ಲಾಕ್ ಡೌನ್ ಕಾರಣ ಡಿ.ಡಿ.ಯಲ್ಲಿ ಹಿಂದೆ ಪ್ರಸಾರವಾಗಿದ್ದ ರಾಮಾಯಣ, ಮಹಾಭಾರತ ಪೌರಾಣಿಕ ಧಾರಾವಾಹಿಗಳು ಮರು ಪ್ರಸಾರ ಆಗುತ್ತಿದ್ದವು. ಮನೆಮಂದಿಯೆಲ್ಲಾ ಆಸಕ್ತಿಯಿಂದ ಇದನ್ನು ವೀಕ್ಷಿಸುತ್ತಿದ್ದರು.
ಮಗ : ಅಪ್ಪ, ರಾಮನಿಗೆ ಮೂರು ಜನ ತಾಯಂದಿರು. ನನಗೇಕೆ ಒಬ್ಬರೇ ಒಬ್ಬರು?
ತಂದೆ : ಅದನ್ನು ನಿಮ್ಮಮ್ಮನ್ನೇ ಕೇಳಪ್ಪ…. ಮಗ ತಾಯಿಯ ಕಡೆ ತಿರುಗಿ ನೋಡಿದ. ಅವಳು ವೈಯಾರದಿಂದ ಗಂಡನ ಕಡೆ ತಿರುಗಿ ನೋಡಿದಳು.
ತಾಯಿ : ಸ್ವಲ್ಪ ಹೊತ್ತಿನ ಮೇಲೆ ಮಹಾಭಾರತ ಬರುತ್ತೆ. ಅದರಲ್ಲಿ ದ್ರೌಪದಿಗೆ ಎಷ್ಟು ಜನ ಗಂಡಂದಿರು ಅಂತ ನಿಮ್ಮಪ್ಪನ್ನೇ ಕೇಳಪ್ಪ…..!
ಪತ್ನಿ : ಹಲೋ….. ಏನ್ರಿ ಕೇಳಿಸ್ತಿದೆಯಾ? ಮನೆಗೆ ಬರುವಾಗ ಬ್ರೆಡ್ ತರುವುದನ್ನು ಮರೆಯಬೇಡಿ. ಅಪರೂಪಕ್ಕೆ ನಮ್ಮ ಮನೆಗೆ ನಿಮ್ಮ ಗರ್ಲ್ ಫ್ರೆಂಡ್ ದಿವ್ಯಾ ಬಂದಿದ್ದಾಳೆ. ಒಳ್ಳೆ ಸ್ಯಾಂಡ್ವಿಚ್ ಮಾಡೋಣ ಅಂದುಕೊಂಡೆ…..
ಪತಿ : ಯಾವ ದಿವ್ಯಾನೇ?
ಪತ್ನಿ : ಸುಮ್ಮನೆ ಹೇಳಿದೆ, ಕಣ್ರೀ. ನನ್ನ ಮೆಸೇಜ್ ನೀವು ಚೆಕ್ ಮಾಡಿದ್ರೋ ಇಲ್ಲವೋ ಅಂತ ಹಾಗೆ ಹೇಳಿದೆ.
ಪತಿ : ಆದರೆ… ನಿನಗೊಂದು ವಿಷಯ ಗೊತ್ತಾ, ಈಗ ನಾನು ದಿವ್ಯಾ ಜೊತೇನೇ ಟೈಂಪಾಸ್ ಮಾಡ್ತಾ ಇದ್ದೀನಲ್ಲ…. ನೀನು ನಮ್ಮನ್ನು ನೋಡಿಬಿಟ್ಟೆಯೇನೋ ಅಂತ ಒಂದು ಕ್ಷಣ ಹೆದರಿಕೆ ಆಗ್ಹೋಯ್ತು!
ಪತ್ನಿ : ವಾಟ್ ನಾನ್ಸೆನ್ಸ್! ಎಲ್ಲಿದ್ದೀರಿ ಈಗ ನೀವಿಬ್ಬರೂ….?
ಪತಿ : ಇಲ್ಲೇ ಕಣೆ….. ನಮ್ಮ ಪಕ್ಕದ ರಸ್ತೆಯ ಬೇಕರಿಯಲ್ಲಿ.
ಪತ್ನಿ : ಅಲ್ಲೇ ಇರಿ….. 2 ನಿಮಿಷದಲ್ಲಿ ಬಂದೆ.
(5 ನಿಮಿಷಗಳ ನಂತರ……) ಪತ್ನಿ : ಎಲ್ಲಿ ಇದ್ದೀರಾ….? ನಾನು ಬೇಕರಿ ಮುಂದೇನೇ ಇದ್ದೀನಿ, ನೀವೆಲ್ಲೂ ಕಾಣಿಸ್ತಿಲ್ಲ…..
ಪತಿ : ಸುಮ್ಮನೆ ನಿನ್ನನ್ನು ಪರೀಕ್ಷಿಸಲು ಹಾಗೇ ಹೇಳಿದ್ದು…. ನಾನು ಆಫೀಸ್ನಲ್ಲೇ ಇದ್ದೇನೆ. ಹೇಗೂ ಬೇಕರಿಗೆ ಬಂದಿದ್ದೀಯಾ, ಬ್ರೆಡ್ ಜೊತೆ ಬೆಣ್ಣೆ ಬಿಸ್ಕತ್ತು ತಗೊಂಡ್ಹೋಗು!
ಪತಿ ಪತ್ನಿ ಅಪರೂಪಕ್ಕೆ ಕೈಕೈ ಹಿಡಿದು ಸಂಜೆ ಮಾರ್ಕೆಟ್ ಕಡೆ ಸುತ್ತಾಡುತ್ತಿದ್ದರು. ಆಗ ಎದುರಿಗೆ ಗಂಡನ ಗೆಳೆಯ ರಾಜು ಎದುರಾದ.
ರಾಜು : ಆಹಾ ಕುಮಾರ್….. ಎಷ್ಟು ಅನ್ಯೋನ್ಯ ದಾಂಪತ್ಯ ಕಣಯ್ಯ ನಿಮ್ಮದು! ಮದುವೆಯಾಗಿ 4 ವರ್ಷ ಕಳೆದರೂ ಹೊಸ ಮದುಮಕ್ಕಳಂತೆ ಇನ್ನೂ ಕೈ ಕೈ ಹಿಡಿದುಕೊಂಡು ಓಡಾಡ್ತಾ ಇದ್ದೀರಿ…..
ಕುಮಾರ್ : ಕರ್ಮ! ಬಡ್ಕೊಂಡ್ರು ಕಣೋ…. ನನ್ನ ಕೈ ಬಿಟ್ಟರೆ ನಾನು ಎಲ್ಲಿ ದಂ ಹೊಡೆಯಲು ಹೋಗಿಬಿಡ್ತೀನೋ ಅಂತ ಸರ್ಪಗಾಲು ಕಣಯ್ಯ ಅವಳದು (ಮೆಲ್ಲಗೆ ಗೆಳೆಯನ ಕಿವಿಯಲ್ಲಿ ಪಿಸುಗುಟ್ಟಿದ).
ವಾಣಿ : ಒಂಟಿ ಸೀನು ಬಂದ್ರೆ ಅಪಶಕುನ….
ರಾಣಿ : ಅದೇ ರೀತಿ 4-5 ಸೀನು ಬಂದ್ರೆ ಕೊರೋನಾ!
ಟೀಚರ್ : ಗುಂಡ, ಎಲ್ಲಿ 1-10 ಎಣಿಸಿ ಹೇಳು ನೋಡೋಣ.
ಗುಂಡ : 1, 2, 3, 5, 6, 7. 8, 9, 10.
ಟೀಚರ್ : 4 ಎಲ್ಲೋ? ನೀನು ಹೇಳಲೇ ಇಲ್ಲ.
ಗುಂಡ : ಅದು ಸತ್ತು ಹೋಯ್ತು ಟೀಚರ್, ಅದಕ್ಕೆ ಹೇಳಲಿಲ್ಲ.
ಟೀಚರ್ : ಏನೋ ಹಾಗಂದ್ರೆ…?
ಗುಂಡ : ಇವತ್ತು ಪೇಪರ್ನಲ್ಲಿ ಹಾಕಿದ್ರು ಟೀಚರ್, ಭೀಕರ ಅಪಘಾತ…. 4 ಸಾವು ಅಂತ!
ಟೀಚರ್ : ಕಿಟ್ಟಿ, ಎಲ್ಲಿ 15 ಹಣ್ಣುಗಳ ಹೆಸರು ಹೇಳು ನೋಡೋಣ.
ಕಿಟ್ಟಿ : ಸೇಬು, ಮಾವು, ಸಪೋಟ, 1 ಡಜನ್ ಬಾಳೆಹಣ್ಣು!
ಟೀಚರ್ : ವಿಶ್ವದಲ್ಲಿ ಒಟ್ಟು ಎಷ್ಟು ದೇಶಗಳಿವೆ?
ನಾಣಿ : ವಿಶ್ವದಲ್ಲಿ ಇರೋದು ಒಂದೇ ದೇಶ, ನಮ್ಮ ಭಾರತ, ಮಿಕ್ಕಿದ್ದೆಲ್ಲ ವಿದೇಶ!
ಟೀಚರ್ : ಭಾರತಕ್ಕೆ ವಾಸ್ಕೋಡಗಾಮ ಬಂದದ್ದು ಯಾಕೆ?
ಗುಂಡ : ನನ್ನನ್ನು ಫೇಲ್ ಮಾಡೋಕ್ಕೆ ಅಂತ!
ಟೀಚರ್ : ಸಾಮಾನ್ಯವಾಗಿ ಘನ ವಸ್ತುವನ್ನು ಕಾಯಿಸಿದಾಗ ಏನಾಗುತ್ತದೆ?
ಕಿಟ್ಟಿ : ಅದು ದ್ರವ ಆಗುತ್ತದೆ.
ಟೀಚರ್ : ಸರಿ, ದ್ರವ ಕಾಯಿಸಿದಾಗ ಏನಾಗುತ್ತದೆ?
ನಾಣಿ : ಅದು ಅನಿಲ ಆಗುತ್ತೆ.
ಟೀಚರ್ : ಕರೆಕ್ಟ್, ಆದರೆ ಯಾವ ದ್ರವ ಪದಾರ್ಥ ಕಾಯಿಸಿದಾಗ ಮತ್ತೆ ಅದು ಘನ ಆಗುತ್ತದೆ?
ಗುಂಡ : ದೋಸೆ ಹಿಟ್ಟು!
ಅರುಣ್ : 1983ರ ಕ್ರಿಕೆಟ್ ವಿಶ್ವಕಪ್ ಯಾರಿಗೆ ಸಿಕ್ಕಿತು?
ಕಿರಣ್ : ಗೆದ್ದವರಿಗೆ….!!
ಟೀಚರ್ : ಕ್ರಿಕೆಟ್ ಬಗ್ಗೆ ಒಂದು ಚಿಕ್ಕ ಪ್ರಬಂಧ ಬರೆಯಿರಿ…..
ಸೀನಿ : ಮಳೆ ಬಂದದ್ದರಿಂದ ಕ್ರಿಕೆಟ್ ಪಂದ್ಯ ರದ್ದಾಯಿತು…..!
ವೀಣಾ : ಮಹಾತ್ಮ ಗಾಂಧೀಜಿ ಸಾಯದೆ ಇದ್ದಿದ್ದರೆ ಏನಾಗುತ್ತಿತ್ತು….?
ವಾಣಿ : ಬಹುಶಃ ಇನ್ನೂ ಬದುಕಿರುತ್ತಿದ್ದರು.
ಮಾಲಾ : ಕ್ಲೋರೈಡ್ನ್ನು ಕಾಯಿಸಿದಾಗ ಏನಾಗುತ್ತದೆ?
ಲೀಲಾ : ಅದು ಬಿಸಿ ಆಗುತ್ತದೆ!
ಟೀಚರ್ : ಚಾಲುಕ್ಯರು ನಮ್ಮ ರಾಜ್ಯವನ್ನು ಎಲ್ಲಿಯವರೆಗೆ ಆಳಿದರು?
ಗುಂಡ : ಚರಿತ್ರೆ ಪುಸ್ತಕದ 26ನೇ ಪುಟದಿಂದ 29ನೇ ಪುಟದವರೆಗೆ!
ರಾಜು : ನೀರಿನಿಂದ ಯಾಕೆ ಕರೆಂಟ್ ತೆಗೀತಾರೆ…?
ಸೋಮು : ಸ್ನಾನ ಮಾಡುವಾಗ ನಮಗೆ ಶಾಕ್ ಹೊಡೆಯುತ್ತೆ ಅಂತ!
ವಾಣಿ : ಮಾತು ಬರದವನನ್ನು ಮೂಗ ಎಂದು ಕರೆದರೆ, ಕಿವಿ ಕೇಳಿಸದವನನ್ನು ಹೇಗೆ ಕರೆಯುತ್ತಾರೆ?
ರಾಣಿ : ಏನು ಬೇಕಾದರೂ ಕರೆಯಬಹುದು, ಅವನಿಗೆ ಹೇಗೂ ಕಿವಿ ಕೇಳಿಸೋಲ್ಲ!
ಟೀಚರ್ : ಲೋ ಗುಂಡ, 10ನೇ ತರಗತಿ ಪಬ್ಲಿಕ್ ಪರೀಕ್ಷೆ ಬರೀತಿದ್ದೀಯ ಅಂತ ಜ್ಞಾನ ಇರಲಿ. ಪುನರಾವರ್ತನೆಯ ಪ್ರಶ್ನೋತ್ತರ ಅಭ್ಯಾಸ ಮಾಡೋದು ಬಿಟ್ಟು ಸದಾ ಹುಡುಗಿಯರ ಜೊತೆ ಹರಟೆ ಹೊಡೆಯುತ್ತೀಯಲ್ಲೋ….?
ಗುಂಡ : ಏನು ಮಾಡಲಿ ಟೀಚರ್, ನಾನು ಬಡವ. ಮೊಬೈಲ್, ಇಂಟರ್ನೆಟ್ ಏನೂ ಇಲ್ಲ…..!
ಪತ್ನಿ : ಅಲ್ಲಾ ರೀ ಗಂಡಸರು ಸತ್ತರೆ ಸ್ವರ್ಗದಲ್ಲಿ ಅಪ್ಸರೆಯರು ಸಿಗ್ತಾರಂತೆ ಹೌದಾ?
ಪತಿ : ಹೌದು, ಇಷ್ಟು ದಿನಕ್ಕೆ ಒಂದು ಸರಿಯಾದ ಮಾತು ಹೇಳಿದೆ.
ಪತ್ನಿ : ಆದರೆ ಹೆಂಗಸರು ಸತ್ತರೆ ಅವರಿಗೆ ಅಲ್ಲಿ ಏನು ಸಿಗುತ್ತೆ?
ಪತಿ : ಮಂಗ!
ಪತ್ನಿ : ಇದೆಂಥ ಅನ್ಯಾಯ ಅಂತೀನಿ…. ಬದುಕಿರೋವಾಗಲೂ ನಮಗಿಲ್ಲಿ ಮಂಗ, ಸತ್ತ ಮೇಲೆ ಅಲ್ಲೂ ಮಂಗವೇ?
ಅಕ್ಕಿ……ಹೆಸರುಬೇಳೆ ಜೊತೆ ಸೇರಿದ್ರೆ ಪೊಂಗಲ್….. ಉದ್ದಿನ ಬೇಳೆ ಜೊತೆ ಸೇರಿದರೆ ದೋಸೆ, ಇಡ್ಲಿ….
ತೊಗರಿಬೇಳೆ ಜೊತೆ ಸೇರಿದ್ರೆ ಬಿಸಿಬೇಳೆ ಭಾತ್ ಕಡಲೆಬೇಳೆ ಜೊತೆ ಸೇರಿದ್ರೆ ಸವಿ ಪಾಯಸ.
ಅರಿಶಿನ ಕುಂಕುಮ ಜೊತೆ ಸೇರಿದ್ರೆ ಅಕ್ಷತೆ ಎಳ್ಳಿನ ಜೊತೆ ಸೇರಿದ್ರೆ ತಿಥಿ ಪಿಂಡ…..!
ನೀತಿ : ಮೊದಲು ಏನಾಗಬೇಕು ಅಂತ ಡಿಸೈಡ್ ಮಾಡಿಕೊಂಡು ನಂತರ ಯಾರ ಜೊತೆ ಸೇರಬೇಕೋ ನೋಡಿಕೊಳ್ಳಿ!