ಹಾಲ್‌ನಲ್ಲಿ ಪೇಪರ್ ನೋಡುತ್ತಾ ಕುಳಿತಿದ್ದ ಅತ್ತೆಯ ಕೈ ಒತ್ತಿ, ಮಾವನಿಗೆ ಕೈ ಆಡಿಸುತ್ತಾ ಬೈ ಬೈ ಎಂದು ಅತ್ಯಾಧುನಿಕ ಅಲಂಕಾರದಲ್ಲಿ ತನ್ನ ಬಣ್ಣದ ಚೀಲ ಹಿಡಿದು ಆ ಮನೆಯ ಒಬ್ಬಳೇ ಸೊಸೆ ಅಶಿತಾ ಆಫೀಸಿಗೆ ಹೊರಟು ನಿಂತಾಗ ಆ ಹಿರಿಯರಿಗೆ ಹೇಳಿಕೊಳ್ಳುವಂಥ ಸಂತೋಷವೇನೂ ಆಗಿರಲಿಲ್ಲ.
ಹೊಸ ಸೊಸೆಗೆ ಸುನಂದಾ ಅಕ್ಕರೆಯಿಂದ ಹೇಳಿದರು, “ಅಶಿತಾ ಇವತ್ತು ಸಂಜೆ 4 ಗಂಟೆ ಹೊತ್ತಿಗೆ ಬೇಗ ಬಂದುಬಿಡಮ್ಮ….. ಅಜಯ್‌ನ ಸೋದರತ್ತೆ ನಿನ್ನನ್ನು ನೋಡಲು ಮೈಸೂರಿನಿಂದ ಬರ್ತಿದ್ದಾರೆ…. ಮರೆಯಬೇಡ.”
“ಅತ್ತೆ, ಬೇಗ ಬರೋದು ಕಷ್ಟ ಆಗಬಹುದು. ಹೆವಿ ವರ್ಕ್ ಲೋಡ್ ಇದೆ. 4 ಗಂಟೆಗೆ ಆಗೋದೇ ಇಲ್ಲ ಬಿಡಿ. 5 ಗಂಟೆಗೆ ಅಲ್ಲಿ ಬಿಟ್ಟರೂ ಬೆಂಗಳೂರಿನ ಈ ಟ್ರಾಫಿಕ್ ದಾಟಿಕೊಂಡು ಮನೆಗೆ ಬರುವಷ್ಟರಲ್ಲಿ 7 ಗಂಟೆ ಆಗಿಯೇ ಹೋಗುತ್ತದೆ. ಅಲ್ಲಿಯವರೆಗೂ ನೀವೆಲ್ಲ ಅವರೊಂದಿಗೆ ಮಾತನಾಡುತ್ತಿರಿ, ಆಮೇಲೆ ಬಂದು ನಾನು ಭೇಟಿ ಆಗ್ತೀನಿ,” ಎಂದಳು ಸೊಸೆ ಮುದ್ದು.
ನಂತರ ತಾನೇ ಜೋರಾಗಿ ನಗುತ್ತಾ, “ಅಜಯ್ ಸೋದರತ್ತೆ ಕೇವಲ ನನ್ನನ್ನು ಮಾತ್ರ ನೋಡಲು ಬರ್ತಿದ್ದಾರಾ? ತಮ್ಮನ ಮನೆಗೆ ಅಕ್ಕಾ ಬರೋದು ಸಹಜವೇ ಅಲ್ಲವೇ…. ಇಲ್ಲಿ ಅವರ ಪ್ರಿಯ ಬಾಬಾರ ಪ್ರವಚನ ಬೇರೆ ಇರುತ್ತೆ, ಅದೆಲ್ಲ ಹಾಯಾಗಿ ಅಟೆಂಡ್ ಆಗಲಿ ಬಿಡಿ…..”
ತನ್ನ ಬೆಲ್ಲದಂಥ ಹೊಸ ಪತ್ನಿಯ ಮಾತಿನಲ್ಲಿದ್ದ ವ್ಯಂಗ್ಯ ಗುರುತಿಸಿದ ಅಜಯ್ ನಸುನಗುತ್ತಾ, “ಅದೆಲ್ಲ ಇರಲಿ ಬಿಡು, ಬೇಗ ಮನೆಗೆ ಬಂದುಬಿಡು,” ಎಂದು ಹಾರ್ದಿಕವಾಗಿ ಹೇಳಿದ.
ಪತಿಗೆ ಕೈ ಬೀಸಿ ನಗುತ್ತಾ ವೈಯಾರವಾಗಿ ನಡೆದು ಸ್ಕೂಟಿ ಹತ್ತಿದಳು ಅಶಿತಾ.ಅಮ್ಮನ ಮುಖ ಗಂಭೀರವಾದುದನ್ನು ಕಂಡು ಅಜಯ್ ಕೇಳಿದ, “ಏನಾಯ್ತಮ್ಮ…. ಯಾಕೋ ನಿನ್ನ ಮೂಡ್ ಸೀರಿಯಸ್ ಆಗಿರೋ ಹಾಗಿದೆ…..”
“ಅದೇನಿಲ್ಲ…..” ಅಮ್ಮ ಗಂಭೀರವಾಗಿ ಹೇಳಿದಾಗ ಅಜಯ್ ತಂದೆ ಕಡೆ ನೋಡಿದ. ಹೆಚ್ಚಿಗೆ ಮಾತು ಬೇಡ ಎಂಬಂತೆ ಮಹೇಶ್ ಮಗನಿಗೆ ಸನ್ನೆ ಮಾಡಿದರು. ತಂದೆ ಮಗ ಸನ್ನೆ ಮೂಲಕ ಮಾತನಾಡ ತೊಡಗಿದರು.
ಅಜಯ್ ಆಫೀಸ್‌ಗೆ ಹೊರಟ ನಂತರ ಮಹೇಶ್ ಪತ್ನಿಗೆ ಹೇಳಿದರು, “ನಾನು ಸಂಜೆ ಸಾಧ್ಯವಾದಷ್ಟು ಬೇಗ ಮನೆಗೆ ಬರಲು ಟ್ರೈ ಮಾಡ್ತೀನಿ. ಅಕ್ಕಾ ಬರೋ ಹೊತ್ತಿಗೆ ಬಂದೇಬಿಡ್ತೀನಿ ಅಂತಿಟ್ಕೊ. ನೀನೇಕೆ ಹೀಗೆ ಸೈಲೆಂಟ್ ಆಗ್ಬಿಟ್ಟೆ…..?”
ಪತಿಯ ಮಾತಿಗೆ ಸುನಂದಾ ಬೇಸರದಲ್ಲಿ ಹೇಳಿದರು, “ಮೌನವಾಗಿರುವುದು ಬಿಟ್ಟು ನಾನೇನು ತಾನೇ ಮಾಡಲಿ? ಎಷ್ಟು ಅಂತ ಈ ಹೊಸ ಸೊಸೆಗೆ ಅಡ್ಜಸ್ಟ್ ಮಾಡಿಕೊಳ್ಳುವುದು? ಬೆಳಗ್ಗಿನಿಂದ ರಾತ್ರಿವರೆಗೂ ಆ ಮಹಾರಾಣಿ ಈ ಮನೆಯ ಸೊಸೆ ಅನ್ನೋದೂ ಮರೆತು, ಒಂದು ಕಡ್ಡಿ ಇಲ್ಲಿಂದ ಅಲ್ಲಿಗೆ ಎತ್ತಿಡದೆ ಹಾಯಾಗಿರ್ತಾಳೆ.
“ಸದಾ ಬಣ್ಣದ ಬೀಸಣಿಗೆ ತರಹ ಅಲಂಕಾರ ಮಾಡಿಕೊಂಡು ಹೊರಗೆ ಓಡಾಡೋದು ಒಂದೇ ಗೊತ್ತಿರೋದು. ಮಾತು ಬೆಳೆಸಬಾರದು ಮುಂದುವರಿಸಬಾರದು ಅಂತ ನಾನೂ ಹಲ್ಲು ಕಚ್ಚಿ ಸುಮ್ಮನಿದ್ದೇನೆ.”
“ಇದೇನಿದು…. ಅಶಿತಾನಾ ಬಣ್ಣದ ಬೀಸಣಿಗೆ ಅಂದುಬಿಟ್ಟೆ? ಇದು ಯಾಕೋ ಜಾಸ್ತಿ ಆಗಲಿಲ್ವೇ?”
“ಮನೆಗೂ ತನಗೂ ಸಂಬಂಧವೇ ಇಲ್ಲ ಎಂಬಂತೆ ಸಿಂಗಾರ ಮಾಡಿಕೊಂಡು ಟಿಪ್ ಟಾಪ್ ಆಗಿ ಮೇಕಪ್‌ನಲ್ಲಿ ಹೊರಡುವವಳನ್ನು ಬಣ್ಣದ ಬೀಸಣಿಗೆ ಅನ್ನದೆ ಮನೆಯ ಮಂಗಳಗೌರಿ ಅನ್ನಬೇಕೇ? ಹೊಂದಿಕೊಳ್ಳೋ ಒಂದೇ ಒಂದು ಗುಣ ಇದೆಯಾ ಅವಳಿಗೆ? ತಾನು ಬಂದಿರೋದೇ, ಈ ಮನೆಯಲ್ಲಿರೋದೇ ಒಂದು ದಯೆ ತೋರಿಸಲು ಎಂಬಂತೆ ನಮ್ಮನ್ನು ಕಂಡರೆ ಕಾಲಕಸವಾಗಿ ಇಟ್ಟಿದ್ದಾಳೆ. ಒಬ್ಬ ಸುಸಂಸ್ಕೃತ ಹುಡುಗಿ ಈ ಮನೆಗೆ ಸೊಸೆಯಾಗಿ ಬರಲಿ ಅಂತ ಎಷ್ಟು ಬಯಸಿದ್ದೆ…. ನಿಮ್ಮ ಮಗರಾಯ ಎಲ್ಲದರ ಮೇಲೆ ತಣ್ಣೀರು ಸುರಿದುಬಿಟ್ಟ….. ಇವಳನ್ನು ನೋಡಿದ ತಕ್ಷಣ ನನಗೆ ತಲೆನೋವು ಶುರುವಾಗುತ್ತೆ!
“ಈ ಮನೆಗೆ ಬಂದು 3 ತಿಂಗಳಾಯ್ತು. ನನ್ನ ಒಂದೇ ಒಂದು ಮಾತಿಗೆ ಮರ್ಯಾದೆ ಕೊಟ್ಟಿದ್ದಾಳಾ? ಏನೇ ಹೇಳಲು ಹೋದರೂ ಕಡ್ಡಿ ತುಂಡು ಮಾಡಿದಂತೆ ತನ್ನ ಮೂಗಿನ ನೇರಕ್ಕೆ ಹೇಳಿ ಕಾಲು ಅಪ್ಪಳಿಸಿಕೊಂಡು ನಡೆಯುತ್ತಾಳೆ. ಪ್ರತಿ ಮಾತನ್ನೂ ತಮಾಷೆಯಾಗಿ ಉಡಾಫೆ ಮಾಡುತ್ತಾಳೆ. ನಮ್ಮ ಮಗಳು ಸುನೀತಾಳನ್ನು ಅವಳ ಅತ್ತೆಮನೆಯಲ್ಲಿ ಎಷ್ಟು ಆದರದಿಂದ ನಡೆಸಿಕೊಳ್ತಾರೆ ಗೊತ್ತಾ… ನೀತಾ ನೀತಾ ಅಂತ ಅವಳ ಅತ್ತೆ ಮಾವ ಅಷ್ಟು ಹಚ್ಚಿಕೊಂಡು ಬಿಟ್ಟಿದ್ದಾರೆ. ಅವಳ ಅತ್ತೆ ಹೇಳಿದ್ದು ನಮ್ಮ ಸುನೀತಂಗೆ ವೇದಾಕ್ಯ. ಅದೇ ನಮ್ಮ ಮಗ ಇದ್ದಾನೆ ನೋಡಿ, ಈ ಬಣ್ಣದ ಬೀಸಣಿಗೆಯನ್ನು ತಂದು ನಮ್ಮ ತಲೆಗೆ ಕಟ್ಟಿಹೋದ.”
ಮಹೇಶ್ ತಮ್ಮ ಪತ್ನಿಯ ಭುಜ ಹಿಡಿದು ಸಮಾಧಾನಪಡಿಸುತ್ತಾ ಹೇಳಿದರು, “ಯಾಕಿಷ್ಟು ಟೆನ್ಶನ್ ತಗೋತೀಯಾ? ಅನ್ಯಾಯವಾಗಿ ನಿನ್ನ ಬಿಪಿ ಜಾಸ್ತಿ ಆಗುತ್ತೆ. ಮದುವೆಯಾದ ಇನ್ನೂ ಹೊಸತು…. ಮುಂದೆ ಎಲ್ಲಾ ಸರಿಹೋಗುತ್ತೆ ಬಿಡು. ಈಗಲೇ ಅವಳ ಬಗ್ಗೆ ಒಂದು ನಿರ್ಧಾರಕ್ಕೆ ಬಂದುಬಿಡಬೇಡ….. ನೀನೂ ಪದವೀಧರೆ….. ಹಳೇ ಕಾಲದ ಕಂದಾಚಾರದ ಅತ್ತೆಯಲ್ಲ. ನಿನ್ನ ಆಧುನಿಕ ಸೊಸೆಯ ಮಾಡರ್ನ್ ಫ್ಯಾಷನ್ ಅಪ್ ಟು ಡೇಟ್ ಲೈಫ್ ಕಂಡು ಅವಳನ್ನು ಬಣ್ಣದ ಬೀಸಣಿಗೆ ಅಂತ ಲೇಬಲ್ ಮಾಡಿ ಬಿಡಬೇಡ. ಅಜಯ್ ಬಹಳ ಪ್ರಾಕ್ಟಿಕಲ್ ಹುಡುಗ, ಅವನು ಅಶಿತಾಳನ್ನು ತಾನಾಗಿ ಮೆಚ್ಚಿ ಮದುವೆಯಾಗಿದ್ದಾನೆ ಅಂದ್ರೆ ಅವಳಲ್ಲಿ ಏನೋ ವಿಶೇಷ ಗುಣ ಇರಲೇಬೇಕು.
“ಹ್ಞಾಂ….ಹ್ಞಾಂ….. ಬಹಳ ವಿಶೇಷ ಗುಣಗಳೇ ತುಂಬಿವೆಯಲ್ಲ! ಅವಳ ಈ ಗುಣಗಳೇ ಅವನನ್ನು ಗುಲಾಮನನ್ನಾಗಿ ಮಾಡಿಟ್ಟಿದೆ. ನಯಾ ಪೈಸೆಗೂ ಅರ್ಹತೆಯಿಲ್ಲದ ಅವಳ ನಾಲಾಯಕ್ ಮಾತುಗಳಿಗೆಲ್ಲ ಹ್ಞೂಂಗುಟ್ಟುತ್ತಾ ತಾಳ ಹಾಕುತ್ತಾನೆ. ತೆಳ್ಳಗೆ ಬೆಳ್ಳಗೆ ಇರುವ ಅವಳು ತನ್ನ ಒನಪು ವೈಯಾರಗಳಿಂದ ಅವನನ್ನು ಬುಗುರಿಯಂತೆ ಆಡಿಸುತ್ತಿದ್ದಾಳೆ. ಅವಳು ಹೇಳಿದ್ದೆಲ್ಲ ಜೋಕು ಎಂಬಂತೆ ಸದಾ ನಸುನಗುತ್ತಿರುತ್ತಾನೆ. ಅವಳ ಈ ಅವಗುಣಗಳೆಲ್ಲ ನನಗೆ ಕಾಣ್ತಿಲ್ಲವಲ್ಲ ಅಂತೀರಾ?”
ಮಹೇಶ್ ಪರಿಸ್ಥಿತಿ ಸರಿದೂಗಿಸಲು ನಗುತ್ತಾ, “ಎಂದಾದರೂ ಅತ್ತೆಗೆ ಅವಳ ಸೊಸೆಯ ಒಳ್ಳೆಯ ಗುಣಗಳು ಕಂಡಿದ್ದೂ ಉಂಟೇ? ನೀನು ಮೊದಲಿನಿಂದಲೂ ಸೌಮ್ಯ ಸ್ವಭಾವದ ಗುಣವತಿ, ಅದು ನಿನ್ನ ಅತ್ತೆಗೆ ಎಂದಾದರೂ ಕಂಡಿದ್ದುಂಟೇ?”
ಅಷ್ಟು ಕೋಪದಲ್ಲೂ ಸುನಂದಾರಿಗೆ ಆ ಮಾತಿಗೆ ನಗು ಬಂತು. ಅದಕ್ಕೆ ಮಹೇಶ್ ಹೇಳಿದರು, “ಸರಿ, ನಾನೀಗ ಆಫೀಸಿಗೆ ಹೊರಟೆ. ನೀನೀಗ ಕೋಪ ತಾಪ ಬಿಟ್ಟು ಸ್ವಲ್ಪ ರೆಸ್ಟ್ ತಗೋ. ಮತ್ತೆ ಅಕ್ಕಾ ಬಂದ ಮೇಲೆ ನೀನು ಪೂರ್ತಿ ಬಿಝಿ ಆಗಿಬಿಡ್ತೀಯಾ,” ಎಂದು ಬ್ರೀಫ್‌ಕೇಸ್ ಹಿಡಿದು ಹೊರಟೇಬಿಟ್ಟರು.
ಸ್ವಲ್ಪ ಹೊತ್ತಿಗೆ ಕೆಲಸದ ನಿಂಗಿ ಬಂದಾಗ, ವಾಷಿಂಗ್ ಮೆಷಿನ್‌ಗೆ ಬಟ್ಟೆ ಹಾಕಿ, ಹಿತ್ತಲಲ್ಲಿ ಅವಳಿಗೆ ತೊಳೆಯಲು ಪಾತ್ರೆ ಹಾಕಿ, ತಮ್ಮ ಮನೆಗೆಲಸದಲ್ಲಿ ಬಿಝಿ ಆದರು. ಬೆಳಗಿನ ತಿಂಡಿ ಆಗಿತ್ತು. ಬೇಗ ಅಡುಗೆ ಕೆಲಸ ಮುಗಿಸಿ, 2 ಘಳಿಗೆ ವಿಶ್ರಾಂತಿ ಪಡೆಯಲೆಂದು 3 ಗಂಟೆಗೆ ಅಡ್ಡಾದರು.
ಅಷ್ಟರಲ್ಲಿ ಅವರಿಗೆ ಗೌರಕ್ಕಾ ಫೋನ್ ಮಾಡಿದರು.“ಸುನಂದಾ, ನಾನು ಈಗ ತಾನೇ ಮೈಸೂರಿನಿಂದ ಕಾರಿನಲ್ಲಿ ಹೊರಟಿದ್ದೀನಿ. ಸಂಜೆ 6 ಗಂಟೆ ಹೊತ್ತಿಗೆ ನಿಮ್ಮ ಮನೆಗೆ ಬಂದಿರ್ತೀನಿ. ಅಷ್ಟರಲ್ಲಿ ನಿನ್ನ ಸೊಸೆಮುದ್ದು ಆಫೀಸಿನಿಂದ ಬಂದಿರ್ತಾಳೆ ತಾನೇ? ಮದುವೆ ಮನೆ ಗಡಿಬಿಡಿಯಲ್ಲಂತೂ ಆ ಹೊಸ ಹುಡುಗಿ ಜೊತೆ ಬಾಯಿ ತುಂಬಾ 4 ಮಾತನಾಡಿರಲಿಲ್ಲ ನೋಡು.”
“ಹ್ಞೂಂ ಗೌರಕ್ಕಾ…. ಬರ್ತಾಳೆ ಬನ್ನಿ,” ಎಂದು ಸಪ್ಪೆಯಾಗಿ ನುಡಿದರು. ಅತ್ತ ಗೌರಕ್ಕಾ ಇನ್ನೊಂದಷ್ಟು ಆದೇಶಗಳನ್ನು ನೀಡಿ ಫೋನಿಟ್ಟರು. ತಮ್ಮ ಮಹೇಶ್‌ಗಿಂತ 10 ವರ್ಷ ದೊಡ್ಡವರು. ಹೀಗಾಗಿ ಸುನಂದಾ ಮೇಹಶರ ಬಳಿ ಅವರಿಗೆ ಬಹಳ ಸಲುಗೆ, ಅಕ್ಕರೆ ಜಾಸ್ತಿ. ಅತ್ತೆ ಹೋದ ನಂತರ ಸುನಂದಾ ಗೌರಕ್ಕನನ್ನು ಕಿರಿ ಅತ್ತೆ ಎಂಬಂತೆಯೇ ಭಾವಿಸಿದ್ದರು. ಗೌರಕ್ಕನ ಆದೇಶಗಳನ್ನು ಕೇಳಿದ ಮೇಲೆ ಸುನಂದಾರಿಗೆ ಇನ್ನೆಲ್ಲಿಂದ ನಿದ್ದೆ ಬರಬೇಕು….? 3 ವರ್ಷಗಳ ತಮ್ಮ ಸ್ನೇಹ, ಪ್ರೇಮವನ್ನು ಗಟ್ಟಿಗೊಳಿಸಬೇಕೆಂದೇ ಮಗ ಅಜಯ್ ಅವಳನ್ನು ಆ ಮನೆ ಸೊಸೆ ಎಂದೇ ಹೆತ್ತವರಿಗೆ ಪರಿಚಯಿಸಿದ್ದ. ಇವರು ಒಬ್ಬನೇ ಮಗನನ್ನು ಎದುರು ಹಾಕಿಕೊಳ್ಳಬಾರದು ಎಂದು ಹಿರಿಯರು ಅವನು ಹೇಳಿದ್ದಕ್ಕೆಲ್ಲ ಹ್ಞೂಂಗುಟ್ಟುತ್ತಿದ್ದರು. ಲೇಶ ಮಾತ್ರವೂ ಬೀಗರೆಂಬ ಜಂಭ ತೋರಿಸದೆ ಸೊಸೆಗೆ ಬೇಕಾದಂತೆ ಚಿನ್ನ ಬಣ್ಣ ನೀಡಿ, ಮನದುಂಬಿ ಮನೆ ತುಂಬಿಸಿಕೊಂಡಿದ್ದರು.
ಅಶಿತಾಳ ಹೆತ್ತವರಿಬ್ಬರೂ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಪ್ರೊಫೆಸರ್‌ಗಳು. ಎಲ್ಲ ಟಾಪ್ ಲೆವೆಲ್ ವ್ಯವಹಾರ. ಚೆನ್ನೈನಲ್ಲಿ ನೆಲೆಸಿದ್ದ ಅವರು ಅತಿ ಆಧುನಿಕ, ಸುಶಿಕ್ಷಿತ ಪರಿವಾರಕ್ಕೆ ಸೇರಿದರು. ಎಂಜಿನಿಯರಿಂಗ್ ಕಲಿಯುವ ಸಲುವಾಗಿ ಬೆಂಗಳೂರಿಗೆ ಬಂದಿದ್ದ ಅಶಿತಾ, ಕಾಲೇಜಿನಿಂದಲೇ ಮಗನ ಮನ ಗೆದ್ದು ಇಲ್ಲೇ ನೌಕರಿಗೆ ಸೇರಿ ಹಾಸ್ಟೆಲ್‌ನಲ್ಲಿದ್ದಳೆಂದು ನಂತರ ತಿಳಿಯಿತು.
ಅವಳು ಅಜಯ್ ಪ್ರೇಮಿಸಿದ ಅಚ್ಚುಮೆಚ್ಚಿನ ಹುಡುಗಿ ಎಂಬುದೇ ಸುನಂದಾ ಅವಳ ಎಲ್ಲಾ ದೋಷಗಳನ್ನೂ ಮರೆಯುವಂತೆ ಮಾಡಿತ್ತು. ಗಂಡ, ಮಗ, ಮನೆ, ಸಂಸಾರ ಇಷ್ಟೇ ಅವರ ಪ್ರಪಂಚವಾಗಿತ್ತು. ಹಿರಿಯರ ಸೇವೆ ಮುಗಿಸಿ ಮನೆಗೆ ಆದರ್ಶ ಸೊಸೆಯಾಗಿ, ಈಗ ಅತ್ತೆ ಪಟ್ಟಕ್ಕೆ ಬಂದಿದ್ದರು. ತೀರಾ ಸರಳ ಸ್ವಭಾವದ ಭೋಳೆ ಹೆಂಗಸು. ದಿನ ಕಳೆದಂತೆ ಸೊಸೆ ಈ ಮನೆಯನ್ನು ಪೇಯಿಂಗ್ ಗೆಸ್ಚ್ ನಿವಾಸವಾಗಿ ಭಾವಿಸಿದ್ದಾಳೆಯೇ ಹೊರತು ತನ್ನ ಮನೆ, ತನ್ನವರು ಎಂಬ ಮಮಕಾರ ಇಲ್ಲ ಎಂಬುದನ್ನು ಗುರುತಿಸಿದ್ದರು.
ಆ ಮನೆಯಲ್ಲಿ ಕೇವಲ ಸುಖಸೌಲಭ್ಯಗಳನ್ನು ಅನುಭವಿಸುವುದು ಮಾತ್ರ ತನ್ನ ಹಕ್ಕು ಎಂದು ಭಾವಿಸಿದ್ದಳೇ ವಿನಾ ಆ ಆಧುನಿಕ ಸೊಸೆಗೆ, ತನ್ನದೇ ಆದ ಜವಾಬ್ದಾರಿಗಳೂ ಇರುತ್ತದೆ ಎಂಬ ಪರಿಜ್ಞಾನವೇ ಇರಲಿಲ್ಲ. ಅತ್ತೆ ಇರುವುದೇ ಮಾಡಿ ಹಾಕಲಿಕ್ಕೆ ತಾನು ಗಂಡನೊಂದಿಗೆ ತಿಂದುಂಡು ಹಾಯಾಗಿ ಇರಬೇಕಷ್ಟೆ ಎಂದು ಅತ್ತೆಯನ್ನು ದೂರ ಇರಿಸಿದ್ದಳು.
ಮಗರಾಯ ಪ್ರತಿ ಸಲ ಊಟ ತಿಂಡಿ ರೂಮಿಗೆ ಕೊಂಡೊಯ್ಯು ನಿಷ್ಠಾವಂತ ಆದರ್ಶ ಪತಿ ಎಂದು ನಿರೂಪಿಸಿದ ಮೇಲೆ, ಆ ಸೊಸೆ ಆ ಮನೆಯಲ್ಲಿ ಒಬ್ಬ ಸದಸ್ಯಳಾಗಿ ಹೇಗೆ ಬೆರೆತಾಳು? ಬೆಳಗ್ಗೆ ಏಳುವುದೇ ತಡ, ಮಗ ಕಾಫಿ ಸರಬರಾಜು ಮಾಡಿದ ಮೇಲೆ, ತಿಂಡಿ ರೂಮಿಗೆ ತರಿಸಿ ತಟ್ಟೆ ಬಿಸಾಡಿ ಹೊರಡುವುದು.
ಆಫೀಸ್ ಮುಗಿಸಿ ಸಂಜೆ 7 ಗಂಟೆ ನಂತರ ಮನೆಗೆ ಬಂದು ಹೊರಗಿನ ಓಡಾಟಕ್ಕೆ ಹೊರಟರೆ, ರಾತ್ರಿ 11 ಗಂಟೆಗೆ ಬಂದರೂ ಆಶ್ಚರ್ಯವಿಲ್ಲ. ವಾರದಲ್ಲಿ 4 ದಿನ ಹೊರಗೆ ಊಟ, ಇಲ್ಲದ್ದಿದರೆ ರೂಮಿನಲ್ಲೇ ಊಟ. ಮರುದಿನ ಯಥಾಪ್ರಕಾರ ಭಾನುವಾರ 10 ಗಂಟೆಗೆ ಹೊರಗೆ ಹೊರಟರೆ ಬರುವುದೇ ರಾತ್ರಿ 10ಕ್ಕೆ. ಹಾಗಿರುವಾಗ ಆ ಸೊಸೆ ಮನೆಯ ಸದಸ್ಯಳಾಗಿ ಹೇಗೆ ಬೆರೆತಾಳು? ಹೀಗಾಗಿ ಸುನಂದಾ ಅವಳಿಗೆ ಬಣ್ಣದ ಬೀಸಣಿಗೆ ಎಂದೇ ಹೆಸರಿಟ್ಟಿದ್ದರು. ಅವಳು ಬಹು ಸುಂದರವಾಗಿದ್ದಳು, ಸ್ಮಾರ್ಟ್, ಡ್ಯಾಶಿಂಗ್‌ನೇಚರ್. ಸದಾ ನೀಟಾಗಿ ಮೇಕಪ್ ಮಾಡಿಕೊಂಡು ಇರುವ ಸ್ವಭಾವ ಅವಳದು. ಸದಾ ತನ್ನ ಬಟ್ಟೆ ಡ್ರೈವಾಶ್‌ಗೆ ಕೊಟ್ಟು, ಇಸ್ತ್ರೀ ಕೆಡದಂತೆ, ಸೀರೆಯ ಗಂಜಿ ನಲುಗದಂತೆ ಅಲಂಕಾರಿಕ ಬೊಂಬೆಯಾಗಿ ಅಷ್ಟೇ ಓಡಾಡುವಳು. ಅವಳು ಅಜಯ್‌ನನ್ನು ಪ್ರಾಣಕ್ಕಿಂತ ಹೆಚ್ಚು ಪ್ರೇಮಿಸುತ್ತಿದ್ದಳು. ಅದು ಸ್ಪಷ್ಟವಾಗಿ ಎಲ್ಲರಿಗೂ ತಿಳಿಯುತ್ತಿತ್ತು. ಅವಳ ಆಫೀಸ್ ಮನೆಯಿಂದ ಬಹಳ ದೂರವಿತ್ತು. ಹೀಗಾಗಿ ಅಜಯ್‌ಗೆ ಮೊದಲೇ ಹೊರಟುಬಿಡುತ್ತಿದ್ದಳು. ಅಜಯ್ ನಂತರವೇ ಅವಳು ಮನೆ ತಲುಪುತ್ತಿದ್ದುದು.
ಬೆಂಗಳೂರಿನ ಹೆವಿ ಟ್ರಾಫಿಕ್ ಅವಳನ್ನು ಬೇಗ ಬರಗೊಡುತ್ತಿರಲಿಲ್ಲ. ಮನೆಗೆ ಬಂದ ಮೇಲೆ ತಕ್ಷಣ ಫ್ರೆಶ್ ಆದವಳೇ, ಕಾಫಿ ಕುಡಿದು ಗಂಡನ ಜೊತೆ ಹರಟೆ, ಟಿ.ವಿ, ಹೊರಗೆ ಹೊರಡುವ ಪ್ರೋಗ್ರಾಂ ಹಾಕುವಳು. ಸದಾ ತನ್ನ ಬಟ್ಟೆ ಬರೆ, ಗೆಟಪ್, ಹೇರ್ ಸ್ಟೈಲ್, ಆ್ಯಕ್ಸೆಸರೀಸ್ ಕುರಿತು ಕಾಳಜಿ ವಹಿಸುತ್ತಾ ತಾನಾಯಿತು ತನ್ನ ಲೋಕವಾಯಿತು ಎಂದು ಇದ್ದುಬಿಡುವಳು. ಅವಳ ಈ ನಡವಳಿಕೆಯನ್ನು ನೋಡುತ್ತಾ ಸುನಂದಾ ಬೆರಗಾಗುವರು. ತಾನು ಆ ಮನೆಗೆ ಹೊಸ ಸದಸ್ಯಳು ಎಂಬ ಲೇಶ ಮಾತ್ರ ಸಂಕೋಚವಿಲ್ಲದೆ, ಎಷ್ಟೋ ವರ್ಷಗಳಿಂದ ಅಲ್ಲೇ ಇದ್ದಳಂತೆ ಸಲುಗೆ ತೋರುವಳು. ಅವಳ ಕುರಿತಾಗಿ ಪತಿ ಬಳಿ ಹಲವು ಸಲ ಬಣ್ಣದ ಬೀಸಣಿಗೆ ಎಂದು ಬಣ್ಣಿಸಿದರೆ, ಅವವರು ಅದನ್ನು ನಗುವಿನಲ್ಲೇ ತೇಲಿಸಿಬಿಡುವರು. ಅಡುಗೆ ಮನೆಗೆ ಕಾಲಿಡುವುದು ಎಂದರೆ ಅವಳಿಗೆ ಅಲರ್ಜಿ.
ಒಂದು ಸಲ ಸುನಂದಾ ಅಕ್ಕರೆಯಿಂದ ಅವಳಿಗೆ ತಿಳಿ ಹೇಳುತ್ತಾ, “ರಜೆ ಇರುವ ದಿನ ಸ್ವಲ್ಪ ಅಡುಗೆ ಕಲಿಯಲು ಟ್ರೈ ಮಾಡಮ್ಮ,” ಎಂದು ಸಲಹೆ ನೀಡಿದರು.
ಆ ದಿನ ಮನೆಯಲ್ಲಿ ಎಲ್ಲರೂ ಬಿಡುವಾಗಿ ಟಿವಿ ನೋಡುತ್ತಿದ್ದರು. “ಆದರೆ…. ಯಾಕತ್ತೆ?” ಮುಗ್ಧಳಂತೆ ಅಶಿತಾ ಕೇಳಿದಳು.
“ಏನೇ ಇರಲಿ, ಎಮರ್ಜೆನ್ಸಿ ಅಂತ ಬಂದಾಗ ನೀನೇ ಅಡುಗೆ ಮಾಡಬೇಕಾಗಿ ಬರಬಹುದು.”
“ಅತ್ತೆ, ನನಗೆ ಅಲ್ಪಸ್ವಲ್ಪ ಅಡುಗೆ ಬರುತ್ತೆ…. ಮ್ಯಾಗಿ ಮಾಡೋದು, ಬ್ರೆಡ್ ಟೋಸ್ಟ್ ಹೀಗೆ…. ಹೇಗೋ ಅದರಲ್ಲಿ ಅಡ್ಜಸ್ಟ್ ಮಾಡಿಕೊಂಡರೆ ಆಯ್ತು. ಮಿಕ್ಕಿದ್ದಕ್ಕೆ ನೀವೇ ಇದ್ದೀರಿ ನಿಧಾನ ಕಲಿತರೆ ಆಯ್ತು,” ಎನ್ನುತ್ತಾ ಅವಳು ಅತ್ತೆಯ ಕುತ್ತಿಗೆಗೆ ಜೋತು ಬೀಳುತ್ತಾ, “ನೀವಿಷ್ಟು ಚೆನ್ನಾಗಿ ಎಲ್ಲಾ ಮ್ಯಾನೇಜ್ ಮಾಡುತ್ತಿರುವಾಗ ನನಗೇಕೆ ಟೆನ್ಶನ್? ಯಾವಾಗ ನಿಮ್ಮ ಕೈಯಲ್ಲಿ ಆಗೋಲ್ಲವೋ ಹೇಳಿ, ನಾವು ಫುಲ್ ಟೈಂ ಅಡುಗೆಯವರನ್ನು ಕೆಲಸಕ್ಕೆ ತಗೊಳ್ಳೋಣ. ನೀವು ಹ್ಞೂಂ ಅಂದ್ರೆ ನಾಳೇನೇ ಅರೇಂಜ್ ಮಾಡ್ತೀನಿ, ನಿಮಗೂ ಎಷ್ಟೋ ಆರಾಮ ಆಗುತ್ತೆ.”
ಅದನ್ನು ಕೇಳಿ ಅತ್ತೆ ಹೌಹಾರಿದರು. ಈ ಬಣ್ಣದ ಬೀಸಣಿಗೆ ಮಾರನೇ ದಿನವೇ ಯಾರನ್ನಾದರೂ ಕರೆತಂದರೆ ಏನು ಗತಿ ಎನಿಸಿತು. “ಆಯ್ತು ಬಿಡಮ್ಮ ನಿನಗೆ ಮನಸ್ಸಾದಾಗ, ಸಮಯ ಇದ್ದಾಗ ಅಡುಗೆ ಕಲಿಯುವೆಯಂತೆ. ಸದ್ಯಕ್ಕೆ ನನಗೇನೂ ಅಗತ್ಯವಿಲ್ಲ. ನಿಂಗಿ ಬೇರೆಲ್ಲ ಸುತ್ತು ಕೆಲಸಕ್ಕಿದ್ದಾಳೆ, ನಾನೇ ಮ್ಯಾನೇಜ್ ಮಾಡ್ತೀನಿ.”
ತಂದೆ ಮಗ ಅಂತೂ ಈ ಮಾತಿಗೆ ನಗುತ್ತಲೇ ಇದ್ದರು. ಆ ದಿನ ಸುನಂದಾ ಪತಿಗೆ ಹೇಳಿದರು, “ನೋಡಿದ್ರಾ….. ಅವಳಿಗೆ ಮನೆಯ ಯಾವ ಕೆಲಸ ಕಾರ್ಯದಲ್ಲೂ ಕೈಯಾಡಿಸಲು ಅಕ್ಕರೆಯಿಲ್ಲ…… ಎಂದಾದರೂ ಏನಾದರೂ ಕಲಿತುಕೊಳ್ಳಮ್ಮ ಅಂದ್ರೆ ಅದನ್ನು ನೀವೇ ಮಾಡಿ ಅಂತಾಳೆ. ಮುಂದೆ ಮಾತನಾಡಲು ಇಷ್ಟವಿಲ್ಲದೆ ಸುಮ್ಮನಾಗ್ತೀನಿ.” ಅವರು ಹೇಳಿದ ಶೈಲಿಗೆ ಮಹೇಶ್‌ಸಹಜವಾಗಿ ನಗತೊಡಗಿದರು.
“ಹೌದು, ಹೌದು….. ಅವಳನ್ನು ಗದರಿ ಗೋಳುಗುಟ್ಟಿಸುವ ಅತ್ತೆ ನೀನು ಅಂತ ನನಗೆ ಗೊತ್ತಿಲ್ಲವೇ?” ಸಂಜೆ ಗೌರಕ್ಕಾ ಬರುವ ಮೊದಲೇ ಮಹೇಶ್ ಮನೆಗೆ ಬಂದಾಗಿತ್ತು. ಸುನಂದಾ ಮಹೇಶರೊಂದಿಗೆ ಹಾರ್ದಿಕವಾಗಿ ಮಾತನಾಡುತ್ತಾ, ಕಾಫಿ ತಿಂಡಿ ಸೇವಿಸಿದ ಗೌರಕ್ಕಾ ಕೇಳಿದರು, “ಏನಂತಾಳೆ ಸೊಸೆಮುದ್ದು…. ಬೆಳಗ್ಗೆ ಆಫೀಸಿಗೆ ಹೋಗಿ 7 ಗಂಟೆ ನಂತರ ಮನೆಗೆ ಬರುವವಳಿಗೆ ಗಂಡ, ಮನೆ, ಅತ್ತೆ ಮಾವ, ಸೇವೆ ಗೀವೆ ಇತ್ಯಾದಿ ಜ್ಞಾಪಕ ಇರುತ್ತೇನು?”
“ನೀನೂ ಚೆನ್ನಾಗಿ ಹೇಳ್ತಿ ಗೌರಕ್ಕಾ…… ಈ ಕಾಲದಲ್ಲಿ ಸೇವೆ ಗೀವೆ ಅಂತ ಹೇಳ್ತಿಯಲ್ಲ…… ಇಲ್ಲಿ ನಾವೇನು ರೋಗಿಗಳಾಗಿ ಹಾಸಿಗೆ ಹಿಡಿದಿದ್ದೇವೆಯೇ? ಅಶಿತಾ ಬಲು ಸ್ಮಾರ್ಟ್, ಇಂಟೆಲಿಜೆಂಟ್ ಹುಡುಗಿ ಕಣಕ್ಕಾ….!” ಮಹೇಶ್ ಅಕ್ಕನಿಗೆ ಹೇಳಿದರು.
ಅಶಿತಾಳ ಹೆಸರು ಬಂದಾಕ್ಷಣ ಸುನಂದಾರ ಮುಖದಲ್ಲಿ ತೇಲಿದ ಅನಾಸಕ್ತಿ, ಅನುಭವಿ ಗೌರಕ್ಕನ ಕಣ್ಣು ತಪ್ಪಿಸಲು ಸಾಧ್ಯವೇ? ಅದರಲ್ಲಿ ಅವರು ಬಹಳಷ್ಟು ತಿಳಿದುಕೊಂಡರು. ತಾಯಿ ತಂದೆ ಇಲ್ಲದ ಮಹೇಶ್‌ರಿಗೆ ಗೌರಕ್ಕಾ ಈಗ ತಾಯಿ ಸಮಾನ. 10 ವರ್ಷ ಹಿರಿಯರಾದ ಅವರು ತಮ್ಮನ ಜೊತೆ ಮೊದಲಿನಿಂದ ಹಾರ್ದಿಕ ಸಂಬಂಧ ಹೊಂದಿದ್ದರು.
ಮೊದಲಿನಿಂದಲೂ ಗೌರಕ್ಕಾ ಮಹಾ ಸಂಪ್ರದಾಯಸ್ಥ ಹೆಂಗಸು. ತಮ್ಮ ಮನೆಯಲ್ಲೂ ಪೂರ್ತಿ ಕಂಟ್ರೋಲ್ ಹೊಂದಿದ್ದರು. ಸಹಜವಾಗಿ ಪ್ರವಚನ, ಹರಿಕಥೆ, ಪುರಾಣಪುಣ್ಯ ಕಾಲಕ್ಷೇಪಗಳಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದರು. ನಗರದಲ್ಲಿ ಹಿರಿಯ ಸ್ವಾಮೀಜಿಗಳ ಸತ್ಸಂಗ ನಡೆದಾಗೆಲ್ಲ ಹೋಗುತ್ತಿದ್ದರು. ತೀರ್ಥಯಾತ್ರೆಗೆ ಹೊರಟರೆ 7-8 ದಿನ ಆಗುತ್ತಿತ್ತು.
ಬೆಂಗಳೂರಿನಲ್ಲಿ ಬಾಬಾರ ಹೊಸ ಆಶ್ರಮ ತೆರೆಯಲಿತ್ತು. ಅಲ್ಲಿ 2-3 ದಿನಗಳ ವಿಶೇಷ ಪ್ರವಚನ ಇದ್ದುದರಿಂದ ಅದನ್ನು ಅಟೆಂಡ್‌ಮಾಡಲೆಂದೇ ಮೈಸೂರಿನಿಂದ ಬಂದಿದ್ದರು. ಅಂದು ಅಜಯ್ ಅಶಿತಾ ಮನೆಗೆ ಬರುವಷ್ಟರಲ್ಲಿ 8 ಗಂಟೆ ಆಗಿತ್ತು. ಅತ್ತೆಯನ್ನು ಕಂಡರೆ ಅವರಿಗೆ ಬಾಗಿ ನಮಸ್ಕರಿಸಿ, ಆಶೀರ್ವಾದ ಪಡೆದರು. ಅಶಿತಾ ಹೋಗಿ ಫ್ರೆಶ್ ಆಗಿ ಲೈಟ್ ಮೇಕಪ್ ಮಾಡಿ ಬಂದು ಎಲ್ಲರ ಜೊತೆ ಹರಟತೊಡಗಿದಳು.
ಡೈನಿಂಗ್ ಟೇಬಲ್ ಬಳಿ ಎಲ್ಲರೊಂದಿಗೆ ಜೋಕ್ ಮಾಡುತ್ತಾ ಊಟ ಮಾಡಿದಳು. ಗೌರಕ್ಕನಿಗಂತೂ ಈ ಆಧುನಿಕ ಸೊಸೆ, ಬಂದವರನ್ನು ವಿಚಾರಿಸದೆ ತಾನೇ ಅತಿಥಿಯಂತೆ ಹಾಯಾಗಿ ಕುಳಿತಿರುವುದನ್ನು ಕಂಡು ಆಶ್ಚರ್ಯವಾಯಿತು. ನಂತರ ಮಾವನ ಬಳಿ ಅವಳು ಟಿವಿ ನೋಡುತ್ತಾ, ಅಂದಿನ ರಾಜಕೀಯದ ಚಟುವಟಿಕೆ ಬಗ್ಗೆ ಚರ್ಚಿಸತೊಡಗಿದಳು.
ಸುನಂದಾ ತಾವೇ ಪಾತ್ರೆ ಪಗಡಿ ಎತ್ತಿರಿಸಿ, ನಿಂಗಿ ಬಳಿ ಉಳಿದ ಕೆಲಸ ಮಾಡಿಸುತ್ತಾ ಹೆಣಗುತ್ತಿದ್ದರು. ಮನೆಯಲ್ಲಿ ಪತಿ ಆ ಬಿಲ್ ಪಾರ್ಲಿಮೆಂಟ್‌ನಲ್ಲಿ ಪಾಸ್ ಆಗಬೇಕೆಂದು ಅದರ ಪರವಾಗಿ ವಾದಿಸುತ್ತಿದ್ದರೆ, ಇಲ್ಲಿ ಇವಳು ಪುಂಖಾನುಪುಂಖವಾಗಿ ಖಂಡಿಸುತ್ತಾ ವಾದಿಸುತ್ತಿದ್ದಳು. ಹಿರಿಯರ ಮಾತನ್ನು ಹೀಗೆ ಖಂಡಿಸಿ ವಾದಿಸುತ್ತಾಳಲ್ಲ….? ಥಟ್ಟನೆ ಕೋಪ ಬಂತು, ಆದರೆ ಸಲುಗೆ ವಹಿಸಿ ಗದರಿಸುವುದು ಸರಿಯಲ್ಲ ಎಂದು ಗೌರಕ್ಕ ಸುಮ್ಮನಾದರು.
“ಮಾವ, ನನ್ನ ಬಹಳಷ್ಟು ಫ್ರೆಂಡ್ಸ್, ಈ ಬಿಲ್ ಪಾಸ್ ಆಗಬಾರದು ಎಂದು ವಿರೋಧಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ನನಗೂ ಅದರಲ್ಲಿ ಸೇರಬೇಕು ಅಂತ ಇಷ್ಟ, ಆದರೆ ಆಫೀಸಿನಲ್ಲಿ ಹೆವಿ ವರ್ಕ್ ರಜೆ ಸಿಗ್ತಿಲ್ಲ.’
‘ಗೌರಕ್ಕನಿಗೆ ತಡೆಯಲಾಗದೆ ಸಿಡಾರನೆ ಹೇಳಿದರು, “ಈ ಸಲ ಸುನಂದಾನೂ ನನ್ನ ಜೊತೆ ಬಾಬಾರ ಹೊಸ ಆಶ್ರಮಕ್ಕೆ ಬಂದು 2 ದಿನ ನನ್ನೊಂದಿಗೆ ಸತ್ಸಂಗದಲ್ಲಿ ಕಳೆಯಲಿ. ನನಗೆ ಈ ಕಡೆ ಬೆಂಗಳೂರಿನ ಆಶ್ರಮಕ್ಕೆ ಹೋಗೋದು, ಇಲ್ಲಿನ ವ್ಯವಹಾರ ಅಷ್ಟು ತಿಳಿಯೋಲ್ಲ. ಸುನಂದಾಗೆ ಇಲ್ಲಿನ ಜಾಗಗಳೆಲ್ಲ ಚೆನ್ನಾಗಿ ಪರಿಚಯ ಉಂಟು. ಏನಮ್ಮ ಅಶಿತಾ, 2 ದಿನ ನೀನೇ ಮನೆಯ ಜವಾಬ್ದಾರಿ ವಹಿಸಿಕೊಳ್ಳಬೇಕು!”
“ಗೌರತ್ತೆ, ನಮ್ಮತ್ತೆ ಹಾಗೆಲ್ಲ ಮನೆ ಬಿಟ್ಟು ಬರೋದೇ ಇಲ್ಲ ಬಿಡಿ,” ತಾವು ಏನಾದರೂ ಹೇಳು ಮೊದಲೇ ಇವಳು ತಾನೇ ನಿರ್ಧರಿಸಿ ಹೇಳಿಬಿಟ್ಟಳಲ್ಲ ಎನಿಸಿ ಸಹಜವಾಗಿ ಅಸಮಾಧಾನವಾಯಿತು. ಗೌರಕ್ಕನ ಮುಂದೆ ಈ ಬಣ್ಣದ ಬೀಸಣಿಗೆ ತನಗೆ 3 ಕಾಸಿನ ಕಿಮ್ಮತ್ತೂ ಕೊಡುವುದಿಲ್ಲವೇ? ಎಂದುಕೊಂಡರು ಸುನಂದಾ.
ಗೌರತ್ತೆಗಂತೂ ನಿಜಕ್ಕೂ ರೇಗಿಹೋಯಿತು. ನಿನ್ನೆ ಮೊನ್ನೆ ಬಂದ ಹುಡುಗಿ ಹಿರಿಯರ ಮಾತನ್ನು ಹೀಗಾ ಖಂಡಿಸಿ ಮಾತನಾಡುವುದು ಆಗ ಅವರು ತುಸು ಕಠಿಣವಾಗಿಯೇ, “ಸ್ವಾಮೀಜಿ ಮಾತು ಕೇಳುತ್ತಾ ನಾವು ಸಂಸಾರದ ಎಸ್ಸಾ ಕಷ್ಟ ಮರೆಯುತ್ತೇವೆ. ಅದನ್ನು ಹಾಗೆ ಬೇಡ ಎನ್ನಬಾರದು.”
“ಅಂದ್ರೆ….. ಸ್ವಾಮೀಜಿ ಎಲ್ಲಾ ರೋಗ ವಾಸಿ ಮಾಡಿಬಿಡ್ತಾರೆ ಅಂತಾನಾ? ಪ್ರಪಂಚದ ತುಂಬಾ ಇಷ್ಟು ಆಸ್ಪತ್ರೆಗಳು, ಸರ್ಜನ್ ಎಲ್ಲಾ ದಂಡವೇ? ನಾಸಾದಂಥ ವಿಜ್ಞಾನಿಗಳು ಇವರ ಮಾತು ಸರಿ ಅಂತಾರಾ?”
“ನೋಡಮ್ಮ, ನೀನು ಎಂದೂ ಇಂಥ ಜ್ಞಾನ ಧ್ಯಾನ ಇತ್ಯಾದಿ ಪ್ರವಚನ ಕೇಳಿಲ್ಲ ಅನ್ಸುತ್ತೆ. ಟಿಪ್ ಟಾಪ್ ಡ್ರೆಸ್ ಮಾಡಿಕೊಂಡು ಬೆಳಗ್ಗೆ ಆಫೀಸಿಗೆ ಹೋಗಿ ಸಂಜೆ ಮನೆಗೆ ಬರೋದು ಬೇರೆ ವಿಷಯ, ಆಧ್ಯಾತ್ಮಿಕ ದಾರಿಯಲ್ಲಿ ವಿಶ್ವಾಸದಿಂದ ನಡೆಯೋದು ಬೇರೆ ವಿಷಯ.”
ಗೌರಕ್ಕನ ಈ ಘಂಟಾಘೋಷದ ನುಡಿಗಳು ಅಶಿತಾಳ ಮುಖ ಹಿಂಡುವಂತೆ ಮಾಡಿತು. ಸ್ವಭಾತಃ ಅವಳೇನೂ ಕೆಟ್ಟವಳಲ್ಲ. ಇನ್ನೊಬ್ಬರನ್ನು ನೋಯಿಸುವ ಮನಸ್ಸಿನವಳಲ್ಲ. ಆದರೆ ಸೋಮಾರಿ. ಇನ್ನೊಬ್ಬರನ್ನು ಓಲೈಸುವ ಗುಣ ಗೊತ್ತಿಲ್ಲ. ಒಬ್ಬಳೇ ಮಗಳಾಗಿ ಅತಿ ಮುದ್ದಿನಿಂದ ಬೆಳೆದುದರಿಂದ, ತನ್ನನ್ನು ಎಲ್ಲರೂ ಓಲೈಸಬೇಕೆಂದೇ ಬಯಸುವಳು, ನಾನು ಹೇಳಿದ್ದು ಮಾಡಿದ್ದು ಸರಿ ಎಂದೇ ಭಾವಿಸಿದಳು. ಹೀಗಾಗಿ ತುಸು ತಗ್ಗಿದ ಬೇಸರದ ಧ್ವನಿಯಲ್ಲಿ, “ಗೌರತ್ತೆ, ಜ್ಞಾನಧ್ಯಾನದ ಈ ಫಿಲಾಸಫಿ ನನಗೆ ಏನೇನೂ ಆಸಕ್ತಿ ಇಲ್ಲದ ವಿಷಯ,” ಎಂದಳು.
ಗೌರತ್ತೆ ಹುಬ್ಬು ಗಂಟಿಕ್ಕುತ್ತಾ, “ಸುನಂದಾ, ನೀನಾದ್ರೂ ಬರ್ತಿಯೋ ಅಥವಾ….?” ಎಂದರು.
ಸುನಂದಾರಿಗೆ ತಮ್ಮ ಮನೆಯ ಶಾಂತಿ ಕದಡುತ್ತಿದೆ ಎನಿಸಿತು. ಅದನ್ನು ಬಿಟ್ಟುಕೊಡಬಾರದು, ಹಾಗೇ ಗೌರಕ್ಕನಿಗೆ ಅಸಮಾಧಾನ ಆಗಬಾರದೆಂದು ಮೆಲ್ಲಗೆ ಹೇಳಿದರು,” ಬಹುಶಃ….. ಇವತ್ತು ಬರಕ್ಕಾಗಲ್ಲ ಅನ್ಸುತ್ತೆ ಅಕ್ಕಾ….. ಮಂಡಿನೋವಿನ ಕಾರಣ 10 ನಿಮಿಷಕ್ಕಿಂತ ಹೆಚ್ಚಾಗಿ ನೆಲದ ಮೇಲೆ ಕೂರಲಾರೆ.”
ಆಗ ಅಜಯ್ ಅಮ್ಮನಿಗೆ, “ಅಷ್ಟು ನೋವು ಇರುವಾಗ 12 ಗಂಟೆಗಳ ಕಾಲ ಕುಳಿತುಕೊಳ್ಳುವುದು ಆಗದ ಕೆಲಸ ಬಿಡಮ್ಮ. ಅತ್ತೆ, ನೀವು ಹೋಗಿ ಬನ್ನಿ, ನಿಮ್ಮನ್ನು ನಾನು ಡ್ರಾಪ್ ಮಾಡ್ತೀನಿ. ನಿಮಗೆ ಹೊಸ ಜಾಗ ಹುಡುಕಾಡುವ ಕಷ್ಟವಿಲ್ಲ,” ಎಂದ.
ಗೌರಕ್ಕನಿಗೆ ತಮ್ಮ ಮಾತು ನಡೆಯಲಿಲ್ಲ ಎಂದು ಕೋಪ ಬಂತು. ಅಂತೂ ಅಜಯ್‌ನ ಕಾರಿನಲ್ಲಿ ಗೌರತ್ತೆ ಹೊರಟರು. ರಾತ್ರಿ 9 ಗಂಟೆ ಹೊತ್ತಿಗೆ ಮಹೇಶ್ ಅವರನ್ನು ಕರೆತಂದರು.
ರಾತ್ರಿ ಊಟ ಮುಗಿಸಿ ಮಲಗುವ ಸಮಯದಲ್ಲಿ ಗೌರತ್ತೆ ಸುನಂದಾರಿಗೆ ಹೇಳಿದರು, “ಅಬ್ಬಬ್ಬಾ…. ಏನು ಕಾಲ ಬಂತಮ್ಮ….. ನಿನ್ನ ಸೊಸೆ ಬಾಯಿ ಬೊಂಬಾಯಿ ಕಣೆ ತಾಯಿ…..” ಎಂದರು.
ಸುನಂದಾ ಏನು ಹೇಳಿಯಾರು?
“ಈಗಿನಿಂದಲೇ ಲಗಾಮು ಜಗ್ಗಿ ಹಿಡಿದುಕೋ. ಇಲ್ಲದಿದ್ದರೆ ಗಂಡನ್ನ ಎಳೆದುಕೊಂಡು ಮುಂದಿನ ತಿಂಗಳೇ ಬೇರೆ ಮನೆ ಹೂಡಿಬಿಟ್ಟಾಳು!” ಸುನಂದಾ ಒಣನಗೆ ನಕ್ಕು, “ಅಕ್ಕಾ, ಅವಳು ಈ ಮನೆ ಸೊಸೆ, ಲಗಾಮು ಹಾಕಿ ಎಳೆಯಲು ಕುದುರೆಯಲ್ಲ,” ಎಂದಾಗ ಗೌರಕ್ಕಾ ಸುಮ್ಮನಾದರು. ಮೊದಲಿನಿಂದಲೂ ಮುಂದೆ ಹಾಯದ, ಹಿಂದೆ ಒದೆಯದ ಮುಗ್ಧ ಹಸು ಸ್ವಭಾವದ ಸುನಂದಾ ಮನೆಯಲ್ಲಿ ಅಶಾಂತಿ ವಾತಾವರಣ ಉಂಟಾಗಲು ಅವಕಾಶ ಕೊಡುವರಲ್ಲ.
ಸ್ವಲ್ಪ ಹೊತ್ತು ಬಿಟ್ಟು ಗೌರಕ್ಕಾ ಮಾತು ಮುಂದುವರಿಸಿದರು, “ಅಲ್ಲ, ನಮ್ಮ ಮುಗ್ಧ ಸ್ವಭಾವದ ಅಜಯನಿಗೆ ಈ ಬಣ್ಣದ ಬೀಸಣಿಗೆ ಎಲ್ಲಿಂದ ಗಂಟು ಬಿತ್ತು ಅಂತೀನಿ…… ಆದರೆ ಅವಳಿಂದ ಈ ಮನೆಯಲ್ಲಿ ಮನಶ್ಶಾಂತಿ ಉಳಿಯುತ್ತೆ ಅಂತ ನನಗಂತೂ ಖಂಡಿತಾ ಅನಿಸುತ್ತಿಲ್ಲಮ್ಮ. ಸದಾ ದಸರಾ ಬೊಂಬೆಯಂತೆ ಉಟ್ಟುತೊಟ್ಟು, ಮಾಡರ್ನ್ ಮೇಕಪ್ ಮಾಡಿಕೊಂಡು ಇದ್ದುಬಿಟ್ಟರೆ ಸಂಸಾರ ತೂಗಿಸಿಕೊಂಡು ಹೋದಂತೆ ಆಯ್ತೇ? ಆದಷ್ಟೂ ಪಟಪಟಾಂತ ಬಾಯಿ ಬಡಿಯೋದನ್ನು ಕಡಿಮೆ ಮಾಡಿಸಿ, ಹಿರಿಯರಿಗೆ ಗೌರವ ಕೊಡುವುದನ್ನು ಕಲಿಸು.”
ಸುನಂದಾ ಬರಿದೇ ಮುಗುಳ್ನಕ್ಕರು, “ಅವಳ ಕಣ್ಣೋಟ, ಹಾವಭಾವ ಗಮನಿಸಿದಿರಾ? ಅದಕ್ಕೆ ತಕ್ಕಂತೆ ಈ ಅಜಯ್ ತಾಳ ಹಾಕುತ್ತಾ ಅವಳನ್ನೇ ಕಣ್ಣು ಬಿಟ್ಟುಕೊಂಡು ನೋಡುತ್ತಾ ಕೂರುತ್ತಾನೆ. ಅದಕ್ಕೆ ಮನೆಯಲ್ಲಿರುವಷ್ಟು ಹೊತ್ತೂ ಅವಳು ಸದಾ ಫ್ರೆಶ್ ಆಗಿ ಇರ್ತಾಳೆ.”
“ಗೊತ್ತಾಯ್ತು ಬಿಡು, ನಮ್ಮ ಚಿನ್ನಾನೇ ತಗಡಾದ್ರೆ ಆಚಾರೀನಾ ಏನು ಬೈಯೋದು? ಸದಾ ಟಿಪ್‌ಟಾಪ್ ಆಗಿ ಡ್ರೆಸ್‌ಬದಲಾಯಿಸುತ್ತಾ, ಮೆರೆಯುವುದೊಂದು ಗೊತ್ತು ಅಷ್ಟೇ ಅವಳಿಗೆ,” ಗೌರಕ್ಕಾ ಅಂತೂ ಅವಳನ್ನು ಬಿಲ್‌ಕುಲ್ ಇಷ್ಟಪಡಲಿಲ್ಲ.
“ನೀನೇನೇ ಹೇಳಮ್ಮ, ಈಗಿನ ಕಾಲದ ಹುಡುಗೀರು ಗಂಡನಿಗೆ ಅದೇನು ಮೋಹದ ಮಂಕು ಬೂದಿ ಎರಚಿರ್ತಾರೋ…… ಬುಗುರಿ ಬುಗುರಿ ಆಡಿಸಿಬಿಡ್ತಾರೆ!” ತಮಗೆ ಗೊತ್ತಿದ್ದಷ್ಟೂ ಸೊಸೆಯನ್ನು ಕಂಟ್ರೋಲ್‌ಗೆ ತೆಗೆದುಕೊಳ್ಳುವ ಕಲೆಗಳ ಬಗ್ಗೆ ತಿಳಿಸಿ ಗೌರಕ್ಕಾ ನಿದ್ದೆಗೆ ಹೊರಳಿದಾಗ 12 ದಾಟಿತ್ತು. ಸುನಂದಾರಿಗಂತೂ ನಿದ್ದೆ ದೂರವೇ ಉಳಿಯಿತು.
ಈಗ ಅವರಿಗೆ ಬಾಬಾರ ಆಶ್ರಮ ಪರಿಚಯವಾದ್ದರಿಂದ ಮಾರನೇ ಬೆಳಗ್ಗೆ 10 ಗಂಟೆಗೆ ಊಬರ್ ಟ್ಯಾಕ್ಸಿ ಬುಕ್ ಮಾಡಿ ಕಳುಹಿಸಿಕೊಟ್ಟರು. ಈ ಸಲ 2 ದಿನ ಅಲ್ಲೇ ಉಳಿದು ಬರುವುದಾಗಿ ಗೌರಕ್ಕಾ ಹೇಳಿ ಹೊರಟರು. ಬಂದ ದಿನವೇ ಅವರು ಮೈಸೂರಿಗೆ ಹೊರಡಬೇಕಿತ್ತು.
ಅವರು ಹೊರಟ ನಂತರ ಅಜಯ್ ಪತ್ನಿಗೆ ಹೇಳಿದ, “ಅಶಿತಾ, ನೀನಂತೂ ಅತ್ತೆ ಮುಂದೆ ಪಟಪಟಾಂತ ಮಾಮೂಲಿ ತರಹ ಮಾತಾಡಬೇಡ. ಇಷ್ಟು ವರ್ಷಗಳಾಯ್ತು, ಅಮ್ಮ ಒಂದು ದಿನ, ಅವರ ಎದುರು ಜೋರು ದನಿಯಲ್ಲಿ ಮಾತಾಡಿದ್ದೇ ಇಲ್ಲ.
“ಅಜಯ್, ನಿಮ್ಮ ತಾಯಿ ಆ ಕಾಲದವರು. ಅವರಂತೆ ಅಖಂಡ ಸಹನೆ, ಕಷ್ಟಸಹಿಷ್ಣುತೆ ನಮ್ಮಂಥ ಮಾಡರ್ನ್ ಹುಡುಗಿಯರಿಗೆ ಬರಲ್ಲ ಬಿಡು. ಕಂಡದ್ದನ್ನು ಕಂಡಂಗೆ ಹೇಳುವುದೇ ನನ್ನ ಸ್ವಭಾವ. ನಿನಗೇ ಗೊತ್ತಲ್ಲ….. ನಾನು ಹೇಗೆ ಬದಲಾಯಿಸಿ ಮಾತನಾಡಲಿ?” ಸೊಸೆ ಮಗನನ್ನು ಏಕಚನದಲ್ಲೇ ಮಾತನಾಡಿಸುವುದು ಸುನಂದಾರಿಗೆ ಇರಿಸುಮುರಿಸಾದರೂ, ಈಗಿನ ಕಾಲದ ಹುಚ್ಚು ಲವ್ ಅಂದುಕೊಂಡು ಸುಮ್ಮನಾದರು. ಅವಳ ದಾರ್ಷ್ಟೀಕ ಸ್ವಭಾವ ತಮಗೆಂದೂ ಅರಗಿಸಿಕೊಳ್ಳಲು ಆಗದು ಎಂದು ಅವರಿಗೆ ಗೊತ್ತಿತ್ತು.
ಅಜಯನಿಗಿಂತ 4 ವರ್ಷ ದೊಡ್ಡವಳಾದ ಸುನೀತಾ, ತನ್ನ ಇಬ್ಬರು ಮಕ್ಕಳೊಂದಿಗೆ ತವರಿಗೆ ಬಂದಿಳಿದಳು. “ಮದುವೆ ಮನೆಯಲ್ಲಿ ಅಶಿತಾ ಜೊತೆ ಮಾತನಾಡಿದಂತೆಯೇ ಆಗಲಿಲ್ಲ. ಮಕ್ಕಳಿಗೆ ಶಾಲೆಗೆ ರಜೆ ದೊರಕಿದ್ದರಿಂದ ಇಷ್ಟು ದಿನಗಳ ನಂತರ ಬಿಡುವು ಮಾಡಿಕೊಂಡು ಬಂದೆ,” ಎಂದು ತಾಯಿ ಸುನಂದಾರ ಬಳಿ ಮಾತನಾಡುತ್ತಿದ್ದಳು.
ಅವಳ ಪತಿ ಸುಧೀರ್ ಜೊತೆಗೆ ಬಂದಿರಲಿಲ್ಲ, ಅವನಿಗೆ ಆಫೀಸಿನಿಂದ ರಜೆ ಸಿಕ್ಕಿರಲಿಲ್ಲ. ಸುನೀತಾ ಅಂತೂ ಅತ್ತೆ ಮನೆಯಲ್ಲಿ ಅಚ್ಚುಮೆಚ್ಚಿನ ಸೊಸೆ ಎನಿಸಿದ್ದಳು. ಸಂಜೆ ಅಶಿತಾ ಬಂದ ಮೇಲೆ ಕಾಫಿ ಕೊಟ್ಟು ಉಪಚರಿಸುತ್ತಾ ಸುನೀತಾ ಅವಳೊಂದಿಗೆ ಚೆನ್ನಾಗಿ ಹರಟಿದಳು. ಹಿರಿಯ ನಾದಿನಿ ಎಂದು ತಿಳಿದಿದ್ದರೂ ಔಪಚಾರಿಕವಾಗಿ ಅವಳನ್ನು ಅಕ್ಕಾ ಎನ್ನದೆ ಗೆಳತಿಯಂತೆ ನೀತಾ ಎಂದೇ ಅಶಿತಾ ಮಾತನಾಡಿಸುತ್ತಿದ್ದಳು. ಮಕ್ಕಳಿಗೂ ತಮ್ಮ ಮಾಮನ ಹೊಸ ಹೆಂಡತಿ ಬಹಳ ಇಷ್ಟವಾದಳು. ಅವರಿಗಾಗಿ ಬಹಳಷ್ಟು ಆಧುನಿಕ ಆಟಿಕೆ, ಚಾಕಲೇಟ್ಸ್ ತಂದಿದ್ದಳು ಅಶಿತಾ. ಸುನೀತಾ ಜೊತೆ ಸಮಯ ಕಳೆಯಲೆಂದೇ ಮಾರನೇ ದಿನ ಅಶಿತಾ ರಜೆ ಹಾಕಿ ಮನೆಯಲ್ಲಿ ಉಳಿದಾಗ ಸುನಂದಾರಿಗೆ ಬಹಳ ಆಶ್ಚರ್ಯವಾಯಿತು, ಮಗಳ ಪುಣ್ಯ ಎಂದುಕೊಂಡರು.
ತಾವು ಹೇಳದೆಯೇ ಸೊಸೆ ಹಾಗೆ ಮಾಡಿದ್ದು ಅವರಿಗೆ ಮೆಚ್ಚುಗೆ ಆಯ್ತು. ಸುನೀತಾ ಸಂಪ್ರದಾಯಸ್ಥ ಮನೆ ಸೊಸೆಯಾಗಿ ಗೆದ್ದಿದ್ದಳು. ಅಲ್ಲಿ ಅವಳು ಬಹಳ ಫ್ರೀಯಾಗಿ ಹಾಯಾಗಿ ಇರುತ್ತಿರಲಿಲ್ಲ ಎಂಬುದು ನಿಜವಾದರೂ, ತನ್ನ ಇತಿಮಿತಿ ಅರಿತಿದ್ದಳು. ಸುಧೀರ್ ಸಹ ಅಮ್ಮನ ಪುಟ್ಟ ಆಗಿದ್ದ. ಅನೇಕ ವ್ರತ, ಪೂಜೆಗಳ ಸಲುವಾಗಿ ಸುನೀತಾ, ಕೈ ಕುತ್ತಿಗೆಯಲ್ಲಿ ಕಂಕಣ, ತಾಯಿತ ಕಟ್ಟಿಕೊಂಡಿದ್ದಳು.
“ನೀತಾ….. ಈಗೆಲ್ಲ ಮ್ಯಾಚಿಂಗ್ ಆ್ಯಕ್ಸೆಸರೀಸ್ ಧರಿಸುವ ಕಾಲ. ನೀನೇನು ಇಷ್ಟೊಂದು ಕಂಕಣ, ತಾಯಿತ ಕಟ್ಟಿಕೊಂಡಿದ್ದಿ?”
“ಏನು ಮಾಡಲಿ? ನಮ್ಮತ್ತೆ ಮಹಾ ಸಂಪ್ರದಾಯಸ್ಥರು. ಅವರು ಹೋಗದ ಗುಡಿ ಇಲ್ಲ, ಮಾಡದ ವ್ರತ ನೇಮಗಳಿಲ್ಲ. ಹೀಗಾಗಿ ಅವರು ಹೇಳಿದಂತೆ ಇವನ್ನೆಲ್ಲ ಕಟ್ಟಿಕೊಂಡಿದ್ದೀನಿ. ಏನೇ ಸಂದರ್ಭ ಇರಲಿ, ತಕ್ಷಣ ಒಂದು ದಾರ ಕಟ್ಟಿಕೊ ಅಂತಾರೆ. ನನ್ನದಿರಲಿ, ನಮ್ಮ ಸುಧೀರ್ ಎಷ್ಟು ದಾರಗಳನ್ನು ಕಟ್ಟಿಕೊಂಡು ಆಫೀಸಿಗೆ ಹಾಗೆ ಹೊರಡುತ್ತಾರೋ ನೋಡಬೇಕು. ಅಲ್ಲಿ ಯಾರು ಏನು ಆಡಿಕೊಳ್ತಾರೋ ಅಂತ ನನಗೆ ಹಿಂಜರಿಕೆ ತಪ್ಪಿದ್ದಲ್ಲ.”
ಕಿಲ ಕಿಲ ನಗುತ್ತಾ ಅಶಿತಾ ತಕ್ಷಣ ಹೇಳಿದಳು, “ಅಲ್ಲಿ ಯಾರಾದರೂ ನನ್ನಂಥ ಹುಡುಗಿ ಇದ್ದರೆ ಖಂಡಿತಾ ತಮಾಷೆ ಮಾಡದೆ ಬಿಡೋಲ್ಲ ಬಿಡು.” ಇದಕ್ಕೆ ಸುನೀತಾ ಸಹ ನಕ್ಕಳು. ಸುನಂದಾರಿಗೆ ಸರಿ ಹೋಗಲಿಲ್ಲ.
“ಸುಧೀರ್ ಈ ಮನೆ ಅಳಿಯ ಅನ್ನೋದು ನೆನಪಿರಲಿ ಅಶಿತಾ. ಹಾಗೆಲ್ಲ ಹಾಸ್ಯ ಮಾಡೋದು ಸರಿಯಲ್ಲ.”
“ಹೌದತ್ತೆ….. ವಿಷಯವೇ ಹಾಗಿದೆ,” ಎಂದು ನಾದಿನಿಯ ಭುಜ ತಟ್ಟಿ ಮತ್ತಷ್ಟು ನಕ್ಕಳು ಅಶಿತಾ.
ಸುನಂದಾರಿಗೆ ಇರಿಸುಮುರಿಸಾಯ್ತು. ಗಂಡನ ಭಾವನನ್ನು ಹಾಗೆಲ್ಲ ಹಗುರವಾಗಿ ಆಡಿಕೊಳ್ಳುವುದೇ? ಬಾಯಿಗೆ ಬಂದದ್ದೇ ಫಿಲ್ಟರ್ ಇಲ್ಲದೇ ಒದರಿಬಿಡುತ್ತಾಳೆ.
ಮಕ್ಕಳೊಂದಿಗೆ ಅವರು ಸಿನಿಮಾ, ಮಾಲ್ ಎಂದು ಸುತ್ತಾಡಲು ಹೊರಟರು.
“ನೀತಾ, ಸದಾ ಸಲ್ವಾರ್ ಸೂಟ್, ಸೀರೇಯಲ್ಲೇ ಇರ್ತೀಯಾ…. ವೆಸ್ಟರ್ನ್ ಡ್ರೆಸ್ ಧರಿಸಬಾರದೇ?”
“ಸಧ್ಯ! ಆ ಮನೆಯಲ್ಲಿ ಅದಕ್ಕೆಲ್ಲ ಅನುಮತಿ ಇಲ್ಲ.”
ಏನನ್ನೋ ನೆನಪಿಸಿಕೊಂಡ ಅಶಿತಾ, “ನಾನೇ ಬೇರೆ….. ನನ್ನ ಸ್ಟೈಲೇ ಬೇರೇ! ಅಂತ ಅವರಿಗೆ ಹೇಳಬಾರದೇ?” ರಜನಿಕಾಂತ್‌ಸ್ಟೈಲ್‌ನಲ್ಲಿ ಅವಳು ಕೈಬಾಯಿ ತಿರುಗಿಸುತ್ತಾ ಹೇಳಿದಾಗ ಸುನೀತಾ, ಮಕ್ಕಳು ಜೋರಾಗಿ ನಗತೊಡಗಿದರು.

ಹೊರಟರ ಸಂಭ್ರಮ ಕಂಡು, ಅವರ ಕೇಕೆ, ಅಟ್ಟಹಾಸದ ನಗು ಈ ಬಣ್ಣದ ಬೀಸಣಿಗೆಯಿಂದ ಇದೆಲ್ಲ ನಡೆಯುತ್ತಿದೆ ಎಂದು ಸುನಂದಾ ಲೆಕ್ಕ ಹಾಕಿದರು. ಇನ್ನೇನು ಜೋಕ್ ಮಾಡ್ತಾಳೋ, ಮುಂದೆ ಏನು ಆಭಾಸ ಕಾದಿದೆಯೋ ಎಂಬುದು ಅವರ ಚಿಂತೆ. ಆದರೆ ಸೊಸೆಯ ಕಾರಣ ಮಗಳು, ಮೊಮ್ಮಕ್ಕಳು ಖುಷಿಯಾಗಿ ಸಂಭ್ರಮಿಸುತ್ತಿದ್ದಾರೆ, ಇವರಿಗಾಗಿ ಅವಳ ನಿಷ್ಕಲ್ಮಶ ಪ್ರೀತಿ ಕಂಡು ಮನದಲ್ಲೇ ಸುಖಿಸಿದರು. ಹಿಂದೆಲ್ಲ ತವರಿಗೆ ಬಂದಾಗ ಮಗಳು ಇಷ್ಟು ಖುಷಿ ಆಗಿರಲಿಲ್ಲ ಎಂದೇ ಅವರಿಗನ್ನಿಸಿತು.
ಅಷ್ಟರಲ್ಲಿ ಅವರಿಗೆ ಗೌರಕ್ಕನ ಫೋನ್ ಬಂತು. ಸೊಸೆಯನ್ನು ತಲೆ ಮೇಲೆ ಕೂರಿಸಿಕೊಳ್ಳಬೇಡ, ಕಂಟ್ರೋಲ್ ಕಂಟ್ರೋಲ್ ಎಂದು ಎಚ್ಚರಿಸಿದರು. ಸುನಂದಾ ಬರಿದೇ ಹ್ಞೂಂಗುಟ್ಟುತ್ತಿದ್ದರು.
ಸುನೀತಾ 1 ವಾರಕ್ಕಷ್ಟೇ ಬಂದಿದ್ದಳು. ಅಂದು ಅವಳಲ್ಲಿಗೆ ಬಂದು 3ನೇ ದಿನ. ಸುನಂದಾರಿಗೆ ಅಂದು ಅಪರೂಪಕ್ಕೆ ಅವರಣ್ಣ ಸುನೀಲ್‌ರಿಂದ ಫೋನ್ ಬಂದಿತ್ತು. ಅವರ ಮಗ ವಿಜಯ್ ಹೆಂಡತಿ ಮಕ್ಕಳ ಜೊತೆ ಬೆಂಗಳೂರಿಗೆ ಬರುವವನಿದ್ದಾನೆ ಎಂದು ತಿಳಿಸಿದರು. ಈ ವಿಷಯ ಕೇಳಿದಾಗಿನಿಂದ ಅವರು ಗಂಭೀರವಾದರು.
ಎಲ್ಲರಿಗೂ ವಿಜಯ್ ಬರುತ್ತಿರುವ ವಿಷಯ ತಿಳಿಸಿದರು. ಅದನ್ನು ಕೇಳಿ ತಂದೆ ಮಗ ಮಾಮೂಲಾಗೇ ಇದ್ದರು. ಆದರೆ ತಾಯಿ ಮಗಳು ಪರಸ್ಪರ ಮುಖ ಮುಖ ನೋಡಿಕೊಂಡು ಸೀರಿಯಸ್ ಆಗಿದ್ದನ್ನು ಅಶಿತಾ ಗಮನಿಸಿದಳು.
ಅದಾದ ಮೇಲೆ ಇಡೀ ದಿನ ಸುನೀತಾ ಬೇಸರದಿಂದ ಮೂಡ್ ಔಟ್ ಆಗಿದ್ದನ್ನು ಗಮನಿಸಿದಳು. ಇದುವರೆಗೂ ಚಿಗರೆಯಂತೆ ಚಿಮ್ಮುತ್ತಾ ಖುಷಿಯಾಗಿದ್ದ ಸುನೀತಾ, ಬಿಲ್‌ಕುಲ್ ಮೌನವಾಗಿದ್ದಳು. ಅವಳ ಮಕ್ಕಳು ತಾಯಿಯ ಮೂಡ್‌ಗೆ ಹೊಂದಿಕೊಂಡು, ಕೈಯಲ್ಲಿ ಕಾಮಿಕ್ಸ್ ಹಿಡಿದು ಸುಮ್ಮನೆ ಕುಳಿತಿದ್ದರು. ಟಿವಿ ಸಾಕಾದಾಗ ಆ ಮಕ್ಕಳು ಹೊರಗೆ ಪಾರ್ಕಿನಲ್ಲಿ ಆಡಲು ಹೊರಟರು. ಸುನೀತಾ ಮಾತ್ರ ಹಾಗೇ ಇದ್ದಳು.
ಮಾರನೇ ಬೆಳಗ್ಗೆ ತಂದೆಮಗ ಆಫೀಸಿಗೆ ಹೊರಟ ನಂತರ ಮಗಳು ತಾಯಿಯ ಕೋಣೆಯಲ್ಲಿ ಮೆಲ್ಲಗೆ ಏನೋ ಹೇಳುತ್ತಿದ್ದಳು. ಹೊರಗಿನಿಂದ ಅಶಿತಾ ಅದನ್ನು ಕೇಳಿಸಿಕೊಳ್ಳಲು ಯತ್ನಿಸಿದಳು. ಇದೀಗ ನಿಧಾನವಾಗಿ ಈ ಮನೆಯನ್ನು ತನ್ನ ಮನೆಯೆಂದೂ, ಇಲ್ಲಿನವರನ್ನು ತನ್ನವರೆಂದೂ ಭಾವಿಸತೊಡಗಿದ್ದಳು.
ವಿಜಯ್ ಹೆಸರು ಕೇಳಿ ಅತ್ತೆ ನಾದಿನಿ ಹಿಮ್ಮೆಟ್ಟಿದ್ದೇಕೆ ಎಂದು ತಿಳಿಯದೆ ಅಶಿತಾ ಕಸಿವಿಸಿಗೊಂಡಳು.
ಸುನೀತಾ ಹೇಳುತ್ತಿದ್ದಳು, “ಅಮ್ಮ, ನಾಳೆ ಬೆಳಗ್ಗೆ ನಾನು ತುಮಕೂರಿಗೆ ಹೊರಟುಬಿಡ್ತೀನಿ.”
“ಬೇಡಮ್ಮ…. ಇದೀಗ ತಾನೇ ಬಂದಿದ್ದೀಯಾ…. 1 ವಾರವಾದರೂ ಇರಬೇಡವೇ?”
“ಇಲ್ಲಮ್ಮ ಇಲ್ಲ….. ನಾನಂತೂ ವಿಜಯನ ಮುಖ ನೋಡೋದೇ ಇಲ್ಲ!”
“ಅವನ ಫ್ಯಾಮಿಲಿ ಜೊತೆಗಿರುತ್ತೆ….. ನಿನಗೇನು ಕಷ್ಟ ಆಗೋಲ್ಲ. ಅವನನ್ನು ಇಗ್ನೋರ್ ಮಾಡಿ ನೀನು ನೆಮ್ಮದಿಯಾಗಿರು.”
“ಅವನನ್ನು ನಿರ್ಲಕ್ಷಿಸಿ ಬಿಡು ಅಂತ ಸುಲಭವಾಗಿ ಹೇಳಿಬಿಡ್ತೀಯಮ್ಮ…… ನನಗಂತೂ ಅವನ ಮುಖ ನೋಡೋದೂ ಬೇಕಿಲ್ಲ!”
ಹೊರಗಿದ್ದ ಅಶಿತಾಳಿಗೆ ಏನೋ ವಿಷಯ ಇದೆ ಅಂತ ಅರ್ಥವಾಯಿತು. ಅವಳು ಒಳಗೆ ಬಂದು ಅವರಿಬ್ಬರ ಮಧ್ಯೆ ಕೂರುತ್ತಾ, “ನೀತಾ, ನೀನೇಕೆ ಹೋಗಬೇಕು? ಇದು ನಿನ್ನ ತವರುಮನೆ, ನಿನ್ನದೇ ಮನೆ! ನೀವೆಲ್ಲ ಈಗ ನನ್ನವರು. ನಿಮ್ಮ ಕಷ್ಟ ಸುಖ ನನ್ನೊಂದಿಗೆ ಹಂಚಿಕೊಳ್ಳಬಾರದೇ? ನನ್ನನ್ನೂ ನಿಮ್ಮವಳೆಂದು ಭಾವಿಸಿದ್ದರೆ ಹೇಳಿ.”
“ಖಂಡಿತಾ ಅಶಿತಾ, ನೀನೂ ನನ್ನ ತಂಗಿ ಇದ್ದಂತೆ……” ಎಂದು ಸುನೀತಾ ಸಹಜವಾಗಿ ಮನಬಿಚ್ಚಿ ಮಾತನಾಡಿದಳು,
“ವಿಜಯ್ ನನ್ನ ಸೋದರ ಮಾವನ ಮಗ. ಮಹಾ ಟಪೋರಿ, ಹುಡುಗಿ ಹುಚ್ಚು. ನನ್ನ ಮದುವೆಗೆ ಮುಂಚೆ ಇಲ್ಲಿಗೆ ಬಂದಿದ್ದ. ಅವನು ನನ್ನ ಮೇಲೆ ಕಣ್ಣು ಹಾಕಿ ಹಾಳು ಮಾಡಲು ನೋಡಿದ. ನನ್ನ ಕೂಗಾಟ, ಚೀರಾಟದಿಂದ ಎಲ್ಲರಿಗೂ ಗೊತ್ತಾಯ್ತು. ಆ ಅವಮಾನದಿಂದ ತಕ್ಷಣ ಹೊರಟುಬಿಟ್ಟ. ಅವನನ್ನು ಉಗಿಯುವ ಬದಲು, ಈ ವಿಷಯ ಹೊರಗೆ ತಿಳಿಯಬಾರದು ಎಂದು ಎಲ್ಲರೂ ನನ್ನ ಬಾಯಿ ಮುಚ್ಚಿಸಿದರು. ಅವನು ನನ್ನ ಮದುವೆಗೂ ಬರಲಿಲ್ಲ. ಈಗ ನನಗೆ ಅವನ ಮುಖ ನೋಡೋದೇ ಬೇಕಿಲ್ಲ.”
“ಹಾಗಿದ್ದರೆ ಅವನ ಮುಖ ನೋಡಲೇ ಬೇಡ. ನಿನ್ನ ಪಾಡಿಗೆ ನೀನಿರು.”
“ಆದರೆ ಅವನು ಇಲ್ಲಿಗೇ ಬರ್ತಿದ್ದಾನಲ್ಲ…..”
ಸುನಂದಾ ಸುಮ್ಮನಿದ್ದರು. ಅಶಿತಾ ಹೇಳಿದಳು, “ಅತ್ತೆ, ನಮ್ಮಂಥ ಮಧ್ಯಮ ವರ್ಗದ ಮನೆಗಳಲ್ಲಿ ಎಲ್ಲರೂ ಹೀಗೇ ಮಾಡ್ತಾರೆ. ವಿಷಯ ಹೊರಗೆ ಗೊತ್ತಾಗಬಾರದು ಅನ್ನುವ ಆತಂಕ. ಹುಡುಗಿ ಬಾಯಿ ಮುಚ್ಚಿಬಿಡ್ತಾರೆ….. ಇದರಿಂದ ಹೆಣ್ಣುಮಕ್ಕಳ ನೋವು ಹೆಚ್ಚುತ್ತದೆ. ಅವತ್ತೇ ನೀವೆಲ್ಲ ಅವನ ಕಪಾಳಕ್ಕೆ 4 ಬಿಗಿದು ಓಡಿಸಿದ್ದರೆ, ಇಂದು ನೀತಾ ತವರು ಬಿಟ್ಟು ಹೊರಡುವ ಮಾತನಾಡುತ್ತಿರಲಿಲ್ಲ.”
“ಇರಲಿ ನೀತಾ, ಈಗ ಚಿಂತಿಸುವ ಅಗತ್ಯವಿಲ್ಲ. ಎಲ್ಲರೂ ಇಲ್ಲಿ ಬೆಂಗಳೂರಿಗೆ ಬಂದಿಳಿದಾಗ ಅತ್ತೆಗೆ ಎಷ್ಟೋ ಕೆಲಸ ಜಾಸ್ತಿ ಆಗುತ್ತೆ, ಅವರು ಏನೂ ಹೇಳೋಲ್ಲ. ನಾನೂ ಆಫೀಸಿಗೆ ಹೋಗೋದ್ರಿಂದ ಅವರಿಗೆ ಸಹಾಯ ಮಾಡಲು ಆಗೋಲ್ಲ. ನೀತಾಗೆ ಹಿಂಸೆ ಆಗುವುದನ್ನು ನಾನು ಸಹಿಸೋಲ್ಲ!”
ತಕ್ಷಣ ಅವಳು ಅಜಯನಿಗೆ ಫೋನ್ ಮಾಡಿದಳು, “ಅಜಯ್, ಈಗಲೇ ನೀನು ಸುನೀಲ್ ಮಾಮಂಗೆ ಫೋನ್ ಮಾಡಿ ಆಕಸ್ಮಿಕವಾಗಿ ನಾವೆಲ್ಲ ಟೂರ್ ಹೊರಟಿದ್ದೇವೆ ಅಂತ ಹೇಳಿಬಿಡು. ನೀತಾ ಬಂದಿದ್ದರಿಂದ ಸಡನ್ ಪ್ಲಾನ್ ಮಾಡಿದ್ದೆ. ನೀನೇ ಟಿಕೆಟ್‌ಬುಕ್ ಮಾಡಿದ್ದು ಅಂತ ತಿಳಿಸು….. ಅತ್ತೆಗೆ ಈ ವಿಷಯ ಗೊತ್ತಿರಲಿಲ್ಲ ಅಂತ ಹೇಳಿಬಿಡು.”
ಅತ್ತ ಅಜಯ್ ಅವರಿಗೆ ಏನು ಹೇಳಿದನೋ ಯಾರಿಗೂ ಗೊತ್ತಾಗಲಿಲ್ಲ. ಆದರೆ ಅಶಿತಾಳ ಮುಖದಲ್ಲಿ ತುಂಟ ನಗುವಿತ್ತು. “ಹ್ಞಾಂ….ಹ್ಞಾಂ…. ಈಗಲೇ ಮಾಡು…. ಲವ ಯೂ…. ಬೈ!”
ವಿಷಯ ಅರ್ಥವಾಗಿ ಸುನೀತಾ, ಸುನಂದಾರ ಮುಖದಲ್ಲಿ ಗೆಲುವು ಮೂಡಿತು. ಮಗಳು ತಾಯಿಯ ಮಡಿಲಿಗೆ ಒರಗಿ ನೆಮ್ಮದಿಯ ನಿಟ್ಟುಸಿರಿಟ್ಟಳು.
“ನೋಡಿದ್ರಾ ಅತ್ತೆ…… ಹೀಗೆಲ್ಲ ಮಾಡಬೇಕಾಗಿ ಬರುತ್ತೆ. ಅಬಲೆಯಂತೆ ಕಣ್ಣೀರು ಸುರಿಸುತ್ತಾ ಹೆಣ್ಣು ಹಿಂದೆ ಉಳಿಯಬಾರದು. ತನ್ನ ಮಟ್ಟದಲ್ಲಿ ಹೋರಾಟ ಮಾಡಲೇಬೇಕು. ಅವಳು ಎಚ್ಚೆತ್ತು ಹೋರಾಟಕ್ಕೆ ಸಿದ್ಧಳಿರಬೇಕು. ನೀವೆಷ್ಟು ಮುಗ್ಧತನದಿಂದ ಎಷ್ಟೋ ಕಷ್ಟ ಎದುರಿಸಿದ್ದೀರಿ ಎಂದು ಅಜಯ್ ಹೇಳಿದ್ದಾನೆ. ಈಗ ನಾನು ಬಂದಿದ್ದೀನಿ, ಮುಂದೆ ಹಾಗೆಲ್ಲ ನಡೆಯಲು ಖಂಡಿತಾ ಬಿಡೋಲ್ಲ!” ಎಂದು ವಿಶ್ವಾಸದಿಂದ ನುಡಿದಳು. ಅವಳು ಹೇಳಿದ ವಿಧಾನಕ್ಕೆ ತಾಯಿ ಮಗಳು ಇಬ್ಬರಿಗೂ ನಗು ಬಂತು.
ಸುನಂದಾ ಪ್ರೀತಿಯಿಂದ ಅವಳ ತಲೆ ಸವರಿದರು. “ಅಯ್ಯೋ… ಈಗ ತಾನೇ ನಾನು ಸ್ಟ್ರೇಟ್‌ನಿಂಗ್ ಮಾಡಿಸಿದ್ದೀನಿ. ನನ್ನ ಹೇರ್ ಸ್ಟೈಲ್ ಹೋಯ್ತು!” ಎಂದು ನಾಟಕೀಯವಾಗಿ ಹೇಳಿದಾಗ ಮತ್ತೆ ಎಲ್ಲರೂ ನಕ್ಕರು.
ಅಷ್ಟರಲ್ಲಿ ಅವರಿಗೆ ಕಾಲ್ ಬಂತು. ಗೌರಕ್ಕನ ಹೆಸರು ಗಮನಿಸಿ ಸುನಂದಾ ಕೋಣೆಯಿಂದ ಹೊರಗೆ ನಡೆದರು. ಎಂದಿನ ಮಾಮೂಲಿ ಮಾತು ಮುಗಿಸಿ ಗೌರಕ್ಕಾ ಕೇಳಿದರು, “ಹೇಗಿದ್ದಾಳೆ ನಿನ್ನ ಬಣ್ಣದ ಬೀಸಣಿಗೆ?” ಅದಕ್ಕೆ ಸುನಂದಾ ನಸುನಗುತ್ತಾ, “ಅವಳೀಗ ಈ ಮನೆಯ ಕಣ್ಮಣಿ ಆಗಿದ್ದಾಳೆ!” ಎಂದು ಕ್ಲುಪ್ತವಾಗಿ ಮಾತುಕಥೆ ಮುಗಿಸಿ ಫೋನ್ ಕಟ್ ಮಾಡಿ, ಅದೇ ಕೋಣೆಗೆ ವಾಪಸ್ಸು ಬಂದರು.ಅಶಿತಾ ಕೇಳಿದಳು, “ಏನಂದ್ರು ನಮ್ಮ ಗೌರತ್ತೆ……?”
“ಏನಿಲ್ಲ…. ಯೋಗಕ್ಷೇಮಕ್ಕೆ ಫೋನ್ ಮಾಡಿದ್ರು.”
“ಜೊತೆಗೆ ಈ ಬಣ್ಣದ ಬೀಸಣಿಗೆ ಏನು ತರಲೆ ಮಾಡ್ತಿದ್ದಾಳೆ ಅಂತ ವಿಚಾರಿಸಿದ್ರು ತಾನೇ?” ಸುನಂದಾರಿಗೆ ಶಾಕ್‌ತಗುಲಿದಂತಾಗಿತ್ತು.
“ಇದೇನಮ್ಮ ಹೇಳ್ತಿದ್ದೀಯಾ?”
ಅಶಿತಾ ಜೋರಾಗಿ ನಗುತ್ತಾ, “ಡೋಂಟ್ ವರಿ ಅತ್ತೆ, ನಾನು ಮೊದಲ ದಿನ ನನ್ನ ಬಗ್ಗೆ ಮಾತನಾಡುವಾಗಲೂ, ಈಗ ನೀವು ಅವರೊಂದಿಗೆ ಮಾತನಾಡಿದಂತೆಯೇ ಕೇಳಿಸಿಕೊಂಡಿದ್ದೆ….. ಈಗ ತಾನೇ ಹೇಳಿದ್ನಲ್ಲ ಅತ್ತೆ…. ನಾನು ಅಬಲೆಯಾಗಿ ಅಳುತ್ತಾ ಕೂರುವವಳಲ್ಲ ಅಂತ…. ಎಲ್ಲರನ್ನೂ ಗಮನಿಸ್ತಾ ಇರ್ತೀನಿ. ಆದರೆ ನಾನು ನಿಮ್ಮೆಲ್ಲರನ್ನೂ ಬಹಳ ಪ್ರೀತಿಸುತ್ತೀನಿ,” ಎಂದು ತನ್ನ ಅತ್ತೆಯ ಕುತ್ತಿಗೆಗೆ ಜೋತುಬಿದ್ದಳು.
“ಇದೇನಮ್ಮ ನೀನೂ ಅತ್ತೆ ಜೊತೆ ಸೇರಿಕೊಂಡು……?” ಸುನೀತಾ ಆಕ್ಷೇಪಿಸಿದಳು.
“ಸಾರಿ…. ಸಾರಿ…. ನನ್ನ ಕ್ಷಮಿಸಿ ಬಿಡಿ…..” ಎನ್ನುತ್ತಾ ಸುನಂದಾ ನಾಟಕೀಯವಾಗಿ ಕಿವಿ ಹಿಡಿದುಕೊಂಡು ಬಸ್ಕಿ ಹೊಡೆಯುವಂತೆ ಮಾಡಿದಾಗ ಎಲ್ಲರೂ ಜೋರಾಗಿ ನಕ್ಕರು.
“ನೋಡಿದ್ರಾ…. ಈ ಬಣ್ಣದ ಬೀಸಣಿಗೆ ಅತ್ತೆ ತಮ್ಮ ಕಿವಿ ಹಿಡಿದುಕೊಳ್ಳುವಂತೆ ಮಾಡಿದಳು,” ಎಂದಾಗ ಆಗ ತಾನೇ ಮನೆ ಒಳಗೆ ಬಂದಿದ್ದ ತಂದೆ ಮಗನ ಜೊತೆ ಎಲ್ಲರೂ ಜೋರಾಗಿ ನಕ್ಕರು.




 
        
    
