ಮಹಾರಾಷ್ಟ್ರದ ಪೈಠಣ್ ಅಂದರೆ ನಾರಾಯಣ ಪೇಠ ಮತ್ತು ಜೀಜಾಮಾತಾ ಸೀರೆಗಳು ಮತ್ತು ಕರ್ನಾಟಕದ ಇಳಕಲ್ ಸೀರೆಗಳು ಪಾರಂಪರಿಕ ಸೀರೆಗಳೆಂದು ಬಹಳ ಪ್ರಸಿದ್ಧಿ ಪಡೆದಿವೆ.
ಸೆರಗಿನ ಮೇಲೆ ನವಿಲಿನ ಚಿತ್ರ ಇದು ಪೈಠಣಿ ಸೀರೆಗಳ ವಿಶೇಷ. ನಾರಾಯಣ ಪೇಠ ಸೀರೆಗಳ ಬಾರ್ಡರ್ ದೊಡ್ಡದಾಗಿರುತ್ತದೆ ಹಾಗೂ ಜೀಜಾಮಾತಾ ಸೀರೆಗಳ ಬಾರ್ಡರ್ ಅತ್ಯಂತ ಚಿಕ್ಕದಾಗಿರುತ್ತದೆ. ಅದೇ ಇಳಕಲ್ ಸೀರೆಯ ಸೆರಗಿನಲ್ಲಿ ತೂಗಾಡುವ ಗುಚ್ಛಗಳು ಅದರ ವಿಶೇಷತೆಯನ್ನು ಬಿಂಬಿಸುತ್ತವೆ.
ಕಾಲಕ್ಕೆ ತಕ್ಕಂತೆ ಪೋಷಾಕಿನಲ್ಲೂ ಭಾರಿ ಬದಲಾವಣೆ ಬಂದಿದೆ. ಅಂದರೆ ತೀರಾ ಇತ್ತೀಚಿನತನಕ ಮಹಿಳೆಯರು ಇವನ್ನು ಸೀರೆಯ ರೂಪದಲ್ಲಿ ದರಿಸುತ್ತಿದ್ದರು. ಈಗ ಈ ಪಾರಂಪರಿಕ ಸೀರೆಗಳಿಂದ ಆಧುನಿಕ ಪೋಷಾಕುಗಳನ್ನು ಸಿದ್ಧಪಡಿಸಿಕೊಂಡು ಧರಿಸಲು ಹೆಮ್ಮೆಪಡುತ್ತಾರೆ.
ಆಧುನಿಕ ಪೋಷಾಕುಗಳು ಅಷ್ಟೇ ಸುಂದರವಾಗಿ ಗೋಚರಿಸುತ್ತವೆ. ಈ ಪಾರಂಪರಿಕ ಸೀರೆಗಳಿಂದ ಕುರ್ತಿ, ಸ್ಟೋಲ್, ಜಾಕೆಟ್ಸ್ ಮುಂತಾದವುಗಳನ್ನು ಸಿದ್ಧಪಡಿಸಲಾಗುತ್ತಿದೆ.
ಔರಂಗಾಬಾದ್‌ನ ಪೈಠಣದಲ್ಲಿ ತಯಾರಾಗುವ ಸೀರೆಗಳನ್ನು `ಪೈಠಣಿ’ ಸೀರೆಗಳೆಂದು ಪ್ರಸಿದ್ಧವಾಗಿವೆ. ಇವು ಹೆಚ್ಚಾಗಿ ಕೈಮಗ್ಗದಿಂದಲೇ ತಯಾರಾಗುತ್ತವೆ.
ಈ ಸೀರೆಗಳಲ್ಲಿ ಉತ್ತಮ ಗುಣಮಟ್ಟದ ರೇಷ್ಮೆಯನ್ನು ಬಳಸಲಾಗುತ್ತದೆ. ಹೀಗಾಗಿ ಈ ಸೀರೆಗಳು ಬಹಳ ಜನಪ್ರಿಯವಾಗಿವೆ. ಸೀರೆಯ ಸೆರಗಿನ ಮೇಲೆ ನವಿಲಿನ ಸುಂದರ ಚಿತ್ರವನ್ನು ನೇಯ್ಗೆ ಮಾಡುವುದು ಇದರ ವಿಶೇಷತೆಯಾಗಿದೆ. ಅದೇ ರೀತಿ ಬೇರೆ ಬೇರೆ ಬಣ್ಣಗಳ ಶೇಡ್ ಕೂಡ ಇದಕ್ಕೆ ವಿಭಿನ್ನ ಮೆರುಗನ್ನು ನೀಡುತ್ತದೆ. ಒಂದು ಬಣ್ಣದ ಎಳೆ ಉದ್ದವಾಗಿಯೂ, ಇನ್ನೊಂದನ್ನು ಅಡ್ಡವಾಗಿ ನೇಯ್ಗೆ ಮಾಡಿರುವ ಕಾರಣದಿಂದ ಈ ಸೀರೆಗಳಲ್ಲಿ ವಿಭಿನ್ನ ಶೇಡ್ ಕಂಡುಬರುತ್ತದೆ. ಈ ಸೀರೆಗಳು ನೀಲಿ, ನೇರಳೆ, ಮೆರೂನ್ ಮತ್ತು ಕಪ್ಪು ಹೀಗೆ ಪ್ರಖರ ವರ್ಣಗಳಲ್ಲಿ ಲಭಿಸುತ್ತವೆ.
ಚಿನ್ನ ಬೆಳ್ಳಿಯ ಬಳಕೆ
ಪೇಶ್ವೆಗಳ ಕಾಲದಲ್ಲಿ ಇಂತಹ ಸೀರೆಗಳ ಸೆರಗಿನ ಅಂಚನ್ನು ಶುದ್ಧ ಚಿನ್ನ ಹಾಗೂ ತಾಮ್ರದ ಮಿಶ್ರಣದಿಂದ ತಯಾರಿಸಲಾಗುತ್ತಿತ್ತು. ಅದರ ಒಂದು ಎಳೆಯನ್ನು ಜರಿ ಎಂದು ಹೇಳಲಾಗುತ್ತಿತ್ತು. ಇತ್ತೀಚಿನ ಸೀರೆಗಳಲ್ಲಿ ಬೆಳ್ಳಿಯ ಮೇಲೆ ಚಿನ್ನದ ಎರಕ ಹೊಯ್ಯಲಾಗುತ್ತದೆ. ಇಂತಹ ಒಂದು ಸೀರೆಯನ್ನು ತಯಾರಿಸಲು ಅನೇಕ ತಿಂಗಳುಗಳೇ ಬೇಕು.
ಸೀರೆ ನೇಯುವ ಅದನ್ನು ಎಷ್ಟೇ ಚೆನ್ನಾಗಿ ರೂಪಿಸಿರಬಹುದು, ಆದರೆ ಜರಿಯ ಬಾರ್ಡರ್ ಸಿದ್ಧಪಡಿಸಲು ನುರಿತ ಕೆಲಸಗಾರ ಬೇಕೇಬೇಕು. ಸೀರೆಯ ಬಣ್ಣ ಯಾವುದೇ ಆಗಿರಬಹುದು. ಆದರೆ ಸೀರೆಯ ಸೆರಗು ಮಾತ್ರ ಜರಿಯದ್ದೇ ಆಗಿರುತ್ತದೆ.
ಈ ಸೀರೆಗಳಿಂದ ಇನ್ನೂ ಬೇರೆ ಬೇರೆ ಬಗೆಯ ಆಧುನಿಕ ಬಟ್ಟೆಗಳನ್ನು ತಯಾರಿಸಲಾಗುತ್ತದೆ. ಫ್ಯಾಷನ್ ಡಿಸೈನರ್ ಪೂರ್ಣಿಮಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಪೈಠಣಿ ಸೀರೆಗಳಿಂದ ಸುಂದರ ಅರ್ನಾಕಲಿ ಸೂಟ್‌ಗಳನ್ನು ತಯಾರಿಸಬಹುದು. 20 ನವಿಲುಗಳುಳ್ಳ ಸೀರೆಗೆ, ಇನ್ನು 20 ನವಿಲುಗಳುಳ್ಳ ಸೀರೆ ಜೋಡಿಸಿ 40 ನವಿಲುಗಳುಳ್ಳ ಅರ್ನಾಕಲಿ ಸೂಟನ್ನು ತಯಾರಿಸಬಹುದಾಗಿದೆ. ಇನ್ನು ವಿಶೇಷವಾಗಿ ಪಾರ್ಟಿವೇರ್‌ಗಾಗಿ ಡಿಸೈನ್ ಮಾಡಲಾಗಿದೆ.
ಕ್ರಾಸ್ ಕಲ್ಚರ್ ಮಾಡಿದ ಔಟ್‌ಫಿಟ್ಸ್ ಪಾರ್ಟಿಯ ಶೋಭೆ ಹೆಚ್ಚಿಸುತ್ತವೆ. ಪೈಠಣಿ ಸೀರೆಗಳ ಬಾರ್ಡರ್‌ನ ಟ್ಯೂಬ್ ಟಾಪ್ ಪ್ಯಾಂಟಿನ ಮೇಲೆ ಚೆನ್ನಾಗಿ ಒಪ್ಪುತ್ತದೆ. ವೈಟ್ ಅಥವಾ ಆಫ್ ವೈಟ್‌ನ ಡ್ರೆಸ್‌ನ ಮೇಲೆ ಗಾಢ ವರ್ಣದ ಬಾರ್ಡರಿನ ಸ್ಟೋಲ್ ಬಹಳ ಸುಂದರವಾಗಿ ಕಾಣುತ್ತದೆ.
ಈ ಸೀರೆಗಳ ಲಾಂಗ್ ಸ್ಕರ್ಟ್ ಮೇಲೆ ಸುಂದರ ಬಾರ್ಡರ್ ಇದ್ದರೆ, ಅದರ ಮೇಲೆ ಲೈಟ್ ಕಲರಿನ ಟಾಪ್ ಅಥವಾ ಶಾರ್ಟ್ ಕುರ್ತಾ ಧರಿಸಿ.
ಅಂತಹ ಸೀರೆಗಳಿಂದ ಒಳ್ಳೆಯ ವೆಸ್ಟರ್ನ್ ಔಟ್‌ಫಿಟ್ಸ್ ಕೂಡ ಸಿದ್ಧಪಡಿಸಬಹುದು. ಉದಾಹರಣೆಗೆ ಒನ್ ಪೀಸ್ ಸ್ಕರ್ಟ್, ಇಂಡೊ ವೆಸ್ಟರ್ನ್ ಮುಂತಾದವುಗಳ ಮುಂಭಾಗದಲ್ಲಿ ಬಾರ್ಡರ್ ಬಟ್ಟೆಯನ್ನು ಲಗತ್ತಿಸಲಾಗುತ್ತದೆ. ಉಳಿದ ಸೀರೆಯ ಭಾಗವನ್ನು ಹಿಂಭಾಗದಲ್ಲಿ ಲಗತ್ತಿಸಿ ಒನ್ ಪೀಸ್ ಮಾಡಬಹುದಾಗಿದೆ. ಪೈಜಾಮಾ ಮತ್ತು ಟಾಪ್ ಮೇಲೆ ಇಳಕಲ್ ಸೀರೆಯ ಬಾರ್ಡರಿನ ಜಾಕೆಟ್ ಇಂಡೊ ವೆಸ್ಟರ್ನ್ ರೂಪದಲ್ಲಿ ಸಾಕಷ್ಟು ಹೊಂದುತ್ತವೆ. ಮದುವೆಯ ಮುಂಚೆ ಅರಿಶಿಣ ಶಾಸ್ತ್ರಕ್ಕೆ ಈ ಪಾರಂಪರಿಕ ಸೀರೆಗಳಿಂದ ತಯಾರಿಸಿದ ಆಧುನಿಕ ಪೋಷಾಕುಗಳು ಬಹಳ ಸುಂದರವಾಗಿ ಗೋಚರಿಸುತ್ತವೆ.
ಪರಂಪರೆ ಜೀವಂತವಾಗಿಟ್ಟ ಸೀರೆಗಳು
ಬಾಗಲಕೋಟೆ ಜಿಲ್ಲೆಯ ಇಳಕಲ್ ಹಾಗೂ ಆಸುಪಾಸಿನ ಊರುಗಳಲ್ಲಿ ತಯಾರಿಸಲಾಗುವ ಸೀರೆಗಳನ್ನು `ಇಳಕಲ್ ಸೀರೆ’ಗಳೆಂದೇ ಕರೆಯಲಾಗುತ್ತದೆ. ಹತ್ತಿಯಿಂದ ತಯಾರಿಸಲಾದ ಈ ಸೀರೆಗಳ ಅಂಚಿಗೆ ರೇಷ್ಮೆ ಎಳೆಗಳನ್ನು ಬಳಸಲಾಗುತ್ತದೆ.
ಇಳಕಲ್ ಸೀರೆಗಳ ಅಂಚು ಸಾಮಾನ್ಯವಾಗಿ 3 ಪ್ರಕಾರದ್ದಾಗಿರುತ್ತವೆ. ಅವನ್ನು `ಗೋಮಿ’ `ಪರಸಪೇಟ’ ಮತ್ತು `ಗಾಡಿ’ ಎಂದು ಕರೆಯಲಾಗುತ್ತದೆ. ಸೆರಗಿನಲ್ಲಿ ಆಯತಾಕಾರ ಮತ್ತು ಚೌಕಳಿ ಆಕಾರದ ವಿನ್ಯಾಸ ಕಂಡುಬರುತ್ತದೆ. ಈ ಸೀರೆಗಳು `ಇಳಕಲ್ ದಡಿ’ ಸೀರೆಗಳೆಂದೇ ಪ್ರಸಿದ್ಧಿ ಪಡೆದಿವೆ.
ಸೀರೆಯ ಅಂಚಿನ ಬಣ್ಣ ಕೆಂಪು ಅಥವಾ ಮೆರೂನ್ ಬಣ್ಣದ್ದಾಗಿರುತ್ತವೆ. ಸೀರೆಯ ಅಂಚು 4 ರಿಂದ 6 ಇಂಚಿನಷ್ಟು ಅಗಲವಾಗಿರುತ್ತದೆ.
ಈ ಸೀರೆಗಳು ಕಾಟನ್, ಕಾಟನ್ ಸಿಲ್ಕ್ ಅಥವಾ ಅಪ್ಪಟ ರೇಷ್ಮೆಯಲ್ಲೂ ತಯಾರಾಗುತ್ತವೆ. ಗಾಢ ಕೆಂಪು, ಗಾಢ ಹಸಿರು ಹಾಗೂ ತಿಳಿ ಹಸಿರು ಬಣ್ಣಗಳಲ್ಲಿ ಈ ಸೀರೆಗಳು ದೊರೆಯುತ್ತವೆ.
ನಾರಾಯಣ ಪೇಠ ಸೀರೆಗಳು ಮಹಾರಾಷ್ಟ್ರದ ಜೊತೆಜೊತೆಗೆ ಆಂಧ್ರಪ್ರದೇಶದಲ್ಲೂ ತಯಾರಾಗುತ್ತವೆ. ಮಹಾರಾಷ್ಟ್ರದ ವಿದರ್ಭ ಭಾಗದ ನಾಗಪುರ ಹಾಗೂ ಚಂದ್ರಪುರದಲ್ಲಿ ಈ ತೆರನಾದ ಸೀರೆಗಳು ತಯಾರಾಗುತ್ತವೆ. ಈ ಸೀರೆಗಳು ಎರಡು ಪ್ರಕಾರದ್ದಾಗಿರುತ್ತವೆ. ಚಿಕ್ಕ ಚೌಕಳಿಯ ಡಿಸೈನ್‌ಗಳು ಹಾಗೂ ಪ್ಲೇನ್ ಸೀರೆಗಳು. ಚಿಕ್ಕ ಚೌಕಳಿಯ ಡಿಸೈನ್‌ನ್ನು `ನಾಗಪುರಿ ಚೆಕ್ಸ್’ ಎಂದೂ ಹೇಳಲಾಗುತ್ತದೆ. ಈ ಸೀರೆಯ ಅಂಚನ್ನು `ಕವರ್ ಬಾರ್ಡರ್’ ಎಂದು ಕರೆಯಲಾಗುತ್ತದೆ.
ಫ್ಯಾಷನ್ ಡಿಸೈನರ್ ಶೃತಿ ಹೇಳುವುದೇನೆಂದರೆ, ಭಾರತದ ಪರಂಪರೆಯನ್ನು ಉಳಿಸಿಕೊಂಡೇ ನಾವು ಪಾಶ್ಚಾತ್ಯ ಪೋಷಾಕುಗಳನ್ನು ತಯಾರಿಸಿಕೊಳ್ಳಬಹುದು.
ಸಿಲ್ಕ್ ಕಾಟನ್‌ನಲ್ಲಿ ಒಂದು ಎಳೆ ಕಾಟನ್ ಮತ್ತು ಇನ್ನೊಂದು ಎಳೆ ರೇಷ್ಮೆಯದ್ದಾಗಿರುತ್ತವೆ. ಬೇರೆ ಬೇರೆ ಪ್ರಕಾರದ ಎಳೆಗಳನ್ನು ಬಳಸುವುದರಿಂದ ಒಂದೇ ಸೀರೆಯಲ್ಲಿ ಗಾಢ ಮತ್ತು ತಿಳಿ ಎರಡೂ ಪ್ರಕಾರದ ಸುಂದರ ದೃಶ್ಯ ಕಂಡುಬರುತ್ತದೆ. ಇಂತಹ ಸೀರೆಗಳಿಂದ ಹೊಸ ವಿನ್ಯಾಸದ `ನಥ್ ಪ್ರಿಂಟ್’ ಪ್ಯಾಂಟ್‌ಗಳನ್ನು ತಯಾರಿಸಬಹುದು. ಪಾರಂಪರಿಕ ಸೀರೆಗಳಿಂದ ತಯಾರಾದ ಆಧುನಿಕ ಪೋಷಾಕುಗಳಿಗೆ ಈಚೆಗೆ ಮಾರುಕಟ್ಟೆಯಲ್ಲಿ ಹೆಚ್ಚೆಚ್ಚು ಬೇಡಿಕೆ ಬರಲಾರಂಭಿಸಿದೆ.
– ಸಿ.ಕೆ. ಶ್ರೀಲತಾ