ನಾವು ಹೋಗುವ ಹೊತ್ತಿಗಾಗಲೇ ಅಲ್ಲಿ ಜನಜಂಗುಳಿ ತುಂಬಿಹೋಗಿತ್ತು. ಅದೊಂದು ದೊಡ್ಡ ಜಾತ್ರೆಯಂತೆ! ಬಗೆ ಬಗೆಯ ಹಣ್ಣುಗಳು, ತರಕಾರಿ, ಸೊಪ್ಪು ಎಲ್ಲವೂ ಅಲ್ಲಿ ತಾಜಾ ತಾಜಾ! ಎಲ್ಲ ಮಿರಮಿರನೇ ಮಿನುಗುತ್ತಿದ್ದವು.
ಸಾಲು ಸಾಲು ಅಂಗಡಿಗಳು. ರಾಶಿ ರಾಶಿ ತರಕಾರಿ, ಸೊಪ್ಪು ಮತ್ತು ಹಣ್ಣುಗಳು. ಪ್ರತಿ ಅಂಗಡಿಯ ಮುಂದೆ ಹೆಚ್ಚಿಟ್ಟ ಹಣ್ಣುಗಳನ್ನು ಬಂದವರೆಲ್ಲರಿಗೂ ರುಚಿ ತೋರಿಸುತ್ತಿದ್ದರು. ಇಷ್ಟವಾದರೆ ತೆಗೆದುಕೊಳ್ಳಬಹುದು, ಇಲ್ಲವಾದರೆ ಬರಿ ರುಚಿಯನ್ನೂ ನೋಡಬಹುದು. ನಮಗೆ ಎಲ್ಲಾ ಹಣ್ಣುಗಳ ರುಚಿ ನೋಡಿ ಸ್ವಲ್ಪ ಹೊಟ್ಟೆ ತುಂಬಿದಂತೆಯೇ ಆಯಿತು. ಕೊಳ್ಳುವವರಿಗೂ ಸುಗ್ಗಿ, ಮಾರುವ ರೈತರ ಮುಖಗಳಲ್ಲೂ ಸಂತಸ ಮಿನುಗುತ್ತಿತ್ತು.
ರೈತ ಶ್ರೀಮಂತನಾಗಿರುವಲ್ಲಿ ನಮ್ಮ ಅನ್ನದಾತ ಸಂತೋಷವಾಗಿದ್ದ ದೇಶ ಸಮೃದ್ಧಿಯನ್ನು ಹೊಂದುತ್ತದೆ ಎನ್ನುತ್ತಾರೆ. ಖಂಡಿತ ನಿಜವಾದ ಮಾತು. ರೈತರು ಮತ್ತು ಕೊಳ್ಳುವವರ ಮಧ್ಯೆ ಯಾವುದೇ ಮಧ್ಯವರ್ತಿಗಳಿಲ್ಲ. ಇಲ್ಲಿ ರೈತ ಬಹಳ ಶ್ರೀಮಂತನೂ ಹೌದು.
ಒಂದಷ್ಟು ರೈತರು ಒಟ್ಟುಗೂಡಿ ವಾರದಲ್ಲಿ ಒಮ್ಮೆ ಅಥವಾ ಎರಡು ಬಾರಿ ಸಾರ್ವಜನಿಕ ಸ್ಥಳಗಳಲ್ಲಿ, ಪಾರ್ಕ್‌ಗಳಲ್ಲಿ, ಪಾರ್ಕಿಂಗ್‌ತಾಣಗಳಲ್ಲಿ ತಾವು ಬೆಳೆದ ವಸ್ತುಗಳನ್ನು ಮಾರಾಟಕ್ಕಿಡುತ್ತಾರೆ. ಕೆಲವೆಡೆ ಮನರಂಜನೆಯನ್ನೂ ಯೋಜಿಸಲಾಗಿರುತ್ತದೆ. ತಾಜಾ ತರಕಾರಿಗಳ ಜೊತೆಗೆ ರೈತರನ್ನು ನೇರವಾಗಿ ನೋಡುವ ಅವಕಾಶ ಲಭಿಸುತ್ತದೆ. ಇದನ್ನು ಫಾಮರ್ಸ್ ಮಾರ್ಕೆಟ್ ಎನ್ನುತ್ತಾರೆ.
ಕೆಲವು ಫಾರ್ಮ್ ಗಳಲ್ಲಿ ಕೊಯ್ಲಿನ ಕಾಲದಲ್ಲಿ ನಿಮಗೆ ಬೇಕಾದ ಹಣ್ಣು ಹಂಪಲುಗಳನ್ನು ಸ್ವತಃ ನೀವೇ ಕೊಯ್ದುಕೊಳ್ಳಲು ಅವಕಾಶವಿರುತ್ತದೆ. ಉದಾ. ಸ್ಟ್ರಾಬೆರಿ, ಕಿವೀ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಬೇಸಿಗೆಯಲ್ಲಿ ನೀವೇ ಕೀಳಬಹುದು. ಅದು ಯು ಪಿಕ್ ಯುವರ್ ಥಿಂಗ್ಸ್ ಪದ್ಧತಿ.
ರೈತನೊಬ್ಬ ತಾನು ಬೆಳೆದದ್ದನ್ನು ತಮ್ಮ ಟ್ರಕ್‌ನಲ್ಲಿ ತುಂಬಿಸಿಕೊಂಡು ತಂದು ಯಾವುದಾದರೂ ರಸ್ತೆಯ ಬದಿಯಲ್ಲಿ ಅಥವಾ ಅವನ ತೋಟದ ಹತ್ತಿರವೇ ರಸ್ತೆಯಲ್ಲಿ ನಿಲ್ಲಿಸಿ ಮಾರುತ್ತಾನೆ. ಇದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಪ್ರಕ್ರಿಯೆ ಸಾಕಷ್ಟು ನಡೆದಿದೆ. ಈ ಸ್ಥಳಕ್ಕೆ ಫಾರ್ಮರ್ ಸ್ಟಾಂಡ್ ಎನ್ನುತ್ತಾರೆ.
ಫುಡ್‌ಕೋ ಆಪರೇಟಿವ್ಸ್ ಸ್ಥಳೀಯ ರೈತರ ಸಹಕಾರಿ ಸಂಘಗಳಿವೆ. ಬೆಳೆದ ದಿನಸಿ ಸಾಮಾನುಗಳನ್ನು ಮಾರುವುದು, ಕೊನೆಗೆ ಮಾಂಸ, ಹಾಲಿನ ಉತ್ಪನ್ನ, ಮೊಟ್ಟೆಗಳನ್ನೂ ಸಹ ನೇರವಾಗಿ ತಲುಪಿಸುವ ಅನೇಕ ಮಾರ್ಗಗಳನ್ನು ಕಂಡುಕೊಂಡಿದ್ದಾರೆ.
ಇಡೀ ಯು.ಎಸ್.ಎ.ನಲ್ಲಿ 2 ಮಿಲಿಯನ್ ಅರ್ಥಾತ್ 20 ಲಕ್ಷ ತೋಟಗಳಿವೆ (ಫಾರ್ಮ್ಸ್). ಅದರಲ್ಲಿ ಶೇ.80 ಸಣ್ಣ ಪ್ರಮಾಣದ ರೈತರು, ವ್ಯವಸಾಯದಲ್ಲಿ ಇಡೀ ಕುಟುಂಬದವರು ತೊಡಗಿಕೊಂಡು ಬೆಳೆಸುವರು, ಇರಲ್ಲಿ ಬಹಳಷ್ಟು ರೈತರು ನೇರವಾಗಿ ಸಾರ್ವಜನಿಕರಿಗೆ ತಮ್ಮ ಉತ್ಪನ್ನಗಳನ್ನು ತಲುಪಿಸುತ್ತಾರೆ. ಇದಕ್ಕಾಗಿ ಹಲವಾರು ವಿಧಗಳನ್ನು ಪಾಲಿಸುತ್ತಾರೆ.
ಸಿ.ಎಸ್.ಎ ಜನ ಬಳಗದ ಸಹಕಾರದಿಂದ ಮಾಡುವ ವ್ಯವಸಾಯವೆನ್ನಬಹುದು. ಕಳೆದ ಇಪ್ಪತ್ತು ವರ್ಷಗಳಿಂದ ಜನರಿಗೆ ನೇರವಾಗಿ ಸ್ಥಳೀಯ ರೈತರಿಂದ ಆಯಾ ಕಾಲಕ್ಕನುಗುಣವಾಗಿ ಆಹಾರ ಪದಾರ್ಥ, ತರಕಾರಿ, ದಿನಸಿ ವಸ್ತುಗಳನ್ನು ಕೊಳ್ಳಲು ರೂಪಿಸಿಕೊಂಡ ಸಂಸ್ಥೆಯೆನ್ನಬಹುದು. ಸದಸ್ಯತ್ವವನ್ನು ಪಡೆದ ಭಾಗೀದಾರನಿಗೆ ಪ್ರತಿ ವಾರ ಒಂದು ಚೀಲದ ತುಂಬಾ ಅಥವಾ ಬುಟ್ಟಿಯ ತುಂಬಾ ಆಯಾ ಕಾಲಕ್ಕನುಗುಣವಾಗಿ ಬೆಳೆದ ಉತ್ಪನ್ನಗಳನ್ನು ತಲುಪಿಸಲಾಗುವುದು.
ಇದರಿಂದ ಉಭಯತ್ರರಿಗೂ ಲಾಭವೇ. ರೈತರಿಗೆ ತಾವು ಬೆಳೆದದ್ದನ್ನು ಮಾರುವ ಸಮಯ ಮಿಗುತ್ತದೆ. ಮೊದಲೇ ಹಣ ದೊರೆತು ಬೆಳೆ ಬೆಳೆಯಲು ಸಹಕಾರಿಯಾಗುತ್ತದೆ. ತಾವು ಬೆಳೆದದ್ದನ್ನು ತಿನ್ನುವವರ ಮುಖ ಪರಿಚಯ ಆಗುತ್ತದೆ. ಇವೆಲ್ಲವುಗಳ ಮೂಲ ಉದ್ದೇಶ ಜನರಿಗೆ ಸ್ವಾದಭರಿತ ತಾಜಾ ಉತ್ಪನ್ನಗಳನ್ನು ನೀಡುವುದೇ ಅಲ್ಲದೆ, ಸಣ್ಣ ಮಟ್ಟದ ರೈತರಿಗೆ ಸಹಕಾರ ಮತ್ತು ಪರಿಸರವನ್ನು ಶುದ್ಧವಾಗಿಡುವ ಪ್ರಯತ್ನ ಹೌದು. ದೊಡ್ಡ ಪ್ರಮಾಣದಲ್ಲಿ ಮಾಡುವ ರಾಸಾಯನಿಕ ಗೊಬ್ಬರವನ್ನು ಬಳಸುವ ವ್ಯವಸಾಯ ಭೂಮಿ, ಪರಿಸರ ಮತ್ತು ನೀರನ್ನೂ ಹಾಳು ಮಾಡಿಬಿಡುತ್ತದೆ. ರೈತರಿಂದ ನೇರವಾಗಿ ಖರೀದಿಸುವಾಗ ರೈತರಿಗೆ ಸಹಾಯ ನೀಡುವುದರ ಜೊತೆಗೆ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ ಎನ್ನುವುದು ಇವರ ಉದ್ದೇಶ.
ಅಂತೆಯೇ ತಾಜಾ ಆರೋಗ್ಯಕರ ಉತ್ಪನ್ನಗಳನ್ನು ತಿನ್ನುವ ಸೌಭಾಗ್ಯ ಸಾರ್ವನಿಕರದಾಗುತ್ತದೆ. ಹೊಸ ರೀತಿಯ ತರಕಾರಿಗಳನ್ನು ತಿನ್ನುವ, ಅದರಿಂದ ವಿಧ ವಿಧದ ತಿನಿಸುಗಳನ್ನು ಮಾಡು ತಿಳಿವಳಿಕೆ ಸಿಗುತ್ತದೆ. ಸುಗ್ಗಿಯ ಕಾಲದಲ್ಲಿ ಒಂದು ಬಾರಿಯಾದರೂ ಬೆಳೆಯುವ ತಾಣಕ್ಕೆ ಭೇಟಿ ನೀಡಬಹುದು. ಮಕ್ಕಳಿಗೆ ತರಕಾರಿಗಳು ಬೆಳೆಯುವ ರೀತಿಯನ್ನು ಅದು ಗಿಡದಲ್ಲಿದ್ದಾಗಲೇ ನೋಡ ಸಿಗುತ್ತದೆ. ಇಲ್ಲವಾದಲ್ಲಿ ಇಂದಿನ ಮಕ್ಕಳಿಗೆ ಬೆಳೆ ಬೆಳೆಯುವ ರೀತಿಯೇ ಗೊತ್ತಿರುವುದಿಲ್ಲ. ಭಾರತದಲ್ಲಿಯೇ ನಗರದ ಮಕ್ಕಳಿಂದ ಅನ್ನವನ್ನು ಬೆಳೆಯುವುದೆಲ್ಲಿ? ಎನ್ನುವ ಪ್ರಶ್ನೆ ಸಹಜವಾದದ್ದೇ ಅಲ್ಲದೆ ಅನ್ನದಾತ ರೈತನೊಡನೆ ಅನುಬಂಧ ಏರ್ಪಡುತ್ತದೆ.
ಇವುಗಳನ್ನೆಲ್ಲಾ ಅವಲೋಕಿಸಿದಾಗ ನಮ್ಮಲ್ಲೂ ನಡೆಸುತ್ತಿದ್ದ ಸಂತೆಗಳ ಮೂಲ ಉದ್ದೇಶ ಇದೇ ಆಗಿತ್ತಲ್ಲವೇ? ಎನಿಸುತ್ತದೆ. ಅಲ್ಲಿ ಮಧ್ಯವರ್ತಿಗಳ ಪ್ರವೇಶವಿರಲಿಲ್ಲ. ಸುತ್ತಮುತ್ತಲಿನ ಹಳ್ಳಿಗಳ ರೈತರು ನೇರವಾಗಿ ಸಂತೆಯ ದಿನ ತಾವು ಬೆಳೆದದ್ದನ್ನು ಜನರಿಗೆ ಮಾರುತ್ತಿದ್ದರು, ನಗರೀಕರಣವಾದ ಮೇಲೆ ಸಂತೆ ಎನ್ನುವ ಶಬ್ದ ನಗರದ ಜನರಿಗೆ ಅಪರಿಚಿತಾಗಿಬಿಟ್ಟಿದೆಯಷ್ಟೆ.
ಈಗಲೂ ಸಣ್ಣ ಊರುಗಳಲ್ಲಿ ವಾರಕ್ಕೊಮ್ಮೆ ಸಂತೆ ಇದ್ದೇ ಇರುತ್ತದೆ. ಈ ದೇಶದಲ್ಲಿ ರೈತರಿಗೆ ಸರ್ಕಾರದಿಂದಲೂ ಸಾಕಷ್ಟು ಸಹಕಾರ ದೊರಕುತ್ತದೆ. ರೈತರೆಂದೂ ಇಲ್ಲಿ ದುರ್ಬಲ ವರ್ಗದವರಲ್ಲ. ಅವರೂ ಉಳ್ಳವರ ಗುಂಪಿಗೇ ಸೇರುತ್ತಾರೆ. ಅಂದಾಗ ಅನ್ನದಾತರಿಗೆ ಇಲ್ಲಿ ಸಾಕಷ್ಟು ಗೌರವ ಬೆಲೆ ಇದೆ ಎಂದಾಯಿತು. ಆದರೆ ಭೂಮಿಯನ್ನು ತಾಯಿಯೆಂದು ಭಾವಿಸುವವರು ನಾವಲ್ಲವೇ? ನೆಲ, ಜಲ ಎಲ್ಲವನ್ನೂ ದೇವರೆಂದು ಭಾವಿಸುವ ಭಾವನೆ ನಮ್ಮದಲ್ಲವೇ? ಆದರ್ಶಗಳನ್ನು ಮಾತನಾಡುವರು, ನೆಲ ಜಲದ ಮೇಲೆ ಕಥೆ ಕವನ ಬರೆದು ಸಾಹಿತ್ಯದ ಸೃಷ್ಟಿ ಮಾಡುವವರು ನಮ್ಮ ದೇಶದವರಲ್ಲವೇ? ಆದರೂ ನಮ್ಮ ರೈತರೇಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ?
ವರ್ಷ ವರ್ಷ ಟೊಮೇಟೊ, ಮೆಣಸಿನಕಾಯಿಗೆ ಸರಿಯಾದ ಬೆಲೆ ಸಿಗದೆ ರಸ್ತೆಗೆ ಸುರಿಯುವುದೇಕೆ? ಈ ಬಗ್ಗೆ ಸರ್ಕಾರದ, ಜನರ, ಬಾಧ್ಯತೆಯಾದರೂ ಏನು? ಇದಕ್ಕೊಂದು ಸರಿಯಾದ ವ್ಯವಸ್ಥೆ ಸಾಧ್ಯವಿಲ್ಲವೇ? ಎನ್ನುವ ಸಾಲು ಸಾಲು ಪ್ರಶ್ನೆಗಳು ಮನದಲ್ಲಿ ಮೂಡಿದವು.
ಈಗೀಗ ನಮ್ಮ ದೇಶದಲ್ಲೂ ಸಾವಯವ ಕೃಷಿಯ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿದೆ. ಜನರು ಸಾವಯವ ಅರ್ಥಾತ್ ಆರ್ಗ್ಯಾನಿಕ್ ಪದಾರ್ಥಗಳತ್ತ ಒಲವು ತೋರುತ್ತಿದ್ದಾರೆ. ಓಲ್ಡ್ ಈಸ್ ಗೋಲ್ಡ್ ಎನ್ನುವಂತೆ ಮತ್ತೆ ನಾವು ಹಳೆಯದೂ ಒಳ್ಳೆಯದು ಎನ್ನುವ ಭಾವನೆಯನ್ನು ಹೊಂದುತ್ತಿದ್ದೇವೆ. ನಿಜಕ್ಕೂ ಇದು ಆರೋಗ್ಯಕರ ಲಕ್ಷಣವೆನ್ನಬಹುದು. ಅಧಿಕಾರಕ್ಕೆ ಬಂದೊಡನೆ ವಿದೇಶ ಪ್ರವಾಸಕ್ಕೆ ತಯಾರಾಗುವ ಆವಳು ವರ್ಗದವರು ಇಂತಹಗಳತ್ತ ಕಣ್ಣನ್ನೊಮ್ಮೆ ಹಾಯಿಸಬಾರದೇಕೆ?
– ಮಂಜುಳಾ ರಾಜ್