ಸಾಮಾನ್ಯವಾಗಿ ಮದುವೆಯಾದ ಬಳಿಕ ತಂದೆತಾಯಿಯ ಮನೆಯನ್ನು ಬಿಟ್ಟುಹೋಗುವ ಯೋಚನೆ ಮಾಡಿಯೇ ಅನೇಕ ಹುಡುಗಿಯರ ನೆಮ್ಮದಿಗೆ ಭಂಗವುಂಟಾಗುತ್ತದೆ. ವಿದೇಶಿ ಹುಡುಗಿಯರಿಗಂತೂ ಇದು ಬಹಳ ದುಬಾರಿ ಎನಿಸುತ್ತದೆ. ಏಕೆಂದರೆ ಅವರು ತಮ್ಮ ಮನೆ ಗೆಳತಿಯರನ್ನಷ್ಟೇ ಬಿಟ್ಟು ಬರುವುದಿಲ್ಲ, ಸಂಸ್ಕೃತಿ, ಆಹಾರಪದ್ಧತಿ ಇವನ್ನೆಲ್ಲ ಬಿಟ್ಟು ಇನ್ನೊಂದು ದೇಶದ ಸಂಸ್ಕೃತಿಗೆ ತಮ್ಮನ್ನು ತಾವು ಒಗ್ಗಿಸಿಕೊಳ್ಳಬೇಕಾಗುತ್ತದೆ, ಎಂದೂ ನೋಡಿರದ ಆಹಾರವನ್ನು ಸೇವಿಸಬೇಕಾಗಿ ಬರುತ್ತದೆ.
ಇಷ್ಟೆಲ್ಲ ಆಗಿಯೂ ವಿದೇಶಿ ಸೊಸೆಯಂದಿರು ನಮ್ಮ ದೇಶವನ್ನು ಸದೃಢಗೊಳಿಸಲು ಬಹುಮೂಲ್ಯ ಪಾತ್ರ ವಹಿಸಿದ್ದಾರೆ. ಒಂದು ಸಂಗತಿ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ. ಅದೇನೆಂದರೆ, ನಮ್ಮ ದೇಶದ ವೀರ ಸೈನಿಕರಿಗೆ ಕೊಡಲಾಗುವ ಪರಮವೀರ ಚಕ್ರದ ವಿನ್ಯಾಸ ಮಾಡಿದ್ದು ವಿದೇಶಿ ಸೊಸೆ ಇವಾಲೆನ್ ಲಿಂಡಾ ಡೆ ಮೆಡೊಸ್. ಅವರು ಸೈನ್ಯಾಧಿಕಾರಿ ವಿಕ್ರಂ ಖಾನೋಲ್ ಕರ್ ಅವರ ಪತ್ನಿ, ಪುಣೆಯಲ್ಲಿರುವ ಅವರ ಕುರಿತಂತೆ ಅವರ ಸಂಬಂಧಿಕರು, ಪರಿಚಿತರನ್ನು ಮಾತನಾಡಿಸಿದಾಗ, ಇವಾಲೇನ್ ಅವರ ದೇಶ ಪ್ರೇಮದ ಬಗ್ಗೆ ತಿಳಿದುಬಂತು.
ಇಂದಿರಾ ಗಾಂಧಿಯವರ ಸೊಸೆ ಸೋನಿಯಾ ಗಾಂಧಿ ಕಾಂಗ್ರೆಸ್ ಪಕ್ಷದ ನೇತೃತ್ವ ವಹಿಸಿದ್ದಾರೆ. ಸೋನಿಯಾ ವಿದೇಶಿಯಾಗಿದ್ದರೂ, ಇಂದಿರಾ ಗಾಂಧಿ ಅವರಿಗೆ ಸಾಕಷ್ಟು ಮಹತ್ವ ಕೊಟ್ಟಿದ್ದರು. ಹೀಗಾಗಿ ಅವರು ಶಿಸ್ತಿನ ಸೊಸೆ ಎನಿಸಿಕೊಂಡರು. ಅತ್ತೆಯ ಅತ್ಯಂತ ವ್ಯಸ್ತತೆಯ ಕೆಲಸ ಕಾರ್ಯಗಳಲ್ಲಿ ಅವರ ಉಡುಪುಗಳ ಬಗ್ಗೆ ಹೆಚ್ಚಿನ ಗಮನ ವಹಿಸುತ್ತಿದ್ದರು. ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಅವನ್ನು ಕಪಾಟಿನಲ್ಲಿ ಇಡುವ ಕೆಲಸ ಮಾಡುತ್ತಿದ್ದರು. ಆಗ ಅವರು ರಾಜಕೀಯದ ಬಗ್ಗೆ ಏನೇನೂ ಆಸಕ್ತಿ ವಹಿಸಿರಲಿಲ್ಲ. ಆದರೆ ಸಂದರ್ಭ ಬಂದಾಗ ಅತ್ತೆಯಿಂದ ಕಲಿತ ರಾಜಕೀಯದ ಚಾಣಾಕ್ಷ ನೀತಿಯನ್ನು ಸೂಕ್ತ ಸಮಯದಲ್ಲಿ ಬಳಸಿಕೊಳ್ಳಲು ಮರೆಯಲಿಲ್ಲ.
ಬಾಲಿವುಡ್ ನಟಿ ಕಲ್ಕಿ ಕೋಚಲೀನ್ ಕೂಡ ನಿರ್ದೇಶಕ ಅನುರಾಗ್ ಕಶ್ಯಪ್‌ರನ್ನು ಮದುವೆಯಾಗಿ ಭಾರತೀಯ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದಾರೆ.
ಹಂಪಿ, ಬಾದಾಮಿ, ಬೇಲೂರು, ಹಳೆಬೀಡು, ಎಲ್ಲೋರಾ, ಗಯಾ, ಖಜುರಾಹೋ, ತಾಜಮಹಲ್ ಮುಂತಾದ ಸ್ಥಳಗಳಿಗೆ ಅನೇಕ ವಿದೇಶಿಯರು ಭೇಟಿ ಕೊಡುತ್ತಾರೆ. ಅಲ್ಲಿ ವಿದೇಶಿ ಯುವತಿಯರೊಂದಿಗೆ ಉಂಟಾದ ಪ್ರೀತಿ ಕ್ರಮೇಣ ಮದುವೆಯಲ್ಲಿ ಪರಿವರ್ತನೆಗೊಂಡ ಸಾಕಷ್ಟು ಉದಾಹರಣೆಗಳು ನಮ್ಮ ಮುಂದಿವೆ. ಇನ್ನೂ ಕೆಲವು ಭಾರತೀಯ ಯುವಕರು ಓದಿನ ನಿಮಿತ್ತ ಅಥವಾ ಉದ್ಯೋಗದ ಪ್ರಯುಕ್ತ ವಿದೇಶಗಳಿಗೆ ಹೋದಾಗ ಅಲ್ಲಿನ ಯುವತಿಯರ ಆಕರ್ಷಣೆಗೆ ಸಿಲುಕಿ ಮದುವೆ ಮಾಡಿಕೊಂಡು ಭಾರತಕ್ಕೆ ಕರೆತಂದಿದ್ದಾರೆ. ಭಾರತದ ಉದ್ದಗಲಕ್ಕೂ ಅಂತಹ ನೂರಾರು, ಸಾವಿರಾರು ವಿದೇಶಿ ಸೊಸೆಯರನ್ನು ಕಾಣಬಹುದು.
ಸಕಾರಾತ್ಮಕ ಯೋಚನೆಯುಳ್ಳವರು
ಶಶಿ (ಬದಲಿಸಲಾದ ಹೆಸರು) ಈ ಕುರಿತಂತೆ ಹೀಗೆ ಹೇಳುತ್ತಾರೆ, “ಮಗ ಜರ್ಮನಿಯ ಹುಡುಗಿಯನ್ನು ಮನೆಗೆ ಸೊಸೆಯಾಗಿ ಕರೆದುಕೊಂಡು ಬಂದಾಗ ನಾನು ಆಕೆಯಲ್ಲಿ ಏನೇನೋ ಲೋಪಗಳನ್ನು ಹುಡುಕಲು ಆರಂಭಿಸಿದೆ. ಆದರೆ ಅದರಲ್ಲಿ ಯಶಸ್ವಿಯಾಗಲಿಲ್ಲ. ಅವಳು ಅತ್ಯಂತ ಮುಕ್ತ ಸ್ವಭಾವದವಳು. ನಾವು ಹೇಳಿಕೊಟ್ಟ ಪ್ರತಿಯೊಂದು ಸಂಗತಿಯನ್ನು ಚಾಚೂ ತಪ್ಪದೇ ಪಾಲಿಸುತ್ತಾಳೆ, ಏನೇ ಮಾಡಿದರೂ ಮನಸಾರೆ ಮಾಡುತ್ತಾಳೆ. ನನ್ನ ಮೊಮ್ಮಗಳ ಚಹರೆ ನನ್ನ ಹಾಗೆಯೇ ಇರುವುದನ್ನು ಕಂಡು ಆಕೆಗೆ ಖುಷಿಯೋ ಖುಷಿ. ಈ ಎಲ್ಲ ಕಾರಣಗಳಿಂದ ನಾವು ಆಕೆಯನ್ನು ಮನಸಾರೆ ಸೊಸೆಯೆಂದು ಒಪ್ಪಿಕೊಂಡಿದ್ದೇವೆ.”
ಮನೋತಜ್ಞ ಡಾ. ವಿಕಾಸ್ ಕುಮಾರ್ ಹೀಗೆ ಹೇಳುತ್ತಾರೆ, “ಎಲ್ಲವನ್ನೂ ಬದಿಗೊತ್ತಿ ವಿದೇಶಿ ಹುಡುಗಿಯೊಬ್ಬಳನ್ನು ಸೊಸೆಯೆಂದು ಒಪ್ಪಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ. ಅದಕ್ಕಾಗಿ ಉದಾರ ದೃಷ್ಟಿಕೋನ, ಸಕಾರಾತ್ಮಕ ವಿಚಾರ ಅತ್ಯವಶ್ಯ. ಇಡೀ ವಿಶ್ವದಲ್ಲಿ ಬಹುತೇಕ ಕಡೆ ಮದುವೆಯಾದ ಹುಡುಗಿ ಗಂಡನ ಮನೆಗೆ ಹೊರಟು ಹೋಗುತ್ತಾಳೆ. ಹೀಗಾಗಿ ಪುರುಷನಿಗೆ ಹೋಲಿಸಿದರೆ ಮಹಿಳೆಯರಲ್ಲಿ ಬದಲಾವಣೆಯ ಪ್ರಕ್ರಿಯೆ ಹೆಚ್ಚಿನ ಪ್ರಮಾಣದಲ್ಲಿರುತ್ತದೆ. ಪರಿವರ್ತನೆಯ ಪ್ರಕ್ರಿಯೆಯಲ್ಲಿ ಅವರ ಮೆದುಳಿನ ಕೆಮಿಕಲ್ ಕೂಡ ಅವರಿಗೆ ನೆರವಾಗುತ್ತದೆ.
ವಿಶ್ವಾಸಾರ್ಹತೆ ಉಳಿಸಿಕೊಳ್ಳುವ ಸೊಸೆಯಂದಿರು…..
ಡಾ. ಅನುರಾಧಾ ಹೇಳುವುದೇನೆಂದರೆ, ಮೊದಲು ಜನರು ವಿದೇಶಿ ಸೊಸೆಯೊಂದಿಗೆ ಹೊಂದಾಣಿಕೆ ಆಗುತ್ತೊ, ಇಲ್ಲವೋ ಎಂದು ಹೆದರುತ್ತಿದ್ದರು. ಅವಳು ನಮ್ಮ ಮಾತು ಕೇಳುತ್ತಾಳೊ ಇಲ್ಲವೋ ಎಂಬ ಆತಂಕ ಇರುತ್ತಿತ್ತು. ಆದರೆ ವಿದೇಶಿ ಸೊಸೆಯರು ವಿಶ್ವಾಸಾರ್ಹವಾಗಿರುತ್ತಾರೆ, ಮನಸಾರೆ ಪ್ರೀತಿಸುವವರಾಗಿರುತ್ತಾರೆ. ಇದರಿಂದ ಭಾರತೀಯ ಸಮಾಜದಲ್ಲಿ ಅವರ ಪ್ರಭಾವ ಹೆಚ್ಚುತ್ತ ಹೊರಟಿದೆ. ಎಲ್ಲಕ್ಕೂ ಮಹತ್ವದ ಸಂಗತಿಯೆಂದರೆ, ಇಂತಹ ಮದುವೆಗಳಿಂದ ವರದಕ್ಷಿಣೆ ಪದ್ಧತಿ ಮುರಿದುಬೀಳುತ್ತಿದೆ.
ಶ್ಯಾಮಸುಂದರ ಅವರು ಹೇಳುವುದು ಹೀಗೆ, “ನಮ್ಮಲ್ಲಿ ಹುಡುಗಿಯರು ತಂದೆತಾಯಿಯರ ಮುಂದೆ ವಿನಮ್ರದಿಂದಿರುತ್ತಾರೆ. ಆದರೆ ಅತ್ತೆ ಮನೆಗೆ ಹೋಗುತ್ತಿದ್ದಂತೆ ಅಲ್ಲಿ ಸಕಲ ಸೌಲಭ್ಯಗಳು, ಕೆಲಸಕಾರ್ಯಗಳು, ವಿಶ್ರಾಂತಿ, ಸ್ವಾತಂತ್ರ್ಯದ ಕುರಿತಂತೆ ಉಗ್ರ ಧೋರಣೆ ಹೊಂದುತ್ತಾರೆ. ಕಾನೂನು ಕೂಡ ಅವರಿಗೇ ಬೆಂಬಲ ಕೊಡುತ್ತದೆ. ಈ ಕಾರಣದಿಂದ ಸೊಸೆಯೆಂದರೆ ಇಂದು ಜನರು ಹೆದರುವ ಹಾಗಾಗಿದೆ. ವಿದೇಶಿ ಸೊಸೆಯ ಮನೆಯವರು ತಮ್ಮ ಮಗಳ ಜೀವನದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ಹೀಗಾಗಿ ಆ ದಾಂಪತ್ಯ ಸರಿಯಾದ ದಾರಿಯಲ್ಲಿ ಸಾಗುತ್ತಿರುತ್ತದೆ.
ನಮ್ಮಲ್ಲಿ ಮಹಿಳೆಯರು ಸೆಕ್ಸ್ ನ್ನು ಉಡುಗೊರೆ ರೂಪದಲ್ಲಿ ಭಾವಿಸುತ್ತಾರೆ. ತಮಗೆ ಇಷ್ಟವಾದರೆ ಜೊತೆ ಕೊಡುತ್ತಾರೆ. ಇಲ್ಲವಾದರೆ ಇಲ್ಲ. ವಿದೇಶಿ ಸ್ತ್ರೀಯರ ಸಮಾನತೆಯ ಮಾತನ್ನು ಅವರು ಅನುಸರಿಸಲು ಹೋಗುವುದಿಲ್ಲ.
ಅಂತಹ ಕೆಲವು ಉದಾಹರಣೆಗಳನ್ನು ಗಮನಿಸೋಣ :
ಮದುವೆ ಹೊರೆಯಲ್ಲ, ಅದೊಂದು ಸುಂದರ ಟರ್ನ್ ಓವರ್ ಆಲಾ ದೆಹಲಿ ನಿವಾಸಿಯಾಗಿರುವ ಕಪಿಲ್ ಮತ್ತು ರಷ್ಯಾ ಮೂಲದ ಆಲಾ ಇಟಲಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಪರಿಚಯವಾದರು. ಆಲಾ ಒಳ್ಳೆಯ ಗಾಯಕಿ ಕೂಡ. ಅವರದ್ದೇ ಆದ ಸಿ.ಡಿ. ಕೂಡ ಹೊರಬಂದಿದೆ. ಯೋಗಾಭ್ಯಾಸದ ತರಬೇತಿ ಹಾಗೂ ನಾಟಕಗಳನ್ನು ನೋಡುವ ಹವ್ಯಾಸ ಅವರನ್ನು ಒಂದೆಡೆ ಸೆಳೆಯಿತು, 2-3 ವರ್ಷಗಳ ಸ್ನೇಹದ ಬಳಿಕ ಇಬ್ಬರೂ ಭಾರತೀಯ ಸಂಪ್ರದಾಯದ ಪ್ರಕಾರ, ದೆಹಲಿಯಲ್ಲಿ ಮದುವೆಯಾದರು.
ಆಲಾ ತಂದೆ ರಷ್ಯಾದಲ್ಲಿ ಪರಮಾಣು ವಿಜ್ಞಾನಿ. ಹೀಗಾಗಿ ಮಗಳ ಮದುವೆಯಲ್ಲಿ ಪಾಲ್ಗೊಳ್ಳಲು ಅವರಿಗೆ ದೆಹಲಿಗೆ ಬರಲು ವೀಸಾ ದೊರಕಲಿಲ್ಲ. ಇದು ಆಲಾಗೆ ಬಹಳ ದುಃಖವನ್ನುಂಟು ಮಾಡಿತು. ಆದರೆ ಅವರ ಅನೇಕ ಗೆಳತಿಯರು ಮಾತ್ರ ಮದುವೆಗೆ ಬಂದಿದ್ದರು.
ಆಲಾ ಈ ಕುರಿತು ಹೇಳುವುದು ಹೀಗೆ, “ನಿಮಗೇನು ಬೇಕು ಎನ್ನುವುದು ನಿಮಗೆ ಚೆನ್ನಾಗಿ ಗೊತ್ತಿರಬೇಕು. ಮದುವೆ ಕೇವಲ ಗಿವ್‌ಅಂಡ್ ಟೇಕ್ ಅಥವಾ ಚಾಲೆಂಜ್ ಅಲ್ಲ. ನೀವು ಏನು ಮಾಡಬೇಕೆನ್ನುತ್ತೀರೊ, ಅದನ್ನು ಮನಸಾರೆ ಮಾಡುತ್ತೀರಿ. ಹೀಗಾಗಿ ಮದುವೆಯನ್ನು ಎಂದೂ ಹೊರೆಯೆಂಬಂತೆ ಭಾವಿಸಬಾರದು. ಅದು ಜೀವನದ ಒಂದು ಸುಂದರ ಟರ್ನ್ ಓವರ್ ಆಗಿದೆ. ಸೆಕ್ಸ್, ಸ್ಟೆಬಿಲಿಟಿ, ಕಾಮನ್ ಗೋಲ್ ಹೀಗೆ ಅದೆಷ್ಟೋ ಸಂಗತಿಗಳು ಅನುಬಂಧವನ್ನು ಕಾಪಾಡುತ್ತವೆ. ನಿಮ್ಮ ಅಪೇಕ್ಷೆಗಳು ಎಷ್ಟು ಕಡಿಮೆಯಿರುತ್ತವೆಯೋ, ಮದುವೆ ಸಂಬಂಧ ಸಹ ಅಷ್ಟೇ ಸುಗಮವಾಗಿ ನಿಭಾಯಿಸಲ್ಪಡುತ್ತದೆ.
“ಜನರು ವಿದೇಶಿ ಸೊಸೆಯಂದಿರಿಂದ ಸಾಕಷ್ಟು ದೂರ ಇರಲು ನೋಡುತ್ತಾರೆ. ಇವಳು ನಮ್ಮ ನಡುವಿನವಳಲ್ಲ ಎಂದು ಅವರಿಗೆ ಅನಿಸುತ್ತದೆ. ಆದರೆ ವಿದೇಶಿ ಸೊಸೆ ಪ್ರತಿಯೊಬ್ಬರ ಸ್ಪೇಸ್ ಬಗೆಗೂ ಮಹತ್ವ ಕೊಡುತ್ತಾಳೆ, ಗೌರವ ವ್ಯಕ್ತಪಡಿಸುತ್ತಾಳೆ.
ಪ್ರೀತಿಯ ಸಂಕೋಲೆಯಲ್ಲಿ ಬಂಧಿಸಿದ ಆ ದಿನಗಳು ಡಾ. ಹೆಲಾಯ್ ಮತ್ತು ಡಾ. ಸುದರ್ಶನ್ ಡಾ ಹೆಲಾಯ್ ಆಫ್ಘಾನಿಸ್ತಾನದವಳು ಮತ್ತು ಡಾ. ಸುದರ್ಶನ್ ಭಾರತೀಯರು. ಈ ಕುರಿತಂತೆ ಡಾ. ಸುದರ್ಶನ್ ಅವರನ್ನು ಮಾತನಾಡಿಸಿದಾಗ ಅವರು ತಮ್ಮ ಪತ್ನಿಯ ನಂಬರ್ ಕೊಟ್ಟರು. ಬಳಿಕ ಡಾ. ಹೆಲಾಯ್ ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ಪ್ರೀತಿ ಚಿಗುರಿದ ಬಗ್ಗೆ ಹೇಳಿದರು.
ಭಾರತದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲೆಂದು ಅವರು ಬಂದಿದ್ದರು. ಈ ಅವಧಿಯಲ್ಲಿ ಅವರಿಗೆ ಸುದರ್ಶನ್ ಅವರ ಸ್ನೇಹವಾಯಿತು. ಬಳಿಕ ಸ್ನೇಹ ಮದುವೆಯಲ್ಲಿ ಪರಿವರ್ತನೆಗೊಂಡಿತು. ಡಾ. ಹಲಾಯ್ ಹೀಗೆ ಹೇಳುತ್ತಾರೆ, “ನಾನು ಯಾರ ಒತ್ತಡ ಇಲ್ಲದೆ ಸಸ್ಯಾಹಾರಿಯಾಗಿ ಪರಿವರ್ತನೆಯಾದೆ. ನಮಗೆ ಇಬ್ಬರು ಮಕ್ಕಳಿದ್ದಾರೆ.
“ಅವರು ಬೆಳೆದು ದೊಡ್ಡವರಾಗಿದ್ದಾರೆ. ಅವರ ಮೇಲೆ ನಾವು ಯಾವುದನ್ನೂ ಹೇರುವುದಿಲ್ಲ. ನನ್ನ ಮೇಲೂ ಕೂಡ ಪತಿ ಯಾವುದನ್ನೂ ಹೇರುವುದಿಲ್ಲ. ನಾನು ಅವರಿಗೆ ಪರಿಪೂರ್ಣ ಸ್ವಾತಂತ್ರ್ಯ ಮತ್ತು ಸ್ಪೇಸ್ ಕೊಡುತ್ತೇನೆ. ಅತ್ತೆ ಮಾವಂದಿರ ಪ್ರೀತಿ ನನ್ನನ್ನು ಸಂತಸದಲ್ಲಿ ತೇಲಿಸುತ್ತದೆ,” ವಿರೋಧದಿಂದ ಏನೂ ಸಾಧ್ಯವಿಲ್ಲ .
ಜಿನಿ 40 ವರ್ಷಗಳ ಮುಂಚೆ ರಾಜಸ್ತಾನದ ಉದಯಪುರಕ್ಕೆ ಬಂದಾಗ ಎಲ್ಲರಿಗೂ ಆಶ್ಚರ್ಯವಾಗಿತ್ತು. ಇಂದು ಅವರು ರಾಜಸ್ಥಾನಿ ಶೈಲಿಯಲ್ಲಿ ಅರಳು ಹುರಿದಂತೆ ಮಾತನಾಡುತ್ತಿದ್ದರೂ ಯಾರಿಗೂ ಅಚ್ಚರಿಯಾಗುವುದಿಲ್ಲ. ಅವರ ಪತಿ ಓಂಪ್ರಕಾಶ ಶ್ರೀವಾಸ್ತವ ಕೆಲವು ವರ್ಷಗಳ ಹಿಂದಷ್ಟೇ ತೀರಿಕೊಂಡಿದ್ದಾರೆ. ಅವರಿಗೆ ಒಬ್ಬ ಮಗ ಇದ್ದಾನೆ. ಅವನ ಮೇಲೆ ತಾನು ಏನೂ ಹೇರುವುದಿಲ್ಲ. ಅವನು ಯಾರನ್ನೇ ಆಗಲಿ ಸೊಸೆಯನ್ನಾಗಿ ಮಾಡಿಕೊಂಡು ಬರಬಹುದು. ಅದಕ್ಕೆ ನಾನು ಖಡಾಖಂಡಿತವಾಗಿ ಒಪ್ಪಿಕೊಳ್ಳುತ್ತೇನೆ, ಎಂದು ಜಿನಿ ಹೇಳುತ್ತಾರೆ.
ಜಿನಿ ಕೇವಲ ನೌಕರಿಯನ್ನೇ ಒಂದು ಗುರಿ ಎಂದು ಭಾವಿಸಲಿಲ್ಲ. ರಾಜಸ್ತಾನದಲ್ಲಿನ ಸತಿ ಪದ್ಧತಿ, ವಿಧವಾ ವಿವಾಹದ ಕುರಿತಂತೆ ಅವರು ಜಾಗೃತಿ ಮೂಡಿಸಿದ್ದಾರಲ್ಲದೆ, ಸಂಘಟನೆಯೊಂದನ್ನು ಕೂಡ ರಚಿಸಿದ್ದಾರೆ. ಈ ಸಂಘಟನೆಯಲ್ಲಿ ದೇಶಾದ್ಯಂತದ. ಸಾವಿರಾರು ಮಹಿಳೆಯರು ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಎಷ್ಟೋ ಜನ ಮಹಿಳೆಯರಿಗೆ ಅತ್ತೆಮನೆಯಲ್ಲಿ ಸಿಗಬೇಕಾದ ಹಕ್ಕುಗಳು ದೊರೆತಿವೆ. ಇನ್ನು ಕೆಲವರು ಗೌರವಪೂರ್ವಕ ಜೀವನ ನಡೆಸುತ್ತಿದ್ದಾರೆ.
ಭಾರತದ ಸೊಸೆಯಾಗಿ ಜಿನಿ ಅವರಿಗೆ ಖುಷಿಯಿದೆ. ಪ್ರತಿಯೊಬ್ಬ ವ್ಯಕ್ತಿಗೂ ಯಾವುದಾದರೊಂದು ಉದ್ದೇಶವಿರಬೇಕು. ಅದು ನನಗೆ ಇಲ್ಲಿ ಸಿಕ್ಕಿತು. ನನ್ನ ಓದು, ವಿದ್ಯೆ ಮತ್ತು ಮುಂದುವರಿಯಬೇಕೆಂಬ ಇಚ್ಛೆ ಮನೆ ಮಕ್ಕಳಿಗೆ ಮಾತ್ರ ಸೀಮಿತವಾಗುಳಿದಿಲ್ಲ.
ಅದು ಸಮಾಜದ ಕೆಲಸಕ್ಕೆ ಉಪಯುಕ್ತವಾಯಿತು ಮತ್ತು ಈಗಲೂ ಉಪಯೋಗಾಗುತ್ತಿದೆ.
ಕೇವಲ ವಿರೋಧ ಮಾಡಲು ಮತ್ತು ಹಕ್ಕುಗಳಿಗಾಗಿ ಎಚ್ಚರದಿಂದಿರುವುದಷ್ಟೇ ಸಾಲದು. ನೀವು ಅತ್ಯುತ್ತಮ ಪರ್ಯಾಯ ಮತ್ತು ಕರ್ತವ್ಯಕ್ಕಾಗಿ ಅಷ್ಟೇ ಜಾಗೃತಿಯಿಂದಿರ ಬೇಕಾಗುತ್ತದೆ. ಭಾರತೀಯ ಪುರುಷರು ಕುಟುಂಬ ವತ್ಸಲರು. ಆದರೆ ಕಾಲಕ್ಕೆ ತಕ್ಕಂತೆ ಪಾರಂಪರಿಕತೆಯ ಚಿಪ್ಪಿನಿಂದ ಅವರು ಹೊರಗೆ ಬರುತ್ತಿದ್ದಾರೆ. ಮಹಿಳೆಯು ಅತ್ತೆ ನಾದಿನಿ, ಹಿರಿ ಸೊಸೆ, ಕಿರಿಸೊಸೆಯ ವಿವಾದದಲ್ಲಿ ಸಿಲುಕಿ ಬೀಳುವುದಕ್ಕಿಂತ ಉದಾರತನ ಹಾಗೂ ಸಕಾರಾತ್ಮಕ ದೃಷ್ಟಿಕೋನ ಹೊಂದುವುದರತ್ತ ಒತ್ತು ಕೊಡಿ.
ಅತ್ತೆಯ ಮೆಚ್ಚಿನ ಸೊಸೆ ಉತ್ಪವ್
ಸೆರಾ ಅಮೆರಿಕನ್ ಮತ್ತು ಉತ್ಪವ್ ಭಾರತೀಯ. ಇವರಿಬ್ಬರ ಸಂಸಾರ ಕಳೆದ ಅನೇಕ ತಿಂಗಳಿಂದ ಸುಲಲಿತವಾಗಿ ನಡೆಯುತ್ತಿದೆ. ಪತಿ ಐಟಿ ಪ್ರೊಫೆಶನಲ್. ಸೆರಾ ಪಶು ಚಿಕಿತ್ಸಕಿ. ಉತ್ಪವ್ ರಿಗೆ ಅಪಘಾತ ಆದಾಗ ಟ್ರೀಟ್‌ಮೆಂಟ್ ಪಡೆಯುವ ಸಂದರ್ಭದಲ್ಲಿ ಇಬ್ಬರ ಭೇಟಿಯಾಗಿತ್ತು. ನಂತರ ಅದು ಮದುವೆಯಲ್ಲಿ ಪರಿವರ್ತನೆಗೊಂಡಿತ್ತು.
ಅವರ ಪತಿಗೆ ಇವರ ಪ್ರಾಣಿ ಪಕ್ಷಿಗಳ ಬಗೆಗಿನ ಪ್ರೀತಿ ಬಹಳ ಹಿಡಿಸಿತಂತೆ. ಜೊತೆಗೆ ಇವರು ತೋರಿಕೆ ಸ್ವಭಾದವರಲ್ಲ. ಇವರು ಅಮೆರಿಕನ್‌ರಾಗಿಯೂ ಸಸ್ಯಾಹಾರಿಯಾಗಿ ಇರುವುದೊಂದು ವಿಶೇಷ. ಸಾರಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ಪತಿ ನನ್ನನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಅವರು ಚೆನ್ನಾಗಿ ಅಡುಗೆ ಕೂಡ ಮಾಡುತ್ತಾರೆ. ನಾನು ಅವರಿಂದ ಅದೆಷ್ಟೋ ಅಡುಗೆ ಪದಾರ್ಥಗಳನ್ನು ಮಾಡಲು ಕಲಿತೆ.”
ಸೆರಾಳ ಅತ್ತೆ ಹೇಳುತ್ತಾರೆ, “ನಾನು ಬರುವವರೆಗೂ ಆಕೆ ಕಾಯುತ್ತಿರುತ್ತಾಳೆ. ನಾನು ಬರುತ್ತಿದ್ದಂತೆ ನೋಟ್ ಬುಕ್ ಹಿಡಿದು ಹತ್ತಿರ ಕೂರುತ್ತಾಳೆ. ಮೊದಲು ರೆಸಿಪಿ ಬರೆದುಕೊಳ್ಳುತ್ತಾಳೆ. ಬಳಿಕ ಎದುರುಗಡೆಯೇ ತನ್ನಿಂದ ಆ ಅಡುಗೆ ಮಾಡಿಸಲು ಹೇಳುತ್ತಾಳೆ. ಇಲ್ಲದಿದ್ದರೆ ತನ್ನಿಂದ ಅದನ್ನು ಕಲಿಯಲು ಆಗುವುದಿಲ್ಲ ಎಂದು ಹೇಳುತ್ತಾಳೆ. ಅವಳ ಈ ಕಲಿಕೆಯ ತುಡಿತ ಮತ್ತು ಉತ್ಸಾಹ ನನಗೆ ಬಹಳ ಹಿಡಿಸುತ್ತದೆ.
ಈ ನಿಟ್ಟಿನಲ್ಲಿ ನಮ್ಮಲ್ಲಿನ ವಧುಗಳು ಸ್ವಲ್ಪ ಜಿಪುಣರು. ನಾನು ಅವಳ ಹೆರಿಗೆ ಸಂದರ್ಭದಲ್ಲಿ 20 ದಿನ ಅಮೆರಿಕಾಕ್ಕೆ ಹೋಗಿದ್ದೆ. ಅವಳು ಹೆರಿಗೆಗೆಂದು ಆಸ್ಪತ್ರೆ ಸೇರಿದಳು. ನಾನು ಮನೆ ನೋಡಿಕೊಳ್ಳುವ ಜವಾಬ್ದಾರಿ ಹೊತ್ತುಕೊಂಡಿದ್ದೆ. ಮರುದಿನವೇ ಅವಳಿಗೆ ಹೆರಿಗೆಯಾಗಿತ್ತು. ನಾನು ಫೋನ್‌ನಲ್ಲಿಯೇ ಕೇಳಿಕೊಂಡು ಮನೆಯನ್ನೆಲ್ಲ ಸಂಭಾಳಿಸಿದೆ. ಆಸ್ಪತ್ರೆಯಿಂದ ಬರುತ್ತಲೇ ಆಕೆ ಮನೆಯ ವ್ಯವಸ್ಥೆ ನೋಡಿ ಖುಷಿಯಿಂದ ತುಂಬಿಹೋದಳು. ಆಕೆ ನನ್ನನ್ನುದ್ದೇಶಿಸಿ ಹೇಳಿದಳು, `ಇಷ್ಟು ಚೆನ್ನಾಗಿ ನನ್ನ ಅಮ್ಮ ಕೂಡ ಮನೆ ಸಿಂಗರಿಸುವುದಿಲ್ಲ.’ ಮುಗ್ಧತನದಿಂದ ಕೂಡಿದ ಅವಳ ಆ ಹೇಳಿಕೆ ನನಗೆ ಬಹಳ ಇಷ್ಟವಾಯಿತು. ಅವಳು ರೀತಿರಿವಾಜುಗಳ ಬಗ್ಗೆ ಕೇಳಿ ತಿಳಿದುಕೊಂಡು ಅದನ್ನು ಅನುಸರಿಸಲು ಪ್ರಯತ್ನಿಸುತ್ತಾಳೆ. ನಾವು ಆಕೆಯ ಮನೆಗೆ ಬಂದಾಗ ನಮ್ಮ ಪ್ರಕಾರ ಅವರ ಆದ್ಯತೆಗಳು ಕೂಡ ಬದಲಾಗಿ ಇರುತ್ತವೆ, ನಮ್ಮನ್ನು ಹೊರಗೆ ಸಾಕಷ್ಟು ಸುತ್ತಾಡಿಸುತ್ತಾಳೆ. ಮಕ್ಕಳನ್ನು ಎಷ್ಟೊಂದು ಅಚ್ಚುಕಟ್ಟಾಗಿ ಪಾಲಿಸುತ್ತಾಳೆಂದರೆ, ನಾವೆಲ್ಲ ಅವಳ ಕಾಳಜಿಗೆ ದಂಗಾಗಿಬಿಡುತ್ತಿದ್ದೆ. ಅವಳು ಒಳ್ಳೆಯ ಪತ್ನಿ ಅಷ್ಟೇ ಅಲ್ಲ, ಒಳ್ಳೆಯ ತಾಯಿ ಕೂಡ. ಯಾವುದೇ ಸ್ಥಿತಿಯಲ್ಲಿ ಖುಷಿಯಿಂದಿರಲು ಪ್ರಯತ್ನಿಸುತ್ತಿರುತ್ತಾಳೆ.”
ಬೇರೆ ದೇಶಕ್ಕೆ ಹೋಗಿ ದೊಡ್ಡ ಮಟ್ಟದಲ್ಲಿ ನಮ್ಮನ್ನು ನಾವು ಸಾಬೀತುಪಡಿಸುವುದು ಸುಲಭದ ಕೆಲಸವಲ್ಲ. ಒಂದು ದೇಶದಿಂದ ಇನ್ನೊಂದು ದೇಶದ ಜಲ, ವಾಯು, ವಾತಾವರಣ, ನಿಯಮ ಕಾನೂನು ಮತ್ತು ಆಂತರಿಕ, ಬಾಹ್ಯ ಸ್ಥಿತಿಗಳು ಭಿನ್ನವಾಗಿರುತ್ತವೆ. ವಿದೇಶಿ ಸೊಸೆಯರಿಗೆ ಎಲ್ಲ ಸುಖಕರವಾಗಿರುವುದಿಲ್ಲ. ಅವರು ಎಷ್ಟೋ ನಕಾರಾತ್ಮಕ ಸಂಗತಿಗಳನ್ನು ನಿರ್ಲಕ್ಷಿಸಿ ಹಲವಾರು ಹೊಂದಾಣಿಕೆಗಳನ್ನು ಮಾಡಲು ಕಲಿತುಕೊಳ್ಳುತ್ತಾರೆ. ಇದೆಲ್ಲ ಸುಲಭವಲ್ಲ. ಇಲ್ಲಿಯೇ ಬೆಳೆದು ದೊಡ್ಡವರಾದ ಮಗಳು ಸೊಸೆಯಂದಿರಿಗೆ ಎಷ್ಟೋ ಸಲ ಇದು ಕಷ್ಟದ ಕೆಲಸ ಎನಿಸುತ್ತದೆ.
ಈ ದೃಷ್ಟಿಯಿಂದ ವಿದೇಶಿ ಸೊಸೆಯಂದಿರು ಸಾಕಷ್ಟು ಪ್ರೇರಣಾದಾಯಕಾಗಿದ್ದಾರೆ. ಹೊಂದಾಣಿಕೆಯೇ ನಮ್ಮ ಪ್ರಕೃತಿಯೆಂಬ ದಾರಿಯ ಬೆನ್ನೆಲುಬು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
– ಡಾ. ರೇಖಾ
ಪರಂಪರೆ, ಧರ್ಮ ಕರ್ಮ ಮತ್ತು ಸಂಪ್ರದಾಯವಾದಿ ವಿಚಾರಗಳಿಂದ ದೂರ ಇವರು ವಿದೇಶಿ ಸೊಸೆಯಂದಿರು ಭಾರತೀಯ ಕುಟುಂಬಗಳ ಹೆಮ್ಮೆಯ ಪ್ರತೀಕವಾಗುತ್ತಿದ್ದಾರೆ. ತಮ್ಮ ವ್ಯವಹಾರ ಕೌಶಲದಿಂದ ಅವರು ಕೇವಲ ಮನೆಯವರ ಹೃದಯವನ್ನಷ್ಟೇ ಗೆಲ್ಲುತ್ತಿಲ್ಲ. ತಮ್ಮ ದೂರದರ್ಶಿ ಗುಣದಿಂದಾಗಿ ಮನೆಯಲ್ಲಿ ಸುಖಶಾಂತಿ ಕೂಡ ತರುತ್ತಿದ್ದಾರೆ.
“ನನ್ನ ಪತಿ ನನ್ನ ಮೇಲೆ ಏನನ್ನೂ ಹೇರುವುದಿಲ್ಲ. ನಾನೂ ಕೂಡ ಅವರಿಗೆ ಪರಿಪೂರ್ಣ ಸ್ವಾತಂತ್ರ್ಯ ಹಾಗೂ ಸ್ಪೇಸ್ ಕೊಡುತ್ತೇನೆ.” ಡಾ. ಹೆಲಾಯ್
“ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಯಾವುದಾದರೊಂದು ಉದ್ದೇಶ ಇರಲೇಬೇಕು. ಅದು ನನಗೆ ಇಲ್ಲಿ ದೊರಕಿತು. ಸಕಾರಾತ್ಮಕ ದೃಷ್ಟಿಕೋನ ಮೈಗೂಡಿಸಿಕೊಳ್ಳುವುದರಿಂದ ಸಂಬಂಧದ ಅಡಿಪಾಯ ಗಟ್ಟಿಗೊಳ್ಳುತ್ತದೆ.