ನಮ್ಮ ಮಕ್ಕಳಿಗೆ ಹಾಲಿನಿಂದ ಮಾಡುವ ಹಾಲುಕೋವಾ, ಐಸ್ ಕ್ರೀಮ್, ಮೊಸರು, ತುಪ್ಪ, ಬೆಣ್ಣೆ, ಪನೀರ್, ಚೀಸ್ ಎಲ್ಲಾ ಪದಾರ್ಥಗಳೂ ಇಷ್ಟ. ಆದರೆ ಹಾಲನ್ನು ಕೊಡುವ ಹಸುವನ್ನು ಬಹಳಷ್ಟು ಮಕ್ಕಳು ನೋಡಿಲ್ಲ. ಹಸುವಿನ ಕಂದ ಕರು ಹೇಗಿರುತ್ತದೆ? ತಾಯಿಯ ಹಾಲು ಹೇಗೆ ಕುಡಿಯುತ್ತದೆ, ನೆಗೆದು ಆಟವಾಡುತ್ತದೆ, ಹಾಲನ್ನು ಯಾವ ರೀತಿ ಕರೆಯುತ್ತಾರೆ, ಹಾಲು ಪ್ಯಾಕೆಟ್‌ಗಳಿಂದ ಅಲ್ಲ ಹಸುವಿನ ಕೆಚ್ಚಲಿನಿಂದ ಬರುತ್ತದೆ ಎನ್ನುವುದು ಬಹಳಷ್ಟು ನಗರದ ಮಕ್ಕಳಿಗೆ ಗೊತ್ತಿಲ್ಲ.
ಅಂತೆಯೇ ಮಾವಿನ ಹಣ್ಣನ್ನು ತಿಂದು ಸಂತಸ ಪಡುತ್ತಾರಷ್ಟೇ ಹೊರತು ಮಾವಿನ ಮರ ಹೇಗಿರುತ್ತದೆ? ಮಾವಿನ ಮರದಲ್ಲಿ ಬಿಡುವ ಹೂ, ಹೀಚು, ಕಾಯಿ ನಂತರ ಹಣ್ಣಾಗುವ ಪ್ರಕ್ರಿಯೆಯ ಬಗ್ಗೆ ಅವರಿಗೆ ಖಂಡಿತಾ ಗೊತ್ತಿಲ್ಲ. ಆದರೆ ನಗರಗಳ ದೊಡ್ಡ ದೊಡ್ಡ ಕಟ್ಟಡಗಳ ಮಧ್ಯೆ ಬೆಳೆದ ಅವರಿಗೆ ಮರ, ಗಿಡ, ಬಳ್ಳಿ, ಹೂಗಳ ಪರಿಚಯ ಖಂಡಿತ ಅಗತ್ಯ. ಆಗಾಗ ಶಾಲೆಯಿಂದ ಕಬ್ಬನ್ ಪಾರ್ಕ್, ಲಾಲ್ ಬಾಗ್ ಗಳಿಗೆ ಕರೆದುಕೊಂಡು ಹೋಗುತ್ತಾರೆ. ಆದರೂ ಈ ಎಲ್ಲದರ ಪರಿಚಯ ಅವರಿಗೆ ಪೂರ್ಣವಾಗಿ ಇಲ್ಲ.
ಕೊರೋನಾ ಸ್ವಲ್ಪ ಹದಕ್ಕೆ ಬಂದಿದೆಯೆಂದು ಮನೆಯವರ ಭಾವನೆ ಹಾಗಾಗಿ ಒಂದು ಭಾನುವಾರ ಹೊರಗೆ ಹೋಗುವ ಕಾರ್ಯಕ್ರಮ ಸಿದ್ಧವಾಯಿತು. ಆದರೆ ಎಲ್ಲಿಗೆ ಹೋಗಬೇಕು? ಹೆಚ್ಚು ಜನರಿದ್ದರೆ ಅಪಾಯ, ಹಾಗೆಂದುಕೊಂಡಾಗ ಪ್ರಕೃತಿಯ ಮಡಿಲು ಸ್ವಲ್ಪ ಕ್ಷೇಮ ಅಂದುಕೊಂಡು ಯಾವುದಾದರೂ ಫಾರ್ಮ್ಗೆ ಹೋಗೋಣವೆಂದಾಗ ಒಂದು ಬಾರಿಗೆ ಒಂದೇ ಬ್ಯಾಚನ್ನು ತೆಗೆದುಕೊಳ್ಳುವ ಸವಿ ಫಾರ್ಮ್ ಗೆ ಹೋಗೋಣವೆಂದು ನಿರ್ಧಾರವಾಯಿತು. ಅಲ್ಲಿಗೆ ಹೊರಟಿತು ನಮ್ಮ ದಂಡು.
ಬೆಂಗಳೂರಿನಿಂದ ಕೋಲಾರ ಮಾರ್ಗದಲ್ಲಿ ಒಂದೂ ಮುಕ್ಕಾಲು ಘಂಟೆ ಪಯಣ. ಆದರೆ ಹೋಗುವ ಹಾದಿಯಲ್ಲಿ ಮನೆಯಿಂದಲೇ ಕಟ್ಟಿಸಿಕೊಂಡು ಹೋದ ತಿಂಡಿ ತಿನ್ನಲು ಯಾವುದೇ ಮರದ ನೆರಳು ನಮಗೆ ಸಿಗಲೇ ಇಲ್ಲ. ಅಲ್ಲೇ ಒಂದೆಡೆ ನಿಂತು ತಿಂಡಿ ತಿಂದ ಶಾಸ್ತ್ರ ಮಾಡಿದೆ. ಹಾಗೆಯೇ ಮುಂದೆ ಹೋದಾಗ ನಾವ ಹೋಗುವ ಸ್ಥಳಕ್ಕೆ ತಲುಪುವ ಮುಂಚೆ ಒಂದು ಸುಂದರವಾದ ದೊಡ್ಡ ಕೆರೆ ಬಹಳ ಸಂತೋಷ ಕೊಟ್ಟಿತು. ಅಲ್ಲಿಂದ ಸ್ವಲ್ಪ ದೂರದಲ್ಲೇ ನಾವು ಹೋಗಬೇಕೆಂದಿದ್ದ ತಾಣವಿತ್ತು. ಅಂತೂ ತಲುಪಿದ್ದಾಯಿತು. ಹಸಿರು ಮರ ಗಿಡಗಳ ಸಾಂಗತ್ಯ ಮನಕ್ಕೆ ಮುದವೆನಿಸಿತು.
ಒಂದು ಸುಂದರವಾದ ಮಂಗಳೂರು ಹೆಂಚಿನ ಪುರಾತನ ಮನೆ, ಮನೆಯ ಮುಂದೆ ಹುಲ್ಲು ಹಾಸು. ಕಮಾನಿನ ಬಾಗಿಲಿನ ಸುತ್ತಲೂ ಕಲ್ಲಿನ ಗೋಡೆ. ಅಲ್ಲಿಗೆ ತಲುಪಿದ ತಕ್ಷಣ ಮನಸ್ಸಿಗೆ ಆನಂದವಾಯಿತು. ಆ ಮನೆಯ ಒಳ ಹೊಕ್ಕರೆ ಅದೊಂದು ತೊಟ್ಟಿ ಮನೆ. ಸುಂದರವಾಗಿ ರೂಪಿಸಿದ್ದಾರೆ. ಯಾವುದೇ ಇಟ್ಯಾಲಿಯನ್ ಮಾರ್ಬಲ್ಸ್ ಗಿಂತಾ ನುಣುಪಾದ ಸುಂದರವಾದ ಚಿನ್ನದ ಬಣ್ಣದ ಕಾವಿಯ ನೆಲಹಾಸು. ಅಲ್ಲಲ್ಲಿ ಕೆಂಪು ಮತ್ತು ಹಸಿರು ಬಣ್ಣದ ರಂಗೋಲಿಯಂತಹ ಚಿತ್ರಗಳು ಎದ್ದು ಕಾಣತ್ತಿದ್ದವು.
ಸುತ್ತಲೂ ಮನೆ, ಮಧ್ಯೆ ತೊಟ್ಟಿಲೊಳಗೆ ಹುಲ್ಲು ಹಾಸು, ಮಧ್ಯೆ ಒಂದು ಪುಟ್ಟ ನೀರಿನ ಕೊಳ, ಅದರೊಳಗೆ ತಾವರೆಗಳು. ಅಲ್ಲಲ್ಲಿ ಕೆಂಪು ಕಾವಿಯ ನೆಲದ ಬೆಂಚುಗಳು, ಅದರ ಮಧ್ಯದಲ್ಲಿ ಬಣ್ಣದ ಚಿತ್ತಾರಗಳು, ಅಲ್ಲೇ ಒಂದು ತೂಗುಯ್ಯಾಲೆ, ಒಳಗಡೆ ಸೂರಿಗೆ ಒಣಗಿದ ಹುಲ್ಲಿನ ಹಾಸು, ಅಲ್ಲೇ ಸೂರಿಲ್ಲದ ಬಚ್ಚಲು ಮನೆ, ಹಳೆಯ ಕಾಲದ ಸ್ವಿಚ್‌ಗಳು, ಜೊತೆಗೆ ಕೆಲವು ಅಗತ್ಯವಾದ ನವೀನ ಪರಿಕರಗಳು, ಉದಾ: ಎತ್ತರದ ಊಟದ ಮೇಜು, ನಲ್ಲಿಗಳು, ವೆಸ್ಟ್ರನ್ ಶೌಚಾಲಯ. ಈ ರೀತಿ ಬಹಳಷ್ಟು ಪುರಾತನ ಒಂದಷ್ಟು ಅಗತ್ಯದ ನವೀನತೆ. ಹಳತು ಮತ್ತು ಹೊಸತಿನ ಸಂಗಮದಂತಿತ್ತು. ಮಕ್ಕಳು ಕುರಿಮರಿ ಮತ್ತು ನಾಯಿಯ ಮರಿಗಳ ಜೊತೆ ಆಟವಾಡಿದರು.
ಮನೆಯ ಅವಲೋಕನವಾಯಿತು. ನಂತರ ತಿನ್ನಲು ಚಕ್ಕುಲಿ, ಕಡಲೆಕಾಯಿಯ ಉಂಡೆ ಮತ್ತು ಪುರಿ, ಕಾಫಿ ಮತ್ತು ಹಣ್ಣಿನ ರಸ ಸೇವಿಸಿದ ನಂತರ ಟ್ರ್ಯಾಕ್ಟರ್‌ನಲ್ಲಿ ತೋಟ, ಗದ್ದೆಯ ವೀಕ್ಷಣೆ. ಟ್ರ್ಯಾಕ್ಟರ್‌ನಲ್ಲಿ ಹೋಗುವಾಗ, ಕಾಡಿನ ರಸ್ತೆಯಲ್ಲಿ ಸಾಗುವಾಗ ಎತ್ತಿನ ಬಂಡಿಯಲ್ಲೇ ಹೋಗುವ ಅನುಭವವಾಯಿತು. ಅಕ್ಕಪಕ್ಕದಲ್ಲಿರುವ ಮರಗಿಡಗಳು ನಮ್ಮನ್ನು ಸ್ಪರ್ಶಿಸಿದ. ಹಾಗೆಯೇ ಕೆಲವು ಗಿಡಗಳ ಮುಳ್ಳುಗಳೂ ಸಹ ನಮ್ಮನ್ನು ಸ್ವಾಗತಿಸಿದ. ಅಲ್ಲಿಯೇ ಇರುವ ತೊಗರಿ ಗಿಡಗಳಿಂದ ಎಳೆಯ ತೊಗರಿಕಾಯಿಗಳನ್ನು ತಿಂದೆವು. ಒಣಗಿದ ತೊಗರಿಕಾಯಿಗಳನ್ನು ಕೋಲಿನಿಂದ ಬಡಿದು ಬೇರ್ಪಡಿಸುವ ಅನುಭವವನ್ನು ಪಡೆದೆವು. ಅದೊಂದು ಸುಂದರ ಮಾವಿನ ತೋಪು, ಜೊತೆಗೆ ಸಪೋಟ ಗಿಡಗಳು, ಆಲೂಗಡ್ಡೆಯ ಹುಲುಸಾದ ಬೆಳೆ, ಆಲೂಗಡ್ಡೆಯ ಗಿಡಗಳನ್ನು ನೋಡಿದಾಗ ನಮ್ಮವರ ಹೊರತು, ಅದು ಯಾವ ಗಿಡವೆಂದು ಯಾರಿಗೂ ಗೊತ್ತಾಗಲಿಲ್ಲ. ಮಧ್ಯೆ ಮಧ್ಯೆ ಸುಂದರ, ವಿವಿಧ ವಿಚಿತ್ರ ಆಕಾರದ ಬಂಡೆಗಳು, ಅದರ ಮೇಲೆ ಹತ್ತಿ ಫೋಟೋ ತೆಗೆಸಿಕೊಂಡವು ಮಕ್ಕಳು.
ಆ ತೋಟದ ಒಳಗೆ, ಅಲ್ಲೇ ಒಂದು ದೊಡ್ಡ ಕೆರೆ. ಕೆರೆಯ ದಡದಲ್ಲಿ ಮುಳುಗುವ ಕೆಂಬಣ್ಣದ ಸೂರ್ಯನ ದರ್ಶನ. ಎಲ್ಲವನ್ನೂ ನೋಡಿ ಮನೆಯ ಹತ್ತಿರ ತಲುಪುವ ಹೊತ್ತಿಗೆ ಕತ್ತಲಾಗುತ್ತಾ ಬಂತು. ತಂಪನೆಯ ಗಾಳಿಗೆ ಮೈ ಜುಮ್ಮೆನಿಸಿತು. ತಕ್ಷಣವೇ ತಿನ್ನಲು ಬಿಸಿಬಿಸಿ ಬೋಂಡಾ ನೀಡಿ ಜೊತೆಗೆ ಕಟ್ಟಿಗೆ ಹಾಕಿ ಬೆಂಕಿ ಸಿದ್ಧಪಡಿಸಿದರು. ಬೆಚ್ಚಗೆ ಬೆಂಕಿ ಕಾಯಿಸಿಕೊಳ್ಳುತ್ತಾ ಸಂಗೀತ ಕಚೇರಿ ನಡೆಯಿತು. ನಂತರ ಬಾಳೆ ಎಲೆಯ ಊಟ. ಮುದ್ದೆ ಬೇಕಾದವರಿಗೆ ಮುದ್ದೆ ಇತ್ತು. ಎಲೆಯ ತುಂಬಾ ಭಕ್ಷ್ಯಗಳು. ಅದೂ ನಮ್ಮ ದೇಸಿ ಊಟ, ದೋಸೆ, ಪೂರಿ, ಕೋಸುಂಬರಿ, ಮೊಳಕೆ ಬರಿಸಿದ ಹುರುಳಿ ಕಾಳಿನ ಪಲ್ಯ, ಹಿತಕವರೆ, ಒಬ್ಬಟ್ಟು, ಚಿತ್ರಾನ್ನ, ಗಸಗಸೆ ಹಾಲಿನೊಂದಿಗೆ ನಮ್ಮ ಊಟ ಮುಗಿಯಿತು. ನಮ್ಮ ಹೊಟ್ಟೆ ತೃಪ್ತಿಯಾಗಿ ಭಾರವಾಯಿತು. ಆ ಫಾರ್ಮ್ ನ್ನು ನಡೆಸುತ್ತಿರುವ ಹೆಣ್ಣು ಮಕ್ಕಳದೇ ಕೆಲಸ. ಕಾರುಬಾರು ಎಲ್ಲ ಅದನ್ನು ನಡೆಸುತ್ತಿರುವವರು ಮೂವರು ಮಹಿಳೆಯರು. ತಾಯಿ ಕೃಷಿಯ ಹಿನ್ನೆಲೆ ಉಳ್ಳವಳು. ಮಗಳು ವಿದ್ಯಾವಂತೆ. ಸೊಸೆ ಸಾಫ್ಟ್ ವೇರ್ ಎಂಜಿನಿಯರ್. ತಾಯಿ, ಮಗಳು ಮತ್ತು ಸೊಸೆ. ತ್ರಿನಾರಿಯರ ಹೆಮ್ಮೆಯ ಸಾಧನೆ ಅದು. ಎಲ್ಲಕ್ಕಿಂತ ಅವರ ಆತ್ಮೀಯ ಉಪಚಾರ ಮನಸೆಳೆಯುವ ಹಳೆಯ ನೆನಪುಗಳನ್ನು ಜಾಗೃತಗೊಳಿಸುತ್ತದೆ.
– ಮಂಜುಳಾ ರಾಜ್