ಪ್ರತಿಯೊಂದು ತುಡಿಯುವ ಹೃದಯಕ್ಕೂ ಒಂದೇ ಆಸೆ….. ತನ್ನ ಪ್ರಿಯತಮನ ಜೊತೆ ವಿಶಾಲ ಗಗನದಲ್ಲಿ ಹಕ್ಕಿಯಂತೆ ಹಾರಾಡುತ್ತಾ ಹಾಯಾಗಿದ್ದುಬಿಡಬೇಕು, ಪ್ರಣಯ ಸರೋವರದಲ್ಲಿ ಪೂರ್ತಿ ಮಿಂದು ಪ್ರಪಂಚವನ್ನೇ ಮರೆಯೋಣ ಎಂಬಂತೆ. ಪ್ರೀತಿ, ಪ್ರೇಮ ಎನ್ನುತ್ತಾ ಸಂಗಾತಿ ಜೊತೆ ಕನಸು ಕಾಣುವುದೇ ಜೀವನವಲ್ಲ, ಮದುವೆ ಆಗಿ ಈ ಲೋಕದಲ್ಲೇ ಆ ಕನಸನ್ನು ನನಸಾಗಿಸಿಕೊಳ್ಳಬೇಕಿದೆ. ಮದುವೆ ಎಂಬುದು ತಾನಾಗಿ ಸಕ್ಸಸ್ ಆಗಿಬಿಡುವುದಿಲ್ಲ, ಅದಕ್ಕಾಗಿ ಸಂಗಾತಿಗಳಿಬ್ಬರೂ ಪ್ರಯತ್ನಪಟ್ಟು ತಮ್ಮ ಮದುವೆಯನ್ನು ಜೀವನದುದ್ದಕ್ಕೂ ಸವಿಯುವಂತಾಗಬೇಕು. ಮಧುಚಂದ್ರದ ಮೋಹಕ ದಿನಗಳು ಕಳೆದ ನಂತರ ಪ್ರೇಮದ ಗುಂಗು ಇಳಿಯಿತೆಂದು ಉದಾಸೀನ ಮಾಡಬಾರದು. ಜೀವನದ ಕಟು ವಾಸ್ತವ ದಿನಗಳು ಈ ಗಾಢತೆಯನ್ನು ಕಡಿಮೆಗೊಳಿಸಿದರೂ ಪರಸ್ಪರ ಆಪ್ತತೆ ಬಿಟ್ಟುಕೊಡಬಾರದು. ಯಾರೋ ತಮ್ಮ ಪ್ರೇಮಾಲಾಪಕ್ಕೆ ಅಡ್ಡಿಪಡಿಸಿದರು ಎಂಬಂತೆ ಖಂಡಿತಾ ಭಾವಿಸಬಾರದು.
ದಂಪತಿ ವೈವಾಹಿಕ ಜೀವನದ ಸರಿಯಾದ ಅರ್ಥ ತಿಳಿದದ್ದೇ ಆದರೆ, ಗೃಹಸ್ಥ ಜೀವನವನ್ನು ಖುಷಿ ಖುಷಿಯಾಗಿ ಕಳೆಯಬಹುದು. ಇದಕ್ಕಾಗಿ ಕೆಲವು ವಿಷಯ ಅರಿತಿರಬೇಕು, ಅದನ್ನು ಅನುಷ್ಠಾನಕ್ಕೂ ತರಬೇಕು.
ಮದುವೆ ಅಂದ್ರೆ ಪಾರ್ಟ್‌ನರ್ ಶಿಪ್ : ಮದುವೆ ಒಂದು ತರಹ 50-50 ಪಾರ್ಟ್‌ನರ್‌ಶಿಪ್. ಇಬ್ಬರಲ್ಲೂ ಪರಸ್ಪರ ತಿಳಿವಳಿಕೆ, ವಿಶ್ವಾಸ, ಗೌರವಾದರಗಳು ಇರಬೇಕಾದುದು ಅನಿವಾರ್ಯ. ಆಗ ಮಾತ್ರ ಹೃದಯಾಂತರಾಳದ ಭಾವನೆಗಳನ್ನು ನಿಸ್ಸಂಕೋಚವಾಗಿ ಶೇರ್ ಮಾಡಬಹುದು. ಪರಸ್ಪರ ಕಷ್ಟ ಸುಖ, ತೊಂದರೆ, ಸಮಸ್ಯೆ ಅರಿಯಬಹುದು.
ಕರಣ್ ಸಮೀರ್ ಉತ್ತಮ ಫ್ರೆಂಡ್ಸ್. ಇಬ್ಬರೂ ಬಾಲ್ಯದಿಂದ ಪರಸ್ಪರರನ್ನು ಬಲ್ಲವರು, ಒಟ್ಟಿಗೆ ಓದಿದವರು, ಈಗ ಒಂದೇ ಕಂಪನಿಯಲ್ಲಿ ದುಡಿಯುತ್ತಿದ್ದಾರೆ. ಮನೆ ಅಥವಾ ಆಫೀಸ್ ಇರಲಿ, ಸಮೀರ್ ಎಲ್ಲರೊಂದಿಗೆ ಬೇಗ ಸ್ನೇಹ ಬೆಳೆಸಿ ಎಲ್ಲೆಡೆ ಆತ್ಮೀಯತೆ ಹರಡುತ್ತಾನೆ, ಸದಾ ಹಸನ್ಮುಖಿಯಾಗಿ ಎಲ್ಲರನ್ನೂ ನಕ್ಕು ನಲಿಸುತ್ತಾನೆ. ಎಲ್ಲರೂ ಸಮೀರನನ್ನು ಯಶಸ್ವೀ ಸ್ಮಾರ್ಟ್‌ಯಂಗ್ ಮ್ಯಾನ್ ಎನ್ನುತ್ತಾರೆ.
ಆದರೆ ಕರಣ್ ಗಂಭೀರ ಸ್ವಭಾವದವನು. ಯಾರ ಮೇಲೂ ಪ್ರಭಾವ ಬೀರಲಾಗದ ವ್ಯಕ್ತಿತ್ವ ಅವನದು. ತಾನು ಉತ್ತಮ ಜ್ಞಾನಿ ಆಗಿದ್ದರೂ ಕೆಲವೇ ಕೆಲಸಗಳಲ್ಲಿ ಮಾತ್ರ ಯಶಸ್ವೀ ಎನಿಸುತ್ತಿದ್ದಾನೆ. ಬಹಳ ಕಡಿಮೆ ಜನ ಮಾತ್ರ ಅವನನ್ನು ಮೆಚ್ಚತ್ತಾರೆ. ಒಂದು ದಿನ ಯಾವುದೋ ಸೆಮಿನಾರ್‌ನಲ್ಲಿ ಸಮೀರ್‌ನನ್ನು ಅವನ ಸ್ಮಾರ್ಟ್‌ನೆಸ್ ಬಗ್ಗೆ ಯಾರೋ ಕೇಳಿದರು, ಅದಕ್ಕೆ ಅವನು ತನ್ನ ಪತ್ನಿಯೇ ಕಾರಣ ಎಂದು ನಗುತ್ತಾ ಉತ್ತರಿಸಿದ.
ಸಮೀರನ ಈ ಉತ್ತರ ಆಶ್ಚರ್ಯಜನಕ ಆಗಿದೆ ಎಂದರೆ ತಪ್ಪಿಲ್ಲ, ಅದರಲ್ಲಿ ಅಷ್ಟು ನಿಜ ಅಡಗಿದೆ. ಮದುವೆ ಸಂದರ್ಭದಲ್ಲಿ ಯಾವ ಪತಿ ಸ್ಮಾರ್ಟ್, ಸುಂದರ, ಫಿಟ್ ಆಗಿರುತ್ತಾನೋ ಮದುವೆಯಾದ 1-2 ವರ್ಷಗಳಲ್ಲೇ ಅವನ ಮುಖ ಕಾಂತಿಹೀನವಾಗುತ್ತದೆ. ದೇಹ ತಾನಾಗಿ ದುಂಡಾಗುತ್ತದೆ.
ಸುಸ್ತು, ಸಿಡಿಮಡಿತನ ಎಷ್ಟು ಹೆಚ್ಚುತ್ತದೆಂದರೆ, ಮನೆಗೆ ಬಂದ ಮೇಲೆ ಎರಡು ಪ್ರೀತಿಯ ಮಾತೂ ಬಾರದು. ಯಾವಾಗ ವೀಕೆಂಡ್ ಬರುತ್ತದೋ, ಇಡೀ ದಿನ ಹಾಯಾಗಿ ಮಲಗಿ ವಿಶ್ರಾಂತಿ ಪಡೋಣ…… ಎಲ್ಲಿಗೂ ಹೋಗುವುದೇ ಬೇಡ ಎನಿಸಿಬಿಡುತ್ತದೆ. ಕೆಲವರು ಯಾವುದೋ ಪೈಜಾಮಾ ಜುಬ್ಬಾದಲ್ಲಿ ದಿನವಿಡೀ ಮನೆಯಲ್ಲೇ ಕಳೆದರೆ, ಹಲವರು ಸಿಕ್ಕಿದ ಬರ್ಮುಡಾ ಟೀ ಶರ್ಟ್ ಧರಿಸಿ ಪಾರ್ಕ್, ಮಾಲ್ ಎಂದು ಸುತ್ತಾಡುವುದರಲ್ಲಿ ಕಳೆದುಬಿಡುತ್ತಾರೆ.
ಇದನ್ನು ಆಳವಾಗಿ ವಿಶ್ಲೇಷಿಸಿದರೆ, ಈ ಮೂಲ ಪರಿವರ್ತನೆಗೆ ಕಾರಣ ಪತ್ನಿ. ಮದುವೆಗೆ ಮೊದಲು ಆಕೆ ತನ್ನ ಭಾವಿ ಪತಿಯ ಡ್ರೆಸ್, ಹೇರ್ ಸ್ಟೈಲ್, ಫಿಟ್ ಬಾಡಿ, ಇನ್ನಿತರ ಚಟುವಟಿಕೆಗಳ ಬಗ್ಗೆ ಜಾಗರೂಕಳಾಗಿ ಇರುತ್ತಿದ್ದಳು. ಮದುವೆ ನಂತರ ಈ ಎಲ್ಲಾ ವಿಷಯಗಳ ಕುರಿತಾಗಿ ನಿರ್ಲಕ್ಷ್ಯ ತಾಳುತ್ತಾಳೆ. ಗಂಡನಿಗೆ ಅಚ್ಚುಮೆಚ್ಚಿನ ಅಡುಗೆ ಮಾಡಿ ಬಡಿಸಬೇಕೆಂದು, ಗ್ರಾಂಡಾಗಿ ಊಟ ತಿಂಡಿ ಮಾಡಿ ಬಡಿಸುತ್ತಾ, ಅವನ ಸೊಂಟದ ಸೈಜ್ ಹೆಚ್ಚುವುದನ್ನು ಗಮನಿಸುವುದೇ ಇಲ್ಲ. ಮದುವೆ ಮಾಡಿಕೊಂಡ ಉದ್ದೇಶವೇ ಹಾಯಾಗಿ ತಿಂದುಂಡುಕೊಂಡು ಇರುವುದು ಎಂದಾಗಿರುತ್ತದೆ. ಅವರವರ ಚಿಂತೆ ಅವರೇ ಮಾಡಿ ಫಿಸಿಕಲ್ ಫಿಟ್‌ನೆಸ್ ಕಡೆ ಗಮನಹರಿಸಬೇಕಾಗುತ್ತದೆ.
ಹೀಗಾಗಿ ಈ ಕೆಳಗಿನ ಸಲಹೆಗಳನ್ನು ಅಗತ್ಯ ಗಮನಿಸಿ, ಪತ್ನಿ ತನ್ನ ಪತಿಯನ್ನು ಸದಾ ಸುಂದರ, ಸ್ಮಾರ್ಟ್ ಆಗಿರಿಸಿಕೊಳ್ಳಬಹುದು:
ಡ್ರೆಸ್ಸಿಂಗ್ ಸೆನ್ಸ್ : ಸ್ಮಾರ್ಟ್ ಆಗಿ ಕಾಣಿಸಲು ಎಲ್ಲಕ್ಕೂ ಮೊದಲು ನಿಮ್ಮ ಪತಿಯ ಡ್ರೆಸ್ಸಿಂಗ್ ಸೆನ್ಸ್ ಕಡೆ ಗಮನ ಕೊಡಿ. ಇದರ ಅರ್ಥ ಸದಾ ಆತನ ಮೇಲೆ ಸಿಡುಕುತ್ತಾ, ರೇಗಾಡುತ್ತಾ ಎದ್ದರೆ ಕುಳಿತರೆ ನೀವು ಹೇಳಿದ ಡ್ರೆಸ್ ಹಾಕಿಕೊಳ್ಳಬೇಕೆಂದಲ್ಲ. ಮಕ್ಕಳಿಗೆ ತಿಳಿಹೇಳುವಂತೆ ತಿದ್ದುವ ಬದಲು, ನಿಮ್ಮ ಸಲಹೆಗಳನ್ನು ಅಗತ್ಯ ಕೊಡಿ. ಅಂದ್ರೆ….. ?
ಈ ಪ್ಯಾಂಟ್ ಜೊತೆ ಆ ಶರ್ಟ್, ಇಂಥದೇ ಟೀ ಶರ್ಟ್, ಮ್ಯಾಚಿಂಗ್ ಟೈ….. ಇತ್ಯಾದಿ ಗಮನಿಸಿಕೊಳ್ಳಿ. ಪತಿ ತಯಾರಾಗಿ ಮನೆಯಿಂದ ಹೊರಡುವಾಗ, ನಿಮ್ಮ ಪ್ರಶಂಸೆಯ ಎರಡು ಮಾತು ಅವರಿಗೆ ಹೆಚ್ಚಿನ ಆತ್ಮವಿಶ್ವಾಸ ತುಂಬುತ್ತದೆ. ನೀವಿಬ್ಬರೂ ಮತ್ತಷ್ಟು ನಿಕಟರಾಗಲು ಸಹಕರಿಸುತ್ತದೆ.
ಸದಾ ಅಪ್‌ಡೇಟ್ ಆಗಿರಿ : ಮನೆಯ ಹೊರಗಿನ ಸಂಗತಿಗಳ ಕುರಿತಾಗಿ ಸದಾ ಪತಿಗೆ ಅಪ್‌ಡೇಟ್ಸ್ ನೀಡುತ್ತಿರಿ. ಅತ್ಯಧಿಕ ಕೆಲಸದ ಒತ್ತಡದಿಂದಾಗಿ ನಿಮ್ಮ ಪತಿ ಪೇಪರ್ ಓದದೆ, ಟಿವಿ ನ್ಯೂಸ್ ನೋಡದೆ ಇರಬಹುದು. ಹಾಗಾದಾಗ ಅವರಿಗೆ ನಿಮ್ಮ ಸಾಮಾನ್ಯ ಜ್ಞಾನದಿಂದ ಅವರಿಗೆ ವಿಷಯದ ಮನವರಿಕೆ ಮಾಡಿಕೊಡಿ. ಕೌಟುಂಬಿಕ ಸಂಗತಿಗಳ ಎಲ್ಲಾ ವಿವರಗಳನ್ನೂ ಪತಿಗೆ ನೀಡಿ, ಮಕ್ಕಳು ಯಾವ ತರಗತಿ ಓದುತ್ತಿದ್ದಾರೆ ಎಂದೂ ತಿಳಿಯದ ಭೂಪತಿಗಳಿದ್ದಾರೆ.
ಫಿಟ್ ನೆಸ್ ಕಡೆ ಗಮನವಿರಲಿ : ಸ್ಮಾರ್ಟ್ ಆಗಿ ಕಾಣಿಸಲು ಪತಿ ಫಿಟ್ ಆಗಿರಬೇಕಾದುದು ಅತ್ಯಗತ್ಯ. ಹೀಗಾಗಿ ನೀವು ಪತಿ ಜೊತೆ ಮಾರ್ನಿಂಗ್ ವಾಕ್, ಜಾಗಿಂಗ್, ಜಿಮ್, ಯೋಗ ಅಥವಾ ಇನ್ನಿತರ ವ್ಯಾಯಾಮ ಮಾಡಲು ಪ್ರೇರೇಪಿಸಿ. ಒಲ್ಲೆನೆಂದು ಮೂಗೆಳೆದರೆ ನಯವಾದ ಮಾತುಗಳಲ್ಲೇ ಬಗ್ಗಿಸಿ. ಭಾರೀ ಅಲ್ಲದಿದ್ದರೂ ಬೆಳಗಿನ ಬ್ರಿಸ್ಕ್ ವಾಕಿಂಗ್ ಅತಿ ಅಗತ್ಯ, ಇಬ್ಬರೂ ತಪ್ಪದೆ ಪಾಲ್ಗೊಳ್ಳಿ.
ವ್ಯವಹಾರ ಮತ್ತು ಯೋಚನೆಯಲ್ಲಿ ಪರಿಪಕ್ವತೆ : ಕೆಲವು ಪತಿಯರು ಮದುವೆ ನಂತರ ಲೈಸೆನ್ಸ್ ಸಿಕ್ಕಿತೆಂಬಂತೆ ಹೆಚ್ಚಿನ ಫ್ಲರ್ಟಿಂಗ್ ಇತ್ಯಾದಿಗಳಲ್ಲಿ ಸಿಲುಕುತ್ತಾರೆ. ನಿಮ್ಮವರೂ ಹಾಗಿದ್ದರೆ, ಸಮಯಾವಕಾಶ ನೋಡಿಕೊಂಡು ಅವರನ್ನು ಸರಿದಾರಿಗೆ ತನ್ನಿ, ಇಲ್ಲದಿದ್ದರೆ ನಗೆಪಾಟಲಿಗೆ ಈಡಾಗುವುದು ಮಾತ್ರವಲ್ಲದೆ, ಜನ ನಿಮ್ಮನ್ನೂ ಸೇರಿಸಿ ಆಡಿಕೊಳ್ಳುತ್ತಾರೆ.
ಬಾಡಿ ಲ್ಯಾಂಗ್ವೇಜ್ ಕಡೆ ಗಮನ : ಯಾವುದೇ ವ್ಯಕ್ತಿಯ ಬಾಡಿ ಲ್ಯಾಂಗ್ವೇಜ್, ಜನರನ್ನು ಇಂಪ್ರೆಸ್ ಮಾಡುವಂತಿರಬೇಕು. ನಿಮ್ಮ ಸಂಗಾತಿಯ ಬಾಡಿ ಲ್ಯಾಂಗ್ವೇಜ್‌ನಲ್ಲಿ ತುಸು ಲೋಪದೋಷಗಳಿದ್ದರೆ, ಅವರಿಗೆ ಈ ವಿಷಯದ ಬಗ್ಗೆ ಗಮನ ಬರುವಂತೆ ಮಾಡಿ. ಸ್ಮಾರ್ಟ್ ಆಗಿರಲು ಹಾಗೂ ಕೆರಿಯರ್‌ನಲ್ಲಿ ಯಶಸ್ಸು ಪಡೆಯಲು ಪಾಸಿಟಿವ್ ಬಾಡಿ ಲ್ಯಾಂಗ್ವೇಜ್ ಇರಬೇಕಾದುದು ಅತ್ಯಗತ್ಯ.
ಸದಾ ಸಂತೋಷವಾಗಿರಬೇಕು : ಒಂದು ಸುಮಧುರ ಮಂದಹಾಸ ನಿಮ್ಮ ಪತಿಯ ಪರ್ಸನಾಲ್ಟಿಯಲ್ಲಿ ಎಷ್ಟೋ ಸುಧಾರಣೆ ತರಬಹುದು. ಅವರು ಎಲ್ಲಿಗೇ ಹೋದರೂ ಅಲ್ಲಿನ ವಾತಾವರಣ ಸಂತಸಮಯವಾಗುತ್ತದೆ. ಜನ ಅವರನ್ನು ಬಹಳ ಮೆಚ್ಚಿಕೊಳ್ಳುತ್ತಾರೆ. ಆದರೆ ನೀವು ಸ್ವಯಂ ಸಂತೃಪ್ತರಾಗಿದ್ದಾಗ ಮಾತ್ರ ಹಾಗೂ ಮನೆಯ ವಾತಾವರಣ ಸುಖದಾಯಕ ಆಗಿದ್ದಾಗ ಇದು ಸಾಧ್ಯ.
ಸ್ವಚ್ಛತೆ ಮತ್ತು ಶುಭ್ರತೆ : ಇತ್ತೀಚೆಗೆ ಎಲ್ಲೆಲ್ಲೂ ಸ್ಪರ್ಧಾತ್ಮಕ ಕಾಂಪಿಟಿಶನ್ ಯುಗ. ಕೊಳಕಾದ ಉಗುರು, ಅರೆಬೆರೆ ನೆರೆತ ಕೂದಲು, ಬಾಯಿಯ ದುರ್ವಾಸನೆ ಯಾರನ್ನಾದರೂ ಪ್ರಭಾವಿತಗೊಳಿಸುವ ಬದಲು ಅವರನ್ನು ದೂರವಿರಿಸುತ್ತದೆ. ಕೂದಲನ್ನು ಸರಿಯಾಗಿ ಟ್ರಿಂ ಮಾಡಿಸಿ, ಡೈ ಮಾಡಿಸಬೇಕು. ಉಗುರು ಕತ್ತರಿಸಿ, ಮೌತ್ ಫ್ರೆಶ್‌ನರ್ ಬಳಿಸಿ ಇತರ ಕೊರತೆಗಳನ್ನೂ ನೀಗಿಸಿಕೊಳ್ಳಬಹುದು.
ಹೃದಯಗಳ ಬೆಸೆಯುವ ಪ್ರೇಮ : ವೈವಾಹಿಕ ಜೀವನದ ಅಸಲಿ ಒಡವೆ ಎಂದರೆ ಪರಸ್ಪರರ ಅನುರಾಗ. ಪತಿಪತ್ನಿ ಮಧ್ಯೆ ನಿರಂತರ ಪ್ರೇಮಗಂಗೆ ಹರಿಯುತ್ತಿದ್ದರೆ, ಆಗ ಅವರು ಪರಸ್ಪರರಲ್ಲಿ ಗುಣಾಂಶಗಳನ್ನಷ್ಟೇ ಕಾಣುತ್ತಾರೆ, ಲೋಪದೋಷಗಳನ್ನು ಎತ್ತಿಹಿಡಿಯುವುದಿಲ್ಲ. ಪ್ರೇಮ ತುಂಬಿದ ಎರಡು ಹೃದಯಗಳು ದಿನ ವ್ಯಾಲೆಂಟೈನ್ಸ್ ಡೇ ಆಚರಿಸಲು ಬಯಸುತ್ತದೆ. ಆದರೆ ವಿಡಂಬನೆ ಎಂದರೆ, ಇಂದಿನ ಅನೇಕ ಅನಂತ ದಂಪತಿಗಳಲ್ಲಿ ಪ್ರೇಮ ನಾಮಮಾತ್ರಕ್ಕೆ ಉಳಿದು, ತಿರಸ್ಕಾರ, ಕಾಟಾಚಾರದ ತೋರಿಕೆಯ ಸಂಬಂಧ ಮಾತ್ರ ಕಂಡುಬರುತ್ತದೆ. ಆದರೆ ಎಂದೂ ಹೀಗಾಗಲು ಅವಕಾಶ ಕೊಡಬೇಡಿ. ಅನುರಾಗದ ಮಧ್ಯದಲ್ಲಿ ಅಪಸ್ವರ ಮೀಟದಂತೆ ನಿಮ್ಮಿಬ್ಬರ ಸಂಬಂಧ ಸದಾ ಮಾಧುರ್ಯದಿಂದ ಮಿಡಿಯುತ್ತಿರಲಿ, ಹ್ಯಾಪಿ ವ್ಯಾಲೆಂಟೈನ್ಸ್ ಡೇ!
– ಮಮತಾ ಭಟ್