ಕನ್ನಡ ಸಿನಿಮಾ ಉದ್ಯಮದಲ್ಲಿ ಪ್ರಸ್ತುತ ಅತ್ಯಂತ ಕ್ರಿಯಾಶೀಲ ಗಾಯಕಿಯಾಗಿ ಅನುರಾಧಾ ಭಟ್‌ಹೆಸರು ಮಾಡಿದ್ದಾರೆ. ಅವರ ಸಂಗೀತ ಪಯಣ, ಅದಕ್ಕಾಗಿ ನಡೆಸಿದ ಸಂಘರ್ಷ ಬಹಳ ರೋಚಕ.

ಬಾಲ್ಯದಿಂದಲೇ ಸಂಗೀತಾಸಕ್ತಿ

2 ವರ್ಷದವಳಿದ್ದಾಗಲೇ ಅನುರಾಧಾ ಆಟ ಆಡ್ತಾ ಆಡ್ತಾ ಹಾಡು ಗುನುಗುತ್ತಿದ್ದಳು. ತಾಯಿ ತಂದೆ ಶಾಸ್ತ್ರೀಯವಾಗಿ ಸಂಗೀತವನ್ನೇನೂ ಕಲಿತಿರಲಿಲ್ಲ. ಆದರೆ ಅವರು ಅಪ್ಪಟ ಸಂಗೀತಾಭಿಮಾನಿ. ಕನ್ನಡ ಸೇರಿದಂತೆ ಬೇರೆ ಬೇರೆ ಭಾಷೆಗಳ ಸಂಗೀತ ಅವರ ಮನೆಯಲ್ಲಿ ಕೇಳಿ ಬರುತ್ತಿತ್ತು. ಅದೇ ಎಳೆಯ ವಯಸ್ಸಿನ ಅನುರಾಧಾಗೆ ಸಂಗೀತದಲ್ಲಿ ಆಸಕ್ತಿ ಹೆಚ್ಚಾಗುವಂತೆ ಮಾಡಿತು. 5ನೇ ವರ್ಷದಲ್ಲಿಯೇ ಪೋಷಕರು ಆಕೆಯನ್ನು ಸಂಗೀತ ಹಾಗೂ ನೃತ್ಯಾಭ್ಯಾಸಕ್ಕೆ ಸೇರಿಸುತ್ತಾರೆ. ಹೈಸ್ಕೂಲ್ ಹಂತದಲ್ಲಿ ಹಲವು ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರಕುತ್ತದೆ. ಮುಂದೆ ಅದೇ ಸಿನಿಮಾದಲ್ಲಿ ಹಾಡಲೇಬೇಕೆಂಬ ಉತ್ಕಟೇಚೆ ಮೂಡುವಂತೆ ಮಾಡುತ್ತದೆ.

ಮಂಗಳೂರಿನ ಕಾಲೇಜಿನಲ್ಲಿ ಓದುತ್ತಿದ್ದಾಗ ಸ್ಪರ್ಧೆಯೊಂದರ ತೀರ್ಪುಗಾರರಾಗಿ ಗುರುಕಿರಣ್‌ಬಂದಿದ್ದರು. ಅಲ್ಲಿ ಅನುರಾಧಾರ ಪ್ರತಿಭೆಯ ಅನಾರಣ ಗುರುಕಿರಣ್‌ರಿಗೆ ಆಗುತ್ತದೆ.

ಅನ್ವೇಷಣೆಯಲ್ಲಿ ಅನುರಾಧಾ

ಈ ಟಿವಿಯವರು `ಅನ್ವೇಷಣೆ’ ಕಾರ್ಯಕ್ರಮಕ್ಕಾಗಿ ಯುವ ಗಾಯಕಿಯರ ಶೋಧ ನಡೆಸುತ್ತಿದ್ದರು. ಆ ಕಾರ್ಯಕ್ರಮದ ವಿಶೇಷತೆ ಏನೆಂದರೆ, ಮಹಾನ್‌ ಗಾಯಕ ಡಾ. ಎಸ್‌.ಪಿ.ಬಿ. ರವರ ಜೊತೆ ವೇದಿಕೆಯ ಮೇಲೆ ಹಾಡುವುದಾಗಿತ್ತು. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅಸಂಖ್ಯ ಯುವ ಗಾಯಕಿಯರು ಸಿ.ಡಿ. ಕಳಿಸಿದ್ದರು. ಅಂತಿಮ 9 ಯುವ ಗಾಯಕಿಯರಲ್ಲಿ ಅನುರಾಧಾ ಕೂಡ ಆಯ್ಕೆಯಾಗಿ ತಮ್ಮ ಪ್ರತಿಭೆಯನ್ನು ಎಸ್‌.ಪಿ.ಬಿ ಮುಂದೆ ಪ್ರಸ್ತುತಪಡಿಸಿದ್ದರು. `ಅದು ನನ್ನ ಜೀವನದ ಅವಿಸ್ಮರಣೀಯ ಘಟನೆ,’ ಎಂದು ಎಸ್‌.ಪಿ.ಬಿ ಸರ್‌ಜೊತೆ ಹಾಡಿದ್ದನ್ನು ಅನುರಾಧಾ ನೆನಪಿಸಿಕೊಳ್ಳುತ್ತಾರೆ.

ಹರಿದು ಬಂದ ಅವಕಾಶಗಳು

`ಎದೆ ತುಂಬಿ ಹಾಡಿದೆನು’ ಬಳಿಕ ಅನುರಾಧಾಗೆ ಅವಕಾಶಗಳು ಹುಡುಕಿಕೊಂಡು ಬರತೊಡಗಿದವು. ಝೇಂಕಾರ್‌ಮ್ಯೂಸಿಕ್‌ಸಂಸ್ಥೆ ಮಾರುತಿ ಮೀರಜಕರ್‌ಸಂಗೀತ ನಿರ್ದೇಶನದಡಿ ಟ್ರ್ಯಾಕಿನಲ್ಲಿ ಹಾಡುವ ಅವಕಾಶ ದೊರಕಿಸಿಕೊಟ್ಟಿತು.

ಅನುರಾಧಾ ಹವ್ಯಾಸದ ಜೊತೆಗೆ ಎಂಎನ್‌ಸಿ ಕಂಪನಿಯಲ್ಲಿ ಎಚ್‌.ಆರ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಪ್ರಥಮ ಅವಕಾಶ ಹಂಸಲೇಖಾ ಅವರು ಯುವ ಗಾಯಕಿಯರಿಗಾಗಿ ಶೋಧ ನಡೆಸುತ್ತಿದ್ದಾಗ ಅನುರಾಧಾ ಭಟ್‌ಅವರ ಕಣ್ಣಿಗೆ ಬೀಳುತ್ತಾರೆ. `ಮೀರಾ ಮಾಧವ ರಾಘವ’ ಚಿತ್ರದಲ್ಲಿ ಅವರಿಗೆ ಹಾಡುವ ಅವಕಾಶ ದೊರಕುತ್ತದೆ. ಆ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತೋರ್ವ ಯುವ ಗಾಯಕಿಯ ಆಗಮನ ಆಗುತ್ತದೆ. ಆ ಚಿತ್ರದ ಬಳಿಕ ಅನುರಾಧಾಗೆ ಸಿನಿಮಾಗಳಲ್ಲಿ ಸಾಲು ಸಾಲು ಅವಕಾಶಗಳು ದೊರಕುತ್ತವೆ. ಅವರು ಹಾಡಿದ ಅನೇಕ ಗೀತೆಗಳು ಬಹಳ ಜನಪ್ರಿಯವಾಗಿವೆ. ಬೇರೆ ಬೇರೆ ದೇಶಗಳಲ್ಲಿ ಸಂಗೀತ ಕಾರ್ಯಕ್ರಮ ಕೊಟ್ಟು ಬಂದಿರುವ ಅವರಿಗೆ ಬಹಳ ವಿಶಿಷ್ಟ ಅನುಭವವಾಗಿದೆ. `ಚೌಕ’ ಚಿತ್ರದ `ಅಪ್ಪಾ ಐ ಲವ್ ಯೂ’ ಹಾಡು ಭಜರಂಗಿ ಚಿತ್ರದ `ನಂದ ನಂದನ ಶ್ರೀಕೃಷ್ಣ’ ಮತ್ತು `ರಿಕಿ’ ಚಿತ್ರದ `ಯಾರ ಗೆಳೆಯ’ ಹಾಡುಗಳು ಬಹಳ ಮೆಚ್ಚುಗೆಗೆ ಪಾತ್ರವಾಗುತ್ತವೆ.

ಕಳೆದ ಒಂದೂವರೆ ದಶಕದಲ್ಲಿ ಅನುರಾಧಾ ಸಿನಿಮಾ ಹಾಡುಗಳು, ಭಾವಗೀತೆ, ಭಕ್ತಿಗೀತೆ ಸೇರಿದಂತೆ 5000ಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಬಾಗೂರು ಮಾರ್ಕಂಡೇಯ ಅವರ `ಕೇಳೇ ಸಖಿ’ ಎಂಬ ಭಾವಗೀತೆಯನ್ನು ಅನುರಾಧಾ ಅವರ ಮೇಲೆಯೇ ಚಿತ್ರೀಕರಿಸಿ ಅವರಿಂದಲೇ ಹಾಡಿಸಿದ್ದಾರೆ.

`ಚಿನ್ನು’ ಕನ್ನಡ ರೈಮ್ಸ್ 4 ಭಾಗಗಳಲ್ಲಿ  ಬಂದಿದ್ದು, ಜಗತ್ತಿನಾದ್ಯಂತ ಕನ್ನಡಿಗರ ಮಕ್ಕಳ ಮೆಚ್ಚಿನ ಆಲ್ಬಂ ಆಗಿದೆ. ಕನ್ನಡ ಕಲಿಯಲು ಅದು ಪ್ರೇರಣೆ ನೀಡುತ್ತದೆ.

ಕನ್ನಡದ ಬಹುತೇಕ ಎಲ್ಲ ಸಂಗೀತ ನಿರ್ದೇಶಕರ ಸಂಗೀತದಲ್ಲಿ ಹಾಡಿರುವ ಖ್ಯಾತಿ ಅನುರಾಧಾರಿಗೆ ಸಲ್ಲುತ್ತದೆ.

ಗುಣಮಟ್ಟ ಹೆಚ್ಚಿಸಿಕೊಳ್ಳಿ

ಇಂದಿನ ಯುವ ಪ್ರತಿಭೆಗಳಿಗೆ ನಿಮ್ಮ ಸಲಹೆ ಏನು? ಎಂದು ಕೇಳಿದರೆ, “ಗಾಯನದ ಬಗ್ಗೆ ಆಸಕ್ತಿ ಇದ್ದರೆ, ಅದರ ಮೇಲೆ ಹೆಚ್ಚು ಫೋಕಸ್‌ ಮಾಡಿ. ಅದಕ್ಕಾಗಿ ಪರಿಶ್ರಮ ಪಡಿ. ಪ್ರತಿದಿನ ಗುಣಮಟ್ಟ ಹೆಚ್ಚಿಸಿಕೊಳ್ಳುತ್ತ ಸಾಗಿ. ಸಮರ್ಪಣೆ ಭಾವ ಇಲ್ಲದಿದ್ದರೆ ಕೆಲವೇ ಕೆಲವು ಅವಕಾಶಗಳಿಗೆ ಸೀಮಿತರಾಗಿ ಹಿನ್ನಲೆಗೆ ಸರಿಯಬೇಕಾಗುತ್ತದೆ,” ಎಂದು ಅನುರಾಧಾ ಹೇಳುತ್ತಾರೆ.

– ಅಶೋಕ ಚಿಕ್ಕಪರಪ್ಪಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ