ಶರ್ಮಿಳಾಗೆ ಅತ್ತೆಯ ಹೊಗಳಿಕೆ ಇಷ್ಟವಾಗುತ್ತದೆ. ತನ್ನ ಸೊಸೆಗೆ ಮನೆಯಲ್ಲಿದ್ದುಕೊಂಡು ಕೆಲಸ ಮಾಡುವುದು ಬಹಳ ಹಿಡಿಸುತ್ತದೆ ಎಂದು ಅತ್ತೆ ಅವರಿವರ ಮುಂದೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಶರ್ಮಿಳಾ ಸಂಜೆ ಪತಿಯ ಜೊತೆ ಸುತ್ತಾಡಲು ಹೋಗುತ್ತಾಳೆ. ಆದರೆ ಈಚೆಗೆ ಆಕೆ ಖುಷಿಯಿಂದ ಇರುವ ಬದಲು ಅನಾರೋಗ್ಯಪೀಡಿತಳಂತೆ ಕಂಡುಬರತೊಡಗಿದಳು. ಸ್ಮಿತಾಗೆ ಸಾಕಷ್ಟು ಸೌಂದರ್ಯಪ್ರಜ್ಞೆ ಇದೆ. ತ್ವಚೆಯ ಕುರಿತಂತೆ ಆಕೆ ವಿಶೇಷ ಕಾಳಜಿ ವಹಿಸುತ್ತಾಳೆ. ಆದರೂ ಆಕೆಗೆ ಕಳೆದ ಕೆಲವು ದಿನಗಳಿಂದ ತ್ವಚೆಯಲ್ಲಿ ತಾಜಾತನ ಕಂಡುಬರುತ್ತಿಲ್ಲ. ಅವಳು ತಾಜಾತನದ ತ್ವಚೆಯಿಂದ ಗೆಳತಿಯರ ಲಯದಲ್ಲಿ ಸಾಕಷ್ಟು ಪ್ರಶಂಸೆಗೆ ಪಾತ್ರಳಾಗುತ್ತಿದ್ದಳು. ಈಚೆಗೆ ಆಕೆಗೆ ಎಲ್ಲರೂ ಏನಾಯ್ತು ಏನಾಯ್ತು ಎಂದು ಕೇಳುತ್ತಿರುತ್ತಾರೆ. ಜೊತೆಗೆ ತಮ್ಮದೇ ಆದ ಸಲಹೆಗಳನ್ನು ಕೊಡುತ್ತಿರುತ್ತಾರೆ. ಇಂತಹ ಅನೇಕ ಉದಾಹರಣೆಗಳು ನಮ್ಮ ಆಸುಪಾಸು ನೋಡಲು ಸಿಗುತ್ತವೆ. ಈ ಉದಾಹರಣೆಗಳು `ವಿಂಟರ್‌ಬ್ಲೂಸ್‌’ ಎಂಬ ಮನೋರೋಗಕ್ಕೆ ಸಂಬಂಧಪಟ್ಟಿವೆ.

ಮನೋತಜ್ಞೆ ಡಾ. ಅನುಪಮಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಈ ರೋಗವನ್ನು ಮಹಿಳೆಯರಿಗೆ ಸಂಬಂಧಪಟ್ಟ ರೋಗವೆಂದೇ ಹೇಳಲಾಗುತ್ತದೆ. ಪುರುಷರಲ್ಲಿ ಕಂಡುಬರುವುದು ಅಪರೂಪ. ದೀರ್ಘಾವಧಿಯವರೆಗೆ ಬಿಸಿಲಿನ ಸಂಪರ್ಕಕ್ಕೆ ಬರದೇ ಇದ್ದರೆ ಮೆಲಾಟೋನಿನ್‌ನ್ಯೂರೊ ಹಾರ್ಮೋನಿನ ಕೊರತೆ ಉಂಟಾಗುತ್ತದೆ. “ಮಹಿಳೆಯರಲ್ಲಿಯೇ ಈ ರೋಗ ಹೆಚ್ಚಾಗಿ ಬರಲು ಮುಖ್ಯ ಕಾರಣ ಅವರು ಬಿಸಿಲನ್ನು ಹೆಚ್ಚಾಗಿ ಇಷ್ಟಪಡುವುದಿಲ್ಲ. ಆದರೆ ಪುರುಷರು ಬಿಸಿಲಿನಲ್ಲಿ ಎಕ್ಸ್ ಪೋಸ್‌ಆಗುತ್ತಲೇ ಇರುತ್ತಾರೆ. ಹೀಗಾಗಿ ಅವರಿಗೆ ಈ ರೋಗ ಉಂಟಾಗುವ ಸಾಧ್ಯತೆ ಕಡಿಮೆ. ಮನೋಚಿಕಿತ್ಸಕಿ ಡಾ. ರೂಪಾ ಹೇಳುವುದು ಹೀಗೆ, “ವಿಂಟರ್‌ಬ್ಲೂಸ್‌ನ್ನು ಹೆಚ್ಚಿನ ಜನರು ಸೀಝನ್‌ಡಿಸಾರ್ಡರ್‌ಎಂದು ಭಾವಿಸುತ್ತಾರೆ. ಕಾಲಮಾನಕ್ಕೆ ತಕ್ಕಂತೆ ಆಹಾರ ಹಾಗೂ ಜೀವನಶೈಲಿಯನ್ನು ಶಿಸ್ತುಬದ್ಧವಾಗಿ ಇಟ್ಟುಕೊಳ್ಳುವುದು ಅತ್ಯವಶ್ಯ.”

ಬಿಸಿಲು ಸೌಂದರ್ಯದ ಶತ್ರು ಅಲ್ಲ

ಬಿಸಿಲನ್ನು ಬಹಳಷ್ಟು ಜನ ಹಾನಿಕರ ಎಂದು ಭಾವಿಸುತ್ತಾರೆ. ಹೀಗಾಗಿ ಅದರ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುತ್ತಾರೆ. ಆದರೆ ವಾಸ್ತವ ಸಂಗತಿ ಏನೆಂದರೆ ಬೆಳಗಿನ ಸೂರ್ಯನ ಕಿರಣಗಳಲ್ಲಿ `ಡಿ’ ವಿಟಮಿನ್‌ನ ಪ್ರಮಾಣ ಹೇರಳವಾಗಿರುತ್ತದೆ. ಎಳೆ ಬಿಸಿಲಿಗೆ ಮೈಯೊಡ್ಡುವುದರಿಂದ ನಮ್ಮ ಮೂಳೆಗಳು ಗಟ್ಟಿಗೊಳ್ಳುತ್ತವೆ. ತ್ವಚೆ ಕೂಡ ಕಾಂತಿ ಪಡೆದುಕೊಳ್ಳುತ್ತದೆ. ಕ್ಯಾಲ್ಶಿಯಂ ಹೀರಿಕೊಳ್ಳುವಿಕೆ ಸುಲಭವಾಗಿ ಆಗುತ್ತದೆ. ಹೀಗಾಗಿ ಮುಂಜಾನೆಯ ಬಿಸಿಲು ನಮ್ಮ ದೇಹಕ್ಕೆ ಬಹಳ ಉಪಯುಕ್ತ.

“ಧೂಪ್‌ ಮೇ ನಿಕಲಾ ನ ಕರೊ ರೂಪ್‌ ಕೀ ರಾನಿ…..” ಹಾಡಿನ  ಈ ಸಾಲುಗಳು ಸಿನಿಮಾಕ್ಕೆ ಸರಿ. ಆದರೆ ವಾಸ್ತವದಲ್ಲಿ ನಮ್ಮ ದೃಷ್ಟಿಕೋನ ಬೇರೆಯಾಗಿರಬೇಕು. ಆ ಸಾಲುಗಳನ್ನು ಗೀತ ರಚನೆಕಾರ ಮಧ್ಯಾಹ್ನ ಬಿಸಿಲಿನ ಪ್ರಖರತೆಯನ್ನು ಗಮನದಲ್ಲಿಟ್ಟುಕೊಂಡು ಬರೆದಿರಬೇಕು. ಮುಂಜಾನೆ ಎಳೆಬಿಸಿಲಿನ ಆನಂದ ಪಡೆದರೆ ತನುಮನಕ್ಕೆ ನೆಮ್ಮದಿ ನಿರಾಳತೆ ಇರುತ್ತದೆ. ಬಿಸಿಲಿನಲ್ಲಿ ಬೆಳಕು ಹಾಗೂ ಕಾಂತಿ ಇರುತ್ತದೆ. ಇದರಿಂದ ಮನಸ್ಸು ಖುಷಿಯಿಂದ ಇರುತ್ತದೆ, ಮೊದಲು ಜನರು ಜಗಲಿಕಟ್ಟೆಯ ಮೇಲೆ ಹರಟೆ ಹೊಡೆಯುತ್ತ ಬಿಸಿಲಿನ ಮಜ ಪಡೆದುಕೊಳ್ಳುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಈ ಪ್ರವೃತ್ತಿ ಕಡಿಮೆಯಾಗುತ್ತ ಹೊರಟಿದೆ. ಹೀಗಾಗಿ ಈ ಪ್ರವೃತ್ತಿಯನ್ನು ಮತ್ತೆ ಅನುಸರಿಸುವುದು ಉತ್ತಮ. ಹೊಸ ಸಂಶೋಧನೆಗಳ ಪ್ರಕಾರ, ಬಿಸಿಲು ಕಾಯಿಸುವುದರಿಂದ ಹೃದಯ ರೋಗಗಳು ಕೂಡ ನಿಯಂತ್ರಣಕ್ಕೆ ಬರುತ್ತವೆ.

ಬಿಸಿಲಿಗೆ ಯಾವುದೇ ಪರ್ಯಾಯವಿಲ್ಲ

ಡಾ. ನೀಲಾ ಅವರು ಹೀಗೆ ಹೇಳುತ್ತಾರೆ, “ನಮ್ಮಲ್ಲಿ ಬಿಸಿಲು ಬಹಳ ಸುಲಭವಾಗಿ ಲಭಿಸುತ್ತದೆ. ಅದೇ ಕಾರಣದಿಂದಲೋ ಏನೋ ಜನರು ಈ ವಿಷಯಕ್ಕೆ ಹೆಚ್ಚು ಮಹತ್ವ ಕೊಡುವುದಿಲ್ಲ. ಅದರ ಮಹತ್ವ ಗೊತ್ತಿದ್ದೂ ಜನರು ಅದರ ಬಗ್ಗೆ ತಿರಸ್ಕಾರದ ಭಾವನೆ ಹೊಂದಿರುತ್ತಾರೆ. ನಮ್ಮ ಬಳಿ ವಿಂಟರ್‌ಬ್ಲೂಸ್‌ರೋಗಿಗಳು ಯಾರಾದರೂ ಬಂದರೆ ನಾವು ಅವರಿಗೆ ಬಿಸಿಲಿನ ಮಹತ್ವದ ಬಗ್ಗೆ ತಿಳಿಸಿಕೊಡುವುದು ಬಹಳ ಕಠಿಣವಾಗುತ್ತದೆ. ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಕುಳಿತುಕೊಳ್ಳದೇ ಇರುವುದರಿಂದ ಇಂತಹ ರೋಗ ಬರುತ್ತದೆ ಎಂಬುದನ್ನು ಅವರು ಒಪ್ಪಿಕೊಳ್ಳುವುದಿಲ್ಲ.

“ಕೆಲವರಂತೂ ಸ್ಪಷ್ಟವಾಗಿಯೇ ತಮಗೆ ಸನ್‌ಅಲರ್ಜಿ ಇದೆಯೆಂದೂ, ಅದಕ್ಕಾಗಿ ತಾವು ಬಿಸಿಲಲ್ಲಿ ಮೈ ಒಡ್ಡುವುದಿಲ್ಲ ಎನ್ನುತ್ತಾರೆ. ಅಂಥವರಿಗೆ ತಾವು ಬಿಸಿಲಿನ ಮಹತ್ವದ ಬಗ್ಗೆ ವಿವರವಾಗಿ ತಿಳಿಸಿ ಹೇಳಬೇಕಾಗುತ್ತದೆ. ಸನ್‌ಅಲರ್ಜಿಯಿಂದ ರಕ್ಷಿಸಿಕೊಳ್ಳಲು ಸನ್‌ ಸ್ಕ್ರೀನ್‌ಮುಂತಾದವುಗಳನ್ನು ಉಪಯೋಗಿಸಲು ಸಲಹೆ ನೀಡಲಾಗುತ್ತದೆ. ಆಗ ಅವರಿಗೆ ಇದರ ಬಗ್ಗೆ ಅಷ್ಟಿಷ್ಟು ಅರಿವು ಉಂಟಾಗುತ್ತದೆ.

“ವಿಂಟರ್‌ಬ್ಲೂಸ್‌ರೋಗಿಗಳು ಹೆಚ್ಚು ಕೆಲಸ ಮಾಡದೆಯೇ ದಣಿದು ಸುಸ್ತಾದವರಂತೆ ಇರುತ್ತಾರೆ. ಹೆಚ್ಚು ಹೊತ್ತು ಮಲಗಿಕೊಂಡರೂ ಅಲರ ದಣಿವು ನಿವಾರಣೆಯಾಗುವುದಿಲ್ಲ. ಕ್ರಮೇಣ ಅವರಿಗೆ ಇತರರೊಂದಿಗೆ ಬೆರೆಯುವುದು ಇಷ್ಟವಾಗುವುದಿಲ್ಲ. ಜೀವನದಲ್ಲಿ ನಿರಾಶೆ, ಖಿನ್ನತೆ ಅವರನ್ನು ಆವರಿಸಿಕೊಳ್ಳುತ್ತ ಹೋಗುತ್ತದೆ.

“ವಿಂಟರ್‌ ಬ್ಲೂಸ್‌ನ ಕಪಿಮುಷ್ಠಿಗೆ ಸಿಲುಕಿದ ರೋಗಿಗಳಿಗೆ ಸ್ಟ್ರೆಸ್‌ಅಂದರೆ ಒತ್ತಡ ಅಧಿಕವಾಗುತ್ತ ಹೋಗುತ್ತದೆ. ಆದರೆ ಅದನ್ನು ಸಹಿಸಿಕೊಳ್ಳುವ ಸಾಮರ್ಥ್ಯ ತುಂಬಾ ಕಡಿಮೆ ಇರುತ್ತದೆ.

ತಂಪು ಪ್ರದೇಶಗಳಲ್ಲಿ ಹೆಚ್ಚುವಿಂಟರ್‌ಬ್ಲೂಸ್‌ನ ತಕರಾರು ಹೆಚ್ಚು ಕೇಳಿಬರುವುದು ಅತಿಯಾಗಿ ತಂಪು ಇರುವ ಪ್ರದೇಶಗಳಲ್ಲಿ ಅಂದರೆ ಸೂರ್ಯನ ಬೆಳಕು ಅಪರೂಪ ಎನ್ನುವಂತಹ ಪ್ರದೇಶಗಳಲ್ಲಿ. ಲಂಡನ್‌, ನಾರ್ವೆಯಂತಹ ದೇಶಗಳಲ್ಲಿ ಈ ತೆರನಾದ ರೋಗಿಗಳ ಸಂಖ್ಯೆ ಹೆಚ್ಚು. ಅಲ್ಲಿ ಯಾವಾಗ ಬಿಸಿಲು ಕಂಡುಬರುತ್ತದೋ ಆಗ ಅದರ ಆನಂದ ಪಡೆದುಕೊಳ್ಳಲು ಜನ ನಾ ಮುಂದೆ ತಾ ಮುಂದೆ ಎನ್ನುತ್ತಾರೆ. ಬಿಸಿಲು ಬರದೇ ಇರುವ ಪ್ರದೇಶದಲ್ಲಿ 10,000 ವ್ಯಾಟ್‌ಸಾಮರ್ಥ್ಯದ ಬೆಳಕಿನಲ್ಲಿ ಕುಳಿತು ಬಿಸಿಲಿನ ಕೊರತೆ ನೀಗಿಸಲು ಪ್ರಯತ್ನಿಸಲಾಗುತ್ತದೆ.

ಬಿಸಿಲನ್ನು ನಿಸರ್ಗ ಮನಸಾರೆಯೇ ಸ್ವಾಗತಿಸುತ್ತದೆ. ಹೂ ಅರಳುವುದು, ಕಾಯಿ ಹಣ್ಣಾಗುವುದು, ಬೆಳೆಗಳು ನಳನಳಿಸುವಂತಾಗಲು ಬಿಸಿಲು ಬೇಕೇಬೇಕು. ರೋಗಾಣುಗಳು ನಾಶವಾಗಲು ಬಿಸಿಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಬಿಸಿಲಿನ ಮಜ ಜೀವನದ ಆನಂದವನ್ನು ಹೆಚ್ಚಿಸುತ್ತದೆ.

ಬಿಸಿಲಿನ ಅಭಿಮಾನಿಗಳು

ಎಷ್ಟೋ ದೇಶದ ಪ್ರವಾಸಿಗರಂತೂ ಭಾರತದ ಬಿಸಿಲಿನ ಆನಂದ ಅನುಭವಿಸುವ ಪ್ರಮುಖ ಉದ್ದೇಶದಿಂದಲೇ ಭಾರತಕ್ಕೆ ಬರುತ್ತಾರೆ. ಮನೋತಜ್ಞರು ವಿಂಟರ್‌ಬ್ಲೂಸ್‌ರೋಗಿಗಳಿಗೆ ಬಿಸಿಲಿನ ಸಮೃದ್ಧಿಯಿರುವ ದೇಶಗಳಿಗೆ ಹೋಗಿ ಆರೋಗ್ಯ ಲಾಭ ಪಡೆದುಕೊಳ್ಳಲು ಸಲಹೆ ನೀಡುತ್ತಾರೆ. ಹಾಗೆಂದೇ ಸಮುದ್ರದ ಬಳಿ ಕಡಿಮೆ ಬಟ್ಟೆಯಲ್ಲಿ ಮೈಯೊಡ್ಡಿರುವ ಪ್ರವಾಸಿಗರು ನಮಗೆ ಕಂಡುಬರುತ್ತಾರೆ.

ಕೆಲವು ಹೋಟೆಲ್‌ ಮಾಲೀಕರು ಹೇಳುವ ಪ್ರಕಾರ, ಎಷ್ಟೋ ವಿದೇಶಿ ಪ್ರವಾಸಿಗರು ಅತಿ ಉಷ್ಣತೆಯಲ್ಲೂ ಫ್ಯಾನ್‌ಕೂಡ ಹಾಕೊಲ್ಲ. ತಾವು ಬಿಸಿಯನ್ನು ಎಂಜಾಯ್‌ಮಾಡುತ್ತೇವೆ. ಅದರಿಂದ ಬೆವರು ಹೋಗಿ ದೇಹ ಶುದ್ಧಗೊಳ್ಳುತ್ತದೆ ಎಂದು ಅವರು ಹೇಳುತ್ತಾರೆ.

ಬಿಸಿಲಿನ ಬಗ್ಗೆ ತಿರಸ್ಕಾರ ಬೇಡ

ಇಂದಿನ ಧಾವಂತದ ಜೀವನದಲ್ಲಿ ಜನರು ಬಹಳಷ್ಟು ವ್ಯಸ್ತರಾಗಿರುತ್ತಾರೆ. ಸುಖ ಸೌಲಭ್ಯಗಳನ್ನು ತಂದು ಜೀವನದಲ್ಲಿ ಬಗೆ ಬಗೆಯ ಖುಷಿ ಹೊಂದಲು ಶಾರ್ಟ್‌ ಕಟ್‌ದಾರಿ ಶೋಧಿಸುತ್ತಾರೆ. ಎ.ಸಿ., ಹೀಟರ್‌, ವಾರ್ಮರ್‌ಮುಂತಾದವು ಬಿಸಿಲಿಗೆ ಪರ್ಯಾಯ ಅಲ್ಲ.

ಆಹಾರವಷ್ಟೇ ಆರೋಗ್ಯವಾಗಿದ್ದರೆ ಸಾಲದು, ಜೀವನಶೈಲಿ ಕೂಡ ಚೆನ್ನಾಗಿರಬೇಕು.

ಯಾರಿಗೆ ಬಿಸಿಲಿನಲ್ಲಿ ಕುಳಿತುಕೊಳ್ಳುವುದು ಸಮಯ ಹಾಳು ಎನಿಸುತ್ತದೊ, ಅವರು ಆಫೀಸಿಗೆ 10-15 ನಿಮಿಷ ಮುಂಚೆ ಹೊರಟು ಬಿಸಿಲಿನ ಆನಂದ ಪಡೆದುಕೊಳ್ಳಬಹುದು.

ಹಗಲಿನ ತೀವ್ರ ಬಿಸಿಲಿನಲ್ಲಿ ಹಾನಿಕಾರಕ ಅಲ್ಟ್ರಾವಯ್ಲೆಟ್‌ಕಿರಣಗಳು ಹೊರಹೊಮ್ಮುತ್ತವೆ. ಹೀಗಾಗಿ ಅಂತಹ ಕಿರಣಗಳಿಂದ ರಕ್ಷಿಸಿಕೊಳ್ಳಿ. ಮುಂಜಾನೆ ಹಾಗೂ ಸಂಜೆಯ ಎಳೆಯ ಬಿಸಿಲು ಕಾಯಿಸುವುದು ಉತ್ತಮ.

ವ್ಯಸ್ತ ಜೀವನದಲ್ಲಿ ನಿಮಗಾಗಿಯೂ ಕೆಲವು ನಿಮಿಷಗಳನ್ನು ಮೀಸಲಿಟ್ಟುಕೊಳ್ಳಿ. ಏಕೆಂದರೆ ರೋಗಕ್ಕೆ ತುತ್ತಾಗಿ ಅದಕ್ಕಾಗಿ ನಿಮ್ಮ ಸಮಯ ಹಾಳಾಗಬಾರದಲ್ಲ.

ಬಿಸಿಲಿನ ಆನಂದ ಪಡೆಯುವುದರ ಮೂಲಕ ವಿಂಟರ್‌ಬ್ಲೂಸ್‌ನಿಂದ ನಮ್ಮನ್ನು ನಾವು ಏಕೆ ದೂರ ಇಟ್ಟುಕೊಳ್ಳಬಾರದು? ಬಿಸಿಲಿನಲ್ಲಿ ಸ್ವಲ್ಪ ಹೊತ್ತು ಆನಂದ ಪಡೆಯುವಂತೆ ನಮ್ಮ ಜೀವನವನ್ನು ರೂಪಿಸಿಕೊಳ್ಳಬೇಕು.

– ಸುರೇಖಾ

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ