ಅಂದು ಲಲಿತಾಳಿಗೆ ಪಾರ್ಲರ್‌ನಲ್ಲಿ ಅಪಾಯಿಂಟ್‌ಮೆಂಟ್‌ ಇತ್ತು. ಮದುವೆಯಾದ ಹೊಸತರಲ್ಲಿ ಅವಳಿಗೆ ಎಲ್ಲವೂ ಬಲು ರೋಮಾಂಚಕಾರಿಯಾಗಿತ್ತು. ಆದರೆ ಈಗ ಇದೆಲ್ಲ ಅವಳಿಗೆ ಒಂದು ವಿಧದ ಶಿಕ್ಷೆ ಎನಿಸತೊಡಗಿತು. ಕಾರಣ, ಹಿಂದೆಲ್ಲ ಇಂಥದ್ದು ಬೇಕೆಂದು ಅವಳು ಬಯಸುತ್ತಿದ್ದುದುಂಟು. ಆದರೆ ಈಗ ಅವಳ ತನುಮನಗಳೆರಡೂ ಇದರಿಂದ ರೋಸಿಹೋಗಿತ್ತು.

ಮದುವೆಯಾದಾಗ ಲಲಿತಾಳಿಗೆ 27 ವರ್ಷ. ಬಟ್ಟಲು ಕಂಗಳ ಚೆಲುವೆ, ತುಸು ಎತ್ತರದ ಮೂಗು, ಗುಲಾಬಿಯಂಥ ತುಟಿಗಳು, ಎದ್ದು ಕಾಣುವಂತೆ ಮಾಡಿದ್ದ. ಅಂದದ ಮೈಕಟ್ಟು, ತೇಲಿದ ಬಣ್ಣ, ಮಧ್ಯಮ ಎತ್ತರ ಕೂಡಿ ಒಟ್ಟಾರೆ ಅವಳನ್ನು ವಿಶಿಷ್ಟ ವ್ಯಕ್ತಿಯಾಗಿಸಿತ್ತು. ಅವಳ ಈ ಅಪೂರ್ವ ಚೆಲುವು ಪ್ರಸಾದ್‌ನನ್ನು ಆಕರ್ಷಿಸಿತ್ತು. ಲಲಿತಾ ಮಧ್ಯಮ ವರ್ಗದ ಪರಿವಾರದ ನಡುವಿನವಳು.

ಅವಳ ಅಕ್ಕತಂಗಿ ಗೌರವರ್ಣದಿಂದ ಬೀಗುತ್ತಿದ್ದರು. ಇವಳ ಶ್ಯಾಮಲ ಸೌಂದರ್ಯ ಅವರಿಂದ ಭಿನ್ನವಾಗಿದ್ದ ಕಾರಣ, ತುಸು ಹಿಂಜರಿಕೆಯ ಸ್ವಭಾವ ಮೈಗೂಡಿಸಿಕೊಂಡಿದ್ದಳು. ಮುಖ್ಯವಾಗಿ ಅವಳ ಬಟ್ಟಲು ಕಂಗಳ ಕಾಂತಿ, ವಧು ಪರೀಕ್ಷೆಯಲ್ಲಿ ಪ್ರಸಾದ್‌ನನ್ನು ಕಟ್ಟಿ ಹಾಕಿತೆಂದೇ ಹೇಳಬೇಕು. ಆದರೆ ಪ್ರಸಾದ್‌ನ ತಾಯಿ ತಂದೆಗೆ ಮಗ ಮೆಚ್ಚಿದ ಈ ಸಂಬಂಧದಿಂದ ಸಂತೋಷವಾಯಿತೋ, ದುಃಖವಾಯಿತೋ ಮದುವೆಯ 5 ವರ್ಷಗಳ ನಂತರ ಲಲಿತಾಳಿಗೆ ಅರ್ಥವಾಗಿಲ್ಲ. ಪ್ರಸಾದ್‌ ಸಹ ಮದುವೆಯ ನಂತರ ಅದೇ ಖುಷಿ ಉಳಿಸಿಕೊಂಡಿದ್ದಾನೋ ಇಲ್ಲವೋ ಒಂದೂ ತಿಳಿಯಲಿಲ್ಲ.

ಪಾರ್ಲರ್‌ನವಳ ಕೈ ಇವಳ ಮುಖದ ಮೇಲೆ ಓಡಾಡುತ್ತಿದ್ದಂತೆ ಕಂಗಳನ್ನು ಮುಚ್ಚಿ ಅವಳು ಗತಕಾಲಕ್ಕೆ ಜಾರಿದಳು….. ಪ್ರಸಾದ್‌ನೊಂದಿಗೆ ಯಾವುದೋ ಮದುವೆ ಮನೆಯಲ್ಲಿ ಭೇಟಿ, ಪರಿಚಯ, ಸ್ನೇಹ….. ಮುಂದೆ ಅವನೊಂದಿಗೆ ಮದುವೆ ನಡೆದ ಬಗೆ ಎಲ್ಲವೂ ಒಂದು ಕನಸಿನಂತೆ ಆಗಿಹೋಗಿತ್ತು. ಅವಳ ಅಕ್ಕ ತಂಗಿ, ಗೆಳತಿಯರೆಲ್ಲ ಅಂಥ ಶ್ರೀಮಂತ ವರ ಯಾವ ವರದಕ್ಷಿಣೆ, ವರೋಪಚಾರ ಇಲ್ಲದೆ ಇವರ ಮನೆಯವರು ಮಾಡಿಕೊಟ್ಟ ಸರಳ ಮದುವೆಗೆ ಒಪ್ಪಿದ್ದು ಕಂಡು ಅಸೂಯೆಯಿಂದ ಕುದ್ದುಹೋಗಿದ್ದರು.

ಮದುವೆ ಮನೆಯಲ್ಲಿ ಗಂಡಿನ ಕಡೆಯವರು ಅವಳಿಗೆ ನೀಡಿದ ಒಡವೆ, ವಸ್ತ್ರ, ಬಳುವಳಿ, ಶ್ರೀಮಂತ ಬಂಗಲೆಯ ವಾಸ, ಕಾರು, ಆಳು ಕಾಳು….. ಅವರೆಲ್ಲ ಅಂಥದ್ದನ್ನು ಕನಸಿನಲ್ಲೂ ಊಹಿಸಿರಲಿಲ್ಲ. ಮದುವೆಯಲ್ಲಿ ಘಳಿಗೆಗೊಮ್ಮೆ ಅವಳು ಬದಲಾಯಿಸುತ್ತಿದ್ದ ರೇಷ್ಮೆ ಸೀರೆಗಳು, ಆರತಕ್ಷತೆಯ ವೈಭವ ಎಲ್ಲರನ್ನೂ ದಂಗಾಗಿಸಿತ್ತು.

ವಜ್ರಾಭರಣಗಳನ್ನು ಧರಿಸಿ ವರನ ಕೈ ಹಿಡಿದು ಅವಳು ಸಂಜೆ ಆರತಕ್ಷತೆಯ ವೇದಿಕೆ ಏರಿದಾಗ, ಅವಳ ತವರಿನವರಿಗೆ ತಮ್ಮ ಕಣ್ಣನ್ನೇ ನಂಬಲಾಗಲಿಲ್ಲ. ಇವರಿಗೆ ನಯಾ ಪೈಸೆ ಖರ್ಚಿಲ್ಲದಂತೆ ಪ್ರಸಾದ್‌ ಎಲ್ಲಾ ನಿಭಾಯಿಸಿದ್ದ. ಮಗನ ಆಯ್ಕೆಗೆ ಅವನ ಕಡೆಯ ಹಿರಿಯರೆಲ್ಲ ತಲೆದೂಗಿದ್ದರು. ಇಡೀ ಬಿಸ್‌ನೆಸ್‌ ಈಗ ಅವನೊಬ್ಬನೇ ಸಂಭಾಳಿಸುತ್ತಿದ್ದುದರಿಂದ ರಾಯರು ಯಾವುದಕ್ಕೂ ಕಡಿಮೆ ಮಾಡದಂತೆ, ಒಬ್ಬನೇ ಮಗನ ಮದುವೆಗೆ ಧಾರಾಳ ಖರ್ಚು ಮಾಡಿದ್ದರು.

ತವರಿನಿಂದ ಬೀಳ್ಗೊಂಡು ಅವಳು ಗಂಡನ ಮನೆಗೆ ಅತಿ ಭವ್ಯವಾದ ಬಂಗಲೆಗೆ ಪ್ರವೇಶಿಸಿದಾಗ ಅವಳ ಹೃದಯ ಡವಡವ ಎಂದು ಹೊಡೆದುಕೊಳ್ಳುತ್ತಿತ್ತು. ಎಲ್ಲಾ ಶಾಸ್ತ್ರಗಳೂ ಸಾಂಗೋಪಾಂಗವಾಗಿ ಮುಗಿದು, ಎಲ್ಲರೂ ತುಸು ವಿಶ್ರಾಂತಿ ಪಡೆದರು. ನಂತರ ಅವಳ ಕೋಣೆಗೆ ಬಂದ ಅವಳ ಅತ್ತೆ, ಒಂದು ದುಬಾರಿ ಪಾರದರ್ಶಕ ನೈಟಿ ನೀಡುತ್ತಾ, “ಇಂದು ನಿಮ್ಮಿಬ್ಬರ ಮೊದಲ ರಾತ್ರಿ….. ಸುಖವಾಗಿ ಕಳೆಯಿಂದು ಹಾರೈಸುತ್ತೇನೆ,” ಎಂದು ಅವಳ ಹಣೆ ಚುಂಬಿಸಿದರು. ಅವರ ಕಾಲಿಗೆರಗಿ ಅದನ್ನು ಸ್ವೀಕರಿಸಿದ ಲಲಿತಾ, ಸಂಕೋಚದಿಂದ ಭೂಮಿಗಿಳಿದು ಹೋದಳು.

ಅವಳು ಬೆಳ್ಳಿ ಲೋಟದಲ್ಲಿ ಗಟ್ಟಿ ಕೆನೆ ಭರಿತ ಕೇಸರಿ ಹಾಲಿನ ಸಮೇತ ಗಂಡನಿಗಾಗಿ ನಿರೀಕ್ಷಿಸಿದಳು. ಸ್ವಲ್ಪ ಹೊತ್ತಿಗೆ ಒಳಗೆ ಬಂದ ಪ್ರಸಾದ್‌, ಬಾಗಿಲು ಹಾಕಿ ಮಡದಿಯನ್ನು ಅಪ್ಪಿ ಮುದ್ದಾಡಿ, ಅವಳಿಗೆ ನಾಜೂಕಾಗಿ ಪ್ರೇಮ ಪಾಠ ಕಲಿಸಿದ. ಆ ಮನೆಯ ರೀತಿ ರಿವಾಜು, ಅವಳು ಹೊಂದಿಕೊಳ್ಳಬೇಕಾದ ಪರಿ, ಅನುಸರಿಸಬೇಕಾದ ಕ್ರಮ, ಉಡುಗೆ ತೊಡುಗೆಯಲ್ಲಿ ಹೈಫೈನೆಸ್‌ ಎಲ್ಲವನ್ನೂ ತಿಳಿಸಿಕೊಟ್ಟ. ಒಂದು ವಾರದಲ್ಲಿ ಅವಳು ಕ್ರಮೇಣ ಹಳೆಯ ಅಭ್ಯಾಸ ಬಿಟ್ಟು ಆ ಮನೆಗೆ ಬೇಕಾದಂತೆ ಸಿರಿವಂತ ಸೊಸೆಯಾಗಿ ಮಾರ್ಪಟ್ಟಳು.

ಒಂದು ತಿಂಗಳ ನಂತರ ಅವಳು ತವರಿಗೆ ಬಂದಾಗ, ಅವಳ ಮನೆಯವರಿಗೇ ಗುರುತು ಸಿಗದಷ್ಟು ಅವಳು ಬದಲಾಗಿದ್ದಳು. ಅವಳಲ್ಲಾದ ಪರಿವರ್ತನೆ ಕಂಡು ಅವರು ದಂಗಾಗಿದ್ದರು. ಅವಳು ನೆಲದಿಂದ ಆಕಾಶಕ್ಕೆ ಹಾರಿಬಿಟ್ಟಿದ್ದಾಳೆ ಎಂದೇ ಭಾವಿಸಿದರು. ಆದರೆ ಆ ಹಾರಾಟ ಎಷ್ಟು ದಿನವೋ….. ಅವಳಿಗೇ ತಿಳಿದಿರಲಿಲ್ಲ.

ಅವಳು ಮನೆಗೆ ಮರಳಿದಾಗ ಪ್ರಸಾದ್‌ ಬಳಿ ವರ್ಲ್ಡ್ ಟೂರಿನ 2 ಟಿಕೆಟ್‌ ರಿಸರ್ವ್ ‌ಆಗಿತ್ತು. 2 ತಿಂಗಳು 2 ದಿನಗಳಾಗಿ ಹೇಗೆ ಉರುಳಿತೋ ಅವಳಿಗೆ ತಿಳಿಯಲೇ ಇಲ್ಲ. ವಿದೇಶಿ ಪಾರ್ಟಿಗಳಲ್ಲಿ ಲಲಿತಾ ಮೊದಲ ಬಾರಿಗೆ ವಿದೇಶೀ ಮದ್ಯ ಸವಿಯಬೇಕಾಯಿತು. ಶಿಷ್ಟಾಚಾರಕ್ಕೆ ಕಟ್ಟುಬಿದ್ದು ಅವಳು ಅದನ್ನು ಗುಟುಕರಿಸಲೇಬೇಕಾಯಿತು. ಹೀಗೆ ಆರಂಭವಾದ ಅವಳ ಪಾರ್ಟಿ ಡ್ರಿಂಕ್ಸ್ ಮುಂದೆ ಅವಳ ಕುಡಿತದ ಚಟವೇ ಆಗಿಹೋಯಿತು. ಮೊದಲ ಸಲ ಅವಳು ವೋಡ್ಕಾ ಗುಟುಕರಿಸಿದಾಗ, ಅರ್ಧ ಗಂಟೆ ನಗುತ್ತಲೇ ಕಳೆದುಬಿಟ್ಟಿದ್ದಳು.

ಅವಳು ಟೂರ್‌ನಿಂದ ವಾಪಸ್ಸು ಮರಳಿದ ಮೇಲೆ ಅವಳ ದಿನಚರಿ ಸಂಪೂರ್ಣ ಬದಲಾಯಿತು. ಅವಳ ವಾರ್ಡ್‌ರೋಬ್‌ನಲ್ಲೀಗ ಅತ್ಯಾಧುನಿಕ ಡ್ರೆಸ್‌ಗಳೇ ತುಂಬಿದ್ದವು. ಮಾಡರ್ನ್‌ ಅತ್ತೆಗೆ ತಕ್ಕ ಸೊಸೆಯಾಗಲು ಅವಳು ಸ್ವಿಮಿಂಗ್‌, ಕಾರ್‌ ಡ್ರೈವಿಂಗ್‌, ಕುದುರೆ ಸವಾರಿ, ಲೇಡೀಸ್‌ ಕ್ಲಬ್‌ ಮೆಂಬರ್‌ ಶಿಪ್‌, ಗಾಲ್ಫ್ ಕ್ಲಬ್‌, ಕಂಟ್ರಿ ಕ್ಲಬ್‌….. ಎಲ್ಲವುಗಳನ್ನೂ ರೂಢಿಸಿಕೊಳ್ಳಬೇಕಾಯಿತು.

ಅವಳ ಬರ್ತ್‌ಡೇ ಬಂದಾಗ ಗಂಡ ಕೇಳದೆಯೇ ಹೊಸ 10 ಲಕ್ಷ ರೂ. ಬೆಲೆ ಬಾಳುವ ಕಾರು ಕೊಡಿಸಿದ. ಅದನ್ನು ತಾನೇ ಡ್ರೈವ್ ಮಾಡುತ್ತಾ, ತಾಯಿ ತಂದೆಗೆ ಧಾರಾಳ ಉಡುಗೊರೆ ನೀಡಿ, ಆಶೀರ್ವಾದ ಪಡೆದಾಗ, ಅವರ ಕಣ್ಣಲ್ಲಿ ಆನಂದಬಾಷ್ಪ ತುಂಬಿತು. ಇದೀಗ ಲಲಿತಾ ಸಂಪೂರ್ಣ ಬದಲಾಗಿದ್ದಳು. ಸ್ವತಂತ್ರ ಹಕ್ಕಿಯಾಗಿ, ಸ್ವೇಚ್ಛೆಯಾಗಿ, ಮನಸೋಇಚ್ಛೆ ವಿಹರಿಸುತ್ತಾ, ಜೀವನದಲ್ಲಿ ಗೊತ್ತುಗುರಿ ಇಲ್ಲದೆ, ಮೋಜುಮಜಾ ಉಡಾಯಿಸುವುದೇ ಜೀವನವಾಗಿ, ಪಾರ್ಟಿಗಳಿಗೆ ಹೋಗುವುದೇ ಬದುಕಾಗಿ, ಹೇಗಿದ್ದವಳು ಹೇಗೋ ಆಗಿ ಬದಲಾಗಿ ಹೋದಳು.

ಅವಳ ತಾಯಿ ತಂದೆ ಮಗಳ ಸೌಭಾಗ್ಯ ಕಂಡು ಹಿರಿಹಿರಿ ಹಿಗ್ಗುತ್ತಿದ್ದರು. ತಮ್ಮಂಥ ಬಡವರ ಮಗಳು ಅಷ್ಟು ದೊಡ್ಡ ಶ್ರೀಮಂತರ ಸೊಸೆಯಾಗಿ ಸಮಾಜದಲ್ಲಿ ಗಣ್ಯ ವ್ಯಕ್ತಿ ಎನಿಸಿದವಳೆಂಬ ಸಂತೋಷವಿತ್ತು. ಮಗಳಿಗೆ ಸಿಕ್ಕಿರುವ ಸ್ವಾತಂತ್ರ್ಯ ಕಂಡು ಮೂಗಿನ ಮೇಲೆ ಬೆರಳಿಟ್ಟಿದ್ದರು.

ಪ್ರಸಾದನ ತಾಯಿ ತಂದೆ ತಮ್ಮ ಒಬ್ಬಳೇ ಮಗಳು ಹಾಗೂ ಈ ಸೊಸೆ ನಡುವೆ ಅಂತರ ಎಣಿಸದೆ ಸಮಾನವಾಗಿ ಆದರಿಸುತ್ತಿದ್ದರು. ಆದರೆ ಲಲಿತಾಳಿಗೆ ಸ್ವಾತಂತ್ರ್ಯ ಎಂಬುದು ಎಲ್ಲರ ಮೂಲಹಕ್ಕು, ಅದನ್ನು ಬೇರೆಯವರು ಕೊಡುವುದೆಂದರೇನು ಎಂದು ವಾದಿಸತೊಡಗಿದಳು.

ಆಧುನಿಕತೆಯ ಹೆಸರಲ್ಲಿ  ತಾನು ಸ್ವತಂತ್ರಳು ಎಂದವಳಿಗೆ ಗೊತ್ತು. ಹಣಕಾಸನ್ನು ನೀರಿನಂತೆ ಖರ್ಚು ಮಾಡುವಲ್ಲಿ ಅವಳಿಗೆ ಸ್ವತಂತ್ರವಿತ್ತು. ಷರತ್ತು, ನಿಯಮಗಳಿಗೆ ಕಟ್ಟುಪಡುವಂಥ ಸ್ವಾತಂತ್ರ್ಯವಿತ್ತು. ಆದರೆ ಮಾನಸಿಕವಾಗಿ ಅವಳು ಸ್ವತಂತ್ರಳೇ…. ಬಹುಶಃ ಇಲ್ಲ! ಇದನ್ನು ನೆನೆದು ಅವಳಿಗೆ ನಗು ಬಂತು. ಅಷ್ಟು ಹೊತ್ತಿಗೆ ಅವಳ ಫೇಶಿಯಲ್ ಮುಗಿದಿತ್ತು. ಮನೆಗೆ ಹೋಗುವ ದಾರಿಯಲ್ಲಿ ಅವಳಿಗೆ ಪಾನಿಪೂರಿ ತಿನ್ನಬೇಕೆಂಬ ಆಸೆಯಾಯ್ತು. ಆದರೆ ಡಯೆಟೀಶಿಯನ್‌ 2 ವಾರಗಳ ಕಟ್ಟುನಿಟ್ಟು ಪಥ್ಯ ಹೇಳಿದ್ದರಿಂದ ಅದನ್ನೇನೂ ಮುಟ್ಟು ಹಾಗಿರಲಿಲ್ಲ.

ಮನೆಗೆ ಬಂದಾಗ ಡೈನಿಂಗ್‌ ಟೇಬಲ್ ನಲ್ಲಿ ರುಚಿಪಚಿ ಏನೂ ಇರದ ಪಥ್ಯದ ಊಟವನ್ನು ಕುಕ್‌ ಸರ್ವ್ ‌ಮಾಡಿದ. ಒಂದಿಷ್ಟೂ ಇಷ್ಟವಿಲ್ಲದೆ 2 ಸುಖಾ ರೋಟಿ, ದಾಲ್‌, ಸಲಾಡ್‌ ತಿಂದು ವಿಶ್ರಾಂತಿಗೆಂದು ತನ್ನ ಕೋಣೆಗೆ ಹೋಗಿ ಹಾಯಾಗಿ ಮಲಗಿಬಿಟ್ಟಳು. ಸಂಜೆ ಅತ್ತೆ ಜೊತೆ ಒಂದು ಲೇಡೀಸ್‌ ಕ್ಲಬ್‌ಗೆ ಹೋಗಬೇಕಿತ್ತು. ಅದಕ್ಕಾಗಿ ಅತ್ತೆಗೆ ಒಂದು ಭಾಷಣ ಬರೆದುಕೊಡಬೇಕಿತ್ತು. ಅದನ್ನೆಲ್ಲ ಅವಳು ಪೂರೈಸುವಷ್ಟರಲ್ಲಿ ಸಂಜೆ 5 ಗಂಟೆ ಆಯ್ತು. ತಲೆ ಭಾರ ಎನಿಸಿ ಮಸಾಲಾ ಟೀ ಕುಡಿಯಬೇಕೆನಿಸಿತು. ಆದರೆ ಪಥ್ಯದ ಹೆಸರಲ್ಲಿ ಬೇಕೆನಿಸಿದ್ದನ್ನು ತಿನ್ನುವ ಹಾಗಿರಲಿಲ್ಲ.

ಟೀ ಕೇಳೋಣ ಎಂದು ಅಡುಗೆಮನೆಗೆ ಹೊರಟಳು. ಅಲ್ಲಿದ್ದ ಕುಕ್‌, “ಬೀಟ್‌ರೂಟ್‌ಕ್ಯಾರೆಟ್‌ ಜೂಸ್‌ ರೆಡಿ ಮೇಡಂ,” ಎಂದು 2 ಗ್ಲಾಸ್‌ ಕೈಗೆ ನೀಡಿದ. ಒಂದಿಷ್ಟೂ ಆಸೆ ಇಲ್ಲದೆ ಅದನ್ನು ಗಟಗಟ ಕುಡಿದು, ಸಂಜೆಯ ಫಂಕ್ಷನ್‌ಗೆ ರೆಡಿ ಆಗಲು ತನ್ನ ಕೋಣೆಗೆ ಹೊರಟಳು.

ತಿಳಿ ನೀಲಿ ಮೈಸೂರು ಸಿಲ್ಕ್ ಸೀರೆಯುಟ್ಟು, ಲೈಟ್‌ ಮೇಕಪ್‌ ಮಾಡಿ ಸ್ಟೈಲಾಗಿ ಹ್ಯಾಂಡ್‌ ಬ್ಯಾಗ್‌ ತಿರುಗಿಸುತ್ತಾ ಕೆಳಗೆ ಬಂದಾಗ, ಅವಳ ಅತ್ತೆ ಸಹ ಅವಳಿಗಿಂತ ಡಬ್ಬಲ್ ಮೇಕಪ್‌ ಮಾಡಿಕೊಂಡು ಸಿದ್ಧರಾಗಿದ್ದರು. ಅವಳು ತಾನು ಗೀಚಿದ ಭಾಷಣ ಅತ್ತೆಗೆ ಕೊಡುತ್ತಾ ಸಂಕ್ಷಿಪ್ತವಾಗಿ ವಿವರಿಸಿದಳು. `ಹೆಣ್ಣಿಗೆ ತನ್ನ ಸ್ವಾತಂತ್ರ್ಯ ಮುಖ್ಯವೋ… ಸಂಸಾರದ ಜವಾಬ್ದಾರಿಯೋ?’ ಅದರಲ್ಲಿ ಅವಳು ತನ್ನ ಮನಸ್ಸಿನಲ್ಲಿದ್ದುದನ್ನು ಬಿಟ್ಟು, ಚಪ್ಪಾಳೆ ಗಿಟ್ಟಿಸಲೆಂದೇ ಅತ್ತೆಯನ್ನು ಯಶಸ್ವೀ ಭಾಷಣಕಾರರೆಂಬಂತೆ ಏನೇನೋ ಆದರ್ಶದ ಮಾತುಗಳನ್ನು ತುಂಬಿಸಿದ್ದಳು. ಅತ್ತೆ ಭಾಷಣ ಓದುತ್ತಿದ್ದರೆ, ಚಪ್ಪಾಳೆಗಳ ಸುರಿಮಳೆ ಆಗುತ್ತಿತ್ತು. ಅವಳಿಗಂತೂ ಯಾವುದರಲ್ಲೂ ಮನಸ್ಸಿರಲಿಲ್ಲ.

ತಾವು ಮಧುಚಂದ್ರದಿಂದ ವಾಪಸ್ಸು ಬರುವಾಗಿನ ಘಟನೆ ನೆನಪಾಯಿತು. ಲಲಿತಾಳಿಗೆ ಯಾಕೋ ತನ್ನ ಆರೋಗ್ಯ ಸರಿ ಇಲ್ಲ ಎನಿಸಿತ್ತು. ಪ್ರಸಾದನಿಗೆ ಪ್ರಣಯದ ಲಹರಿ ಉತ್ತುಂಗಕ್ಕೇರಿತ್ತು. ಲಲಿತಾಳ ತೊಳಲಾಟ ಕಂಡು ತನ್ನ ಪರಿಚಿತ ಲೇಡಿ ಡಾಕ್ಟರ್‌ ಬಳಿ ಕರೆದೊಯ್ದ ಪ್ರಸಾದ್‌, ಡಾ. ಪರಿಮಳಾ ಅವನ ಹೈಸ್ಕೂಲ್ ಸಹಪಾಠಿ. ಕೂಲಂಕಷವಾಗಿ ಲಲಿತಾಳನ್ನು ಪರೀಕ್ಷಿಸಿ, “ಕಂಗ್ರಾಟ್ಸ್…. ನಿಮ್ಮ ಮನೆಗೆ ಪುಟ್ಟ ಪಾಪು ಬರಲಿದೆ!” ಎಂದರು.

ಲಲಿತಾಳಿಗೆ ಪರಮ ಸಂತೋಷ ಎನಿಸಿದರೆ, ಪ್ರಸಾದನಿಗೇನೂ ಖುಷಿ ಆಗಿರಲಿಲ್ಲ. “ನೀನೇಕೆ ಸರಿಯಾಗಿ ಟ್ಯಾಬ್ಲೆಟ್ಸ್ ತೆಗೆದುಕೊಳ್ಳುತ್ತಿಲ್ಲ….?”

“ಯಾವಾಗೋ 1-2 ಸಲ ಪಾರ್ಟಿ ಮುಗಿಸಿಕೊಂಡು ಬಂದಾಗ…. ಆ ಮತ್ತಿನಲ್ಲಿ ಮರೆತಿರಬೇಕು….”

“ಹೌ ಕ್ಯಾನ್‌ ಯು ಬಿ ಸೋ ಇರ್ರೆಸ್ಪಾನ್ಸಿಬಲ್?” ಸಿಡುಕಿದ ಪ್ರಸಾದ್‌.

ಹೊಸ ಜವಾಬ್ದಾರಿಯಿಂದ ಪ್ರಸಾದ್‌ ಹೆದರಿದ್ದಾನೆಂದೇ ಲಲಿತಾ ತರ್ಕಿಸಿದಳು. ಅವಳಿಗೂ ಅಷ್ಟು ಬೇಗ ತಾಯ್ತನ ಬೇಕಿರಲಿಲ್ಲ, ಆದರೆ ಆಗಿ ಹೋಗಿದ್ದಕ್ಕೆ ಚಿಂತಿಸಿ ಫಲವೇನು?

ಮನೆಗೆ ಬಂದು ಪ್ರಸಾದ್‌ ಅಮ್ಮನಿಗೆ ವಿಷಯ ತಿಳಿಸಿದ. ಆಧುನಿಕ ವಿಚಾರಧಾರೆಯ ಆಕೆ ಸಿಡುಕುತ್ತಾ, “ಈ ಮಧ್ಯಮ ವರ್ಗದ ಹುಡುಗಿಯರಿಗೆ ಮದುವೆ ಅನ್ನೋದು ಮಕ್ಕಳು ಹೆರೋಕ್ಕೆ ಒಂದು ರಹದಾರಿ…. ವರ್ಷ ಮುಗಿಯುವಷ್ಟರಲ್ಲಿ ಮಗು ಎತ್ತಿಕೊಂಡು ನಿಲ್ಲಬೇಕೇ?” ಎಂದು ಸಿಡುಕಿದರು.

“ಛೇ….ಛೇ…. ಈ ಜವಾಬ್ದಾರಿ ಯಾರಿಗೆ ಬೇಕು ಇಷ್ಟು ಬೇಗ? 2-3 ವರ್ಷ ಕಳೆಯಲಿ, ಆಮೇಲೆ ಇದ್ದೇ ಇದೆ ಸಂಸಾರ, ಮಕ್ಕಳು ಮರಿ…. ಸದ್ಯಕ್ಕಂತೂ ನಾವಿಬ್ಬರೂ ಫ್ರೀ ಬರ್ಡ್ಸ್ ಆಗಿರಬೇಕೆಂದೇ ನನ್ನಾಸೆ…. ಗೊತ್ತಾಗದೆ ನಡೆದಿದ್ದು, ಹೋಗಲಿ ಬಿಡು,” ಎಂದ ಪ್ರಸಾದ್‌.

ಆ ಘಟನೆಯ ನಂತರ ತನ್ನ ಸ್ವಾತಂತ್ರ್ಯ ಹಾರಾಟದ ರಿಮೋಟ್‌ ಕಂಟ್ರೋಲ್ ತನ್ನ ಕೈಯಲ್ಲಿಲ್ಲ ಎಂದು ಅರಿವಾಯಿತು. ಅವಳ ಅಭಿಪ್ರಾಯ ಕೇಳದೆಯೇ ಮಾರನೇ ದಿನ ಅವಳಿಗೆ ಗರ್ಭಪಾತ ಮಾಡಿಸಲಾಯಿತು. ಅರಿವಳಿಕೆ ಪ್ರಯುಕ್ತ ಅವಳ ದೇಹಕ್ಕೇನೂ ನೋವಾಗಲಿಲ್ಲ, ಆದರೆ ಹೃದಯಕ್ಕಾದ ನೋವನ್ನು ಯಾರಿಗೆ ಹೇಳಿಕೊಳ್ಳುವುದು? ಹೇಗೆ ತೋರ್ಪಡಿಸುನಿದು? ಪ್ರತಿ ಸಲ ಅವಳೊಂದು ಪಂಜರದ ಗಿಣಿ ಎಂಬಂತೆ ಬಣ್ಣ ತುಂಬಿಸಲಾಗುತ್ತಿತ್ತು. ಆದರೆ ಆ ಬಣ್ಣ ಆ ಗಿಣಿಗೆ ಬೇಕೋ ಬೇಡವೋ ಎಂದು ಆ ಮನೆಯಲ್ಲಿ ಯಾರೂ ಕೇಳುತ್ತಿರಲಿಲ್ಲ. ಆಧುನಿಕ ಗೃಹಬಂಧನದ ಖೈದಿಯಾಗಿದ್ದಳು.

ಆದರೆ ಹೊರಗಿನ ಪ್ರಪಂಚಕ್ಕೆ ಇದೊಂದು ಆಧುನಿಕ ಬಣ್ಣದ ಗಿಣಿಯಾಗಿ, ಖುಷಿಯಾಗಿರುವಂತೆಯೇ ಕಾಣುತ್ತಿತ್ತು. ಯಾರಿಗೆ ಅತ್ತೆ ಮನೆಯಲ್ಲಿ ಇಷ್ಟೆಲ್ಲ ಸುಖ ಸೌಲಭ್ಯ ಸಿಗಲು ಸಾಧ್ಯ? ಬಯಸಿದಾಗ ಟೂರು, ಸದಾ ಕಾರಲ್ಲಿ ಓಡಾಟ, ಕುಡಿದ ನೀರು ಅಲುಗಾಡದಂಥ ವಿಶ್ರಾಂತಿ, ಕೈಗೊಬ್ಬ ಕಾಲಿಗೊಬ್ಬ ಆಳು…. ಆದರೆ ಅವಳ ಮನಸ್ಸಿನ ಆಸೆಗಳು? ಅದನ್ನು ಯಾರೂ ಕೇಳುವವರೇ ಇರಲಿಲ್ಲ.

ಬಹು ದಿನಗಳ ನಂತರ ಅಂದು ಅವಳಿಗೆ ತವರಿಗೆ ಹೋಗಬೇಕೆನಿಸಿತು. ಸಾಧಾರಣ ಪ್ರಿಂಟೆಡ್‌ ಸಿಲ್ಕ್ ಸೀರೆ, ಕೈಗೆ 4-4 ಬಳೆಗಳು, ಲೈಟ್‌ಮೇಕಪ್‌ನೊಂದಿಗೆ ಹೊರಟಾಗ ಎದುರಿಗೆ, ಸಿಗಾರ್‌ ಸೇದುತ್ತಾ ಮಾವ ಎದುರಾದರು.

“ಏನಮ್ಮಾ ಇದು….? ತವರಿಗೆ ಹೊರಟಿದ್ದೀಯಾ ಸರಿ…. ರಾವ್ ‌ಬಹದ್ದೂರ್‌ ವಂಶದ ಸೊಸೆ ಹೀಗೆ ಭಣಭಣ ಅಂತ ಹೋಗುವುದೇ? ವಜ್ರ ವೈಢೂರ್ಯ ಇಲ್ಲದೆ ಯಾಕಮ್ಮ ಹೋಗಬೇಕು? ಅವರು ನಮ್ಮ ಮನೆತನದ ಬಗ್ಗೆ ಏನು ಭಾವಿಸಬೇಕು?”

ಲಲಿತಾ ಅರ್ಥವಾಗದವಳಂತೆ ಗಂಡನತ್ತ ತಿರುಗಿದಾಗ, “ನೀನು ಹೋಗುತ್ತಿರುವುದು ತವರುಮನೆಗೆ…. ಅವರ ಮಗಳಾಗಿ ಅಲ್ಲ, ಈ ಮನೆ ಸೊಸೆಯಾಗಿ! ಅದಕ್ಕೆ ಡ್ಯಾಡಿ ಹೇಳಿದ್ದು ಇನ್ನೂ ಸ್ವಲ್ಪ ಜಬರ್ದಸ್ತಾಗಿ, ಗ್ರಾಂಡಾಗಿ ಹೋಗಬೇಕು ಅಂತ. ತಗೋ, ಇವತ್ತು ಕ್ಲೈಂಟ್‌ ಮೀಟಿಂಗ್‌ ಮುಗಿಸಿ ಬರುವಾಗ ಮಾಲ್ ‌ನಿಂದ ಬರಬೇಕಾಯ್ತು. ಅಲ್ಲಿ ಹೊಸ ಜ್ಯೂವೆಲರಿ, ಸಿಲ್ಕ್ ಮೇಳ ಇತ್ತು. ಈ ಗ್ರಾಂಡ್‌ ಬನಾರಸ್‌ ಸೀರೆ, ಈ ಕಂಪ್ಲೀಟ್‌ ಮುತ್ತಿನ ಸೆಟ್‌ ಧರಿಸಿ ಹೊರಡು,” ಎಂದು ಅತಿ ದುಬಾರಿಯಾದ ರೇಷ್ಮೆ ಸೀರೆ, ಒಡವೆಗಳ ಸೆಟ್‌ ನೀಡಿದ.

ಅವಳಿಗೆ ಈ ಓವರ್‌ ಅಲಂಕಾರ ಬೇಕಿರಲಿಲ್ಲ. ಆದರೆ ಆ ಗಿಣಿಗೆ ಇಂದು ಇಂಥದ್ದೇ ಬಣ್ಣ ಎಂದು ಅದರ ರೆಕ್ಕೆಗಳಿಗೆ ಅವರಿಬ್ಬರೂ ಬಣ್ಣ ಹಚ್ಚಿದ್ದಾಗಿತ್ತು…… ಈಗ ವಿಧಿಯಿಲ್ಲದೆ ಹಾರಾಟ ನಡೆಸುವುದಷ್ಟೇ ಗಿಣಿಯ ಕೆಲಸವಾಗಿತ್ತು. ತನ್ನ ಮತ್ತು ತನ್ನ ತವರಿನ ಮಧ್ಯೆ ಈ ಸೀರೆ, ಒಡವೆ ಒಂದು ದೊಡ್ಡ ಪ್ರತಿಷ್ಠೆಯ ಅಡ್ಡಗೋಡೆ ಆಗಿದೆಯಲ್ಲ ಅಂತ ಅವಳ ಮನಸ್ಸು ಒಡೆದು ಛಿದ್ರವಾಯಿತು. ಪ್ರತಿ ಸಲ ಇವಳ ಸೀರೆ, ಒಡವೆಗಳ ಶ್ರೀಮಂತಿಕೆ ಕಂಡು ಅವರುಗಳು ಹಿಗ್ಗಿ ಹೋಗುವುದು ಇವಳಿಗೆ ಬಿಸಿ ತುಪ್ಪವಾಗಿತ್ತು.

ಈ ಸಲ ಅವಳು ತವರಿಗೆ ಬಂದಾಗ, ವಠಾರದ ಹೊರಗೆ ಕಾರು ನಿಲ್ಲಿಸಿ, ಅದೇಕೋ ಕಾಲು ಅಪ್ಪಳಿಸುತ್ತಾ ಅಸಮಾಧಾನದಿಂದಲೇ ಒಳಗೆ ಹೋದಳು. “ಏನೂಂದ್ರೆ…. ಲಲಿತಾ ಬಂದಳೇನು?” ಅಡುಗೆ ಮನೆಯಿಂದ ಅವಳ ತಾಯಿ ಕೂಗಿದರು.

ಅವಳ ಮನಸ್ಸು ತುಂಬಿ ಬಂದಂತಾಗಿ, “ನನ್ನನ್ನು ನೋಡದೆ ಒಳಗಿನಿಂದಲೇ ಹೇಗೆ ಸರಿಯಾಗಿ ಗುರುತಿಸಿದ ಅಮ್ಮ?”

“ಹೆತ್ತ ಕರುಳಿಗೆ  ಅಷ್ಟು ಮಾತ್ರ ಅರ್ಥ ಆಗಲ್ಲವೇನು? ನಿನ್ನ ಕಾಲ್ನಡಿಗೆಯ ಸಪ್ಪಳದಲ್ಲೇ ಗೊತ್ತಾಗುತ್ತೆ…. ಇವತ್ತೇಕೋ ಧಪ ಧಪ ಅಂತ ಬಂದೆ…. ಯಾರ ಮೇಲೆ ಕೋಪವೇ?” ಅಡುಗೆ ಮಾಡುತ್ತಿದ್ದ ಅಮ್ಮ ಹೆಮ್ಮೆಯಿಂದ ಮಗಳ ಕಡೆ ತಿರುಗಿ ನೋಡಿದರು. ಸಾಕ್ಷಾತ್‌ ಧರೆಗಿಳಿದ ದೇವತೆಯಂತೆ ಅವಳ ಅಲಂಕಾರವಿತ್ತು.

ಅವಳು ಅದೇನೂ ಗಮನಿಸದೆ ಕಿಚನ್‌ ಸಿಂಕ್‌ನಲ್ಲಿ ಕೈ ತೊಳೆದು, ಅಮ್ಮ ಮಾಡಿದ್ದ ಬಿಸಿ ಅನ್ನಕ್ಕೆ ಎಣ್ಣೆಗಾಯಿ ಕಲಸುತ್ತಾ ಖಾರದ ಎರಡು ತುತ್ತು ತಿನ್ನುವಷ್ಟರಲ್ಲಿ ಅಭ್ಯಾಸ ತಪ್ಪಿದ್ದರಿಂದ ಅವಳ ನೆತ್ತಿ ಹತ್ತಿ ಕೆಮ್ಮ ತೊಡಗಿದಳು.

ತಕ್ಷಣ ಅಲ್ಲೇ ಇದ್ದ ಸ್ಟೂಲ್ ‌ಎಳೆದು ಅವಳನ್ನು ಕೂರಿಸುತ್ತಾ, “ಮೆಲ್ಲಗೆ ಮಹಾರಾಯ್ತಿ…. ಊಟ ಎಲ್ಲಿ ಓಡಿಹೋಗುತ್ತೆ? ಆಗಲೇ ಅಳಿಯಂದ್ರು ನಿನ್ನ ಜ್ಞಾಪಿಸಿಕೊಂಡ್ರು ಅನ್ಸುತ್ತೆ ನೋಡು…. ನಿಧಾನವಾಗಿ ತಿನ್ನಮ್ಮ,” ಎಂದು ಅವಳ ನೆತ್ತಿ ತಟ್ಟಿ, ಬೆನ್ನು ಸವರಿದರು.

ಇಂಥ ವಾತ್ಸಲ್ಯದ ಅಭಾವವಿದ್ದ ಅವಳ ಜೀವಕ್ಕೆ ಕೂಡಲೇ ಕಣ್ಣಲ್ಲಿ ನೀರು ಹರಿಯಿತು. “ಮೆಲ್ಲಗೆ ತಾಯಿ, ಕೈಯಲ್ಲಿ ಹಿಡಿದ ನೀರು ಸೀರೆ ಮೇಲೆ ತುಳುಕೀತು,” ಎಂದರು ಅಮ್ಮ.

ಬೇಗ ಬೇಗ ತಟ್ಟೆಯಲ್ಲಿದ್ದುದನ್ನು ಖಾಲಿ ಮಾಡಿ ಅವಳು ಎದ್ದಳು.“ಬಿಡಮ್ಮ, ಅವಳು ನಡೆದರೆ ಸವೆದಾಳು ಅಂತೀಯಾ ನೀನು,” ಎಂದು ಅಕ್ಕಾ ನುಡಿದರೆ, “ಉಳಿದ ಕೆಲಸಕ್ಕೆ ತೊಳಿಬಳಿ ಅಂತ ಮಾಡಲು ನಾನಿದ್ದೀನಲ್ಲ,” ಎಂದು ತಂಗಿ ಸೇರಿಸಿದಳು. ಅಪರೂಪಕ್ಕೆ ಆ ಭಾನುವಾರ ಅಕ್ಕ ತಂಗಿಯರೆಲ್ಲ ಒಟ್ಟಿಗೆ ತವರಿಗೆ ಬಂದಿದ್ದರು.

ಲಲಿತಾ ಅದಕ್ಕೆ ಎಳ್ಳಷ್ಟು ತಲೆ ಕೆಡಿಸಿಕೊಳ್ಳದೆ ಅಕ್ಕ ತಂಗಿಯರ ಮಕ್ಕಳಿಗಾಗಿ ತಂದಿದ್ದ ವಿದೇಶೀ ಆಟಿಕೆ ಉಡುಗೊರೆಗಳನ್ನು ನೀಡಿದಳು. ಸಂತೋಷದಿಂದ ಮಕ್ಕಳು ಚಿಕ್ಕಮ್ಮನಿಗೆ ಥ್ಯಾಂಕ್ಸ್ ಹೇಳಿ ಆಡಲು ಹೋದರು.

ಹಾಗೇ ಅವಳು ತಾಯಿ, ಅಕ್ಕ, ತಂಗಿಯರನ್ನು ಕೂರಿಸಿ ಕುಂಕುಮ ಹಚ್ಚಿ ಎಲ್ಲರಿಗೂ ಸೀರೆಯ ಉಡುಗೊರೆ ನೀಡಿದಳು. ತಂದೆಗೆ ಶಾಲು, ವಾಕಿಂಗ್‌ ಸ್ಟಿಕ್‌ ಕೊಟ್ಟಳು.

ತಂಗಿ ಹೇಳಿದಳು, “ಲಲಿತಕ್ಕಾ, ಇಷ್ಟೊಂದು ದುಬಾರಿ ಆಟಿಕೆ ತರಬೇಡಿ…. ಅಕಸ್ಮಾತ್‌ ಇವು ಕೆಟ್ಟು ಹೋದರೆ ಅವನ್ನು ರಿಪೇರಿ ಮಾಡಿಸುವಷ್ಟು ಹಣ ಇರೋಲ್ಲ ನಮ್ಮ ಹತ್ತಿರ….” ಎಂದಾಗ, “ಹೋಗಲಿ ಬಿಡೆ, ಆಗ ಬೇರೆ ತಂದರಾಯಿತು,” ಎಂದು ನಕ್ಕು ಮಾತು ಬದಲಿಸಿದಳು ಲಲಿತಾ.

ಅಲ್ಲಿಂದ ಮಾತು ಅವಳ ವೈಭವ, ಅತ್ತೆ ಮನೆ, ಅವಳ ಸಿರಿತನದ ಹೊಗಳಿಕೆಯ ಕಡೆ ಹರಿಯಿತು. ಆದರೆ ಈ ಬಣ್ಣದ ವೇಷ ಎಷ್ಟು ಕೃತಕ ಎಂಬುದು ಅವಳಿಗೆ ಮಾತ್ರ ಗೊತ್ತಿತ್ತು. ತನ್ನ ಈ ಶ್ರೀಮಂತಿಕೆಯ ಹಾರಾಟ ಕೇವಲ ಒಂದು ಎಲ್ಲೆಯ ತನಕ ಮಾತ್ರ ಸೀಮಿತ ಎಂದು ಹೇಗೆ ತಾನೇ ಹೇಳಿಯಾಳು?

ಅಂದು ಸಂಜೆ ಎಲ್ಲರೂ ಬಂದಿದ್ದಾರೆಂದು ಅಮ್ಮ ಬೊಂಬಾಯಿಬೋಂಡ, ಶುಂಠಿ ಚಟ್ನಿ ಮಾಡಿದರು. ಚಿಕ್ಕ ಮಕ್ಕಳಂತೆ ಅವಳು ಅದನ್ನು ಮುಗಿಬಿದ್ದು ತಿಂದಳು. ತಾಯಿ ಜೀವಕ್ಕೆ ಅದೆಷ್ಟು ತೃಪ್ತಿಯಾಯಿತೋ!

“ಅದೆಷ್ಟು ಪ್ರಪಂಚ ಸುತ್ತಿ ಬಂದು, ವಿದೇಶೀ ವ್ಯಂಜನ ಸವಿದರೇನು? ಅಮ್ಮನ ಕೈ ಅಡುಗೆ ಮುಂದೆ ಯಾವುದೂ ಸಮಾನವಲ್ಲ!” ಎಂದು ಮನಸ್ಸು ತುಂಬಿ ನುಡಿದಳು.

ತಾಯಿ ಸಂತಸದಿಂದ ಮಗಳನ್ನು ಬಾಚಿ ತಬ್ಬಿಕೊಂಡರು. ಅಂದು ರಾತ್ರಿ ಅವಳು ಅಲ್ಲೇ ಉಳಿಯಲು ನಿರ್ಧರಿಸಿದಳು. ರಾತ್ರಿ ಊಟ ಮುಗಿಸುತ್ತಿದ್ದಂತೆ ಗಂಡನ ಕಡೆಯಿಂದ ಫೋನ್‌ ಬಂತು. ಮುಂಬೈನಿಂದ ಸೋದರತ್ತೆ ಬಂದಿದ್ದಾರೆ, ಮದುವೆಗೆ ಬರಲಾಗದ ಕಾರಣ ಇಬ್ಬರನ್ನೂ ಒಟ್ಟಿಗೆ ನೋಡಲು ಬಯಸುತ್ತಿದ್ದಾರೆ, ಬೇಗ ಹೊರಟು ಬಾ, ಎಂದ.

ತಾನು ನೈಟ್‌ ಡ್ರೈವ್ ‌ಮಾಡಲಾರೆ ಎಂದು ನೆಪ ಹೇಳಿದಳು. ಪರವಾಗಿಲ್ಲ, ಈಗಲೇ ಡ್ರೈವರ್‌ ರಾಮು ಬರುತ್ತಾನೆ ಎಂದು ಹೇಳಿ ಫೋನ್‌ ಇರಿಸಿದ ಪ್ರಸಾದ್‌. 15 ನಿಮಿಷದಲ್ಲಿ ರಾಮು ಕ್ಯಾಬ್‌ನಲ್ಲಿ ಬಂದಿಳಿದ. ಅವನ ಜೊತೆ ಇವಳ ತವರಿನವರಿಗಾಗಿ ಬೇಕಾದಷ್ಟು ಉಡುಗೊರೆ, ಸಿಹಿ ತಿನಿಸು, ಹಣ್ಣು ತರಕಾರಿಗಳ ರಾಶಿಯೇ ಇತ್ತು.

ಅಷ್ಟೊಂದು ಉಡುಗೊರೆ ಒಟ್ಟಿಗೆ ಕಂಡು ತವರಿನವರು ಹಿಗ್ಗಿ ಹೀರೇಕಾಯಿಯಾದರು. ಆದರೆ ತವರಿನಲ್ಲಿ ಇರಲಾಗದೆ ವಿಧಿಯಿಲ್ಲದೆ ಹೊರಡಲಿದ್ದ ದುಃಖತಪ್ತ ಲಲಿತಾಳ ಮುಖ ಯಾರಿಗೂ ಕಂಡುಬರಲಿಲ್ಲ. ಅವರವರ ಸಡಗರ, ಸಂಭ್ರಮದಲ್ಲಿ ಮುಳುಗಿಹೋಗಿದ್ದರು. ಕೃತಕವಾಗಿ ನಗುತ್ತಾ, ಅಮ್ಮನಿತ್ತ ಕುಂಕುಮ ಹಚ್ಚಿಕೊಂಡು, ತಾಯಿ ತಂದೆಗೆ ನಮಸ್ಕರಿಸಿ ಅವಳು ವಿಧಿಯಿಲ್ಲದೆ ಕಾರನ್ನು ಏರಬೇಕಾಯಿತು.

ಅವಳು ಹೊಸಿಲು ದಾಟುತ್ತಿದ್ದಾಗ ಮಗಳ ಮುಖವೇಕೋ ಬಾಡಿದೆ ಎಂಬುದನ್ನು ತಾಯಿ ಹೃದಯ ಗುರುತಿಸಿತು. ಆದರೆ ಅವಳ ಅತ್ತೆ ಮನೆಯವರು ಡ್ರೈವರ್‌ನನ್ನು ಕಳುಹಿಸಿರುವಾಗ, ಹೋಗಬೇಡ ಇರು ಎಂದು ಹೇಗೆ ತಡೆದಾರು? ಅಸಹಾಯಕತೆ ಆ ತಾಯಿಯನ್ನು ಕಟ್ಟಿಹಾಕಿತು. ಏನೋ ನೆಪದಿಂದ ಪ್ರಸಾದ್‌ ತನ್ನನ್ನು ಮಧ್ಯಮ ವರ್ಗದ ತವರಿನಲ್ಲಿ ಉಳಿಯಲು ಬಿಡುವುದಿಲ್ಲ ಎಂದು ಅವಳು ಅರಿತಿದ್ದಳು.

ಅವಳು ಮನೆಗೆ ಬರುತ್ತಿದ್ದಂತೆ ಅತ್ತೆ ಎದುರು ಬಂದು, “ನೋಡಮ್ಮ, ಪ್ರಸಾದನ ಸೋದರತ್ತೆ ನಿನಗಾಗಿ ಕಾದಿದ್ದಾರೆ,” ಎಂದಾಗ ನೇರವಾಗಿ ಅವರ ಬಳಿ ಬಂದು, ಅವರ ಕಾಲಿಗೆರಗಿ ಆಶೀರ್ವಾದ ಪಡೆದಳು. ಅಣ್ಣನ ಸೊಸೆಯ ಸೌಜನ್ಯ ಸೌಶೀಲ್ಯ ಮೆಚ್ಚಿಕೊಳ್ಳುತ್ತಾ ಅವರು ಅವಳಿಗೆ ಬೇಕಾದಷ್ಟು ಉಡುಗೊರೆಗಳನ್ನಿತ್ತು ಆಶೀರ್ದಿಸಿದರು. ಅತ್ತಿಗೆ ನಾದಿನಿ ಒಟ್ಟಿಗೆ ಈ ಜೋಡಿಗೆ ಆರತಿ ಬೆಳಗಿ ದೃಷ್ಟಿ ನಿವಾಳಿಸಿದರು.

ಆ ರಾತ್ರಿ ಗಂಡನ ಜೊತೆ ಮತ್ತೊಂದು ಪೆಗ್‌ ಏರಿಸುವಾಗ ಯಾರ ಮೇಲೋ ಸೇಡು ತೀರಿಸಿಕೊಳ್ಳುವವಳಂತೆ ಅವಳು ಬಾಟಲ್ ಎತ್ತಿ ಗಟಗಟ ಕುಡಿದೇಬಿಟ್ಟಳು. ತನ್ನ ಲ್ಯಾಪ್‌ಟಾಪ್‌ನಲ್ಲಿ ಮುಳುಗಿದ್ದ ಪ್ರಸಾದ್‌, ರಾತ್ರಿ 11 ಗಂಟೆಯಲ್ಲೂ ಕ್ಲೈಂಟ್‌ ಜೊತೆ ಬಿಸ್‌ನೆಸ್‌ಮಾತನಾಡುವುದರಲ್ಲಿ ತಲ್ಲೀನನಾಗಿದ್ದ.

ಅಳು ಹಾಗೆ ಕುಡಿಯುವುದರಿಂದ ತನ್ನದೇ ಲೋಕದಲ್ಲಿ ಮುಳುಗಿಹೋಗುವ ಅಭ್ಯಾಸ ಮಾಡಿಕೊಂಡಿದ್ದಳು. ಅಲ್ಲಿ ಅವಳನ್ನು ಡಿಸ್‌ಟರ್ಬ್‌ ಮಾಡುವವರು ಯಾರೂ ಇರುತ್ತಿರಲಿಲ್ಲ. ಅವಳೇಕೆ ಈ ಸಿರಿತನವನ್ನು ದ್ವೇಷಿಸುತ್ತಿದ್ದಳೋ ಅವಳಿಗೆ ತಿಳಿಯುತ್ತಿರಲಿಲ್ಲ.

title-story2

ನಶೆಯ ಕಾರಣ ಬಹಳ ತಡವಾಗಿ ಅವಳು ಎದ್ದಾಗ 9 ಗಂಟೆ ದಾಟಿತ್ತು. ಆಫೀಸ್‌ ಕಡೆ ಹೊರಡಲು ಸಿದ್ಧನಾಗಿದ್ದ ಪ್ರಸಾದ್‌ ಕೇಳಿದ, “ನಿನಗೆ ಜೀರ್ಣಿಸಿಕೊಳ್ಳಲು ಆಗಲ್ಲ ಅಂದ್ರೆ ಅಷ್ಟೊಂದು ಏಕೆ ಕುಡಿಯಬೇಕು?”

“ಸಭ್ಯರಾಗಿಯೇ ಉಳಿಯಬೇಕು ಅಂದ್ರೆ ಕುಡಿದು ತಾನೇ ಏನಾಗಬೇಕು?” ಎಂದು ಅಟ್ಟಹಾಸದಿಂದ ನಗತೊಡಗಿದಳು.

ಈ ರೀತಿ ದಿನೇದಿನೇ ಕುಡಿತ ಹೆಚ್ಚಿಸಿಕೊಂಡು ಅವಳು ತನ್ಮೊಳಗೆ ಒಂದು ಶೂನ್ಯ ಸೃಷ್ಟಿಸಿಕೊಂಡಳು. ಬಂಗಾರದ ಪಂಜರವಾಗಿದ್ದ ಈ ಸಿರಿವಂತಿಕೆಯ ಸೆರೆಮನೆ ವಿರುದ್ಧ ಅವಳು ಈ ರೀತಿ ಸೇಡು ತೀರಿಸಿಕೊಳ್ಳುವ ನೆಪದಲ್ಲಿ ತನ್ನನ್ನು ತಾನೇ ಅಳಿದುಕೊಳ್ಳತೊಡಗಿದಳು.

ಮುಂದೆ ಅವಳಿಗೆ ತಾನೂ ಬಿಸ್‌ನೆಸ್‌ನಲ್ಲಿ ನೇರವಾಗಿ ತೊಡಗಿಕೊಳ್ಳಬೇಕು ಅನಿಸಿತು. ಪದವೀಧರೆಯಾಗಿದ್ದ ಅವಳಿಗೆ ಆಧುನಿಕ ವ್ಯವಹಾರಗಳ ಅರಿವಿತ್ತು. ಪ್ರಸಾದ್‌ನ ಬಳಿ ಇದನ್ನು ಹೇಳಿಕೊಂಡಾಗ ಅವನಿಗೆ ಹೆಮ್ಮೆ ಎನಿಸಿತು. ಅವಳನ್ನು ಹೃದಯಪೂರ್ವಕವಾಗಿ ಬಿಸ್‌ನೆಸ್‌ ವ್ಯವಹಾರ ನೋಡಿಕೊಳ್ಳುವಂತೆ, ದಿನ ಆಫೀಸಿಗೆ ಬರಲು ಆಹ್ವಾನಿಸಿದ.

ಅವಳಿಗಾಗಿ ಒಂದು ವಿಭಾಗ ತೆರೆದು ಅದರ ಹೆಡ್‌ ಆಗಿಸಲಾಯಿತು. ತನ್ನ ಕೆಳಗಿನವರನ್ನು ನಿಯಂತ್ರಿಸುವುದಷ್ಟೇ ಅವಳ ಕೆಲಸ. ಪ್ರಸಾದ್‌ ಅವನ ತಂದೆ ಸಹಿ ಮಾಡಿದರೆ ಮಾತ್ರ ಚೆಕ್‌ ಪಾಸ್‌ ಆಗುವಂತಿತ್ತು. ಅವಳ ವೈವಾಹಿಕ ಜೀವನ ಮರಳುಗಾಡಿನ ಪ್ರಯಾಣದಂತಿತ್ತು. ಎಲ್ಲೆಲ್ಲೂ ಮರೀಚಿಕೆಯೇ ತುಂಬಿತ್ತು. ಅದರಿಂದ ಯಾರ ದಾಹವಾದರೂ ತೀರಿದ್ದುಂಟೇ? ಒಂದು ವರ್ಷದವರೆಗೂ ಮನೆಗೂ ಆಫೀಸಿಗೂ ಓಡಾಡಿದ ಅವಳು ಅದರಲ್ಲೂ ಬೇಸರಗೊಂಡು ಬಿಟ್ಟುಬಿಟ್ಟಳು.

ಹೀಗೆ ವರ್ಷಗಳ ಮೇಲೆ ವರ್ಷ ಉರುಳಿ ಅವಳಿಗೆ 5ನೇ ವರ್ಷದ ವಿವಾಹ ವಾಷಿಕೋತ್ಸವ ಮುಗಿಯಿತು. ಯಾವುದರಲ್ಲೂ ಆಸಕ್ತಿ ಇಲ್ಲವಾಯಿತು. ಎಂದಿನಂತೆ ಮತ್ತೊಂದು ಕಾಕ್‌ಟೇಲ್ ‌ಪಾರ್ಟಿಗೆ ರೆಡಿ ಆಗತೊಡಗಿದಳು. ಕೆಂಪು ಆಫ್‌ ಶೋಲ್ಡರ್‌ ಗೌನ್‌ ಹಾಗೂ ರೂಬಿ ಡೈಮಂಡ್‌ ಆಭರಣಗಳಿಂದ ಅವಳು ಸುಂದರವಾಗಿ ಶೋಭಿಸುತ್ತಿದ್ದಳು.

ಆ ಪಾರ್ಟಿ ಪ್ರಸಾದ್‌ನ ಕಸಿನ್‌ ಮದುವೆಯ ಸಲುವಾಗಿತ್ತು. ಎಲ್ಲರೂ ಮಸ್ತಿಯಲ್ಲಿ ಆರತಕ್ಷತೆಯ ಮ್ಯೂಸಿಕ್‌ಗೆ ತಕ್ಕಂತೆ ಸ್ಟೆಪ್ಸ್ ಹಾಕುತ್ತಿದ್ದರು. 2 ಪೆಗ್‌ ಏರಿಸಿದ ಲಲಿತಾ ತಾನೂ ನರ್ತಿಸಲು ಸಿದ್ಧಳಾದಳು. ಪ್ರಸಾದ್‌ನನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಾ ಡ್ಯಾನ್ಸ್ ಮಾಡುತ್ತಲೇ ಹೇಳಿದಳು, “ಪ್ರಸಾದ್‌, ಹೀಗೆ ಮೈ ಮರೆತು ಎಲ್ಲಿಗಾದರೂ ಹಾರಿ ಹೋಗೋಣ ಅನ್ಸುತ್ತೆ. ನನ್ನನ್ನು ಹೀಗೆ ಬಂಗಾರದ ಪಂಜರದ ಪಕ್ಷಿ ಆಗಿಸಬೇಡಿ…. ನಾನು ಅತಿ ಸಾಮಾನ್ಯ ಹೆಣ್ಣು…. ಶ್ರೀಮಂತಿಕೆಯ ಮೇಕಪ್‌ನಿಂದ ನನ್ನನ್ನು ಸ್ಪೆಷಲ್ ಆಗಿಸಬೇಡಿ….”

ಅದಕ್ಕೆ ಪ್ರಸಾದ್‌ ಉತ್ತರಿಸುವ ಮೊದಲೇ ನಶೆ ಏರಿಸಿಕೊಂಡಿದ್ದ ಅವಳು, “ಹಾರಲೇ… ನಾ ಹಾಡಲೇ… ಮುಗಿಲೇ ನಿನ್ನ ಎತ್ತರಕ್ಕೆ….” ಎಂದು ಜೋರಾಗಿ ಹಾಡತೊಡಗಿದಳು.

ಅಲ್ಲಿದ್ದ ಅತಿಥಿಗಳೆಲ್ಲ ಅವಳನ್ನೇ ನೋಡತೊಡಗಿದರು. ಅಲ್ಲೊಂದು ದೊಡ್ಡ ಸೀನ್‌ ಕ್ರಿಯೇಟ್‌ ಆಗಿತ್ತು. ಪ್ರಸಾದನ ಪ್ರತಿಷ್ಠೆ ಪ್ರಪಾತಕ್ಕಿಳಿದಿತ್ತು. ಅವಳನ್ನು ದರದರನೆ ಎಳೆದೊಯ್ದವನೆ ಕಾರಿನ ಹಿಂದಿನ ಸೀಟ್‌ನಲ್ಲಿ ತಳ್ಳಿ, ವೇಗವಾಗಿ ಮನೆಯತ್ತ ಓಡಿಸಿದ. ಆ ರಾತ್ರಿಯಿಡೀ ಅವನಿಗೆ ನಿದ್ದೆ ಬರಲಿಲ್ಲ. ತಾನು ಏನು ತಪ್ಪು ಮಾಡಿದ್ದರಿಂದ ಸುಸಂಸ್ಕೃತ, ಸಭ್ಯ ಪರಿವಾರದ ಹುಡುಗಿ ಇಂದು ಹೀಗಾಗಿ ಹೋದಳೆಂದು ಅವನಿಗೆ ಅರ್ಥವೇ ಆಗಲಿಲ್ಲ. ಅವಳೇನು ಬಯಸಿದ್ದಳೋ ಅದನ್ನೇ ಬಡಬಡಿಸುತ್ತಾ ಹಾಡಿದ್ದಳು.

ಮಾರನೇ ಬೆಳಗ್ಗೆ ಅವಳು ಎದ್ದ ನಂತರ ಪ್ರಸಾದ್‌ ಪ್ರಶ್ನಿಸಿದ, “ಇಂಥ ಶ್ರೀಮಂತ ಜೀವನಕ್ಕಾಗಿ ಎಲ್ಲರೂ ಸಾಯುತ್ತಾರೆ. ನಿನಗೇನು ಕೊರತೆ ಆಗಿದೆ ಅಂತ ಹೀಗೆ ಆಡ್ತಿದ್ದೀಯಾ…..?”

ಅವಳು ಏನೂ ಉತ್ತರಿಸದೆ ಕಿಟಕಿಯಾಚೆಯ ಶೂನ್ಯ ನೋಡುತ್ತಾ ಇದ್ದುಬಿಟ್ಟಳು. ಅವನಿಗೆ ತನ್ನ ವಾಸ್ತವ ಪರಿಸ್ಥಿತಿ ಅರಿವಾಗಲಿ ಎಂಬುದಲ್ಲವೇ ಅವಳಿಗೆ ಬೇಕಾದುದು. ಅಂದು ಸಂಜೆ ಅವಳು ಅತ್ತೆ ಜೊತೆ ಮತ್ತೊಂದು ಮಹಿಳಾ ಸಮಾಜಕ್ಕೆ ಭಾಷಣ ನೀಡಲು ಹೊರಟಳು. ಸದಾ ಕ್ಲಬ್ಬು, ಸಮಾಜ ಸೇವೆಯಲ್ಲಿ ಊರು ತಿರುಗಾಟ…. ಇದೇ ಅವಳ ದಿನಚರಿ ಆಗಿಹೋಗಿತ್ತು. ತನ್ನ ಬಳಿ ಎಲ್ಲಾ ಇದ್ದರೂ ತಾನೇಕೆ ಯಾವುದರಲ್ಲೂ ಆಸಕ್ತಿ ಉಳಿಸಿಕೊಂಡಿಲ್ಲ ಎಂದು ಅವಳಿಗೆ ಅರ್ಥವೇ ಆಗುತ್ತಿರಲಿಲ್ಲ.

ಈ ಮಧ್ಯೆ ಅವಳು ಒಂದು ಖಾಸಗಿ ಶಾಲೆಯಲ್ಲಿ ಹೈಸ್ಕೂಲ್ ‌ಕನ್ನಡ ಟೀಚರ್‌ ಬೇಕೆಂಬ ಜಾಹೀರಾತು ನೋಡಿದಳು. ಮನೆಯಲ್ಲಿ ಯಾರಿಗೂ ತಿಳಿಸದೆ ಅವಳು ಅದಕ್ಕೆ ಅರ್ಜಿ ಹಾಕಿ ಸಂದರ್ಶನ ಮುಗಿಸಿಕೊಂಡು ಬಂದಳು. ಅವಳ ಡೆಮೋ ಕ್ಲಾಸ್‌ನಿಂದ ಪ್ರಭಾವಿತರಾಗಿದ್ದ ಪ್ರಿನ್ಸಿಪಾಲರು ಕೊಡಲೇ ಅವಳಿಗೆ ಅಪಾಯಿಂಟ್‌ಮೆಂಟ್‌ ಆರ್ಡರ್‌ ಕಳುಹಿಸಿದ್ದರು. ಅದನ್ನು ಎಲ್ಲರಿಗೂ ತೋರಿಸಿ ವಿಷಯ ತಿಳಿಸಿದಳು.

“ಯಾಕೆ ಬೇಕು ನಿನಗೆ ಈ ಕಂಡವರ ಚಾಕರಿ? ಅವರು ನಿನಗೆ ಕೊಡುವ ಸಂಬಳಕ್ಕಿಂತ ನಿನ್ನ ತಿಂಗಳ ಮೇಕಪ್‌, ಸೀರೆಗಳ ಬೆಲೆ 4 ಪಟ್ಟು ದುಬಾರಿ….”

“ಇಲ್ಲ…. ನನಗೆ ನನ್ನ ಸ್ವಂತ ಕಾಲ ಮೇಲೆ ಹೀಗೆ ನಿಲ್ಲಬೇಕಿದೆ.”

“ಹಾಗಿದ್ದರೆ ನಿನಗೆ ಎಕ್ಸ್ ಟ್ರಾ ಖರ್ಚು ಅಂತ ಇನ್ನು ಮುಂದೆ ನಾನೇನೂ ಕೊಡುವುದಿಲ್ಲ. ನಿನಗೆ ಬರುವ ಸಂಬಳದಲ್ಲೇ ಎಲ್ಲಾ ನಿಭಾಯಿಸಿಕೋ!”

ಈ ಮಾತುಗಳು ಅವಳಿಗೆ ಎಳ್ಳಷ್ಟೂ ಬೇಸರ ತರಿಸಲಿಲ್ಲ. ಮೊದಲ ಸಲ ಗರ್ಭಪಾತವಾಗಿದ್ದ ನಂತರ ಅವಳು ತಾನಾಗಿ ಬಯಸಿದರೂ ಮತ್ತೆ ಮಗುವಿನ ಭಾಗ್ಯ ಪಡೆಯಲಾಗಲಿಲ್ಲ. ಅದು ಆ ಮನೆಯಲ್ಲಿ ದೊಡ್ಡ ಕೊರತೆ ಆಗಿರಲಿಲ್ಲ. ಮಕ್ಕಳ ಸಾಂಗತ್ಯಕ್ಕಾಗಿ ಅವಳು ಈ ದಾರಿ ಆರಿಸಿಕೊಂಡಿದ್ದಳು.

ತಾನಾಗಿ ಅವಳು ತನ್ನ ಸ್ವಾತಂತ್ರ್ಯವನ್ನು ಅತ್ತೆ ಮನೆಯವರ ಬಳಿ ಒತ್ತೆ ಇಟ್ಟಿದ್ದಳು. ಆರಂಭದಲ್ಲೇ ಅವಳು ಸ್ವಾಭಿಮಾನದಿಂದ ಸಿಡಿದು ನಿಂತಿದ್ದರೆ ಇಂದು ಈ ಗತಿ ಬರುತ್ತಿರಲಿಲ್ಲ. ಈಗ ಅವಳ ನಿರ್ಧಾರ ದೃಢವಾಗಿತ್ತು. ಅವಳು ಖಂಡಿತಾ ಹಾಗೇ ಮಾಡುವುದಾಗಿ ಹೇಳಿದಳು.

ಬಂಗಾರದ ಪಂಜರದ ಹಕ್ಕಿಯಾಗಿ ರೆಕ್ಕೆ ಪುಕ್ಕ ಕತ್ತರಿಸಿಕೊಂಡವಳಂತೆ ಎಷ್ಟು ದಿನ ಅವಳು ಈ ರೀತಿ ಖೈದಿಯಾಗಿ ಇರಲು ಸಾಧ್ಯ? ತನಗೂ ಒಂದು ಮನಸ್ಸಿದೆ, ಸ್ವಾಭಿಮಾನವಿದೆ, ತನ್ನ ಆತ್ಮಸಾಕ್ಷಿ ನುಡಿದಂತೆಯೇ ತಾನು ನಡೆಯುವುದು ಎಂದು ಎಲ್ಲರೆದುರು ಖಚಿತಪಡಿಸಿದಳು.

“ಇನ್ನೂ ಈ ಕೃತಕ ಜೀವನ ನಾನು ಬಾಳಲಾರೆ. ನನ್ನಿಂದ ನಿಮಗೆ ಯಾವುದೇ ತೊಂದರೆ ಆಗದು. ಬರುವ ಸಂಬಳದಲ್ಲಿ ನನ್ನ ಖರ್ಚು ವೆಚ್ಚ ನೋಡಿಕೊಂಡಿರುತ್ತೇನೆ. ಈ ಕೃತಕ ಬದುಕಿನ ಬದಲು ನನ್ನದಾದ ಹಿಂದಿನ ಆದರ್ಶ ಜೀವನ ನಡೆಸುತ್ತೇನೆ. ಈ ಮನೆಯಲ್ಲಿದ್ದು ನಾನು ಶಾಲೆಗೆ ಹೋಗುವುದು ನಿಮ್ಮ ಪ್ರತಿಷ್ಠೆಗೆ ಕುಂದಾದರೆ, ಇಂದೇ ನಾನು ಬೇರೆ ಹಾಸ್ಟೆಲ್ ಗೆ ಹೋಗುವೆ. ಅಗತ್ಯ ಅನ್ನಿಸಿದರೆ ನೀವು ಬೇರೆ ಮದುವೆ ಆಗಿ!” ಎಂದಾಗ ಎಲ್ಲರಿಗೂ ಶಾಕ್‌ ತಗುಲಿತ್ತು.

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ