ಮದುವೆಯೆನ್ನುವುದು ಪ್ರತಿಯೊಬ್ಬರ ಜೀವನದ ಒಂದು ಮಹತ್ವದ ನಿರ್ಧಾರವಾಗಿರುತ್ತದೆ. ಆದರೆ ಈಚೆಗೆ ಕೆರಿಯರ್‌ ಅಂದರೆ ವೃತ್ತಿ ಜೀವನವನ್ನು ರೂಪಿಸಿಕೊಳ್ಳುವುದು ಕೂಡ ಒಂದು ಪ್ರಮುಖ ನಿರ್ಧಾರವಾಗಿದೆ. ಪುರುಷರಷ್ಟೇ ಉದ್ಯೋಗ ಮಾಡಬೇಕೆಂಬ ಮೊದಲಿನ ದಿನಗಳು ಎಂದೋ ಮುಗಿದುಹೋದವು. ಈಗ ಹುಡುಗಿಯರಿಗೆ ಮೊದಲು ಕೆರಿಯರ್‌, ನಂತರ ವಿವಾಹದ ಬಗ್ಗೆ ಯೋಚನೆ ಬರುತ್ತದೆ. ಒಮ್ಮೊಮ್ಮೆ ಪರಿಸ್ಥಿತಿ ಹೇಗಾಗಿ ಬಿಡುತ್ತದೆಯೆಂದರೆ, ಕೆರಿಯರ್‌ ರೂಪಿಸಿಕೊಳ್ಳುತ್ತಾ ಸಾಕಷ್ಟು ವರ್ಷಗಳೇ ಕಳೆದುಹೋಗುತ್ತವೆ. ಆಗ ಅವರಿಗೆ ಮದುವೆಯ ವಿಚಾರ ಬರುತ್ತದೆ. ಅಷ್ಟರಲ್ಲಿ ಅದೆಷ್ಟು ವಿಳಂಬವಾಗಿರುತ್ತದೆಂದರೆ, ನಾನು ಹಿಂದೆಯೇ ಈ ವಿಚಾರ ಮಾಡಬೇಕಿತ್ತು ಎಂದು ಅನಿಸತೊಡಗುತ್ತದೆ.

ಇಂತಹ ಮಾತುಗಳು ಈಗ ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿವೆ. ತಂದೆತಾಯಿಗಳೊ ಮಗಳ ಮದುವೆಗಾಗಿ ಅದೆಷ್ಟೋ ಚಿಂತಾಕ್ರಾಂತರಾಗಿದ್ದಾರೆ. ಆದರೆ ಮಗಳು ಮಾತ್ರ ನನಗೀಗಲೇ ಮದುವೆ ಬೇಡ ಎನ್ನುತ್ತಾ ಅದನ್ನು ಮುಂದೂಡುತ್ತಲೇ ಹೊರಟಿದ್ದಾಳೆ. ಹುಡುಗಿಯರು ತಡವಾಗಿ ಮದುವೆಯಾಗುವುದು ಈಗ ಸಾಮಾನ್ಯವಾಗಿದೆ.

ತಂದೆ ತಾಯಿಯರ ದೃಷ್ಟಿಕೋನದಿಂದ ನೋಡಿದರೆ, ಇದು ಅತ್ಯಂತ ಒತ್ತಡದ ವಿಷಯ. ತಮ್ಮ ಮಗಳಿಗೆ ಒಳ್ಳೆಯ ವರ ಸಿಗಬೇಕು ಎನ್ನುವುದು ಪ್ರತಿಯೊಬ್ಬ ತಂದೆತಾಯಿಗಳ ಅಭಿಲಾಷೆಯಾಗಿರುತ್ತದೆ. ಅದೊಂದು ಸಲ ಒಳ್ಳೆಯ ಹುಡುಗ ಸಿಕ್ಕೇ ಬಿಡುತ್ತಾನೆ. ಮಗಳು ಒಪ್ಪಿಯೇ ಬಿಡುತ್ತಾಳೆ ಎಂದು ತಂದೆತಾಯಿ ಅಂದುಕೊಂಡಿರುತ್ತಾರೆ. ಆದರೆ ಆಕೆ ಆ ಕ್ಷಣವೇ ಬೇಡ ಎಂದುಬಿಡುತ್ತಾಳೆ. ಆಗ ತಂದೆತಾಯಿಗಳಿಗೆ ಮಗಳು ಏಕೆ ಬೇಡ ಎನ್ನುತ್ತಿದ್ದಾಳೆ ಎಂಬ ಬಗ್ಗೆ ಆಶ್ಚರ್ಯವಾಗುತ್ತದೆ. ಅವರ ಮನಸ್ಸಿನಲ್ಲಿ ನೂರಾರು ಪ್ರಶ್ನೆಗಳು ಏಳುತ್ತವೆ. ತಡವಾಗಿ ಮದುವೆಯಾಗುವ ಕಾರಣಗಳು ಹಾಗೂ ಅದರ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳೋಣ.

ಸದ್ಯ ಮದುವೆ ಬೇಡ ಏಕೆ?

ಮದುವೆಯ ಬಳಿಕ ಕೆರಿಯರ್‌ ರೂಪಿಸಲು ಸಾಧ್ಯವೇ ಇಲ್ಲವೆಂದು ಬಹಳಷ್ಟು ಹುಡುಗಿಯರು ಭಾವಿಸಿರುತ್ತಾರೆ. ಮದುವೆಗೆ ಮುಂಚೆ ಏನೇನು ಸಾಧನೆ ಮಾಡಬೇಕೊ ಮಾಡಿಬಿಡಬೇಕು. ಪ್ರಸ್ತುತ ಸನ್ನಿವೇಶದಲ್ಲಿ ಓದಿಗೆ ಹಾಗೂ ಒಳ್ಳೆಯ ಪ್ಲೇಸ್‌ ಮೆಂಟ್‌ಗೆ ಹೆಚ್ಚಿನ ಪ್ರಾಮುಖ್ಯತೆ ಕೊಡಲಾಗುತ್ತಿದೆ. ಇಂದಿನ ಯುವತಿಯರು ಹೆಚ್ಚು ಮಹತ್ವಾಕಾಂಕ್ಷಿಗಳಾಗುತ್ತಿದ್ದಾರೆ. ಅವರು ಏನನ್ನಾದರೂ ಮಹತ್ವದ್ದನ್ನು ಸಾಧಿಸಬೇಕೆನ್ನುತ್ತಿದ್ದಾರೆ. ಎಲ್ಲೋ ಒಂದು ಕಡೆ ನೌಕರಿ ಸಿಕ್ಕರೆ, ಅದರಲ್ಲಿ ಅವರಿಗೆ ತೃಪ್ತಿ ದೊರೆಯದೇ ಇದ್ದಲ್ಲಿ ಹೊಸದೊಂದು ಒಳ್ಳೆಯ ನೌಕರಿಯ ಶೋಧದಲ್ಲಿ ಅವರು ಸದಾ ನಿರತರಾಗಿರುತ್ತಾರೆ.

ಈ ಚಕ್ರ ಹೀಗೆಯೇ ಮುಂದುವರಿಯುತ್ತಿರುತ್ತದೆ. ಒಂದು ಕಡೆಯಿಂದ ಇನ್ನೊಂದು ಕಡೆ ನೌಕರಿ ಬದಲಾಗುತ್ತ ವಯಸ್ಸು ಕೈಯಿಂದ ಜಾರಿ ಹೋಗುತ್ತಿರುತ್ತದೆ. ಅವರ ಗಮನವೆಲ್ಲ ಸದಾ ನೌಕರಿಯ ಮೇಲೆ ಇರುವುದರಿಂದ ಮದುವೆಯ ವಿಷಯ ಯಾವಾಗಲೂ ಕೊನೆಯ ಸ್ಥಾನದಲ್ಲಿಯೇ ಉಳಿದುಬಿಡುತ್ತದೆ.

ಯುವತಿಯರ ಮದುವೆಗೆ ತಡವಾಗುವುದರ ಮತ್ತೊಂದು ಮುಖ್ಯ ಕಾರಣವೆಂದರೆ, ಅವರು ಮುಖ್ಯ ಹುದ್ದೆಯಲ್ಲಿ ಆಸೀನರಾಗಿದ್ದರೆ, ತಮಗಿಂತ ಕಡಿಮೆ ಅರ್ಹತೆಯ ಹುಡುಗರು ಅವರಿಗೆ ಇಷ್ಟವಾಗುವುದಿಲ್ಲ. ಯಾವ ರಾಜಕುಮಾರ ಅಥವಾ `ಮಿಸ್ಟರ್‌ ರೈಟ್‌’ನ ಶೋಧದಲ್ಲಿರುತ್ತಾರೊ ಅವನು ಸಿಗುವುದಿಲ್ಲ. ತಂದೆತಾಯಿಗೆ ಇಷ್ಟವಾದವನು ಆಕೆಗೆ ಹಿಡಿಸುವುದಿಲ್ಲ. ಈ ಕಾರಣದಿಂದ ಮನೆಯಲ್ಲಿ ಎಷ್ಟೋ ಸಲ ಜಗಳ ಕೂಡ ಆಗುತ್ತದೆ.

ತಡವಾಗಿ ಮದುವೆಯಾಗಲು ಮತ್ತೊಂದು ಮುಖ್ಯ ಕಾರಣವೆಂದರೆ, ಹುಡುಗಿಗೆ ಈಗಾಗಲೇ ಯಾರೊಂದಿಗಾದರೂ ಅಫೇರ್ ಇದ್ದಿರಬಹುದು. ಆಕೆ ಅದರಲ್ಲಿ ಯಶಸ್ವಿಯಾಗದೇ ಇರುವುದು ಅಥವಾ ಹುಡುಗ ಕೈಕೊಟ್ಟು ಹೋಗಿರುವುದು ಆಕೆಯ ಮನಸ್ಸಿಗೆ ಆಘಾತವನ್ನುಂಟು ಮಾಡಿರುತ್ತದೆ. ಅಪ್ಪ ಅಮ್ಮನ ಭಾವನೆ ಗುರುತಿಸಿ ಹುಡುಗಿಯರು ತಮ್ಮ ಕೆರಿಯರ್‌ನಲ್ಲಿ ಸದಾ ವ್ಯಸ್ತರಿರುತ್ತಾರೆ. ಇಲ್ಲಿ ಬೇರಾವುದೊ ಕಾರಣದಿಂದ ಸದ್ಯ ಮದುವೆಯ ಬಂಧನದಲ್ಲಿ ಸಿಲುಕಲು ಇಷ್ಟಪಡುವುದಿಲ್ಲ. ಆದರೆ ಅಪ್ಪ ಅಮ್ಮ ತಮ್ಮ ಮಗಳ ಮದುವೆಗಾಗಿ ಅದೆಷ್ಟೋ ಕನಸು ಕಂಡಿರುತ್ತಾರೆ ಎಂಬುದನ್ನು ಗಮನಿಸುವುದು ಅಷ್ಟೇ ಅತ್ಯವಶ್ಯ. ತಮ್ಮ ಮಗಳ ಜೀವನ ಸುರಕ್ಷಿತವಾಗಿರಲಿ ಎಂಬುದು ಪ್ರತಿಯೊಬ್ಬ ತಂದೆತಾಯಿಯ ಅಪೇಕ್ಷೆಯಾಗಿರುತ್ತದೆ. ಉತ್ತಮ ವರನ ಶೋಧದ ಪ್ರಯತ್ನದಲ್ಲಿ ಅವರು ಸದಾ ಇರುತ್ತಾರೆ. ಆದರೆ ಮಗಳು ಮಾತ್ರ ಸದಾ ನಿರಾಕರಿಸುತ್ತಲೇ ಹೋಗುತ್ತಾಳೆ.

ತಂದೆತಾಯಿಯರ ಪರಂಪರಾಗತ ತರ್ಕ ಏನೆಂದರೆ, ಕೆರಿಯರ್‌ಗಿಂತ ಮದುವೆ ಮುಖ್ಯ. ಆಗಲೇ ನಿನ್ನ ಜೀವನ ಸೆಟ್‌ ಆಗೋದು. ಆದರೆ ಮಗಳ ತರ್ಕ ಇದಕ್ಕೆ ತದ್ವಿರುದ್ಧ.

ತಂದೆತಾಯಿ ಸಾಕಷ್ಟು ಪ್ರಯತ್ನ ಮಾಡುತ್ತಾರೆ. ಆದರೆ ಮಗಳು ಒಪ್ಪದೇ ಇದ್ದಾಗ ಅವರು ಅನಿವಾರ್ಯವಾಗಿ ಸುಮ್ಮನೇ ಉಳಿದುಬಿಡುತ್ತಾರೆ. ಕಾಲನ್ನು ಹಳಿಯುತ್ತಾ ಅವರಿಗೆ ವಯಸ್ಸೇ ಆಗಿಬಿಡುತ್ತದೆ. ಹೀಗೆಯೇ ಜೀವನದ ಸಂಧ್ಯಾಕಾಲ ಬಂದುಬಿಡುತ್ತದೆ.

ಸ್ತ್ರೀರೋಗ ತಜ್ಞರ ದೃಷ್ಟಿಯಲ್ಲಿ

ಸ್ತ್ರೀರೋಗ ತಜ್ಞೆ ಡಾ. ಸಾಧನಾ ಪ್ರಕಾರ, ಮದುವೆಯ ಬಳಿಕ ಸೂಕ್ತ ವಯಸ್ಸಿನಲ್ಲಿಯೇ ಮಗುವಿಗೆ ಜನ್ಮ ನೀಡುವುದು ಸಮರ್ಪಕವಾಗಿರುತ್ತದೆ. ಅವರ ಪ್ರಕಾರ, 2027ರವರೆಗಿನ ವಯಸ್ಸು ಗರ್ಭಧಾರಣೆಗೆ ಅತ್ಯಂತ ಪ್ರಶಸ್ತ ಸಮಯವಾಗಿರುತ್ತದೆ. ಆಗ ದೈಹಿಕ ರಚನೆ ಗರ್ಭಧಾರಣೆಗೆ ಅಷ್ಟೊಂದು ಕಿರಿಕಿರಿ ಎನಿಸುವುದಿಲ್ಲ. 30 ವರ್ಷದ ಬಳಿಕ ಗರ್ಭಧಾರಣೆಗೆ ಸಾಕಷ್ಟು ತೊಂದರೆ ತಾಪತ್ರಯಗಳು ಕಾಣಿಸಿಕೊಳ್ಳುತ್ತವೆ. 35ನೇ ವರ್ಷದ ಬಳಿಕ ದೇಹದಲ್ಲಿ ತೊಂದರೆಗಳು ಹೆಚ್ಚುತ್ತವೆ. 40ನೇ ವರ್ಷದ ಬಳಿಕ ತಾಯಿಯಾಗುವುದೇ ಕಠಿಣ ಎಂಬಂತಾಗಿಬಿಡುತ್ತದೆ. ಏಕೆಂದರೆ ಎಷ್ಟೋ ಸಲ ಮುಟ್ಟಂತ್ಯ ಬಹುಬೇಗನೇ ಬಂದುಬಿಡುತ್ತದೆ.

ಹೀಗಾಗಿ ಸೂಕ್ತ ವಯೋಮಾನದಲ್ಲಿ ಮದುವೆಯಾಗುವುದು ಅತ್ಯವಶ್ಯ. ಆಗ ಗರ್ಭಧಾರಣೆ ಸಮಸ್ಯೆಗಳು ಕಡಿಮೆ ಇರುತ್ತವೆ. 30ರೊಳಗಿನ ವಯಸ್ಸಿನಲ್ಲಿ ದೇಹದ ಅಂಗಾಂಗಗಳು ಆರೋಗ್ಯದಿಂದಿರುತ್ತವೆ ಮತ್ತು ಗರ್ಭದ ಹಲವು ತೊಂದರೆಗಳಿಂದ ರಕ್ಷಿಸಿಕೊಳ್ಳಬಹುದಾಗಿದೆ.

ಹಲವು ಪ್ರಶ್ನೆಗಳು ಉದ್ಭವ

ಒಬ್ಬರ ಮದುವೆ ಏಕೆ ತಡವಾಗುತ್ತಿದೆ ಅಥವಾ ಹುಡುಗಿ ಸದ್ಯಕ್ಕೆ ಮದುವೆ ಏಕೆ ಬೇಡ ಎನ್ನುತ್ತಿದ್ದಾಳೆ? ಸಮಾಜದಲ್ಲಿ ಈ ಪ್ರಶ್ನೆಗಳು ಏಳುತ್ತವೆ. ಸಮಾಜ ಈ ಬಗ್ಗೆ ಏನೂ ಕೇಳದೇ ಇದ್ದರೂ ಸಾಮಾಜಿಕ ಜೀವಿಯಾಗಿ ನಾವು ಈ ಬಗ್ಗೆ ಸ್ವಲ್ಪ ಗಮನಹರಿಸಲೇಬೇಕು. ಏಕೆಂದರೆ ಇವೆಲ್ಲ ಪ್ರಶ್ನೆಗಳು ಏಳುವುದು ಸಹಜವೇ. ನೀವು ಬಿಂದಾಸ್‌ ಆಗಿರಿ, ಆದರೆ ನೀವು ಇದೇ ಸಮಾಜದೊಂದಿಗೆ ನಂಟು ಹೊಂದಿದ್ದೀರಿ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿ.

ವಿಳಂಬ ಮದುವೆ ನೂರಾರು ತೊಂದರೆಗಳು ಎಂಬುದನ್ನು ಗಮನದಲ್ಲಿಟ್ಟುಕೊಂಡು ಮುಂದೆ ಸಾಗಿ. ಕೆರಿಯರ್‌ ರೂಪಿಸಿಕೊಳ್ಳಲು ಅಥವಾ ಬೇರೆ ಯಾವುದೇ ಕಾರಣದಿಂದ ನೀವು ಮದುವೆಯನ್ನು ಮುಂದೂಡುತ್ತ ಹೋದರೆ ತಂದೆತಾಯಿಗೆ ಆತಂಕ ಆಗುವುದು ಸಹಜವೇ, ನಿಮಗೂ ಕೂಡ ಏನು ತಾನೆ ಸಿಗುತ್ತದೆ. ಇಂತಹದರಲ್ಲಿ ನಿಮಗೆ ಸೂಕ್ತ ವರ ಸಿಗುತ್ತಾನೆಯೇ? ಸಿಕ್ಕರೂ ವಿಚ್ಛೇದನ ಕೊಟ್ಟ ಇಲ್ಲಿ ವಿಧುರನೇ ಸಿಗಬಹುದು. ನಿಮ್ಮ ಹಾಗೆ ವಿಳಂಬ ಮದುವೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡವರು ಎಷ್ಟು ಜನ? ಇಂತಹ ನಿರ್ಧಾರ ಕೈಗೊಂಡು ಮುಂದೆ ಅನೇಕರು ಪಶ್ಚಾತ್ತಾಪಪಡುತ್ತಾರೆ. ಹೀಗಾಗಿ ಸಕಾಲದಲ್ಲಿ ಸೂಕ್ತ ನಿರ್ಧಾರ ಕೈಗೊಳ್ಳುವುದು ಅತ್ಯವಶ್ಯ.

– ರಜನಿ ಕುಲಕರ್ಣಿ

ಸರಿಯಾದ ಯೋಜನೆ ಅಗತ್ಯ

ಆಂಗ್ಲ ಭಾಷೆಯಲ್ಲೊಂದು ಮಾತಿದೆ `ಓವರ್‌ ದಿ ಹಿಲ್‌.’ ಇದರ ಅರ್ಥ ಯಾವುದೇ ಕೆಲಸ ಮಾಡುವ ವಯಸ್ಸು ಮುಗಿದು ಹೋಗುವುದಾಗಿದೆ. ಈ ಮಾತು ಆ ಹುಡುಗಿಯರಿಗೆ ಸರಿಯಾಗಿ ಅನ್ವಯಿಸುತ್ತದೆ.

ಅವರು ಮದುವೆ ಮಾಡಿಕೊಳ್ಳಬೇಕಾದ ವಯಸ್ಸಿನಲ್ಲಿ ಅದರಿಂದ ದೂರ ದೂರ ಉಳಿಯುತ್ತಾರೆ ಹಾಗೂ ವಯಸ್ಸು ಮೀರಿದ ಮೇಲೆ ಮದುವೆಗಾಗಿ ಪರಿತಪಿಸಲಾರಂಭಿಸುತ್ತಾರೆ. ಈಗ ಹುಡುಗಿಯರೂ ತಮ್ಮ ಕೆರಿಯರ್‌ಗೆ ಮಹತ್ವ ಕೊಡುತ್ತಿರುವುದು ಒಳ್ಳೆಯ ಸಂಗತಿಯೇ.

ಆದರೆ ಒಮ್ಮೊಮ್ಮೆ ಕೆರಿಯರ್‌ ರೂಪಿಸಿಕೊಳ್ಳುವ ಒತ್ತಡಕ್ಕೆ ಸಿಲುಕಿ ಮದುವೆಯ ಬಗ್ಗೆ ನಿರ್ಲಕ್ಷ್ಯ ತೋರಿಸುತ್ತಾರೆ. ಸಾಮಾನ್ಯವಾಗಿ ಹುಡುಗಿಯರು ಮದುವೆಯ ಬಳಿಕ ಕೆರಿಯರ್‌ ಬಗ್ಗೆ ಗಮನ ಕೇಂದ್ರೀಕರಿಸಲು ಆಗುವುದಿಲ್ಲ ಎಂದು ಭಾವಿಸಿರುತ್ತಾರೆ.

ಕ್ಲಿನಿಕ್‌ ಸೈಕಾಜಿಸ್ಟ್ ಡಾ. ಶಿಲ್ಪಾ ಅವರು ಹೇಳುವುದೇನೆಂದರೆ, ಕೆಲವು ದಿನಗಳ ಹಿಂದೆ ಒಬ್ಬ ಹುಡುಗಿ ಒಂದು ಸಮಸ್ಯೆ ಹೊತ್ತುಕೊಂಡು ನನ್ನ ಬಳಿ ಬಂದಿದ್ದಳು. ಅವಳ ಮದುವೆಯ ದಿನಾಂಕ ನಿಗದಿಯಾಗಿತ್ತು. ಅಷ್ಟರಲ್ಲಿ ಅವಳಿಗೆ ಅಮೆರಿಕಕ್ಕೆ ಹೋಗುವ ಆಫರ್‌ ಬಂದಿತ್ತು. ತನ್ನ ಕೆರಿಯರ್‌ನ್ನು ಗಮನದಲ್ಲಿಟ್ಟುಕೊಂಡು ಆಕೆ ಮದುವೆ ದಿನಾಂಕ ಮುಂದೂಡುವಂತೆ ಆಗ್ರಹಿಸುತ್ತಿದ್ದಳು.

ಆದರೆ ಆಕೆಯ ಮನೆಯವರು ಮಾತ್ರ ತಯಾರಿರಲಿಲ್ಲ. ಇಂತಹ ಸ್ಥಿತಿಯಲ್ಲಿ ನಾನು ಆಕೆಗೆ ಮದುವೆಯ ಕೆಲವು ಶಾಸ್ತ್ರಗಳನ್ನು ಪೂರೈಸಿ ಅಮೆರಿಕಕ್ಕೆ ಹೊರಟುಹೋಗು ಎಂದು ಹೇಳಿದೆ. ಆಕೆ ತನ್ನ ಮನೆಯವರಿಗೆ ಕೆರಿಯರ್‌ನಲ್ಲಿ ಮದುವೆಯನ್ನು ಅಡ್ಡ ತರಬೇಡಿ ಎಂದು ಹೇಳಿದಳು. ಅಂದಹಾಗೆ ಇಂತಹ ಪ್ರಕರಣಗಳಲ್ಲಿ ಸರಿಯಾದ ಪ್ಲ್ಯಾನಿಂಗ್‌ ಅತ್ಯವಶ್ಯ. ಅದನ್ನು ಹುಡುಗಿ ಹಾಗೂ ಹುಡುಗನ ಮನೆಯವರು ಸೇರಿಯೇ ಕೈಗೊಳ್ಳಬೇಕು.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ