಿರುವುದರಿಂದ ಮುಂದೆ ಏನೇ ಸಮಸ್ಯೆ ಬಂದರೂ ಇಬ್ಬರೂ ಕೂಡಿಯೇ ಅದನ್ನು ದಿಟ್ಟವಾಗಿ ಎದುರಿಸುತ್ತೀರಿ, ಪರಸ್ಪರ ಬಿಟ್ಟುಕೊಡುವುದಿಲ್ಲ ಅನ್ನುವುದು ಇದರಿಂದ ಸ್ಪಷ್ಟ ಆಯಿತಲ್ಲ….

“ಶೃತಿಯನ್ನು ಇಷ್ಟು ಹತ್ತಿರದಿಂದ ನೋಡಿ ಅರ್ಥ ಮಾಡಿಕೊಂಡ ಮೇಲೆ ಕಂಡರಿಯದ ಅವಳ ನಕ್ಷತ್ರ, ಗ್ರಹಕೂಟಗಳ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳಲಿ? ಇಲ್ಲಿ ಪ್ರತ್ಯಕ್ಷವಾಗಿ ಅವಳನ್ನು ನೋಡಿ ಅರ್ಥ ಮಾಡಿಕೊಂಡದ್ದನ್ನು ಜಾತಕಗಳು ಪ್ರಮಾಣೀಕರಿಸಲು ಆಗುತ್ತದೆಯೇ? ಈ ಎಲ್ಲಾ ಬಗೆಯ ತರ್ಕಗಳಿಂದ ಸ್ಮಿತಾ…. ಅಲ್ಲ ಶೃತಿಯೇ ಈ ಮನೆ ಸೊಸೆ ಎಂದು ನಿರ್ಧರಿಸಿದ್ದಾಯ್ತು,” ಎಂದಾಗ ಎಲ್ಲರಿಗೂ ವಿಷಯ ಸ್ಪಷ್ಟವಾಗಿ ಅರ್ಥವಾಯಿತು.

ಶಶಾಂಕ್‌ ಓಡಿ ಬಂದು ತಂದೆಯನ್ನು ಅಪ್ಪಿಕೊಂಡ, “ಥ್ಯಾಂಕ್ಸ್ ಅಪ್ಪಾಜಿ, ಈಗ ನೀವು ನನ್ನ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೀರಿ ಅನ್ನೋದು ಸ್ಪಷ್ಟವಾಯ್ತು. ನಾನು ಈಗಲೇ ಶೃತಿಗೆ ಈ ಸಂತೋಷದ ವಿಷಯ ಹೇಳಬೇಕು,” ಎಂದು ಕುಣಿಯುತ್ತಾ ತನ್ನ ಕೋಣೆಗೆ ಹೊರಟ.

ರೇವತಿ ಮೂರ್ತಿಗಳೆದುರು ಬಂದು ನಿಂತು, “ನೋಡಿದ್ರಾ…. ಮಕ್ಕಳ ಖುಷಿಯನ್ನೇ ನಮ್ಮ ಖುಷಿ ಎಂದು ಆದರಿಸಿದರೆ, ಅವರಿಗೆಷ್ಟು ಸಂತೋಷ ಅಲ್ಲವೇ? ಮಕ್ಕಳ ಆನಂದಕ್ಕಿಂತ ಮಿಗಿಲಾದುದೇನು? ಎಲ್ಲರೂ ಹೀಗೆ ಪೀಳಿಗೆಯ ಅಂತರ ಮರೆತು ಪರಸ್ಪರ ಅರಿತುಕೊಂಡರೆ ಬದುಕು ಎಷ್ಟು ಸುಂದರ ಅಲ್ಲವೇ?” ಮಾತು ಮುಗಿಯುವಷ್ಟರಲ್ಲಿ ಅವರ ಕಂಗಳು ತುಂಬಿದ್ದವು.

“ಹ್ಞೂಂ….ಥ್ಯಾಂಕ್ಸ್ ರೇವತಿ, ನಿನ್ನ ಪ್ರಯತ್ನಗಳಿಂದಾಗಿ ನಾನು ಮಗನ ಸಂತೋಷ ಹಾಳು ಮಾಡುವ ಅಪರಾಧಿ ಪ್ರಜ್ಞೆಯಿಂದ ಹೊರಬಂದೆ. ಇನ್ನೇನು ಎಲ್ಲಾ ಸರಿಹೋಯ್ತಲ್ಲ….. ಅಮ್ಮಾವ್ರು ಇವತ್ತು ಖುಷಿಯಲ್ಲಿ ಸಿಹಿ ಅಡುಗೆ ಮಾಡ್ತೀರೋ?” ಮೂರ್ತಿ ರೇಗಿಸಿದಾಗ ರೇವತಿ ನಸುನಕ್ಕರು.

ಸುಧಾ ಜೊತೆಗೂಡಿ ಅವರು ಹಬ್ಬದಡುಗೆಯ ತಯಾರಿಗೆ ತೊಡಗಿದರು. ಎಷ್ಟೋ ದಿನಗಳ ನಂತರ ಆ ಮನೆಯಲ್ಲಿ ಮೋಡ ಕವಿದ ವಾತಾವರಣ ಸರಿದು, ಎಲ್ಲೆಡೆ ಸಂತೋಷ ಸಂಭ್ರಮ ಹರಡಿತು.

ಶಶಾಂಕ್‌ ಆ ಖುಷಿ ಇಮ್ಮಡಿಸಲು ಶೃತಿಯನ್ನು ಮನೆಗೆ ಕರೆತಂದ.

“ಬಾಮ್ಮ  ಸ್ಮಿತಾ…. ಅಲ್ಲಲ್ಲ ಶೃತಿ,” ಎಂದು ಅವಳನ್ನು ಬರಮಾಡಿಕೊಂಡಾಗ ಎಲ್ಲರ ಮುಖದಲ್ಲೂ ತೃಪ್ತಿಯ ನಗು ಹರಡಿತು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ