ಸಾಮಾನ್ಯವಾಗಿ ನಮ್ಮ ತಪ್ಪು ಅಭ್ಯಾಸಗಳೇ ನಮ್ಮನ್ನು ಅನಾರೋಗ್ಯಕ್ಕೆ ಈಡು ಮಾಡುತ್ತವೆ. ಊಟ ತಿಂಡಿಯ ಸ್ವಚ್ಛತೆ ಕಡೆ ಗಮನ ಕೊಡದಿರುವುದು, ಕಲುಷಿತ ಆಹಾರ ಸೇವನೆ ಇತ್ಯಾದಿಗಳ ಕಾರಣದಿಂದ ಬ್ಯಾಕ್ಟೀರಿಯಾ ನಮ್ಮ ದೇಹ ಪ್ರವೇಶಿಸುತ್ತದೆ, ರೋಗ ತರುತ್ತದೆ. ಸಂಶೋಧನೆಗಳಿಂದ ತಿಳಿದು ಬಂದ ವಿಚಾರವೆಂದರೆ, ಕಲುಷಿತ ಆಹಾರದ ಸೇವನೆಯಿಂದ ಬ್ಯಾಕ್ಟೀರಿಯಾ ನಮ್ಮ ದೇಹ ಪ್ರವೇಶಿಸಿದ ತಕ್ಷಣ, ಅದರ ಸಂಖ್ಯೆ ಬಹು ಬೇಗ ಹಲವು ಪಟ್ಟು ಹೆಚ್ಚುತ್ತದೆ. ಇದರಿಂದ ಹೊಟ್ಟೆನೋವು, ವಾಂತಿಭೇದಿ, ಜ್ವರ ಇತ್ಯಾದಿ ಹೆಚ್ಚುತ್ತದೆ. ಈ ಸಮಸ್ಯೆ ಮುಂದೆ ತೀವ್ರ ಉಲ್ಬಣಗೊಂಡಾಗ, ಅದು ನಮ್ಮ ಇಮ್ಯೂನಿಟಿ ಮೇಲೂ ಪ್ರಭಾವ ಬೀರುತ್ತದೆ.

ಆದರೆ ಇದೀಗ ಇಡೀ ವಿಶ್ವ ಕೋವಿಡ್‌ ಜೊತೆ ಹೋರಾಡುತ್ತಿರುವಾಗ, ನಿರ್ಲಕ್ಷ್ಯ ವಹಿಸುವ ಪ್ರಶ್ನೆಯೇ ಇಲ್ಲ. ಹೀಗಿರುವಾಗ ನೀವು ಮನೆಯಲ್ಲೇ ಆಹಾರ ತಯಾರಿಸಿ ಅಥವಾ ಹೊರಗಿನಿಂದ ಊಟ ತಿಂಡಿ ತರಿಸಿ ಶುಭ್ರತೆ ಸ್ವಚ್ಛತೆಗಳತ್ತ ಮೊದಲು ಗಮನಹರಿಸಿ. ಇಲ್ಲದಿದ್ದರೆ ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ಅದು ಭಾರಿ ಹಾನಿಗೆ ನಾಂದಿ.

ವಿಶಿ ಪ್ರಕಾರ, ವಿಶ್ವದೆಲ್ಲೆಡೆ ಪ್ರತಿ ವರ್ಷ ಕಲುಷಿತ ಆಹಾರ ಸೇವನೆಯಿಂದ 10ರಲ್ಲಿ ಒಬ್ಬ ವ್ಯಕ್ತಿ ರೋಗಿಯಾದರೆ, ಹಾಗೂ ಪ್ರತಿ ವರ್ಷ ಇದರಿಂದಾಗಿ 4 ಲಕ್ಷ 20 ಸಾವಿರ ಜನ ಸಾಯುತ್ತಿದ್ದಾರೆ. ಹೀಗಾಗಿ ಈ ಸಂದರ್ಭದಲ್ಲಿ ನಾವು ಹೇಗೆ ನಮ್ಮ ಆಹಾರವನ್ನು ಹೈಜಿನಿಕ್‌ ಆಗಿ ಇರಿಸಿಕೊಳ್ಳುವುದು, ಆ ಮೂಲಕ ಕುಟುಂಬದ ಆರೋಗ್ಯ ಹೇಗೆ ಕಾಪಾಡಿಕೊಳ್ಳುವುದು ಎಂಬುದು ಬಲು ಮುಖ್ಯವಾಗುತ್ತದೆ.

ಹಣ್ಣು ತರಕಾರಿಗಳನ್ನು ನೀವು ಬಳಸುವ ಮೊದಲು ಚೆನ್ನಾಗಿ ತೊಳೆಯದಿದ್ದರೆ, ಇದರಿಂದ ರೋಗ ತಪ್ಪಿದ್ದಲ್ಲ. ಈಗಂತೂ ಕೊರೋನಾ ಸೀಸನ್‌ ಆದ್ದರಿಂದ, ಹೊರಗಿನಿಂದ ಇದನ್ನು ತಂದ ತಕ್ಷಣ 2-3 ಗಂಟೆ ಕಾಲ ಬಿಸಿಲಿಗಿಟ್ಟು, ನಂತರ ಚೆನ್ನಾಗಿ ತೊಳೆದು, ಒಣಗಿಸಿ ಆಮೇಲೆಯೇ ಬಳಸಬೇಕು. ಆಗ ಮಾತ್ರ ನೀವು ಈ ಪದಾರ್ಥ ಯಾವ ಯಾವ ವ್ಯಕ್ತಿಗಳನ್ನು ಹಾದು ಬಂದಿದೆಯೋ ಅವರೆಲ್ಲರ ರೋಗಗಳಿಂದ ಬಚಾವಾಗಬಹುದು. ಆಗ ಮಾತ್ರ ಅಂಥ ವೈರಸ್‌ಗಳ ಕಾಟ ನಿಮಗೆ ಇರದು. ಜೊತೆಗೆ ಹಣ್ಣು ತರಕಾರಿ ಮೇಲೆ ಸಿಂಪಡಿಸಲಾಗಿರುವ ಕೀಟನಾಶಕ ಕೆಮಿಕಲ್ಸ್ ನಿಂದಲೂ ನೀವು ಪಾರಾಗುವಿರಿ.

ಶುಭ್ರತೆ ಹೇಗೆ?

ಪ್ರತಿಯೊಂದು ಹಣ್ಣು ತರಕಾರಿಯನ್ನೂ ನಲ್ಲಿ ಕೆಳಗಿನ ಹರಿವು ನೀರಲ್ಲಿ ಹಿಡಿದು, ನಿಧಾನ ತಿಕ್ಕಿ ತೊಳೆಯಿರಿ. ಇದರಿಂದ ಅದಕ್ಕಂಟಿದ ಕೀಟನಾಶಕ, ಕೀಟಾಣು ತೊಲಗುತ್ತದೆ. ಫುಡ್‌ಡ್ರಗ್‌ ಅಡ್ಮಿನ್‌ ಪ್ರಕಾರ, ಯಾವುದೇ ಸೋಪು, ಡಿಟರ್ಜೆಂಟ್‌ ಬಳಸಿ ಇವನ್ನು ತೊಳೆಯುವ ಅಗತ್ಯವಿಲ್ಲ. ಏಕೆಂದರೆ ಅವುಗಳ ಸ್ಟ್ರಾಂಗ್‌ ಕೆಮಿಕಲ್ಸ್ ಸಂಪರ್ಕ ನಿಮ್ಮ ಹಾರ್ಮೋನ್‌ ಬ್ಯಾಲೆನ್ಸ್ ಬ್ಯಾಲೆನ್ಸ್ ಹಾಳು ಮಾಡುವುದರಿಂದ ನಿಮ್ಮ ಆರೋಗ್ಯಕ್ಕೆ ಹಾನಿ ತಪ್ಪಿದ್ದಲ್ಲ. ಹೀಗಾಗಿ ಶುದ್ಧ ನೀರು ಇಂಥ ಸ್ವಚ್ಛತೆಗೆ ಬೇಕಾದಷ್ಟಾಯಿತು. ಆದರೆ ಇಂಥ ಕ್ಲೀನಿಂಗ್‌ಗೆ ಮೊದಲು, ನಂತರ ನಿಮ್ಮ ಕೈಗಳನ್ನು ಚೆನ್ನಾಗಿ ತೊಳೆದಿರಬೇಕೆಂದು ತಿಳಿದಿರಿ.

ಹಣ್ಣು ತರಕಾರಿ ಶುಚಿಗೊಳಿಸಲು, ಒಂದು ಬಕೆಟ್‌ ನೀರಿಗೆ ತುಸು ವಿನಿಗರ್‌, ಕಲ್ಲುಪ್ಪು, 2-3 ಚಿಟಕಿ ಅರಿಶಿನ, ಬೇಕಿಂಗ್‌ ಪೌಡರ್‌ಹಾಕಿ, ಅದರಲ್ಲಿ ತರಕಾರಿಯನ್ನು 1-2 ಗಂಟೆ ಕಾಲ ನೆನೆಸಿ, ನಂತರ ತೊಳೆದು ಒರೆಸಿಕೊಳ್ಳುವುದರಿಂದ ಹೆಚ್ಚಿನ ಲಾಭವಿದೆ. ಇದನ್ನು ಫ್ರಿಜ್‌ನಲ್ಲಿ ಎತ್ತಿರಿಸಿ, ಬೇಕಾದಾಗ ಬಳಸಿ.

ಅರಿಶಿನ, ವಿನಿಗರ್‌, ಕಲ್ಲುಪ್ಪು ಬೆರೆತ ಉಗುರು ಬೆಚ್ಚಗಿನ ನೀರಿನಲ್ಲಿ ತರಕಾರಿ ನೆನೆಸಿ, ನಂತರ ತೊಳೆಯುವುದರಿಂದಲೂ ಹೆಚ್ಚಿನ ಲಾಭವಿದೆ.

ಆದರೆ ಹಣ್ಣು ತರಕಾರಿಗಳನ್ನು ಇದರಲ್ಲಿ 1-2 ಗಂಟೆ ಕಾಲ ನೆನೆಸಿಡಬೇಕು ಎಂಬುದನ್ನು ಮಾತ್ರ ಮರೆಯದಿರಿ, ಆಗಲೇ ಅದರ ಸಾರ ಇವುಗಳ ಮೇಲ್ಪದರ ಶುಚಿಗೊಳಿಸಲು ಸಾಧ್ಯ. ನಂತರ ಕೊಳಾಯಿ ನೀರಲ್ಲಿ ತೊಳೆದು, ಬಟ್ಟೆ ಮೇಲೆ ಇಡೀ ರಾತ್ರಿ ಹರಡಿ, ನಂತರ ಫ್ರಿಜ್‌ನಲ್ಲಿ ಎತ್ತಿರಿಸಿಕೊಳ್ಳಿ. ಇದರ ಉತ್ತಮ ಪರಿಣಾಮಕ್ಕಾಗಿ ಮೇಲಿನ ಅಂಶಗಳೊಂದಿಗೆ ತುಸು (1 ಹೋಳು) ನಿಂಬೆ ರಸ ಹಿಂಡಿಕೊಂಡರೆ, ಪರಿಣಾಮ ಇನ್ನಷ್ಟು ಚೆನ್ನಾಗಿರುತ್ತದೆ.

ದವಸಧಾನ್ಯ ಶುಚಿಪಡಿಸಿ

ವಿಶಿ ಪ್ರಕಾರ, ದವಸ ಧಾನ್ಯಗಳಿಂದ ವೈರಸ್‌ ಹರಡುವ ಪ್ರಕ್ರಿಯೆ ಬಹುತೇಕ ಇಲ್ಲ ಎನ್ನಬಹುದು. ಆದರೂ ಈ ಮಹಾಮಾರಿ ಕಾಟದಿಂದ ತಪ್ಪಿಸಿಕೊಳ್ಳಲು ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಎಲ್ಲಕ್ಕೂ ಮೊದಲು ಹೊರಗಿನ ಓಡಾಟವನ್ನು ಆದಷ್ಟೂ ತಪ್ಪಿಸಿ. ಆದರೆ ಅಡುಗೆ ಮಾಡಲು ಈ ದವಸಧಾನ್ಯ ಅಂತೂ ಬೇಕೇಬೇಕು. ಹೀಗಾಗಿ ನೀವೇ ಇದನ್ನು ತಂದರೂ ಸರಿ ಅಥವಾ ಆನ್‌ಲೈನ್‌ನಲ್ಲಿ ತರಿಸಿದರೂ ಸರಿ, ತಂದ ಸಾಮಗ್ರಿಗಳನ್ನು ಹಾಗೇ ನೇರವಾಗಿ ಡಬ್ಬಕ್ಕೆ ತುಂಬಿಸಿಡುವ ಹಳೆಯ ಅಭ್ಯಾಸ ಬಿಟ್ಟುಬಿಡಿ.

ಹೀಗಾಗಿ ತಂದ ಪದಾರ್ಥಗಳನ್ನು 1 ಗಂಟೆ ಕಾಲ ಒಳ್ಳೆ ಬಿಸಿಲಿಗಿಡಿ. ನಂತರ ಲೈಪ್ಸ್ ಮೇಲೆ ಆಲ್ಕೋಹಾಲ್‌ಯುಕ್ತ ಸ್ಯಾನಿಟೈಸರ್‌, ಡಿಸ್‌ ಇನ್‌ಫೆಕ್ಟೆಂಟ್‌ ಸ್ಪ್ರೇ ಬಳಸಿ ಶುಚಿಗೊಳಿಸಿ. ಇದರಿಂದಾಗಿ ಅದರಲ್ಲಿನ ಬ್ಯಾಕ್ಟೀರಿಯಾ ನಾಶವಾಗುತ್ತದೆ ಹಾಗೂ ವೈರಸ್ ಹರಡುವಿಕೆ ಬಹುತೇಕ ಇಲ್ಲವಾಗುತ್ತದೆ.

ಸಾಧ್ಯವಿದ್ದಷ್ಟೂ ಪ್ಯಾಕ್ಡ್ ಸಾಮಗ್ರಿ ಮಾತ್ರ ಕೊಳ್ಳಿರಿ, ಲೂಸ್‌ ಬೇಡ. ಲೂಸ್‌ ಸಾಮಗ್ರಿ ಹೆಚ್ಚು ಜನರ ಸಂಪರ್ಕದ ಮೂಲಕ ಹಾದು ಬರುತ್ತದೆ. ಆದರೆ ಪ್ಯಾಕ್ಡ್ ಸಾಮಗ್ರಿಯಲ್ಲಿ ಈ ರಿಸ್ಕ್ ಎಷ್ಟೋ ಕಡಿಮೆ ಆಗುತ್ತದೆ. ಜೊತೆಗೆ ಮೇಲೆ ಹೇಳಿದ ವಿಧಾನದಿಂದ ಪ್ಯಾಕೆಟ್ಸ್ ಶುಚಿಗೊಳಿಸುವುದೂ ಎಷ್ಟೋ ಸುಲಭವಾಗಿದೆ.

ಹೊರಗಿನಿಂದ ಆಹಾರ ತರಿಸಿದಾಗ

ಲಾಕ್‌ಡೌನ್‌ನಲ್ಲಿ ಸದಾ ಮನೆಯಲ್ಲೇ ಬಂಧಿಗಳಾಗಿದ್ದು ಒಂದೇ ತರಹದ ಊಟ ತಿಂಡಿ ಸವಿದು ಯಾರಿಗೆ ತಾನೇ ಬೋರ್ ಆಗಿರೋಲ್ಲ ಆಗ ವಿಧಿಯಿಲ್ಲದೆ ನಡುನಡುವೆ ಹೊರಗಿನಿಂದ ಆಹಾರ ತರಿಸಬೇಕಾಗುತ್ತದೆ. ಹೀಗಾಗಿ ಹೊರಗಿನ ಊಟ ಮನೆಗೆ ಬಂದ ತಕ್ಷಣವೇ ಅದನ್ನು ಆಕ್ರಮಿಸದಿರಿ. ಏಕೆಂದರೆ ಪ್ಲಾಸ್ಟಿಕ್‌ ಕವರ್‌ನಲ್ಲಿ ಕೊರೋನಾ ವೈರಸ್‌ 72 ಗಂಟೆ ಕಾಲ ಇರುತ್ತದಂತೆ! ಆದರೆ ಆಹಾರದಿಂದ ಕೊರೋನಾ ಹರಡುತ್ತದೆ ಎಂಬುದು ಎಲ್ಲೂ ಸಾಬೀತಾಗಿಲ್ಲವಾದ್ದರಿಂದ, ನಮ್ಮ ಎಚ್ಚರಿಕೆಯಲ್ಲಿ ನಾವಿರುವುದು ಲೇಸು.

ಹೀಗಾಗಿ ನೀವು ಹೊರಗಿನ ಆಹಾರ ತರಿಸಿದಾಗ, ಕಾಂಟ್ಯಾಕ್ಟಸ್‌ ಡೆಲಿವರಿ ಆನ್‌ಲೈನ್‌ ಪೇಮೆಂಟ್‌ ಬಗ್ಗೆ ಮೊದಲೇ ಎಚ್ಚೆತ್ತು ಅಂಥ ಆಪ್ಶನ್‌ ಆರಿಸಿ.

ಆಹಾರ ಮನೆಗೆ ಬಂದ ಮೇಲೆ, ಅದನ್ನು ನಿಮ್ಮ ಪಾತ್ರೆಗೆ ಹಾಕಿಸಿಕೊಂಡು ಮರೆಯದೆ ಬಿಸಿ ಮಾಡಿ. ಆಹಾರ ತೆಗೆದುಕೊಂಡ ಮೇಲೆ, ಅದರ ಪ್ಯಾಕೆಟ್ಸ್ ತೆರೆದ ನಂತರ, ಅಗತ್ಯ ಹ್ಯಾಂಡ್‌ ವಾಶ್‌ ಮಾಡಿ. ಅಡುಗೆಮನೆಯಲ್ಲಿ,

ಎಲ್ಲಿ ಆ ಹೊರಗಿನ ಆಹಾರ ಇರಿಸಿದ್ದೀರೋ, ಆ ಜಾಗವನ್ನೂ ಚೆನ್ನಾಗಿ ಡಿಸ್‌ಇನ್‌ಫೆಕ್ಟೆಂಟ್‌ ಮಾಡಿಬಿಡಿ. ಈ ರೀತಿ ಆಹಾರದ ಹೈಜೀನ್‌ ಬಗ್ಗೆ ಗಮನ ಇರಿಸಿಕೊಂಡು ನಿಮ್ಮನ್ನು ನೀವು ಸುರಕ್ಷಿತರನ್ನಾಗಿಸಿಕೊಳ್ಳಿ.

ಹಾಲಿನ ಪ್ಯಾಕೆಟ್ಸ್ ಶುಚಿತ್ವ.

Food-2

ಹಾಲಂತೂ ಅತ್ಯಗತ್ಯ ಆಹಾರ ಸಾಮಗ್ರಿಗಳಲ್ಲಿ ಒಂದು. ಹಾಲಿಲ್ಲದ ಯಾವ ಮನೆಯಲ್ಲಿ ತಾನೇ ಬೆಳಗಿನ ಚಟುವಟಿಕೆ ಆರಂಭವಾಗುತ್ತದೆ. ಆದರೆ ಈ ಕೊರೋನಾ ಕಾಲದಲ್ಲಿ ಈ ಹಾಲಿನ ಪ್ಯಾಕೆಟ್‌ ಶುಚಿಗೊಳಿಸುವುದು ಹೇಗೆ? ಸೇಫ್ಟಿ ಜೊತೆ ದೇಹಕ್ಕೆ ಪೋಷಕಾಂಶಗಳೂ ಬೇಕೇಬೇಕಲ್ಲ?

`ಫುಡ್‌ ಸೇಫ್ಟಿ ಸ್ಯಾಂಡರ್ಡ್‌ ಅಥಾರಿಟಿ ಆಫ್‌ಇಂಡಿಯಾ’ ಸಂಸ್ಥೆಯು ಹಾಲಿನ ಸೇಫ್ಟಿ  ಹೈಜೀನ್‌ಗಾಗಿ ಕೆಲವು ಸಲಹೆ ನೀಡಿದೆ. ಅದರ ಪ್ರಕಾರ ನೀವು ಹಾಲಿನ ಪ್ಯಾಕೆಟ್‌ ಕೊಂಡಾಗ, ಅದನ್ನು ಮೊದಲು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಿರಿ. ನಂತರ ಹಾಲಿನ ಪ್ಯಾಕೆಟ್‌ ಒಣಗಲು ಬಿಡಿ ಅಥವಾ ಟಿಶ್ಯು ಪೇಪರ್‌ ಬಳಸಿ ಚೆನ್ನಾಗಿ ಒರೆಸಿಕೊಳ್ಳಿ. ಹಾಲಿನ ಪಾತ್ರೆಗೆ ಅದರ 1 ಹನಿ ನೀರೂ ಬೀಳಬಾರದು. ನಂತರ ಎಂದಿನಂತೆ ಹಾಲು ಕಾಯಿಸಿ. ಇವೆಲ್ಲಕ್ಕೂ ಮೊದಲು ನೀವು ಚೆನ್ನಾಗಿ ಕೈ ತೊಳೆದಿರಬೇಕು.

ಕ್ರಿಮಿಕೀಟಗಳಿಗೆ ಗುಡ್‌ ಬೈ

ಕ್ರಿಮಿಕೀಟಗಳನ್ನು ಮನೆಯಿಂದ ಮಾರು ದೂರ ಇರಿಸಲು ಪೆಸ್ಟ್ ಕಂಟ್ರೋಲ್‌ ಮಾಡಿಸುವುದು ಬಲು ಅವಶ್ಯಕ. ಏಕೆಂದರೆ ಫುಡ್ ಹೈಜೀನ್‌ಗೆ ಇದು ಬಲು ಅತ್ಯಗತ್ಯ. ಈ ಕೀಟಗಳು ಸಾಮಾನ್ಯವಾಗಿ ಫ್ರಿಜ್‌ ಕೆಳಗೆ, ಮೂಲೆ, ಕಿಚನ್‌ ಕಬೋರ್ಡ್‌, ಸಿಂಕ್‌ ಕೆಳಭಾಗ, ಸಿಲಿಂಡರ್‌ ಏರಿಯಾ ಇತ್ಯಾದಿ ಕಡೆ ಅಡಗಿರುತ್ತವೆ. ಹೀಗಾಗಿ ಸುಲಭವಾಗಿ ಕಿಚನ್‌ ಕಟ್ಟೆ ಮೇಲೆ ಓಡಾಡುವುದು, ಪಾತ್ರೆಗಳ ಬಳಿ ಎಡತಾಕುವುದು ಮಾಡುತ್ತಿರುತ್ತವೆ.

ಇದರಿಂದಾಗಿ ಸಹಜವಾಗಿ ನಿಮಗೆ ಫುಡ್‌ ಪಾಯಿಸನಿಂಗ್‌ ಆದೀತು. ಇದು ನಿಮ್ಮ ಇಮ್ಯುನಿಟಿಯನ್ನು ದುರ್ಬಲಗೊಳಿಸುತ್ತದೆ. ಆದರೆ ಕೊರೋನಾ ವೈರಸ್‌ ವಿರುದ್ಧ ಹೋರಾಡಲು ಇಮ್ಯುನಿಟಿ ಹೆಚ್ಚಿಸಿಕೊಳ್ಳಬೇಕಾದುದು ಅತಿ ಅಗತ್ಯ. ಹೀಗಾಗಿ ಆಗಾಗ ಇಂಥ ಏರಿಯಾವನ್ನು ಡೆಟಾಲ್‌, ಫ್ಲೋರ್‌ ಕ್ಲೀನರ್‌ ಬೆರೆಸಿ ಶುಚಿಗೊಳಿಸುತ್ತಿರಬೇಕು. ಯಾವ ಮೂಲೆಯಲ್ಲೂ ಒಂದಿಷ್ಟು ಕಸ ಹರಡದಂತೆ ಎಚ್ಚರವಹಿಸಿ.

ಸ್ವಚ್ಛ ನೀರನ್ನೇ ಬಳಸಿ

ಫುಡ್‌ ಹೈಜೀನಿನ ಮೊದಲ ಪಾಠ, ಅಡುಗೆ ಮಾಡಲು ಸದಾ ಶುದ್ಧ ನೀರನ್ನಷ್ಟೇ ಬಳಸಬೇಕು. ಏಕೆಂದರೆ ಕಲುಷಿತ ನೀರಿನಿಂದ ದೇಹಾರೋಗ್ಯದ ಮೇಲೆ ದುಷ್ಪರಿಣಾಮ ತಪ್ಪಿದ್ದಲ್ಲ. ಇದರಿಂದಾಗಿ ವಾಂತಿಭೇದಿ, ಡಯೇರಿಯಾ, ಹೊಟ್ಟೆಯ ಹಲವು ರೋಗಗಳು ಮೈಗೂಡುತ್ತವೆ. ಹೀಗಾಗಿ ಯಾವಾಗ ಅಡುಗೆ ಮಾಡಿದರೂ, ದವಸಧಾನ್ಯ, ತರಕಾರಿ ಇತ್ಯಾದಿ ಎಲ್ಲಾ ಶುದ್ಧ ನೀರಿನಿಂದ ತೊಳೆದು, ಅಡುಗೆಗೂ 100% ಫಿಲ್ಟರ್ಡ್‌ ನೀರನ್ನೇ ಬಳಸಬೇಕು.

ಅಡುಗೆಮನೆ ಶುಚಿತ್ವ

ಆಹಾರದ ಹೈಜೀನ್‌ ಎಂದೊಡನೆ ಮುಂದಿನ ಪಾಠ, ಅಡುಗೆ ಮನೆ ಶುಚಿತ್ವವೇ ಆಗಿದೆ. ಏಕೆಂದರೆ ಇಡೀ ಮನೆಯವರೆಲ್ಲರ ಸಂಪೂರ್ಣ ಅಡುಗೆಮನೆ ಶುಚಿತ್ವವನ್ನೇ ಆಧರಿಸಿದೆ. ಹೀಗಾಗಿ ಪ್ರತಿ ದಿನ ಅಡುಗೆಮನೆ ಗುಡಿಸಿ, ಸಾರಿಸಿ 100% ಪರ್ಫೆಕ್ಟ್ ನೀಟಾಗಿ ಇರಿಸಿಕೊಳ್ಳಬೇಕು. ಮನೆಯ ಇತರ ಯಾವುದೇ ಭಾಗಕ್ಕಿಂತ ಇಲ್ಲಿ ಬ್ಯಾಕ್ಟೀರಿಯಾ ಹೆಚ್ಚಲು ಹೆಚ್ಚಿನ ಅವಕಾಶವಿದೆ. ತಟ್ಟೆ, ಲೋಟ, ಬಟ್ಟಲು, ಪಾತ್ರೆ….. ಏನೇ ಇರಲಿ, ಬಳಸಿದ ನಂತರ ಈ ಕೊರೋನಾ ಕಾಲದಲ್ಲಿ ಆಗಿಂದಾಗ್ಗೆ ಶುಚಿಗೊಳಿಸುತ್ತಾ ಇರಿ. ಒಂದೆಡೆ ಪೇರಿಸಿ ಆಮೇಲೆ ತೊಳೆದರಾಯಿತು ಎಂಬ ಸೋಮಾರಿತನ ಬೇಡ. ಆಗ ಬ್ಯಾಕ್ಟೀರಿಯಾ ಹೆಚ್ಚಾಗಲು ಸಾಧ್ಯವೇ ಇಲ್ಲ.

– ಸಹನಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ